ಶುಕ್ರವಾರ, ಫೆಬ್ರವರಿ 23, 2007

ನೋಟೀಸು ಪಿರಿಯಡ್ಡು ಮತ್ತು ಉರ್ಲು !

ನಾನು ಸಾಫ್ಟ್ ವೇರ್ ಕಂಪನಿಯ hr ವಿಭಾಗದಲ್ಲಿರುವವನು. ದಿನಾ ಒಬ್ಬರಲ್ಲ ಒಬ್ಬರ ಜೊತೆ ಫೋನಿನಲ್ಲಿ ಮಾತಾಡೋದು, ಸಂದರ್ಶನಗಳನ್ನ schedule ಮಾಡೋದು ಇದ್ದಿದ್ದೇ. ದಿನಾ ಒಂದೇ ತೆರನಾದ ಕೆಲ್ಸ ಆದರೂ, ಏನಾದರೂ ವಿಶೇಷ ಘಟಿಸಿಯೇ ಘಟಿಸುತ್ತದೆ.

ಇಂಟರ್ವ್ಯೂ ಗೆ ಬಾರದ ಕ್ಯಾಂಡಿಡೇಟುಗಳು, ನಾವು ಫೋನಿಸಿದ ಕೂಡಲೇ, ತಮಗೆ accident ಆಗಿ ಬಿಟ್ಟಿದೆಯೆಂದೂ, ಸಿಕ್ಕಾಪಟ್ಟೇ ಪೆಟ್ಟಾಗಿದೆಯೆಂದೂ ಮರುಕ ಹುಟ್ಟಿಸುವ ಭಾಷೆಯಲ್ಲಿ ಮಾತನಾಡಲು ಶುರು ಮಾಡಿಕೊಳ್ಳುತ್ತಾರೆ. ಎಂತವನ ಹೃದಯವೇ ಆದರೂ ಕರಗಲೇ ಬೇಕು! "ಸಾರ್, ಸೀವಿಯರ್ ವೂಂಡ್ ಸಾರ್ , ಸಾರಿ ಸಾರ್ " , "ಸರ್ ಐ ಆಮ್ ನಾಟ್ ಏಬಲ್ ಟು ವಾಕ್ ಸರ್, ಐ ವಿಲ್ ಡೆಫೆನೆಟ್ಲ್ಲಿ ಮೇಕ್ ಇಟ್ ಟುಮಾರೋ" ಅಂತೆಲ್ಲ ವದರುತ್ತಾರೆ. ಅವನಿಗೆ ಅದು ಮೊದಲ ಆಕ್ಸಿಡೆಂಟು! ಪಾಪ.. ನಮ್ಮ ಕಿಸೆಯೊಳಗೆ ಇಂತಹ ೫೦- ೬೦ ಆಕ್ಸಿಡೆಂಟುಗಳು ಈಗಾಗಲೇ ಇರುತ್ತವೆ. ಇಂಟರ್ವ್ಯೂ ಗೆ ಬರಲಾಗದ ಶೇಕಡಾ ೭೫% ಜನಕ್ಕೆ ಆಕ್ಸಿಡೆಂಟೇ ಆಗಿರುವುದು ವಿಶೇಷ. ಮತ್ತೆ ಕೆಲ ಜನರ ಸಂಬಂಧಿಕರಿಗೆ ಕಾಯಿಲೆಯಾಗಿರುತ್ತದೆ.... ನಮ್ಮ ಪ್ರವೀಣನೋ, ಸಂತೃಪ್ತಿಯೋ ಫೋನಿಟ್ಟು "ಆಕ್ಸಿಡೆಂಟು" ಅಂದರೆ ಸಾಕು, ಮುಂದೇನೂ ಯಾರೂ ಹೇಳಬೇಕಾಗಿಯೇ ಇಲ್ಲ! ಬಿದ್ದು ಬಿದ್ದು ನಗುವುದೇ ಕೆಲಸ. ನಾನು, ಪ್ರವೀಣ ಇಬ್ಬರೂ ೧೦೦ ಆಕ್ಸಿಡೆಂಟಾದ ಮೇಲೆ ಒಂದು ಸಮಾರಂಭ ಮಾಡಬೇಕು ಅಂತ ತೀರ್ಮಾನಿಸಿದ್ದೇವೆ!

ಮೊನ್ನೆ ಒಬ್ಬ ಪುಣ್ಯಾತ್ಮನಿಗೆ ಫೋನ್ ಮಾಡಿದ್ದೆ "ನಿನ್ನ ಈಗಿನ ಸಂಬಳ ಎಷ್ಟು?, ಎಷ್ಟು ಬೇಕು ಎಲ್ಲ ಕೇಳಿಯಾದ ಮೇಲೆ", "What is your notice period" ಅಂದೆ. ( ಬೇರೆ ಕೆಲಸಕ್ಕೆ ಸೇರಲು ಎಷ್ಟು ದಿನ ಬೇಕು ಅಂತ) ಇದು ಎಲ್ಲ ಕಡೆಯೂ, ಎಲ್ಲರೂ ಕೇಳುವ ಅತ್ಯಂತ ಮಾಮೂಲಿ ಪ್ರಶ್ನೆ. ಅದಕ್ಕಾತ," from morning 9 to evening 6pm sir" ಅಂದು ಬಿಡಬೇಕೆ! ನಗು ತಡೆದುಕೊಂಡು , "ನೋ ನೋ, i am asking about your notice period" ಅಂತ ಮತ್ತೊಮ್ಮೆ ಬಿಡಿಸಿ ಹೇಳಿದೆ.. "sometime it varries sir, from 9am till 8-9pm sir", "i am ready to work for overtime".. ಆಹ್! ನಂಗೆ ಬರುವ ನಗು ತಡೆದುಕೊಳ್ಳಲಾಗದೆ, "i will call you later" ಅಂತಂದು ಫೋನ್ ಇಟ್ಟೆ.

ಒಂದಿನ ಬೆಳಗ್ಗೆ ಯಾರೋ ಒಬ್ಬಾತ ,ಫೋನ್ ಮಾಡಿ " ನಿಮ್ಮ ಕಂಪನಿಯ ಉರ್ಲ್ ಕೊಡಿ"ಅಂದ! ಅರೇ, ನಮ್ಮ ಕಂಪನಿ ಸಾಫ್ಟ್ ವೇರ್ ಬಿಟ್ಟು ನೇಣಿನ ಹಗ್ಗ ತಯಾರ್ ಮಾಡೋದು ಯಾವಾಗ ಶುರು ಮಾಡಿತಪ್ಪ ಅಂತ ಅಂದುಕೊಂಡು "ಸಾರಿ, i did'nt get u" ಅಂದೆ. ಅವನೋ ಮತ್ತೆ ಮತ್ತೆ " please give your ಉರ್ಲ್" ಅಂತಿದಾನೆ. ಸ್ವಲ್ಪ ಹೊತ್ತಿನ ಮೇಲೆ ಗೊತ್ತಾಯ್ತು, ಅವನು ಕೇಳಿದ್ದು "url" ಅಂತ. ಯು ಆರ್ ಎಲ್ ನ ಅವನು "ಉರ್ಲ್" ಮಾಡಿ ಬಿಟ್ಟಿದ್ದ!

ಮತ್ತೆ ಯಾರದೋ ಫೋನ್ ಬರ್ತಿದೆ, ಯಾರಿಗೆ ಏನು ಬೇಕೋ, ಎಲ್ಲಿ ಯಾರಿಗೆ ಆಕ್ಸಿಡೆಂಟಾಯ್ತೋ...

ಬುಧವಾರ, ಫೆಬ್ರವರಿ 21, 2007

ಗೆಳತೀ ಎಲ್ಲಡಗಿರುವೆ?

ಎಲ್ಲಿ ಹುಡುಕಲೇ ಗೆಳತಿ ನಾನು ನಿನ್ನ?
ನಿನಗಿಂತ ಸುಲಭದಲಿ ದೊರಕುವುದು ಚಿನ್ನ!

ಕನಸೊಳಗೆ ಹುಡುಕಿದೆ, ಮನಸೊಳಗೆ ಅರಸಿದೆ
ಸಾಗರದ ಗರ್ಭದಲಿ, ಆಳದಾ ಕಣಿವೆಯಲಿ

ಹುಡುಕುಡುಕಿ ಬಳಲಿ ಬೆಂಡಾಗಿ ಹೋಗಿಹೆನು
ಬಿಟ್ಟಿಲ್ಲ ಈ ಜಗದ ಯಾವುದೇ ಮೂಲೆಯನು..

ಆಗಸದ ಆಂತರ್ಯ, ಕತ್ತಲಿನ ಸಹಚರ್ಯ
ವಿಪಿನದಾ ಒಳ ಹೊರಗು ನಿನ್ನ ಹುಡುಕುವ ಕಾರ್ಯ

ಕಳೆದುಕೊಂಡೆನೆ ನಿನ್ನ,ಅಳುವೊಂದೆ ಉಳಿದಿಹುದು
ನೀ ದೊರಕದಿದ್ದರೆ, ಸಾವೊಂದೆ ಗತಿಯಹುದು..

ನಾನಂದು ಹೀಗೆಯೇ ನಿನ್ನ ಧ್ಯಾನದೊಳಿರಲು,
ಕನ್ನಡಿಯನೊಂದನ್ನು ಒಮ್ಮೆಗೇ ನೋಡಿದೆನು

ಅರರೆ! ನಾನಲ್ಲಿ ಕಂಡುದಿನ್ನೇನು?
ನನ್ನ ದೇಹಕೆ ಇಹುದು ನಿನ್ನದೇ ಬಿಂಬ!

ನನ್ನೊಳಗೆ ನೀನೀರುವೆ ಅರಿಯದೇ ಹೋದೆನೇ!
ನಿನ್ನ ಹುಡುಕುವ ತಪ್ಪನಿನ್ನೆಂದೂ ಮಾಡೆನೇ..

(ಮೂಲ ಇಂಗ್ಲೀಷು ಕವನ, ಭಾವಾನುವಾದ).

