ಭಾನುವಾರ, ಡಿಸೆಂಬರ್ 18, 2011

ಸುಕ್ರಣ್ಣನ ಜಕ್ಕಣಿ!

- ಶ್ರೀಧರ.ಡಿ.ಎಸ್


"ಶಿವಮೊಗ್ಗ ಜಿಲ್ಲೆಯ ಹೊಸ್ನಗ್ರು ತಾಲೂಕಿನ ನಿಟ್ಟೂರ ಪೋಶ್ಟಿಗೆ ಸೇರಿದ ಹಬ್ಬಿಗಿ ಗ್ರಾಮದ ದರೀಮನಿ ಅನತ ಭಟರಲಿ ಕೆಲಸು ಮಾಡುವ ಗುರುವ ಸೇರೂಗಾರ್ರು ಕಂಡು ಸುಕ್ರ ಸೇರೂಗಾರ್ರಿಗೆ ಕೊಡತಕ್ಕದ್ದು!" ಈ ವಿಳಾಸವನ್ನು ಹೊತ್ತ ಅಂತರ್ದೇಶಿಯನ್ನು ಅಂಚೆಯ ಅಣ್ಣ ನಾನು ಕಲಿಯುತ್ತಿದ್ದ ಶಾಲೆಗೆ ತಂದು ನನ್ನ ಕೈಗೆ ಕೊಟ್ಟುಬಿಡುತ್ತಿದ್ದ. ನನ್ನ ಊರಾದ ಮಲೆನಾಡಿನ ದರೇಮನೆಗೆ ಒಂದು ಪತ್ರಕ್ಕಾಗಿ ಇನ್ನೂ ಮೂರು ಕಿ.ಮೀ. ನಡೆಯುವುದನ್ನು ತಪ್ಪಿಸಲು ಈ ಉಪಾಯ. ಈ ವಿಳಾಸವನ್ನು ಕೆಲವು ಬಾರಿ  ’ಸ್ಟಾಂಪ್’ ಮೇಲೂ ಬರೆಯುತ್ತಿದ್ದುದರಿಂದ ಬೀಳುತ್ತಿದ್ದ ’ಡ್ಯೂ’ವನ್ನೂ ಅವನೇ ತುಂಬಿಬಿಡುತ್ತಿದ್ದ. ಈ ವಿಳಾಸದ ಸುಕ್ರ ಸೇರೂಗಾರ್ರು ಯಾನೆ ಸುಕ್ರಣ್ಣನ ಕತೆಯೇ ನಾನೀಗ ಹೇಳ ಹೊರಟಿದ್ದು.

ಸುಕ್ರಣ್ಣ ನಮ್ಮೂರಿಗೆ ವರ್ಷಂಪ್ರತಿ ಒಂದು ತಂಡದೊಂದಿಗೆ ಬಂದು ತೋಟದ ಕೆಲಸ ಮಾಡಿ ಮಳೆಗಾಲಕ್ಕೆ ಕುಂದಾಪುರದ ಕಡೆಯ ತನ್ನೂರಿಗೆ ವಾಪಾಸುಗುತ್ತಿದ್ದ ಸೇರೂಗಾರ ಅಥವಾ ಮೇಸ್ತ್ರಿ. ಹೊಸ ಪರಿಭಾಷೆಯಲ್ಲಿ ಕಂತ್ರಾಟುದಾರ! ಕುಳ್ಳಗಿನ ಸಣಕಲು ಶರೀರದ ಈತ ವಾಚಾಳಿ. ಅಕ್ಷರಾಭ್ಯಾಸ ಅಷ್ಟಕಷ್ಟೆ. ನಾಲಗೆಯ ಬಲದಿಂದ ಅದು ಹೇಗೋ ಎಂಟು-ಹತ್ತು ಜನರನ್ನು ಕರೆತರುತ್ತಿದ್ದ. ಮೊದಮೊದಲು ಸರಿಯಾಗಿಯೇ ಇದು ಸಾಗಿತ್ತು. ಮತ್ತೆ ಮತ್ತೆ ಈ ವರ್ಷ ಬಂದವರು ಮರುವರ್ಷ ಬರುತ್ತಿರಲಿಲ್ಲ. ಕಾರಣ ಸಂಬಳ ಸರಿಯಾಗಿ ಕೊಡುತ್ತಿರಲಿಲ್ಲ. ಈ ವರ್ಷದ ಕೆಲಸವನ್ನು ಮುಂದಿನ ವರ್ಷ ಮುಗಿಸಿಕೊಡುತ್ತಿದ್ದ. ಆದರೆ ಮುಂದಿನ ವರ್ಷದ್ದನ್ನು ಈ ವರ್ಷವೇ ಮುಂಗಡ ಪಡೆಯುತ್ತಿದ್ದ. ಕಾರಣ ಆತನಿಗೆ ಸುತ್ತಿಕೊಂಡ ಕುಡಿತದ ಚಟ. ಈ ಕುಡಿತದ ದಾಸನಾಗಿ ಸುಕ್ರು ಸೇರೂಗಾರ್ರು... ಬರೀ ’ಸುಕ್ರ’ನಾದ ಕತೆಗೂ ಒಂದು ಹಿನ್ನೆಲೆ ಇದೆ.

ಮಲೆನಾಡಿಗೆ ತೋಟದ ಕೆಲಸಕ್ಕೆ ತಂಡದಲ್ಲಿ ಬರುವ ಕೆಲಸಗಾರರು ಹೆಚ್ಚು ಪಾಲು ಗಂಡಾಳುಗಳೇ. ಹೆಣ್ಣಾಳುಗಳೇ ಮಾಡಬೇಕಾದ ಕಡಿಮೆ ಸಂಬಳದ ಕೆಲಸವೂ  ಇರುವುದರಿಂದ ಈ ಗಂಡಾಳುಗಳ ಹೆಂಡತಿಯರು ಅಕ್ಕ-ತಂಗಿಯರು ಬರುವ ಕ್ರಮ ಇತ್ತು. ಆಗ ಸುಕ್ರಣ್ಣನ ಪ್ರಾಯದ ಕಾಲ. ಮದುವೆಯಾಗಿದ್ದರೂ ಸಂಸಾರ ಊರಲ್ಲೇ ಬಿಟ್ಟಿದ್ದ. ಸೇರೂಗಾರಿಕೆಯ ಗತ್ತು - ಶೋಕಿ ಎಲ್ಲಾ ಇತ್ತು. ಕೈಗೆ ಉಂಗುರ, ಕಾಲಿಗೆ ಬೂಟು, ಕಿಸೆಯಲ್ಲೊಂದು ಪೆನ್ನು- ಪುಸ್ತಕ (ಅದರಲ್ಲಿ ಬರೆದದ್ದು ಕಾಣೆ!) ಇವುಗಳಿಂದ ಸದಾ ಅಲಂಕೃತನಾಗಿರುತ್ತಿದ್ದ! ಅದು ಹೇಗೋ ಆ ವರ್ಷ ತನ್ನ ನಾಲಿಗೆಯ ಚಮತ್ಕಾರದಿಂದ ’ರುಕ್ಕು’ ಎಂಬ ನೋಡಲು ತಕ್ಕ ಮಟ್ಟಿಗೆ ಚೆನ್ನಾಗಿರುವ ಹೆಂಗುಸೊಬ್ಬಳನ್ನು ಕರೆತಂದಿದ್ದ. ಸಂಸಾರ ಊರಲ್ಲೇ ಬಿಡಲಿಕ್ಕೆ ಕಾರಣವೇ ಈ ರುಕ್ಕು ಯಾನೆ ರುಕ್ಮಿಣಿ. ಆಕೆ ಕೆಲಸಗಾರ್ತಿಯಾಗಿ ಬಂದರೂ ಯಜಮಾನಿಯಂತೆಯೇ ಇರುತ್ತಿದ್ದಳು. ಸ್ವಲ್ಪ ದಿನ ಸುಕ್ರಣ್ಣನೊಂದಿಗೆ ಚೆನ್ನಾಗಿಯೇ ಇದ್ದಳು. ಈ ವರ್ಷದ ತಂಡದಲ್ಲಿ ’ಗಣಪ’ ಎಂಬ ದೃಢಕಾಯದ ಯುವಕ ಕೆಲಸಗಾರನಾಗಿದ್ದ. ಈತ ಸುಕ್ರನಿಗಿಂತಲೂ ಹೆಚ್ಚು ವಾಚಾಳಿ. ಆದ್ದರಿಂದಲೇ ಆತನಿಗೆ ’ಪಟಾಕಿ ಗಣಪ’ ಎಂಬ ಹೆಸರೂ ಇತ್ತು. ಈತನ ಪಟಾಕಿ ರುಕ್ಕುವಿಗೆ ಅಪ್ಯಾಯಮಾನವಾಗತೊಡಗಿತು. ಗಣಪನ ಪಟಾಕಿಯೂ ರುಕ್ಕುವನ್ನೇ ಸುತ್ತತೊಡಗಿತು. ಗಣಪನ ಕೆಲಸ ಎಲ್ಲೋ ಅಲ್ಲೇ ಈಕೆಯೂ ಕೆಲಸಕ್ಕೆ ಹೋಗತೊಡಗಿದಳು. ಒಂದು ದಿನ ಬೆಳಿಗ್ಗೆ ಎದ್ದು ನೋಡಿದರೆ ಗಣಪ ರುಕ್ಕು ಇಬ್ಬರೂ ನಾಪತ್ತೆ! ಆಗ ನೋಡಬೇಕಿತ್ತು. ಸುಕ್ರಣ್ಣನ ಅವತಾರ! ಕೈಯ ಉಂಗುರ, ಪೆಟ್ಟಿಗೆಯ ಹಣ ಎಲ್ಲಾ ಹೋಯಿತು ಎಂದು ಅಬ್ಬರಿಸುತ್ತಿದ್ದ. ಗಣಪ-ರುಕ್ಕು ಇನ್ನೊಂದು ಊರಿಗೆ ಹೋಗಿ ಅಲ್ಲಿ ಇನ್ನೊಂದು ಬಿಡಾರ ಹೂಡಿ ಕೆಲಸಗಾರರಾಗಿ ಮುಂದುವರಿದಿದ್ದು ಸುಕ್ರಣ್ಣನಿಗೆ ಇನ್ನೂ ಉರಿದುಹೋಯಿತು. ಅಲ್ಲಿಗೂ ಹೋಗಿ ಗಲಾಟೆ ಮಾಡಿದರೆ... ರುಕ್ಕು ನೀನೇನು ಕಟ್ಟಿಕೊಂಡ ಗಂಡನಾ? ಎಂದು ತಿವಿದು ಬಿಟ್ಟಳಂತೆ. ಬರುವಾಗಲೇ ಗಡಂಗಿಗೆ ಹೋಗಿ ಸ್ವಲ್ಪ ಹಾಕಿ ಬಂದ. ಊರಿನಿಂದ ಸಂಸಾರ ಕರೆಸಿಕೊಂಡು ವಿರಹತಾಪ ಮರೆಯಲು ಪ್ರಯತ್ನಿಸಿದ. ವಿರಹ ಮರೆಯಬೇಕೆಂದು ಮತ್ತೆ ಮತ್ತೆ ಕುಡಿಯತೊಡಗಿದ. ಕುಡಿದಾಗ ಗಣಪನ ಮೇಲೆ ಎಲ್ಲಿಲ್ಲದ ದ್ವೇಷ ಉರಿ ಉರಿ ಹಾಯತೊಡಗಿತು.

