ಸೋಮವಾರ, ಸೆಪ್ಟೆಂಬರ್ 25, 2006

ಭಾವ-೪

ಮಾಸಿದ ಬಟ್ಟೆ ತೊಟ್ಟು ಪಾರ್ಕೊಂದರ ಬೆಂಚಲ್ಲಿ ಕುಳಿತಿದ್ದ ಆ ಮುದುಕ,ತನ್ನ ಬಳಿಯಿದ್ದ ಹರಿದ ಗಂಟೊಂದರಿಂದ ಅಕ್ಕಿ ಕಾಳನ್ನ ತೆಗೆತೆಗೆದು ಮುಂದಿದ್ದ ಪಾರಿವಾಳಗಳಿಗೆ ಬೀರುತ್ತಿದ್ದ, ಮುಗುಳುನಗುತ್ತಾ.. ಬದುಕು ಸುಂದರವಾಗಿದೆ, ಅಲ್ಲವೆ?!

ಗುರುವಾರ, ಸೆಪ್ಟೆಂಬರ್ 21, 2006

ಜೀವನ

ಕಷ್ಟಗಳ ಗೂಡೊಳಗೆ ಸುಖವೆಂಬ
ಮೊಟ್ಟೆ;
ಕಾಯಬೇಕು,ಕಾವುಬೇಕು
ಫಲವು ಸಿಗುವುದಕ್ಕೆ!

ಭಾವ-೩.

ಚಿಂದಿ ಆಯುತ್ತಿದ್ದ ಹುಡುಗನಿಗೆ, ಆ ಕಸದ ರಾಶಿಯೊಳಗೊಂದು ಅರ್ಧ ಮುರಿದ ಪೆನ್ಸಿಲು ಸಿಕ್ಕಿತು. ಆತ ಖುಶಿಯ ಕಣ್ಣುಗಳಿಂದ ಅದನ್ನು ನೋಡಿ ಜೇಬಿಗೆ ಸೇರಿಸಿದ.ಬದುಕು ಸುಂದರವಾಗಿದೆ, ಅಲ್ಲವೆ?!

ಮಂಗಳವಾರ, ಸೆಪ್ಟೆಂಬರ್ 19, 2006

ಸಾವೊಂದರ ಕುರಿತು...

ಸಂಜೆ ತಂಗಿಗೆ ಫೋನಿಸಿದ್ದೆ,ಆಫೀಸಿನಲ್ಲಿ ಬೋರ್ ಹೊಡೀತಾ ಇತ್ತು..ಅದೂ ಇದೂ ಕೊರೆದ ಮೇಲೆ ಅವಳೊಂದು ಘಟನೆ ಹೇಳಿದಳು,ಅದನ್ನ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.
ಇವತ್ತು ಬೆಳಗ್ಗೆ ಕಾಲೇಜಿಗೆ ಹೊರಟ ತಂಗಿ ಶ್ರೀಕಲಾ ಗೆ,ಬಸ್ಸಲ್ಲಿ ಪರಿಚಿತರೊಬ್ಬರು ಸಿಕ್ಕರು. ದಿನಾ ಕಾಣುವ ಮುಖ,ಉಭಯಕುಶಲೋಪರಿಯ ಮಾತಿನಂತೆ, "ಹೇಗಿದ್ದೀರಿ, ಮನೇಲೆಲ್ಲಾ ಆರಾಮ" ಅಂದಿದ್ದಕ್ಕೆ, "ಹಮ್, ಎಲ್ಲಾ ಆರಾಮ, ನನ್ನ ತಂದೆ ನಿನ್ನೆ ತೀರಿಕೊಂಡರು " ಅಂತ ತಣ್ಣಗೆ ಉತ್ತರ ಬಂತು! ಇವಳಿಗೆ ಎದೆ ಧಸಕ್ ಅಂತು! ನಿನ್ನೆ ತಾನೆ ತಂದೆಯನ್ನ ಕಳೆದುಕೊಂಡ ಆಸಾಮಿ ಹೇಗಿರಬೇಕಿತ್ತು! ಆತ ಎಂದಿನಂತೆ ಕೈಲೊಂದು ವಿಜಯ ಕರ್ನಾಟಕ ಹಿಡಿದುಕೊಂಡು ಆರಾಮಾಗೆ ಕೂತಿದ್ದರು, ಮುಖದ ಮೇಲೆ ನೋವಿನ ಸಣ್ಣ ಗೆರೆಯೂ ಇಲ್ಲದೆ."ಹೇಗೆ?" ಅಂದಿದ್ದಕ್ಕೆ, "ಲೊ ಬಿ.ಪಿ, ನಾಲ್ಕು ದಿನ ಆಸ್ಪತ್ರೆಲಿ ಇದ್ರು, ನಿನ್ನೆ... " ಅಂತಂದು,ಪೇಪರಿನ ಅರ್ಧ ಓದಿ ಮುಗಿದ ಲೇಖನದೊಳಗೆ ಮುಳುಗಿದರು.
ಸ್ವಲ್ಪ ಹೊತ್ತಿನ ನಂತರ ಮಾಮೂಲಿನಂತೆ ಮಾತಿಗೆ ತೊಡಗಿ ಇವಳ ಓದು,ಅಪ್ಪ-ಅಮ್ಮ,ಮನೆ,ದನ-ಕರು ಇತ್ಯಾದಿ ಸಕಲ ಚರಾಚರ ವಸ್ತು ವಿಷಯಗಳ ಬಗ್ಗೆ ವಿಚಾರಿಸಿದರು!ಈಕೆಗೋ ತಲೆಯ ತುಂಬ ಅವರ ತಂದೆಯ ಸಾವೇ ನರ್ತಿಸುತ್ತಿದೆ!ಆ ಮನುಷ್ಯನೋ,ತೀರಿದ್ದು ಯಾರೋ ಏನೋ ಎಂಬಂತೆ ಸುಮ್ಮಗಿದ್ದಾರೆ! ಬಸ್ಸಿಳಿದು ಕಾಲೇಜಿಗೆ ಹೋಗಿ, ಎಕ್ಸಾಮು ಹಾಲಿನಲ್ಲಿ ಕೂತರೂ ಇದೇ ಯೊಚನೆ ಕಾಡುತ್ತಿತ್ತಂತೆ!
ಅದೂ ಅವರು ಸತ್ತಿದ್ದು ಹಿಂದಿನ ದಿನವಷ್ಟೆ.ಈ ಭಾವನೆ,ನಗರದ ಮಧ್ಯ ವಾಸಿಸುವ ಯಾವನೋ ದುಡ್ಡೇ ದೇವರು ಅಂತ ಬದುಕುವ ವ್ಯಕ್ತಿಯದಾಗಿದ್ದರೆ,ಇಷ್ಟೊಂದು ಆಲೋಚನೆ ಮಾಡುತ್ತಿರಲಿಲ್ಲವೇನೋ ಅವಳು.ಮಧ್ಯಮ ವರ್ಗದ , ಹಳ್ಳಿಯಲ್ಲಿ ಬದುಕುವ ವ್ಯಕ್ತಿಯೊಬ್ಬ ಸಾವನ್ನ ಅಷ್ಟು ಸುಲಭವಾಗಿ ಸ್ವೀಕರಿಸಿ ಸರಳವಾಗಿ ಇರುವುದನ್ನ ತಂಗಿ ನೋಡಿಲ್ಲ. ನಾಲ್ಕಾರು ದಿನ ಶೋಕಾಚರಣೆ,ಅಪರ ಕರ್ಮಗಳು ಇತ್ಯಾದಿಗಳು ಪ್ರತಿ ಮನೆಯಲ್ಲೂ ನಡೆಯಲೇ ಬೇಕಾದವು.ಹತ್ತು- ಹದಿನೈದು ದಿನ ಆಚೀಚಿನ ಮನೆಯವರು ಸಹಿತ ಅದೇ ಗುಂಗಿನಲ್ಲಿರುತ್ತಾರೆ.ಅವರು ಕೂಡ ಏನೂ ಸಂತಸದ ಕಾರ್ಯಗಳನ್ನ ನಡೆಸದೆ,ನಿಧನರಾದವರ ಮನೆಯ ದು:ಖದಲ್ಲಿ ಪಾಲ್ಗೊಳ್ಳುವುದು, ಅಲಿಖಿತ ನಿಯಮ.
ಯಾಕಾಗಿ ಆ ಮನುಷ್ಯ ಅಷ್ಟು ಆರಾಮಾಗಿದ್ದಿರಬಹುದು?, ತಂದೆಯ ಸಾವು ಮೊದಲೇ ಖಚಿತವಾಗಿ,ಸಾವಿನ ನೋವಿಗೆ ಮೊದಲೆ ಸಿಧ್ಧವಾಗಿದ್ದನೆ?ಅಪ್ಪ -ಮಗನ ನಡುವಿನ ಸಂಬಂಧ ಹಳಸಿತ್ತೆ?, ಎದೆಲ್ಲಿರುವ ದು:ಖದ ಕೊಳ ಇನ್ನು ಒಡೆದಿರಲಿಲ್ಲವೆ?, ಅಥವಾ, ಮೊಗದ ಮೇಲೆ ನಿರ್ಲಿಪ್ತತೆಯ ಲೇಪವಿತ್ತೆ? ತಮ್ಮ ನೋವನ್ನ "marketing" ಮಾಡಿ "symapathy" ಪಡೆಯಲು ಹಂಬಲಿಸುವವರಿರುವ ಈ ಕಾಲದಲ್ಲಿ,ಈತ ಭಿನ್ನವಾಗಿ ಯೋಚಿಸುವವನೆ?!

ಏನೋ ತಿಳಿಯುತ್ತಿಲ್ಲ, ಆತನ ಮುಖದ ಗೆರೆಗಳನ್ನ ಅರ್ಥ ಮಾಡಿಕೊಳ್ಳಲು ನಾನು ಅಲ್ಲಿರಲಿಲ್ಲ.

ಭಾವ-೨.

ಇಳಿಸಂಜೆಯ ಮಬ್ಬಿನೊಳಗೆ ತಡಕಾಡುತ್ತಿದ್ದ ಆ ವೃಧ್ಧನನ್ನ ಎಲ್ಲಿಂದಲೋ ಬಂದ ಪುಟ್ಟ ಹುದುಗನೊಬ್ಬ ರಸ್ತೆ ದಾಟಿಸಿ,ಮುಂದುವರೆದ.ಬದುಕು ಸುಂದರವಾಗಿದೆ, ಅಲ್ಲವೆ?

ಶುಕ್ರವಾರ, ಸೆಪ್ಟೆಂಬರ್ 15, 2006

~~~ ನನ್ನವಳು ~~~

ನನ್ನವಳ ಮೊಗದಲ್ಲಿ ಸಣ್ಣನೆಯ ಕಿರುನಗೆಯು,
ಕಾರಣವದೇನೆಂದು ಕೇಳಬಹುದೆ?
ತುಟಿಯಂಚ ನಗು ಹಿಂದೆ ಏನದೋ ತುಂಟತನ
ಮನದೊಳಗೆ ಏನಿದೆಯೋ ಅರಿಯಬಹುದೆ..

ಅನುನಯದ ನಡೆ ನುಡಿಯು, ತಣ್ಣನೆಯ ಮಾತುಗಳು
ಹೊಸದೇನೋ ಹುನ್ನಾರ ನಡೆಯುತಿಹುದು
ನಿತ್ಯವೂ ಇಲ್ಲದಿಹ ಬೇರೆಯದೆ ನೋಟವಿದು
ನನಗೇತಕೋ ಶಂಕೆ ಮೊಡುತಿಹುದು

ಹೊಸದು ಸೀರೆಯು ಬೇಕೆ, ಹಬ್ಬ ಸನಿಹದೊಳಿಲ್ಲ
ಅಮ್ಮ ಬರುವಳೆ ತವರು ಮನೆಯಿಂದ
ಚಿನ್ನ್ನದಾ ಸರಕಿನ್ನು ತಿಂಗಳೂ ಕಳೆದಿಲ್ಲ
ವಿಷಯವೇನೆಂದೊಮ್ಮೆ ಹೇಳಿದೊಡೆ ಚೆಂದ.

ಒಳಮನೆಯ ಗೋಡೆಯಲಿ ಕಂದನಾ ಚಿತ್ರಪಟ
ಮೊಗದಳಗದೇನದೋ ಹೊಸಬಗೆಯ ಲಜ್ಜೆ,
ಹೊಸ ಜೀವ ಬರುತಿಹುದೆ ನಮ್ಮ ಈ ಬಾಳೊಳಗೆ
ನಾಲ್ಕಿದ್ದ ಎಡೆಗೆ ಆರಾಗುವುದೆ ಹೆಜ್ಜೆ!

ಓ ಜೀವ ಸಖಿ ನನಗೆ ಮಾತೆ ಹೊರಡುತಲಿಲ್ಲ,
ಆನಂದ, ಆಶ್ಚರ್ಯ ಎದೆ ತುಂಬಿದೆ.
ನಿನ್ನೊಳಗ ಬಾಳ ಕುಡಿ ಚೈತನ್ಯ ತಂದಿಹುದು
ಜೀವನಕೆ ಹೊಸ ಅರ್ಥ ತಾ ಮೊಡಿದೆ.

ಗುರುವಾರ, ಸೆಪ್ಟೆಂಬರ್ 14, 2006

ಮಳೆ ಹೊಯ್ಯುತಿದೆ..

ಕಿಟಕಿಯ ಹೊರಗೆ ಸಣ್ಣಗೆ ಮಳೆ.. ಬೆಂಗಳೂರಿಗೆ ಇವತ್ತು ತುಂತುರು ಸ್ನಾನ, ಬಹಳ ದಿನಗಳನಂತರ ಸಂಜೆಯ ಹೊತ್ತು ನೀರ ಸಿಂಚನ. ನನಗೆ ಮಳೆ ಅಂದರೆ ಯಾವತ್ತೂ ಇಷ್ಟ.. ಅದರಲ್ಲೂ ಇಂತಹ ತುಂತುರು ಮಳೆಯಲ್ಲಿ ನೆನೆಯುತ್ತಾ ನಡೆಯುವುದು..ಆಹ್! ಮಳೆ ಬಂದ ದಿನ ಮನಸ್ಸು ಪ್ರಫುಲ್ಲ! ವರ್ಷಧಾರೆಗೆ ಮನದ ದುಗುಡವನ್ನ, ಬೇನೆ- ಬೇಸರವನ್ನ ಅರ್ಥ ಮಾಡಿಕೊಂಡು, ನಮ್ಮನ್ನ ಸರಿದಾರಿಗೆ ತಂದು ನಿಲ್ಲಿಸುವ ಶಕ್ತಿ ಇದೆ. ಮಳೆಯನ್ನ ಸಹೃದಯರೆಲ್ಲ ಪ್ರೀತಿಸುತ್ತಾರೆ, ಮತ್ತು, ಮಳೆ ಪ್ರೀತಿಸುವುದನ್ನ ಕಲಿಸುತ್ತದೆ!
ಕನ್ನಡ ಶಾಲೆಯ ಕಾಲದಲ್ಲಿ , ಹರಿಯೋ ಕೆಂಪು ನೀರಲ್ಲಿ ಮಾಡಿ ಬಿಟ್ಟ ಕಾಗದದ ದೋಣಿ ಮತ್ತು ಆ ಗೆಳೆಯರು, ಕೆಸರು ನೀರಲ್ಲಿ ಆಟವಾಡಿ ಬಂದು ಅಮ್ಮನ ಕೈಲಿ ಬೈಸಿಕೊಂಡಿದ್ದು, ಒದ್ದೆ ಮಾವಿನಮರ ಹತ್ತಿ ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಒಡೆದ ಹಂಚಿನ ಸಂದಿಯಿಂದ ಬೀಳುತ್ತಿದ್ದ ನೀರ ಅಡಿಯಲ್ಲಿಟ್ಟ ಪಾತ್ರೆ, ಮನೆಯ ಅಂಗಳದ ತುಂಬ ನೀರು ನಿಂತು ನಿರ್ಮಾಣವಾದ ಪುಟ್ಟ ಕೆರೆ, ಧೋ ಅಂತ ಮಳೆ ಹೊಯ್ಯುವಾಗ ಮನೆ ಒಳಗೆ ಬೆಚ್ಚಗೆ ಕೂತು ತಿಂದ ಹಲಸಿನ ಹಪ್ಪಳ...
ಹುಚ್ಹಾಪಟ್ಟೇ ಮಳೆ ಬಂದು ಕರೆಂಟಿಲ್ಲದೆ ಕಳೆದ ಕಗ್ಗತ್ತಲ ರಾತ್ರಿ..ಅಪ್ಪನ ಗಾಡಿಯ ಹಿಂದೆ ಕೂತು ಅರೆ ಬರೆ ಒದ್ದೆಯಾಗಿ ಮನೆಗೆ ಬಂದ ಸಂಜೆ, ಮಳೆಯೊಳಗೇ ಆಡಿದ ಫುಟ್ಬಾಲು ಆಟ.. ಪ್ರೀತಿಸಿದ ಜೀವದ ಜೊತೆ ಮಳೆಯೊಳಗೆ ಮಳೆಯಾಗಿ ನಡೆದ ಘಳಿಗೆ...
ಇವೆಲ್ಲ ನೆನಪಾಗುವುದಿಲ್ಲವೇ ಸ್ನೇಹಿತರೇ ನಿಮಗೂ... ನನ್ನ ಹಾಗೆ!
ಮಳೆ ನೆನಪಿನ ಬುತ್ತಿಯನ್ನ ಬಿಚ್ಚಿಸುತ್ತದೆ, ನಮಗೇ ತಿಳಿಯದಂತೆ..
ಮಳೆಯೇ ನಿನ್ನಯ, ಮಾಯೆಗೆ ನಮನ!

ಬುಧವಾರ, ಸೆಪ್ಟೆಂಬರ್ 13, 2006

ಭಾವ- ೧.

ಬೆಳಗಿನ ಜಾವದ ಚುಮುಚುಮು ಚಳಿಯೊಳಗೆ ತನ್ನಪ್ಪನ ಕಿರುಬೆರಳ ಹಿಡಿದ ಆ ಪುಟ್ಟ ಮಗು, ತಪ್ಪು ತಪ್ಪು ಹೆಜ್ಜೆ ಹಾಕುತ್ತಾ.. ಮಂಜಿನ ದಾರಿಯೊಳಗೆ ನಡೆದುಹೋಯಿತು.. ಬದುಕು ಸುಂದರವಾಗಿದೆ, ಅಲ್ಲವೆ?!

ಮಂಗಳವಾರ, ಸೆಪ್ಟೆಂಬರ್ 12, 2006

.......ಲಹರಿ....

--ಆಶಯ---
ಪಯಣ ಸಾಗುತಲಿರಲಿಗುರಿಯ ಕಡೆಗೆ,
ವಿನಯ ಸೂಸುತಲಿರಲಿಕೊನೆಯವರೆಗೆ
ತಾಳ್ಮೆ ತಪ್ಪದೆ ಇರಲಿ,ಜಯವೆ ನಿನಗೆ!

--ಎಚ್ಚರಿಕೆ--
ಬೆಳ್ಳೀ ಬೆಳದಿಂಗಳಿಗೆ ಕಾಲಿಡಬೇಡಾ
ಹುಡುಗೀ,
ನಿನಗೊ ಅದಕೂ ಸಾಮ್ಯವೇ ಎಲ್ಲಾ,
ಸಾಕಾದೀತು
ಹುಡುಕಿ!

--ಕಾರಣ---

ನೀ
ನನಗೆ
ದೊರಕಲು
ಕಾರಣ
ನಿನ್ನನಗೆ...

ಶುಕ್ರವಾರ, ಸೆಪ್ಟೆಂಬರ್ 08, 2006

~~~ಹಂಪೆಯ ಚಿತ್ರಗಳು~~~

ನಾನು ಪ್ರವಾಸ ಪ್ರಿಯ. ತಿರುಗಾಟ ಅಂದಮೇಲೆ ಮುಗೀತು! ಯಾರೇ ಕರೆಯಲಿ, ಹೆಗಲಿಗೊಂದು ಬ್ಯಾಗೇರಿಸಿ, ಆರಾಮಾಗಿ ಹೊರಟು ಬಿಡುತ್ತೇನೆ. ಹೊತ್ತಿಲ್ಲ ಗೊತ್ತಿಲ್ಲ! ಈ ಕೆಲಸದ ಜಂಜಡ ಇಲ್ಲದಿದ್ದರೆ ಯಾವತ್ತೂ ತಿರುಗುತ್ತಲೇ ಇರುತ್ತಿದ್ದೆನೇನೋ! ಏನು ಮಾಡೋಣ, ಆಗೋದಿಲ್ಲವೇ!
ಈ ಬಾರಿ ಸ್ವಲ್ಪ ದಿನ ಬಿಡುವು ಮಾಡಿಕೊಂಡು, ಹಂಪೆಗೆ ಹೋಗಿದ್ದೆ, ಸ್ನೇಹಿತರ ಜೊತೆ. ಹಂಪೆ ನನ್ನಿಷ್ಟದ ತಾಣ. ಹೋಗಿದ್ದು ಕೆಲವೇ ಸಲ, ಆದರೆ ಜನ್ಮಾಂತರದ ಅನುಬಂಧ ಇದ್ದಂತೆ ಅನಿಸುತ್ತದೆ, ಹಂಪೆಗೂ- ನನಗೂ! ಅಲ್ಲಿನ ಕಲ್ಲು ಬಂಡೆಗಳ ಮಧ್ಯೆ, ಪಾಳು ಗುಡಿಗಳ ನಡುವೆ ಕಳೆದು ಹೋದಂತೆ ತಿರುಗುವುದು ಬಲು ಆಪ್ಯಾಯಮಾನ.
ಅರ್ಧ ಮುರಿದ ಹಳೆಯ ಗೋಪುರದಲ್ಲಿ ಕುಳಿತಿರುವ ಧ್ಯಾನಸ್ಠ ಸಂನ್ಯಾಸಿ, ವಿರೂಪಾಕ್ಷ ದೇವಾಲಯದ ಬೀದಿಯಲ್ಲಿನ ಮಣ್ಣೊಳಗಾಡುವ ಮಗು, ಆಗ ತಾನೆ ನೀರು ಸಿಕ್ಕಿ ಚಿಗುರುತ್ತಿರುವ ಜೋಳದ ಪೈರಿನ ನಡುವೆ ಸಂತೃಪ್ತ ಮುಖ ಭಾವ ಹೊತ್ತು ಕುಳಿತ ರೈತ, ತುಂಬಿ ಹರಿಯುತ್ತಿದ್ದ ತುಂಗೆಯನ್ನೆ ಬೆರಗಾಗಿ ದಿಟ್ಟಿಸುತ್ತಿದ್ದ ಗೃಹಿಣಿ, ಅದೇ ತುಂಗೆಯಲ್ಲಿ ಕಾಲು ಇಳಿ ಬಿಟ್ಟು ತಂಪು ಅನುಭವಿಸುತ್ತ ಕೂತಿರುವ ನೀಲಿ ಕಣ್ಣಿನ ಹುಡುಗಿ..
ಸೂರ್ಯಕಾಂತಿಯ ಹಳದಿ ಚಾದರ ಹೊದ್ದು ಮಲಗಿದಂತಿರುವ ಇಳೆ, ಶೃದ್ಧೆಯಿಂದ ದೇವಳದ ಕಂಬದ ಮೇಲಿನ ಗಣಪನ್ನ ಚಿತ್ರಿಸುತ್ತಿರುವ ಪ್ರವಾಸಿ.. ಖಾಲಿ ಗರ್ಭಗುಡಿಗೂ ಭಕ್ತಿಯಿಂದ ಕೈ ಮುಗಿಯುತ್ತಿರುವ ವೃಧ್ದೆ.. ಸಂಜೆಯ ಜಿನುಗು ಮಳೆಗೆ ತೋಯುತ್ತ ಬಂಡೆಗಳೆಡೆಯಲ್ಲಿ ಮಾಯವಾದ ಹುಡುಗ....
ಇವೆಲ್ಲ ನನಗೆ ಈ ಬಾರಿ ಹಂಪೆಯಲ್ಲಿ ಕಂಡು ಬಂದ ಕೆಲವು ಮಧುರ ರೂಪಕಗಳು..ಒಮ್ಮೆ ಮಳೆ ಹೊಯ್ಯುವ ಸಮಯ ಹಂಪೆಗೆ ಹೋಗಿಬನ್ನಿ, ಇದಕ್ಕೂ ಸುಂದರ ಚಿತ್ರಗಳು ನಿಮಗೆ ಕಂಡಾವು,ನೋಡುವ ಕಣ್ಣಿದ್ದರೆ!

ಸೋಮವಾರ, ಸೆಪ್ಟೆಂಬರ್ 04, 2006

ಮಧ್ಯರಾತ್ರಿಯ ಹರಟೆಗಳು

ರಾತ್ರಿ ಊಟವಾದ ಮೇಲೆ, ಕೂಡಲೆ ಮಲಗದೇ, ಏನಾದರೂ ಕೆಲಸಕ್ಕೆ ಬೇಕಾದ್ದು- ಬೇಡದ್ದು ಹರಟುತ್ತ ಬಿದ್ದುಕೊಳ್ಳುವುದು, ಗಂಟೆ ಹನ್ನೆರಡು ಹೊಡೆದ ನಂತರವೇ, "ಏ ಸಾಕು ಮಲ್ಗನ್ರೋ" ಎಂದು ನಿದ್ರಿಸುವುದು, ನಮ್ಮ ಜನ್ಮಕ್ಕಂಟಿದ ವ್ಯಾಧಿ. ನಾವು ಹಿಂದಿನ ದಿನ ತಡರಾತ್ರಿಯವರೆಗೆ, ಏನು ಹರಟುತ್ತಿದ್ದೆವು ಎಂಬುದು, ದೇವರಾಣೆಯಾಗಿಯೂ ನಮಗೆ ಮರುದಿನ ಬೆಳಗ್ಗೆ ನೆನೆಪಿರುವುದಿಲ್ಲ. ಬಹುತೇಕ, ಎಲ್ಲ ಬ್ರಹ್ಮಚಾರಿ ಹುಡುಗರ ಹಣೆಬರಹ ಇದೇ ಇರಬೇಕು!
ಜಗತ್ತಿನಲ್ಲಿರುವ ಎಲ್ಲ ವಿಷಯಗಳೂ ನಮ್ಮ ಈ ತಡ ರಾತ್ರಿಯ ಹರಟೆ- ಚರ್ಚೆಯ ಬಲಿಪಶು ಆಗಿಯೇ ಆಗಿರುತ್ತವೆ,ಇಂದಾಗಿರದಿದ್ದರೆ, ನಾಳೆ. ಪಕ್ಕದ ಬೇಕರಿ ಬಾದಾಮಿ ಹಾಲಿನ ಕ್ವಾಲಿಟಿಯಿಂದ ಹಿಡಿದು, ಗೋಡ್ಕಿಂಡಿಯ ಕೊಳಲಿನ ವರೆಗೆ, ಬುಶ್ ನ ಜಾಗತಿಕ ನೀತಿಯಿಂದ ಎದುರು ಮನೆ ಬೆಕ್ಕಿನಮರಿಯವರೆಗೆ, ಏನಾದರೂ ಒಂದು, ನಮ್ಮ ನಾಲಿಗೆಗೆ ಆಹಾರವಾಗಲೇ ಬೇಕು. ಅದನ್ನ ಕಚ್ಚಿ- ಎಳೆದು ಬೇಜಾರು ಬಂದು, ಕಣ್ಣು- ದೇಹ ಎರಡೂ ಅಸಹಕಾರ ಚಳುವಳಿ ಶುರುಮಾಡಿದ ಮೇಲೇ ಚಾದರ ಹೊದ್ದುಕೊಳ್ಳುವುದು!
ನಮ್ಮ ದೇಹದ "ಬಯಾಲಾಜಿಕಲ್ ಗಡಿಯಾರ" ಪ್ರಾಯಶ: ಈ ನಮ್ಮ ಸರಿ ರಾತ್ರಿಯ ನಿದ್ದೆಗೆ ಹೊಂದಿಕೊಂಡಿರಬೇಕು. ಇಲ್ಲವಾದರೆ , ಏಷ್ಟೊ ದಿನ, ಬರಿ ೩-೪ ತಾಸಿನ ನಿದ್ರೆ ಮಾಡಿಯೂ ಇಲ್ಲಿಯವರೆಗೂ, ಏನೆಂದರೆ ಏನೂ ಆಗಿಲ್ಲ!! ದಿನವಿಡೀ ಎಷ್ಟೇ ಕೆಲಸ ಮಾಡಿ ದಣಿದರೂ, ಈ ಹರಟೆ ಗೆ ಮಾತ್ರ ರಜೆ ಇಲ್ಲ. ಈ ತರಹದ ಹರಟೆಗಳು, "mind refresh" ಆಗೋಕೆ ಸಹಾಯ ಮಾಡುತ್ತವೆ, ಅನ್ನಿಸುತ್ತದೆ.
ಹೊಸದಾಗಿ ನಮ್ಮ ರೂಮಿಗೊಬ್ಬ ಗೆಳೆಯ ಬಂದು ಸೇರಿಕೊಂಡಿದ್ದಾನೆ. ಪಾಪ, ಅವನ ಜೈವಿಕ ಗಡಿಯಾರ, ಇನ್ನೂ ಈ ಪದ್ದತಿಗೆ ಹೊಂದಿಕೊಂಡಿಲ್ಲ. ನಮ್ಮ ಚರ್ಚೆಯ ಪೀಠಿಕಾ ಪ್ರಕರಣ ಮುಗಿಯುವುದರೊಳಗಾಗಿ, ಗೊರಕೆ ಹೊಡೆಯುತ್ತಿರುತ್ತಾನೆ! ಅವನ ನಿದ್ದೆಗೆ ತೊಂದರೆ ಕೊಡುವುದು ಬೇಡಾ ಅಂತ, ನಾವೆಲ್ಲ ಬೇಗನೆ ಮಲಗಲು ಆರಂಭಿಸಿದ್ದೇವೆ. ಆತ ನಮ್ಮ ಮಢ್ಯರಾತ್ರಿ ಹರಟೆ ಕುಟುಂಬದ ಸದಸ್ಯನಾಗುತ್ತನೋ, ಇಲ್ಲಾ ನಾವು ಕುಂಭಕರ್ಣನ ವಂಶ ಸೇರುತ್ತೇವೋ, ಕಾದು ನೋಡಬೇಕು!

ಶುಕ್ರವಾರ, ಸೆಪ್ಟೆಂಬರ್ 01, 2006

~~~~~ಹೃದಯ ಗೀತ~~~~~~~

ಕೇಳೆ ಸಖಿ ನನ್ನ ಮಾತ,
ಒಮ್ಮೆ ನಿಲ್ಲು ಅಲ್ಲಿಯೇ,
ತಿರುಗಿ ಕೂಡ ನೋಡದೇನೆ,
ಹೋಗಬೇಡ ಹಾಗೆಯೆ..

ನನ್ನದೇನೆ ತಪ್ಪು ಗೆಳತಿ,
ಮನದ ಮಾತು ಕೇಳಿದೆ..
ನೀನೆ ನನ್ನ ಬಾಳಬೆಳಕು,
ಮನವದುವನೆ ಹೇಳಿದೆ..

ನೀನು ಕೂಡ ನನ್ನ ಹಾಗೆ
ಸತ್ಯ ಹೇಳಬಾರದೆ?
ಹೃದಯದೊಳಗೆ ನನ್ನ ಬಿಂಬ
ಒಮ್ಮೆ ನೋಡಬಾರದೆ..

ಹೊರಟೆಯೇನೆ ನನ್ನ ಬಿಟ್ಟು,
ಒಂಟಿ ಬಾಳ ಪಯಣಕೆ..
ಹೋಗೋ ಮುನ್ನ,
ಕೇಳೇ ಇಲ್ಲಿ ನನ್ನ ಸಣ್ಣ ಕೋರಿಕೆ..

ಒಮ್ಮೆ ನಿಂತು ಅಲ್ಲೆ ನಕ್ಕು,
ಮತ್ತೆ ಹೋಗಬಾರದೆ?
ನಿನ್ನ ನಗುವೆ ಜೀವಜಲವು,
ಬದುಕಿನುದ್ದ ಹಾದಿಗೆ.......
ನಾನು ಶ್ರೀನಿಧಿ, ಬ್ಲಾಗುಗಳ ಲೋಕಕ್ಕೆ, ಹೊಸ ಮುಖ.ಬಹಳಷ್ಟು ಕಾಲ ಬ್ಲಾಗುಗಳನ್ನ ಓದಿಯೆ ಕಾಲ ಕಳೆದೆ. ಈಗ ಬರೆಯೋಣ ಅನ್ನಿಸುತ್ತಿದೆ!ಹುಟ್ಟಿ ಬೆಳದಿದ್ದು ಮಂಗಳೂರಿನಲ್ಲಾದರೂ, ಹೃದಯ ಮಲೆನಾಡಿನದು.ಸದ್ಯಕ್ಕೆಬೆಂಗಳೂರು ವಾಸಿ. ಸಾಫ್ಟ್ ವೇರ್ ಕಂಪನಿಯೊಂದರಲ್ಲಿ, HR Executive.

ಕವನ , ಹನಿಗವನ ಬರೆಯೋದು ನನ್ನ ಇಷ್ಟದ ಹವ್ಯಾಸ, ಸಣ್ಣ ಕತೆಗಳನ್ನ ಕೂಡ ಬರೆಯಲು ಪ್ರಯತ್ನಿಸಿದ್ದೇನೆ.
ಇನ್ನು ಮುಂದೆ, ದಿನವು ಬರೆಯಬೇಕು ಅಂದುಕೊಂಡಿದ್ದೇನೆ.. ನೋಡೋಣ.