ಶುಕ್ರವಾರ, ಡಿಸೆಂಬರ್ 29, 2006

ಭಾವ- ೯

ಅಮ್ಮ ಕೊಟ್ಟಿದ್ದ ಒಂದು ಬಾಳೆ ಹಣ್ಣಲ್ಲೇ ಅರ್ಧ ಪಾಲು ಮಾಡಿದ ಆ ಹುಡುಗಿ, ಅದನ್ನ ಮನೆ ಎದುರಿನ ಕಂಬಕ್ಕೆ ಕೊರಳೊರೆಸುತ್ತ ನಿಂತಿದ್ದ ಕರುವಿಗೆ ತಿನ್ನಿಸ ತೊಡಗಿದಳು.. ಬದುಕು ಸುಂದರವಾಗಿದೆ, ಅಲ್ಲವೇ?...

ಬುಧವಾರ, ಡಿಸೆಂಬರ್ 20, 2006

ಬಾ ಕಂದ ಕನ್ನಡದ ಬಳಿಗೆ....

ನಾಳಿನಿಂದ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗೆಯಲ್ಲಿ. ಆ ಸಂದರ್ಭದಲ್ಲೊಂದು ಆಶಯ ಕವನ, ಕನ್ನಡಕ್ಕಾಗಿ.

ಒಂದೆರಡು ಘಳಿಗೆ, ಕನ್ನಡದ ಬಳಿಗೆ
ಬಾರೋ ಕಂದಾ ನಿನ್ನ ತಾಯಿಯಿವಳು.
ಒಮ್ಮೆ ಬಂದರೆ ನೀನು, ಮತ್ತೆ ಹೋಗೆಯೋ ಹಿಂದೆ
ಬಲು ಶಕ್ತಿಯನು ಈ ತಾಯಿ ನೀಡುವಂಥವಳು.

ಕನ್ನಡದ ನವಿರು ನುಡಿ, ಸರಳ ಸುಂದರ ಬಂಧ
ಬೇರೆಲ್ಲಿ ದೊರಕುವುದೊ ಕಂದ ನಿನಗೆ?
ಪರಕೀಯ ಭಾಷೆಯದು ಬಾಡಿಗೆಯ ಒಲುಮೆ, ತಿಳಿ.
ಕನ್ನಡಮ್ಮನೆ ಬೆಳಕು, ಕೊನೆಯವರೆಗೆ.

ನಮ್ಮತನ, ನಮ್ಮ ಜನ, ನಮ್ಮದೀ ಭಾಷೆ
ಎನ್ನೋ ಹೆಮ್ಮೆಯು ಬೇಕು ಕಂದ ಎಲ್ಲರಿಗು.
ಹೊರಗಿಂದ ಬಂದವಗೆ ಗೌರವವ ಕೊಡಿ ಸಾಕು,
ಕಾಲು ನೆಕ್ಕುವ ಚಟವ ಮೊದಲು ಬಿಡಬೇಕು.

ಕನ್ನಡವ ನೀ ಬೆಳೆಸೋ ಕೈಂಕರ್ಯದಲಿ ತೊಡಗು,
ಕನ್ನಡಮ್ಮನು ನಿನ್ನ ಸಲಹುವಳು ಮಗುವೇ.
ಎಲ್ಲೆ ನೀ ಹೋದರೂ ಕನ್ನಡವು ಜೊತೆಗಿರಲಿ,
ಬದುಕ ದಾರಿಯ ತುಂಬ ನಿನಗೆ ಜಯವೇ.

ಬುಧವಾರ, ಡಿಸೆಂಬರ್ 13, 2006

ಹಬ್ಬ!

(ಇದೊಂತರಾ ಸ್ವಂತಕ್ಕೆ ಬರೆದುಕೊಂಡದ್ದು, ಮುಂದೂ ನೆನಪಿರಲಿ ನಂಗೆ ಅಂತ. ಓದಿ ಬೋರಾಗುವ ಸಾಧ್ಯತೆಗಳಿವೆ ಎಂದು ಶಾಸನ ಬದ್ಧವಾಗಿ ಎಚ್ಚರಿಸಲಾಗಿದೆ!)

ಕಳೆದ ಹದಿನೈದಿಪ್ಪತ್ತು ದಿನಗಳಿಂದ ಮೇಲಿಂದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಬೆಂಗಳೂರು ತುಂಬ. ಜೊತೆಗೆ ಆಳ್ವಾಸ್ ನುಡಿಸಿರಿ ಬೇರೆ ಮೂಡುಬಿದಿರೆಯಲ್ಲಿ,ಹೋಳಿಗೆ ಮೇಲಿನ ತುಪ್ಪದ ಹಾಗೆ. ಭರತನಾಟ್ಯದಿಂದ ಹಿಡಿದು ಪಾಪ್ ಸಾಂಗುಗಳ ತನಕ, ಎಲ್ಲ ಪ್ರಕಾರಗಳನ್ನೂ ನೋಡಾಯ್ತು!

ಈ ಸಾಲು ಸಾಲು ಕಾರ್ಯಕ್ರಮಗಳ "ಓಂಕಾರ"ಆಗಿದ್ದು ಕಲಾಕ್ಷೇತ್ರದ ರಂಗೋತ್ಸವದಿಂದ. ಪಂಪ ಪ್ರಶಸ್ತಿ ವಿಜೇತರ ನಾಟಕಗಳ ಪ್ರಯೋಗ ಇತ್ತು ಅಲ್ಲಿ. ನಾನು ಅಲ್ಲಿ ಮೂರು ನಾಟಕಗಳನ್ನ ನೋಡಿದೆ. ನನ್ನ ಮೆಚ್ಚಿನ ಲೇಖಕ ತೇಜಸ್ವಿಯವರ "ಚಿದಂಬರ ರಹಸ್ಯ", ಪು.ತಿ.ನ ರ "ಗೋಕುಲ ನಿರ್ಗಮನ" ಮತ್ತು ನರಸಿಂಹ ಸ್ವಾಮಿಯವರ "ಮೈಸೂರು ಮಲ್ಲಿಗೆ". ಮೂರು ನಾಟಕಗಳೂ ಭಿನ್ನ ತಳಹದಿಯವು.

ಅಲ್ಲಿಂದ ಹೊರಟದ್ದು ಮೂಡುಬಿದಿರೆಗೆ. ಆಳ್ವಾಸ್ ನುಡಿಸಿರಿಯಲ್ಲಿ ಯಕ್ಷಗಾನ, ಯಕ್ಷಗಾನ ತಾಳಮದ್ದಲೆ, ಶ್ರೀಧರ್ ದಂಪತಿ, ಶಾರದಾ ಮಣಿಶೇಖರ್- ಭರತನಾಟ್ಯ, ೮-೧೦ ತಂಡಗಳ ಜಾನಪದ ನೃತ್ಯಗಳು, ಅಲ್ಲಿನ ವಿದ್ಯಾರ್ಥಿಗಳಿಂದ- ಮಧ್ಯಮ ವ್ಯಾಯೋಗ, ದೂತವಾಕ್ಯ, ಪಂಜರ ಶಾಲೆ- ೩ ನಾಟಕಗಳು. ಒಂದಿಷ್ಟು ಖ್ಯಾತನಾಮರ ಭಾವಗೀತೆಗಳು, ಇತ್ಯಾದಿ.

ಅದು ಮುಗಿಸಿಕೊಂಡು ಬೆಂಗಳೂರಿಗೆ ಬಂದರೆ, ಇಲ್ಲಿ ಬೆಂಗಳೂರು ಹಬ್ಬಮತ್ತು ಇತರ ಕಾರ್ಯಕ್ರಮಗಳು. ವಾರವಿಡೀ ನಮ್ಮ ಪಾಳಯ ಟೌನುಹಾಲು- ಕಲಾಕ್ಷೇತ್ರ ದಲ್ಲೇ ಟೆಂಟು ಹಾಕಿತ್ತು! ೦೨ನೇ ತಾರೀಕಿಂದ ಮೊನ್ನೆ ೧೧ರ ವರೆಗೆ.

ಶನಿವಾರ ಟೌನುಹಾಲಿನಲ್ಲಿ ಯಕ್ಷಗಾನ, ಪಕ್ಕದ ಕಲಾಕ್ಷೇತ್ರದಲ್ಲಿ ಹಿಂದೂಸ್ತಾನಿ ಸಂಗೀತ, ಬೆಳಗಿನವರೆಗೆ ಬೆಂಗಳೂರು ಹಬ್ಬದ ಪ್ರಯುಕ್ತ. ನಡು ರಾತ್ರೆ ೨ ಗಂಟೆಗೆ ಫಯಾಜ್ ಖಾನ್ ನ ಸಾರಂಗಿ ವಾದನ ಕೇಳಿದೆ. ದನದ ಕರುಳಿನಿಂದ ಮಾಡುವ ಅಪರೂಪದ ವಾದ್ಯ ಅದು. ಭಾರತದಲ್ಲಿ ಸಾರಂಗ್ ನುಡಿಸುವವರು ೩-೪ ಜನ ಇದ್ದಾರಂತೆ, ಅಷ್ಟೆ. ನಡು ರಾತ್ರಿಯಲ್ಲಿ ಒಮ್ಮೆ ಎಲ್ಲಾದರೂ ಸಾರಂಗ್ ಕೇಳಿ ನೋಡಿ, ಗೊತ್ತಾಗುತ್ತದೆ ಆವಾಗ ಆ ವಾದ್ಯದ ಶಕ್ತಿ.

ಭಾನುವಾರ ರಾತ್ರಿ ಮತ್ತೆ ಯಕ್ಷಗಾನ, ಚಿಟ್ಟಾಣಿ ತಂಡದಿಂದ. ೭೭ರ್ ಪ್ರಾಯದಲ್ಲು ಅವರ ಕುಣಿತ ನೋಡಿದರೆ ಅಬ್ಬ! ಎನಿಸದೇ ಇರದು. ಮಾರನೇ ದಿನ ಮುರುಳಿಯ ಮೋಡಿಗಾರ ಪ್ರವೀಣ್ ಗೋಡ್ಕಿಂಡಿಯವರ ಕೊಳಲು ವಾದನ, ಮಂಗಳವಾರ ಬೆನಕ ತಂಡದ ಜೋಕುಮಾರಸ್ವಾಮಿ, ಬಿ.ವಿ.ಕಾರಂತರ ರಂಗ ಪರಿಕಲ್ಪನೆಯ ನಾಟಕ ಇತ್ತು, ಟೌನ್ ಹಾಲಿನಲ್ಲಿ. ಅಲ್ಲೇ ಬದಿಯ ನಯನ ಕನ್ನಡ ಭವನದಲ್ಲಿ ವೆಂಕಟೇಶ ಗೋಡ್ಕಿಂಡಿಯವರ ಕೊಳಲು ವಾದನ. ಮಾರನೇ ದಿನ ಎ.ಡಿ.ಎ ರಂಗ ಮಂದಿರದಲ್ಲಿ "ಹೀಗಾದ್ರೆ ಹೇಗೆ" ಅನ್ನುವ ನಗೆ ನಾಟಕ, ಇದ್ದಿದ್ದು ಇಬ್ಬರೇ, ಲಕ್ಷ್ಮೀ ಚಂದ್ರಶೇಖರ್ ಮತ್ತು ಸುಂದರ್. ನಾಟಕದ co- ordination ಅದ್ಭು‍ತ!. N.S.D ಈ ನಾಟಕ ಯೋಜಿಸಿತ್ತು.

ಗುರುವಾರ ವೈಜಯಂತಿ ಕಾಶಿ ಕೂಚುಪುಡಿ ನೃತ್ಯ, ಮತ್ತೆ ಮೈಸೂರು ಸಹೋದರರಿಂದ ಪಿಟೀಲು ವಾದನ. ಆಮೇಲೆ ಪ್ರತಿಭಾ ಪ್ರಹ್ಲಾದ್ ಭರತನಾಟ್ಯ, ಎಲ್ಲವೂ ಕಲಾಕ್ಷೇತ್ರದಲ್ಲೆ. ಹೊರಗೆ ಸಂಸ ಬಯಲು ರಂಗ ಮಂದಿರದಲ್ಲಿ ಕನ್ನಡದ ಹಳೇ ಚಿತ್ರಗೀತೆಗಳನ್ನ ಹಾಡುವ ಕಾರ್ಯಕ್ರಮವೂ ಇತ್ತು, ಆವತ್ತೇ.

ಶುಕ್ರವಾರ location shift! ಅರಮನೆ ಮೈದಾನದಲ್ಲಿ ಆನೂರು ಅನಂತಕೃಷ್ಣ ತಂಡದವರಿಂದ ತಾಳವಾದ್ಯ. ಹಿತವಾದ ಚಳಿ ಜೊತೆಗೆ, ಪಕ್ಕವಾದ್ಯಗಳ ಲಹರಿ.. ನಂತರ ಕಥಕ್ ಸಾಮ್ರಾಟ ಬಿರ್ಜು ಮಹಾರಾಜ್, ಜೊತೆಗೆ ಕಿಶನ್ ಮಹರಾಜ್ ತಬ್ಲಾ, ರಾಜನ್ ಮತ್ತು ಸಾಜನ್ ಮಿಶ್ರಾ ಗಾಯನ! ಆಹಾ! ನಾನು ನೋಡಿದ ಸುಂದರ ಕಾರ್ಯಕ್ರಮಗಳಲ್ಲಿ ಒಂದು ಇದು. ಶನಿವಾರ ಲಯ ಬ್ರಹ್ಮ ಶಿವಮಣಿಯಿಂದ drums ಬಡಿತ. ಈತನ ಕೈ ಚಳಕಕ್ಕೆ ಅಷ್ಟೂ ಜನ ಬಿಟ್ಟ ಬಾಯಿ ಬಿಟ್ಟುಕೊಂಡೆ ಕುಳಿತಿದ್ದರು. ಸ್ಪೂನು, ಮರದ ಸೌಟು, ಪುಟ್ಟ ಗೆಜ್ಜೆ, ಹಳೆಯ ಸಣ್ಣ ಹಂಡೆ, ಚೈನು, ಎಲ್ಲದರಲ್ಲೂ ನಾದ ಹೊರಡಿಸಬಲ್ಲ ಆಸಾಮಿ ಶಿವಮಣಿ. ಆತನಿಗೆ ಸಾಥ್ ನೀಡಲು ಕೇರಳ ಚೆಂಡೆಯ ಭರ್ಜರಿ ತಂಡವಿತ್ತು.

ಭಾನುವಾರ ಅರಮನೆ ಮೈದಾನದಲ್ಲಿ ಬಿ.ಜಯಶ್ರೀ ತಂಡದಿಂದ ರಂಗಗೀತೆಗಳು, ನಂತರ ಪ್ರಸಾದ್ ಬಿಡ್ಡಪ್ಪನ ವಸ್ತ್ರ ಪ್ರದರ್ಶನ! ಅದನ್ನ ಮುಂದೆ ಬರುವ ಕೈಲಾಶ್ ಖೇರ್‍ನಿಗಾಗಿ ಕಾಯುತ್ತಾ ಸಹಿಸಿಕೊಂಡದ್ದಾಯ್ತು! ಜಯಶ್ರೀ ತಂಡಕ್ಕೆ ಕೇವಲ ಅರ್ಧ ತಾಸಿನ ಸಮಯ ಸಿಕ್ಕಿದ್ದು ಬಲು ಬೇಸರದ ವಿಷಯ. ನಡುವೆ ಹತ್ತು ನಿಮಿಷ ಮಲೈಕಾ ಅರೊರಾ, ಅರ್ಜುನ್ ರಾಂಪಾಲ್ ಬಂದು ಹೋದರು. ಕೊನೆಯಲ್ಲಿಕೈಲಾಶ್ ಖೇರ್ ಬಲು ಸೊಗಸಾಗಿ ಹಾಡಿದ. "ಅಲ್ಲಾ ಕೇ ಬಂದೇ" ಹಾಡಿನಿಂದ ಪ್ರಸಿದ್ಧನಾದ ಈತ ಮೊದಲು ಸೂಫಿ ಹಾಡುಗಳನ್ನ ಹಾಡುತ್ತಿದ್ದವನು.

ಸೋಮವಾರ ರಾತ್ರಿ ಕಲಾಕ್ಷೇತ್ರದಲ್ಲಿ ರೂಪಕಲಾ ಕುಂದಾಪುರದವರ ನಾಟಕ ಮೂರು ಮುತ್ತುಗಳು, ಅದಕ್ಕು ಹೋಗಿಬಂತು ನಮ್ಮ ಪಟಾಲಮ್ಮು, ಮಾರನೇ ದಿನ ಆಫೀಸು ಇದ್ದರೂ ಲೆಕ್ಕಿಸದೇ!
ಸದ್ಯಕ್ಕೆ ವಿರಾಮದ ಸಮಯ, ಮುಂದೊಂದು ವಾರ ಎಲ್ಲೂ ಹೋಗುವ ಪ್ಲಾನು ಇಲ್ಲಿವರೆಗಂತೂ ಇಲ್ಲ!

ಸೋಮವಾರ, ನವೆಂಬರ್ 20, 2006

ಬೆಳಗೊಂದು ಕೊಲಾಜ್.

ನಿತ್ಯದ ಬೆಳಗೂ ಹೀಗೆಯೇ,
ಒಂದು ಕೋಲಾಜ್
ಕಲಾಕೃತಿಯಂತೆ.
ಏಳುತ್ತಿದ್ದ ಹಾಗೇ,
ಎದುರುಮನೆಯ ಅವರೇಕಾಳು
ಉಪ್ಪಿಟ್ಟಿನ ಪರಿಮಳ.
ಪಕ್ಕದ ಭಟ್ಟರ ಮನೆಯಲ್ಲಿ
ಕೌಸಲ್ಯಾ ಸುಪ್ರಜಾ..
ಹೊರಗಡೆ ಬೀದಿಯಲ್ಲಿ
ಶಾಲೆಯ ವ್ಯಾನಿನ ಹಾರ್ನು
ಮಾಲಿಕನ ಮಗನಿನ್ನು ಹೊರಟಿಲ್ಲ,
ಕೇಳುತಿದೆ ಅವನಮ್ಮನ ಬೈಗುಳ.

ಹಾದಿಯಲ್ಲಿ ಸೇವಂತಿಗೆ ಮಾರುವ
ಗಾಡಿಯಾತನ ಕೂಗು,
ಕೂಗೇ ಅದು, ಅಲ್ಲ ವಿನಂತಿಯೆ?
ಸ್ನಾನದ ಮನೆಯೊಳಗಿಂದ
ಮಿತ್ರನ ಏರು ದನಿ
ಟವಲು ಕೊಡೋ , ಮರೆತೆ.
ಮರೆತದ್ದೆ?, ಇರಬಹುದು.
ಎಲ್ಲಿಂದಲೋ ಬರುವ
ಊದುಬತ್ತಿಯ ಘಮಲು,
ಮನೆಯ ತಾರಸಿ ಮೇಲೆ ದಿನವು
ಮಗ್ಗಿಯೋದುವ ಹುಡುಗಿ
ಆಕೆಗದು ಬಲು ಕಷ್ಟ,
ಈಗೀಗ ನನಗೂ!

ಹೊರಡಬೇಕೀಗ ಆಫೀಸಿಗೆ,
ಶಬ್ದಗಳ ದಾರಿಯಲಿ,
ವಾಸನೆಯ ಜೊತೆಗೆ.
ನಿತ್ಯದ ಬೆಳಗೂ ಹೀಗೆಯೇ..
ಒಂದು ಕೋಲಾಜ್
ಕಲಾಕೃತಿಯಂತೆ.
ಎಲ್ಲಿಂದಲೋ ತೆಗೆದು
ಎತ್ತಲೋ ಜೋಡಿಸಿ,
ಮೂಡಿಸಿಬೇಕು ಹೊಸ ಚಿತ್ತಾರ.
ಪರದೆ ಸರಿದಾಗ
ನಿಂತಿರಬೇಕು ನಾವು,
ನಮ್ಮದೆ ಕಲಾಕೃತಿಯ ಜೊತೆಗೆ,
ನಮ್ಮೆದುರಿಗೇ!.

ಮಂಗಳವಾರ, ನವೆಂಬರ್ 14, 2006

ಆಗುಂಬೆಯ ಸಂಜೆ.

ಕಳೆದ ಭಾನುವಾರ ಸಂಜೆ, ಆಗುಂಬೆಯ ಸೂರ್ಯಾಸ್ತ ನೋಡುವ ಭಾಗ್ಯ ನಮ್ಮದಾಯಿತು. ನಾವು ಅಂದರೆ, ನಾನು , ಹರ್ಷ, ದಯಾ, ಕೃಷ್ಣ, ವ್ಯಾಸ ಮತ್ತು ನಾಗರಾಜರದು. ಹೋಗಿದ್ದು ಗೆಳೆಯ ಶ್ರೀರಾಮನ ಮದುವೆ ಕಾರ್ಯಕ್ರಮಕ್ಕೆ, ಸಂಜೆ ಅಲ್ಲಿಂದ ಆಗುಂಬೆಗೆ . ಮೋಡ ಇರಬಹುದು, ಸೂರ್ಯಾಸ್ತ ನೋಡೋಕೆ ಸಿಗಲ್ಲ ಅಂತೆಲ್ಲ ಅಳುಕಿದ್ದರೂ ಧೈರ್ಯ ಮಾಡಿ ಹೊರಟೆವು! ನಮ್ಮ ಜೀಪಿನ ಚಾಲಕ ರಫೀಕನೂ ಸರಿಯಾಗೇ "ಚಚ್ಚಿದ್ದ" ಗಾಡಿನ! ೪.೩೦ ರ ಸುಮಾರಿಗೆ ತೀರ್ಥಹಳ್ಳಿಯಿಂದ ಹೊರಟವರು ೫ರ ಆಸುಪಾಸಿಗೇ ಆಗುಂಬೆ ತಲುಪಿಯಾಗಿತ್ತು! ನಮ್ಮ ಪುಣ್ಯಕ್ಕೆ ಶುಭ್ರ ಆಗಸ, ಮತ್ತು ಹೊಳೆಯುತ್ತಿರುವ ನೇಸರ, ಜೊತೆಗೆ ನಮ್ಮಂತೇ ಸೂರ್ಯಾಸ್ತಕ್ಕೆ ಕಾಯುತ್ತಿರುವ ಒಂದಿಷ್ಟು ಸಹೃದಯರು.
ಅರ್ಧ ತಾಸು ಮೇಲೆ ಕೆಳಗೆ ಸುತ್ತಿ, ಒಂದಿಷ್ಟು photo session ನಡೆಸಿ ಸೂರ್ಯಾಸ್ತ ನೋಡಲು ಮನಸ್ಸನ್ನ ಹದ ಮಾಡಿಕೊಂಡೆವು. ಮತ್ತೆ ನಾವು ನೋಡಿದ್ದು, ಅಲ್ಲಲ್ಲ, ಅನುಭವಿಸಿದ್ದು ಸುಂದರ ನೇಸರನ ಬಣ್ಣದಾಟ, ಅದನ್ನ ಶಬ್ದದಲ್ಲಿ ಕಟ್ಟಿಡಲು ಸಾಧ್ಯವೇ ಇಲ್ಲ!! ಹಾಗಾಗಿ ಕೆಲವೊಂದು ಚಿತ್ರಗಳು, ನಿಮಗಾಗಿ.

ಇಲ್ಲಿರುವ ಚಿತ್ರಗಳು ದೇವರಾಣೆಯಾಗೂ "painting" ಅಲ್ಲ ಎಂದಷ್ಟೆ ಹೇಳಲು ಬಯಸುತ್ತೇನೆ! ಕೄಷ್ಣ ಮತ್ತು ಹರ್ಷ ಇಬ್ಬರ camera ಗಳು ತುಂಬಿಕೊಂಡ ಒಂದಿಷ್ಟು ಚಿತ್ರಗಳು....

೧)ಪಶ್ಚಿಮ ಸಮುದ್ರದಲ್ಲಿ ಮುಳುಗೋಕೆ ರೆಡಿ! ಇನ್ನೂ ಕೂಡ ಕಾವು ತಣಿದಿಲ್ಲ ಸೂರ್ಯನದು...


೨) ಹಮ್, ಸ್ವಲ ಸಮಾಧಾನಗೊಂಡ ನೇಸರ..


೩)ಹಳದಿ ತಟ್ಟೆಯ ಸುತ್ತ,ಕೆಂಪು ಚಿತ್ತಾರ.

೪)ಸೂರ್ಯನೊಳಗಡೆ ಅರಶಿನ ಕುಂಕುಮ!

೫)ಇನ್ನೇನು ಮುಳುಗೇ ಬಿಡ್ತೀನಿ!

೬)ಕತ್ತಲ ಗರ್ಭದಲಿ ಅರ್ಧ ಅಡಗಿದ ಸೂರ್ಯ.

೭)ಆಹ್! ಮಾಯ ಆಗೇ ಬಿಟ್ಟ!

೮)ಬರಿಯ ಚಿತ್ತಾರ ಮಾತ್ರ ಬಾನ ತುಂಬ!ದಿನಪ ಮೂಡಿಸಿದ ವರ್ಣ ವೈಭವ, ಆ ನೈಸರ್ಗಿಕ ಚಿತ್ತಾರಗಳು ಮನದಲ್ಲಿ ಇನ್ನೂ ಹಾಗೇ ಉಳಿದಿವೆ.

ಮಾರನೇ ದಿನ ಬೆಳಗ್ಗೆ ಹರ್ಷ ಹೇಳುತ್ತಿದ್ದ, "ನಾನಿನ್ನೂ ಆ sunset ಗುಂಗಲ್ಲೇ ಇದ್ದಿ ಮಾರಾಯ" ಅಂತ.
ಸೂರ್ಯಾ, ನಿನಗೊಂದು ಪ್ರಣಾಮ!

ಬುಧವಾರ, ನವೆಂಬರ್ 08, 2006

ಎಫ್ ಎಮ್ ರೇಡಿಯೋ ಚಾನಲುಗಳು ಮತ್ತು ಅವುಗಳ ಬಧ್ಧತೆ.