 ಕುಡಿತವನ್ನು ಹಾಗೆ ಕರೆಯುವುದಕ್ಕಿಂತ ’ಸ್ನಾನ’ ಎನ್ನುವುದೇ ಸೂಕ್ತ. ಕುಡಿದು ತೊನೆದಾಡುತ್ತಾ, ದೋಣಿಯನ್ನು ದಾಟಿ ಅದು ಹೇಗೆ ಬಿಡಾರ ಸೇರುತ್ತಾನೋ ದೇವರಿಗೇ ಗೊತ್ತು. ರುಕ್ಕುವಿನ ಮೇಲಿನ ಮೋಹ ಕುಡಿದಾಗ ಹೆಂಡತಿಯ ಮೇಲಿನ ದ್ವೇಷವೂ ಆಗಿ ಬದಲಾಗತೊಡಗಿತು. ಈತ ಆಕೆಯನ್ನು ಬಡಿಯುವುದು, ಅದನ್ನು ಅನುಭವಿಸುವುದು ಆಕೆಯ ಕರ್ಮವಾಗತೊಡಗಿತು. ಉಪದ್ರ ತೀರಾ ಹೆಚ್ಚಾದಾಗ ಆಕೆ ನಾನು ಊರಿಗೆ ಹೋತೆ’ ಎಂದು ಹೊರಟು ನಿಲ್ಲುತ್ತಿದ್ದಳು. ಅಮಲು ಇಳಿದಾಗ ಈ ಹುಂಬ ಹೆಂಡತಿಯ ಕಾಲು ಹಿಡಿದು ಗೋಳೋ ಎಂದು ಅತ್ತು ಬಿಡುತ್ತಿದ್ದ! ಮತ್ತೆ ಅದೇ ಭಯೋತ್ಪಾದಕ ಕೃತ್ಯ. ಗಣಪನ ಮೇಲಿನ ಕ್ರೋಧ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿತು. "ಆ ನಾಯಿ ನನ್ನ ಅನ್ನ ತಿಂದು ನಂಗೇ ದ್ರೋಹ ಮಾಡುದಾ?" ಎಂದು ಹಲುಬುತ್ತಿದ್ದ. ಗಡಂಗಿನಲ್ಲಿ ಸರೀಕರೊಂದಿಗೆ ಸೇರಿದಾಗ ’ಅವ ಸಿಕ್ಲಿ ಕೊಂದ್ ಬಿಡ್ತೆ’ ಎಂದು ಅಬ್ಬರಿಸುತ್ತಿದ್ದ. ಇವನಂತೆಯೇ ಇತರರೂ ತಮ್ಮ ತಮ್ಮ ಪೂರ್ವ ದ್ವೇಷದ ಕತೆಗಳನ್ನು ಸಾಭಿನಯವಾಗಿ ನಿರೂಪಿಸುತ್ತಿದ್ದರು. "ಆ ಮೇಷ್ಟ್ರು... ಪಾಟ....ಪಾಟ..... ಮಾಡ್ತ ನಮ್ಮನಿ ಗಂಡಿಗೆ ದನ ಬಡ್ಡಾಂಗ್ ಬಡಿದ..." ಇದು ಕುಪ್ಪಣ್ಣನ ಕೊರಿಯಗ್ರಫಿ!ಎಂತ ಹೇಳ್ತೆ ಮಾರಾಯ... ನಮ್ಮ ಒಡೇರ್ ಮಗ್ಳು... ಪ್ಯಾಟೀಲಿ ಓದ್ತಿತ್ತಲೆ... ಅಲ್ಲೇ ಯಾರ್ನೋ ಮದೀ ಮಾಡ್ಕಂಡಿತ್ತಂಬ್ರು... ಇದು ತಿಪ್ಪಣ್ಣ ತಂದ ತಾಜಾ ಸುದ್ದಿ. ಹೀಗೆ ತಾಳ ತಂತಿ ಇಲ್ಲದ ಅನೇಕ ಅಮೂಲ್ಯ ವಿಚಾರಗಳ ಮೇಲೆ ತತ್ವ ಜಿಜ್ಞಾಸೆ ನಡೆಯುತ್ತಿತ್ತು!

