ಮಂಗಳವಾರ, ಮಾರ್ಚ್ 25, 2008

"ಷ".

ನಾನು ಆಗ ಒಂದನೇ ಕ್ಲಾಸ್ ನಲ್ಲಿದ್ದೆ. ಟೀಚರ್ರು ಎಲ್ಲರಿಗೂ ಕನ್ನಡದ ಒಂದೊಂದು ಅಕ್ಷರವನ್ನು ತೋರಿಸಿ ಅದನ್ನು ಗುರುತಿಸಲು ಹೇಳುತ್ತಿದ್ದರು. ನನ್ನ ಪಾಳಿ ಬಂತು. ಅವರು "ಷ" ಅಕ್ಷರವನ್ನು ತೋರಿಸಿ ಓದು ಅಂದರು. ನನಗೆ ಏನಾಯಿತು ಅಂತ ಗೊತ್ತಿಲ್ಲ, ಯಾಕೆ ಹಾಗಾಯಿತು ಅಂತಲೂ ಗೊತ್ತಿಲ್ಲ, ಏನು ಮಾಡಿದರೂ ಈ ಅಕ್ಷರವನ್ನು ಗುರುತಿಸಲೇ ಆಗಲಿಲ್ಲ. ನಾನು ಅವರನ್ನೂ , ಆ ಅಕ್ಷರವನ್ನೂ ನೋಡುತ್ತ ಸುಮ್ಮನೇ ನಿಂತುಬಿಟ್ಟೆ. ಟೀಚರ್ ನನ್ನ ಕನ್ನಡ ಪುಸ್ತಕದ, "ಷ" ಅಕ್ಷರದ ಎದುರಿಗೆ ಕೆಂಪು ಶಾಯಿಯಲ್ಲಿ ತಪ್ಪು ಮಾರ್ಕ್ ಹಾಕಿದರು. ನನ್ನನ್ನ ನನ್ನದೇ ತರಗತಿ ಮತ್ತೊಂದು ಹುಡುಗಿಯ ಎದುರು ಎಳೆದು ನಿಲ್ಲಿಸಿ "ಇವನಿಗೆ ಅ ಆ ಇ ಈ ಹೇಳಿಕೊಡು" ಅಂದು ಬಿಟ್ಟರು. ಆಮೇಲೆ ಬಹುಕಾಲ ನನ್ನನ್ನು ಆ ಟೀಚರ್ರು "ಕನ್ನಡ ಮಾಸ್ಟ್ರ ಮಗನಾಗಿ ಕನ್ನಡ ಅಕ್ಷರನೇ ಓದೋಕೆ ಬರೋದಿಲ್ಲ ನಿಂಗೆ" ಅಂತ ಹೀಯಾಳಿಸುತ್ತಲೇ ಇದ್ದರು. ಇವತ್ತಿಗೂ ಆ ಕೆಂಪು ಶಾಯಿಯ ತಪ್ಪು ಗುರುತು, ನನ್ನ ಕಣ್ಣೆದುರಿಗೇ ಇದೆ.


******

ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ. ಶಿಕ್ಷಕರ ದಿನಾಚರಣೆಯ ದಿನ ಇಷ್ಟವಿದ್ದವರು ಭಾಷಣ ಮಾಡಬಹುದು ಅಂತ ನಮ್ಮ ಹೆಡ್ ಸಿಸ್ಟರ್ ಕ್ಲಾಸಿಗೆ ಬಂದು ಹೇಳಿದ್ದರು. ನಾನು ಮನೆಗೆ ಹೋಗಿ ಅಪ್ಪನಿಗೆ ಹೇಳಿದೆ ಮತ್ತು ಅವರು ಆಗಿನ ನನ್ನ ಲೆವೆಲ್ಲಿಗೆ ತಕ್ಕ ಹಾಗೆ, "ಗುರು ಬ್ರಹ್ಮಾ, ಗುರೂರ್ ವಿಷ್ಣು.. ಇತ್ಯಾದಿಯಿಂದ ಶುರುವಾಗುವ ಭಾಷಣವೊಂದನ್ನು ತಯಾರು ಮಾಡಿಕೊಟ್ಟಿದ್ದರು. ನಾನೂ ಬಾಯಿಪಾಠ ಮಾಡಿಕೊಂಡು ತಯಾರಾದೆ. ಶಿಕ್ಷಕರ ದಿನಾಚರಣೆಯ ಬೆಳಿಗ್ಗೆ ಫಂಕ್ಷನ್ನು ಶುರುವಾಗುವ ಕೊಂಚ ಮುನ್ನ ಹೆಡ್ ಸಿಸ್ಟರ್ ಬಳಿಗೆ ಹೋಗಿ ನಾನೂ ಭಾಷಣ ಬರೆದುಕೊಂಡು ಬಂದಿದ್ದೇನೆ, ಅಂದೆ. ನನ್ನ ಎದುರಿಗೆ ಒಂದು ಸಲ ಓದಬೇಕಿತ್ತಲ್ಲಾ... ಈಗ ಟೈಮಿಲ್ಲ, ಸರಿಯಾಗಿ ಬಾಯ್ಪಾಠ ಮಾಡಿದೀಯಲ್ಲ ? ಅಂತ ಕೇಳಿದ್ರು. ಹುಂ ಅಂದೆ. ನನ್ನ ಗ್ರಾಚಾರಕ್ಕೆ ಸ್ಟೇಜಿನ ಮೇಲೆ ಯಾಕೋ ಒಂದೆರಡು ಸಾಲು ಮರೆತು ಹೋಗಿ ಬೆಬ್ಬೆಬ್ಬೆ ಆಯ್ತು. ಹೆಡ್ ಸಿಸ್ಟರ್ ಪ್ರೋಗ್ರಾಮು ಮುಗಿದು ಹೋದ ಮೇಲೆ ತಮ್ಮ ಚೇಂಬರಿಗೆ ಕರೆದು, ಉಗಿದು ಉಪ್ಪಿನಕಾಯಿ ಹಾಕಿದ್ರು. ಅವರ ದೊಡ್ಡ ನಾಗರ ಬೆತ್ತ ತೆಗೆದು ಎರಡು ಹೊಡೆದರು. ಆಮೇಲೆ ಮತ್ತೆ ಯಾವತ್ತೂ ನಾನು ಭಾಷಣ ಮಾಡಲಿಲ್ಲ, ಹೈಸ್ಕೂಲು ಮುಗಿಯುವವರೆಗೆ. ಆಮೇಲೆ ಸ್ಟೇಜು ಹತ್ತಿದರೂ ಕೈ ಕಾಲು ನಡುಗುತ್ತಿತ್ತು ಸ್ವಲ್ಪ ದಿನ.

*****


ಮೊನ್ನೆ ನನ್ನ ಚಿಕ್ಕಮ್ಮ ಮನೆಗೆ ಬಂದಿದ್ದರು, ಅವರಿಗೊಬ್ಬ ಪುಟ್ಟ ಮಗಳು, ೪ ವರ್ಷದವಳು. ಅವಳು ಚೆನ್ನಾಗಿ ಸಿನಿಮಾ ಹಾಡೆಲ್ಲ ನೆನಪಿಟ್ಟುಕೊಂಡು ಹಾಡುತ್ತಾಳೆ ಅಂತಿದ್ದರು ಅವರು. ಇಲ್ಲ ಚಿಕ್ಕಮ್ಮಾ, ನಾಡಿದ್ದು ಶಾಲೆಗೆ ಸೇರಿದ ಮೇಲೆ ನಿನ್ನ ಮಗಳು ಹಾಡುವ ಉಲ್ಲಾಸದ ಹೂಮಳೇ.. ವರ್ಕೌಟ್ ಆಗುವುದಿಲ್ಲ, ಬೇರೇನಾದರೂ ಬೇಕಾಗುತ್ತದೆ ಅಂದೆ. ಆವಾಗ ಇದೆಲ್ಲ ನೆನಪಾಯಿತು.


ಭಾನುವಾರ, ಮಾರ್ಚ್ 09, 2008

ಬನ್ನಿ, ಭೇಟಿಯಾಗೋಣ.

ಮತ್ತೊಂದು ಕನಸು ನನಸಾಗಲು ಹೊರಟಿದೆ. ಬಹುದಿನಗಳಿಂದ ಅಂದುಕೊಂಡಿದ್ದು.

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ.

ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ.