ಬುಧವಾರ, ಡಿಸೆಂಬರ್ 19, 2012

ಕೊರಗಲಾಗದವರು



ತೇರು ಎಳೆದಾಗಿದೆ
ಅರ್ಚಕರು ಹೊತ್ತಿದ್ದ ಉತ್ಸವ ಮೂರ್ತಿ
ಇಳಿದು ಮರಳಿದೆ ಗರ್ಭಗುಡಿಯ ಕತ್ತಲಿಗೆ
ಮುಗಿದಿದೆ ದೇವರ ಹೆಸರಿನ ಜಾತ್ರೆ
ಕಳಚುತ್ತಿದ್ದಾರೆ ಕಂಬದ ಮೇಲಿನ ಮೈಕು
ಬಾಡಿಗೆ ಬೆಳಕಿನ ಬಣ್ಣದ ಸರ
ಕೊನೆಯ ಐಸ್ಕ್ರೀಮು ಗಾಡಿಯೂ ಹೊರಟು
ಉಂಡೆಲೆಗಳನೂ ಎಸೆದ ಮೇಲೆ ಸಿಕ್ಕಿದೆ
ತೇರ ಬೀದಿಯ ಅಂಚಲ್ಲಿ ಕಾದ ಮಂದಿಯ ಬುಟ್ಟಿಗೆ ಒಂದಿಷ್ಟು ಅನ್ನ

ಜೊತೆಗೊಂದಿಷ್ಟು ಸಾರು ಸಾಂಬಾರು
ಇನ್ನೇನು ಹಳಸುವ ಪಲ್ಯ
ತಲೆಯ ಮೇಲೆ ಅನ್ನಬ್ರಹ್ಮನ ಹೊತ್ತು
ಹೊರಟಿದೆ ಹಸಿದ ಕಾಲುಗಳ
ಖಾಸಗಿ ಮೆರವಣಿಗೆ ಮನೆಯ ಕಡೆಗೆ

ಮೃಷ್ಟಾನ್ನದ ಕೊನೆಯ ಅಧಿಪತಿಗಳ
ಹೊಟ್ಟೆ ತುಂಬಿ ಉಳಿದ ಕೂಳು
ಈಚಲ ಚಾಪೆಗಂಟಿಕೊಂಡು ಒಣಗುತ್ತಿರುವ
ಇಳಿ ಮಧ್ಯಾಹ್ನ ಸೂರ್ಯನ ಪ್ರಭೆಗೂ
ಮೀರಿದ ಕಾಂತಿ ಸಂತೃಪ್ತ ಮುಖಗಳಲಿ ಪ್ರತಿಫಲನ

ಯಜಮಾನನಿಗೆ ಸಂಜೆ ಮತ್ತಿದೆ ಕೆಲಸ
ದೇವಳದ ಸಂಭ್ರಮ ಮುಗಿದಿಲ್ಲ ಇನ್ನೂ
ರಾತ್ರಿ ಪೂಜೆಗು ಮುನ್ನ
ಸುತ್ತ ನಾಲ್ಕೂರಿಗೆ ಕೇಳುವ ಸಿಡಿಮದ್ದು
ಆ ಕ್ಷಣ ಮಾಡುವ ಸದ್ದಿಗೆ ಅವನೆ ಮಾಲಿಕ
ನೆಮ್ಮದಿಯ ನಿದ್ದೆಗೆ ಸದ್ದು ಬೇಕಿದೆ.

ಬೆಳಗಾದರೆ ಬಿಗಿಗೊಳಿಸಬೇಕು ಡೋಲು
ಮಹಲ ಮನೆಯ ಮೋಜಿನ
ಮೇಜವಾನಿಗೂ ಮುನ್ನ ಕಡ್ಡಾಯವಾಗಿ
ಕೇಳಬೇಕಿದೆ ಇವರ ಕಡ್ಡಾಯಿ ದನಿ
ಮತ್ತೆ ಸಂಸಾರಕ್ಕಿಡೀ ಬಾಳೆತುಂಬ ಊಟ
ಸಂಪ್ರದಾಯದ ಹೆಸರಲಿ ಸೇರಿಸಿರುವ
ಕೂದಲು ಉಗುರುಗಳ ಹೆಕ್ಕಿ ಪಕ್ಕಕ್ಕಿಟ್ಟರೆ
ಇಳಿಯಬಹುದು ಗಂಟಲ ತುತ್ತು.

ಅರಸನ ಅನ್ನವನುಂಡು ನಡೆದರೆ ಮತ್ತೆ ನಾಳಿನ ಚಿಂತೆ
ಸತ್ತರಾದರೆ ಸುತ್ತಮುತ್ತ ಯಾರಾದರೂ
ತಮಟೆಗೆ ಕೆಲಸ ರಟ್ಟೆಗೆ ದುಡಿತ
ಬಲ್ಲವರು ಅನ್ನುವರು ಕಾನೂನು
ಹೀಗಿಲ್ಲ, ಇದಕ್ಕೆ ಅನುಮತಿಯಿಲ್ಲ ಹೀಗೆ ಬದುಕ
ಬೇಕಿಲ್ಲ , ನಿಷೇಧ ಜೈಲು ಅರ್ಥವಾಗದ ಮಾತು

ಯೋಜನೆಗಳೆಂಬ ತೂತುಕೊಡದ ನೀರು ಮನೆವರೆಗಿಲ್ಲ
ಬೆಳಕ ದಾರಿಯ ತೋರಿಸಲು
ಬಂದವಗೆ ತೆರಬೇಕಿದೆ ಸುಂಕ
ನಾಳಿನನ್ನಕೆ ದಿಕ್ಕು ತೋರದೆ ನಿನ್ನೆಯದೆ ಹಾದಿ
ಹಿಡಿಯುವಂತಾಗಿದೆ
ಇಷ್ಟೆಲ್ಲ ಆದರೂ ಕೊರಗಲಾದವರು ಅವರು
ಮಿಣುಕು ಕಂದೀಲಿನ ದೀಪದಲೂ
ನಕ್ಷತ್ರಗಳ ಹೊಳಪ ಹುಡುಕುವವರು.
ಕೊರಗುತ್ತಲೇ ಕೂತರೆ ಉಣಿಸಲು ಬರುವವರು ಯಾರು?

ಕಡ್ಡಾಯಿ: ಕೊರಗ ಸಮುದಾಯದವರು ಬಾರಿಸುವ ವಾದ್ಯದ ಹೆಸರು.
ಕವನಕ್ಕೊಂದು ಟಿಪ್ಪಣಿ:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ ಕೊರಗ ಸಮುದಾಯದ ಜೀವನ ಶೈಲಿಯ ಕುರಿತ ಕವನ ಇದು. ಇಂದಿಗೂ ಕೂಡ ಉಭಯ ಜಿಲ್ಲೆಗಳ ಬಹಳಷ್ಟು ಕಡೆಗಳಲ್ಲಿ ಕೊರಗ ಜನಾಂಗವನ್ನು ಬಹು ನಿಕೃಷ್ಟವಾದ ಜೀವನಪದ್ದತಿಗೆ ದೂಡಲಾಗಿದೆ. ಕಾನೂನಿನ ಅಭಯಹಸ್ತ ಇನ್ನೂ ಅವರನ್ನು ತಲುಪಿಲ್ಲ. ಸತ್ತವರ ಮನೆ ಮುಂದೆ ತಮಟೆ ಬಾರಿಸುವ ಕೆಲಸ ಕೊರಗರದು. ಶ್ರೀಮಂತರ ಮನೆಗಳ ಸೀಮಂತ ಇತ್ಯಾದಿ ಸಮಾರಂಭಗಳಲ್ಲಿ ಉಗುರು, ಕೂದಲು ತುಂಬಿದ ಅನ್ನವನ್ನ ಕೊರಗರಿಗೆ ನೀಡಲಾಗುತ್ತದೆ. ಉಂಡು ಹೆಚ್ಚಾಗಿ ಉಳಿದ ಅನ್ನವನ್ನ ಒಣಗಿಸಿ ಸಂಗ್ರಹಿಸಿಟ್ಟುಕೊಳ್ಳುವ ಅನಿವಾರ್ಯತೆ ಅವರದು. ದೇವಸ್ಥಾನಗಳ ಜಾತ್ರೆಗಳಲ್ಲಿ ಅಪಾಯಕಾರಿ "ಕದೊನಿ" ಎಂಬ ಸಿಡಿಮದ್ದು ಸಿಡಿಸುವ, ಕಂಬಳಗಳಲ್ಲಿ ಡೋಲು ಬಾರಿಸುವ ಕೆಲಸಗಳನ್ನ ಕೊರಗರು ಮಾಡುತ್ತಲೇ ಬಂದಿದ್ದಾರೆ. ಆದರೆ ಅವರಿಗೂ ಅದನ್ನೆಲ್ಲ ಮಾಡದೇ ವಿಧಿಯಿಲ್ಲ. ಬೇರೆ ಸಂಪಾದನೆಯಿಲ್ಲ. ಅವರನ್ನು ರಕ್ಷಿಸುವ ಕಾನೂನಿನ ಬಗ್ಗೆ ಮಾಹಿತಿ ಅವರಿಗಿನ್ನೂ ಸಮರ್ಪಕವಾಗಿ ತಲುಪಿಲ್ಲ. ಹೀಗಾಗಿ ಇನ್ನೂ ಈ ಮುಗ್ಧ ಜನರ ಶೋಷಣೆ ಮುಂದುವರಿದಿದೆ.

ಸೋಮವಾರ, ಡಿಸೆಂಬರ್ 17, 2012

ಸೇತು ಬಂಧ



ನಾನು ಹೈಸ್ಕೂಲಿಗೆ ಹೋಗಬೇಕಿದ್ದರೆ ಮನೆಯಿಂದ ಶಾಲೆಗೆ ಸುಮಾರು ನಾಲ್ಕೈದು ಕಿಲೋಮೀಟರು ನಡೆಯಬೇಕಾಗಿತ್ತು. ಗದ್ದೆ ಹಾಡಿ ಹಳ್ಳ ತೋಡು ಸಣ್ಣ ನದಿ ಗುಡ್ಡ ಎಲ್ಲ ಹಾದುಕೊಂಡು ನಮ್ಮ ಪಯಣ ಸಾಗುತ್ತಿತ್ತು. ನಾಲ್ಕೆಂಟು ತೊರೆಗಳು ಒಟ್ಟಾಗಿ ನದಿ ಆಗುವ ಹಾಗೆ, ಎಲ್ಲೆಲ್ಲಿಂದಲೋ ಹುಡುಗರೆಲ್ಲ ಒಂದೆರಡು ನಿರ್ದಿಷ್ಟ ಸ್ಥಾನದಲ್ಲಿ ಒಟ್ಟಾಗಿ, ಕೊನೆಯ ಒಂದೆರಡು ಕಿಲೋಮೀಟರು ದೊಡ್ಡ ದಂಡೇ ಶಾಲೆಯ ಕಡೆ ನಡೆಯುತ್ತಿತ್ತು, ನದಿ ಸಮುದ್ರಕ್ಕೆ ಸೇರುವ ಹಾಗೆ. ಬೆಳ್ಳಂ ಬೆಳಗ್ಗೆ ಹರಟೆ ಹೊಡೆಯುತ್ತ,  ಅಬ್ಬ,ಬಚಾವ್.. ನನ್ನ ಹಾಗೆ ನನ್ನ ದೋಸ್ತಿಯೂ ಹೋಂ ವರ್ಕು ಮಾಡಿಲ್ಲವಲ್ಲ, ಹೊರಗೆ ನಿಲ್ಲಿಸಿದರೆ ಜೊತೆಗೊಂದು ಜನ ಗ್ಯಾರೆಂಟಿ ಎಂಬ ಅರೆ ಸಮಾಧಾನ ಹೊಂದುತ್ತ ನಮ್ಮ ನಡಿಗೆ ಸಾಗುತ್ತಿತ್ತು. ನಮ್ಮ ಈ ದಂಡು ಸೇರುವುದು ಮಾತ್ರ ಒಂದು ನಿರ್ದಿಷ್ಟ ಜಾಗದಲ್ಲಿ. ಆಚೀಚಿನ ಹಳ್ಳಿಗಳ ಹುಡುಗರೆಲ್ಲ ಬಂದು ಸೇರಿಕೊಳ್ಳುವುದು, ಮುಖ್ಯ ರಸ್ತೆಯಲ್ಲಿರುವ ಒಂದು ಪುಟ್ಟ ಸೇತುವೆಯ ಬಳಿ. ಬೆಳಗ್ಗೆ ಯಾರು ಎಷ್ಟು ಬೇಗ ಬೇಕಾದರೂ ಬಂದಿರಲಿ, ಮಳೆಯೇ ಇರಲಿ ಚಳಿ, ಬಿಸಿಲಿನ ಕಾಲವೇ ಆಗಲಿ, ಆ ಸೇತುವೆಯ ಮೇಲೆ ಕೂತು ಎಲ್ಲ ಬಂದ ಮೇಲೆ ಶಾಲೆಗೆ ಮುಂದುವರಿಯುವುದಾಗಿತ್ತು. ಆದರೆ ಎಲ್ಲರೂ ಸಮಯಕ್ಕೆ ಸರಿಯಾಗಿ ಬಂದೇ ಬಿಡುತ್ತಾರೆ ಎನ್ನುವ ಭರವಸೆ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಕಾದು ಕಾದು ಸುಸ್ತಾದ ಒಂದು ಗುಂಪು, ತಾವು ಮುಂದಕ್ಕೆ ಹೋಗಿದ್ದೇವೆ ಎಂಬುದಕ್ಕೆ ಸೂಚನೆಯಾಗಿ ಸೇತುವೆಯ ಮೂಲೆಯಲ್ಲಿ ಹತ್ತಿರದ ಮರ ಸೊಪ್ಪಿನ ಗೆಲ್ಲು ತರಿದು ನೇತು ಹಾಕಿ ಹೋಗುತ್ತಿತ್ತು. ಹಿಂದಿನಿಂದ ಬಂದ ತಂಡ ಮತ್ತೆ ಯಾರಿಗೂ ಕಾಯದೇ ಸೀದಾ ಶಾಲೆಗೆ. ಕಲ್ಲು ಗುಪ್ಪೆ, ಸೊಪ್ಪು, ಹೂ ಗೊಂಚಲು ಹೀಗೆ ಒಂದು ಗುಂಪಿಗೆ ಒಂದೊಂದು ಗುರುತು. ಹೀಗೆ, ಸುಮ್ಮನೆ ಮಲಗಿದ್ದಲ್ಲೇ ಇದ್ದ ಆ ಸೇತುವೆ ನಮ್ಮ ನಡುವಣ ಸಂದೇಶ ವಾಹಕನಾಗಿ ಕೆಲಸ ಮಾಡುತ್ತಿತ್ತು. ಕೆಲ ಬಾರಿ ಇಟ್ಟಿದ್ದ ಸೊಪ್ಪು ಕೆಳಗೆ ನದಿಗೆ ಬಿದ್ದು ಹೋಗಿ, ನಮ್ಮ ನಮ್ಮಲ್ಲಿ ಅನ್ಯಾಯವಾಗಿ ಜಗಳ ಬೇರೆ. ಸುಮ್ಮನೇ ಅಲ್ಲಿ ಕೂತು ನಾವು ಬರುತ್ತೇವೆ ಅಂತ ಕಾದು, ತಡವಾಗಿ ಶಾಲೆಗೆ ಬಂದು ಬೈಸಿಕೊಳ್ಳುವಾಗ. ಸೊಪ್ಪು ಇಟ್ಟೇ ಇಲ್ಲ ಅಂತ ಬೈಸಿಕೊಂಡವರೂ, ಇದ್ದೆಲ್ಲ ದೇವರುಗಳ ಮೇಲೆ ಆಣೆ ಹಾಕುತ್ತ ಕುತ್ತಿಗೆ ಚರ್ಮ ಎಳೆದುಕೊಳ್ಳುತ್ತ ನಾವೂ ಬಾಯಿ ಮಾಡುತ್ತಿದ್ದವು. 
ಆದರೆ ಎಂತದ್ದೇ ಜಗಳ ಆದರೂ, ಸಂಜೆ ಅದೇ ಸೇತುವೆ ನಮ್ಮನ್ನ ಒಟ್ಟು ಮಾಡುತ್ತಿತ್ತು. ಸೀಸನ್ನಿಗೆ ಅನುಸಾರವಾಗಿ ಸಿಕ್ಕಿದ್ದ ಹುಣಸೆ ಮಾವು ಯಾರದೋ ತೋಟದಿಂದ ಕದ್ದ ಕಬ್ಬು ಕೊನೆಗೆ ಎಂತದೂ ಇಲ್ಲದಿದ್ದರೆ ಹೊಳೆ ದಾಸವಾಳ ಹಣ್ಣಾದರೂ ಅಲ್ಲೇ ಪಾಲಾಗುತ್ತಿತ್ತು. ಸುಮ್ಮನೆ ಕೆಳಗೆ ಹರಿಯುವ ಹೊಳೆ ನೋಡುತ್ತ, ಯಾವುದೇ ಗೊತ್ತು ಗುರಿ ಇಲ್ಲದೇ ನೀರಿಗೆ ಕಲ್ಲೆಸೆಯುತ್ತ ಅದು ಮಾಡುವ ಬುಳಕ್ ಬುಳಕ್ ಸದ್ದು ಕೇಳುತ್ತ ಸಂಜೆಗತ್ತಲಾಗುತ್ತಿದ್ದ ಹಾಗೆ ಮನೆ ದಾರಿ ಹಿಡಿಯುತ್ತಿದ್ದೆವು. ನಮ್ಮಲ್ಲೇ ಕೆಲ ಧೈರ್ಯದ ಭೂಪರು ಶಾಲೆ ಚೀಲವನ್ನು ಅಲ್ಲೇ ಮರಕ್ಕೆ ನೇತು ಹಾಕಿ, ಯುನಿಫಾರಂ ಬಿಚ್ಚಿಟ್ಟು ಸೇತುವೆಯಿಂದ ಲಾಗ ಹೊಡೆದು ಈಜುತ್ತಿದ್ದದ್ದೂ ಉಂಟು. ಈಜಿನ ಎಬಿಸಿಡಿ ಗೊತ್ತಿಲ್ಲದ ನಾನು ಮೇಲೆ ಕೂತೇ ಸ್ನೇಹಿತರ ಹುಚ್ಚಾಕ್ಕೆ ಚಪ್ಪಾಳೆ ತಟ್ಟುತ್ತಿದ್ದೆ. ಕೊನೆಗೂ ನಾನಲ್ಲಿ  ಈಜು ಕಲಿಯುವ ಮನಸ್ಸೇ ಮಾಡಲಿಲ್ಲ ಎನ್ನುವುದು ಇವತ್ತಿಗೂ ಕೊರಗೇ. ಒಂದು ದಿನ ದೋಸ್ತಿಯೊಬ್ಬ ಅದೇ ಸೇತುವೆ ಮೇಲೆ ಕೂತು ಗಾಳ ಕೂಡ ಹಾಕುವುದನ್ನ ಕಲಿಸಿದ್ದ. ಉದ್ದ ಕೋಲಿಗೆ ಎಂಥದೋ ಕೊಕ್ಕೆ ರ ಮಾಡಿ, ಎರೆಹುಳ ಹಿಡಿದು ನೀರಿಗೆ ದಾರ ಎಸೆದು ಕೂರುತ್ತಿದ್ದ. ಮೀನು ಗಾಳಕ್ಕೆ ಸಿಕ್ಕ ಕೂಡಲೇ ಪಟಕ್ಕೆಂದು ಕೋಲೆತ್ತಿ ಮೀನು ಬಿಡಿಸಿಕೊಂಡು ಪ್ಲಾಸ್ಟಿಕ್ಕಿಗೆ ಹಾಕಿಕೊಳ್ಳುತ್ತಿದ್ದ.  ಅವನು ನನಗೆ ಗಾಳ ಹಾಕುವುದನ್ನು ಹೇಳಿಕೊಟ್ಟ ಮೊದಲ ದಿನವೇ, ಅಪ್ಪನ ಸ್ನೇಹಿತರು ಯಾರೋ ನನ್ನನ್ನ ನೋಡಿದವರು ನಿಮ್ಮ ಮಗ ದಾರಿ ತಪ್ಪಿದ್ದಾನೆ, ಶಾಲೆಗೆ ಹೋಗದೇ ಗಾಳ ಹಾಕುತ್ತ ಕೂತಿದ್ದಾನೆ ಎಂಬಿತ್ಯಾದಿ ಮಾಹಿತಿಗಳನ್ನು ಉಪ್ಪುಖಾರ ಸಮೇತ ಸೇರಿಸಿ ನಾನು ಮೀನುಗಾರಿಕೆಯೆಂಬ ಉದ್ಯಮದಲ್ಲಿ ಮುಂದುವರಿಯುವ ಸಾಧ್ಯತೆಗೆ ಕಲ್ಲು ಹಾಕಿದರು. 

