ಶುಕ್ರವಾರ, ನವೆಂಬರ್ 30, 2018

ಭಾರತೀಯ ಕ್ರಿಕೆಟ್ ನ ಹೊಳೆಯುವ ರತ್ನ: ವಿರಾಟ್ ಕೋಹ್ಲಿ




ಸಚಿನ್ ತೆಂಡುಲ್ಕರ್ ನಂತರ ಭಾರತೀಯ ಕ್ರಿಕೆಟ್ ಗೆ ಸ್ಟಾರ್ ಡಂ ಒದಗಿಸಬಲ್ಲ ಒಬ್ಬ ಕ್ರಿಕೆಟರ್ ಸಿಕ್ಕಾನೇ ಎಂಬ ಪ್ರಶ್ನೆಗೆ ಕಾಲ ಉತ್ತರವನ್ನು ನೀಡಿಯಾಗಿದೆ. ಸಾಮರ್ಥ್ಯದಲ್ಲಿ ಸಚಿನ್ ಗೆ ಸರಿ ಸಾಟಿಯಾಗಿ ನಿಲ್ಲಬಲ್ಲ, ಇನ್ನು ಕೊಂಚ ಸಮಯ ಸರಿದರೆ ತೆಂಡುಲ್ಕರ್ ಅಂಕಿಅಂಶಗಳನ್ನೂ ದಾಟಿ ಮುಂದಕ್ಕೆ ಹೋಗಬಲ್ಲ ಪ್ರಬಲ ಪ್ರತಿಭೆ, ವಿರಾಟ್ ಕೊಹ್ಲಿ. ಭಾರತದ ಕ್ರಿಕೆಟ್ ಆಗಸದ ಮಿನುಗುತಾರೆಗಳಾದ ಸಚಿನ್, ದ್ರಾವಿಡ್, ಗಂಗೂಲಿ, ಲಕ್ಷ್ಮಣ್ ಮೊದಲಾದ ಅತಿರಥರುಗಳೆಲ್ಲ ಮಸುಕಾಗುವ ಹೊತ್ತಿಗೆ ಮುನ್ನೆಲೆಗೆ ಬಂದ ಕೊಹ್ಲಿ, ಇಂದು ವಿಶ್ವ ಕ್ರಿಕೆಟ್ ನ ಬಹುಮುಖ್ಯ ಹೆಸರು. ಮೂವತ್ತರ ಗಡಿಯನ್ನು ಮುಟ್ಟುತ್ತಿರುವ ವೇಳೆಗಾಗಲೇ ಕೋಹ್ಲಿ ಅನೇಕ ದಾಖಲೆಗಳ ಸರದಾರ. ಭಾರತೀಯ ಕ್ರಿಕೆಟ್ ತಂಡದ ಕಪ್ತಾನನಾಗಿ, ಒಂದಾದ ಮೇಲೊಂದರಂತೆ ಎಂಟು ಟೆಸ್ಟ್ ಸರಣಿಗಳನ್ನು ಗೆದ್ದ, ಟೆಸ್ಟ್-ಒನ್ ಡೇ- ಟ್ವೆಂಟಿ ಮೂರರಲ್ಲೂ  ೫೦ ರ ಸರಾಸರಿಯನ್ನು ಹೊಂದಿರುವ ಏಕೈಕ ಆಟಗಾರ ಈತ.ಟೆಸ್ಟ್ ಮತ್ತು ಏಕದಿನಗಳೆರಡೂ ಸೇರಿದಂತೆ ೫೮ ಶತಕಗಳನ್ನು ತನ್ನ ಲೆಕ್ಕಕ್ಕೆ ಬರೆಸಿಕೊಂಡಿರುವ ಕೊಹ್ಲಿ , ಭಾವನೆಗಳ ತೀವ್ರ ಸ್ಪಂದನಕ್ಕೆ ಹೆಸರುವಾಸಿ.

ತಾಂತ್ರಿಕವಾಗಿ ಸೊಗಸಾದ ಆಟವನ್ನಾಡುವ ವಿರಾಟ್, ತನ್ನ ತಲೆಮಾರಿನ ಆಟಗಾರರುಗಳ ಪೈಕಿ ಅಗ್ರಗಣ್ಯ. ಆರಂಭದ ದಿನಗಳಿಂದಲೇ ತನ್ನ ಆಕ್ರಮಣಕಾರೀ ಆಟದಿಂದಾಗಿ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಈ ದೆಹಲಿಯ ಹೈದ, ನಿಧಾನವಾಗಿ ಯಶಸ್ಸಿನ ಉತ್ತುಂಗದ ಕಡೆಗೆ ಹೆಜ್ಜೆ ಹಾಕತೊಡಗಿದ್ದ. ಹತ್ತೊಂಬರ ವಯೋಮಾನದ ವಲ್ಡ್ ಕಪ್ ಗೆದ್ದ ಭಾರತ ತಂಡದ ಕಪ್ತಾನನಾಗಿದ್ದ ವಿರಾಟ್ ಕೋಹ್ಲಿ, ಆಗಿನಿಂದಲೇ ತನ್ನ ಮನಮೋಹಕ ಆಟಕ್ಕೆ ಹೆಸರುವಾಸಿ. ಭಾರತದ ಮುಖ್ಯ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗಿ ನಾಲ್ಕು ವರ್ಷಗಳ  ನಂತರ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಶತಕ ಬಾರಿಸುವ ಮೂಲಕ ಮುನ್ನೆಲೆಗೆ ಬಂದ ಕೊಹ್ಲಿ, ನಂತರ ತಿರುಗಿ ನೋಡಿದ್ದೇ ಇಲ್ಲ. ಏಕ ದಿನ ಸರಣಿಗಳಲ್ಲೂ, ಟೆಸ್ಟ್ ನಲ್ಲೂ ಒಂದೇ ತೆರನಾದ ಆಟದ ಮೂಲಕ ಜನ ಮನ ಗೆದ್ದ ಈ ನಿಪುಣ ಆಟಗಾರ, ಅಂದಿನಿಂದ ಇಂದಿನವರೆಗೂ ಅದೇ ಫಾರ್ಮ್ ಮುಂದುವರಿಸಿಕೊಂಡು ಬಂದಿರುವುದು  ಅಚ್ಚರಿ. ಮೈದಾನದ ಎಲ್ಲ ಮೂಲೆಗಳಿಗೂ ಚೆಂಡನ್ನಟ್ಟುವ ವಿರಾಟ್- ವೇಗದ ಮತ್ತು ಸ್ಪಿನ್- ಎರಡೂ ಬಗೆಯ ಬೌಲಿಂಗ್ ಗನ್ನು ಕರಾರುವಕ್ಕಾಗಿ ಎದುರಿಬಲ್ಲ ಛಾತಿಯುಳ್ಳಾತ. ಧೋನಿಯ ನಂತರ ಭಾರತ ತಂಡದ ನೇತೃತ್ವ ವಹಿಸಿರುವ ಕೊಹ್ಲಿ ತನ್ನ ಬ್ಯಾಟಿಂಗ್ ನ ಯಶಸ್ಸಿನ ಜೊತೆ ಜೊತೆಗೇ ತಂಡದ ಯಶಸ್ಸಿಗೂ ಕಾರಣಕರ್ತ.

ಧೋನಿ ಕ್ಯಾಪ್ಟನ್ ಕೂಲ್ ಆಗಿಯೇ ಪ್ರಸಿದ್ಧರಾಗಿದ್ದರೆ, ಕೋಹ್ಲಿ ತನ್ನ ಭಾವನೆಗಳನ್ನು ನೇರವಾಗಿ ಹೊರಹಾಕುವ ಕಾರಣಕ್ಕಾಗಿಯೇ ಹೆಸರುವಾಸಿ. ತಪ್ಪಾಗಿ ಬೌಲ್ ಮಾಡಿದ ತನ್ನದೇ ತಂಡದ ಬೌಲರ್ ಗೆ ಮೈದಾನದಲ್ಲೇ ಬೈಯಲೂ ಕೂಡ ಕೋಹ್ಲಿ ಹೇಸುವುದಿಲ್ಲ. ಅದೇ ರೀತಿ ಎದುರು ತಂಡದ ಸ್ಲೆಡ್ಲಿಂಗ್ ಗೂ ಕೂಡ ವಿರಾಟ್ ಸೈ. ಹಿಂದು ಮುಂದಿಲ್ಲದೇ ನೇರವಾಗಿ ಮಾತನಾಡುವ ಕೊಹ್ಲಿಗೆ ಯಾರೂ ಎದುರಿಲ್ಲ. ಕೆಲ ಬಾರಿ ವಿದೇಶೀ ತಂಡಗಳು ಕೊಹ್ಲಿಯ ಈ ಕೆಚ್ಚಿನ  ಎದುರು ಕೊಂಚ ಮಂಕಾಗಿಯೇ ಕಾಣುವುದಿದೆ. ಆಕ್ರಮಣಕಾರೀ ಸ್ವಭಾವ ಕೊಹ್ಲಿಯ ರಕ್ತದಲ್ಲಿಯೇ ಇದೆ ಎನ್ನಿಸುತ್ತದೆ. ಕ್ರಿಕೆಟ್ ದೇವರಾದ ತೆಂಡುಲ್ಕರ್, ಕೋಹ್ಲಿಯ ಈ ಗುಣಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಎಂದ ಮೇಲೆ ಕೇಳಬೇಕೇ? "ವಿರಾಟ್ ಕೋಹ್ಲಿಯಲ್ಲಿ ಒಂದು ಬಗೆಯ ಕೆಚ್ಚು ಮತ್ತು ಆಕ್ರಮಣಕಾರೀ ಧೋರಣೆ ಇದೆ. ಎಲ್ಲರೂ ಇದನ್ನು ಸರಿ ಎನ್ನಲಾರರೇನೋ. ಆದರೆ, ಕೋಹ್ಲಿಯ ಈ ಗುಣವೇ ಇಂದು ಭಾರತ ತಂಡದ ಯಶಸ್ಸಿಗೆ ಕಾರಣವಾಗಿದೆ" ಎಂದಿದ್ದಾರೆ ಸಚಿನ್. ವಿರಾಟ್ ತಂಡಕ್ಕೆ ಸೇರಿಕೊಂಡಾಗಿನಿಂದಲೂ ಕೂಡ ಇದೇ ಬಗೆಯ ಮನಸ್ಥಿತಿಯನ್ನು ಹೊಂದಿದ್ದರೂ- ಆತನ ಬ್ಯಾಟಿಂಗ್ ಮೇಲಾಲಾಗೀ, ಕಪ್ತಾನಿಕೆಯ ಮೇಲಾಗಲೀ ಅದರಿಂದ ಯಾವ ನೇತ್ಯಾತ್ಮಕ ಪರಿಣಾಮ ಕೂಡ ಆಗಿಲ್ಲ. ಅಂಡರ್-೧೯ ಕಪ್ತಾನನಾಗಿದ್ದಾಗಲೇ ತನ್ನನ್ನು ತಾನು ಒರಟ ಎಂದು ಕರೆದುಕೊಂಡಿದ್ದ ಈತ! ಆಸ್ಟ್ರೇಲಿಯಾದಂತಹ ತಂಡಕ್ಕೆ, ಅವರದೇ ರೀತಿಯ ಸ್ಲೆಡ್ಜಿಂಗ್ ಮತ್ತು ಒರಟು ಆಟದ ಮೂಲಕ ಉತ್ತರ ಹೇಳಿದ ಭೂಪ, ಕೋಹ್ಲಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಚ ಮಟ್ಟಿನ ಮೃದು ತಂಡ ಎಂದೇ ಕರೆಸಿಕೊಳ್ಳುತ್ತಿದ್ದ ಭಾರತದ ಕುರಿತಾದ ಮನಸ್ಥಿತಿ ಕೋಹ್ಲಿ ಕಟ್ಟಿರುವ ಈ ತಂಡದಿಂದಾಗಿ ಬದಲಾಗಿರುವುದಂತೂ ಹೌದು. ಸೌರವ್ ಗಂಗೂಲಿ ನಂತರ, ಕೆಚ್ಚಿನ ಕ್ಯಾಪ್ಟನ್ ಆಗಿ ಕಂಡುಬಂದಿದ್ದು ವಿರಾಟ್ ಕೋಹ್ಲಿಯೇ.

ತನ್ನ ಮೂಗಿನ ನೇರಕ್ಕೆ ಸರಿಹೋಗುವ ಕಾರ್ಯಗಳನ್ನಷ್ಟೇ ಕೋಹ್ಲಿ ಮಾಡುತ್ತಾನೆ ಎಂಬುದು ಕೂಡ ಆತನ ಮೇಲಿರುವ ಆಪಾದನೆಗಳಲ್ಲಿ ಒಂದು. ಅನಿಲ್ ಕುಂಬ್ಳೆ ಮತ್ತು ಕೋಹ್ಲಿ ಮಧ್ಯದ ಮನಸ್ತಾಪ ಭಾರತೀಯ ಕ್ರಿಕೆಟ್ ಜಗತ್ತಿನ ಕೆಟ್ಟ ಕಲಹಗಳಲ್ಲೊಂದು. ಜಗತ್ತಿನ ಅಪ್ರತಿಮ ಕ್ರಿಕೆಟಿಗರಾಗಿದ್ದ ಕುಂಬ್ಳೆಯ ಕೋಚಿಂಗ್ ಅನ್ನು- ಹೆಡ್ ಮಾಸ್ತರಿಕೆ ಎಂದು ವಿರೋಧಿಸಿದ್ದು ಕೋಹ್ಲಿ.  ಕೊನೆಗೂ ತನ್ನ ಹಠವನ್ನೇ ಸಾಧಿಸಿಕೊಂಡು ಅನಿಲ್, ಆ ಹುದ್ದೆಯಿಂದ ಕೆಳಗಿಳಿಯುವಂತೆ ಮಾಡಿದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಕೂಡ ಸರಿ ಬಂದಿರಲಿಲ್ಲ. ತಾವು ಹೊಸ ತಲೆಮಾರಿನ ಹುಡುಗರು, ತಮಗೆ ಹಳೆಯ ಶಿಸ್ತಿನ ಕೋಚಿಂಗ್ ನ ಅವಶ್ಯಕತೆ ಇಲ್ಲ ಎನ್ನುವ ರೀತಿ ವರ್ತಿಸಿದ್ದ ಕೋಹ್ಲಿ ಮತ್ತವನ ತಂಡದ ಬಗ್ಗೆ ಅಸಮಾಧಾನ ಹೊಂದಿದ್ದ ಎಲ್ಲರಿಗೂ ಮುಂದೇನಾಗುವುದು ಎಂಬ ಪ್ರಶ್ನೆ ಕಾಡಿತ್ತು. ಏಕೆಂದರೆ ಅನಿಲ್ ಕುಂಬ್ಳೆ ಕೋಚ್ ಆಗಿದ್ದ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಅತ್ಯುತ್ತಮ ಪ್ರದರ್ಶನ ನೀಡಿತ್ತು. ವಿದೇಶಗಳಲ್ಲಿ ಸರಣಿ ಜಯಿಸಿತ್ತು.  ಆಡಳಿತ ಮಂಡಳಿಯಲ್ಲಿ ಕೋಹ್ಲಿ ಹಿಡಿತವೇ ಬಿಗಿಯಾಗಿದ್ದ ಕಾರಣಕ್ಕೆ, ಕುಂಬ್ಳೆ ತನ್ನ ಸ್ಥಾನದಿಂದ ಕೆಳಗಿಳಿಯಬೇಕಾಗಿತ್ತು.ಆದರೆ ಕೊನೆಗೂ, ಗೆಲುವಿನ ಬಗೆ ಬೀರಿದ್ದು ವಿರಾಟ್. ಏಕೆಂದರೆ ರವಿ ಶಾಸ್ತ್ರಿ ಕೋಚ್ ಆಗಿ ಮುಂದುವರಿದ ಮೇಲೆ ಕೂಡ ಭಾರತ ತಂಡದ ಗೆಲುವಿನ ಓಟಕ್ಕೆ ಯಾವ ತಡೆ ಕೂಡ ಬೀಳಲಿಲ್ಲ.

ಗೆಲುವಿನ ಹಸಿವು ವಿರಾಟ್ ಪ್ರಮುಖ ಗುಣಗಳಲ್ಲೊಂದು. ಯಾವುದೇ ಎದುರಾಳಿಯಾದರೂ ಸರಿ, ಅವರುಗಳ ಮೇಲೆ ಪ್ರಹಾರ ಮಾಡುವಂತೆಯೇ ಎರಗುವ ಕೋಹ್ಲಿ, ಅದೇ ಮನಸ್ಥಿತಿಯಿಂದಾಗಿಯೇ ಭಾರತದ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಿದ್ದಾನೆ. ಬಾಂಗ್ಲಾದೇಶವೇ ಇರಲಿ, ಆಸ್ಟ್ರೇಲಿಯಾವೇ ಇರಲಿ- ಆಡುವ ಆಟದಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ವರ್ತಿಸುವ ಕೊಹ್ಲಿ- ತನ್ನ ಕೆಚ್ಚನ್ನು ತಂಡಕ್ಕೂ ದಾಟಿಸಿದ್ದಾನೆ. ರವೀಂದ್ರ ಜಡೇಜಾ, ರೋಹಿತ್ ಶರ್ಮಾ, ಶಿಖರ್ ಧವನ್ ಮೊದಲಾದ ಆಟಗಾರರೂ ಕೂಡ ಕೋಹ್ಲಿಯಂತೆಯೇ ವರ್ತಿಸುವುದನ್ನು-ಆಡುವುದನ್ನು ಭಾರತೀಯ ಕ್ರಿಕೆಟ್ ನ ಅಭಿಮಾನಿಗಳು ಗಮನಿಸಿರುತ್ತಾರೆ. ಮೊದ ಮೊದಲು ತನ್ನ ಮುಂಗೋಪದಿಂದಾಗಿ ಕೋಹ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ಧೂ ಹೌದು. ಮೈದಾನದ ಆಚೆಯೆಲ್ಲೋ ಕೂತ ಯಾರದೋ ಮಾತಿಗೂ ಮೈ ಮೇಲೆ ಏರಿ ಹೋಗುವಂತೆ ವರ್ತಿಸುತ್ತಿದ್ದ ಕೋಹ್ಲಿ- ಅದೇ ಸಿಟ್ಟಿನಿಂದಾಗಿಯೇ ಬೇಗನೇ ತನ್ನ ವಿಕೆಟ್ ಕಳೆದುಕೊಂಡದ್ದೂ ಇದೆ. ಆದರೆ ಕ್ರಮೇಣವಾಗಿ ತನ್ನ ಸಿಟ್ಟನ್ನು ಹತ್ತಿಕ್ಕಿಕೊಂಡು, ಅದನ್ನು ಆಟದೊಳಗೆ ಅಳವಡಿಸಿಕೊಂಡ ವಿರಾಟ್, ಎದುರಾಳೀ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿ-  ಆ ಕಾರಣಕ್ಕಾಗಿಯೇ ಎಲ್ಲರಿಂದ ಮೆಚ್ಚುಗೆಗೂ ಒಳಗಾದ.

ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪುರಾತನ ಸಮಸ್ಯೆ ಎಂದರೆ, ಚೇಸಿಂಗ್ ನಲ್ಲಿ ಮುಗ್ಗರಿಸುವುದು. ಸಚಿನ್, ದ್ರಾವಿಡ್, ಗಂಗೂಲಿ ಕಾಲದಿಂದಲೂ ಕೂಡ ಈ ಸಮಸ್ಯೆಗೆ ಪರಿಹಾರ ಸರಿಯಾಗಿ ದಕ್ಕಿರಲಿಲ್ಲ. ಎಂತಹುದೇ ಎದುರಾಳಿ ಇರಲಿ, ರನ್ ಬೆನ್ನಟ್ಟುವಾಗ ಎಡವಿ ಬೀಳುವ ಭಾರತ ತಂಡದ ಚಟ, ಎಲ್ಲರಿಗೂ ಗೊತ್ತಿರುವಂತದ್ದೇ. ಬಾಂಗ್ಲಾ, ಜಿಂಬಾಬ್ವೆಯಂತಹ ತಂಡಗಳ ವಿರುದ್ಧ ಕೂಡ ಹೀನಾಯವಾಗಿ ಸೋತ ದಾಖಲೆ ಭಾರತದ್ದು. ವಿರಾಟ್ ಕೋಹ್ಲಿಯ ಆಗಮನದ ನಂತರ, ಆ ಭಯದಿಂದ ನಮ್ಮ ತಂಡ ದೂರವಾಗಿದೆ. ವಿರಾಟ್ ಕೋಹ್ಲಿ ತಂಡದಲ್ಲಿದ್ದಾಗ ಚೇಸ್ ಎಂದರೆ ಹೆದರಿಕೆ ಇಲ್ಲ ಎನ್ನುವಂತಾಗಿದೆ. ಕೋಹ್ಲಿ ತಂಡದಲ್ಲಿರುವಾಗ ಸುಮಾರು ೧೨೦ ಏಕದಿನ ಪಂದ್ಯಗಳನ್ನು ಗೆದ್ದಿರುವ ಭಾರತ, ಅದರಲ್ಲಿ ೭೨ ಪಂದ್ಯಗಳನ್ನು ಚೇಸ್ ಮಾಡಿಯೇ ಗೆದ್ದಿದೆ! ಮತ್ತು ಅಷ್ಟು ಪಂದ್ಯಗಳಲ್ಲಿ ಕೋಹ್ಲಿ ಸುಮಾರು ೯೫ ರ ಸರಾಸರಿಯಲ್ಲಿ ನಾಲ್ಕು ಸಾವಿರ ರನ್ ಗಳನ್ನು ತಾನೊಬ್ಬನೇ ಹೊಡೆದಿದ್ದಾನೆ. ಈ ಕಾರಣಕ್ಕಾಗಿಯೇ ಕೋಹ್ಲಿಗೆ 'ಚೇಸ್ ಮಾಸ್ಟರ್' ಎನ್ನುವ ಬಿರುದೂ ಲಭ್ಯವಾಗಿದೆ.

ತಂಡದ ನಾಯಕನಾದ ಮೇಲೆ ಆಟಗಾರನೊಬ್ಬನು ಒತ್ತಡಕ್ಕೆ ಒಳಗಾಗಿ, ಬ್ಯಾಟಿಂತ್ ಅಥವಾ ಬೌಲಿಂಗ್ ಗೆ ಸರಿಯಾದ ನ್ಯಾಯ ಸಲ್ಲಿಸುವುದಿಲ್ಲ ಎಂಬ ಮಾತಿದೆ. ಆದರೆ ಕೊಹ್ಲಿ, ಅದಕ್ಕೆ ವ್ಯತಿರಿಕ್ತ. ಕಪ್ತಾನನಾದ ಮೇಲೂ ಕೂಡ ೭೦ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಭೂಪ ಈತ!  ತಾನು ಕ್ಯಾಪ್ಟನ್ ಆಗಿರುವ ರಾಯಲ್ ಚಾಲೆಂಜರ್ಸ್ ಐಪಿಎಲ್ ತಂಡಕ್ಕೆ ಪ್ರಶಸ್ತಿ ಒದಗಿಸಿಕೊಡಲು ವಿಫಲನಾಗಿರುವುದು ವಿರಾಟ್ ಮೇಲಿರುವ ಆಪಾದನೆಗಳಲ್ಲೊಂದು. ಐಪಿಎಲ್ ಎಂಬ ಅಬ್ಬರದ ಆಟದಲ್ಲಿ ಮಾತ್ರ ಕೋಹ್ಲಿ ಎಂಬ ಕುದುರೆ ಗೆಲ್ಲಲು ಸಾಧ್ಯವಾಗಿಲ್ಲ! ವೈಯಕ್ತಿಕವಾಗಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಹೊಡಿಬಡಿಯ ಆಟವನ್ನೇ ಆಡಿರುವ ಈತ, ಅಲ್ಲಿ ರನ್ನುಗಳ ರಾಶಿಯನ್ನೇ ಪೇರಿಸಿದ್ದರೂ ಕೂಡ ತಂಡಕ್ಕೆ ಫೈನಲ್ ತನಕ ತಲುಪಿಸಿಯೂ ಗೆಲ್ಲಿಸಲಾಗಿಲ್ಲ. ಆದರೆ ಈಗಾಗಲೇ ವಿಶ್ವಕಪ್ ಸೇರಿದಂತೆ ಹಲವಾರು ಪ್ರತಿಷ್ಠಿತ ಟೂರ್ನಿಗಳ ಗೆಲುವಿನ ರುಚಿ ಕಂಡಿರುವ ವಿರಾಟ್ ಗೆ, ಐ ಪಿ ಎಲ್ ಎಂಬುದು ದಕ್ಕದ ಕನಸಾಗಿರಲು ಸಾಧ್ಯವಿಲ್ಲ!

ತನ್ನ ಆಟಕ್ಕಾಗಿ ಐಸಿಸಿ ವರ್ಷದ ಕ್ರಿಕೆಟಿಗ (೨೦೧೨, ೨೦೧೭ ), ವಿಸ್ಡನ್ ಪ್ರಶಸ್ತಿ ( ೨೦೧೬, ೨೦೧೭) ಅರ್ಜುನ ಪ್ರಶಸ್ತಿ  ( ೨೦೧೩) ಪಡೆದುಕೊಂಡಿರುವ ವಿರಾಟ್, ಪದ್ಮಶ್ರೀ ಪುರಸ್ಕೃತನೂ ಹೌದು. ಜಾಹೀರಾತು ಜಗತ್ತಿನಲ್ಲಿರೂ ಮಿನುಗುತ್ತಿರುವ ಕೊಹ್ಲಿ, ಟೈಮ್ ಮ್ಯಾಗಜೀನ್ ನ ೨೦೧೮ ರ ನೂರು ಮಂದಿ ಪ್ರಭಾವಶೀಲಿ ವ್ಯಕ್ತಿಗಳ ಪಟ್ಟಿಯಲ್ಲೂ ಜಾಗ ಪಡೆದಿದ್ದಾನೆ. ಭಾರತೀಯ ಕ್ರಿಕೆಟ್ ನ ಅವಿಭಾಜ್ಯ ಅಂಗವಾಗಿರುವ ಕೊಹ್ಲಿಗೆ ಈಗ ಅರ್ಹವಾಗಿಯೇ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಕೂಡ ಒಲಿದು ಬಂದಿದೆ. ಕ್ರಿಕೆಟ್ ಅನ್ನು ತಮ್ಮ ದೈನಿಕ ಭಾವಲೋಕದ ಭಾಗವಾಗಿಯೇ ಪರಿಗಣಿಸುವ ಭಾರತದ ಸಮಸ್ತ ಕ್ರಿಕೆಟ್ ಅಭಿಮಾನಿಗಳಿಗೂ ಕೂಡ ಇದು ಸಂತಸದ ವಿಷಯವೇ. ದಾಖಲೆಗಳ ಶೃಂಗದ ಮೇಲೆ ಕಣ್ಣಿಟ್ಟಿರುವ ಈ ಕೆಚ್ಚೆದೆಯ ಕಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಸಾಧನೆಗಳೊಂದಿಗೆ ಮುನ್ನುಗ್ಗಲಿ ಎಂಬುದು ಎಲ್ಲರ ಹಾರಯಿಕೆ.







ಶನಿವಾರ, ಆಗಸ್ಟ್ 25, 2018

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಕೊಡುಗೆ ರಾಮಣ್ಣ ರೈ- ಒಂದು ವಿಮರ್ಶೆ




ಸಿನಿಮಾವೊಂದು ಸರಳವಾಗಿ, ಬಿಡಿಬಿಡಿಯ ಭಾವ ಗುಚ್ಛಗಳೊಡನೆ ನಮ್ಮನ್ನ ಹೇಗೆ ಹಿಡಿದಿಡಬಹುದು ಎಂಬುದಕ್ಕೆ ಈ ಚಿತ್ರ ಸುಂದರ ಉದಾಹರಣೆ. ಕರಾವಳಿ ಕರ್ನಾಟಕದ ಸೊಗಡನ್ನ ತನ್ನೊಳಗೆ ಸೊಗಸಾಗಿ ಮಿಳಿತಗೊಳಿಸಿಕೊಂಡಿರುವ ಈ ಚಲನಚಿತ್ರ ನನಗೆ ಬಹಳ ಇಷ್ಟವಾಯಿತು. ನಾನು ಕರಾವಳಿಗನಾಗಿರುವುದು ಇದಕ್ಕೆ ಮೊದಲ ಕಾರಣ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಕರ್ನಾಟಕದ ಉಳಿದ ಪ್ರಾಂತ್ಯದವರಿಗೆ ಈ ಚಿತ್ರ ನನ್ನಷ್ಟೇ ಇಷ್ಟವಾದೀತೇ ಎಂಬುದರ ಬಗ್ಗೆ ನನಗೆ ಪ್ರಶ್ನೆಗಳಿವೆ. ನಾನು ಓದಿದ ಶಾಲೆ, ನಾನು ಬೆಳೆದ ವಾತಾವರಣ ಈ ಚಿತ್ರದಲ್ಲಿನ ಸನ್ನಿವೇಶಗಳಿಗೆ ಹತ್ತಿರದಲ್ಲಿಯೇ ಇದ್ದ ಕಾರಣಕ್ಕಾಗಿ ಈ ಚಿತ್ರದ ಬಗ್ಗೆ ನನ್ನ ಪ್ರೀತಿ ಹೆಚ್ಚೇ ಇರಬಹುದು. ಆದರೆ, ಒಂದು ಉತ್ತಮ ಸಿನಿಮಾವನ್ನು ಪ್ರಾಮಾಣಿಕವಾಗಿ ಕಟ್ಟಿಕೊಡುವ ಯತ್ನವನ್ನು ರಿಶಭ್ ಶೆಟ್ಟಿ ನಿರ್ದೇಶನದ ಈ ಚಿತ್ರ ಮಾಡಿರುವುದಂತೂ ಹೌದು.

ಕಾಸರಗೋಡಿನ ಕನ್ನಡ ಶಾಲೆಯೊಂದರ ಸಮಸ್ಯೆಗಳನ್ನು ಹೇಳುವುದರ ಜೊತೆಗೆ ಎಳೆಯ ಪ್ರಾಯದ ಪ್ರೇಮ, ಊರಿನ ರಾಜಕೀಯ, ಸಾಮಾಜಿಕ ಸಮಸ್ಯೆಗಳು - ಇವೆಲ್ಲವನ್ನೂ ಚಿತ್ರಕಥೆಯೊಳಗೆ ಹೆಣೆದುಕೊಂಡು ರಸಮಯ ನಿರೂಪಣೆಯ ಜೊತೆಗೆ ಚಿತ್ರ ಸಾಗುತ್ತದೆ. ಲವಲವಿಕೆಯ ಸಂಭಾಷಣೆ ಮತ್ತು ಅಷ್ಟೇ ಲವಲವಿಕೆಯ ಸಂಗೀತ, ಚಿತ್ರದ ಧನಾತ್ಮಕ ಅಂಶಗಳು. ಹಾಡಿನ ಸಾಹಿತ್ಯ ಕೂಡ ಚೆನ್ನಾಗಿವೆ. ವಾಸುಕಿ ವೈಭವ್ ಸಂಗೀತ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತಕ್ಕೆ ಫುಲ್ ಮಾರ್ಕ್ಸ್.

ಸಣ್ಣಸಣ್ಣ ಘಟನೆಗಳು, ತುಂಡು ಸಂಭಾಷಣೆಗಳು, ತುಳು ನಾಟಕದ ಶೈಲಿಯ ಒನ್ ಲೈನರ್ ಗಳು ಚಿತ್ರದ ಜೀವಾಳ. ಹೆಚ್ಚು ಪರಿಚಯವಿಲ್ಲದ ಸ್ಥಳೀಯ ಕಲಾವಿದರುಗಳ ಚಂದದ ಅಭಿನಯ ಕೂಡ ಚಿತ್ರದ ಪ್ಲಸ್ ಪಾಯಿಂಟ್. ಮಲಯಾಳಂ ಭಾಷೆಯ ಹಿತಮಿತ ಬಳಕೆ, ಅಲ್ಲಲ್ಲಿ ಬಂದು ಹೋಗುವ ತುಳು ಭಾಷೆ ಚಿತ್ರಕ್ಕೆ ಸಹಜ ಚೌಕಟ್ಟನ್ನು ಒದಗಿಸಿವೆ. ದಕ್ಷಿಣ ಕನ್ನಡದ ಭಾಷೆಯನ್ನೇ ಇಡಿಯ ಚಿತ್ರದಲ್ಲಿ ಬಳಸಿಕೊಂಡಿರುವುದು ಅಲ್ಲಿನವರಿಗೆ ಖುಷಿಯಾದರೂ ಇತರರಿಗೆ ಸಣ್ಣ ತೊಡಕಾಗುವುದೋ ಏನೋ.

ಪಾತ್ರಧಾರಿಗಳಂತೂ- ಶಾಲೆಯ ಮಕ್ಕಳೂ, ಅಧ್ಯಾಪಕರೂ- ಎಲ್ಲರೂ ಕೂಡ ರೂ ಅಭಿನಯಿಸಿದಂತೆ ಕಾಣದೇ, ನೈಜವಾಗಿ ಕಾಣಿಸಿಕೊಂಡು ದೈನಿಕದ ಭಾಗದಂತೆಯೇ ಕಂಡು ನಮ್ಮ ಖುಷಿಯನ್ನು ಹೆಚ್ಚು ಮಾಡುತ್ತಾರೆ. ಹಾಗೆ ನೋಡಿದರೆ ಅನಂತನಾಗ್ ಪಾತ್ರವೇ, ಅರೇ- ಈ ಪಾತ್ರ ಈ ಚಿತ್ರದೊಳಕ್ಕೆ ಒಗ್ಗುತ್ತಿಲ್ಲವೇನೋ ಎಂದು ಒಂದು ಕ್ಷಣಕ್ಕೆ ಅನ್ನಿಸಿದರೂ ನಂತರ ನೋಡಿಸಿಕೊಂಡು ಹೋಗುತ್ತದೆ. ರಮೇಶ್ ಭಟ್ ಪಾತ್ರ ಅನಗತ್ಯವಾಗಿತ್ತು ಎಂದು ನನಗನ್ನಿಸಿತು. ಅವರಿಲ್ಲದೆಯೂ ಚಿತ್ರದ ಓಘಕ್ಕೇನೂ ತೊಂದರೆಯಾಗುತ್ತಿರಲಿಲ್ಲ. ಎಲ್ಲ ಪಾತ್ರಧಾರಿಗಳೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದರಿಂದ ಅವರುಗಳ ಬಗ್ಗೆ ಪ್ರತ್ಯೇಕ ವಿವರಣೆ ಅಗತ್ಯವಿಲ್ಲ.

ನೀವು ಕರಾವಳಿಯಲ್ಲಿ ನಿಮ್ಮ ಬಾಲ್ಯವನ್ನು ಕಳೆದಿರುವಿರದಾರೆ, ಅಲ್ಲಿನ ಸರ್ಕಾರೀ ಪ್ರಾಥಮಿಕ ಶಾಲೆಗಳಲ್ಲಿ ತೊಂಬತ್ತರ ದಶಕದ ಎಡಬಲದಲ್ಲಿ ನಿಮ್ಮ ಶಿಕ್ಷಣ ಆಗಿದ್ದರೆ ಈ ಚಿತ್ರ ನಿಮಗೆ ಮೃಷ್ಟಾನ್ನ ಭೋಜನ. ಇಲ್ಲದೇ ಹೋದರೂ ಕೂಡ, ಯಾವು ಕೊಂಬು ಕಹಳೆಗಳಿಲ್ಲದ ಪ್ರಾಮಾಣಿಕ ಚಲನಚಿತ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಕೊಡುಗೆ ರಾಮಣ್ಣ ರೈ.

ಐದಕ್ಕೆ ನಾಲ್ಕೂವರೆ ಸ್ಟಾರ್ಸ್!
(ದಕ್ಷಿಣ ಕನ್ನಡಿಗನಾಗಿದ್ದಕ್ಕೆ ಅರ್ಧ ಮುಕ್ಕಾಲು ಸ್ಟಾರ್ ಎಕ್ಸ್ಟ್ರಾ ಅಂತ ಅಂದುಕೊಳ್ಳಿರಿ) :)





ಮಂಗಳವಾರ, ಜುಲೈ 24, 2018

ನೆಟ್ ಫಿಕ್ಸ್!


ವಿಧಾನಸೌಧ ಸ್ಟಾಪಿನಲ್ಲಿ ಮೆಟ್ರೋ ನಿಂತಾಗ, ನನ್ನ ಪಕ್ಕದಲ್ಲೇ ಒಬ್ಬರು ಹಿರಿಯ ಮಹಿಳೆ ಬಂದು ನಿಂತರು. ಲಗುಬಗೆಯಿಂದ ಮೊಬೈಲು ತೆಗೆದೋರೇ, ಹೆಡ್ ಸೆಟ್ಟು ಸಿಕ್ಕಿಸಿಕೊಂಡು, ಅದ್ಯಾವುದೋ ಸಿನಿಮಾ ನೋಡಲು ಶುರುಮಾಡಿದರು. ಅಷ್ಟು ಗಡಿಬಿಡಿಯಿಂದ ಅದೇನು ನೋಡುತ್ತಿದ್ದಾರೆ ಎಂದು ಸಹಜ ಕುತೂಹಲದಿಂದ ಕಣ್ಣಾಡಿಸಿದರೆ, ಆಪ್ ಒಂದರಲ್ಲಿ ಮೊದಲೇ ಡೌನ್ ಲೋಡು ಮಾಡಿಟ್ಟುಕೊಂಡಿದ್ದ ಹಾಲಿವುಡ್ ಸಿನಿಮಾ, ಐರನ್ ಮ್ಯಾನ್. ನನ್ನಮ್ಮನ ವಯಸ್ಸಿನ ಮಹಿಳೆಯೊಬ್ಬರು ಈ ಚಿತ್ರ ನೋಡುತ್ತಿದ್ದಾರಲ್ಲ ಎಂದು ಅಚ್ಚರಿಯೂ, ಖುಷಿಯೂ ಆಯಿತು. ಹಾಂ, ಇಂತಹ ಅನುಭವ ಇದೇ ಮೊದಲೇನೂ ಅಲ್ಲ. ಬೆಂಗಳೂರಿನ ಮೆಟ್ರೋ ಹತ್ತಿದ ಕೂಡಲೇ, ಅದರ ಅಂದ ಚಂದ ಗಮನ ಸೆಳೆಯುತ್ತದೋ ಇಲ್ಲವೋ, ಇದೊಂದು ವಿಚಾರ ಮಾತ್ರ ಸಟ್ಟನೆ ತಲೆಗೆ ಹೋಗುತ್ತದೆ. ಏರು ಹೊತ್ತಿನ ಕಿಕ್ಕಿರಿದ ಸಂದಣಿಯಲ್ಲೂ ವಯಸ್ಸಿನ ಯಾವುದೇ ಬೇಧಭಾವ ಇಲ್ಲದೇ, ಎಲ್ಲರೂ ಎರಡೂ ಕಿವಿಗಳಿಗೆ ಹೆಡ್ಫೋನು ಸಿಕ್ಕಿಸಿಕೊಂಡು ತಮ್ಮದೇ ಏಕಾಂತವನ್ನು ಸೃಷ್ಟಿ ಮಾಡಿಕೊಂಡು ಮೊಬೈಲಿನೊಳಗೆ ಕಳೆದು ಹೋಗಿರುತ್ತಾರೆ. ತಮ್ಮಕ್ಕಷ್ಟೆ ತಾವು ನಗುತ್ತ, ಪೆಚ್ಚುಮೋರೆ ಹಾಕುತ್ತ ಪಕ್ಕದವನ ಜಗತ್ತಿಗೂ ತನಗೂ ಸಂಬಂಧವೇ ಇಲ್ಲದ ಹಾಗೆ ನಿಂತಿರುತ್ತಾರೆ. ಯೂಟ್ಯೂಬು, ಫೇಸ್ ಬುಕ್ಕು, ಹಾಟ್ ಸ್ಟಾರುಗಳೇ ಮೊದಲಾದ ಥರಹೇವಾರಿ ಅಪ್ಲಿಕೇಶನ್ನುಗಳಲ್ಲಿನ ರಂಜನೆಯ ಲೋಕದಲ್ಲಿ ಸೇರಿಕೊಂಡಿರುತ್ತಾರೆ. ಬೆಂಗಳೂರು ಮಾತ್ರವಲ್ಲ, ಜಗತ್ತಿನ ಎಲ್ಲಕಡೆ ಇವತ್ತಿನ ಹೊತ್ತಿನಲ್ಲಿ ಕಾಣುವ ಸರಳ ದೃಶ್ಯ ಇದು. ಬೇರೆಡೆಗಳಲ್ಲಿ ಕೊಂಚ ಬೇಗ ಶುರುವಾಗಿದ್ದು, ಭಾರತಕ್ಕೆ ಮಾತ್ರ ತಡವಾಗಿ ಬಂದಿದೆ, ಅಷ್ಟೆ.
ಅಂತರ್ಜಾಲ ಬಳಕೆಯ ಕ್ರಾಂತಿ ಭಾರತದಲ್ಲಿ ಇಪ್ಪತ್ತನೇ ಶತಮಾನದ ಅಂತ್ಯದಲ್ಲಾಯಿತು. ಸ್ಮಾರ್ಟ್ ಫೋನುಗಳು ಇಲ್ಲಿಗೆ ಕಾಲಿಟ್ಟದ್ದೂ ಅಲ್ಲಿಂದ ಕೆಲ ವರುಷಗಳ ನಂತರ. ಮೊಬೈಲ್ ಫೋನೆಂಬುದರಲ್ಲಿ ಕರೆ ಮಾಡುವ ಸೌಲಭ್ಯಕ್ಕಿಂತ ಬೇರೆಲ್ಲ ವಿಚಾರಗಳು ಮಹತ್ವ ಪಡೆದುಕೊಳ್ಳಲು ಆರಂಭವಾಗಿದ್ದೂ ಆವಾಗಲೇ. ಆಂಡ್ರಾಯ್ಡ್, ವಿಂಡೋಸ್, ಐಓಎಸ್ ಗಳೆಂಬ ಥರಹೇವಾರಿ ಆಪರೇಟಿಂಗ್ ಸಿಸ್ಟಂ ಗಳನ್ನು ಹೊಂದಿದ ಸ್ಮಾರ್ಟ್ ಫೋನುಗಳು ಭಾರತೀಯ ತಂತ್ರಜ್ಞಾನ ಮಾರುಕಟ್ಟೆಯ ಮೇಲೆ ಅಕ್ಷರಶಃ ದಾಳಿಯನ್ನೇ ನಡೆಸಿ, ಇಲ್ಲಿನ ಗ್ರಾಹಕರಿಗೆ ದಿಗಿಲಾಗುವ ಮಟ್ಟದ ಆಕರ್ಷಕ ಆಯ್ಕೆಗಳು ಲಭ್ಯವಾದವು. ಬೆರಳಂಚಿನ ಸ್ಪರ್ಶಕ್ಕೆ ಜಗತ್ತೇ ತೆರೆದುಕೊಳ್ಳುವ ಈ ರೋಮಾಂಚನ ಯಾವಾಗ ಆರಂಭವಾಯಿತೋ, ಅಂದಿನಿಂದ ಇಂದಿನವರೆಗೂ, ತೋರು ಬೆರಳ ತುದಿಗೆ ಮಾಹಿತಿ ಪ್ರವಾಹವೇ ಹರಿದು ಬರುತ್ತಿದೆ. ಬೇಕೋ ಬೇಡವೋ ಧಂಡಿಯಾಗಿ ಮೊಬೈಲು ತುಂಬ ಮನೋರಂಜನೆ ತುಂಬಿಕೊಂಡಿದೆ.
ಮೊಬೈಲ್ ಜಾಹೀರಾತಿನ ಬಣ್ಣ ಬಣ್ಣದ ನೀಯಾನು ಫಲಕಗಳು ಬಸರೀಕಟ್ಟೆಯಿಂದ ಬೆಂಗಳೂರು ತುದಿಯವರೆಗೆ ತಲುಪಲು ಮುಖ್ಯ ಕಾರಣ ಕಿಸೆಗೆ ಬಿಸಿಯಾಗದ ದರ ಮತ್ತು ಈ ರಂಜನೆ ಎನ್ನುವ ಆಯಾಮ. ಚಲನಚಿತ್ರಗಳ ಪುಟ್ಟ ತುಣುಕುಗಳೂ,  ಇಷ್ಟದ ಹಾಡುಗಳ ಡೌನ್ ನೋಡು ಮತ್ತು ನಾಲ್ಕಾರು ಎಂಬೀಗಳ ವಾಟ್ಸಪ್ ಸಂದೇಶಗಳಿಂದ ಆರಂಭವಾದ ಈ ಗೀಳು, ಈಗ ಮರಳಿ ಹೋಗಲಾದಷ್ಟು ದೂರದ ದಾರಿಯಲ್ಲಿ ನಮ್ಮನ್ನ ಕರೆತಂದು ಬಿಟ್ಟಿದೆ.
ಯಾವಾಗ ಜಿಯೋ ಎಂಬ ದೂರವಾಣಿ ದೈತ್ಯ ಬಂದು, ಮೆಗಾಬೈಟುಗಳ ಪ್ರಪಂಚದಿಂದ ಗಿಗಾಬೈಟುಗಳ ಅಗಾಧ ಅಂತರ್ಜಾಲ ಪ್ರಪಂಚವನ್ನು ದರ್ಶನ ಮಾಡಿಸಿತೋ, ಅಲ್ಲಿಂದಾಚೆಗೆ ನಡೆದದ್ದು ಮನರಂಜನೆಯ ಮೇಘಸ್ಪೋಟ!  ಆಮೇ ವೇಗದಲ್ಲಿ ದಿನಕ್ಕೆ ಐವತ್ತು ಅರವತ್ತು ಎಂಬೀಗಳಲ್ಲಿ ಬದುಕುತ್ತಿದ್ದ ಜಂಗಮಜೀವಿಗಳಿಗೆ ಒಮ್ಮೆಗೇ ತಿಂಗಳುಗಳ ಕಾಲ ಉಚಿತವಾಗಿ ನಾಲ್ಕಾರು ಜೀಬಿಗಳ ಡಾಟಾ ಪ್ಯಾಕ್, ಅದೂ ಭರಪೂರ ವೇಗದಲ್ಲಿ! ನಿತ್ಯ ಗಂಜಿಯುಣ್ಣುತ್ತಿದ್ದವನಿಗೆ ಮೃಷ್ಟಾನ್ನ ಭೋಜನದ ಸಂಭ್ರಮ. ಇದೇನು ಭ್ರಮೆಯೋ ಸತ್ಯವೋ  ಅರಿಯಲಾಗದ ಪರಿಸ್ಥಿತಿ. ಮೊದಮೊದಲು ಹೀಗಳೆದವರೂ ಕೊನೆಗೆ ಅದೇ ದಾರಿಗೆ ಬಂದರು. ಒಂದು ಜೀಬಿ ಇಂಟರ್ ನೆಟ್ ಗೆ ನಾಲ್ಕುನೂರು ರೂಪಾಯಿಗಳಿಂದ ನಾಲ್ಕೆಂಟು ರೂಪಾಯಿಗೆ ಇಳಿದದ್ದು ಪವಾಡ ಸದೃಶವಾಗಿತ್ತು.  ಇದಾದಮೇಲೆ ಭಾರತದ ಸಕಲೆಂಟು ದೂರವಾಣಿ ಕಂಪನಿಗಳೂ ತಮ್ಮ ಅಂತರ್ಜಾಲ ದರವನ್ನು ಇಳಿಸಲೇಬೇಕಾಯಿತು. ಈ ಮೊಬೈಲ್ ಕಂಪನಿಗಳ ಡಾಟಾಸಮರದಲ್ಲಿ ಕೊನೆಗೂ ಗೆದ್ದಿದ್ದು, ಬಳಕೆದಾರನೇ. ತಿಂಗಳಿಗೆ ಸಾಕಾಗುತ್ತಿದ್ದ ಒಂದು ಜಿಬಿ ಎಂಬ ಮಾಯಾಂಗನೆ, ಈಗ ಒಂದನೇ ದಿನ ಸಂಜೆಯವರೆಗೂ ಬರುವುದಿಲ್ಲ ಎಂಬಲ್ಲಿಗೂ ಬಂತು!
ಹೆಚ್ಚೂಕಡಿಮೆ ಉಚಿತವಾಗಿ ದೊರಕಿದ ಈ 4ಜಿ ಇಂಟರ್ ನೆಟ್ ಭಾರತದ ಮನರಂಜನಾ ಪ್ರಪಂಚದ ದಿಕ್ಕನ್ನು ಶಾಶ್ವತವಾಗಿ ಬದಲಾಯಿಸಿಬಿಟ್ಟಿತು. ಕುಟುಂಬವೆಲ್ಲ ಕೂತು ಸಂಜೆಯಿಂದ ರಾತ್ರಿಯವರೆಗೆ ಮನೆಯಲ್ಲಿ ಟೀವಿ ಧಾರಾವಾಹಿಗಳನ್ನು, ಸಿನಿಮಾಗಳನ್ನು ನೋಡುವ ಕಾಲ, ನಿಧಾನಕ್ಕೆ ಮಾಯವಾಗುತ್ತಿದೆ. ಯಾಕೆಂದರೀಗ ಅಪ್ಪ ಅಮ್ಮ ಮಗ ಮಗಳು, ಎಲ್ಲರ ಕೈಯಲ್ಲೂ 4ಜಿ ಮೊಬೈಲು. ಪ್ರತೀ ಮೊಬೈಲುಗಳಲ್ಲೂ ಹತ್ತಾರು ಅಪ್ಲಿಕೇಶನ್ನುಗಳು. ರಾತ್ರಿ ನೋಡಲಾಗದ ಸೀರಿಯಲ್ಲು ಅಲ್ಲೇ ಕೈಯಂಚಿನ ಮೊಬೈಲ್ ನಲ್ಲಿ ಈ ಕ್ಷಣ ಪ್ರತ್ಯಕ್ಷ. ಹೆಂಡತಿ ಸೀರಿಯಲ್ ನೋಡಿದರೆ ನೋಡಿಕೊಳ್ಳಲಿ, ಐಪೀಎಲ್ ಮ್ಯಾಚು ಕರತಲದಲ್ಲೇ ಕಾಣಿಸುತ್ತದೆ. ರಿಮೋಟ್ ಗಾಗಿ ಹೋರಾಟವಿಲ್ಲ, ಇಷ್ಟದ ಕಾರ್ಯಕ್ರಮಕ್ಕಾಗಿ ಕಾದಾಟವಿಲ್ಲ. ಗಂಡ ಹೆಂಡಿರಿಬ್ಬರೇ ಇರುವ ನ್ಯೂಕ್ಲಿಯರ್ ಕುಟುಂಬ ಕೂಡ ಮತ್ತೂ ವಿಭಜನೆಗೆ ಒಳಗಾಗಿ ಸೋಫಾದ ಒಂದೊಂದು ಮೂಲೆಗೆ ಸೇರಿ ಹೋಗಿವೆ ಮತ್ತು ತಮ್ತಮ್ಮ ಮೊಬೈಲು ಸ್ಕ್ರೀನುಗಳೊಳಗೆ ಕಣ್ಣು ಕೀಲಿಸಿವೆ.
ಮೊಬೈಲ್ ಎಂಬ ತೀರದ ದಾಹದಲ್ಲಿರುವ ಬಳಕೆದಾರರ ಬಾಯಾರಿಕೆ ತಣಿಸಲೆಂದೇ, ಮನರಂಜನೆಯ ಕಂಟೆಂಟ್ ಸೃಷ್ಟಿ ಮಾಡುವ ದೊಡ್ಡದೊಂದು ಸಮೂಹವೇ ನಮ್ಮಲ್ಲಿ ತಯಾರಾಗಿ ಕುಳಿತಿದೆ. ಮುಂದೊಂದು ದಿನ ಭಾರತದಲ್ಲಿ ಇಂತಹ ನೆಟ್ ಕ್ರಾಂತಿ ಆಗುತ್ತದೆ ಎಂಬ ಅಂದಾಜಿದ್ದ ಕಂಪನಿಗಳು ಹಲವು. ಅವರುಗಳ ದೂರದೃಷ್ಟಿ, ನಮ್ಮ ಮಾರುಕಟ್ಟೆಯನ್ನು ಮೊದಲೇ ಅಧ್ಯಯನ ಮಾಡಿತ್ತು ಕೂಡ. ಜಿಯೋ ಗುಲ್ಲೆಬ್ಬಿಸಿದ ಹೊತ್ತಲ್ಲೇ ನೆಟ್ ಫ್ಲಿಕ್ಸ್ ಭಾರತಕ್ಕೆ ಬಂತು, ಅದರ ಬೆನ್ನಿಗೇ ಹಾಟ್ ಸ್ಟಾರ್, ಅಮೇಜಾನ್ ಪ್ರೈಮ್ ಬಂದವು. ಈ ಆಪ್ ಗಳೀಗ ನಮ್ಮ ಮೊಬೈಲುಗಳಲ್ಲಿ ವಿರಾಜಮಾನರಾಗಿ ಒಂದೆರಡು ವರುಷಗಳೇ ಕಳೆದಿವೆ. ಇವರಿಗೆ ಸೆಡ್ಡು ಹೊಡೆಯಲೆಂದೇ ನಮ್ಮ ನೆಲದ ಮಂದಿಯೂ ಎದ್ದು ನಿಂತಿದ್ದಾರೆ. Alt Balaji ಎಂಬ ರಂಜನಾತ್ಮಕ ಆಪ್ ಅನ್ನು ಎಕ್ತಾಕಪೂರ್ ಹೊರ ತಂದಿದ್ದರೆ, ಎರೋಸ್ ನೌ ಸೇರಿದಂತೆ ಹಲ ಸಿನಿಮಾ ತಯಾರಿಕಾ ಕಂಪನಿಗಳು ಅಪ್ಲಿಕೇಶನ್ ತಂದಿವೆ, ಜಿಯೋ ಟೀವಿ, ಏರ್ ಟೆಲ್ ಟಿವಿ, ಮೊದಲಾದ ಆಪ್ ಗಳು ಶುರುವಾಗಿದೆ. ಪ್ರಾಯಶಃ ಹೆಚ್ಚಿನೆಲ್ಲ ಪ್ರಮುಖ ಮನರಂಜನಾ ಟಿವಿ ವಾಹಿನಿಗಳಂತೂ ತಮ್ಮ ಅಪ್ಲಿಕೇಶನ್ ಈಗಾಗಲೇ ಹೊರತಂದಿವೆ. ಕಲರ್ಸ್ ನ ವೂಟ್, ಝೀ ವಾಹಿನಿಯ ಝೀ5, ಸನ್ ನೆಟ್ ವರ್ಕ್ ನ ಸನ್ ನೆಕ್ಸ್ಟ್, ಸ್ಟಾರ್ ಚಾನಲುಗಳ ಹಾಟ್ ಸ್ಟಾರ್,  ಸೋನಿಯ ಸೋನಿಲೈವ್, ಹೀಗೆ ಎಲ್ಲ ಮನರಂಜನಾ ವಾಹಿನಿಗಳ ಧಾರಾವಾಹಿಗಳು, ಸಿನಿಮಾಗಳು ಮೊಬೈಲ್ ನಲ್ಲೇ ಲಭ್ಯ ಈಗ.
ಕನ್ನಡದ ಧಾರಾವಾಹಿಯೊಂದು ಅನಾಯಾಸವಾಗಿ ಮೊಬೈಲ್ ನಲ್ಲೇ ನೋಡಲು ಸಿಕ್ಕರೆ, ಅದೂ ಹೆಚ್ಚಿನ ಜಾಹೀರಾತುಗಳ ಕಿರಿಕಿರಿ ಇಲ್ಲದೇ- ಟಿವಿಯಲ್ಲಿ ನೋಡುವ ರಗಳೆ ಯಾಕೆ ಬೇಕು ಹೇಳಿ? ಇಷ್ಟವಾದ ಸಂಚಿಕೆಗಳ ಮರುವೀಕ್ಷಣೆ, ಸರಳವಾಗಿ ಇತರರೊಡನೆ ಹಂಚಿಕೊಳ್ಳುವ ಅವಕಾಶ, ಹೊಸ ಎಪಿಸೋಡು ಬಂದರೆ ಠಣ್ಣೆನ್ನುವ ನೋಟಿಫಿಕೇಷನ್ನು! ಇನ್ನೇನು ಬೇಕು? ಇಂತಹ ಎಲ್ಲ ಅಪ್ಲಿಕೇಶನ್ನುಗಳ ಡೌನ್ ಲೋಡ್ ಸಂಖ್ಯೆಯನ್ನು ಗಮನಿಸಿದಾಗ ದಿನೇ ದಿನೇ ಇವುಗಳ ಜನಪ್ರಿಯತೆ ಹೆಚ್ಚುತ್ತಿರುವುದಂತೂ ಸ್ಪಷ್ಟ. ವಿದೇಶೀ ಸಿನಿಮಾಗಳು, ಸೀರಿಸ್ ಗಳಿಗಷ್ಟೇ ಸೀಮಿತವಾದ ಅಪ್ಲಿಕೇಶನ್ ಗಳಾಗಿದ್ದ ನೆಟ್ ಫ್ಲಿಕ್ಸ್, ಅಮೇಜಾನ್ ಕೂಡ ಈಗ ಇದೇ ಜಾಡು ಹಿಡಿದಿವೆ. ಭಾರತದ ಮಂದಿ ತಮ್ಮ ಮಣ್ಣಿನ ಇಲ್ಲಿನ ಕಥೆಗಳನ್ನೇ ಹೆಚ್ಚು ಇಷ್ಟ ಪಡುತ್ತಾರೆ ಎಂಬುದನ್ನು ಅರಿತುಕೊಂಡಿರುವ ಇವರುಗಳು ಈಗ ಇಲ್ಲಿನದೇ ಕಥೆಗಳನ್ನು ಧಾರಾವಾಹಿ, ಸಿನಿಮಾಗಳ ರೂಪದಲ್ಲಿ ನೇರವಾಗಿ ಮೊಬೈಲ್ ತೆರೆಗೆ ತರುತ್ತಿದ್ದಾರೆ. ’ಒರಿಜಿನಲ್ಸ್’ ಎಂದೇ ಪ್ರಸಿದ್ಧವಾಗಿರುವ ಈ ಮಾದರಿಯನ್ನು ನಮ್ಮ ಜನ ಇಷ್ಟಪಟ್ಟು ಸ್ವೀಕರಿಸುತ್ತಿದ್ದಾರೆ. ಶಾರುಕ್ ಖಾನ್, ನವಾಜುದ್ದೀನ್ ಸಿದ್ದಿಕಿ, ಸೈಫ್ ಅಲಿ ಖಾನ್, ವಿವೇಕ್ ಒಬೆರಾಯ್- ಇವರುಗಳೆಲ್ಲ ಈ ಕಿರುಸ್ಕ್ರೀನಲ್ಲಿ ಕಾಣಿಸಿಕೊಂಡಿದ್ದಾರೆ, ಕಾಣಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನೆಲ್ಲ ಬಾಲಿವುಡ್ ನಟರು, ಅಷ್ಟೇಕೆ- ನಮ್ಮ ದಕ್ಷಿಣ ಭಾರತದ ನಟರುಗಳು ಕೂಡ ಒಂದಿಲ್ಲೊಂದು ಬಗೆಯಲ್ಲಿ ಈ ಮಾರುಕಟ್ಟೆಯ ಮೇಲೆ ತಮ್ಮ ಹಿಡಿತವನ್ನು ಹೊಂದಲು ಪ್ರಯತ್ನ ಮಾಡುತ್ತಿದ್ದಾರೆ. ಬಾಹುಬಲಿಯಂತ ಮಹೋನ್ನತ ಚಿತ್ರದಲ್ಲಿ ಅಭಿನಯಿಸಿ ಬಂದ ಕೂಡಲೇ ರಾಣಾ ದಗ್ಗುಬಾಟಿ ಮಾಡಿದ್ದು, ’ಸೋಶಿಯಲ್’  ಎಂಬ ವೆಬ್ ಸೀರೀಸ್! ಹಿರಿತೆರೆಯ ಅನೇಕ ಕಲಾವಿದರು ಈಗಾಗಲೇ ಮೊಬೈಲ್ ಮನರಂಜನೆಯ ಕಡೆಗೆ ಹೈಜಂಪ್ ಮಾಡಿದ್ದು, ಮುಂಬರುವ ದಿನಗಳಲ್ಲಿ ಇವರೆಲ್ಲ ಸಿನಿಮಾಗಳಿಗಿಂತ ಜಾಸ್ತಿ ಈ ಜಗತ್ತಿನಲ್ಲೇ ಕಾಣಿಸಿಕೊಂಡರೂ ಆಶ್ಚರ್ಯವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ ಮೊಬೈಲ್ ಬಳಕೆ ಶರವೇಗದಲ್ಲಿ ಹೆಚ್ಚುತ್ತಿದ್ದು, ಭವಿಷ್ಯದ ರಂಜನೆಯ ಜಾಗ ಇದೇ ಅಂಗೈ ಅಗಲದ ಅರಮನೆಯಲ್ಲಿದೆ!
OTT- ಓವರ್ ದಿ ಟಾಪ್ ಎಂದು ಕರೆಯಲ್ಪಡುವ ಈ ತರಹದ ಆಪ್ ಗಳಿಗಾಗಿ ರಂಜನಾತ್ಮಕ ಕಂಟೆಂಟ್ ಸಿದ್ದಪಡಿಸಲು ಹೊರಟಿರುವ ಹೊಸ ಬಳಗವೇ ಕಣ್ಣೆದುರಿಗೆ ಇದೆ. ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ವೆಬ್ ಸೀರೀಸ್ ಮಾಡಲು ದಂಡೇ ಸಜ್ಜಾಗಿದೆ. ಬೇರೆ ಭಾಷೆಗಳಿಗೆ ಸೇರಿದರೆ ಕನ್ನಡದಲ್ಲಿ ಪ್ರಯತ್ನಗಳಿನ್ನೂ ಜೋರಾಗಿಲ್ಲ. ಅಲ್ಲೊಂದು ಇಲ್ಲೊಂದು ವೆಬ್ ಸೀರೀಸ್ ಗಳು ಯೂಟ್ಯೂಬ್ ನಲ್ಲಿವೆಯಷ್ಟೇ.’ಲೂಸ್ ಕನೆಕ್ಷನ್’ ಎಂಬ ಸೀರೀಸ್ ಕೊಂಚ ಸದ್ದು ಮಾಡಿದ್ದು ಬಿಟ್ಟರೆ, ಇನ್ನು ಮೇಲಷ್ಟೇ ಈ ಯತ್ನಗಳು ತೆರೆಗಾಣಬೇಕಿವೆ. ಜಾಹೀರಾತು ಕ್ಷೇತ್ರ ಕೂಡ ಈಗ ಟೀವಿಯಿಂದಾಚೆಗೆ ಯೋಚನೆ ಮಾಡಲು ಆರಂಭಿಸಿದ್ದು ತಮ್ಮ ಬಂಡವಾಳದ ಬಹುಪಾಲನ್ನು ಅಂತರ್ಜಾಲಕ್ಕೆ-ಮೊಬೈಲ್ ಅಪ್ಲಿಕೇಶನ್ ಗಳಿಗೆ ಮೀಸಲಿಟ್ಟಿವೆ.
ಇನ್ನು ಕೇವಲ ಎರಡೇ ವರುಷಗಳಲ್ಲಿ ನಮ್ಮ ದೇಶದಲ್ಲಿ ಸುಮಾರು ಐವತ್ತು ಕೋಟಿ ಮಂದಿ ಮೊಬೈಲ್ ನಲ್ಲಿ ಇಂಟರ್ ನೆಟ್ ಬಳಕೆದಾರರಾಗಿರುತ್ತಾರೆ ಎಂದು ಸರ್ವೇಯೊಂದು ಹೇಳುತ್ತದೆ. ಎಂದರೆ, ದೇಶದ ಸುಮಾರು ನಲವತ್ತು ಶೇಕಡಾ ಮಂದಿ, ಅಂತರ್ಜಾಲದ ನೇರ ಸಂಪರ್ಕ ಹೊಂದಿರುತ್ತಾರೆ. ಊರಿಗೆ ಬಂದ ಮೇಲೆ ನೀರಿಗೆ ಬರಲೇಬೇಕು ಎಂಬ ಪುರಾತನ ಗಾದೆಯನ್ವಯ-ಇವರೆಲ್ಲರೂ ಕೂಡ ಮೊಬೈಲ್ ಮಾಯಾಜಾಲದ ಪ್ರಮುಖ ಅಂಗವಾದ ವೀಡಿಯೋ ಸ್ಟ್ರೀಮಿಂಗ್ ಸೌಲಭ್ಯವನ್ನು ಬಳಸಲು ಆರಂಭಿಸುತ್ತಾರೆ. ದಿಲ್ಲಿಯಿಂದ ಹಳ್ಳಿಯವರೆಗೆ ಈಗಾಗಲೇ ವ್ಯಾಪಿಸಿರುವ ಈ ಹವ್ಯಾಸವು ಆಳಕ್ಕೆ ತನ್ನ ಬೇರುಗಳನ್ನು ಇಳಿಸಿ, ಇನ್ನೂ ಸುಭದ್ರಗೊಳ್ಳಲಿದೆ. ಹೀಗೇ ಮುಂದುವರಿದರೆ, ಸರಿಸುಮಾರು ಮುಂದಿನ ದಶಕದ ಮಧ್ಯಭಾಗದಲ್ಲಿ ಟಿವಿ ವೀಕ್ಷಣೆಯನ್ನೂ ಮೀರಿ ಡಿಜಿಟಲ್ ಜಗತ್ತು ತನ್ನ ಪಾರಮ್ಯವನ್ನು ಮೆರೆಯಲಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.
ಇಂದು ಮನರಂಜನೆಗೆ ಯಾವುದೇ ಪರದೆಯ ಹಂಗಿಲ್ಲ. ದೊಡ್ಡ ಥಿಯೇಟರಿನಲ್ಲಿ ನೋಡಿದರೂ, ಮೊಬೈಲ್ ಪರದೆಯಲ್ಲಿ ನೋಡಿದರೂ, ಕೊನೆಗೆ ಮನದಲ್ಲಿ ಉಳಿಯುವುದು ಅಭಿನಯ, ಕಥೆ ಮಾತ್ರ. ಇದನ್ನೇ ಮನಗಂಡಿರುವ ನೆಟ್ ಫಿಕ್ಸ್ ತರದ ಅಪ್ಲಿಕೇಶನ್ ಹೊಸ ಚಿತ್ರಗಳನ್ನು ಇದಕ್ಕಾಗಿಯೇ ನಿರ್ಮಿಸುತ್ತಿದ್ದಾರೆ. ಯಾವುದೇ ಮಾಲು, ಥಿಯೇಟರುಗಳ ನ ಹಂಗಿಲ್ಲದೇ ನೇರವಾಗಿ ನಮ್ಮ ಮೊಬೈಲ್ ಗೇ ರಿಲೀಸ್ ಆಗುವ ಚಿತ್ರಗಳನ್ನು ನೋಡದೇ ಇರಲು ಯಾವ ಕಾರಣವೂ ಇಲ್ಲ. ಅಷ್ಟೇ ಅಲ್ಲದೇ, ಇತ್ತೀಚಿಗೆ ಗಮನಿಸಿದಂತೆ- ಈಗ ತಾನೇ ಬಿಡುಗಡೆಗೊಂಡ ಚಿತ್ರಗಳು ಕೂಡ ಒಂದು-ಎರಡು ತಿಂಗಳ ಅಂತರದಲ್ಲಿ ನೆಟ್ ಫಿಕ್ಸಲ್ಲೋ, ಅಮೇಜಾನ್ ಪ್ರೈಮ್ ನಲ್ಲೋ ಲಭ್ಯವಾಗಿರುತ್ತವೆ ಬೇರೆ. ಹೆಚ್ಚಿನ ದುಡ್ಡು ಪಾವತಿಸದೇ, ತಿಂಗಳ ಚಂದಾ ದುಡ್ಡಲ್ಲಿ ನೂತನ ಸಿನಿಮಾಗಳನ್ನು ನೋಡುವ ಭಾಗ್ಯವನ್ನು ಬಿಟ್ಟುಕೊಳ್ಳುವರುಂಟೇ?  
ಹೀಗೆ, ಮೇಲಿಂದ ಮೇಲೆ ಲಭ್ಯವಾಗುತ್ತಿರುವ ಬಗೆಬಗೆಯ ಮನರಂಜನೆಯ ಸರಕು, ಇಂಟರ್ ನೆಟ್ ಡಾಟಾದ ಕಡಿಮೆ ಬೆಲೆ, ಉತ್ತಮ ಸಿಗ್ನಲ್ ವ್ಯವಸ್ಥೆ ಒಟ್ಟಾರೆ ಮಾರುಕಟ್ಟೆಯ ಚಿತ್ರಣವನ್ನೇ ಬದಲಾಯಿಸುತ್ತಿದೆ. ನೀವು ಈ ಬರಹವನ್ನು ಓದುವ ಹೊತ್ತಿಗೆ ನೂರಾರು ಗಂಟೆಗಳ ಹೊಸ ಸರಕು ಸಿದ್ಧವಾಗಿ ಮೊಬೈಲಿನೊಳಕ್ಕೆ ಬಂದು,  ನಿಮ್ಮ ಬೆರಳತುದಿಯು ತನ್ನನ್ನು ಮುಟ್ಟುವುದನ್ನೇ ಕಾಯುತ್ತಿದೆ! ಇನ್ನೊಂದು ನೂರು ಮಂದಿ ಹೊಸ ಸಿಮ್ ಕಾರ್ಡನ್ನು ಮೊಬೈಲಿಗೆ ತೂರಿಸುತ್ತ ಅಗಾಧ ವೈಶಾಲ್ಯತೆಯ ಜಾಲ ಪ್ರಪಂಚದ ಹೊಸ್ತಿಲಲ್ಲಿ ನಿಂತಿದ್ದಾರೆ. ಬನ್ನಿ, ಒಳಗೆ ಬನ್ನಿ. ಒಮ್ಮೆ ಒಳಗೆ ಬಂದ ಮೇಲೆ ಹೊರ ಹೋಗುವ ದಾರಿ ಕಾಣಿಸುವುದಿಲ್ಲ. ಕಂಡರೂ ನಿಮಗದು ಬೇಕಿರುವುದಿಲ್ಲ!

ಬಾಕ್ಸ್ ೧
ಭಾರತದಲ್ಲಿ ಈಗ ಸುಮಾರು 47 ಕೋಟಿ ಅಂತರ್ಜಾಲ ಬಳಕೆದಾರರಿದ್ದು, ಅದರಲ್ಲಿ ಸುಮಾರು ಮೂವತ್ತು ಕೋಟಿ ಮಂದಿ ಮೊಬೈಲ್ ನಲ್ಲಿಯೇ ಜಾಲ ಜಾಲಾಡುತ್ತಾರಂತೆ! ಹೇಳಿದರೆ ಅಚ್ಚರಿ ಅನ್ನಿಸಬಹುದು, ಸಾಮಾಜಿಕ ಜಾಲತಾಣಗಳಿಗಿಂತ ಹೆಚ್ಚಿನ ಹೊತ್ತನ್ನ ಮಂದಿ ವೀಡಿಯೋ-ಹಾಡು ಇತ್ಯಾದಿಗಳನ್ನ ನೋಡುವುದರಲ್ಲಿ ಕಳೆಯುತ್ತಿದ್ದಾರೆ. ಹದಿನಾರರಿಂದ ಮೂವತ್ತರ ವಯೋಮಾನದವರು ಸುಮಾರು ಎರಡೂವರೆ ತಾಸುಗಳನ್ನೂ, ನಲವತ್ತರಿಂದ ಅರವತ್ತರ ವಯಸ್ಸಿನವರು ಸುಮಾರು ಒಂದೂವರೆ ತಾಸಿಗೂ ಹೆಚ್ಚು ಸಮಯವನ್ನು ಮೊಬೈಲ್ ನಲ್ಲಿ ಸಿನಿಮಾ-ಧಾರಾವಾಹಿ ಇತ್ಯಾದಿ ನೋಡುವುದಕ್ಕಾಗಿ ಮೀಸಲಿಟ್ಟಿದ್ದಾರೆ. ದೆಹಲಿ ಮುಂಬೈ ಬೆಂಗಳೂರು ಕೊಲ್ಕೊತಾ ಹೈದರಾಬಾದ್ ತರಹದ ದೊಡ್ಡ ನಗರಗಳಲ್ಲಿ ಈ ಪ್ರಮಾಣ ಇನ್ನೂ ಜಾಸ್ತಿ ಇದೆ.

ಬಾಕ್ಸ್- ೨
ನಮ್ಮ ದೇಶದ ಒಟ್ಟು ಮೂವತ್ತು ಕೋಟಿ ಮೊಬೈಲ್ ಅಂತರ್ಜಾಲ ಬಳಕೆದಾರರಲ್ಲಿ  ಸುಮಾರು ಹದಿಮೂರು ಕೋಟಿ ಹಳ್ಳಿಗರು ಭಾರತದಲ್ಲಿ ಈಗ ಇಂಟರ್ ನೆಟ್ ಬಳಸುತ್ತಿದ್ದಾರೆ. ಸುಮಾರು ಇಪ್ಪತ್ತು ಕೋಟಿ ಗಂಡಸರೂ, ಹತ್ತುಕೋಟಿ ಹೆಂಗಸರೂ ಅಂತರ್ಜಾಲ ಬಳಕೆದಾರರು. ಮೊಬೈಲ್ ಇಂಟರ್ ನೆಟ್ ಬಳಕೆಯಲ್ಲಿ ಭಾರತ 2010 ರ ವೇಳೆಗೆ 150ನೇ ಸ್ಥಾನದಲ್ಲಿತ್ತು. ಈಗ ಭಾರತಕ್ಕೆ ಇದರಲ್ಲಿ ಮೊದಲನೇ ಸ್ಥಾನ! ನೆಟ್ ಬಳಕೆಯಲ್ಲಿ ಅಮೆರಿಕ ಮತ್ತು ಚೀನಾವನ್ನು ಕೂಡ ಭಾರತ ಹಿಂದಿಕ್ಕಿದೆ.

ಬಾಕ್ಸ್ -3
Youtube ಒಂದರಲ್ಲೇ ಪ್ರತಿ ನಿಮಿಷಕ್ಕೆ 72 ತಾಸುಗಳ ವೀಡೀಯೋ ಅಪ್ ಲೋಡ್ ಆಗುತ್ತದೆ.  ದಿನಕ್ಕೆ ಸುಮಾರು ಐವತ್ತು ಕೋಟಿ ಗಂಟೆಗಳಷ್ಟು ವೀಡಿಯೋವನ್ನು ಜನ ಯೂಟ್ಯೂಬ್ ಒಂದರಲ್ಲೇ ನೋಡುತ್ತಾರಂತೆ.  ಐವತ್ತು ಕೋಟಿ ಮಂದಿ, ಫೇಸ್ ಬುಕ್ ನಲ್ಲಿ ಪ್ರತಿದಿನ ವೀಡಿಯೋ ವೀಕ್ಷಿಸುತ್ತಾರೆ.

(Published in Kannadaprabha Sunday Magazine)

ಗುರುವಾರ, ಏಪ್ರಿಲ್ 26, 2018

ಕಸೋಲ್- ಹಿಮಾಲಯದ ಪ್ರವೇಶ ದ್ವಾರ



 ಹಿಮಾಲಯಕ್ಕೆ ಚಾರಣ ಹೋಗಬೇಕು ಎನ್ನುವುದು ಬಹುತೇಕ ಪ್ರವಾಸ ಪ್ರಿಯರ ಕನಸು. ಒಂದು ಬಾರಿ ಹೋಗಿ ಬಂದವರಿಗಂತೂ, ಮತ್ತೆ ಮತ್ತೆ ಹಿಮಾಲಯದ ಸೆಳೆತ ಇದ್ದದ್ದೇ. ಬಿಡಲಾಗದ ಮಾಯೆ ಅದು. ಹಿಮಾಚಲ ಪ್ರದೇಶ, ಜಮ್ಮ ಕಾಶ್ಮೀರ, ಉತ್ತರಾಂಚಲ, ಪೂರ್ವೋತ್ತರ ರಾಜ್ಯಗಳ ಕೆಲ ಪ್ರದೇಶಗಳು ಹಿಮಾಲಯದ ಅನುಭೂತಿಯನ್ನ ಪಡೆಯಲು ಸರಿಯಾದ ತಾಣಗಳು. ಮಂಜು ಮುಸುಕಿದ ಸಾಲು ಸಾಲು ಪರ್ವತ ಶ್ರೇಣಿಗಳನ್ನು ನೋಡುವ, ಹಿಮದಲ್ಲಿಯೇ ಚಾರಣ ಮಾಡಿ ಬೆಟ್ಟಗಳನ್ನು ಹತ್ತಿ ಬರುವ ಆಸಕ್ತಿ ಉಳ್ಳುವರಿಗೆ ಹಿಮಾಚಲ ಪ್ರದೇಶ ಸೂಕ್ತ ರಾಜ್ಯ. ಹೆಸರೇ ಹೇಳುವ ಹಾಗೆ, ಹಿಮಾಚಲದ ತುಂಬ ಮಂಜಿನ ಬೆಟ್ಟಗಳ ಸಾಲು ಸಾಲೇ ಇದೆ. ಯಾವ ಬೆಟ್ಟ ಹತ್ತುವ ಆಸಕ್ತಿಯೂ ಇಲ್ಲ, ಹಾಗಂತ ರುದ್ರ ರಮಣೀಯ ಪರ್ವತಗಳನ್ನೂ, ಹಿಮ ಕರಗಿ ಹರಿಯುವ ಬಿಳಿನದಿಗಳನ್ನೂ, ಆಗಸದೆತ್ತರ ಚಿಮ್ಮಿ ನಿಂತ ಉದ್ದನೆಯ ಸೂಚಿಪರ್ಣ ವೃಕ್ಷಗಳನ್ನೂ ಸುಮ್ಮನೆ ನೋಡುತ್ತ ಬಿದ್ದುಕೊಳ್ಳಬೇಕು ಎನ್ನುವ ಯೋಚನೆಯಲ್ಲಿ ಯಾರಾದರೂ ಇದ್ದರೆ, ಅವರಿಗಾಗಿಯೇ ಹೇಳಿ ಮಾಡಿಸಿದ ಊರು,ಕಸೋಲ್.

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿದೆ, ಈ ಕಸೋಲ್ ಎಂಬ ಪುಟ್ಟ ಊರು. ಪಾರ್ವತೀ ನದಿ ಕಣಿವೆಯ ಈ ಊರು, ಒಂದರ್ಥದಲ್ಲಿ ಹಿಮಾಲಯ ಪರ್ವತ ಶ್ರೇಣಿಗಳ ನಾಡಿನ ಪ್ರವೇಶ ದ್ವಾರ. ಈ ಒಂದು ಊರಿನಿಂದ ಸುಮಾರು ಹತ್ತು ಇಪ್ಪತ್ತು ಬಗೆಯ ಚಾರಣಕ್ಕೆ ತೆರಳಬಹುದು. ಜಗತ್ತಿನ ವಿವಿಧ ಭಾಗಗಳಿಂದ ಟ್ರೆಕ್ಕಿಂಗ್ ಗೆ ಹೋಗಲೆಂದೇ ಬರುವ ಮಂದಿಗೆ ಈ ಊರು ಆರಂಭದ ಸ್ಥಳ. ಕುಲು-ಮನಾಲಿ ಮೊದಲಾದ ಪ್ರಸಿದ್ಧ ಪಿಕ್ ನಿಕ್ ಸ್ಪಾಟ್ ಗಳಿಗೆ ಹತ್ತಿರದಲ್ಲೇ ಇದ್ದರೂ, ಕಸೋಲ್ ತುಂಬ ಗಿಜಿಗುಡುವ ಊರು ಕೂಡ ಅಲ್ಲ. ಸುತ್ತಲೂ ಹಿಮಚ್ಛಾದಿತ ಬೆಟ್ಟಗಳು, ಸದಾಕಾಲ ಭೋರ್ಗರೆಯುತ್ತ ಹರಿಯುವ ಪಾರ್ವತೀ ನದಿಯ ಸದ್ದಿನ ನಡುವೆ ಈ ಪುಟಾಣಿ ಪುಟ್ಟಣ ಅಡಗಿಕೊಂಡಿದೆ.
ಕಸೋಲ್ ನ ಪೇಟೆ ದಾಟಿ ಹಾಗೇ ನಡೆದುಕೊಂಡು ಹೋದರೆ, ಪಾರ್ವತೀ ನದಿಯ ವಿಸ್ತಾರದ ಹರಿವು ನೋಡಬಹುದು. ದೂರದಲ್ಲಿ ಕಾಣುವ ಹಿಮ ಪರ್ವತಗಳಿಂದ ಬಸಿದು ಬಂದಿರುವ ಮಂಜನ್ನ ತನ್ನೊಳಗೆ ತುಂಬಿಕೊಂಡು ಹರಿವ ಈ ನದಿಯ ದಂಡೆಯಲ್ಲಿ ಸುಖಾಸುಮ್ಮನೆ, ಏನೂ ಮಾಡದೆ ಹಾಗೇ ಕುಳಿತಿರುವುದೇ ಒಂದು ಆನಂದ. ಸುಮಾರಾಗಿ, ಡಿಸೆಂಬರ್ ಜನವರಿ ರಣ ಚಳಿಗಾಲವನ್ನು ಹೊರತುಪಡಿಸಿ, ಎಂದೂ ಕೂಡ ಈ ನದಿ ತುಂಬಿಕೊಂಡೇ ಹರಿಯುತ್ತಿರುತ್ತದೆ. ದೇವಲೋಕಕ್ಕೇ ಚಾಚಿರುವ ಹಾಗೆ ಕಾಣುವ ದೇವದಾರು ಮರಸಾಲುಗಳ ಮಧ್ಯೆ ದಾರಿ ಮಾಡಿಕೊಂಡು ಸಾಗುತ್ತಿರುವ ಪಾರ್ವತಿ ನದಿಯನ್ನ ನೋಡುವ ಸೊಗಸೇ ಬೇರೆ.
ಹಾಗೇ ಸುತ್ತಾಡಿ, ಆಯಾಸವಾದರೆ ಕಸೋಲ್ ನ ತುಂಬ ಬಗೆ ಬಗೆಯ ಕೆಫೆಗಳಿವೆ. ನದಿಯ ಕಡೆಗೆ ಮುಖ ಮಾಡಿಯೋ, ಧವಳ ಹಿಮಾಲಯವನ್ನು ದಿಟ್ಟಿಸುತ್ತಲೋ ಬಿಸಿಬಿಸಿ ಕಾಫಿ, ಸೂಪುಗಳನ್ನು ಕುಡಿದು ಸುಸ್ತಿನ ಪರಿಹಾರವನ್ನಂತೂ ಮಾಡಿಕೊಳ್ಳಬಹುದು. ಕಸೋಲ್ ನ ಮಂದಿ ಪ್ರವಾಸಿಗರನ್ನೇ ನೆಚ್ಚಿಕೊಂಡು ಬದುಕುವವರಾದ್ದರಿಂದ, ಸ್ನೇಹಜೀವಿಗಳು. ನಗುನಗುತ್ತಲೇ ಮಾತನಾಡಿಸುತ್ತ ನಿಮ್ಮ ಸಮಸ್ಯೆಗೆ ಪರಿಹಾರ ಹೇಳಬಲ್ಲರು.
ರಿವರ್ Rafting ನ ಆಸಕ್ತಿ ಉಳ್ಳವರಿಗೆ ಹಿಮನದಿಯ ಬೆಳ್ನೊರೆಯಲ್ಲಿ ಹುಟ್ಟು ಹಾಕುತ್ತ ಸಾಗುವ ಅನುಭವವೂ ನಿಮಗಿಲ್ಲಿ ಲಭ್ಯ. ಸಣ್ಣ ಪುಟ್ಟ ಬೆಟ್ಟಗಳನ್ನ ಹತ್ತಿಳಿಯುವುದೇ ಆದರೆ, ಅದಕ್ಕೂ ಗೈಡ್ ಗಳಿದ್ದಾರೆ. ಹಿಮಾಲಯದ ಹಳ್ಳಿಗಳ ಜನಜೀವನವನ್ನು ಹತ್ತಿರದಿಂದ ನೋಡುವ ಆಸಕ್ತಿಯಿದ್ದರೆ ಅದಕ್ಕೂ ಈ ಸ್ಥಳ ಸರಿಯಾದುದೇ. ಕಸೋಲ್ ನ ಅಕ್ಕಪಕ್ಕದ ಬೆಟ್ಟಗಳಲ್ಲಿಯೇ ಸೊಗಸಾದ ಹಳ್ಳಿಗಳಿದ್ದು, ಅವುಗಳನ್ನು ನೋಡಿಕೊಂಡು ಬರದೇ ಇದ್ದರೆ ನಿಮ್ಮ ಪ್ರವಾಸ ಅಪೂರ್ಣವೂ ಹೌದು. ಮಲಾನಾ, ಗ್ರಹಣ್, ಮೊದಲದಾ ಸ್ವರ್ಗ ಸದೃಶ ಊರುಗಳಿಗೆಲ್ಲ ಕಸೋಲ್ ಮೂಲಕವೇ ದಾರಿ. ಬೆಳಗ್ಗೆದ್ದು ಹೋದರೆ ಸಂಜೆಯೊಳಗೆ ಮರಳಬಹುದಾದ ಈ ಹಳ್ಳಿಗಳು ತಮ್ಮ ನೈಸರ್ಗಿಕ ಸೌಂದರ್ಯಕ್ಕೆ ಮತ್ತು ಹಿಮಾಚಲದ ಸಾಂಪ್ರದಾಯಿಕತೆಗೆ ಪ್ರಸಿದ್ಧ.

ಅಷ್ಟಾಗಿಯೂ, ನೀವೆದಲ್ಲವನ್ನೂ ಮಾಡದೆಯೂ ಕೂಡ ಕಸೋಲ್ ನಲ್ಲಿ ಸುಖವಾಗಿ ಕಾಲಕಳೆಯಬಹುದು. ಪಕ್ಕಾ ಸೋಂಬೇರಿಯಂತೆ! ಎಲ್ಲಾದರೂ ಹೋದಾಗ ಸಿಕ್ಕಪಕ್ಕ ಜಾಗಗಳನ್ನೆಲ್ಲ ನೋಡಿ ಟಿಕ್ ಮಾರ್ಕ್ ಹಾಕಿ ಹೆಮ್ಮೆ ಪಡುವುದಕ್ಕಿಂತ, ಬೆಳದಿಂಗಳಲ್ಲಿ ಮಿನುಗುವ  ಶ್ವೇತಪರ್ವತಗಳ ಕೆಳಗಿನ ನದೀತೀರದಲ್ಲಿ ಅಗ್ಗಿಷ್ಟಿಕೆ ಹಾಕಿಕೊಂಡು ಬೆಚ್ಚಗೆ ಕೂರುವುದರಲ್ಲಿ ಹೆಚ್ಚಿನ ಆನಂದವಿದೆ!


ಬಾಕ್ಸ್-೧
ಕಸೋಲ್ ನ ಸುತ್ತಮುತ್ತ ನೋಡಬಹುದಾದ ಹಲವು ಜಾಗಗಳೂ, ಊರುಗಳೂ ಇವೆ. ಅವುಗಳಲ್ಲಿ ಮುಖ್ಯವಾದದ್ದು ಮಣಿಕರಣ್. ಕಸೋಲ್ ನಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿರುವ ಮಣಿಕರಣ್ ಹಿಂದೂಗಳ ಮತ್ತು ಸಿಖ್ಖರ ಪ್ರಸಿದ್ಧ ಯಾತ್ರಾಸ್ಥಳ. ಸ್ವಯಂಭೂ ಮನು ಜಗತ್ತನ್ನೇ ಮುಳುಗಿಸುವ ಪ್ರವಾಹದ ನಂತರ ಇದೇ ಮಣಿಕರಣ್ ನಲ್ಲಿ ಮತ್ತೆ ಮನುಷ್ಯ ಸೃಷ್ಟಿಗೆ ತೊಡಗಿದ ಎನ್ನುತ್ತದೆ ಪುರಾಣ. ಶಿವಪಾರ್ವತಿಯರು ಇಲ್ಲಿನ ಸೌಂದರ್ಯಕ್ಕೆ ಮನಸೋತು ಸಾವಿರಾರು ವರುಷಗಳ ಕಾಲ ಇದೇ ಪ್ರದೇಶದಲ್ಲಿದ್ದರು ಎನ್ನುವುದು ಇನ್ನೊಂದು ಐತಿಹ್ಯ. ಸಿಖ್ಖರ ಪರಮಗುರು ಗುರುನಾನಕರು ಇಲ್ಲಿಯೇ, ಬಿಸಿನೀರಿನ ಬುಗ್ಗೆ ಸೃಷ್ಟಿಸಿ ಹೋಗಿದ್ದರು ಎನ್ನುವ ಕಥೆಯೂ ಇದೆ. ಇಲ್ಲಿನ ಲಂಗರ್-ಸದಾ ಕಾಲ ಬರುವ ಭಕ್ತರಿಗೆ ಆಹಾರ ಒದಗಿಸುತ್ತದೆ. ಇಲ್ಲಿನ ಬಿಸಿನೀರಿನ ಬುಗ್ಗೆಗಳಿಗಾಗಿ, ದೇಗುಲ, ಗುರುದ್ವಾರಗಳಿಗಾಗಿ, ಮಣಿಕರಣ್  ಭೇಟಿ ಮಾಡಬಹುದು.


ಬಾಕ್ಸ್ ೨
ಹಿಮಾಚಲದ ಸೊಗಸು ಅಡಗಿರುವುದು ಪರ್ವತಗಳ ನಡುವೆ ಹುದುಗಿರುವ ಮುದ್ದಾದ ಹಳ್ಳಿಗಳಲ್ಲಿ. ಕಡಿದಾದ ಕೊರಕಲುಗಳ ಪಕ್ಕ, ಮಧ್ಯ ಬೆಟ್ಟಗಳ ನಡುವಣ ಸಣ್ಣ ಬಯಲುಗಳಲ್ಲಿ ಬದುಕು ಕಟ್ಟಿಕೊಂಡಿರುವ ಇಲ್ಲಿನ ಕಷ್ಟ ಸಹಿಷ್ಣು ಜೀವಿಗಳನ್ನ ಭೇಟಿ ಮಾಡದಿದ್ದರೆ ಹಿಮಾಚಲದ ಪ್ರವಾಸ ಪೂರ್ಣವಾಗುವುದಿಲ್ಲ. ಗ್ರಹಣ್, ಮಲಾನಾ, ತೋಷ್, ಪುಲ್ಗಾ,ನಗ್ಗರ್- ಹೀಗೆ ವಿವಿಧ ಹಳ್ಳಿಗಳಿಗೆ ಹೋಗಲು ಕಸೋಲ್ ರಹದಾರಿ. ಸ್ಥಳೀಯರ ಮಾರ್ಗದರ್ಶನದೊಂದಿಗೆ ಈ ಹಳ್ಳಿಗಳನ್ನು ನೋಡಿಕೊಂಡು ಬರಬಹುದು. ಈ ಹಳ್ಳಿಗಳ ಹಳೆಯ ಕಾಲದ ಮನೆಯ ಚಾವಡಿಯಲ್ಲಿ ಕೂತು, ಇಣುಕಿ ಬರುವ ಬೆಳಗಿನ ಸೂರ್ಯನನ್ನು ನೋಡುವುದು ಚೇತೋಹಾರಿ ಅನುಭವ ಭಾಂಗ್ ನ ನಶೆಯಲ್ಲೂ ತೇಲಬಹುದು- ಹಾಂ, ಹುಷಾರು!

ಬಾಕ್ಸ್ ೩

ಚಾರಣ ಪ್ರಿಯರ ಸ್ವರ್ಗ ಇಲ್ಲೇ ಇದೆ. ಚಂದ್ರಖೇಣಿ ಪಾಸ್, ಸರ್ ಪಾಸ್, ಖೀರ್ ಗಂಗಾ – ಮೊದಲಾದ ಕಡಿದಾದ ಪರ್ವತ ಶ್ರೇಣಿಗಳ ಟ್ರೆಕ್ಕಿಂಗ್ ಮಾಡುವ ಆಸಕ್ತಿ ಇದ್ದರೆ, ಕಸೋಲ್ ಸರಿಯಾದ ಸ್ಥಳ. ಅವೆಲ್ಲ ಚಾರಣಗಳ ಆರಂಭದ ತಾಣ ಇದೇ ಊರು. ಇಲ್ಲಿರುವ ಅಂಗಡಿಗಳಲ್ಲಿ ನಿಮಗೆ ಬೇಕಿರುವ ಅಗತ್ಯ ಟ್ರೆಕ್ಕಿಂಗ್ ಬ್ಯಾಗ್, ರೇನ್ ಕೋಟ್, ಮತ್ತಿತರ ಸಾಮಗ್ರಿಗಳೂ ಲಭ್ಯ. ಕಾಶ್ಮೀರದ ಲೇಹ್ ಗೆ ಬೈಕ್ ರೈಡಿಂಗ್ ಮಾಡುವ ಆಸಕ್ತಿ ಇದ್ದರೆ, ಅದನ್ನೂ ಇಲ್ಲಿಂದಲೇ ಶುರು ಮಾಡಿ!




ಸೋಮವಾರ, ಮಾರ್ಚ್ 26, 2018

ಮೆಟ್ರೋ ಎಂಬ ಚಲಿಸುವ ಪುಟ್ಟಪಟ್ಟಣ

ಮೊದಲ ಬಾರಿಗೆ ಮುಂಬೈ ನಗರಕ್ಕೆ ಹೋಗಿದ್ದಾಗ ಅಲ್ಲಿನ ರೈಲು ಜಾಲವನ್ನು ನೋಡಿ ಹೊಟ್ಟೆ ಉರಿದುಕೊಂಡಿದ್ದೆ. ಎಲ್ಲಿಂದ ಎಲ್ಲಿಗೆ ಬೇಕಾದರೂ ಲೀಲಾಜಾಲವಾಗಿ ಹೋಗಬಹುದಾದ ರೈಲ್ವೇ ವ್ಯವಸ್ಥೆ ಅಲ್ಲಿಯದು. ಬೆಳಗ್ಗೆ ಸಂಜೆಯ ನೂಕುನುಗ್ಗಲುಗಳನ್ನು ಹೊರತುಪಡಿಸಿದರೆ, ಟ್ರಾಫಿಕ್ ಜಾಮಿನ ಕಿರಿಕಿರಿ ಇಲ್ಲದೇ ಆರಾಮಾಗಿ ಪ್ರಯಾಣಿಸುವ ಸೌಭಾಗ್ಯ ಅಲ್ಲಿನ ಮಂದಿಗೆ ಎಂದು ನನಗೆ ಹೊಟ್ಟೆಕಿಚ್ಚೇ ಆಗಿತ್ತು.ಯಾಕೆಂದರೆ ನಾನು ಬೆಂಗಳೂರು ಮಹಾನಗರಿಯಲ್ಲಿ ಓಡಾಡಿಕೊಂಡಿರುವವನು. ಇಲ್ಲಿನ ರಸ್ತೆಕ್ರೋಧದ ಬಗ್ಗೆ ಹೇಳಿ ಪ್ರಯೋಜನವಿಲ್ಲ. ಅನುಭವಿಸಿದವರಿಗೆ ವಿವರಣೆಯ ಅಗತ್ಯವಿಲ್ಲ, ಅನುಭವಿಸದೇ ಇರುವವರಿಗೆ ಅರ್ಥವಾಗುವುದಿಲ್ಲ. ಇಲ್ಲಿನ ಟ್ರಾಫಿಕ್ಕಿನ ಹೊಡೆತಕ್ಕೆ ಹೈರಾಣಾಗಿದ್ದ ನನಗೆ, ಅಪರೂಪಕ್ಕೆ ನೋಡಿದ ಬೊಂಬಾಯಿ ರೈಲುಗಳು ಚಂದ ಕಂಡಿದ್ದವು. ಮುಂಬೈ ರೈಲ್ವೇ ವ್ಯವಸ್ಥೆಯನ್ನೇ ನೋಡಿಯೇ ನನ್ನ ಹಣೇಬರ ಹಳಿದುಕೊಂಡಿದ್ದ ನಾನು ದೆಹಲಿಯ ಮೆಟ್ರೋ ನೋಡಿದ ಮೇಲಂತೂ ಜನುಮವೇ ವ್ಯರ್ಥ ಎಂಬ ತೀರ್ಮಾನಕ್ಕೆ ಬಂದಿದ್ದೆ. ಹವಾನಿಯಂತ್ರಿತ ಬೋಗಿಗಳೂ, ಸ್ವಚ್ಛ ರೈಲು ನಿಲ್ದಾಣಗಳು, ಶಿಸ್ತಿನ ವ್ಯವಸ್ಥೆ, ಸದ್ದೇ ಇಲ್ಲದೇ ಸಾಗಿ ಹೋಗುವ ರೈಲುಗಳನ್ನೂ ನೋಡಿ ಬೆಂಗಳೂರಿನ ನಸೀಬನ್ನೂ ನನ್ನ ಗ್ರಹಚಾರವನ್ನೂ ಆಡಿಕೊಂಡು ಸುಮ್ಮನಾಗಿದ್ದಾಗಿತ್ತು. ಇಲ್ಲಿಯೂ ಅದೇನೋ ಮೆಟ್ರೋ ಇವತ್ತು ಶುರು ನಾಳೆ ಶುರು ಎಂಬ ಮಾತು ವರುಷಗಟ್ಟಲೆಯಿಂದ ಕೇಳಿಕೊಂಡು ಬಂದಿದ್ದು ಹೌದಾದರೂ, ಅದರ ಲಕ್ಷಣವೇನೂ ಇರಲಿಲ್ಲ ಕೂಡ. ಸಿಟಿಯ ತುಂಬ ಅಗೆದಿಟ್ಟ ಹೊಂಡಗಳೂ, ಅರೆಬರೆ ನಿಂತ ಕಂಬಗಳೂ ನಮ್ಮ ದೈನಿಕದ ಭಾಗವಾಗಿದ್ದವು. ಮುಂದೆ ಅದ್ಯಾವ ಕಾಲದಲ್ಲೋ ಆಗತ್ತೆ ಬಿಡು ಎಂಬ ಉಡಾಫೆಯಲ್ಲಿಯೇ ನಾನೂ ಇದ್ದೆ.

ಆದರೆ ಕೊನೆಗೊಂದು ದಿನ,ಬೆಂಗಳೂರಿನಲ್ಲೂ ಮೆಟ್ರೋ ಆರಂಭ ಎನ್ನುವ ಗೌಜು ಕೇಳಿಬಂತು.ಆದರೆ ಅಲ್ಲೂ, ತುಂಬ ವಿಶೇಷ ಬದಲಾವಣೆ ಏನೂ ಆಗಲಿಲ್ಲ. ಪ್ರಯೋಗಾರ್ಥವಾಗಿ ಇದ್ದ ಹಾಗೆ, ಕೇವಲ ಒಂದು ಪುಟ್ಟ ದೂರವನ್ನು ಮಾತ್ರ ಕ್ರಮಿಸುವ ತುಂಡು ಪಯಣ ನನಗಂತೂ ಯಾವ ಲಾಭವನ್ನೂ ಮಾಡಿರಲಿಲ್ಲ.ಅದೂ ಅಲ್ಲದೇ ಅದೊಂದು ಚಲಿಸುವ ಝೂನಂತೆ ಕಾಣಿಸುತ್ತಿತ್ತು ಬೇರೆ.ಕೆಲಸ ಕಾರ್ಯಗಳಿಗೆಗಾಗಿ ಪ್ರಯಾಣ ಮಾಡುವವರಿಗಿಂತ,ಮೆಟ್ರೋದ ಅಂದ ಚಂದ ನೋಡಲು ಬರುವವರೇ ಜಾಸ್ತಿ!ಮದುವೆ ಮನೆಯಲ್ಲಿ ಆಕಡೆ ಈಕಡೆ ಲಕಲಕ ಓಡಾಡುವವರ ಹಾಗೆ ರೈಲು ತುಂಬ ಅದರ ಕಂಬ ಬಾಗಿಲು ಮುಟ್ಟಿ ನೋಡುತ್ತ ಸೆಲ್ಫೀ ತೆಗೆದುಕೊಳ್ಳುತ್ತ ಓಡಾಡುವವರ ಸಂಖ್ಯೆಯೇ ಹೆಚ್ಚು. ಊರಿಂದ ಬಂದ ಅಜ್ಜ,ಅಜ್ಜಿ ಅಪ್ಪ ಅಮ್ಮಂದಿರನ್ನ ಪ್ರಾಯಶಃ ಅರ್ಧಕ್ಕರ್ಧ ಬೆಂಗಳೂರಿನ ಮಂದಿ ಕರೆದುಕೊಂಡು ಬಂದು ತೋರಿಸುವ ಪ್ರೇಕ್ಷಣೀಯ ಸ್ಥಳವಾಗಿ ಹೋಗಿತ್ತು ಎಂಜೀರೋಡಿನ ಮೆಟ್ರೋ ನಿಲ್ದಾಣ, ಪಾಪ! ಇನ್ನೇನು ಅದನ್ನು ಯುನೆಸ್ಕೋ ವಿಶ್ವ ಪರಂಪರೆಯ ಪ್ರವಾಸ ತಾಣಗಳ ಪಟ್ಟಿಗೆ ಸೇರಿಸುತ್ತದೆಯೇನೋ ಎನ್ನುವ ಹೊತ್ತಿಗೆ ಪೂರ್ಣ ಪ್ರಮಾಣದ ಸಂಚಾರ ಆರಂಭವಾಯಿತು, ಪುಣ್ಯ! ಬಹಿರಂಗ ಪ್ರದರ್ಶನ ಮುಗಿದು, ಅಂತರಂಗ ದರ್ಶನ ಶುರುವಾಗಿದ್ದು ಹೀಗೆ.
ನಾನು ಮೆಟ್ರೋದಲ್ಲೀಗ ನಿತ್ಯ ಪಯಣಿಗ. ನನ್ನ ಮನೆಯೂ, ಆಫೀಸೂ ಮೆಟ್ರೋ ಸ್ಟೇಷನ್ನುಗಳ ಸಮೀಪವೇ ಇರುವುದರಿಂದ ಅದೀಗ ನನ್ನ ದಿನಚರಿಯ ಜೊತೆಗೆ ಸೇರಿಕೊಂಡಿವೆ. ಬೆಂಗಳೂರು ನಗರದ ಬೇರೆ ಬೇರೆ ತುದಿಗಳನ್ನು ಸೇರಿಸುವ ಸಂಚಾರಜಾಲದ ಭಾಗವೇ ನಾನೂ ಆಗಿದ್ದೇನೆ. ಹೊಸ ಕೆಲಸವೊಂದಕ್ಕೆ ಸೇರಿಕೊಂಡು ನಿತ್ಯವೂ ಇಪ್ಪತ್ತಿಪ್ಪತ್ತು ಕಿಲೋಮೀಟರು ಕಾರಲ್ಲಿ ಹೋಗಿಬರಬೇಕಾದ ಪರಿಸ್ಥಿತಿ ನನ್ನದಾಗಿತ್ತು.ಅದೇ ತಿಂಗಳೊಪ್ಪತ್ತಲ್ಲೇ ಶುರುವಾದ ಮೆಟ್ರೋ, ಬೀಪಿಶುಗರುಗಳೂ ಅವುಗಳ ಜೊತೆಗೆ ಉಚಿತವಾಗಿ ಬರುವ ಇನ್ನಿತರ ಕಾಯಿಲೆಗಳಿಂದ ನನ್ನನ್ನು ದೂರವಿಟ್ಟಿದೆ ಅನ್ನುವುದರ ಬಗ್ಗೆ ಯಾವ ಅನುಮಾನವೂ ಇಲ್ಲ.ಇಲ್ಲವಾದರೆ ಅಲ್ಲಿಯ ತನಕ ನಿತ್ಯ ರಾತ್ರಿ ಮನೆಗೆ ಬರುವ ಹೊತ್ತಿಗೆ ಯಾರನ್ನಾದರೂ ಬೈದುಕೊಂಡು ಬರುವುದೋ, ಕಾರಿನ ಹಿಂದೆಯೋ-ಪಕ್ಕದಲ್ಲೋ ಆಗಿರುವ ತರಚು ಗಾಯಗಳನ್ನು ನೋಡುತ್ತ ಮನಸೋ ಇಚ್ಛೆ ಶಾಪ ಹಾಕುವುದೋ ಮಾಮೂಲಾಗಿ ಹೋಗಿತ್ತು. ಮೆಟ್ರೋ ಶುರುವಾದ ಮೇಲೆ ಆಫೀಸಿಗೆ ಕಾರು ತಗೊಂಡು ಹೋಗಿದ್ದರೆ ಕೇಳಿ! ಎರಡು ತಾಸು ಬೇಕಾಗುವ ಪ್ರಯಾಣಕ್ಕೆ, ಇಪ್ಪತ್ತೈದು ನಿಮಿಷಗಳು ಸಾಕಾದರೆ ಯಾರಾದರೂ ಇನ್ನೇನು ಮಾಡುತ್ತಾರೆ?

ನನಗೆ ಮೊದಲೇ ರೈಲು ಪ್ರಯಾಣವೆಂದರೆ ಇಷ್ಟ. ಬದುಕಿಗೆ ಸಮೀಪದ ರೂಪಕ ರೈಲು. ಬೇರೆಲ್ಲ ಸಾರ್ವಜನಿಕ ಸಾರಿಗೆಗಳಿಗಿಂತ ಹಳಿಗಳ ಮೇಲೆ ಚಲಿಸುವ ಪುಟ್ಟ ಜಗತ್ತು ಮನಸ್ಸಿಗೆ ಹತ್ತಿರವಾಗುತ್ತದೆ. ಮೆಟ್ರೋ ಇಷ್ಟವಾಗಿರುವುದು ಕೂಡ ಇದೇ ಕಾರಣಕ್ಕೆ. ಬೆಂಗಳೂರೆಂಬ ಮಾಯನಗರಿಯ ಬಗೆಬಗೆಯ ಮಂದಿಗೆ ಮೆಟ್ರೋ ನಿತ್ಯಸೇತು. ಇಲ್ಲಿವರೆಗೆ ಅವರವರ ಕಾರುಗಳಲ್ಲೋ, ಬೈಕುಗಳಲ್ಲೋ, ಆಫೀಸು ಕ್ಯಾಬುಗಳಲ್ಲೋ ಸಾಗುತ್ತಿದ್ದ ಮಂದಿಯೆಲ್ಲ ಈಗ ಒಂದೇ ಬಂಡಿಯ ಸಹಚರರು. ಇಷ್ಟುಕಾಲ ತಮ್ಮ ತಮ್ಮ ಖಾಸಗೀ ಜಗತ್ತುಗಳಲ್ಲಿ ಬಂಧಿಯಾಗಿದ್ದವರಿಗೆ ಈಗ ನೂತನಬಂಧವೊಂದಕ್ಕೆ ತೆರೆದುಕೊಳ್ಳುವ ಸಾಧ್ಯತೆ. ಅಂದೆಂದೋ ಸುಮ್ಮನೆ ಪಕ್ಕಕ್ಕೆ ಜರುಗಿ ಬನ್ನಿ ಬನ್ನಿ ಅಂತ ಕರೆದು ಸೀಟು ಕೊಟ್ಟವನೀಗ ಹೊಸ ಸ್ನೇಹಿತನಾಗಿದ್ದಾನೆ. ರಷ್ಶಿನಲ್ಲಿ ನಿಂತಿದ್ದಾಗ ನಿಮ್ಮ ಬ್ಯಾಗು ನಾನಿಟ್ಟುಕೊಳ್ಳುತ್ತೇನೆ ಕೊಡಿ ಎಂದ ಆಂಟಿ ತಿಂಗಳ ಮೇಲೆ ಕಂಡರೂ, ಮುಖದ ಮೇಲೆ ಹಿತದ ಮುಗುಳುನಗೆ.

ಮೆಟ್ರೋದಲ್ಲಿ ಕಾಣಸಿಗುವ ಹೆಚ್ಚಿನವರು ನಿತ್ಯದ ಕೆಲಸಕ್ಕಾಗಿ ಓಡಾಡುವ ಮಂದಿ. ಅದದೇ ದಿನಚರಿಗೆ ತಮ್ಮನ್ನ ತಾವು ಒಗ್ಗಿಸಿಕೊಂಡವರು. ಇಲ್ಲಿ ಗೆ ಬರುವ ಎಲ್ಲರೂ ಕೂಡ ಒಂದು ಚುಟುಕು ಪ್ರಯಾಣಕ್ಕಷ್ಟೇ ತಮ್ಮನ್ನ ಸಜ್ಜುಗೊಳಿಸಿಕೊಂಡು ಬಂದವರು. ನಿಜವಾದ ಕೆಲಸ ಬೇರೆಲ್ಲೋ ಇದೆ, ಜರ್ನಿ ಇನ್ನೇನು ಮುಗಿದೇ ಹೋಗುವ ವಿಷಯ ಎನ್ನುವ ಹಾಗೆ ನಿಂತಿರುವವರು. ಆದರೆ ಹಾಗೆ ಬಂದು ನಿಂತ ಅವರಿಗೂ ಕೂಡ ಮುಂದಿನ ಇಪ್ಪತ್ತೋ ಇಪ್ಪತ್ತೈದೋ ನಿಮಿಷಗಳಷ್ಟು ಕಾಲ ಏನು ಮಾಡಬೇಕು ಎನ್ನುವ ಸಿದ್ಧತೆ ಇದೆ. ಕೆಲಸಲ ಮೆಟ್ರೋ ಅನ್ನುವುದು ಬೆಳಗಿಂದ ಸಂಜೆಯವರೆಗೆ ಆಫೀಸಿನಲ್ಲಿ ನಡೆಯುವ ಪ್ರಹಸನಕ್ಕೆಬಣ್ಣಹಚ್ಚಿಕೊಳ್ಳಲು ಸಿದ್ಧಪಡಿಸಿರುವ ಗ್ರೀನ್ ರೂಮಿನಂತೆ ಭಾಸವಾಗುತ್ತದೆ. ತಮ್ಮ ಬಾಸಿಗೆ ಫೋನುಹಚ್ಚಿ ಸರ್, ಲಿಟಲ್ ಲೇಟ್ ಸರ್, ವಿಲ್ ಬಿ ದೇರ್ ಇನ್ ಹಾಫೆನವರ್ ಸರ್ ಎಂದು ವಾಕ್ಯಕ್ಕೆ ಮೂರು ಸರ್ ಹಚ್ಚಿ ಕೃತಕ ವಿಧೇಯತೆ ತೋರಿಸುವವರೂ, ನಿಂತೋ-ಕೂತೋ ಲ್ಯಾಪ್ಟಾಪು ತೆರೆದಿಟ್ಟುಕೊಂಡು ಗಹನವಾದ ಚಿಂತನೆಯಲ್ಲಿ ತೊಡಗಿದವರು, ಕಚೇರಿಯ ವಾಟ್ಸಾಪು ಗ್ರೂಪುಗಳ ಜಾಲಾಡುತ್ತ ಗಂಭೀರ ಇಮೋಜಿಗಳ ಕಳಿಸುತ್ತ ಕೂತಿರುವ ಮಂದಿ, ಹೀಗೆ. ಇನ್ನು ಅರ್ಧಕ್ಕರ್ಧ ಜನ ಗಾಳಿಗೆ ಮಂದಗತಿಯಲ್ಲಿ ತೊನೆಯುತ್ತ ನಿಂತಿರುವ ತೆಂಗಿನ ಮರದ ಹಾಗಿನವರು. ಕಿವಿಯೊಳಗೆ ತುರುಕಿರುವ ಹ್ಯಾಂಡ್ಸ್ ಫ್ರೀಗಳು ಮೊಬೈಲಿನಿಂದೆತ್ತಿ ಕೇಳಿಸುತ್ತಿರುವ ಹಾಡುಗಳಿಗೆ ತಿಳಿಯದೆಯೇ ಕಣ್ಣುಮುಚ್ಚಿ ತಲೆದೂಗಿಸುತ್ತ ನಿಂತ ಮಂದಿ ಅದು ಯಾವ ಮಾಯಕದಲ್ಲೋ, ತಮ್ಮ ನಿಲ್ದಾಣ ಬಂದಕೂಡಲೇ ಸಮಾಧಿ ಸ್ಥಿತಿಯಿಂದ ತಿಳಿದೆದ್ದು ಬಡಬಡನೆ ಇಳಿದು ಹೋಗಿಬಿಡುತ್ತಾರೆ! ಪ್ರಾಯಶಃ ಹಾಡಿನ ಜೊತೆ ಜೊತೆಗೆಯೇ ಮುಂಬರುವ ಸ್ಟೇಷನ್ನಿನ ಘೋಷಣೆಯೂ ಅವರ ಮೆದುಳನ್ನು ಸೇರಿ, ರಪ್ಪನೆ ಎಚ್ಚರಿಸುತ್ತದೆ.

ಅದಾವ ಪರಿಯ ನೂಕುನುಗ್ಗಲು ಇದ್ದರೂ ಕಾದಂಬರಿಯನ್ನು ಕೈಯಲ್ಲಿ ಹಿಡಿದುಕೊಂಡು ಪುಟ ತಿರುಗಿಸಿಕೊಂಡು ಓದುವ ಅಮೋಘ ಸಾಹಸಿಗಳೂ ಇಲ್ಲಿದ್ದಾರೆ. ಮುಲಾಜೇ ಇಲ್ಲದೇ ಜೋರು ಸ್ಪೀಕರಿನಲ್ಲಿ ಹಾಡು ಕೇಳುವ,ಸಿನಿಮಾ ನೋಡುವ ಮಂದಿಗೂ ಏನೂ ಬರವಿಲ್ಲ. ಆದರೆ ಹೀಗೆ ಯಾವುದರೊಳಗಾದರೂ ಕಳೆದು ಹೋಗದೇ ಕಣ್ಣು ತೆರೆದುಕೊಂಡಿದ್ದರೆ ಕಾಣುವ ವಿಶ್ವ, ಬೇರೆಯದೇ ತೆರನಾದದ್ದು. ತನ್ನ ಹುಡುಗಿಯನ್ನು ಬೇರೆ ಯಾರಾದರೂ ತಳ್ಳಿಗಿಳ್ಳಿದರೆ ಕಷ್ಟ ಎಂದುಅವಳನ್ನ ಅವಚಿ ಹಿಡಿದುಕೊಂಡಿರುವ ಯುವಕ, ದಾರಿತಪ್ಪಿ ಬಂದು ನಿಂತ ಹಾಗೆ ಬೆರಗುಗಣ್ಣುಗಳಿಂದ ಮೆಟ್ರೋದ ಸೊಬಗು ನೋಡುವ ಪುಟ್ಟ ಮಕ್ಕಳು, ಅತ್ತಿತ್ತ ನೋಡುತ್ತ ಮೆಜೆಸ್ಟಿಕ್ ಯಾವಾಗ ಬರತ್ತೆ ಎಂದು ದಿಗಿಲಲ್ಲಿ ಪದೇ ಪದೇ ಕೇಳುವ ಪಾನಿಪೂರಿ ಮಾರುವ ಬಿಹಾರಿ ಹುಡುಗ, ಪಕ್ಕಾ ಲೋಕಲ್ ಟ್ರೇನಿನಲ್ಲಿ ಶೌಚಾಲಯದ ಪಕ್ಕ ದೊಡ್ಡ ಚೀಲ ಇಟ್ಟುಕೊಂಡು ಕೂರುತ್ತಾರಲ್ಲ ಹೂಬೇಹೂಬು ಹಾಗೆಯೇಒಂದು ಚೀಲ ಹೊತ್ತುಕೊಂಡು ಬಂದು, ಅಲ್ಲೇ ಮೂಲೆಯಲ್ಲಿ ಕೂರುವುದಕ್ಕೆ ಹೊರಟು ಬೈಸಿಕೊಳ್ಳುತ್ತಿರುವ ಯಾವುದೋ ಹಳ್ಳಿ ಕಡೆಯ ದಂಪತಿ,ಇನ್ನೇನು ತಮ್ಮ ಗತಿ ಎಂದು ಗಂಡಹೆಂಡತಿ ಕಂಗಾಲಾಗುವ ಹೊತ್ತಲ್ಲಿಅಯ್ಯೋ ಬಿಡ್ರೀ ಪಾಪ ಗೊತ್ತಾಗಲ್ಲ ಯಾಕೆ ಸುಮ್ನೆ ರೇಗುತ್ತೀರಿ ಎಂದು ಅವರನ್ನ ವಹಿಸಿಕೊಂಡು ಬಂದು, ಛಕ್ಕಂತ ಅವರುಗಳಿಗೆ ಆಶಾಕಿರಣವಾಗುವ ಇನ್ಯಾರೋ ಸೂಟುಬೂಟಿನ ಸಾಹೇಬರು - ಹೀಗೆ ಥರಹೇವಾರಿ ಚಲಿಸುವ ಚಿತ್ರಗಳು ಮೆಟ್ರೋದಲ್ಲಿ ಸದಾ ಲಭ್ಯ.

ಒಂದು ದಿನ, ನನ್ನ ಪಕ್ಕದಲ್ಲೇ ಒಬ್ಬಾತ ಬಂದು ನಿಂತ. ಇವನನ್ನ ಎಲ್ಲೋ ನೋಡಿದ ಹಾಗಿದೆಯಲ್ಲ ಎನ್ನುವ ಯೋಚನೆ ನನ್ನದು. ಮುಖಚಹರೆಗಳನ್ನು ಬಲುಬೇಗ ಮರೆಯುವುದು ನನ್ನ ತೊಂದರೆಗಳಲ್ಲೊಂದು. ಶಿಸ್ತಾದ ಫಾರ್ಮಲ್ ಪ್ಯಾಂಟು, ಖಡಕ್ ಇಸ್ತ್ರಿಯ ಶರಟೂ, ಟೈಯೂ ಹಾಕಿಕೊಂಡು ಮುಗುಮ್ಮಾಗಿ ನಿಂತಿದ್ದ ಅವನು ಯಾರು ಎಂದು ಎಷ್ಟು ಹೊತ್ತಾದರೂ ನೆನಪಾಗಲಿಲ್ಲ. ನಾನು ಯಾವುದಕ್ಕೂ ಇರಲಿ ಅಂತ ಒಂದು ಪೆಚ್ಚು ನಗೆ ನಕ್ಕೆ. ಕಡೆಯಿಂದಲೂ ಅದೇ ರಿಪ್ಲೈ ಬಂತು. ಮತ್ತೆ.. ಹೇಗಿದ್ದೀರಿ ಎಂದು ಕೇಳಿದೆ. ಅಷ್ಟಾದರೂ ಒಳಗೆ ಮೆದುಳಿಂದ ಯಾವ ಸಂದೇಶವೂ ಬರಲಿಲ್ಲ. ಆಮ್ ಗುಡ್ ಎಂದು ಗಂಭೀರವಾಗಿಯೇ ಹೇಳಿದ ಅವನಿಂದ ಮರುಪ್ರಶ್ನೆಯೇನೂ ಬರಲಿಲ್ಲ. ಮಾತಾಡೋಕೆ ಇಷ್ಟ ಇಲ್ಲ ಅನ್ನಿಸಿ ನನಗೂಯಾರೂಂತ ನೆನಪಾಗುತ್ತಲೂ ಇಲ್ಲದ ಕಾರಣಕ್ಕೆ ಸುಮ್ಮನಾದೆ. ಮುಂದಿನ ಸ್ಟೇಷನ್ನು ಬಂದಕೂಡಲೇ ಆಸಾಮಿ ಬಾಗಿಲಾಚೆಗೆ ನಡೆದು ಹೋದ. ಹಾಗೆ ಹೋಗುತ್ತಿರುವ ಘಳಿಗೆಯಲ್ಲಿ ಕಾಲು ಸ್ವಲ್ಪ ಎತ್ತಿ ಹಾಕುವ ಆತನ ನಡಿಗೆ ನೋಡಿ ಫಕ್ಕನೆ ಹೊಳೆಯಿತು. ರೌಡಿ ಸಂತು. ಕಾಲೇಜಿನಲ್ಲಿ ನನ್ನ ಸೀನಿಯರ್ ಆಗಿದ್ದ ಪುಣ್ಯಾತ್ಮ ತನ್ನ ಅಬ್ಬರದ ರೌಡಿಸಂಗೇ ಪ್ರಸಿದ್ಧಿ. ಒಂದಾದರೂ ಕ್ಲಾಸಿನಲ್ಲಿ ಪಾಠ ಕೇಳುತ್ತ ಆತ ಕೂತಿದ್ದು ಗೊತ್ತಿಲ್ಲ. ಸದಾಕಾಲ ಬಾಯಿತುಂಬ ಗುಟ್ಕಾ ಅಗಿಯುತ್ತ, ಹುಡುಗೀರನ್ನ ರೇಗಿಸುತ್ತ, ಪುಡಿ ಚಿಲ್ಲರೆ ಪುಂಡಾಟಿಕೆ ಮಾಡಿಕೊಂಡು ರೌಡಿ ಸಂತು ಅಂತಲೇ ಫೇಮಸ್ಸಾದ ಮನುಷ್ಯ. ಅವನೇ ಇವನಾ ಎಂದು ಯೋಚಿಸಿ ಅಬ್ಬಬ್ಬ ರೂಪಾಂತರವೇ ಎಂದು ಅಚ್ಚರಿಗೊಂಡೆ! ಪ್ರಾಯಶಃ ತನ್ನ ಬದಲಾದ ಸ್ವರೂಪವನ್ನು ಪೂರ್ವಾಶ್ರಮದ ಯಾವನೋ ಒಬ್ಬ ಕಂಡದ್ದು ಅವನಿಗೆ ಇಷ್ಟವಾಗಲಿಲ್ಲವೋ ಅಥವ ನಾನು ಯಾರೂಂತ ಗೊತ್ತೇ ಆಗಲಿಲ್ಲವೋ, ಏನೋ!

ಮೊದಲ ಬಾರಿಗೆ ಮೆಟ್ರೋ ಪಯಣ ಮಾಡುವ ಬರುವ ಹಲವು ಮಂದಿ ಮಯ ನಿರ್ಮಿತ ಧರ್ಮರಾಜನ ಮಂಟಪಕ್ಕೆ ಬಂದ ಹಾಗೆ ಅಯೋಮಯರಾಗುತ್ತಾರೆ. ಯಾವುದೋ ಕೆಲಸದ ನಿಮಿತ್ತ ಬಂದವರು ಒಂಚೂರು ಮೆಟ್ರೋ ಓಡಾಡಿಕೊಂಡು ಬರೋಣ ಎಂದು ಸ್ಟೇಷನ್ನಿಗೆ ಬರುತ್ತಾರೆ. ಟಿಕೇಟು ಎಂದು ಕೊಟ್ಟ ಬಿಲ್ಲೆ, ಅದನ್ನು ಇಟ್ಟಕೂಡಲೇ ರಪ್ಪಂತ ತೆಗೆದು, ಒಂದೆರಡು ಸೆಕೆಂಡುಗಳ ಒಳಗೆ ಮುಚ್ಚಿಕೊಳ್ಳುವ ಪುಟ್ಟ ಗೇಟು ಇದನ್ನೆಲ್ಲ ನೋಡಿ, ಕ್ಷಣಕಾಲ ಕಂಗಾಲಾದರೂ, ಅಕ್ಕಪಕ್ಕದೋರ ಥರಹವೇ ತಾವೂ ಮಾಡಲು ಹೋಗಿ ಕೆಕರುಮಕರಾಗಿ ತಗಲುಹಾಕಿಕೊಳ್ಳುತ್ತಾರೆ. ತಮಗೆಲ್ಲ ಗೊತ್ತಿದೆ ಬಿಡಿ ಎನ್ನುವ ಹಾಗೆ ನಕ್ಕು ಬಿಲ್ಲೆ ಇಡಲು ಹೋದರೆ ಅದೇನೋ ಕೆಂಪುಕೆಂಪನೆ ಬೆಳಕು ಬೀರಿ ಪೀಪೀ ಎಂದುದೊಡ್ಡ ಸದ್ದು ಮಾಡಿ, ಮುಂದೆ ಆಗಷ್ಟೇ ತೆರೆದಿದ್ದ ಹಸಿರು ಬಾಗಿಲುಮುಲಾಜೇ ಇಲ್ಲದೇ ಮುಚ್ಚಿಕೊಂಡು ಸ್ವರ್ಗಪ್ರವೇಶವೇ ರದ್ದಾಗಿ ಹೋಯಿತೇನೋ ಎಂಬ ಸೀನು ಕ್ರಿಯೇಟ್ ಆಗಿಬಿಡುತ್ತದೆ. ಹಾಗಾದಕೂಡಲೇ ಇವರು ಶಸ್ತ್ರಸಂನ್ಯಾಸ ಮಾಡಿ ಯಾರಾದರೂ ಏನಾದರೂ ಸಹಾಯ ಮಾಡಿ ಎಂಬಂತೆ ದಯನೀಯ ದೃಷ್ಟಿ ಬೀರುತ್ತಾರೆ. ಆಗ ಯಾರಾದೊಬ್ಬರು ಮೆಟ್ರೋ ಪರಿಣಿತರು ಮುಂದೆ ಬಂದು ಸ್ವಲ್ಪ ಹಿಂದೆ ಬನ್ನಿ.. ಹಾಂ.. ನೋಡಿ ಇದು ಹೀಗೆ ಎಂಬಂತೆ ಸಹಕರಿಸಿ ಹೋಗುವುದು ಅನೂಚಾನವಾಗಿ ನಿತ್ಯವೂ ಕಂಡುಬರುವ ದೃಶ್ಯ. ಅವರುಗಳು ಒಳಗೆ ಬರುತ್ತ ಅಬ್ಬ, ಯುದ್ಧ ಗೆದ್ದೆವಪ್ಪ ಎಂಬಂತೆ ನಕ್ಕು ಸಾಗುವುದೂ ಕೂಡ ತಪ್ಪಿಲ್ಲದೇ ನಡೆವ ಆಚರಣೆ.

ಅಂದೊಂದು ದಿನ ನಾನು ಹತ್ತುವ ಸ್ಟೇಷನ್ನಿಗೂ ಹೀಗೆಯೇ ಒಂದು ಕುಟುಂಬ ಮೆಟ್ರೋ ಸವಾರಿಯ ಅನುಭವಕ್ಕಾಗಿ ಬಂದಿತ್ತು. ಅರವತ್ತರ ಅಮ್ಮ, ಮೂವತ್ತರೆಡಬಲದ ಮಗ, ಆತನ ಹೆಂಡತಿ ಮತ್ತು ಆರೆಂಟು ವರ್ಷಗಳ ಇಬ್ಬರು ಮಕ್ಕಳು. ಮಗನೋ, ಮೆಟ್ರೋ ಪಾರಂಗತ. ಅಮ್ಮನಿಗೋ ಕರಿಬಿಲ್ಲೆ, ಕೆಂಪು ದೀಪದ ಸದ್ದು ಎಲ್ಲವೂ ಹೊಸತು. ಗಾಬರಿಯಲ್ಲಿ ಬಿಲ್ಲೆ ಎಲ್ಲೋ ಬಿದ್ದು ಉರುಳಿ ಹೋಗಿ, ಅದನ್ನು ಯಾರೋ ಹೆಕ್ಕಿ ತಂದುಕೊಟ್ಟು- ಒಟ್ಟಿನಲ್ಲಿ ಮಗನಿಗೆ ಎಲ್ಲರೆದುರು ಅಮ್ಮ ತಡಬಡಾಯಿಸುತ್ತಿರುವ ಮುಜುಗರ ಬೇರೆ. ಹೇಗೋ ಗೇಟು ದಾಟಿ ಆಕೆ ಒಳಬಂದರು. ಆಮೇಲೆ ಟ್ರೇನು ಹತ್ತಿಯೂ ಆಯಿತು.ನಾಲ್ಕೈದು ಸ್ಟೇಷನ್ನೂ ದಾಟಿತು. ಮೆಟ್ರೋ, ಈಗೀಗ ಮೆಜೆಸ್ಟಿಕ್ಕು ಬರುವ ಹೊತ್ತಿಗೆ ಹಣ್ಣಾಗಲು ಒತ್ತಿತುಂಬಿಸಿಟ್ಟ ಬಾಳೇಹಣ್ಣಿನ ಉಗ್ರಾಣದ ಹಾಗೆ ಆಗಲು ಶುರುವಾಗಿದೆ. ಅಷ್ಟೊಂದು ಜನ-ತಳ್ಳಾಟ. ಗೊಂದಲದಲ್ಲಿ ಅಮ್ಮನು ಒಂದು ಕಡೆಗೂ, ಉಳಿದೋರೆಲ್ಲ ಒಂದು ದಿಕ್ಕೂ ಆಗಿ ಹೋಗಿದ್ದಾರೆ. ಅಮ್ಮಾ ನೀನು ಟ್ರಿನಿಟೀ ಸರ್ಕಲ್ ಅಂತ ಮೈಕಲ್ಲಿ ಹೇಳಿದ ಕೂಡಲೇ ಇಳೀಬೇಕು ಅಂತ ಮಗರಾಯ ಇತ್ತಕಡೆಯಿಂದಲೇ ಕೂಗಿ ಹೇಳಿದ್ದೂ ಆಯಿತು. ಅವರೂ ಅದೇನೋ ತಲೆ ಆಡಿಸಿದರು ಕೂಡ. ಮತ್ತೆ ಅವರ ತಲೆ ಕೂಡ ಕಾಣದ ಹಾಗೆ ಜನ ತುಂಬಿಕೊಂಡರು. ಇವರು ತಮ್ಮತಮ್ಮಲ್ಲೇ , ಅಜ್ಜಿ ಇಳೀತಾರೆ ಬಿಡಿ ಅಮ್ಮ ಹಂಗೆಲ್ಲ ಗಡಿಬಿಡಿ ಮಾಡ್ಕೊಳದಿಲ್ಲ ಎಂದು ಸಮಾಧಾನ ಹೇಳಿಕೊಂಡರು

ಟ್ರಿನಿಟಿ ಸರ್ಕಲು ನಾನಿಳಿಯುವ ನಿಲ್ದಾಣವೂ ಹೌದು. ಇವರ ಜೊತೆಗೆ ನನಗೂ ಪಾಪ ಯಮ್ಮ ಇಳಿಯತ್ತೋ ಇಲ್ಲವೋ ಎನ್ನುವ ಸಣ್ಣ ದಿಗಿಲು. ಟ್ರೇನು ನಿಂತಿತು. ಗುಂಪು ಗುಂಪು ಜನ ಇಳಿದರು. ಕುಟುಂಬವೂ ಬಡಬಡನೆ ದಾಟಿಕೊಂಡು ಸುತ್ತ ನೋಡಿದರೆ, ಊಹೂಂ, ಅಮ್ಮ ಕಾಣಿಸುತ್ತಿಲ್ಲ! ಎಲ್ಲರೂ ಮೆಟ್ಟಿಲಿಳಿದು ಹೋಗಿ,ಕ್ಷಣಾರ್ಧದಲ್ಲಿ ಪ್ಲಾಟ್ ಫಾರಂ ಖಾಲಿಯೂ ಆಯ್ತು. ಛೇ ಅಂದುಕೊಂಡೆ ನಾನೂ. ಪಾಪ ಗೊಂದಲದಲ್ಲಿ ಅವರಿಗೆ ಇಳಿದುಕೊಳ್ಳೋಕೆ ಗೊತ್ತಾಗದೇ ಮುಂದೆ ಹೋಗಿಬಿಟ್ಟಿದ್ದಾರೆ. ಮಗನಿಗೋ ಅಮ್ಮನಿಗೆ ಬೆಂಗಳೂರು ಹೊಸದು, ಮೆಟ್ರೋ ಮತ್ತೂ ಹೊಸದು, ಕೈಯಲ್ಲಿ ಮೊಬೈಲು ಇಲ್ಲ, ಏನಾಗತ್ತೋ ಏನೋ ಎನ್ನುವ ಚಿಂತೆ. ಅಲ್ಲಿದ್ದ ಸೆಕ್ಯೂರಿಟಿ, ಇನ್ನೊಂದಿಷ್ಟು ಮಂದಿ ಇವರ ಗೊಂದಲ ನೋಡಿ ಥರ ಥರ ಸಲಹೆಗಳನ್ನು ಕೊಡೋಕೆ ಶುರು ಮಾಡಿದರು. ಮುಂದಿನ ಸ್ಟೇಶನ್ನು ಅಲಸೂರು, ಅಲ್ಲಿ ಹೋಗಿ ನೋಡಿ.. ಮೆಟ್ರೋ ಕಂಟ್ರೋಲು ರೂಮಿಗೆ ಫೋನ್ ಮಾಡಿ..ಹೀಗೆ.

ಬಡಬಡನೆ ಮೆಟ್ಟಿಲಿಳಿದು ಎಲ್ಲ ಕೆಳಗೆ ಬಂದರೆ, ಅರೇ! ಅಮ್ಮ ಅಲ್ಲಿ ನಿಂತಿದ್ದಾರೆ. ಗೇಟಿನಾಚೆಗೆ. ಅತ್ತಿತ್ತ ನೋಡುತ್ತ. ಎಲ್ಲರಿಗೂ ಹೋದ ಉಸಿರು ಬಂದಹಾಗಾಯ್ತು. ಮಗ ಓಡಿ ಹೋದ ಅವರ ಬಳಿಗೆ. ಎಲ್ಲಮ್ಮ ನೀನು ಗಾಬ್ರಿ ಆಗೋಗಿತ್ತು ಇಳ್ಕೊಂಡ್ಯೋ ಇಲ್ವೋ ಗೊತ್ತೇ ಆಗಲಿಲ್ಲ. ನೋಡಿದರೆ ಇಲ್ಲಿ ಬಂದು ನಿಂತಿದೀಯಲ್ಲ ಎಂದು ಉದ್ದಕ್ಕೆ ಬಡಬಡಿಸುತ್ತಿದರೆ, ಅಮ್ಮ ನಿಷ್ಕಲ್ಮಶ ನಗು ನಕ್ಕು, ,ಜೀವನದಲ್ಲಿ ಎಂತೆಂಥ ಊರುಕೇರಿ ನೋಡಿದೋಳು ನಾನು, ಅಪ್ಪ ಸತ್ತ ಮೇಲೆ ನಿನ್ನ ಬೆನ್ನಿಗೆ ಹಾಕ್ಕಂಡು ಎಲ್ಲೆಲ್ಲ ಅಲ್ದಿದೀನಿ ಗೊತ್ತಿಲ್ಲವೇನೋ? ಎಷ್ಟೆಲ್ಲ ಕಷ್ಟ ಕಂಡ ನಂಗೆ , ಅದೊಂದು ಯಕಶ್ಚಿತ್ ಬಾಗಿಲು ದಾಟಿಕೊಂಡು ಬರೋದಿಕ್ಕೆ ಆಗಲ್ವೇನೋ, ಥತ್ ನಿನ್ನ, ಬಾ ಬಾ ಸಾಕು, ಅದೇನದು ಕಣ್ಣೀರು,ಇಲ್ಲಿ ಇಷ್ಟೆಲ್ಲ ಜನರೆದುರಿಗೆ ಏನೋ ನಿಂದು ಎಂದು ಮುಂದಕ್ಕೆ ಹೊರಟರು. ಅಷ್ಟರಲ್ಲಿ ಅಲ್ಲೇ ಹಿಂದೆ ಮತ್ತೆ ಯಾರೋ ಬಿಲ್ಲೇನ ಸರಿಯಾಗಿ ಇಡದೇ ಕೆಂಪು ದೀಪ ಮತ್ತೆ ಪೀಪೀ ಸದ್ದು ಮಾಡಿತು. ಎಲ್ಲರೂ ಪ್ರಕರಣ ಸುಖಾಂತ್ಯವಾದ ಖುಷಿಯಲ್ಲಿ ಅಲ್ಲಿಂದ ಹೊರಟರು.

ವಿಹಂಗಮ ನೋಟದಲ್ಲಿ ನೋಡಿದಾಗ, ನಗರವನ್ನು ಸೀಳಿಕೊಂಡು ಸಾಗಿದಂತೆ ಕಾಣಿಸುವ ಮೆಟ್ರೋ ಆಂತರ್ಯದಲ್ಲಿ ಅದೆಷ್ಟೋ ಜೀವಗಳನ್ನು ಒಂದು ಮಾಡುತ್ತ ಸದ್ದಿಲ್ಲದೇ ಓಡುತ್ತಿದೆ. ನಾಳೆ ಮತ್ತೇನೋ ಹೊಸದನ್ನು ಕಲಿಯುವ, ಕಾಣುವ ಆಸೆಯಲ್ಲಿ ನಾನೂ ಮೆಟ್ರೋ ಹತ್ತುತ್ತೇನೆ.