ಶುಕ್ರವಾರ, ಮಾರ್ಚ್ 30, 2007

ನಗುವ ಮುಖದ ಹಿಂದೆ...


ನಾನಾಗ ಎರಡನೇ ವರ್ಷದ ಬಿ ಎ ಓದುತ್ತಿದ್ದೆ. ಎನ್ ಎಸ್ಸೆಸ್ಸು, ಸಾಂಸ್ಕೃತಿಕ ಕಾರ್ಯಕ್ರಮ ಅದೂ ಇದೂ ಮಣ್ಣಾಂಗಟ್ಟಿ ಅಂತ ಕ್ಲಾಸಿಗಿಂತ ಹೊರಗೆ ತಿರುಗುತ್ತಿದ್ದುದೇ ಹೆಚ್ಚು. ನಮ್ಮ ಟೀಮೂ ಚೆನ್ನಾಗಿಯೇ ಇತ್ತು. ಎಲ್ಲರೂ ಖುಷಿ ಖುಷಿಯಾಗಿ ತಿರುಗಾಡುತ್ತಿದ್ದೆವು, ಜಾತ್ರೆ, ನಾಟ್ಕ, ಸಮಾಜ ಸೇವೆ ....

ಒಂದು ದಿನ ನನ್ನ ಜೂನಿಯರ್ ಶಿವಪ್ಪ ಬಂದು "ಬ್ಲಡ್ ಡೊನೇಟ್" ಮಾಡೋರು ಒಂದು ನಾಲ್ಕು ಜನ ಬೇಕಾಗಿತ್ತು ಅಂದ. ಶಿವಪ್ಪ ಅಂದ್ರೆ ನಮಗೆಲ್ಲ ಅಚ್ಚುಮೆಚ್ಚು. ಇಡೀ ದಿನ ನಗು ನಗುತ್ತಾ, ಇದ್ದವರ ಕಾಲೆಳೆದುಕೊಂಡು ಕಾಲೇಜು ತುಂಬಾ ಪುಟು ಪುಟು ಓಡಾಡಿಕೊಂಡಿದ್ದವನು . ಹೃದಯ ಶ್ರೀಮಂತಿಕೆ ಇರುವಾತ. ನಮ್ಮ ಕಾಲೇಜಿನ ಕಲ್ಚರಲ್ ಟೀಮು ಅವನಿಲ್ಲದೇ ಇದ್ದರೆ ಅಪೂರ್ಣ. ಮಿಮಿಕ್ರಿ, ಮೈಮು, ನಾಟ್ಕ, ಯಾವುದಕ್ಕಾದರೂ ಸೈ! ಅವನು ಬ್ಲಡ್ ಡೊನೇಟ್ ಮಾಡೋಕೆ ಕೇಳ್ಕೋತಾ ಇದಾನೆ ಅಂದ ಮೇಲೆ ನಿರಾಕರಿಸೋ ಮಾತೇ ಇರಲಿಲ್ಲ.

ನಮ್ಮ ಕಾಲೇಜಿಗೆ ಈ ತರಹ "ರಕ್ತದಾನ ಮಾಡಿ" ಅಂತ ಮನವಿಗಳು ಯಾವಾಗಲೂ ಬರುತ್ತಿರುತ್ತವೆ. ಒಂದು ಬಾಟಲಿ ರಕ್ತಕ್ಕೆ, ೧೦೦೦ ರೂಪಾಯಿಗಳವರೆಗೆ ಚಾರ್ಜ್ ಮಾಡುತ್ತಾರೆ ಆಸ್ಪತ್ರೆಯವರು. ಯಾರಾದರೂ ದಾನಿಗಳು ದೊರಕಿದಲ್ಲಿ ಅವರ ರಕ್ತ ಪಡೆದುಕೊಂಡು, ರೋಗಿಗೆ ಬೇಕಾದ ರಕ್ತವನ್ನ ೩೫೦-೪೦೦ರೂಗಳಿಗೆ ನೀಡುತ್ತಾರೆ. ಬಡ ಕುಟುಂಬಗಳಿಗೆ ಸಾವಿರಗಟ್ಟಲೆ ಮೊತ್ತವನ್ನು ಭರಿಸುವ ಶಕ್ತಿ ಇರುವುದಿಲ್ಲ. ಕೆಲಬಾರಿ ೨೦-೩೦ ಬಾಟಲಿ ರಕ್ತದ ಅವಶ್ಯಕತೆಯೂ ಇರುತ್ತದೆ. ಅಂತಹ ಸಂದರ್ಭದಲ್ಲಿ ಅವರಿಗೆ ಸಹಾಯಕ್ಕೆ ಬರುವುದು ದೊಡ್ಡ ಸಂಖ್ಯೆಯಲ್ಲಿ ಲಭ್ಯವಿರುವ ಕಾಲೇಜಿನ ಮಕ್ಕಳು. ಹಾಗಂತ ಎಲ್ಲ ಮಕ್ಕಳೂ ರೆಡಿ ಇರುತ್ತಾರೆ ರಕ್ತದಾನಕ್ಕೆ ಅಂತಲ್ಲ, ಒಂದಿಷ್ಟು ಜನರಾದರೂ ಸಿಗುತ್ತಾರೆ ಕಾಲೇಜುಗಳಲ್ಲಿ.

ಈ ಬಾರಿ ನಾನು, ವ್ಯಾಸ, ಮತ್ತೊಂದೆರಡು ಜನ ಹೊರಟೆವು. ಶಿವಪ್ಪ ಅದೇ ಊರಿನವನಾದ್ದರಿಂದ, ಯಾರೋ ಬಂದು ಅವನ ಬಳಿ ಕೇಳಿಕೊಂಡಿರುತ್ತಾರೆ ಅಂತ ಅಂದುಕೊಂಡೆ. ಮಂಗಳೂರಿನ ಬಸ್ಸು ಹತ್ತಿ ಕೂತಾದ ಮೇಲೆ ಗೊತ್ತಾಯಿತು, ಶಿವಪ್ಪನ ತಂದೆಯವರಿಗೇ ಹುಷಾರಿಲ್ಲವಂತೆ ಅಂತ. ಶಿವಪ್ಪನನ್ನ ನೋಡಿದೆ, ಅವನು ಎದುರುಗಡೆ ಸೀಟಲ್ಲಿ ಭಯಂಕರ ಜೋಕು ಹೇಳಿ ಯಾರನ್ನೋ ನಗಿಸುತ್ತಿದ್ದ!

ಮಂಗಳೂರಿನ ಆಸ್ಪತ್ರೆ ತಲುಪುತ್ತಿದ್ದಂತೆ ಶಿವಪ್ಪ ಹೇಳಿದ, ನನ್ನ ತಂದೆಯವರಿಗೆ ಕ್ಯಾನ್ಸರ್ ಆಗಿದೆ, ಅವರಿಗೆ ಆಪರೇಷನ್ ಮಾಡುತ್ತಾರಂತೆ, ನಾಳೆ ನಾಡಿದ್ದಿನ ಹಾಗೆ. ೪-೫ ಬಾಟಲು ರಕ್ತ ಬೇಕಾಗಬಹುದೇನೋ ಅಂತ. ಶಿವಪ್ಪನ ತಂದೆಗೆ ಕ್ಯಾನ್ಸರ್ ಅನ್ನೋದೇ ನನಗೆ ಅರಗದ ವಿಷಯವಾಗಿತ್ತು. ಅವರು ಅಡ್ಮಿಟ್ ಆಗಿ ವಾರಗಟ್ಟಲೆ ಆಗಿತ್ತಂತೆ. ನಮಗ್ಯಾರಿಗೂ ಅದರ ಸುಳಿವು ಕೂಡಾ ಇರಲಿಲ್ಲ. ಅವನು ಕಾಲೇಜಿನಲ್ಲಿ ದಿನಾ "ಗಮ್ಮತ್" ಮಾಡಿಕೊಂಡಿದ್ದ!

ರಕ್ತ ಕೊಟ್ಟಾದಮೇಲೆ ನಾವೆಲ್ಲ ಅವನ ತಂದೆಯನ್ನ ನೋಡಲು ಹೋದೆವು. ಅವರು ಆ ಆಸ್ಪತ್ರೆಯ ತೀರಾ ಸಾಮಾನ್ಯ ವಾರ್ಡಿನ ಮತ್ತೂ ಸಾಮಾನ್ಯ ಬೆಡ್ದೊಂದರ ಮೇಲೆ ಮಲಗಿದ್ದರು. ಮುಖದ ಕ್ಯಾನ್ಸರ್ ಆಗಿತ್ತು . ಮಾತಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ.. ಕಾಯಿಲೆ ಅಷ್ಟು ಉಲ್ಬಣಗೊಂಡಿತ್ತು. ನಮಗೆಲ್ಲ ಅರಿವಾಯಿತು, ಇನ್ನು ಇವರು....

ಶಿವಪ್ಪ ಅವರಿಗೆ ನಮ್ಮನ್ನೆಲ್ಲ ತೋರಿಸಿ, "ನಿಮಗೆ ರಕ್ತ ಕೊಡೋಕೆ ಬಂದಿದ್ದು ಇವರೆಲ್ಲ, ನನ್ನ ಫ್ರೆಂಡ್ಸು.." ಅಂತ ಪರಿಚಯ ಮಾಡಿಕೊಟ್ಟ... ನಾವು ಸುಮ್ಮನೆ ನೋಡುತ್ತ ನಿಂತಿದ್ದೆವು.

ಅವರಿಗೆ ಏನನ್ನಿಸಿತೋ, ಕುಳಿತಲ್ಲಿಯೇ ಕಣ್ಣ ತುಂಬ ನೀರು ತುಂಬಿಕೊಂಡು ನಮಗೆ ಕೈ ಮುಗಿದು ಬಿಟ್ಟರು.

ಶಿವಪ್ಪ ಕಂಬವೊಂದರ ಹಿಂದೆ ನಿಂತು ಕಣ್ಣೊರೆಸಿಕೊಳ್ಳುತ್ತಿದ್ದ. ನಮಗಾರಿಗೂ ಮಾತೇ ಹೊರಡಲಿಲ್ಲ..

ಅವನ ತಂದೆ ಆರ್ತ ಸ್ಥಿತಿಯಲ್ಲಿ ನಮಗೆ ಕೈ ಮುಗಿದ ಆ ಒಂದು ಕ್ಷಣವನ್ನ ನೆನಪಿಸಿಕೊಂಡರೆ ಇವತ್ತಿಗೂ ನನ್ನ ಮನಸ್ಸು ಒದ್ದೆಯಾಗುತ್ತದೆ.

ನಗುವ ಮುಖದ ಹಿಂದಿರುವ ಸತ್ಯದ ದರ್ಶನ ಒಮ್ಮೆಗೇ ಆಗುವುದಿದೆಯಲ್ಲ... ಅಬ್ಬಾ!!

ಬುಧವಾರ, ಮಾರ್ಚ್ 28, 2007

ಶಿಕ್ಷಕರೆಂದರೆ...

ಮಿತ್ರ ರಾಘವೇಂದ್ರ ಹೆಗ್ಡೆ , ನಾನು ಮೊನ್ನೆ ಸಿಕ್ಕಿ- ಸಿಕ್ಕಿದ್ದು ಹರಟುತ್ತಿದ್ದೆವು, ಎಂದಿನಂತೆ. ಮಾತು ಶಿಕ್ಷಕರು, ಅವರ ಬವಣೆಗಳು ಇತ್ಯಾದಿಗಳ ಕುರಿತು ಹೊರಳಿತು. ಅವನೂ ಕೂಡಾ ಪ್ರಾಧ್ಯಾಪಕನೇ, ಆರ್ಟ್ ಕಾಲೇಜಿನಲ್ಲಿ. ನನ್ನ ಅಪ್ಪನೂ ಕೂಡಾ ಅಧ್ಯಾಪಕರೇ ಆಗಿರುವುದರಿಂದ ಅದೂ ಇದೂ ಘಟನೆಗಳನ್ನ ಹಂಚಿಕೊಳ್ಳುತ್ತಿದ್ದೆವು.

ಅವನು ಒಂದು ದಿನ ಯಾವುದೋ ಕ್ಲಿಷ್ಟಕರ ಡಿಸೈನ್ ಮಾಡಿಕೊಂಡು ಹೋಗಿದ್ದನಂತೆ ತರಗತಿಗೆ. ಆ ಇಡೀ ಪಿರಿಯಡ್ಡು ವಿದ್ಯಾರ್ಥಿಗಳು ಅವೇ ಚಿತ್ರ ಬಿಡಿಸಬೇಕು, ಆಮೇಲೆ ಅದರ ಬಗ್ಗೆ ಮಾತಾಡೋಣ ಅನ್ನುವುದು ಪ್ಲಾನು. ಆ ಡಿಸೈನನ್ನು ಅವರೆದುರಿಗಿಟ್ಟು, ನೀವೆಲ್ಲ ಬಿಡಿಸಿ ಅಂತ ಹೇಳಿ ಮುಗಿಸುವುದರೊಳಗೆ, ಒಬ್ಬಾತ ಎದ್ದು, ಕಿಸೆಯಿಂದ ಸಟಕ್ಕನೆ ಮೊಬೈಲ್ ತೆಗೆದು, ಆ ಡಿಸೈನ್ ನ ಫೋಟೋ ತೆಗೆದು "ಸರ್ ನಾನಿದನ್ನ ಎಲ್ಲರಿಗೂ ಮೈಲ್ ಮಾಡ್ತೀನಿ ಸಾರ್, ನೀವೀಗ ಹೊಸ ವಿಷಯ ಹೇಳ್ಕೊಡಿ" ಅಂದನಂತೆ! ರಾಘುವಿನ ಶ್ರಮಕ್ಕೆ ಬೆಲೆಯೇ ಇಲ್ಲದಂತಾಗಿತ್ತು.

ಶಿಕ್ಷಕರ ಶ್ರಮ ಹೆಚ್ಚಾಗಿ ಗಮನಕ್ಕೆ ಬಾರದೆಯೇ ಉಳಿಯುತ್ತದೆ. ಒಂದನೇ ಕ್ಲಾಸು ಓದುತ್ತಿದ್ದಾಗಿನ ಟೀಚರು, ಇನ್ನೂ ಅಲ್ಲಿಯೇ ಇರುತ್ತಾರೆ, ಹೊಸ ಮಕ್ಕಳಿಗೆ ಅ ಆ ಇ ಈ ಕಲಿಸುತ್ತಾ. ನಾವು ಯಾವುದೋ ದೊಡ್ಡ ಕಂಪನಿಯ ಕೆಲಸದೊಳಗಿರಬಹುದು.

ಗುರುರಾಜ ಕರ್ಜಗಿ ಎಂಬ ಕಲಾವಿದರಿಗೆ, ಹುಟ್ಟೂರಿನ ಶಾಲೆಯಲ್ಲ್ಲಿ ಸನ್ಮಾನ ಮಾಡಿದರಂತೆ, ಅವರ ಸಾಧನೆಗಾಗಿ. ಆಗ ಅವರು ಗುರುಗಳ ಬಗ್ಗೆ ಹೇಳಿದ ಮಾತುಗಳಿವು:

"ಶಿಕ್ಷಕರು ಎಂದರೆ ನಮಗೆಲ್ಲ ಒಂದು ತೆರನಾದ ಔದಾಸೀನ್ಯ ಭಾವ. ನಾವು ಬೆಳೆದು ಎಲ್ಲೋ ಹೋಗಿದ್ದರೂ, ಈ ಅಧ್ಯಾಪಕರುಗಳು ಅಲ್ಲೇ ಇರುತ್ತಾರಲ್ಲ ಅಂತ. ಆದರೆ ಸತ್ಯ ಅದಲ್ಲ, ಶಿಕ್ಷಕರು ಅಂದರೆ, 'ಕೈಮರ' (ದಿಕ್ಸೂಚಿ) ಇದ್ದ ಹಾಗೆ. ಅವರು ನೀವು ಈ ಕಡೆ ಹೋಗಿ , ಆ ಕಡೆ ಹೋಗಿ ಎಂದು ದಿಕ್ಕು ತೋರಿಸುತ್ತ ಸದಾ ಕಾಲ ನಿಂತಲ್ಲೇ ನಿಂತಿರುತ್ತಾರೆ. ನಾವು ಅವರು ಹೇಳಿದ ಕಡೆಗೆ ಸಾಗುತ್ತೇವೆ. ಒಂದು ವೇಳೆ ಆ ಕೈಮರದ, ದಿಕ್ಸೂಚಿಯ ದಿಕ್ಕು ಬದಲಾದರೆ, ಅಥವಾ ತಪ್ಪು ದಾರಿ ತೋರಿಸಿದರೆ ಜೀವನ ಪರ್ಯಂತ ಗುರಿ ಮುಟ್ಟದೆ ಅಲೆಯಬೇಕಾಗುತ್ತದೆ"!

ಈ ಮಾತುಗಳಿಗೆ ಬೇರೆ ವಿವರಣೆಯೇ ಬೇಕಾಗಿಲ್ಲ!

ಮಂಗಳವಾರ, ಮಾರ್ಚ್ 27, 2007

ಕುಡುಕರ್ ಸಾವಾಸ ಅಲ್ಲ!

ಏನೇ ಹೇಳಿ, ಈ ಕುಡುಕರಿದಾರಲ್ಲ, ಅವರ ಸಹವಾಸ ಮಾತ್ರ ಅಲ್ಲ ನೋಡಿ. ಅವರಿಗೆ ಬೈಯೋ ಹಾಂಗೂ ಇಲ್ಲ, ಬೈದ್ರೆ ಅರ್ಥ ಆಗೋದೋ ಇಲ್ಲ!

ನಾನು ಮತ್ತು ದಯಾನಂದ ಒಂದಿನ ರಾತ್ರೆ ೧೦ ಗಂಟೆ ಸುಮಾರಿಗೆ ಯಾರದೋ ಮನೆಗೆ ಊಟಕ್ಕೆ ಹೋಗಿ ವಾಪಸ್ ಬರುತ್ತಿದ್ದೆವು. ದಯಾನಂದ ಬೈಕ್ ಹೊಡೀತಾ ಇದ್ದ. ಅದೂ ಇದು ಹರಟೆ ಹೊಡ್ಕೊಂಡು ಅರಾಮಾಗಿ ಬರ್ತಾ ಇದ್ವಿ. ರಸ್ತೆ ಬೇರೆ ಖಾಲಿ ಇತ್ತು. ಶಂಕರ್ನಾಗ್ ಸರ್ಕಲ್ ನ ಅರಳೀ ಮರಕ್ಕೆ ಒಂದು ಸುತ್ತು ಹೊಡೆದು ಮುಂದೆ ಬಂದ್ರೆ, ನಮ್ಮಿಂದ ಒಂದು ೧೦ ಮೀಟರ್ ದೂರದಲ್ಲಿ ಒಬ್ಬ ಕುಡುಕ ಮಹಾಶಯ, ತಾನು ಜೋಲಿ ಹೊಡೆಯುತ್ತ, ತನ್ನ ಜೊತೆ ಇರುವ ಲಡಕಾಸಿ ಸೈಕಲ್ಲನ್ನೂ ಕೂಡ ಹೇಗೋ ಬ್ಯಾಲೆನ್ಸ್ ಮಾಡುತ್ತಾ, ನಡು ರಸ್ತೆಯಲ್ಲಿ ಒದ್ದಾಡುತ್ತಿದ್ದ. ನಾವೇನಾದರೂ ಅದೇ ವೇಗದಲ್ಲಿ ಹೋಗಿದಿದ್ದರೆ ಅವನಿಗೇ ಗುರಿಯಿಟ್ಟು ಢಿಕ್ಕಿ ಹೊಡೆಯೋದು ಖಾತ್ರಿಯಾಗಿತ್ತು. ದಯಾ ಅನಿವಾರ್ಯವಾಗಿ ಬ್ರೇಕ್ ಹಾಕಿದ, ನಾವಿಬ್ಬರೂ ಬಿದ್ದೆವು, ಬೈಕ್ ಸಮೇತ.

ನಾವು ಎದ್ದು, ಬೈಕನ್ನೂ ಎಬ್ಬಿಸಿ, ಧೂಳು ಕೊಡವಿಕೊಂಡು ನಿಲ್ಲುವ ಹೊತ್ತಿಗೆ ಆ ಕುಡುಕ ನಮ್ಮ ಬಳಿಗೇ ಬಂದ, ಅವನ ತಗಡು ಸೈಕಲ್ ಜೊತೆಗೆ, ಮತ್ತು ಬಹಳ ಸವಿನಯದಲ್ಲಿ ಕೇಳಿದ,

"ನಾಯಿ ಅಡ್ಡ ಬಂತಾ ಸಾರ್?, ಭಾಳ ಬೇವರ್ಸಿಗಳು ಈ ನಾಯಿ ಮುಂಡೇವು, ಏನ್ ಮಾಡೋದು ಹೇಳಿ..
ಚೇ, ಎಲ್ಲಾದ್ರು ಪೆಟ್ಟಾಯ್ತಾ?"

ನಮಗೆ ಏನು ಉತ್ತರಿಸಬೇಕೆಂದೇ ತಿಳಿಯಲಿಲ್ಲ!

ಗುರುವಾರ, ಮಾರ್ಚ್ 22, 2007

ಸಲ್ಲಾಪ

ಗೆಳೆಯಾ ನಿನ್ನ ಒಲವ ಮಾತು, ನನ್ನ ಜೀವ ತುಂಬಿದೆ
ಪ್ರೇಮ ಭಾವ ಸುರಿದು ಒಳಗೆ, ನಾನು ಇಲ್ಲೇ ಕರಗಿದೆ

ಎಷ್ಟೇ ಕರಗಿದರು ನೀನು ಕರಗುವುದು ನನ್ನೆದೆಯ ಒಳಗೆ
ಧಮನಿಗಳ ಒಳಸೇರಿ ಹರಿಯುತ್ತಿ,ಜೀವನದ ಕೊನೆಯವರೆಗೆ.

ಅಯ್ಯೋ ಇನಿಯಾ ನಾನು ಯಾಕೆ ದೇಹದೊಳಗೆ ಹರಿಯುವೆ?
ಎದೆಯಗೂಡು ಸಾಕು ನನಗೆ, ಅಲ್ಲೆ ಮುದುಡಿಕೊಳ್ಳುವೆ!

ಆತ್ಮ ಸಖೀ, ನಿನ್ನ ಮುಗ್ಧ ಪ್ರೇಮಕೇನ ಹೇಳಲಿ
ನನ್ನ ಹೃದಯ ಬಡಿತದಲ್ಲಿ ನಿನ್ನ ಹೆಸರೇ ಕೇಳಲಿ.

ಮಾತು ಸಾಕೋ ಸುಮ್ಮನಿರೋ, ಭುಜಕೆ ಹಾಗೇ ಒರಗುವೆ
ನಿನ್ನ ತೋಳ ಬಿಸುಪಿನಲ್ಲಿ, ಜಗವನಿಲ್ಲೆ ಮರೆಯುವೆ.

ಇವತ್ತು "ವಿಶ್ವ ಕವನ ದಿನ"! ಆ ನೆಪದಲ್ಲೊಂದು ಕವನ..

ಮಂಗಳವಾರ, ಮಾರ್ಚ್ 20, 2007

ನಗುವ ಮುದುಕ

ನಾನು ನೋಡುತ್ತಿರುವ ದಿನದಿಂದಲೂ,
ಈ ಮುದುಕ ಹಾಗೆಯೇ ಇದ್ದಾನೆ
ಮಣ್ಣು ಬಣ್ಣದ ಲುಂಗಿ,ಹಳೆಯ ಹರಿದಂಗಿ.
ಜೊತೆಗೊಂದು ಬಾಗಿದ ಬಿದರ ಕೋಲು,
ಅವನಂತೆಯೇ..
ನಡೆಯುತ್ತಲಿರುತ್ತಾನೆ,
ಅವನ ಮನೆಯೆದುರಿನ ಇಳಿಜಾರ ಹಾದಿಯಲಿ.

ಸೋಜಿಗವೆಂದರೆ,
ನಾ ನೋಡಿದಾಗಲೆಲ್ಲ ಇವನು
ನಗುತ್ತಿರುತ್ತಾನೆ, ಹಲ್ಲಿಲ್ಲದ ಬಾಯ ತೋರಿಸುತ್ತಾ,
ಕನ್ನಡಕದೊಳಡಗಿದ ಗುಳಿ ಕಣ್ಣಲ್ಲಿ ದಿಟ್ಟಿಸುತ್ತಾ.
ಮಗ ಮನೆಯಲಿಲ್ಲ,ಹೆಂಡತಿ ಸತ್ತು
ದಶಕವಾಯಿತಂತೆ.
ಹೊತ್ತು ಕೂಳಿಗೆ ಗತಿ ಯಾರೋ,
ಆದರೂ ನಗುತಾನಲ್ಲ ಮುದುಕ
ಅಂತ ಆಶ್ಚರ್ಯ ನನಗೆ!

ದಿನ ಕಳೆದ ಹಾಗೆ ಗೊತ್ತಾಯಿತು,
ಅದು ನಗುವಲ್ಲ, ಮೊಗದ ಸ್ನಾಯು ಬಿಗಿದು,
ನಗುವ ರೂಪ ಪಡೆದಿದೆ!
ಹಾಗಾಗಿ ಆತ ನಗುತ್ತಲೇ ಇರುತ್ತಾನೆ,
ಎಂದೆಂದಿಗೂ..
ಅಚ್ಚಿನೊಳಗಿಂದ ಬಂದ ಮೂರ್ತಿಯಂತೆ!

ಶುಕ್ರವಾರ, ಮಾರ್ಚ್ 16, 2007

"ಹಳದೆಂದು ನೀನದನು ಕಳೆಯುವೆಯ ಮರುಳೆ"

ಅದು ಯುಗಾದಿ. ಸಿಹಿಕಹಿಯನ್ನು ಸಮಾನವಾಗಿ ಸ್ವೀಕರಿಸುತ್ತೇವೆಂಬ ಆಶಯದೊಂದಿಗೆ ಬೇವು-ಬೆಲ್ಲವನ್ನೂ ಹಂಚಿಕೊಳ್ಳುತ್ತೇವೆ. ದೇವಸ್ಥಾನದಲ್ಲೊಂದು ಪೂಜೆ ಮಾಡಿಸಿ, ಹಣ್ಣು-ಕಾಯಿ ಮನೆಗೆ ತಂದು, ಪಾಯಸದ ಊಟ ಮಾಡಿ ಮನೆಮಂದಿಯೆಲ್ಲಾ ಒಟ್ಟಾಗಿ ಕೂತು ಪಂಚಾಂಗ ಶ್ರವಣ ಮಾಡುತ್ತೇವೆ. ಆದರೆ ಎಷ್ಟು ಮನೆಗಳಲ್ಲಿ ಇವೆಲ್ಲಾ ನಿಜವಾಗಿಯೂ ನಡೆಯುತ್ತಿದೆ? ನಮ್ಮ ಯುಗಾದಿ ತೊಡಗುವುದು ಯಾವುದೋ ವ್ಯಕ್ತಿಯ ಜನ್ಮದಿನದಿಂದಲೋ, ಶಕಪುರುಷನ ಪಟ್ಟಾಭಿಷೇಕದಿಂದಲೋ ಅಲ್ಲ. ಮಾನವ ಕೇಂದ್ರಿತವಾದ `ಹುಚ್ಚಾಟ'ಗಳ ಪ್ರದರ್ಶನವೂ ಇದಲ್ಲ. ಇದಕ್ಕೊಂದು ಪಾವಿತ್ರ್ಯ ಇದೆ. ವಸಂತೋದಯದ ಕಾಲ ಇದು. ಸೂರ್‍ಯಚಂದ್ರರ ಗತಿಯನ್ನು ಅವಲಂಬಿಸಿ ಸೌರಮಾನ, ಚಾಂದ್ರಮಾನ ಎಂಬೆರಡು ಯುಗಾದಿಗಳ ಆಚರಣೆ ಹುಟ್ಟಿಕೊಂಡದ್ದು.

ಚಾಂದ್ರಮಾನ ರೀತ್ಯಾ ಹೊಸ ಸಂವತ್ಸರದ ಆರಂಭ ಚೈತ್ರ ಶುದ್ಧ ಪಾಡ್ಯದಂದು. ಇದೇ ಚಾಂದ್ರಮಾನ ಯುಗಾದಿ. ಮೇಷಮಾಸದ ಪ್ರಾರಂಭದ ದಿನವೇ ಸೌರಮಾನ ಯುಗಾದಿ. ಭೂಮಿಯ ಮೇಲೆ ನಡೆಯುವ ಹಲವು ವೈಜ್ಞಾನಿಕ ಕ್ರಿಯೆಗಳಿಗೆ ಸೂರ್ಯಚಂದ್ರರೇ ಆಧಾರವಾಗಿರುವುದರಿಂದ ಈ ಆಚರಣೆಗಳಿಗೆ ವೈಜ್ಞಾನಿಕ ಮಹತ್ವವೂ ಇದೆ.ಆದರೆ ಈಗ ಏನಿದ್ದರೂ ಜನವರಿ ಒಂದೇ ಹೊಸವರ್ಷ. ಡಿಸೆಂಬರ್ ೩೧ರಂದು ರಾತ್ರಿ ಹನ್ನೆರಡರವರೆಗೆ ಕುಡಿದು ಕುಣಿಯುತ್ತಾ ಬರಲಿರುವ ವರ್ಷವನ್ನು ಸ್ವ್ವಾಗತಿಸುವುದೇ ಕ್ರಮವಾಗಿ ಬಿಟ್ಟಿದೆ. ಪಾಡ್ಯ, ಬಿದಿಗೆ ಮೂಲೆಗುಂಪಾಗಿ ನಾವು `ಸಂಡೇ' `ಮಂಡೇ'ಗಳಾಗಿದ್ದೇವೆ. ಒಂದು ನೆನಪಿರಲಿ. ಸಾವಿರಾರು ವರ್ಷಗಳ ಹಿಂದೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಭಾಷೆಗಳೇ ಹುಟ್ಟದಿದ್ದ ಕಾಲದಲ್ಲಿ ನಮ್ಮ `ಆದಿತ್ಯ'ವಾರ (`ಸನ್'ಡೇ) `ಸೋಮ'ವಾರ (`ಮೂನ್'ಡೇ) ಗಳಿದ್ದವು! ರಾಮಾಯಣದ ಕಾಲದಲ್ಲೇ ತಿಥಿ, ನಕ್ಷತ್ರ, ಋತು, ಸಂವತ್ಸರಗಳಿದ್ದವು. ಭಾರತೀಯ ಆಚರಣೆಗಳ ಪ್ರಾಚೀನತೆ ಇವುಗಳಿಂದಲೇ ಅರಿವಿಗೆ ಬರುತ್ತದೆ.

ಮುಸ್ಲಿಂ ರಾಷ್ಟ್ರಗಳಲ್ಲಿ ಈಗಲೂ ಶುಕ್ರವಾರವೇ ರಜೆ. ಕ್ರೈಸ್ತರಿಗೆ ಭಾನುವಾರ ಪವಿತ್ರ. ನಮಗೇ......? ನಾಗರಿಕರಾಗುವ ಭರದಲ್ಲಿ ಅಲ್ಲೂ ಅಲ್ಲದ, ಇಲ್ಲೂ ಸಲ್ಲದ ಎಡಬಿಡಂಗಿಗಳಾಗಿದ್ದೇವೆ. ನಾವು ಎಡವಿದ್ದೇ ಇಲ್ಲಿ. ಬೇರೆ ಸಂಸ್ಕೃತಿಯಲ್ಲಿರುವ ಒಳ್ಳೆಯದನ್ನು ಪಡೆದುಕೊಳ್ಳೋಣ. ನಮ್ಮದನ್ನು ಬಿಡದಿರೋಣ ಎಂಬ ಮನೋಧರ್ಮವೇ ಮಾಯವಾಗಿದೆ. ಬಹು ಸುಂದರವಾದ ನಮ್ಮ ಸಂಸ್ಕೃತಿಯ ಯುಗಾದಿಯಂತಹ ಆಚರಣೆಗಳನ್ನು ಪರಕೀಯರ ಅನುಕರಣೆಯಿಂದ ಮರೆತಿದ್ದೇವೆ. ಇಲ್ಲವೇ ಬಿಟ್ಟುಬಿಟ್ಟಿದ್ದೇವೆ.

ಸಿಹಿಕಹಿ ಹಂಚಿಕೊಳ್ಳುತ್ತಾ ಆರಂಭವಾಗುವ ಯುಗಾದಿ ಎಲ್ಲಿ? ಅಮಲೇರಿ ಕುಣಿಯುವ ಜನವರಿ ೩೧ ಎಲ್ಲಿ?ಕಷ್ಟನಷ್ಟಗಳೆಲ್ಲಾ `ವ್ಯಯ'ಗೊಂಡು ಸರ್ವರಿಗೂ ಜಯ ದೊರಕಲೆಂಬ ಆಶಯದೊಂದಿಗೆ `ಸರ್ವಜಿತ್' ಸಂವತ್ಸರ ಆಗಮಿಸುತ್ತಲಿದೆ. ಹೊಸ ವಸಂತೋದಯದೊಂದಿಗೆ ಹೊಸ ಕನಸುಗಳೂ ಚಿಗುರಲಿ. ಹಳೆಯ ಕನಸುಗಳು ನನಸಾಗಲಿ.

"ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತು
ಹಳದೆಂದು ನೀನದನು ಕಳೆಯುವೆಯ, ಮರುಳೆ?
ತಳಹದಿಯದಲ್ತೆ ನಮ್ಮೆಲ್ಲ ಹೊಸತಿಳಿವಿಂಗೆ
ಹಳೆ ಬೇರು ಹೊಸ ತಳಿರು-ಮಂಕುತಿಮ್ಮ ''

(ಬರಹ ಕೃಪೆ- ತಂಗಿ ಶ್ರೀಕಲಾ)

ಯುಗಾದಿಗೆ ಏನು ಬರೆಯೋದು ಅಂತ ಆಲೋಚನೆ ಮಾಡ್ತಾ ಇದ್ದಾಗ, ತಂಗಿ ಏನೋ ಬರೀತಿದ್ದಳಲ್ಲ ಅಂತ ನೆನಪಾಯಿತು, ಅವಳ ಬರಹ ಕದ್ದು, ಇಲ್ಲಿ ಹಾಕಿದ್ದೇನೆ! ಎಲ್ಲರಿಗೂ ಯುಗಾದಿಯ ಶುಭಾಶಯಗಳು.

ಗುರುವಾರ, ಮಾರ್ಚ್ 15, 2007

ಪ್ಲಾಟ್ ಫಾರಂ......

ಭೂಸಾವಾಳದ ರೈಲ್ವೇ ಸ್ಟೇಷನ್ ನ over bridge, ಭಾರತದ ದು:ಸ್ಥಿತಿಯನ್ನು ಬಿಂಬಿಸುವ ಒಂದು ಜಾಗ. ಸುಮಾರು ನೂರು- ನೂರೈವತ್ತು ಮೀಟರ್ ಉದ್ದ ಇರುವ ಈ ಸೇತುವೆ, ದಿನವೂ ಎಷ್ಟೋ ಜನರ ಕಾಲ್ತುಳಿತ ಅನುಭವಿಸುತ್ತದೆ. ಮೂರು ಮೀಟರ್ ಅಗಲದ ಈ ಸೇತುವೆ, ರೈಲು ಬಂದಾಗ ಮತ್ತಷ್ಟು ರಷ್ಶು. ಹೋಗುವುದಕ್ಕೆ ಜಾಗ ಇರುವುದಿಲ್ಲ, ಅಷ್ಟು ಅರ್ಜೆಂಟು ಎಲ್ಲರಿಗೂ. ನೂಕುನುಗ್ಗಲು. ಓಡುವವರು, ನಡೆಯುವವರು, ಕುರುಡರು, ಕುಂಟರು , ದೇಶದ ಎಲ್ಲ ಕಡೆಯ ಜನರು ಬರುತ್ತಾರೆ- ಹೋಗುತ್ತಾರೆ. ಬ್ರಿಡ್ಜ್ ಯಾವಾಗಲೂ ಧಡ್ ಧಡ್ ಸದ್ದು ಮಾಡುತ್ತಲೇ ಇರುತ್ತದೆ.

ಇದೇನೇ ಆದರೂ, ಇಲ್ಲಿನ ಒಂದು ಘಟನೆ ಮಾತ್ರ, ಒಂದು ಕ್ರೂರ ಸ್ವಪ್ನದಂತೆ ನನ್ನ ಮನಸ್ಸನ್ನು ಆವಾಗಾವಾಗ ಹಾದು ಹೋಗುತ್ತಲೇ ಇರುತ್ತದೆ.

ಆ ದಿನ , ಇನ್ನೂ ನೆನಪಿದೆ. ಎಂದಿನಂತೆ ೭.೨೦ರ ದಾದರ್ ಗಾಡಿಯನ್ನು ಹಿಡಿಯಲು ಓಡುತ್ತಿದ್ದೆ. ತನ್ನ ಮಗಳನ್ನು ಮಲಗಿಸಿ ಕುಳಿತಿದ್ದ ಒಬ್ಬ ಹೆಂಗಸು ಇದ್ದಕ್ಕಿಂದ್ದಂತೆ ಅವಳನ್ನು ಎಬ್ಬಿಸಲು ಶುರು ಮಾಡಿದಳು. ಮಗು ಏಳಲಿಲ್ಲ. ಮತ್ತೊಮ್ಮೆ, ಮಗದೊಮ್ಮೆ ಪ್ರಯತ್ನಿಸಿದಳು, ಯಾವುದೇ response ಇಲ್ಲ! ಎದೆಯ ಮೇಲೆ ಕೈಯಿಟ್ಟಳು, ಕೈ ಮುಟ್ಟಿ ನೋಡಿದಳು, ಬಹುಶಃ ತಣ್ಣಗಿತ್ತು. ಯಾವುದೇ ಉಸಿರಾಟದ ಲಕ್ಷಣ ಸಹಃ ಕಾಣಲಿಲ್ಲ. ಒಮ್ಮೆಗೇ ತಾಯಿಯ ಮುಖಚರ್ಯೆಯೂ ಬದಲಾಯಿತು. ಜೋರಾಗಿ ಅಳತೊಡಗಿದಳು. ಮಗಳು ಈ ಭೂಮಿಯನ್ನ ತ್ಯಜಿಸಿದ್ದಳು. ರೋದನ ಇನ್ನೂ ಜೋರಾಯ್ತು. ಜನರೆಲ್ಲ ಏನಾಯ್ತೆಂದು ನೋಡಲು ಅವಳನ್ನ ಮುತ್ತಿದರು. " ರೋನಾ ಮತ್ ತೇರಿ ಬೇಟಿ ಮರ್ ಗಯಿ ಹೈ" ಎಂದ ಒಬ್ಬ. "ಹೇ ಶೋರ್ ಬಂದ್ ಕರೋ" ಅಂದ ಇನ್ನೊಬ್ಬ.

ಸ್ವಲ ಹೊತ್ತಿನಲ್ಲಿ RPF ಬಂತು. "ಏಯ್ ಚಲ್ ಹಟ್!! ಲಾಶ್ ಲೇಕೇ ಚಲ್!" ಎಂದು ಗದರಿದರು. ಅವಳು ಸುಮ್ಮನೆ ಮಗಳ ಶರೀರವನ್ನು ಹೊತ್ತು,ಸ್ಟೇಶನ್ ನಿಂದ ಹೊರ ನಡೆದಳು, ಅಳುತ್ತಾ... ನಾನು ಇವನೆಲ್ಲ ನೋಡಿ ಪ್ಲಾಟ್ ಫಾರಂ ನಂಬರ್ ೩ಕ್ಕೆ ಹೋಗಿ, trainನಲ್ಲಿ ಕುಳಿತೆ..

ಮರುದಿನ ಬೆಳಗ್ಗೆ ಎಂದಿನಂತೆ ಪ್ಲಾಟ್ ಫಾರಂ ಇವನ್ನೆಲ್ಲ ಮರೆತು, ಜನರ ಕಾಲ್ತುಳಿತ ಅನುಭವಿಸುತ್ತಾ ಬಿದ್ದುಕೊಂಡಿತ್ತು...

Life is Different than what you think, right?!

( ಈ ಘಟನೆ, ನನ್ನ ಸ್ನೇಹಿತ ನಾಣಿಯ ಅನುಭವ. ಅವನದೇ ಬರಹ ಕೂಡಾ. ನಾನು net ಗೆ ಏರಿಸಿದ್ದೇನೆ , ಅಷ್ಟೆ.)

ಗುರುವಾರ, ಮಾರ್ಚ್ 08, 2007

ಭಾವ-೧೦

ತಮ್ಮ ಪಾತ್ರೆ ಪಗಡ,ಮುರುಕಲು ಕುರ್ಚಿ ಮತ್ತಿತರ ಗಂಟು ಮೂಟೆಗಳ ಸಹಿತ ರಸ್ತೆ ಬದಿಯಲ್ಲಿ ಕುಳಿತಿದ್ದ ಆ ಅಮ್ಮ ,ಮಗಳು ಹೊಟ್ಟೆ ತುಂಬ ನಗುತಿದ್ದರು. ಬದುಕು ಸುಂದರವಾಗಿದೆ,ಅಲ್ಲವೆ?!

ಶುಕ್ರವಾರ, ಮಾರ್ಚ್ 02, 2007

ಹೋಳಿಗೊಂದು ಚಂದದ ಹಾಡುಹೋಲಿಗೆ ಎಂಥ ಸುಂದರ ಹಾಡು ನೋಡಿ, ಇದಕ್ಕೂ ಮಿಗಿಲಾದ , ಇಷ್ಟು ಸೊಗಸಾದ ಬಣ್ಣಗಳ ಮಿಶ್ರಣ ಇನ್ನೆಲ್ಲೂ ಕಾಣುವುದಿಲ್ಲ!


ಗೆಳೆಯ ಚಿನ್ಮಯನಿಗೆ ಧನ್ಯವಾದ! ಅವನೇ ಈ ಲಿಂಕು ಕೊಟ್ಟವನು.

ಎಲ್ಲರಿಗೂ ಹೋಳಿಯ- ಕಾಮನ ಹುಣ್ಣಿಮೆಯ ಶುಭಾಷಯಗಳು..

ಎತ್ತಣ ಮಾಮರ..

ನನ್ನ ಹಳೆಯ ಕಂಪನಿಯಲ್ಲಿದ್ದಾಗ ನಡೆದ ಘಟನೆ.

ಒಂದು ದಿನ ಮಧ್ಯಾಹ್ನ, ಯಾವ್ದೋ ನಂಬರ್ ಗೆ ಕಾಲ್ ಮಾಡಿದೆ. ಎಂದಿನಂತೆ ಕೆಲಸ ಖಾಲಿ ಇತ್ತು ( ಸಾಫ್ಟ್ ವೇರ್ ಉದ್ಯಮದಲ್ಲಿ ಯಾವಾಗಲು ಕೆಲಸಗಳು ಖಾಲಿ ಇರುತ್ತವೆ, ಬಿಡಿ). ರಿಂಗ್ ಆಯಿತು. ಫೋನ್ ಆ ಕಡೆಯಿದ್ದದ್ದು ನಡುಗುವ ದನಿ.
"ಸರ್, ಕ್ಯಾನ್ ಇ ಸ್ಪೀಕ್ ಟು ......"
"ಯಾರಪ್ಪಾ ಮಾತಡೋದು?" ಅಚ್ಚ ಕನ್ನಡದಲ್ಲಿ ಉತ್ತರ ಬಂತು.

"ನಾನು ಶ್ರೀನಿಧಿ ಅಂತ, ಒಂದು ಕಂಪನಿಯಿಂದ ಕಾಲ್ ಮಾಡ್ತಾ ಇದೀನಿ. ಒಂದು ಕೆಲಸದ ವಿಚಾರವಾಗಿ ಇಂತವರ ಬಳಿ ಮಾತಾಡಬೇಕಿತ್ತು ..".

"ಹಮ್, ನಾನು ಅವನ ತಂದೆ ಕಣಪ್ಪಾ" ಅಂದ್ರು.

ಸರ್ ಹಾಗಾದರೆ ನಿಮ್ಮ ಮಗ ಬಂದ ಮೇಲೆ ಒಂದು ಫೋನ್ ಮಾಡೋಕೆ ಹೇಳಿ ಅಂತಂದು, ಮಾತು ಮುಗಿಸುವವನಿದ್ದೆ. ಅವರು,
"ಒಂದು ನಿಮಿಷ ..."ಅಂದ್ರು.

"ನಿಮಗೆ ಈ ನಂಬರ್ರು ಹೇಗೆ ಸಿಕ್ಕಿತು?"- ಅವರ ಬಯೋ ಡಾಟದಲ್ಲಿ ಇತ್ತು. ಅದರಿಂದ ತಗೊಂಡೆ"
"ಅದರಲ್ಲಿ ಬೇರೆ ವಿಳಾಸ ಇದೆಯಾ ನೋಡ್ತೀರಾ?"- ನನಗೆ ಅರ್ಥವಾಗಲಿಲ್ಲ. ಹಾ, ಏನು ಅಂದೆ. ಸಂಬಂಧ ಪಡದವರಲ್ಲಿ ಮಾತು ಲಂಬಿಸಲು ಕಿರಿಕಿರಿ ಅನ್ನಿಸುತ್ತದೆ. ದಿನಕ್ಕೆ ಇಂತಹ ಹಲವು ಫೋನ್ ಮಾಡಬೇಕು.

"ನೀನು ನಂಗೆ ಮಗ ಇದ್ದ ಹಾಗೆ ಕಣಪ್ಪ, ವಿಷಯ ಹೇಳ್ತೀನಿ ಕೇಳು, ನನ್ನ ಮಗ, ಅವರ ಅಮ್ಮನ ಹತ್ತಿರ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾನೆ, ಹ್ಯಾಗಾದರೂ ಹುಡುಕಿ ಕೊಡೋಕೆ ಆಗತ್ತಾ?, ಮಗ ಬೆಳೆದು ದೊಡ್ಡವನಾದ ಮೇಲೆ ಏನೆಲ್ಲ ಕಷ್ಟ ಪಡಬೇಕು ನೋಡು.."

ನನಗೆ ಏನು ಹೇಳಲೂ ತೋಚಲಿಲ್ಲ. "ಆಯಿತು ಸಾರ್ ನೋಡ್ತೀನಿ, ಪ್ರಯತ್ನ ಪಡ್ತೀನಿ" ಅಂದೆ , ನನ್ನ ಫೋನ್ ನಂಬರನ್ನ ಆ ಹಿರಿಯರಿಗೆ ಕೊಟ್ಟೆ.

"ನಿನಗೆ ಹೇಗಾದರೂ ಅವನನ್ನ ಕಾಂಟಾಕ್ಟ್ ಮಾಡೋಕೆ ಆಗಬಹುದು, ಈ ನಂಬರು ಸಿಕ್ಕಿದೆ ನಿಮಗೆ, ಬೇರೆ ನಂಬರು ಕಂಡು ಹಿಡಿಯೋದು ಕಷ್ಟವಲ್ಲ ಅಲ್ವೇನೋ " ಅಂದರು. ಏನು ಹೇಳೋಣ ಅವರಿಗೆ?

"ನನ್ನಿಂದ ಆದಷ್ಟು ಪ್ರಯತ್ನ ಮಾಡ್ತೀನಿ ಸಾರ್ ..", ಅಂತೆಲ್ಲ ಏನೇನೋ ಸಮಾಧಾನ ಮಾಡಿ ಫೋನ್ ಇಟ್ಟೆ. ಹೇಗಪ್ಪಾ ಇವರ ಮಗನನ್ನ ಹುಡುಕುವುದು?, ಅಂತ ಅಲೋಚನೆ ಶುರು ಮಾಡಿದೆ, ಏನೋ ಒಂದು ಸಾಹಸ ಕಾರ್ಯ ಮಾಡುತ್ತೇನೆ ಅನ್ನುವ ಖುಷಿ ಹುಟ್ಟಿಕೊಂಡಿತು.

ಒಳ್ಳೆಯ ಉಪಾಯವೂ ಹೊಳೆಯಿತು. ನಾನೂ, ಪ್ರವೀಣ ಎಲ್ಲ ಮಾತಾಡಿ ಒಂದು ಪ್ಲಾನು ರೆಡಿ ಮಾಡಿ, ಆ ಪುಣ್ಯಾತ್ಮನಿಗೆ, ಭಯಂಕರ ಆಮಿಷ ಹುಟ್ಟುವ ಹಾಗೆ, ಒಂದು ಮೇಲ್ ಮಾಡಿದೆವು. ಒಳ್ಳೆಯ ಕಂಪನಿ, ಒಳ್ಳೆಯ ಸಂಬಳ ಹಾಗೇ ಹೀಗೆ ಅಂತ . ಒಟ್ಟಿನಲ್ಲಿ ಆ ಈ- ಮೇಲ್ ನೋಡಿಯೇ ಆತ ನಮ್ಮನ್ನ ಸಂಪರ್ಕಿಸಬೇಕು , ಆ ತರ.

ದಿನಾ ನನಗೆ ಅವನ ಮೇಲ್ ಬಂತಾ ಅಂತ ನೋಡುವುದೇ ಕೆಲಸ. ಒಂದು ವಾರದ ಮೇಲೆ ರಿಪ್ಲೈ ಬಂತು!ಅದರಲ್ಲಿ ಇನ್ಯಾವುದೋ ನಂಬರನ್ನ ಕೊಟ್ಟಿದ್ದ ಅವನು. ಅದಕ್ಕೆ ಫೋನ್ ಹೊಡೆದು ಮಾತಾಡಿಸಿದೆ. ಎಲ್ಲಿದ್ದೀಯಾ ಅಂದಿದ್ದಕ್ಕೆ, "ಬೆಂಗಳೂರು"ಅನ್ನುವ ಉತ್ತರವೇ ಬಂತು. ಅವನ ಹತ್ತಿರ ಮಾತಾಡಿ ಮುಗಿಸಿದ್ದೇ, ಅವರ ತಂದೆಗೆ ಫೋನಿಸಿ, ಈ ಹೊಸ ನಂಬರು ಕೊಟ್ಟೆ. ನಾಲ್ಕು ದಿನ ಬಿಟ್ಟು ಅವರು ನನಗೆ ಫೋನ್ ಮಾಡಿ "ಮಗ ಮನೆಗೆ ಬಂದ ಕಣಪ್ಪ", ಅಂತ ತುಂಬಿದ ಕಂಠದಿಂದ ಹೇಳಿದರು. ಅವರು ಅವನ ಬಳಿ ಏನು ಮಾತಾಡಿದರೋ ನನಗೆ ಹೇಳಲಿಲ್ಲ, ನಾನು ಕೇಳಲೂ ಇಲ್ಲ.

ನಾನು ಒಬ್ಬ ಕ್ಯಾಂಡಿಡೇಟು ಕಳೆದುಕೊಂಡಿರಬಹುದು... ಇರ್ಲಿ ಬಿಡಿ ಪರ್ವಾಗಿಲ್ಲ! ಅಲ್ವಾ?