ಗುರುವಾರ, ಏಪ್ರಿಲ್ 26, 2018

ಕಸೋಲ್- ಹಿಮಾಲಯದ ಪ್ರವೇಶ ದ್ವಾರ



 ಹಿಮಾಲಯಕ್ಕೆ ಚಾರಣ ಹೋಗಬೇಕು ಎನ್ನುವುದು ಬಹುತೇಕ ಪ್ರವಾಸ ಪ್ರಿಯರ ಕನಸು. ಒಂದು ಬಾರಿ ಹೋಗಿ ಬಂದವರಿಗಂತೂ, ಮತ್ತೆ ಮತ್ತೆ ಹಿಮಾಲಯದ ಸೆಳೆತ ಇದ್ದದ್ದೇ. ಬಿಡಲಾಗದ ಮಾಯೆ ಅದು. ಹಿಮಾಚಲ ಪ್ರದೇಶ, ಜಮ್ಮ ಕಾಶ್ಮೀರ, ಉತ್ತರಾಂಚಲ, ಪೂರ್ವೋತ್ತರ ರಾಜ್ಯಗಳ ಕೆಲ ಪ್ರದೇಶಗಳು ಹಿಮಾಲಯದ ಅನುಭೂತಿಯನ್ನ ಪಡೆಯಲು ಸರಿಯಾದ ತಾಣಗಳು. ಮಂಜು ಮುಸುಕಿದ ಸಾಲು ಸಾಲು ಪರ್ವತ ಶ್ರೇಣಿಗಳನ್ನು ನೋಡುವ, ಹಿಮದಲ್ಲಿಯೇ ಚಾರಣ ಮಾಡಿ ಬೆಟ್ಟಗಳನ್ನು ಹತ್ತಿ ಬರುವ ಆಸಕ್ತಿ ಉಳ್ಳುವರಿಗೆ ಹಿಮಾಚಲ ಪ್ರದೇಶ ಸೂಕ್ತ ರಾಜ್ಯ. ಹೆಸರೇ ಹೇಳುವ ಹಾಗೆ, ಹಿಮಾಚಲದ ತುಂಬ ಮಂಜಿನ ಬೆಟ್ಟಗಳ ಸಾಲು ಸಾಲೇ ಇದೆ. ಯಾವ ಬೆಟ್ಟ ಹತ್ತುವ ಆಸಕ್ತಿಯೂ ಇಲ್ಲ, ಹಾಗಂತ ರುದ್ರ ರಮಣೀಯ ಪರ್ವತಗಳನ್ನೂ, ಹಿಮ ಕರಗಿ ಹರಿಯುವ ಬಿಳಿನದಿಗಳನ್ನೂ, ಆಗಸದೆತ್ತರ ಚಿಮ್ಮಿ ನಿಂತ ಉದ್ದನೆಯ ಸೂಚಿಪರ್ಣ ವೃಕ್ಷಗಳನ್ನೂ ಸುಮ್ಮನೆ ನೋಡುತ್ತ ಬಿದ್ದುಕೊಳ್ಳಬೇಕು ಎನ್ನುವ ಯೋಚನೆಯಲ್ಲಿ ಯಾರಾದರೂ ಇದ್ದರೆ, ಅವರಿಗಾಗಿಯೇ ಹೇಳಿ ಮಾಡಿಸಿದ ಊರು,ಕಸೋಲ್.

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿದೆ, ಈ ಕಸೋಲ್ ಎಂಬ ಪುಟ್ಟ ಊರು. ಪಾರ್ವತೀ ನದಿ ಕಣಿವೆಯ ಈ ಊರು, ಒಂದರ್ಥದಲ್ಲಿ ಹಿಮಾಲಯ ಪರ್ವತ ಶ್ರೇಣಿಗಳ ನಾಡಿನ ಪ್ರವೇಶ ದ್ವಾರ. ಈ ಒಂದು ಊರಿನಿಂದ ಸುಮಾರು ಹತ್ತು ಇಪ್ಪತ್ತು ಬಗೆಯ ಚಾರಣಕ್ಕೆ ತೆರಳಬಹುದು. ಜಗತ್ತಿನ ವಿವಿಧ ಭಾಗಗಳಿಂದ ಟ್ರೆಕ್ಕಿಂಗ್ ಗೆ ಹೋಗಲೆಂದೇ ಬರುವ ಮಂದಿಗೆ ಈ ಊರು ಆರಂಭದ ಸ್ಥಳ. ಕುಲು-ಮನಾಲಿ ಮೊದಲಾದ ಪ್ರಸಿದ್ಧ ಪಿಕ್ ನಿಕ್ ಸ್ಪಾಟ್ ಗಳಿಗೆ ಹತ್ತಿರದಲ್ಲೇ ಇದ್ದರೂ, ಕಸೋಲ್ ತುಂಬ ಗಿಜಿಗುಡುವ ಊರು ಕೂಡ ಅಲ್ಲ. ಸುತ್ತಲೂ ಹಿಮಚ್ಛಾದಿತ ಬೆಟ್ಟಗಳು, ಸದಾಕಾಲ ಭೋರ್ಗರೆಯುತ್ತ ಹರಿಯುವ ಪಾರ್ವತೀ ನದಿಯ ಸದ್ದಿನ ನಡುವೆ ಈ ಪುಟಾಣಿ ಪುಟ್ಟಣ ಅಡಗಿಕೊಂಡಿದೆ.
ಕಸೋಲ್ ನ ಪೇಟೆ ದಾಟಿ ಹಾಗೇ ನಡೆದುಕೊಂಡು ಹೋದರೆ, ಪಾರ್ವತೀ ನದಿಯ ವಿಸ್ತಾರದ ಹರಿವು ನೋಡಬಹುದು. ದೂರದಲ್ಲಿ ಕಾಣುವ ಹಿಮ ಪರ್ವತಗಳಿಂದ ಬಸಿದು ಬಂದಿರುವ ಮಂಜನ್ನ ತನ್ನೊಳಗೆ ತುಂಬಿಕೊಂಡು ಹರಿವ ಈ ನದಿಯ ದಂಡೆಯಲ್ಲಿ ಸುಖಾಸುಮ್ಮನೆ, ಏನೂ ಮಾಡದೆ ಹಾಗೇ ಕುಳಿತಿರುವುದೇ ಒಂದು ಆನಂದ. ಸುಮಾರಾಗಿ, ಡಿಸೆಂಬರ್ ಜನವರಿ ರಣ ಚಳಿಗಾಲವನ್ನು ಹೊರತುಪಡಿಸಿ, ಎಂದೂ ಕೂಡ ಈ ನದಿ ತುಂಬಿಕೊಂಡೇ ಹರಿಯುತ್ತಿರುತ್ತದೆ. ದೇವಲೋಕಕ್ಕೇ ಚಾಚಿರುವ ಹಾಗೆ ಕಾಣುವ ದೇವದಾರು ಮರಸಾಲುಗಳ ಮಧ್ಯೆ ದಾರಿ ಮಾಡಿಕೊಂಡು ಸಾಗುತ್ತಿರುವ ಪಾರ್ವತಿ ನದಿಯನ್ನ ನೋಡುವ ಸೊಗಸೇ ಬೇರೆ.
ಹಾಗೇ ಸುತ್ತಾಡಿ, ಆಯಾಸವಾದರೆ ಕಸೋಲ್ ನ ತುಂಬ ಬಗೆ ಬಗೆಯ ಕೆಫೆಗಳಿವೆ. ನದಿಯ ಕಡೆಗೆ ಮುಖ ಮಾಡಿಯೋ, ಧವಳ ಹಿಮಾಲಯವನ್ನು ದಿಟ್ಟಿಸುತ್ತಲೋ ಬಿಸಿಬಿಸಿ ಕಾಫಿ, ಸೂಪುಗಳನ್ನು ಕುಡಿದು ಸುಸ್ತಿನ ಪರಿಹಾರವನ್ನಂತೂ ಮಾಡಿಕೊಳ್ಳಬಹುದು. ಕಸೋಲ್ ನ ಮಂದಿ ಪ್ರವಾಸಿಗರನ್ನೇ ನೆಚ್ಚಿಕೊಂಡು ಬದುಕುವವರಾದ್ದರಿಂದ, ಸ್ನೇಹಜೀವಿಗಳು. ನಗುನಗುತ್ತಲೇ ಮಾತನಾಡಿಸುತ್ತ ನಿಮ್ಮ ಸಮಸ್ಯೆಗೆ ಪರಿಹಾರ ಹೇಳಬಲ್ಲರು.
ರಿವರ್ Rafting ನ ಆಸಕ್ತಿ ಉಳ್ಳವರಿಗೆ ಹಿಮನದಿಯ ಬೆಳ್ನೊರೆಯಲ್ಲಿ ಹುಟ್ಟು ಹಾಕುತ್ತ ಸಾಗುವ ಅನುಭವವೂ ನಿಮಗಿಲ್ಲಿ ಲಭ್ಯ. ಸಣ್ಣ ಪುಟ್ಟ ಬೆಟ್ಟಗಳನ್ನ ಹತ್ತಿಳಿಯುವುದೇ ಆದರೆ, ಅದಕ್ಕೂ ಗೈಡ್ ಗಳಿದ್ದಾರೆ. ಹಿಮಾಲಯದ ಹಳ್ಳಿಗಳ ಜನಜೀವನವನ್ನು ಹತ್ತಿರದಿಂದ ನೋಡುವ ಆಸಕ್ತಿಯಿದ್ದರೆ ಅದಕ್ಕೂ ಈ ಸ್ಥಳ ಸರಿಯಾದುದೇ. ಕಸೋಲ್ ನ ಅಕ್ಕಪಕ್ಕದ ಬೆಟ್ಟಗಳಲ್ಲಿಯೇ ಸೊಗಸಾದ ಹಳ್ಳಿಗಳಿದ್ದು, ಅವುಗಳನ್ನು ನೋಡಿಕೊಂಡು ಬರದೇ ಇದ್ದರೆ ನಿಮ್ಮ ಪ್ರವಾಸ ಅಪೂರ್ಣವೂ ಹೌದು. ಮಲಾನಾ, ಗ್ರಹಣ್, ಮೊದಲದಾ ಸ್ವರ್ಗ ಸದೃಶ ಊರುಗಳಿಗೆಲ್ಲ ಕಸೋಲ್ ಮೂಲಕವೇ ದಾರಿ. ಬೆಳಗ್ಗೆದ್ದು ಹೋದರೆ ಸಂಜೆಯೊಳಗೆ ಮರಳಬಹುದಾದ ಈ ಹಳ್ಳಿಗಳು ತಮ್ಮ ನೈಸರ್ಗಿಕ ಸೌಂದರ್ಯಕ್ಕೆ ಮತ್ತು ಹಿಮಾಚಲದ ಸಾಂಪ್ರದಾಯಿಕತೆಗೆ ಪ್ರಸಿದ್ಧ.

ಅಷ್ಟಾಗಿಯೂ, ನೀವೆದಲ್ಲವನ್ನೂ ಮಾಡದೆಯೂ ಕೂಡ ಕಸೋಲ್ ನಲ್ಲಿ ಸುಖವಾಗಿ ಕಾಲಕಳೆಯಬಹುದು. ಪಕ್ಕಾ ಸೋಂಬೇರಿಯಂತೆ! ಎಲ್ಲಾದರೂ ಹೋದಾಗ ಸಿಕ್ಕಪಕ್ಕ ಜಾಗಗಳನ್ನೆಲ್ಲ ನೋಡಿ ಟಿಕ್ ಮಾರ್ಕ್ ಹಾಕಿ ಹೆಮ್ಮೆ ಪಡುವುದಕ್ಕಿಂತ, ಬೆಳದಿಂಗಳಲ್ಲಿ ಮಿನುಗುವ  ಶ್ವೇತಪರ್ವತಗಳ ಕೆಳಗಿನ ನದೀತೀರದಲ್ಲಿ ಅಗ್ಗಿಷ್ಟಿಕೆ ಹಾಕಿಕೊಂಡು ಬೆಚ್ಚಗೆ ಕೂರುವುದರಲ್ಲಿ ಹೆಚ್ಚಿನ ಆನಂದವಿದೆ!


ಬಾಕ್ಸ್-೧
ಕಸೋಲ್ ನ ಸುತ್ತಮುತ್ತ ನೋಡಬಹುದಾದ ಹಲವು ಜಾಗಗಳೂ, ಊರುಗಳೂ ಇವೆ. ಅವುಗಳಲ್ಲಿ ಮುಖ್ಯವಾದದ್ದು ಮಣಿಕರಣ್. ಕಸೋಲ್ ನಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿರುವ ಮಣಿಕರಣ್ ಹಿಂದೂಗಳ ಮತ್ತು ಸಿಖ್ಖರ ಪ್ರಸಿದ್ಧ ಯಾತ್ರಾಸ್ಥಳ. ಸ್ವಯಂಭೂ ಮನು ಜಗತ್ತನ್ನೇ ಮುಳುಗಿಸುವ ಪ್ರವಾಹದ ನಂತರ ಇದೇ ಮಣಿಕರಣ್ ನಲ್ಲಿ ಮತ್ತೆ ಮನುಷ್ಯ ಸೃಷ್ಟಿಗೆ ತೊಡಗಿದ ಎನ್ನುತ್ತದೆ ಪುರಾಣ. ಶಿವಪಾರ್ವತಿಯರು ಇಲ್ಲಿನ ಸೌಂದರ್ಯಕ್ಕೆ ಮನಸೋತು ಸಾವಿರಾರು ವರುಷಗಳ ಕಾಲ ಇದೇ ಪ್ರದೇಶದಲ್ಲಿದ್ದರು ಎನ್ನುವುದು ಇನ್ನೊಂದು ಐತಿಹ್ಯ. ಸಿಖ್ಖರ ಪರಮಗುರು ಗುರುನಾನಕರು ಇಲ್ಲಿಯೇ, ಬಿಸಿನೀರಿನ ಬುಗ್ಗೆ ಸೃಷ್ಟಿಸಿ ಹೋಗಿದ್ದರು ಎನ್ನುವ ಕಥೆಯೂ ಇದೆ. ಇಲ್ಲಿನ ಲಂಗರ್-ಸದಾ ಕಾಲ ಬರುವ ಭಕ್ತರಿಗೆ ಆಹಾರ ಒದಗಿಸುತ್ತದೆ. ಇಲ್ಲಿನ ಬಿಸಿನೀರಿನ ಬುಗ್ಗೆಗಳಿಗಾಗಿ, ದೇಗುಲ, ಗುರುದ್ವಾರಗಳಿಗಾಗಿ, ಮಣಿಕರಣ್  ಭೇಟಿ ಮಾಡಬಹುದು.


ಬಾಕ್ಸ್ ೨
ಹಿಮಾಚಲದ ಸೊಗಸು ಅಡಗಿರುವುದು ಪರ್ವತಗಳ ನಡುವೆ ಹುದುಗಿರುವ ಮುದ್ದಾದ ಹಳ್ಳಿಗಳಲ್ಲಿ. ಕಡಿದಾದ ಕೊರಕಲುಗಳ ಪಕ್ಕ, ಮಧ್ಯ ಬೆಟ್ಟಗಳ ನಡುವಣ ಸಣ್ಣ ಬಯಲುಗಳಲ್ಲಿ ಬದುಕು ಕಟ್ಟಿಕೊಂಡಿರುವ ಇಲ್ಲಿನ ಕಷ್ಟ ಸಹಿಷ್ಣು ಜೀವಿಗಳನ್ನ ಭೇಟಿ ಮಾಡದಿದ್ದರೆ ಹಿಮಾಚಲದ ಪ್ರವಾಸ ಪೂರ್ಣವಾಗುವುದಿಲ್ಲ. ಗ್ರಹಣ್, ಮಲಾನಾ, ತೋಷ್, ಪುಲ್ಗಾ,ನಗ್ಗರ್- ಹೀಗೆ ವಿವಿಧ ಹಳ್ಳಿಗಳಿಗೆ ಹೋಗಲು ಕಸೋಲ್ ರಹದಾರಿ. ಸ್ಥಳೀಯರ ಮಾರ್ಗದರ್ಶನದೊಂದಿಗೆ ಈ ಹಳ್ಳಿಗಳನ್ನು ನೋಡಿಕೊಂಡು ಬರಬಹುದು. ಈ ಹಳ್ಳಿಗಳ ಹಳೆಯ ಕಾಲದ ಮನೆಯ ಚಾವಡಿಯಲ್ಲಿ ಕೂತು, ಇಣುಕಿ ಬರುವ ಬೆಳಗಿನ ಸೂರ್ಯನನ್ನು ನೋಡುವುದು ಚೇತೋಹಾರಿ ಅನುಭವ ಭಾಂಗ್ ನ ನಶೆಯಲ್ಲೂ ತೇಲಬಹುದು- ಹಾಂ, ಹುಷಾರು!

ಬಾಕ್ಸ್ ೩

ಚಾರಣ ಪ್ರಿಯರ ಸ್ವರ್ಗ ಇಲ್ಲೇ ಇದೆ. ಚಂದ್ರಖೇಣಿ ಪಾಸ್, ಸರ್ ಪಾಸ್, ಖೀರ್ ಗಂಗಾ – ಮೊದಲಾದ ಕಡಿದಾದ ಪರ್ವತ ಶ್ರೇಣಿಗಳ ಟ್ರೆಕ್ಕಿಂಗ್ ಮಾಡುವ ಆಸಕ್ತಿ ಇದ್ದರೆ, ಕಸೋಲ್ ಸರಿಯಾದ ಸ್ಥಳ. ಅವೆಲ್ಲ ಚಾರಣಗಳ ಆರಂಭದ ತಾಣ ಇದೇ ಊರು. ಇಲ್ಲಿರುವ ಅಂಗಡಿಗಳಲ್ಲಿ ನಿಮಗೆ ಬೇಕಿರುವ ಅಗತ್ಯ ಟ್ರೆಕ್ಕಿಂಗ್ ಬ್ಯಾಗ್, ರೇನ್ ಕೋಟ್, ಮತ್ತಿತರ ಸಾಮಗ್ರಿಗಳೂ ಲಭ್ಯ. ಕಾಶ್ಮೀರದ ಲೇಹ್ ಗೆ ಬೈಕ್ ರೈಡಿಂಗ್ ಮಾಡುವ ಆಸಕ್ತಿ ಇದ್ದರೆ, ಅದನ್ನೂ ಇಲ್ಲಿಂದಲೇ ಶುರು ಮಾಡಿ!