ಶುಕ್ರವಾರ, ಜನವರಿ 04, 2013

ಅವಸ್ಥಾಂತರದುರ್ಗಾ ಬಸ್ಸು ಬೆಳಿಗ್ಗೆ ಏಳೂವರೆಗೆ ಗೋಳಿಬೈಲಿನ ಏರನ್ನು ಹತ್ತಿ ಊರೊಳಗೆ ಬರುವುದಕ್ಕೂ ನಾರಾಯಣ ಶೆಟ್ಟರು ತನ್ನ ಅಂಗಡಿಯ ಮರದ ಬಾಗಿಲುಗಳನ್ನ ತೆಗೆದು ಹೊರಗೆ ಉಪ್ಪಿನ ಮರಿಗೆಯ ಪಕ್ಕದಲ್ಲಿ ಜೋಡಿಸಿಡುವುದಕ್ಕೂ ಸರಿಯಾಗುತ್ತದೆ. ಬಸ್ ಡ್ರೈವರ್ ಅಬ್ದುಲ್ಲ ಒಂದು ಕೈಯಲ್ಲಿ ಸ್ಟೇರಿಂಗ್ ತಿರುಗಿಸುತ್ತಲೇ ಮತ್ತೊಂದು ಕೈಯಲ್ಲಿ ಪೇಟೆಯಿಂದ ತಂದ ದಿನಪತ್ರಿಕೆಯನ್ನ ಸೊಯ್ಯಂದು ಶೆಟ್ಟರ ಅಂಗಡಿಯೊಳಕ್ಕೆ ಎಸೆಯುತ್ತಾನೆ. ಒಂದು ದಿನಕ್ಕಾದರೂ ಪೇಪರನ್ನು ತಾವಾಗೇ ಓದದ ಶೆಟ್ಟರು, ಅದನ್ನ ಹೊರಗೆ ಬೆಂಚಿನ ಮೇಲಿಟ್ಟು ಇಪ್ಪತ್ತು ವರ್ಷಗಳಿಂದ ಪೂಜಿಸುತ್ತ ಬಂದಿರುವ ಲಕ್ಷ್ಮಿಯ ಫೋಟೋಗೆ ದೀಪ ಹಚ್ಚಲು ಹೋಗುತ್ತಾರೆ. ಆ ಲಕ್ಷ್ಮಿಯ ಮುಖದ ಭಾಗ ಬಿಟ್ಟು ಉಳಿದಷ್ಟೂ ಗಾಜು ದೀಪ ಮತ್ತು ಊದುಬತ್ತಿಯ ಹೊಗೆಯಿಂದ ಜಡ್ಡು ಹಿಡಿದು ಕಪ್ಪಾಗಿ ಹೋಗಿದೆ. ಅಂಗಡಿಯ ಹೊರಗಿನ ತುಂಡು ಮಣ್ಣಿನ ಜಾಗಕ್ಕೆ ನೀರೆರಚಿ, ಒಂದು ರೌಂಡು ಗುಡಿಸಿ, ಒಳಗೆಲ್ಲೋ ಇರಿಸಿದ ಎಂದೂ ಒಂದೂ ಇಲಿ ಬೀಳದ ಬೋನನ್ನು ಅದರೊಳಗಿನ ಕಮಟು ಕಾಯಿ ಚೂರು ಸಮೇತ ಎತ್ತಿ  ಬದಿಗಿಡುತ್ತಾರೆ. ಕಳೆದ ಇಪ್ಪತ್ತೆರಡು ವರ್ಷಗಳಿಂದ ಶೆಟ್ಟರು ಯಾಂತ್ರಿಕವಾಗಿ ಇವಿಷ್ಟು ಕೆಲಸವನ್ನು ಯಾವುದೇ ಬದಲಾವಣೆಯಿಲ್ಲದೇ ಮಾಡುತ್ತಲೇ ಬಂದಿದ್ದಾರೆ. ಆದರೆ ಈ ಇಪ್ಪತ್ತು ವರುಷಗಳಲ್ಲಿ ಅವರ ಜೀವನದಲ್ಲಿ ಹಲವಾರು ಬದಲಾವಣೆಗಳಾಗಿವೆ. ಹೆಂಡತಿ ಅಚಾನಕ್ಕಾಗಿ ಸತ್ತು, ಮಗ ಸಂಜೀವ ಬೆಳೆದು ದೊಡ್ಡವನಾಗಿ, ಮದುವೆಯನ್ನೂ ಮಾಡಿಕೊಂಡು ಮಂಗಳೂರಿನ ಇನ್ಪೋಸಿಸ್ ನಲ್ಲೇ ಕೆಲಸಕ್ಕೂ ಸೇರಿಕೊಂಡು ಈಗ ಒಂದಾರು ತಿಂಗಳ ಮಟ್ಟಿಗೆ ಅಮೆರಿಕಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೆಂಡತಿ ಸಮೇತ ಹೋದವನು ವಾಪಸ್ಸು ಬರದೇ ಎರಡು ವರ್ಷ ಕಳೆದಿದೆ. ಒಂದು ಕಾಲದಲ್ಲಿ ಸಂಸಾರಸ್ಥರಾಗಿದ್ದ ಶೆಟ್ಟರು ಈಗ ಒಂಟಿಯಾಗಿ ಬದುಕು ಸಾಗಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಹೆಂಡತಿ ಹೋದ ಮೇಲೆ ಶೆಟ್ರು ಜಾಸ್ತಿ ಮಾತಾಡುದಕ್ಕೆ ಶುರು ಮಾಡಿದ್ದಾರೆ ಅಂದುಕೊಂಡ ಊರ ಜನ, ಮಗ ಅಮೆರಿಕಕ್ಕೆ ಹೋದ ಮೇಲೆ ಅವರು ಮೊದಲಿಗಿಂತ ಹೆಚ್ಚು ವಟವಟ ಅನ್ನುವುದಕ್ಕೆ ಆರಂಭಿಸಿದ್ದನ್ನು ಸಹಿಸಿಕೊಂಡಿದ್ದಾರೆ. ಹಾಗೆ ಸಹಿಸಿಕೊಂಡಿದ್ದಕ್ಕೆ ಶೆಟ್ಟರು ತಮ್ಮ ದಿನಸಿ ಅಂಗಡಿಯಲ್ಲಿ ಸಾಲ ಕೊಡುವುದೂ ಒಂದು ಕಾರಣ. ಯಾಕೆಂದರೆ ಬಸ್ಟ್ಯಾಂಡ್ ಪಕ್ಕ ಅಂಗಡಿಯ ಕಿಣಿ ಮಾಮ್, ಜಪ್ಪಯ್ಯ ಅಂದರೂ ಸಾಲ ಕೊಡುವ ಜನ ಅಲ್ಲ.
ಕಿಣಿ ಮಾಮ್, ಯಾನೆ ನರಸಿಂಹ ಕಿಣಿ ಗೋಳಿಬೈಲಿಗೆ ನಾರಾಯಣ ಶೆಟ್ರಿಗಿಂತ ಹಳೆಯ ತಲೆ. ಶೆಟ್ಟರು ದಿನಸಿ ಅಂಗಡಿ ಹಾಕುವ ಹತ್ತು ವರ್ಷಕ್ಕೆ ಮೊದಲೇ, ಎಮರ್ಜೆನ್ಸಿ ಕಾಲ ಮುಗಿದಾವಾಗ ಕಿಣಿ ತಮ್ಮ ವೆಂಕಟರಮಣ ಸ್ಟೋರ್ಸ್ ಅನ್ನು ಶುರು ಮಾಡಿದ್ದರು. ಮೊದಲಿಗೆ ಅಂಗಡಿಯ ಮುಂದೊಂದು ಕಡಿಮಾಡು ಇಳಿಸಿ ಚಾ ತಿಂಡಿ ಕೂಡ ಕೊಡುತ್ತಿದ್ದರಾದರೂ ಕೊನೆಗೆ ಕೈಲಾಗದೇ ಅದನ್ನ ಕೈದು ಮಾಡಿದ್ದರು. ಅಷ್ಟೊತ್ತಿಗೇ ಬಸ್ಟ್ಯಾಂಡಿನ ಮುಂದೆಯೇ ಸುಬ್ಬಣ್ಣ ಭಟ್ಟರು ಅಧಿಕೃತವಾಗಿಯೇ ಶ್ರೀ ದೇವಿ ಊಟದ ಹೋಟೇಲನ್ನು ಆರಂಭಿದ್ದರು. ಹಾಗಾಗಿ ಊರಿನ ಜನಕ್ಕೆ ಬೆಚ್ಚ ಗೋಳಿಬಜೆ ಸಿಗಲಿಕ್ಕೆ ಸಮಸ್ಯೆ ಏನೂ ಆಗಲಿಲ್ಲ. ಕಿಣಿ ಮಾಮ್ ಭಾರಿ ಲೆಕ್ಕದ ಮನುಷ್ಯ. ಇವತ್ತಿಗೂ ಅವರು ಪೇಪರು ತರಿಸುವುದಿಲ್ಲ. ಮನೆಯಲ್ಲಿ ಟಿವಿ ಕೂಡ ಇಲ್ಲ. ಹಳೆ ರೇಡಿಯೋ ಮಾತ್ರ ಸೇವೆಯಲ್ಲಿದೆ. ಇನ್ನು ಅರ್ಧ ಪೈಸೆ ಕೂಡ ಅವರ ಗಲ್ಲೆಯಿಂದ ಹೆಚ್ಚು ಕಡಿಮೆ ಆಗುವ ಚಾನ್ಸೇ ಇರಲಿಲ್ಲ. ಅಷ್ಟು ಹುಶಾರ್.ನೋಡಲಿಕ್ಕೆ ಕಡ್ಡಿಯಂತಿದ್ದರೂ ಧ್ವನಿ ಮಾತ್ರ ಕಿಲೋಮೀಟರು ದೂರಕ್ಕೂ ಕೇಳೀತು. ಕುಶಾಲಿಗೆ ಅಂತ ಕೂಡ ಅವರು ಯಾರಿಗಾದರೂ ಎರಡು ಗ್ರಾಂ ಹೆಚ್ಚಿಗೆ ತೂಕ ಮಾಡಿ ಕೊಟ್ಟವರಲ್ಲ. ಹಾಗಂತ ಮೋಸ ಮಾಡುವ ಜನವೋ, ಅದೂ ಅಲ್ಲ. ಅವರ ಕಡಕ್ ವ್ಯಾಪಾರದ ಬುದ್ಧಿಯಿಂದಲೇ ಮೇಲೆ ಬಂದಿದ್ದು ಅಂತ ಊರಲ್ಲಿ ಅವರಿಗೊಂದು ಗೌರವ ಉಂಟು. ಮಗಳನ್ನ ಮಂಗಳೂರಿನ ಪ್ರಸಿದ್ಧ ಲಾಯರೊಬ್ಬರ ಮಗನಿಗೆ ಮದುವೆ ಮಾಡಿ ಕೊಟ್ಟು, ಮಗ ಮಣಿಪಾಲದ ಬ್ಯಾಂಕೊಂದರಲ್ಲಿ ಕೆಲಸ ಹಿಡಿದು ಕೈ ತುಂಬ ದುಡಿಯಲು ತೊಡಗಿ ಅವನಿಗೂ ಮದುವೆಯಾಗಿ ಮೊಮ್ಮಕ್ಕಳು ಬಂದರೂ, ಕಿಣಿ ಮಾಮ್ ಅಂಗಡಿ ನಡೆಸುವುದು ಬಿಟ್ಟಿಲ್ಲ. ಹಾಗಂತ ಅಂಗಡಿ ನಡೆಸಲಿಕ್ಕೆ ಮನಸ್ಸಿದೆ ಅಂತಲ್ಲ. ಅವರ ಹೆಂಡತಿ ಕಳೆದ ಆರೆಂಟು ವರ್ಷಗಳಿಂದಲೇ ಅಂಗಡಿ ಯಾರಿಗಾದರೂ ಕೊಡಿ ಎಂದ ದಿನವೂ ಕೊರೆದರೂ ಇವತ್ತು ನಾಳೆ ಎಂದು ಅದನ್ನ ಮುಂದೆ ಹಾಕುತ್ತಲೇ ಬಂದಿದ್ದಾರೆ.
ಕಿಣಿ ಮಾಮ್ ಗೆ ಈಗ ವರ್ಷ ಸುಮಾರು ಅರವತ್ತೈದು ಕಳೆದಿದ್ದರೂ ಹಳೆಯ ಜಾಪು ಬಿಟ್ಟಿಲ್ಲ. ಇವತ್ತಿಗೂ ಅದೇ ಗತ್ತು. ಅಂಗಡಿಗೆ ಬಂದ ಮನುಷ್ಯ ಏನು ಐಟಮ್ ಬೇಕು ಅಂತ ಹೇಳಬೇಕು, ಇವರು ಅದನ್ನ ಪಟಪಟ ಅಂತ ಕಟ್ಟಿ ಕೊಡಬೇಕು. ದುಡ್ಡು ಕೊಟ್ಟ ಮೇಲೆ ಅವ ಹೆಚ್ಚಿಗೆ ಏನೂ ಮಾತಾಡದೇ ಹೊರಟು ನಡಿಯಬೇಕು. ಸುಮ್ಮನೆ ಮತ್ತೆ ಕಿಣಿಯವರೇ ಭಾರಿ ಸೆಕೆ ಅಲ್ವಾ, ನಾಳೆ ಮಳೆ ಬರ್ತಾದಾ ಹೇಗೆ, ಎಂಚಿನ ಅವಸ್ಥೆ ಮಾರಾಯಾರೇ ಅಂತೆಲ್ಲ ಹಲುಬಿದರೋ, “ಎಪ್ರಿಲಲ್ಲಿ ಸೆಕೆ ಇಲ್ಲದೆ ಮತ್ತೆಂತ ಚಳಿ ಆಗ್ತದನ? ಮಳೆ ನನ್ನ ಕಂಕುಳಲ್ಲಿ ಉಂಟಾ, ಬಂದ್ರೆ ಬಂದೀತು ಸುಮ್ನೆ ಹೋಗಿ ಮಾರಾಯರೇ ಅಂತ ಬೈದು ಕಳಿಸಿಯಾರು. ಆದರೆ ಎಲ್ಲರ ಹತ್ತಿರವೂ ಹಾಗೆ ಮಾಡ್ತಾರೆ ಅಂತಲ್ಲ, ಒಂದಿಷ್ಟು ಲೆಕ್ಕದ ಜನ. ಶಾಲೆಯ ಹೆಡ್ ಮಾಸ್ಟ್ರು ರಾಂಭಟ್ರು, ಹೋಟೆಲಿನ ಸುಬ್ಬಣ್ಣ, ಪೋಸ್ಟ್ ಮಾಸ್ಟರ್ ದೂಜ ಪೊರ್ಬುಲು ಹೀಗೊಂದಿಷ್ಟು ಜನ ಕಿಣಿ ಮಾಮ್ ಹತ್ರ ಕೂತು ಉಭಯ ಕುಶಲೋಪರಿ ವಿಚಾರಿಸುವುದುಂಟು. “ಕಾಂಜಿ ಪೀಂಜಿಗಳಿಗೆಲ್ಲ ನನ್ನ ಅಂಗಡಿ ಮುಂದೆ ಕೂತು ಮರ್ಲು ಕಟ್ಲಿಕ್ಕೆ ಜಾಗ ಇಲ್ಲ. ಅಂತ ಮನಸ್ಸಿದ್ದವ್ರು ಅಲ್ಲಿ ಹೋಗಿ ಆ ಶೆಟ್ಟಿಯ ಸ್ಟೋರಿನ ಮುಂದೆ ಲೇಲೆ ಹಾಕಿ, ಗಮ್ಮತ್ತು ಮಾಡಿ” ಅಂತ ಕಿಣಿ ಮಾಮ್ ಯಾವಾಗಲೋ ಹೇಳಿದ್ದರಂತೆ ಎಂಬ ಮಾತು ಬಲ್ಲ ಮೂಲಗಳಿಂದ ನಾರಾಯಣ ಶೆಟ್ಟರಿಗೆ ತಲುಪಿದ್ದು ಸುಮಾರು ಐದಾರು ವರ್ಷದ ಹಿಂದೆ. ಅಲ್ಲಿಯ ತನಕ ಮುಖ ಕಂಡಾಗ “ಮತ್ತೆ ಸೌಖ್ಯವ, ಹೆಂಡತಿ ಮಕ್ಕಳು ಹೇಗಿದ್ದಾರೆ” ಎಂದು ವಿಚಾರಿಸುವ ಮಟ್ಟಿಗೆ ಇಬ್ಬರ ಮಧ್ಯೆ ಇದ್ದ ಮಾತುಕತೆ ಕೂಡ ನಿಂತು ಹೋಗಿತ್ತು. ಕಿಣಿ ಮಾಮ್ ತಮ್ಮ ಆಪ್ತ ವಲಯದಲ್ಲಿ ತಾನು ನಾರಾಯಣ ಶೆಟ್ಟಿಗೆ ಹಾಗೆಲ್ಲ ಹೇಳಿಲ್ಲ ಮಾರ್ರೆ, ಯಾರೋ ಆಗದವ್ರು ಹೋಗಿ ಚಾಡಿ ಹೇಳಿದ್ದಾರೆ ಎಂದು ಮೆಲ್ಲಗೆ ಬೇಜಾರು ಪಟ್ಟುಕೊಂಡ ಸುದ್ದಿ ಶೆಟ್ಟರಿಗೇನೂ ಹೋಗಿ ಮುಟ್ಟಿರಲಿಲ್ಲ.
 ಆದರೆ ಆವಾಗಿನಿಂದ ಶೆಟ್ಟರಂಗಡಿ ಮತ್ತು ಕಿಣಿ ಸ್ಟೋರ್ಸ್ ಮಧ್ಯೆ ಒಂದು ಅಂತರ ಬೆಳೆದು ಬಂದಿತ್ತು. ಪಡ್ಡೆ ಹೈಕಳು ಮತ್ತು ಸುಮ್ಮನೆ ಕೆಲಸವಿಲ್ಲದೇ ತಿರುಗುವ ಹುಡುಗರು ಶೆಟ್ಟರಂಗಡಿಗೆ ಹೋಗುವವರು ಎಂತಲೂ, ಗೌರವಾನ್ವಿತರೂ, ಒಳ್ಳೆ ಕೆಲಸದಲ್ಲಿರುವ ಮಂದಿ ಕಿಣಿ ಸ್ಟೋರ್ಸಿಗೆ ಹೋಗುವುದು ಎಂದೂ ಭಾಗವಾಗಿ ಹೋಗಿತ್ತು. ಸತ್ಯಕ್ಕಾದರೆ ಶೆಟ್ಟರಂಗಡಿಯ ಹೊರಗೆ ಹಾಕಿರುವ ಎರಡು ಬೆಂಚುಗಳೇ ಇವಕ್ಕೆಲ್ಲ ಕಾರಣ. ಊರಿಗೆ ಒಂದು ಕಾಲದಲ್ಲಿ ಪೇಪರು ಬರುತ್ತಿದ್ದದ್ದು ಶೆಟ್ಟರ ಅಂಗಡಿಗೆ ಮಾತ್ರವಾದ್ದರಿಂದ ಓದುಗ ಮಹಾಶಯರೆಲ್ಲ ಅಲ್ಲೇ ಸೇರುತ್ತಿದ್ದರು. ಯಥಾ ಸಾಧ್ಯ ರಾಜಕೀಯ ವಿಮರ್ಶೆಗಳೂ, ಸರಕಾರ ಕೆಡವುವ, ಕಟ್ಟುವ ಪ್ರಮುಖ ಮಾತುಕತೆಗಳೆಲ್ಲ ಹೇಗೆ ಎಲ್ಲ ಊರುಗಳಲ್ಲಿ ಅಶ್ವತ್ಥ ಕಟ್ಟೆಯೋ ದೇವಳದ ಜಗಲಿಯಲ್ಲೋ ನಡೆದು ಗಾಳಿಯಲ್ಲಿ ತೇಲಿ ಹೋಗಿ ಮಾಯವಾಗುತ್ತದೆಯೋ ಅದೇ ಪ್ರಕಾರ ಗೋಳಿಬೈಲಿನಲ್ಲಿ ಶೆಟ್ಟರಂಗಡಿಯ ಬೆಂಚುಗಳಲ್ಲಿ ನಡೆಯುತ್ತದೆ. ಪೇಪರುಗಳಲ್ಲಿ ಜನ ಏನನ್ನಾದರೂ ಓದಿ, “ತೂಯರಾ ಶೆಟ್ರೇ, ನಾಳೆ ಗರ್ವಮೆಂಟು ಕಬ್ಬೆ ಬೀಳ್ತದಂತೆ” ಎಂದರೆ “ಅಂದಾ? ಒಳ್ಳೆದಾಯ್ತು ಬಿಡಿ ಆಗಲೇ ಬೇಕಿತ್ತು ಹಾಗೇ”  ಎನ್ನುತ್ತ, “ಶೆಟ್ರೇ ನಾಳೆಯಿಂದ ಪೆಟ್ರೋಲಿಗೆ ಬೆಂಕಿ ಬಿತ್ತು ಮಾರ್ರೆ ಮತ್ತೆ ನಾಕು ರುಪಾಯಿ ಜಾಸ್ತಿ” ಎಂದಾಗ ಅವರ ಕರ್ಮ ನಮ್ಮನ್ನು ಲಗಾಡಿ ತೆಗಿಲಿಕ್ಕೆ ಹುಟ್ಟಿದ್ದು ಇವುಗಳೆಲ್ಲ” ಎಂದು ಬೈದ ಹಾಗೆ ಮಾಡಿ ’ಮುದರ, ನಿಂಗೆ ಚಾಪುಡಿ ಸಾ ಬೇಕಂತ ಕಾಣ್ತದೆ ಅಲ್ಲ,ತಗೊಂಡು ಹೋಗಿ ಬಾರಿ ಸಮಯ ಆಯ್ತು” ಅಂತಂದು ಎರಡು ಐಟಂ ಹೆಚ್ಚು ವ್ಯಾಪಾರ ಆಗುವ ಹಾಗೆ ಮಾಡುವ ಉಪಾಯ ಶೆಟ್ಟರದು. ಅವರಿಗೆ ರಾಜಕೀಯ, ಕ್ರೀಡೆ, ಸಿನಿಮಾ ಯಾವುದರ ಬಗ್ಗೆಯೂ ಆಸಕ್ತಿ ಇರಲಿಲ್ಲ. ಗಿರಾಕಿಗಳ ಇಷ್ಟವೇ ಅವರ ಇಷ್ಟ. ಯಾವ ವಿಷಯದ ಬಗ್ಗೆ ಬೇಕಿದ್ದರೂ ಎಷ್ಟು ಹೊತ್ತು ಬೇಕಾದರೂ ಹರಟುವ ಶೆಟ್ಟರಿಗೆ ಕೊನೆ ಕೊನೆಗೆ ತಾನು ಯಾವ ವಿಷ್ಯದ ಬಗ್ಗೆ ಮಾತಾಡುತ್ತಿದ್ದೇನೆ ಎಂಬುದು ಕೂಡ ಮರೆತು ಹೋಗುತ್ತಿತ್ತು. ಸಂಜೆ ಹೊತ್ತಿಗೆ ಶೆಟ್ಟರಂಗಡಿಗೆ ಹೋದರೆ ಯಾವುದೋ ಕೋಳಿ ಅಂಕ ಮುಗಿಸಿ ಬಂದು, ಬೆಂಚಿನ ಕಾಲಿಗೆ ಕಟ್ಟಿದ ಕೋಳಿಗಿಂತ ಜೋರಾಗಿ ಕಿರುಚುವ ಒಂದಿಷ್ಟು ಮಂದಿಯೋ, ಕ್ರಿಕೆಟ್ ಮ್ಯಾಚು ಮುಗಿಸಿ ಬಂದು ಜಾಫಾ ಕುಡಿಯುವ ಹುಡುಗರೋ, ಮನೆ ಕಟ್ಟಲೆಂದು ಬಾಗಲಕೋಟೆಯಿಂದ ಬಂದ ಕೆಲಸಗಾರರ ಠೋಳಿಯೋ ಕಂಡೇ ಕಾಣುತ್ತದೆ. ಹೀಗಾಗಿ ಸಂಪ್ರದಾಯಸ್ಥ ಮನಸ್ಥಿತಿಯ ಜನಕ್ಕೆ ಶೆಟ್ಟರಂಗಡಿ ಎಂದರೆ ಒಂಥರ ಗಡಂಗಿನ ಹಾಗೆ ಎಂಬಂತಾಗಿತ್ತು. ಶೆಟ್ಟರು ಗುಟ್ಟಾಗಿ ಶೇಂದಿ ಕೂಡ ಮಾರುತ್ತಾರಂತೆ ಎಂಬ ಸುದ್ದಿ ಕೂಡ ಗೋಳಿಬೈಲಿನಲ್ಲಿ ಸ್ವಲ್ಪ ಕಾಲ ಹರಡಿದ್ದೂ ಹೌದು. ಆಮೇಲೆ ಶೆಟ್ಟರು ಎಕ್ಸೈಸ್ ದಾಳಿಗೆ ಹೆದರಿ ಶೇಂದಿ ಮಾರಾಟ ಬಂದು ಮಾಡಿದರಂತೆ ಎಂಬ ಉಲ್ಟಾ ಸುದ್ದಿ ಕೂಡ ಬಂತು.
ಏನೇ ಆದರೂ ಶೆಟ್ಟರಿಗಾಗಲೀ, ಕಿಣಿ ಮಾಮ್ ಗೇ ಆಗಲಿ ಅಂತಹ ಹೇಳಿಕೊಳ್ಳುವ ವ್ಯಾಪಾರವೇನೂ ಗೋಳಿಬೈಲಿನಲ್ಲಿ ಇಲ್ಲ. ಇತ್ತೀಚಿನ ದಿನಗಳಲ್ಲಂತೂ ಊರಿಗೆ ಯಾವುದೋ ಹೊಸ ಯೋಜನೆಯಡಿ ಕಾಂಕ್ರೀಟು ರಸ್ತೆ ಬಂದ ಮೇಲೆ ಜನ ಐದೇ ಕಿಲೋಮೀಟರು ಹತ್ತಿರದ ಕೂಳೂರು ಪೇಟೆಗೇ ಹೋಗಿ ಬರುವುದನ್ನ ಅಭ್ಯಾಸ ಮಾಡಿಕೊಂಡಿದ್ದಾರೆ. ಅಭಿವೃದ್ಧಿಯ ಹೆಸರಲ್ಲಿ ರೋಡು ಮಾಡಿ ಊರು ಹಾಳು ಮಾಡ್ತಾರೆ ಎಂದು ದೇವಿ ಹೋಟೆಲ್ಲಿನ ಭಟ್ರು ಬೈಯುವುದಕ್ಕೆ ಕೂಳೂರು ಪೇಟೆಯ ಮಸಾಲೆ ದೋಸೆ ಪಾರ್ಸಲ್ಲು ಬರುವ ಹೊಟ್ಟೆಕಿಚ್ಚೇ ಕಾರಣ ಎಂದುಕೊಂಡರೂ, ಅವರು ಹೇಳುವ ಮಾತಲ್ಲಿ ತಪ್ಪೇನೂ ಇಲ್ಲ. ಮೊದ ಮೊದಲು ಕಿಣಿ ಮಾಮ್ ಮತ್ತು ಶೆಟ್ಟರಂಗಡಿಗೆ ಮಾಲು ಹಾಕಲು ಎರಡು ಮೂರು ದಿನಕ್ಕೊಮ್ಮೆ ಬರುತ್ತಿದ್ದ ತಿಂಡಿ ತಿನಿಸಿನವನು ಎರಡು ವಾರಕ್ಕೊಮ್ಮೆ ಬರುತ್ತಾನೆ. ಆ ಪುಣ್ಯಾತ್ಮ ಟೀವಿಯೆಸ್ಸಿಂದ ಮೆಟಡೋರಿಗೆ ಬದಲಾಗಿದ್ದರೂ  ಕಿಣಿ ಮಾಮ್ ನ ಗಾಜಿನ ಬಾಟಲಿ ಸಾಲು ಬದಲಾಗಿಲ್ಲ. ನಾರಾಯಣ ಶೆಟ್ಟರ ಹಳೆಯ ಕೆಂಪು ಫೋನು ಕೂಡ ಇನ್ನೂ ಹಾಗೇ ಇದೆ. ಆದರೆ ಈಗ ಅದಕ್ಕೆ ಅಮೆರಿಕದಿಂದ ಮಗನ ಫೋನು ಬರುತ್ತದೆ ಎಂಬುದೇ ಪ್ರಮುಖ ಸೇರ್ಪಡೆ.
ನಾರಾಯಣ ಶೆಟ್ಟರ ಮಗ ಕಳೆದ ಕೆಲ ತಿಂಗಳಿಂದ ಅಪ್ಪನನ್ನ ಅಮೆರಿಕಕ್ಕೆ ಬಾ ಎಂದು ಒತ್ತಾಯ ಮಾಡುತ್ತಿದ್ದ. ಸಂಜೀವ ಅಮೆರಿಕಕ್ಕೆ ಕರೆಯುವುದನ್ನು ಮೊದಲು ತೋರಿಕೆಗೆ ಅಂದುಕೊಂಡಿದ್ದ ಶೆಟ್ಟರಿಗೆ ಕಳೆದ ಒಂದೆರಡು ವಾರದಿಂದ ಪದೇ ಪದೇ ಕೇಳುವುದು ನೋಡಿ ತಲೆಬಿಸಿಯಾಗಿತ್ತು. ತಾನು ಇನ್ನೇನು ಒಂದೆರಡು ವಾರದಲ್ಲಿ ಊರಿಗೆ ಬರುತ್ತೇನೆಂದೂ, ಬಂದವನು ಪಾಸ್ಪೋರ್ಟು ವೀಸಾ ಮಾಡಿಸಿ ಎರಡು ಮೂರು ತಿಂಗಳೊಳಗೆ ನಿಮ್ಮನ್ನ ಅಮೆರಿಕಕ್ಕೆ ಕರೆದುಕೊಂಡು ಹೋಗುತ್ತೇನೆಂದೂ ಸಂಜೀವ ಭಾರಿ ಪ್ಲಾನು ಮಾಡಿದ್ದವನಂತೆ ಹೇಳಿ ಹೆದರಿಸಿಬಿಟ್ಟಿದ್ದ. ನೀನು ವಾಪಸ್ಸು ಬರುದಿಲ್ವಾ ಮಾರಾಯ ಅಂತ ಕೇಳಿದ್ದಕ್ಕೆ ’ಇಲ್ಲಪ್ಪ ನಂಗೆ ಇಲ್ಲಿ ಗ್ರೀನ್ ಕಾರ್ಡು ಸಿಗುವ ಅಂದಾಜು ಉಂಟು ಭಾರತಕ್ಕೆ ಸದ್ಯ ಬರುದಿಲ್ಲ” ಅಂದಿದ್ದ. ಶೆಟ್ಟರು ಮಗನಿಗೆ ಹಸಿರು ಕಾರ್ಡು ಸಿಗ್ತದಂತೆ, ಅವ ಅಲ್ಲೇ ಇರುವ ಹಾಗೆ ಕಾಣ್ತದೆ ಎಂದು ತಮ್ಮ ದೋಸ್ತಿ ಬೀಡಿ ಬ್ರಾಂಚಿನ ಸೈಯದಿಗೆ ಹೇಳಿದ್ದಕ್ಕೆ ಅವ, “ಹಾ ಹಾ ಎಂತ ಶೆಟ್ರೆ ಸಂಜೀವನಿಗೆ ಹಸಿರು ರೇಷನ್ ಕಾರ್ಡ್ ಸಿಕ್ಕಿತ? ಸಂಪಾದನೆ ಕಡಿಮೆಯ ಅವನಿಗೆ? ನಮ್ಮಲ್ಲಿ ಪಾಪದವ್ರಿಗೆ ಕೊಡುದಲ್ವಾ ಅದು?”  ಅಂತ ಹೇಳಿ ತಲೆ ಕೆಡಿಸಿಟ್ಟಿದ್ದ. ಮಗ ಅಮೆರಿಕಕ್ಕೆ ಹೋಗಿ ಬಡವನಾಗಿದ್ದಾನ ಹಾಗಾದರೆ? ಅವನಿಗೇ ಗತಿ ಇಲ್ಲದಿದ್ದ ಮೇಲೆ ನಾನು ಹೋಗುವುದು ಯಾಕೆ? ಎಂಬ ವಿಚಾರಗಳಲ್ಲಿ ಬೆಳಗ್ಗಿಂದ ಶೆಟ್ಟರು ತಲೆ ಕೆಡಿಸಿಕೊಂಡಿದ್ದರು. ಪ್ರತಿದಿನವೂ ತಮ್ಮ ಅಂಗಡಿಗೆ ಬಂದು ಪೇಪರಿನ ಸುದ್ದಿಗಳನ್ನ ಪೋಸ್ಟ್ ಮಾರ್ಟಂ ಮಾಡುವ ಯಾರಲ್ಲಿಯಾದರೂ ವಿಚಾರ ಕೇಳುವ ಎಂದರೆ “ ಅಷ್ಟು ಸಾ ಗೊತ್ತಿಲ್ವ ಶೆಟ್ರೆ, ಎಂಚಿನಯೇ” ಎಂದು ಮಾರ್ಯದೆ ತೆಗೆದರೆ ಎಂದು ಸುಮ್ಮನಿದ್ದರು, ಕಳೆದ ಎರಡು ದಶಕಗಳಲ್ಲಿ ಕೇಳಿದ ಅಸಂಖ್ಯಾತ ಸುದ್ದಿ ತುಣುಕಗಳನ್ನ ಒಂದು ಕಿವಿಯ ಮೇಲೆ ಬೀಳಿಸಿಕೊಂಡು ಮತ್ತೊಂದು ಕಿವಿಯಿಂದ ಆಚೆಗೆ ಕಳಿಸಿದ್ದರ ಪರಿಣಾಮವಾಗಿ ಗ್ರೀನ್ ಕಾರ್ಡು ಎಂದರೇನೆಂಬುದು ತಕ್ಷಣಕ್ಕೆ ತನಗೆ ಗೊತ್ತಾಗಲಿಲ್ಲ ಎಂದು ಶೆಟ್ಟರಿಗೆ ಅರಿವಾಗಿತ್ತು. ಅಷ್ಟಕ್ಕೂ ಮಗ ಮತ್ತೆ ಇವತ್ತೋ ನಾಳೆಯೋ ಫೋನು ಮಾಡುತ್ತಾನೆಂಬುದು ತಿಳಿದಿದ್ದರಿಂದ ಸುಮ್ಮನಾಗಿದ್ದರು. ಅಲ್ಲಿ ಬೆಳಗ್ಗೆದ್ದ ಮಗ ಇಲ್ಲಿಯ ಸಂಜೆಗೆ ಫೋನು ಮಾಡಿದ ಕೂಡ. ಶೆಟ್ಟರ ಸಮಸ್ಯೆ ಕೇಳಿ ಜೋರು ಅಕ್ಕು, “ ಅಂಚ ಅತ್ ಅಪ್ಪ... ಹಾಗಲ್ಲ ಅದು ನಾನು ಅಮೆರಿಕದಲ್ಲೇ ಇರಬಹುದು ಅಂತ ಇಲ್ಲಿನ ಸರ್ಕಾರ ಕೊಡುವ ಕಾರ್ಡು ಅದು, ಅದ್ರ ಚಿಂತೆ ಬಿಡು, ನೀನು ಹೊರಡುವ ತಯಾರಿ ಮಾಡು.. ಇನ್ನೂ ಯಾಕೆ ನಿಂಗೆ ಅಂಗಡಿ ಸಾವಾಸ” ಎಂದು ಅದೇ ಹಳೇ ರಾಗ ತೆಗೆದ. ಶೆಟ್ಟರಿಗೆ ಎಂತ ಹೇಳ್ಬೇಕು ಅಂತ ಗೊತ್ತಾಗದೇ “ಮಗ ನಂಗೆ ಟೈಮು ಕೊಡು ನೋಡುವ ಯೋಚನೆ ಮಾಡಿ ಹೇಳ್ತೇನೆ, ಹೆಂಡತಿಗೆ ಕೇಳಿದೆ ಅಂತ ಹೇಳು” ಎಂದು ಫೋನಿಟ್ಟರು. ಮಗವಾ ಪೋನು ಮಾಡಿದ್ದು ಸಂಜೀವ ಸೌಕ್ಯ ಅಂತೆಯಾ ಪುಳ್ಳಿ ಬರ್ಲಿಕ್ಕುಂಟಾ ಎಂದು ಪುಗ್ಗೆರೆ ತಗೊಂಡು ಹೋಗಲು ಬಂದ ಸೇಸಿ ಪಿಸಿಪಿಸಿ ನಗಾಡಿದ್ದಕ್ಕೆ ರೇಗಿದ ಶೆಟ್ಟರು ಎಂತ ಇಲ್ಲ ಮಾರಾಯ್ತಿ ಸುಮ್ಮನೆ ಹೋದು ಎಂದು ಗದರಿದರು.
ಮಾರನೇ ದಿನ ಬೆಳಗ್ಗೆದ್ದು ಲೆಕ್ಕದ ಪಟ್ಟಿ ತೆಗೆದು ನೋಡಿದ ಶೆಟ್ಟರಿಗೆ ತಲೆ ಕೆಟ್ಟು ಹೋಯಿತು. ಐದು ಸಾವಿರಕ್ಕಿಂತ ಹೆಚ್ಚಿನ ದುಡ್ಡು ಬರುವುದು ಬಾಕಿ ಇತ್ತು. ಅಂದೇ ಬೇರೆ ಲೈನಿನವನು ಬರುವವನಿದ್ದ. ಎಂತ ತಟಪಟ ಮಾಡಿದರೂ ಅವನಿಗೆ ಕೊಡ್ಲಿಕ್ಕಿದ್ದ ದುಡ್ಡು ಹುಟ್ಟುವ ಹಾಗೆ ಕಾಣುವುದಿಲ್ಲ ಏನು ಮಾಡುದು ಎಂದು ಶೆಟ್ಟರು ಲೆಕ್ಕಾಚಾರ ಹಾಕುತ್ತಿರುವಾಗಲೇ ಪಂಚಾಯ್ತು ಮೆಂಬರು ದಾಮು ಬಂದ. ಶೆಟ್ಟರೆ ಒಂದು ಕೋಲ್ಡು ಕೊಡಿ ಎಂದವನೇ ಪೇಪರು ಓದಲು ಆರಂಭಿಸಿದ. “ನೋಡಿದ್ರ ಶೆಟ್ರೆ, ಭಾರತಕ್ಕೆ ವಾಲ್ ಮಾರ್ಟು ಬರ್ತದಂತೆ ನಿಮ್ಮ ಅಂಗಡಿ ಎಲ್ಲ ಲಗಾಡಿ ಹೋಗ್ಲಿಕ್ಕುಂಟು, ಒಟ್ಟಾರೆ ಪಾಪದವರಿಗೆ ಸುಕ ಇಲ್ಲ, ಸರ್ಕಾರಕ್ಕೆ ತಲೆಸಮ ಇಲ್ಲ “ ಎಂದು ಒಂದೇ ಸಮನೆ ವದರ ತೊಡಗಿದ. ಬೇರೆ ದಿನ ಆಗಿದ್ದರೆ ಶೆಟ್ರು ಅವನ ಮಾತಿಗೆ ಏನಾದ್ರೂ ಒಗ್ಗರಣೆ ಹಾಕಿ ಮಾತಿಗೆ ಮಾತು ಸೇರಿಸಿ ಹಾರ ಮಾಡಿ ಅವನಿಗೇ ತೊಡಿಸುತ್ತಿದ್ದರು. ಮೂಡು ಸರಿ ಇಲ್ಲದೇ ಹೋಗಿದ್ದಕ್ಕೆ “ಎಂತ ವಾಲ್ ಮಾರ್ಟು ಮಾರಾಯ” ಎಂದವರೇ ಬಕೆಟಿನಲ್ಲಿಟ್ಟಿದ್ದ ಜಾಫಾ ತೆಗೆದು ಅವನಿಗೆ ಕೊಟ್ಟು ಒಳಗೆ ತೂಗಾಗಿದ್ದ ಅಕ್ಕಿ ಗೋಣಿ ಸರಿ ಮಾಡಲು ಕೂತರು. ದಾಮು ಅಮೋಘವಾಗಿ ಕೊರೆದ ಮುಂದಿನ ಐದು ನಿಮಿಷಗಳ ಉಪನ್ಯಾಸದಲ್ಲಿ ಶೆಟ್ಟರಿಗೆ ಅರ್ಥವಾಗಿದ್ದು, ಅದೆಂತದೋ ನೆಹರೂ ಮೈದಾನದಷ್ಟು ದೊಡ್ಡ ಜಾಗದಷ್ಟಿರುವ ಅಂಗಡಿ ಬರುತ್ತದೆ. ಅದು ರೈತರಿಂದಲೇ ಎಲ್ಲ ಬೆಳೆ ಖರೀದಿಸಿ, ಮಾರುತ್ತದೆ. ಅಲ್ಲಿ ಬೇರೆ ಕಡೆಗಿಂತ ಕಡಿಮೆಗೆ ಎಲ್ಲ ಸಿಗ್ತದೆ, ಜನ ಒಂದೇ  ಕಡೆ ಅಷ್ಟು ಕಡಿಮೆಗೆ ಸಿಗುದಕ್ಕೆ ಅಲ್ಲಿಗೇ ಹೋಗುತ್ತಾರೆ. ಸಣ್ಣ ಪುಟ್ಟ ಅಂಗಡಿಗಳ ಕತೆ ಬರ್ಬಾದ್ ಆಗುತ್ತದೆ” ಎನ್ನುವುದಷ್ಟೆ. ಕೊನೆಗೆ “ಹೌದಾ ದಾಮು ನಿಂಗೆ ಮಂಡೆ ಸಮ ಉಂಟನ? ಒಂದು ಜಾಪಾ ಕುಡಿಲಿಕ್ಕೆ ನೀನು ಅದೆಂತೆ ವಾಲ್ ಮಾರ್ಟಿಗೆ ಹೋಗ್ತೀಯಾ? ನಿನ್ನ ಅಪ್ಪನಿಗೆ ವೀಳ್ಯದೆಲೆ ಸುಣ್ಣ ಅವರು ಕೊಡ್ತರಾ? ತುಕ್ರನ ಮಗನಿಗೆ ಬನ್ ಅಲ್ಲಿ ಸಿಗ್ತದಾ?  ಕೋಳಿಗೆ ಹಾಕುವ ಗೋದಿ ಕಡಿ ಅಲ್ಲಿ ಉಂಟಾ? ಯಾರು ಬಂದ್ರೂ ಕೂಡ ನನ್ನ ಅಂಗಡಿಯ ಸ್ಪೆಷಲ್ ನಶ್ಯದ ಪುಡಿ ಅವ್ರು ಕೊಟ್ಟಾರ” ಎಂದು ದಾಮುವಿಗೆ ಜಾಡಿಸಿದ ಶೆಟ್ಟರು ಅಮೋಘ ಶರಗಳನ್ನು ಪ್ರಯೋಗಿಸಿದ ಯೋಧನ ಹುರುಪಿನಲ್ಲಿ ಅವನ ಎದುರಿನ ಬೆಂಚಿನಲ್ಲಿ ಕೂತರು. ಜಾಫಾ ಒಂದೇ ಏಟಿಗೆ ಕುಡಿದು ಮುಗಿಸಿದ ದಾಮು, “ಅಯ್ಯ ಶೆಟ್ರೆ, ಮಂಡೆ ಸಮ ಇಲ್ಲದೇ ಇರುವುದು ನಂಗಲ್ಲ ನಿಮಗೆ. ಒಟ್ಟಾರೆ ನೀವು ಇದೇ ಗೋಳಿಬೈಲಿನಲ್ಲಿ ಕೂತು ಕೂತು ಜಡ್ಡು ಹಿಡಿಸಿಕೊಂಡಿದೀರಿ ಅಂತ ಕಾಣ್ತದೆ. ಬಾವಿ ಒಳಗಿನ ಕಪ್ಪೆ ಅಂದ್ರೆ ನೀವೆ ಮಾರ್ರೆ. ಈ ವಾಲ್ ಮಾರ್ಟ್ ಉಂಟಲ್ಲ ಅದ್ರ ಸುಮಾರು ಮರಿಗಳು ಸುಮಾರು ಆಗ್ಲೇ ಮಂಗಳೂರು ಪೇಟೆಗೆ ಬಂದಾಗಿದೆ. ಅಲ್ಲಿ ನಿಮ್ಮ ಗೋಧಿ ಕಡಿಯಿಂದ ಹಿಡಿದು ಅಕ್ಕಿ ಬೇಳೆ ಟಿವಿ ಕಪಾಟಿನವರೆಗೆ ಒಂದೇ ಕಡೆಗೆ ಸಿಗ್ತದೆ. ನಿಮ್ಮ ಅಂಗಡಿಗೆ ಜನ ಬರುದು ಕಡಿಮೆ ಆಗಿದ್ದು ಸಾ ನಿಮಗೆ ಹೊಳಿಲಿಲ್ವ ಮಾರ್ರೆ? ಎಂತ ಹೇಳ್ತೀರಿ, ಸೂಪರ್ ಫ್ರೆಶ್ ಅಂಜೆಲ್ ಮೀನು ಸಾ ಅಲ್ಲೇ ಸಿಗ್ತದೆ,ಜೀಗುಜ್ಜೆ ಬಾಳೆಕಾಯಿ ಸಾ ಅಲ್ಲೇ. ಮಲ್ಲಿಗೆ ಹೂವಿಂದ ಹಿಡಿದು ಮಲ್ಲಿಕ ಶೆರಾವತ್ ಪಿಚ್ಚರ್ ವರೆಗೆ ಎಲ್ಲದಕ್ಕೂ ಒಂದೇ ಜಾಗ. ನೀವು ಇಲ್ಲೇ ಕೂತೀರಿ ಆಯ್ತಾ? ಬಲ್ಲಿರೇನಯ್ಯ ಗೋಳಿಬೈಲಿಗೆ ಯಾರೆಂದು ಕೇಳಿದ್ದೀರಿ ಹೇಳಿಕೊಂಡು ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳಿ.” ಅಂತ ಬಾಂಬೊಂದನ್ನು ಹಾಕಿ ಎದ್ದು ಹೋದ. ಸುಮಾರು ಹೊತ್ತು ಅಲ್ಲೇ ಕೂತಿದ್ದ ಶೆಟ್ಟರಿಗೆ ತಲೆ ಹನ್ನೆರಡಾಣೆ ಆಗಿತ್ತು. ಮಂಗಳೂರು, ಅಲ್ಲಿನ ಹೊಸ ಮಾಲುಗಳು ಶೆಟ್ಟರಿಗೆ ಗೊತ್ತಿಲ್ಲದ ವಿಷಯ ಏನಲ್ಲ. ಊರಿನ ಪಡ್ಡೆಗಳಲ್ಲ ರಸವತ್ತಾಗಿ ಅಲ್ಲಿನ ಕಥೆಗಳನ್ನ ವರ್ಣಿಸಿದ್ದನ್ನ ಶೆಟ್ಟರೂ ಕೇಳಿದವರೇ. ಹತ್ತಿರದ ಕೂಳೂರು ಪೇಟೆಯ ಥಳಕು ಬಳಕು ಅಂಗಡಿಗಳಿಂದಾಗಿ ತಮ್ಮ ವ್ಯಾಪಾರ ಕಡಿಮೆಯಾಗಿದ್ದೂ ಶೆಟ್ಟರ ಅನುಭವಕ್ಕೆ ಬಂದು ಬಹಳ ಕಾಲವಾಗಿದೆ. ಎಲ್ಲ ಹೇಳಿದ್ದು ಕೇಳಿದ್ದರೇ ಬಿಟ್ಟರೆ ಶೆಟ್ಟರು ಒಮ್ಮೆಯಾದರೂ ಮಂಗಳೂರಿನ ಒಂದೇ ಒಂದು ಸೂಪರ್ ಬಜಾರಿಗೋ ಮಾಲ್ ಗೋ ಹೋದವರಲ್ಲ. ಮಗನ ಮದುವೆ ಕಾಲದಲ್ಲೂ ಅವರು ಪರ್ಕಳದ ಪಾಟೀಲರಲ್ಲಿಗೇ ಹೋಗಿದ್ದು.
ಮರುದಿನವೇ ಭಾನುವಾರ. ಅಂಗಡಿಗೆ ರಜೆ. ಯಾವಾಗಲೂ ದೇವಿ ಹೋಟೇಲು ಮಾಲಿಂಗೇಶ್ವರ ದೇವಸ್ಥಾನ ಅಂತ ಕಾಲ ಕಳೆಯುವ ಶೆಟ್ಟರು ಸೀದಾ ಇಪ್ಪತ್ತು ಕಿಲೋಮೀಟರು ದೂರದ ಮಂಗಳೂರಿಗೇ ಹೊರಟರು. ಬಸ್ಸಲ್ಲಿ ಸಿಕ್ಕ ಯಾರ ಬಳಿಯೋ ಮಾಲ್ ಒಂದರ ವಿಳಾಸ ವಿಚಾರಿಸಿ, ಬಸ್ಸಿಳಿದು ಆಟೋ ಹತ್ತಿ ಹೋಗಿದ್ದೇ. ಅಲ್ಲಿ ಹೋಗಿ ನೋಡಿದರೆ ಕಂಡದ್ದೇನು. ದಾಮು ಹೇಳಿದ ಹಾಗೆ ಎಲ್ಲ ಅಲ್ಲಿಯೇ. ತಾವು ಮೂವತ್ತಕ್ಕೆ ಮಾರುವ ಅಕ್ಕಿಗೆ ಅಲ್ಲಿ ಇಪ್ಪತ್ತಾರೇ ರೂಪಾಯಿ ಅನ್ನುವ ಬೋರ್ಡು ಬೇರೆ. ಮೂರು ಫ್ಲೋರು ಮೇಲೆ ಕೆಳಗೆ ಕಂಡ ಶೆಟ್ಟರಿಗೆ ಎಂತ ಮಾಡುದು ಅಂತಲೇ ಗೊತ್ತಾಗಲಿಲ್ಲ. ಬಟ್ಟೆ ಪಾತ್ರೆ ತರಕಾರಿ ಬೇಳೆ ಕಾಳು ಐಸ್ಕ್ರೀಮು ಎಲ್ಲ ಗೌಜಿ ಸಂತೆ. ಮೈಕಲ್ಲಿ ಎಂತದೋ ಆಫರ್ ಆಫತ್ ಅಂತ ಕೂಗುವುದು ಬೇರೆ. ಊರಿನ ಜಾತ್ರೆಗೆ ಸಮೇತ ಇಷ್ಟು ಜನ ಆಗುದಿಲ್ಲ ಅಂದುಕೊಂಡ ಶೆಟ್ಟರು ಕಣ್ಣು ಕತ್ತಲೆ ಬಂದ ಹಾಗಾಗಿ ಮೆಲ್ಲ ಬಿಡಿಸಿಟ್ಟ ಹಾಸಿಗೆಯ ಮೇಲೆ ಕೂತರು. ಒಂದೇ ನಿಮಿಷದೊಳಗೆ ಬಂದ ಯುನಿಫಾರಂ ಹೆಂಗಸು. ಇದ್ರ ಮೇಲೆ ಕೂತ್ಕೊಳ್ಳಬೇಡಿ ಪ್ಲೀಸ್ ಎಂದು ನೆಗಾಡಿದ ಹಾಗೆ ಮಾಡಿ ಕಣ್ಣು ಬಿಟ್ಟು ಹೆದರಿಸಿ ಹೋಯಿತು. ಎರಡನೇ ಫ್ಲೋರಿಂದ ಮೆಲ್ಲಗೆ ಕೆಳಗಿಳಿದು ಸಂದಿಯಲ್ಲಿ ಜಾಗ ಮಾಡಿಕೊಂಡು ಹೊರಗೆ ಬಂದು ಏನು ಮಾಡುವುದು ಅಂತ ಯೋಚನೆ ಮಾಡುತ್ತಿದ್ದಾಗ ಅವರನ್ನ ಬಂದು ಮಾತಾಡಿಸಿದ್ದು ಜನಾರ್ಧನ. ಗೋಳಿಬೈಲಿನ ದೇವಸ್ಥಾನದ ಮೊಕ್ತೇಸರ ಸದಾಶಿವ ಐತಾಳರ ಮಗ. “ಹ್ವಾ ಶೆಟ್ರೆ ನಮಸ್ಕಾರ, ನೀವೆಂತ ಇಲ್ಲಿ ಮಾರ್ರೆ? ಹೋಲ್ ಸೇಲ್ ಮಾಲು ತಗೊಂಡು ಹೋಗ್ಲಿಕ್ಕೆ ಬಂದದ್ದ ಹೇಗೆ? ನಿಮ್ಮ ಕೆಲಸ ಮುಗಿತಾ? ಬೇಕಾದ್ರೆ ನಾನು ಜೀಪು ತಂದಿದ್ದೇನೆ ಅದ್ರಲ್ಲೆ ಹೋಗುವ, ಎರಡೇ ನಿಮಿಷ, ಸ್ವಲ್ಪ ಐಟಂ ತುಂಬಿಸ್ಲಿಕ್ಕುಂಟು ಎಂದವನೇ, ಉತ್ತರಕ್ಕೆ ಕಾಯದೇ ಅವನ ದೊಡ್ಡ ಕಾರಿನ ಹಿಂದಿನ ಸೀಟು, ಡಿಕ್ಕಿಗಳಲ್ಲಿ ಅಕ್ಕಿ ಮೂಟೆ ಸಕ್ಕರೆ ಚೀಲ ತರಕಾರಿ ಗೋಣಿಯನ್ನ ತುಂಬಿಸತೊಡಗಿದ. ಶೆಟ್ರು ಅವನ ಗಾಡಿಯ ಪಕ್ಕವೇ ನಿಂತವರು, ಹೊರಡುವಾ ಅಂತ ಕೇಳಿದ್ದಕ್ಕೆ ಹಾ ಹಾ ಹೋಗುವ ಎಂದು ಪೆಚ್ಚು ನಗೆ ನಕ್ಕು ಕಾರೊಳಗೆ ಅವನ ಪಕ್ಕ ಕೂತರು. “ನಾಳೆ ದೇವಸ್ಥಾನದಲ್ಲಿ ಮದುವೆ, ಹಾಗೆ ಬಂದದ್ದು” ಎಂದ ಜನಾರ್ಧನ. ಹಿಂದೆಲ್ಲ ದೇವಸ್ಥಾನದಿಂದ ಇದೇ ಐತಾಳರು ಲಿಸ್ಟು ಕಳಿಸುತ್ತಿದ್ದದ್ದು ನೆನಪಾಗಿ ಜೊತೆಗೆ ಆತ ಮಾತಿಗಾದರೂ ಅದನ್ನು ನೆನಪು ಮಾಡಿಕೊಳ್ಳದಿದ್ದದ್ದು ನೋಡಿ ಶೆಟ್ಟರ ಮಂಡೆಬಿಸಿ ಮತ್ತೂ ಜೋರಾಯಿತು. ಅದೇ ತಲೆಬಿಸಿಯಲ್ಲಿ ಸಂಜೆ ಬಂದು ಮಲಗಿದ ಶೆಟ್ಟರಿಗೆ ಎಚ್ಚರಾದದ್ದು ಮಾರನೇ ದಿನ ಬೆಳಗ್ಗೆಯೇ.
ಆ ದಿನ ಬೆಳಗ್ಗೆ ಕಿಣಿಮಾಮ್ ಗೆ ಮಂಡೆಬಿಸಿ ಜೋರಾಗಲಿಕ್ಕೆ ಕಾರಣ ಅಂಗಡಿಯ ಎದುರಲ್ಲಿ ಶೆಟ್ಟರು ಬಂದು ಕೂತಿದ್ದು. ನಾರಾಯಣ ಶೆಟ್ಟರು. ಬಂದವರೇ ಸೀದಾ ನಿಮ್ಮ ಹತ್ರ ಸ್ವಲ್ಪ ಮಾತಾಡ್ಲಿಕ್ಕೆ ಉಂಟು ಎಂದವರು ಸುಮ್ಮನೆ ಕೂತಿದ್ದಾರೆ. ಸೋಮವಾರ ಬೆಳ್ಳಂ ಬೆಳಗ್ಗೆ ಎಂಟು ಗಂಟೆಗೆ, ತಮ್ಮ ಅಂಗಡಿಯನ್ನ ಓಪನ್ ಕೂಡ ಮಾಡದೇ ಕೀ ಗೊಂಚಲ ಸಮೇತ ಬಂದಿದ್ದಾರೆ ಎಂದರೆ ಏನೋ ವಿಷಯ ಇರಲೇಬೇಕು. ಅದೂ ಕೂಡ ಕಳೆದ ನಾಲ್ಕಾರು ವರ್ಷದಲ್ಲಿ ತನ್ನ ಮುಖ ಕೂಡ ನೋಡಿಲ್ಲದ ಮನುಷ್ಯ. ಕಿಣಿ ಮಾಮ್ ಗೆ ಏನು ಹೇಳಬೇಕು ಎಂದು ತೋಚಲಿಲ್ಲ. ತನ್ನದೇ ವೃತ್ತಿಯಲ್ಲಿರುವ ತನಗಿಂತ ಕಿರಿಯ. ತಾನೇನೂ ಎಂದೂ ವೈರಿ ಎಂದು ಪರಿಗಣಿಸದೇ ಇದ್ದರೂ ಕೂಡ ಪೈಪೋಟಿ, ತಾನು ಅವನಿಗಿಂತ ನಾಕಾಣೆ ಎಂಟಾಣೆ ಕಡಿಮೆಗೆ ಮಾಲು ಕೊಟ್ಟದ್ದು ಇದೆ. ಅದು ವೃತ್ತಿ ಧರ್ಮ. ಆದದ್ದಾಗಲಿ ಅಂತ ಎದ್ದವರೇ ಬನ್ನಿ ಶೆಟ್ಟರೇ ಎಂದು ಕರೆದು, ಅಂಗಡಿಯ ಒಳಗಿನ ಅಕ್ಕಿ ಮೂಟೆಯ ಮೇಲೆ ಜಾಗ ಮಾಡಿ ಕೊಟ್ಟರು. “ಕಿಣಿ ಮಾಮ್, ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ. ಅದನ್ನ ಹೇಳಲು ನಿಮಗಿಂತ ಸರಿಯಾದ ಜನ ನಂಗೆ ಕಾಣ್ಲಿಲ್ಲ. ಹಾಗಾಗಿ ಸೀದಾ ಎದ್ದು ನಿಮ್ಮ ಹತ್ರ ಬಂದಿದ್ದು ನಾನು” ಎಂದವರೇ ಕಿಣಿಯವರ ಮುಖ ನೋಡಿದರು, ನಾರಾಯಣ ಶೆಟ್ಟರು. ಕಿಣಿ ಮಾಮ್ ಗೆ ತಲೆ ಗುಂಯ್ ಗುಡುತ್ತಿತ್ತು. ಹುಂ, ಹೇಳಿ ಎನ್ನುವಂತೆ ತಲೆ ಹಂದಾಡಿಸಿದ ಕಿಣಿ ಮಾಮ್, ಏನಿರಬಹುದು ಈ ಮನುಷ್ಯನ ಮನಸ್ಸಲ್ಲಿ ಎನ್ನುವಂತೆ ಶೆಟ್ಟರ ಮುಖವನ್ನೇ ನೋಡಿದರು. “ನನ್ನ ಮಗ ಅಮೆರಿಕದಲ್ಲಿದ್ದಾನೆ. ನನ್ನ ಹತ್ರ ಬಾ ಅಂತ ಕರಿತಾ ಇದ್ದಾನೆ. ನಂಗೆ ಹೋಗ್ಲಿಕ್ಕೆ ಮನಸ್ಸಿಲ್ಲ. ಆದರೂ ಕೂಡ ಹೋಗ್ದೇ ಇರ್ಲಿಕ್ಕೂ ಆಗ್ತಾ ಇಲ್ಲ. ಅವ ಕರಿವಾಗ ಅಲ್ಲ ಹೇಳ್ಲಿಕ್ಕೂ ಇಲ್ಲ. ಅಲ್ಲದೇ ವೈವಾಟ್ ಕೂಡ ಅಂತದ್ದೇನೂ ಇಲ್ಲ. ನಿಮಗೆ ಗೊತ್ತಿಲ್ಲದ್ದು ಕೂಡ ಅಲ್ಲ. ವ್ಯಾಪಾರ ಮೊದಲಿಗಿಂತ ಡಲ್ ಉಂಟು. ಈಚೆದ್ದು ತೆಗೆದು ಆಚೆ ಹಾಕುದು ಅಷ್ಟೆ. ಮಗ ಒತ್ತಾಯ ಮಾಡಿ ಕರಿತಾ ಇದ್ದಾನೆ. ನಾನು ಬೇಡ ಅಂತ ಈಗ ಸುಮ್ಮನಿದ್ದು ನಾಳೆ ಹೋಗಬೇಕಿತ್ತು ಅಂತ ಆಸೆ ಆಗಿ, ಆವಾಗ ಅವ ಮನಸ್ಸು ಮಾಡದಿದ್ರೆ ಎಂತ ಮಾಡುದು ಅನ್ನುವ ಚಿಂತೆ ಬೇರೆ. ಹೀಗಾಗಿ ನನ್ನ ಅಂಗಡಿಯನ್ನು ಬಂದು ಮಾಡಿ, ಮಗನೊಟ್ಟಿಗೆ ಅಮೆರಿಕಕ್ಕೆ ಹೋಗಿ ಇರ್ತೇನೆ. ಅಲ್ಲಿ ಎಷ್ಟು ಕಾಲ ಇರುದು, ಹೇಗೆ ಏನು ಅಂತೆಲ್ಲ ಗೊತ್ತಿಲ್ಲ. ವಾಪಸ್ಸು ಬಂದರೆ ಮನೆ ಅಂತೂ ಉಂಟು. ಮಗ ಕೈ ಬಿಡ್ಲಿಕ್ಕಿಲ್ಲ. ಖರ್ಚಿಗೆ ಕೊಟ್ಟಾನು. ನಾನು ಸುಮ್ಮನೆ ಬಂದ್ ಮಾಡಿ ಹೋದ್ರೆ ಅಂಗಡಿಯ ಅಕ್ಕಿ ಬೇಳೆ ಎಲ್ಲ ಇಲಿ ತಿಂದು ಹಾಳು ಮಾಡೀತು. ಹಾಗಾಗಿ ನೀವು ನಿಮ್ಮ ಅಂಗಡಿಗೆ ಬೇಕಾದ್ದು ತಕೊಂಡ್ರೆ ನಿಮಗೆ ಹೇಗೂ ವ್ಯಾಪಾರ ಆಗಿ ಹೋಗ್ತದೆ, ವೇಸ್ಟ್ ಸಾ ಆಗುದಿಲ್ಲ. ಇದ್ಕೆ ನೀವೆಂತ ಹೇಳ್ತೀರಿ ಕಿಣಿ ಮಾಮ್ ಎಂದು ಒಂದೇ ಉಸಿರಿಗೆ ಶೆಟ್ಟರು ತಮ್ಮ ಯೋಜನೆಯನ್ನ ಹೇಳಿ ಮುಗಿಸಿದರು.  
ಕಿಣಿ ಮಾಮ್ ಗಾಜಿನ ಬಾಟಲಿನ ಮೇಲೆ ಇಲ್ಲದ ಧೂಳನ್ನು ಹುಡುಕುತ್ತ, ಬಟ್ಟೆಯಿಂದ ಕೊಡವುತ್ತ “ನೋಡಿ ಶೆಟ್ರೇ, ನೀವು ಹೀಗೆ ಸೀದ ಬಂದು ಮಾತಾಡಿದ್ದು ಭಾರಿ ಖುಷಿ ಆಯ್ತು ನಂಗೆ. ಆದ್ರೆ ನಿಮ್ಮ ಪ್ರಪೊಸಲ್ ಎಂತ ಮಾಡುದು ಅಂತ ರಪಕ್ಕೆ ಹೇಳ್ಳಿಕ್ಕೆ ಆಗುದಿಲ್ಲ. ನೀವು ಹೇಳುದು ಒಂದು ಲೆಕ್ಕದಲ್ಲಿ ಕರೆಕ್ಟ್ ಉಂಟು. ಆದ್ರೆ ಹುಟ್ಟಿ ಬೆಳೆದ ಊರು ಬಿಟ್ಟು ಹೋಗ್ಲಿಕ್ಕೆ ಆಗ್ತದಾ? ಅಲ್ಲಿ ಮಾಲಿಂಗೇಶ್ವರನ ರಥೋತ್ಸವ ಸಿಗುದಿಲ್ಲ ಗೊತ್ತುಂಟಲ್ಲ” ಎಂದು ಸುಮ್ಮನೇ ಬಾರದ ನಗುವನ್ನ ಜೋರು ನಕ್ಕು ವಾತಾವರಣ ಹಗುರ ಮಾಡಲು ನೋಡಿದರು. ಆದ್ರೆ ಶೆಟ್ರು “ ನೋಡಿ ಕಿಣಿ ಮಾಮ್, ಅದನ್ನೆಲ್ಲ ಯೋಚನೆ ಮಾಡಿದ್ದೇನೆ. ಅಷ್ಟಕ್ಕೂ ನಾನೇನು ಅಲ್ಲಿಯೇ ಇರ್ಲಿಕ್ಕೆ ಹೋಗುದಿಲ್ಲ, ಬರುವ ಅಂದಾಜುಂಟು. ನೀವು ಹೇಳಿ ಈಗ, ನನ್ನ ಅಂಗಡಿ ಮಾಲು ತಕೊಳ್ತೀರಾ? ಸ್ವಲ್ಪ ಹೆಚ್ಚು ಕಡಿಮೆ ಮಾಡುವ. ನಂಗಂತೂ ಇನ್ನು ಅದ್ರಲ್ಲಿ ಉಮೇದಿಲ್ಲ. ನೀವು ಬ್ಯಾಡ ಅಂದ್ರೆ ಮುಂದಿನ ದಾರಿ ನೋಡಬೇಕು ಎಂದು ಹೊರಟು ನಿಂತರು. ಕಿಣಿಯವರ ಅಂಗಡಿಯಿಂದ ಶೆಟ್ಟರು ಹೊರಗೆ ಬರುವುದನ್ನು ನೋಡಿದ ಬಸ್ಸು ಕಾಯುತ್ತಿದ್ದ ಮಂದಿಗೆ ಆಶ್ಚರ್ಯ ಆಘಾತಗಳು ಒಟ್ಟಿಗೇ ಆದವು. ಕಿಣಿಯವರು ಶೆಟ್ಟರನ್ನು ಉದ್ದೇಶಿಸಿ ಹೇಳಿದ “ನಿಮಗೆ ನಾನು ನಾಳೆ ಹೇಳ್ತೇನೆ” ಎಂಬ ಮಾತು ಮಾತ್ರ ಹೊರಗೆ ರಸ್ತೆಯಲ್ಲಿ ಸುಳಿದು ಎಲ್ಲರ ಕಿವಿಗಳ ಒಳ ಸೇರಿಕೊಂಡಿತು. ಈ ಅಮೋಘ ವಾಕ್ಯದ ಹಿಂದಿನ ಕಾರ್ಯ ಕಾರಣಗಳು ಏನಿರಬಹುದು ಎಂಬುದರ ಬಗ್ಗೆ ಇಡೀ ಗೋಳಿಬೈಲಿನ ವಿವಿಧ ಗುಂಪುಗಳು ದಿನವಿಡೀ ಚರ್ಚೆ ನಡೆಸಿದವು. ಶೆಟ್ಟರಾಗಲಿ, ಕಿಣಿ ಮಾಮ್ ಆಗಲಿ ಇಬ್ಬರೂ ಗುಟ್ಟನ್ನು ಬಿಟ್ಟುಕೊಡದೇ ಆ ರಾತ್ರಿಯ ಮಟ್ಟಿಗೆ ಗೋಳಿಬೈಲನ್ನ ರೋಚಕ ಊಹಾಪೋಹಗಳ ಮುಗಿಲು ಮುಸುಕಲು ಬಿಟ್ಟರು.  
ಶೆಟ್ಟರ ಮಗ ಸಂಜೀವ ಅಮೆರಿಕದಿಂದ ಬಂದು ಒಂದು ತಿಂಗಳ ಹೊತ್ತಿಗೆ, ಕಿಣಿ ಮಾಮ್, ಹೆಂಡತಿ ಮಕ್ಕಳಿಗೂ ಹೇಳದೇ ಶೆಟ್ಟರಂಗಡಿಯ ಸಾಮಾನುಗಳನ್ನ ತನ್ನ ಅಂಗಡಿಗೆ ತರಿಸಿಕೊಂಡರು. ನ ಭೂತೋ ನ ಭವಿಷ್ಯತಿ ಎಂಬ ಈ ವರ್ತಮಾನವನ್ನು ಇಡಿಯ ಗೋಳಿಬೈಲು ಕಂಗಾಲಾಗಿ ನೋಡಿತು. ಶೆಟ್ಟರು ಅದಾಗಿ ಹದಿನೈದು ದಿನಕ್ಕೇ ಮಗನ ಸಮೇತ ಊರು ಬಿಟ್ಟರು. ಹೋಗುವ ಮುನ್ನ ಕಿಣಿ ಮಾಮ್ ಬಳಿ ಬಂದು ಊರಿಗೆ ಊರೇ ನೋಡುತ್ತಿರುವ ಹಾಗೆ ಕಿವಿಯಲ್ಲೇನೋ ಅಂದು ಹೋದರು. ಕಿಣಿ ಮಾಮ್ ಗೆ ಶೆಟ್ಟರು ಬಿಟ್ಟಿಯಾಗಿ ಎಲ್ಲ ಮಾಲು ಕೊಟ್ಟಿದ್ದಾರಂತೆ ಎಂದು ಒಂದಿಷ್ಟು ಜನರಂದರೆ ಇಲ್ಲ ಕಿಣಿ ಮಾಮ್ ಕಡಕ್ ಜನ, ಅವರು ದುಡ್ಡು ಕೊಟ್ಟೇ ಕೊಟ್ಟಿರುತ್ತಾರೆ, ಪೈಸೆ ಕೂಡ ಕಡಿಮೆ ಮಾಡಿರುವುದಿಲ್ಲ ಎಂದು ಇನ್ನೊಂದು ಪಂಗಡ ಹೇಳಿತು. ಶಾಲೆ ಹೆಡ್ ಮಾಸ್ಟ್ರು ರಾಂಭಟ್ರು ’ಕಿಣಿ ಮಾಮ್, ಶೆಟ್ರು ನಿಮ್ಮ ಕಿವಿಯಲ್ಲಿ ಎಂತ ಹೇಳಿದ್ದು ಮಾರ್ರೆ?’ ಎಂದಿದ್ದಕ್ಕೆ, “ಎಂತ ಎಲ್ಲ ಅಲ್ಲಿಗೆ ಹೋಗಿ ಪತ್ರ ಬರಿತೇನೆ ಅಂದ್ರು” ಎಂದಿದ್ದನ್ನು ನಿಜವಾಗಿಯೂ ಶೆಟ್ಟರ ಪತ್ರ ಬರುವವರಿಗೆ ಅವರು ನಂಬಿರಲಿಲ್ಲ. ಕುಶಲ ಸಮಾಚಾರದ ವಿವರಗಳಿದ್ದ ಪತ್ರದ ಜೊತೆಗೆ ಒಂದು ಫೋಟೋ ಕೂಡ ಇತ್ತು. ಆ ಫೋಟೋದಲ್ಲಿ ಶೆಟ್ಟರು ತಮ್ಮ ಮಗ ಮತ್ತು ಹೊಟ್ಟೆ ದೊಡ್ಡದಾಗಿದ್ದ ಸೊಸೆಯ ಜೊತೆ ನಿಂತುಕೊಂಡಿದ್ದರು. ಅವರ ಹಿನ್ನೆಲೆಯಲ್ಲಿ ವಾಲ್ ಮಾರ್ಟ್ ಎಂಬ ಅಗಾಧ ಬೋರ್ಡೊಂದು ಕಣ್ಣಿಗೆ ರಾಚುವಂತೆ ಕಾಣುತ್ತಿತ್ತು.(ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಗಳಿಸಿದ ಕಥೆ)