ಸೋಮವಾರ, ಫೆಬ್ರವರಿ 28, 2011

ದಿ ಕಿಂಗ್ಸ್ ಸ್ಪೀಚ್ : ಉಗ್ಗಿನ ರಾಜನ ಮಾತಿನ ಬಾಣ

ಭಾಷೆ: ಇಂಗ್ಲೀಷ್
ನಿರ್ದೇಶನ: ಟಾಮ್ ಹೂಪರ್
ನಟರು: ಕಾಲಿನ್ ಫರ್ತ್, ಜೆಫ್ರಿ ರಶ್


ಅಬ್ಬರದ ಅಂಶಗಳಿಲ್ಲದ , ಸರಳ ಮತ್ತು ನೇರ ಕಥೆ ಹೊಂದಿರುವ ಸಿನಿಮಾವೊಂದು ಹೇಗೆ ವೀಕ್ಷಕರ ಮನಸ್ಸನ್ನು ತಟ್ಟಬಹುದು ಎನ್ನುವುದಕ್ಕೆ, ಇತ್ತೀಚಿಗೆ ಬಿಡುಗಡೆಯಾಗಿರೋ, ದಿ ಕಿಂಗ್ಸ್ ಸ್ಪೀಚ್ ಉತ್ತಮ ಉದಾಹರಣೆ. ೧೯೩೦ ದಶಕದ ಇಂಗ್ಲೆಂಡ್ ನ ರಾಜ ಆರನೇ ಜಾರ್ಜ್ ಮತ್ತು ಆತನ ಉಗ್ಗಿನ ಸಮಸ್ಯೆ ಈ ಚಿತ್ರದ ಹಂದರ. ಇಂತಹ ವಸ್ತುವೊಂದನ್ನು ಇಟ್ಟುಕೊಂಡು ಚಿತ್ರವೊಂದನ್ನು ನಿರ್ಮಿಸಬಹುದು ಎನ್ನುವುದೇ ಮೊದಲ ಅಚ್ಚರಿ.

ಇಂಗ್ಲೆಂಡಿನ ಭವಿಷ್ಯ ಬರೆಯಬೇಕಿರುವ ಆರನೇ ಜಾರ್ಜ್ ಮತ್ತು ಆಸ್ಟ್ರೇಲಿಯನ್ ಮೂಲದ, ಮೊದಲ ನೋಟಕ್ಕೆ ಜೋಕರ್ ನಂತೆ ಕಾಣುವ ಸ್ಪೀಚ್ ಥೆರಪಿಸ್ಟ್ ಲೈನಲ್ ಲೋಗ್ ಮಧ್ಯದ ಸ್ನೇಹ ಈ ಚಿತ್ರದ ಮುಖ್ಯ ಎಳೆ.ಅಲ್ಬರ್ಟ್, ಇಂಗ್ಲೆಂಡ್ ನ ರಾಜ ಐದನೇ ಜಾರ್ಜ್ ನ ಎರಡನೇ ಮಗ. ಎಳವೆಯಿಂದಲೇ ಆತನ ವ್ಯಕ್ತಿತ್ವಕ್ಕೆ ಕೊಡಲಿ ಪೆಟ್ಟು ನೀಡಿರುವುದು, ಮಾತನಾಡುವಾಗ ಪದೇ ಪದೇ ಕಾಡುವ ಉಗ್ಗಿನ ಸಮಸ್ಯೆ. ಅದು ಆತನ ವೃದ್ಧ ಅಪ್ಪನಿಗೂ ಚಿಂತೆ. ಲೈನಲ್, ಜಾರ್ಜ್ ನ ಉಗ್ಗಿನ ಸಮಸ್ಯೆ ಪರಿಹರಿಸಲು ಆತನ ಹೆಂಡತಿ ( ಎಲ್ಲ ವಿಫಲ ಪ್ರಯತ್ನಗಳ ನಂತರ) ಹುಡುಕಿರೋ ಸ್ಪೀಚ್ ಥೆರಪಿಸ್ಟ್. ರಾಜ ಮನೆತನದ ವ್ಯಕ್ತಿಗೆ ತಾನು ಚಿಕಿತ್ಸೆ ನೀಡುತ್ತಿದ್ದೇನೆಂಬುದು ಗೊತ್ತಿದ್ದರೂ, ಆ ಬಗ್ಗೆ ಯಾವುದೇ ಹೆಮ್ಮೆಯಾಗಲೀ ಅಥವಾ ಅವರ ಬಗ್ಗೆ ವಿಶೇಷ ಗೌರವವನ್ನೂ ತೋರಿಸದ ವಿಚಿತ್ರ ಮನುಷ್ಯ. ಜಾರ್ಜ್ ಗೂ, ಲೈನಲ್ ತನ್ನ ಸಮಸ್ಯೆ ಪರಿಹರಿಸುವ ಬಗ್ಗೆ ಯಾವ್ ವಿಶ್ವಾಸವೂ ಇಲ್ಲ. ಸುಮ್ಮನೇ ಆತ ಮಾಡಿಸೋ ಅಸಂಬದ್ಧವೆನಿಸೋ ಮುಖದ ವ್ಯಾಯಾಮ ಮಾಡುತ್ತಿರುತ್ತಾನೆ, ಅಷ್ಟೆ.


ಹುಟ್ಟಿದಾಗಿನಿಂದ ರಾಜ ಮನೆತನದ ಸಿರಿಪಂಜರದೊಳಗೆ ಬೆಳೆದಿರುವ ಜಾರ್ಜ್ ಗೆ, ಜನಸಾಮಾನ್ಯರ ನಡುವೆ ಬೆರೆತು ಗೊತ್ತಿಲ್ಲ. ಲೈನಲ್ ಜೊತೆಗೆ ನಿಧಾನವಾಗಿ ಬೆಳವ ಸ್ನೇಹ, ಆತನಿಗೆ ಹೊಸ ಜಗತ್ತೊಂದನ್ನು ಪರಿಚಯಿಸುತ್ತದೆ. ಇಬ್ಬರ ನಡುವಿನ ಗೆಳೆತನದ ಬಂಧ ಗಟ್ಟಿಯಾಗುವ ಹೊತ್ತಿನಲ್ಲೇ ಸಂಭವಿಸೋ ಸಣ್ಣದೊಂದು ಜಗಳ ಇಬ್ಬರನ್ನೂ ಬೇರ್ಪಡಿಸುತ್ತದೆ.

ಉತ್ತಮ ನಾಯಕನಲ್ಲಿರಬೇಕಾದ ಹಲವು ಗುಣಗಳಿದ್ದರೂ, ಅಲ್ಬರ್ಟ್ ತಾನು ಎಂದೂ ರಾಜನಾಗುತ್ತೇನೆ ಅಂದುಕೊಂಡಿಲ್ಲ. ಆದರೆ ಒಂದು ವಿಚಿತ್ರ ಸನ್ನಿವೇಶದಲ್ಲಿ ರಾಜನ ಸ್ಥಾನಕ್ಕೆ ಏರಬೇಕಾಗಿ ಬರುವ ಅನಿವಾರ್ಯತೆ ಬಂದೊದಗುತ್ತದೆ. ಜೊತೆಗೆ ದೇಶದ ಎದುರು ಎರಡನೇ ಮಹಾಯುದ್ಧದ ರೂಪದಲ್ಲಿ ಹೊಸ ವಿಪತ್ತು ಬಂದೆರಗುತ್ತದೆ.

ಯುದ್ಧ ಇನ್ನೇನು ಆರಂಭವಾಗಲಿದೆ. ಅದಕ್ಕೂ ಮುನ್ನ ಕಿಂಗ್ ಜಾರ್ಜ್, ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಬೇಕಿದೆ, ಹಿಟ್ಲರ್ ನ ಹೆದರಿಕೆ ತುಂಬಿರೋ ಜನರಲ್ಲಿ ಆತ್ಮ ವಿಶ್ವಾಸ ತುಂಬಬೇಕಿದೆ. ಆದರೆ ಉಗ್ಗಿನ ತೊಂದರೆ ಅವನೊಳಗಿನ ವಿಶ್ವಾಸಕ್ಕೇ ಕುಂದು ತಂದಿದೆ. ಇನ್ನು ಜನರಲ್ಲಿ ಹೇಗೆ ಧೈರ್ಯ ತುಂಬಿಯಾನು? ಹಿಂದಿನ ಒಂದು ಕಹಿ ನೆನಪು, ಮನದಲ್ಲಿ ಹಾಗೇ ಇದೆ..
ಮುಂದೇನು ನಡೆಯುತ್ತದೆ ಅನ್ನೋದನ್ನ ನೀವು ಖುದ್ದು ವೀಕ್ಷಿಸಿದರೇ ಚೆನ್ನ.


ಒಂದು ತುಂಬ ಚಂದದ ಕಥೆಯನ್ನು, ಅಷ್ಟೇ ಸೊಗಸಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿರೋದು ನಿರ್ದೇಶಕ ಟಾಮ್ ಹೂಪರ್ ಹೆಗ್ಗಳಿಕೆ. ಗಡಿಬಿಡಿಯಿಲ್ಲದೇ ನಿಧಾನವಾಗಿ ಸಾಗುವ ಚಿತ್ರ , ಯಾವುದೇ ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲದಂತೆ ಕೊನೆಕೊನೆಗೆ ವೀಕ್ಷಕರನ್ನು ಉಸಿರು ಬಿಗಿಹಿಡಿದುಕೊಳ್ಳುವಂತೆ ಮಾಡುತ್ತದೆ.

೨೦ ನೇ ಶತಮಾನದ ಮೊದಲಾರ್ಧದ ಇಂಗ್ಲೆಂಡ್, ಅಲ್ಲಿನ ವಾತಾವರಣ, ರಾಜ ಮನೆತನದ ಖಾಸಗೀ ವಲಯ, ಅಲ್ಲಿನ ರಾಜಕೀಯ ಗೋಜಲುಗಳು ಇತ್ಯಾದಿಗಳನ್ನು ದಿ ಕಿಂಗ್ಸ್ ಸ್ಪೀಚ್ ಸಮರ್ಥವಾಗಿ ಹಿಡಿದಿಟ್ಟಿದೆ. ಚಿತ್ರದ ಹಿನ್ನೆಲೆ ಸಂಗೀತ ಕೂಡ ಮನೋಜ್ಞವಾಗಿದ್ದು, ನೋಡುಗರ ಲಹರಿಯನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಮಕ್ಕಳಿಗೆ ಕಥೆ ಕೂಡ ಸರಿಯಾಗಿ ಹೇಳಲು ಬರದ ಗಂಭೀರ ಅಪ್ಪನಾಗಿ, ಬಿಬಿಸಿಯ ಮೈಕಿನೆದುರು ತೊದಲೋ ರಾಜನಾಗಿ, ನಟ ಕಾಲಿನ್ ಫರ್ತ್, ಆರನೇ ಜಾರ್ಜ್ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದಾರೆ. ಇನ್ನು ಸ್ಪೀಚ್ ಥೆರಪಿಸ್ಟ್ ಆಗಿ ನಟಿಸಿರೋ ಜೆಫ್ರಿ ರಶ್ ನಟನೆ ಶ್ಲಾಘನೀಯ. ಅಂದ ಹಾಗೆ, ಆಗ ತಾನೇ ಕಂಡು ಹಿಡಿಯಲಾಗಿದ್ದ ರೇಡಿಯೋ , ಚಿತ್ರದ ಮತ್ತೊಂದು ಪ್ರಮುಖ ಪಾತ್ರ!
ಈ ಸಲದ ಆಸ್ಕರ್ ಪ್ರಶಸ್ತಿ ಘೋಷಣೆಯಾಗೋವಾಗ, ದಿ ಕಿಂಗ್ಸ್ ಸ್ಪೀಚ್ ಕೆಲವಷ್ಟಾದರೂ ಪ್ರಶಸ್ತಿಗಳನ್ನ ಬಾಚಿಕೊಳ್ಳುತ್ತದೆ ಅನ್ನೋದು ನನ್ನ ಅಭಿಪ್ರಾಯ. ಬೆಸ್ಟ್ ಆಫ್ ಲಕ್!