ನಮ್ಮ ಗುಂಪಿನಲ್ಲೇ ಇದ್ದು, ಕೊನೆ ಕೊನೆಗೆ ಸೊಪ್ಪಿನ ಚಂಡೆ ಇಟ್ಟು ಮುಂದೆ ಹೋಗುತ್ತಿದ್ದ ಗೆಳೆಯ ಗೋಪಾಲನ ಪ್ರೇಮ ಪ್ರಕರಣ ಕೂಡ ಶುರುವಾಗಿದ್ದು ಅದೇ ಸೇತುವೆಯಲ್ಲಿ ಅಂತ ನಮಗೆ ಗೊತ್ತಾಗಿದ್ದು ಬಹಳ ಕಾಲದ ನಂತರ. ದಿನಾ ಬೇಗ ಸೇತುವೆಯ ಹತ್ತಿರ ಬಂದು ಕಾಯುತ್ತಿದ್ದ ಗೋಪಾಲನಿಗೆ ಬೇಗನೆ ಶಾಲೆಗೆ ಹೋಗುತ್ತಿದ್ದ ನಮ್ಮ ಜೂನಿಯರು, ಎಂಟನೇ ಕ್ಲಾಸು ಹುಡುಗಿಯೊಬ್ಬಳ ಜೊತೆ ನಗು ವಿನಿಮಯ ಆಗಿ ಆಗಿ, ಕೊನೆಗೆ ಆತ ನಮ್ಮ ತಂಡ ಬಿಟ್ಟು ಅವಳ ಜೊತೆಗೇ ಹೋಗಿ ಬರಲು ಆರಂಭಿಸಿದ್ದ. ಆದರೆ ಒಂದೇ ವರ್ಷದೊಳಗೆ ಮತ್ತೆ ಹತ್ತನೇ ಕ್ಲಾಸಿಗೆ ಅವನು ನಮ್ಮ ಟೀಮಿಗೇ ವಾಪಾಸಾಗಿ ಪ್ರೀತಿ ನಶ್ವರ ಎಂಬಿತ್ಯಾದಿ ಮಾತುಗಳನ್ನ ಆಡಲು ಶುರು ಮಾಡಿದ್ದ. ಆದರೆ ನಮ್ಮಗಳಿಗೆ ಆಗತಾನೇ ಲವ್ವಿನ ಬಗ್ಗೆ ಆಸಕ್ತಿ ಹುಟ್ಟಲು ಶುರುವಾಗಿದ್ದರಿಂದ ಅವನ ಉಪದೇಶಗಳಿಗೆ ಸೊಪ್ಪು ಹಾಕಲಿಲ್ಲ ಅನ್ನುವುದು ಬೇರೆ ವಿಷಯ. ನಾನೂ ಗೋಪಾಲನ ಹಾಗೆ ಒಂದಿಷ್ಟು ದಿನ ಬೇಗ ಬಂದು ಸೇತುವೆಯ ಸುತ್ತ ಠಳಾಯಿಸಿದೆ. ಒಂದೇ ಒಂದು ಮಿಕ ಕೂಡ ಬಲೆಗೆ ಬೀಳದೇ ನಿರಾಶನಾಗಿ ನನ್ನ ಪ್ರಯತ್ನ ಕೈಬಿಟ್ಟೆ. 
ಹೀಗೆ ಯಕಶ್ಚಿತ್ ಸೇತುವೆಯೊಂದು ಯಾವುದೇ ಉದ್ದೇಶಗಳಿಲ್ಲದ ಸ್ವಾರ್ಥಗಳಿಲ್ಲದ ಆ ವಯಸ್ಸಿನಲ್ಲಿ  ನಮ್ಮ ಸ್ನೇಹ ಆಟ ಪ್ರೇಮಗಳಿಗೆ ವೇದಿಕೆಯೊದಗಿಸಿತ್ತು. ಒಂದಿಷ್ಟು ದಿನ ನಾವು ಸಂಕ ಫ್ರೆಂಡ್ಸ್ ಎನ್ನುವ ಹೆಸರಲ್ಲಿ ಕ್ರಿಕೆಟ್ ಟೀಮ್ ಕೂಡ ಕಟ್ಟಿದ್ದೆವು. ಶನಿವಾರ ಭಾನುವಾರಗಳಂದು ನಡೆಯುವ ಟೂರ್ನಮೆಂಟುಗಳಲ್ಲಿ ನಾವು ಹೇಗೆ ಎದುರಾಳಿ ತಂಡಕ್ಕೆ ಮಣ್ಣು ಮುಕ್ಕಿಸಬೇಕು ಎಂದು ಪ್ಲಾನು ಮಾಡಿ, ರಣೋತ್ಸಾಹದಲ್ಲಿ ಹೋಗಿ, ವೀರೋಚಿತ ಹೋರಾಟದ ಉದ್ದೇಶ ಹೊಂದಿ ಕಣಕ್ಕಿಳಿದು ಕೊನೆಗೆ ಹೀನಾಯವಾಗಿ ಸೋತು ವಾಪಸ್ಸು ಬರುತ್ತಿದ್ದೆವು. ಮತ್ತೆ ಅದೇ ಸೇತುವೆಯ ಅಕ್ಕ ಪಕ್ಕದಲ್ಲೋ ಕೆಳಗೆ ತೆಳುವಾಗಿ ಹರಿಯುತ್ತಿದ್ದ ನೀರಲ್ಲೋ ಬಿದ್ದುಕೊಂಡು ಯಾರ ಮೇಲೆ ತಪ್ಪು ಹೊರಿಸುವುದು ಎಂದು ಲೆಕ್ಕಾಚಾರ ಹಾಕುತ್ತಿದ್ದೆವು. ಟೀಮು ಶುರುವಾದಷ್ಟೇ ಬೇಗ ನೇಪಥ್ಯಕ್ಕೂ ಸರಿಯಿತು. ಸಖ್ಯ ಮಾತ್ರ ಮುಂದುವರಿಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರುತ್ತಿದ್ದ ಹಾಗೆ, ಸೇತು ಬಂಧ ಕಡಿಮೆಯಾಯಿತು.

ಪರೀಕ್ಷೆಗೆ ಓದಲೆಂದೇ ನಂಗೆ ಇನ್ನೊಂದು ಸೇತುವೆ ಸಹಾಯ ಮಾಡಿದೆ. ನಮ್ಮ ಮನೆಯ ಕೂಗಳತೆ ದೂರದಲ್ಲೇ ಪುಟ್ಟ ಕಾಲುವೆ ಇದೆ. ಮಳೆಗಾಲದಲ್ಲಿ ಮಾತ್ರ ನೀರು ಬಲವಾಗಿ ಹರಿಯುವ ಆ ಕಾಲುವೆಗೆ ಪ್ರತಿವರ್ಷ ಅಣೆಕಟ್ಟು ಕಟ್ಟುತ್ತಾರೆ. ಅಕ್ಟೋಬರ್ ಹೊತ್ತಿಗೆ ನೀರಿಗೆ ಒಡ್ಡು ಕಟ್ಟಿದರೆ, ಸುಮಾರು ಫೆಬ್ರವರಿ ಮಾರ್ಚ್ ತನಕವೂ ನೀರು ನಿಂತು, ಪೈರುಗಳಿಗೆ ತಂಪು ನೀಡುತ್ತವೆ. ಆ ಅಣೆಕಟ್ಟಿನ ಮೇಲಿನ ಸೇತುವೆಯಲ್ಲಿ ಹೆಚ್ಚಿನ ಜನ ಸಂಚಾರವಿಲ್ಲ. ಸುತ್ತ ಮರಗಳ ನೆರಳು. ಗೋಣಿ ಚೀಲವೊಂದನ್ನ ತೆಗೆದುಕೊಂಡು, ಸೇತುವೆಯ ಕಟಾಂಜನಕ್ಕೆ ಒರಗಿಕೊಂಡು ಪುಸ್ತಕ ಹಿಡಿದು ಓದಲು ಕೂತರೆ, ಹಕ್ಕಿಗಳ ಚಿಲಿಪಿಲಿ, ನಿಂತ ನೀರಿನ ಮೇಲೆ ಹಾದು ಬರುವ ಗಾಳಿಯ ತಂಪು. ಕಟಾವಿನ ಸಂದರ್ಭದಲ್ಲಿ ಮಾತ್ರ ಆಚೀಚಿನ ಗದ್ದೆಗಳಲ್ಲಿ ಹೆಂಗಸರ ಕಚಿಪಿಚಿ. ಏನೇ ಇದ್ದರೂ, ಅಲ್ಲಿ ಕೂತರೆ ಒಂಥರಾ ಧ್ಯಾನಸ್ಥ ಸ್ಥಿತಿ. ಆದ್ರೆ ಒಳ್ಳೇ ಊಟ ಮಾಡಿಕೊಂಡು ಓದಲು ಹೋದಾವಾಗ ಅದೆಷ್ಟು ಮಧ್ಯಾಹ್ನ ಅಲ್ಲಿ ಜೊಂಪು ಹತ್ತಿದೆಯೋ ಏನೋ. ಯಾರಾದರೂ ಕೊಯ್ಲು ಮಾಡುವ ಹೆಂಗಸರೋ, ದಾರಿಹೋಕರೋ ನೋಡಿ, ಎಂತ ಮಾರ್ರೆ, ಓದ್ಲಿಕ್ಕೆ ಬಂದು ನಿದ್ರೆ ಮಾಡುದಾ ಅಂತ ನಕ್ಕರೆ, ಇಲ್ಲ ಸ್ಪಲ್ಪ ಹೀಗೆ ಎಂದು ಪೆಚ್ಚು ನಗೆ ನಕ್ಕು, ಮತ್ತೆ ಪುಸ್ತಕದೊಳಗೆ ತಲೆ ತೂರಿಸುವ ಯತ್ನ.

ಅದೇ ಸೇತುವೆ ಮೇಲಿಂದ ಸಂಜೆ ಹೊತ್ತಿಗೆ ಆಲಿಂಡಿಯಾ ರೇಡಿಯೋದ ಮಂಗಳೂರು ಆಕಾಶವಾಣಿಯ ಪ್ರಾದೇಶಿಕ ವಾರ್ತೆ , ಕೃಷಿರಂಗದ ಧ್ವನಿ ತೇಲಿ ಬರುತ್ತಿತ್ತು. ಆ ಸಂಕದ ಕೊಂಚ ಮೇಲಕ್ಕೆ ಇರುವ ಮನೆಯ ಹಸನಬ್ಬ ಸಾಹೇಬರು ಮೊದಲಿಂದಲೂ ಆಕಾಶವಾಣಿಯ ಕೇಳುಗ. ಯಾವಾಗ ಮನೆಯಲ್ಲಿ ಟಿವಿ ಬಂದು, ಆಮೇಲೆ ಡಿಶ್ ನ ಗೌಜಿ ಕೂಡ ಶುರುವಾಯಿತೋ, ಆವತ್ತಿಂದ ಸಂಜೆ ಹೊತ್ತಿಗೆ ಅವರು ತಮ್ಮ ಆರು ಶೆಲ್ಲಿನ ರೇಡಿಯೋ ಹಿಡಿದುಕೊಂಡು ಬಂದು ಇದೇ ಸಂಕದ ಮೇಲೆ ಕೂರುವುದನ್ನ ಅಭ್ಯಾಸ ಮಾಡಿಕೊಂಡರು. ಯುವವಾಣಿ ಮುಗಿಯುವ ವರೆಗೂ ಹಸನಬ್ಬ ಸೇತುವೆಯ ಸುತ್ತ ಮುತ್ತ ಓಡಾಡಿಕೊಂಡು ರೇಡಿಯೋ ಕೇಳುತ್ತಿದ್ದರು. ಕೆಲ ಬಾರಿ ಅವರಿಗೆ ನರಸಿಂಹ ಭಟ್ಟರೋ, ಯಂಕಪ್ಪ ಶೆಟ್ಟರೋ ಜೊತೆಯಾಗುತ್ತಿದ್ದದ್ದೂ ಉಂಟು. ಕೊಳ್ಳಿದೆವ್ವಗಳ ಹಾಗೆ ಬ್ಯಾಟರಿ ಬೆಳಕು ಆಕಾಶಕ್ಕೆ ತೋಟಕ್ಕೆ ಬಿಟ್ಟುಕೊಂಡು ಎರಡು ಮೂರು ಜೀವಗಳು ಅಲ್ಲಿ ಓಡಾಡುವುದು ನಮ್ಮ ಮನೆಗೆ ಕಾಣುತ್ತಿತ್ತು. ವಾರ್ತೆ ಗೀರ್ತೆ ಕೇಳಿ ಎಲ್ಲ ಹಾಳಾಗಿ ಹೋಗಿದೆ ಭಟ್ರೆ, ಒಟ್ಟಾರೆ ಯಾವುದು ಬರ್ಕತ್ತಿಲ್ಲ ಎಂದು ಹೇಳಿದ ಹಸನಬ್ಬ ಮನೆಗೆ ಹೊರಡುತ್ತಿದ್ದರು. ಒಂದು ಚಳಿಗಾಲದಲ್ಲಿ ಹಸನಬ್ಬರು ರೇಡಿಯೋ ಕೇಳುತ್ತಾ  ಓಡಾಡುತ್ತಿದ್ದವರು ಆಳುದ್ದ ನೀರಿಗೆ ಆಯತಪ್ಪಿ ಬಿದ್ದು ಬೊಬ್ಬೆ ಹೊಡಕೊಂಡರು. ರೇಡಿಯೋ ಸದ್ದಿನ ಮಧ್ಯೆ ಇವರ ಬೊಬ್ಬೆ ಯಾರಿಗೂ ಕೇಳಲಿಲ್ಲ. ಎಲ್ಲಿಗೋ ಹೋಗಿದ್ದ ಅವರ ಮಗ ಅದೇ ಹೊತ್ತಿಗೆ ಅಲ್ಲಿಗೆ ಬಂದಿದ್ದಕ್ಕೆ ಹಸನಬ್ಬ ಬಚಾವಾದರು. ಆವತ್ತಿನ ನಂತರ ಸಂಕದ ಕಡೆಯಿಂದ ರೇಡಿಯೋ ದನಿ ಕೇಳಿಲ್ಲ. ಅವರಿಗೂ ಟೀವಿ ಅಭ್ಯಾಸವಾಯಿತು ಅಂತ ಕಾಣುತ್ತದೆ.

ಈ ಎರಡು ಸೇತುವೆಗಳ ಜೊತೆಗಿನ ಒಡನಾಟ ನನಗೀಗ ಕಡಿಮೆಯಾಗಿದೆ. ನೆನಪಲ್ಲಿ ಇಟ್ಟುಕೊಳ್ಳುವಂತಹ ಹಲ ಸೇತುವೆಗಳು ಜೀವನದಲ್ಲಿ ಬಂದು ಹೋಗಿವೆ. ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯ ಸಮೀಪದ ಶಿಥಿಲ ಸೇತುವೆಯ ಚಂದ, ಉಡುಪಿಯ ಪಾಂಗಾಳದ ಹಳೆಯ ಸೇತುವೆ ಸೊಗಸು, ಮಂಗಳೂರಿನ ನೇತ್ರಾವತಿಯ ಮತ್ತು ತೀರ್ಥಹಳ್ಳಿಯ ತುಂಗಾನದಿಯ ಕಮಾನು ಸೇತುವೆಗಳು, ಒಳ್ಳೆಯ ಮಳೆಗಾಲದಲ್ಲಿ ಕಟೀಲಿನ ದೇವಸ್ಥಾನದ ಸೇತುವೆ ಮೇಲೆ ನಿಂತರಾಗುವ ಅನುಭೂತಿ , ಹೊನ್ನಾವರದ ಉದ್ದನೆಯ ಬ್ರಿಡ್ಜಿನ ಮೊದಲ ಬಾರಿಗೆ ಪ್ರಯಾಣಿಸಿದಾಗ ಆದ ರೋಮಾಂಚನ, ಮಂಗಳೂರು ಬೆಂಗಳೂರು ರೈಲು ಪ್ರಯಾಣದ ಎಡಕುಮೇರಿ ಸೇತುವೆ, ಚಂಬಲ್ ಕಣಿವೆಯ ಬರಡು ನದಿಯ ಮೇಲಿನ ರೈಲ್ವೇ ಪ್ರಯಾಣ ಹೀಗೆ ಹಲವು ಸೇತುವೆಗಳು ನೆನಪಲ್ಲಿವೆ.

ಸ್ನೇಹಿತನೊಬ್ಬನ ಮದುವೆಯ ಸಂಭ್ರಮಕ್ಕೆಂದು ದಾಂಡೇಲಿಗೆ ಹೋಗಿದ್ದೆವು. ಆತನ ಮಾವನ ಮನೆಯ ಕೆಳಗೇ ಕಾಳಿ ನದಿ ಭೋರೆಂದು ಸದ್ದು ಮಾಡುತ್ತ ಹರಿಯುತ್ತದೆ. ಮದುವೆಯ ಪ್ರಥಮ ರಾತ್ರಿಯ ಅಲಂಕಾರ, ಗೋಳು ಹೊಯ್ದುಕೊಳ್ಳುವಿಕೆ ಎಲ್ಲ ಮುಗಿದ ಮೇಲೆ ಮದುಮಕ್ಕಳನ್ನ ಅವರ ಪಾಡಿಗೆ ಬಿಟ್ಟ ನಾವು ನಾಲ್ಕೈದು ಮಂದಿ ಆ ಸೇತುವೆಯ ಮೇಲೆ ಹೋಗಿ ಕೂತಿದ್ದೆವು. ಸುಮಾರು ಮಧ್ಯರಾತ್ರಿ. ಅಮಾವಾಸ್ಯೆಯ ಹಿಂದು ಮುಂದಿನ ಸಮಯವೋ ಏನೋ. ಕತ್ತಲೆಂದರೆ ಕತ್ತಲು. ಕೆಳಗೆ ನದಿ ಸಿಕ್ಕಾಪಟ್ಟೆ ಸದ್ದು ಮಾಡಿಕೊಂಡು ಹರಿಯುತ್ತಿದೆ, ಶಬ್ದ ಕೇಳುತ್ತಿದೆ ಬಿಟ್ಟರೆ ಏನೆಂದರೆ ಏನೂ ಕಾಣುತ್ತಿಲ್ಲ! ಕಾಳಿ ಎಂಬ ಹೆಸರು ಆ ನದಿಗೇಕೆ ಇದೆ ಎಂಬುದು ಆವತ್ತು ನಮಗರ್ಥವಾಯಿತು. ಆ ಅಪರಾತ್ರಿಯಲ್ಲಿ ಅಲ್ಲಿನ ಸೇತುವೆ ಮೇಲೆ ಕೂತುಕೊಂಡು ಏನೇನೋ ಹರಟುತ್ತ ಕೂತಿದ್ದೆವು. ಯಾವುದೋ ಲಾರಿಯೊಂದು ತುತ್ತೂತ್ತೂ ತುತ್ತುತ್ತಾರ ಎಂದು ಹಾರ್ನು ಮಾಡಿಕೊಂಡು ನಮ್ಮನ್ನ ಹಾದು ಹೋಯಿತು. ಆ ಕಪ್ಪು ರಾತ್ರಿಯಲ್ಲಿ ಅವನು ಮಾಡಿದ ಲಯಬದ್ಧ ಸದ್ದು ಇನ್ನೂ ಕಿವಿಯಲ್ಲೇ ಇದೆ.
ಕುಮಾರ ಪರ್ವತ ಟ್ರೆಕ್ಕು ಮಾಡುವ ದಾರಿಯಲ್ಲಿ ಕಂಡ ತೂಗು ಸೇತುವೆಯೊಂದು ತನ್ನ ಹಲಗೆಗಳನ್ನು ಮಧ್ಯ ಮಧ್ಯ ಉದುರಿಸಿಕೊಂಡು ನಿಂತಿತ್ತು. ಗೆಳೆಯ ಸಂದೀಪ ಅದನ್ನ ಕಂಡವನೇ, ಪಟಕ್ಕನೆ, “ ಇದು ತೂಗು ಸೇತುವೆ ಅಲ್ಲ, ತೂತು ವೇ” ಅಂದ,ಮಧ್ಯದ ಎರಡು ಅಕ್ಷರಗಳನ್ನ ಎಗರಿಸಿ!

ತೂಗು ಸೇತುವೆ ಅಂದಾಗ ನೆನಪಾಯಿತು, ಕೊಡಚಾದ್ರಿ ಗುಡ್ಡದ ಕೆಳಗೆ ಹರಿಯುವ ಶರಾವತಿ ಕಣಿವೆಯ ಮೂಲೆಯಲ್ಲೆಲ್ಲೋ ಇರುವ ಚಿಕ್ಕಪ್ಪ ಮೊನ್ನೆ ಮೊನ್ನೆ ಫೋನು ಮಾಡಿದ್ದ. ಅವನ ಮನೆಯ ನೆತ್ತಿಯ ಮೇಲೆಲ್ಲೋ ಅಪರೂಪಕ್ಕೆ ಮೊಬೈಲಿಗೆ ಸಿಗ್ನಲ್ ಸಿಗುತ್ತದೆ. ಸುತ್ತ ಕಾಡು ಗುಡ್ಡಗಳು, ಸುಖ ಜೀವನ ಅವನ ಸಂಸಾರದ್ದು. ದಿನ ಬೆಳಗಾದರೆ ಹಕ್ಕಿ ಕೂಜನ, ಮಂಜು ಮುಸುಕು. ಇರಲಿ, ವಿಷಯ ಅದಲ್ಲ. ಅವನ ಫೋನು ಮಾಡಿದ್ದು ಬ್ರೇಕಿಂಗ್ ನ್ಯೂಸ್ ಒಂದನ್ನ ಕೊಡುವುದಕ್ಕೆ. ನಮ್ಮೂರಿಗೆ ತೂಗು ಸೇತುವೆ ಬಂತು ಮಾರಾಯ ಅಂದವನ ಧ್ವನಿಯಲ್ಲಿ ನಿಟ್ಟುಸಿರೂ ಸೇರಿಕೊಂಡಿತ್ತು. ಅಂತೂ ಬಂತಲ್ಲ ಅಂತ ನಾನೂ ಖುಷಿಯಾದೆ. ಲಿಂಗನಮಕ್ಕಿ ಹಿನ್ನೀರಿನಿಂದಾಗಿ “ಹೊಳಿಂದಾಚೆಗೆ” ಹೊಳಿಂದೀಚೆಗೆ” ಎಂಬ ಎರಡು ಬಗೆಯೆ ಊರುಗಳು ಶಿವಮೊಗ್ಗ ಜಿಲ್ಲೆಯಲ್ಲಿ ಸೃಷ್ಟಿಯಾಗಿವೆ. ಹಿನ್ನೀರಿನ ಈ ಕಡೆಯ ಮತ್ತು ಆ ಕಡೆಯ ಊರು ಹಳ್ಳಿಗಳು ಹೀಗೆ ವಿಭಜನೆಗೊಂಡಿವೆ. ಶರಾವತಿಯ ಹಿನ್ನೀರು ಸಾಗರ ಹೊಸನಗರ ಸೀಮೆಗಳ ತೋಟ ಊರು ಪಟ್ಟಣಗಳನ್ನ ಯಥಾಸಾಧ್ಯ ನುಂಗಿ ಸುರುಳಿ ಸುತ್ತಿಕೊಂಡು ಬಿದ್ದುಕೊಂಡಿದೆ. ನೀವು ಗೂಗಲ್ ಮ್ಯಾಪಿನಲ್ಲಿ ನೋಡಿದರೆ ನಾನು ಹೇಳುತ್ತಿರುವುದರ ಸರಿಯಾದ ಚಿತ್ರಣ ಸಿಕ್ಕೀತು. ಈ ನೀರಿನ ಚಕ್ರವ್ಯೂಹದಿಂದಾಗಿ ತೀರಾ ಎದುರುಗಡೆ ದಡದಲ್ಲಿ ಕಾಣುತ್ತಿರುವ ಮನೆಗೆ ಹೋಗಬೇಕೆಂದರೆ ಡಾಂಬರು ರಸ್ತೆಯಲ್ಲಿ ಹತ್ತಾರು ಕಿಲೋಮೀಟರು ಸುತ್ತು ಹಾಕಿಕೊಂಡು ಹೋಗಬೇಕಾದ ಸ್ಥಿತಿಯಲ್ಲಿ ಅಲ್ಲಿನ ಊರುಗಳವರು ಇದ್ದಾರೆ. ಅಲ್ಲಲ್ಲಿ ದೋಣಿ ಕಳವುಗಳಿದ್ದರೂ ಕೂಡ ಒದ್ದಾಟವೇನೂ ತಪ್ಪಿದ್ದಲ್ಲ. ಅಗಾಧ ವಿಸ್ತಾರದ ಶರಾವತಿ ಕೊಳ್ಳಕ್ಕೆ ಸೇತುವೆ ಕಟ್ಟುವುದು ಸುಲಭವೂ ಇಲ್ಲ. ಈಗ ಅಲ್ಲೆಲ್ಲೋ ನಿಟ್ಟೂರು ಹತ್ತಿರ ಹೊಳೆಯಾಚೆಯಿಂದ ಈಚೆಗೆ ದಾಟಲು ತೂಗು ಸೇತುವೆ ಕಟ್ಟಿದ್ದಾರೆ. ಹೆಚ್ಚೆಂದರೆ ಬೈಕು ಹೋಗಬಹುದು. ಆದರೂ ಅಲ್ಲಿನ ಜನಕ್ಕೆ ಅದೇ ಖುಷಿಯಾಗಿದೆ. ಏಕೆಂದರೆ ಜೀವನದ ಬಹುಮೂಲ್ಯ ಸಮಯವನ್ನು ಅವರುಗಳು ಗುಡ್ಡ ಬೆಟ್ಟಗಳನ್ನು ಹಾದು ಊರಿಂದೂರಿಗೆ ತಿರುಗುವುದರಲ್ಲೆ ಕಳೆದಿದ್ದಾರೆ. ತೂಗುವ ಸೇತುವೆಯೇ ಜೀವನಕ್ಕೆ ಸ್ಥಿರತೆ ತಂದಿದೆ.

ಮರಕುಟಕ ಅಂತೊಂದು ಸೇತುವೆ ಇದೆ, ಅದೇ ಕೊಡಚಾದ್ರಿಯ ತಪ್ಪಲಲ್ಲಿ. ಕೊಲ್ಲೂರು ಮತ್ತು ನಿಟ್ಟೂರೆಂಬ ಊರುಗಳ ಮಧ್ಯೆ. ಸೇತುವೆಯೊಂದಕ್ಕೆ ಯಾಕೆ ಅಂತಹ ವಿಚಿತ್ರ ಹೆಸರು ಇದೆಯೋ ನನಗೆ ತಿಳಿಯದು. ಬ್ರಿಟೀಷರ ಕಾಲದಲ್ಲಿ ಚಕ್ರಾ ನದಿಯ ಉಪನದಿಯೊಂದಕ್ಕೆ ಕಟ್ಟಿರುವ ಆ ಇಕ್ಕಟ್ಟಾದ ಸೇತುವೆಗೆ ಏನಿಲ್ಲ ಅಂದರೂ ನೂರು ನೂರೈವತ್ತು ವರ್ಷಗಳ ಇತಿಹಾಸ ಇದೆ ಅಂತ ಹತ್ತಿರದ ಊರುಗಳ ಜನ ಹೇಳುತ್ತಾರೆ. ಇನ್ನೇನು ಕುಸಿದೇ ಬಿಡುತ್ತದೆ ಎನ್ನುವಂತೆ ಕಾಣುವ ಆ ಸೇತುವೆ ಅಮೋಘವಾಗಿ ಅದೇ ಸ್ಥಿತಿಯನ್ನು ಹತ್ತೈವತ್ತು ವರುಷಗಳಿಂದ ಕಾಪಾಡಿಕೊಂಡಿದೆ. ಅದರ ಮೇಲಿನ ಅಲಂಕಾರಗಳೆಲ್ಲ ಉದುರಿ ಹೋಗಿ ಬರೀ ಇಟ್ಟಿಗೆ ಗಾರೆ ಕಾಣಲು ಆರಂಭಿಸಿದ ಹೊತ್ತಿಗೆ ನಮ್ಮಪ್ಪ ಅದೇ ಸೇತುವೆ ಮೇಲಿಂದ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದರಂತೆ. ಅವರು ಮೊನ್ನೆ ರಿಟೈರಾಗಿದ್ದಾರೆ.  ಯಾವುದೋ ಬ್ರಿಟಿಷ್ ವೈಸರಾಯ್ ನಿಂದ ತೊಡಗಿ, ನಿನ್ನೆ ಮೊನ್ನೆಯ ಎಂ.ಪಿ ಎಮ್ಮೆಲ್ಲೆಗಳೂ ಆ ಸೇತುವೆಯ ಮೇಲಿಂದ ಹಾದು ಹೋಗಿದ್ದಾರೆ! ನಾವೊಮ್ಮೆ ಎಲ್ಲೋ ಜಲಪಾತವೊಂದಕ್ಕೆ ಚಾರಣ ಹೋದವರು ವಾಪಸ್ಸು ನಡೆದುಕೊಂಡು ಬರುತ್ತಿದ್ದಾಗ ಅಚಾನಕ್ಕಾಗಿ ಮಳೆ ಬಂದಾಗ ಬಡ ಬಡನೆ ಓಡಿ ಹೋಗಿ ಆ ಸೇತುವೆಯ ಕೆಳಗೆ ಸೇರಿಕೊಂಡೆವು. ಯೇ ಹುಶಾರ್ರಪ್ಪ ಮೊದಲೇ ಇದು ಮರಕುಟ್ಕ ಸೇತ್ವೆ, ನಮ್ ಗ್ರಹಚಾರಕ್ಕೆ ಈಗ್ಲೆ ಕುಸ್ದು ತಲೆ ಬಿದ್ದಾತು ಅಂತ ಯಾರೋ ಕಿಚಾಯಿಸಿದರು. ಹಾಗೇ ಮೇಲೆ ನೋಡಿದರೆ, ಸೇತುವೆಯ ತಳ ಭಾಗ, ಗಟ್ಟಿಯಾಗೇ ಇತ್ತು. ಮೇಲಿನ ಶೃಂಗಾರ ಗಬ್ಬೆದ್ದು ಹೋಗಿದ್ದರೂ ಸುಣ್ಣ ಬೆಲ್ಲ ಗಾರೆಯ ಸೇತುವೆ ಜಬರ್ದಸ್ತ್ ಆಗಿ ನಿಂತಿತ್ತು. ನಾವೊಂದು ದಿಬ್ಬದ ಮೇಲೆ ನಿಂತಿದ್ದೆವು. ತಳಭಾಗದಲ್ಲಿ ಇಂಗ್ಲೀಷ್ ಪೇಪರ್ ಒಂದು ಅಂಟಿಕೊಂಡಿತ್ತು. ಮೆಲ್ಲನೆ ಆ ಶಿಥಿಲ ಪೇಪರನ್ನ ಹರಿದು ತೆಗೆದರೆ, ನಂಬಿದರೆ ನಂಬಿ ಬಿಟ್ಟರೆ ಬಿಡಿ, ಆ ಪೇಪರು, 1900 ನೇ ಇಸವಿಯದ್ದಾಗಿತ್ತು. ಅದು ಹೇಗೆ ಅಷ್ಟೊಂದು ವರ್ಷ ಹಾಳಾಗದೆ ಉಳಿದಿತ್ತೋ ದೇವರೇ ಬಲ್ಲ. ಪೇಪರ್ರೇ ಉಳಿದಿದೆ ಎಂದ ಮೇಲೆ ಸೇತುವೆಗೆ ಏನೂ ತೊಂದರೆ ಇಲ್ಲ ಅಂತ ಎಲ್ಲ ಮಾತಾಡಿಕೊಂಡೆವು. ಈ ಘಟನೆ ಆಗಿದ್ದು ಹತ್ತು ವರ್ಷಗಳ ಹಿಂದೆ. ಈಗೇನೋ ಮರಕುಟಕ ಸೇತುವೆ ರಿಪೇರಿ ಆಗ್ತಿದೆ ಅಂತ ಸುದ್ದಿ.

ನಿನ್ನೆ ಆಫೀಸಿಗೆ ಹೋಗುತ್ತಿದ್ದೆ. ದಾರಿ ಮೇಲೆ ಯಾರದೋ ಫೋನು ಬಂತೆಂದು ರಸ್ತೆ ಪಕ್ಕ ಬೈಕು ನಿಲ್ಲಿಸಿಕೊಂಡು ಮಾತನಾಡುತ್ತಿದ್ದೆ. ನನ್ನ ಮುಂದೇ ಒಂದು ಪುಟ್ಟ ಸೇತುವೆಯಿತ್ತು, ಅದರ ಪಕ್ಕಕ್ಕೇ ಒಬ್ಬ ಹುಡುಗ ನಿಂತುಕೊಂಡು ಕತ್ತೆತ್ತಿ ಅತ್ತ ಇತ್ತ ನೋಡುತ್ತಿದ್ದ. ನಾನು ನೋಡುತ್ತಿದ್ದ ಹಾಗೇ, ಪಕ್ಕದ ಗಿಡವೊಂದರಿಂದ ಸಣ್ಣ ಟೊಂಗೆ ಮುರಿದು, ಸೇತುವೆಯ ಮೇಲಿಟ್ಟು ಹಾಗೇ ಮುಂದೆ ನಡೆದ.

ನಾನು ಮಾತನಾಡುತ್ತಿದ್ದವರ ಬಳಿ, ಒಂದು ನಿಮಿಷ ಮತ್ತೆ ಫೋನು ಮಾಡುತ್ತೇನೆ ಎಂದವನು ಸಂಕದ ಮೇಲಿದ್ದ ಟೊಂಗೆಯನ್ನೇ ನೋಡುತ್ತ ನಿಂತೆ.

ಗುರುವಾರ, ನವೆಂಬರ್ 29, 2012

ಕಾಫಿ ಮತ್ತು ಕಾಂತಾ ಸಂಹಿತೆ



ನಿನ್ನೆಯ ಅಚಾತುರ್ಯಕ್ಕೆ ಬೇಸರಿಸಬೇಡ
ಏನೋ ನಡೆದು ಹೋಯಿತು
ಬಿಡು, ಅಂತವಳು ಮಾಡಿದಾಗ
ಸಮಾಧಾನ
ಸುಮ್ಮನೆ ಸದ್ದು ಮಾಡಿದ್ದು ಕಾಫಿ ಟೇಬಲ್ಲು

ಗಾಜಿನ ಮೇಲೆ ಕಂಡ ಪ್ರತಿಫಲನದಲ್ಲೂ ಇಲ್ಲ
ತೇವಭಾವ
ಮರೆಯಬೇಕು ಎನ್ನುವುದಿಲ್ಲ ಆದರೆ
ನೆನಪಿಟ್ಟುಕೊಂಡು
ಚುಚ್ಚಿಕೊಳ್ಳುವುದೂ ಬೇಡ

ಎಂದಾಗ ಏನೋ ಹೇಳಲು ಹೋದ
ಮಾತು ಕಾಫಿಯ
ಹನಿಯೊಡನೆ ಸಿಕ್ಕಿ ಕೆಳಗೆಲ್ಲೋ
ಬಿದ್ದು ಕಳೆದು ಹೋಯಿತು
ಹುಡುಕಲು ಹೋಗಲಿಲ್ಲ

ಸಮಾಧಾನ ಮಾಡಿಕೋ
ರಿಲ್ಯಾಕ್ಸ್,
ಅಂತಂದು
ಹೆಗಲು ಸವರಿ ಎದ್ದು ಹೋದಾಗ
ವೈಟರ್ ಮಧ್ಯ ಬಂದಿದ್ದು ಯೋಗಾಯೋಗ


ಹೊರಗೆ ಬಿಸಿಲು ಜೋರಿದೆ.
ಅವಳ ಕಾಫಿಯ ಕಪ್ಪು ಮೂಡಿಸಿದ್ದ
ಹಸಿವರ್ತುಲ ನಿಧಾನ
ನಿಧಾನವಾಗಿ ಒಣಗುತ್ತಿದೆ
ತೃಷೆಯೂ.

ಮಂಗಳವಾರ, ನವೆಂಬರ್ 06, 2012

ಹಳೆಯದೊಂದು ಖುಷಿ ನೆನಪಿಸಿಕೊಂಡು

ನನ್ನ ಬ್ಲಾಗನ್ನ ಹಿಂದಿನಿಂದಲೂ ನೋಡಿಕೊಂಡು ಬಂದವರಿಗೆ ನಾನು ಕವನಗಳನ್ನ ಹೆಚ್ಚಾಗಿ ಬರೆಯುತ್ತಿದ್ದದ್ದು ಗೊತ್ತಿದೆ. ಬ್ಲಾಗಿನಿಂದಾಗಿಯೇ ನಾನು ಕವನಗಳನ್ನ ಬರೆದೆ ಅಂದರೂ ತಪ್ಪಾಗಲಾರದು. ನನ್ನ ಕವನಗಳನ್ನ ಮೆಚ್ಚಿ ಹಾರೈಸಿದ ಗೆಳಯ ಬಳಗದಿಂದಾಗಿಯೇ ನನ್ನ ಕವನ ಸಂಕಲನ ಕೂಡ ಮೂರು ವರ್ಷಗಳ ಕೆಳಗೆ ಪ್ರಕಟಣೆಯ ಭಾಗ್ಯ ಕಂಡಿತು. ನನ್ನ ಕವನ ಸಂಕಲನವನ್ನ ಬಿಡುಗಡೆ ಮಾಡೋಕೆ ನನ್ನ ಮೆಚ್ಚಿನ, ಕನ್ನಡದ ಹಿರಿಯ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರು ಬಂದಿದ್ದರು. ನನ್ನ ಕವನಗಳನ್ನ ಓದಿ, ಅವುಗಳ ಬಗ್ಗೆ ಚೆನ್ನಾದ ಮಾತುಗಳನ್ನಾಡಿ ಹರಸಿದ್ದರು ಎಚ್ಚೆಸ್ವಿ. ಚೆನ್ನಾಗಿ ಬರೀತೀಯಾ, ಕವನಗಳನ್ನ ಬರಿಯೋದನ್ನ ಮುಂದುವರಿಸು ಎಂದಿದ್ದರು. ಅದ್ಯಾಕೋ ನಾನು ಗದ್ಯದ ಕಡೆಗೆ ಜಾಸ್ತಿ ಗಮನ ಕೊಟ್ಟೆ ಆಮೇಲಾಮೇಲೆ.

ನನ್ನ ಕವನ ಸಂಕಲನ ಬಿಡುಗಡೆ ಮಾಡಿದ ಎಚ್ಚೆಸ್ವಿಯವರು, ಆಮೇಲೆ ಬಹಳ ದಿನಗಳ ನಂತರ, ಪ್ರಾಯಶಃ ವರುಷದ ಬಳಿಕ ವರ್ಲ್ಡ್ ಕಲ್ಚರಿನ ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕವರು, "ನಿಮ್ಮ ಆ ರಂಗೋಲಿ ಕವನ ಭಾರಿ ಚೆನ್ನಾಗಿದೆ ನೋಡಿ ಇವರೇ. ನಾನು ಅದರಿಂದ ಸ್ಪೂರ್ತಿಗೊಂಡು ಒಂದು ಕವನ ಬರ್ದಿದೀನಿ.ನನ್ನ ಮುಂದಿನ ಸಂಕಲನದಲ್ಲಿ ಆ ಕವನ ಇದೆ" ಅಂದರು. ನಂಗೆ ಭಾರಿ ಖುಷಿ ಆಗಿದ್ದಂತೂ ಹೌದು.  ನನ್ನಂತಹ ಸಾಮಾನ್ಯನ ಕವನ ಇಷ್ಟಪಟ್ಟು ಅವರು ಕವನ ಬರೆದ್ರೆ ಸಂತೋಷ ಆಗದೇ ಇದ್ದೀತೆ?

ನನ್ನ ಕವನ ಹೀಗಿದೆ:

ಹೀಗೊಂದು ಬೆಳಗು

ಕಾರ್ತಿಕದ ಹೊಸ ಬೆಳಗು, ಚಳಿಯು ಬಹಳಿತ್ತು
ದೇಗುಲದ ಘಂಟೆ ತಾನ್ ಇನ್ನು ಮಲಗಿತ್ತು.
ಅವಳಾಗಲೇ ಎದ್ದು ಅಂಗಳದಲಿದ್ದಳು
ರಂಗೋಲಿ ಚುಕ್ಕಿಯಲಿ ತಾನೆ ಚಿತ್ರವಾಗಿದ್ದಳು

ಅದಾವುದೋ ಭಂಗಿಯಲಿ ಕಟೆದಿಟ್ಟ ಹಾಗೆ,
ಕೂತಿದ್ದಳವಳು, ಇಳಿದು ಬಂದಂತೆ ಸೊಬಗೆ.
ಕೈಬೆರಳುಗಳೋಡುತಿವೆ, ಸೇರಿಸಲು ಬಂಧ
ಕಣ್ಣಾಲಿಗಳ ಚಲನೆ, ರಂಗವಲ್ಲಿಗೂ ಚಂದ

ಅಂಗಳದೊಳಿಂಗುತಿದೆ ರಾತ್ರಿಯಾ ಮಳೆನೀರು
ಮಂಗಳದ ರಂಗೋಲಿ ಒದ್ದೆ ನೆಲದಿ.
ಕಾಡಂಚಿನಾ ಮನೆಯು, ತಣ್ಣನೆಯ ಮೆಲುಗಾಳಿ
ಹಾಡುತಿದೆ ವನಪಕ್ಷಿ, ಹಸಿರಿನೊಳಗಿಂದ

ಚಿತ್ರದೊಳಗಡೆಯಿಂದ ಮೆಲ್ಲನೆದ್ದಳು ಅವಳು
ಮೊಗದೊಳಗೆ ತೃಪ್ತಿಗೆರೆ, ಏನೋ ಅನಂದ.
ಬಣ್ಣಬಟ್ಟಲ ಜೊತೆಗೆ, ಸೀರೆಯಂಚನು ಹಿಡಿದು
ನಡೆದು ಹೋದಳು ಆಕೆ ಎಳೆಬೆಳಕಿನೊಳಗೆ

ಮಿದುನೆಲದ ಮಣ್ಣಲ್ಲಿ ಪಾದಪದ್ಮಗಳ ಅಚ್ಚಿತ್ತು
ರಂಗವಲ್ಲಿಯ ಜೊತೆಗೆ ಸ್ಪರ್ಧೆಗಿಳಿದಂತೆ.
ದೂರಲೋಕದ ಸಿರಿಯು, ಎದ್ದು ಹೋದಂತಿತ್ತು
ಹೆಜ್ಜೆಗುರುತುಗಳನ್ನು ಇಲ್ಲೇ ಬಿಟ್ಟು.

 ಎಚ್.ಎಸ್.ವೆಂಕಟೇಶಮೂರ್ತಿಯವರ ಕವಿತೆ:

ಇನ್ನೊಂದು ರಂಗವಲ್ಲಿ

ಓದುತ್ತಾ ಕೂತಿದ್ದೇನೆ ಹೊಸ ಕವಿಯ ಹೊಸ ಕವಿತೆ
ಯನ್ನ.ಇನ್ನಾ ಬೆಳಗಿನ ಕಾಫಿ ಕೂಡ ಕುಡಿದಿಲ್ಲ
ಹಾಳುಹೊಟ್ಟೆಯಲ್ಲಿ ನುಂಗಲೇ ಬೇಕಿದ್ದ ಸಿಹಿಗುಳಿಗೆ
ನುಂಗಿಲ್ಲ.ಕೂತಿದ್ದೇನೆ ತನ್ಮಯಚಿತ್ತ ಓದುತ್ತ
ಹೊಸ ಕವಿಯ ಹೊಸ ಕವಿತೆ. ಕವಿತೆಯಲ್ಲಿ ರಂಗ
ವಲ್ಲಿ ಬಿಡಿಸುತ್ತಾ ಇದ್ದಾಳೆ ಮಿಂದು ಮಡಿಯುಟ್ಟಿರುವ
ಹುಡುಗಿ. ನೋಡು ನೋಡುತ್ತಿರುವಂತೆ ಕಣ್ಣಲ್ಲೇ ಮೂಡುತ್ತೆ
ಚುಕ್ಕಿ. ಸೇರುತ್ತವೆ ನೇರಗೆರೆ ನಾಜೂಕು. ಒಡಮೂಡುತ್ತೆ
ಮುಖದಲ್ಲೇ ಒಂದು ರಂಗವಲ್ಲಿ,ಆಗಿ ಹುಡುಗಿಯ ಒಡಲೆ
ತೆಳ್ಳನೆಯ ಬಳ್ಳಿ, ಮೆಲ್ಲಗರಳುತ್ತೊಂದು ಷಡ್ದಳಪದ್ಮ
ಝಮ್ಮಂತ.ರಂಗೋಲಿ ಬರೆಯುವುದು ಮುಗಿದು
ಎದ್ದು ಹೋಗುತ್ತಾಳೆ ಬರೆದ ರಂಗೋಲಿಯನ್ನಂಗಳ
ದಲ್ಲೇ ಬಿಟ್ಟು. ಮರೆತೇ ಹೋಗಿದೆ ಪ್ರಾಣಹಿಂಡುವ ನನ್ನ ಮಂಡಿನೋವು
ಕವಿತೆ ಹೀಗಿರಬೇಕು ಇದ್ದರೂ ಮರೆವಂತೆ ಒಳಗಿರುವ ನೋವು.

ಎಚ್ಚೆಸ್ವಿಯವರ ಕವನಕ್ಕೆ ನನ್ನ ಕವನ ಎಷ್ಟರ ಮಟ್ಟಿಗೆ ಸ್ಪೂರ್ತಿಯಾಗಿತ್ತೋ ನನಗೆ ಗೊತ್ತಿಲ್ಲ. ನಿನ್ನೆ ಯಾಕೋ ಪುಸ್ತಕದ ರಾಶಿ ಕೆದಕಬೇಕಿದ್ದರೆ ಅವರ ಕವನ ಸಂಕಲನ ಕೈಗೆ ಸಿಕ್ಕಿ ಹಳೇ ಘಟನೆ ನೆನಪಾಯಿತು, ನಿಮ್ಮ ಜೊತೆಗೆ ಹಂಚಿಕೊಳ್ಳೋಣ ಎನಿಸಿ, ಬರೆದೆ. ಇನ್ನಾದರೂ ಮತ್ತೆ ಕವನ ಬರೆಯಬೇಕು....


ಸೋಮವಾರ, ಅಕ್ಟೋಬರ್ 22, 2012

ಮರಳುವ ತುಡಿತ ಮತ್ತು ಇರುವ ಬಯಕೆ



ಹೊರಡುವುದು ಸುಲಭ. ವಾಪಸಾಗುವುದು ಕಷ್ಟ. ಹೊರಡುವಾಗ ಹೊತ್ತ ಕನಸುಗಳಿಗೆ ಮತ್ತು ಹೋದ ಮೇಲೆ ಕಾಣುವ ವಾಸ್ತವಗಳಿಗೆ ಅಜಗಜಾಂತರ ಅಂತ ಗೊತ್ತಾದ ಮೇಲೆ ಕೂಡ ಮರಳುವುದು ಕಷ್ಟ. ಕಂಡ ಕನಸುಗಳಿಗಿಂತ ನಿಜದ ನಡೆಯೇ ಆಪ್ಯಾಯಮಾನ ಅನ್ನಿಸತೊಡಗುವುದರಿಂದಲೋ ಅಥವಾ ಸಿಹಿಯಾದ ಅಪಕ್ವ ಸ್ವಪ್ನಗಳನ್ನು ಸೃಷ್ಟಿಸಿದ ಜಾಗಕ್ಕಿಂತ ಕಹಿಯಾದ ಸತ್ಯಗಳ ಜಾಗಕ್ಕೆ ಹೊಂದಿಕೊಂಡಿರುವುದರಿಂದಲೋ ಹೀಗಾದೀತು. ಬಾಲ್ಯದ ಆಮೋದಪ್ರಮೋದಗಳ ನೆನಪುಗಳನ್ನು ಆಗೀಗ ತಂದುಕೊಂಡು,  ಕಳೆದ ದಿನಗಳು ಎಷ್ಟು ಚೆನ್ನಾಗಿತ್ತು , ಸಣ್ಣವರಾಗಿದ್ದಾಗ ಹೇಗೆ ಗುಡ್ಡೆಯಲ್ಲಿ ಕೌಳಿ ಹಣ್ಣು ಕೀಳುತ್ತಿದ್ದೆವು ಗೊತ್ತಾ ಎಂದು ಎಲ್ಲರ ಅನುಭವವೂ ಹೆಚ್ಚು ಕಡಿಮೆ ಒಂದೇ ತೆರನಾಗಿರುವ ಸ್ನೇಹಿತರ ಗುಂಪಿನ ಸಂಜೆಯ ಕೂಟದಲ್ಲಿ ಇಪ್ಪತ್ಮೂರರ ವಯಸ್ಸಿಗೇ ಅಕಾಲ ವೃದ್ಧಾಪ್ಯ ಬಂದವರಂತೆ ಮಾತನಾಡುತ್ತ ಬದುಕನ್ನು ದೂಡುವುದು ಇಂದು ಹೆಚ್ಚಿನ ಮಂದಿಗೆ ಅಭ್ಯಾಸವಾಗಿ ಹೋಗಿದೆ. 

ಊರಲ್ಲಿನ ಅಕ್ಕ ಪಕ್ಕದ ಮನೆಗಳಂತೆ, ತಮ್ಮ ಮನೆಯಲ್ಲೂ ಇಬ್ಬರೇ ಇರುವ ಅಪ್ಪ ಅಮ್ಮನನ್ನು ವೀಕೆಂಡುಗಳಲ್ಲಿ ಕಾಣಲು ಹೋಗಿ ಬಂದು, “missing moms food.. had a great weekend in home” ಎಂದು ಸ್ಟೇಟಸ್ ಅಪ್ ಡೇಟ್ ಮಾಡಿದರೆ ಅದಕ್ಕೊಂದಿಷ್ಟು ಲೈಕು ಕಮೆಂಟುಗಳು. ಎಲ್ಲೋ ಪೇಪರಿನ ಕೃಷಿ ಪುರವಣಿಯಲ್ಲಿ ಎಂ.ಎಸ್ಸಿ ಮಾಡಿದ ಹುಡುಗನೊಬ್ಬ ಊರಿಗೆ ಮರಳಿ ಸ್ವಯಂ ಕೃಷಿಯಲ್ಲಿ ತೊಡಗಿಸಿಕೊಂಡು ಎಕರೆಗೆ ಅದೆಷ್ಟೋ ಕ್ವಿಂಟಾಲ್ ಹಣ್ಣು ತರಕಾರಿ ಬೆಳೆದ ಸುದ್ದಿಯನ್ನು ನೋಡಿ ಒಂದು ಕ್ಷಣಕ್ಕೆ ರೋಮಾಂಚನ. ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬ ಹಳೇ ಸುಭಾಷಿತದ ನೆನಪು. ಮೊದಲು ಇರದುದರೆಡೆಗೆ ತುಡಿದ ಮನಸ್ಸಿಗೆ ನಂತರ ಇದ್ದದ್ದನ್ನಾದರೂ ಸರಿಯಾಗಿ ದಕ್ಕಿಸಿಕೊಳ್ಳಬೇಕಿತ್ತು ಎಂಬ ಕಸಿವಿಸಿ.ಆದರೆ ಮಾರನೆಯ ದಿನದ ಚಕ್ರಗತಿಯ ಭರಾಟೆಯಲ್ಲಿ ಮತ್ತೆ ಹಳಿಗೆ ಬರುವ ಮನಸ್ಸು. 

ಸಣ್ಣ ಪಟ್ಟಣಗಳಿಂದ, ಹಳ್ಳಿಗಳಿಂದ ಮಹಾನಗರಗಳಿಗೆ ತೆರಳಿ ಕೆಲಸದಲ್ಲಿರುವ ಬಹುಮಂದಿ, ಮತ್ತೆ ಮನೆಗೆ ಮರಳುವ ಬಗೆಗಿನ ಯೋಚನೆಯ ಸುಳಿಗೆ ಬಿದ್ದೇ ಬಿದ್ದಿರುತ್ತಾರೆ. ಆ ಸುಳಿ, ಹಲವರನ್ನ ಮತ್ತೆ ಅದೇ ನಗರದ ದಂಡೆಗೆ ಎತ್ತಿ ಎಸೆದಿದ್ದರೆ, ಎಲ್ಲೋ ಕೆಲ ಮಂದಿಗೆ ತಮ್ಮೂರಿಗೆ ತೆರಳುವ ದಾರಿ ಕಂಡಿದ್ದೀತು. ದಾರಿ ಕಂಡ ಮೇಲೂ ವಾಪಸ್ ಹೋದವರ ಸಂಖ್ಯೆ ಮತ್ತೂ ಕಡಿಮೆ. ಅದಕ್ಕೆ ಕೆಲಸ ,ಆರ್ಥಿಕ ಸ್ಥಿತಿಗತಿಗಳಿಂದ ತೊಡಗಿ ಕಂಫರ್ಟ್ ಝೋನ್ ವರೆಗೆ ಕಾರಣಗಳು ಹಲವು. ಹೀಗಾಗಿ ಹೆಚ್ಚಿನವರು ಚಕ್ರವ್ಯೂಹ ಹೊಕ್ಕ ಅಭಿಮನ್ಯುಗಳೇ. ಹೊರ ಬರುವ ದಾರಿ ತಿಳಿಯದೇ ಒಳಗೇ ಹೋರಾಡುತ್ತಿದ್ದಾರೆ. ಹೊರ ಬರುವ ಹೊತ್ತಿಗೆ ಯುದ್ಧ ಮುಗಿದಿರುತ್ತದೆ.

ವಾಪಸ್ಸು ಬರುವ ಮಕ್ಕಳ ದಾರಿ ಕಾಯುತ್ತ ಕೂತಿರುವ ವೃದ್ಧರ ಮನೆಗಳು ಪ್ರತಿ ಊರಲ್ಲೂ ಇವೆ ಎಂಬ ಮಾತು ಕೂಡ ಕ್ಲೀಷೆಯಾಗಿ ಹೋಗಿದೆ. ನಮ್ಮೂರಲ್ಲೇ ಈ ಕ್ಲೀಷೆಗೆ ಉತ್ತರ ಎಂಬಂತೆ ಹತ್ತತ್ತು ಫ್ಲೋರಿನ ಎರಡು ಮೂರು ಅಪಾರ್ಟ್ ಮೆಂಟುಗಳು ರೆಡಿಯಾಗಿದ್ದು ಹೆಚ್ಚಿನ ಅಪ್ಪ ಅಮ್ಮಂದಿರು ಅಲ್ಲಿಗೆ ಶಿಫ್ಟಾಗಿದ್ದಾರೆ. ಕೊನೆಯ ಮಹಡಿಯವರೆಗೂ ಲಿಫ್ಟ್ ವ್ಯವಸ್ಥೆ ಇದೆ. ಈ ಸ್ಥಿತ್ಯಂತರಗಳನ್ನೆಲ್ಲ ನೋಡುತ್ತಲೇ, ಅದೇ ಅಪಾರ್ಟ್ ಮೆಂಟಿನ ಹೊಸ ಗಂಡ ಹೆಂಡತಿ ತಮ್ಮ ಮಗನಿಗೆ ಮೆಟೀರಿಯಲ್ ಸೈನ್ಸ್ ಓದಿಸುವ ಮಾತನಾಡುತ್ತಾರೆ. ಅದಕ್ಕೆ ಕೆಲಸ ದೂರದ ಮುಂಬೈಲೋ, ಹೈದರಾಬಾದ್ ನಲ್ಲೋ ಸಿಗುತ್ತದೆ ಎಂಬುದೂ ಅವರಿಗೆ ಗೊತ್ತಿದೆ.ಅತ ಕೈಗೆ ಸಿಗಲಾರ ಅನ್ನುವುದೂ ತಿಳಿದಿದೆ.

ಹುಟ್ಟಿದಾಗಲೇ ಹೊಕ್ಕಳ ಬಳ್ಳಿಯನ್ನ ಕಡಿದುಕೊಂಡು ಹೊರಬರುವ ಜೀವಗಳು, ಮುಂದೆ ಶಾಲಾ ಕಾಲೇಜುಗಳಲ್ಲಿ ಓದುವ ಹತ್ತು –ಹದಿನೈದು ವರ್ಷಗಳಲ್ಲಿ ಕೂಡ ಬೇರನ್ನ ಕಡಿದುಕೊಂಡು ಹೋಗುವ ಅಸಂಖ್ಯ ಸಾಧ್ಯತೆಗಳನ್ನೇ ಗಮನಿಸುತ್ತವೆ. ಬೆಳೆಯುವ ವಾತಾವರಣವೂ ಅದಕ್ಕೆ ಪೂರಕ. ಎಲ್ಲ ಮುಗಿದು ಗಮ್ಯವನ್ನು ಅರಸಿಕೊಂಡು ಹೊರಟ ಮೇಲೆ, ಮತ್ತೆ ಮರಳುವ ತುಡಿತ ಆರಂಭವಾಗುತ್ತದೆ. ದೂರತೀರದ ಯಾನಕ್ಕೆ ಸಜ್ಜಾದ ಹಡಗು, ಹೊರಟ ದಡವನ್ನೇ ಹುಡುಕುತ್ತದೆ. ಬಿಲ್ಲಿನಿಂದ ಹೊರಟ ಬಾಣಕ್ಕೆ ಬತ್ತಳಿಕೆಯ ಕನವರಿಕೆ. 

ಆದರೆ ಬದುಕಿಗೆ ಬೇರಿನ ಅವಶ್ಯಕತೆ ಇದೆಯಾ? ಈಗಾಗಲೇ ’ಜಾಯಿಂಟ್’ ಎಂಬ ಕೀಲು ಕಳೆದುಕೊಂಡು ಕೇವಲ ’ನ್ಯೂಕ್ಲಿಯರ್’ ಆಗಿರುವ ಕುಟುಂಬಗಳು ಬೇರು-ಮೂಲ ಎನ್ನುವ ಆಲೋಚನೆಯನ್ನೇ ಬದಲಿಸುತ್ತಿವೆ. ಒಂದೂರಿನ ಜಾತ್ರೆ, ಯಕ್ಷಗಾನ, ನದಿದಂಡೆ, ದೀಪೋತ್ಸವ, ಗದ್ದೆ ಬಯಲು ಇವೆಲ್ಲ ಸೇರಿದರೆ ತಾನೆ ’ಬೇರು’? ಬೇರಿಗೆ ಮರಳುವುದು ಎಂದರೆ ಒಂದು ಸಂಸ್ಕೃತಿಗೆ-ಒಂದು ಜೀವನ ವಿಧಾನಕ್ಕೆ ಮರಳುವುದೋ ಅಥವಾ ಬರಿಯ ಇಟ್ಟಿಗೆ-ಸಿಮೆಂಟು ಇರುವ ಮನೆಗೋ? ಅಪ್ಪ ಅಮ್ಮನೇ ತಿರುಗಾಟದ ಕೆಲಸದಲ್ಲಿದ್ದು, ಕೊನೆಗೆ ಯಾವುದೋ ಊರಲ್ಲಿ ನೆಲೆನಿಂತರೆ, ಅದು ಮಗನದೋ, ಮಗಳದೋ ’ಬೇರು’ ಆಗುವುದು ಹೇಗೆ? ಅಲ್ಲಿನ ಜನ-ಬದುಕು ಒಮ್ಮೆಗೇ ತಮ್ಮದಾಗುವುದು ಹೇಗೆ? ಹೆತ್ತವರ ಮೇಲಿನ ಬಂಧಕ್ಕೆ ಮರಳಿ ಬಂದರೂ ಅದು ಬಂಧನವಾಗದೆ ಉಳಿಯಬೇಕು ಎಂದರೆ, ಸಂಸ್ಕೃತಿಯ ಆಸರೆ ಬೇಕಾದೀತು. 

ಒಲುಮೆಯ ಗೂಡಿಗೆ ಮರಳುವ ಪ್ರಯತ್ನದಲ್ಲಿರುವ ಎಲ್ಲರಿಗೂ, ಹೃದಯ ಗೀತೆಯನ್ನು ಹಾಡುವ ಹಕ್ಕಿಯ ದನಿ ಕೇಳಿಸಲಿ ಎಂದು ಹಾರಯಿಸುವುದಷ್ಟೇ ಈ ಹೊತ್ತಿಗೆ ಸಾಧ್ಯ.

(ಮುಗುಳು ಮಾಸ ಪತ್ರಿಕೆಗೆ ಬರೆದದ್ದು)

ಭಾನುವಾರ, ಅಕ್ಟೋಬರ್ 14, 2012

ಗಾಂಧಿ ಮರ



ಅಲ್ಲ ಮಾರಾಯಾ, ಪಾಸ್ಟು ಬಂದು ಎಂತ ಸಾದ್ನೆ ಮಾಡ್ಲಿಕ್ಕುಂಟು? ಮನೆಗೆ ಬೇಗ ಹೋಗಿ ನೀನು ಹೆಂಡ್ತಿಯ ಜಕ್ಕೆಲಲ್ಲಿ ಬೀಳುದಲ್ವಾ?” ಅಂತಂದು ವೆಂಕಟೇಶ್ವರ ಸ್ಟೋರಿನ ಕಿಣಿ ಮಾಮ್ ಜೋರು ನಗಾಡಿದಾಗ ಅದಕ್ಕೆ ಏನು ಉತ್ತರ ಕೊಡಬೇಕು ಎಂದು ದಾಮುವಿಗೆ ತಿಳಿಯಲಿಲ್ಲ. ಅಲ್ಲಿ ಕೂತಿದ್ದ ನಾಕಾರು ಮಂದಿ ಪಿಸಕ್ ಎಂದು ನಕ್ಕಾಗ ದಾಮುವಿಗೆ ಮತ್ತೂ ಮರ್ಯಾದಿ ಹೋದ ಹಾಗಾಯ್ತು. ಸ್ವಲ್ಪ ಹೊತ್ತಿಗಷ್ಟೇ ಮುಂಚೆ ಗ್ರಾಮಸಭೆ ಮುಗಿಸಿಕೊಂಡು ಬಂದಿದ್ದ ಪಂಚಾಯ್ತು ಮೆಂಬರ್ ದಾಮು ಗೋಳಿಬೈಲಿನ ಕಿಣಿಮಾಮ್ ಅಂಗಡಿ ಮುಂದೆ ಕೂತಿದ್ದ ನಾಲ್ಕಾರು ಜನರಿಗೆ ಬ್ರೇಕಿಂಗ್ ನ್ಯೂಸೊಂದನ್ನು ಕೊಡುವ ಉದ್ದೇಶ ಹೊಂದಿದ್ದ. ಸರಕಾರದ ಹೊಸ ಯೋಜನೆಯೊಂದರ ಅನ್ವಯ, ಅವನ ಹಳ್ಳಿಗೆ ಕಾಂಕ್ರೀಟ್ ರಸ್ತೆ ಮಂಜೂರಾಗಿತ್ತು. ವಿಚಾರವನ್ನು ಊರಲ್ಲಿ ಸುದ್ದಿಯಾಗಿಸಿ ತನ್ನ ಲೆವೆಲ್ ಹೆಚ್ಚಿಗೆ ಮಾಡಿಕೊಳ್ಳಬೇಕು ಎಂಬುದಷ್ಟೇ ಅವನ ತಲೆಯಲ್ಲಿತ್ತು. ಅಂಗಡಿಯೆದುರು ಬಂದವನೇನಮ್ಮೂರಿಗೆ ಕಾಂಕ್ರೀಟು ರೋಡು ಬರ್ಲಿಕ್ಕುಂಟುಎಂದು ಘೋಷಿಸಿದ . ಅವನ ಮಾತಿಗೆ ಯಾರಿಂದಲೂ ಪ್ರತಿಕ್ರಿಯೆಯೇ ಬರಲಿಲ್ಲ. ತಾನು ಹೇಳಿದ್ದು ಕೇಳಿಲ್ಲವೇನೋ ಅಂದುಕೊಂಡ ದಾಮು, ಅದನ್ನೇ ಮತ್ತೆ ದೊಡ್ಡದಾಗಿ ಹೇಳುತ್ತ, ಬೆಂಚಿನ ಮೇಲಿದ್ದ ಪೇಪರು ಕೈಗೆತ್ತಿಕೊಂಡು ಕೂತ. ಒಳಗೆ ಸಕ್ಕರೆ ತೂಗುತ್ತಿದ್ದ ಕಿಣಿ ಮಾಮ್, “ಆಯ್ತು ಮಾರಾಯ ಅದೆಂತ ದೊಡ್ಡ ಸಂಗ್ತಿ? ಮಂಗಳೂರು ಪೇಟೆ ತುಂಬ ಸಿಮೆಂಟಿಂದೇ ರಸ್ತೆ ಅಲ್ವಾ?ಮತ್ತೆ ನಮ್ಮ ಈಗಿನ ರಸ್ತೆಯೇ ಒಳ್ಳೆದುಂಟಲ್ಲ, ಕಾಂಕ್ರೀಟು ಯಾಕಂತೆ, ದುಡ್ಡು ತಿನ್ಲಿಕ್ಕಾ? ಅದೂ ಹುಚ್ಚು ಮಳೆಗಾಲದಲ್ಲಿ ಎಂತ ತೋಡಿಗೆ ಸಿಮೆಂಟು ಹಾಕ್ತಾರಾಎಂದಾಗ ದಾಮುಕಾಂಕ್ರೀಟು ರಸ್ತೆಯಲ್ಲಿ ಫಾಸ್ಟ್ ಹೋಗ್ಲಿಕ್ಕಾಗ್ತದೆ ಕಿಣಿಯವರೇಎಂದು ಕ್ಷಣಕ್ಕೆ ತೋಚಿದ್ದನ್ನು ಹೇಳಿದ್ದ. ಹೊಸದಾಗಿ ಮದುವೆ ಆಗಿದ್ದ ಆತನನ್ನು ಲೇವಡಿ ಮಾಡಲೆಂದೇ ಕಿಣಿ ಮಾಮ್ ಹೆಂಡತಿಯ ತೊಡೆ ವಿಷಯ ಎತ್ತಿ ಮುಜುಗರಕ್ಕೆ ಈಡು ಮಾಡಿದ್ದರು. ದಾಮುವಿಗೆ ನಾಲ್ಕು ಜನರೆದುರು ತನ್ನ ಮರ್ಯಾದೆಯನ್ನು ತೂಕಕ್ಕೆ ಹಾಕಿದ ಕಿಣಿ ಮಾಮ್ ಮೇಲೆ ಸಿಟ್ಟು ಬಂದರೂ, ಏನೂ ಮಾಡುವ ಹಾಗಿರಲಿಲ್ಲ. ಪುಣ್ಯಕ್ಕೆ ಅಲ್ಲಿದ್ದ ಉಳಿದವರೂ ಮಾತಿಗೆ ಹೆಚ್ಚೇನೂ ಒಗ್ಗರಣೆ ಹಾಕದೇ, ದಾಮುವಿನ ಹೋಗುತ್ತಿದ್ದ ಮರ್ಯಾದೆಗೆ ಒಡ್ಡು ಹಾಕಿ ನಿಲ್ಲಿಸಿದ್ದರು. “ಕೆಲ್ಸ ಮಾಡದಿದ್ರೆ ಸರ್ಕಾರಕ್ಕೆ ಬಾಯಿಗೆ ಬಂದ ಹಾಗೆ ಬೈಯುದೂ ನೀವೇ, ಎಂಥದೋ ಒಂದು ಹೊಸ್ತು ಬಂದ್ರೆ ಅದನ್ನು ಪುಸ್ಕು ಮಾಡುದೂ ನೀವೇಎಂದು ಗೊಣಗುತ್ತ ಪಿರಿಪಿರಿ ಮಳೆಯಲ್ಲಿಯೇ ಅಲ್ಲಿಂದ ಹೊರಟ ದಾಮು. ಹೊರಟ ಬೆನ್ನಲ್ಲಿ ಮತ್ತೆ ಕೇಳಿದ ನಗುವಿನ ಸದ್ದನ್ನು ಬೇಕೆಂದೇ ಅವನ ಕಿವಿ ಸ್ವೀಕರಿಸಲಿಲ್ಲ.
ಮಂಗಳೂರು ಹೊರವಲಯದ ಕೂಳೂರಿನಿಂದ ಪಶ್ಚಿಮಕ್ಕೆ ಐದು ಕಿಲೋಮೀಟರು ಹೋದರೆ ಸಿಗುವ ಗೋಳಿಬೈಲು ಸುತ್ತಲಿನ ಯಾವ ಮಹಾನಗರ ಪಾಲಿಕೆಯ, ಪುರಸಭೆಗಳ ವ್ಯಾಪ್ತಿಗೂ ಬರದೇ ಹಾಗೇ ಉಳಿದುಕೊಂಡಿರುವ ಮೂರ್ನಾಕು ಸಾವಿರ ಜನ ಇರುವ ಊರು. ಊರಿಗೆ ಬೇಕಾದ ಶಾಲೆ, ಪಂಚಾಯ್ತಿ , ನಾಲ್ಕಾರು ಅಂಗಡಿಗಳು, ಆರೋಗ್ಯ ಕೇಂದ್ರಗಳಿರುವ ಸಾದಾ ಸೀದಾ ಹಳ್ಳಿ. ಗೋಳಿಬೈಲಿನ ಜನಕ್ಕೆಲ್ಲ ಮಂಗಳೂರೇ ಮುಖ್ಯ ಪಟ್ಟಣ. ಏನೂ ಕೆಲ್ಸವಿಲ್ಲದೇ ಓಡಾಡಿಕೊಂಡಿರುವ ಒಂದಿಷ್ಟು ಜನರಲ್ಲಿ ದಾಮುವಿನಂತಹ ಕೆಲವರು. ಆದರೆ ದಾಮುವಿಗೆ ಪಂಚಾಯ್ತಿ ಮೆಂಬರು ಎಂಬ ಹಣೆಪಟ್ಟಿ ಅಂಟಿಕೊಂಡಿರುವುದರಿಂದ, ಸ್ವಲ್ಪ ತೂಕ.
ದಾಮು ಗ್ರಾಮ ಪಂಚಾಯತ್ ಮೆಂಬರಾದ್ದೇ ನಸೀಬಲ್ಲಿ. ಊರಲ್ಲಿ ಓಡಾಡಿಕೊಂಡಿದ್ದುಒಳ್ಳೆ ಹೆಸರುಮಾಡಿದ್ದ ಅವನ ಅಣ್ಣ ರಾಘವನಿಗೆ ದುಬೈಲಿ ಕೆಲಸ ಸಿಕ್ಕಿ, ಪೊಲಿಟಿಕ್ಸು ಬಿಟ್ಟು ಹೊರಟುಬಿಟ್ಟಿದ್ದ. ಅವ ಊರಲ್ಲಿದ್ರೆ ಎರಡು ಮೂರು ಕೇಸ್ ಜಡಿದು ಪೊಲೀಸ್ರು ಹಿಡ್ದು ಒಳಗೆ ಹಾಕುವ ಚಾನ್ಸಿತ್ತು ಅಂತ ಜನ ಮಾತಾಡಿಕೊಂಡಿದ್ದು ಹೌದಾದ್ರೂ, ಆಡಿಕೊಳ್ಳುವವರ ಮಾತು ಗಾಳಿಯಲ್ಲೇ ಕರಗಿಹೋಗಿತ್ತು. ಅರ್ಜೆಂಟಿಗೆ ಬೇರೆ ಯಾವ ಕ್ಯಾಂಡಿಡೇಟೂ ಸಿಗದೇ, ಅಲ್ಲಿ ಇಲ್ಲಿ ಓಡಾಡಿಕೊಂಡು ಎಲೆಕ್ಟ್ರಿಕ್ ಕೆಲಸ ಮಾಡಿಕೊಂಡಿದ್ದ ಅವನ ತಮ್ಮ ದಾಮು ಎಲೆಕ್ಷನ್ನಿಗೆ ನಿಂತು, ಗೆದ್ದೂ ಬಿಟ್ಟಿದ್ದ. ಅದೃಷ್ಟದಲ್ಲಿ ಗೆದ್ದ ಅಂತ ಅಂದುಕೊಂಡರೂ, ದಾಮುವಿನ ಗೋವಿನಂತಹ ಸ್ವಭಾವ ಕೂಡ ಅದಕ್ಕೆ ಸಹಾಯ ಮಾಡಿತ್ತು. ಅಣ್ಣನ ಹಾಗೆ ಚಾಲೂ ಅಲ್ಲದಿದ್ದರೂ, ಗೋಳಿಬೈಲಿನ ಸಮಸ್ತ ಮನೆಗಳ ವಿದ್ಯುತ್ ಸಮಸ್ಯೆಗೆ ಪರಿಹಾರ ದಾಮುವಿನ ಕಿಸೆಯಲ್ಲಿದ್ದ ಕಟಿಂಗ್ ಪ್ಲೇಯರ್, ಟೆಸ್ಟರುಗಳಲ್ಲಿತ್ತು. ಪಕಪಕ ಗುಡುವ ಟ್ಯೂಬ್ ಲೈಟಿಂದ ಹಿಡಿದು ಭಡ್ ಭಡ್ ಅನ್ನುವ ಎರಡೆಚ್ಪಿ ಪಂಪಿನವರೆಗಿನ ರಿಪೇರಿ ಆತನಿಗೆ ಕರತಲಾಮಲಕ. ರಿಪೇರಿ ದುಡ್ಡು ಕೊಟ್ಟರೂ ನಡೆದೀತು, ಮರೆತರೂ ಅವನಿಗೆ ಬೇಜಾರಿಲ್ಲ. “ಎಮ್ಮೆಗೆ ಹಾಕಿದ ಹಿಂಡಿ ಎಲ್ಲಿಗೆ ಹೋಗ್ತದೆ? ಇವತ್ತಲ್ಲ ನಾಳೆ ಹಾಲು ಕರೀಲೇ ಬೇಕುಎನ್ನುವ ಜಾಯಮಾನ. ನಾಳೆ ಮತ್ತೆ ತಾನೇ ಅವರ ಮನೆಗೆ ಹೋಗಬೇಕು ಎನ್ನುವುದು ಗೊತ್ತಿರುವುದರಿಂದ ಧೈರ್ಯ. ತಡದು ಹೋದರೆ ಹತ್ತಿಪ್ಪತ್ತು ಹೆಚ್ಚಿಗೆಯೇ ಸಿಕ್ಕೀತು.ಅವರಿವರು ಗಾಳಿ ಹಾಕಿ ಎಲೆಕ್ಷನ್ನಿಗೆ ನಿಲ್ಲಿಸಿದ ಮೇಲೂ ದಾಮುವಿಗೆ ತಾನು ಗೆಲ್ಲುತ್ತೇನೆ ಎಂಬ ಗ್ಯಾರೆಂಟಿ ಇರಲಿಲ್ಲ. ಕೈಯಿಂದ ಖರ್ಚು ಮಾಡುವಷ್ಟು ದುಡ್ಡು ಮೊದಲೇ ಇಲ್ಲ. ಹೀಗಾಗಿ ಬರೀ ೪೦೦ ರೂಪಾಯಿ ಖರ್ಚು ಮಾಡಿ ಪ್ಯಾಂಪ್ಲೆಟು ಹಂಚಿದ್ದ ಅವನು.
ರಾಜಕೀಯದ ತಲೆಬುಡ ತಿಳಿಯದ ಪುಣ್ಯಾತ್ಮ ದಾಮು ಆತನ ಎದುರು ನಿಂತಿದ್ಧ ಹಳೆತಲೆಗಳಾದ ಬಾಂಬೈ ಫೆರ್ನಾಂಡಿಸ್, ಬೀಡಿ ಅಬ್ಬಾಸನನ್ನೆಲ್ಲ ಸೋಲಿಸಿ ಗೆದ್ದದ್ದು ಊರಲ್ಲಿ ನಾಲ್ಕಾರು ದಿನ ನಿಂತ ಸುದ್ದಿ. ಗೆದ್ದ ಮಾತ್ರಕ್ಕೆ ತಾನೇನು ದೊಡ್ಡ ಜನ ಆದೆ ಅಂತ ದಾಮುವೂ ಅಂದುಕೊಂಡಿರಲಿಲ್ಲ. ಹಾಗಂತ ಒಂದಿಷ್ಟು ದಿನ ಗೆದ್ದ ಅಮಲು ತಲೆಯಲ್ಲಿ ತೂಗಿದ್ದು ಹೌದು. ’ಹ್ವಾ, ಎಂತ ಮಾರ್ರೆ ಪಂಚಾಯ್ತಿ ಮೆಂಬರಂತೆ ಈಗ, ಭಾರಿ ಒಳ್ಳೆದಾಯ್ತು, ಊರಿಗೆ ಎಂತಾರು ಮಾಡ್ಸಿಅಂತ ಕೆಲವೊಂದು ಜನ ಸಡನ್ನಾಗಿ ಗೌರವ ಕೊಟ್ಟಾಗ ಖುಷಿಯಾದ್ದು ಸತ್ಯ. ಪಂಚಾಯ್ತಿ ಸಭೆಗೆ ಆವಾಗೀವಾಗ ಹೋಗುತ್ತಿದ್ದನಾದರೂ ಅಲ್ಲಿ ಎಲ್ಲ ಸೇರಿ ಮಾಡುವ ಗಲಾಟೆ ಗೌಜು ಇವನ ತಲೆಗೇ ಹತ್ತುತ್ತಿರಲಿಲ್ಲ. ಆದ್ರೆ ದಾಮ ವಿರೋಧ ಪಕ್ಷದಲ್ಲಿದ್ದ ನಾಲ್ಕೇ ಮಂದಿಯಲ್ಲಿ ಒಬ್ಬನಾದದ್ದಕ್ಕೆ, ಉಳಿದ ಮೂವರ ಜೊತೆ ಸೇರಿ ಗಲಾಟೆ ಮಾಡಬೇಕಿತ್ತು. ಹೆಚ್ಚಿನ ಸಲ ವಿಷ್ಯ ಏನೂ ಇಲ್ಲದಿದ್ದರೂ ಬೊಬ್ಬೆ ಹಾಕಬೇಕಾಗಿ ಬರುವುದು ಅವನ ಜಾಯಮಾನಕ್ಕೆ ಹೇಳಿಸಿದ್ದಾಗಿರಲಿಲ್ಲ. ಗ್ರಾಮ ಪಂಚಾಯತ್ ಸದಸ್ಯನಾಗುವುದು ಎಂದರೆ ಎಂ.ಎಲ್. ಸ್ಥಾನಕ್ಕೆ ಏರುವ ಮೊದಲ ಮೆಟ್ಟಿಲು ಇತ್ಯಾದಿಯಾಗಿ ಅವನ ತಲೆ ತಿಂದಿದ್ದ ಪಕ್ಷದ ಮುಖಂಡರು ಈಗ ಆತನ ಸುದ್ದಿಗೇ ಬರುತ್ತಿರಲಿಲ್ಲ. ಪಂಚಾಯ್ತಿ ಮೆಂಬ್ರಾದ್ರೆ ತಿಂಗಳೂ ತಿಂಗಳೂ ಒಳ್ಳೆ ಕಮಾಯಿ ಮಾರಾಯ ಅಂದಿದ್ದ ಸ್ನೇಹಿತರು ಅಡ್ರೆಸ್ಸಿಗಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ದಿನಾ ಕೈತುಂಬ ಇರುತ್ತಿದ್ದ ಎಲೆಕ್ಟ್ರಿಕ್ ಕೆಲ್ಸ ಕಡಿಮೆಯಾಗಿತ್ತು. ಬಾಯಿಬಿಟ್ಟೇ ಯಾರಲ್ಲೋ ಕೇಳಿದಾಗ, “ನೀವೀಗ ಪಂಚಾಯ್ತು ಮೆಂಬ್ರು , ನಾವು ಹೇಗೆ ಸಣ್ಣ ಪುಟ್ಟ ಕೆಲ್ಸಕ್ಕೆಲ್ಲ ನಿಮ್ಮನ್ನು ಕರಿಯುದು?” ಎಂದು ಅಚಾನಕ್ ಬಹುವಚನದಲ್ಲಿ ಮಾತಾಡಿ ತಲೆ ಹಾಳು ಮಾಡಿದ್ದರು. ಹೀಗಾಗಿ ಪಂಚಾಯತ್ ರಾಜಕೀಯ ಮಾಡುವುದು ಬಿಟ್ಟು ಬೇರೇನೂ ಉಳಿಯಲಿಲ್ಲ ದಾಮುಗೆ. ಊರಿನ ದಾರಿಯ ಕರೆಂಟು ಕಂಬಕ್ಕೆ ಟ್ಯೂಬ್ ಲೈಟು ಹಾಕಿಸುವುದು, ಸಾರ್ವಜನಿಕ ಬೋರ್ ವೆಲ್ ತೋಡಿಸುವುದು ಇತ್ಯಾದಿ ಎಲ್ಲರಿಗೂ ಉಪಯುಕ್ತ ಕೆಲಸಗಳನ್ನ ಮಾಡಿಸಿಕೊಡುತ್ತ, ಅದರಲ್ಲೆ ಬಂದ ದುಡ್ಡು ಉಳಿಸಿಕೊಂಡು ಮದುವೆಯೂ ಆಗಿದ್ದ.
ಇಂತಹ ಸಂದರ್ಭದಲ್ಲೇ ಕಾಂಕ್ರೀಟು ರಸ್ತೆಯ ಹೊಸ ಯೋಜನೆ ಪ್ರಸ್ತಾಪಕ್ಕೆ ಬಂದದ್ದು. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಐದು ಕಿಲೋಮೀಟರ್ ಉದ್ದದ ಕಾಂಕ್ರೀಟು ಮಾಡುವ ರಾಜ್ಯ ಸರಕಾರದ ಪ್ಲಾನಿಗೆ ಕೂಳೂರು ಗೋಳಿಬೈಲು ರಸ್ತೆ ಆಯ್ಕೆಯಾಗಿತ್ತು. ಸಾಮಾನ್ಯವಾಗಿ ಸಾವಿರಗಳಲ್ಲಿ ಖರ್ಚು ಮಾಡುವ ಪಂಚಾಯತಿನ ಮಿತಿಯನ್ನು ಮೀರಿ ಕೋಟಿಗಳಲ್ಲಿ ಕಾಣುತ್ತಿದ್ದ ದುಡ್ಡು ಎಲ್ಲ ಸದಸ್ಯರ ತಲೆ ಕೆಡಿಸಿತ್ತು. ಪಕ್ಷ ಬೇಧ ಮರೆತು ಎಲ್ಲ ಸದಸ್ಯರೂ ಒಟ್ಟಾಗಿ ರಸ್ತೆಯ ಅಭಿವೃದ್ಧಿಯೇ ತಮ್ಮ ಅಭಿವೃದ್ಧಿ ಎಂಬುದನ್ನ ಮನಗಂಡು, ಜೋರು ಮಳೆಗಾಲ ನಡೆಯುತ್ತಿದ್ದರೂ ಕೂಡ, ಕಾಂಕ್ರೀಟು ರಸ್ತೆಗೆ ಮಳೆಯ ತಲೆಬಿಸಿ ಇಲ್ಲ ಎಂದು ಹಸಿರು ನಿಶಾನೆ ತೋರಿಸಿದ್ದರು.
ದಾಮುವಿಗೆ ತಮಾಷೆ ಮಾಡಿದ್ದ ಕಿಣಿ ಮಾಮ್ ರಿಗೂ, ಅವರ ಅಂಗಡಿ ಕಟ್ಟೆಯ ಸಮಸ್ತ ಸದಸ್ಯರಿಗೂ ನಿಜಕ್ಕೂ ಆಶ್ಚರ್ಯ ಆದದ್ದು ಮರಳಿನ ಗುಪ್ಪೆ ಫರ್ಲಾಂಗು ದೂರಕ್ಕೆ ಒಂದೊಂದರಂತೆ ರಾಶಿ ಬಿದ್ದಾಗ. ಮಳೆಯಲ್ಲಿ ಚೂರು ಚೂರೇ ಮರಳು ತೋಡಿಗೂ ಸಮರ್ಪಣೆ ಆಗ ತೊಡಗಿತು. ಆದರೆ, ವಾರದೊಳಗೆ ಊರಿಗೆ ಬಸ್ಸು ಬರುವುದೂ ಬಂದ್ ಆಯಿತು. ಕಾಂಕ್ರೀಟು ರಸ್ತೆ ಹದಿನೈದೇ ದಿನದಲ್ಲಿ ಆಗ್ತದಂತೆ, ಅದ್ರದ್ದು ಫಾರಿನ್ ಮಿಶನ್ನಂತೆ, ರಸ್ತೆ ಆಗುವವರೆಗೆ ಎಂತ ವೆಹಿಕಲ್ ಸಾ ಓಡಾಡುದಿಲ್ಲ ಅಂತ ಕಿಣಿ ಮಾಮ್ ಖುದ್ದು ಎಲ್ಲರಿಗೆ ಹೇಳಲು ಶುರು ಮಾಡಿದ್ದರು. ಊರಿಗೆ ಬರುವವರು ಈಗ -೧೦ ಕಿಲೋಮೀಟರು ಸುತ್ತು ಹಾಕಿಕೊಂಡು ಕೆಸರು ಮಣ್ಣು ರಸ್ತೆಯಲ್ಲಿ, ಉಲ್ಟಾ ದಿಕ್ಕಲ್ಲಿ ಬರುವ ಹಾಗೆ ಬೇರೆ ಆಗಿತ್ತು. ಕೂಳೂರಿಗೆ ಹೋದವರು, ಮಂಗಳೂರಿಂದ ಬರುವವರು ಮಳೆಯ ಮಧ್ಯವೇ ಕಾಂಕ್ರೀಟ್ ರಸ್ತೆ ಆಗುವ ಚಂದ ನೋಡಿಕೊಂಡು ಬಂದಿದ್ದರು. “ಜೆಸಿಬಿ ರಪ ರಪಾಂತ ಡಾಂಬರು ಕಿತ್ತು ಬಿಸಾಡುದು, ಅಲ್ಲೇ ತಯಾರು ಮಾಡಿದ ಕಾಂಕ್ರೀಟ್ ಬ್ಲಾಕು ಪಟಕ್ಕಂತೆ ಇಡುದು, ಎಂತ ಮಳೆ ಸಾ ಕ್ಯಾರೇ ಇಲ್ಲ ಮಾರಾಯ್ರೇಎಂದು ದೂಜಪೊರ್ಬು ಕಿಣಿ ಮಾಮ್ ಗೆ ವಿವರಿಸಿದ್ದರು. ಮೂರೇ ದಿನದಲ್ಲಿ ಒಂದು ಕಿಲೋಮೀಟರ್ ಕಾಂಕ್ರೀಟಾಗಿ ಆಯ್ತು ಮಾರ್ರೇ ಅಂತ ಹೇಳಿದ ಪೊರ್ಬುಗಳು ಇನ್ನೇನು ನಾಳೆ ನಾಡಿದ್ದು ಊರೊಳಗೇ ಬರ್ತದೆ ನೋಡಿ ಅಂತಂದು ಎಂಥದೋ ಸೈನ್ಯ ಊರಿಗೆ ದಾಳಿ ಮಾಡಲು ಬರುವ ಹಾಗಿನ ಹೆದ್ರಿಕೆ ಹುಟ್ಟು ಹಾಕಿ ಹೋಗಿದ್ದರು.
ದಾಮುಗಂತೂ ಕೂರಲಿಕ್ಕೇ ಪುರ್ಸೊತ್ತು ಇರ್ಲಿಲ್ಲ. ಒಂದು ಎರಡು ಮೂರು ದಿನ ಇಡೀ ರಸ್ತೆಯ ಮೇಲ್ವಿಚಾರಣೆ ತನ್ನದೇ ಅನ್ನುವ ಹಾಗೆ ಬೆಳಗ್ಗಿಂದ ಸಂಜೆ ತನಕ ಓಡಾಟದ ಮೇಲೆ ಓಡಾಟ ಮಾಡಿದ್ದ. ಆದರೆ ಅವನ ಹಾರಾಟಕ್ಕೆ ಉಳಿದ ಮೆಂಬರುಗಳು ಸುಮಾರು ಕಡಿವಾಣ ಹಾಕಿದ್ದರು. ಶಾಲೆ ಮಕ್ಕಳು ಡೆಸ್ಕಿನಲ್ಲಿ ಗೆರೆ ಹಾಕಿ ಇದು ತಮ್ಮ ಜಾಗ ಎಂದು ಹೇಳುವ ಹಾಗೆ, ತಮ್ಮ ತಮ್ಮ ವಾರ್ಡಿನಲ್ಲಿ ಸಾಗಿ ಬರುವ ರಸ್ತೆಯ ಕೆಲ್ಸದ ಉಸ್ತುವಾರಿಯನ್ನ ಅವರವರೇ ವಹಿಸಿಕೊಂಡಿದ್ದರು. ರಸ್ತೆ ಇರದ ವಾರ್ಡಿನ ಸದಸ್ಯರು ಮಹಾಪಾಪ ಮಾಡಿದವರ ಮುಖ ಹೊತ್ತು ಓಡಾಡುತ್ತಿದ್ದರು. ದಾಮುಗೆ ಒಂದರ್ಧ ಕಿಲೋಮೀಟರು ದಕ್ಕಿತ್ತು. ತನ್ನ ಏರಿಯಾಕ್ಕೆ ಬಂದ ಕೂಡಲೇ ಮತ್ತೆ ಮೇಲುಸ್ತುವಾರಿ ಮಾಡುತ್ತೇನೆ ಅಂತ ಭೀಷ್ಮರ ಸೇನಾಧಿಪತ್ಯದಲ್ಲಿ ಯುದ್ಧಕ್ಕೆ ಹೋಗದ ಕರ್ಣನ ಹಾಗೆ ಸುಮ್ಮನಾದ. ಅವನ ಸರದಿಯೂ ಬಂತು.
ಕಿಣಿ ಮಾಮ್ ಅಂಗಡಿ ಎದುರು ಹಾದು ಹೋಗುವ ರಸ್ತೆ ದಾಮುವಿನ ವಾರ್ಡಿನ ಪಾಲಿಂದೇ ಆಗಿತ್ತು. ಹೀಗಾಗಿ ಕಿಣಿ ಮಾಮ್ ಅಂಗಡಿಯ ಸೋಡಾ ಕುಡಿದು, ಅವರನ್ನೇ ನೋಡಿ ಹುಬ್ಬು ಹಾರಿಸುತ್ತಹೇಗೆ?” ಎಂಬಂತೆ ವ್ಯಂಗ್ಯ ಮಾಡುವುದು ದಾಮುಗೊಂದು ರೀತಿ ಆಟವಾಗಿತ್ತು. ಆವತ್ತು ಬೆಳಗಿಂದ ಸಂಜೆಯೊಳಗೆ ನಾಲ್ಕನೇ ಬಾರಿ ನಡೆದ ದಾಮುವಿನ ಹುಬ್ಬಿನ ನೃತ್ಯ ನೋಡಿ ಸಿಟ್ಟಿಗೆದ್ದ ಕಿಣಿ ಮಾಮ್, “ಬಿಡಾ ಮಾರಾಯ, ಅದೆಂತದೋ ಕೋಟಿಗಟ್ಲೆ ದುಡ್ಡು ಸ್ಯಾಂಕ್ಷನ್ ಆಗಿದೆ, ಅದ್ರಲ್ಲಿ ಒಂದಿಷ್ಟು ದುಡ್ಡು ಎಲ್ಲ ಸೇರಿ ಹೊಡಿವ ಅಂತ ರಸ್ತೆ ಮಾಡುದಲ್ಲ ನೀವು? ಮಾನ ಮರ್ಯಾದೆ ಇಲ್ಲದವ್ರು.. ಒಂದು ರುಪಾಯಿ ಸಿಗುದಿಲ್ಲ ಅಂತಾದ್ರೆ ಇದ್ನೆಲ್ಲ ಮಾಡ್ಲಿಕ್ಕುಂಟಾ ನೀವು.. ನಿಮ್ಮ ಜನ್ಮಕ್ಕಿಷ್ಟು.. ರಸ್ತೆಯ ಮತ್ತೆಂತದ.. ಈಗ ನಾಳೆ ನೀನು ರಸ್ತೆಗೆ ಬೇಕು ಅಂತ ಎದ್ರಿನ ಗಾಂಧಿ ನೆಟ್ಟ ಗೋಳಿಮರಸಾ ಬೀಳಿಸ್ತಿ.. ಮುಂದಿನ ಶಾಲೆಯ ಗೋಡೆಸಾ ಜರಿಸ್ತೀ..ಥತ್ ನಿಮ್ಮಅಂದುಬಿಟ್ಟರು. ರಸ್ತೆಯಲ್ಲಿದ್ದವರೂ, ಅಕ್ಕಪಕ್ಕದವರೂ ಎಲ್ಲರೂ ಕಿಣಿಯವರ ಎತ್ತರಿಸಿದ ಧ್ವನಿ ಕೇಳಿ, ಒಮ್ಮೆ ನಿಂತು ಮತ್ತೆ ದಾಮುವನ್ನು ನೋಡಿ ಮುಂದುವರಿದರು. ದಾಮುವಿಗೆ ಕಿಣಿಯವರ ರೌದ್ರಾವತಾರ ನೋಡಿ ತಲೆಬಿಸಿಯಾದರೂ, “ಕಿಣಿ ಮಾಮ್ ಎಂತಕೆ ನೀವು ಇಷ್ಟೆಲ್ಲ ಬೊಬ್ಬೆ ಹಾಕುದು.. ಊರಿಗೆ ಒಳ್ಳೆದು ಮಾಡ್ಲಿಕ್ಕೆ ಅಲ್ವಾ ಮಾಡುದು ಇದನ್ನ, ಕೋಟಿ ರುಪಾಯಿ ಎಂತ ನಂಗೆ ಬಂದಿದಾ ತಿನ್ಲಿಕ್ಕೆ, ಅದು ಗೌರ್ಮೆಂಟಿದ್ದುಅಂತ ಹೇಳಿ ಮೆಲ್ಲ ಜಾಗ ಖಾಲಿ ಮಾಡಿದ. ಅವನು ಮುಖದಿಂದ ಒರೆಸಿಕೊಂಡು ಕಿಣಿಮಾಮ್ ಎಂಜಲಾ, ಅವರ ಅಂಗಡಿ ಮಾಡಿಂದ ಮಳೆಯ ನೀರಾ ಅಂತ ಸಮಾ ಗೊತ್ತಾಗಲಿಲ್ಲ.
ಆದರೆ ನಿಜಕ್ಕೂ ದಾಮುವಿನ ಗಂಟಲ ಪಸೆ ಆರಿದ್ದು ಮಾರನೇ ದಿನ ಬೆಳಿಗ್ಗೆ. “ರಸ್ತೆ ಅಗಲೀಕರಣ ವಿರೋಧ ಸಮಿತಿ ಗೋಳಿಬೈಲುಹೆಸರಿನ ಫ್ಲೆಕ್ಸ್ ಬ್ಯಾನರೊಂದು ಗೋಳಿಬೈಲಿನ ಬಸ್ಟ್ಯಾಂಡಿನ ಪಕ್ಕದ ಗೋಳಿ ಮರಕ್ಕೆ ನೇತು ಬಿದ್ದಿದ್ದು ಕಂಡಾಗ. “ಕಾಂಕ್ರೀಟೀಕರಣದ ನೆಪದಲ್ಲಿ ಮಹಾತ್ಮಾಗಾಂಧೀಜಿಯವರು ನೆಟ್ಟಿರುವ ನಮ್ಮೂರಿನ ಆಲದಮರವನ್ನು ಕಡಿಯಲಿದ್ದು ಇದನ್ನು ಗ್ರಾಮದ ಸಮಸ್ಥ ನಾಗರೀಕರ ಪರವಾಗಿ ವಿರೋಧಿಸುತ್ತಿದ್ದೇವೆಎಂಬ ಬರಹವನ್ನು ಓದಿದ ದಾಮುವಿಗೆ ಏನೆಂದೇ ಅರ್ಥವಾಗಲಿಲ್ಲ. ಊರೆದುರಿನ ಗೋಳಿಮರವನ್ನು ಗಾಂಧೀಜಿ ೧೯೨೦ರಲ್ಲೋ ೧೯೨೯ರಲ್ಲೋ ಬಂದಾಗ ನೆಟ್ಟಿದ್ದರಂತೆ ಎಂಬ ಕಥೆ ಜನಜನಿತವಾಗಿದ್ದರೂ ಕೂಡ, ಕಾಂಕ್ರೀಟು ರಸ್ತೆ ಮಾಡುವಾಗ ರಸ್ತೆಯ ಪಕ್ಕದಲ್ಲೇ ಇದ್ದ ಮರವನ್ನು ಕಡಿಯುವ ಪ್ರಸ್ತಾಪವೂ ಬಂದಿತ್ತು. ಬಗ್ಗೆ ಒಬ್ಬೇ ಒಬ್ಬನೂ ಬೇಡ ಅಂದಿರಲಿಲ್ಲ. ಅದೂ ಅಲ್ಲದೇ ಗೋಳಿಮರದಡಿಯಲ್ಲೇ ಇದ್ದ ಚಪ್ಪಲಿ ಹೊಲಿಯುವ ಕೃಷ್ಣನಿಗೆ ಬಸ್ಟ್ಯಾಂಡಿನಲ್ಲಿ ಟೆಂಪರರಿ ವ್ಯವಸ್ಥೆ ಮಾಡಿಕೊಟ್ಟಾಗಿತ್ತು. ಆಗಲೂ ಯಾರೂ ಅಲ್ಲ ಅನ್ನಲಿಲ್ಲ. ಈಗಾಗಲೇ ಸುಮಾರು ಮಳೆಗಾಲ ಕಂಡಿದ್ದ ಮರ ಗೆಲ್ಲುಗಳನ್ನ ಪದೇ ಪದೇ ರಸ್ತೆಗೆ ಬೀಳಿಸಿ ತೊಂದರೆ ಕೊಡುತ್ತಿತ್ತು. ಹಿಂದೆಯೇ ಅದನ್ನ ಕಡಿಯಬೇಕು ಎನ್ನುವ ಪ್ರಸ್ತಾಪ ಬಂದಿದ್ದರೂ, ಯಾಕೋ ಯಾರೂ ಮನಸ್ಸು ಮಾಡಿರಲಿಲ್ಲ.
ವಿಷಯ ಏನಾಗಿತ್ತೆಂದರೆ, ಹಿಂದಿನ ದಿನ ದಾಮುವಿಗೆ ಕಿಣಿಮಾಮ್ ಬೈಯುವಾಗ ಅದನ್ನು ಕೇಳಿಸಿಕೊಂಡವರಲ್ಲಿ ಬಾಂಬೇ ಫೆರ್ನಾಂಡಿಸ್ ಕೂಡ ಒಬ್ಬರು. ಯಾವಾಗ ಗಾಂಧಿ ನೆಟ್ಟ ಮರ ಹೋಗ್ತದೆ ಅನ್ನುವ ಪಾಯಿಂಟು ಕಿವಿಗೆ ಬಿತ್ತೋ, ರಾಜಕೀಯದಲ್ಲಿ ಸುಮಾರು ಪಳಗಿದ ಫೆರ್ನಾಂಡಿಸರಿಗೆ ಹೋರಾಟದ ಐಡಿಯಾ ಹೊಳೆದಿತ್ತು. ಅಲ್ಲದೇ ಅವರ ಹೆಸರೇ ಬಾಂಬೆ ಫೆರ್ನಾಂಡಿಸ್. ಬಾಂಬೆಯಲ್ಲಿ ಗಿರಣಿ ಕಾರ್ಮಿಕರ ಒಕ್ಕೂಟದ ಹೋರಾಟದಲ್ಲಿ ಭಾಗವಹಿಸಿ, ಕಾಲಕ್ಕೇ ಹೆಸರು ಮಾಡಿ-ಆದರೆ ಕೆಲ್ಸ ಕಳೆದುಕೊಂಡ ಊರಿಗೆ ವಾಪಸು ಬಂದ ಜನ. ದಾಮುವಿನ ಕೈಲಿ ಸೋತ ಉರಿ ಇನ್ನೂ ಮಾಸಿಲ್ಲದ ಫೆರ್ನಾಂಡಿಸ್ ಸಾಹೇಬರು ಸಂಜೆಗೇ ಮಂಗಳೂರಿಗೆ ಹೋದವರೇ ಬ್ಯಾನರು ಮಾಡಿಸಿ ತಂದಿದ್ದರು. ಬೆಳಗ್ಗೆ ಬೆಳಗ್ಗೆಯೇ ಒಂದಿಷ್ಟು ಜನ ಹುಡುಗರನ್ನ ಮರದ ಎದುರು ನಿಲ್ಲಿಸಿಕೊಂಡು ಫೆರ್ನಾಂಡಿಸರು ಗಾಂಧಿ ತತ್ವಗಳ ಬಗ್ಗೆ ಮಾತನಾಡಿ ಮರವನ್ನು ಕಡಿಯುವುದು ಅಂದ್ರೆ ಗಾಂಧಿಯನ್ನ ಮತ್ತೊಮ್ಮೆ ಕೊಂದ ಹಾಗೆ ಎಂದೆಲ್ಲ ಮಾತನಾಡಿದರು. ಯಾವಾಗಲೂ ಅಲ್ಲೇ ಪಕ್ಕದ ಖಾಲಿ ಜಾಗದಲ್ಲಿ ವಾಲಿಬಾಲ್ ಆಡುತ್ತಿದ್ದ ಹುಡುಗರು ಮರವನ್ನು ನೋಡುತ್ತ ಗಾಂಧೀಜಿಗೆ ಜೈ ಅಂದರು. ಸಂಜೆ ಹೊತ್ತಿಗೆ ಒಂದೆರಡು ಲೋಕಲ್ ಚಾನಲ್ ರಿಪೋರ್ಟರುಗಳೂ ಬಂದು ಹೋದರು. ಆವತ್ತು ಭಾನುವಾರ, ಕೆಲಸದವರಿಗೆ ರಜೆ ಇದ್ದದ್ದರಿಂದ ಏನೂ ವ್ಯತ್ಯಾಸವಾಗಲಿಲ್ಲ. ದಾಮು ಕೂಡಇದೆಲ್ಲ ಎಂತ ಮರ್ಲ್..ಮುದುಕನಿಗೆ ಮಂಡೆ ಸರಿ ಇಲ್ಲಎಂದು ಹೇಳಿಕೊಂಡು ಓಡಾಡಿದರೂ, ಒಳಗೇ ಅಳುಕು ಇದ್ದೇ ಇತ್ತು.
ಅಳುಕು ಮಾರನೇ ದಿನ ನಿಜವಾಯಿತು. ಬೆಳ್ಳಂಬೆಳಗ್ಗೆ ರಾಜ್ಯಮಟ್ಟದ ಸುದ್ದಿವಾಹಿನಿಯ ರಿಪೋರ್ಟರೊಬ್ಬ ಬಂದ. ಮರದ ಪಕ್ಕಕ್ಕೇ ನಿಂತುಕೊಂಡುಅಭಿವೃದ್ದಿಯ ಹೆಸರಲ್ಲಿ ಮಹಾತ್ಮನ ಸ್ಪರ್ಶ ಕಂಡಿದ್ದ ಮರವೊಂದು ಮಣ್ಣಾಗುತ್ತಿದೆ. ಕ್ಯಾಮರಾಪರ್ಸನ್ ಇಂತಿಂತವರ ಜೊತೆ ತಾನು ಇಂಥವನುಎಂದು ಹೇಳಿ ಹೋದ. ಬಾಂಬೇ ಫೆರ್ನಾಂಡಿಸ್ ಸಂರ್ದರ್ಶನದ ಜೊತೆಗೆ ಮಧ್ಯಾಹ್ನದ ನ್ಯೂಸಲ್ಲಿ ಗೋಳಿಬೈಲಿನ ಕಥೆ ಬಂತು. ಅದಾದ ಮೇಲೆ, ಸಂಜೆಗೆ ಇನ್ನೂ ನಾಲ್ಕು ಕ್ಯಾಮರಾ ಬಂತು. “ಹೀಗೆ ಮರದಿಂದ ತೊಟ್ಟಿಕ್ಕುತ್ತಾ ಇರುವುದು ಮಳೆಯ ನೀರೋ ಅಥವಾ ಮರದ ಕಣ್ಣೀರೋಎಂದು ಹುಡುಗಿಯೊಬ್ಬಳು ಮೂರನೇ ಟೇಕಿನಲ್ಲಿ ಸರಿಯಾಗಿ ಹೇಳಿದಳು. ಇದನ್ನೆಲ್ಲ ನೋಡಲು ಹೋದ ಯಾರೋ ಒಬ್ಬಾತ ಬಂದು ದಾಮುವಿಗೂ ಮೈಕು ಹಿಡಿದನಾದರೂ, ಅವನು ಏನೂ ಉತ್ತರ ಕೊಡದೇ ಅಲ್ಲಿಂದ ಓಡಿ ಹೋದ. “ಜನಪ್ರತಿನಿಧಿಗಳು ಬಗ್ಗೆ ಉತ್ತರಿಸುತ್ತಿಲ್ಲ”..ಎಂದು ಮತ್ಯಾರೋ ಮಾತು ಶುರು ಮಾಡಿದ್ದರು. ಎಲ್ಲ ಗೊಂದಲದ ಮಧ್ಯ ಜೆಸಿಬಿ, ಸಿಮೆಂಟು ಕಲಸುವ ಯಂತ್ರಗಳು ಕೆಲಸ ನಿಲ್ಲಿಸಿದ್ದವು. ಕಂಟ್ರಾಕ್ಟರು ಕೆಲಸದ ಗುಂಪಿಗೆ ಇವತ್ತು ಪೇಮೆಂಟ್ ಕೊಡುವುದೋ ಬೇಡವೋ ಎಂಬ ಟೆನ್ಶನಲ್ಲಿ ಓಡಾಡುತ್ತಿದ್ದ. ಊರಿಗೊದಗಿದ ಹೊಸ ಸಂಭ್ರಮಕ್ಕೆ ಸಂಜೆ ಹೊತ್ತಿಗೆ ಜೋರಾದ ಮಳೆ ನಿಜಕ್ಕೂ ತಣ್ಣೀರನ್ನೇ ಎರಚಿತ್ತು.
ರಾತ್ರಿ ಮನೆಯ ಟಿವಿಯಲ್ಲಿಗಾಂಧಿ ನೆಟ್ಟ ಮರಚರ್ಚೆಯನ್ನು ಯಾವುದೋ ಚಾನಲಿನಲ್ಲಿ ನೋಡುತ್ತಿದ್ದ ದಾಮುಗೆ ತಲೆ ಕಲಸಿ ಹೋಗಿತ್ತು. ಪಂಚಾಯ್ತಿ ಪ್ರೆಸಿಡೆಂಟು ಫೋನ್ ಮಾಡಿ, ನಿನ್ನ ವಾರ್ಡಿನ ಗಲಾಟೆ, ನೀನೇ ಸುಧಾರಿಸಬೇಕು. ಇದ್ರಲ್ಲಿ ನಾವ್ಯಾರೂ ತಲೆ ಹಾಕುವುದಿಲ್ಲ. ರೋಡು ಕೆಲ್ಸ ಅಲ್ಲಿಗೇ ನಿಂತರೇ ನೀನೇ ಜವಾಬ್ದಾರಿ ಇತ್ಯಾದಿಯಾಗಿ ಮಂಗಳಾರತಿ ಮಾಡಿದ್ದರು. ಜೊತೆಗೆ, “ನೋಡು ರೋಡಿನ ಕೆಲಸ ಸರಿಯಾಗಿ ಮುಗಿದಿದ್ದರೆ ನಿನಗೆ ನಿನ್ನ ಪಾಲು ಅಂತ ಎರಡು ಲಕ್ಷದ ಹತ್ತಿರ ಹತ್ತಿರ ಸಿಗ್ತಿತ್ತು. ನಿನ್ನ ಗ್ರಹಚಾರ ಹೇಗಿದೆ ನೋಡುವಎಂದಿದ್ದರು. ತನ್ನ ಪಾಲಿನ ದುಡ್ಡಿನ ಅಮೌಂಟು ಕೇಳಿ ಖುಶಿಯಾದರೂ ಅದು ಸಿಗುವುದು ಗ್ಯಾರೆಂಟಿ ಇಲ್ಲದ್ದಕ್ಕೆ, ಜೊತೆಗೆ ಇಷ್ಟೆಲ್ಲ ಗಲಾಟೆ ಗೌಜಿಗೆ ದಾಮು ದಿಕ್ಕೆಟ್ಟು ಹೋಗಿದ್ದ. ಟಿವಿಯಲ್ಲಿ ಫೆರ್ನಾಂಡಿಸ್ ಫೋನೋ ಬರ್ತಿತ್ತು. ಆಫ್ ಮಾಡಬೇಕೆಂದು ರಿಮೋಟ್ ಎತ್ತಿಕೊಳ್ಳುವುದಕ್ಕೂ, ಸಿಡಿಲು ಬಡಿದ ಸದ್ದು ಕೇಳುವುದಕ್ಕೂ, ಕರೆಂಟೂ ಹೋಗುವುದಕ್ಕೂ ಸರಿಯಾಯಿತು.
ಬೆಳಿಗ್ಗೆ ಎದ್ದವನಿಗೆ ತಲೆ ಹಿಡಿದುಕೊಂಡ ಹಾಗಾಗಿ, ದಾಮು ಹಾಸಿಗೆಯಲ್ಲೇ ಕೂತುಚಾ ಕೊಡಎಂದು ಕೂಗಿದರೆ ಊರು ಉದ್ಧಾರ ಮಾಡುವ ನಿಮಗೆ ಚಾಸೊಪ್ಪು ತರ್ಲಿಕ್ಕೆ ಟೈಮೆಲ್ಲಿ ಉಂಟು ಎಂಬ ಉರಿಉರಿ ಉತ್ತರ ಹೆಂಡತಿಯಿಂದ ವಾಪಾಸು ಬಂತು. ರಪಕ್ಕನೇ ಹಲ್ಲುಜ್ಜಿದವನೇ ಬೈಕು ಚಾಲು ಮಾಡಿ ಕಿಣಿಮಾಮ್ ಅಂಗಡಿ ಕಡೆಗೇ ಹೊರಟ. ಅಲ್ಲಿ ಹೋಗಿ ನೋಡಿದರೆ, ಕಂಡದ್ದೇನು! ಬೆಳಿಗ್ಗೆ ಬೆಳಿಗ್ಗೆಯೇ ಬಸ್ಟ್ಯಾಂಡಿನಲ್ಲಿ ನೂರು ಚಿಲ್ಲರೆ ಜನ ಸೇರಿದ್ದರು. ’ಗಾಂಧಿ ನೆಟ್ಟ ಮರಜೋರು ಮಳೆಗೋ, ಹೊಡೆದ ಸಿಡಿಲಿಗೋ ಬಿದ್ದು ಹೋಗಿತ್ತು. ಮರದ ಕಾಂಡ ಬಿದ್ದು ಅದರ ಕೆಳಗೆ ನಿಲ್ಲಿಸಿದ್ದ ಜೇಸಿಬಿ ಜಜ್ಜಿ ಹೋಗಿದ್ದರೆ, ಕಿಣಿ ಮಾಮ್ ಅಂಗಡಿಯ ಗೋಡೆ ಹಂಚುಗಳನ್ನ ಗೆಲ್ಲುಗಳು ಲಗಾಡಿ ತೆಗೆದಿದ್ದವು.
ತನ್ನ ಸಮಸ್ಯೆ ಬಗೆಹರಿಯಿತೋ, ಮತ್ತೂ ಜಟಿಲವಾಯಿತೋ ಎಂದು ಅರ್ಥವಾಗದ ದಾಮು ಸದ್ಯ ಚಾಪುಡಿ ತರ್ಲಿಕ್ಕೆ ಎಲ್ಲಿಗೆ ಹೋಗಲಿ ಎಂದು ಯೋಚಿಸುತ್ತ ನಿಂತ.


( ವರ್ತಮಾನ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕಥೆ)