ಹೊರಡುವುದು ಸುಲಭ. ವಾಪಸಾಗುವುದು ಕಷ್ಟ. ಹೊರಡುವಾಗ
ಹೊತ್ತ ಕನಸುಗಳಿಗೆ ಮತ್ತು ಹೋದ ಮೇಲೆ ಕಾಣುವ ವಾಸ್ತವಗಳಿಗೆ ಅಜಗಜಾಂತರ ಅಂತ ಗೊತ್ತಾದ ಮೇಲೆ ಕೂಡ
ಮರಳುವುದು ಕಷ್ಟ. ಕಂಡ ಕನಸುಗಳಿಗಿಂತ ನಿಜದ ನಡೆಯೇ ಆಪ್ಯಾಯಮಾನ ಅನ್ನಿಸತೊಡಗುವುದರಿಂದಲೋ ಅಥವಾ
ಸಿಹಿಯಾದ ಅಪಕ್ವ ಸ್ವಪ್ನಗಳನ್ನು ಸೃಷ್ಟಿಸಿದ ಜಾಗಕ್ಕಿಂತ ಕಹಿಯಾದ ಸತ್ಯಗಳ ಜಾಗಕ್ಕೆ ಹೊಂದಿಕೊಂಡಿರುವುದರಿಂದಲೋ
ಹೀಗಾದೀತು. ಬಾಲ್ಯದ
ಆಮೋದಪ್ರಮೋದಗಳ ನೆನಪುಗಳನ್ನು ಆಗೀಗ ತಂದುಕೊಂಡು,
ಕಳೆದ ದಿನಗಳು ಎಷ್ಟು ಚೆನ್ನಾಗಿತ್ತು , ಸಣ್ಣವರಾಗಿದ್ದಾಗ ಹೇಗೆ ಗುಡ್ಡೆಯಲ್ಲಿ ಕೌಳಿ
ಹಣ್ಣು ಕೀಳುತ್ತಿದ್ದೆವು ಗೊತ್ತಾ ಎಂದು ಎಲ್ಲರ ಅನುಭವವೂ ಹೆಚ್ಚು ಕಡಿಮೆ ಒಂದೇ ತೆರನಾಗಿರುವ
ಸ್ನೇಹಿತರ ಗುಂಪಿನ ಸಂಜೆಯ ಕೂಟದಲ್ಲಿ ಇಪ್ಪತ್ಮೂರರ ವಯಸ್ಸಿಗೇ ಅಕಾಲ ವೃದ್ಧಾಪ್ಯ ಬಂದವರಂತೆ
ಮಾತನಾಡುತ್ತ ಬದುಕನ್ನು ದೂಡುವುದು ಇಂದು ಹೆಚ್ಚಿನ ಮಂದಿಗೆ ಅಭ್ಯಾಸವಾಗಿ ಹೋಗಿದೆ.
ಊರಲ್ಲಿನ ಅಕ್ಕ ಪಕ್ಕದ
ಮನೆಗಳಂತೆ, ತಮ್ಮ ಮನೆಯಲ್ಲೂ ಇಬ್ಬರೇ ಇರುವ ಅಪ್ಪ ಅಮ್ಮನನ್ನು ವೀಕೆಂಡುಗಳಲ್ಲಿ ಕಾಣಲು ಹೋಗಿ
ಬಂದು, “missing moms food.. had a great weekend in home” ಎಂದು ಸ್ಟೇಟಸ್ ಅಪ್ ಡೇಟ್ ಮಾಡಿದರೆ
ಅದಕ್ಕೊಂದಿಷ್ಟು ಲೈಕು ಕಮೆಂಟುಗಳು. ಎಲ್ಲೋ ಪೇಪರಿನ ಕೃಷಿ ಪುರವಣಿಯಲ್ಲಿ ಎಂ.ಎಸ್ಸಿ ಮಾಡಿದ
ಹುಡುಗನೊಬ್ಬ ಊರಿಗೆ ಮರಳಿ ಸ್ವಯಂ ಕೃಷಿಯಲ್ಲಿ ತೊಡಗಿಸಿಕೊಂಡು ಎಕರೆಗೆ ಅದೆಷ್ಟೋ ಕ್ವಿಂಟಾಲ್
ಹಣ್ಣು ತರಕಾರಿ ಬೆಳೆದ ಸುದ್ದಿಯನ್ನು ನೋಡಿ ಒಂದು ಕ್ಷಣಕ್ಕೆ ರೋಮಾಂಚನ. ಕೃಷಿತೋ ನಾಸ್ತಿ
ದುರ್ಭಿಕ್ಷಂ ಎಂಬ ಹಳೇ ಸುಭಾಷಿತದ ನೆನಪು. ಮೊದಲು ಇರದುದರೆಡೆಗೆ ತುಡಿದ ಮನಸ್ಸಿಗೆ ನಂತರ
ಇದ್ದದ್ದನ್ನಾದರೂ ಸರಿಯಾಗಿ ದಕ್ಕಿಸಿಕೊಳ್ಳಬೇಕಿತ್ತು ಎಂಬ ಕಸಿವಿಸಿ.ಆದರೆ ಮಾರನೆಯ ದಿನದ
ಚಕ್ರಗತಿಯ ಭರಾಟೆಯಲ್ಲಿ ಮತ್ತೆ ಹಳಿಗೆ ಬರುವ ಮನಸ್ಸು.
ಸಣ್ಣ ಪಟ್ಟಣಗಳಿಂದ,
ಹಳ್ಳಿಗಳಿಂದ ಮಹಾನಗರಗಳಿಗೆ ತೆರಳಿ ಕೆಲಸದಲ್ಲಿರುವ ಬಹುಮಂದಿ, ಮತ್ತೆ ಮನೆಗೆ ಮರಳುವ ಬಗೆಗಿನ
ಯೋಚನೆಯ ಸುಳಿಗೆ ಬಿದ್ದೇ ಬಿದ್ದಿರುತ್ತಾರೆ. ಆ ಸುಳಿ, ಹಲವರನ್ನ ಮತ್ತೆ ಅದೇ ನಗರದ ದಂಡೆಗೆ
ಎತ್ತಿ ಎಸೆದಿದ್ದರೆ, ಎಲ್ಲೋ ಕೆಲ ಮಂದಿಗೆ ತಮ್ಮೂರಿಗೆ ತೆರಳುವ ದಾರಿ ಕಂಡಿದ್ದೀತು. ದಾರಿ ಕಂಡ
ಮೇಲೂ ವಾಪಸ್ ಹೋದವರ ಸಂಖ್ಯೆ ಮತ್ತೂ ಕಡಿಮೆ. ಅದಕ್ಕೆ ಕೆಲಸ ,ಆರ್ಥಿಕ ಸ್ಥಿತಿಗತಿಗಳಿಂದ ತೊಡಗಿ
ಕಂಫರ್ಟ್ ಝೋನ್ ವರೆಗೆ ಕಾರಣಗಳು ಹಲವು. ಹೀಗಾಗಿ ಹೆಚ್ಚಿನವರು ಚಕ್ರವ್ಯೂಹ ಹೊಕ್ಕ ಅಭಿಮನ್ಯುಗಳೇ.
ಹೊರ ಬರುವ ದಾರಿ ತಿಳಿಯದೇ ಒಳಗೇ ಹೋರಾಡುತ್ತಿದ್ದಾರೆ. ಹೊರ ಬರುವ ಹೊತ್ತಿಗೆ ಯುದ್ಧ
ಮುಗಿದಿರುತ್ತದೆ.
ವಾಪಸ್ಸು ಬರುವ ಮಕ್ಕಳ
ದಾರಿ ಕಾಯುತ್ತ ಕೂತಿರುವ ವೃದ್ಧರ ಮನೆಗಳು ಪ್ರತಿ ಊರಲ್ಲೂ ಇವೆ ಎಂಬ ಮಾತು ಕೂಡ ಕ್ಲೀಷೆಯಾಗಿ
ಹೋಗಿದೆ. ನಮ್ಮೂರಲ್ಲೇ ಈ ಕ್ಲೀಷೆಗೆ ಉತ್ತರ ಎಂಬಂತೆ ಹತ್ತತ್ತು ಫ್ಲೋರಿನ ಎರಡು ಮೂರು ಅಪಾರ್ಟ್
ಮೆಂಟುಗಳು ರೆಡಿಯಾಗಿದ್ದು ಹೆಚ್ಚಿನ ಅಪ್ಪ ಅಮ್ಮಂದಿರು ಅಲ್ಲಿಗೆ ಶಿಫ್ಟಾಗಿದ್ದಾರೆ. ಕೊನೆಯ
ಮಹಡಿಯವರೆಗೂ ಲಿಫ್ಟ್ ವ್ಯವಸ್ಥೆ ಇದೆ. ಈ ಸ್ಥಿತ್ಯಂತರಗಳನ್ನೆಲ್ಲ ನೋಡುತ್ತಲೇ, ಅದೇ ಅಪಾರ್ಟ್
ಮೆಂಟಿನ ಹೊಸ ಗಂಡ ಹೆಂಡತಿ ತಮ್ಮ ಮಗನಿಗೆ ಮೆಟೀರಿಯಲ್ ಸೈನ್ಸ್ ಓದಿಸುವ ಮಾತನಾಡುತ್ತಾರೆ. ಅದಕ್ಕೆ
ಕೆಲಸ ದೂರದ ಮುಂಬೈಲೋ, ಹೈದರಾಬಾದ್ ನಲ್ಲೋ ಸಿಗುತ್ತದೆ ಎಂಬುದೂ ಅವರಿಗೆ ಗೊತ್ತಿದೆ.ಅತ ಕೈಗೆ
ಸಿಗಲಾರ ಅನ್ನುವುದೂ ತಿಳಿದಿದೆ.
ಹುಟ್ಟಿದಾಗಲೇ ಹೊಕ್ಕಳ
ಬಳ್ಳಿಯನ್ನ ಕಡಿದುಕೊಂಡು ಹೊರಬರುವ ಜೀವಗಳು, ಮುಂದೆ ಶಾಲಾ ಕಾಲೇಜುಗಳಲ್ಲಿ ಓದುವ ಹತ್ತು –ಹದಿನೈದು
ವರ್ಷಗಳಲ್ಲಿ ಕೂಡ ಬೇರನ್ನ ಕಡಿದುಕೊಂಡು ಹೋಗುವ ಅಸಂಖ್ಯ ಸಾಧ್ಯತೆಗಳನ್ನೇ ಗಮನಿಸುತ್ತವೆ. ಬೆಳೆಯುವ
ವಾತಾವರಣವೂ ಅದಕ್ಕೆ ಪೂರಕ. ಎಲ್ಲ ಮುಗಿದು ಗಮ್ಯವನ್ನು ಅರಸಿಕೊಂಡು ಹೊರಟ ಮೇಲೆ, ಮತ್ತೆ ಮರಳುವ
ತುಡಿತ ಆರಂಭವಾಗುತ್ತದೆ. ದೂರತೀರದ ಯಾನಕ್ಕೆ ಸಜ್ಜಾದ ಹಡಗು, ಹೊರಟ ದಡವನ್ನೇ ಹುಡುಕುತ್ತದೆ. ಬಿಲ್ಲಿನಿಂದ
ಹೊರಟ ಬಾಣಕ್ಕೆ ಬತ್ತಳಿಕೆಯ ಕನವರಿಕೆ.
ಆದರೆ ಬದುಕಿಗೆ ಬೇರಿನ
ಅವಶ್ಯಕತೆ ಇದೆಯಾ? ಈಗಾಗಲೇ ’ಜಾಯಿಂಟ್’ ಎಂಬ ಕೀಲು ಕಳೆದುಕೊಂಡು ಕೇವಲ ’ನ್ಯೂಕ್ಲಿಯರ್’ ಆಗಿರುವ
ಕುಟುಂಬಗಳು ಬೇರು-ಮೂಲ ಎನ್ನುವ ಆಲೋಚನೆಯನ್ನೇ ಬದಲಿಸುತ್ತಿವೆ. ಒಂದೂರಿನ ಜಾತ್ರೆ, ಯಕ್ಷಗಾನ,
ನದಿದಂಡೆ, ದೀಪೋತ್ಸವ, ಗದ್ದೆ ಬಯಲು ಇವೆಲ್ಲ ಸೇರಿದರೆ ತಾನೆ ’ಬೇರು’? ಬೇರಿಗೆ ಮರಳುವುದು ಎಂದರೆ
ಒಂದು ಸಂಸ್ಕೃತಿಗೆ-ಒಂದು ಜೀವನ ವಿಧಾನಕ್ಕೆ ಮರಳುವುದೋ ಅಥವಾ ಬರಿಯ ಇಟ್ಟಿಗೆ-ಸಿಮೆಂಟು ಇರುವ
ಮನೆಗೋ? ಅಪ್ಪ ಅಮ್ಮನೇ ತಿರುಗಾಟದ ಕೆಲಸದಲ್ಲಿದ್ದು, ಕೊನೆಗೆ ಯಾವುದೋ ಊರಲ್ಲಿ ನೆಲೆನಿಂತರೆ, ಅದು
ಮಗನದೋ, ಮಗಳದೋ ’ಬೇರು’ ಆಗುವುದು ಹೇಗೆ? ಅಲ್ಲಿನ ಜನ-ಬದುಕು ಒಮ್ಮೆಗೇ ತಮ್ಮದಾಗುವುದು ಹೇಗೆ? ಹೆತ್ತವರ
ಮೇಲಿನ ಬಂಧಕ್ಕೆ ಮರಳಿ ಬಂದರೂ ಅದು ಬಂಧನವಾಗದೆ ಉಳಿಯಬೇಕು ಎಂದರೆ, ಸಂಸ್ಕೃತಿಯ ಆಸರೆ ಬೇಕಾದೀತು.
ಒಲುಮೆಯ ಗೂಡಿಗೆ ಮರಳುವ
ಪ್ರಯತ್ನದಲ್ಲಿರುವ ಎಲ್ಲರಿಗೂ, ಹೃದಯ ಗೀತೆಯನ್ನು ಹಾಡುವ ಹಕ್ಕಿಯ ದನಿ ಕೇಳಿಸಲಿ ಎಂದು
ಹಾರಯಿಸುವುದಷ್ಟೇ ಈ ಹೊತ್ತಿಗೆ ಸಾಧ್ಯ.
(ಮುಗುಳು ಮಾಸ ಪತ್ರಿಕೆಗೆ ಬರೆದದ್ದು)