( ಕನ್ನಡ ಪ್ರಭದ ಹೋಂ ಥಿಯೇಟರ್ ನಲ್ಲಿ ನಿನ್ನೆ, ೨೭-೦೨-೨೦೧೧ ಕ್ಕೆ ಪ್ರಕಟಿತ)
ಇವತ್ತು ಕಿಂಗ್ಸ್ ಸ್ಪೀಚ್ ಚಿತ್ರಕ್ಕೆ ಉತ್ತಮ ಚಿತ್ರ, ಉತ್ತಮ ಡೈರೆಕ್ಟರ್ , ಉತ್ತಮ ನಟ, ಉತ್ತಮ ಸ್ಕ್ರೀನ್ ಪ್ಲೇ - ಒಟ್ಟು ನಾಲ್ಕು ಪ್ರಶಸ್ತಿಗಳು ಗಳು ಲಭ್ಯವಾಗಿದೆ.

ಮಂಗಳವಾರ, ಫೆಬ್ರವರಿ 15, 2011

ಅರ್ಧ ಸತ್ಯ

ಟೌನ್ ಹಾಲ್ ಎದುರು
ಬಸ್ಸಲ್ಲಿ ಕೂತವಳ
ಕಣ್ಣಲ್ಲಿ ಕಿತ್ತೂರು ಚೆನ್ನಮ್ಮನ ಖಡ್ಗ
ಬೆನ್ನಲ್ಲಿ
ಸುಟ್ಟ ಸಿಗರೇಟಿನ ಉರಿ

ಸಾವಿರ ವಾಹನಗಳ
ಕೈ ಸನ್ನೆಯಲ್ಲೇ
ನಿಲ್ಲಿಸುವ ಟ್ರಾಫಿಕ್ ಪೇದೆ;
ವರ್ಷ ನಾಲ್ಕಾಯ್ತು
ಪ್ರಮೋಷನ್ ಸಿಗದೆ

"ಇಲ್ಲಿ ಲಿಂಗ ಪತ್ತೆ ಮಾಡಲಾಗುವುದಿಲ್ಲ"
ಹೇಳುತ್ತಿದೆ ಆಸ್ಪತ್ರೆಯ ಫಲಕ
ಹಿತ್ತಲ ಕಸದ ರಾಶಿಯ
ಒಳಗೆ
ಬೆಳಕೇ ಕಾಣದ ಮೊಳಕೆ

ಎಲ್ಲ ಸಮಸ್ಯೆಗೆ
ಪರಿಹಾರ ಹೇಳುವ ಜ್ಯೋತಿಷಿಯ
ಮಗಳು
ಅಚಾನಕ್ಕು ಓಡಿ ಹೋಗಿದ್ದಾಳೆ
ಇಂದು ಜ್ಯೋತಿಷ್ಯಾಲಯ ಬಂದು.

ಬುಧವಾರ, ಫೆಬ್ರವರಿ 09, 2011

ಹೊಸಾ ಲವ್ಸ್ಟೋರಿ

ಹೊಳೇ ದಡದಾಗೆ ಬಾರ್ಜು ಇಲ್ಲ
ಮೊಬೈಲಿನಾಗೇ ಚಾರ್ಜು ಇಲ್ಲ
ಎಲ್ಲಿಗೋದ್ಲು ಹುಡುಗೀ
ಸಾಕಾಗೋಯ್ತು ಹುಡುಕೀ

ಬೀಡಿ ಕಾಸು ನಾಲ್ಕು ಉಳ್ಸಿ
ಬಾಡ್ಗೆ ಬೈಕಿಗ್ ಪೆಟ್ರೋಲ್ ತುಂಬ್ಸಿ
ಓಡೋಡೋಡೋಡ್ ಓಡಿ ಬಂದ್ರೆ
ಇದೇನ್ ಇಂಥ ತೊಂದ್ರೆ?

ಲಾಂಡ್ರಿ ಅಂಗ್ಡಿ ಲಕಪಕ ಶರಟು
ಜೀನ್ಸು ಪ್ಯಾಂಟು ಹಾಕ್ಕಂಡ್ ಹೊರಟು
ಏನೇನೇನೋ ಅಂದ್ಕಡ್ ಬಂದು
ಸಿಕ್ದಂಗಾಯ್ತು ಖಾಲಿ ಚಂಬು

ಕಾಲೇಜ್ ಬ್ಯಾಗು ಮಟ್ಟೀಲಿಟ್ಟು
ಓಡೋಗೋಣ ಊರುಬಿಟ್ಟು
ಅಂತೆಲ್ಲ ಅಂದವಳೇ ಇಲ್ಲ
ಸತ್ಯವಂತರ್ಗೆ ಕಾಲ್ವೇ ಅಲ್ಲ

ನಾಳಿಂದ್ ಮತ್ತೆ ಹೊಸಾದು ಹುಡ್ಕು
ಸಾವರ್ ರುಪಾಯ್ ಫೋನು ಕೊಡ್ಸು
ಕೆಲ್ಸ ಬಿಟ್ಟು ಕಾಲೇಜಿಗ್ ಓಡು
ಯಮಾಹ ಬೈಕಲ್ ವೀಲಿಂಗ್ ಮಾಡು

ಥತ್ತೇರೀಕಿ ಲೈಫೇ ಇಷ್ಟು
ಮನೇ ಹೆಂಡ್ತಿ ಪಾದ್ವೇ ಬೆಶ್ಟು!

ಶುಕ್ರವಾರ, ಫೆಬ್ರವರಿ 04, 2011

ಸಾಹಿತ್ಯ ಸಮ್ಮೇಳನ- ದಿನ-೧

ಸಾಹಿತ್ಯ ಸಮ್ಮೇಳನ ಆರಂಭಕ್ಕೆ ಕ್ಷಣಗಣನೆ ಆಗುತ್ತಿದ್ದ ಘಳಿಗೆಯಲ್ಲಿ, ಆಫೀಸಿಗೆ ಹೋಗುತ್ತಿದ್ದಾಗ ಕ್ಲಿಕ್ಕಿಸಿದ ಕೆಲ ಚಿತ್ರಗಳು.. ಮೆರವಣಿಗೆಗೆ ಸಿದ್ಧವಾಗುತ್ತಿದ್ದ ಸಾಂಸ್ಕೃತಿಕ ತಂಡಗಳು..
ಮುಂಡಾಸು ಸರಿಯಾಗಿ ಕಟ್ಟೋ..
ಎಲ್ಲಡೆ ಹಾರಾಡುತ್ತಿರುವ ಕನ್ನಡ ಧ್ವಜಗಳು..
ಬಾರಿಸು ಕನ್ನಡ ಡಿಡಿಂಮವ..
ಬಿಸಿಲಿಗೆ ಚಳಿ ಕಾಯಿಸಿಕೊಂಡು, ಸದ್ದು ಮಾಡಲು ಸಿದ್ಧ!
ನಾವ್ ರೆಡಿ!
ಹಲಗೆ ತಂಡ
ನಾವು ಬಂದೇವ..
ಅಂದ ಹಾಗೆ, ದಕ್ಷಿಣ ಬೆಂಗಳೂರಿಗೆ ಬರುತ್ತಿರೋ ಸಾಹಿತ್ಯ ಪ್ರೇಮಿಗಳಿಗೆ, ಒಳ್ಳೊಳ್ಳೇ ತಿಂಡಿ ತಿನಿಸುಗಳು ಇಲ್ಲೆಲ್ಲ ಸಿಗುತ್ತವೆ ನೋಡಿ.

ಸಿರಿಗನ್ನಡಂ ಗೆಲ್ಗೆ:)

ಬುಧವಾರ, ಫೆಬ್ರವರಿ 02, 2011

ಎರಡು ಘಟನೆಗಳು

ಸೋಶಿಯಲ್ ನೆಟ್ ವರ್ಕಿಂಗ್ ಸೈಟುಗಳಿಂದ ಉಪಕಾರವೆಷ್ಟಿದೆಯೋ, ತೊಂದರೆಗಳೂ ಅಷ್ಟೇ ಇದೆ ಅನ್ನೋದು ಕಾಲ ಕಾಲಕ್ಕೆ ಪ್ರೂವ್ ಆಗ್ತಾನೇ ಇವೆ. ಕೆಲವು ಬಾರಿ, ನಿರುಪದ್ರವೀ ಮಜಾ ಘಟನೆಗಳೂ ಆಗ್ತಿರ್ತವೆ.
ಎರಡು ತಿಂಗಳ ಹಿಂದೆ ಫೇಸ್ ಬುಕ್ ಗೆ ಲಾಗಿನ್ ಆಗಿದ್ದಾಗ ನಡೆದ ಘಟನೆ. ಸ್ನೇಹಿತೆಯೊಬ್ಬಳು ಪಿಂಗ್ ಮಾಡಿದಳು. ಕುಶಲೋಪರಿಗಳ ಮಧ್ಯೆ, ಮತ್ತೆ ನಿನ್ನ ಫಿಯಾನ್ಸಿ ಹೇಗಿದ್ದಾಳೆ ಅಂದ್ಳು. ಎಲಾ! ನಂಗೆ ಆಶ್ಚರ್ಯ. ನನ್ನ ಮದುವೆ ಆಗಿ ಆಗಲೇ ೬ ತಿಂಗಳಾಗಿದೆ, ಅಲ್ಲದೇ ಇವಳಿಗೂ ಮೇಲ್ ಮಾಡಿ, ಫೋನ್ ಕೂಡ ಮಾಡಿ ಕರೆದಿದ್ದೆ!
ಏನಮ್ಮಾ, ನನ್ನ ಮದುವೆ ಆಗಿ ೬ ತಿಂಗಳಾಯ್ತು, ನಿನ್ನನ್ನು ಮದುವೆಗೂ ಕರೆದಿದ್ದೆ ಅಷ್ಟೂ ನೆನಪಿಲ್ಲವಾ ಅಂದೆ.
ಅವಳು ಸಮಾಧಾನವಾಗಿ, ಅಲ್ಲಾ, ನೀನು ನಿನ್ನ ಎಂಗೇಜ್ ಮೆಂಟ್ ಫೋಟೋಸ್ ಫೇಸ್ ಬುಕ್ ಗೆ ಹಾಕಿದ್ದೆಯಲ್ಲ, ಅದನ್ನ ನೋಡಿದ್ದೆ. ಆದರೆ ಮದುವೆ ಫೋಟೋಸ್ ಇನ್ನೂ ಹಾಕಿಲ್ಲವಲ್ಲ, ಹಾಗಾಗಿ ನಿನ್ನ ಮದುವೆ ಮುಂದೆ ಹೋಗಿರಬೇಕು ಅಂದುಕೊಂಡೆ ಎಂದಳು!!
***
ಮೂರು ವರ್ಷಗಳ ಹಿಂದಿನ ವಿಷಯ.ಕನ್ನಡದ ಪ್ರಸಿದ್ಧ ಹಿರಿಯ ಪರ್ತಕರ್ತರೊಬ್ಬರು ನನ್ನ ಗೆಳೆಯನ ಸಂಬಂಧಿ. ಅವರ ಮನೆಯಲ್ಲೇನೋ ಧಾರ್ಮಿಕ ಕಾರ್ಯಕ್ರಮವಿದ್ದು, ಇವನನ್ನೂ ಅವರ ಪತ್ನಿ ಆಹ್ವಾನಿಸಿದ್ದರು. ಮಧ್ಯಾಹ್ನ ಅಲ್ಲಿಗೆ ಹೋಗಲಾಗದ ಈತ ಸಂಜೆ ಹೊತ್ತಿಗೆ ಅಲ್ಲಿಗೆ ಹೋಗಿದ್ದ.

ಮನೆಯವರೆಲ್ಲ ಏನೇನೋ ಕೆಲಸಗಳಲ್ಲಿ ಬ್ಯುಸಿ ಇದ್ದರಂತೆ, ಈತ ಅಲ್ಲೇ ಕುಳಿತಿದ್ದ ಆ ಪತ್ರಕರ್ತರ ಡಿಗ್ರೀ ಓದುತ್ತಿರುವ ಮಗಳನ್ನು ಸುಮ್ಮನೆ ಮಾತಿಗೆಳೆದ. ಅವಳೋ, ಚಾನಲ್ಲುಗಳನ್ನು ಬದಲಿಸುತ್ತ ಟೀವಿ ಕಡೆ ಮುಖ ಮಾಡಿದ್ದಳು. ಆಗತಾನೇ ಚುನಾವಣೆಯ ಬಿಸಿ ಏರುತ್ತಿತ್ತು, ಕರ್ನಾಟಕದಲ್ಲಿ.

ನ್ಯೂಸ್ ಚಾನಲೊಂದರಲ್ಲಿ ಮತದಾರರು ಅವರ ಜವಾಬ್ದಾರಿಗಳ ಕುರಿತು ಏನೋ ಶೋ ಬರುತ್ತಿದ್ದುದನ್ನ ನೋಡಿದ ಗೆಳೆಯ, ಅವಳ ಬಳಿ ಪ್ರಸ್ತುತ ರಾಜಕೀಯದ ಬಗ್ಗೆ ಅವಳ ಅಭಿಪ್ರಾಯ ಕೇಳಿದನಂತೆ. ಅದಕ್ಕೆ ಅವಳದ್ದು ಡೋಂಟ್ ಕೇರ್ ಅನ್ನೋ ತರಹದ ಅಸಡ್ದೆಯ ಉತ್ತರ. ಈ ಬಾರಿ ನೀನು ವೋಟ್ ಮಾಡ್ತೀಯಾ ಅಂದಿದ್ದಕ್ಕೆ ಉತ್ತರ ನೋ ವೇ.

ಟಿ ವಿ ಚಾನಲುಗಳಲ್ಲಿ ಆಗಾಗ ಕಾಣಿಸಿಕೊಂಡು, ರಾಜಕೀಯ, ಮತದಾರರು , ಪ್ರಜಾಪ್ರಭುತ್ವ ಅಂತೆಲ್ಲ ಪುಂಖಾನುಪುಂಖವಾಗಿ ಮಾತನಾಡೋ ಪತ್ರಕರ್ತರೊಬ್ಬರ ಮಗಳಿಂದ ಇಂತಹ ಉತ್ತರ ಬಂದಿದ್ದು ನೋಡಿ ಈತನಿಗೆ ಅಚ್ಚರಿ.

ಹೋಗಲಿ, ನಿನ್ನ ಬಳಿ ವೋಟರ್ ಐಡಿ ಆದ್ರೂ ಇದೆಯಾ, ಅಂದಿದ್ದಕ್ಕೆ, ಇಲ್ಲ ಇಲ್ಲ, ನಾನು ಅದೆಲ್ಲ ಇಟ್ಟುಕೊಂಡಿಲ್ಲ ಅನ್ನುವ ಉಡಾಫೆಯ ಉತ್ತರ.
ನೋಡು, ವೋಟರ್ ಐಡಿ ಮಾಡಿಸಿಕೋ, ಅದು ಬಹಳ ಮುಖ್ಯ.. ಅಂತೇನೋ ಹೇಳೋಕೆ ಇವನು ಹೊರಟರೆ,
ಓ, ನೀನು ಆಗಿಂದ ಈ ಸುದ್ದಿ ಮಾತಾಡ್ತಾ ಇರೋದು ಇದಕ್ಕಾಗಿಯೋ?, ನೋಡು ನಾನು ಅದನ್ನೆಲ್ಲ ಮಾಡಿಸಿಕೊಳ್ಳಲ್ಲ, ನನಗೆ ವೋಟರ್ ಐಡಿ ಮಾಡಿಸಿಕೊಡೋದೂ ಬೇಡ, ಅದಕ್ಕೆ ಕಮೀಷನ್ ಗಿಮೀಷನ್ ಅಂತ ನೀನು ದುಡ್ದು ಮಾಡ್ಕೊಳ್ಳೋದೂ ಬೇಡ ಅನ್ನಬೇಕೆ?!

ಆತ ಅವಳಿಗೆ ಮತ್ತೇನೂ ಹೇಳೋಕೂ ಹೋಗದೇ, ಎದುರಿದ್ದ ಟಿವಿ ನೋಡುತ್ತ ಕುಳಿತನಂತೆ. ಅವಳು ವೋಟರ್ ಐಡಿ ಕಾರ್ಡ್ ಅಂದ್ರೆ ಕ್ರೆಡಿಟ್ ಕಾರ್ಡ್ ತರಹದ್ದೇನೋ ಒಂದು ಅಂತ ಅಂದುಕೊಂಡಿದ್ದಳು, ಪಾಪ.