ಸೋಮವಾರ, ಮಾರ್ಚ್ 26, 2012

ಪಡಸಾಲೆಯ ಚಿತ್ರಗಳು


ತಮ್ಮ ವೃತ್ತಿಜೀವನದ ಸುಮಾರು ೨೦ಕ್ಕೂ ಹೆಚ್ಚು ವರ್ಷಗಳನ್ನ ಬಾಡಿಗೆ ಮನೆಯಲ್ಲಿ ಸವೆಸಿದ ಮೇಲೆ ನಮ್ಮಪ್ಪನಿಗೆ ಸ್ವಂತಕ್ಕೊಂದು ಮನೆ ಮಾಡಿಕೊಳ್ಳುವ ಶಕ್ತಿ ಬಂತು. ಅಲ್ಲಿಯವರಿಗೆ ನಮಗೆ ವರ್ಷ-ಎರಡು ವರ್ಷಕ್ಕೊಮ್ಮೆ ಪಾತ್ರೆ ಪಗಡೆ ಮಂಚ ಕುರ್ಚಿ ಹೊತ್ತು ಮತ್ತೊಂದು ಮನೆಗೆ ಸಾಗುವ ಸಂಭ್ರಮ ತಪ್ಪಿರಲಿಲ್ಲ. ಯಮ ಸೆಖೆಯ ಕರಾವಳಿಯಲ್ಲಿ ಮಲೆನಾಡಿನ ತರಹದ್ದೇ ಮನೆ ಹುಡುಕಿ, ಸ್ವಂತ ಮನೆ ಮಾಡಿಕೊಂಡಿದ್ದಾಯಿತು. ಪುಟ್ಟ, ಒಂದೆರಡು ರೂಮುಗಳ ಮನೆಯಲ್ಲಿದ್ದ ನಮಗೆ, ಚಾವಡಿ ಪಡಸಾಲೆ ದೇವರಕೋಣೆ, ಉಪ್ಪರಿಗೆ ಅಡಿಗೆಮನೆ ಎಂದೆಲ್ಲ ವಿಸ್ತಾರವಾಗಿದ್ದ ಮನೆಯನ್ನ ನೋಡಿ ಖುಷಿಯೋ ಖುಷಿ. ಅಲ್ಲಿಯವರೆಗೆ ಮನೆ ಎಂದರೆ ಹೊರಗೊಂದು ಬಾಗಿಲು, ಅಲ್ಲಿಂದ ಒಳ ಪ್ರವೇಶ ಎಂದುಕೊಂಡಿದ್ದ ನಮಗೆ, ಇಲ್ಲಿ ಅಂಗಳದಿಂದಲೇ ನೇರ ಮೇಲೆ ಬಂದು ಕೂರಬಹುದಾದ ಚಾವಡಿ ನೋಡಿ ಅಚ್ಚರಿ. ಅದಕ್ಕೆ ಬಾಗಿಲೇ ಇಲ್ಲ! ಎರಡು ದಪ್ಪನೆಯ ಮಿರಮಿರ ಮಿಂಚುವ ಕಂಬಗಳು, ಸುತ್ತ ಗೋಡೆಗಳ ಮೇಲೆ ವಿರಾಜಮಾನವಾದ ರಾಜಾ ರವಿವರ್ಮನ, ಮತ್ತಿತರರ ವರ್ಣ ಚಿತ್ರಗಳನ್ನ ನೋಡಿ ನಾನಂತೂ ಬೆರಗಾಗಿ ಹೋದೆ

ಆದರೆ ಅಲ್ಲೊಂದು ಸಮಸ್ಯೆಯಿತ್ತು. ದೇವರ ಚಿತ್ರಗಳ ಜೊತೆಗೆ, ಅಲ್ಲಲ್ಲಿ ಮಧ್ಯಮಧ್ಯ ಒಂದಿಷ್ಟು ಹಳೆಯ ಫ್ಯಾಮಿಲಿ ಫೋಟೋಗಳೂ ಫ್ರೇಮಿನೊಳಗೆ ರಾರಾಜಿಸುತ್ತಿದ್ದವು. ನಮಗೆ ಮನೆ ಮಾರಿ ಹೋದವರು ಅವುಗಳನ್ನು ಇಲ್ಲೇ ಬಿಟ್ಟು ಹೋಗಿದ್ದರು. ಹುಟ್ಟಿ ಬೆಳೆದ ಮನೆಯನ್ನೇ ಬಿಟ್ಟು ಹೋಗುತ್ತಿದ್ದೇವೆ, ಹಳೆಯ ನೆನಪುಗಳನ್ನ ಕಟ್ಟಿಕೊಂಡು ಹೋಗುವುದೇಕೆ ಎಂದಿರಬೇಕು.   ನಾವು ಕೊಂಡ ಮನೆಯನ್ನ ಕಟ್ಟಿಸಿದ ವ್ಯಕ್ತಿ , ಸ್ವಾತಂತ್ರ್ಯ ಪೂರ್ವದಲ್ಲಿ ಆನೆ ದಂತಗಳ ವ್ಯಾಪಾರಿಯಾಗಿದ್ದವರಂತೆ! ಅಲ್ಲಿನ ಹಲವಾರು ಕಪ್ಪು ಬಿಳುಪು ಚಿತ್ರಗಳಲ್ಲಿ ನಿಂತವರೆಲ್ಲ ದಪ್ಪ ಮೀಸೆ ಬಿಟ್ಟುಕೊಂಡು ಕೈಯಲ್ಲಿ  ಉದ್ದುದ್ದುದ ಆನೆದಂತಗಳನ್ನು ಹಿಡಿದವರೇ ಆಗಿದ್ದರು

ಮನೆ ಪ್ರವೇಶವಾಗಿ  ವಾರದ ನಂತರ ಬಂದ ಅಪ್ಪನ ಗೆಳೆಯರೊಬ್ಬರು ಅನುಮಾನಾಸ್ಪದವಾಗಿ ನಿಮ್ಮ ಫ್ಯಾಮಿಲಿಯದ್ದು ಈ ಬ್ಯುಸಿನೆಸ್ಸು ಅಂತ ಗೊತ್ತಿರಲಿಲ್ಲ ಮಾರಾಯರೇ ಎಂದು ನಮ್ಮ ವಂಶವೃಕ್ಷದ ಹಿರಿಯ ತಲೆಗಳನ್ನು ಶಂಕಿಸಿದರು, ಮೇಲಿಂದ ’ಹಾಗಿದ್ದರೆ ಈ ಮನೆ ಕೊಳ್ಳುವುದಕ್ಕೆ ನಿಮಗೇನು ಕಷ್ಟವಾಗಿರಲಿಕ್ಕಿಲ್ಲ ಬಿಡಿ’ ಎಂದು ವ್ಯಂಗ್ಯವಾಡಿದ ಮೇಲೆ ಫೋಟೋಗಳನ್ನ ಅಲ್ಲಿಂದ ಎತ್ತುವುದು ಅನಿವಾರ್ಯವಾಯಿತು.  ದಂತಗಳನ್ನು ಹಿಡಿದ ಮನುಷ್ಯರು ಉಪ್ಪರಿಗೆಯ ಮೂಲೆಗೆ ಸೇರಿದರು.

ಅಲ್ಲಿನ ಖಾಲಿಯಾದ ಜಾಗಕ್ಕೆ ಎಂತಹ ಚಿತ್ರಗಳನ್ನು ತಂದು ಹಾಕಬೇಕು ಎನ್ನುವ ಬಗ್ಗೆ ಅಪ್ಪನಿಗೂ ಅಮ್ಮನಿಗೂ ಹಾಗೂ ನಾವಿಬ್ಬರು ಅಣ್ಣತಂಗಿಗೂ ವಾಗ್ಯುದ್ಧ ಜರುಗಿತು. ಅಪ್ಪನು ಅಲ್ಲಿ ಸೀನರಿಗಳು ಇದ್ದರೆ ಚೆಂದ ಅಂದರೆ ಅಮ್ಮನು ದೇವರ ಚಿತ್ರಗಳು ಬೇಕೆಂದರು. ನಾವು ನಮ್ಮದೇ ಚಿತ್ರಗಳನ್ನು ಹಾಕಬೇಕು ಎಂದೆವು. ಮನೆಗೆ ಬಂದ ನೆಂಟರೆದುರು ನಮ್ಮದೇ ಕೆಲವು ಸೊಗಸಾದ ಫೋಟೋಗಳು ಇದ್ದರೆ ಚೆನ್ನ ಎಂಬುದು ನನ್ನ ಎಣಿಕೆ. ನನ್ನ ತಂಗಿಯದೂ ಇದಕ್ಕೆ ಸಹಮತ. ಆದರೆ, ನಮ್ಮದೇ ಫೋಟೋ ನೇತುಹಾಕಬೇಕೆಂಬ ಸ್ವಾರ್ಥಪೂರಿತ ಬೇಡಿಕೆಗಳನ್ನು ಅಪ್ಪ-ಅಮ್ಮ ಇಬ್ಬರೂ ಒಂದಾಗಿ ಹೊಸಕಿ ಹಾಕಿಬಿಟ್ಟರು. ಕೊಂಚ ಹೊತ್ತಿಗೆ ಮೊದಲು ತಮ್ಮದೇ ಹಠ ಸಾಧನೆ ಮಾಡುತ್ತಿದ್ದ ಇಬ್ಬರೂ ನಮ್ಮನ್ನ ಮೂಲೆಗುಂಪು ಮಾಡಿ, ಅವರ ಮಾತುಕತೆಗಳನ್ನ ಮುಂದುವರೆಸಿದರು.

ಮಾರನೇ ದಿನವೇ ಅಪ್ಪ ಒಂದೆರಡು ಜಲಪಾತ, ಬೆಟ್ಟಗುಡ್ಡಗಳ ರಮಣೀಯ ಚಿತ್ರಹೊಂದಿರುವ ಫೋಟೋ ಫ್ರೇಮುಗಳನ್ನೂ, ಈಶ್ವರ ಪಾರ್ವತಿ, ಗಣಪತಿಯೇ ಮೊದಲಾದ ಖಾಯಂ ಗೋಡೆ ನಿವಾಸಿಗಳಾದ ದೇವರುಗಳನ್ನು ತಗೊಂಡು ಬಂದು ರವಿವರ್ಮನ ಚಿತ್ರಗಳ ಮಧ್ಯ ಕೂರಿಸಿದರು. ನಾನು ಪ್ರತಿಭಟನೆ ಎಂಬಂತೆ, ಅಪ್ಪ ಫೋಟೋ-ಪೇಂಟಿಂಗುಗಳನ್ನು ನೇತು ಹಾಕುತ್ತಿದ್ದಾಗ ಕಡೆಗೆ ತಲೆ ಹಾಕದೇ ಇದ್ದೆ. ಅಮ್ಮ ಅಲ್ಲೇ ದೇವರುಗಳಿಗೆಲ್ಲ ಕುಂಕುಮ ಹಚ್ಚಿ ಕೈ ಮುಗಿದರು ಮತ್ತು ಅದ್ಯಾವುದೋ ವಿದೇಶೀ ಗುಡ್ಡಬೆಟ್ಟಗಳ ಫೋಟೋ ನೋಡಿ, ಕಂಪ್ಯೂಟರಲ್ಲಿ ಮಾಡಿದ್ದೆಲ್ಲ ಬೇಕಿತ್ತಾ? ಎಂದು ಮುಖ ಸಿಂಡರಿಸಿಕೊಂಡರು. ಆದರೂ, ದಿನಗಳೆದಂತೆ ಆ ಎಲ್ಲ ಚಿತ್ರಗಳೂ ಪರಸ್ಪರ ಹೊಂದಿಕೊಂಡು ಬಿಟ್ಟವು. ಜೇಡರ ಬಲೆಯನ್ನು ಅಕ್ಕಪಕ್ಕದ ಚಿತ್ರಗಳು ಜೊತೆಯಾಗೇ ಹಂಚಿಕೊಂಡವು, ಈಶ್ವರ ಪಾರ್ವತಿ ಚಿತ್ರಕ್ಕೂ ಪಕ್ಕದ ಹಿಮಹೊತ್ತ ಬೆಟ್ಟ ಸಾಲುಗಳ ಫೋಟೋಗೂ ಏನೋ ಸಂಬಂಧವಿದ್ದಂತೆ ಕಾಣುತ್ತಿತ್ತು. 

ಒಂದು ಸಲ ಎಂದಿನ ಸಂಪ್ರದಾಯದಂತೆ ಬೇಸಿಗೆಯ ರಜೆಯಲ್ಲಿ ನಮ್ಮ ಊರು ಧರೇಮನೆಗೆ ಹೋಗಿದ್ದೆವು. ಮಧ್ಯಾಹ್ನ ಕಂಠ ಮಟ್ಟ ತಿಂದು ಮಲಗಿದ್ದಾಗ, ಅಲ್ಲಿನ ಜಗಲಿ ಗೋಡೆಯತ್ತ ಗಮನ ಹೋಯಿತು. ಅಲ್ಲೂ ಕೂಡ ನಮ್ಮ ಮನೆಯಲ್ಲಿದ್ದ ಹಾಗೇ ದೇವರ ಚಿತ್ರಗಳು, ಕ್ಯಾಲೆಂಡರುಗಳು ಗೋಡೆಯನ್ನು ಅಲಂಕರಿಸಿದ್ದವು. ಅಲ್ಲಿ, ನಮ್ಮ ಮನೆಯಲ್ಲಿ ಇದ್ದ ಹಾಗಿನದೇ ರವಿವರ್ಮ ಬಿಡಿಸಿದ್ದ ಶಾರದೆಯ ಚಿತ್ರದ ಪ್ರತಿ ಇತ್ತು. ನಾನೋ, ಅದು ಕೇವಲ ನಮ್ಮ ಮನೆಯಲ್ಲಿ ಮಾತ್ರ ಇರುವ ಆತನ ವಿಶೇಷ  ಪೇಂಟಿಂಗು ಅಂದುಕೊಂಡಿದ್ದೆ! ಆದರೆ ಅದನ್ನ ನೋಡಲೆಂದು ಎದ್ದ ನನ್ನ ಗಮನ ಸೆಳೆದದ್ದು, ನಮ್ಮದೇ ಕುಟುಂಬದ ಮಂದಿಯ ಹಳೆಯ ಚಿತ್ರಗಳು. ನನ್ನಪ್ಪ ಹೈಸ್ಕೂಲಿಗೆ ಹೋಗುತ್ತಿದ್ದ ಕಾಲದಿಂದ ಹಿಡಿದು ಮದುವೆ ಆಗಿದ್ದರ ವರೆಗಿನ ತರಹೇವಾರೀ ಫೋಟೋ ಫ್ರೇಮುಗಳು ಅಲ್ಲಿ! ಅತ್ತೆಯಂದಿರ, ಚಿಕ್ಕಪ್ಪ, ದೊಡ್ಡಪ್ಪರ ಓಬೀರಾಯನ ಕಾಲದ ಫೋಟೋಗಳೇ ಫೋಟೋಗಳು! ಹಿಂದೆಲ್ಲ ಹಲ ಬಾರಿ ಬಂದು ಹೋಗಿದ್ದರೂ ಕೂಡ ನಾನು ಇದನ್ನೆಲ್ಲ ಸರಿಯಾಗಿ ಗಮನಿಸಿಯೇ ಇರಲಿಲ್ಲ.

ಅಲ್ಲಿನ ಚಿತ್ರ ಸಾಲುಗಳಲ್ಲಿ ಅಸಡಾ ಬಸಡಾ ಕಾಲು ಬೀಸಿಕೊಂಡು ಕೆಂಪು ಚಡ್ಡಿ ಹಾಕಿಕೊಂಡು ನಿಂತಿದ್ದ, ಎರಡೋ ಮೂರೋ ವರ್ಷ ಪ್ರಾಯದ ನನ್ನದೊಂದು ಕಲರ್ ಫೋಟೋ ಕೂಡ ಇತ್ತು. ಉದ್ದುದ್ದ ಕೂದಲು ಬಿಟ್ಟುಕೊಂಡು ನಿಂತಿದ್ದ ಆ ಚಿತ್ರ ನನಗೇ ಮುದ್ದು ಬರುವಂತಿತ್ತು. ಅದನ್ನ ನೋಡಿ ನಾನು ನಗುತ್ತಿರಬೇಕಿದ್ದರೆ ಅಲ್ಲಿಗೆ ಬಂದ ಚಿಕ್ಕಪ್ಪ ನನ್ನ ಅದೇ ಫೋಟೋಕ್ಕೆ ಸಂಬಂಧಿಸಿದ ಘಟನೆಯೊಂದನ್ನು ತಿಳಿಸಿದರು. ನಮ್ಮ ಸಂಬಂಧಿ ಅಜ್ಜಿಯೊಬ್ಬರು, ಆಗಾಗ ಧರೇಮನೆಗೆ ಬರುತ್ತಾರೆ, ಆಕೆ ನನ್ನ ತಂದೆಯನ್ನು, ಚಿಕ್ಕಪ್ಪನನ್ನು ಬೆಳೆಸಿದ ಹಿರಿಯಜ್ಜಿ.  ಅವರು ಅಲ್ಲಿಗೆ ಬರುವುದೇ ವರುಷಕ್ಕೋ, ಎರಡು ವರುಷಕ್ಕೋ ಒಮ್ಮೆ. ಆಕೆ ಬಂದ ಸಮಯದಲ್ಲಿ ನಾನಂತೂ ಒಮ್ಮೆಯೂ ಅಲ್ಲಿರಲಿಲ್ಲ. ಬಂದಾಗೆಲ್ಲ ನನ್ನ ಆ ಫೋಟೋವನ್ನೇ ನೋಡುವ ಅಜ್ಜಿಗೆ ಶ್ರೀಧರನ ಮಗ ಎಂದರೆ ಆ ಚಿತ್ರದಲ್ಲಿನ ಹುಡುಗ, ಅಷ್ಟೆ. ಅಲ್ಲಿಂದ ನಂತರ ನಾನವರ ಮನದಲ್ಲಿ ಬೆಳೆದೇ ಇರಲಿಲ್ಲ. ಮುಂದೆಂದೋ ಯಾರದೋ ಮದುವೆಯಲ್ಲಿ ಆ ಅಜ್ಜಿ ಸಿಕ್ಕಾಗ ನನ್ನ ಮೈ ಕೈ ಎಲ್ಲ ತಡವಿ ಎಷ್ಟು ದೊಡ್ಡವನಾಗಿದ್ದೀಯೋ ಎಂದು ಖುಷಿ ಪಟ್ಟಿದ್ದರು ಆಕೆ.

ಅಲ್ಲಿದ್ದ ಚಿತ್ರಗಳಲ್ಲಿ ನನಗೆ ತಿಳಿಯದ ಅದೆಷ್ಟೋ ವಿಚಾರಗಳಿದ್ದವು. ಅಪ್ಪ ತನ್ನ ಯೌವನ ಕಾಲದಲ್ಲಿ ಹಳೇ ಹಿಂದಿ ನಟರುಗಳ ಹಾಗೆಯೇ ಕ್ರಾಪು ಬಿಟ್ಟಿದ್ದ, ಮೀಸೆ ಕತ್ತರಿಸಿಕೊಂಡಿದ್ದ. ವಸಂತ್ ಸ್ಟುಡಿಯೋ, ೧೯೭೨ ಎಂಬ ಸ್ಟಿಕ್ಕರು ಹಚ್ಚಿಕೊಂಡಿದ್ದ ಫೋಟೋದಲ್ಲಿ ಅಪ್ಪನದು ಬೆಲ್ ಬಾಟಮ್ ಪ್ಯಾಂಟು, ಹೂ ಚಿತ್ತಾರದ ಶರ್ಟು. ಅವರನ್ನು ಫಾರ್ಮಲ್ ಪ್ಯಾಂಟು ಶರಟುಗಳಲ್ಲಿ ಮತ್ತು ಪಂಚೆ ಅಂಗಿಗಳಲ್ಲಿ ಮಾತ್ರ ನೋಡಿದ್ದೆ ನಾನು! ಇಂದು ಮಡಿ ಮಡಿ ಎನ್ನುವ ನಮ್ಮತ್ತೆ ತುರುಬನ್ನೆಲ್ಲ ಮೇಲೆತ್ತಿ ಕಟ್ಟಿಕೊಂಡು ಆರತಿಯೋ ಕಲ್ಪನಳದೋ ಶೈಲಿಯಲ್ಲಿ ನಿಂತಿರುವ ಚಿತ್ರ, ಈಗ ತೋಟದ ಕೆಲಸದಲ್ಲಿ ಹಣ್ಣಾಗಿ ಹೋಗಿರುವ ಚಿಕ್ಕಪ್ಪ ಹಿಂದೆಲ್ಲೋ ಬೊಂಬಾಯಿಯ ಮಿಲ್ ನೌಕರರ ಪಡೆಯ ಮಧ್ಯ ನಾಯಕನಂತೆ ನಿಂತು ಪೋಸ್ ಕೊಟ್ಟಿರುವುದು, ವೈಕುಂಠವಾಸಿ ಅಜ್ಜನ ಯಕ್ಷಗಾನ ವೇಷ –ಹೀಗೆ ನಮ್ಮ ಕುಟುಂಬದ ಇತಿಹಾಸ ಅಲ್ಲಿನ ಗೋಡೆಯಲ್ಲಿ ನಿಶ್ಚಲ ಚಿತ್ರಗಳೊಳಗೆ ಸೇರಿಕೊಂಡು ವರ್ತಮಾನದುದ್ದಕ್ಕೂ ಸಾಗಿಬಂದಿತ್ತು.

ನಮ್ಮ ಊರಿನಲ್ಲಿ ಹಿಂದೆಂದೋ ರಾಜಮನೆತನಕ್ಕೆ ಸೇರಿದವರ ಮನೆಯೊಂದಿದೆ. ಆ ಮನೆ ಯಜಮಾನರ ಪೂರ್ವಜರಿಗೆ ನೂರಾರು ಎಕರೆ ತೋಟ ಗದ್ದೆಗಳಿದ್ದು, ಚಿನ್ನವನ್ನು ಬಳ್ಳದಲ್ಲಿ ಅಳೆಯುತ್ತಿದ್ದರಂತೆ. ಅವರ ಮುತ್ತಾತನೋ ಯಾರೋ ಮೈಸೂರು ಅರಸರಿಗೋ, ಮರಾಠರಿಗೋ ಸಾಮಂತರಾಗಿದ್ದರಂತೆ. ಆದರೆ ಈಗಿನ ಮನೆಯನ್ನೂ, ಅವರುಗಳ ಸ್ಥಿತಿಯನ್ನೂ ನೋಡಿದರೆ ಅದು ಸತ್ಯ ಎಂದು ದೇವರಾಣೆಯಾಗಿಯೂ ಅನ್ನಿಸುವುದಿಲ್ಲ. ಆದರೆ ಅದೆಲ್ಲ ನಿಜ ಎಂದು ಸಾಕ್ಷಿ ಹೇಳುವಂತೆ, ಆ ಮನೆಯ ಪಡಸಾಲೆಯಲ್ಲಿ ಹಳೆಯ ವೈಭವದ ದಿನಗಳ ಕುರುಹಾಗಿ ಯಾರೋ ರಾಜಪೋಷಾಕು ಧರಿಸಿ ಕತ್ತಿ ಹಿಡಿದು ನಿಂತ ದೊಡ್ಡದಾದ ಚಿತ್ರವೊಂದಿದೆ. ಅದನ್ನೇ ಮುಂದಿರಿಸಿಕೊಂಡು ಅಲ್ಲಿನ ಮಂದಿ ಯಾವ ಇತಿಹಾಸದಲ್ಲೂ ಕಾಣ ಸಿಗದ, ಮತ್ತಾರೂ ಇಲ್ಲಿಯವರೀ ಕೇಳದ ಚರಿತ್ರೆಯ ತುಣುಕನ್ನು ರಸವತ್ತಾಗಿ ನಮ್ಮ ಮುಂದಿಡುತ್ತಾರೆ.

ಅವರ ಮುತ್ತಾತ ಆ ವರ್ಣಚಿತ್ರವನ್ನು ಲಂಡನ್ ನಲ್ಲಿ ತೆಗೆಸಿದ್ದರಂತೆ. ಭಾರತ ಇನ್ನೂ ಕ್ಯಾಮರಾವನ್ನೇ ಕಾಣದ ಆ ದಿನಗಳಲ್ಲಿ ಹೇಗೆ ಆ ಫೋಟೋವನ್ನು ಫ್ರೇಮು ಹಾಕಿಸಿ, ಜೋಪಾನವಾಗಿ ಲಂಡನ್ ನಿಂದ ಭಾರತಕ್ಕೆ ಹಡಗಿನಲ್ಲಿ ತರಲಾಯಿತು ಮತ್ತು ಮಂಗಳೂರಿನಿಂದ ಫೋಟೋ ಸಮೇತವಾಗಿ ಮುತ್ತಜ್ಜನನ್ನು ಮೆರವಣಿಗೆ ಮಾಡಲಾಯಿತು ಎಂದೆಲ್ಲ ಮನೆಯ ಜನ ವರ್ಣನೆಗಳನ್ನು ಮಾಡುತ್ತಾರೆ. ಮೊದಲ ಬಾರಿಗೆ ಇದನ್ನು ಕೇಳಿದಾಗ ಕೆಲ ಪ್ರಶ್ನೆಗಳನ್ನು ಹಾಕಿ, ಆ ಫೋಟೋದ ಹಿಂದಿನ ಸತ್ಯಾಸತ್ಯತೆಯನ್ನು ವಿಮರ್ಶಿಸಿಬೇಕು ಅಂದುಕೊಂಡರೂ, ಇಡೀ ಕುಟುಂಬವೊಂದರ ಅದಮ್ಯ ಉತ್ಸಾಹಕ್ಕೆ ಕಲ್ಲು ಹಾಕುವುದಕ್ಕೆ ಮನಸ್ಸಾಗಲಿಲ್ಲ. ಜಗಲಿಯ ಮೇಲೆ ಸುಮ್ಮಗೆ ಜೋತುಬಿದ್ದಿರುವ ಹಳೆಯ ಕಪ್ಪುಬಿಳುಪಿನ ಚಿತ್ರವೊಂದು ಅವರುಗಳಿಗೆ ನೀಡುತ್ತಿರುವ ಬಣ್ಣಬಣ್ಣದ ಪುಳಕಗಳನ್ನು ತಡೆಯಲು ನನಗೇನು ಹಕ್ಕಿದೆ? ಆಮೇಲಾಮೇಲಂತೂ ಆ ಕಥೆಯನ್ನು ಅದೆಷ್ಟು ಸಲ ಕೇಳಿದ್ದೇನೆಂದರೆ, ಕೆಲ ಬಾರಿ ಅವರ ಮನೆಗೆ ಬಂದ ಅತಿಥಿಗಳಿಗೆ ನಾನೇ ಆ ಕಥೆಯನ್ನು ಇನ್ನೂ ಮಸಾಲೆ ಸೇರಿಸಿ ಹೇಳಿದ್ದೇನೆ. ಆಗಲೂ ಅವರೆಲ್ಲ ಅಷ್ಟೇ ಖುಷಿಯಿಂದ ಹೌದು ಹೌದು ಎಂದು ತಲೆದೂಗುತ್ತಿರುತ್ತಾರೆ.

ಅವರ ಮನೆಯಲ್ಲಿನ ಮತ್ತೊಂದು ಚಿತ್ರದಲ್ಲಿ ಸುಮಾರು ಐವತ್ತರವತ್ತು ಮಂದಿ ಜೊತೆಯಲ್ಲಿ ನಿಂತುಕೊಂಡ ಗ್ರೂಪ್ ಫೋಟೋ ಇದೆ. ಅಲ್ಲಿ ಮಧ್ಯ ಕೂತ ವ್ಯಕ್ತಿ ವಲ್ಲಭಭಾಯಿ ಪಟೇಲ್ ಅಂತಲೂ, ಅವರು ಇವರ ಅಜ್ಜನ ಕಾಲದಲ್ಲಿ ಭಾರೀ ದೊಡ್ಡದಾಗಿದ್ದ ಕುಟುಂಬವನ್ನು ಭೇಟಿ ಮಾಡಲು ಸ್ವಾತಂತ್ರ ಸಿಕ್ಕ ಸ್ವಲ್ಪ ಸಮಯಕ್ಕೇ ಬಂದಿದ್ದರೂ ಎಂಬ ಕಥೆಯನ್ನೂ ಹೇಳುತ್ತಾರೆ. ಫೋಟೋ ಹತ್ತಿರದಿಂದ ನೋಡಿದರೆ, ಸರಿಯಾಗಿ ಮಧ್ಯ ಕೂತ ವ್ಯಕ್ತಿಯ ತಲೆಯೇ ಮಸುಕಾಗಿ ಹೋಗಿದೆ! ಹಾಗೆ ಮಸುಕಾದ್ದರಿಂದಲೇ ಬಂದ ಜನರಿಗೆ ಈ ಕಥೆಯನ್ನು ಕೇಳುವ ಸೌಭಾಗ್ಯ ಹೆಚ್ಚಾಗಿ ದೊರಕುವುದಿಲ್ಲ. ಆ ಫೋಟೋ ತನ್ನ ಫ್ರೇಮಿನ ಹಿಂದೆ ಹಳೆ ಬಾಚಣಿಗೆ, ಪಂಚಾಂಗ, ಮದುವೆ ಆಮಂತ್ರಣ ಪತ್ರಿಕೆಗಳನ್ನು ಸಿಕ್ಕಿಸಿಕೊಂಡು ಅನಾಥವಾಗಿ ನಿಂತಿದೆ.

ನಮ್ಮ ಮನೆಯಲ್ಲೂ ಕೂಡ ಹಳೆಯ ಚಿತ್ರಗಳಿಗೆ ಮರುಜೀವ ದೊರಕುವ ಸಂದರ್ಭ ಬಂತು. ನನ್ನ ಅಮ್ಮನ ತಮ್ಮ, ಅಂದರೆ ನನ್ನ ಮಾವ, ಛಾಯಾಚಿತ್ರಗ್ರಾಹಕ. ವರುಷದ ಕೆಳಗೆ ಅವನೊಮ್ಮೆ ನಮ್ಮ ಮನೆಗೆ ಬಂದಾಗ ಅಪ್ಪ ಅಮ್ಮನ ಮದುವೆ ಜಮಾನದಲ್ಲಿ ಅವರು ಜತೆಗೆ ತೆಗೆಸಿಕೊಂಡಿದ್ದ ಚಿತ್ರವನ್ನು ಫ್ರೇಮ್ ಹಾಕಿಸಿ ತಂದುಕೊಟ್ಟ. ಅವನ ಹತ್ತಿರ ಅದರ ಪ್ರತಿ ಎಲ್ಲಿತ್ತೋ ಏನೋ. ಅಮ್ಮನಿಗಂತೂ ಆ ಚಿತ್ರ ಕಂಡು ಸಂತಸವೇ ಸಂತಸ. ಅಚ್ಚರಿ. ಏಕೆಂದರೆ ಅಮ್ಮನ ಬಳಿ ಇದ್ದ ಆ ಫೋಟೋ ಕಪ್ಪು ಬಿಳುಪಿದ್ದಾಗಿತ್ತು. ಆ ಕಾಲದಲ್ಲಿ ಯಾವುದೋ ಸ್ಟುಡಿಯೋಗೆ ಹೋಗಿ ತೆಗೆಸಿಕೊಂಡು ಬಂದಿದ್ದು. ಈಗ ಮಾವ ತಂದುಕೊಟ್ಟ ಫ್ರೇಮಿನಲ್ಲಿದ್ದ ಆ ಚಿತ್ರಕ್ಕೆ ಬಣ್ಣ ಬಂದುಬಿಟ್ಟಿತ್ತು. ಬ್ಲಾಕ್ ಅಂಡ್ ವೈಟ್ ನಲ್ಲಿ ಅಮ್ಮನ ಸೀರೆ ಪ್ಲೇನ್ ಆಗಿದ್ದರೆ, ಈಗಿನ ಹೊಸ ಫೋಟೋದಲ್ಲಿ ಸೀರೆಗೆ ಗುಲಾಬಿ ಬಣ್ಣ ಮೇಲೆ ನೀಲಿ ಹೂಗಳ ಡಿಸೈನು.  ಅದಕ್ಕೂ ಮಜಾ ಅಂದರೆ, ಅಪ್ಪನಿಗೆ ಕೋಟು ಟೈ ಹಾಕಿಸಿ ಆಫೀಸರ್ ಗೆಟಪ್ ನೀಡಲಾಗಿತ್ತು. ಸ್ವಂತಕ್ಕೆ ಇಲ್ಲಿಯತನಕ ಅಪ್ಪ ಟೈ-ಕೋಟು ಕೊಂಡದ್ದಿರಲಿ, ಮುಟ್ಟಿದ್ದು ಕೂಡ ಅನುಮಾನವೇ.

ಫೋಟೋಶಾಪಿನಂತಹ ಸಾಫ್ಟ್ ವೇರ್ ಅರಿಯದ ಅಮ್ಮನಿಗೆ ಇದೆಲ್ಲ ಪರಮಸೋಜಿಗ. ತಂತ್ರಜ್ಞಾನದ ಬಗೆಗಿನ ಅಜ್ಞಾನ ಕೂಡ ಈ ರೀತಿಯಲ್ಲಿ ಖುಷಿ ಕೊಡುತ್ತದೆ. ಅದೆಂಗೆ ಇದನ್ನ ಕಲರ್ ಫೋಟೋ ಮಾಡಿದೆ ಮಾರಾಯ ಅಂತ ದಿನವಿಡೀ ಅವುಗಳನ್ನ ತಿರುಗಿಸಿ ಮರುಗಿಸಿ ನೋಡಿದ್ದೇ ನೋಡಿದ್ದು. ಮಾವ ಅದೇನು ವಿವರಣೆ ನೀಡಿದರೂ ಅವಳಿಗೆ ಅರ್ಥವಾಗಲಿಲ್ಲ, ಅಥವಾ ಅರ್ಥವಾಗುವುದು ಬೇಕಿರಲಿಲ್ಲ. ಈ ಫೋಟೋ ಬಂದಿದ್ದೇ ಬಂದಿದ್ದು ಹಳೆಯ ಒಡಬಂಡಿಕೆಯನ್ನು ಮರೆತು, ಕೂಡಲೇ ಪಡಸಾಲೆಯಲ್ಲಿದ್ದ ಒಂದೆರಡು ಚಿತ್ರಪಟಗಳಿಗೆ ಒತ್ತಾಯಪೂರ್ವಕ ವಿ ಆರ್ ಎಸ್ ನೀಡಿ, ಈ ಹೊಸ ಫೋಟೋಗೆ ಪ್ರಮುಖ ಸ್ಥಾನ ನೀಡಲಾಯಿತು. ಆದರೆ ಈ ಒಂದು ಫೋಟೋದ ಚೆಂದವನ್ನು ಧೂಳು ಹೊದ್ದ ಇತರ ಫೋಟೋಗಳು ಕುಂದಿಸುತ್ತಿದ್ದವಾದ್ದರಿಂದ ಎಲ್ಲ ಚಿತ್ರಗಳನ್ನು ಕೆಳಗಿಳಿಸಿ ಅವಕ್ಕೆ ಯಥೋಚಿತ ಸಂಸ್ಕಾರಗಳು ದೊರಕಿದವು. ಫ್ರೇಮುಗಳು ವಾರ್ನಿಷ್ ಹೊಡೆಯಲಾಯಿತು. ಕೆಲ ಚೌಕಟ್ಟುಗಳು ನೂತನ ಚಿತ್ರಗಳನ್ನು ಕಂಡರೆ, ಕೆಲ ಫೋಟೋಗಳಿಗೆ ಹೊಸ ಚೌಕಟ್ಟುಗಳು ಬಂದವು. 

ಇದೆಲ್ಲ ಆಗಿ ಆರೆಂಟು ತಿಂಗಳು ಕಳೆದಿರಬೇಕು. ಮನೆಗೆ ಹೋಗಿದ್ದೆವು. ನನ್ನ ಹೆಂಡತಿಯನ್ನ ಕರೆದ ಅಮ್ಮ ಅದೇನೋ ಗುಸಪಿಸ ನಡೆಸಿದ್ದರು. ಕೊಂಚ ಹೊತ್ತಿಗೆ ಆ ದ್ವಿಸದಸ್ಯ ನಿಯೋಗ ನನ್ನ ಬಳಿಗೆ ಬಂತು. ವಿಷಯ ಏನೆಂದರೆ ಅಮ್ಮನ ಕಡತ ವಿಲೇವಾರಿಯ ಸಂದರ್ಭದಲ್ಲಿ ಅವರಿಗೆ ಹಳೇ ಭಜನೆ ಪುಸ್ತಕದಲ್ಲಿ ಸೇರಿಕೊಂಡಿದ್ದ ,ಮುಟ್ಟಿದರೆ ಚೂರಾಗಬಹುದಾದಂತಹ ಅವರ ತಾಯಿಯ ಫೋಟೋ ಸಿಕ್ಕಿದೆ. ಸುಮಾರು ಹರಪ್ಪ ಮೊಹೆಂಜೋದಾರೋ ಕಾಲದ್ದಾಗಿರಬಹುದಾದ ಆ ಫೋಟೋ ಅಮ್ಮನ ಪಾಲಿಗೆ ಅಮೂಲ್ಯ ನಿಧಿಯೇ ಆಗಿತ್ತು. ಏಕೆಂದರೆ ಇಡೀ ಕುಟುಂಬದಲ್ಲೇ ಯಾರಲ್ಲೂ ಇಲ್ಲದ ನನ್ನಜ್ಜಿಯ ಏಕೈಕ ಫೋಟೋ ಅದು. ಈಗಾಗಲೇ ನಶಿಸಿ ಹೋಗಿತ್ತೆನ್ನಲಾದ ಆದರೆ ಇನ್ನೂ ಜೀವಂತ ಇದೆ ಅಂತ ಗೊತ್ತಾದ ಹಕ್ಕಿಯೋ, ಪ್ರಾಣಿಯೋ ಕಂಡರೆ ಹೇಗಾಗಬಹುದೋ ಹಾಗೆ. ಅವರದೇ ಫೋಟೋಕ್ಕೆ ಆದ ಬಣ್ಣ ಬದಲಾವಣೆಯ ಅಮೋಘ ಕಾರ್ಯವನ್ನು ಕಂಡಿದ್ದರಿಂದ ಈ ಚಿತ್ರವನ್ನೂ ಹಾಗೇನಾದರೂ ಮಾಡಬಹುದಾ ಅಂತ ಅವರು ಸೊಸೆಯನ್ನು ವಿಚಾರಿಸಿದ್ದು, ಅವಳದಕ್ಕೆ ಹೂಂ ಅಂದಿದ್ದಾಳೆ. ಅವಳೂ ಸಾಫ್ಟ್ ವೇರು ಇಂಜಿನಿಯರ್ ಹಾಗಾಗಿ ಅದೆಲ್ಲ ತಿಳಿಯುತ್ತದೆ ಅಂತ ಅವರೆಣಿಕೆ. ಅಜ್ಜಿಯ ಚಿತ್ರವನ್ನೂ ಹಾಗೇ ಮಾಡಿಕೊಡುವ ಆಶ್ವಾಸನೆಯನ್ನು ಅಮ್ಮನಿಗೆ ನೀಡಲಾಯಿತು. ಝಡ್ ಪ್ಲಸ್ ಎಚ್ಚರಿಕೆಯೊಂದಿಗೆ ಬೆಂಗಳೂರಿಗೆ ಭಾವಚಿತ್ರವನ್ನು ತಂದು ಸ್ಕ್ಯಾನ್ ಮಾಡಲಾಯಿತು.

ಆದರೆ ಅಷ್ಟಾದ ಮೇಲೆ ಅಜ್ಜನನ್ನ ಬಿಟ್ಟರೆ ಹೇಗೆ? ಆದರೆ ಅಜ್ಜನೂ ಅಜ್ಜಿಯೂ ಜೊತೆಗಿರುವ ಫೋಟೋವಾಗಲೀ, ಅಥವಾ ಸ್ವಯಂ ಅವರುಗಳೇ ಆಗಲಿ ಭೂಮಿಯ ಮೇಲೆ ಇಲ್ಲ. ಅವರಿಬ್ಬರನ್ನೂ ಜೊತೆಯಾಗಿಸದೇ ಬಿಡುವ ಹಾಗೂ ಇಲ್ಲ. ಅಜ್ಜನ ಬೇರೆ ಬೇರೆ ಭಂಗಿಯ ಚಿತ್ರಗಳು ದೊರಕಿದವಾದರೂ ಅದರಲ್ಲಿ ಒಂದೂ ಕೂಡ ಅಜ್ಜಿಯ ಚಿತ್ರದ ಜೊತೆಗೆ ಹೋಲಿಕೆಯಾಗುವಂತದ್ದು ಇಲ್ಲ. ಮಾವನಿಗೆ ಮತ್ತೆ ಶರಣು ಎನ್ನಲಾಯಿತು. ಆತ ಅಜ್ಜನ ನಾಲ್ಕಾರು ಫೋಟೋ ಸ್ಕ್ಯಾನ್ ಮಾಡಿ ಮೇಲ್ ಮಾಡಿದ. ಅಲ್ಲಿ ಅಜ್ಜ ಬೀಡಿ ಸೇದುತ್ತ ಯಾರ ಪಕ್ಕಕ್ಕೋ ಕೂತಿದ್ದ ಫೋಟೋ ಮಾತ್ರವೇ ಅಜ್ಜಿಯ ಚಿತ್ರಕ್ಕೆ ಹೊಂದಿಕೊಳ್ಳುತ್ತಿತ್ತು! 

ಶ್ರೀಮಾನ್ ಫೋಟೋಶಾಪು ಸಾಹೇಬರು ಎಂದಿನಂತೆ ನಮ್ಮ ಸಹಾಯಕ್ಕೆ ಬಂದರು. ಅಜ್ಜನ ಬಾಯಿಯ ಬೀಡಿ ತೆಗಿಸಿ ಅಜ್ಜಿಯ ಪಕ್ಕಕ್ಕೆ ಕೂರಿಸಲಾಯಿತು. ನಾನೂ ನನ್ನ ಹೆಂಡತಿಯೂ ಕೂತು ಸರ್ಕಸ್ ಮಾಡಿ ಚಿತ್ರಕ್ಕೆ ಬಣ್ಣ ಬಳಿದೆವು. ಮುಂದಿನ ಬಾರಿ ಮನೆಗೆ ಹೊರಟಾಗ ಅವರಿಬ್ಬರೊ ಜೊತೆಯಾಗಿ ಚೌಕಟ್ಟಿನಲ್ಲಿ ಸೇರಿದ್ದ ಚಿತ್ರ ನಮ್ಮ ಜೊತೆಗೆ ಬಂದಿತ್ತು. ಮನೆಗೆ ಬಂದವರೇ ಅಮ್ಮನ ಮುಂದೆ ಈ ಚಿತ್ರವನ್ನು ಹಿಡಿದೆವು. ಮೆಲ್ಲಗೆ ಕವರು ಬಿಡಿಸಿ ನೋಡಿದ್ದೇ ತಡ ಅಮ್ಮನಿಗೆ ಅಳುವೋ ಅಳು. ಖುಷಿಯಾಗಿ ಅಳುತ್ತಿದ್ದಾಳೋ ಅಥವಾ ನಾವೇನಾದರೊ ತಪ್ಪು ಮಾಡಿದೆವೋ ತಿಳಿಯದ ಸ್ಥಿತಿ.

ಕೊಂಚ ಹೊತ್ತಾದ ಮೇಲೆ ಅವಳು ಬಿಕ್ಕುತ್ತಲೇ ಹೇಳಿದಳು. “ಅಮ್ಮಂಗೆ ರೇಷ್ಮೆ ಸೀರೆ ಅಂದರೆ ಸಿಕ್ಕಾಪಟ್ಟೆ ಪ್ರೀತಿ. ಆದರೆ ಆವಾಗಿನ್ ಬಡತನದಲ್ಲಿ ನಾಲ್ಕಾರು ಮಕ್ಕಳನ್ನ ಸಾಕದೇ ಕಷ್ಟ. ಹೊಟ್ಟೆಗೇ ಸರಿಯಾಗಿಲ್ಲದ ಮೇಲೆ ರೇಷ್ಮೆ ಸೀರೆ ಎಲ್ಲಿಂದ ಬಂತು. ಇಲ್ಲಿ ನೀವು ನೋಡಿದ್ರೆ ಅಮ್ಮನಿಗೆ ಒಳ್ಳೆ ಕೆಂಪು ಜರತಾರಿ ಸೀರೆ ತೊಡಿಸಿದ್ದೀರಿ. ಎಷ್ಟ್ ಚಂದ ಕಾಣ್ತಿದ್ದ ಅಮ್ಮ.. ಅವ್ಳು ಇರಕಿತ್ತು ಇದನ್ನ ನೋಡಕೆ”

ಈಗ ಫಳಫಳ ಮಿನುಗುವ ಜರತಾರಿ ಸೀರೆ ಹೊದ್ದ ಅಜ್ಜಿ ಮತ್ತು ಬಾಯಿಂದ ಬೀಡಿ ಬಿಸಾಕಿರುವ ಅಜ್ಜ ಶಿವಪಾರ್ವತಿಯರ ಚೌಕಟ್ಟಿನ ಪಕ್ಕದಲ್ಲಿ ಬಂದು ಕೂತಿದ್ದಾರೆ. ಪೇಟಿಂಗಿನಲ್ಲಿರುವ ಪಾರ್ವತಿ ನಮ್ಮಜ್ಜಿಯ ಸೀರೆಯ ಹೊಳಪು ನೋಡಿ ಕೊಂಚ ಮುನಿಸಿಕೊಂಡಂತೆ ಕಾಣುತ್ತಿದೆ. ಆಕೆಯ ಮುಖದಲ್ಲಿನ ನಗು ಮಾಸಿದೆಯೋ, ಅಥವಾ ಹೊಸ ಸೀರೆ ಉಟ್ಟ ಅಜ್ಜಿಯ ನಗು ಪಾರ್ವತಿಯನ್ನು ಮೀರಿಸಿದೆಯೋ ತಿಳಿಯುತ್ತಿಲ್ಲ. ಅಜ್ಜ ಮಾತ್ರ ದೇವರ ಪಕ್ಕ ಬಂದಿದಕ್ಕೆ ಬೀಡಿ ಇಲ್ಲದ್ದು ಚೆನ್ನಾಯ್ತು ಎಂದು ನಿರಾಳವಾಗಿ ಕೂತಿದ್ದಾನೆ.

 (ವಿಜಯ ಕರ್ನಾಟಕ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಬರಹ )