ಭಾನುವಾರ, ಮೇ 26, 2013

ಹೆದ್ದಾರಿಯ ವೇಗದೂತಗಳು!!ನಮ್ಮ ಆಫೀಸಿನ ಪಕ್ಕದಲ್ಲೇ, ಭಾರತದ ಅತ್ಯಂತ ಹಳೆಯ ಬಸ್ಸು ಕಂಪನಿಯೊಂದರ ಆಫೀಸಿದೆ. ಕಲ್ಲಿದ್ದಲಲ್ಲಿ ಓಡುತ್ತಿದ್ದ ಬಸ್ಸುಗಳನ್ನ ಇಟ್ಟುಕೊಂಡಿದ್ದ ಸಂಸ್ಥೆ ಅದು. ಹೆಚ್ಚಾಗಿ ಶಿವಮೊಗ್ಗ ತೀರ್ಥಹಳ್ಳಿ ಆಗುಂಬೆ ಉಡುಪಿ ಕಾರ್ಕಳ ಮಂಗಳೂರು ಅಂತ ಓಡಾಡುವ ಈ ಬಸ್ಸುಗಳು ಮಲೆನಾಡು ಮತ್ತು ಕರಾವಳಿಯನ್ನ ದಿನವೂ ಕನೆಕ್ಟ್ ಮಾಡುತ್ತವೆ. ನಾವು ಚಹ ಕುಡಿಯಲು ಕೆಲ ಬಾರಿ ಅವರದೇ ಸಂಸ್ಥೆಯ ಕ್ಯಾಂಟೀನಿಗೆ ಹೋಗುವುದಿದೆ. ಅಲ್ಲಿ ಬಸ್ಸಿನ ಕಂಡಕ್ಟರು ಡ್ರೈವರುಗಳು ಕೂತು ಚಾ ತಿಂಡಿ ತಿನ್ನುತ್ತ ಕಷ್ಟ ಸುಖ ಮಾತನಾಡುತ್ತಿರುತ್ತಾರೆ. ಅವರ ಮಾತುಗಳನ್ನ ಕೇಳುತ್ತ ಕೂರುವುದರಲ್ಲಿ ಭಾರಿ ಸ್ವಾರಸ್ಯ ಇದೆ. ಹೇಗೆ ಆಗುಂಬೆಯ ಘಾಟಿಯಲ್ಲಿ ಹಿಂದೆಲ್ಲ ಹುಲಿ, ಕಾಡುಕೋಣ ಸಿಗುತ್ತಿತ್ತು, ಕಾರ್ಕಳದಿಂದ ಉಡುಪಿಗೆ ಬರುವಾಗ ತಾನು ಹೇಗೆ ಲಾರಿಯೊಂದನ್ನ ಓವರ್ ಟೇಕ್ ಮಾಡಿದೆ, ಆವತ್ತೊಂದಿನ ಅಮೋಘವಾಗಿ ಬ್ರೇಕ್ ಹಾಕಿ ಹೇಗೆ ಚಾರ್ಮಾಡಿ ಘಾಟಿಯಲ್ಲಿ ಕೂದಲೆಳೆ ಅಂತರದಲ್ಲಿ ಮಹಾನ್ ಅಪಘಾತ ತಪ್ಪಿಸಿದೆ ಎಂದೆಲ್ಲ ಸಾಭಿನಯವಾಗಿ ತೋರಿಸುತ್ತ ತಮ್ಮ ಲೋಕವನ್ನು ವಿಸ್ತರಿಸುತ್ತ ಕೂತಿರುತ್ತಾರೆ.

ಇತ್ತೀಚಿಗೊಮ್ಮೆ ಅಲ್ಲಿದ್ದ ಸೀನಿಯರ್ ಡ್ರೈವರೊಬ್ಬರು ತಾನು ಕಳೆದ ಇಪ್ಪತ್ತು ವರ್ಷಗಳಲ್ಲಿ ಎಂತೆಂಥ ರೂಟಿನಲ್ಲಿ ಗಾಡಿ ಓಡಿಸಿದ್ದೇನೆ, ತನ್ನ ಸ್ಪೆಷಾಲಿಟಿ ಏನು ಎತ್ತ ಎಂದೆಲ್ಲ ಸ್ವಪರಾಕಿನಲ್ಲಿ ತೊಡಗಿದ್ದರು. ಅಲ್ಲೇ ಇದ್ದ ಜೂನಿಯರೊಬ್ಬ, “ಎಂತ ಮಾರ್ರೆ, ನೀವು ಮಂಗಳೂರು ಉಡುಪಿ ರೂಟಲ್ಲಿ ಎಷ್ಟು ವರ್ಷ ಸರ್ವೀಸು ಮಾಡಿದ್ದೀರಿ” ಎಂದ. ಅವರು ಅವನಿಗೆ ಕೈ ಮುಗಿದು, “ಪುಣ್ಯಕ್ಕೆ ಆ ರೂಟಲ್ಲಿ ಹೆಚ್ಚಿಗೆ ಬಸ್ಸು ಓಡಿಸಿಲ್ಲ ಮಾರಾಯ. ನನ್ನ ನಸೀಬು” ಎಂದರು. ’ಹಾಗಾದ್ರೆ ನೀವೆಂತ ದೊಡ್ಡ ಜನ. ನಾನು ನಾಲ್ಕು ವರ್ಷ ಅದೇ ರೂಟಲ್ಲಿ ಬಸ್ಸು ಓಡಿಸಿದ್ದೆ, ಒಂದು ಆಕ್ಸಿಡೆಂಟು ಕೂಡ ಮಾಡಿಲ್ಲ ಗೊತ್ತುಂಟ’ ಎಂದ. ಅದಕ್ಕೆ ಸೀನಿಯರ್ ಸಾಹೇಬ್ರು “ಅಣ್ಣಾ ನನ್ನ ಪುಂಗಿ ಬಂದು ಮಾಡ್ತೇನೆ. ನೀನೇ ಗ್ರೇಟು ಮಾರಾಯ. ನಿನ್ನ ಹೆಸರನ್ನು ಯಾವುದಾದರೂ ಅವಾರ್ಡಿಗೆ ಶಿಫಾರಸು ಮಾಡ್ಲಿಕ್ಕೆ ಹೇಳ್ಬೇಕು” ಎಂದು ಜೋರು ನಕ್ಕರು. ಅಲ್ಲಿ ಕೂತು ಅವರ ಕಥೆ ಕೇಳುತ್ತಿದ್ದ ನಾನೂ ಅದನ್ನೇ ಅಂದುಕೊಂಡೆ. ಮಂಗಳೂರು ಉಡುಪಿ ದಾರಿಯಲ್ಲಿ ಬಸ್ಸೋಡಿಸಿ ಏನೂ ಯಡವಟ್ಟು ಮಾಡಿಕೊಂಡಿಲ್ಲ ಎಂದರೆ ಆತ ಮಹಾತ್ಮನೇ ಸರಿ ಅಂತ.

ಈ ಬರಹವನ್ನು ಓದುತ್ತಿರುವ ನೀವು ದಕ್ಷಿಣ ಕನ್ನಡದ ಕಡೆಯವರಾದರೆ ಮೇಲಿನ ಹೇಳಿಕೆಯನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳುತ್ತೀರಿ. ಇಲ್ಲವಾದಲ್ಲಿ ನಿಮಗೆ ಕೊಂಚ ಜ್ಞಾನಾರ್ಜಾನೆಯ ಅವಶ್ಯಕತೆ ಇದೆ. ನಮ್ಮೂರಿನ ಬಸ್ಸುಗಳ ಲೋಕ ಇದೆಯಲ್ಲ,ಅದು ಕೊಂಚ ವಿಭಿನ್ನ ಮತ್ತು ವಿಚಿತ್ರ. ಕಳೆದ ಹತ್ತಾರು ವರುಷಗಳಿಂದ ಇಲ್ಲಿ ಬೇರೊಂದು ಬಗೆಯ ವಿಲಕ್ಷಣವಾದ, ಜಗತ್ತಿನ ಬೇರೆ ಯಾವ ಭಾಗದಲ್ಲೂ ಇರಲಾರದ ವೇಗ ಪ್ರಧಾನವಾದ ಎಕ್ಸ್ ಪ್ರೆಸ್ ಬಸ್ಸುಗಳ ಜಗತ್ತು ಬೇರು ಬಿಟ್ಟುಕೊಂಡಿದೆ. ಮಂಗಳೂರಿನಿಂದ ಶುರುವಾಗಿ ಕುಂದಾಪುರದವರೆಗೂ ಹಬ್ಬಿರುವ ಈ ಜಾಲ ರಾಷ್ಟ್ರೀಯ ಹೆದ್ದಾರಿಯನ್ನ ವ್ಯಾಪಿಸಿಕೊಂಡು ಸುತ್ತಲಿನ ಊರುಗಳ ಸಂಪರ್ಕ ಕೊಂಡಿಯಾಗಿದೆ. ಅರ್ಧ ನಿಮಿಷಕ್ಕೊಂದರಂತೆ ಅತ್ತಿಂದಿತ್ತ ಸಂಚರಿಸುವ ಈ ವೇಗದೂತಗಳಲ್ಲಿ ಒಂದು ಬಾರಿಯಾದರೂ ಪಯಣಿಸಿದವನಿಗೆ ಜೀವನದ ಮಹತ್ವ, ಬದುಕುವ ಖುಷಿ, ಲೈಫು ನಶ್ವರ ಇತ್ಯಾದಿ ವಿಚಾರಗಳ ಬಗ್ಗೆ ಆಲೋಚನೆ ಬಂದು ಹೋಗಿರುತ್ತದೆ.

ನೀವು ಮಂಗಳೂರಿನಲ್ಲಿ ಉಡುಪಿಗೆ ಪಯಣಿಸಬೇಕು ಎಂದುಕೊಂಡು ಬಸ್ಟ್ಯಾಂಡಲ್ಲಿ ಖಾಲಿ ಇದ್ದಂತೆ ಕಾಣುತ್ತಿರುವ ಬಸ್ಸೊಂದನ್ನ ಹತ್ತಿದಿರಿ ಎಂದಿಟ್ಟುಕೊಳ್ಳಿ, ನಿಮ್ಮ ಅಂದಾಜನ್ನೂ ಮೀರಿ ಎರಡೇ ನಿಮಿಷದೊಳಗೆ ಬಸ್ಸು ತುಂಬಿ ತುಳುಕುತ್ತದೆ. ಕೆಲ ಬಾರಿ ಅದೇ, ಆ ಖಾಲಿ ಸೀಟಲ್ಲಿ ಕೂರುತ್ತೇನೆ ಎಂದು ನೀವಂದುಕೊಂಡು ಅಲ್ಲಿಗೆ ಹೋಗುವುದರ ಒಳಗೆ ಆ ಸೀಟು, ಅದರ ಸುತ್ತಮುತ್ತಲಿನ ಸೀಟುಗಳೂ ತುಂಬಿದರೂ ತುಂಬಿದವೇ. ಇನ್ನು ನಿಂತಿರುವ ಬಸ್ಸಿನಲ್ಲಿ ಡ್ರೈವರು ಸೀಟಿನಲ್ಲಿ ಅತ್ಯಂತ ಸಾಮಾನ್ಯಂತೆ ಕಾಣುವ ಡ್ರೈವರ್ ಕೂಡ, ಒಮ್ಮೆ ಎಕ್ಸಿಲೇಟರನ್ನ ಅದುಮಿದ ಕೂಡಲೇ ಅವ್ಯಕ್ತ ಶಕ್ತಿಯೊಂದನ್ನ ಆವಾಹನೆ ಮಾಡಿಕೊಂಡಂತೆ ಬಸ್ಸೋಡಿಸುವುದು ನಿಮ್ಮ ಗಮನಕ್ಕೆ ಬರುತ್ತದೆ. ಅಲ್ಲಿಯ ತನಕ ಈ ಇಹದ ಸರ್ವೇ ಸಾಮಾನ್ಯನಾಗಿದ್ದ ವ್ಯಕ್ತಿ  ಒಮ್ಮೆಗೇ ನಮ್ಮ ಪರದ ಕನೆಕ್ಟಿಂಗ್ ಕೊಂಡಿಯಂತೆ ಕಂಡರೆ ತಪ್ಪೇನೂ ಇಲ್ಲ. ನೀವು ಹೊಸಬರಾದರೆ ಬಸ್ಸಿನಲ್ಲಿ ಕುಳಿತ ಸರ್ವರೂ ಕೂಡ ಯಾವ ಹೆದರಿಕೆಯೂ ಇಲ್ಲದೇ ಅವರ ಪಾಡಿಗೆ ಅವರಿರುವುದನ್ನ ಕಂಡು ಗಾಭರಿ ಹೆಚ್ಚುತ್ತದೆ. ಯದ್ವಾ ತದ್ವಾ ವೇಗ ಹೆಚ್ಚಿಸುತ್ತ, ಎದುರಿಗೆ ಸಿಕ್ಕ ಸಣ್ಣ ಪುಟ್ಟ ಬೈಕು ಸೈಕಲು ಮಂದಿಯನ್ನ ಇನ್ನೇನು ನುಂಗೇ ಬಿಟ್ಟಿತು ಎಂಬಂತೆ ನುಗ್ಗುತ್ತಿರುವ ಬಸ್ಸಿನ ಆವೇಗ ಕಂಡು ಅದರ ಒಳಗಿರುವ ನಿಮಗೆ ಎಂದೋ ಮರೆತು ಹೋಗಿದ್ದ ಮನೆದೇವರು ನೆನಪಾಗೇ ಆಗುತ್ತಾರೆ. ಇಷ್ಟೊಂದು ವೇಗದಲ್ಲಿ ಬಸ್ಸೋಡಿಸುವ ಡ್ರೈವರಿನ ಬೇಜವಾಬ್ದಾರಿತನದ ಬಗ್ಗೆ ಪಕ್ಕದಲ್ಲಿ ಕೂತವರ ಬಳಿ ಹೇಳೋಣ ಅಂದುಕೊಳ್ಳುವಷ್ಟರಲ್ಲಿ ಕಂಡಕ್ಟರು ಬಂದು, ಎಲ್ಲಿಗೆ ಎಂದು ಕೇಳಿ, ಟಿಕೇಟು  ಹರಿದುಕೊಡುತ್ತಾನೆ. ಬಸ್ಸಿನ ಅಮೋಘ ವೇಗ ಮತ್ತು ಆಗ ತಾನೆ ಹೊಂಡಕ್ಕೆ ಹಾರಿಬಿದ್ದ ಪರಿಣಾಮವಾಗಿ ನಿಮ್ಮ ಕೈ ನಡುಗಿ, ಆ ಟಿಕೇಟು ನಿಮ್ಮನ್ನ ತಲುಪದೇ ಬಸ್ಸಿನ ಅವಕಾಶದಲ್ಲಿ ತೇಲುತ್ತ, ನೋಡ ನೋಡುತ್ತಿದ್ದ ಹಾಗೆ ಯಾವುದೋ ಕಿಟಕಿಯಿಂದ ಹೊರಗೆ ಚಿಮ್ಮಿ ಮಾಯವಾಗುತ್ತದೆ. ನೀವು ಮುಂದಿನ ಪ್ರಯಾಣವಿಡೀ ಛೇ! ಟಿಕೇಟು ಕೈ ತಪ್ಪಿತಲ್ಲ ಏನು ಮಾಡುವುದು ಎಂದು ಕೊರಗುತ್ತ ಕೂರುತ್ತೀರಿ. ಆದರೆ ಆ ಕೊರಗಿಗೆ ಅರ್ಥವೇ ಇಲ್ಲ. ಟಿಕೇಟು ಇದ್ದರೂ, ಇಲ್ಲದಿದ್ದರೂ ಏನೂ ಮಹಾ ವ್ಯತ್ಯಾಸವಾಗುವುದಿಲ್ಲ. ಅಷ್ಟಕ್ಕೂ ಇನ್ಶೂರೆನ್ಸ್ ಕ್ಲೇಮ್ ಮಾಡುವ ಸಂದರ್ಭ ಬಂದರೆ ಟಿಕೇಟೇನೂ ಸಹಾಯ ಮಾಡುವುದಿಲ್ಲ.

ನೀವಿರುವ ಬಸ್ಸು ವೀಡಿಯೋ ಕೋಚೆಂದಾದರೆ ಇಷ್ಟು ಹೊತ್ತಿಗೇ ಕ್ಲೀನರೋ ಕಂಡಕ್ಟರೋ ಒಂದು ಸಿನಿಮಾವನ್ನ ಅಲ್ಲಿನ ಡಿವಿಡಿ ಪ್ಲೇಯರಿಗೆ ತುರುಕಿರುತ್ತಾರೆ. ಅಬ್ಬರದ ಸದ್ದಿನೊಂದಿಗೆ ಆರಂಭವಾದ ಆ ಸಿನಿಮಾವನ್ನ ಸುತ್ತಲಿನ ಎಲ್ಲರೂ ನೋಡಲು ಆರಂಭಿಸಿ ನಿಮ್ಮೊಳಗೆ ಅನಾಥ ಪ್ರಜ್ಞೆಯು ಹೆಚ್ಚುವಂತೆ ಮಾಡುತ್ತಾರೆ. ಏನೇ ಮಾಡಿದರೂ, ಧಡಧಡನೆ ಹಾರುವ ಸೀಟ ಮೇಲೆ ಕೂತು ಏಕಾಗ್ರತೆಯಿಂದ ಸಿನಿಮಾ ನೋಡುವ ಕಲೆ ನಿಮಗೆ ಸಿದ್ಧಿಸುವುದೇ ಇಲ್ಲ. ಇನ್ನು ಕೆಲ ಬಸ್ಸುಗಳಲ್ಲಿ ಬರೀ ಹಾಡುಗಳನ್ನಷ್ಟೇ ಹಾಕುವ ಸಂಪ್ರದಾಯವಿದೆ. ಇದು ಕೊಂಚ ಮಟ್ಟಿಗೆ ವಾಸಿ. ಬಸ್ಸಿನ ಡ್ರೈವರು ಕಂಡಕ್ಟರ ಆಸಕ್ತಿಯನ್ನು ಅವಲಂಬಿಸಿಕೊಂಡು ಹಳೆಯ ಮಧುರವಾದ ಹಾಡುಗಳಿಂದ ತೊಡಗಿ ಧಡಭಡಗುಟ್ಟುವ ಐಟಮ್ ಸಾಂಗುಗಳವರೆಗೆ ಏನು ಬೇಕಾದರೂ ಪ್ಲೇ ಆಗಬಹುದು. ಆದರೆ ತೊಂಬತ್ತು ಕಿಲೋಮೀಟರು ವೇಗದಲ್ಲಿ ಓಡುತ್ತಿರುವ ಬಸ್ಸಿನೊಳಗೆ ಕೂತು ಭಾರೀ ಸ್ಲೋ ಬೀಟಿನ ಹಾಡುಗಳನ್ನ ಕೇಳುವುದು ಎಂತಹ ಅಸಹನೆ ಹುಟ್ಟಿಸುತ್ತದೆ ಎಂಬುದನ್ನ ಹೇಳಿ ಪ್ರಯೋಜನವಿಲ್ಲ. ಅನುಭವಿಸಿಯೇ ತೀರಬೇಕು.

ನಿಮ್ಮ ಗ್ರಹಚಾರ ಕೆಟ್ಟು ನೀವೇನಾದರೂ ಡ್ರೈವರಿನ ಪಕ್ಕದ ಅಡ್ಡ ಸೀಟಲ್ಲಿ ಕೂತಿದ್ದೀರೋ ಅಷ್ಟೇ ಮತ್ತೆ ಕತೆ. ಎದುರಿನಿಂದ ಚಿಮ್ಮಿ ಚಿಮ್ಮಿ ನುಗ್ಗುತ್ತಿರುವ ಬಸ್ಸು ಲಾರಿ ಕಾರುಗಳನ್ನ ಚಾಕಚಕ್ಯತೆಯಿಂದ ತಪ್ಪಿಸಿಕೊಳ್ಳುತ್ತ, ಮುಂದಿದ್ದ ವಾಹನಗಳನ್ನ ಚೇಸ್ ಮಾಡಿ, ಹಿಮ್ಮೆಟ್ಟಿಸಿ ನುಗ್ಗುವುದನ್ನ ಕಂಡು ಕಂಗಾಲಾಗುವುದು ಖಂಡಿತ. ಯಾವ ಬಾಂಡ್ ಸಿನಿಮಾದ ಸ್ಟಂಟ್ ಗೂ ಕಡಿಮೆಯಿಲ್ಲದ ಹಾಗೆ ಬಸ್ಸು ಓಡಿಸುವ ಡ್ರೈವರನ ಮುಖದಲ್ಲಿ ಕೊಂಚವಾದರೂ ಕದಲಿಕೆ ಕಾಣುವುದಿಲ್ಲ. ಮುಂದಿನ ಬಸ್ಟಾಪಿಗೆ ಸರಿಯಾಗಿ ಇಂತಿಷ್ಟೇ ಹೊತ್ತಿಗೆ ಮುಟ್ಟಬೇಕು ಎಂಬ ಏಕೈಕ ಉದ್ದೇಶ  ಮಾತ್ರ ಆತನ ಸದ್ಯದ ಲೋಕ.

ಒಂದು ಸ್ಟಾಪಿಂದ ಮತ್ತೊಂದು ಸ್ಟಾಪಿಗೆ , ಇಂತಿಷ್ಟು ಹೊತ್ತಿಗೆ ಹೊರಟಿರುವ ಬಸ್ಸು ಇಂತಿಷ್ಟೇ ನಿಮಿಷಗಳಲ್ಲಿ ಮುಟ್ಟಬೇಕು ಎಂಬುದು ಈ ರೂಟಿನಲ್ಲಿ ಇರುವ ಅಲಿಖಿತ ನಿಯಮ. ಉದಾಹರಣೆಗೆ ಹನ್ನೊಂದು ಮೂವತ್ತೇಳಕ್ಕೆ ಮಂಗಳೂರು ಬಿಟ್ಟ ಬಸ್ಸು ಹನ್ನೊಂದೂ ಐವತ್ತೊಂಬತ್ತಕ್ಕೇ ಸುರತ್ಕಲ್ಲಿನಲ್ಲಿ ಇರಬೇಕು, ಕೊಂಚ ತಡವಾದರೆ, ಅಲ್ಲಿನ ಪ್ಯಾಸೆಂಜರನ್ನು ಪಿಕ್ ಮಾಡದೇ, ಹೆದ್ದಾರಿಯಲ್ಲೇ ಸೀದಾ ಹೋಗಬೇಕು. ಅಪ್ಪಿ ತಪ್ಪಿ ಜನರನ್ನೇನಾದರೂ ಹತ್ತಿಸಿಕೊಂಡರೆ ಹಿಂದೆ ಬರುವ ಬಸ್ಸಿನಾತ ಈ ಬಸ್ಸನ್ನ ಓವರ್ ಟೇಕ್ ಮಾಡಿ ಅಡ್ಡಗಟ್ಟಿ ಗಲಾಟೆ ಹತ್ತಿಕೊಳ್ಳುತ್ತದೆ. ಏನ್ ಗಂಟು ಹೋಗತ್ತಪ್ಪ ಒಂದಿಬ್ರು ಬಸ್ಸು ಹತ್ತಿಕೊಂಡರೆ ಅಂತ ಕೇಳುವ ಹಾಗೇ ಇಲ್ಲ. ತಮ್ಮ ಜೀವನದ ಇಡೀ ಉದ್ದೇಶವೇ ಇದರಲ್ಲಿ ಅಡಗಿದೆ ಎನ್ನುವ ಹಾಗೆ ಎರಡು ಬಸ್ಸಿನ ಡ್ರೈವರು ಕಂಡಕ್ಟರು ಬೊಬ್ಬೆ ಹೊಡಕೊಳ್ಳುವುದನ್ನ ನೋಡಿದರೆ ಮಾತ್ರ ಯಾರಿಗಾದರೂ ಇದು ಅರ್ಥವಾಗುತ್ತದೆ. ಅರ್ಧ ನಿಮಿಷಕ್ಕೂ ಪ್ರಾಧಾನ್ಯತೆ ಕೊಡುವ ಅತ್ಯಂತ ಖತರ್ನಾಕ್ ಶಿಸ್ತಿನ ಏಕೈಕ ವ್ಯವಸ್ಥೆ ಇದೊಂದೇ ಇರುವುದೇನೋ? ಗಲಾಟೆ ಮಾಡಿದ ಕೂಡಲೇ ವಿಷಯ ಬಗೆ ಹರಿಯುವುದಿಲ್ಲ. ಅಷ್ಟು ಹೊತ್ತು ಮಾಡಿದ ಗಲಭೆಯಿಂದ ಕಳೆದ ಸಮಯವನ್ನ ಮರು ಹೊಂದಿಸಿಕೊಳ್ಳಲು ಡ್ರೈವರು ಎಕ್ಸಿಲೇಟರನ್ನು ಮತ್ತೂ ಜೋರು ಅದುಮುತ್ತ ಇನ್ನೂ ವೇಗವಾಗಿ ಹೆದ್ದಾರಿಯನ್ನ ಸೀಳುತ್ತ ಬಸ್ಸನ್ನ ಓಡಿಸುತ್ತಾನೆ. ಇಲ್ಲಿಯವರೆಗಿನ ವೇಗಕ್ಕೇ ಎದೆ ಒಡೆದುಕೊಳ್ಳುವ ಸ್ಥಿತಿಗೆ ತಲುಪಿದವರಿದ್ದರೆ ಮುಂದಿನ ಕಥೆ ಕೇಳುವುದೇ ಬೇಡ.

ಇದೆಲ್ಲ ಒಮ್ಮೆ ಹದಕ್ಕೆ ಬಂದ ಮೇಲೆ ಕಂಡಕ್ಟರು ಫುಟ್ ಬೋರ್ಡ್ ಮೇಲೆ ಆರಾಮಾಗಿ ಜೋತಾಡುತ್ತಾ ತನ್ನ ಟಿಕೇಟು ಲೆಕ್ಕಾಚಾರ ಮಾಡುತ್ತ ನಿಲ್ಲುತ್ತಾನೆ. ಯಪರಾತಪರಾ ಸ್ಪೀಡಲ್ಲಿ ಕೂಡ ಆತ ಯಾವುದೇ ಆಧಾರವಿಲ್ಲದೇ ಆರಾಮಾಗಿ ಓಲಾಡುತ್ತಾ ಎರಡು ಸೀಟು ನಲ್ವತ್ತು, ನಾಲ್ಕು ನಲ್ವತ್ತೆಂಟು ಎಂದೆಲ್ಲ ಲೆಕ್ಕ ಹಾಕುತ್ತ ಬರೆಯುವುದನ್ನು ನೋಡಿದರೆ, ನಿಮ್ಮೊಳಗಿನ ಹೆದರಿಕೆ ಕೊಂಚ ಕಮ್ಮಿಯಾದೀತು. ಆದರೆ ಹೀಗೇ ನಿರ್ಲಕ್ಷ್ಯದಿಂದ ನಿಂತಿದ್ದ ನನ್ನ ಕಂಡಕ್ಟರ್ ಸ್ನೇಹಿತನೊಬ್ಬ ಬಸ್ಸಿಂದ ಬಿದ್ದು, ಆರೆಂಟು ತಿಂಗಳು ಮನೆಯಲ್ಲೇ ಮಲಗಿದ್ದ, ಬೆನ್ನು ಮುರಿದುಕೊಂಡು.

ಹೆದ್ದಾರಿಯಲ್ಲಿ ಅಪರಿಮಿತ ವೇಗದಿಂದಾಗಿಯೇ ಅನೇಕ ಅಪಘಾತಗಳು ಮಂಗಳೂರು- ಕುಂದಾಪುರ ಈ ದಾರಿಯಲ್ಲಿ ಆಗುತ್ತಲೇ ಇರುತ್ತವೆ. ಹುಚ್ಚಾಪಟ್ಟೆ ಸ್ಪೀಡಲ್ಲಿ ಓಡುವ ಟ್ಯಾಂಕರುಗಳು ಬಸ್ಸುಗಳು ಒಂದಕ್ಕೊಂದು ಢಿಕ್ಕಿ ಹೊಡೆದುಕೊಂಡು ದಿನಪತ್ರಿಕೆಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತವೆ. ಐದು ನಿಮಿಷ ಬೇಗ ಹೋಗುವ ಗಡಿಬಿಡಿಯಲ್ಲಿ ಜೀವ ಕಳೆದುಕೊಳ್ಳುವ ಘಟನೆಗಳು ನಿತ್ಯ ವರದಿಯಾಗುತ್ತವೆ.ಯಾವನದೋ ಆವೇಗಕ್ಕೆ ಬಲಿಯಾದವರು ಕೇವಲ ಹೆಸರುಗಳಾಗಿ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಯಾರದೋ ಮನೆಯಲ್ಲಿ ಆರಿದ ದೀಪಗಳ ಕತ್ತಲಲ್ಲಿ ಕೂತ ಜೀವಗಳ ನಿಟ್ಟುಸಿರಿನ ಸುದ್ದಿ ಎಲ್ಲೂ ಬರುವುದೇ ಇಲ್ಲ.

ಇದನ್ನೆಲ್ಲ ಹೇಳಿ ನಿಮಗೆ ದಿಗಿಲು ಹುಟ್ಟಿಸುವುದೇನೂ ನನ್ನ ಉದ್ದೇಶವಲ್ಲ. ಇಂತಹ ಘಟನೆಗಳೂ ಕೂಡ ನಡೆಯುತ್ತವೆ ಅನ್ನೋದನ್ನ ಹೇಳೋದಷ್ಟೆ ಇಂಗಿತವಾಗಿತ್ತು. ಇನ್ನೇನು ಇಲ್ಲಿನ ಹೆದ್ದಾರಿ ದ್ವಿಪಥವೋ,ಚತುಷ್ಪಥವೋ ಆಗಿ ಬದಲಾಗಲಿದೆ. ಇಲ್ಲಿ ಹೇಳಿದ ರೋಚಕತೆಗಳು ಅರ್ಧದಷ್ಟು ಕಡಿಮೆಯಾಗಲಿವೆ. ಹೀಗಾಗಿ, ಅದಕ್ಕೂ ಮುನ್ನ ಸಾಧ್ಯವಾದರೆ ಇಲ್ಲಿನ ಎಕ್ಸ್ ಪ್ರೆಸ್ ಬಸ್ಸುಗಳಲ್ಲಿ ಒಮ್ಮೆ ಪ್ರಯಾಣ ಮಾಡಿ ನಿಮ್ಮ ಜೀವನವನ್ನು ಸಾರ್ಥಕಮಾಡಿಕೊಳ್ಳಿ!

( ಸಖಿ ಪಾಕ್ಷಿಕದಲ್ಲಿ ಪ್ರಕಟಿತ)