ಸೋಮವಾರ, ಡಿಸೆಂಬರ್ 21, 2009

ಗುನುಗುಗಳು..

ಪಟ್ಟಣದ ಚಂದಿರಗೆ ಬೇಡ
ತಾರೆಗಳ ಸಖ್ಯ, ಮಿನುಗು
ತಾರೆಗು ಮಿಗಿಲು
ನಗರ ದೀಪ!

ದಾರ ಕಡಿದ ಪಟಕೆ
ದೀಪಗಂಬದ ಕುಣಿಕೆ
ಮಗುವಾಸೆ ಸಾವು, ಪಟಕೆ
ದಿಗಂತದ ಕನಸು

ಬ್ರೇಕು ತಪ್ಪಿದ ಸೈಕಲ್,
ಸವಾರನಿಗೆ ದಿಗಿಲು,
ಇಳಿಜಾರ ಚಕ್ರಗತಿ
ಅದರೆದೆಯ ಮಿಡಿತ

ಶುಕ್ರವಾರ, ಡಿಸೆಂಬರ್ 11, 2009

ಅವಳು ಹೋದ ಸಂಜೆ..

ಗೋಧೂಳಿ ಹಳದಿಯಿದೆ ಆಗಸದ ರಂಗಲ್ಲಿ
ಕಣ್ಣ ಬಣ್ಣಗಳಲ್ಲಿ ವಿಷಾದರಾಗ
ಹೋದ ಹೆಜ್ಜೆಗಳಲ್ಲಿ ಕಲಸಿಹವು ನೀರಲ್ಲಿ
ಜೀವ ಕಣಕಣಕೆ, ಮಾನಿಷಾದ ಯೋಗ

ಸುಲಲಿತದಿ ಕೈ ಹಿಡಿದ ರಾಗಮಾಲಿಕೆಯೊಂದು
ಅರ್ಧದಲಿ ವೀಣೆಯನು ಬಿಟ್ಟು ಹೊರಟಂತೆ
ಕವಿತೆಯೊಂದರ ಕೊನೆಯ ಶಬ್ದ ಚಿತ್ರವು ಹಠದಿ
ಕವಿಮನೆಯ ಬಾಗಿಲಿನ ಹೊರಗೆ ನಿಂತಂತೆ

ಹೋಗಬಹುದೇ ಹೀಗೆ, ಎಲ್ಲ ಮರೆತಾ ಹಾಗೇ
ಮಲ್ಲಿಗೆಯ ಮಾಲೆಯನು ಹರಿದು ಒಗೆದು
ತರಿಯಬಹುದೇ ಮರದ ಹೀಚುಕಾಯಿಗಳನ್ನು
ಹಣ್ಣಾಗೋ ಮುನ್ನವೇ ಕಲ್ಲನೊಗೆದು

ಸೆಳೆಯುತಿದೆ ಮರಳುರುಳು ನಿಂತಲ್ಲೆ ನನ್ನನ್ನು
ಅಲೆ ಗಾಳ ಹಾಕುತಿದೆ ಆಳದೆಡೆಗೆ
ಮುಳುಗುತಿದೆ ಉರಿಗೆಂಪು ಗೋಲ ಶರಧಿಯ ಆಚೆ
ಕತ್ತಲಾಗುತಿದೆ, ದೂರ ದಾರಿ ನಡೆಗೆ


(ವಿಜಯ ಕರ್ನಾಟಕದ ಕವಿತೆಗೊಂದು ಕಾಲದಲ್ಲಿ ಪ್ರಕಟಿತ)