   ಈ ಕೋಲಾಹಲದ ನಡುವೆ ಚಿಕ್ಕಯ್ಯ ಸೇರೂಗಾರ್ರು. ಸುಕ್ರ ಸೇರೂಗಾರ್ರಿಗೆ ಅಮೂಲ್ಯವಾದ ವಿಚಾರವನ್ನು ಅರುಹುವಂಥವರಾದರು. ಇಬ್ಬರೂ ಯಕ್ಷಗಾನ ಬಯಲಾಟವನ್ನು ತಪ್ಪದೇ ನೋಡುವವರು. ಚಿಕ್ಕಯ್ಯ ಸಣ್ಣ ಪುಟ್ಟ ಅರ್ಥವನ್ನು ಹೇಳಿದವ. ಕುಡಿದಾಗ ಯಾರೂ ಇಲ್ಲದಿದ್ದರೂ ಒಡ್ಡೋಲಗ ಕೊಡುವವ...!"ಎಲವೋ ಸುಕ್ರ ಸೇರೂಗಾರನೆ..... ನಿನ್ನ ಆಜನ್ಮ ಶತ್ರುವಾದ ಗಣಪನೆಂಬುವವನು... ನಿನ್ನ ರುಕ್ಮಿಣಿಯನ್ನು ಅಪಹರಿಸಿದ ಶಿಶುಪಾಲನು. ನಿನ್ನೆ ಆ ಮೈಲಿಕಲ್ಲಿಗೆ ಒರಗಿ ಕುಳಿತು ಬೀಡಿ ಎಳೆಯುವಂಥನಾದನು. ’ನೀನು ಹೀಗೆ ಮಾಡಿದ್ದು ಸರಿಯಾ? ಎಂದರೆ ನಿನ್ನ ಸುಕ್ರ-ನರಪೇತಲ ಅವನು ಏನು ಕಡಿಯುತ್ತಾನೆ...! ಎಂದು ಸಸಾರವಾಗಿ ಮಾತಾಡಿದ ಮಾರಾಯ" ಎಂದು ಊದಿದ. ಸುಕ್ರನಿಗೆ ಏರದೆ ಇದ್ದೀತೆ? "ಎಲವೆಲವೋ ಗಣಪ.. ನನ್ನ ರುಕ್ಕುವಿನ ಮಂಡೆ ಹಾಳು ಮಾಡಿದ ಠೊಣಪ! ನಾನು ಸತ್ತರೂ ನಿನ್ನನ್ನು ಬಿಡ್ತಿಲ್ಲೆ" ಎಂದು ಗಹಿಗಹಿಸುತ್ತಾ ಗಡಂಗಿನಿಂದ ರಭಸವಾಗಿ ಹೊರಟ! ಆ ರಭಸಕ್ಕೆ ಅಲ್ಲೇ ಬೀಳಬೇಕಿತ್ತು ಸಾವರಿಸಿಕೊಂಡು ಮುಂದೆ ನಡೆದ. ತೂರಾಡುತ್ತಾ ಬಿಡಾರಕ್ಕೆ ಹೊರಟವನಿಗೆ ಮೈಲಿಕಲ್ಲು ನೆನಪಾಯಿತು. ’ನಿನ್ನೆ ಅದೇ ಮೈಲಿಕಲ್ಲಿನ ಹತ್ತಿರವಲ್ಲವಾ ಬೀಡಿ ಸೇದುತ್ತಿದ್ದುದು. ಅವ ಬೀಡಿ ಸೇದಿದರೆ ನಾನು ಸಿಗರೇಟ್ ಸೇದ್ತೆ" ಎಂದು ಜಿದ್ದಿಗೆ ಬಿದ್ದು - ಕುಡಿದುಳಿದ ಹಣದಲ್ಲಿ ಸಿಗರೇಟುಕೊಂಡು ಬೆಂಕಿ ಹಚ್ಚಿ ಎಡಗೈಯ್ಯ ಎರಡು ಬೆರಳುಗಳ ನಡುವೆ ತೂರಿಸಿಹಿಡಿದು ರಾಜಠೀವಿಯಿಂದ ಮುನ್ನಡೆದ. ’ನಿನ್ನೆ ಅಲ್ಲಿದ್ದ ಗಣಪ ಇಂದೂ ಇರಬಹುದು. ಇವತ್ತು ಶಿಶುಪಾಲ ವಧೆ ಆಗಲೇಬೇಕು. ನನ್ನ ರುಕ್ಮಿಣಿ ಸಿಗಲೇಬೇಕು’ ಎಂಬ ಉಮೇದಿ ತಡೆದುಕೊಳ್ಳಲು ಅಸಾಧ್ಯವಾದಷ್ಟೂ ಏರಿ ’ಏ ಶಿಶುಪಾಲ ಎತ್ ಹೋತೆ ಕಾಂತೆ’ ಎನ್ನುತ್ತಾ ದಾರಿಯ ಬದಿಯಲ್ಲಿ ಬಿದ್ದಿದ್ದ ಕೊತ್ತಳಿಗೆಯ ತುಂಡನ್ನು ಕೈಗೆತ್ತಿಕೊಂಡ!

 "ಕರದ ಗದೆಯಂ ಪೆಗಲೊಳಾಂತಾ ಸುಯೋಧನಂ...." ಎಂದು ಹಾಡಿಕೊಳ್ಳುತ್ತಾ, ಹೆಣದ ಪರ್ವತಗಳನ್ನು ಏರಿಳಿಯುವುದನ್ನು ಅಭಿನಯಿಸುತ್ತಾ, ಹೆಗಲ ಮೇಲೆ ಕೊತ್ತಳಿಗೆಯ ಗದೆಯನ್ನು ಏರಿಸಿ ಮೈಲಿಕಲ್ಲೆಂಬ ವೈಶಂಪಾಯನ ಸರೋವರದತ್ತ ಮುನ್ನಡೆದ. ಬೆಳದಿಂಗಳ ರಾತ್ರಿಯಲ್ಲಿ ಬಿಳಿ ವಸ್ತ್ರವನ್ನುಟ್ಟು ಗಣಪ ಕಂಗೊಳಿಸುತ್ತಿದ್ದಾನೆ! "ನನ್ನ ರುಕ್ಕುವನ್ನು ಅಪಹರಿಸಿ ಈಗ ಶೃಂಗಾರ ರಾವಣನಾಗಿದ್ದಾನೆ. ಕಳ್ಳ! ಇವತ್ತೊಂದು ಸಂಪೂರ್ಣ ಕುರುಕ್ಷೇತ್ರ ನಡೆದು ಬಿಡಲಿ ಎಂದು ಕಾಳಗಕ್ಕೆ ಸಿದ್ಧನಾದವನಂತೆ ಎದೆಯನ್ನು ಮುಂದುಮಾಡಿ, ಕಾಲನ್ನು ಅಗಲಿಸಿ ಅಸಡಾ ಬಸಡಾ ನಡೆಯುತ್ತಾ "ಏ ಗಣಪಾsss" ಎಂದು ಅಬ್ಬರಿಸಿದ! ಮೈಲಿಕಲ್ಲಿನ ಬಳಿಯಲ್ಲಿದ್ದು ಏನೋ ಕೆಲಸದಲ್ಲಿ ನಿರತವಾಗಿದ್ದ ಕಂತ್ರಿನಾಯಿ ಓಡಿಹೋಯಿತು. ಗಣಪನೂ ಯುದ್ಧಕ್ಕೆ ಸಿದ್ಧನಾದನೆಂದು ಬಗೆದು ತಾನೇ ಮೊದಲು ಧಾಳಿ ಮಾಡಬೇಕೆಂದು ಕ್ಷಣಾರ್ಧದಲ್ಲಿ ತೀರ್ಮಾನಿಸಿ ಧಾಪ್ ಧಾಪ್ ಎಂದು ಬಾರಿಸತೊಡಗಿದ. ಗಣಪನ ಮೇಲಿನ ದ್ವೇಷ, ರುಕ್ಕುವಿನ ಮೇಲಿನ ಮೋಹ, ಭಗ್ನ ಪ್ರಣಯಿಯ ಸಂತಾಪ ಎಲ್ಲಾ ಸೇರಿ ಭೀಕರ ಉಗ್ರವಾದಿಯಾಗಿ ಬಿಟ್ಟ. ಕೊತ್ತಳಿಗೆ ಪುಡಿ ಪುಡಿಯಾದರೂ ಕೋಪ ಇಳಿಯಲಿಲ್ಲ. ಇಷ್ಟು ಹೊಡೆದರೂ ಗಣಪನ ಪ್ರತಿರೋಧವಿಲ್ಲ! ಸತ್ತು ಬೀಳುವುದೂ ಇಲ್ಲ. ಇವನ್ಯಾವನೋ ಮಾಯಾವಿ ರಾಕ್ಷಸನಿರಬಹುದೋ ಎಂಬ ಸಂದೇಹ ಬಂದುಹೋಯಿತು. ಕೈಯಲ್ಲುಳಿದ ಕೊತ್ತಳಿಗೆಯ ಕೊನೆಯ ತುಂಡನ್ನೆತ್ತಿ ಸಂಪೂರ್ಣ ಶಕ್ತಿ ಹಾಕಿ! ಸಾಯಿ....ನಾಯಿ ಎಂದು ಬಡಿದ ರಭಸಕ್ಕೆ ಆಯತಪ್ಪಿ ಪಕ್ಕದ ಚರಂಡಿಗೆ ಬಿದ್ದ. ಬಿದ್ದಲ್ಲಿಯೇ ಕೈಕಾಲು ಬಡಿಯುತ್ತಾ "ಶಿವ ಶಿವಾಸುರಸಮರದೊಳು ಕೈಸೋತೆನಲ್ಲೋ " ಎಂದು ಪದವನ್ನೂ ಒರಲುತ್ತಿದ್ದ. ಇವನ ಹಾಗೆ ರಾತ್ರಿ ಪಾಳಿ ಮುಗಿಸಿ ಬಂದವರು ಎಬ್ಬಿಸಿ ಬಿಡಾರ ತಲುಪಿಸಿದರು. ಮೈಲಿಕಲ್ಲಿನ ಗಣಪ ನಗುತ್ತಿದ್ದ!

ಮತ್ತೊಂದು ದಿನ ಸುಕ್ರಣ್ಣನ ದನಿ ನಮ್ಮ ಅನಂತಣ್ಣಯ್ಯ ಇಪ್ಪತ್ತು ಕೆ.ಜಿ. ಅಕ್ಕಿಯನ್ನು ಮಿಲ್ಲಿನಲ್ಲಿ ಹಿಟ್ಟು ಮಾಡಿಸಿ ತಾ ಎಂದು ಸ್ವಲ್ಪ ಜಾಸ್ತಿಯಾಗಿಯೇ ದುಡ್ಡು ಕೊಟ್ಟು ಪೇಟೆಗೆ ಕಳಿಸಿದ್ದರು. ಪೇಟೆಗೇನೋ ಸರಿಯಾಗಿಯೇ ಹೋದ (ಬೆಳಿಗ್ಗೆ) ಹಿಟ್ಟನ್ನೂ ಮಾಡಿಸಿದ. ದನಿಗಳು ದುಡ್ಡು ಸ್ವಲ್ಪ ಹೆಚ್ಚು ಕೊಟ್ಟಿದ್ದರಲ್ಲ, ಸ್ವಲ್ಪ ಕುಡಿದುಬರುವ ಎಂದು ಗಡಂಗಿಗೂ  ಹೋದ. ಬರುವಾಗ ಇಡೀ ಕಿಸೆ ಖಾಲಿ! ಲೋಡಾದ ಸುಕ್ರ ’ಅನಂತ್ ಭಟ್ರು ಕೊಡ್ತ್ರ್’ ಎಂದು ಹಿಟ್ಟಿನ ಚೀಲದೊಂದಿಗೆ ವಾಪಾಸು ಹೊರಟ. ಮರುದಿನ ದನಿಗಳ ಮನೆಯಲ್ಲಿ ಏನೋ ವಿಶೇಷ. ಮಿಲ್ಲಿನಿಂದ ಹಿಟ್ಟು ಬರುತ್ತದೆ ಎಂದು ಯಜಮಾನಮ್ಮ ಕಾಯುತ್ತಿದ್ದಾರೆ. ಸಂಜೆಯಾದರೂ ಸುಕ್ರನ ಪತ್ತೆ ಇಲ್ಲ. ಅನುಮಾನ ಬಂದ ಅಮ್ಮ ಸುಕ್ರನ ಬಿಡಾರಕ್ಕೆ ಹೋಗಿ ಅವನ ಹೆಂಡತಿಯಲ್ಲಿ ವಿಚಾರಿಸಿದರೆ, ಆಕೆಗೆ ಏನೂ ತಿಳಿಯದು. ಅವರು ಆಗಲೇ ಬಂದು ಮಲಗಿದ್ದಾರೆ ಎಂದಳು. ಮತ್ತೆ ಹಿಟ್ಟೆಲ್ಲಿ? ಎಂದರೆ ಅದೂ ಗೊತ್ತಿಲ್ಲ. ಕೂಡಲೇ ಅವನನ್ನು ಎಬ್ಬಿಸಿ ಕಳಿಸು ಎಂದು ಆಜ್ಞೆ ಮಾಡಿ ಮನೆಗೆ ಬಂದರು. ಈಗ  ಕುಡಿದದ್ದು ತಕ್ಕಮಟ್ಟಿಗೆ ಇಳಿದಿತ್ತು. ಹಿಟ್ಟು ತಂದಿಲ್ಲ. ಅಮ್ಮ ಯಜಮಾನರಿಗಿಂತ ಬಾರೀ ಜೋರು. ಅವರ ಬಾಯಿಯ ಮುಂದೆ ಏನೂ ಮಾಡಲಾಗುದು. ಅಕ್ಕಿ ಹಿಟ್ಟು ಇಲ್ಲ.. ತಪ್ಪಿಸಿಕೊಳ್ಳುವಂತಿಲ್ಲ. ಕೂಡಲೇ ಹೊಸ ಉಪಾಯ ಹೊಳೆಯಿತು. ಮಲಗಿದವನು ಜಿಗಿದು ಕುಳಿತು "ಹೂಂ....ಹೂಂ..." ಎಂದು ಹೂಂಕರಿಸತೊಡಗಿದ. "ಹಡಬೆ, ಏನು ಬೊಗಳೊದು... ನಿನ್ನ ಕೊಂದ್ ಬಿಡ್ತೆ... ಹೂಂ..." ಎಂದು ಅಬ್ಬರಿಸಿ ಪಕ್ಕದಲ್ಲೇ ಇದ್ದ. ಅಡಿಕೆ ದಬ್ಬೆ ಕೈಗೆತ್ತಿಕೊಂಡ.

ಈ ರಾಕ್ಷಸ ಕೊಂದೇ ಬಿಡುತ್ತಾನೆಂದು ಭಾವಿಸಿದ ಆಕೆ ಒಂದೇ ಓಟಕ್ಕೆ ದನಿಗಳ ಮನೆಯ ಜಗಲಿಗೇ ಬಂದಳು! ಏನು ಎಂತ ಕೇಳುವುದರೊಳಗೆ ಅಡಿಕೆ ಚೀಲದ ಹಿಂದೆ ಅಡಗಿದಳು. ಈ ರಾಕ್ಷಸ ಬಂದವನೇ ಅಡಗುತ್ತೀಯಾ ನಿನ್ನನ್ನು ಕೊಂದುಬಿಡುತ್ತೇನೆ ಎನ್ನುತ್ತಾ ಅಡಿಕೆ ಚೀಲಕ್ಕೆ ಬಡಿಯತೊಡಗಿದ. ಅಡಿಕೆ ಚೀಲ ಪುಡಿಯಾಗಿ ಅಡಿಕೆಯೆಲ್ಲಾ ಚೆಲ್ಲಾಪಿಲ್ಲಿ! ಅದರ ಮೇಲೆ ಇವನ ಭರತನಾಟ್ಯ ನಿಲ್ಲಲಾರದೆ ಕೆಳಕ್ಕೆ ಬಿದ್ದು ಮತ್ತೆ ಎದ್ದ.  ಮೊದಲೇ ಹಿಟ್ಟು ತಾರದ್ದಕ್ಕೆ ಕೆಂಡಾಮಂಡಲವಾಗಿದ್ದ ಯಜಮಾನಿ ಕೋಪದಿಂದ ಕುದಿದು ಹೊರಬಂದರೆ ಯಜಮಾನರು ಕಂಗಾಲಾಗಿದ್ದಾರೆ. ಸುಕ್ರನ ಭರತನಾಟ್ಯ, ಬ್ರೇಕ್ ಡ್ಯಾನ್ಸ್ ಯಕ್ಷಗಾನ ಎಲ್ಲ ಪ್ರಾರಂಭವಾಗಿದೆ. ’ಏ ಸುಕ್ರಾ’ ಎಂದು ಅಬ್ಬರಿಸಿದರು. ’ಹೂಂ... ನಾನು ಸುಕ್ರ ಅಲ್ಲ... ಅವನಣ್ಣ ಶಂಕ್ರಾss... ಎಂದು ಮತ್ತೆ ಅಬ್ಬರಿಸತೊಡಗಿದ. ಶಂಕ್ರನಾಗಲಿ ಅವರಪ್ಪನಾಗಲಿ ನಮ್ಮ ಜಗಲಿಯಲ್ಲೇನು ಕೆಲಸ ? ಎಂದವರೇ ಸೀದಾಹೋಗಿ ಕೈಯ್ಯ ದಬ್ಬೆಯನ್ನು ಕಿತ್ತುಕೊಂಡು, ದರದರ ಅಂಗಳಕ್ಕೆ ಎಳೆದು ತಂದು ಅಲ್ಲಿಯೇ ಇದ್ದ ಒಂದು ಕೊಡ ನೀರನ್ನು ತಲೆಗೆ ಸುರಿದುಬಿಟ್ಟರು! ಅಡಿಕೆ ದಬ್ಬೆಯನ್ನು ಕೈಗೆತ್ತಿಕೊಂಡು ಯಾರು? ಶಂಕ್ರನಾ? ಇನ್ನೊಂದು ಸಾರಿ ಬೊಗಳು’ ಎಂದು ಅಬ್ಬರಿಸಿದ್ದೇ ’ಶಂಕ್ರ’ ಮತ್ತೆ ಶುಕ್ರನೇ ಆಗಿಬಿಟ್ಟ! ’ಅಯ್ಯಯ್ಯೋss ಅಮ್ಮ ತಪ್ಪಾಯಿತಮ್ಮ.... ಅದು... ನನ್ನ ಅಣ್ಣನ್ ಜಕ್ಣಿ ಅದೇ ನಂಗ್ ವದ್ಬಿಡ್ತು, ಹಿಟ್ಟೀನ್ ಚೀಲ ತಂದೀದೆ. ಎಲ್ಲೋಹ್ತು ಗೊತ್ತಿಲ್ಲೆ’ ಎಂದು ಹಲುಬತೊಡಗಿದ. ಎಂದೋ ಸತ್ತು ಹೋದ ಇವನಣ್ಣನ ಪ್ರೇತಕ್ಕೆ ನಮ್ಮ ಅಕ್ಕಿ ಚೀಲ ಯಾಕೆ ಬೇಕು ಎಂಬುದು ಆ ಸಾವಿತ್ರಮ್ಮನಿಗೆ ತಿಳಿಯದಾಯಿತು! ಇವನದ್ದೇನು ನಾಟಕವೋ? ಸತ್ಯವೋ? ಎಂದು ಭೂತಪ್ರೇತಗಳ ಮೇಲೆ ನಂಬುಗೆ ಇದ್ದ ಅವರು ಅಯೋಮಯರಾದರು! ಹಾಗಿದ್ದರೆ ಆ ಜಕ್ಣಿ ಈಗೆಲ್ಲಿ ಹೋಯಿತು ಸುಕ್ರಣ್ಣನ ದುರಾದೃಷ್ಟವೇ ಬಂದಂತೆ ಅನಂತಭಟ್ಟರ ಭಾವ ಹರಿಭಟ್ಟರು ಅಂದೇ ಬಂದರು. ಸುಕ್ರಣ್ಣನ ಅವಾಂತರವನ್ನು ದಾರಿಯಲ್ಲೇ ಕೇಳಿ ಬಂದಿದ್ದ ಅವರು ಅಣ್ಣನ ಜಕ್ಣಿಯ ಕತೆಯನ್ನು ನಂಬಿಸ ಹೊರಟ ಸುಕ್ರಣ್ಣನ ಉಪಾಯಕ್ಕೆ  ಕಲ್ಲು ಹಾಕಿದರು.

ಬಂದವರೇ ಕಾಲೂ ತೊಳೆಯದೆ ’ಏ ಸುಕ್ರಾ’ ಎಂದು ಕರೆದರು. ಹಿಟ್ಟಿನ ಚೀಲದ ಕತೆ ಏನಾಯಿತು? ಎಂದರು. ಸುಕ್ರ ಅಪರಾಧಿಯ ಭಂಗಿಯಲ್ಲಿ ಮತ್ತೆ ಜಕ್ಣಿ ಕತೆ ಶುರು ಮಾಡಿದ. ’ಮುಚ್ಚು ಬಾಯಿ ಮಳ್ಳ’ ಎಂದು ಅವರು ಜೋರು ಮಾಡಿದಾಗ ಸುಕ್ರ ಮೂಲೆಯಲ್ಲಿ ಕುಳಿತುಬಿಟ್ಟ. ಈ ಸುಕ್ರ ಏನು ಮಾಡಿದ್ದಾನೆ ಗೊತ್ತೇ? ಎಂದು ಉರಿಯುತ್ತಲೇ ಕತೆ ಹೇಳಿದರು.

ಪೇಟೆಯಿಂದ ಬರುವಾಗ ಹೊಳೆಯ ಕಡುವನ್ನು ದಾಟಲಿಕ್ಕಿದೆ. ಹೊಳೆ ಬಾಗಿಲಿಗೆ ಬರುವುದಕ್ಕೆ ಮೊದಲು ಒಂದು ಫರ್ಲಾಂಗು ಇಳಿಜಾರು ರಸ್ತೆ, ಪೇಟೆಯಿಂದ ಒಂದು ಮೈಲು ರಸ್ತೆಯಲ್ಲಿ ಇಪ್ಪತ್ತು ಕೆ.ಜಿ. ಹಿಟ್ಟನ್ನು ತೂರಾಡುತ್ತಲೇ ಹೇಗೋ ಹೊತ್ತು ತಂದ. ಮುಂದೆ ಏನೂ ಮಾಡಲಾರೆ ಅನ್ನುವಾಗಲೇ ಆಯತಪ್ಪಿ ಬಿದ್ದುಬಿಟ್ಟ. ಹೀಗೆ ಬೀಳಲು ತಲೆಯ ಮೇಲಿನ ಹಿಟ್ಟಿನ ಚೀಲವೇ ಕಾರಣವಷ್ಟೇ? ಚೀಲದ ಮೇಲೆ ಎಲ್ಲಿಲ್ಲದ ಕೋಪ ಬಂತು. ಇವನನ್ನು ಕಂಡರಾಗದ ಇವನಣ್ಣ ಶಂಕ್ರ ಸತ್ತು ಈ ಜಕ್ಣಿಯಾಗಿದ್ದಾನೆ! ಅವನು ಈ ಚೀಲವನ್ನು ಹೊಕ್ಕಿರಬೇಕು. ಇಲ್ಲವಾದರೆ ಐವತ್ತು ಕೆ.ಜಿ. ಹೊರುವ ತನಗೆ ಇಪ್ಪತ್ತು ಕೆ.ಜಿ. ಹೊರಲಿಕ್ಕೆ ಆಗದು ಎಂದರೇನು? ಆದ್ದರಿಂದ ಅಣ್ಣನ ಜಕ್ಣಿಯೇ ಇದರೊಳಗೆ ಅವೇಶವಾಗಿದೆ. ’ಅಮಲುದಾರ’ ಸುಕ್ರನಿಗೆ ತಕ್ಷಣ ಹೊಳೆದ ಈ ವಿಚಾರದಿಂದ ಹಿಟ್ಟನ್ನು ಸಾಗಿಸುವುದೆಂತು ಎಂಬುದು ಪ್ರಶ್ನೆಯಾಯಿತು. ಹಿಟ್ಟುಕೊಂಡು ಹೋಗದಿದ್ದರೆ ದನಿಗಳು ಬೈಯ್ಯುತ್ತಾರೆ. ಕೊಂಡುಹೋಗಲು ಅಣ್ಣನ ಜಕ್ಣಿ ಬಿಡಲಾರದು. ಸರಿ ಎಂದು ಉಪಾಯ ಮಾಡಿದ. ಪಕ್ಕದ ಪೊದೆಯಲ್ಲಿದ್ದ ಬಳ್ಳಿ ತಂದು ಹಿಟ್ಟಿನ ಚೀಲದ ಜುಟ್ಟಿಗೆ ಕಟ್ಟಿದ. ನಾಯಿ ಮರಿಯನ್ನು ಎಳೆದ ಹಾಗೆ ಎಳೆಯುತ್ತಾ ’ಬತ್ತ್ಯ’.... ’ಇಲ್ಯ’ ಎಂದು ಬಯ್ಯುತ್ತಾ ಮುಂದೆ ಸಾಗಿದ. ಬಟ್ಟೆಯ ಚೀಲ, ಕಲ್ಲುದಾರಿ ಎಳೆದ ಹಾಗೆ ಬಂತು. ಚೀಲ ಹರಿದು ಹಿಟ್ಟು ಸುರಿಯತೊಡಗಿತು. ಹಿಂದೆ ನೋಡದೆ ಮುಂದೆ ಮುಂದೆ ಸುಕ್ರಣ್ಣನ ಜಕ್ಣಿಯ ಚೀಲ ಹಿಂದೆ! ಹಿಟ್ಟು ಕಡಿಮೆಯಾಗುತ್ತಾ ಬಂದ ಹಾಗೆ ಜಕ್ಣಿಯ ತೂಕ ಕಡಿಮೆಯಾಗುತ್ತಾ ಬಂತು! ಒಂದು ಫರ್ಲಾಂಗ್ ಗುಡ್ಡೆ ರಸ್ತೆಗೂ ರಂಗೋಲಿಯ  ವೈಭವ! ದೋಣಿ ಈಚೆ ದಡಕ್ಕೆ ಬಂದು ವಾಪಾಸಾಗುತ್ತಿದೆ. ಹಿಟ್ಟಿನ ಬಗ್ಗೆ ಯೋಚಿಸಲು ಪುರುಸೋತ್ತಿಲ್ಲ. ’ಹೋಯ್...... ಸೀನಾ... ನಾ ಬತ್ತೆ’ ಎಂದು ಸುಕ್ರ ಬೊಬ್ಬಿಟ್ಟ. ದೋಣಿ ಶೀನ ಕುಡುಕನನ್ನು ಹತ್ತಿಸಿಕೊಳ್ಳಲು ಹಿಂಜರಿದು. ’ಇನ್ನೊಂದು ಸಾರಿ ಬಂದಾಗ ಬಾ ಎಂದು ಹೊರಟೇಬಿಟ್ಟ. ’ಹೋಯ್ ನೀನ್ ಕರ್ಕೊಂಡ್ ಹೋಗ್ದಿದ್ರೆ ಹೊಳೆ ಹಾರಿ ಈಜ್ಕಂಬತ್ತೆ ಕಾಂತ್ಯ’ ಎಂದು ಹೊಳೆಗೆ ಇಳಿಯಲಿಕ್ಕೇ ಸಿದ್ಧನಾಗಿಬಿಟ್ಟ! ಐವತ್ತು-ಅರವತ್ತು ಅಡಿ ಆಳದ, ಅರ್ಧ ಫರ್ಲಾಂಗ್ ಅಗಲದ ಲಿಂಗನಮಕ್ಕಿಹಿನ್ನೀರಿನ ಹೊಳೆ ಅದು. ಈ  ಈಜುಬಾರದ ಕುಡುಕ ಹಾರಿದರೆ ಹೆಣವಾಗುತ್ತಾನೆ! ಶೀನಣ್ಣ ಉಪಾಯ ಕಾಣದೆ, ಈಜುವುದು ಬೇಡ ಮಾರಾಯ ಬಾ ಎಂದು ಹೇಗೋ ದೋಣಿ ಹತ್ತಿಸಿಕೊಂಡು ಈಚೆ ದಡಕ್ಕೆ ತಂದುಬಿಟ್ಟ. ದೋಣಿ ದಾಟಿದ್ದಕ್ಕೆ ದುಡ್ಡು ಕೊಡದೆ ’ಅಣ್ಣ ಸುಯೋಧನ ಲಾಲಿಸು ನಿನ್ನ ಪುಣ್ಯಫಲೋದಯ...’ ಎಂದು ಹಾಡಿಕೊಳ್ಳುತ್ತಾ ಹಿಟ್ಟಿನ ಚೀಲವನ್ನು ಬೀಸಾಡಿ ನಡೆದೇ ಬಿಟ್ಟ. ಇದು ಹರಿಭಟ್ಟರು ಸಂಗ್ರಹಿಸಿದ ಕಥೆ. ಅಮಲೇನೋ ಇಳಿದಿತ್ತು. ಅಮ್ಮನನ್ನು ನಂಬಿಸಲಿಕ್ಕಾಗಿ  ಮತ್ತೆ ಅಣ್ಣನ ಜಕ್ಣಿಯ ಆವೇಶಭರಿಸಿ ಅಡಿಕೆಚೀಲ ಪುಡಿಮಾಡಿದ್ದ.

