ಗುರುವಾರ, ಅಕ್ಟೋಬರ್ 30, 2014

ಅಪ್ಪನಾಗುವ ಕಷ್ಟ ಮತ್ತು ಸುಖ


ಆಸ್ಪತ್ರೆಯ ಕಾರಿಡಾರ್ ಖಾಲಿ ಹೊಡೆಯುತ್ತಿತ್ತು. ನಾನು  ವಾಚ್ ನೋಡಿಕೊಂಡರೆ ಕೊಂಚ ಹೊತ್ತಿಗೆ ಮುಂಚೆ ಎಷ್ಟು ಸಮಯವಾಗಿತ್ತೋ ಅಷ್ಟೇ!  ಅಲ್ಲಾ, ೨೦ ಸೆಕೆಂಡಿಗೊಮ್ಮೆ ಗಂಟೆ ನೋಡಿಕೊಂಡರೆ ಬಡಪಾಯಿ ವಾಚಾದರೂ ಏನು ಮಾಡೀತು? ಸುಮ್ಮನೆ ಯಾರ ಬಳಿಯಾದರೂ ಮಾತನಾಡೋಣ ಅನ್ನಿಸಿದರೂ ಊಹೂಂ, ಯಾರೂ ಇರಲಿಲ್ಲ. ಪ್ರಾಯಶಃ ನನ್ನ ಜೀವನದ ಅತ್ಯಂತ ಒತ್ತಡದ ಮತ್ತು ಸುದೀರ್ಘವೆನಿಸಿದ ಕ್ಷಣಗಳು ಅವು. ಖುಷಿಯ ಘಳಿಗೆಗಳಿಗೂ ಮೊದಲ ತಲ್ಲಣ, ಹೊಸ ಜೀವದ ಸ್ವಾಗತಕ್ಕೂ ಮೊದಲಿನ ಕ್ಷಣಗಣನೆ.
ಹೆಂಡತಿ ಒಳಗೆ ಹೆರಿಗೆ ಕೋಣೆಯಲ್ಲಿ, ನಾನು ಹೊರಗೆ ಕಾರಿಡಾರ್ ನಲ್ಲಿ. ಅದಾಗಲೇ ನೂರಾರು ಸಿನಿಮಾಗಳಲ್ಲಿ ದೃಶ್ಯವನ್ನು ನೋಡಿದ್ದೆ ನಾನು. ಗಂಡ ಹೊರಗೆ ನಿಂತಿದ್ದಾನೆ. ಪಕ್ಕದಲ್ಲಿ ಅಪ್ಪ ಅಮ್ಮ. ಮುಖದಲ್ಲಿ ಚಿಂತೆ. ಅತ್ತಿತ್ತ ಓಡಾಟ, ಗಡಿಯಾರದ ಮುಳ್ಳಿನ ಕ್ಲೋಸ್ ಅಪ್ ಶಾಟು. ಒಳಗೆ ಓಡೋ ನರ್ಸ್ ಕಡೆಗೆ ಯಾಚನಾ ಭಾವದಲ್ಲಿ ನೋಡುವ ಗಂಡನಿಗೆ ಅದೇನೋ ಸನ್ನೆ ಮಾಡಿ ಹೋಗುವ ಆಕೆ.. ಏನೂ ಆಗಲ್ಲ ಚಿಂತಿಸಬೇಡ ಎಂದು ಕಣ್ಣಲ್ಲೇ ಹೇಳೋ ಅಮ್ಮ.. ಪ್ರತಿ ಬಾರಿ ನೋಡುವಾಗಲೂ, ಅಲ್ಲಾ ಸೀನನ್ನು ಇಷ್ಟೊಂದು ವೈಭವೀಕರಿಸಿ ತೋರಿಸೋ ಅಗತ್ಯ ಏನಿದೆ, ಒಳಗೆ ಡಾಕ್ಟರುಗಳಿರುತ್ತಾರೆ, ನರ್ಸ್ಗಳಿದ್ದಾರೆ, ತಂತ್ರಜ್ಞಾನ ಅದೆಷ್ಟು ಮುಂದುವರಿದಿದೆ, ಯಾವ ತಲೆಬಿಸಿಯೂ ಇಲ್ಲದೇ ಹೆರಿಗೆ ಆಗೋದು ಗ್ಯಾರೆಂಟಿ, ಅಷ್ಟಾದರೂ ಇನ್ನೂ ಹಳೇ ಸಿನಿಮಾದ ಮೆಲೋಡ್ರಾಮಾ ಬಿಟ್ಟಿಲ್ಲವಲ್ಲ  ಅಂದುಕೊಳ್ಳುತ್ತಿದ್ದೆ. ಆದರೆ ಯಾವಾಗ ನಾನು ಖಾಲಿ ಕಾರಿಡಾರಿನ ಮೌನದಲ್ಲಿ, ಸೌಂಡ್ ಪ್ರೂಫಾಗಿದ್ದರೂ ಬಾಗಿಲಿನ ಸಂದುಗಳಲ್ಲಿ ತೂರಿಬರುತ್ತಿದ್ದ ಆಕ್ರಂದನವನ್ನು ಕೇಳುತ್ತ ನಿಂತಿದ್ದೆನೋ, ಯಾವಾಗ ನನ್ನ ಕಾಲುಗಳಲ್ಲೂ ಸಣ್ಣಗೆ ನಡುಕ ಉಂಟಾಗಿ ಇದೆಲ್ಲ ಬೇಗ ಮುಗಿದು ಹೋಗಬಾರದೇ ಎನ್ನಿಸಿತೋ, ಆವಾಗ ಸಂದರ್ಭದ ಗಂಭೀರತೆ ಅರ್ಥವಾಯಿತು.
ನಾನು ಏನಾಗಿದ್ದೇನೆ ಎಂಬುದೇ ನನಗರ್ಥವಾಗದೇ ನಿಂತಿದ್ದ ಹೊತ್ತಿಗೆ, ನನ್ನೆದುರಿನ ಆಪರೇಶನ್ ಥಿಯೇಟರ್ ಬಾಗಿಲು ತೆರೆಯಿತು. ನನ್ನ ಬಾಳಿನ ಹೊಸ ಅರ್ಥವನ್ನು ಕೈಯಲ್ಲಿ ಹೊತ್ತು ನಿಂತಿದ್ದ ನರ್ಸಮ್ಮ, ನಕ್ಕುಹೆಣ್ಣುಮಗುಎಂದು ಮೃದುಬಟ್ಟೆಯಲ್ಲಿ ಸುತ್ತಿದ್ದ ಎಳೇ ಕಂದಮ್ಮನನ್ನು ಕೈಗಿತ್ತಳು. ೨೫ ಕೇಜಿ ತೂಕ ಹೊತ್ತಾಗಲೂ ನಡುಗದ ಕೈ, ಈಗ ನಡುಗುತ್ತಿತ್ತು. ಜಗದ ಬೆಳಕಿಗಂಜಿ ಮುಚ್ಚಿಕೊಂಡಿರುವ ಪುಟ್ಟ ಕಣ್ಣುಗಳು, ಗಾಳಿಯನ್ನೇ ಗಟ್ಟಿ ಹಿಡಿದಿರುವ ಬಿಗಿಮುಷ್ಟಿಗಳು.. ಹಾಗೇ ನೋಡುತ್ತ ನಿಂತ ನನಗೆ ಒಂದು ನಿಮಿಷ ಏನಾಗುತ್ತಿದೆ ಎಂದೇ ತಿಳಿಯಲಿಲ್ಲ. ಆನಂದವೋ, ರೋಮಾಂಚನವೋ, ಭಾವೋದ್ವೇಗವೋ.. ಊಹೂಂ.. ಎಲ್ಲ ಖಾಲಿ ಖಾಲಿ. ಮಗಳ ಮುಖವನ್ನೇ ನೋಡಿ ನೀಳ ಉಸಿರು ಹೊರ ಬಿಟ್ಟ ಮೇಲೆ ನಿಧಾನವಾಗಿ, ಖಾಲಿಯಾದ ನನ್ನ ಒಳಗೆಲ್ಲ ತುಂಬತೊಡಗಿತು. ಆವತ್ತಿನಿಂದ ತುಂಬಿಕೊಳ್ಳುತ್ತಿರುವ ನನ್ನ ಖಾಲೀತನ ಇನ್ನೂ ತುಂಬಿಕೊಳ್ಳುತ್ತಲೇ ಇದೆ!
ಅಪ್ಪ ಅನ್ನಿಸಿಕೊಂಡ ಘಳಿಗೆ ಅರ್ಥವಾದ ಮಹತ್ವದ ಸತ್ಯ ಏನಂದರೆ ಅದು ಬರಿಯ ನಾಮಪದವಲ್ಲ ಕ್ರಿಯಾಪದ ಅಂತ! ಹೆಂಗಸರಿಗೆ ಸೂಕ್ಷ್ಮ ಅನ್ನುವುದು ಹುಟ್ಟುತ್ತಲೇ ದಕ್ಕಿಬಿಟ್ಟಿರುತ್ತದೆ, ನಾವುಗಳೋ ಅದನ್ನು ಒಲಿಸಿಕೊಳ್ಳಬೇಕು. ಮಗಳು ಹುಟ್ಟಿದ ದಿನವೇ ನನ್ನ ಹೆಂಡತಿ ಅಪಾರ ಜ್ಞಾನವಿರುವವಳಂತೆ ಅದನ್ನು ನೋಡಿಕೊಳ್ಳುತ್ತಿರುವುದನ್ನ ನೋಡಿ ನಾನಂತೂ ಕಂಲಾಗಾಗಿ ಹೋಗಿದ್ದೆ. ಹೀಗೆ ಹೀಗೇ ಎತ್ತಿಕೊಳ್ಳಬೇಕು, ಕುತ್ತಿಗೆ ಹಿಡಿದುಕೋ.. ಛೇ.. ಹಾಗಲ್ಲ ಹೀಗೆ ಎಂದು ಅವಳು ನನಗೆ ವಿವರಿಸಬೇಕಿದ್ದರೆ ನಾನು ಪೆದ್ದು ಪೆದ್ದಾಗಿ ತಲೆಯಾಡಿಸುತ್ತಿದ್ದೆ. ಹಾಲು ಕುಡಿದದ್ದು ಹೆಚ್ಚಾಯ್ತು, ಈಗ ವಾಂತಿಯಾಗುತ್ತದೆ ಎಂದು ಅವಳು ಹೇಳಿದರೆ ಮಾತು ಮುಗಿಯುವುದರೊಳಗೆ ಹಾಗೇ ಆಗಬೇಕೆ. ಇದೆಲ್ಲ ಹೇಗೆ ತಿಳಿಯುವುದಪ್ಪ ಎಂದು ನಾನು ಅರ್ಥವಾಗದೆ ನೋಡುತ್ತಿದ್ದೆ.ನಮ್ಮತ್ತೆ ಮತ್ತು ಇವಳು ಇಬ್ಬರೂ ಸೇರಿ ಹಸುಳೆಯ ಆರೈಕೆ ಮಾಡುತ್ತಿದ್ದರೆ ನಾನು ಬಿಟ್ಟಕಣ್ಣು ಬಿಟ್ಟುಕೊಂಡು ನೋಡುತ್ತಿದ್ದೆ ಅಷ್ಟೆ. ನಾನೇನಾದರೂ ಸಹಾಯ ಮಾಡಬೇಕೇ ಎಂದು ಕೇಳಿದ ವಿನಂತಿಯನ್ನು ನನ್ನವಳು ಗೌರವ ಪೂರ್ವಕವಾಗಿ ಸ್ವೀಕರಿಸಿ, ಸಾರಾಸಗಟಾಗಿ ತಿರಸ್ಕರಿಸಿದ್ದಳು. ದಯಾಪರರಾದ ಅವರುಗಳು ಡಯಾಪರು ಸೊಳ್ಳೆಪರದೆ ಇತ್ಯಾದಿಗಳನ್ನು ತರುವ ಕೆಲಸವನ್ನು ನನಗೆ ವಹಿಸಿ ಇತರ ಸಂಕಷ್ಟಗಳಿಂದ ನನ್ನನ್ನು ಪಾರು ಮಾಡಿದ್ದರು.
ಆಸ್ಪತ್ರೆಯ ಅಧ್ಯಾಯ ಮುಗಿದು ಬಾಣಂತನದ ಸಂಭ್ರಮಗಳು ಶುರುವಾಗುವ ಹೊತ್ತಿಗೆ ನಾನೂ ಸ್ವಲ್ಪ ಪರಿಶ್ರಮ ಹಾಕಿ, ಅನುಭವ ಪಡೆದುಕೊಂಡಿದ್ದೆ. ಮಗಳನ್ನು ಎತ್ತಾಡಿಸುವ ಕಲೆ ನನಗೂ ಅರ್ಥವಾಗಿತ್ತು. ಬೊಚ್ಚುಬಾಯಿ ಅಗಲಿಸಿ ಹಾಹೂ ಅನ್ನುತ್ತಿದ್ದ ಮಗಳಿಗೆ ಅಪ್ಪನೆಂಬ ಜೀವಿಯ ಪರಿಚಯ ನಿಧಾನವಾಗಿ ಆಗುತ್ತಿತ್ತು. ಇಷ್ಟಾದರೂ ನಾನು ಮಗಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಇನ್ನೂ ಪ್ರೈಮರಿಯನ್ನೂ ಪಾಸಾಗಿರಲಿಲ್ಲ. ಯಾಕೆಂದರೆ ಬಹಳಷ್ಟು ವಿಚಾರಗಳನ್ನ ನನಗೆ ನೋಡಲೇ ಆಗುತ್ತಿರಲಿಲ್ಲ, ಇನ್ನು ಮಾಡುವುದು ಆಮೇಲಿನ ಮಾತು.
ಪಾಪೂಗೆ ಸ್ನಾನ ಮಾಡಿಸುವುದು ಎಂಬ ಘನಘೋರ ಕಾರ್ಯವನ್ನು ನನಗಂತೂ ಕಣ್ಣಲ್ಲಿ ಕಾಣಲೇ ಸಾಧ್ಯವಾಗುತ್ತಿರಲಿಲ್ಲ.! ಸ್ನಾನ ಮಾಡಿಸಲೆಂದೇ ವಿಶೇಷ ಪರಿಣತಿಯನ್ನು ಪಡೆದ ಕೊಲ್ಲೂರಿಯೆಂಬ ಅಜ್ಜಿಯು ಬಿಸಿಬಿಸಿ ನೀರನ್ನು ತೊಪತೊಪನೆ ಹೊಯ್ಯುತ್ತಿದ್ದರೆ ಮಗಳು ಹಂಚು ಹಾರಿ ಹೋಗುವಂತೆ ಅಳುತ್ತಿದ್ದಳು. ಅವಳು ಹುಚ್ಚಾಪಟ್ಟೆ ಅಳುತ್ತಿದ್ದರೂ ಹಾಗೊಂದು ಕ್ರಿಯೆಯೇ ನಡೆಯುತ್ತಿಲ್ಲ ಎಂಬಂತೆ ಆಕೆಯೂ ನನ್ನತ್ತೆಯೂ ಅದೇನೋ ಊರಿನ ಸುಖಕಷ್ಟಗಳನ್ನೆಲ್ಲ ಮಾತನಾಡುತ್ತಿದ್ದರು. ಅದ್ಯಾರೋ ಪುಣ್ಯಾತ್ಮ ಇನ್ನಾರಿಗೋ ಬಾರಿಸಿದನಂತೆ, ಅಲ್ಲಾ ಜಗತ್ತಲ್ಲಿ ಹಾಗಾದರೆ ಕರುಣೆಯೇ ಇಲ್ಲವೇ? ಎಲ್ಲ ಏನಾಗ್ತಾ ಇದೆ ಎಂದು ಮರುಗುತ್ತ ಕೂಸಿನ ತಲೆ ಕಾಲು ಹೊಟ್ಟೆ ಬೆನ್ನಿಗೆ ಇನ್ನಷ್ಟು ನೀರು ಸುರಿಯುತ್ತ ಕಾಲ ಮೇಲೆಯೇ ಮಲಗಿಸಿಕೊಂಡು ಅದೇನೇನೋ ಕವಾಯತುಗಳನ್ನ ಮಾಡಿಸುತ್ತಿದ್ದರು. ಕರುಣೆ ಬಚ್ಚಲಮನೆಯ ಬಿಸಿನೀರ ರೂಪದಲ್ಲಿ ಹರಿದು ಮೋರಿ ಸೇರುತ್ತಿತ್ತು. ನಾನು ಸ್ನಾನ ಮಾಡಿಸುವಾಗ ಒಂದೆರಡು ದಿನ ಇದನ್ನೆಲ್ಲ ನಿಂತು ನೋಡಿ ಹೌಹಾರಿ ಮುಖವನ್ನು ಚಿತ್ರವಿಚಿತ್ರವಾಗಿಸಿಕೊಂಡು ಅಯ್ಯೋ ಅಪ್ಪಾ ಸ್ವಲ್ಪ ನೋಡ್ಕಂಡು ನೀರು ಹುಯ್ರೇ ಎಂದಿದ್ದಕ್ಕೆ ಮಾರನೇ ದಿನದಿಂದ ನನ್ನ ಪಾಲಿಗೆ ಬಚ್ಚಲು ಬ್ಯಾನ್ ಆಯಿತು. ಪ್ಯಾಟೆ ಸೇರ್ಕಂಡ್ರೆ ಹೀಗೆ ಅಮ್ಮ, ಎಲ್ಲದಕ್ಕೂ ಹುಡುಗ್ರು ಅತಿ ಆಡ್ತವೆ ಅಂತ ಕೆಲಸದ ಕೊಲ್ಲೂರಿಯೂ ಷರಾ ಬರೆದಳು. ಹಾಗೆಂದು ನಾನು ಮಾಡಿಕೊಂಡ ವಿಡಿಯೋ ತೋರಿಸೆಂದು ಕೇಳಲು ಮರೆಯಲಿಲ್ಲ!
ಸ್ನಾನ ಮಾಡಿಕೊಂಡು ಒಳಗೆ ಬರುವಾಗ ಪುಟ್ಟ ಹಬೆಯ ದೇವತೆಯಂತೆ ಕಾಣುತ್ತಿದ್ದ ಮಗಳು ಕೊಲ್ಲೂರಿಯ ಬಿಸಿ ನೀರಿನ ಹೊಡೆತಕ್ಕೆ ಕಂಗಾಲಾಗಿ ಬಸವಳಿದು ಹೋಗಿರುತ್ತಿದ್ದಳು. ಪೌಡರು ಹಾಕಿ ಗೊಬ್ಬೆ ಕಟ್ಟುವುದರೊಳಗೆ ನಿದ್ದೆ ಗ್ಯಾರೆಂಟಿ. ಹಾಗೆಲ್ಲ ಸುಮ್ಮ ಸುಮ್ಮನೆ ನಿದ್ರೆ ಮಾಡಿಸುವ ಹಾಗೆಲ್ಲ ಇಲ್ಲ! ತೊಟ್ಟಿಲನ್ನು ತೂಗಲೂ ಒಂದು ಕ್ರಮ, ಮಲಗಿಸಲೂ ಒಂದು ಶಿಸ್ತು, ಸ್ನಾನವಾದ ಮೇಲಿನ ನಿದ್ದೆಗೆ ಒಂದು ರೀತಿಯ ವ್ಯವಸ್ಥೆ, ಮಧ್ಯಾಹ್ನಕ್ಕಾದರೆ ಇನ್ನೊಂದು, ರಾತ್ರಿಗೆ ಮಗದೊಂದು. ಅಬ್ಬಬ್ಬ! ಒಂದು ಪಂಚೆಯನ್ನೇ ಹೇಗೆಲ್ಲ ಆ ಕೂಸಿಗೆ ಸುತ್ತುತ್ತಿದ್ದರು ಎಂದರೆ ನಾನು ಹೊತ್ತಿಗೆಲ್ಲ  ಹೆಚ್ಚು ಮಾತನಾಡದೆಫೋಟೋ ತೆಗೆಯುವುದುಎಂಬ ಅತ್ಯಂತ ಮುಖ್ಯ ಕಾರ್ಯ ಮಾಡುತ್ತಿದ್ದೆ. ಸಹಾಯ ಮಾಡಲಾ ಎಂದು ಕೇಳಿ, ಅತ್ತೆಯೋ ಹೆಂಡತಿಯೋ ಹುಂ ಅಂದರೆ ಎಂಬ ಹೆದರಿಕೆ!
ಇನ್ನು ಮಗುವನ್ನು ನೋಡಲು ಬರುವ ಮಹನೀಯರುಗಳ ಬಗ್ಗೆ ಹೇಳ ಹೊರಟರೆ ಅದೇ ಬೇರೆಯ ಪ್ರಬಂಧವಾಗುತ್ತದೆ. ಅಪ್ಪನಿಗೋ ಅಮ್ಮನಿಗೋ ಅಜ್ಜಿ ಅಜ್ಜನಿಗೋ ಮಗುವನ್ನು ಹೋಲಿಸಬೇಕಾಗಿರುವುದು ಅತ್ಯಂತ ಅನಿವಾರ್ಯವೂ ಅವಶ್ಯವೂ ಆಗಿರುವ ಪ್ರಕ್ರಿಯೆ ಎಂದು ನೂರಕ್ಕೆ ನೂರು ಪ್ರತಿಶತ ಜನರೂ ಭಾವಿಸಿದ್ದಾರೆ. ಕೆಲವರು ಇನ್ನೂ ಮುಂದೆ ಹೋಗಿ ಕಣ್ಣು  ಇವನ ಹಾಗೆ ಮೂಗು ಅವಳದು.. ಆದರೆ ನೋಡಲು ಥೇಟು ಅಜ್ಜಿಯ ಥರ ಎಂದು ಯಥಾ ಸಾಧ್ಯ ಕುಟುಂಬಸ್ಥರನ್ನು ಓಲೈಸುವ ಕಾರ್ಯವನ್ನೂ ಮಾಡುತ್ತಾರೆ. ನಾನು ಮೊದ ಮೊದಲು ತಲೆಯಾಡಿಸಿ ಭಾರೀ ಉತ್ಸಾಹದಿಂದ ಪ್ರತಿಕ್ರಿಯೆ ನೀಡಿದೆ. ಅದು ಅತ್ಯಂತ ಅಪಾಯಕಾರಿ ಅನ್ನುವುದು ಆಮೇಲಾಲಾಮೇಲೆ ಅರಿವಾಯಿತು. ಕಾಲು ನೋಡು ಇವನ ಅಜ್ಜನೂ ಹೀಗೇ ಇದ್ದ, ಕೈ ನೋಡು ಅಜ್ಜಿಯ ಥರವೇ ಎಂದೆಲ್ಲ ಇನ್ನೂ ಗಂಭೀರವಾಗಿ ಡಿ-ಕೋಡ್ ಮಾಡಲು ಶುರು ಮಾಡಿದ ಮೇಲೆ ನಾನೂ ಸುಮ್ಮನಾಗಬೇಕಾಯಿತು. ಏಕೆಂದರೆ ಬಂದ ಎಲ್ಲರ ಬಳಿಯೂ ನಕ್ಕು, ಕೃತಜ್ಞತೆಯನ್ನು ವ್ಯಕ್ತಪಡಿಸಬೇಕಾದ ಭಾರ ನಮ್ಮ ಮೇಲಿರುವುದರಿಂದ ಯಾವ ವ್ಯಂಗ್ಯ ಉಡಾಫೆಗಳಿಗೂ ಅವಕಾಶ ಇರುವುದಿಲ್ಲ. ಯಾರೋ ಸ್ನೇಹಿತ ದಂಪತಿ ಬಂದಿದ್ದರು, ಅವರವರೇ ಯಾರ ಹಾಗೆ ಕಾಣುತ್ತಿದೆ ಎಂದು ಮಾತನಾಡಿಕೊಂಡರು. ಸ್ನೇಹಿತನ ಮಾತಿಗೆ ನಾನು ಸುಮ್ಮನೇ ತಲೆಯಾಡಿಸಿ ಹೌದು ಹೌದು ನನಗೂ ಹಂಗೇ ಅನ್ನಿಸ್ತು ಎಂದೆ. ಅವನು ತಿರುಗಿ ಹೆಂಡತಿಯ ಬಳಿ ನೋಡಿದ್ಯಾ ನಾನು ಹೇಳಿದ್ದೇ ಕರೆಕ್ಟು ಎಂದು ಮತ್ತೆ ವಾದಕ್ಕೆ ತೊಡಗಿದ. ನಿದ್ದೆಯಲ್ಲಿದ್ದ ಕೂಸು ವಿನಾಕಾರಣ ನಕ್ಕಿತು.
ಬಾಣಂತನ ಮುಗಿಸಿದ ಹೆಂಡತಿಯನ್ನು ಮರಳಿ ಬೆಂಗಳೂರಿಗೆ ಕರೆದೊಯ್ಯಲು ಬಂದೆ. ಹೊತ್ತಿನಲ್ಲಿ ನಡೆದ ಸಲಹಾಪರ್ವ ಎಂಬ ಅಮೋಘ ಸಂದರ್ಭದ ಬಗ್ಗೆ ಏನು ಹೇಳಲಿ? ಊರಿನ ಹಿತೈಷಿಗಳೂ, ಬಂಧು ಬಾಂಧವರೂ ಬಂದು ಬೆಳಗಿನಿಂದಲೇ ಥರಹೇವಾರಿ ಸಲಹೆಗಳನ್ನು ನನ್ನವಳಿಗೆ ನೀಡಲು ಆರಂಭಿಸಿದ್ದರು. ಮಗಳಿಗೆ ಕ್ಯಾರೆಟ್ಟು ತಿನ್ನಿಸಬೇಡ ಕಣ್ಣಿನ ತೊಂದರೆ ಬರತ್ತೆ, ಎಮ್ಮೆ ಹಾಲು ಕುಡಿಸಬೇಡ ಬುದ್ದಿ ಮಂದ, ಅಪ್ಪಿತಪ್ಪಿಯೂ ಪ್ಯಾಕೇಟು ಮೊಸರು ತಿನ್ನಿಸಬೇಡ ಅದ್ರಲ್ಲಿ ಬರೀ ಕೆಮಿಕಲ್ಲು, ಬಾಳೆಹಣ್ಣು ಥಂಡಿ ದಾಳಿಂಬೆ ಹೀಟು ಮೂಸಂಬಿ ನೆಗಡಿ.. ಆಚೆ ಮನೆ ಕುಸುಮಕ್ಕ ಹೇಳಿದ್ದು ಈಚೆಮನೆ ಚಿಕ್ಕಮ್ಮನ ಪ್ರಕಾರ ತಪ್ಪು. ರಾಮಣ್ಣ ಬೇಡ ಎಂದ ಯಾವುದೋ ಹಣ್ಣು, ಲಕ್ಷ್ಮಜ್ಜಿಯ ಪ್ರಕಾರ ತಿನ್ನಲೇಬೇಕು. ಸಂಜೆ ಆಗುವ ಹೊತ್ತಿಗೆ ನನ್ನ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿಯೇ ಬಿಟ್ಟಿತ್ತು. ನನ್ನ ಹೆಂಡತಿ ಈಗಾಗಲೇ ಹಲವು ತಿಂಗಳುಗಳ ಕಾಲ ಇದನ್ನೆಲ್ಲ ಕೇಳಿದ್ದರಿಂದ ಸ್ಥಿತಪ್ರಜ್ಞಳಾಗಿ ಹುಂ ಅನ್ನುತ್ತಿದ್ದಳು. ಅವಳ ಧೈರ್ಯ ನೀಡಿದ ಮೇಲೆಯೇ ನನಗೆ ನಮ್ಮ ಮಗಳು ಉಪವಾಸ ಇರಬೇಕಾಗಿಲ್ಲ ಎಂದು ಖಾತ್ರಿಯಾಯಿತು!
ನಾಲ್ಕಿದ್ದ ಹೆಜ್ಜೆ ಆರಾಗಿ ಬೆಂಗಳೂರಿನಲ್ಲಿ ಮೂಡಿದ ಮೇಲೆ, ಕಾಲ ಸಾಗುವ ಪರಿಯನ್ನು ಕಂಡು ನನಗೇ ಅಚ್ಚರಿಯಾಯಿತು. ಅಂಬೆಗಾಲಿನಿಂದ ಪುಟ್ಟಪುಟ್ಟ ಹೆಜ್ಜೆಗಳನ್ನ ಇಡುತ್ತ ತೊದಲು ಮಾತನಾಡುತ್ತ ಸಾಗುವ ಮಗಳ ಹಿಂದೆ ನಾವೂ ಓಡುತ್ತ ಅದು ಹೇಗೆ ವರುಷ ಕಳೆದು ಮುಂದೆ ಸಾಗಿತೋ ಗೊತ್ತೇ ಆಗಲಿಲ್ಲ. ಆದರೆ ಇಲ್ಲಿಗೆ ಬಂದ ಮೇಲೆ ಬೇರೆಯದೇ ಬಗೆಯ ಚಾಲೆಂಜುಗಳು. ಮಗಳು ಪಾಪ, ನಾಲ್ಕು ಗೋಡೆಗಳ ಮಧ್ಯವೇ ದಿನದ ಹೆಚ್ಚಿನಂಶವನ್ನು ಕಳೆಯಬೇಕು, ಬೇಕೋ ಬೇಡವೋ, ಡಾಕ್ಟರುಗಳು ಹೇಳುವ ಅದೆಂಥದೋ ಇಂಜೆಕ್ಷನ್ನುಗಳನ್ನ ಮಾತ್ರೆಗಳನ್ನ ಕೊಡಿಸಬೇಕು.. ಆಕೆ ಹನೀಸಿಂಗನ ಲುಂಗಿ ಡ್ಯಾನ್ಸಿಗೆ ಮೆಲ್ಲನೆ ಕೈ ಎತ್ತಿ ಕಾಲು ಕುಣಿಸಿದರೆ ಅದನ್ನ ಸಾಧನೆ ಎಂದು ಖುಷಿ ಪಡಬೇಕೋ, ಅಥವಾ ಇಷ್ಟು ಬೇಗನೆ ಇದೆಲ್ಲ ಅಭ್ಯಾಸವಾಯಿತಲ್ಲ ಎಂದು ಬೇಸರಿಸಬೇಕೋ? ತಿಳಿಯುತ್ತಿಲ್ಲ!
 ಒಟ್ಟಿನಲ್ಲಿ ಹೊಸ ಹೊಸ ಪಾಠಗಳನ್ನ ಕಲಿಯುತ್ತ ಅಪ್ಪನೆಂಬ ಪದವಿಯ ಮೆಟ್ಟಿಲುಗಳನ್ನೇರುತ್ತಿದ್ದೇನೆ. ನರ್ಸು ನನ್ನ ಕೈ ಮೇಲೆ ಮಗುವನ್ನು ಇಟ್ಟದ್ದು ಇನ್ನೂ ಈಗತಾನೇ ನಡೆದಂತಿದೆ. ಆದರೆ ಮಗಳು ಹುಟ್ಟಿ ಆಗಲೇ ಒಂದೂವರೆ ವರ್ಷವಾಗುತ್ತಿದೆ. ಮೊನ್ನೆ ತಾನೇ ಹಗುರ ಹೆಜ್ಜೆಗಳನ್ನು ಹಾಕುತ್ತ ನಡೆಯುವ ಅವಳನ್ನ ಕರೆದುಕೊಂಡು ವಾಕಿಂಗ್ ಗೆ ಹೋಗಿದ್ದೆ. ನಾನು ಎರಡೆರಡು ಅಕ್ಷರದ ಏನೇನೋ ಶಬ್ದಗಳನ್ನ ಹೇಳಿಕೊಡುತ್ತ ನಡೆಸಿಕೊಂಡು ಹೊರಟಿದ್ದೆ. ಅವಳೂ ಅವಳ ಬಾಲ ಭಾಷೆಯಲ್ಲಿ ಅದೇನೋ ಹೇಳುತ್ತಿದ್ದಳು. ಹಾಗೇ ಹೋಗುತ್ತಿದ್ದಾಗ, ಯಾವುದೋ ಕ್ಷಣದಲ್ಲಿ ನನಗೇ ಗೊತ್ತಿಲ್ಲದ ಹಾಗೆ ನನ್ನ ಕೈ ಬಿಡಿಸಿಕೊಂಡು ಓಡಿಯೇ ಬಿಟ್ಟಳು. ಹೇ ಎಂದು ಮುಂದಡಿಯಿಟ್ಟೆ.. ಆಕೆ ನಾಲ್ಕೆಂಟು ಹೆಜ್ಜೆ ಓಡಿದವಳು ಅಲ್ಲೇ ನಿಂತು, ತಿರುಗಿ ನನ್ನನ್ನು ನೋಡಿ ನಕ್ಕು.. ಕೈ ಚಾಚಿ   ’ಅಪಾ ಬಾಎಂದು ಕರೆದಳು! ನಾನು ನೋಡುತ್ತ ನಿಂತೆ..

-ಕನ್ನಡಪ್ರಭ ದೀಪಾವಳಿ ಲಲಿತ ಪ್ರಬಂಧ ಸ್ಪರ್ಧೆ -2014 ರಲ್ಲಿ ದ್ವಿತೀಯ ಬಹುಮಾನ