poem ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
poem ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ನವೆಂಬರ್ 29, 2012

ಕಾಫಿ ಮತ್ತು ಕಾಂತಾ ಸಂಹಿತೆ



ನಿನ್ನೆಯ ಅಚಾತುರ್ಯಕ್ಕೆ ಬೇಸರಿಸಬೇಡ
ಏನೋ ನಡೆದು ಹೋಯಿತು
ಬಿಡು, ಅಂತವಳು ಮಾಡಿದಾಗ
ಸಮಾಧಾನ
ಸುಮ್ಮನೆ ಸದ್ದು ಮಾಡಿದ್ದು ಕಾಫಿ ಟೇಬಲ್ಲು

ಗಾಜಿನ ಮೇಲೆ ಕಂಡ ಪ್ರತಿಫಲನದಲ್ಲೂ ಇಲ್ಲ
ತೇವಭಾವ
ಮರೆಯಬೇಕು ಎನ್ನುವುದಿಲ್ಲ ಆದರೆ
ನೆನಪಿಟ್ಟುಕೊಂಡು
ಚುಚ್ಚಿಕೊಳ್ಳುವುದೂ ಬೇಡ

ಎಂದಾಗ ಏನೋ ಹೇಳಲು ಹೋದ
ಮಾತು ಕಾಫಿಯ
ಹನಿಯೊಡನೆ ಸಿಕ್ಕಿ ಕೆಳಗೆಲ್ಲೋ
ಬಿದ್ದು ಕಳೆದು ಹೋಯಿತು
ಹುಡುಕಲು ಹೋಗಲಿಲ್ಲ

ಸಮಾಧಾನ ಮಾಡಿಕೋ
ರಿಲ್ಯಾಕ್ಸ್,
ಅಂತಂದು
ಹೆಗಲು ಸವರಿ ಎದ್ದು ಹೋದಾಗ
ವೈಟರ್ ಮಧ್ಯ ಬಂದಿದ್ದು ಯೋಗಾಯೋಗ


ಹೊರಗೆ ಬಿಸಿಲು ಜೋರಿದೆ.
ಅವಳ ಕಾಫಿಯ ಕಪ್ಪು ಮೂಡಿಸಿದ್ದ
ಹಸಿವರ್ತುಲ ನಿಧಾನ
ನಿಧಾನವಾಗಿ ಒಣಗುತ್ತಿದೆ
ತೃಷೆಯೂ.

ಮಂಗಳವಾರ, ನವೆಂಬರ್ 06, 2012

ಹಳೆಯದೊಂದು ಖುಷಿ ನೆನಪಿಸಿಕೊಂಡು

ನನ್ನ ಬ್ಲಾಗನ್ನ ಹಿಂದಿನಿಂದಲೂ ನೋಡಿಕೊಂಡು ಬಂದವರಿಗೆ ನಾನು ಕವನಗಳನ್ನ ಹೆಚ್ಚಾಗಿ ಬರೆಯುತ್ತಿದ್ದದ್ದು ಗೊತ್ತಿದೆ. ಬ್ಲಾಗಿನಿಂದಾಗಿಯೇ ನಾನು ಕವನಗಳನ್ನ ಬರೆದೆ ಅಂದರೂ ತಪ್ಪಾಗಲಾರದು. ನನ್ನ ಕವನಗಳನ್ನ ಮೆಚ್ಚಿ ಹಾರೈಸಿದ ಗೆಳಯ ಬಳಗದಿಂದಾಗಿಯೇ ನನ್ನ ಕವನ ಸಂಕಲನ ಕೂಡ ಮೂರು ವರ್ಷಗಳ ಕೆಳಗೆ ಪ್ರಕಟಣೆಯ ಭಾಗ್ಯ ಕಂಡಿತು. ನನ್ನ ಕವನ ಸಂಕಲನವನ್ನ ಬಿಡುಗಡೆ ಮಾಡೋಕೆ ನನ್ನ ಮೆಚ್ಚಿನ, ಕನ್ನಡದ ಹಿರಿಯ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರು ಬಂದಿದ್ದರು. ನನ್ನ ಕವನಗಳನ್ನ ಓದಿ, ಅವುಗಳ ಬಗ್ಗೆ ಚೆನ್ನಾದ ಮಾತುಗಳನ್ನಾಡಿ ಹರಸಿದ್ದರು ಎಚ್ಚೆಸ್ವಿ. ಚೆನ್ನಾಗಿ ಬರೀತೀಯಾ, ಕವನಗಳನ್ನ ಬರಿಯೋದನ್ನ ಮುಂದುವರಿಸು ಎಂದಿದ್ದರು. ಅದ್ಯಾಕೋ ನಾನು ಗದ್ಯದ ಕಡೆಗೆ ಜಾಸ್ತಿ ಗಮನ ಕೊಟ್ಟೆ ಆಮೇಲಾಮೇಲೆ.

ನನ್ನ ಕವನ ಸಂಕಲನ ಬಿಡುಗಡೆ ಮಾಡಿದ ಎಚ್ಚೆಸ್ವಿಯವರು, ಆಮೇಲೆ ಬಹಳ ದಿನಗಳ ನಂತರ, ಪ್ರಾಯಶಃ ವರುಷದ ಬಳಿಕ ವರ್ಲ್ಡ್ ಕಲ್ಚರಿನ ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕವರು, "ನಿಮ್ಮ ಆ ರಂಗೋಲಿ ಕವನ ಭಾರಿ ಚೆನ್ನಾಗಿದೆ ನೋಡಿ ಇವರೇ. ನಾನು ಅದರಿಂದ ಸ್ಪೂರ್ತಿಗೊಂಡು ಒಂದು ಕವನ ಬರ್ದಿದೀನಿ.ನನ್ನ ಮುಂದಿನ ಸಂಕಲನದಲ್ಲಿ ಆ ಕವನ ಇದೆ" ಅಂದರು. ನಂಗೆ ಭಾರಿ ಖುಷಿ ಆಗಿದ್ದಂತೂ ಹೌದು.  ನನ್ನಂತಹ ಸಾಮಾನ್ಯನ ಕವನ ಇಷ್ಟಪಟ್ಟು ಅವರು ಕವನ ಬರೆದ್ರೆ ಸಂತೋಷ ಆಗದೇ ಇದ್ದೀತೆ?

ನನ್ನ ಕವನ ಹೀಗಿದೆ:

ಹೀಗೊಂದು ಬೆಳಗು

ಕಾರ್ತಿಕದ ಹೊಸ ಬೆಳಗು, ಚಳಿಯು ಬಹಳಿತ್ತು
ದೇಗುಲದ ಘಂಟೆ ತಾನ್ ಇನ್ನು ಮಲಗಿತ್ತು.
ಅವಳಾಗಲೇ ಎದ್ದು ಅಂಗಳದಲಿದ್ದಳು
ರಂಗೋಲಿ ಚುಕ್ಕಿಯಲಿ ತಾನೆ ಚಿತ್ರವಾಗಿದ್ದಳು

ಅದಾವುದೋ ಭಂಗಿಯಲಿ ಕಟೆದಿಟ್ಟ ಹಾಗೆ,
ಕೂತಿದ್ದಳವಳು, ಇಳಿದು ಬಂದಂತೆ ಸೊಬಗೆ.
ಕೈಬೆರಳುಗಳೋಡುತಿವೆ, ಸೇರಿಸಲು ಬಂಧ
ಕಣ್ಣಾಲಿಗಳ ಚಲನೆ, ರಂಗವಲ್ಲಿಗೂ ಚಂದ

ಅಂಗಳದೊಳಿಂಗುತಿದೆ ರಾತ್ರಿಯಾ ಮಳೆನೀರು
ಮಂಗಳದ ರಂಗೋಲಿ ಒದ್ದೆ ನೆಲದಿ.
ಕಾಡಂಚಿನಾ ಮನೆಯು, ತಣ್ಣನೆಯ ಮೆಲುಗಾಳಿ
ಹಾಡುತಿದೆ ವನಪಕ್ಷಿ, ಹಸಿರಿನೊಳಗಿಂದ

ಚಿತ್ರದೊಳಗಡೆಯಿಂದ ಮೆಲ್ಲನೆದ್ದಳು ಅವಳು
ಮೊಗದೊಳಗೆ ತೃಪ್ತಿಗೆರೆ, ಏನೋ ಅನಂದ.
ಬಣ್ಣಬಟ್ಟಲ ಜೊತೆಗೆ, ಸೀರೆಯಂಚನು ಹಿಡಿದು
ನಡೆದು ಹೋದಳು ಆಕೆ ಎಳೆಬೆಳಕಿನೊಳಗೆ

ಮಿದುನೆಲದ ಮಣ್ಣಲ್ಲಿ ಪಾದಪದ್ಮಗಳ ಅಚ್ಚಿತ್ತು
ರಂಗವಲ್ಲಿಯ ಜೊತೆಗೆ ಸ್ಪರ್ಧೆಗಿಳಿದಂತೆ.
ದೂರಲೋಕದ ಸಿರಿಯು, ಎದ್ದು ಹೋದಂತಿತ್ತು
ಹೆಜ್ಜೆಗುರುತುಗಳನ್ನು ಇಲ್ಲೇ ಬಿಟ್ಟು.

 ಎಚ್.ಎಸ್.ವೆಂಕಟೇಶಮೂರ್ತಿಯವರ ಕವಿತೆ:

ಇನ್ನೊಂದು ರಂಗವಲ್ಲಿ

ಓದುತ್ತಾ ಕೂತಿದ್ದೇನೆ ಹೊಸ ಕವಿಯ ಹೊಸ ಕವಿತೆ
ಯನ್ನ.ಇನ್ನಾ ಬೆಳಗಿನ ಕಾಫಿ ಕೂಡ ಕುಡಿದಿಲ್ಲ
ಹಾಳುಹೊಟ್ಟೆಯಲ್ಲಿ ನುಂಗಲೇ ಬೇಕಿದ್ದ ಸಿಹಿಗುಳಿಗೆ
ನುಂಗಿಲ್ಲ.ಕೂತಿದ್ದೇನೆ ತನ್ಮಯಚಿತ್ತ ಓದುತ್ತ
ಹೊಸ ಕವಿಯ ಹೊಸ ಕವಿತೆ. ಕವಿತೆಯಲ್ಲಿ ರಂಗ
ವಲ್ಲಿ ಬಿಡಿಸುತ್ತಾ ಇದ್ದಾಳೆ ಮಿಂದು ಮಡಿಯುಟ್ಟಿರುವ
ಹುಡುಗಿ. ನೋಡು ನೋಡುತ್ತಿರುವಂತೆ ಕಣ್ಣಲ್ಲೇ ಮೂಡುತ್ತೆ
ಚುಕ್ಕಿ. ಸೇರುತ್ತವೆ ನೇರಗೆರೆ ನಾಜೂಕು. ಒಡಮೂಡುತ್ತೆ
ಮುಖದಲ್ಲೇ ಒಂದು ರಂಗವಲ್ಲಿ,ಆಗಿ ಹುಡುಗಿಯ ಒಡಲೆ
ತೆಳ್ಳನೆಯ ಬಳ್ಳಿ, ಮೆಲ್ಲಗರಳುತ್ತೊಂದು ಷಡ್ದಳಪದ್ಮ
ಝಮ್ಮಂತ.ರಂಗೋಲಿ ಬರೆಯುವುದು ಮುಗಿದು
ಎದ್ದು ಹೋಗುತ್ತಾಳೆ ಬರೆದ ರಂಗೋಲಿಯನ್ನಂಗಳ
ದಲ್ಲೇ ಬಿಟ್ಟು. ಮರೆತೇ ಹೋಗಿದೆ ಪ್ರಾಣಹಿಂಡುವ ನನ್ನ ಮಂಡಿನೋವು
ಕವಿತೆ ಹೀಗಿರಬೇಕು ಇದ್ದರೂ ಮರೆವಂತೆ ಒಳಗಿರುವ ನೋವು.

ಎಚ್ಚೆಸ್ವಿಯವರ ಕವನಕ್ಕೆ ನನ್ನ ಕವನ ಎಷ್ಟರ ಮಟ್ಟಿಗೆ ಸ್ಪೂರ್ತಿಯಾಗಿತ್ತೋ ನನಗೆ ಗೊತ್ತಿಲ್ಲ. ನಿನ್ನೆ ಯಾಕೋ ಪುಸ್ತಕದ ರಾಶಿ ಕೆದಕಬೇಕಿದ್ದರೆ ಅವರ ಕವನ ಸಂಕಲನ ಕೈಗೆ ಸಿಕ್ಕಿ ಹಳೇ ಘಟನೆ ನೆನಪಾಯಿತು, ನಿಮ್ಮ ಜೊತೆಗೆ ಹಂಚಿಕೊಳ್ಳೋಣ ಎನಿಸಿ, ಬರೆದೆ. ಇನ್ನಾದರೂ ಮತ್ತೆ ಕವನ ಬರೆಯಬೇಕು....


ಭಾನುವಾರ, ಫೆಬ್ರವರಿ 12, 2012

ಮಾತು




ನಿತ್ಯ ಇಷ್ಟು ಹೊತ್ತಿಗೆ ಕೆಟ್ಟದಾಗಿ
ಕೂಗುತ್ತಿದ್ದ ತರಕಾರಿ ಗಾಡಿಯವನೂ
ಬಂದಂತಿಲ್ಲ ಇಂದು.

ಹೋದ ಕರೆಂಟಿನದೂ
ಪತ್ತೆಯಿಲ್ಲ
ಫ್ಯಾನಾದರೂ ಸದ್ದು ಮಾಡುತ್ತಿತ್ತು
ಪಕ್ಕದ ಫ್ಲಾಟಿನ ಮಗು ಇನ್ನೂ
ಸ್ಕೂಲಿಂದ ಬಂದಿಲ್ಲ.

ಪೇಪರ್ ವೇಯ್ಟಾದರೂ
ಬೀಳಬಹುದಿತ್ತು ನೆಲಕ್ಕೆ
ಅಥವ ಕೇಬಲಿನ ಹುಡುಗ
ಬರಬಹುದಿತ್ತು


ಅಗೋ,
ಅಲ್ಲಿ ಮೆಟ್ಟಿಲ ಸದ್ದು
ಕೇಳುತ್ತಿದೆ
ಬಡಿಯುತ್ತಾರೆ ಈಗ ಯಾರೋ
ಬಾಗಿಲು
ಅನ್ನುವಾಗಲೇ ಶಬ್ದ ನಿಂತು
ಹೋ ಗಿ ದೆ.

ಹೋಗಲಿ,
ನಾನೇ ಆರಂಭಿಸುತ್ತೇನೆ
ಮಾತು.
ಸುಮ್ಮನಿರುವುದಕ್ಕಿಂತ
ಸೋಲುವುದು ವಾಸಿ.

ಸೋಮವಾರ, ಫೆಬ್ರವರಿ 06, 2012

ಹಾಗಾದರೆ ..

ಅಕಾಲದಲ್ಲಿ ಎದ್ದ ಹಾಗೆ ಅಣಬೆ
ನಮ್ಮ ಮನೆಯ ಪಕ್ಕದಲ್ಲೇ ಎದ್ದು
ನಿಂತಿತ್ತು ಶಾಮಿಯಾನ, ಜೊತೆಗೆ ಕೆಂಪು ಕುರ್ಚಿ ಸಾಲು
ಬೆಂಗಳೂರಿನ ರೋಡುಗಳಲ್ಲಿ ಇದು ಖಾಯಂ
ಆಗಿ ಸಿಗುವ ತಾತ್ಕಾಲಿಕ ವ್ಯವಸ್ಥೆ

ಆಫೀಸಿಗೆ ಹೊರಟವನಿಗೆ ಜಾಗೃತವಾಗಿ
ಸಾಮಾಜಿಕ ಪ್ರಜ್ಞೆ
ಯಾಕೆ ಉಗಿಯಬಾರದು ಅವರುಗಳ ಬೇ
ಜವಾಬ್ದಾರಿಗೆ ಅಂದುಕೊಂಡರೆ ಕಂಡಿದ್ದು
ಗೇಟಿನ ಬಳಿ ಹೊಗೆ ಕಾರುವ ಮಡಕೆ

ವೈಕುಂಠ ಯಾತ್ರೆಯ ವ್ಯಾನು ರಸ್ತೆಯಂಚಲ್ಲಿ
ದುಸುದುಸು ಒಳಗೆ, ಹೊರಗೆ ಗಂಡಸರು,
ಗಹನ ಗಂಭೀರ
ಪಿಚ್ಚೆನಿಸಿದರೂ, ಸಾವು ಕಂಡರೆ
ಶುಭಶಕುನ ಅಂತ ಯಾರೋ ಅಂದ
ನೆನಪಾಗಿ ಹಾಯೆನಿಸಿ

ಹೊರಟಮೇಲೆ ಮನಸಿಗೆ ಬಂದಿದ್ದು ಸತ್ತಿದ್ದು ಯಾರು?
ನಿತ್ಯ ಗೇಟಂಚಿಗೆ ನಿಂತು ಸಿಗರೇಟು
ಸೇದುತ್ತಿದ್ದ ಮುದುಕ? ಎಂದೂ ಕಾಣದ ಅವನ ಹೆಂಡತಿ?
ಪಿಯೂಸಿಯ ಮಗನೇ?
ದಾರಿತುಂಬ ಸತ್ತವರು ಯಾರೆಂಬ ಪತ್ತೇದಾರಿ

ಕೃಶಕಾಯದ ಮುದುಕನೇ ಇರಬೇಕು ಖಂಡಿತ
ಸೇದಬಾರದಿತ್ತು ಆ ಪರಿ ಹೊಗೆಯ
ತಡವಾಗಿ ಹುಟ್ಟಿದ ಮಗ, ಓದೇ ಮುಗಿದಿರಲಿಲ್ಲ
ಹೆಂಡತಿಗೆ ಯಾರು ದಿಕ್ಕು? ಸುಮ್ಮನೇ ಗೊತ್ತಿದ್ದರೂ
ಸೇದಿ ತಂಬಾಕು, ಸಾಯುವ ಸೊಕ್ಕು

ನಿನ್ನೆ ಆಫೀಸಿಂದ ಬರುವ ವೇಳೆ
ಅಚಾನಕ್ಕಾಗಿ ಸಾವಿನ ಮನೆಯೆದುರು
ತಿರುಗಿತು ಕುತ್ತಿಗೆ
ಮುದುಕ ಇರಬೇಕೆ ಅಲ್ಲಿ,ಆ ಹೊತ್ತಿಗೆ! ಜತೆಗೆ
ಅದೇ ಸಿಗರೇಟಿನ ರಿಂಗುಹೊಗೆ.

ಹಾಗಾದರೆ ..

ಸೋಮವಾರ, ಜನವರಿ 30, 2012

ದಣಪೆ ಸರಿಯುವುದಿಲ್ಲ..


ನಿತ್ಯದಂತೆ ಇಂದೂ ಹೊಸಿಲ ಮೇಲಿನ
ದೀಪದ ಜ್ವಲನ ನೋಡುತ್ತ
ಕೂತಿದ್ದಾನೆ ಹಿರಿಯ,ನಿರೀಕ್ಷೆಗಳ ಹೊತ್ತು
ಹೊರಗೆ ಯಾರೂ ದಣಪೆ
ಸರಿಸಿದ ಸದ್ದೂ ಕೇಳುವುದಿಲ್ಲ

ಮೂರುಸಂಜೆಯ ಮೇಲೆ ಬೆಳಕು
ಕಡಿಮೆ, ಕಡಿಮೆ ಮಾತು
ಕಡಿಮೆ ನಿರೀಕ್ಷೆ
ಇನ್ನು ಮೇಲೆ ಈ ಕಡೆಗೆ
ಯಾರೂ ಹಾಯುವುದಿಲ್ಲ ಗಾಳಿಯೊಂದು
ಬಂದೀತು ಆರಿಸಲು ದೀಪ

ಒಳಗೇನೋ ಸದ್ದು ಬಿದ್ದಿದ್ದು
ಪಾತ್ರೆಯೋ, ಅಥವ ಅದನ್ನು ಹಿಡಿದ ಅವಳೊ?
ದಣಪೆಯ ಸದ್ದಿನ ನಿರೀಕ್ಷೆಯಲ್ಲಿ
ಬೇರೆ ಶಬ್ದ ಕೇಳದೆ ಕಿವಿ ಮಂದ
ಅಥವಾ ಅವಳು ಮಾತುಬಿಟ್ಟಿರಲೂ ಬಹುದು

ಟಪಾಲುಗಳಲ್ಲಿ ಬರುವುದೀಗ ಬರಿಯ
ಸಾವಿನ ದಿನ ನೆನಪಿಸುವ ಪಾಲಿಸಿ
ಯ ಕಂತು ತುಂಬುವ ಪತ್ರ, ಬೆಳೆ
ಸಾಲದ ನೋಟೀಸು
ಎಂದೂ ತೆರೆಯದ ಮದುವೆ ಕಾಗದ

ಮೇಲೆಲ್ಲೋ ಮರ ಬಿದ್ದು
ಸತ್ತಿದ್ದು ಫೋನು
ಮಗ ಕೊಡಿಸಿ ಹೋದ
ಮೊಬೈಲಿಗೆ
ಗುಡ್ಡದ ಮೇಲೆ ಮಾತ್ರ ಮಾತು

ಈ ಸಂಜೆ ಯಾರಾದರೂ ಬರಬಹುದಿತ್ತು
ಕೊನೆ ಪಕ್ಷ ಬೀಡಾಡಿ ದನವಾದರೂ ನುಗ್ಗಬಹುದಿತ್ತು
ಒಳಗೆ, ಅದೂ ಬರುವುದಿಲ್ಲ
ದಣಪೆಯನ್ನು ಯಾರೂ
ಸ ರಿ ಸು ವು ದಿ ಲ್ಲ.

ಮಂಗಳವಾರ, ಫೆಬ್ರವರಿ 15, 2011

ಅರ್ಧ ಸತ್ಯ

ಟೌನ್ ಹಾಲ್ ಎದುರು
ಬಸ್ಸಲ್ಲಿ ಕೂತವಳ
ಕಣ್ಣಲ್ಲಿ ಕಿತ್ತೂರು ಚೆನ್ನಮ್ಮನ ಖಡ್ಗ
ಬೆನ್ನಲ್ಲಿ
ಸುಟ್ಟ ಸಿಗರೇಟಿನ ಉರಿ

ಸಾವಿರ ವಾಹನಗಳ
ಕೈ ಸನ್ನೆಯಲ್ಲೇ
ನಿಲ್ಲಿಸುವ ಟ್ರಾಫಿಕ್ ಪೇದೆ;
ವರ್ಷ ನಾಲ್ಕಾಯ್ತು
ಪ್ರಮೋಷನ್ ಸಿಗದೆ

"ಇಲ್ಲಿ ಲಿಂಗ ಪತ್ತೆ ಮಾಡಲಾಗುವುದಿಲ್ಲ"
ಹೇಳುತ್ತಿದೆ ಆಸ್ಪತ್ರೆಯ ಫಲಕ
ಹಿತ್ತಲ ಕಸದ ರಾಶಿಯ
ಒಳಗೆ
ಬೆಳಕೇ ಕಾಣದ ಮೊಳಕೆ

ಎಲ್ಲ ಸಮಸ್ಯೆಗೆ
ಪರಿಹಾರ ಹೇಳುವ ಜ್ಯೋತಿಷಿಯ
ಮಗಳು
ಅಚಾನಕ್ಕು ಓಡಿ ಹೋಗಿದ್ದಾಳೆ
ಇಂದು ಜ್ಯೋತಿಷ್ಯಾಲಯ ಬಂದು.

ಬುಧವಾರ, ಫೆಬ್ರವರಿ 09, 2011

ಹೊಸಾ ಲವ್ಸ್ಟೋರಿ

ಹೊಳೇ ದಡದಾಗೆ ಬಾರ್ಜು ಇಲ್ಲ
ಮೊಬೈಲಿನಾಗೇ ಚಾರ್ಜು ಇಲ್ಲ
ಎಲ್ಲಿಗೋದ್ಲು ಹುಡುಗೀ
ಸಾಕಾಗೋಯ್ತು ಹುಡುಕೀ

ಬೀಡಿ ಕಾಸು ನಾಲ್ಕು ಉಳ್ಸಿ
ಬಾಡ್ಗೆ ಬೈಕಿಗ್ ಪೆಟ್ರೋಲ್ ತುಂಬ್ಸಿ
ಓಡೋಡೋಡೋಡ್ ಓಡಿ ಬಂದ್ರೆ
ಇದೇನ್ ಇಂಥ ತೊಂದ್ರೆ?

ಲಾಂಡ್ರಿ ಅಂಗ್ಡಿ ಲಕಪಕ ಶರಟು
ಜೀನ್ಸು ಪ್ಯಾಂಟು ಹಾಕ್ಕಂಡ್ ಹೊರಟು
ಏನೇನೇನೋ ಅಂದ್ಕಡ್ ಬಂದು
ಸಿಕ್ದಂಗಾಯ್ತು ಖಾಲಿ ಚಂಬು

ಕಾಲೇಜ್ ಬ್ಯಾಗು ಮಟ್ಟೀಲಿಟ್ಟು
ಓಡೋಗೋಣ ಊರುಬಿಟ್ಟು
ಅಂತೆಲ್ಲ ಅಂದವಳೇ ಇಲ್ಲ
ಸತ್ಯವಂತರ್ಗೆ ಕಾಲ್ವೇ ಅಲ್ಲ

ನಾಳಿಂದ್ ಮತ್ತೆ ಹೊಸಾದು ಹುಡ್ಕು
ಸಾವರ್ ರುಪಾಯ್ ಫೋನು ಕೊಡ್ಸು
ಕೆಲ್ಸ ಬಿಟ್ಟು ಕಾಲೇಜಿಗ್ ಓಡು
ಯಮಾಹ ಬೈಕಲ್ ವೀಲಿಂಗ್ ಮಾಡು

ಥತ್ತೇರೀಕಿ ಲೈಫೇ ಇಷ್ಟು
ಮನೇ ಹೆಂಡ್ತಿ ಪಾದ್ವೇ ಬೆಶ್ಟು!

ಮಂಗಳವಾರ, ಡಿಸೆಂಬರ್ 21, 2010

ಸ್ಪರ್ಶ

ಪಾರಿಜಾತದ ಹೂವು ಕೈಯ ಸವರಿದ ಹಾಗೆ
ಜಂಗುಳಿಯ ಮಧ್ಯದೊಳಗೊಂದು ಸ್ಪರ್ಶ
ಯಾವುದೋ ಮೆಲುಕೆಲ್ಲ ಆ ಬೆರಳ ತುದಿಯಿಂದ
ತೆರೆದುಕೊಂಡಂದದಲಿ ನೆನಪ ವರ್ಷ

ಹಳೆಯ ಮಂಜೂಷೆಯಾ ಕಳೆದ ಕೀಲಿಯ ಕೈಯ
ಸಟ್ಟನೇ ಕೊಟ್ಟು ಹೋದಂತೆ ಯಾರೋ
ಕತ್ತಲಲಿ ಕಾಣದೆಯೆ ಕಳೆದು ಹೋಗುವ ಹೊತ್ತು
ತಿರುವಿನಲಿ ಕಂಡಂತೆ ಉರಿವ ಸೊಡರು

ಆಪ್ತ ಜೀವವೊಂದು ಹಿಂದೆ ಇಹವ ಮರೆವ ಸಮಯದಲ್ಲಿ
ಕೈಯನ್ನೊಮ್ಮೆ ಹಿಡಿದು, ಕಣ್ಣ ಮುಚ್ಚಿಕೊಂಡಿತು
ಯಾಕೋ ಇಂದು ಅಂಥದೊಂದು ಸೋಕು ತಾಕಿ
ನಡೆವ ದಾರಿಯೊಳಗೆ ಮನವು ಹೂತುಕೊಂಡಿತು

ಯಾರದೋ ನಡೆಯೊಂದು ಅವರ ತಿಳಿವಿಗೆ ಬರದೆ
ನನ್ನ ಪಥವ ಬದಲು ಮಾಡಿ ಹೊರಟುಬಿಟ್ಟಿತು
ಮರೆಯುತಿದ್ದ ಸ್ಮೃತಿಗೆ ಮತ್ತೆ ಜೀವ ಕೊಟ್ಟು ಮೆಲ್ಲ
ಜನರ ಸಂತೆಯೊಳಗೆ ಸ್ಪರ್ಶ ಕರಗಿ ಹೋಯಿತು..

ಶುಕ್ರವಾರ, ಡಿಸೆಂಬರ್ 11, 2009

ಅವಳು ಹೋದ ಸಂಜೆ..

ಗೋಧೂಳಿ ಹಳದಿಯಿದೆ ಆಗಸದ ರಂಗಲ್ಲಿ
ಕಣ್ಣ ಬಣ್ಣಗಳಲ್ಲಿ ವಿಷಾದರಾಗ
ಹೋದ ಹೆಜ್ಜೆಗಳಲ್ಲಿ ಕಲಸಿಹವು ನೀರಲ್ಲಿ
ಜೀವ ಕಣಕಣಕೆ, ಮಾನಿಷಾದ ಯೋಗ

ಸುಲಲಿತದಿ ಕೈ ಹಿಡಿದ ರಾಗಮಾಲಿಕೆಯೊಂದು
ಅರ್ಧದಲಿ ವೀಣೆಯನು ಬಿಟ್ಟು ಹೊರಟಂತೆ
ಕವಿತೆಯೊಂದರ ಕೊನೆಯ ಶಬ್ದ ಚಿತ್ರವು ಹಠದಿ
ಕವಿಮನೆಯ ಬಾಗಿಲಿನ ಹೊರಗೆ ನಿಂತಂತೆ

ಹೋಗಬಹುದೇ ಹೀಗೆ, ಎಲ್ಲ ಮರೆತಾ ಹಾಗೇ
ಮಲ್ಲಿಗೆಯ ಮಾಲೆಯನು ಹರಿದು ಒಗೆದು
ತರಿಯಬಹುದೇ ಮರದ ಹೀಚುಕಾಯಿಗಳನ್ನು
ಹಣ್ಣಾಗೋ ಮುನ್ನವೇ ಕಲ್ಲನೊಗೆದು

ಸೆಳೆಯುತಿದೆ ಮರಳುರುಳು ನಿಂತಲ್ಲೆ ನನ್ನನ್ನು
ಅಲೆ ಗಾಳ ಹಾಕುತಿದೆ ಆಳದೆಡೆಗೆ
ಮುಳುಗುತಿದೆ ಉರಿಗೆಂಪು ಗೋಲ ಶರಧಿಯ ಆಚೆ
ಕತ್ತಲಾಗುತಿದೆ, ದೂರ ದಾರಿ ನಡೆಗೆ


(ವಿಜಯ ಕರ್ನಾಟಕದ ಕವಿತೆಗೊಂದು ಕಾಲದಲ್ಲಿ ಪ್ರಕಟಿತ)

ಮಂಗಳವಾರ, ಜುಲೈ 21, 2009

ನವಿಲಗರಿಗೆ ಪ್ರಶ್ನೆಗಳು

ಯಾವುದೋ ಮರದಡಿ ಉದುರಿದ ನೀನು,ಕೃಷ್ಣ ಮುಕುಟವಾಸಿ
ಆತನ ಪಯಣದಿ ನೀನೂ ಸಖನೇ,ಭೂಮಂಡಲ ಸಂಚರಿಸಿ

ಬಾಲಕೃಷ್ಣನ ನವನೀತದ ಕೈ,ನಿನ್ನನೂ ಸವರಿರಬೇಕಲ್ಲ
ಮುರಾರಿ ಸಂಗಡ ಕುಣಿದಿರಬೇಕು ನೀನೂ ಗೋಕುಲ ತುಂಬೆಲ್ಲ

ಚೆಲ್ವ ಮೋಹನನ ವೇಣುವಿನೋದಕೆ ನೀನೂ ತೊನೆದೂಗಿರಬೇಕು
ಗೋಪಿಕೆಯರನವ ಸರಸಕೆ ಎಳೆವೊಡೆ ನಿನದೂ ಪಾಲಿದ್ದಿರಬೇಕು

ಅನುಭವಿಸಿಹೆಯೇ ಮುರುಲೀಧರ ಸಖಿ ರಾಧೆವಿದಾಯದ ಕಣ್ಣೀರು
ಚಿಮ್ಮಿರಬೇಕು ಕಂಸರಕ್ತಹನಿ,ಮತ್ತೆ ಹೂಮಳೆ ತುಂತುರು ಪನ್ನೀರು

ಮೆತ್ತಿದೆ ನಿನಗೂ ದ್ವಾರಕೆ ಧೂಳು,ಹಸ್ತಿನೆ ಚಿನ್ನದ ರೇಕು
ಸಮರಾಂಗಣದಲಿ ಪಾಂಚಜನ್ಯದಾ ಘೋಷವ ಕೇಳಿರಬೇಕು

ಭಗವದ್ ಗೀತೆಗೆ ಗಾಂಡೀವಿಯ ಜೊತೆ ನೀನೂ ಸಹಪಾಠಿ
ವಿಶ್ವರೂಪನಾ ನೆತ್ತಿಯ ಮೇಲಿಂ,ಕಂಡಿತೆ ಕುರುಕ್ಷೇತ್ರ ಕೋಟಿ?

ಕರ್ಣ ಕುತಂತ್ರವ ಶ್ರೀಹರಿ ಹೆಣೆದುದು ನಿನಗಂತೂ ಗೊತ್ತು
ಕೃಷ್ಣ ಪ್ರತಿಜ್ಞೆಯ ಮುರಿದ ಭೀಷ್ಮ ಶರ,ಸ್ವಲ್ಪದಿ ನಿನ್ನನೆ ತಾಕಿತ್ತು!

ಹೇಗದು ನೋಡಿದೆ ಯುದ್ಧವಿನಾಶವ,ರುಧಿರ ರಾಡಿ ಬಯಲ
ಮುಳುಗಿದ ದ್ವಾರಕೆ, ಯಾದವ ಕಲಹವ ಮತ್ತೆ ಕಲಿಯ ಕಾಲ?

ಆಲದ ಮರದಡಿ ಮಲಗಿರೆ ಶ್ಯಾಮನು ಬಂತೆ ಜರನ ಬಾಣ ಪಾಶ
ನಕ್ಕನೆ ನೀಲನು ಆ ನೋವಿನಲೂ,ಕಂಡೆಯ ಕೊನೆಯ ಮಂದಹಾಸ?


ಭಾನುವಾರ, ಜುಲೈ 19, 2009

ಖುಷಿಗೊಂದು ಪದ್ಯ-೨

ರತ್ನಗಂಧಿಯ ಹಳದಿ
ನೆನೆದಿದೆ ಅಂಗಳದ ಅಂಚಲ್ಲಿ
ತುಂಬೆ ಗಿಡ ತುಂಬೆಲ್ಲ
ತೊನೆವ ಕೆಂಪು

ಹನಿಗೀತ ಹಾಡುತಿವೆ
ಕೆಸುವಿನೆಲೆಗಳ ಮೇಳ
ಗದ್ದೆಬದುವಿನ ಮೇಲೆ
ಕೊಕ್ಕರೆಯ ಹುಡುಕು

ನೀರದಾರಿಯ ಕೆಳಗೆ
ಫಳ್ಳ ಹೊಳೆಯುವ ಕಲ್ಲು
ಬೆಟ್ಟ ತಪ್ಪಲ ಬಳಿ
ಒದ್ದೆ ನವಿಲುಗರಿ

ಕರಗುಮಣ್ಣಿನ ಮೇಲೆ
ಬಿರಿದ ಮೊಳಕೆ
ಧರೆಯಂಚ ಗಿಡದೊಳಗೆ
ನೀಲಿಹೂವು

ದೂರಗದ್ದೆಯಲಿ
ನಟ್ಟಿತಂಡದ ಗೌಜು
ಅವರ ಹಾಡಿನ ಹುರುಪು
ನನ್ನೊಳಗೆ ಕೂಡ.



ಖುಷಿಗೊಂದು ಪದ್ಯ-೧

ಸೋಮವಾರ, ಜೂನ್ 15, 2009

ಕಾಲ

ಕೊನೆ ಮನೆಯ ಮುದುಕನಿಗೆ
ಕಾಲ ಕೇಳುವ ಕಷ್ಟ
ಕಾಲ ಕಾಲದ ಮೇಲೆ,
ಕಾಲ ಮರೆಯುವ ಲೀಲೆ

ನೀವಿಲ್ಲಿ ಹೇಳಿದರೂ
ಸಮಯ ಇಂತಿಷ್ಟೆಂದು
ಕೇಳುವೆನು ಮತ್ತಲ್ಲಿ,
ನಿಮ್ಮೆದುರೆ,ಅವರಲ್ಲಿ

ಕಾಲಬಲ ಇಲ್ಲದಿರೂ
ಕಾಲದೂಡುವ ಬಯಕೆ
ಹೊಸಸಮಯ ಕೇಳಿದೊಡೆ,
ಹಳೆಬಯಕೆ ನಾಯಿಕೊಡೆ

ಘಳಿಗೆಗಂಟೆಗಳಾಚೆ
ಬೇಕಿಹುದು ಬದುಕವಗೆ
ಸಾಯದು ಕಾಲಬೇರು
ಸಮಯಗಮ ಜೋರು.

ಮಂಗಳವಾರ, ಮೇ 26, 2009

ಮಳೆಗೆಜ್ಜೆ ಹುಡುಗಿ..

ಮಳೆಗೆಜ್ಜೆ ಹುಡುಗಿ ನಿನ್ನ ಕಣ್ಣಿನಂಚಿಗಿತ್ತ ಮುತ್ತು
ಕಾಲನುರುಳ ಹೇಗೋ ತಪ್ಪಿ, ಕಾವ್ಯವಾಗಿ ಉಳಿದಿದೆ
ಬಿಸಿಲಮಚ್ಚಿನಲ್ಲಿ ನಿಂತು, ಇರುಳತಾರೆ ತೋರಿಸುತ್ತ
ಹಾಗೇ ಹೊಂಚಿ ಕೊಟ್ಟ ಮುತ್ತು, ಚುಕ್ಕಿಯಾಗೇ ಹೊಳೆದಿದೆ

ಅಂದು ಏನೋ ತಪ್ಪಿನಿಂದ,ನಿನ್ನ ಮುನಿಸು ಮೇರೆ ಮೀರಿ
ಕೈಯ ಹಿಡಿದು ಕ್ಷಮೆಯ ಕೋರಿ, ಕರೆದೆ ಮನೆಯ ನೆತ್ತಿಗೆ
ಸಿಟ್ಟದಿನ್ನು ಮೊಗದಲಿರಲು, ಮೆಟ್ಟಿಲೇರಿ ನನಗು ಮೊದಲು
ನೋಡುತಿದ್ದೆ ಕ್ಷಿತಿಜದಾಚೆ ನಾನು ಬರುವ ಹೊತ್ತಿಗೆ

ನಲ್ಲೆ ಮುಖವು ಕಳೆಗುಂದಿದೆ,ಚಂದ್ರ ಬೇರೆ ಬಾನೊಳಿಲ್ಲ
ಕತ್ತಲಿಹುದು ಎಲ್ಲ ಕಡೆಗು,ನನ್ನ ದಿಗಿಲು ಹೆಚ್ಚಲು
ಮೆಲ್ಲ ಬಂದು ನಿನ್ನ ಬಳಿಗೆ,ಭುಜದ ಮೇಲೆ ಕತ್ತನಿರಿಸಿ
ಸೊಂಟ ಬಳಸಿ ನಿಂತುಕೊಂಡೆ,ದಿವ್ಯಮೌನ ಸುತ್ತಲೂ.

ಬಾನ ತುಂಬ ಕೋಟಿಚುಕ್ಕಿ,ಮೆಲ್ಲ ನಿನ್ನ ಕೈಯನೆತ್ತಿ
ಕಾಣದ ರಂಗೋಲಿ ಬಿಡಿಸಿ,ಮತ್ತೂ ಸನಿಹಕೆಳೆದೆನು
ಕಣ್ಣಹನಿಯು ಕೈಗೆ ತಾಕೆ,ಬೊಗಸೆ ತುಂಬ ಮೊಗವ ತುಂಬಿ
ಪುಟ್ಟಮುತ್ತ ನಯನಕೊತ್ತಿ ಅಲ್ಲೇ ಕರಗಿ ಹೋದೆನು

ಹೀಗಿದೊಂದು ಮಧುರ ಸ್ಪರ್ಶ ಸಮಯದೊಳಗೆ ಕಳೆದರೂ
ಮತ್ತೆ ತಿರುಗಿ ಬರುವುದುಂಟು ವರ್ತಮಾನದೊಳಗಡೆ
ಅಂಥದಿವಸ ಏಕೋ ನನ್ನ ಬಿಸಿಲುಮಚ್ಚು ಕರೆದರೆ

ದೂರತಾರೆ ಮಿನುಗು ಕಂಡು ಎದೆಯ ತಾನ ನಿಲುಗಡೆ.

ಶುಕ್ರವಾರ, ಮಾರ್ಚ್ 13, 2009

ಅವಳ ನಗು

ಬಯಲ ಗಾಳಿಗೆ ಎಲೆಯು
ಸುಮ್ಮನಲುಗಿದ ಹಾಗೆ
ಮಲೆಯ ಕಣಿವೆಯ ಝರಿಯು
ಚಿಮ್ಮಿ ಸಾಗುವ ಸೊಬಗೆ
ಎಂಥ ನಗು ಅವಳದು!

ಗಿರಿಯ ಮೇಲಿನ ಮಂಜು
ಮೆಲ್ಲ ಕರಗುವ ತೆರನ,
ನದಿಯ ನೀರನು ತಡೆವ
ಕಲ್ಲು ಹಾಡುವ ತ ರ ನ
ಅಂಥ ನಗು ಅವಳದು!

ತೀರಗುಂಟದ ಅಲೆಯು
ಪಾದಕೆ ಮಾಡುವ ಮುದ್ದು
ಮಳೆನೀರು ಬೀಳುತಿಹ
ಪದ್ಮಪತ್ರದ ಸದ್ದು
ಇಂಥ ನಗು ಅವಳದು!

ಬುಧವಾರ, ಮಾರ್ಚ್ 04, 2009

ಅಂದೇ ಕೊನೆ ಮತ್ತೆ ಶ್ಯಾಮ..

ಅಂದೇ ಕೊನೆ ಮತ್ತೆ ಶ್ಯಾಮ ಕೊಳನನೂದಲಿಲ್ಲ
ಗೋಕುಲ ದಾಟಿದ ಹೆಜ್ಜೆಯು, ಮರಳಿ ಬರಲೆ ಇಲ್ಲ

ರಾಧೆಯ ಗೆಜ್ಜೆಯ ದನಿ ಮರೆತಿತ್ತು,ನಗಾರಿ ಧ್ವನಿಗಳಲಿ
ಗೋಗಂಟೆಗಳ ಸ್ವರ ಅಡಗಿತ್ತು, ಖುರಪುಟ ಸದ್ದಿನಲಿ.

ರಾಜಕುವರರಾ ಸಖ್ಯದ ಮಧ್ಯೆ, ಮಕರಂದ ಮರೆತು ಹೋದ
ಮಹಲಿನ ಸೊಬಗಲಿ ನೆನಪಾಗುವುದೇ, ಗೋಕುಲದಾ ಮೋದ

ಕಳ್ಳ ಗೋಪನನು ಕರೆಯದು ಈಗ ಬಿಂದಿಗೆ ನವನೀತ
ಖಡ್ಗಗಳನುರಣನ ಸುತ್ತ, ಮುರಾರಿಗೆ ಯುದ್ಧವೆ ಉಪವೀತ

ಅರ್ಜುನ ರಥದಲಿ ಸಾರಥಿಯಾತನು, ಹಿಡಿದಿಹ ಚಾವಟಿಗೆ
ಕಣ್ಣೆದುರೆಂತು ಬಂದೀತವಗೆ, ಯಮುನೆಯ ಪಾವಟಿಗೆ ?

ಪಿಳ್ಳಂಗೋವಿಯ ಜಾಗವ ಪಡೆದಿದೆ ಶಂಖ ಪಾಂಚಜನ್ಯ
ಗೋಗಳ ಮಂದೆಯ ಬದಲಿಗೆ ಎದುರಿದೆ, ಚಿತ್ತ ಮರೆತ ಸೈನ್ಯ.

ಗುರುವಾರ, ಫೆಬ್ರವರಿ 26, 2009

ರಾಧಾಸ್ವಗತ

ಕೊಳಲ ಮಾಂತ್ರಿಕನವನು ನವಿಲುಗಣ್ಣಿನ ಚೆಲುವ
ಎಲ್ಲಿಹನು ಯಾಕಿನ್ನು ಬಂದಿಲ್ಲವಲ್ಲ,
ನನ್ನ ಕಾಡುವುದವಗೆ ಸಂತಸದ ಕೆಲಸವು
ಉದ್ಧಾರವಾಗನಿವ ತುಂಟ ಗೊಲ್ಲ

ಅಲ್ಲೆಲ್ಲೋ ದೂರದಲಿ ಮುರುಳಿಗಾನದ ತಾನ
ಬರುತಿಹನೆ ಇತ್ತಕಡೆ ಗಿರಿಧಾರಿಯು?
ಮರಹೂವ ಹಾಸಿಗೆಯು,ಸ್ವಾಗತಕೆ ಸಿದ್ಧವಿದೆ
ಕಾತರದಿ ಕಾಯುತಿದೆ ವನದಾರಿಯು

ಘಳಿಗೆಗಳು ಕಳೆದರೂ, ಶ್ಯಾಮನಾ ಸುಳಿವಿಲ್ಲ
ನನಗೇತಕೋ ಇಂದು ಭ್ರಮೆಯಾಗಿದೆ
ಬಿದಿರ ಮೆಳೆಗಳ ಮಧ್ಯೆ ಗಾಳಿ ಸುಳಿದರು ಕೂಡ
ಮೋಹನನು ಕರೆದಂತೆ ಕೇಳಿಸುತಿದೆ

ಯಾವ ಗೋಪಿಕೆಯ ಜೊತೆ ಲಲ್ಲೆ ಹೊಡೆಯುತಲಿಹನೋ
ನನ್ನ ನೆನಪೇ ಇಲ್ಲ, ಕಳ್ಳನವನು
ಮತ್ತೆ ಮೆಲ್ಲನೆ ಬಂದು ನನ್ನ ಬಳಸುತ ನಿಂದು
ಏನೇನೋ ಕಥೆ ಹೇಳಿ ಮರುಳು ಮಾಡುವನು

ಗೋಪಾದಗಳ ಜೊತೆಗೆ ಗೋಪಾಲಾನ ಹೆಜ್ಜೆ
ಹುಡುಕುವುದದೆಂತು ಈ ನೀಲಮೊಗದವನ
ಯಾವ ಗಿರಿ ಕಂದರವೋ, ಹಸಿರ ಹಾಸಿನ ಬಯಲೋ,
ಇದ್ದಲ್ಲಿ ಇರಲಾರ, ಮಿಗದ ಚಲನ!

ಅಗೋ,ಅಲ್ಲಿ ಬಯಲೊಳಗೆ ನಿಂತಿಹನು ಚೆಲ್ವ ಸಖ
ಪುಟ್ಟ ಕರುವಿನ ಕುಣಿತ ಅವನ ಮುಂದೆ
ಸಂಜೆಗೆಂಪಾಗುತಿರೆ, ಬಾನುರಂಗೇರುತಿದೆ
ವನಮಾಲಿಯಾ ಹಿಂದೆ, ದನದ ಮಂದೆ

ಶುಕ್ರವಾರ, ನವೆಂಬರ್ 07, 2008

ಮತ್ತೊಂದು ಮಳೆ ಕವನ..

ಥೋ! ಜೋರು ಮಳೆ ಸಡನ್ನಾಗಿ
ಶುರುವಾಯಿತು ಅಂತ,
ನಿಲ್ಲಿಸಿ ಬೈಕ,
ನಾನೂ ನಿಂತೆ ಅಂಗಡಿಯೊಂದರ ಪಕ್ಕ
ಸಿಡಿಮಿಡಿಗುಟ್ಟುತ್ತ,
ಅನಿರೀಕ್ಷಿತದ ಮೇಲೆ.

ಚುರುಗುಟ್ಟುವ ಹೊಟ್ಟೆ
ಅರೆಬರೆ ಒದ್ದೆ,
ಥೂ! ಅಂತೊಮ್ಮೆ ಸುರಿವ ಮಳೆಗೇ ಕ್ಯಾಕರಿಸಿ
ಹಳಿದುಕೊಳ್ಳುತ್ತ ನನ್ನ ಗ್ರಹಚಾರ
ನೋಡುತ್ತ ನಿಂತೆ ಖಾಲಿ ರಸ್ತೆ
ವಿರಳ ಸಂಚಾರ

ಪಕ್ಕದಲಿ ಅಜ್ಜಿ, ಮೊಮ್ಮಗ
ಇಬ್ಬರೂ ನಿರಾಳ
ಹುಡುಗ ನೀರ ಹರಿವಿಗೆ
ಮೆಲ್ಲನೆ,ಅಜ್ಜಿಗೆ ಕಾಣದ ಹಾಗೆ ಕಾಲದ್ದಿ
ರೋಮಾಂಚನಗೊಳ್ಳುತ್ತ
ಅಜ್ಜಿ, ಕಂಡರೂ ಕಾಣದ ಹಾಗೆ ಮಾಡುತ್ತ..

ಆ ಜಡಿಧಾರೆಯಲ್ಲೇ ರಸ್ತೆಯಲಿ
ಹೈಸ್ಕೂಲು ಹುಡುಗಿ, ಬಟ್ಟಲು ಗಣ್ಣಿನವಳು
ಚೂಡಿದಾರದ ವೇಲು ತಲೆಗೆ ಹೊದ್ದು
ಮಳೆಯ ನೋಡುತ್ತ
ಯಾವುದೋ ಹಾಡು ಗುನುಗುತ್ತ
ಪ್ರಸನ್ನವದನೆ, ಮಂದಗಮನೆ.

ರಸ್ತೆಯ ಆ ಬದಿಗೆ
ಗಿರಾಕಿಗಳಿಲ್ಲದ ಕಾಂಡಿಮೆಂಟ್ಸಿನವನು
ತನ್ನ ಕೈಯಾರೆ ಮಾಡಿದ
ಚಹವ ತಾನೆ ಹೀರುತ್ತ - ಹೊತ್ತು
ಬ್ರಹ್ಮಾನಂದ,
ರೇಡಿಯೋ ಕೇಳುತ್ತ ಮಳೆಗೆ ಮುಖ ಮಾಡಿದ್ದ.

ನನಗೆ ಯಾಕೋ ಅಲ್ಲಿ ನಿಲ್ಲಲೇ ಆಗದೆ
ಸಟಕ್ಕನೆ
ಬೈಕಿನೆಡೆಗೋಡಿ, ಕೀ ತಿರುವಿ
ಹಾಗೇ ನೆನೆಯುತ್ತಲೇ ಮನೆಗೆ
ಬರುವಷ್ಟರಲ್ಲಿ
ಮಳೆ ನಿಂತುಹೋಗಿತ್ತು.

ಗುರುವಾರ, ಸೆಪ್ಟೆಂಬರ್ 25, 2008

ಬೇರು ಬಂದಿದೆ..

ಬೇರು ಬಂದಿದೆ ಅವಳಿಗೆ
ಕಾಲಕಾಲಗಳಿಂದ
ಕೂತಲ್ಲಿಯೇ ಕೂತು
ಹೂತು
ಬೇರು ಬಂದಿದೆ ಅವಳಿಗೆ

ನಾಭಿಯಿಂದ ಹೊರಟು
ಕೆಳಗಿಳಿದು
ಬೇರು ಹೊರಟಿದೆ
ಆಳಕೆ,
ಮಣ್ಣ ಕಣಕಣದಾಚೆಗೆ

ಇರುವ ನೆಲನೆಲೆಯಾಚೆ
ಅಲ್ಲೆಲ್ಲೋ ತಾಕುತಿದೆ
ಬೇರ ತುದಿ
ಅವಳಿಗೆ ಇಲ್ಲಿ
ಸಂಚಲನ

ಹೊರಟ ಬೇರಿಗೆ
ನೂರು ದಾರಿ
ನೂರು ಟಿಸಿಲು..
ಕೂತಲ್ಲಿಯೇ
ಅವಳು
ಸರ್ವಗ್ರಾಹಿ,
ಸಮಸ್ತ ಧಾತ್ರಿ.

ಬುಧವಾರ, ಜುಲೈ 23, 2008

ಒಂದು ಮಳೆ ನಿಂತ ಮಧ್ಯಾಹ್ನ..

ಒಂದು ಮಳೆ ನಿಂತ ಮಧ್ಯಾಹ್ನ
ಅವಳು ಸಿಕ್ಕಳು, ಅನಿರೀಕ್ಷಿತವಾಗಿ
ಆಗ ತಾನೆ ಬಂದ ಮಳೆಯಂತೆ.

ಮಾತಾಡಲಿಲ್ಲ ಇಬ್ಬರೂ, ಘಳಿಗೆ
ಅವಳ ಕಣ್ಣಲ್ಲಿ ನೀರು ಕಂಡಂತಾಯಿತು
ಘಟಿಸಿದ ಭೂತಕ್ಕೆ ಶ್ರದ್ಧಾಂಜಲಿಯೆಂಬಂತೆ

ಹೊರಟೆವು ಮುಂದೆ, ಮಾತೇನೂ ಆಡದೆ
ಹೊರಡುವ ಮುನ್ನ ಅವಳ ಕೈ ಸೋಕಿತು
ಕಳೆದ ದಿವ್ಯಗಳ ಕೊನೆ ಝಲಕಂತೆ

ನಾಲ್ಕೆಂಟು ಹೆಜ್ಜೆಗಳಾದ ಮೇಲೆ ತಿರುಗಬೇಕೆನಿಸಿತು
ತಿರುಗಲಿಲ್ಲ, ಏನೂ ಘಟಿಸದು, ಗೊತ್ತು..ಆದರೂ,
ಅವಳ ಬೆನ್ನು ನೋಡುವ ಧೈರ್ಯವಿಲ್ಲ.

ಗುರುವಾರ, ಜುಲೈ 10, 2008

ತುಂಡು ಸಾಲುಗಳು

ಸ್ತ್ರೀ ಸ್ವಾತಂತ್ರ್ಯದ ಬಗ್ಗೆ
ಬರೆವ ಹುಡುಗಿ,
ಬೇರಾರದೋ
ಮನೆಯಲಿದ್ದೇನೆ, ಅವರೆದುರು ಮಾತಾಡಲು
ಒಂಥರಾ ಅನ್ನುವ
ಕಾರಣಕ್ಕೆ ಫೋನು
ರಿಸೀವ್ ಮಾಡಲಿಲ್ಲ.

ಗೆಜ್ಜೆಗಳೆಂದರೆ ರೋಮಾಂಚನ, ಮಧುರ
ಪ್ರೇಮ ಸಂಕೇತ
ಅಂತ ಕವಿತೆ ಬರೆಯುವ
ಹುಡುಗ
ಕದ್ದು ಸೇರುವಾಗ
ಅವಳ ಬಳಿ
"ಗೆಜ್ಜೆ ತೆಗೆದಿಡು
ಸದ್ದಾಗುತ್ತದೆ" ಅಂದ.

ತೂತಿನಾಚಿಗೆ ಏನು
ನಡೆಯುತ್ತಿದೆ
ಅಂತ
ಕಣ್ಣು ಕಿರಿದಾಗಿಸಿ
ಆ ಕಡೆ ನೋಡಿದರೆ,
ಇನ್ನೊಂದು ಕಣ್ಣು ಕಂಡಿತು!