    ಅಂತೂ ಭಟ್ಟರ ಮನೆಯ ಕಾರ್ಯಕ್ರಮಕ್ಕೆ ಅಕ್ಕಿ ಹಿಟ್ಟು ಇಲ್ಲವಾಯಿತು. ’ನಿನ್ನ ಅಣ್ಣನ ಜಕ್ಣಿ ಸುದ್ದಿ ತೆಗೆದರೆ ನಿನ್ನನ್ನೇ ಜಕ್ಣಿ ಮಾಡುತ್ತೇನೆ’ ಎಂದು ಹರಿಭಟ್ಟರು ಅಬ್ಬರಿಸಿದಾಗ ಹೆದರಿ ಕಂಗಾಲಾದ ಸುಕ್ರ ಬಿಡಾರಕ್ಕೆ ಓಡಿದ. ಯಜಮಾನರಿಗೆ ಹಿಡಿದದ್ದು ಜಕ್ಣಿಯಲ್ಲ ಎಂಬುದು ಗಟ್ಟಿಯಾದ ಮೇಲೆ ಸುಕ್ರನ ಹೆಂಡತಿಯೂ ಧೈರ್ಯವಾಗಿ ಬಿಡಾರ ಸೇರಿದಳು. ಆ ಊರಿಗೆ ಸುಕ್ರನ ಕೆಲಸದ ವರ್ಷ ಅದೇ ಕೊನೆ. ಮತ್ತೆ ಆತನಾಗಲೀ, ಅವನ ಜಕ್ಣಿಯದ್ದಾಗಲೀ ಸುದ್ದಿ ಕೇಳಿಬರಲಿಲ್ಲ.

(ಅರ್ಥ : ಜಕ್ಣಿ= ಸತ್ತ ನಂತರದ ಸ್ಥಿತಿ, ಪ್ರೇತತ್ವಕ್ಕೆ ಕುಂದ ಕನ್ನಡದ ಶಬ್ದ)


ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಬಸ್ಸು ಜಟಕಾ ಬಂಡಿ ನಗೆಬರಹಗಳ ಸಂಕಲನದ ಆಯ್ದ ಬರಹ