ಮಂಗಳವಾರ, ಫೆಬ್ರವರಿ 13, 2007

ಈ ಪ್ರೀತಿ ಒಂಥರಾ. . .
ಪ್ರೀತಿ.. ಈ ಪದವೇ ಒಂದು ಸಮ್ಮೋಹಿನಿ, ಅಲ್ವಾ?! ಜಗತ್ತಲ್ಲಿ ಪ್ರಾಯಶ: ಅತ್ಯಂತ ಹೆಚ್ಚು ಚರ್ಚೆಗೊಳಗಾಗುವ, ಮತ್ತು ಇಷ್ಟೊಂದು ಚರ್ಚೆ ಮಾಡಿದ್ರೂ ಯಾರಿಗೂ ಸರಿಯಾಗಿ ಅರ್ಥ ಆಗದ ವಿಷ್ಯ ಅಂದ್ರೆ ಈ ಪ್ರೇಮ ನೋಡ್ರಿ! ಪ್ರತಿ ಒಬ್ಬರ ಬಳಿಯೂ, ಒಂದೊಂದು ತೆರನಾದ ಅಭಿಪ್ರಾಯ ಇದೆ, ಪ್ರೀತಿ,ಪ್ರೇಮದ ಬಗ್ಗೆ. ನಾನು ಏನು ಹೇಳ್ತೀನೋ, ಅದರ ಸಂಪೂರ್ಣ ವಿರುದ್ಧ ಇರಬಹುದು, ನಿಮ್ಮ ಕೋನ. ಪ್ರೀತಿ ಅನ್ನುವ ಈ ಚೇತೋಹಾರಿ ಭಾವ ಇದೆಯಲ್ಲ, ಇದು ಎಲ್ಲರ ಹೃದಯದಲ್ಲೂ ದೀಪ ಬೆಳಗಲೂ ಬಹುದು, ಅಥವ ಕಿಚ್ಚು ಹತ್ತಿಸಲೂಬಹುದು. ಅವರವರ ಭಾವಕ್ಕೆ, ಅವರವರ ಭಕುತಿಗೆ!...

ಬದುಕಿನ ಹಾದಿಯಲ್ಲಿ ಎಲ್ಲರೂ ಒಮ್ಮೆಯಾದರೂ ಪ್ರೀತಿಯ ಸಾಂಗತ್ಯವನ್ನ ಬಯಸಿರುತ್ತಾರೆ, ಬಯಸುತ್ತಾರೆ, ಎಂತವರೇ ಆಗಲಿ.. ಬಾಳ ಪಯಣದ ಪ್ರಯಾಣದಲ್ಲಿ ಸ್ನೇಹಿತರೆಂಬ ಪಯಣಿಗರು ಇದ್ದರೂ, ಕೊನೆ ತನಕ ಜೊತೆ ನೀಡುವ ಸಂಗಾತಿ ಇರಬೇಕೆಂಬ ಆಸೆ ತಪ್ಪಲ್ಲ, ಅಲ್ಲವೇ? ನಮ್ಮ ಏಳು ಬೀಳುಗಳಲ್ಲಿ ಪ್ರೀತಿ ಪಾತ್ರರು ಜೊತೆಗಿದ್ದಾಗ ಆಗುವ ಸಂತಸವೇ ಬೇರೆಯ ತೆರನಾದ್ದು. ಪ್ರೇಮಿಸೋ ಜೀವ, ಬೆನ್ನ ಮೇಲೊಮ್ಮೆ ಕೈಯಿಟ್ಟು ಹಣೆಗೊಂದು ಹೂ ಮುತ್ತು ಕೊಟ್ಟರೆ, ಅದಕ್ಕಿಂತ ಬೇರೆಯ ಸಾಂತ್ವನ ಬೇಕೆ?!


ಪ್ರೀತಿ ಅಂದರೆ ಮನಸುಗಳ ಮಿಲನ. ಪ್ರೀತಿ ಬಿಡದೆ ಕಾಡುವ ಮಗುವಿನ ಹಾಗೆ. ಪ್ರೇಮದ ಕಾರಂಜಿಯ ನೀರು ಎಂದಿಗೂ ಚಿಮ್ಮುತ್ತಲೇ ಇರುತ್ತದೆ. ಪ್ರೇಮಕ್ಕೆ ಯಾವುದೇ ರೂಪವಿಲ್ಲ, ಅದು ನೀರಿನ ಹಾಗೆ. ಹಾಕಿದ ಪಾತ್ರೆಯ ರೂಪವನ್ನೇ ಪಡೆಯುತ್ತದೆ ! ಪ್ರೀತಿ ಆಕಸ್ಮಿಕ, ಕ್ಷಣ ಮಾತ್ರದ ದೃಷ್ಟಿ ಮಿಲನ, ಜೀವನದ ಗತಿಯನ್ನೇ ಬದಲು ಮಾಡಿಬಿಡಬಹುದು!. ಪ್ರೀತಿ ಪರಿಶುದ್ಧ, ದಟ್ಟ ಕಾಡಿನ ಹಸಿರು ಗಿಡದ ಮೇಲಿನ ಇಬ್ಬನಿಯ ಹಾಗೆ.

ಪ್ರೀತಿ ಸೋನೆಮಳೆಯ ಹಾಗೆ, ಬಿಡದೆ ಸುರಿಯುತ್ತಲೇ ಇರಬೇಕು ತುಂತುರು ತುಂತುರಾಗಿ. ದಿನಗಳ ಒಳಗೆ ಪ್ರೀತಿಯನ್ನ ಬಂಧಿಸೋದಕ್ಕಿಂತಾ ದೊಡ್ಡ ಮೂರ್ಖತನ ಬೇರೊಂದಿದೆಯಾ?!ದಿನಾ ಪ್ರೀತಿ ಮಾಡ್ರೀ! ಸುಮ್ ಸುಮ್ನೆ ಯಾಕೆ ಅದ್ಕೆ ಒಂದು ದಿನ ಅಂತ ಇಟ್ಕೊಂಡು ಆಚರಣೆ ಮಾಡಿ ಅದರ ಪವಿತ್ರತೆನ ಹಾಳ್ ಮಾಡ್ತೀರ?! ಪಾಪಾ, ಈ ವಿದೇಶಿಗರಿಗೆ ಯಾವಾಗ ನೋಡಿದ್ರೂ ಸಿಕ್ಕಾಪಟ್ಟೆ ಕೆಲ್ಸ! ಅವರಿಗೆ , ಎಲ್ಲದಕ್ಕೂ ಒಂದು ದಿನ ಬೇಕು. ಅಪ್ಪಂದ್ರ ದಿನ, ಅಮ್ಮಂದ್ರ ದಿನ, ಅಜ್ಜಂದ್ರ ದಿನ .. ಹೀಗೇ! ಪ್ರೀತಿಗೂ ಒಂದು ದಿನವನ್ನ ನಿಗದಿ ಪದಿಸಿ ಬಿಟ್ಟಿದಾರೆ ಅದಕ್ಕಾಗೇನೆ. ಏನ್ ಮಾಡ್ತೀರಾ ಹೇಳಿ! ನಾವೂ ಅದ್ನ ಹಾಗೆ ಶಿರಸಾ ವಹಿ ಪಾಲಸ್ತಾ ಬಂದ್ ಬಿಟ್ಟಿದೀವಿ.

ಪ್ರೇಮಿಗಳ ದಿನದ ತನ್ನ ಅರ್ಥನೇ ಕಳದ್ಕೋತಾ ಇದೆ ಈಗ. ಪ್ರೀತಿನ ವ್ಯಕ್ತ ವಡಿಸುವ ದುಬಾರಿ ವಿಧಾನಗಳಿಗೆ ಎಡೆ ಮಾಡಿ ಕೊಟ್ಟಿದೆ ಈ ಆಚರಣೆ. ಹೆಚ್ಚು ಬೆಲೆ ಬಾಳುವ ಕಾಣಿಕೆ ಕೊಡುವಾತ ನಿಜವಾದ ಪ್ರೇಮಿ! ನಾಲ್ಕು ಜನರೆದುರು, ಐ ಲವ್ ಯೂ ಅಂತ ಕಿರಿಚೋನು ಬಹಳ ಗಟ್ಟಿಗ!.. ಪ್ರೇಮವನ್ನ ಹೊರ ಪ್ರಪಂಚಕ್ಕೆ ತೋರಿಸಿಕೊಂಡು ಮಾಡೂವುದು ಒಂದು ಫ್ಯಾಷನ್ನಾಗಿ ಬಿಟ್ಟಿದೆ. ರೇಡಿಯೋ ಚಾನಲ್ಲುಗಳಲ್ಲಿ , ಟಿ.ವಿಗಳಲ್ಲಿ "ಇಂತವಳನ್ನ ಇಷ್ಟಿಷ್ಟು ವರ್ಷಗಳಿಂದ ಹೀಗೀಗೆ ಪ್ರೇಮಿಸುತ್ತಿದ್ದೇನೆ" ಅಂತ ಹೇಳಿಕೊಳ್ಳೋದು ದೊಡ್ದ ಸಾಧನೆ!

ಪ್ರೀತಿಯೂ ಕೂಡಾ ಈ ವ್ಯಾಪಾರೀ ಯುಗದಲ್ಲಿ ಹಣ ಗಳಿಸುವ ಮಾಧ್ಯಮ ಆಗಿಬಿಟ್ಟಿದೆ. ಬೆಸ್ಟ್ ಕಪಲ್ಸದೂ ಇದೂ ಅಂತ ಸ್ಪರ್ಧೆಗಳು ಶುರು ಆಗಿರುತ್ತವೆ, ಈಗಾಗಲೇ! ನಿಜಕ್ಕೂ ಪ್ರೀತಿ ಮಾಡೋರಿಗೆ ಇದೆಲ್ಲದರ ಅವಶ್ಯಕತೆ ಇದೆಯಾ?! ನಿಮ್ಮ ಒಲುಮೆಯ ಜೀವ ನಿಮಗೆ ಬೆಸ್ಟ್ ಆಗಿದ್ದರೆ ಸಾಕು, ಅದನ್ನ ಜಗತ್ತಿಗೆ ತಿಳಿಸುವ ತೋರಿಕೆ ಏಕೆ ಬೇಕು?.. ಪ್ರೀತಿಯನ್ನ ಹೊರ ಜಗತ್ತಿಗೆ ತೆರೆದಿಟ್ಟಷ್ಟೂ, ಅದರ ಬೆಲೆ ಕಡಿಮೆ ಆಗುತ್ತ ಹೋಗುತ್ತದೆ, ಅಲ್ಲವೆ? ನಮ್ಮ ಸೆಲೆಬ್ರಿಟಿಗಳು ಪ್ರೀತೀನ ಮಾಧ್ಯಮಗಳ ಬಾಯಿಗೆ ಬೇಕಂತಲೇ ಕೊಟ್ಟು ಸುಮ್ಮಗೆ ಕೂರುತ್ತಾರೆ!.

ಪ್ರೇಮಿಗಳ ದಿನ ತನ್ನ ಮೂಲ ನೆಲೆಯಿಂದ ಹೊರ ಬಂದು ಏನೇನೋ ಆಗಿ ಬಹು ಕಾಲವೇ ಆಗಿ ಬಿಟ್ಟಿದೆ! ಫಾದರ್ ವ್ಯಾಲಂಟೈನ್ ಯಾರಿಗೂ ನೆನಪಿಲ್ಲ ಈಗ. ಆತನ ತ್ಯಾಗ ಎಲ್ಲೋ ಮಾಯವಾಗೇ ಹೋಗಿದೆ. ಆತನ ಮಾತುಗಳು ಅರ್ಥ ಕಳೆದುಕೊಂದು ಬಿಟ್ಟಿವೆ, ಹೆಸರು ಮಾತ್ರಾ ಹಾಗೇ ಉಳಿದಿದೆ!.

ಹಮ್, ಈಗ ಇನ್ನು ನಾನು ಹೀಗೆಲ್ಲ ಹೇಳೋದ್ರಿಂದ, ಆಚರಣೆ ಏನ್ ಕಡ್ಮೆ ಆಗಲ್ಲ, ನಿಂತೂ ಹೋಗಲ್ಲ.. ಸುಮ್ ಸುಮ್ನೆ ಬುದ್ಧಿ ಹೇಳೋದ್ ಯಾಕೆ?..

ಆದ್ರೆ, ಪ್ರೇಮಿಗಳಾ ದಿನಾನ , ಸ್ವಲ್ಪ ಅರ್ಥಪೂರ್ಣವಾಗಿ ಆಚರಣೆ ಮಾಡೋಕೆ ನೋಡಿ. ದುಬಾರಿ ಗಿಫ್ಟುಗಳನ್ನೆಲ್ಲಾ ಕೊಡಲೇ ಬೇಕಾ? ಪ್ರೀತ್ಸೋ ಹೃದಯಕ್ಕೆ ಲಂಚ ಬೇಕಾಗಲ್ಲ ಅಂತ ಅನ್ಸತ್ತೆ! ಅರ್ಚೀಸು ಗ್ಯಾಲರಿಯ ಬೆಲೆಬಾಳುವ ಗ್ರೀಟಿಂಗ್ ಕಾರ್ಡಿಗಿಂತಾ, ಒಂದು ಪುಟ್ಟ ನವಿಲುಗರಿ ಮನಸ್ಸನ್ನ ಅರಳಿಸಬಲ್ಲದು, ಯಾವುದೋ ಪಬ್‌ನಲ್ಲಿ ಕುಣಿಯುವುದಕ್ಕಿಂತಾ, ಮರದ ನೆರಳಿನ ಕೆಳಗಿನ ಪಿಸುಮಾತು ಪ್ರೀತಿಪಾತ್ರರನ್ನ ಅರ್ಥ ಮಾಡಿಕೊಳ್ಳಲು ಸಹಕರಿಸಬಹುದು. ನರಸಿಂಹ ಸ್ವಾಮಿಯವರ ಗೀತೆಗಳದೋ, ಲಕ್ಷ್ಮಣರಾಯರ ಪ್ರೇಮ ಕವಿತೆಗಳ ಸಿ.ಡಿ ಯೋ, ದುಬಾರಿ ಶಾಪಿಂಗುಗಳಿಗಿಂತ ಬೆಲೆಬಾಳಬಹುದು! ಪ್ರೀತಿ ಬಗ್ಗೆ ಯಾರಾದ್ರೂ ಬರ್ದಿರೋ ಸೊಗಸಾದ ಪುಸ್ತಕ ಕೊಟ್ಟು ನೋಡಿ, ಅದು ನೀವು ಕೊಡೋ ಸುಗಂಧ ದ್ರವ್ಯಗಳಿಗಿಂತ ಹೆಚ್ಚು ಕಾಲ ಇರುತ್ತದೆ!

ಈ ಪ್ರೇಮದ ದಿನದ ಸಂಜೆ ನಿಮ್ಮ ನಲುಮೆಯ ಜೀವದ ಜೊತೆ, ಭುಜ ಆನಿಸಿ ಸುಮ್ಮನೆ ಕುಳಿತು ಮೌನದಲ್ಲೇ ಮಾತಾಡಿ. ನಿಮ್ಮ ಪ್ರೀತಿಯ ಜೀವ, ಬಾಳ ಮುಸ್ಸಂಜೆಯವರೆಗೂ ನಿಮ್ಮ ಜೊತೆ ಹೀಗೇ ಪಕ್ಕದಲ್ಲೇ ಇರಲಿ ಅಂತ ಆಶಿಸುತ್ತೇನೆ. . .

ಗುರುವಾರ, ಫೆಬ್ರವರಿ 08, 2007

ಹೀಗೊಂದು ಪ್ರವಾಸದ ಕಥೆ.

ಬಿದಿರ ಮಟ್ಟಿಗಳನ್ನ ದಾಟಿ ಅಲ್ಲಿಗೆ ಬಂದು ನಿಂತಾಗ , ನಡು ಮಧ್ಯಾಹ್ನ ೨ ಗಂಟೆ. ಹೊಳೆ ದಾಟಿ ಆ ಹಳ್ಳಿಗೆ ಹೋಗಬೇಕೆಂದರೆ ಗಂಟಲು ಹರಿದು ಹೋಗುವ ಥರಾ ಕಿರುಚಬೇಕು ಬೇರೆ. ಹೊಟ್ಟೆ ತುಂಬಾ ಊಟ ಆಗಿದ್ದರಿಂದ ಏನೂ ತೊಂದರೆ ಆಗಲಿಲ್ಲ! ಅರ್ಧ ತಾಸಿನ ಪ್ರಯತ್ನ, ನಾನೂ, ಅನಾ, ಡೀನು ಎಲ್ಲಾ ಬೇರೆ ಬೇರೆ ವಿಧಾನದಲ್ಲಿ ಕಿರುಚಿದೆವು! ಗೋವಿಂದ ರಾಜ್ ಅಂತೂ "ಮಾದಾ, ಕೆಂಚಾ" ಅಂತೆಲ್ಲ ಕರೆದರು, ಆ ಹೆಸರಿನವರು ಖಂಡಿತಾ ಅಲ್ಲಿರುತ್ತಾರೆ ಎಂಬ ಭರವಸೆಯಲ್ಲಿ. ಅಂತೂ ಮೊದಲಿಗೆ ದೂರದಲ್ಲೊಂದು ನಾಯಿ ಕಂಡಿತು, ನಾಯಿಯ ಬೆನ್ನ ಹಿಂದೇ ಮನುಷ್ಯಾಕೃತಿಯೂ ಬಂತು. ಆ ಆಕೃತಿಯ ಹೆಸರು ಕೃಷ್ಣ ಅಂತ ಆಮೇಲೆ ಗೊತ್ತಾಯ್ತು. ಆ ಜೀವ, ಆ ದಂಡೆಯಲ್ಲಿ ಕಟ್ಟಿದ್ದ ದೋಣಿಯೊಂದನ್ನು ಬಿಚ್ಚಿ, ಮೆಲ್ಲನೆ ನಮ್ಮ ತೀರದತ್ತ ಹುಟ್ಟು ಹಾಕತೊಡಗಿತು.