ಇತಿಹಾಸ ಮರುಕಳಿಸುತ್ತಿದೆ. ಜನ ಮತ್ತೆ ರೇಡಿಯೋದ ಕಡೆ ವಾಲುತ್ತಿದ್ದಾರೆ. ೭೦-೮೦ರ ದಶಕದ ನಂತರ ಟಿ ವಿ ಯ ಅಬ್ಬರದಿಂದ ಮೂಲೆಗುಂಪಾಗಿ, ಹಳ್ಳಿಯ ಹಿರಿಯರ ಕೈ ಸೇರಿದ್ದ, ಅಟ್ಟದ ಧೂಳು ತಿನ್ನುತ್ತಿದ್ದ ರೇಡಿಯೋಗೆ ಕಾಯಕಲ್ಪವಾಗಿದೆ. ಸಂತೋಷ. ಜನ ಬಸ್ಸಲ್ಲಿ, ಕ್ಯೂನಲ್ಲಿ ಕಾಯಬೇಕಾದಾಗ ಮೊದಲಿನಂತೆ ಬೋರೆದ್ದು ಹೋಗಬೇಕಾಗಿಲ್ಲ, 10x6 ಕಿಷ್ಕಿಂದೆಯಲ್ಲಿ ಬದುಕೋರು ರಾತ್ರಿಯ ಕತ್ತಲೇಲಿ ನಿರಾಶವದನರಾಗಿ ಕೂರಬೇಕಿಲ್ಲ, ಸಂತೋಷ. ಕೆಲಸ ಮಾಡುತ್ತಲೇ ಮನರಂಜನೆಯನ್ನೂ ಪಡೆಯಬಹುದು. ಅದೂ ಸಂತಸದ ಸಂಗತಿಯೇ!
ಆಕಾಶವಾಣಿ , ಈಗ "fm" ಎಂಬ ಹೊಸ ಬಟ್ಟೆ ತೊಟ್ಟು, ನಳನಳಿಸುತ್ತಿದೆ. ಹಲವಾರು ಖಾಸಗೀ ಸಂಸ್ಥೆಗಳು ದೇಶದಾದ್ಯಂತ fm ರೇಡಿಯೋ channel ಗಳನ್ನ ಆರಂಭಿಸಿವೆ. AIR ಕೂಡ ವಿವಿಧ ಭಾರತಿ ನ fm ಮಾಡಿದೆ. ಮತ್ತೂ ಕೆಲ ಕೇಂದ್ರಗಳನ್ನ ಸ್ಥಾಪಿಸಿವೆ. FM ಚಾನಲುಗಳು ಕೇವಲ ೨೦೦ ಕಿಲೋಮೀಟರು ಮತ್ತು ಅದಕ್ಕೂ ಕಡಿಮೆ ವ್ಯಾಪ್ತಿಗಷ್ಟೆ ಸೀಮಿತ. Short Way ಮತ್ತು medium way ಗಳಂತೆ ದೇಶದಾದ್ಯಂತ ಪ್ರಸಾರ ಆಗುವುದಿಲ್ಲ. ಸೀಮಿತ ಪ್ರದೇಶದ ಜನರ ಅಭಿರುಚಿ- ಸಂಸ್ಕೃತಿ ಇವೇ ಮುಖ್ಯ, ಇಲ್ಲಿ.
ಸಂಗೀತವೇ ಈ ಎಲ್ಲ ಎಫ್ ಎಮ್ ಕೇಂದ್ರಗಳ ಬಂಡವಾಳ. ಚಿತ್ರಗೀತೆಗಳಿಗೆ ಮೊದಲ ಪ್ರಾಶಸ್ತ್ಯ. ( ಉಳಿದ ಸಂಗೀತ ಪ್ರಕಾರಗಳು ಎಲ್ಲಿ ಪ್ರಸಾರ ಆಗತ್ತೆ ಅಂತ ಕೇಳಬೇಡಿ) ಕೇಳುಗರ ಒಳಗೊಳ್ಳುವಿಕೆ, ಸಂವಾದ, ಚರ್ಚೆಗಳು, ಅವರಿಗಿಷ್ಟವಾದ ಹಾಡುಗಳ ಪ್ರಸಾರ ಎಲ್ಲ ಎಫ್ ಎಮ್ ಚಾನಲುಗಳ ಮಾಮೂಲಿ ಮೆನು!
ಬೆಂಗಳೂರೊಂದರಲ್ಲೆ ಇವತ್ತಿಗೆ, { ೦೮.೧೧.೨೦೦೬) ೮ ಎಫ್ ಎಮ್ ಚಾನಲುಗಳಿವೆ.ಸರ್ಕಾರಿ ಸ್ವಾಮ್ಯದ ೨ನ್ನು ಸೇರಿ!. ಅದೆಷ್ಟು ಆದಾಯ ಬರಬಹುದು ಆಲೋಚನೆ ಮಾಡಿ!ಯಾವ ಚಾನಲ್ಲು ಕೂಡಾ ವಿಶೇಷವಾಗಿಲ್ಲ.ಎಲ್ಲವೂ ಹಾಡಿದ್ದೇ ಹಾಡೋ ಕಿಸಬಾಯಿ ದಾಸರೇ!ದಿನಾ ಬಸ್ಸಲ್ಲಿ ಆಫೀಸಿಗೆ ಹೋಗಿ- ಬಂದು ಮಾಡುವ ನಾನು ಈ ಎಫ್ ಎಮ್ ಗಳಿಗೆ ಕಿವಿ ಕೊಡೊ ಅಭ್ಯಾಸ ಮಾಡಿಕೊಂಡಿದ್ದೇನೆ, ಹಾಗಾಗಿ ಧೈರ್ಯವಾಗಿ ಈ ಮಾತು ಹೇಳಿದೆ.
ನನ್ನ ಕೆಲವೊಂದಿಷ್ಟು ಆಲೋಚನೆಗಳನ್ನ ನಿಮ್ಮ ಜೊತೆ ಹಂಚಿಕೊಳ್ಳಬೇಕು ಅನ್ನಿಸುತ್ತಿದೆ, ಈ ಎಫ್ಎಮ್ ಗಳ ಪ್ರಲಾಪಗಳನ್ನ ದಿನಾ ಕೇಳುತ್ತೇನಾದ್ದರಿಂದ.
ಈ ಚಾನಲುಗಳಿಗೆ ಸಾಮಾಜಿಕ ಬದ್ದತೆ ಎಂಬುದೇ ಇಲ್ಲವೆ?, ಕೇವಲ ಮನರಂಜನೆ ಮತ್ತು ವ್ಯ್ರರ್ಥ ಕಾಲಹರಣಕಾಗಿ ಮಾತ್ರವೆ ಇವುಗಳ ಇರುವಿಕೆಯೆ? ನೀವು ಯಾವುದೇ ಚಾನಲು ತಿರುಗಿಸಿದರೂ ಒಂದೇ ತೆರನಾದ ಮಾತುಗಳು ಕೇಳಿ ಬರುತ್ತವೆ! ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಇವಕ್ಕೆ ಯಾವ ತಲೆ ಬುಡವೂ ಇರುವುದಿಲ್ಲ.ಮೊನ್ನೆ ಮೊನ್ನೆ ಒಂದು ಎಫ್ ಎಮ್ ನಲ್ಲಿ ಕೇಳಿ ಬಂದ ಒರಲಾಟ - " ನಿಮ್ ಚಪ್ಲಿನ ಯಾರಾದ್ರೂ ದೇವಸ್ಥಾನದಲ್ಲಿ ಕದ್ಕೊಂಡ್ ಹೋದ್ರೆ ನೀವೇನ್ ಮಾಡ್ತೀರಾ ಅಂತ ಹೇಳಿ, ಬಹುಮಾನ ಗೆಲ್ಲಿ!! ಕೂಡ್ಲೇ ಮೆಸೇಜ್ ಮಾಡಿ **** ನಂಬರ್ ಗೆ.. " ಯಾವನೋ ಒಬ್ಬ ಪೆಕರ ಫೋನ್ ಮಾಡಿ ಹೇಳುತ್ತಿದ್ದ, "ನಾನು ಇನ್ನೊಬ್ರ ಚಪ್ಲಿ ಹಾಕ್ಕೊಂಡು ಜಾಗ ಖಾಲಿ ಮಾಡ್ತೀನಿ" ಆಹಾ!
ಅತ್ಯಂತ ಬಾಲಿಶ RJ ( ರೇಡಿಯೊ ಜಾಕಿ) ಗಳೇ ಹೆಚ್ಚಿನ ಕಡೆ ಕಾಣಸಿಗುತ್ತಾರೆ( ಎಲ್ಲರೂ ಅಲ್ಲ ಮತ್ತೆ..) "ನಿಮ್ಮ ಗಂಡ ಬೇರೆ ಹುಡ್ಗೀನ ಪ್ರೀತ್ಸಿದ್ರೆ ಏನ್ ಮಾಡ್ತೀರ" , "ಹುಡ್ಗೀರ್ನ ಪಟಾಯ್ಸೋದು ಹೇಗೆ?" "ಬಾಸ್ ಗೆ ಹೇಗೆ ಮಸ್ಕಾ ಹೊಡೀಬೇಕು", ಇಂತಹ ಶೈಲಿಯ ಮಾತುಗಳೇ ಅವರ ಬಾಯಲ್ಲಿ ಚರ್ವಿತ ಚರ್ವಣಗೊಳ್ಳುತ್ತವೆ! ಇನ್ನು ಕೇಳುಗರಿಗೆ ಕೇಳೋ ಪ್ರಶ್ನೆಗಳೋ, ಭಗವಂತಾ!-" ಕನ್ನಡ ಚಿತ್ರರಂಗದ "ಕ್ರೇಜಿ ಸ್ಟಾರ್‍" ಯಾರು ಅಂತ ತಿಳಿಸಿ , ನಿಮ್ಮ options, a) ರವಿಚಂದ್ರನ್ b)ಅಶು ಚಂದ್ರನ್ c) ವಿಶು ಚಂದ್ರನ್ " - ಏನು ಹೇಳಬೇಕು ಇದಕ್ಕೆ?
ಈ ಎಫ್ ಎಮ್ ಗಳಿಗೆ ಕಳಿಸೋ ಮೆಸೇಜೊಂದಕ್ಕೆ, ೨-೩ ರೂಪಾಯಿಗಳು ಉದುರುತ್ತವೆ, ಮತ್ತು ಹೆಚ್ಚು ಹೆಚ್ಚು ಮೆಸೇಜುಗಳು ಬಂದಷ್ಟು, ಲಾಭ ಅವಕ್ಕೆ!
ಯಾವುದೋ ಒಂದು ಚಾನಲ್ಲು "ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ನಿಷೇಧ ಮಾಡೋದಕ್ಕೆ ನಿಮ್ಮ ಸಹಮತ ತಿಳಿಸಿ, ನಮಗೆ ಮೆಸೇಜು ಕಳ್ಸಿ ಅಂತ ಬೆಳಗ್ಗಿಂದ ಸಂಜೆ ವರೆಗೆ ಅರಚಿಕೊಂಡಿತು, ಮತ್ತು ಅದಕ್ಕೆ ೩೦-೪೦ ಸಾವಿರ ಮೆಸೇಜುಗಳೂ ಬಂದವು.(ಆ ಚಾನಲ್ಲೇ ಹೇಳಿಕೊಂಡದ್ದು) ಯಾವುದೋ ರೇಡಿಯೋ ಸ್ಟೇಷನ್ ಗೆ ಮೆಸೇಜು ಕಳ್ಸೋದಕ್ಕು, ಧೂಮಪಾನ ನಿಷೇಧಕ್ಕೂ ಏನು ಸಂಬಂಧ? ಅದರ ಬದಲಾಗಿ ಅದಕ್ಕೆ ಸಂಬಂಧಿತ ಅದಿಕಾರಿಗಳನ್ನೋ , ಸಚಿವರನ್ನೋ ಕರೆಸಿ ಮಾತನಾಡಿಸಿದ್ದರೆ?!
ಶಾಪಿಂಗ್ ಕಾಂಪ್ಲೆಕ್ಸ್ ಗೆ ಹೋಗೋದಕ್ಕೆ ಕೂಪನ್ನುಗಳು, ಸಿನಿಮಾ ಟಿಕೇಟುಗಳು," couple passes" ಇವುಗಳೇ ಈ ಎಫ್ ಎಮ್ ಗಳ ಕೊಡುಗೆ! ಜನರನ್ನ ಮತ್ತೊಂದಿಷ್ಟು ಕೊಳ್ಳುಬಾಕರನ್ನಾಗಿ ಮಾಡುವ ಹುನ್ನಾರವಿದೆಯೇ ಹೊರತು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಸುವ ಆಶಯವೇ ಇವುಗಳಿಗಿದ್ದಂತಿಲ್ಲ! ಎಲ್ಲೋ ರಾಜ್ಯೋತ್ಸವಕ್ಕೋ ಇನ್ನಾವಾಗಲೋ ಸುಮ್ಮನೆ ಒಂದು ತಾಸಿನ ಮಟ್ಟಿಗೆ ಯಾರಾದರೂ ಸಾಹಿತೀನ ಕರಕೊಂಡು ಮಾತನಾಡಿಸೋದು ಬಿಟ್ಟರೆ, ವರ್ಷಪೂರ್ತಿ ಇವರಿಗೆ ಸಿನಿಮಾ ತಾರೆಯರೇ ಆರಾಧ್ಯ ದೈವಗಳು!
ಇನ್ನು ಇವುಗಳು ಮಾಡುವ ಕನ್ನಡ ಕೊಲೆಯ ಬಗ್ಗೆ ಮಾತಾಡೋಕೆ ಹೊರಟರೆ , ಈ ಜಾಗ ಸಾಕಾಗದು. ಅದರ ಬಗ್ಗೆ ಬೇರೆಯದಾಗೇ ಬರೆಯಬೇಕು!
ಬೆಂಗಳೂರಿನಾದ್ಯಂತ ಈಗ ಹೆಚ್ಚಿನ ಜನ ಈ ಎಫ್ ಎಮ್ ಗಳನ್ನ ಕೇಳುತ್ತಾರೆ. BMTC ಬಸ್ಸಿನ ಡ್ರೈವರಿಂದ ಹಿಡಿದು, ಜ್ಯೂಸಿನಂಗಡಿ ಹುಡುಗನ ವರೆಗೆ! ಸಾಫ್ಟ್ ವೇರ್ ಹುಡುಗರಿಂದ ತೊಡಗಿ ಮನೆಗೆಲಸದ ಹುಡುಗಿಯವರೆಗೆ! ಈ ಚಾನಲ್ಲುಗಳು ನಮ್ಮ ತನದ ಬಗ್ಗೆ, ನಾಡು ನುಡಿಯ ಬಗ್ಗೆ, ಸಾಹಿತ್ಯ - ಸಂಸ್ಕೃತಿಯ ಬಗ್ಗೆ ಕಾರ್ಯಕ್ರಮ ಮಾಡಿದ್ದಿದ್ದರೆ ಎಷ್ಟು ಸುಂದರವಾದ ಒಂದು ಜಾಲ ಹಬ್ಬಿದಂತಾಗುತ್ತಿತ್ತು, ಅಲ್ಲವೆ?! ಬಾಲಿಶತನದ ಕೆಲಸಕ್ಕೆ ಬಾರದ ಹಲುಬುವಿಕೆಗಳನ್ನ ಕಡಿಮೆ ಮಾಡಿ ಸ್ವಲ್ಪವಾದರೂ ಸಮಯವನ್ನ ದಿನದೆ ಬೇರೆ ಬೇರೆ ಹೊತ್ತು ಒಳ್ಳೆಯ , ಸದಭಿರುಚಿಯ ಕಾರ್ಯಕ್ರಮಗಳಿಗೆ ಮೀಸಲಿಟ್ಟಿದ್ದರೆ.. ( ಈಗ ಎಲ್ಲೊ ಒಂದೆರಡು ಕಾರ್ಯಕ್ರಮಗಳಿವೆ, ಅಂತಾದ್ದು) ಎಷ್ಟು ಚೆನ್ನಿತ್ತು!.

ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?!.

ಸೋಮವಾರ, ನವೆಂಬರ್ 06, 2006

ಎಲ್ಲಿ ಜಾರಿತೋ....

ಮನಸ್ಸೇಕೊ ಖಾಲಿ ಆದಂತಿದೆ! ಏನೂ ಅಲೋಚನೆಗಳು ಹುಟ್ಟುತ್ತಿಲ್ಲವೋ ಅಥವಾ ಹುಟ್ಟಿದವುಗಳು ಎಲ್ಲೊ ಹರಿದು ಹೋಗುತ್ತಿರೋದು ಗೊತ್ತೇ ಆಗುತ್ತಿಲ್ಲವೋ, ತಿಳಿದಿಲ್ಲ! ಮನೆಗೆ ಹೋಗಿ ಬಂದೆ ಈ weekendಉ! ಆಮೇಲೆ ಹೀಗಾ??, ಅದೂ ಗೊತ್ತಿಲ್ಲ! ಮನೆಗೆ ಹೋಗಿ ಬಂದೆ ಅಂದರೆ, ಮನಸ್ಸು ಯಾವಾಗಲೂ ಖುಷಿ ಖುಷಿಲಿ ಇರ್ತಿತ್ತು, ಆದರೆ ಈ ಸಲ ಯಾಕೋ ಕೈ ಕೊಟ್ಟಿದೆಯಾ?, ಇರಬಹುದು!
ಮನಸ್ಸಿಗಾದರೂ ಏನು ಯಾವಾಗ್ಲೂ ಒಳ್ಳೇ moodನಲ್ಲೇ ಇರು ಅಂತ ಆರ್ಡರ್ ಮಾಡಕಾಗತ್ತಾ?, ಅಲ್ಲಾ, ಮಾಡಿದ್ರು ಅದು ಕೇಳತ್ತಾ?!! ಅದು ಸ್ವತಂತ್ರ, ಸರ್ವ ತಂತ್ರ ಸ್ವತಂತ್ರ! ನಮ್ಮ ಜೊತೆಗೇ ಇದ್ದು ನಮ್ಮ ದಿಕ್ಕನ್ನೇ ತಪ್ಪಿಸೋ ಅಪಾಪೋಲಿ! ಇನ್ನು ಕೆಲಬಾರಿ ನಮ್ಮನ್ನ ಸರಿ ದಾರಿಗೆ ಕರೆದೊಯ್ಯೋ ಗಾಂಧೀ ತಾತ.
ಈ ಬಾರಿ ನನ್ನ ಮನ ೨-೩ ದಿನದಿಂದ ಕೈ ಕೊಟ್ಟಿದೆ! ಪ್ರಾಯಶ: ಭರ್ಜರಿ rest ಮಾಡ್ತಾ ಇದೆಯೇನೋ ಅಂತ doubt! ಏನೋ ಒಂತರಾ iritationnu! ಎಲ್ಲಾ ಸ್ತಬ್ದ ಆದಂತಾ ಮನಸ್ತಿತಿ.ಮಾಡಬೇಕಾದ್ದನ್ನ ಯಾಂತ್ರಿಕವಾಗಿ ಮಾಡ್ತಾ ಇದೀನಿ ಅನ್ನೋ ಭಾವ. ಹಮ್.. ಸರಿ ಆಗ್ದೆ ಎಲ್ಲಿಗ್ ಹೋಗತ್ತೆ ನನ್ ಮಗಂದು! ದಾರಿಗೆ ಬರಲೇ ಬೇಕು!! ಹಾಗೆ ಬರೋಕೆ ಒಂದು ಕ್ಷಣ ಸಾಕು! ಆ ಕ್ಷಣಕ್ಕಾಗಿ ಕಾಯ್ತಾ ಇದೀನಿ..
ಯಾರಿಗೆ ಗೊತ್ತು, ಇವತ್ತೆ,ಈಗಲೇ, ಈ ಕ್ಷಣವೇ!....

ಗುರುವಾರ, ನವೆಂಬರ್ 02, 2006

ಭಾವ ೮

ಗಂಡ ಆಗ ತಾನೆ ತಂದ ಕೊಂಡು ತಂದ ಒಂದು ಗಿಂಡಿ ಎಣ್ಣೆಯಲ್ಲಿ, ಗುಡಿಸಲೆದುರು ನಾಲ್ಕು ಹಣತೆಗಳನ್ನು ಹಚ್ಚಿದ ಆಕೆಯ ಕಣ್ಣಲ್ಲಿ ತೃಪ್ತಿ ಮಿನುಗುತ್ತಿತ್ತು.. ಬದುಕು ಸುಂದರವಾಗಿದೆ, ಅಲ್ಲವೆ?!

ಜೀವ ಭಾವದ ಜೊತೆಗೆ...

ಆ ಹುಲ್ಲುಗಾವಲಿನ ಹಸಿರು ಹಾದಿಯ ಮೇಲೆ,
ನಿನ್ನ ಜೊತೆ ನಡೆದ ಖುಷಿ,
ಜಗವೆಲ್ಲ ತಿರುಗಿದರೂ ಬಂದಿಲ್ಲವೆನಗೆ.

ಅಂದು ಬೇಸಿಗೆಯಲ್ಲಿ ನಾನು ಬಾಯಾರಿರಲು
ನೀನಿತ್ತ ಬೊಗಸೆ ಜಲ
ಇಂದಿಗೂ ಮಾಡುವುದು ನನ್ನೆದೆಯ ತಂಪು

ಶ್ರಾವಣದ ಸಂಜೆಯಲಿ ಆ ಸೋನೆ ಮಳೆಯೊಳಗೆ
ನಿನ್ನಯಾ ಸಾನಿಧ್ಯ
ಈ ಹೊತ್ತೂ ತೋಯುವುದು, ನನ್ನ ನೆನಪು

ಕೆರೆಯ ಏರಿಯ ಮೇಲೆ ತಣ್ಣನೆಯ ಗಾಳಿಯೊಳು
ಮುಂಗುರುಳ ನಾಟ್ಯ,
ಈಗಷ್ಟೇ ನಡೆಯಿತೋ ಎಂಬಂತೆ ಇಹುದು

ಇಂದು ನೀ ಇಲ್ಲ ಈ ಜಗದ ಬಂಧನದೊಳಗೆ
ನಿನ್ನ ಜೀವದ ಭಾವ
ನನ್ನ ಸುತ್ತಲೂ ಸೇರಿ ಕಾಯುತಿಹುದೆನ್ನ!

ಆ ಹುಲ್ಲುಗಾವಲಿನ ಹಸಿರ ಹಾದಿಯ ಮೇಲೆ......

ಮಂಗಳವಾರ, ಅಕ್ಟೋಬರ್ 31, 2006

ನ ಮ ನ!
ಗೆಳತಿಯೊಬ್ಬಳು ಕಳಿಸಿದ ಸಂದೇಶದಲ್ಲಿ ಈ ಸುಂದರ ಚಿತ್ರ ಇತ್ತು. .
ಚಿತ್ರದಲ್ಲಿರೋ ಸೂರ್ಯ ಹುಟ್ಟುತ್ತಿದ್ದಾನೋ, ಮುಳುಗುತ್ತಿದಾನೋ ಗೊತ್ತಿಲ್ಲ!, ಆದರೆ ಎಲೆ ಮಾತ್ರ ತನ್ನ ಜೀವನದ ಸಂಧ್ಯೆಯಲ್ಲಿದೆ. ಮಲೆನಾಡ ಎಲೆಯೊ, ಮರಳುಗಾಡ ಎಲೆಯೋ, ಯಾವ ಬೆಟ್ಟದ ತುದಿಯ ಮರದ್ದೋ, ಗೊತ್ತಿಲ್ಲ!ಎಷ್ಟು ವಸಂತವಾಗಿದೆಯೋ, ಅದರ ಬಳಿ ಯಾರೂ ಕೇಳಿಲ್ಲ. ಇನ್ನೆಷ್ಟು ದಿನ ಬಾಳೋ, ಅದಕೆ ಚಿಂತೆಯಿದ್ದಂತಿಲ್ಲ.
ಬಹುಸಮಯದಿಂದ ಬಿಸಿಲು, ಮಳೆ, ಗಾಳಿಗಳನ್ನ ತಡೆದುಕೊಂದಿರಬೇಕು. ಜೀವನದಲ್ಲಿ ಬಹು ಕಷ್ಟ ಅನುಭವಿಸಿರಬೇಕು, ಮೈಯೆಲ್ಲ ಹಣ್ಣಾಗಿದೆ, ಜರಡಿಯಾಗಿದೆ. ಆದರೂ, ತನ್ನ ಧೀ ಶಕ್ತಿಯಿಂದ ಇನ್ನೂ ಉಳಿದಿದೆ, ಚಿಗುರುಗಳಿಗೆ ಪಾಠ ಹೇಳುತ್ತಾ!!
ಮತ್ತು,
ನೋವು ಇದ್ದರೂ ಹೇಗೆ ಗೋಡೆಯಾಗಿ, ನೆರಳಾಗಿ ಧೃತಿಗೆಡದೆ ನಿಲ್ಲಬೇಕೆಂಬುದಕ್ಕೆ ಉಪಮೆಯಾಗಿ!

ಸೋಮವಾರ, ಅಕ್ಟೋಬರ್ 30, 2006

ವಾಸ್ತವ

( ಹಿಂದೆ ಬರೆದ ಹೃದಯ ಗೀತ ಕವನವನ್ನ ಓದಿಕೊಂಡು ಇದನ್ನ ಓದಿ)

ಕೇಳೋ ಸಖ ನನ್ನ ಮಾತ,
ನಿಂತೆ ನೋಡು ಇಲ್ಲಿಯೇ,
ಒಮ್ಮೆ ನನ್ನ ನೋಡಿ ನಕ್ಕು
ಮಾತ ಕೇಳಬಾರದೆ?

ತಪ್ಪು ನಿನ್ನದಲ್ಲ ಗೆಳೆಯ
ಮನದ ಮಾತು ಸತ್ಯವು
ನಾನು ನಿನಗೆ ಬಾಳ ಬೆಳಕೆ?!
ಧನ್ಯೆ ನಾನು ನಿತ್ಯವು.

ನನಗು ಕೂಡ ನಿನ್ನ ಹಾಗೆ
ಆಸೆಯುಂಟು ಸಾಸಿರ
ನೀನು ನನ್ನ ಜೊತೆಯಲಿರಲು
ಬಾಳ ಬಂಧ ಸುಂದರ

ಗೆಳೆಯ ನನ್ನ ಕ್ಷಮಿಸಿ ಬಿಡೊ,
ನಿನಗೆ ನಾನು ದೊರಕೆನು.
ನನ್ನ ಪರಿಧಿ ಬಹಳ ಕಿರಿದು
ಹೆತ್ತವರ ನಾ ಮೀರೆನು

ಹೊರಟೆ ನಾನು, ತಿರುಗಿ ಬರೆನು
ಖುಷಿಯಲಿರು ಎಂದಿಗೂ
ನನ್ನ ಹೃದಯ ನಿನ್ನಲಿರಲಿ
ನಿನ್ನ ಬಡಿತ ನನ್ನದು.

ಶುಕ್ರವಾರ, ಅಕ್ಟೋಬರ್ 27, 2006

ಆನೆಗಳ ಲೋಕದಲ್ಲಿ...

ಕಳೆದ ವಾರಾಂತ್ಯ ಕೇರಳ ತಿರುಗಾಟ, ಈ ಬಾರಿಯ ನೆಪ, ಸ್ನೇಹಿತ ಅರುಣ್ ಹುಟ್ಟಿದ ಹಬ್ಬ! ನನಗೆ ಸಂತೋಷ ಏನು ಅಂದ್ರೆ, ಎಲ್ಲೇ ತಿರುಗೋಕೆ ಹೊರಟರೂ ನೆಪಗಳು ಧಂಡಿಯಾಗಿ ಸಿಗುತ್ತವೆ! ಈ ನೆಪಗಳು ಅಮ್ಮನ ಹತ್ರ ಮಾತ್ರ ನಡೆಯಲ್ಲ, ಅದೇ ಸಮಸ್ಯೆ! ದೀಪಾವಳಿ ಗೆ ಮನೆಗೆ ಹೋಗದೆ ಬೈಸಿಕೊಂಡದ್ದಂತೂ ಆಗಿದೆ, ಅವಳ ಹತ್ರ.
ಇಡೀ ಕೇರಳ ಪ್ರವಾಸದ ಬಗ್ಗೆ ಅಂತೂ ಬರಿಯೋಕೆ ದೇವರಾಣೆ ಸಾಧ್ಯ ಇಲ್ಲ! ನಂಗೆ ತುಂಬಾ ಇಷ್ಟ ಅನ್ನಿಸಿದ ಗುರುವಾಯೂರು ಆನೆಗಳ ಬಗ್ಗೆ ಒಂದಿಷ್ಟು...
ಗುರುವಾಯೂರು ದೇವಸ್ಥಾನದಿಂದ ೩ ಕಿಲೊಮೀಟ್ರು ದೂರದಲ್ಲಿ ಈ "ಆನಕೋಟ" ಅನ್ನೋ ಸ್ಥಳ (ಅನಕೊಂಡ ಅಲ್ಲ ಮತ್ತೆ!). ಇಲ್ಲಿ ೬೪ ಆನೆ ಸಾಕಿದಾರೆ, ದೇವಳದವರು. ಭಕ್ತಾದಿಗಳು ದೇವಾಸ್ಥಾನಕ್ಕೆ ಕೊಟ್ಟಿರೋ ಆನೆಗಳನ್ನ ಇಲ್ಲಿ ನೋಡ್ಕೊತಾರೆ. ನಮ್ಮೂರ ಕೆಲವು ಬಡಪಾಯಿ ದೇವಸ್ಥಾನಗಳಿಗೆ ವರ್ಷಕ್ಕೆ ೨ ಕ್ವಿಂಟಾಲು ಅಕ್ಕಿ ದೇಣಿಗೆ ಬಂದರೇ ಹೆಚ್ಚು! ಇಲ್ಲಿ ನೋಡಿದರೆ ಆನೆಗೆ ಆನೆನೇ ಕೊಡ್ತಾರಲ್ಲ ಅಂತ ಆಶ್ಚ್ರರ್ಯ! ವರ್ಷಕ್ಕೆ ೩ ಕೋಟಿ ರುಪಾಯಿ ಖರ್ಚು ಮಾಡ್ತಾರಂತೆ, "maintanence"ಗೆ!
ನಾವು ಇಲ್ಲಿಗೆ ಹೋದ ದಿನ ಆನೆಗಳ ಸ್ನಾನದ ಪಾಳಿ!ಒಂದಿಷ್ಟು ಆನೆಗಳಿಗೆ ಅಭ್ಯಂಜನ ಆಗ್ತಾ ಇತ್ತು.. ಹರುಕು ಮುರುಕು ಮಲಯಾಳಮ್ ನಲ್ಲಿ ಆನೆಗಳಿಗೆ ಎಷ್ಟು ದಿನಕ್ಕೊಂಮ್ಮೆ ಸ್ನಾನ ಮಾಡಿಸ್ತೀರಿ ಅಂತ ಒಬ್ಬ ಮಾವುತನನ್ನ ಕೇಳಿದರೆ, "every day, every day" ಅಂದನಪ್ಪ! ದಿನಾ ಅವುಗಳ ಮೈನೆಲ್ಲ ತಿಕ್ಕಿ ತಿಕ್ಕಿ ಸ್ನಾನ ಮಾಡ್ಸಿದ್ದೆ ಹೌದಾದ್ರೆ!, ತಿಂಗಳೊಳಗಾಗಿ ಎಲ್ಲರೂ ಕೆಲ್ಸ ಬಿಟ್ಟು ಹೋದಾರೇನೊ! ಆ ಮಾವುತ ತಮ್ಮ, "reputation" ಉಳ್ಸಿಕೊಳ್ಳೋಕೆ ಹಾಗೆ ಹೇಳಿರಬೇಕು ಅನ್ನೋದು ನನ್ನ ಊಹೆ!
ಆನೆಗಳು ಮಾತ್ರ ಎನ್ ಚಂದ ಸ್ನಾನ ಮಾಡಿಸಿಕೋತಿದ್ದವು ಅಂದ್ರೆ! ಆಹ್! ನನಗೆ ಸಣ್ಣ ಮಕ್ಕಳನ್ನ ಮಲಗಿಸಿಕೊಂಡು ಅಮ್ಮಂದಿರು ನೀರು ಹೊಯ್ಯೋದೇ ನೆನಪಾಯಿತು! ನಾವೆಲ್ಲ ಸುಮಾರು ಹೊತ್ತು ನಿಂತು ಅದನ್ನೇ ನೋಡ್ತಾ ಇದ್ವಿ. ಒಂದು ಆನೇನ ಅಡ್ಡ ಮಲಗಿಸ್ಕೊಂಡು ಅದರ ಮೇಲೊಬ್ಬ ಕೂತು ಗಸ ಬಸ ಗಸ ಬಸ ಅಂತ ತೆಂಗಿನ ನಾರಲ್ಲಿ ಮೈನ ತಿಕ್ತಾ ಇದ್ದ, ಮಗದೊಬ್ಬ ಬೆಣಚುಕಲ್ಲಲ್ಲಿ ತಿಕ್ಕೋನು! ಆ ಆನೆ ಆರಾಮಾಗಿ ಮಲಕ್ಕೊಂಡು ಸ್ನಾನ ಮಾಡಿಸ್ಕೋತಾ ಇತ್ತು! ಒಂದು ಬದಿನ ತಿಕ್ಕಿತಿಕ್ಕಿ ತೊಳದಾದ ಮೇಲೆ, ಒಬ್ಬ ಮಾವುತ ಏನೋ ಸಂಜ್ಞೆ ಮಾಡಿದನಪ್ಪಾ! ತಕೋ! ಆ ಆನೆ ಧಡಕ್ಕಂತ ಎದ್ದು, ಮತ್ತೊಂದು ಕಡೆ ಹೊರಳಿ ಮಲಗಿ ಬಿಡಬೇಕೆ! ಎಷ್ಟ್ ಚಂದ!
ಸರಿಯಾಗಿ ಸ್ನಾನ ಮಾಡಿಸ್ಕೊಂಡು ಮೇಲೆ ಬಂದಾದ ಮೇಲೆ, ಆನೆಗಳಿಗೆ ಮತ್ತೊಮ್ಮೆ ಶುಧ್ಧ ನೀರಿಂದ "ಶವರ್ ಬಾತು"! ಆದ್ರೆ ಈ ಸಲ ಮಾತ್ರ, ಅವೇ ನೀರು ಹಾಕ್ಕೋ ಬೇಕು! ಆಮೇಲೆ ಮೃಷ್ಟಾನ್ನ ಭೋಜನ - ಅನ್ನದ ಉಂಡೆ, ಎಲೆ ಸೊಪ್ಪು ಸದೆ ಇತ್ಯಾದಿ.. ಮತ್ತೆ, ತನ್ನ ಮರದ ಬುಡಕ್ಕೆ! ಎಂದಿನ ಬಂಧನದೊಳಗೆ!
ಅಲ್ಲಿಂದ ಹೊರಡೋವಾಗ ತುಡಿತ ತಡೆಯಲಾರದೆ ಎಲ್ಲ ಸೇರಿ ಒಂದು ಆನೆಗೆ ಸ್ವಲ್ಪ ಸ್ನಾನ ಮಾಡ್ಸೇ ಬಂದ್ವಿ!, ಮಾವುತನಿಗೆ ೫೦ ರೂಪಾಯಿ ಕೊಟ್ಟು!

ಗುರುವಾರ, ಅಕ್ಟೋಬರ್ 19, 2006

ಭಾವ-೭

ರೈಲ್ವೇ ಕ್ರಾಸಿಂಗಿನಲ್ಲಿ ಅಮ್ಮನ ಕಂಕುಳಲ್ಲಿ ಕೂತಿದ್ದ ಆ ಬೊಚ್ಚು ಬಾಯಿಯ ಮಗು, ದೊಡ್ಡದಾಗಿ ತೆರದ ಕಣ್ಣುಗಳ ಜೊತೆಗೆ ತನ್ನೆರಡೂ ಕೈಗಳನ್ನ ವಿಸ್ತರಿಸಿ ರೈಲಿನ ಅಗಾಧತೆಯನ್ನ ಅಮ್ಮನಿಗೇ ತಿಳಿಸಲು ಹವಣಿಸುತ್ತಿತ್ತು! ಬದುಕು ಸುಂದರವಾಗಿದೆ, ಅಲ್ಲವೆ?!

ಬುಧವಾರ, ಅಕ್ಟೋಬರ್ 18, 2006

ದೀಪಾವಳಿಗೊಂದು ಪುಟ್ಟ ಕವನ...

ಕಾರ್ತಿಕನು ಬರುತಿಹನು,
ಮಾಸಗಳ ಮನೆಯೊಳಗೆ
ಬೆಳಕ ಬುಟ್ಟಿಯ ಹೊತ್ತು , ನೋಡಿರಲ್ಲಿ

ಕತ್ತಲನು ಓಡಿಸುವ,
ದೀವಿಗೆಯೂ ಜೊತೆಯಿಹುದು
ಜ್ನಾನ ದೀಪವನೆಲ್ಲ ಹಚ್ಚ ಬನ್ನಿ

ದಾರಿ ಬಿಡಿ ಆತನಿಗೆ,
ಮನದ ಕದವನು ತೆರೆದು
ಹರುಷದಾ ಮೊಗದಲ್ಲಿ ಒಳಗೆ ಕರೆತನ್ನಿ..

ಮಂಗಳವಾರ, ಅಕ್ಟೋಬರ್ 17, 2006

ಪಶ್ಚಿಮ ವಾಹಿನಿಯ ಚಿತ್ರಗಳು...

ಮೊನ್ನೆ ಮೊನ್ನೆ ಶ್ರೀರಂಗ ಪಟ್ಟಣ ದ ಕಡೆ ಹೋಗಿದ್ದೆ, ಧಾರ್ಮಿಕ ಕಾರ್ಯಕ್ರಮವಿತ್ತು.. ( ಅದೊಂದು ನೆಪ ಅಷ್ಟೆ!) ತಿರುಗೋದು ಅಂದರೆ ಇಷ್ಟ ನನಗೆ, ಮೊದಲೇ ಹೇಳಿದಂತೆ.. ಮಿತ್ರ ವ್ಯಾಸ ಬಾ ಅಂದಾಗ ಹೋಗದೆ ಇರಲಾಗಲಿಲ್ಲ.
ಪಶ್ಚಿಮ ವಾಹಿನಿ , ಶ್ರೀರಂಗ ಪಟ್ಟಣದ ಸಮೀಪವಿರುವ ಪುಟ್ಟ ಹಳ್ಳಿ.ಬೆಂಗಳೂರು- ಮೈಸೂರು ಹೆದ್ದಾರಿಗೆ ತಾಗಿಕೊಂಡೇ ಇದೆ... ಶಂಕರ ನಾಗ್ ಪ್ರಾಯಶ: ಈ ಊರು ನೋಡಿದ್ದಿದ್ದರೆ, ಮಾಲ್ಗುಡಿ ಡೇಸ್ ಇಲ್ಲೇ ಚಿತ್ರಿತವಾಗುತ್ತಿತ್ತೇನೋ! ಒಂದು ಸುಂದರ ಪುಟ್ಟ ಊರು ಇದು. ನಾನು ಯಾವುದೇ ಸ್ಥಳಕ್ಕೆ ಹೋದರೂ, ವಾಪಾಸು ಬರುವಾಗ ನನ್ನ ಜೊತೆ ಒಂದಿಷ್ಟು ನೆನಪಿನ ಚಿತ್ರಗಳನ್ನ ತಂದಿರುತ್ತೇನೆ. ಈ ಬಾರಿಯ ನೆನಪಿನ ಭಿತ್ತಿಯೊಳಗೆ ಚಿತ್ರಿಸಿಕೊಂಡ ಕೆಲವು ಚಿತ್ರಗಳು..
ದಿಕ್ಕು ತಪ್ಪಿ ತಣ್ಣಗೆ ಹರಿಯುವ ಕಾವೇರಿ ನದಿ,{ ಇಲ್ಲಿ ಕಾವೇರಿ ನದಿ ಪಶ್ಚಿಮಕ್ಕೆ ಹರಿಯುತ್ತದೆ.} ನದಿಯ ದಂಡೆಯ ಮೇಲಿನ ಹಳೆಯ ಛತ್ರಗಳು.. ಅನತಿ ದೂರದಲ್ಲೆ ಇರುವ ಶ್ರೀರಂಗಪಟ್ಟಣದ ರೈಲ್ವೇ ಸ್ಟೇಷನ್ನು, ಬ್ರಿಟೀಷರ ಕಾಲದ ಹಳೆಯ ಸೇತುವೆ,..
ನದೀ ಮಧ್ಯದ ಮಂಟಪ, ಕಾವೇರಿ ನದಿಯೊಳಗೆ ನಿಂತು ತನ್ನ ಅಗಲಿದ ಹಿರಿಯರಿಗೆ ತರ್ಪಣ ನೀಡುತ್ತಿರುವ ಯುವಕ, ಬೆಳಗಿನ ಕೊರೆಯುವ ಚಳಿಗೆ , ನೀರೊಳಗೆ ಮುಳುಗಲು ಅಂಜುತ್ತಿರುವ ಮಹಿಳೆ.. ಸೇತುವೆಯ ಮೇಲೆ ಕೊರಳ ಘಂಟೆಯನ್ನ ಅಲುಗಿಸುತ್ತ, ನಿಧಾನಕ್ಕೆ ಸಾಗುತ್ತಿದ್ದ ಎತ್ತುಗಳು...
ಅರಳೀ ಕಟ್ಟೆಯ ನೆರಳಲ್ಲಿ ಮೊಸರನ್ನ ತಿನ್ನುತ್ತಿದ್ದ ಹುಡುಗ.. ರಂಗನ ತಿಟ್ಟಿಗೆ ಹೋಗೊ ದಾರಿಯಲ್ಲಿ ಕಬ್ಬು ತಿನ್ನಲು ಕೊಟ್ಟ ಅನಾಮಧೇಯ ಕೃಷಿಕ, ಗೋಪುರವೊಂದರ ಕಿಂಡಿಯೊಳಗಿಂದ ತಲೆ ಹೊರಹಾಕಿ ನೋಡುತಿದ್ದ ಹೆಂಗಸು.. ಟಿಪ್ಪುವಿನ ಕೋಟೆಯ ಪಾಳು ಗೋಡೆಯ ಮೇಲೆ ನಿಂತು ಆಗಸ ದಿಟ್ಟಿಸುತ್ತಿದ್ದ ಅಸ್ಟಷ್ಟ ಮುಖ..
ಇವು ಈ ಬಾರಿಯ ಕೆಲವು ಚಿತ್ರಗಳು, ಎಂದಿಗೂ ಮರೆಯದ್ದು.

ಸೋಮವಾರ, ಅಕ್ಟೋಬರ್ 16, 2006

ಭಾವ -೬

ಇಲ್ಲೊಂದು ಪುಟ್ಟ ಮಗು, ಹಂಚಿನ ಸಂದಿಯಿಂದ ತೂರಿ ಬರುತ್ತಿರುವ ಬಿಸಿಲಕೋಲನ್ನ ಹಿಡಿಯಲು ಯತ್ನಿಸುತ್ತಾ , ಕಿಲ ಕಿಲನೆ ನಗುತ್ತಿದೆ. ಬದುಕು ಸುಂದರ ವಾಗಿದೆ, ಅಲ್ಲವೆ?!

ತಂಗಿ ಶ್ರೀಕಲಾ ಮುಂದುವರೆಸಿದ್ದು:
ನಿನ್ನೆ ಆ ನಿನ್ನ ಪುಟ್ಟ ಮಗುವಿಗೆ ಸಿಗದೆ ತಪ್ಪಿಸಿಕೊಂಡ ಆ ಬಿಸಿಲಕೋಲು, ಇಂದಿಲ್ಲಿ ಬಂಗಾರದ ಬಣ್ಣಕ್ಕೆ ತಿರುಗುತ್ತಿರುವ ಭತ್ತದ ತೆನೆಗೆ, ಮತ್ತಷ್ಟು ರಂಗು ನೀಡುತ್ತಿದೆ.

ಹಾರಯಿಕೆ.

ಕಪ್ಪೆ ಚಿಪ್ಪಾಗು ಹುಡುಗಿ ನೀ..
ಅಡಗು ಅದರೊಳಗೆ..
ತಡೆಯುವುದಿಲ್ಲ ನಾನು.
ನಿನ್ನಿಷ್ಟ, ನಿನ್ನದೇ ಬದುಕು!
ನನ್ನದೊಂದು ಪುಟ್ಟ
ವಿನಂತಿಯಿದೆ
ಅಷ್ಟೆ..
ಚಿಪ್ಪಾಗಲು ಹೊರಡುವ ಮುನ್ನ,
ಜೊತೆಯಲಿ ಸೇರಿಸಿಕೋ
ಸ್ವಾತಿಯ ಮಳೆ ಹನಿಯೊಂದ...
ಸಮಯ ಕಳೆದು,
ಚಿಪ್ಪು
ಬಿರಿವಾಗ
ಮುತ್ತಿರಬಹುದು
ಅಲ್ಲಿ!

ಸೋಮವಾರ, ಅಕ್ಟೋಬರ್ 09, 2006

ಪುರಾಣದೊಳಗೊಂದು ಇಣುಕು-೧.

ಭಾರತೀಯ ಸಂಸ್ಕೃತಿ, ಸನಾತನವಾದುದು. ಇಲ್ಲಿನ ಧರ್ಮ ಒಬ್ಬ ವ್ಯಕ್ತಿಯ-ಒಂದು ವ್ಯವಸ್ಥೆಯ ಕಟ್ಟುಪಾಡಿಗೊಳಪಟ್ಟು ನಿರ್ಮಾಣವಾದುದಲ್ಲ. ಬದಲಿಗೆ, ಸಮಯದ - ಸಮಾಜದ ಜೊತೆಗೇ ಬೆಳೆದು, ಪಕ್ವಗೊಂಡ ಜೀವನ ಪದ್ದತಿ. ವೇದೋಪನಿಷತ್ತುಗಳು, ಹಲವು ಪುರಾಣಗಳು ಜನರ ನಿತ್ಯದ ಬದುಕಿನ ಜೊತೆ ಬೆರೆತು, ಮನೆಯ ಹಿರಿಯನಂತೆ ಕೈ ಹಿಡಿದು ನಡೆಸುತ್ತಾ ಬಂದಿದ್ದವು, ಬಹು ಕಾಲದವರೆಗೆ.

ಕಾಲಕ್ರಮೇಣ ಜೀವನ ಶೈಲಿ ಬದಲಾಯಿತು,ನಡೆ ನುಡಿಗಳಲ್ಲಿ ಹೊಸತನ ಬಂತು. ಮನೆಯ ಹಿರಿಯರು ಮರೆಯಾದರು. ಕಿರಿಯರು ಸಾಗುವ ದಾರಿ ತಪ್ಪಿತು. ಪುರಾಣ ಗ್ರಂಥಗಳು ಕೇವಲ ರಂಜನೆಯ ಮಾಧ್ಯಮಗಳಾಗಿ ಉಳಿದು ಹೋದವು. ಸಾಹಿತ್ಯಾಸಕ್ತರು, ವಿಮರ್ಶಕರು ಮಹಾಕಾವ್ಯಗಳನ್ನ ಆಧ್ಯಾತ್ಮ- ನೀತಿ ಧರ್ಮಗಳ ನೆಲೆಯಲ್ಲಿಯೆ ವಿಶ್ಲೇಷಿಸುತ್ತಾ, ಅವುಗಳ ಪ್ರಸ್ತುತ ಉಪಯುಕ್ತತೆಯ ಕುರಿತು ಬೆಳಕು ಹರಿಸುವುದನ್ನ ಕಡಿಮೆ ಮಾಡಿದರು.

ಒಮ್ಮೆ ನಮ್ಮ ಮಹಾ ಗ್ರಂಥಗಳಾದ ರಾಮಾಯಣ ಮಹಾಭಾರತಗಳನ್ನ ಇಂದಿನ ಸಾಮಾಜಿಕ ನೆಲೆಗಟ್ಟಿನ ಹಿನ್ನೆಲೆಯನ್ನ ಗಮನದಲ್ಲಿಟ್ಟುಕೊಂಡು ಓದಿ ನೋಡಿ, ಇಂದಿನ ಹಲವು ಸಮಸ್ಯೆಗಳಿಗೆ ಅತಿ ಸರಳ ಪರಿಹಾರೋಪಾಯಗಳು ಅಲ್ಲಿವೆ. ಇಂದಿನ ಕಣ್ಣುಗಳಿಂದ ಪುರಾಣಗಳೊಳಗೆ ಇಣುಕೋಣ, ಒಂದು ಹೊಸ ವಿಸ್ತಾರ ನಮ್ಮೆದುರು ಕಾಣುತ್ತದೆ.

ಈ ಜಗತ್ತನ್ನೊಮ್ಮೆ ನೋಡಿ, ಹೇಗೆ ಭಯೊತ್ಪಾದನೆಯ ಮಾರಣಾಂತಿಕ ಸುಳಿಯೊಳಗೆ ಮುಳುಗುತ್ತಿದೆ! ಎಷ್ಟೇ ವೈಜ್ನಾನಿಕ ಪ್ರಗತಿ, ವ್ಯಾಪಾರ ವಾಣಿಜ್ಯೋದ್ಯಮಗಳ ಬೆಳವಣಿಗೆ, ಕಂಪ್ಯೂಟರುಗಳ - ಸುಖ ಸಾಧನಗಳ ಅಭಿವೃದ್ಧಿ, ಏನೇ ಇರಲಿ, ಎಲ್ಲವೂ "ಬೇಲಿಯೇ ಇಲ್ಲದ ಹೊಲ" ದಂತಾಗಿದೆ! ಮತಾಂಧ ರಾಜಕೀಯತೆ, ದೇಶ ದೇಶಗಳನ್ನೆ ಕಬಳಿಸುವ ವಾಣಿಜ್ಯ ಜಾಲಗಳು ಎಲ್ಲೆಡೆ ಹಬ್ಬುತ್ತಿವೆ.

ರಾಮಾಯಣದ ಕಾಲದಲ್ಲಿ ರಾವಣನಿದ್ದ, ಈ ಆಧುನಿಕ ಜಗತ್ತಿನ ರಾವಣ ಒಸಮಾ ಬಿನ್ ಲಾಡೆನ್ ನೆ ಅಲ್ಲವೆ?! ರಾವಣನು ಯಾವ ವಿಧಿ ವಿಧಾನಗಳಂತೆ ಅಭಿಷಿಕ್ತನಾದ ದೊರೆಯೊ, ಜನ ಪ್ರೀತಿ ಗಳಿಸಿದ ನಾಯಕನೋ ಅಥವಾ ಯಾವುದೊಂದು ಪ್ರಜಾಹಿತಕ್ಕೆ ಬದ್ಧನಾದ ಹೊಣೆಗಾರ ಆಡಳಿತಗಾರನೋ ಆಗಿರಲಿಲ್ಲ! ಇಂದಿನ ಪುಂಡ, ದರೋಡೆಕೋರರ, ಭಯೋತ್ಪಾದಕರ ಜಾಲಗಳ ನಾಯಕರ ಲಕ್ಷಣಗಳೆಲ್ಲ ಅವನಲ್ಲಿ ಇದ್ದವು. ತನ್ನೆಲ್ಲ ಪ್ರತಿಸ್ಪರ್ಧಿಗಳನ್ನ ಮಟ್ಟ ಹಾಕಿ - ಕೊಂದು ನಿರ್ನಾಮ ಮಾಡಿ ತನ್ನ ಜೀವನ ಕ್ರಮಗಳನ್ನ ಜಗತ್ತಿನ ಮೇಲೆ ಹೇರಿ, ಸಾರ್ವಭೌಮನಾಗಿ ಮೆರೆಯುವ 'ಜಿಹಾದಿ' ಮಾದರಿಯ ಯುದ್ಧ ಅವನದಾಗಿತ್ತು.

ಇಂದು 'ಮಾಫಿಯಾ' ಎನ್ನುತ್ತೇವೆ, 'ತಾಲಿಬಾನ್' ಅನ್ನುತ್ತೇವೆ, 'ಎಲ್.ಟಿ.ಟಿ,ಇ ' ಎನ್ನುತ್ತೇವೆ, ಅಂದು ಈ ಯಾವ ಹೆಸರುಗಳು ಇಲ್ಲದೆಯೆ ಇವೆಲ್ಲ ಗುರಿ, ಲಕ್ಷಣಗಳನ್ನು ಹೊಂದಿದ್ದ ಬೃಹತ್ ಸೇನೆ, ಒಂದು ಸಕ್ರಿಯ ಸಫಲ ಜಾಲ ಅವನಲ್ಲಿತ್ತು. ಅದಕ್ಕೆಂದೇ ತರಬೇತಿ ಹೊಂದಿದ ಸಾವಿರಾರು ಸಂಖ್ಯೆಯ ಯುವಕ- ಯುವತಿಯರು ಅವನ ಬಳಿಯಿದ್ದರು.

ರಾವಣ ತನ್ನ ರಾಜ್ಯ ವಿಸ್ತಾರಕ್ಕಾಗಿ ದೇಶ ದೇಶ ತಿರುಗಿ, ಅಕ್ರಮ-ಘೋರ ಯುಧ್ಧ ಮಾಡಿ ಅಸಂಖ್ಯ ನಿರುಪದ್ರವಿಗಳನ್ನ ಋಷಿ ಮುನಿಗಳನ್ನ ಕೊಂದ. ಅವರ ಮೂಳೆಗಳ ರಾಶಿಯ ಮೇಲೆ ತನ್ನ ವಿಜಯ ಪತಾಕೆಯನ್ನ ಹಾರಿಸ ಹೊರಟ! ನಿರುಪದ್ರವಿ ಋಷಿ ಮುನಿಗಳು ಅವನಿಗೆ ಏನು ಅಪಕಾರ ಮಾಡಿದ್ದರು?, ಇಂದಿನ 'ಜಿಹಾದಿ' ಗಳಿಗೆ ಅಮೆರಿಕದ "WTC " ನಲ್ಲಿದ್ದ ಅಮಾಯಕ ಪ್ರಜೆಗಳು ಏನು ಮಾಡಿದ್ದರು?! , ನಿತ್ಯ ಮಾರಣ ಹೋಮಕ್ಕೆ ಬಲಿಯಾಗುತ್ತಿರುವ ಕಾಶ್ಮೀರದ ಬಡಪಾಯಿ ಹಳ್ಳಿಗರ ತಪ್ಪೇನಿದೆ! ಇಲ್ಲಿ ಧರ್ಮಾಂಧತೆಯ ಉಗ್ರವಾದವೇ ಪ್ರಚೋದಕವಾದಂತೆ, ರಾವಣನಿಗೆ, ಅವನ ಪಡೆಗಳಿಗೆ , ಸನಾತನ ಸಂಸ್ಕೃತಿಯ ದ್ವೇಷ ಮತ್ತು ಅದು ತಮ್ಮ ಭೋಗ ಜೀವನದ ಪ್ರಚಾರಕ್ಕೆ ಅಡಚಣೆ , ಅದು ಇರಬಾರದು ಎಂಬ ದೀಕ್ಷೆಯೇ ಕಾರಣವಾಗಿತ್ತು!

ಅಂದು ರಾವಣನ ಕೈಯಲ್ಲಿ ಹತರಾದ ಋಷಿಗಳ ಮೂಳೆರಾಶಿಯನ್ನು ಇತರ ಮುನಿಗಳು ರಾಮನಿಗೆ ತೋರಿಸಿ ಮರುಗುತ್ತಾರೆ.ಒಂದು ಕಟ್ಟಡವುರುಳಿ ಆರೆಂಟು ಸಾವಿರ ಜನ ಸತ್ತದ್ದಕ್ಕೆ, ಕಾಶ್ಮ್ಮೀರ, ವಾರಣಾಸಿ ಮುಂತಾದ ಧಾರ್ಮಿಕ ಸ್ಥಳಗಳಲ್ಲಿನ ಮಾರಣ ಹೋಮಕ್ಕೆ ಜಿಹಾದಿಗಳ ವಿನ: ಜಗತ್ತೇ ಕಣ್ಣೀರು ಸುರಿಸುತ್ತದೆ. ಅಂದು ಅಳುವವರು ಯಾರೂ ಇರಲಿಲ್ಲ, ಒಬ್ಬ ರಾಮ ಅತ್ತ, ಅದು ರಾಕ್ಷಸ ನಿರ್ಮೂಲನೆಗೆ ನಾಂದಿಯಾಯಿತು!

ನಮ್ಮೊಳಗೂ ರಾಮನಿಲ್ಲವೆ?.

ಶನಿವಾರ, ಅಕ್ಟೋಬರ್ 07, 2006

ಭಾವ-೫

ಷೋಕೇಸಿನೊಳಗಿದ್ದ ಮುದ್ದು ಗೊಂಬೆಗಳನ್ನ ಆಸೆಗಣ್ಣುಗಳಿಂದ ನೋಡುತ್ತಿದ್ದ ಹುಡುಗಿಯನ್ನ ಕಂಡ ಅಂಗಡಿಯಾತನಿಗೆ ಏನನ್ನಿಸಿತೋ, ಒಂದು ಪುಟ್ಟ ಬೊಂಬೆಯನ್ನ ಆಕೆಯ ಕೈಲಿಟ್ಟು, ಕೆನ್ನೆ ತಟ್ಟಿ ಕಳುಹಿಸಿದ. ಬದುಕು ಸುಂದರವಾಗಿದೆ, ಅಲ್ಲವೆ?

ಕೊಳಲ ಹುಡುಗ

ಮೋಟುಗಾಲಿನ ಹುಡುಗ,
ಕೊಳಲ ಮಾರುತಲಿದ್ದ,
ಆಲದಾ ಮರದ, ನೆರಳ ಕೆಳಗೆ

ನೀಳದಾರಿಯ ತಿರುವು,
ಉರಿಬಿಸಿಲ ಮಧ್ಯಾಹ್ನ
ಕಾಲಡಿಯ ನೆಲ, ಸುಡುತಿಹುದು

ಮರದಡಿಯ ನೆರಳೊಳಗೆ
ತಂಪಿನಾ ಅನುಭವವು,
ಬಣ್ಣ ಬಣ್ಣದ ಕೊಳಲು, ಸುತ್ತಲೆಲ್ಲ

ಊದತೊಡಗಿದ ಹುಡುಗ
ಕೊಳಲೊಂದ ತೆಗೆದು,
ಪಸರಿಸಿತು ಸುತ್ತೆಲ್ಲ ಮಧುರ ಸ್ವನವು

ಕೊಳಲ ದನಿ ಕೇಳಿತ್ತು
ಇಳಿಸಂಜೆಯಾವರೆಗೂ,
ಎತ್ತ ಹೋದನೋ ಹುಡುಗ,ತಿಳಿಯಲಿಲ್ಲ.

ಮುರುಳಿಯಾ ದನಿಯೊಳಗೆ
ಸಂತಸವು ತುಂಬಿತ್ತು
ಆತನ ಭಾವವ ಅರಿತವರಾರು!

ಹೀಗೇ ಸುಮ್ನೆ!

ಬಾನಂಗಳದಿ ಎಲ್ಲೋ ಮದುವೆಯಿರಬೇಕು, ಅತ್ತರು ಚಿಮುಕಿಸಿದಂತೆ ಹನಿಯುತ್ತಿದೆ ತುಂತುರು ಮಳೆ!

ರಾತ್ರಿ ಕನಸೊಳಗೆ ಮುತ್ತಿನ ಸರ ಕಡಿದು ಬಿತ್ತು, ಆ ಬೆಳಗು ಅವಳು ನನ್ನ ಪ್ರೀತಿಯ ತಿರಸ್ಕರಿಸಿದಳು!

ಸೋಮವಾರ, ಸೆಪ್ಟೆಂಬರ್ 25, 2006

ಭಾವ-೪

ಮಾಸಿದ ಬಟ್ಟೆ ತೊಟ್ಟು ಪಾರ್ಕೊಂದರ ಬೆಂಚಲ್ಲಿ ಕುಳಿತಿದ್ದ ಆ ಮುದುಕ,ತನ್ನ ಬಳಿಯಿದ್ದ ಹರಿದ ಗಂಟೊಂದರಿಂದ ಅಕ್ಕಿ ಕಾಳನ್ನ ತೆಗೆತೆಗೆದು ಮುಂದಿದ್ದ ಪಾರಿವಾಳಗಳಿಗೆ ಬೀರುತ್ತಿದ್ದ, ಮುಗುಳುನಗುತ್ತಾ.. ಬದುಕು ಸುಂದರವಾಗಿದೆ, ಅಲ್ಲವೆ?!

ಗುರುವಾರ, ಸೆಪ್ಟೆಂಬರ್ 21, 2006

ಜೀವನ

ಕಷ್ಟಗಳ ಗೂಡೊಳಗೆ ಸುಖವೆಂಬ
ಮೊಟ್ಟೆ;
ಕಾಯಬೇಕು,ಕಾವುಬೇಕು
ಫಲವು ಸಿಗುವುದಕ್ಕೆ!

ಭಾವ-೩.

ಚಿಂದಿ ಆಯುತ್ತಿದ್ದ ಹುಡುಗನಿಗೆ, ಆ ಕಸದ ರಾಶಿಯೊಳಗೊಂದು ಅರ್ಧ ಮುರಿದ ಪೆನ್ಸಿಲು ಸಿಕ್ಕಿತು. ಆತ ಖುಶಿಯ ಕಣ್ಣುಗಳಿಂದ ಅದನ್ನು ನೋಡಿ ಜೇಬಿಗೆ ಸೇರಿಸಿದ.ಬದುಕು ಸುಂದರವಾಗಿದೆ, ಅಲ್ಲವೆ?!

ಮಂಗಳವಾರ, ಸೆಪ್ಟೆಂಬರ್ 19, 2006

ಸಾವೊಂದರ ಕುರಿತು...

ಸಂಜೆ ತಂಗಿಗೆ ಫೋನಿಸಿದ್ದೆ,ಆಫೀಸಿನಲ್ಲಿ ಬೋರ್ ಹೊಡೀತಾ ಇತ್ತು..ಅದೂ ಇದೂ ಕೊರೆದ ಮೇಲೆ ಅವಳೊಂದು ಘಟನೆ ಹೇಳಿದಳು,ಅದನ್ನ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.
ಇವತ್ತು ಬೆಳಗ್ಗೆ ಕಾಲೇಜಿಗೆ ಹೊರಟ ತಂಗಿ ಶ್ರೀಕಲಾ ಗೆ,ಬಸ್ಸಲ್ಲಿ ಪರಿಚಿತರೊಬ್ಬರು ಸಿಕ್ಕರು. ದಿನಾ ಕಾಣುವ ಮುಖ,ಉಭಯಕುಶಲೋಪರಿಯ ಮಾತಿನಂತೆ, "ಹೇಗಿದ್ದೀರಿ, ಮನೇಲೆಲ್ಲಾ ಆರಾಮ" ಅಂದಿದ್ದಕ್ಕೆ, "ಹಮ್, ಎಲ್ಲಾ ಆರಾಮ, ನನ್ನ ತಂದೆ ನಿನ್ನೆ ತೀರಿಕೊಂಡರು " ಅಂತ ತಣ್ಣಗೆ ಉತ್ತರ ಬಂತು! ಇವಳಿಗೆ ಎದೆ ಧಸಕ್ ಅಂತು! ನಿನ್ನೆ ತಾನೆ ತಂದೆಯನ್ನ ಕಳೆದುಕೊಂಡ ಆಸಾಮಿ ಹೇಗಿರಬೇಕಿತ್ತು! ಆತ ಎಂದಿನಂತೆ ಕೈಲೊಂದು ವಿಜಯ ಕರ್ನಾಟಕ ಹಿಡಿದುಕೊಂಡು ಆರಾಮಾಗೆ ಕೂತಿದ್ದರು, ಮುಖದ ಮೇಲೆ ನೋವಿನ ಸಣ್ಣ ಗೆರೆಯೂ ಇಲ್ಲದೆ."ಹೇಗೆ?" ಅಂದಿದ್ದಕ್ಕೆ, "ಲೊ ಬಿ.ಪಿ, ನಾಲ್ಕು ದಿನ ಆಸ್ಪತ್ರೆಲಿ ಇದ್ರು, ನಿನ್ನೆ... " ಅಂತಂದು,ಪೇಪರಿನ ಅರ್ಧ ಓದಿ ಮುಗಿದ ಲೇಖನದೊಳಗೆ ಮುಳುಗಿದರು.
ಸ್ವಲ್ಪ ಹೊತ್ತಿನ ನಂತರ ಮಾಮೂಲಿನಂತೆ ಮಾತಿಗೆ ತೊಡಗಿ ಇವಳ ಓದು,ಅಪ್ಪ-ಅಮ್ಮ,ಮನೆ,ದನ-ಕರು ಇತ್ಯಾದಿ ಸಕಲ ಚರಾಚರ ವಸ್ತು ವಿಷಯಗಳ ಬಗ್ಗೆ ವಿಚಾರಿಸಿದರು!ಈಕೆಗೋ ತಲೆಯ ತುಂಬ ಅವರ ತಂದೆಯ ಸಾವೇ ನರ್ತಿಸುತ್ತಿದೆ!ಆ ಮನುಷ್ಯನೋ,ತೀರಿದ್ದು ಯಾರೋ ಏನೋ ಎಂಬಂತೆ ಸುಮ್ಮಗಿದ್ದಾರೆ! ಬಸ್ಸಿಳಿದು ಕಾಲೇಜಿಗೆ ಹೋಗಿ, ಎಕ್ಸಾಮು ಹಾಲಿನಲ್ಲಿ ಕೂತರೂ ಇದೇ ಯೊಚನೆ ಕಾಡುತ್ತಿತ್ತಂತೆ!
ಅದೂ ಅವರು ಸತ್ತಿದ್ದು ಹಿಂದಿನ ದಿನವಷ್ಟೆ.ಈ ಭಾವನೆ,ನಗರದ ಮಧ್ಯ ವಾಸಿಸುವ ಯಾವನೋ ದುಡ್ಡೇ ದೇವರು ಅಂತ ಬದುಕುವ ವ್ಯಕ್ತಿಯದಾಗಿದ್ದರೆ,ಇಷ್ಟೊಂದು ಆಲೋಚನೆ ಮಾಡುತ್ತಿರಲಿಲ್ಲವೇನೋ ಅವಳು.ಮಧ್ಯಮ ವರ್ಗದ , ಹಳ್ಳಿಯಲ್ಲಿ ಬದುಕುವ ವ್ಯಕ್ತಿಯೊಬ್ಬ ಸಾವನ್ನ ಅಷ್ಟು ಸುಲಭವಾಗಿ ಸ್ವೀಕರಿಸಿ ಸರಳವಾಗಿ ಇರುವುದನ್ನ ತಂಗಿ ನೋಡಿಲ್ಲ. ನಾಲ್ಕಾರು ದಿನ ಶೋಕಾಚರಣೆ,ಅಪರ ಕರ್ಮಗಳು ಇತ್ಯಾದಿಗಳು ಪ್ರತಿ ಮನೆಯಲ್ಲೂ ನಡೆಯಲೇ ಬೇಕಾದವು.ಹತ್ತು- ಹದಿನೈದು ದಿನ ಆಚೀಚಿನ ಮನೆಯವರು ಸಹಿತ ಅದೇ ಗುಂಗಿನಲ್ಲಿರುತ್ತಾರೆ.ಅವರು ಕೂಡ ಏನೂ ಸಂತಸದ ಕಾರ್ಯಗಳನ್ನ ನಡೆಸದೆ,ನಿಧನರಾದವರ ಮನೆಯ ದು:ಖದಲ್ಲಿ ಪಾಲ್ಗೊಳ್ಳುವುದು, ಅಲಿಖಿತ ನಿಯಮ.
ಯಾಕಾಗಿ ಆ ಮನುಷ್ಯ ಅಷ್ಟು ಆರಾಮಾಗಿದ್ದಿರಬಹುದು?, ತಂದೆಯ ಸಾವು ಮೊದಲೇ ಖಚಿತವಾಗಿ,ಸಾವಿನ ನೋವಿಗೆ ಮೊದಲೆ ಸಿಧ್ಧವಾಗಿದ್ದನೆ?ಅಪ್ಪ -ಮಗನ ನಡುವಿನ ಸಂಬಂಧ ಹಳಸಿತ್ತೆ?, ಎದೆಲ್ಲಿರುವ ದು:ಖದ ಕೊಳ ಇನ್ನು ಒಡೆದಿರಲಿಲ್ಲವೆ?, ಅಥವಾ, ಮೊಗದ ಮೇಲೆ ನಿರ್ಲಿಪ್ತತೆಯ ಲೇಪವಿತ್ತೆ? ತಮ್ಮ ನೋವನ್ನ "marketing" ಮಾಡಿ "symapathy" ಪಡೆಯಲು ಹಂಬಲಿಸುವವರಿರುವ ಈ ಕಾಲದಲ್ಲಿ,ಈತ ಭಿನ್ನವಾಗಿ ಯೋಚಿಸುವವನೆ?!

ಏನೋ ತಿಳಿಯುತ್ತಿಲ್ಲ, ಆತನ ಮುಖದ ಗೆರೆಗಳನ್ನ ಅರ್ಥ ಮಾಡಿಕೊಳ್ಳಲು ನಾನು ಅಲ್ಲಿರಲಿಲ್ಲ.

ಭಾವ-೨.

ಇಳಿಸಂಜೆಯ ಮಬ್ಬಿನೊಳಗೆ ತಡಕಾಡುತ್ತಿದ್ದ ಆ ವೃಧ್ಧನನ್ನ ಎಲ್ಲಿಂದಲೋ ಬಂದ ಪುಟ್ಟ ಹುದುಗನೊಬ್ಬ ರಸ್ತೆ ದಾಟಿಸಿ,ಮುಂದುವರೆದ.ಬದುಕು ಸುಂದರವಾಗಿದೆ, ಅಲ್ಲವೆ?

ಶುಕ್ರವಾರ, ಸೆಪ್ಟೆಂಬರ್ 15, 2006

~~~ ನನ್ನವಳು ~~~

ನನ್ನವಳ ಮೊಗದಲ್ಲಿ ಸಣ್ಣನೆಯ ಕಿರುನಗೆಯು,
ಕಾರಣವದೇನೆಂದು ಕೇಳಬಹುದೆ?
ತುಟಿಯಂಚ ನಗು ಹಿಂದೆ ಏನದೋ ತುಂಟತನ
ಮನದೊಳಗೆ ಏನಿದೆಯೋ ಅರಿಯಬಹುದೆ..

ಅನುನಯದ ನಡೆ ನುಡಿಯು, ತಣ್ಣನೆಯ ಮಾತುಗಳು
ಹೊಸದೇನೋ ಹುನ್ನಾರ ನಡೆಯುತಿಹುದು
ನಿತ್ಯವೂ ಇಲ್ಲದಿಹ ಬೇರೆಯದೆ ನೋಟವಿದು
ನನಗೇತಕೋ ಶಂಕೆ ಮೊಡುತಿಹುದು

ಹೊಸದು ಸೀರೆಯು ಬೇಕೆ, ಹಬ್ಬ ಸನಿಹದೊಳಿಲ್ಲ
ಅಮ್ಮ ಬರುವಳೆ ತವರು ಮನೆಯಿಂದ
ಚಿನ್ನ್ನದಾ ಸರಕಿನ್ನು ತಿಂಗಳೂ ಕಳೆದಿಲ್ಲ
ವಿಷಯವೇನೆಂದೊಮ್ಮೆ ಹೇಳಿದೊಡೆ ಚೆಂದ.

ಒಳಮನೆಯ ಗೋಡೆಯಲಿ ಕಂದನಾ ಚಿತ್ರಪಟ
ಮೊಗದಳಗದೇನದೋ ಹೊಸಬಗೆಯ ಲಜ್ಜೆ,
ಹೊಸ ಜೀವ ಬರುತಿಹುದೆ ನಮ್ಮ ಈ ಬಾಳೊಳಗೆ
ನಾಲ್ಕಿದ್ದ ಎಡೆಗೆ ಆರಾಗುವುದೆ ಹೆಜ್ಜೆ!

ಓ ಜೀವ ಸಖಿ ನನಗೆ ಮಾತೆ ಹೊರಡುತಲಿಲ್ಲ,
ಆನಂದ, ಆಶ್ಚರ್ಯ ಎದೆ ತುಂಬಿದೆ.
ನಿನ್ನೊಳಗ ಬಾಳ ಕುಡಿ ಚೈತನ್ಯ ತಂದಿಹುದು
ಜೀವನಕೆ ಹೊಸ ಅರ್ಥ ತಾ ಮೊಡಿದೆ.

ಗುರುವಾರ, ಸೆಪ್ಟೆಂಬರ್ 14, 2006

ಮಳೆ ಹೊಯ್ಯುತಿದೆ..

ಕಿಟಕಿಯ ಹೊರಗೆ ಸಣ್ಣಗೆ ಮಳೆ.. ಬೆಂಗಳೂರಿಗೆ ಇವತ್ತು ತುಂತುರು ಸ್ನಾನ, ಬಹಳ ದಿನಗಳನಂತರ ಸಂಜೆಯ ಹೊತ್ತು ನೀರ ಸಿಂಚನ. ನನಗೆ ಮಳೆ ಅಂದರೆ ಯಾವತ್ತೂ ಇಷ್ಟ.. ಅದರಲ್ಲೂ ಇಂತಹ ತುಂತುರು ಮಳೆಯಲ್ಲಿ ನೆನೆಯುತ್ತಾ ನಡೆಯುವುದು..ಆಹ್! ಮಳೆ ಬಂದ ದಿನ ಮನಸ್ಸು ಪ್ರಫುಲ್ಲ! ವರ್ಷಧಾರೆಗೆ ಮನದ ದುಗುಡವನ್ನ, ಬೇನೆ- ಬೇಸರವನ್ನ ಅರ್ಥ ಮಾಡಿಕೊಂಡು, ನಮ್ಮನ್ನ ಸರಿದಾರಿಗೆ ತಂದು ನಿಲ್ಲಿಸುವ ಶಕ್ತಿ ಇದೆ. ಮಳೆಯನ್ನ ಸಹೃದಯರೆಲ್ಲ ಪ್ರೀತಿಸುತ್ತಾರೆ, ಮತ್ತು, ಮಳೆ ಪ್ರೀತಿಸುವುದನ್ನ ಕಲಿಸುತ್ತದೆ!
ಕನ್ನಡ ಶಾಲೆಯ ಕಾಲದಲ್ಲಿ , ಹರಿಯೋ ಕೆಂಪು ನೀರಲ್ಲಿ ಮಾಡಿ ಬಿಟ್ಟ ಕಾಗದದ ದೋಣಿ ಮತ್ತು ಆ ಗೆಳೆಯರು, ಕೆಸರು ನೀರಲ್ಲಿ ಆಟವಾಡಿ ಬಂದು ಅಮ್ಮನ ಕೈಲಿ ಬೈಸಿಕೊಂಡಿದ್ದು, ಒದ್ದೆ ಮಾವಿನಮರ ಹತ್ತಿ ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಒಡೆದ ಹಂಚಿನ ಸಂದಿಯಿಂದ ಬೀಳುತ್ತಿದ್ದ ನೀರ ಅಡಿಯಲ್ಲಿಟ್ಟ ಪಾತ್ರೆ, ಮನೆಯ ಅಂಗಳದ ತುಂಬ ನೀರು ನಿಂತು ನಿರ್ಮಾಣವಾದ ಪುಟ್ಟ ಕೆರೆ, ಧೋ ಅಂತ ಮಳೆ ಹೊಯ್ಯುವಾಗ ಮನೆ ಒಳಗೆ ಬೆಚ್ಚಗೆ ಕೂತು ತಿಂದ ಹಲಸಿನ ಹಪ್ಪಳ...
ಹುಚ್ಹಾಪಟ್ಟೇ ಮಳೆ ಬಂದು ಕರೆಂಟಿಲ್ಲದೆ ಕಳೆದ ಕಗ್ಗತ್ತಲ ರಾತ್ರಿ..ಅಪ್ಪನ ಗಾಡಿಯ ಹಿಂದೆ ಕೂತು ಅರೆ ಬರೆ ಒದ್ದೆಯಾಗಿ ಮನೆಗೆ ಬಂದ ಸಂಜೆ, ಮಳೆಯೊಳಗೇ ಆಡಿದ ಫುಟ್ಬಾಲು ಆಟ.. ಪ್ರೀತಿಸಿದ ಜೀವದ ಜೊತೆ ಮಳೆಯೊಳಗೆ ಮಳೆಯಾಗಿ ನಡೆದ ಘಳಿಗೆ...
ಇವೆಲ್ಲ ನೆನಪಾಗುವುದಿಲ್ಲವೇ ಸ್ನೇಹಿತರೇ ನಿಮಗೂ... ನನ್ನ ಹಾಗೆ!
ಮಳೆ ನೆನಪಿನ ಬುತ್ತಿಯನ್ನ ಬಿಚ್ಚಿಸುತ್ತದೆ, ನಮಗೇ ತಿಳಿಯದಂತೆ..
ಮಳೆಯೇ ನಿನ್ನಯ, ಮಾಯೆಗೆ ನಮನ!

ಬುಧವಾರ, ಸೆಪ್ಟೆಂಬರ್ 13, 2006

ಭಾವ- ೧.

ಬೆಳಗಿನ ಜಾವದ ಚುಮುಚುಮು ಚಳಿಯೊಳಗೆ ತನ್ನಪ್ಪನ ಕಿರುಬೆರಳ ಹಿಡಿದ ಆ ಪುಟ್ಟ ಮಗು, ತಪ್ಪು ತಪ್ಪು ಹೆಜ್ಜೆ ಹಾಕುತ್ತಾ.. ಮಂಜಿನ ದಾರಿಯೊಳಗೆ ನಡೆದುಹೋಯಿತು.. ಬದುಕು ಸುಂದರವಾಗಿದೆ, ಅಲ್ಲವೆ?!

ಮಂಗಳವಾರ, ಸೆಪ್ಟೆಂಬರ್ 12, 2006

.......ಲಹರಿ....

--ಆಶಯ---
ಪಯಣ ಸಾಗುತಲಿರಲಿಗುರಿಯ ಕಡೆಗೆ,
ವಿನಯ ಸೂಸುತಲಿರಲಿಕೊನೆಯವರೆಗೆ
ತಾಳ್ಮೆ ತಪ್ಪದೆ ಇರಲಿ,ಜಯವೆ ನಿನಗೆ!

--ಎಚ್ಚರಿಕೆ--
ಬೆಳ್ಳೀ ಬೆಳದಿಂಗಳಿಗೆ ಕಾಲಿಡಬೇಡಾ
ಹುಡುಗೀ,
ನಿನಗೊ ಅದಕೂ ಸಾಮ್ಯವೇ ಎಲ್ಲಾ,
ಸಾಕಾದೀತು
ಹುಡುಕಿ!

--ಕಾರಣ---

ನೀ
ನನಗೆ
ದೊರಕಲು
ಕಾರಣ
ನಿನ್ನನಗೆ...

ಶುಕ್ರವಾರ, ಸೆಪ್ಟೆಂಬರ್ 08, 2006

~~~ಹಂಪೆಯ ಚಿತ್ರಗಳು~~~

ನಾನು ಪ್ರವಾಸ ಪ್ರಿಯ. ತಿರುಗಾಟ ಅಂದಮೇಲೆ ಮುಗೀತು! ಯಾರೇ ಕರೆಯಲಿ, ಹೆಗಲಿಗೊಂದು ಬ್ಯಾಗೇರಿಸಿ, ಆರಾಮಾಗಿ ಹೊರಟು ಬಿಡುತ್ತೇನೆ. ಹೊತ್ತಿಲ್ಲ ಗೊತ್ತಿಲ್ಲ! ಈ ಕೆಲಸದ ಜಂಜಡ ಇಲ್ಲದಿದ್ದರೆ ಯಾವತ್ತೂ ತಿರುಗುತ್ತಲೇ ಇರುತ್ತಿದ್ದೆನೇನೋ! ಏನು ಮಾಡೋಣ, ಆಗೋದಿಲ್ಲವೇ!
ಈ ಬಾರಿ ಸ್ವಲ್ಪ ದಿನ ಬಿಡುವು ಮಾಡಿಕೊಂಡು, ಹಂಪೆಗೆ ಹೋಗಿದ್ದೆ, ಸ್ನೇಹಿತರ ಜೊತೆ. ಹಂಪೆ ನನ್ನಿಷ್ಟದ ತಾಣ. ಹೋಗಿದ್ದು ಕೆಲವೇ ಸಲ, ಆದರೆ ಜನ್ಮಾಂತರದ ಅನುಬಂಧ ಇದ್ದಂತೆ ಅನಿಸುತ್ತದೆ, ಹಂಪೆಗೂ- ನನಗೂ! ಅಲ್ಲಿನ ಕಲ್ಲು ಬಂಡೆಗಳ ಮಧ್ಯೆ, ಪಾಳು ಗುಡಿಗಳ ನಡುವೆ ಕಳೆದು ಹೋದಂತೆ ತಿರುಗುವುದು ಬಲು ಆಪ್ಯಾಯಮಾನ.
ಅರ್ಧ ಮುರಿದ ಹಳೆಯ ಗೋಪುರದಲ್ಲಿ ಕುಳಿತಿರುವ ಧ್ಯಾನಸ್ಠ ಸಂನ್ಯಾಸಿ, ವಿರೂಪಾಕ್ಷ ದೇವಾಲಯದ ಬೀದಿಯಲ್ಲಿನ ಮಣ್ಣೊಳಗಾಡುವ ಮಗು, ಆಗ ತಾನೆ ನೀರು ಸಿಕ್ಕಿ ಚಿಗುರುತ್ತಿರುವ ಜೋಳದ ಪೈರಿನ ನಡುವೆ ಸಂತೃಪ್ತ ಮುಖ ಭಾವ ಹೊತ್ತು ಕುಳಿತ ರೈತ, ತುಂಬಿ ಹರಿಯುತ್ತಿದ್ದ ತುಂಗೆಯನ್ನೆ ಬೆರಗಾಗಿ ದಿಟ್ಟಿಸುತ್ತಿದ್ದ ಗೃಹಿಣಿ, ಅದೇ ತುಂಗೆಯಲ್ಲಿ ಕಾಲು ಇಳಿ ಬಿಟ್ಟು ತಂಪು ಅನುಭವಿಸುತ್ತ ಕೂತಿರುವ ನೀಲಿ ಕಣ್ಣಿನ ಹುಡುಗಿ..
ಸೂರ್ಯಕಾಂತಿಯ ಹಳದಿ ಚಾದರ ಹೊದ್ದು ಮಲಗಿದಂತಿರುವ ಇಳೆ, ಶೃದ್ಧೆಯಿಂದ ದೇವಳದ ಕಂಬದ ಮೇಲಿನ ಗಣಪನ್ನ ಚಿತ್ರಿಸುತ್ತಿರುವ ಪ್ರವಾಸಿ.. ಖಾಲಿ ಗರ್ಭಗುಡಿಗೂ ಭಕ್ತಿಯಿಂದ ಕೈ ಮುಗಿಯುತ್ತಿರುವ ವೃಧ್ದೆ.. ಸಂಜೆಯ ಜಿನುಗು ಮಳೆಗೆ ತೋಯುತ್ತ ಬಂಡೆಗಳೆಡೆಯಲ್ಲಿ ಮಾಯವಾದ ಹುಡುಗ....
ಇವೆಲ್ಲ ನನಗೆ ಈ ಬಾರಿ ಹಂಪೆಯಲ್ಲಿ ಕಂಡು ಬಂದ ಕೆಲವು ಮಧುರ ರೂಪಕಗಳು..ಒಮ್ಮೆ ಮಳೆ ಹೊಯ್ಯುವ ಸಮಯ ಹಂಪೆಗೆ ಹೋಗಿಬನ್ನಿ, ಇದಕ್ಕೂ ಸುಂದರ ಚಿತ್ರಗಳು ನಿಮಗೆ ಕಂಡಾವು,ನೋಡುವ ಕಣ್ಣಿದ್ದರೆ!

ಸೋಮವಾರ, ಸೆಪ್ಟೆಂಬರ್ 04, 2006

ಮಧ್ಯರಾತ್ರಿಯ ಹರಟೆಗಳು

ರಾತ್ರಿ ಊಟವಾದ ಮೇಲೆ, ಕೂಡಲೆ ಮಲಗದೇ, ಏನಾದರೂ ಕೆಲಸಕ್ಕೆ ಬೇಕಾದ್ದು- ಬೇಡದ್ದು ಹರಟುತ್ತ ಬಿದ್ದುಕೊಳ್ಳುವುದು, ಗಂಟೆ ಹನ್ನೆರಡು ಹೊಡೆದ ನಂತರವೇ, "ಏ ಸಾಕು ಮಲ್ಗನ್ರೋ" ಎಂದು ನಿದ್ರಿಸುವುದು, ನಮ್ಮ ಜನ್ಮಕ್ಕಂಟಿದ ವ್ಯಾಧಿ. ನಾವು ಹಿಂದಿನ ದಿನ ತಡರಾತ್ರಿಯವರೆಗೆ, ಏನು ಹರಟುತ್ತಿದ್ದೆವು ಎಂಬುದು, ದೇವರಾಣೆಯಾಗಿಯೂ ನಮಗೆ ಮರುದಿನ ಬೆಳಗ್ಗೆ ನೆನೆಪಿರುವುದಿಲ್ಲ. ಬಹುತೇಕ, ಎಲ್ಲ ಬ್ರಹ್ಮಚಾರಿ ಹುಡುಗರ ಹಣೆಬರಹ ಇದೇ ಇರಬೇಕು!
ಜಗತ್ತಿನಲ್ಲಿರುವ ಎಲ್ಲ ವಿಷಯಗಳೂ ನಮ್ಮ ಈ ತಡ ರಾತ್ರಿಯ ಹರಟೆ- ಚರ್ಚೆಯ ಬಲಿಪಶು ಆಗಿಯೇ ಆಗಿರುತ್ತವೆ,ಇಂದಾಗಿರದಿದ್ದರೆ, ನಾಳೆ. ಪಕ್ಕದ ಬೇಕರಿ ಬಾದಾಮಿ ಹಾಲಿನ ಕ್ವಾಲಿಟಿಯಿಂದ ಹಿಡಿದು, ಗೋಡ್ಕಿಂಡಿಯ ಕೊಳಲಿನ ವರೆಗೆ, ಬುಶ್ ನ ಜಾಗತಿಕ ನೀತಿಯಿಂದ ಎದುರು ಮನೆ ಬೆಕ್ಕಿನಮರಿಯವರೆಗೆ, ಏನಾದರೂ ಒಂದು, ನಮ್ಮ ನಾಲಿಗೆಗೆ ಆಹಾರವಾಗಲೇ ಬೇಕು. ಅದನ್ನ ಕಚ್ಚಿ- ಎಳೆದು ಬೇಜಾರು ಬಂದು, ಕಣ್ಣು- ದೇಹ ಎರಡೂ ಅಸಹಕಾರ ಚಳುವಳಿ ಶುರುಮಾಡಿದ ಮೇಲೇ ಚಾದರ ಹೊದ್ದುಕೊಳ್ಳುವುದು!
ನಮ್ಮ ದೇಹದ "ಬಯಾಲಾಜಿಕಲ್ ಗಡಿಯಾರ" ಪ್ರಾಯಶ: ಈ ನಮ್ಮ ಸರಿ ರಾತ್ರಿಯ ನಿದ್ದೆಗೆ ಹೊಂದಿಕೊಂಡಿರಬೇಕು. ಇಲ್ಲವಾದರೆ , ಏಷ್ಟೊ ದಿನ, ಬರಿ ೩-೪ ತಾಸಿನ ನಿದ್ರೆ ಮಾಡಿಯೂ ಇಲ್ಲಿಯವರೆಗೂ, ಏನೆಂದರೆ ಏನೂ ಆಗಿಲ್ಲ!! ದಿನವಿಡೀ ಎಷ್ಟೇ ಕೆಲಸ ಮಾಡಿ ದಣಿದರೂ, ಈ ಹರಟೆ ಗೆ ಮಾತ್ರ ರಜೆ ಇಲ್ಲ. ಈ ತರಹದ ಹರಟೆಗಳು, "mind refresh" ಆಗೋಕೆ ಸಹಾಯ ಮಾಡುತ್ತವೆ, ಅನ್ನಿಸುತ್ತದೆ.
ಹೊಸದಾಗಿ ನಮ್ಮ ರೂಮಿಗೊಬ್ಬ ಗೆಳೆಯ ಬಂದು ಸೇರಿಕೊಂಡಿದ್ದಾನೆ. ಪಾಪ, ಅವನ ಜೈವಿಕ ಗಡಿಯಾರ, ಇನ್ನೂ ಈ ಪದ್ದತಿಗೆ ಹೊಂದಿಕೊಂಡಿಲ್ಲ. ನಮ್ಮ ಚರ್ಚೆಯ ಪೀಠಿಕಾ ಪ್ರಕರಣ ಮುಗಿಯುವುದರೊಳಗಾಗಿ, ಗೊರಕೆ ಹೊಡೆಯುತ್ತಿರುತ್ತಾನೆ! ಅವನ ನಿದ್ದೆಗೆ ತೊಂದರೆ ಕೊಡುವುದು ಬೇಡಾ ಅಂತ, ನಾವೆಲ್ಲ ಬೇಗನೆ ಮಲಗಲು ಆರಂಭಿಸಿದ್ದೇವೆ. ಆತ ನಮ್ಮ ಮಢ್ಯರಾತ್ರಿ ಹರಟೆ ಕುಟುಂಬದ ಸದಸ್ಯನಾಗುತ್ತನೋ, ಇಲ್ಲಾ ನಾವು ಕುಂಭಕರ್ಣನ ವಂಶ ಸೇರುತ್ತೇವೋ, ಕಾದು ನೋಡಬೇಕು!

ಶುಕ್ರವಾರ, ಸೆಪ್ಟೆಂಬರ್ 01, 2006

~~~~~ಹೃದಯ ಗೀತ~~~~~~~

ಕೇಳೆ ಸಖಿ ನನ್ನ ಮಾತ,
ಒಮ್ಮೆ ನಿಲ್ಲು ಅಲ್ಲಿಯೇ,
ತಿರುಗಿ ಕೂಡ ನೋಡದೇನೆ,
ಹೋಗಬೇಡ ಹಾಗೆಯೆ..

ನನ್ನದೇನೆ ತಪ್ಪು ಗೆಳತಿ,
ಮನದ ಮಾತು ಕೇಳಿದೆ..
ನೀನೆ ನನ್ನ ಬಾಳಬೆಳಕು,
ಮನವದುವನೆ ಹೇಳಿದೆ..

ನೀನು ಕೂಡ ನನ್ನ ಹಾಗೆ
ಸತ್ಯ ಹೇಳಬಾರದೆ?
ಹೃದಯದೊಳಗೆ ನನ್ನ ಬಿಂಬ
ಒಮ್ಮೆ ನೋಡಬಾರದೆ..

ಹೊರಟೆಯೇನೆ ನನ್ನ ಬಿಟ್ಟು,
ಒಂಟಿ ಬಾಳ ಪಯಣಕೆ..
ಹೋಗೋ ಮುನ್ನ,
ಕೇಳೇ ಇಲ್ಲಿ ನನ್ನ ಸಣ್ಣ ಕೋರಿಕೆ..

ಒಮ್ಮೆ ನಿಂತು ಅಲ್ಲೆ ನಕ್ಕು,
ಮತ್ತೆ ಹೋಗಬಾರದೆ?
ನಿನ್ನ ನಗುವೆ ಜೀವಜಲವು,
ಬದುಕಿನುದ್ದ ಹಾದಿಗೆ.......
ನಾನು ಶ್ರೀನಿಧಿ, ಬ್ಲಾಗುಗಳ ಲೋಕಕ್ಕೆ, ಹೊಸ ಮುಖ.ಬಹಳಷ್ಟು ಕಾಲ ಬ್ಲಾಗುಗಳನ್ನ ಓದಿಯೆ ಕಾಲ ಕಳೆದೆ. ಈಗ ಬರೆಯೋಣ ಅನ್ನಿಸುತ್ತಿದೆ!ಹುಟ್ಟಿ ಬೆಳದಿದ್ದು ಮಂಗಳೂರಿನಲ್ಲಾದರೂ, ಹೃದಯ ಮಲೆನಾಡಿನದು.ಸದ್ಯಕ್ಕೆಬೆಂಗಳೂರು ವಾಸಿ. ಸಾಫ್ಟ್ ವೇರ್ ಕಂಪನಿಯೊಂದರಲ್ಲಿ, HR Executive.

ಕವನ , ಹನಿಗವನ ಬರೆಯೋದು ನನ್ನ ಇಷ್ಟದ ಹವ್ಯಾಸ, ಸಣ್ಣ ಕತೆಗಳನ್ನ ಕೂಡ ಬರೆಯಲು ಪ್ರಯತ್ನಿಸಿದ್ದೇನೆ.
ಇನ್ನು ಮುಂದೆ, ದಿನವು ಬರೆಯಬೇಕು ಅಂದುಕೊಂಡಿದ್ದೇನೆ.. ನೋಡೋಣ.