ಗುರುವಾರ, ಮೇ 31, 2007

ಅಸಂಗತ

ಅರ್ಧ ಚಂದ್ರ ಕಾಣುತ್ತಿದ್ದಾನೆ,
ನೆತ್ತಿ ಬೋಳಾದ
ಮರದ ಎಡೆಯಿಂದ.
ನನಗೆ ಈಗೀಗ ಕಣ್ಣು ಸರಿ ಕಾಣುತ್ತಿಲ್ಲ,
ವರುಷ ಸುಮಾರಾಯಿತು.

ಮೋಟು ಕಾಂಪೌಂಡಿನೊಳಗೆ
ಹರುಕು ಕುರ್ಚಿ.
ಹರಿದ ಪೇಪರಿನೊಳಗೆ
ಏನೋ ಸುದ್ದಿ.
ರಸ್ತೆ ತುಂಬೆಲ್ಲ ಕಸ ತುಂಬಿಕೊಂಡಿದೆ.
ಬೀದಿಯಂಚಿನ ಮುದುಕ
ನಿನ್ನೆ ತೀರಿಕೊಂಡ.

ಮನೆಯೊಳಗೆ ಏನೋ ಗೊಣಗಾಟ,
ತಿಳಿಯುತ್ತಿಲ್ಲ, ಯಾಕೆಂದು.
ನಮ್ಮ ಮನೆಯೆದುರಿನ
ದೀಪವೇ ಹತ್ತಿಕೊಂಡಿಲ್ಲ,
ಬೇರೆಲ್ಲ ಕಡೆ ಬೆಳಕು.

ಮೆಟ್ಟಿಲು ಹತ್ತಬೇಕು
ಒಳಗಡೆಗೆ ನಡೆಯಲು
ಕಸುವಿಲ್ಲ,
ಹೋಗದೆ ವಿಧಿಯಿಲ್ಲ..
ಕತ್ತಲೆಂದರೆ ಹೆದರಿಕೆ ನನಗೆ.

ಮಂಗಳವಾರ, ಮೇ 29, 2007

ಕನವರಿಕೆಗಳು...

ಯಾಕೆ?

ಚಂದಿರನೆಂದರೆ ಎಲ್ಲರಿಗಿಷ್ಟ,
ಹುಣ್ಣಿಮೆ, ಬಿದಿಗೆ,
ಅಮವಾಸ್ಯೆ,
ಎಲ್ಲಕ್ಕೂ ಬರೆದಿದ್ದಾರೆ ಕವನ.
ಬೆಳದಿಂಗಳು, ಕತ್ತಲು
ಎಲ್ಲಕ್ಕೂ ಕೊಟ್ಟಿದ್ದಾರೆ ಉಪಮೆಗಳ.
ಕೇಳುವರೇ ಇಲ್ಲ ಪಾಪ,
ಅವನ ಪಕ್ಕ ನಿಂತು
ತನ್ನದೇ ಪ್ರಭೆಯೊಳಗೆ ಬೆಳಗುವ
ಒಂಟಿ ನಕ್ಷತ್ರವ.

ಅಲ್ಲವೆ?

ಅರಿವೆಂದರೇನೆಂದು
ಅರಿವಾಗೋ ಹೊತ್ತಿಗೆ,
ಉಟ್ಟರಿವೆ
ಹರಿದಿರುತ್ತದೆ.

ನನ್ನನೇ ಕೇಳಿಕೊಂಡಿದ್ದು.

ಭಾವಜೀವಿಗಳೆಂದು
ಕರೆದುಕೊಳ್ಳುವ
ಎಲ್ಲರಿಗೂ ಭಾವವೇ
ಇರುತ್ತದೆಂದೇನೂ ಇಲ್ಲ.
ಭಾವದ ಬಟ್ಟೆಯೊಳಗೆ
ಅಭಾವ ಜೀವಿಗಳೂ
ಇರಬಹುದು.
ನಾನು ಭಾವನೋ
ಅಭಾವನೋ?!

ಗುರುವಾರ, ಮೇ 24, 2007

ಮತ್ತೆ HR ಕತೆ.

ನಮ್ಮನ್ನ ಅಂದರೆ ನಮ್ಮ ಕೆಲಸವನ್ನ- ಕೆಲಸ ಮಾಡುವವರನ್ನ ಹೆಚ್ಚಿನವರು ಬೈಯುತ್ತಾರೆ. HR ಗಳು ಅಂದರೆ, ಉಳಿದ ಸಹೋದ್ಯೋಗಿಗಳಿಂದ ಬೇರೆ ಇರುವವರು,distance ಕಾಪಾಡಿಕೊಳ್ಳುವವರು, ಮ್ಯಾನೇಜುಮೆಂಟಿನ CID ಗಳು .. ಹೀಗೆ. ನಾವು ಏನೂ ಮಾಡುವಂತಿಲ್ಲ. ನಮ್ಮ ಕೆಲಸದ ಹಣೇಬರ ಅದು. ಹೇಳುವವರು ಹೇಳುತ್ತಲೇ ಇರುತ್ತಾರೆ. ನಾವು ಮಾಡುವ ಕೆಲಸ ಮಾಡುತ್ತೇವೆ. ಟೆಲಿ ಮಾರ್ಕೆಟಿಂಗ್ ಗೆ ಫೋನ್ ಮಾಡುವುದಾದರೂ ಬೇಕು, ನಮ್ಮದಲ್ಲ.

ಒಂದೇ ಕೆಲ್ಸದ ಸಲುವಾಗಿ ೧೦-೨೦ ಜನಕ್ಕೆ ಫೋನಾಯಿಸುತ್ತೇವೆ, ಹತ್ತಿಪ್ಪತ್ತು ಬಗೆಯ ಉತ್ತರ ಬರುತ್ತದೆ. ಅದೆಲ್ಲ್ ಆಭ್ಯಾಸವಾಗಿದೆ, ಆದರೂ ಕೆಲವೊಮ್ಮೆ ಹೇಗೆ ಏಗುವುದೋ ತಿಳಿಯದೇ ಒದ್ದಾಡುವಂತಾಗುತ್ತದೆ.

"ನಮಸ್ಕಾರ, ನಾನು ಇಂತಿಂತವನು, ಇಂತಿಂತ ಕಡೆಯಿಂದ ಮಾತಾಡುತ್ತಿದ್ದೇನೆ, ಹೀಗೊಂದು ಕೆಲಸ ಇದೆ, ನಿಮ್ಮ ಪ್ರೊಫೈಲನ್ನ ಯಾವುದೋ ಒಂದು ಜಾಬ್ ಸೈಟಿನಲ್ಲಿ ನೋಡಿದೆ, ನಿಮ್ಗೆ ಈ ಕೆಲ್ಸದಲ್ಲಿ ಆಸಕ್ತಿ ಇದೆ ಅಂದ್ಕೋತೀನಿ"

ಉತ್ತರ ಈ ಧಾಟಿಯಲ್ಲಿ ಬರುತ್ತದೆ,

"ಯೋ , ಹೋಗಯ್ಯೋ, ಯಾಕೋ ತಲೆ ತಿಂತೀಯಾ, ನಂಗೆ ಯಾವ್ ಕೆಲ್ಸನೊ ಬ್ಯಾಡಾ ಮಾರಾಯ"

ಮತ್ತೆ ನಿಮ್ಮ profile ಯಾಕೆ ವೆಬ್ ಸೈಟ್ ಲಿ ಹಾಕಿದ್ರಿ?

"ನನ್ ಇಷ್ಟ, ಹಾಕ್ತೀನಿ, ಏನ್ ಇವಾಗ, ಫೋನ್ ಇಡು"

ಮಾರ್ಯಾದೆಯಲ್ಲಿ ಫೋನ್ ಇಟ್ಟು, ಮತ್ತೊಬ್ಬ ಕ್ಯಾಂಡಿಡೇಟ್ ಗೆ ಮಾಡಿ, ಸ್ವಲ್ಪ ಎಚ್ಚರಿಕೆಯಲ್ಲಿ ಫೋನ್ ಮಾಡಲಾಗುವುದು.
ನಮಸ್ಕಾರಾ, ನಾನು ಇಂತವನು ಅಂತವನು, ಇಂತಲ್ಲಿಂದ ಮಾತಾಡ್ತಿದೀನಿ ಸಾರ್

"ಹುಂ, ಹೇಳಿ"

ಸಾರ್ ಹೀಗೀಗೆ ಒಂದು ಕೆಲ್ಸ ಇದೆ, ನಿಮ್ ರೆಸ್ಯೂಮು ಒಂದು ವೆಬ್ ಸೈಟಲ್ಲಿ ನೋಡ್ದೆ, ಕೆಲ್ಸ ಏನಾರೂ ಚೇಂಜ್ ಮಾಡೋ ಅಲೋಚನೆ ಇದೆಯಾ? , ಇದ್ರೆ ಹೇಳಿ..

" ಹೋಗಯ್ಯಾ, ಏನ್ ಜನ ಇರ್ತಾರಪ್ಪಾ?, ನಾನು ಕೆಲ್ಸ್ದ ಚೇಂಜ್ ಮಾಡೋ ಅಲೋಚ್ನೆ ಇಲ್ದಿದ್ರೆ ರೆಸ್ಯೂಮ್ ನ ಯಾಕೋ ನೌಕ್ರಿಲೋ, ಇನ್ನೆಲ್ಲೋ ಹಾಕ್ತಿದ್ದೆ?, ಹೇಗೆ ಮಾತಾಡ್ ಬೇಕು ಅಂತನೂ ಗೊತಾಯಲ್ಲ ನಿಮ್ಗೆಲ್ಲ!, ಛೇ!"

ನಮ್ಮ ಗ್ರಹಚಾರ!.

ಶುಕ್ರವಾರ, ಮೇ 18, 2007

ಎರಡು ನನ್ನದಲ್ಲದ ಬರಹಗಳ ಬಗ್ಗೆ.

ಇಂದು ಮಧ್ಯಾಹ್ನ ಊಟ ಮಾಡಿ ಸುತ್ತುತ್ತಿದ್ದೆ, ತಂಗಿಯ ಮೆಸೇಜು ಬಂತು. ಅವಳು ಸುಖಾ ಸುಮ್ಮನೆ ಫಾರ್ವರ್ಡುಗಳನ್ನ ಕಳಿಸುವುದಿಲ್ಲವಾದ್ದರಿಂದ, ಏನಿರಬಹುದು ಅಂತ ತೆಗೆದು ನೋಡಿದೆ, ಒಂದು ಕವನ ಇತ್ತಲ್ಲಿ. ಬಹು ದಿನದ ಮೇಲೆ ಒಂದು ಗಟ್ಟಿ ಪುಟ್ಟ ಹನಿ ಓದಿದೆ.

ಚಡಪಡಿಕೆ.

ಮೌನವಾಗುಳಿವ ಶಿಲೆಯೊಳಗೆ
ಅಗಣಿತ ನೆನಪ ಭ್ರೂಣಗಳು
ಅಡಗಿ ಕುಳಿತಿವೆ;
ಶಿಲಾಬಾಲಿಕೆಯ
ಗರ್ಭಕೋಶದ ಒಳಗೆ ದಿನ ತುಂಬಿರಲೂ
ಹೆರಿಗೆಯಾಗದೆ,
ಚಡಪಡಿಸುವ ಇತಿಹಾಸಗಳಿವೆ.

ಬರೆದಿದ್ದು ಗೀತಾ ಶೆಟ್ಟಿ, ತುಪ್ಪೆ.

*********************************

ಗೆಳೆಯ ಚಿನ್ಮಯ, ಇಂಟರ್ನೆಟ್ಟು ಗೀಳಿನಾತ . ಇಡೀ ದಿನ ಪುರಸೊತ್ತು ಇತ್ತೆನ್ನಿ ಅವನಿಗೆ, ಒಂದಲ್ಲ ಒಂದು ಉಪಯುಕ್ತ ಮಾಹಿತಿಯ ಕೊಂಡಿಯನ್ನ ಕಳುಹಿಸುತ್ತಲೇ ಇರುತ್ತಾನೆ. ಇವನೇನಾದರೂ ಲಿಂಕು ಕಳುಹಿಸಿದರೆ ಉಪೇಕ್ಷಿಸುವ ಪ್ರಶ್ನೆಯೇ ಇಲ್ಲ. ಯಾವುದೋ ಒಳ್ಳೇ ಬ್ಲಾಗು, ಬರಹ, ಸರಳ ಅರ್ಥವಾಗೋ ಸೈನ್ಸು ಏನಾದರೂ ಬರುತ್ತದೆ ದಿನವೂ, ಅವನ ಕಡೆಯಿಂದ. ನಿನ್ನೆ ತನ್ನ ಎಂದಿನ ಶೈಲಿಯಲ್ಲಿ, "ದೊಸ್ತಾ ಒಂದು ಮೈಲ್ ಕಳ್ಸಿದ್ದಿ ನೋಡಲೇ" ಅಂದ. ಅವನು ಕಳಿಸಿದ್ದು, ಕನ್ನಡ ಪದ್ಯವೊಂದರ ಇಂಗ್ಲೀಷು ಅನುವಾದ! ಚಲನ ಚಿತ್ರ ಗೀತೆಗಳ ಅನುವಾದಕ್ಕೆ ಅಂತಲೇ ಒಂದು ವೆಬ್ ಸೈಟ್ ಇದೆ ಅಂತ ನಂಗೆ ಗೊತ್ತಾದ್ದೇ ನಿನ್ನೆ!
ಅವನು ಕಳುಹಿಸಿದ್ದು ಯಾರೋ ಮಾಡಿದ, ನಮ್ಮ ಅಮೃತಧಾರೆ ಸಿನಿಮಾದ, "ಹುಡುಗಾ ಹುಡುಗಾ" ಪದ್ಯದ ಅನುವಾದ. ಇಂಗ್ಲೀಷು ಅನುವಾದ ಮಾಡಿದವರ ಪಾದದ ಜೆರಾಕ್ಸು ನಂಗೆ ಅರ್ಜೆಂಟಾಗಿ ಬೇಕು.

ಮೂಲ ಪದ್ಯ:

ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ದುಮಾಡೊಕು ಕಂಜೂಸು ಬುದ್ದಿ ಬೇಕಾ?
ಹನಿಮೂನಲ್ಲು ದ್ಯಾನ ಏಕಾಂತದಲ್ಲೂ ಮೌನ
ಏನೊ ಚಂದ ಹತ್ತಿರ ಬಾ ಹುಡುಗ

ಮುತ್ತಿನ ಹೊದಿಕೆ ಸುತ್ತಲು ಹೊದಿಸಿ ಅಪ್ಪಿಕೊ ಬಾರೋ ನನ್ನನ್ನ
ಚುಮುಚುಮು ಚಳಿಗೆ ಬಿಸಿ ಬಿಸಿ ಬಯಕೆ ಬೆಚ್ಚಗೆ ಇರಿಸೊ ನನ್ನನ್ನ
ಕತ್ತಲೆ ಒಳಗೆ ಕಣ್ಣಾಮುಚ್ಚಾಲೆ ಅಪ್ಪಿಕೊ ಬಾರೊ ನನ್ನನ್ನ
ಉರುಳಿಸು ಬಾರೊ ಕೆರಳಿಸು ಬಾರೊ ಅರಳಿಸು ಬಾರೊ ನನ್ನನ್ನ ಹುಡುಗ
show me love show me life
show me everything in life
take me on a holiday
show me something everyday
make me smile and make me smile
make me smile for a while
make my dreams come to live
show me how you love ur wife

ನಾಳೆಯ ಮಾತು ಯಾರಿಗೆ ಬೇಕು ಈ ಕ್ಷಣ ಪ್ರೀತಿಯ ಮಾಡೋಣ
ಮಂಚಕೆ ಹಾರಿ ಮಧುವನು ಹೀರಿ
ದಾಹವ ನೀಗಿ ಸುಖಿಸೋಣ
ಊರನು ಬಿಟ್ಟು ಊರಿಗೆ ಬಂದು ಪ್ರೀತಿಯ ತೇರನು ಏಳೆಯೋಣ
ಮದುವೆಯು ಆಯ್ತು ಮನೆ ಒಂದಾಯ್ತು ಮುದ್ದಿನ ಮಗುವನು ಪಡೆಯೋಣ.

ಇಂಗ್ಲೀಷು ಅನುವಾದ:

Boy oh boy, my sweet boy.
Do u need stingy mind to love me?..
Meditation in honeymoon, Silence in privacy.
This is not fair, oh boy, come near me boy.(2)

In this winter, put a blanket around and hug me.
In this cold cold winter, come make me warm.
Play hide and seek in the darkness with me and come hug me.
Come make me tumble and twist come make me turn.
(Boy oh boy, my sweet boy. . . . )

Show me love, show me life,
show me everything u like.
Take me on a holiday, show me something everyday.
Make me smile and make me smile, make me smile for a while.
Make my dreams come to life, show me how u life ur wife.
Who wants romantic talks,
we ll start loving from now on.
We ll jump on bed,
taste the nectar and satisfy ourselves.

We ll go from place to place and establish our love there.
We got married, got a home too, now we ll have a cute kid.
(Boy oh boy, my sweet boy. . . . )

ಭಾವನೆಗಳೇ ಇಲ್ಲದೆ ಲಾಯರು ಆಫೀಸಿನಲ್ಲೋ,(ಈ ಮಾತು ಸುಶ್ರುತನಿಗೆ ಅನ್ವಯಿಸುವುದಿಲ್ಲ)ಅಥವಾ ಯಾವುದೋ ಗವರ್ಮೆಂಟು ದಫ್ತರಿನಲ್ಲೋ ಕೆಲಸ ಮಾಡುವವರು ಬರೆದಂತಿರುವ ಈ ಅನುವಾದ ಓದಿ ಹೊಟ್ಟೇ ತುಂಬಾ ನಕ್ಕೆ, ಚಿನ್ಮಯಂಗೆ ಥ್ಯಾಂಕ್ಸು.
ಓದಿದ ನೀವೂ ಅವನಿಗೆ ಧನ್ಯವಾದ ಹೇಳುತ್ತೀರಿ!ನನಗೆ ಗೊತ್ತಿದೆ.

ಗುರುವಾರ, ಮೇ 17, 2007

ಮರುಳು ಮಾಡುವವರು.. .

(ಹಳೆಯ ಬರಹ, ಬ್ಲಾಗಿಗೆ ಹಾಕಲು ಮರೆತು ಹೋಗಿತ್ತು. ದಟ್ಸ್ ಕನ್ನಡದಲ್ಲಿ ತಿಂಗಳ ಹಿಂದೆ ಪ್ರಕಟವಾಗಿತ್ತು.)

ಮೂರ್ನಾಲ್ಕು ವರ್ಷಗಳ ಹಿಂದೆ ನಡೆದ ಕಥೆ. ನಾನು ನಮ್ಮ ಪಕ್ಕದ ಮನೆ ಶಂಕರ ಭಟ್ಟರ ಜೊತೆಗೆ ಎಲ್ಲಿಗೋ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಸತ್ಯನಾರಾಯಣ ಕತೆಯೋ ಯಾವುದೋ ಒಂದು. ಮಾಡೋಕೆ ಏನೂ ಕೆಲಸವಿಲ್ಲದೆ, ಅಲ್ಲೊಂದು ಕಟ್ಟೆಯ ಮೇಲೆ ಕೂತು ಹಳೇ ಪೇಪರ್ ಚೂರನ್ನ ಓದುತ್ತಿದ್ದೆ. ಅಷ್ಟರಲ್ಲಿ ಆ ಪುಣ್ಯ್ಯಾತ್ಮ ಬಂದ ಅಲ್ಲಿಗೆ.

"ಏನು ಹೆಸರು?" - ಶ್ರೀನಿಧಿ.
"ಏನು ಮಾಡ್ತಾ ಇದ್ದೀಯಾ?"- ಪೇಪರ್ ಓದುತ್ತಿದ್ದೇನೆ.
"ಈ ಸಣ್ಣ ಚೀಟೀನಾ"- ಹುಂ.

ನನಗವರ ಬಳಿ ಮಾತಾಡಲು ಇಷ್ಟವಿರಲಿಲ್ಲ. ಆ ವ್ಯಕ್ತಿ ಸುತ್ತ ಮುತ್ತಲ ಊರಿನಲ್ಲಿ,ಊರಿನ ಪೋಲೀಸ್ ಸ್ಟೇಷನಿನಲ್ಲಿ "ದೊಡ್ಡ ಮಾಂತ್ರಿಕ" ಅಂತ ಹೆಸರಾದವ್ರು. ನನಗೆ ಅಂತವರನ್ನ ಕಂಡರೆ ಮೊದಲೇ ಆಗದು, ಈಗ ನೋಡಿದರೆ ಪಕ್ಕಕ್ಕೇ ವಕ್ಕರಿಸಿದ್ದಾನೆ.
"ಎಲ್ಲಿ ಓದೋದು"- ಕಾಲೇಜಲ್ಲಿ.
"ಅಪ್ಪ ಏನ್ ಮಾಡ್ತಾರೆ"- ನಿಮಗ್ಯಾಕೆ?
"ದೊಡ್ದವ್ರ ಬಳಿ ಹೀಂಗೆ ಮಾತಾಡ್ಬಾರ್ದು, ನಾನ್ಯಾರು ಅಂತ ಗೊತ್ತಾ?"- ಗೊತ್ತು.
"ಆದ್ರೂ ಹೀಂಗೆ ಮಾತಾಡ್ತೀಯಾ?"- ಹೌದು.

ಒಮ್ಮೆ ಹೋದರೆ ಸಾಕಿತ್ತು, ಆದರೆ ಅವನಿಗೆ ಹೊತ್ತು ಹೋಗುತ್ತಿರಲಿಲ್ಲ ಅಂತ ಕಾಣುತ್ತದೆ. "ನಿನ್ನ ವಾಚಿರುವ ಕೈಯನ್ನು ನನ್ನ ಎದುರಿಗೆ ಹಿಡಿ, ನನ್ನ ಶಕ್ತಿ ಏನು ಅಂತ ತೋರಿಸ್ತೇನೆ ನಿಂಗೆ"ಸುಮ್ಮನೇ ಕೈ ಮುಂದೆ ಹಿಡಿದೆ."ನನ್ನ ಕಣ್ಣನ್ನೇ ನೋಡು"ಅಸಹ್ಯ, ಇನ್ನೇನು ಕಳಚಿ ಕೆಳಗೆ ಬೀಳುವ ತರ ಇದೆ, ಕಣ್ಣುಗಳು..ನನ್ನ ವಾಚಿನ ಮೇಲೆ ತನ್ನ ಬಲ ಕೈಯನ್ನು ಹಿಡಿದು ಹೇಳಿದ,"ನಿನ್ನ ವಾಚಿನ ಸಮಯವನ್ನು ಸ್ತಂಭಿಸುತ್ತೇನೆ ನಾನೀಗ, ನೋಡ್ತಾ ಇರು"ನಾನೇನು ಮಾತಾಡಲಿಲ್ಲ, ಸುಮ್ನೆ ನೋಡ್ತಾ ಕೂತೆ.ಎರಡು ನಿಮಿಷ ಗೊಣ ಗೊಣ ಗೊಣ ಅಂತ ಮಂತ್ರ ಪಠಣ ಆಯ್ತು.

"ಈಗ ನೋಡು, ನಿನ್ನ ಗಡಿಯಾರ ನಡೆಯುವುದನ್ನ ನಿಲ್ಲಿಸಿದೆ!" ಅಂತಂದು ಕೈ ತೆಗೆದರು.ಗಡಿಯಾರಕ್ಕೆ ಏನೆಂದರೆ ಏನೂ ಆಗಿರಲಿಲ್ಲ! ತನ್ನ ಪಾಡಿಗೆ ತಾನು ನಡೆಯುತ್ತಿತ್ತು! ಟಿಕ್ ಟಿಕ್ ಟಿಕ್... ಅವನನ್ನ ನೋಡಿ ನಕ್ಕೆ, ಮುಖ ಭಂಗ ಆಯಿತೇನೋ, ತಡಿ ಒಂದು ನಿಮಿಷ, ಮತ್ತೊಮ್ಮೆ ಹಿಡಿ ಅಂದ."ಒಂದು ನಿಮಿಷ ಅಲ್ಲಾ, ದಿನಾ ಇಡಿ ಕಾವು ಕೊಟ್ಟರೂ ನನ್ನ ಗಡಿಯಾರ ತಿರುಗುವುದನ್ನ ನಿಲ್ಲಿಸಲ್ಲ, ಯಾಕೆಂದರೆ, ನಿಮ್ಮ ಕೈಲಿರೋ ಉಂಗುರದ ಅಯಸ್ಕಾಂತದ ಬಲದಿಂದ , ತಿರುಗೋದನ್ನ ನಿಲ್ಲಿಸೋಕೆ ಇದರೊಳಗಿರೋದು ಕಬ್ಬಿಣದ ಮುಳ್ಳಲ್ಲ! ಪ್ಲಾಸ್ಟಿಕ್ಕಿದ್ದು" ಅಂತಂದು, ಅಲ್ಲಿಂದೆದ್ದು ಬಂದೆ.

ಸ್ವಲ್ಪ ದೂರ ಹೋಗಿ ಹಿಂದೆ ನೋಡಿದರೆ ಮತ್ಯಾರ ಬಳಿಯೋ "ನಿನ್ನ ವಾಚು ಹಿಡಿ" ಅನ್ನುತ್ತಿದ್ದ... ನನಗೆ ವಾಕರಿಕೆ ಬರುವಂತಾಯಿತು.

ಅದೇ ವ್ಯಕ್ತಿಯನ್ನ ಮತ್ತೊಮ್ಮೆ ನೋಡುವ- ಆತನ ಅತಿರೇಕಗಳನ್ನ ಗಮನಿಸುವ ಅವಕಾಶ ಸಿಕ್ಕಿತು ವರುಷದ ನಂತರ. ನಮ್ಮ ಊರಲ್ಲಿ ನಾಗಮಂಡಲ. ಲಕ್ಷಗಟ್ಟಲೆ ಖರ್ಚು ಮಾಡಿ ನಾಗಗಳನ್ನ ಸಂಪ್ರೀತಿ (?) ಮಾಡುವ ಕಾರ್ಯಕ್ರಮ. ಅಲ್ಲಿನ ಪೂಜಾವರ್ಗದ ಅರ್ಚಕರೊಬ್ಬರ ಬಳಿ ಇದ್ದ ೫೦,೦೦೦ ರೂಪಾಯಿಗಳನ್ನ ಆ ಗಡಿಬಿಡಿ ಗೊಂದಲದಲ್ಲಿ ಯಾರೋ ಕದ್ದಿದ್ದರು. ಊರ ಹಿರಿಯರಾದ ಈ ಮಹಾನುಭಾವರೂ ಅಲ್ಲಿಯೇ ಇದ್ದರು. ವಿಷಯ ಗೊತ್ತಾಗಿ ಬಂದು ಆ ಅಳುತ್ತಿದ್ದ ಅರ್ಚಕರಿಗೆ ಸಮಾಧಾನ ಮಾಡಿ, ಎಲ್ಲಿ, ಒಂದು ತೆಂಗಿನಕಾಯಿ ಕೊಡಿ ಅಂದರು. ನೆರೆದ ಜನರೆಲ್ಲ ಭಕ್ತಿ ಭಾವದಿಂದ, ಕಣ್ಬಿಟ್ಟುಕೊಂಡು ನೋಡುತ್ತಿದ್ದರು. ತೆಂಗಿನ ಕಾಯಿ ಕೈಯಲ್ಲಿ ಹಿಡಿದು, ಸುತ್ತೆಲ್ಲ ದುರುಗುಟ್ಟಿ ನೋಡಿ - ಮಂತ್ರ ಪಠಣ.

ಗಂಭೀರ ಮುಖಮುದ್ರೆ ಹೊತ್ತು, ಆ ತೆಂಗಿನ ಕಾಯನ್ನ ಅಲ್ಲೆ ಒಂದು ನಾಗನ ಕಲ್ಲಿನ ಬಳಿ ಇಟ್ಟು,ಹಮ್, ದುಡ್ಡು ಕದ್ದವನು ಇಲ್ಲೇ ಇದ್ದಾನೆ, ಇನ್ನು ಗಂಟೆಯೊಳಗಾಗಿ ಅದನ್ನ ತಂದಿಡದಿದ್ದರೆ, ರಕ್ತ ಕಾರಿ ಸಾಯುವುದು ಖಂಡಿತಾ ಅಂತ ಘೋಷಿಸಿದ.ಜನರೆಲ್ಲ ಇನ್ನೇನು ದುಡ್ಡು ಯಾರಾದರೋ ತಂದಿಟ್ಟು ಕಾಲಿಗೆ ಬೀಳುತ್ತಾರೋ ಅನ್ನುವ ಕುತೂಹಲದಲ್ಲಿ ನೋಡುತ್ತಿದ್ದರು. ಉಹೂಂ , ಯಾರೂ ಬರಲಿಲ್ಲ! ಗಂಟೆ, ೨ ಗಂಟೆ.. ಯಾರೂ ರಕ್ತ ಕಕ್ಕಲೂ ಇಲ್ಲ!ಮತ್ತೆ ಅಲ್ಲಿಗೆ ಬಂದ ಆತ, ಚಿಂತಿಸಬೇಡಿ, ನಿಮ್ಮ ದುಡ್ಡು ನಿಮಗೆ ಸಿಗುತ್ತದೆ. ಆತ ರಕ್ತ ಕಾರಿ ಸಾಯುವುದಂತೂ ಖಂಡಿತ ಅಂತಂದು ಅಲ್ಲಿಂದ ಜಾಗ ಖಾಲಿ ಮಾಡಿದ!

ನನಗೆ ತಿಳಿದ ಹಾಗೆ ಮುಂದೊಂದಷ್ಟು ದಿನ ಯಾವ ಪೇಪರಿನಲ್ಲೂ ಯಾರೂ ರಕ್ತ ಕಾರಿ ಸತ್ತಿದ್ದು ಬರಲಿಲ್ಲ, ಭಟ್ಟರಿಗೆ ದುಡ್ಡು ಸಿಗಲೂ ಇಲ್ಲ! ಯಾರಿಗೂ ಈ ಘಟನೆಯ ನೆನಪೂ ಇಲ್ಲ!

ಇವತ್ತು ಆ ಪುಣ್ಯಾತ್ಮನ ಮಗ, ದೊಡ್ಡ ಮದುವೆ ನಡೆಸಿ ಬಂದಿದ್ದಾರೆ, ಮುಂಬಯಿಯಲ್ಲಿ. ಅವರು ಇದೇ ತೆರನಾದ ವ್ಯವಹಾರಗಳನ್ನ ಸ್ವಲ್ಪ ಮೇಲ್ದರ್ಜೆಯಲ್ಲಿ ಮಾಡುತ್ತಾರೆ.ಸಿನಿಮಾ ನಟರು, ಬ್ಯುಸಿನೆಸ್ ಕುಳಗಳು ಇವರ ಲೆವೆಲ್ಲಿಗೆ. ಅಪ್ಪ ಊರಲ್ಲಿ ರಾಜಕಾರಣಿಗಳ ಹೋಮ ಹವನ ನಡೆಸುತ್ತಾ, ಪತ್ರಿಕೆಗಳಿಗೆ ಜ್ಯೋತಿಷ್ಯದ ಅಂಕಣ ಬರೆಯುತ್ತಾ ಹಾಯಾಗಿದ್ದಾರೆ. ಊರ ಜನ ಅವರನ್ನ ಅದೇ ಭಯ ಮಿಶ್ರಿತ ಭಾವದಿಂದ ನೋಡುತ್ತಾರೆ.

ನಮ್ಮಲ್ಲಿ ಏನೂ ಬದಲಾಗುವುದಿಲ್ಲ, ಯಾವತ್ತಿಗೂ! ಅಂತನಿಸುತ್ತದೆ ನನಗೆ.

ಬುಧವಾರ, ಮೇ 16, 2007

ಒಂದು ಸಾಲು!

ನನ್ನ ಸ್ನೇಹಿತ ಕಣಾದನಿಗೆ ಹುಟ್ಟು ಹಬ್ಬಕ್ಕೆ ಹಾರಯಿಸೋಣ ಅಂತ ಫೋನಾಯಿಸಿದ್ದೆ.
ಅವನಿಗೆ " ಹ್ಯಾಪಿ ಬರ್ತಡೇನಮ್ಮಾ" ಅಂತ ಅಂದೆ,
ಅವನು ಒಂದು ಘಳಿಗೆ ಸುಮ್ಮನಿದ್ದು,

" ಹಮ್, ನಂಗೆ ೨೫ ವರ್ಷ. ೨೩ನೇ ವರ್ಷಕ್ಕೆ ಭಗತ್ ಸಿಂಗ್ ಸತ್ತೇ ಹೋಗಿದ್ದನಲ್ಲ" ಅಂದ.
ಅವನು ಆವತ್ತು ಆಡಿದ ಮಾತು ಇನ್ನೂ ನನ್ನ ತಲೆಯೊಳಗೆ ಗುಂಗಿ ಹುಳ!

ಸೋಮವಾರ, ಮೇ 14, 2007

"ವೈಶಾಖ ಸಂಜೆ" - ಕಾವ್ಯ ಗಾಯನ , ಒಂದು ವರದಿ.

ನಿನ್ನೆ, ೧೩.೦೫.೨೦೦೭ ಭಾನುವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ "ವೈಶಾಖ ಸಂಜೆ- ಕಾವ್ಯ ಗಾಯನ" ಕಾರ್ಯಕ್ರಮ. ಬಿಸಿಲ ದಿನದ ನಂತರದ ಇಳಿ ಸಂಜೆಗೆ ಸಿ.ಅಶ್ವಥ್ ಗಾಯನದ ತಂಪು. ಭಾಗವತರು ಸಂಸ್ಥೆ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ, ಝೀ ಕನ್ನಡದ ಸಹಯೋಗ. ಸಿ. ಅಶ್ವಥ್ ಜೊತೆಗೆ ಸ್ವರ ಸಿಂಚನಗೈದವರು ಪಲ್ಲವಿ ಅರುಣ್, ಸುಪ್ರಿಯಾ ಆಚಾರ್ಯ ಮತ್ತು ರವಿ ಮುರೂರು. ಜೊತೆಗೆ ಎಂದಿನಂತೆ ಅಶ್ವತ್ ರವರ ಅದ್ಭುತ ಹಿನ್ನೆಲೆ ವಾದಕರ ಬಳಗ.

ಮೊದಲಿಗೆ "ಎಲ್ಲಾದರು ಇರು ಎಂತಾದರು ಇರು" ಹಾಡಿಂದ ಕಾವ್ಯ ಗಾಯನ ಆರಂಭಿಸಿದರು ಅಶ್ವಥ್, ಸಂಗಡಿಗರ ಜೊತೆಗೆ. ನಂತರ ಸುಪ್ರಿಯಾ ಆಚಾರ್ಯ "ಮುಚ್ಚುಮರೆಯಿಲ್ಲದೆಯೆ" , ಅಶ್ವಥ್ ಬಹು ಆರ್ದವಾಗಿ "ಬದುಕು ಮಾಯೆಯ ಮಾಟ" ಹಾಡಿದರು. ಪಲ್ಲವಿಯವರ ನಾಕುತಂತಿಯ "ಆವು ಈವಿನಾ" ಹಾಡಿಗೆ ಕಲಾಕ್ಷೇತ್ರ ಸ್ತಬ್ದ. ಇಷ್ಟು ಹೊತ್ತಿಗೇ ಇಡಿಯ ಕಲಾಕ್ಷೇತ್ರ ತುಂಬಿಕೊಂಡಾಗಿತ್ತು. ಭರ್ತಿ ಸಾವಿರ ಜನ. ಎಲ್ಲರೂ ನಿಧಾನಕ್ಕೆ ವೈಶಾಖದ ಸಂಜೆಯೊಳಕ್ಕೆ ಇಳಿಯುತ್ತಿದ್ದರು.

ನಮ್ಮನ್ನೆಲ್ಲ ಆಮೇಲೆ ತುಂಬಿಕೊಂಡದ್ದು ಹಾಡು ಹಾಡು ಮತ್ತು ಹಾಡು. ಶ್ರಾವಣಾ ಬಂತು, ಕವಿದಂತೆ ಮಂಜು ಈ ಹಗಲಿಗೆ, ಪಲ್ಲವಿ ತೇಲಿಸಿದ ತಪ್ಪಿ ಹೋಯಿತಲ್ಲೇ, ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಂತೆ, ಬಂಗಾರ ನೀಲ ಕಡಲಾಚೆಗೀಚೆ, ಸುಪ್ರಿಯಾ ಆಚಾರ್ಯ ಮನ ತಟ್ಟಿದ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣಾ, ಇಡಿಯ ತಂಡ ಹಾಡಿದ ನೂರು ದೇವರನೆಲ್ಲ ನೂಕಾಚೆ ದೂರ, ಅಶ್ವಥ್ ಕ್ಲಾಸಿಕ್- ನೀ ಹೀಂಗ ನೋಡಬ್ಯಾಡಾ ನನ್ನ..

ನಡುವೆ ಪುಟ್ಟ ವಿರಾಮ. ಲಹರಿಯ ಕ್ಯಾಸೆಟ್ ಹರವಿಕೊಂಡಿದ್ದ ಟೇಬಲ್ ಜನರಿಂದ ಮುತ್ತಲ್ಪಟ್ಟಿತ್ತು. ಏನು ಕ್ಯಾಸೆಟ್- ಸಿಡಿ ಇದೆ ಅಂತ ನೋಡೋಕೂ ಆಗಲಿಲ್ಲ. ವಿರಾಮದ ನಂತರ ಮತ್ತೆ ಭರಪೂರ ಹಾಡು ಹಬ್ಬ. ಸುಪ್ರಿಯಾ ದನಿಯಲ್ಲಿ ಅಮ್ಮಾ ನಿನ್ನ ಎದೆಯಾಳದಲ್ಲಿ, ಅಶ್ವಥ್ , ಕಾಣದ ಕಡಲಿಗೇ ಮೊದಲೆರಡು, ನಂತರ ಪ್ರಾಯಶಃ ಆ ಸಂಜೆಯ ಅತ್ಯುತ್ತಮ ಗೀತೆಗಳಲ್ಲಿ ಒಂದು-ಪಲ್ಲವಿ ಅರುಣ್‌ರ "ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ.." ಈಕೆ ಎಷ್ಟು ಸೊಗಸಾಗಿ ಈ ಗೀತೆಯನ್ನ ಹಾಡಿದರೆಂದರೆ, ಹಾಡು ನಿಂತು ಅರೆ ಕ್ಷಣ, ಸದ್ದೇ ಇಲ್ಲ, ಆಮೇಲೆ ಚಪ್ಪಾಳೆಗಳ ಸುರಿಮಳೆ.

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು, ದೀಪವು ನಿನ್ನದೇ ಗಾಳಿಯು ನಿನ್ನದೇ, ರವಿ ಮುರೂರು ಹಿಂದುಸ್ತಾನಿ ಲೇಪವಿತ್ತು ಹಾಡಿದ ಲಕ್ಷ್ಮೀನಾರಾಯಣ ಭಟ್ಟರ "ಮರೆಯಲಾರೆ ನಿನ್ನ ನೀರೆ" ಎಲ್ಲ ಹಾಡು ಚಂದವೋ ಚಂದ. ಅಶ್ವಥ್, "ಸ್ವಾತಂತ್ರ ಸಂಗ್ರಾಮ ಆಗಿ ೧೫೦ ವರ್ಷ ಆದ ನೆನಪಿಗೆ ಒಂದು ದೇಶ್ ಭಕ್ತಿ ಗೀತೆ ಹಾಡ್ಬಿಡೋಣ, ಖುಷಿಲಿ" ಅಂತ ಹೇಳಿ "ನಾವು ಭಾರತೀಯರು" ಅಂತ ಎಲ್ಲ ಸಹ ಗಾಯಕರೊಡನೆ ಉಚ್ಚ ಕಂಠದಲ್ಲಿ ಹಾಡಿ ನಮ್ಮೆಲರೊಳಗೆ ಒಂದೇ ಅನ್ನುವ ಭಾವ ತುಂಬಿದರು.

ಹೇಳಿ ಹೋಗು ಕಾರಣ, ಅದಾದ ಮೇಲೆ ಸುಗಮ ಸಂಗೀತದ ರಾಷ್ಟ್ರ ಗೀತೆ! (ಅಶ್ವತ್ ಉವಾಚ) - ಎದೆ ತುಂಬಿ ಹಾಡುವೆನು , ಇದನ್ನಂತೂ ಪಲ್ಲವಿ ಎದೆ ತುಂಬಿಯೇ ಹಾಡಿದರು. ಕೊನೆಗೆ "ಎದೆ ತುಂಬಿ ಹಾಡಿದೆನು "ಇಂದು"ನಾನು ಅಂತ ಪದ್ಯ ಮುಗಿಸಿದ್ದು ಇದಕ್ಕೆ ಸಾಕ್ಷಿ. ಈ ಎರಡು ಹಾಡುಗಳಾದ ಮೇಲೆ, ಕೊನೆಯ ಮೂರು "ಅಶ್ವಥ್ ತ್ರಿವಳಿಗಳು". ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ, ಕೋಡಗನಾ ಕೋಳಿ ನುಂಗಿತ್ತಾ ಮತ್ತು ತರವಲ್ಲ ತಗಿ ನಿನ್ನ ತಂಬೂರಿ! ಇವುಗಳಂತೂ ಕುಳಿತವರನ್ನ ಹುಚ್ಚೆಬ್ಬಿಸಿದವು. ಎರೆರೇರಾ... ಅಂತ ಅಶ್ವಥ್ ಹಾಡುತ್ತಿದ್ದರೆ ಕೂತವರ ಮೈಲೆಲ್ಲಾ ಮಿಂಚು ಸಂಚಾರ. ಒಂದು ಅದ್ಭುತ ಸಂಜೆ ನಾದದಲ್ಲಿ ಮಿಂದ ಅನುಭವ.

ಈ ಕಾರ್ಯಕ್ರಮ, ಒಂದು ಹೊಸ ಮೈಲಿಗಲ್ಲು ಸ್ಥಾಪಿಸಿತು. ಮೊದಲ ಬಾರಿಗೆ ಬೆಂಗಳೂರಲ್ಲಿ, ಪ್ರಾಯಶಃ ಕರ್ನಾಟಕದಲ್ಲಿ ಟಿಕೇಟು ಖರೀದಿಸಿ, ದುಡ್ಡು ಕೊಟ್ಟು ಜನ ಸುಗಮ ಸಂಗೀತ ಕೇಳುವುದಕ್ಕೆ ಬಂದಿದ್ದರು ಮತ್ತು ಕಾರ್ಯಕ್ರಮ ಹೌಸ್ ಫುಲ್! ವೇದಿಕೆಯ ಅಲಂಕಾರ ಕೂಡ ಬಹಳ ಹಿತಕರವಾಗಿತ್ತು. ಚೆಂದನೆಯ ಬೆಳಕು ಮತ್ತು ರಂಗ ಸಜ್ಜಿಕೆ.

ಒಟ್ನಲ್ಲಿ, ಒಂದ್ ಮಸ್ತ್ ಸಂಡೇ ಸಂಜೆ! ಬರೋಕಾಗದೇ ಇದ್ದವರಿಗೆ ನನ್ನ ಸಂತಾಪವಿದೆ.

ಈ ವರದಿ, ದಟ್ಸ್ ಕನ್ನಡದಲ್ಲಿ.

ಶುಕ್ರವಾರ, ಮೇ 11, 2007

ಯಾರದೋ ಅಜ್ಜ ಅಜ್ಜಿಗೆ ಹುಷಾರಿಲ್ಲದಿರುವುದೂ, ನಮಗೆ ಪ್ರಾಣ ಸಂಕಟವೂ!

ಮತ್ತೆ ಯಥಾ ಪ್ರಕಾರ ಇದು ಕಾರಣಗಳ ಬಗ್ಗೆ ಬರೆಯುತ್ತಿರುವ ಬರಹ.:)

ಈ ಅಜ್ಜ ಅಜ್ಜಿಗೆ ಹುಶಾರಿಲ್ಲದ ನೆವಗಳನ್ನ ಮನುಷ್ಯ ಜಾತಿಯವರು ಬಳಸುವ ಬಗ್ಗೆ ನಾನೂ ಬಹಳ ಓದಿದ್ದೆ, ನಕ್ಕೂ ಇದ್ದೆ. ನನ್ ಮಗಂದು ನನ್ ಕಾಲ್ ಬುಡಕ್ಕೇ ಇದು ಬರತ್ತೆ ಅಂತ ನಂಗೇನ್ ಗೊತ್ತಿತ್ತು?! ಈ HR ಕೆಲ್ಸ ಶುರು ಮಾಡಿದ್ ಮೇಲಂತೂ ತರಹೇವಾರಿ ಕಾರಣಗಳನ್ನ ಕೇಳಿ ಕೇಳಿ ಸಾಕಾಗಿ ಹೋಗಿ, ಜ್ವರ, ತಲೆನೋವು, ಆಕ್ಸಿಡೆಂಟಾಗುವುದು ಎಂಬ ಜನ ಸಾಮಾನ್ಯರಿಗೆ ವಿಶೇಷ ಅರ್ಥ ಹೊಂದಿರುವ ಪದಗಳೆಲ್ಲ ನನ್ನ ನಿಘಂಟಿನಲ್ಲಿ ಅರ್ಥ ಕಳೆದುಕೊಂಡಿವೆ.

ಆಕ್ಸಿಡೆಂಟ್ ಬಗ್ಗೆ ಬರೆದಿದ್ದೆನಲ್ಲ, ಅದು ಕಾರಣ ನಂಬರ್ ಒಂದಾದರೆ, ಈ ಅಜ್ಜ ಅಜ್ಜಿಯರನ್ನ ಸಾಯಿಸುವುದು ಮತ್ತು ಹಾಸಿಗೆ ಹಿಡಿಸುವುದಕ್ಕೆ ಎರಡನೇ ಸ್ಥಾನ, ನಮ್ಮ HR ಪ್ರಪಂಚದಲ್ಲಿ. ಹೇಗೆ ಈ ಪ್ರಹಸನ ನಡೆಯುತ್ತದೆ ಅನ್ನುವುದು ನಿಮ್ಮ ಅವಗಾಹನೆಗೆ.

ಒಬ್ಬ ಮಹಾಶಯ ಸಂದರ್ಶನಕ್ಕೆ ಹಾಜರಾಗುತ್ತಾನೆ, ಪರವಾಗಿಲ್ಲ ಈ ಪುಣ್ಯಾತ್ಮ ಅಂತ ಈ ಟೆಕ್ನಿಕಲ್ ಪ್ಯಾನಲ್ ನಿರ್ಧರಿಸಿದ ಮೇಲೆ ನಾವು HR ಗಳು ಹಳ್ಳಕ್ಕೆ ಬಿದ್ದು, ಅವನಿಗೆ ಆಫರು ಲೆಟರು ಕೊಡುತ್ತೇವೆ. "ನೋಡಪ್ಪಾ ನಿನಗೆ ನಾವು ಕೆಲಸ ಕೊಡುವಾ ಅಂತ ಮಾಡಿದ್ದೇವೆ, ಇಷ್ಟಿಷ್ಟು ಸಂಬಳ ಕೊಡುವ ವಿಚಾರ ಇದೆ, ಹೇಗೆ ನಿಂಗೆ ಆಗಬಹುದೋ?, ಯಾವಾಗ ಸೇರ್ತೀಯಾ ಕೆಲಸಕ್ಕೆ" ಇತ್ಯಾದಿ ಮಣ್ಣಾಂಗಟ್ಟಿ ವಿಷ್ಯಗಳು ಅವನಿಗೆ ಕೊಡೋ ಲೆಟರೊಳಗಿರುತ್ತದೆ.

ಮೂರು ನಾಲ್ಕು ಸುತ್ತು ಇಂಟರ್ವ್ಯೂ ಮುಗಿವುವ ೧೫ ದಿನಗಳ ವರೆಗೆ ಈ ಮನುಷ್ಯ ಅತ್ಯಂತ ವಿಧೇಯ. ದಿನಕ್ಕೆರಡು ಫೋನು, ಗುಡ್ ಮಾರ್ನಿಂಗು ವಿಷ್ ಮೈಲು, ಆಹಾ! . ಈ ಯಡವಟ್ಟು ರಿಕ್ವೈರುಮೆಂಟುಗಳಿಗೆ ಜನ ಹುಡುಕೋದೆ ಕಷ್ಟ, ನಮಗೂ ಖುಶಿಯೇ, ಇವನೊಬ್ಬ ಸೇರುತ್ತಾನಲ್ಲ ಕಂಪನೀನ ಅಂತ. ಆದರೇನು ಮಾಡುತ್ತೀರಿ?, ಆಫರು ಲೆಟರು ಸಿಕ್ಕಿದ ಮಾರನೇ ದಿನವೇ ಗಿರಾಕಿ ನಾಟ್ ರೀಚೆಬಲ್! ನಾವು ದಿನಾ ಹೊತ್ತಿಂದ ಹೊತ್ತಿಗೆ ಅವನ ಫೋನೊಳಗೆ ಹಿಡಿಯಲು ಒದ್ದಾಡಿ ಸಾಯಬೇಕು. ಅಂತೂ ಒಂದು ದಿನ ಫೋನಿಗೆ ಸಿಗುತ್ತದೆ ಪ್ರಾಣಿ.

ನಾವು ಮಾತಾಡುವ ಮೊದಲೇ ಬರುತ್ತದೆ ಉತ್ತರ.
"sorry sir, my grand pa is not well you know?" ನಮಗೆ ಹೇಗೆ ಗೊತ್ತಿರಬೇಕು?!

"its ok, when can join Mr... "

"ಇಲ್ಲ ಸಾರ್ ನಂಗೆ ಈಗಲೇ ಹೇಳೋಕೆ ಆಗಲ್ಲ, ನಮ್ಮಜ್ಜನ ಪರಿಸ್ಥಿತಿ criticalಉ, ಹೇಳೋಕೆ ಆಗಲ್ಲ, ಇವತ್ತು ನಾಳೇ ಅನ್ನೋ ಹಾಗಿದೆ, ನಾನೊಬ್ಬನೇ ಮೊಮ್ಮಗ you know?"

ಅಲ್ಲಿಗೆ ಅವನ ಹಣೆಬರಹ ತಿಳಿದಂತೆ. ನಿಜವಾಗಿ ಏನಾಗಿರತ್ತೆ ಅಂತೀರಾ?
ಆ ಪುಣ್ಯಾತ್ಮ ನಮ್ಮ ಕಂಪನಿಯ ಆಫರು ಲೆಟರು ಹಿಡಕೊಂಡು ಮತ್ತೆ ಒಂದು ಇಪ್ಪತ್ತು ಇಂಟರ್ವ್ಯೂ ಅಟೆಂಡು ಮಾಡಿ,
"ನೋಡಿ ನಂಗೆ ಇವರು ಇಷ್ಟು ಕೊಡುತ್ತಾರಂತೆ ಸಂಬಳಾನ, ನೀವೆಷ್ಟು ಕೊಡುತ್ತೀರಿ ಅಂತ ಚೌಕಾಸಿ ಶುರು ಮಾಡಿರುತ್ತಾನೆ. ಎಲ್ಲೋ ಕೆಲಸವೂ ಗಿಟ್ಟಿರುತ್ತದೆ.

ಮತ್ತೆ ವಾರವೋ, ಹದಿನೈದು ದಿನವೋ ಬಿಟ್ಟು ಫೋನ್ ಮಾಡಿ ನೋಡಿದರೆ,
" i am not interested in your offer, already join " ......." ಕಂಪನಿ you know? "ಅನ್ನುತ್ತಾನೆ!

ನಾವು ಮತ್ತೆ ಹೊಸದಾಗಿ ಕುರಿಯಾಗಲು ಇನ್ಯಾರಿಗಾರೂ ಫೋನು ಮಾಡುತ್ತೇವೆ.

ಗುರುವಾರ, ಮೇ 10, 2007

ಒಂದೆರಡು ಹಳೆಯ ಹನಿಗಳು

ನಿನ್ನೆ ಮನೇಲಿ ಧೂಳು ಜಾಡಿಸುವಾಗ ಹಳೆಯ ಡೈರಿ ಸಿಕ್ಕಿತು. ಯಾವಾಗಲೋ, ಅಂದ ಕಾಲತ್ತಿಲೆ ಬರೆದ ಹನಿಗಳು. ಬೈಕೋಬೇಡಿ, ಬಾಲಿಶವಾಗಿದೆ ಅಂತ. ಕ್ಲಾಸಲ್ಲಿ ಕೂತು ಪಾಠ ಕೇಳುತ್ತಿದ್ದಾಗ ಗೀಚಿದವು ಇವುಗಳೆಲ್ಲ.

ಮಾನ

ಯಾಕ್ ಸ್ವಾಮಿಗಳೆ
ನೀವು ಹತ್ತೋದಿಲ್ಲ
ವಿಮಾನ,
"ಉಳ್ಸಬೇಕಲ್ಲಯ್ಯಾ
ನಾವು
ಕಾವೀ
ಮಾನ."

ಈ ಹೊಸಗಾಲದ ಹುಡುಗರ ಇಂಗ್ಲೀಷು ನೋಡಿ ಹಿರಿಯರೊಬ್ಬರು ಬೈಕೊಂಡಿದ್ದು ಹೀಗೆ:
ಮಾತು ಮಾತಿಗೂ
ಗೋ ಯಾ
ಕಮ್ ಯಾ,
ಇವರಿಗೇನು
ಬುದ್ಧಿ
ಕಮ್ಮಿಯಾ?!

ಬದಲಾವಣೆ

ಮದುವೆಯಾಗಿ
ದೊರೆತ ಮೇಲೆ ರಮಣ,
ಹುಡುಗಿ ತೂಗುವಳು
ನೂರು
ಮಣ!

ಬುಧವಾರ, ಮೇ 09, 2007

ಅಡ್ದ "ಪಲ್ಲಕ್ಕಿ" ಉತ್ಸವ.

ಇಲ್ಲ, ನಾನು ಯಾವುದೇ ಮಠಾಧೀಶರ ವರ್ಧಂತಿಯ ಬಗ್ಗೆಯೋ, ದೇವಸ್ಥಾನಗಳ ಜಾತ್ರೆಗಳ ಬಗ್ಗೋ ಬರೆಯಲು ಹೊರಟಿಲ್ಲ. ಇದು ಬೇರೆಯದೇ ವಿಚಾರ. ಒಂದು ಸಿನಿಮಾನ ಸ್ವಲ್ಪ ಪೋಸ್ಟ್ ಮಾರ್ಟಂ ಮಾಡೋಣ ಅನ್ನಿಸಿತು. ಸಿನಿಮಾಕ್ಕೂ, ಈ ಟೈಟಲ್ ಗೂ ಏನು ಸಂಬಂಧ ಅಂತಾನಾ?! "ಪಲ್ಲಕ್ಕಿ" ಸಿನಿಮಾದ ಬಗ್ಗೆ ಹೇಳೋಕೆ ಹೊರಟಿರೋದು ನಾನು. ಮೊನ್ನೆ ಮೊನ್ನೆ ಈ ಚಲನ ಚಿತ್ರ ನೋಡಿದೆ, "ಕೊಂದ ಪಾಪ ತಿಂದು ಪರಿಹಾರ" ಅಂತ ಒಂದು ಗಾದೆ ಇದೆ ಕನ್ನಡದಲ್ಲಿ, ಗೊತ್ತಲ್ಲ?!, ಹಾಗಾಗಿ ಇದರ ಬಗ್ಗೆ ಬರಿಯೋಣ ಅನ್ನಿಸಿತು.

ಪಲ್ಲಕ್ಕಿ ಸಿನಿಮಾದ ಹೀರೋ ಪ್ರೇಮ್. ಆತ ಹಿಂದೆ ಎರಡು ಒಳ್ಳೆಯ ಚಿತ್ರಗಳಲ್ಲಿ ನಟಿಸಿದ್ದು, ಮತ್ತು ಈ ಚಿತ್ರಕ್ಕೆ "ಪಲ್ಲಕ್ಕಿ" ಅನ್ನುವ ಒಳ್ಳೆ ಹೆಸರಿದ್ದದ್ದು, ಈ ಸಿನ್ಮಾ ನೋಡಲು ಪ್ರೇರೇಪಿಸಿತು ನನ್ನ. ಜೊತೆಗೆ ಬೆಂಗಳೂರು ತುಂಬಾ ಅದರ ಸೊಗಸಾದ ಪೋಸ್ಟರುಗಳು ಬೇರೆ. ಬೆಣ್ಣೆಯಂತೆ ಕಾಣುವ ಹೀರೋಯಿನ್ನು, ಹೂವು, ಅದೂ ಇದು ಪೋಸ್ಟ್ರು ತುಂಬಾ.

ಚಿತ್ರದ ಕತೆ ಬಗ್ಗೆ ಹೇಗೆ ಹೇಳಬೇಕು ಅಂತ ತಿಳೀತಿಲ್ಲ ನಂಗೆ. ಹೀರೋ ಅಪಾಪೋಲಿಯಂತೆ ಕಂಡರೂ ಊರಿಗುಪಕಾರಿ. ಅವನ "ಏರಿಯಾ"ಕ್ಕೆ ಅವನೇ ಲೀಡರ್ರು ( ಎಲ್ಲಾ ಸಿನ್ಮಾಲೂ ಹೀಂಗೆ ಇರತ್ತೆ ಅಲ್ವಾ?) ಅವನಿಗೆ ೩ ಜನ ಸ್ನೇಹಿತರು, ಮತ್ತು ಅವರು ಯಾವಾಗಲೂ ಕಾಮಿಡಿಯನ್ನೇ ಮಾಡುವವರು! ಅವನಿಗೆ ಸಿಕ್ಕಾಪಟ್ಟೆ ಕನ್ನಡ ಪ್ರೇಮ. ಹೆಚ್ಚಿನ ಸಿನಿಮಾದಂತೆ ಇಲ್ಲೂ ಚಂದಾ ಸಂಗ್ರಹಿಸಿ,ಕನ್ನಡ ರಾಜ್ಯೋತ್ಸವದಂದು ಕನ್ನಡ ಕನ್ನಡ ಅಂತ ಹಾಡು ಹಾಡುತ್ತಾನೆ ಹೀರೋ!. ರೌಡಿಗಳನ್ನ ಚಚ್ಚುವುದರ ಬಗ್ಗೆ ಬೇರೆ ಹೇಳಬೇಕಾಗಿಲ್ಲ.

ಒಂದು ಹುಡುಗೀನ ನೋಡಿ ಮೊದಲ ನೋಟದ ಪ್ರೇಮ ಆಗಿಬಿಡುತ್ತದೆ, ಇಂಟರ್ವಲ್‌ವರೆಗೂ ಅವಳನ್ನ "ಪ್ರಪೋಸ್ ಮಾಡಲು" ಸುತ್ತುತ್ತಾನೆ, ಇಂಟರ್ವಲ್ ಗೆ ಮುಂಚೆ ಅವಳು ಇವನಿಗೆ, "ನೀನು ಏನು ಸಾಧನೆ ಮಾಡಿದ್ದೀಯಾ, ನಿಂಗೆ ಜವಾಬ್ದಾರಿ ಇದೆಯಾ" ಅಂತಾಳೆ. ಇಂಟರ್ವಲ್ ಆದ್ಮೇಲೆ ಹೀರೋಗೆ ಮೈ ಮೇಲೆ ಜವಾಬ್ದಾರಿಯ ದೇವರು ಬಂದು ಅಪ್ಪನ ರೇಷ್ಮೇ ಸೀರೆಯ ಫ್ಯಾಕ್ಟರಿ ಸೀಝ್ ಆಗಿದ್ದನ್ನ ಬಿಡಿಸಿ ಕೆಲ್ಸ ಶುರು! ಇಷ್ಟು ದಿನ ಆ ಕಡೆಗೆ ತಲೆ ಕೂಡಾ ಹಾಕದವನು ಆರಾಮಾಗಿ ಮಶೀನು ರಿಪೇರಿ ಸಹ ಮಾಡುತ್ತಾನೆ. ಮೈ ಪರಚಿಕೊಳ್ಳುವಷ್ಟು ಖುಷಿಯಾಯಿತು ನನಗೆ.

ಅಮೇಲೆ ಏನಾಗುತ್ತದೆ ಅಂತ ಹೇಳೋದು ಬೇಕಿಲ್ಲವಲ್ಲ! ಹೀರೋ ದಿನ ಬೆಳಗಾಗುವುದರೊಳಗೆ ಶ್ರೀಮಂತ! ಹೀರೋಯಿನ್‌ದು ಸ್ವಲ್ಪ ಫ್ಲಾಶ್ ಬ್ಯಾಕು, ಅಪ್ಪ- ಅಮ್ಮ ಕಣ್ಣೀರು, ಆಸ್ಪತ್ರೆಯಲ್ಲಿ ಕ್ಲೈಮಾಕ್ಸು. ನಿಮಗೆ ನಾನು ಬೇರಾವುದೋ ೭೦- ೮೦ರ ದಶಕದ ಸಿನಿಮಾ ಕಥೆ ಹೇಳುತ್ತಿದ್ದೇನೆ ಅನ್ನಿಸಿದರೆ ಅದು ನನ್ನ ತಪ್ಪಲ್ಲ. ಯಾರು ಕಥೆ ಹೇಳಿದರೋ, ಯಾಕಾದರೂ ಇದನ್ನ ಚಿತ್ರ ಮಾಡಿದ್ದಾರೋ, ದೇವರಿಗೇ ಗೊತ್ತು. ರೇಷ್ಮೆ ಸೀರೆ ಕಾರ್ಖಾನೆಯ ಕಾನ್ಸೆಪ್ಟು ಹೊಳೆದದ್ದು ರುದ್ರ ಭೀಕರ!

ನಾಯಕಿ ರಮಣೀತೋ ಚೌಧರಿ ನೋಡಲು ಚೆನ್ನಾಗಿದ್ದಾಳೆ, ಅವಳಿಗೆ "ನಟಿಸುವ" ಕೆಲಸವೇನೂ ಇಲ್ಲ ಇಲ್ಲಿ. ಪ್ರೇಮ್ ಅಳುವುದು ಥೇಟ್ ನಕ್ಕಂತೆಯೇ ಕಾಣುತ್ತದೆ ಮತ್ತು ಕೇಳಿಸುತ್ತದೆ. ನೋಡುವ ನಮಗೆ ನಗಬೇಕೋ , ಅಳಬೇಕೋ ಒಂದೂ ತಿಳಿಯುವುದಿಲ್ಲ. ಚಿತ್ರದ ಹಾಸ್ಯ ಅತ್ಯಂತ ಹಾಸ್ಯಾಸ್ಪದವೂ, ಸಂಗೀತ ಶಂಕಾಸ್ಪದವೂ ಆಗಿದೆ. ಗುರುಕಿರಣ್ ಹಿಂದಿಯ ಫನಾ ಚಿತ್ರದ ಬೀಟ್ಸುಗಳನ್ನ ಕದ್ದಿದ್ದಾರೆ! ನಾವೆಲ್ಲ ಕನ್ನಡ ಪ್ರೇಮಿಗಳಾಗಿರುವುದರಿಂದ ಫನಾ ನೋಡಿಲ್ಲ ಅಂತ ಅವರು ಅಂದುಕೊಂಡಿರಬಹುದು. ಹಾಡುಗಳು ಯಾವುವೂ ನೆನಪಿನಲ್ಲಿ ಉಳಿಯುವುದಿಲ್ಲ. ಒಂದು ಹಾಡಿನ "ಕಥಕ್ಕಳಿ" ಕೊರಿಯೋಗ್ರಫಿ ಚೆನ್ನಾಗಿದೆ.

ಚಿತ್ರ ನಿರ್ದೇಶಕರು- ಕೆ.ನರೇಂದ್ರ ಬಾಬು. ಇವರ ಹೆಸರು ಯಾಕೆ ಹೇಳಿದೆ ಅಂದರೆ, ಮುಂದೆ ಇವರು ಬೇರಾವುದಾದರೂ ಸಿನಿಮಾ ಮಾಡಿದರೆ "ಸ್ವಲ್ಪ ಎಚ್ಚರ ಇರಲಿ" ಅಂತ ಅಷ್ಟೆ. ಇನ್ನು ಯಾರಾದರೂ, "ಕನ್ನಡ ಚಿತ್ರರಂಗ ಉದ್ಧಾರ ಆಗುತ್ತಿರುವ ಈ ಸಮಯದಲ್ಲಿ ಈ ತರ ಕೆಟ್ಟ ವಿಮರ್ಶೆ ಮಾಡಬಾರದು" ಅಂತ ಬೊಂಬ್ಡಾ ಹೊಡಕೊಂಡರೆ, ನಾನೇನೂ ಮಾಡಲಾಗದು.
ಯಾರಿಗೂ ಮೂರು ತಾಸು ಸಮಯ ಮತ್ತು ದುಡ್ಡು ಬಿಟ್ಟಿ ಬರುವುದಿಲ್ಲ.

ಮಂಗಳವಾರ, ಮೇ 08, 2007

ಹಣ"ಕ್ರಾಸಿ"ನ ವಿಷಯ.

ಹೊಸ ೨ ರೂಪಾಯಿ ನಾಣ್ಯದ ಬಗೆಗಿನ ಲೇಖನ ಇದು. "ಪುಂಗವ"ಪತ್ರಿಕೆಯಿಂದ ಎತ್ತಿಕೊಂಡದ್ದು. ಚಿತ್ರ- ಲೇಖನ ಓದೋಕೆ ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.
ಈ ಬರಹವೇ ಎಲ್ಲವುದನ್ನ ಹೇಳುವುದರಿಂದ, ನಾನು ಹೊಸದಾಗಿ ಏನನ್ನೂ ಹೇಳುವ ಅಗತ್ಯ ಕಾಣುವುದಿಲ್ಲ.
ಅಭಿಪ್ರಾಯಗಳಿಗೆ ಸ್ವಾಗತ!


ಈ ಲೇಖನವನ್ನ ಗಮನಕ್ಕೆ ತಂದವನು ಸಂದೀಪ, ಚಿತ್ರ ಜೋಡಿಸಿದ್ದು ವಿಕಾಸ. ಅವರಿಬ್ಬರಿಗೂ ಕೃತಜ್ಞ.

ಪೂರಕ ಓದಿಗಾಗಿ :

೧. ವಿಕಿಪೀಡಿಯಾ
೨. ನ್ಯೂಸ್ ಟುಡೇಸೋಮವಾರ, ಮೇ 07, 2007

ನಿಯಾನು ದೀಪಗಳ ಕೆಳಗೆ.

ಬಸ್ಟ್ಯಾಂಡು ರೈಲ್ವೇ ಸ್ಟೇಶನ್ನುಗಳ
ನಿಯಾನು ದೀಪಗಳ ಕೆಳಗೊಮ್ಮೆ
ನಿಂತು ನೋಡಿದರೆ
ವಿದಾಯದ ಹಲವು ಭಾವಗಳು
ಸುಳಿಯುವುದು ಕಾಣುವುದು, ಎಂದೂ.

ಇಲ್ಲಿಯ ತನಕ ಬೆಚ್ಚಗೆ ಬೆಸೆದಿದ್ದ
ಕೈಯ ಬಿಸುಪುಗಳೆಲ್ಲ ಅನಾಥವಾಗಿ ನಿಂತಿದ್ದು,
ಅಪ್ಪುಗೆ ಆಲಿಂಗನಗಳು ಅಸಹಾಯಕರಾಗಿ
ಅಲೆಯುವುದು,
ಸಂಧಿಸಿದ ಕಣ್ಣುಗಳ ಬಂಧಿಸಿದ ಬಂಧ
ಕಡಿದುಅಲ್ಲೆ ಬಿದ್ದಿರುವುದು

ಹುಸಿ ಮುನಿಸು, ಕಾತರ ನಿರೀಕ್ಷೆಗಳು
ಮುದುರಿ ಕುಳಿತಿರುವುದು
ಅಗಲಿದ ತುಟಿಗಳ ನಡುವಿನ ಮುತ್ತು
ಆಶ್ರಯ ಹುಡುಕುವುದು,
ಬೀಸಿದ ಕೈಗಳ ತುದಿಯ ಬೇಸರ ಅಳುತ್ತಿರುವುದು,
ಜೊತೆಗೆ ಸರಿವ ಭಾರ ಉಸಿರು.

ಕಾಣಲೇಬೇಕೆಂದಿಲ್ಲ ಇವುಗಳೆಲ್ಲ, ಎಲ್ಲರಿಗೂ.
ಆದರೆ ಕಣ್ಣಿಗೆ ಬೀಳಲೇಬೇಕು,
ಪ್ಲಾಟ್ ಫಾರಂ ಬೆಂಚಿನ ಮೇಲೆ ಬಿಟ್ಟು ಹೋದ ಒದ್ದೆ ಕರ್ಚೀಫು,
ಅಲ್ಲೆ ಪಕ್ಕದಿ ಗುಲಾಬಿಯ ಒಂಟಿ ಪಕಳೆ
ಅರೆಗತ್ತಲ ಮೂಲೆಯಲಿ ಬಿದ್ದ ಕಣ್ಣೀರ ಬಿಂದು,
ಮತ್ತು ನಿಧಾನವಾಗಿ
ದೂರ ಸಾಗುತ್ತಿರುವ ಒಂಟಿ ಪಾದಗಳು.

ಗುರುವಾರ, ಮೇ 03, 2007

ಅರಿವಿಂದ ಹೊರಗೆ. . .

ಚಕ್ರಕೆ ಪರಿಭ್ರಮಣದಿ ಸವೆವ ಭ್ರಮೆ,
ಸುಖದ ದಾರಿಯಲಿ ಸುತ್ತುವ
ಕನವರಿಕೆ

ಕುದುರೆಗೆ ಧೂಳೆಬ್ಬಿಸುವ ಹುಚ್ಚು
ಓಡುವ ಆತುರದ ಜೊತೆ
ಆಯಾಸದ ಭಯ

ಚಾಟಿಗೆ ಅಶ್ವದ ಮೈಸವರುವ ಚಪಲ!
ಏಟು ಉದ್ದೇಶವಲ್ಲ , ಮತ್ತು
ಎತ್ತಿದ ಕೈ ನೆಪ.

ಸಾರಥಿಗೆ ಖಾಲಿ ಕಣ್ಣುಗಳ ದೃಷ್ಟಿ,
ಎಲ್ಲ ಹಾದಿಯೂ ಒಂದೇ,
ಮನೆಯದನು ಬಿಟ್ಟು.

ಬತ್ತಳಿಕೆಯ ಬಾಣಕ್ಕೆ ಸ್ವಾತಂತ್ರದ ತುಡಿತ
ಶಿಂಜಿನಿಯ ದಾಟಿ ಗಾಳಿ ಸೀಳಿದರೆ,
ನೀಳ ಉಸಿರು.

ಯೋಧನಿಗೆ ಮರೀಚಿಕೆ ಮುಟ್ಟುವ ಗುರಿ
ಬಿರುದು ಹೊರುವಾಸೆ ಸುಪ್ತ
ಅಳುಕು ಬಿಡದು

ನೋಡುವಗೆ ಅಚ್ಚರಿ, ಬೆರಗು, ತಲ್ಲಣ
ನಿಜದಿ ಅಲ್ಲೇನು ಇಲ್ಲ, ಎಲ್ಲ
ಕಾಗದದ ಚಿತ್ರ.

ಬುಧವಾರ, ಮೇ 02, 2007

ಸಂಜೆಯಾಗುತಿದೆ ನಡೆ ನಡೆ ಗೆಳೆಯಾ..

ಒಂದು ಪುಟ್ಟ ದಿಬ್ಬ, ನಡುವೆ ಸಂಪಿಗೆಯ ಮರ, ಮರಕ್ಕೆ ಹುಲ್ಲಿನ ಮಾಡು, ಮಾಡಿನ ಕೆಳಗೆ ಜೋತು ಬಿದ್ದ ಪುಟ್ಟ ಪುಟ್ಟ ಕೊಳಲುಗಳು, ಗಾಳಿಗೆ ಅವು ತುಯ್ದಾಡುವಾಗ ಹೊರಡುವ ಸದ್ದು, ಸುತ್ತ ಅಲ್ಲಲ್ಲಿ ಮರ, ಗಿಡಗಳು, ದೀಪಸಾಲು, ತಂಪುಗಾಳಿ , ದಿಬ್ಬದೊಳಗಿಂದ ಹೊಮ್ಮುತಿರುವ ವೇಣು ನಿನಾದ, ಮರಳ ಹಾಸಿನ ಮೇಲೆ ಅಲ್ಲಲ್ಲಿ ಕುಳಿತು ತಲೆದೂಗುತ್ತಿರುವ ಸಂಗೀತ ಪ್ರಿಯ ಜೀವಗಳು.. ಸಂಜೆಯೊಂದು ಇದಕ್ಕೂ ಮಧುರವಾಗಲು ಸಾಧ್ಯವಿಲ್ಲ! ನ ಭೂತೋ, ಮತ್ತು ಪ್ರಾಯಶಃ ನ ಭವಿಷ್ಯತಿ.

ಸಂಜೆಯಾಗುತಿದೆ ನಡೆ ನಡೆ ಗೆಳೆಯಾ ಬೃಂದಾವನದ ಕಡೆ.. ಅನ್ನುವ ಹೆಚ್ ಎಸ್ ವೆಂಕಟೇಶ ಮೂರ್ತಿಯವರ ಈ ಸಾಲುಗಳ ಸರಿಯಾದ ಭಾವ ಸ್ಫುರಣೆ ನನಗಾಗಿದ್ದು ಮೊನ್ನೆ ಮೊನ್ನೆ. ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ. ಸಂದರ್ಭ, ಸ್ಥಳ: ವಿಶ್ವ ಗೋ ಸಮ್ಮೇಲನದ ಬೃಂದಾವನ.

ಈ ನಾದವನ್ನ ಸವಿಯಲು, ಯಾರು ಬೇಕಾದರೂ , "ಯಾವಾಗ ಬೇಕಾದರೂ" ಹೋಗಬಹುದಿತ್ತು. ಹೌದು, ಯಾವಾಗ ಬೇಕಾದರೂ!! ಗೋ ಸಮ್ಮೇಲನ ನಡೆದ ೯ ದಿನಗಳಲ್ಲಿ, ಎಷ್ಟು ಹೊತ್ತಿಗೆ ಬೇಕಿದ್ದರೂ ಬೃಂದಾವನದ ಕಡೆ ಕಾಲು ಹಾಕಬಹುದಿತ್ತು, ಕಿವಿಗೊಡಬಹುದಿತ್ತು,ಮನ ತೆರೆದಿಡಬಹುದಿತ್ತು.ಇಪ್ಪತ್ತ ನಾಲ್ಕು ಘಂಟೆ ಗುಣಿಸು ೯ ದಿನ! , ವೇಣುವಿನುಣಿಸು. ಅಬ್ಬಾ!! ಕೊಳಲಿಗೆ ದನಿಯಾದವರಲ್ಲಿ ಪಂಡಿತ ವೆಂಕಟೇಶ ಗೋಡ್ಕಿಂಡಿ, ಅವರ ಶಿಷ್ಯ ಬಳಗ, ರೋಣು ಮಜುಂದಾರ್, ಇವರೆಲ್ಲ ಸೇರಿದ್ದರು. ಕಿರಣ ಗೋಡ್ಕಿಂಡಿ, ರಾಜೇಶ್ ನಾಕೋಡ್ ಸಾಥೀಗಳು. ಪ್ರವೀಣ್ ಗೋಡ್ಕಿಂಡಿಯವರ ಮಗನೂ ಒಂದು ಇಳಿ ಸಂಜೆ "ಕೃಷ್ಣಾ ನೀ ಬೇಗನೆ ಬಾರೋ" ಅಂತ ಕರೆದ, ತನ್ನ ಪುಟ್ಟ ಬೆರಳಲ್ಲಿ ಕೊಳಲು ಸವರುತ್ತಾ..

ದಿನ ಪೂರ್ತಿ ಮುರುಳಿವಾದನವಿದ್ದರೂ, ಅದಕ್ಕೆ ರಂಗು ಬಳಿಯುತ್ತಿದ್ದುದು ಸಂಜೆ ಮತ್ತು ಅದರ ಜೊತೆಗೆ ಬರುವ ನಿಷೆ. ಸುತ್ತ ಬೆಳಕು ಕಡಿಮೆ ಕಡಿಮೆಯಾಗುತ್ತ ಬಂದ ಹಾಗೆ, ಸಾಲಾಗಿ ನಿಲಿಸಿದ ಬಿದಿರ ಪುಟ್ಟ ಗೂಡುಗಳೊಳಗೆ ದೀಪ ಹೊತ್ತಿಕೊಳುತ್ತಿದ್ದ ಹಾಗೆ,ಕೃಷ್ಣನ ಮೂರ್ತಿಯ ಎದುರಿಗೆ ಬೆಳಕು ಬಿದ್ದ ಮೇಲೆ, ಕೊಳಲಿನುಸಿರ ಬಲ ಜಾಸ್ತಿಯಾಗುತ್ತಿತ್ತು. ಆಗಸದಲ್ಲಿ ತುಂಡು ಮೋಡಗಳು, ಅಲ್ಲೇ ಮೇಲೆ ನಮ್ಮ ಜೊತೆಗೇ ಬಾನ್ಸುರಿ ಕೇಳುವ ಬಾನ ರಾಜ ಚಂದಿರ.. ಇಲ್ಲಿ ಯಾರಿಗೂ ಅವಸರವಿರಲಿಲ್ಲ, ಸಂಜೆ ಬಸ್ಸಿಗೆ ಓಡಬೇಕೆಂಬ ಚಿಂತೆಯಿರಲಿಲ್ಲ, ಸಭಾಂಗಣವನ್ನ ಮತ್ತೊಬ್ಬರಿಗೆ ಬಿಟ್ಟು ಕೊಡುವ ಗಡಿಬಿಡಿಯಿರಲಿಲ್ಲ.. ಹೊತ್ತು ಕಳೆದಂತೆ ಆನಂದವೂ ಜಾಸ್ತಿ.. ಜೀವ ಉದ್ದೀಪನವಾದ ಅನುಭವ. ಸಂಗೀತವನ್ನ ನಿಜಕ್ಕೂ ಸವಿಯುವುದು ಹೇಗೆ ಅನ್ನುವದನ್ನ ನನಗೆ ಕಲಿಸಿಕೊಟ್ಟಿದ್ದು ಈ ವೃಂದಾವನೀ.

ಕೃಷ್ಣನ ಮಧುರೆಯ ಬೃಂದಾವನ ಹೀಗೆಯೇ ಇದ್ದಿರಬೇಕು. ಸುತ್ತ ಗೋಪಾಲಕರು, ಗೋವುಗಳ ಚಾಮರ ಸೇವೆ, ಗೋಪಿಕೆಯರ ಗುಂಪು, ಮರದ ತಂಪಲ್ಲಿ ನಡುವೆ ಮುರುಳೀಧರ. ಸಿದ್ಧಲಿಂಗಯ್ಯನವರು ಇತ್ತೀಚೆಗೆ ನಡೆದ ಕವಿಗೋಷ್ಠಿಯೊಂದರಲ್ಲಿ "ಬಿದಿರ ತುಂಡನ್ನು ದ್ವಾಪರದ ಭಾಗ್ಯವನ್ನಾಗಿಸಿದ ಒಬ್ಬ ಗೊಲ್ಲ" ಅಂದಿದ್ದರು. ಎಷ್ಟು ಸತ್ಯ ಆ ಸಾಲು! ಆ ಭಾಗ್ಯ ಕಲಿಯುಗಕ್ಕೂ ವಿಸ್ತರಿಸಿದೆ ಅಂತ ನನಗೆ ಖಾತ್ರಿಯಾಯಿತು, ಈ ಕಲಿಯುಗ ಬೃಂದಾವನನ್ನ ಕಂಡ ಮೇಲೆ.ಶುಕ್ರವಾರ ಸಂಜೆ- ರಾತ್ರೆ ನಾನೊಬ್ಬನೇ ಕೂತು ಕೇಳುತ್ತಿದ್ದರೆ, ಮಿತ್ರವರ್ಗ ಜೊತೆಗಿಲ್ಲವಲ್ಲಾ ಅನ್ನುವ ಖಾಲೀ ಭಾವ. ಮಾರನೇ ದಿನ ಬರಲಿದ್ದ ಸುಶ್ರುತಂಗೆ, ವಿಕಾಸಂಗೆ, ತಂಗಿಗೆ ಮೆಸೇಜು ಮಾಡೀ ಮಾಡೀ ಇಟ್ಟೆ. ಸುಶ್ರುತ ಮತ್ತು ವಿಕಾಸರು ಒದೆಯುವ ಮತ್ತು ಇತ್ಯಾದಿ ಧಮಕೀ ಹಾಕಿದ ಮೇಲೆ ಹೆದರಿ ಸುಮ್ಮನಾಗಬೇಕಾಯಿತು.

ಮರುದಿನ ಇಷ್ಟ ಮಿತ್ರರೆಲ್ಲ ಜೊತೆಗೂಡಿ ನಡುರಾತ್ರೆಯವರೆಗೂ ಮುರುಳಿಯುಲಿಯಲ್ಲಿ ಮಿಂದೆವು. ಸುಮ್ಮನೆ ಒಂದು ರೀತಿಯ ಸಮ್ಮೋಹಿನಿಗೊಳಗಾದಂತೆ ಕೇಳಿದೆ ನಾನೂ. ಮಾತಿಗಲ್ಲಿ ಜಾಗವಿರಲಿಲ್ಲ..
ಈ ಕ್ಷಣ ಕಣ್ಣು ಮುಚ್ಚಿದರೂ ನನಗೆ ಆ ಅನಾಮಧೇಯ ಕೊಳಲ ಗಾರುಡಿಗ, ಗೋಧೂಳಿ ಸಮಯ ಮತ್ತು ವಾತಾವರಣದಲ್ಲಿ, "ಧರಣಿ ಮಂಡಲ ಮಧ್ಯದೊಳಗೆ" ಹಾಡನ್ನ ತನ್ನ ಉಸಿರೊಳಗಿಂದ ವೇಣುವಿಗೆ ತಂದು, ಕೂತ ನಮ್ಮೆಲ್ಲರ ಕಣ್ಣನ್ನ ಒದ್ದೆಯಾಗಿಸಿದ್ದು ಅನುಭೂತಿಗೆ ಬರುತ್ತದೆ.