ಹಳೇ ಮರದ ದೋಣಿ ಅದು. ನಾವಾರೂ ಜನರೂ ಕಷ್ಟ ಪಟ್ಟು ಕೂತಾಯ್ತು. ಆತ ಹೇಳುತ್ತಿದ್ದ, "ನಮ್ಮರೇ ಆದ್ರೆ ೧೫ ಜನ ಹಾಕತ್ ನಾವ್" ಅಂತ! ಆ ಇರುಕಲು ದೋಣಿ ಅತ್ತಿತ್ತ ಸ್ವಲ್ಪ ಅಲುಗಾಡಿದರೂ ಇನ್ನೇನು ಮುಳುಗೇ ಹೋಗುತ್ತೇನೋ ಅನ್ನುವಷ್ಟು ವಾಲಾಡುತ್ತಿತ್ತು ಬೇರೆ. ಅಂತೂ ಇಂತೂ ಆ ದಡಕ್ಕೆ ಹೋಗಿ ಉಸಿರು ಬಿಟ್ಟಾಯ್ತು.

ಆಹ್! ಎಂತ ಸುಂದರ ತಾಣ ಇದು! ಸುತ್ತುವರಿದ ಗುಡ್ಡಗಳ ಮಧ್ಯೆ, ಒಂದು ಪುಟ್ಟ, ಶಾಂತ ಊರು. ಮೂವತ್ತು ಮನೆಗಳಿವೆ, ಹೆಚ್ಚೆಂದರೆ. ದೋಣಿ ಕೃಷ್ಣ ನಮಗೆ ದಾರಿ ತೋರಿಸಿದ, ಊರೊಳಗೆ ಹೋಗಲು. ಮುಳುಗಡೆ ಊರಲ್ಲಿ ಬದುಕುವ ಕಷ್ಟಗಳ ಬಗ್ಗೂ ಹೇಳಿದ. 'ಒಂದ್ ಕಟ್ ಬೀಡಿಗೆ ೧೦ ಕಿಲೋಮೀಟರ್ ನಡೀಬೇಕು" ಅನ್ನೋದು ಅವನ ಬೇಜಾರು.ಮೂರು ಸುತ್ತಲೂ ನೀರು, ಇನ್ನೊಂದು ಕಡೆ ನಿರ್ಭಂದಿತ ಪ್ರದೇಶ. ೨ ದಿನಗಳ ಪ್ರವಾಸಕ್ಕೆ ಹೋಗುವ ನಮಗೆ ಬಹಳ ಸಂತಸ ತರುವ ತಾಣ ಇದು.. ಎಲ್ಲೇ ಕಣ್ಣು ಹಾಯಿಸಿದರೂ ಹಸಿರು, ಹರಿಯೋ ನೀರು, ದನ ಕರು, ಗದ್ದೆ.. ಒಳ್ಳೇ ಕಥೆಗಳಲ್ಲಿ ಬರುವ ಊರಿನಂತೇ ಇದೆ . ಆದರೆ ಪಾಪ, ಅಲ್ಲಿರುವವರ ಪಾಡು ಹೇಳ ತೀರದು. ಏನೇ ಬೇಕಾದರೂ ಕಿಲೋಮೀಟರುಗಟ್ಟಲೇ ನಡೀಬೇಕು. ಇನ್ನು ಹೆಚ್ಚು ದಿನ ಇಲ್ಲ ಅವರ ಕಷ್ಟ, ಅದು ಬೇರೆ ವಿಚಾರ.

ನಮ್ಮನ್ನ ಆ ಊರಿನ ವ್ಯಕಿಯೊಬ್ಬರು ಅಲ್ಲೇ ಇರುವ ಜಲಪಾತದ ಕಡೆಗೆ ಹೋಗಲು ಸಹಕರಿಸಿದರು. ಅವರ ಸಂಬಂಧಿಕರ ಮನೆಯಲ್ಲೇ ನಮ್ಮ ಬ್ಯಾಗುಗಳನ್ನ ಇಟ್ಟು ಜಲಪಾತದ ಕಡೆ ಹೊರಟದ್ದಾಯಿತು ನೀರು ಕುಡಿದು, ದಣಿವಾರಿಸಿಕೊಂಡು. ಪ್ರಕೃತಿ ಇಲ್ಲೇ ಮನೆ ಮಾಡಿದ್ದಾಳೆ, ತನ್ನ ಸಂಸಾರ ಸಮೇತ. ಯಾಕೋ ಒಂದು ನಿಗೂಢತೆ ಇದೆ ಈ ಜಾಗದಲ್ಲಿ ಅಂತ ನನಗನ್ನಿಸಿತು. ದಟ್ಟ ಕಾಡು, ಆದರೂ ಜಲಪಾತಕ್ಕೆ ಸಾಗುವ ದಾರಿ ಸುಗಮವಾಗೇ ಇದೆ.ಅರುಣ, ಸುಬ್ಬಿ ಮತ್ತೆ ಗೋವಿಂದ ರಾಜು ಹಿಂದೇ ಉಳಿದರು. ಗೋವಿಂದ ರಾಜು ವಾರ್ನಿಂಗು ಬೇರೆ, "come back, ಲೇಟ್ ಆದ್ರೆ ಕಷ್ಟ" ಅಂತ. ಅವರ ಬಳಿ ಆಯ್ತು ಸಾರ್ ಅಂತಲೇ ಹೇಳಿ ಮುನ್ನಡೆದದ್ದಾಯ್ತು, ನಾನು, ಡೀನು, ಅನಾ. ಜಲಪಾತದ ಪಾತ್ರದಲ್ಲೇ ಸಾಗಬೇಕು, ಪೂರ್ಣ ಪ್ರಮಾಣದ ಜಲಪಾತವನ್ನ ನೋಡಲು. ನಡು ನಡುವೆ ಪುಟ್ಟ ಪುಟ್ಟ ಮಡುಗಳು, ಝರಿಗಳು ಬೇರೆ.


ಜಲಪಾತ ಸಂಪೂರ್ಣ ಕಾಣುವವರೆಗೂ ತೆರಳಿ , ಚಿತ್ರಗಳನ್ನ ತೆಗೆದು, ಒಲ್ಲದ ಮನಸ್ಸಿನಿಂದ ಹಿಂದೆ ಬಂದು, ಸ್ನಾನದ ಶಾಸ್ತ್ರ ಮಾಡಿ ಮರಳಿ ಊರಿಗೆ ಬಂದದ್ದಾಯ್ತು. ಸಂಜೆಗತ್ತಲಲ್ಲಿ ಸಹೃದಯರೊಬ್ಬರ ಮನೆ ಅಂಗಳದಲ್ಲಿ ಕೂತು ಹರಟಿದ್ದಾಯ್ತು. ಸಂಪೂರ್ಣ ಶಾಂತ, ಈ ಪರಿಸರ. ಪ್ರಾಯಶ: ನಮ್ಮ ಗಲಾಟೆ ಇತರರಿಗೆ ಭಂಗ ತರುತ್ತಿತ್ತೋ ಏನೋ!. ನಾನೂ, ಡೀನು ಮನೆಯಿಂದ ಹೊರಟು ಹೊರಗಿನ ಗದ್ದೆ ಬಯಲಲ್ಲಿ ತಿರುಗಾಡುತ್ತಿದ್ದೆವು.. ಹೀಗೇ ಮಾತಾಡುತ್ತಾ ಮೇಲೆ ನೋಡಿದರೆ, ಬೆಟ್ಟವೊಂದರ ಮರೆಯಿಂದ ಮೂಡುತ್ತಿರುವ ಬೆಳ್ಳಿ ಚಂದ್ರ!. ನನ್ನ ಜೀವನ ಅತ್ಯಂತ ಸುಂದರ ಚಂದ್ರೋದಯ ಅದು. ಡೀನ್ ಖುಷಿಯಲ್ಲಿ ಹೇಳುತ್ತಿದ್ದರು " ಹೋದ ವರ್ಷ ನನ್ನ ಹುಟ್ಟಿದ ಹಬ್ಬಕ್ಕೂ ಇಂತಹುದೇ ಚಂದ್ರೋದಯ ನೋಡಿದೆ" ಅಂತ.

ಚಂದಿರನ ಬೆಳಕಲ್ಲಿ ಎಲ್ಲ ಕೂತು ಹರಟಿ, ಸೊಗಸಾದ ಊಟವನ್ನೂ ಮುಗಿಸಿ ಮಲಗಿದೆವು, ಗೋವಿಂದರಾಜರ ಗೊರಕೆಯ ಹಿಮ್ಮೇಳದ ಜೊತೆ! ಅವರ ಗೊರಕೆ ನಿಲ್ಲಿಸಲು ನಾನು ಏನೆನೆಲ್ಲ ಪ್ರಯತ್ನ ಮಾಡಿದೆ, ಆದರೆ ಯಶಸ್ವಿಯಾಗಲಿಲ್ಲ.

ಬೆಳಗ್ಗೆದ್ದು ನೋಡಿದರೆ ಅನಾ, ಗದ್ದೆ ಬದುವಿನ ಕೂತು, ಯಾವುದೋ ಒಂದು ಬೆಟ್ಟವನ್ನೇ ದಿಟ್ಟಿಸುತ್ತಿದಳು. ( ಯಾವುದೋ ಒಂದು ಅಂತ ಯಾಕೆ ಅಂದೆ ಅಂದ್ರೆ, ಇಲ್ಲಿ ಸುತ್ತಲೂ ಬೆಟ್ಟಗಳೇ ಇರೋದು)ಏನು ನೋಡುತ್ತಿದ್ದೀಯಾ ಅಂದಿದ್ದಕ್ಕೆ, "ಹಂತ ಹಂತವಾಗಿ ಬೆಳಗಾಗುವದನ್ನ ನೋಡ್ತಾ ಇದೀನಿ, ನಿಧಾನವಾಗಿ ಬೆಳಗಾಗ್ತಾ ಇದೆ".. ಅಂತೆಲ್ಲ ಏನೋ ಅಂದಳು. ನಾನೂ ಸ್ವಲ ಹೊತ್ತು ಕೂತು ಅದನ್ನ ನೋಡಿ, ಮತ್ತೆ ಬಂದು ಮಲಗಿದೆ. ಸ್ವಲ್ಪ ಹೊತ್ತಿಗೇ ಸ್ಲೀಪಿಂಗ್ ಬ್ಯಾಗುಗಳಿಂದ ಎಲ್ಲ ಜೀವಿಗಳೂ ಹೊರ ಬಂದವು.
ಉಪಹಾರಕ್ಕೆ ಭರ್ಜರಿ ನೀರುದೋಸೆ. ಎಂದೂ ಹಾಲು ಹಾಕಿ ಮಾಡಿದ ದ್ರವ ಪದಾರ್ಥ ಕುಡಿಯದ ಡೀನ್, ಇಲ್ಲಿ ಕಷಾಯ ಕುಡಿದುಬಿಟ್ಟರು.ಆ ಹಿರಿಯರು ನಮಗೆ ಆ ಊರಿನ ದೇವಸ್ಥಾನ ತೋರಿಸುತ್ತೇನೆ ಅಂತ ಅಂದಿದ್ದರು. ಮನೆಯೊಡತಿಗೆ ವಂದನೆ ಸಲ್ಲಿಸಿ, ಅಲ್ಲಿಂದ ಗಂಟು ಮೂಟೆ ಕಟ್ಟಿ ಹೊರಟಿದ್ದಾಯ್ತು.
ಜಲಪಾತದಿಂದಲೇ ಬರುವ ಹಳ್ಳ ದಾಟಿ, ದೇವಸ್ಥಾನಕ್ಕೆ ಬಂದೆವು.


ಸಣ್ಣ ಅಂದ್ರೆ ಸಣ್ಣ ದೇವಸ್ಥಾನ ಇದು. ಗರ್ಭಗುಡಿಯಲ್ಲಿರುವ ಲಿಂಗ ರಾಮಲಿಂಗೇಶ್ವರನದು. ರಾಮ- ಸೀತೆ ಇಲ್ಲಿ ಲಿಂಗ ಸ್ಥಾಪನೆ ಮಾಡಿದರೆಂದೂ, ನಂತರ ಪಾಂಡವರು ಈ ದೇವಸ್ಥಾನ ಕಟ್ಟಿದರೆಂದೂ ಊರವರು ಐತಿಹ್ಯ ಹೇಳುತ್ತಾರೆ.ಹೊರಗಡೆ ಒರಟು ಕಲ್ಲಿನಂತೆ ಕಂಡರೂ ಗರ್ಭಗುಡಿಯ ಒಳಮೈ ನುಣುಪಾಗಿದೆ. ಈ ಕುಗ್ರಾಮದಲ್ಲಿರುವ ದೇವಳವೂ, ಪರಕೀಯರ ಆಕ್ರಮಣಕ್ಕೆ ತುತ್ತಾಗಿದ್ದು ಸ್ಪಷ್ಟವಿದೆ. ಅಂಗಳದಲ್ಲಿನ ನಂದಿ, ಗರ್ಭಗುಡಿಯ ಹೊರಗಿರುವ ಪಾರ್ವತಿ(?) ಯ ವಿಗ್ರಹಗಳು ದುರುಳರ ಹೊಡೆತಕ್ಕೆ ಸಿಕ್ಕಿವೆ.

ಇಲ್ಲಿನ ದೇವಳದ ಆವರಣದಲ್ಲಿ ವೀರಗಲ್ಲುಗಳೂ ಇವೆ. ಆ ವೀರಗಲ್ಲುಗಳ ಬಗ್ಗೆ ಸರಿಯಾದ ಮಾಹಿತಿ ನಮಗೆ ಸಿಗಲಿಲ್ಲ.
ಇನ್ನು ವಾರ ಬಿಟ್ಟರೆ, ಅಲ್ಲಿನ ದೇವರಿಗೆ ಜಾತ್ರೆಯ ಸಂಭ್ರಮ. ನಾಲ್ಕಾರು ಜನ ಸೇರಿ ದೇವಸ್ಥಾನದ ಆವರಣವನ್ನು ಸಗಣಿ ಸಾರಿಸಿ ಶುಚಿ ಮಾಡುತ್ತಿದ್ದರು. ಒಬ್ಬ ಸಣ್ಣ ಹುಡುಗ,ನಾನು ಫೋಟೋ ತೆಗೆಯುದನ್ನೇ ಕುತೂಹಲದಿಂದ ನೋಡುತ್ತಿದ್ದ. ಅವನ ತಂಗಿಯನ್ನೂ ಕರೆತಂದು ತೋರಿಸಿದ. ಅವನ ಫೋಟೋ ತೆಗೆದು ತೋರಿಸಿದೆ. ಇಷ್ಟಗಲ ಬಾಯಿ ಬಿಟ್ಟು ನಕ್ಕ.


ನಮ್ಮ ಜೊತೆ ಬಂದವರು ಅಲ್ಲಿಂದ ನಾವು ಹೇಗೆ ಮುಂದುವರಿಯಬೇಕು ಅಂತ ದಾರಿ ತೋರಿಸಿದರು. ಅವರಿಗೆ ಮನ:ಪೂರ್ವಕ ಕೃತಜ್ಞತೆಗಳನ್ನ ತಿಳಿಸಿ, ಭಾರ ಬ್ಯಾಗುಗಳ ಜೊತೆ, ಅಲ್ಲೇ ಕೂತಿದ್ದ ನಮ್ಮ ಭಾರ ಮನಸ್ಸುಗಳನ್ನು ಹಠ ಮಾಡಿ ಎಬ್ಬಿಸಿ ಕರೆದುಕೊಂಡು ಹೊರಟೆವು, ಕಳೆದ ದಿನವನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಾ..