ಗುರುವಾರ, ಸೆಪ್ಟೆಂಬರ್ 30, 2021

ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ!

 We have nothing to lose and a world to see

*

ಕಾಶಿಯ ಗಲ್ಲಿಯಲ್ಲಿ ಸಿಕ್ಕ ವೃದ್ಧರೊಬ್ಬರು “ಏನ್ರಯ್ಯ ನೀವುಗಳು ಕ್ಯಾಮರಾ ಹಿಡಿದ ಭಯೋತ್ಪಾದಕರು” ಎಂದು ಗದರಿದರು. ನಾನು ಅವರೆದುರಿಗಿನ ಪೋರನೊಬ್ಬ ಸೈಕಲ್ ಓಡಿಸುತ್ತಿರುವುದನ್ನ ಕ್ಲಿಕ್ಕಿಸುತ್ತಿದ್ದೆ. ಅಜ್ಜಾ, ನೋಡಿ ನಾವು ಭಯೋತ್ಪಾದಕರಲ್ಲ, ನಗು ಉತ್ಪಾದಿಸೋರು. ನಿಮ್ಮ ಈ ಮೊಮ್ಮಗ ಇನ್ನು ಹತ್ತು ವರ್ಷ ಬಿಟ್ಟು ಈ ಫೋಟೋ ನೋಡಿದರೆ ಖುಷಿಯಾಗಿ ನಗ್ತಾನೆ ತಾನೇ. ಈ ಕ್ಷಣ ನನ್ನ ಕ್ಯಾಮರಾದಲ್ಲಿ ಬಂಧಿಯಾಗಿದೆ ನೋಡಿ ಎಂದೆ. ಅರೇ, ನಾನು ಹೀಗೆ ಯೋಚನೇನೇ ಮಾಡಿರ್ಲಿಲ್ಲ ಕಣಯ್ಯ, ಪರ್ವಾಗಿಲ್ಲ, ನೀನು ನನ್ನ ಯೋಚನೇನೇ ಬದ್ಲಾಯಿಸಿ ಬಿಟ್ಟೆ ಎಂದು ಬೆನ್ನು ತಟ್ಟಿ ಹೋದರು.

*

ಮೈಲುಗಟ್ಟಲೆ ದೂರಕ್ಕೆ ಮೊಬೈಲ್ ಸಿಗ್ನಲ್ ಕೂಡ ಸಿಗದ, ಮೈನಸ್ ಮೂವತ್ತು ಡಿಗ್ರಿಯ ಹಿಮ ನದಿಯ ಮೇಲೆ ನಡೆದುಕೊಂಡು ಚಾರಣ ಹೋಗುತ್ತಿದ್ದಾಗ, ನಮ್ಮ ಜೊತೆಗಿದ್ದ ಅಡುಗೆ ಸಹಾಯಕ, ತೆಳ್ಳಗಿನ ನಾಯೀನಾಲಗೆ ತರದ ಶೂ ಹಾಕಿಕೊಂಡು ಬಡಬಡನೆ ನಡೆದುಕೊಂಡು ಹೋಗುತ್ತಿದ್ದ. ನಾವೋ, ಅದೇನೇನೋ ಮುಳ್ಳು ತಂತಿ ತರದ್ದೆಲ್ಲ ಶೂಗೆ ಚುಚ್ಚಿಕೊಂಡು ಪಡಬಾರದ ಪಾಡು ಪಟ್ಟುಕೊಂಡು ನಡೀತಿದ್ದೆವು. ಅವನಿಗೋ, ಬೆನ್ನ ಮೇಲೆ ಮೂವತ್ತು ಕೇಜಿ ತೂಕದ ಭಾರ. ಏನಯ್ಯ ಅದು ಹೇಗೆ ಇಷ್ಟು ಆರಾಮಾಗಿ ನಡೀತಿ ಎಂದರೆ, ನಿಮಗೆ ಇದು ಟ್ರೆಕ್ಕಿಂಗು ಸಾರ್, ನಂಗೆ ಜೀವನ . ನಮ್ ಹಳ್ಳಿ ಇಲ್ಲೇ  ಐದು ಮೈಲು ಮುಂದೆ ಇದೆ ಸರ್, ನಾನು ಹೋಗಿ ಮನೇಲಿ ಅಮ್ಮಂಗೆ ಹಿಟ್ಟು ಕೊಟ್ಟು ವಾಪಸ್ ಬಂದು ನಿಮ್ಗೂ ಅಡುಗೆ ಮಾಡಬೇಕು. ಅವಳಿಗೆ ನಾನು ಮೊನ್ನೆಯೇ ಬರ್ತೀನಿ ಅಂದಿದ್ದೆ. ಅಡುಗೆಗೆ ಏನೂ ಉಳಿದಿಲ್ಲ, ಬೇಗ ಬಾ ಅಂದಿದ್ಲು. ನನ್ ಗ್ರಹಚಾರ, ಹವಾಮಾನ ಕೈ ಕೊಟ್ಟು ನಮ್ಮ ಪ್ರಯಾಣ ತಡವಾಯಿತು. ನನ್ನ ನಂಬ್ಕೊಂಡು ಅಮ್ಮ ಉಪವಾಸ ಕೂತಿರ್ತಾಳೆ ಅಂತ ಅಂದುಬಿಟ್ಟ.

*

 ಚಿಲ್ಕಾ ಸರೋವರದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅಲ್ಲಿನ ದೋಣಿ ಓಡಿಸುವವರು ನಿಮ್ಮನ್ನ ಸಣ್ಣ ಸಣ್ಣ ನಡುಗಡ್ದೆಗಳ ಬಳಿ ಕೊಂಡೊಯ್ದು ನಿಲ್ಲಿಸುತ್ತಾರೆ. ಅಲ್ಲಿ ದಢಬಢನೆ ದೊಡ್ಡ ಬಕೇಟುಗಳನ್ನು ತಂದಿಟ್ಟು, ನಮ್ಮ ಕಣ್ಣೆದುರಿಗೇ ಚಿಪ್ಪುಗಳನ್ನ ಒಡೆದು, ಮುತ್ತುಗಳನ್ನ ತೋರಿಸುತ್ತಾರೆ. ಈಗ ತಾನೇ ಫ್ರೆಶ್ಶ್ಯಾಗಿ ಸಿಕ್ಕಿರುವ ನೈಸರ್ಗಿಕ ಅನರ್ಘ್ಯ ಮುತ್ತುಗಳನ್ನ ಕೊಳ್ಳದೇ ಇದ್ದರೇ ನಮ್ಮ ಬದುಕೇ ವ್ಯರ್ಥ ಎಂದು ಚೆನ್ನಾಗಿ ಬಣ್ಣಿಸುವ ಕಲೆ ಆ ಮೀನುಗಾರ ಹುಡುಗರಿಗೆ ಸಿದ್ಧಿಸಿದೆ. ಆದರೆ ಅಂತರ್ಜಾಲದಲ್ಲಿ ಆ ಬಗ್ಗೆ ನೋಡಿ, ಅದೊಂದು ನಕಲಿ ಟೋಪಿ ಕಾರ್ಯಕ್ರಮ ಎಂಬುದನ್ನ ಅರಿತಿದ್ದ ನಾನು, ಅವನಿಗೆ ಅದನ್ನ ಹಾಗೆಯೇ ಹೇಳಿಯೂ ಬಿಟ್ಟೆ. ಒಂದು ಕ್ಷಣ ನನ್ನನ್ನ ಗುರಾಯಿಸಿದ ಆ ಹುಡುಗ ತಕ್ಷಣ ನಕ್ಕು ಬಿಟ್ಟ. “ಅಯ್ಯೋ ಎಷ್ಟ್ ಜನ ಯೂ ಟ್ಯೂಬ್ ನೋಡ್ತಾರೆ ಸರ್? ಇವತ್ ಹದಿನೈದು ಸಾವಿರ ಸಂಪಾದ್ನೆ ಮಾಡಿದೀನಿ. ನಿಮ್ಮ ನೆಕ್ಸ್ಟ್ ಬೋಟಲ್ಲಿ ಬರೋರು ತಗೋತಾರೆ ಬಿಡಿ. ನಿಮ್ಮ ಬುದ್ದಿವಂತಿಕೆ ನಿಮ್ಮಲ್ಲೇ ಇಟ್ಕೊಳಿ. ನಮ್ ಹೊಟ್ಟೇಪಾಡು ನಾವ್ ಮಾಡ್ಕೋತೀವಿ” ಅಂತದು ಆ ಬಕೇಟ್ ಎತ್ತಿಕೊಂಡು ಮುಂದಿನ ಬೋಟ್ ಕಡೆಗೆ ನಡೆದ.

*



ತಿರುಗಾಟ, ಬಹಳಷ್ಟನ್ನ ಹೊಸದಾಗಿ ಅರ್ಥ ಮಾಡಿಸುತ್ತದೆ.  ಒಂದಿಷ್ಟನ್ನ ನಾವು ಯಾರಿಗೋ ಹೇಳಿಕೊಟ್ಟರೆ, ಇನ್ನೊಂದಿಷ್ಟನ್ನ ನಾವೇ ಸ್ವೀಕರಿಸುತ್ತೇವೆ. ಪಯಣದಲ್ಲಿರುವ ಹಿತವೇ ಅದು. ಪ್ರವಾಸ ಅನ್ನುವ ಪದಕ್ಕಿಂತ, ಪಯಣ ಅನ್ನುವುದರಲ್ಲೇ ಜಾಸ್ತಿ ಸುಖವಿದೆಯೇನೋ. ಇವತ್ತು ವಿಮಾನಯಾನದ ದರಗಳು ಮೊದಲಿಗಿಂತ ಅಗ್ಗವಾಗಿದೆ. ಕೊರೋನಾ ಕಾರಣದಿಂದಾಗಿ ಪ್ರವಾಸೀತಾಣಗಳಲ್ಲಿ ಉಳಿದುಕೊಳ್ಳುವ- ಊಟ ತಿಂಡಿಯ ದರಗಳೂ ಕಡಿಮೆ ಆಗಿವೆ. ಹೀಗಾಗಿ ’ಪ್ರವಾಸ’ ಹೋಗಬೇಕು ಎನ್ನುವ ಯೋಚನೆ ಬಹುಮಂದಿಗೆ ಬಂದಿರಬಹುದು. ಆದರೆ, ನೀವು ಪ್ರವಾಸ ಹೋಗಬೇಡಿ. ಪ್ರಯಾಣ ಮಾಡಿ!

ಇದು ಪ್ಯಾಕೇಜು ಟೂರುಗಳ ಕಾಲ. ಒಂದಿಷ್ಟು ಸ್ನೇಹಿತರೋ/ ಕುಟುಂಬದವರೋ ಸೇರಿಕೊಂಡು, ಹತ್ತಾರು ವೆಬ್ ಸೈಟುಗಳನ್ನು ಜಾಲಾಡಿ ಕೊನೆಗೆ ಯಾರನ್ನೋ ಹಿಡಿದು ಒಂದು ದರ ಕುದುರಿಸಿ ಬುಕ್ ಮಾಡುವುದು ಮೊದಲ ಹಂತ. ನಂತರ, ಅವರು ಹೇಳಿದ ಜಾಗಗಳಿಗೆ ಜೈ ಅಂದು, ಕರೆದುಕೊಂಡು ಹೋಗುವ ಮೂರು ಊರುಗಳನ್ನ ನಾಲ್ಕು ದಿನಗಳಲ್ಲಿ ನೋಡಿ, ಅಲ್ಲಿನ ಪ್ರಮುಖ ತಾಣಗಳ ಎದುರಿಗೆ ನಿಮ್ಮ ಸೆಲ್ಫೀ ತೆಗೆದು ಸಾಮಾಜಿಕ ಜಾಲತಾಣಕ್ಕೆ ಸೇರಿಸಿದರೆ, ಈ ವರ್ಷದ ಪ್ರವಾಸ ಕಾರ್ಯಕ್ರಮ ಮುಗಿದ ಹಾಗೆ. 

ಆದರೆ, ಹೀಗೆ ಮಾಡುವುದರಿಂದ ನಿಮಗೆ ಅಲ್ಲಿಯ ಸಾಂಸ್ಕೃತಿಕ ವೈವಿಧ್ಯತೆಯಾಗಲೀ, ಜನ ಸಾಮಾನ್ಯರ ಯೋಚನ ಲಹರಿಯೇ ಆಗಲಿ- ತಿಳಿಯುವುದು ಕೊಂಚ ಕಷ್ಟ. ಬೆಳಗ್ಗೆ ಹತ್ತು ಗಂಟೆಗೆ ಒಂದು ಕೆರೆ ಕಂಡ ಮೇಲೆ ಹನ್ನೊಂದಕ್ಕೆ ಇನ್ನೊಂದು “ವ್ಯೂ ಪಾಯಿಂಟ್” ನಿಮ್ಮನ್ನ ಕಾಯುತ್ತಿರುತ್ತದೆ.  ಮಧ್ಯಾಹ್ನಕ್ಕೆ ನಿಮ್ಮದೇ ಊರಿನ ಸ್ಪೆಷಲ್ ರೆಸ್ಟೋರೆಂಟ್! ಅರೇ, ಇಡ್ಲಿ ವಡೆ ಇಲ್ಲೂ ಇದೆ! ಒಟ್ಟೂ ಇಡೀ ದಿನ ಧುಮುಧುಮು ಎಂದು ಓಡಾಡಿ ಬಸ್ಸೋ ಕಾರೋ ಹತ್ತಿ ಸಂಜೆಗೆ ಹೋಟೇಲು ರೂಮಿಗೆ ಬಂದು-ಮತ್ತೆ ಮಾರನೇ ಬೆಳಗ್ಗೆ ಇದೇ ಚಕ್ರ  ಮರುತಿರುಗುತ್ತದೆ.

ಒಂದೆರಡು ದಿನ ಹೆಚ್ಚಾದರೂ ಪರವಾಗಿಲ್ಲ. ನೀವು ಹೋಗುವ ಊರುಗಳ ಸಾರ್ವಜನಿಕ ಸಾರಿಗೆಯಲ್ಲಿ ಪಯಣಿಸಿ. ಮನೆಯ ಸುಖದೊಳಗೆ ಕೂತು ಹೋಟೆಲು ಬುಕ್ ಮಾಡಿ ಹೋಗುವ ಬದಲು, ಅಲ್ಲೇ ಹೋಗಿ ಚೌಕಾಸಿ ಮಾಡಿ. ರಸ್ತೆ ಪಕ್ಕದ ಪುಟ್ಟ ಚಾ ದುಕಾನಿನ ಮಣ್ಣಿನ ಕಪ್ಪಿನ ಹಬೆಯಾಡುವ ಚಹಾ ಕುಡಿಯಿರಿ. ನಿಮ್ಮೂರಿನ ದೋಸೆ ಎಲ್ಲಿ ಸಿಕ್ಕೀತು ಎಂದು ಹುಡುಕಿಕೊಂಡು ಹೋಗುವ ಬದಲು, ಅದೇ ಆ ಮರದ ಕೆಳಗಿನ ಗೂಡಂಗಡಿಯ ಪೂರೀ ಸಬ್ಜೀ ತಿನ್ನಿರಿ. ಬೆಳಗಿಂದ ಸಂಜೆಯೊಳಗೆ ಮೂರು ಕೋಟೆ ಎರಡು ದೇವಸ್ಥಾನ  ಒಂದು ಮ್ಯೂಸಿಯಂ ನೋಡುತ್ತೇನೆ ಎನ್ನುವ ಹಠಕ್ಕಂತೂ ಬೀಳಲೇ ಬೇಡಿ. ಆವಾಗಲೇ ನೀವು “ಪ್ರವಾಸಿಗರಾಗುವುದು”. ಬದಲಿಗೆ, ಪಯಣಿಗರಾಗಿ.



ಪಟ್ಟದಕಲ್ಲಿನ ದೇಗುಲದಾಚೆಯ ಆಲದಮರದ ಕೆಳಗೆ ಗಟ್ಟಿ ಕೆನೆ ಮೊಸರು, ಹುಚ್ಚೆಳ್ಳು ಚಟ್ನಿ ಜೋಳದ ರೊಟ್ಟಿ ಕೊಡುವ ಅಜ್ಜಿಯ ಬಳಿ ಸುಖ ಕಷ್ಟ ವಿಚಾರಿಸಿ. ಅವರ ಊರಿನ ಸುದ್ದಿ ಕೇಳಿ. ಬನಾರಸ್ಸಿನ ಗಲ್ಲಿಗಳಲ್ಲಿನ ಹಳೇ ಹಳೇ ಪಾನ್ ವಾಲಾ ಗಳನ್ನ ಹುಡುಕಿಕೊಂಡು ಹೋದರೆ, ಅವರ ಬಾಯಲ್ಲಿ ಎಂಥೆಂಥ ರಸವತ್ತಾದ ವಿಷಯಗಳು ಸಿಗಬಹುದು ಗೊತ್ತೆ? ಹಂಪೆಯಲ್ಲಿ ತೆಪ್ಪ ಓಡಿಸುವ ಹುಡುಗ ನಿಮ್ಮನ್ನ ಅದ್ಯಾವುದೋ ಗುಡ್ಡಕ್ಕೆ ಕರೆದುಕೊಂಡು ಹೋಗಿ ಬದುಕಲ್ಲಿ ನೀವೆಂದೂ ಕಂಡಿರದಷ್ಟು ಸೊಗಸಾದ ಸೂರ್ಯಾಸ್ತ ತೋರಿಸಿಯಾನು. ಧೈರ್ಯ ಮಾಡಿ ಒಮ್ಮೆ ಆ ರಿಸ್ಕ್ ತಗೊಳಿ!

ಯಾವುದೇ ಉದ್ದೇಶವೇ ಇಲ್ಲದೇ, ನೀವು ಉಳಿದುಕೊಂಡಿರುವ ಊರಿನ ದಾರಿಗಳಲ್ಲಿ ಅಲೆಯಿರಿ. ಅಲ್ಲಿ ನಿಮಗೋಸ್ಕರವೇ ಕಾಯುತ್ತಿರುವ ಒಂದು ಕಥೆ ಇದ್ದೀತು. ನೀವಲ್ಲಿ ನಡೆದುಕೊಂಡು ಹೋಗದೇ ಇದ್ದರೆ, ನಿಮಗೆ ಆ ಕಥೆ ಸಿಗದೇ, ಕಳೆದೇ ಹೋಗುತ್ತದೆ. ಅಂಥ ದಿವ್ಯ ಘಳಿಗೆಗಳನ್ನು ಎಂದಿಗೂ ದಕ್ಕಿಸಿಕೊಳ್ಳದೇ ಬಿಡಲೇ ಬಾರದು. ಎಂಥದೇ ದೊಡ್ಡ ನಗರವಾದರೂ, ಎಷ್ಟೇ ಗಿಜಿಗುಡುವ ಜಾಗವಾದರೂ, ಅಲ್ಲೊಂದು ಏಕಾಂತದ ಮೂಲೆ ಇದ್ದೇ ಇರುತ್ತದೆ. ಅದನ್ನು ಗುರುತಿಸುವುದನ್ನು ಕಲಿಯಿರಿ. ಅದು, ಇಬ್ಬರು ವೃದ್ಧರು ಚದುರಂಗ ಆಡುತ್ತಿರುವ ಒಂದು ಕಟ್ಟೆಯಾಗಿದ್ದೀತು, ಜಾಮೂನಿನ ಬಾಂಡಲಿಯಿಟ್ಟುಕೊಂಡ ಅಂಗಡಿಯ ಆಚೆಗಿರುವ ಪುಟ್ಟ ಸ್ಟೂಲ್ ಆಗಿದ್ದೀತು. ಧಾವಂತ ಮರೆತು ಅಲ್ಲೊಂದು ಕ್ಷಣ ಕೂತು ನೋಡಿ, ಆಗ ಆ ಊರು ನಿಧಾನಕ್ಕೆ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಯೂನಿಫಾರಂ ಇಲ್ಲದೇ ಕಣ್ಣಲ್ಲಿ ನೀರು ತುಂಬಿಕೊಂಡು ಶಾಲೆಗೆ ಹೊರಟ ಹುಡುಗ ಕಾಣುತ್ತಾನೆ. ಮಗಳನ್ನ ಜೋಪಾನವಾಗಿ ಎತ್ತಿಕೊಂಡು ಹೋಗುವ ಅಮ್ಮ ಕಾಣಿಸುತ್ತಾಳೆ. ಕೆಳಗೆಲ್ಲೋ ಪಾತಾಳದಲ್ಲಿರುವ ನದಿಯಿಂದ ದೊಡ್ಡ ಬಿಂದಿಗೆಯಲ್ಲಿ ನೀರು ಹೊರುವ ವ್ಯಕ್ತಿ ನಿಮ್ಮೆದುರಿಗೇ ನಸುನಗುತ್ತ ಹೋಗುತ್ತಾನೆ. ನಮಗೂ ಆ ಊರಿಗೂ ಅನುಸಂಧಾನವಾಗುವ ಘಳಿಗೆ ಅದು. ಅದನ್ನು ಕಳೆದುಕೊಳ್ಳಬೇಡಿ.

ಜಗತ್ತಿನ ಯಾವುದೇ ಊರಿಗೇ ಹೋದರೂ ಕೂಡ ನಿಮಗೆ ಇಂತ ಅನುಭವ ಆಗುವುದರಲ್ಲಿ ಅನುಮಾನವಿಲ್ಲ. ಆದರೆ ಕಣ್ಣುಕಿವಿಗಳು ತೆರೆದಿರಬೇಕಷ್ಟೇ. ಪಯಣವು ನಮ್ಮ ಅರಿವಿನ ಮಿತಿಯನ್ನ ಹಿಗ್ಗಿಸಬೇಕು. ಆಗಲೇ ಆ ಯಾನಕ್ಕೊಂದು ಅರ್ಥ. ಹಾಗೆಂದು ನಿಮ್ಮ ಎಲ್ಲ ಸುಖವನ್ನೂ ತ್ಯಜಿಸಿ ಇಂತಹ ಸಾಹಸಕ್ಕೆ ಕೈ ಹಾಕಬೇಕು ಎಂದೇನೂ ಈ ಬರಹ ಹೇಳುತ್ತಿಲ್ಲ. ಕೊಂಚವಾದರೂ ನಿಮ್ಮ ಕಂಫರ್ಟ್ ಝೋನ್ ಮೀರಿ, ಹೊಸ ಪ್ರಯತ್ನಕ್ಕೆ ತೆರೆದುಕೊಳ್ಳಿ ಎಂಬುದಷ್ಟೇ ಮನವಿ.

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಚಿತ್ರೀಕರಣಕ್ಕಾಗಿ ನಮ್ಮ ಕಲಾವಿದರೊಬ್ಬರು ಸರ್ಫಿಂಗ್ ಕಲಿಯಬೇಕಾಗಿತ್ತು. ಅಲ್ಲಿನ ಹಿರಿಯರ ಬಳಿ ಸರ್ ಎಷ್ಟು ದಿನ ಬೇಕಾದೀತು ಇದನ್ನ ಕಲಿಯೋಕೆ ಎಂದರೆ, “ನಾನು ಸುಮಾರು ನಲವತ್ತು ವರ್ಷಗಳಿಂದ ಪ್ರತೀ ದಿನ ಕಲೀತಾನೇ ಇದೀನಿ ನೋಡಪ್ಪ” ಅಂತ ನಕ್ಕರು ಅವರು.

ಪಯಣ ಅಂದರೆ, ಕಲಿಕೆ. ಹೊಸದೇನೋ ಕಲಿಯುವ ಉದ್ದೇಶ ನಿಮ್ಮ ಕನಸಿನ ಪಯಣದಲ್ಲಿರಲಿ! ಆಗ, ಪ್ರತೀ ಯಾನಕ್ಕೂ ಗರಿಯೊಂದು ಮೂಡುತ್ತದೆ.


(ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟಿತ)