ನಾನು ಹೈಸ್ಕೂಲಿಗೆ ಹೋಗಬೇಕಿದ್ದರೆ ಮನೆಯಿಂದ ಶಾಲೆಗೆ ಸುಮಾರು ನಾಲ್ಕೈದು ಕಿಲೋಮೀಟರು
ನಡೆಯಬೇಕಾಗಿತ್ತು. ಗದ್ದೆ ಹಾಡಿ ಹಳ್ಳ ತೋಡು ಸಣ್ಣ ನದಿ ಗುಡ್ಡ ಎಲ್ಲ ಹಾದುಕೊಂಡು ನಮ್ಮ ಪಯಣ
ಸಾಗುತ್ತಿತ್ತು. ನಾಲ್ಕೆಂಟು ತೊರೆಗಳು ಒಟ್ಟಾಗಿ ನದಿ ಆಗುವ ಹಾಗೆ, ಎಲ್ಲೆಲ್ಲಿಂದಲೋ ಹುಡುಗರೆಲ್ಲ
ಒಂದೆರಡು ನಿರ್ದಿಷ್ಟ ಸ್ಥಾನದಲ್ಲಿ ಒಟ್ಟಾಗಿ, ಕೊನೆಯ ಒಂದೆರಡು ಕಿಲೋಮೀಟರು ದೊಡ್ಡ ದಂಡೇ ಶಾಲೆಯ
ಕಡೆ ನಡೆಯುತ್ತಿತ್ತು, ನದಿ ಸಮುದ್ರಕ್ಕೆ ಸೇರುವ ಹಾಗೆ. ಬೆಳ್ಳಂ ಬೆಳಗ್ಗೆ ಹರಟೆ ಹೊಡೆಯುತ್ತ, ಅಬ್ಬ,ಬಚಾವ್.. ನನ್ನ ಹಾಗೆ ನನ್ನ ದೋಸ್ತಿಯೂ ಹೋಂ ವರ್ಕು ಮಾಡಿಲ್ಲವಲ್ಲ, ಹೊರಗೆ ನಿಲ್ಲಿಸಿದರೆ ಜೊತೆಗೊಂದು
ಜನ ಗ್ಯಾರೆಂಟಿ ಎಂಬ ಅರೆ ಸಮಾಧಾನ ಹೊಂದುತ್ತ ನಮ್ಮ ನಡಿಗೆ ಸಾಗುತ್ತಿತ್ತು. ನಮ್ಮ ಈ ದಂಡು ಸೇರುವುದು ಮಾತ್ರ ಒಂದು ನಿರ್ದಿಷ್ಟ ಜಾಗದಲ್ಲಿ.
ಆಚೀಚಿನ ಹಳ್ಳಿಗಳ ಹುಡುಗರೆಲ್ಲ ಬಂದು ಸೇರಿಕೊಳ್ಳುವುದು, ಮುಖ್ಯ ರಸ್ತೆಯಲ್ಲಿರುವ ಒಂದು ಪುಟ್ಟ
ಸೇತುವೆಯ ಬಳಿ. ಬೆಳಗ್ಗೆ ಯಾರು ಎಷ್ಟು ಬೇಗ ಬೇಕಾದರೂ ಬಂದಿರಲಿ, ಮಳೆಯೇ ಇರಲಿ ಚಳಿ, ಬಿಸಿಲಿನ
ಕಾಲವೇ ಆಗಲಿ, ಆ ಸೇತುವೆಯ ಮೇಲೆ ಕೂತು ಎಲ್ಲ ಬಂದ ಮೇಲೆ ಶಾಲೆಗೆ ಮುಂದುವರಿಯುವುದಾಗಿತ್ತು. ಆದರೆ
ಎಲ್ಲರೂ ಸಮಯಕ್ಕೆ ಸರಿಯಾಗಿ ಬಂದೇ ಬಿಡುತ್ತಾರೆ ಎನ್ನುವ ಭರವಸೆ ಇರಲಿಲ್ಲ. ಅಂತಹ ಸಂದರ್ಭದಲ್ಲಿ
ಕಾದು ಕಾದು ಸುಸ್ತಾದ ಒಂದು ಗುಂಪು, ತಾವು ಮುಂದಕ್ಕೆ
ಹೋಗಿದ್ದೇವೆ ಎಂಬುದಕ್ಕೆ ಸೂಚನೆಯಾಗಿ ಸೇತುವೆಯ ಮೂಲೆಯಲ್ಲಿ ಹತ್ತಿರದ ಮರದ ಸೊಪ್ಪಿನ ಗೆಲ್ಲು ತರಿದು ನೇತು ಹಾಕಿ
ಹೋಗುತ್ತಿತ್ತು. ಹಿಂದಿನಿಂದ ಬಂದ ತಂಡ ಮತ್ತೆ ಯಾರಿಗೂ ಕಾಯದೇ ಸೀದಾ ಶಾಲೆಗೆ. ಕಲ್ಲು ಗುಪ್ಪೆ,
ಸೊಪ್ಪು, ಹೂ ಗೊಂಚಲು ಹೀಗೆ ಒಂದು ಗುಂಪಿಗೆ ಒಂದೊಂದು ಗುರುತು. ಹೀಗೆ, ಸುಮ್ಮನೆ ಮಲಗಿದ್ದಲ್ಲೇ
ಇದ್ದ ಆ ಸೇತುವೆ ನಮ್ಮ ನಡುವಣ ಸಂದೇಶ ವಾಹಕನಾಗಿ ಕೆಲಸ ಮಾಡುತ್ತಿತ್ತು. ಕೆಲ ಬಾರಿ ಇಟ್ಟಿದ್ದ
ಸೊಪ್ಪು ಕೆಳಗೆ ನದಿಗೆ ಬಿದ್ದು ಹೋಗಿ, ನಮ್ಮ ನಮ್ಮಲ್ಲಿ ಅನ್ಯಾಯವಾಗಿ ಜಗಳ ಬೇರೆ. ಸುಮ್ಮನೇ
ಅಲ್ಲಿ ಕೂತು ನಾವು ಬರುತ್ತೇವೆ ಅಂತ ಕಾದು, ತಡವಾಗಿ ಶಾಲೆಗೆ ಬಂದು ಬೈಸಿಕೊಳ್ಳುವಾಗ. ಸೊಪ್ಪು
ಇಟ್ಟೇ ಇಲ್ಲ ಅಂತ ಬೈಸಿಕೊಂಡವರೂ, ಇದ್ದೆಲ್ಲ ದೇವರುಗಳ ಮೇಲೆ ಆಣೆ ಹಾಕುತ್ತ ಕುತ್ತಿಗೆ ಚರ್ಮ
ಎಳೆದುಕೊಳ್ಳುತ್ತ ನಾವೂ ಬಾಯಿ ಮಾಡುತ್ತಿದ್ದವು.
ಆದರೆ ಎಂತದ್ದೇ ಜಗಳ ಆದರೂ, ಸಂಜೆ ಅದೇ ಸೇತುವೆ ನಮ್ಮನ್ನ ಒಟ್ಟು ಮಾಡುತ್ತಿತ್ತು.
ಸೀಸನ್ನಿಗೆ ಅನುಸಾರವಾಗಿ ಸಿಕ್ಕಿದ್ದ ಹುಣಸೆ ಮಾವು ಯಾರದೋ ತೋಟದಿಂದ ಕದ್ದ ಕಬ್ಬು ಕೊನೆಗೆ ಎಂತದೂ
ಇಲ್ಲದಿದ್ದರೆ ಹೊಳೆ ದಾಸವಾಳ ಹಣ್ಣಾದರೂ ಅಲ್ಲೇ ಪಾಲಾಗುತ್ತಿತ್ತು. ಸುಮ್ಮನೆ ಕೆಳಗೆ ಹರಿಯುವ ಹೊಳೆ
ನೋಡುತ್ತ, ಯಾವುದೇ ಗೊತ್ತು ಗುರಿ ಇಲ್ಲದೇ ನೀರಿಗೆ ಕಲ್ಲೆಸೆಯುತ್ತ ಅದು ಮಾಡುವ ಬುಳಕ್ ಬುಳಕ್
ಸದ್ದು ಕೇಳುತ್ತ ಸಂಜೆಗತ್ತಲಾಗುತ್ತಿದ್ದ ಹಾಗೆ ಮನೆ ದಾರಿ ಹಿಡಿಯುತ್ತಿದ್ದೆವು. ನಮ್ಮಲ್ಲೇ ಕೆಲ
ಧೈರ್ಯದ ಭೂಪರು ಶಾಲೆ ಚೀಲವನ್ನು ಅಲ್ಲೇ ಮರಕ್ಕೆ ನೇತು ಹಾಕಿ, ಯುನಿಫಾರಂ ಬಿಚ್ಚಿಟ್ಟು
ಸೇತುವೆಯಿಂದ ಲಾಗ ಹೊಡೆದು ಈಜುತ್ತಿದ್ದದ್ದೂ ಉಂಟು. ಈಜಿನ ಎಬಿಸಿಡಿ ಗೊತ್ತಿಲ್ಲದ ನಾನು ಮೇಲೆ
ಕೂತೇ ಸ್ನೇಹಿತರ ಹುಚ್ಚಾಟಕ್ಕೆ ಚಪ್ಪಾಳೆ ತಟ್ಟುತ್ತಿದ್ದೆ. ಕೊನೆಗೂ ನಾನಲ್ಲಿ ಈಜು ಕಲಿಯುವ ಮನಸ್ಸೇ ಮಾಡಲಿಲ್ಲ ಎನ್ನುವುದು ಇವತ್ತಿಗೂ
ಕೊರಗೇ. ಒಂದು ದಿನ ದೋಸ್ತಿಯೊಬ್ಬ ಅದೇ ಸೇತುವೆ ಮೇಲೆ ಕೂತು ಗಾಳ ಕೂಡ ಹಾಕುವುದನ್ನ ಕಲಿಸಿದ್ದ.
ಉದ್ದ ಕೋಲಿಗೆ ಎಂಥದೋ ಕೊಕ್ಕೆ ಥರ ಮಾಡಿ, ಎರೆಹುಳ ಹಿಡಿದು
ನೀರಿಗೆ ದಾರ ಎಸೆದು ಕೂರುತ್ತಿದ್ದ. ಮೀನು ಗಾಳಕ್ಕೆ ಸಿಕ್ಕ ಕೂಡಲೇ ಪಟಕ್ಕೆಂದು ಕೋಲೆತ್ತಿ ಮೀನು
ಬಿಡಿಸಿಕೊಂಡು ಪ್ಲಾಸ್ಟಿಕ್ಕಿಗೆ ಹಾಕಿಕೊಳ್ಳುತ್ತಿದ್ದ.
ಅವನು ನನಗೆ ಗಾಳ ಹಾಕುವುದನ್ನು ಹೇಳಿಕೊಟ್ಟ ಮೊದಲ ದಿನವೇ, ಅಪ್ಪನ ಸ್ನೇಹಿತರು ಯಾರೋ
ನನ್ನನ್ನ ನೋಡಿದವರು ನಿಮ್ಮ ಮಗ ದಾರಿ ತಪ್ಪಿದ್ದಾನೆ, ಶಾಲೆಗೆ ಹೋಗದೇ ಗಾಳ ಹಾಕುತ್ತ ಕೂತಿದ್ದಾನೆ
ಎಂಬಿತ್ಯಾದಿ ಮಾಹಿತಿಗಳನ್ನು ಉಪ್ಪುಖಾರ ಸಮೇತ ಸೇರಿಸಿ ನಾನು ಮೀನುಗಾರಿಕೆಯೆಂಬ ಉದ್ಯಮದಲ್ಲಿ
ಮುಂದುವರಿಯುವ ಸಾಧ್ಯತೆಗೆ ಕಲ್ಲು ಹಾಕಿದರು.
ನಮ್ಮ ಗುಂಪಿನಲ್ಲೇ ಇದ್ದು, ಕೊನೆ ಕೊನೆಗೆ ಸೊಪ್ಪಿನ ಚಂಡೆ ಇಟ್ಟು ಮುಂದೆ ಹೋಗುತ್ತಿದ್ದ ಗೆಳೆಯ ಗೋಪಾಲನ ಪ್ರೇಮ ಪ್ರಕರಣ ಕೂಡ
ಶುರುವಾಗಿದ್ದು ಅದೇ ಸೇತುವೆಯಲ್ಲಿ ಅಂತ ನಮಗೆ ಗೊತ್ತಾಗಿದ್ದು ಬಹಳ ಕಾಲದ ನಂತರ. ದಿನಾ ಬೇಗ
ಸೇತುವೆಯ ಹತ್ತಿರ ಬಂದು ಕಾಯುತ್ತಿದ್ದ ಗೋಪಾಲನಿಗೆ ಬೇಗನೆ ಶಾಲೆಗೆ ಹೋಗುತ್ತಿದ್ದ ನಮ್ಮ
ಜೂನಿಯರು, ಎಂಟನೇ ಕ್ಲಾಸು ಹುಡುಗಿಯೊಬ್ಬಳ ಜೊತೆ ನಗು ವಿನಿಮಯ ಆಗಿ ಆಗಿ, ಕೊನೆಗೆ ಆತ ನಮ್ಮ ತಂಡ
ಬಿಟ್ಟು ಅವಳ ಜೊತೆಗೇ ಹೋಗಿ ಬರಲು ಆರಂಭಿಸಿದ್ದ. ಆದರೆ ಒಂದೇ ವರ್ಷದೊಳಗೆ ಮತ್ತೆ ಹತ್ತನೇ
ಕ್ಲಾಸಿಗೆ ಅವನು ನಮ್ಮ ಟೀಮಿಗೇ ವಾಪಾಸಾಗಿ ಪ್ರೀತಿ ನಶ್ವರ ಎಂಬಿತ್ಯಾದಿ ಮಾತುಗಳನ್ನ ಆಡಲು ಶುರು
ಮಾಡಿದ್ದ. ಆದರೆ ನಮ್ಮಗಳಿಗೆ ಆಗತಾನೇ ಲವ್ವಿನ ಬಗ್ಗೆ ಆಸಕ್ತಿ ಹುಟ್ಟಲು ಶುರುವಾಗಿದ್ದರಿಂದ ಅವನ
ಉಪದೇಶಗಳಿಗೆ ಸೊಪ್ಪು ಹಾಕಲಿಲ್ಲ ಅನ್ನುವುದು ಬೇರೆ ವಿಷಯ. ನಾನೂ ಗೋಪಾಲನ ಹಾಗೆ
ಒಂದಿಷ್ಟು ದಿನ ಬೇಗ ಬಂದು ಸೇತುವೆಯ ಸುತ್ತ ಠಳಾಯಿಸಿದೆ. ಒಂದೇ ಒಂದು ಮಿಕ ಕೂಡ ಬಲೆಗೆ ಬೀಳದೇ
ನಿರಾಶನಾಗಿ ನನ್ನ ಪ್ರಯತ್ನ ಕೈಬಿಟ್ಟೆ.
ಹೀಗೆ ಯಕಶ್ಚಿತ್ ಸೇತುವೆಯೊಂದು ಯಾವುದೇ ಉದ್ದೇಶಗಳಿಲ್ಲದ
ಸ್ವಾರ್ಥಗಳಿಲ್ಲದ ಆ ವಯಸ್ಸಿನಲ್ಲಿ ನಮ್ಮ ಸ್ನೇಹ
ಆಟ ಪ್ರೇಮಗಳಿಗೆ ವೇದಿಕೆಯೊದಗಿಸಿತ್ತು. ಒಂದಿಷ್ಟು ದಿನ ನಾವು ಸಂಕ ಫ್ರೆಂಡ್ಸ್ ಎನ್ನುವ
ಹೆಸರಲ್ಲಿ ಕ್ರಿಕೆಟ್ ಟೀಮ್ ಕೂಡ ಕಟ್ಟಿದ್ದೆವು. ಶನಿವಾರ ಭಾನುವಾರಗಳಂದು ನಡೆಯುವ
ಟೂರ್ನಮೆಂಟುಗಳಲ್ಲಿ ನಾವು ಹೇಗೆ ಎದುರಾಳಿ ತಂಡಕ್ಕೆ ಮಣ್ಣು ಮುಕ್ಕಿಸಬೇಕು ಎಂದು ಪ್ಲಾನು ಮಾಡಿ,
ರಣೋತ್ಸಾಹದಲ್ಲಿ ಹೋಗಿ, ವೀರೋಚಿತ ಹೋರಾಟದ ಉದ್ದೇಶ ಹೊಂದಿ ಕಣಕ್ಕಿಳಿದು ಕೊನೆಗೆ ಹೀನಾಯವಾಗಿ
ಸೋತು ವಾಪಸ್ಸು ಬರುತ್ತಿದ್ದೆವು. ಮತ್ತೆ ಅದೇ ಸೇತುವೆಯ ಅಕ್ಕ ಪಕ್ಕದಲ್ಲೋ ಕೆಳಗೆ ತೆಳುವಾಗಿ
ಹರಿಯುತ್ತಿದ್ದ ನೀರಲ್ಲೋ ಬಿದ್ದುಕೊಂಡು ಯಾರ ಮೇಲೆ ತಪ್ಪು ಹೊರಿಸುವುದು ಎಂದು ಲೆಕ್ಕಾಚಾರ
ಹಾಕುತ್ತಿದ್ದೆವು. ಟೀಮು ಶುರುವಾದಷ್ಟೇ ಬೇಗ ನೇಪಥ್ಯಕ್ಕೂ ಸರಿಯಿತು. ಸಖ್ಯ ಮಾತ್ರ
ಮುಂದುವರಿಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರುತ್ತಿದ್ದ ಹಾಗೆ, ಸೇತು ಬಂಧ ಕಡಿಮೆಯಾಯಿತು.
ಪರೀಕ್ಷೆಗೆ ಓದಲೆಂದೇ ನಂಗೆ ಇನ್ನೊಂದು ಸೇತುವೆ ಸಹಾಯ ಮಾಡಿದೆ.
ನಮ್ಮ ಮನೆಯ ಕೂಗಳತೆ ದೂರದಲ್ಲೇ ಪುಟ್ಟ ಕಾಲುವೆ ಇದೆ. ಮಳೆಗಾಲದಲ್ಲಿ ಮಾತ್ರ ನೀರು ಬಲವಾಗಿ
ಹರಿಯುವ ಆ ಕಾಲುವೆಗೆ ಪ್ರತಿವರ್ಷ ಅಣೆಕಟ್ಟು ಕಟ್ಟುತ್ತಾರೆ. ಅಕ್ಟೋಬರ್ ಹೊತ್ತಿಗೆ ನೀರಿಗೆ
ಒಡ್ಡು ಕಟ್ಟಿದರೆ, ಸುಮಾರು ಫೆಬ್ರವರಿ ಮಾರ್ಚ್ ತನಕವೂ ನೀರು ನಿಂತು, ಪೈರುಗಳಿಗೆ ತಂಪು
ನೀಡುತ್ತವೆ. ಆ ಅಣೆಕಟ್ಟಿನ ಮೇಲಿನ ಸೇತುವೆಯಲ್ಲಿ ಹೆಚ್ಚಿನ ಜನ ಸಂಚಾರವಿಲ್ಲ. ಸುತ್ತ ಮರಗಳ
ನೆರಳು. ಗೋಣಿ ಚೀಲವೊಂದನ್ನ ತೆಗೆದುಕೊಂಡು, ಸೇತುವೆಯ ಕಟಾಂಜನಕ್ಕೆ ಒರಗಿಕೊಂಡು ಪುಸ್ತಕ ಹಿಡಿದು
ಓದಲು ಕೂತರೆ, ಹಕ್ಕಿಗಳ ಚಿಲಿಪಿಲಿ, ನಿಂತ ನೀರಿನ ಮೇಲೆ ಹಾದು ಬರುವ ಗಾಳಿಯ ತಂಪು. ಕಟಾವಿನ
ಸಂದರ್ಭದಲ್ಲಿ ಮಾತ್ರ ಆಚೀಚಿನ ಗದ್ದೆಗಳಲ್ಲಿ ಹೆಂಗಸರ ಕಚಿಪಿಚಿ. ಏನೇ ಇದ್ದರೂ, ಅಲ್ಲಿ ಕೂತರೆ
ಒಂಥರಾ ಧ್ಯಾನಸ್ಥ ಸ್ಥಿತಿ. ಆದ್ರೆ ಒಳ್ಳೇ ಊಟ ಮಾಡಿಕೊಂಡು ಓದಲು ಹೋದಾವಾಗ ಅದೆಷ್ಟು ಮಧ್ಯಾಹ್ನ
ಅಲ್ಲಿ ಜೊಂಪು ಹತ್ತಿದೆಯೋ ಏನೋ. ಯಾರಾದರೂ ಕೊಯ್ಲು ಮಾಡುವ ಹೆಂಗಸರೋ, ದಾರಿಹೋಕರೋ ನೋಡಿ, ಎಂತ
ಮಾರ್ರೆ, ಓದ್ಲಿಕ್ಕೆ ಬಂದು ನಿದ್ರೆ ಮಾಡುದಾ ಅಂತ ನಕ್ಕರೆ, ಇಲ್ಲ ಸ್ಪಲ್ಪ ಹೀಗೆ ಎಂದು ಪೆಚ್ಚು
ನಗೆ ನಕ್ಕು, ಮತ್ತೆ ಪುಸ್ತಕದೊಳಗೆ ತಲೆ ತೂರಿಸುವ ಯತ್ನ.
ಅದೇ ಸೇತುವೆ ಮೇಲಿಂದ ಸಂಜೆ ಹೊತ್ತಿಗೆ ಆಲಿಂಡಿಯಾ ರೇಡಿಯೋದ
ಮಂಗಳೂರು ಆಕಾಶವಾಣಿಯ ಪ್ರಾದೇಶಿಕ ವಾರ್ತೆ , ಕೃಷಿರಂಗದ ಧ್ವನಿ ತೇಲಿ ಬರುತ್ತಿತ್ತು. ಆ ಸಂಕದ
ಕೊಂಚ ಮೇಲಕ್ಕೆ ಇರುವ ಮನೆಯ ಹಸನಬ್ಬ ಸಾಹೇಬರು ಮೊದಲಿಂದಲೂ ಆಕಾಶವಾಣಿಯ ಕೇಳುಗ. ಯಾವಾಗ ಮನೆಯಲ್ಲಿ
ಟಿವಿ ಬಂದು, ಆಮೇಲೆ ಡಿಶ್ ನ ಗೌಜಿ ಕೂಡ ಶುರುವಾಯಿತೋ, ಆವತ್ತಿಂದ ಸಂಜೆ ಹೊತ್ತಿಗೆ ಅವರು ತಮ್ಮ
ಆರು ಶೆಲ್ಲಿನ ರೇಡಿಯೋ ಹಿಡಿದುಕೊಂಡು ಬಂದು ಇದೇ ಸಂಕದ ಮೇಲೆ ಕೂರುವುದನ್ನ ಅಭ್ಯಾಸ ಮಾಡಿಕೊಂಡರು.
ಯುವವಾಣಿ ಮುಗಿಯುವ ವರೆಗೂ ಹಸನಬ್ಬ ಸೇತುವೆಯ ಸುತ್ತ ಮುತ್ತ ಓಡಾಡಿಕೊಂಡು ರೇಡಿಯೋ
ಕೇಳುತ್ತಿದ್ದರು. ಕೆಲ ಬಾರಿ ಅವರಿಗೆ ನರಸಿಂಹ ಭಟ್ಟರೋ, ಯಂಕಪ್ಪ ಶೆಟ್ಟರೋ
ಜೊತೆಯಾಗುತ್ತಿದ್ದದ್ದೂ ಉಂಟು. ಕೊಳ್ಳಿದೆವ್ವಗಳ ಹಾಗೆ ಬ್ಯಾಟರಿ ಬೆಳಕು ಆಕಾಶಕ್ಕೆ ತೋಟಕ್ಕೆ
ಬಿಟ್ಟುಕೊಂಡು ಎರಡು ಮೂರು ಜೀವಗಳು ಅಲ್ಲಿ ಓಡಾಡುವುದು ನಮ್ಮ ಮನೆಗೆ ಕಾಣುತ್ತಿತ್ತು. ವಾರ್ತೆ
ಗೀರ್ತೆ ಕೇಳಿ ಎಲ್ಲ ಹಾಳಾಗಿ ಹೋಗಿದೆ ಭಟ್ರೆ, ಒಟ್ಟಾರೆ ಯಾವುದು ಬರ್ಕತ್ತಿಲ್ಲ ಎಂದು ಹೇಳಿದ
ಹಸನಬ್ಬ ಮನೆಗೆ ಹೊರಡುತ್ತಿದ್ದರು. ಒಂದು ಚಳಿಗಾಲದಲ್ಲಿ ಹಸನಬ್ಬರು ರೇಡಿಯೋ ಕೇಳುತ್ತಾ ಓಡಾಡುತ್ತಿದ್ದವರು ಆಳುದ್ದ ನೀರಿಗೆ ಆಯತಪ್ಪಿ ಬಿದ್ದು
ಬೊಬ್ಬೆ ಹೊಡಕೊಂಡರು. ರೇಡಿಯೋ ಸದ್ದಿನ ಮಧ್ಯೆ ಇವರ ಬೊಬ್ಬೆ ಯಾರಿಗೂ ಕೇಳಲಿಲ್ಲ. ಎಲ್ಲಿಗೋ
ಹೋಗಿದ್ದ ಅವರ ಮಗ ಅದೇ ಹೊತ್ತಿಗೆ ಅಲ್ಲಿಗೆ ಬಂದಿದ್ದಕ್ಕೆ ಹಸನಬ್ಬ ಬಚಾವಾದರು. ಆವತ್ತಿನ ನಂತರ
ಸಂಕದ ಕಡೆಯಿಂದ ರೇಡಿಯೋ ದನಿ ಕೇಳಿಲ್ಲ. ಅವರಿಗೂ ಟೀವಿ ಅಭ್ಯಾಸವಾಯಿತು ಅಂತ ಕಾಣುತ್ತದೆ.
ಈ ಎರಡು ಸೇತುವೆಗಳ ಜೊತೆಗಿನ ಒಡನಾಟ ನನಗೀಗ ಕಡಿಮೆಯಾಗಿದೆ. ನೆನಪಲ್ಲಿ
ಇಟ್ಟುಕೊಳ್ಳುವಂತಹ ಹಲ ಸೇತುವೆಗಳು ಜೀವನದಲ್ಲಿ ಬಂದು ಹೋಗಿವೆ. ಶ್ರೀರಂಗಪಟ್ಟಣದ ಪಶ್ಚಿಮ
ವಾಹಿನಿಯ ಸಮೀಪದ ಶಿಥಿಲ ಸೇತುವೆಯ ಚಂದ, ಉಡುಪಿಯ ಪಾಂಗಾಳದ ಹಳೆಯ ಸೇತುವೆ ಸೊಗಸು, ಮಂಗಳೂರಿನ
ನೇತ್ರಾವತಿಯ ಮತ್ತು ತೀರ್ಥಹಳ್ಳಿಯ ತುಂಗಾನದಿಯ ಕಮಾನು ಸೇತುವೆಗಳು, ಒಳ್ಳೆಯ ಮಳೆಗಾಲದಲ್ಲಿ
ಕಟೀಲಿನ ದೇವಸ್ಥಾನದ ಸೇತುವೆ ಮೇಲೆ ನಿಂತರಾಗುವ ಅನುಭೂತಿ , ಹೊನ್ನಾವರದ ಉದ್ದನೆಯ ಬ್ರಿಡ್ಜಿನ
ಮೊದಲ ಬಾರಿಗೆ ಪ್ರಯಾಣಿಸಿದಾಗ ಆದ ರೋಮಾಂಚನ, ಮಂಗಳೂರು ಬೆಂಗಳೂರು ರೈಲು ಪ್ರಯಾಣದ ಎಡಕುಮೇರಿ
ಸೇತುವೆ, ಚಂಬಲ್ ಕಣಿವೆಯ ಬರಡು ನದಿಯ ಮೇಲಿನ ರೈಲ್ವೇ ಪ್ರಯಾಣ ಹೀಗೆ ಹಲವು ಸೇತುವೆಗಳು ನೆನಪಲ್ಲಿವೆ.
ಸ್ನೇಹಿತನೊಬ್ಬನ ಮದುವೆಯ ಸಂಭ್ರಮಕ್ಕೆಂದು ದಾಂಡೇಲಿಗೆ
ಹೋಗಿದ್ದೆವು. ಆತನ ಮಾವನ ಮನೆಯ ಕೆಳಗೇ ಕಾಳಿ ನದಿ ಭೋರೆಂದು ಸದ್ದು ಮಾಡುತ್ತ ಹರಿಯುತ್ತದೆ.
ಮದುವೆಯ ಪ್ರಥಮ ರಾತ್ರಿಯ ಅಲಂಕಾರ, ಗೋಳು ಹೊಯ್ದುಕೊಳ್ಳುವಿಕೆ ಎಲ್ಲ ಮುಗಿದ ಮೇಲೆ ಮದುಮಕ್ಕಳನ್ನ
ಅವರ ಪಾಡಿಗೆ ಬಿಟ್ಟ ನಾವು ನಾಲ್ಕೈದು ಮಂದಿ ಆ ಸೇತುವೆಯ ಮೇಲೆ ಹೋಗಿ ಕೂತಿದ್ದೆವು. ಸುಮಾರು
ಮಧ್ಯರಾತ್ರಿ. ಅಮಾವಾಸ್ಯೆಯ ಹಿಂದು ಮುಂದಿನ ಸಮಯವೋ ಏನೋ. ಕತ್ತಲೆಂದರೆ ಕತ್ತಲು. ಕೆಳಗೆ ನದಿ
ಸಿಕ್ಕಾಪಟ್ಟೆ ಸದ್ದು ಮಾಡಿಕೊಂಡು ಹರಿಯುತ್ತಿದೆ, ಶಬ್ದ ಕೇಳುತ್ತಿದೆ ಬಿಟ್ಟರೆ ಏನೆಂದರೆ ಏನೂ
ಕಾಣುತ್ತಿಲ್ಲ! ಕಾಳಿ ಎಂಬ ಹೆಸರು ಆ ನದಿಗೇಕೆ ಇದೆ ಎಂಬುದು ಆವತ್ತು ನಮಗರ್ಥವಾಯಿತು. ಆ ಅಪರಾತ್ರಿಯಲ್ಲಿ
ಅಲ್ಲಿನ ಸೇತುವೆ ಮೇಲೆ ಕೂತುಕೊಂಡು ಏನೇನೋ ಹರಟುತ್ತ ಕೂತಿದ್ದೆವು. ಯಾವುದೋ ಲಾರಿಯೊಂದು
ತುತ್ತೂತ್ತೂ ತುತ್ತುತ್ತಾರ ಎಂದು ಹಾರ್ನು ಮಾಡಿಕೊಂಡು ನಮ್ಮನ್ನ ಹಾದು ಹೋಯಿತು. ಆ ಕಪ್ಪು
ರಾತ್ರಿಯಲ್ಲಿ ಅವನು ಮಾಡಿದ ಲಯಬದ್ಧ ಸದ್ದು ಇನ್ನೂ ಕಿವಿಯಲ್ಲೇ ಇದೆ.
ಕುಮಾರ ಪರ್ವತ ಟ್ರೆಕ್ಕು ಮಾಡುವ ದಾರಿಯಲ್ಲಿ ಕಂಡ ತೂಗು
ಸೇತುವೆಯೊಂದು ತನ್ನ ಹಲಗೆಗಳನ್ನು ಮಧ್ಯ ಮಧ್ಯ ಉದುರಿಸಿಕೊಂಡು ನಿಂತಿತ್ತು. ಗೆಳೆಯ ಸಂದೀಪ ಅದನ್ನ
ಕಂಡವನೇ, ಪಟಕ್ಕನೆ, “ ಇದು ತೂಗು ಸೇತುವೆ ಅಲ್ಲ, ತೂತು ವೇ” ಅಂದ,ಮಧ್ಯದ ಎರಡು ಅಕ್ಷರಗಳನ್ನ
ಎಗರಿಸಿ!
ತೂಗು ಸೇತುವೆ ಅಂದಾಗ ನೆನಪಾಯಿತು, ಕೊಡಚಾದ್ರಿ ಗುಡ್ಡದ ಕೆಳಗೆ ಹರಿಯುವ
ಶರಾವತಿ ಕಣಿವೆಯ ಮೂಲೆಯಲ್ಲೆಲ್ಲೋ ಇರುವ
ಚಿಕ್ಕಪ್ಪ ಮೊನ್ನೆ ಮೊನ್ನೆ ಫೋನು ಮಾಡಿದ್ದ. ಅವನ ಮನೆಯ ನೆತ್ತಿಯ ಮೇಲೆಲ್ಲೋ ಅಪರೂಪಕ್ಕೆ
ಮೊಬೈಲಿಗೆ ಸಿಗ್ನಲ್ ಸಿಗುತ್ತದೆ. ಸುತ್ತ ಕಾಡು ಗುಡ್ಡಗಳು, ಸುಖ ಜೀವನ ಅವನ ಸಂಸಾರದ್ದು. ದಿನ
ಬೆಳಗಾದರೆ ಹಕ್ಕಿ ಕೂಜನ, ಮಂಜು ಮುಸುಕು. ಇರಲಿ, ವಿಷಯ ಅದಲ್ಲ. ಅವನ ಫೋನು ಮಾಡಿದ್ದು ಬ್ರೇಕಿಂಗ್
ನ್ಯೂಸ್ ಒಂದನ್ನ ಕೊಡುವುದಕ್ಕೆ. ನಮ್ಮೂರಿಗೆ ತೂಗು ಸೇತುವೆ ಬಂತು ಮಾರಾಯ ಅಂದವನ ಧ್ವನಿಯಲ್ಲಿ
ನಿಟ್ಟುಸಿರೂ ಸೇರಿಕೊಂಡಿತ್ತು. ಅಂತೂ ಬಂತಲ್ಲ ಅಂತ ನಾನೂ ಖುಷಿಯಾದೆ. ಲಿಂಗನಮಕ್ಕಿ
ಹಿನ್ನೀರಿನಿಂದಾಗಿ “ಹೊಳಿಂದಾಚೆಗೆ” ಹೊಳಿಂದೀಚೆಗೆ” ಎಂಬ ಎರಡು ಬಗೆಯೆ ಊರುಗಳು ಶಿವಮೊಗ್ಗ
ಜಿಲ್ಲೆಯಲ್ಲಿ ಸೃಷ್ಟಿಯಾಗಿವೆ. ಹಿನ್ನೀರಿನ ಈ ಕಡೆಯ ಮತ್ತು ಆ ಕಡೆಯ ಊರು ಹಳ್ಳಿಗಳು ಹೀಗೆ
ವಿಭಜನೆಗೊಂಡಿವೆ. ಶರಾವತಿಯ ಹಿನ್ನೀರು ಸಾಗರ ಹೊಸನಗರ ಸೀಮೆಗಳ ತೋಟ ಊರು ಪಟ್ಟಣಗಳನ್ನ ಯಥಾಸಾಧ್ಯ
ನುಂಗಿ ಸುರುಳಿ ಸುತ್ತಿಕೊಂಡು ಬಿದ್ದುಕೊಂಡಿದೆ. ನೀವು ಗೂಗಲ್ ಮ್ಯಾಪಿನಲ್ಲಿ ನೋಡಿದರೆ ನಾನು
ಹೇಳುತ್ತಿರುವುದರ ಸರಿಯಾದ ಚಿತ್ರಣ ಸಿಕ್ಕೀತು. ಈ ನೀರಿನ ಚಕ್ರವ್ಯೂಹದಿಂದಾಗಿ ತೀರಾ ಎದುರುಗಡೆ
ದಡದಲ್ಲಿ ಕಾಣುತ್ತಿರುವ ಮನೆಗೆ ಹೋಗಬೇಕೆಂದರೆ ಡಾಂಬರು ರಸ್ತೆಯಲ್ಲಿ ಹತ್ತಾರು ಕಿಲೋಮೀಟರು
ಸುತ್ತು ಹಾಕಿಕೊಂಡು ಹೋಗಬೇಕಾದ ಸ್ಥಿತಿಯಲ್ಲಿ ಅಲ್ಲಿನ ಊರುಗಳವರು ಇದ್ದಾರೆ. ಅಲ್ಲಲ್ಲಿ ದೋಣಿ
ಕಳವುಗಳಿದ್ದರೂ ಕೂಡ ಒದ್ದಾಟವೇನೂ ತಪ್ಪಿದ್ದಲ್ಲ. ಅಗಾಧ ವಿಸ್ತಾರದ ಶರಾವತಿ ಕೊಳ್ಳಕ್ಕೆ ಸೇತುವೆ
ಕಟ್ಟುವುದು ಸುಲಭವೂ ಇಲ್ಲ. ಈಗ ಅಲ್ಲೆಲ್ಲೋ ನಿಟ್ಟೂರು ಹತ್ತಿರ ಹೊಳೆಯಾಚೆಯಿಂದ ಈಚೆಗೆ ದಾಟಲು
ತೂಗು ಸೇತುವೆ ಕಟ್ಟಿದ್ದಾರೆ. ಹೆಚ್ಚೆಂದರೆ ಬೈಕು ಹೋಗಬಹುದು. ಆದರೂ ಅಲ್ಲಿನ ಜನಕ್ಕೆ ಅದೇ
ಖುಷಿಯಾಗಿದೆ. ಏಕೆಂದರೆ ಜೀವನದ ಬಹುಮೂಲ್ಯ ಸಮಯವನ್ನು ಅವರುಗಳು ಗುಡ್ಡ ಬೆಟ್ಟಗಳನ್ನು ಹಾದು
ಊರಿಂದೂರಿಗೆ ತಿರುಗುವುದರಲ್ಲೆ ಕಳೆದಿದ್ದಾರೆ. ತೂಗುವ ಸೇತುವೆಯೇ ಜೀವನಕ್ಕೆ ಸ್ಥಿರತೆ ತಂದಿದೆ.
ಮರಕುಟಕ ಅಂತೊಂದು ಸೇತುವೆ ಇದೆ, ಅದೇ ಕೊಡಚಾದ್ರಿಯ ತಪ್ಪಲಲ್ಲಿ. ಕೊಲ್ಲೂರು ಮತ್ತು
ನಿಟ್ಟೂರೆಂಬ ಊರುಗಳ ಮಧ್ಯೆ. ಸೇತುವೆಯೊಂದಕ್ಕೆ ಯಾಕೆ
ಅಂತಹ ವಿಚಿತ್ರ ಹೆಸರು ಇದೆಯೋ ನನಗೆ ತಿಳಿಯದು. ಬ್ರಿಟೀಷರ ಕಾಲದಲ್ಲಿ ಚಕ್ರಾ ನದಿಯ ಉಪನದಿಯೊಂದಕ್ಕೆ ಕಟ್ಟಿರುವ ಆ ಇಕ್ಕಟ್ಟಾದ
ಸೇತುವೆಗೆ ಏನಿಲ್ಲ ಅಂದರೂ ನೂರು ನೂರೈವತ್ತು ವರ್ಷಗಳ ಇತಿಹಾಸ ಇದೆ ಅಂತ ಹತ್ತಿರದ ಊರುಗಳ ಜನ ಹೇಳುತ್ತಾರೆ. ಇನ್ನೇನು
ಕುಸಿದೇ ಬಿಡುತ್ತದೆ ಎನ್ನುವಂತೆ ಕಾಣುವ ಆ ಸೇತುವೆ ಅಮೋಘವಾಗಿ ಅದೇ ಸ್ಥಿತಿಯನ್ನು ಹತ್ತೈವತ್ತು
ವರುಷಗಳಿಂದ ಕಾಪಾಡಿಕೊಂಡಿದೆ. ಅದರ ಮೇಲಿನ ಅಲಂಕಾರಗಳೆಲ್ಲ ಉದುರಿ ಹೋಗಿ ಬರೀ ಇಟ್ಟಿಗೆ ಗಾರೆ
ಕಾಣಲು ಆರಂಭಿಸಿದ ಹೊತ್ತಿಗೆ ನಮ್ಮಪ್ಪ ಅದೇ ಸೇತುವೆ ಮೇಲಿಂದ ನಡೆದುಕೊಂಡು ಶಾಲೆಗೆ
ಹೋಗುತ್ತಿದ್ದರಂತೆ. ಅವರು ಮೊನ್ನೆ ರಿಟೈರಾಗಿದ್ದಾರೆ. ಯಾವುದೋ ಬ್ರಿಟಿಷ್ ವೈಸರಾಯ್ ನಿಂದ ತೊಡಗಿ, ನಿನ್ನೆ
ಮೊನ್ನೆಯ ಎಂ.ಪಿ ಎಮ್ಮೆಲ್ಲೆಗಳೂ ಆ ಸೇತುವೆಯ ಮೇಲಿಂದ ಹಾದು ಹೋಗಿದ್ದಾರೆ! ನಾವೊಮ್ಮೆ ಎಲ್ಲೋ
ಜಲಪಾತವೊಂದಕ್ಕೆ ಚಾರಣ ಹೋದವರು ವಾಪಸ್ಸು ನಡೆದುಕೊಂಡು ಬರುತ್ತಿದ್ದಾಗ ಅಚಾನಕ್ಕಾಗಿ ಮಳೆ ಬಂದಾಗ
ಬಡ ಬಡನೆ ಓಡಿ ಹೋಗಿ ಆ ಸೇತುವೆಯ ಕೆಳಗೆ ಸೇರಿಕೊಂಡೆವು. ಯೇ ಹುಶಾರ್ರಪ್ಪ ಮೊದಲೇ ಇದು ಮರಕುಟ್ಕ
ಸೇತ್ವೆ, ನಮ್ ಗ್ರಹಚಾರಕ್ಕೆ ಈಗ್ಲೆ ಕುಸ್ದು ತಲೆ ಬಿದ್ದಾತು ಅಂತ ಯಾರೋ ಕಿಚಾಯಿಸಿದರು. ಹಾಗೇ
ಮೇಲೆ ನೋಡಿದರೆ, ಸೇತುವೆಯ ತಳ ಭಾಗ, ಗಟ್ಟಿಯಾಗೇ ಇತ್ತು. ಮೇಲಿನ ಶೃಂಗಾರ ಗಬ್ಬೆದ್ದು ಹೋಗಿದ್ದರೂ
ಸುಣ್ಣ ಬೆಲ್ಲ ಗಾರೆಯ ಸೇತುವೆ ಜಬರ್ದಸ್ತ್ ಆಗಿ ನಿಂತಿತ್ತು. ನಾವೊಂದು ದಿಬ್ಬದ ಮೇಲೆ
ನಿಂತಿದ್ದೆವು. ತಳಭಾಗದಲ್ಲಿ ಇಂಗ್ಲೀಷ್ ಪೇಪರ್ ಒಂದು ಅಂಟಿಕೊಂಡಿತ್ತು. ಮೆಲ್ಲನೆ ಆ ಶಿಥಿಲ
ಪೇಪರನ್ನ ಹರಿದು ತೆಗೆದರೆ, ನಂಬಿದರೆ ನಂಬಿ ಬಿಟ್ಟರೆ ಬಿಡಿ, ಆ ಪೇಪರು, 1900 ನೇ ಇಸವಿಯದ್ದಾಗಿತ್ತು. ಅದು ಹೇಗೆ ಅಷ್ಟೊಂದು ವರ್ಷ ಹಾಳಾಗದೆ ಉಳಿದಿತ್ತೋ ದೇವರೇ ಬಲ್ಲ.
ಪೇಪರ್ರೇ ಉಳಿದಿದೆ ಎಂದ ಮೇಲೆ ಸೇತುವೆಗೆ ಏನೂ ತೊಂದರೆ ಇಲ್ಲ ಅಂತ ಎಲ್ಲ ಮಾತಾಡಿಕೊಂಡೆವು. ಈ
ಘಟನೆ ಆಗಿದ್ದು ಹತ್ತು ವರ್ಷಗಳ ಹಿಂದೆ. ಈಗೇನೋ ಮರಕುಟಕ ಸೇತುವೆ ರಿಪೇರಿ ಆಗ್ತಿದೆ ಅಂತ ಸುದ್ದಿ.
ನಿನ್ನೆ ಆಫೀಸಿಗೆ ಹೋಗುತ್ತಿದ್ದೆ. ದಾರಿ ಮೇಲೆ ಯಾರದೋ ಫೋನು
ಬಂತೆಂದು ರಸ್ತೆ ಪಕ್ಕ ಬೈಕು ನಿಲ್ಲಿಸಿಕೊಂಡು ಮಾತನಾಡುತ್ತಿದ್ದೆ. ನನ್ನ ಮುಂದೇ ಒಂದು ಪುಟ್ಟ
ಸೇತುವೆಯಿತ್ತು, ಅದರ ಪಕ್ಕಕ್ಕೇ ಒಬ್ಬ ಹುಡುಗ ನಿಂತುಕೊಂಡು ಕತ್ತೆತ್ತಿ ಅತ್ತ ಇತ್ತ
ನೋಡುತ್ತಿದ್ದ. ನಾನು ನೋಡುತ್ತಿದ್ದ ಹಾಗೇ, ಪಕ್ಕದ ಗಿಡವೊಂದರಿಂದ ಸಣ್ಣ ಟೊಂಗೆ ಮುರಿದು,
ಸೇತುವೆಯ ಮೇಲಿಟ್ಟು ಹಾಗೇ ಮುಂದೆ ನಡೆದ.
ನಾನು ಮಾತನಾಡುತ್ತಿದ್ದವರ ಬಳಿ, ಒಂದು ನಿಮಿಷ ಮತ್ತೆ ಫೋನು
ಮಾಡುತ್ತೇನೆ ಎಂದವನು ಸಂಕದ ಮೇಲಿದ್ದ ಟೊಂಗೆಯನ್ನೇ ನೋಡುತ್ತ ನಿಂತೆ.