ಶನಿವಾರ, ಫೆಬ್ರವರಿ 08, 2014

ಸೀರಿಯಲ್ ಸಮಾಚಾರ


ಐವತ್ತರ ಹರೆಯದ ಪದ್ಮಾವತಮ್ಮನವರಿಗೆ ಮಂಡಿ ನೋವು ಆರಂಭವಾಗಿ ಡಾಕ್ಟರ್ ಹೆಚ್ಚಿಗೆ ಓಡಾಡಬೇಡಿ ಅಂದಿದ್ದೇ, ಅವರ ಸೀರಿಯಲ್‌ ನೋಡುವ ಚಟಕ್ಕೆ ಕಾರಣವಾಯಿತು ಎನ್ನುವುದು ಅವರ ಯಜಮಾನರಾದ ಜಗನ್ನಾಥರಾಯರ ಅಭಿಪ್ರಾಯ. ಹೆಚ್ಚು ಓಡಾಟ ಸಾಧ್ಯವಾಗದ ಕಾರಣ, ಪದ್ದಮ್ಮನವರು ಕಳೆದ ನಾಲ್ಕು ವರ್ಷಗಳಿಂದ ಸಂಜೆ ಆರುಗಂಟೆಯಿಂದ ರಾತ್ರಿ ಹತ್ತೂವರೆಯವರೆಗೆ ಸೀರಿಯಲ್‌ ನೋಡುವುದನ್ನ ಅಭ್ಯಾಸ ಮಾಡಿಕೊಂಡಿದ್ದಾರೆ. ಸಂಜೆ ಆರಕ್ಕೆ ಆಕೆ ಸೋಫಾರೂಢರಾಗಿ ಕುಳಿತರೆಂದರೆ, ಬ್ರೇಕು ಬಂದಾಗ ಮಾತ್ರ ಒಮ್ಮೊಮ್ಮೆ ಎದ್ದು ಹೋಗುವುದಷ್ಟೇ, ಅದೂ ಅಗತ್ಯ ಬಿದ್ದರೆ ಮಾತ್ರ. ಕನ್ನಡನಾಡಿನ  ಸಮಸ್ತ ಟೀವಿ ವಾಹಿನಿಗಳಲ್ಲಿ ಬರುವ ಎಲ್ಲ ಸೀರಿಯಲ್ಲುಗಳನ್ನೂ ಅವರು ಕಳೆದ ಈ ನಾಲ್ಕು ವರ್ಷದ ಅವಧಿಯಲ್ಲಿ ವೀಕ್ಷಿಸಿ ಕೃತಾರ್ಥರಾಗಿದ್ದಾರೆ. ದಿನಕ್ಕೆ ಸುಮಾರು ಎಂಟು ಹತ್ತು ಧಾರಾವಾಹಿಗಳನ್ನು ಪದ್ದಮ್ಮ ಎಡೆಬಿಡದೆ ನೋಡುವುದು ಅವರ ಯಜಮಾನರ ಕ್ರಿಕೆಟ್‌ ಮತ್ತು ಸುದ್ದಿ ಪ್ರೇಮಕ್ಕೆ ಕತ್ತರಿ ಹಾಕಿದೆ.

ಪದ್ಮಾವತಮ್ಮನವರು ಸಂಜೆ ಆರರ ಮೇಲೆ ಯಾರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ""ಯಾರೋ ಗೆಸ್ಟ್‌ ಬರ್ತಾರೆ ಕಣ್ರೀ ರಾತ್ರೆಗೆ, ಏನಾರೂ ಸ್ಪೆಷಲ್‌ ಮಾಡ್ಬೇಕು' ಎನ್ನುವ ಹಸೀ ಸುಳ್ಳನ್ನ ಪಕ್ಕದ ಮನೆ ಕಲ್ಯಾಣಿಗೆ ಏನಿಲ್ಲವೆಂದರೂ ನೂರಕ್ಕೂ ಹೆಚ್ಚು ಬಾರಿ ಹೇಳಿರುವುದರಿಂದ ಆಕೆ ಈಗೀಗ ಸಂಜೆ ಹೊತ್ತಿಗೆ ಅವರನ್ನ ಮಾತಾಡಿಸೋದೆ ಬಿಟ್ಟುಬಿಟ್ಟಿದ್ದಾಳೆ. ಯಾರದೇ ಫೋನು ಬಂದರೂ ಕೂಡ, ಮುಲಾಜಿಲ್ಲದೆ ನಿಮಿಷದೊಳಗೆ ವಿಷಯ ಮುಗಿಸಿ, ""ಮತ್ತೆ ಮಾತಾಡಣ ಆಯ್ತಾ' ಅನ್ನುವ ಕಲೆಯೂ ಸಿದ್ದಿಸಿಬಿಟ್ಟಿದೆ.

ಮನೆಯ ಫೋನ್‌ ಬಿಲ್ಲು ಗಣನೀಯವಾಗಿ ಕಡಿಮೆಯಾಗಿರುವುದೊಂದೇ, ಜಗನ್ನಾಥರಾಯರಿಗೆ ಇರುವ ಸಮಾಧಾನ. ತನ್ನ ಹೆಂಡತಿ ಭಲೇ ಘಟವಾಣಿ ಅಂದುಕೊಂಡಿದ್ದ ರಾಯರು, ಅವಳು ಈಗೀಗ ಸೀರಿಯಲ್‌ ನೋಡಿ ಕಣ್ಣೀರು ಹಾಕುವುದನ್ನ ಕಂಡು ಭಾರಿ ಗೊಂದಲಕ್ಕೂ ಒಳಗಾಗಿದ್ದಾರೆ. ಒಂದು ಬಾರಿ ಅದನ್ನ ಕೇಳಿದ್ದಕ್ಕೆ,"ನಿಮಗೇನು ಗೊತ್ತಾಗತ್ತೆ ಹೆಂಗಸರ ಸಂಕಟ. ನೋಡಿ ಪಾಪ ವಿಶಾಲು, ಹೆತ್ತು ಹೊತ್ತು ಸಾಕಿದ ಮಗಳನ್ನ ಮದುವೆ ಮಾಡಿ ಕಳಿಸಿ ಕೊಡ್ತಿದಾಳೆ ಗೊತ್ತಾ.. ಇನ್‌ ಮೇಲೆ ಅವಳ ಮಗಳು ಬೊಂಬಾಯಿಗೆ ಹೋಗ್ತಾಳಂತೆ.. ಪಾಪ, ಅದನ್ನ ನೆನಸಿಕೊಂಡು ಅಳು ಬಂತು' ಅಂದರು. ""ಅಲ್ವೇ ಮಾರಾಯ್ತಿ, ನಿನ್ನ ಮಗಳನ್ನ ಮದುವೆ ಮಾಡಿ ಕೊಟ್ಟ ದಿನವೇ ನೀನು ಕಣ್ಣೀರು ಹಾಕಿದವಳಲ್ಲ, ಅದೂ ಅಲ್ಲದೇ ಅವಳು ಹೋದ ವರ್ಷ ಇಂಗ್ಲೆಂಡ್‌ಗೆ ಹೋದಾವಾಗಲೂ ತಲೆ ಕೆಡಿಸಿಕೊಂಡವಳಲ್ಲ, ಈಗ ಧಾರಾವಾಹಿ ನೋಡ್ಕಂಡು ಯಾಕೆ ಹೀಗೆ' ಅಂತ ರಾಯರು ಹೇಳಿದ್ದಕ್ಕೆ ""ನೋಡ್ರೀ, ನಮ್ಮ ಸನ್ನಿವೇಶವೇ ಬೇರೆ, ನಮಗೇನೂ ಕೊರತೆ ಇಲ್ಲ..ವಿಶಾಲು ಕಥೆಯೇ ಬೇರೆ, ಅವಳ ಗಂಡ ಮೊದಲೇ ಸರಿ ಇಲ್ಲ.. ಮನೆಗೆ ಆದಾಯವೂ ಇಲ್ಲ.. ಇಷ್ಟ್ ದಿನ ಮಗಳು ಇದ್ಲು, ಇನ್‌ ಮೇಲೆ ಅವಳೂ ಇಲ್ಲ ಗೊತ್ತಾ' ಎಂದು ಛಾಯಾವಾಸ್ತವವನ್ನೂ ತಮ್ಮ ಜೀವನವನ್ನೂ ಬೆರೆಸಿ ಕನ್ಫ್ಯೂಸ್ ಮಾಡಿದ್ದರು !

ಆದರೆ ಪದ್ದಮ್ಮನವರ ನೆನಪಿನ ಶಕ್ತಿ ಟೀವೀ ಸೀರಿಯಲ್ಲು ನೋಡಲು ಶುರುವಾದ ಮೇಲೆ ವೃದ್ಧಿಸಿದೆ ಎನ್ನುವುದು ರಾಯರ ಅಭಿಮತ. ಎಲ್ಲ ಸೀರಿಯಲ್ಲುಗಳ ಎಲ್ಲ ಪಾತ್ರಗಳು ಮತ್ತು ಅವುಗಳ ನಡುವಿನ ಸಂಬಂಧಗಳು, ಕತೆಗಳ ಅಮೋಘ ತಿರುವುಗಳು ಎಲ್ಲ ಅವರಿಗೆ ಬಾಯಿಪಾಠವೇ ಆಗಿ ಹೋಗಿದೆ. ಯಾವ ಯಾವ ಧಾರಾವಾಹಿಯ ಯಾವ್ಯಾವ ನಾದಿನಿ ಅತ್ತಿಗೆ ಅತ್ತೆ ಸೊಸೆ ಮಾವ ಅಳಿಯ ಚಿಕ್ಕಪ್ಪನ ಮಗ ಮತ್ತು ಸೋದರಮಾವನ ಮಗಳು ಆವತ್ತು ಏನೇನು ಮಾಡಿದರು, ನಿನ್ನೆ ಏನು ಮಾಡಿದ್ದರು, ನಾಳೆ ಏನು ಮಾಡಲಿದ್ದಾರೆ ಎಂಬುದು ಪದ್ದಮ್ಮನಿಗೆ ಕರಾರುವಾಕ್ಕಾಗಿ ನೆನಪಿರುತ್ತದೆ. ಮದುವೆಯಾಗಿ ನಾಲ್ಕೆಂಟು ವರುಷ ಕಳೆದ ಮೇಲೂ ತಮ್ಮ ತಂಗಿಯ ಮಗಳ ಹೆಸರು ಸರಿಯಾಗಿ ನೆನಪಿರದ ಹೆಂಡತಿಗೆ, ಅದು ಹೇಗೆ ಇಷ್ಟೊಂದು ಶತನಾಮಾವಳಿಗಳು ಬಾಯಲ್ಲೇ ಇವೆ ಎಂಬುದು ರಾಯರಿಗೆ ನಿತ್ಯ ಸೋಜಿಗದ ಸಂಗತಿ.
ಆದರೆ, ಅವರು ಈ ವಿಷಯವನ್ನು ಹೆಂಡತಿಯ ಬಳಿ ಖಂಡಿತವಾಗಿಯೂ ಪ್ರಸ್ತಾಪಿಸದೆ ಮನೆಯ ಮನಃಶಾಂತಿಯನ್ನು ಕಾಯ್ದುಕೊಂಡಿದ್ದಾರೆ. ಆದರೆ ಕೆಲ ಬಾರಿ ಪದ್ದಮ್ಮ ಮಧ್ಯಾಹ್ನ ಊಟಕ್ಕೆ ಕೂತಾಗಲೋ, ಸಂಜೆ ಚಹದ ಜೊತೆಗೋ ಹಿಂದಿನ ದಿನ ಸೀರಿಯಲ್ಲುಗಳ ರಿಕ್ಯಾಪು ಮಾಡುವುದಿದೆ. ಅಪ್ಪಿ ತಪ್ಪಿ ಕೆಲ ಬಾರಿ ರಾಯರೂ ಆ ಸೀರಿಯಲ್ಲು ನೋಡಿರುತ್ತಾರೆ. ""ನೋಡಿ, ಆ ಕುಸುಮಾ ಇದಾಳಲ್ಲ, ಅವಳ ಅಣ್ಣ ಮಗ ಮಯೂರನಿಗೂ, ಮೈತ್ರಿಯ ತಂಗಿ ಚೈತ್ರಂಗೂ ಲವ್ವು ಶುರುವಾಗಿದೆ, ಅದನ್ನ ಕುಸುಮಳ ನಾದಿನಿ ಸುಮ ತಪ್ಸೋಕೆ ಹೊರಟಿದಾಳಲ್ಲ ಇದು ನ್ಯಾಯಾನಾ? ಸುಮಂಗೆ ಮೈತ್ರಿಯ ಮಾವನ ಮೇಲೆ ಸಿಟ್ಟಿದ್ರೆ ಅದನ್ನ ಚೈತ್ರನ ಮೇಲೆ ಯಾಕೆ ತೀರಿಸಿಕೊಳ್ಳಬೇಕು, ನೀವೇನಂತೀರಿ' ಎಂದು ಪ್ರಶ್ನೆ ಕೇಳಿ ಬಿಡುತ್ತಾರೆ. ಅಲ್ಲಿಯ ತನಕ ಸುಮ್ಮನೆ ಹೆಂಡತಿಯ ಬಾಯಿಯ ಚಲನೆಯನ್ನ ಮಾತ್ರ ಗಮನಿಸುತ್ತಿದ್ದ ರಾಯರಿಗೆ, ಒಮ್ಮೆಗೇ ಕುಡಿಯುತ್ತಿದ್ದ ಚಹಾ ನೆತ್ತಿಗೇರಿ ಕೆಮ್ಮಿನ ಮೇಲೆ ಕೆಮ್ಮು ಬಂದು ಬಿಡುತ್ತದೆ.  ಕೆಮ್ಮಿನ ಉಪಚಾರದ ನಡುವೆ ಸೀರಿಯಲ್‌ನ ಸಂಬಂಧಗಳ ತಂತು ಕಡಿದು ಹೋಗಿ, ರಾಯರು ನಿಟ್ಟುಸಿರು ಬಿಡುತ್ತಾರೆ.

ಪದ್ದಮ್ಮನ ಇದ್ದೊಬ್ಬ ಮಗಳು ಈಗ ಲಂಡನ್‌ನಲ್ಲಿ ಗಂಡನ ಜೊತೆಗಿದ್ದಾಳೆ, ಎರಡು ಮೂರು ದಿನಕ್ಕೊಮ್ಮೆಯಾದರೂ ಮನೆಗೆ ಫೋನು ಮಾಡುತ್ತಾಳೆ. ಅವಳ ಬಳಿ ಕೂಡ ಚುಟುಕಾಗಿಯಾದರೂ ತಾನು ನೋಡುವ ಅಷ್ಟು ಸೀರಿಯಲ್ಲುಗಳಲ್ಲಿನ ಟಾಪ್‌ಒನ್‌ ಧಾರಾವಾಹಿಯ ಒಟ್ಟು ಸಾರಾಂಶವನ್ನು ಹೇಳದಿದ್ದರೆ ಪದ್ದಮ್ಮನವರಿಗೆ ನೆಮ್ಮದಿ ಇರುತ್ತಿರಲಿಲ್ಲ. ""ನೋಡು ಸ್ನೇಹಾ, ಮೊನ್ನೆ ನಿಂಗೆ ಹೇಳಿದೆನಲ್ಲ, ಪವಿತ್ರ ಮನೆ ಬಿಟ್ಟು ಹೋದ್ಲು ಅಂತ, ಅವಳು ಈಗ ಒಂದು ಆಶ್ರಮ ಸೇರಿಕೊಂಡಿದಾಳೆ, ಅಲ್ಲಿನ ಸ್ವಾಮೀಜಿಗಳು ನಿಜಕ್ಕೂ ಒಳ್ಳೇಯವರು ಕಣೇ.. ಪಾಪ ಅವಳನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ' ಎಂದೆಲ್ಲ ಅಕ್ಕರಾಸ್ಥೆಯಿಂದ ಕಥೆ ಹೇಳುತ್ತಿದ್ದರು. ಇಂಟರ್‌ ನ್ಯಾಷನಲ್‌ ಕಾಲ್‌ ನ ಕರೆನ್ಸಿ ಕಥೆಯಿಂದಾಗಿ ಸುಡುತ್ತಿರುವುದನ್ನು ಕಂಡ ಮಗಳು ಸ್ನೇಹಾ, ನೋಡುವಷ್ಟು ದಿನ ನೋಡಿ ಕೊನೆಗೊಂದಿನ, ""ಅಮ್ಮಾ, ನಾನೂ ಈಗ ಯೂ ಟ್ಯೂಬಲ್ಲಿ ಆ ಸೀರಿಯಲ್‌ ದಿನಾ ನೋಡ್ತೀನಿ, ಇಂಟರ್ನೆಟ್ಟಿಗೂ ಹಾಕ್ತಾರೆ'ಎಂದು ಸುಳ್ಳು ಹೇಳಿ ತಪ್ಪಿಸಿಕೊಂಡಳು. ಆದರೂ ಆಗಲೊಮ್ಮೆ ಈಗಲೊಮ್ಮೆ ಪದ್ದಮ್ಮ ಕ್ರಾಸ್‌ ಚೆಕ್‌ ಮಾಡದೇ ಬಿಡುವುದಿಲ್ಲ. ಆವತ್ತು ಅಚಾನಕ್ಕಾಗಿ ಕಾಲ್‌ ಡಿಸ್ಕನೆಕ್ಟ್ ಆಗುತ್ತದೆ.

ಮೊದಮೊದಲು ಪದ್ದಮ್ಮ ಗುರುವಾರ, ಶುಕ್ರವಾರ ಅಂತಲಾದರೂ ದೇವಿ ದೇವಸ್ಥಾನಕ್ಕೋ, ರಾಯರ ಮಠಕ್ಕೋ ಹೋಗುತ್ತಿದ್ದರು. ಆದರೆ ಯಾವಾಗ ಟೀವೀಲೇ ದೇವರ ಸೀರಿಯಲ್ಲುಗಳು ಶುರುವಾದವೋ, ಅದಕ್ಕೂ ಅವರು ತಿಲಾಂಜಲಿ ಇಟ್ಟುಬಿಟ್ಟಿದ್ದಾರೆ. "ಮನೆಲೇ ನಡೆದಾಡೋ ದೇವರು ಕಾಣುವಾಗ ಕಲ್ಲು ದೇವರನ್ನ ಕಂಡು ಏನು ಪ್ರಯೋಜನ" ಎಂಬ ಪದ್ದಮ್ಮನ ಪ್ರಚಂಡ ಫಿಲಾಸಫಿ ಕೇಳಿದ ರಾಯರು ಮಾತೇ ಬಾರದಂತಾಗಿ ಬಿಟ್ಟಿದ್ದರು. ದೇವರು ಸೀರಿಯಲ್ಲಿನ ಬರುವ ಡಿಸೈನರ್‌ ಸೀರೆಗಳ ಬಗ್ಗೆ ಆಕೆಗೆ ಅಸಮಾಧಾನ ಇದ್ದರೂ ಕೂಡ, ದೇವರುಗಳ ಬಗ್ಗೆ ಎದುರು ಮಾತನಾಡಬಾರದು ಎಂಬ ಕಾರಣಕ್ಕೆ ಸುಮ್ಮನಿರುತ್ತಾರೆ. ಆದರೆ ಅದರ ಮಧ್ಯಕ್ಕೆ ತುರುಕುವ ಜಾಹೀರಾತುಗಳನ್ನು ಮಾತ್ರ ಆಕೆ, "ಇನ್ನೇನು ದೇವಿ ಶಾಪ ಕೊಡೋಕೆ ಹೊರಟಿದ್ದಳು, ಆವಾಗಲೇ ಇವರಿಗೆ ತುಂಡು ಬಟ್ಟೆ ಹುಡುಗೀರ ಅಡ್ವಟೇಜು ತೋರಿಸಬೇಕು, ದರಿದ್ರ' ಎಂದು ಬೈದೇ ಬೈಯುತ್ತಾರೆ. " ಸೀರಿಯಲ್ಲು ಮುಗಿದ ಮೇಲೆ ಎಲ್ಲ ಅಡ್ವಟೇಜನ್ನ ಒಟ್ಟಿಗೇ ಹಾಕಬೋದಪ್ಪ" ಎಂಬ ಅವರ ಸಲಹೆಯನ್ನೂ ಇವತ್ತಿನ ತನಕ ಯಾವ ಚಾನಲಿನವರೂ ಸ್ವೀಕರಿಸಿಲ್ಲ.

ಕನ್ನಡದ ಸೀರಿಯಲ್ಲುಗಳನ್ನೇ ಸಾಲು ಸಾಲಾಗಿ ನೋಡುತ್ತಿದ್ದ ಪದ್ದಮ್ಮನವರಿಗೆ ಕೊಂಚ ದಿನ ಇದು ಬೇಜಾರು ಬಂದು ಹಿಂದಿ ಸೀರಿಯಲ್ಲುಗಳನ್ನ ನೋಡುವ ಪ್ರಯತ್ನ ಮಾಡಿದ್ದೂ ಉಂಟು. ಅಲ್ಲಿನ ಸೀರಿಯಲ್ಲುಗಳಲ್ಲಿ ಹೆಂಗಸರು ಹಾಕುವ ಬಗೆ ಬಗೆಯ ಆಭರಣಗಳು, ಝಗಮಗ ಮಹಲುಗಳನ್ನು ನೋಡಿ ಅವರಿಗೆ ಆನಂದವಾದರೂ, ಆ ಭಾಷೆ ಸರಿಯಾಗಿ ಅರ್ಥವಾಗದೇ ಮರಳಿ ಮಣ್ಣಿಗೇ ಅವರು ಶರಣಾಗಬೇಕಾಯಿತು. ""ಹಿಂದೀ ಸೀರಿಯಲಲ್ಲಿ ಮಾತಿಗಿಂತ ಜಾಸ್ತಿ ಕಿವಿ ಕೊಯ್ಯುವ ಮ್ಯೂಸಿಕ್ಕು ಹಾಕಿ ಸುಖಾ ಸುಮ್ಮನೆ ಎಲ್ಲರ ಮುಖಾನೇ ತೋರುಸ್ತಾರೆ ಕಣ್ರೀ.. ಯಾರೋ ಏನೋ ಅನ್ನೋದು, ಅದಕ್ಕೆ ಎಲ್ಲರೂ ಶಾಕ್‌ ಆಗಿ ನಿಲ್ಲೋದು, ಆಮೇಲೆ ಒಬ್ಬರಾದ ಮೇಲೆ ಒಬ್ಬರ ಮುಖಾನೆ ಮೇಲಿಂದ ಮೇಲೆ ತೋರಿಸೋದು, ಕಥೆನೆ ಓಡದಿಲ್ಲ ಅದ್ರಲ್ಲಿ, ನಮ್‌ ಭಾಷೆನೆ ನಮಗೆ ವಾಸಿ' ಎಂದು ನೆರೆಮನೆ ಕಲ್ಯಾಣಿಗೂ ಹೇಳಿ ಆಕೆಯೂ ಕೂಡ ಹಿಂದಿ ಸೀರಿಯಲ್‌ ನೋಡದಂತೆ ಮಾಡಿದಾರೆ ಪದ್ದಮ್ಮ. ಅವರ ಈ ಕನ್ನಡಾಭಿಮಾನ ಬೆಳೆಸುವ ಕಾರ್ಯವನ್ನು ಯಾವ ಕನ್ನಡ ಪರ ಸಂಘಟನೆಗಳೂ ಗಮನಿಸಿಲ್ಲ.

ಪದ್ದಮ್ಮನ ಸೀರಿಯಲ್‌ನ ವೀಕ್ಷಣೆಯನ್ನ ತಪ್ಪಿಸೋಕೆ ಯಾರಿಂದಲೂ ಸಾಧ್ಯವಾಗಿಲ್ಲ. ಕರೆಂಟು ಹೋಗಿಯೋ, ಅನಿವಾರ್ಯ ನೆಂಟರೋ ಬಂದಾಗ ತಪ್ಪಿಹೋದ ಕಥಾ ಭಾಗವನ್ನು ಆಕೆ ಭಾಗವತ ಶ್ರವಣವನ್ನು ಕೇಳಿದಷ್ಟು ಶೃದ್ಧೆಯಿಂದ ಅಕ್ಕಪಕ್ಕದ ಮನೆಗಳ ಹೆಂಗಸರಿಂದ ಕೇಳಿ ತಿಳಿದುಕೊಳ್ಳುತ್ತಾರೆ.  ಒಂದು ಬಾರಿ ಕೇಬಲ್‌ ಮುಷ್ಕರ ಆಗಿದ್ದಾಗ ಲಂಡನ್‌ನಲ್ಲಿದ್ದ ಮಗಳಿಗೇ ಫೋನ್‌ ಮಾಡಿ ಯೂಟ್ಯೂಬಿಂದಲೇ ಸೀರಿಯಲ್‌ ನೋಡಿಸಿಕೊಂಡು ಕಥೆ ಕೇಳಿದ ದಾಖಲೆಯೂ ಉಂಟು. ತನ್ನದೇ ಬಾಣ ತನಗೇ ತಿರುಗಿ ಹೊಡೆದಿದ್ದು ಗೊತ್ತಾಗಿ ಮಗಳು ಮೈ ಪರಚಿಕೊಂಡಿದ್ದು ಪದ್ದಮ್ಮನವರಿಗೆ ಫೋನಲ್ಲಿ ಕಾಣಲಿಲ್ಲ.

ತಮ್ಮ ಪಾಡಿಗೆ ತಾವು ಸೀರಿಯಲ್‌ ನೋಡಿಕೊಂಡು ಆರಾಮಾಗಿದ್ದ ಪದ್ದಮ್ಮನಿಗೆ ಸಮಸ್ಯೆ ಆಗಿದ್ದು ಮಗಳು ಅಳಿಯ ಇಬ್ಬರೂ ಲಂಡನ್‌ ನಿಂದ ಮನೆಗೆ ಬಂದು ಇಳಿದಾಗ. ಮಗಳು ಬಂದ ಮೊದಲೆರಡು ದಿನ ಭಯಂಕರ ಖುಷಿಯಾಗಿದ್ದ ಪದ್ದಮ್ಮ, ಸಿಕ್ಕಿ ಸಿಕ್ಕಿದ್ದನ್ನೆಲ್ಲ ಮಾಡಿ ಬಡಿಸಿದ್ದಾಯ್ತು. ಲಂಡನ್ನಿಂದ ಮಗಳು ಮನೆಗೆಂದು ತಂದ ಥರಾವರಿ ಐಟಮ್ಮುಗಳನ್ನ ನೋಡಿ ಖುಷಿ ಪಟ್ಟಿದ್ದೂ ಆಯ್ತು. ಆದರೆ ಸಂಜೆ ಹೊತ್ತಿಗೆ ಕೂಡ ಮಗಳು ಅಮ್ಮನನ್ನ ಬಿಡದೇ ಮಾತಾಡಿಸುತ್ತ ಕೂತಾಗ ಪದ್ದಮ್ಮಂಗೆ ನಿಧಾನಕ್ಕೆ ತಲೆ ಬಿಸಿ ಆಯ್ತು.

ಅಲ್ಲದೇ ಅಳಿಯಂದ್ರು ಕೈಯಲ್ಲಿ ರಿಮೋಟು ಹಿಡಕೊಂಡು ಅತ್ಯಂತ ಅಮೂಲ್ಯವಾದ ಸೀರಿಯಲ್ಲುಗಳ ಕಣಜಗಳನ್ನೇ ದಾಟಿಕೊಂಡು ಮುಂದ್ಯಾವುದೋ ಈಎಸ್ಪೀಯನ್ನು ಡಿಸ್ಕವರಿ ಹಾಕಿದ್ದು ಭಾರೀ ವರಿಯೇ ಆಗತೊಡಗಿತು. ಮೊದಮೊದಲು ಸುಮ್ಮನೇ ಕೂತಿದ್ದ ಪದ್ದಮ್ಮ, ಒಂದು ದಿನ ತಡೆಯಲಾರದೇ, ಅಳಿಯಂದಿರು ರಿಮೋಟು ಪಕ್ಕಕ್ಕಿಟ್ಟು ಎದ್ದು ಹೋದಾಗ ಮಾನ ಮರ್ಯಾದೆ ಎಲ್ಲ ಬಿಟ್ಟು ತಮ್ಮ ನೆಚ್ಚಿನ ಧಾರಾವಾಹಿಗೆ ಕಚ್ಚಿಕೊಂಡು, ಎರಡು ದಿನ ಬಿಟ್ಟು ಹೋಗಿದ್ದ ಕಥೆ ಏನಾದರೂ ಅರ್ಥವಾಗುತ್ತದಾ ಎಂದು ನೋಡತೊಡಗಿದರು. ಒಂದರ್ಧ ಗಂಟೆ ಸುಮ್ಮನಿದ್ದ ಮಗಳು, ತಡೆಯಲಾರದೆ, ""ಏನಮ್ಮಾ, ಆ ತರ ಸೀರಿಯಲ್‌ ನೋಡ್ತಾ ಕೂತಿದೀಯಾ, ನಾನು ಬಂದಿದೀನಿ ಇಲ್ಲಿ, ಅವರೂ ಇದಾರೆ, ನಮ್ಮಗಳ ಹತ್ರ ಮಾತನಾಡಬಾರದೇನೇ' ಎಂದಳು. ಅಷ್ಟೇ ಹೊತ್ತಿಗೆ ಸೀರಿಯಲ್ಲಿನಲ್ಲಿ ಯಾರೋ ಅತ್ತೆಯೋ ಸೊಸೆಯೋ ಧ್ವನಿಯೇರಿಸಿ ಮಾತನಾಡಿದ್ದರಿಂದ ಪದ್ದಮ್ಮನವರು ಅನಿವಾರ್ಯವಾಗಿ ಆ ಕಡೆಯೇ ಗಮನ ಕೊಟ್ಟಿದ್ದರು. ಮಗಳು ತಡೆಯಲಾರದೇ, ರಿಮೋಟು ಕಿತ್ತುಕೊಂಡು ಟೀವಿ ಆಫ‌ು ಮಾಡಿದಳು. ಆಗ ಅವಳ ಕಡೆ ತಿರುಗಿದ ಪದ್ದಮ್ಮ, ""ನೋಡು ಮಗಳೇ, ನೀನು ಇವತ್ತು ಇರ್ತಿàಯಾ, ಇನ್ನು ನಾಕು ದಿನಕ್ಕೆ ವಾಪಸ್ಸು ಹೋಗ್ತಿಯಾ. ನಿಂಗೆ ಸೀರಿಯಲ್ಲು ಮಿಸ್ಸಾದ್ರೆ ಅದೇನೋ ಟ್ಯೂಬಿದೆಯಮ್ಮ. ನಂಗೆ ಅದೆಲ್ಲ ಇಲ್ಲ. ಅಷ್ಟಕ್ಕೂ ಸಂಜೆಯಾಗ್ತಾ ಇದ್ದ ಹಾಗೆ ನಿಮ್ಮಪ್ಪ ಎಲ್ಲೋ ಸುತ್ತೋಕೆ ಹೋಗ್ತಾರೆ. ಮನೆಗೆ ಕೂತಿರೋ ನಂಗೆ ಸೀರಿಯಲ್ಲೇ ಜೊತೆ. ಬೇರೆ ಹೆಂಗಸರ ಹಾಗೆ ನಾನೇನೂ ಸಿನಿಮಾ, ನಾಟಕ ಅಂತಲೋ, ಬೀದಿ ಸುತ್ತೋಕೆ ಅಂತಲೋ ಹೋಗೋದಿಲ್ಲ, ನನ್ನ ಸೀರಿಯಲ್ಲೇ ನನ್ನ ಜಗತ್ತು. ಯಾರು ನನ್ನ ಮರೆತರೂ ಈ ಸೀರಿಯಲ್ಲುಗಳು ನನ್ನ ಮರೆಯಲ್ಲ ಬಿಡು. ನಾನು ಯಾರು ಅಂತಲೇ ಗೊತ್ತಿಲ್ಲದ ಈ ಧಾರಾವಾಹಿಗಳಿಗೆ ನನ್ನ ಕಂಡರೆ ಭಾರಿ ಇಷ್ಟ ಗೊತ್ತಾ' ಎನ್ನುತ್ತ ಮತ್ತೆ ಟಿವಿ ಹಚ್ಚಿದರು. ಅಲ್ಲಿ ಇನ್ನೊಂದು ಧಾರಾವಾಹಿಯ ಟೈಟಲ್‌ ಸಾಂಗು ಶುರುವಾಗುತ್ತಿತ್ತು.

ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