ಭಾನುವಾರ, ಆಗಸ್ಟ್ 11, 2013

ಎಂಥಾ ಮಳೆಯಣ್ಣ ಇದು ಎಂಥಾ ಮಳೆಯೋ!

          ಮೇ ಕೊನೆಯ ವಾರ. ಆಫೀಸಿಂದ ಸಂಜೆ ಹೊರಟು ಮನೆಗೆ ಹೋಗೋ ದಾರಿಲಿ ಹೈವೇಗೆ ಬಂದರೆ, ಇಂಡಿಪೆಂಡೆನ್ಸ್ ಡೇ ಸಿನಿಮಾದಲ್ಲಿ ಒಂದು ದೊಡ್ಡ ಯೂ.ಎಫ್.ಓ ಇಡೀ ಸಿಟೀನೇ ಮುಚ್ಕೊಳತ್ತಲ್ಲ ಆ ತರ ದೊಡ್ಡ ಮೋಡ ಉಡುಪಿ ಕಡೆ ಬರ್ತಾ ಇತ್ತು. “ಮಳೆ ಬರೋದ್ರೊಳಗೆ ಮನೆ ಸೇರ್ಕೊಂಡ್ ಬಿಡೋ ಪೆದ್ದೇ” ಅನ್ನೋ ರೆಡ್ ಸಿಗ್ನಲನ್ನ ಮೆದುಳು ಪದೇ ಪದೇ ಕೊಡುತ್ತಿದ್ದರೂ, ಅದನ್ನ ಲಕ್ಷಿಸದೇ ಮೊಬೈಲ್ ತೆಗೆದು ಆ ಮೋಡದ ನಾಲ್ಕೆಂಟು ಫೋಟೋ ತೆಗೆದೆ. ಬೈಕ್ ಸ್ಟಾರ್ಟ್ ಮಾಡಿ ಹತ್ತು ಮೀಟರು ಹೋಗಿಲ್ಲ, ಒಂದ್ ಮಳೆ ಹೊಡೀತು ನೋಡಿ,ಅಷ್ಟೆ ಕಥೆ. ಅಂದಾಜಾಗೋದರೊಳಗೆ ಪೂರ್ತಿ ಒದ್ದೆ. ನೀವು ಬೆಂಗಳೂರಲ್ಲಿ ನಿಲ್ಲುವ ಹಾಗೆ ಅಂಗಡಿ ಕೆಳಗೆಲ್ಲ ನಿಂತರೆಲ್ಲ ಇಲ್ಲಿ ಯಾವ ಪ್ರಯೋಜನವೂ ಇಲ್ಲ. ಯಾಕಂದ್ರೆ ಗಾಳಿ ಜೊತೆಗೆ ಸೇರಿಕೊಂಡು ಬೀಸ್ತಾ ಇರೋ ಮಳೆ, ನೀವು ಬಿಡಿ,ನಿಮ್ಮ ಹಿಂದಿರುವ ಅಂಗಡಿಯ ಒಳಗಿರೋ ಐಟಮ್ಮುಗಳನ್ನೂ ಒದ್ದೆ ಮಾಡಿರುತ್ತದೆ. ಹಾಂ, ಆವತ್ತು ಹಾಗೆ ಶುರುವಾದ ಮಳೆ, ಇನ್ನೂ ನಮ್ಮ ಕರಾವಳಿಯನ್ನ ಬಿಟ್ಟು ಹೋಗಿಲ್ಲ. ತಪ್ಪಿ, ಮನೆ ಹೊರಗೆ ಒಣಗಿಸಿರೋ ಒಂದು ಶರ್ಟು, ಹದಿನೈದು ದಿನ ಆದ್ರೂ ಇನ್ನೂ ಒಣಗಿಲ್ಲ. ಅಲ್ಲೇ ಮೊಳಕೆ ಬಂದ್ರೂ ಬರಬಹುದು ಅನ್ನೋ ಅನುಮಾನವೂ ಇದೆ.
ಕರಾವಳಿಯವರಿಗೆ ಈ ತರದ ಮಳೆಗಾಲ ಹೊಸತೇನೂ ಅಲ್ಲ. ಆದ್ರೆ ಈ ಸಲ ಮಾತ್ರ ಹಿಂದೆಂದೂ ಕಾಣದ ಹಾಗೆ ಚಚ್ಚಿ ಬಾರಿಸ್ತಾ ಇರೋದಂತೂ ಹೌದು. ನಮ್ಮಲ್ಲಿ ಎಂಥಾ ಜಡಿಮಳೆ ಬಂದ್ರೂ, ಬಂದು ಅರ್ಧ ತಾಸಿಗೆ ಹಾಗೆ ಮಳೆಯಾದ ಯಾವ ಸುಳಿವೂ ಇರುವುದಿಲ್ಲ. ಬಿಸಿಲು ಬಂದರಂತೂ ಕೇಳುವುದೇ ಬೇಡ, ಮೈಯೆಲ್ಲ ಬೆವರಿಳಿಯಲು ಶುರುವಾಗಿ, ಫ್ಯಾನು ಚಾಲೂ ಆಗಲೇಬೇಕು. ಎಂಥಾ ನೆರೆ ಬಂದರೂ ಹತ್ತೇ ನಿಮಿಷಕ್ಕೆ ಮತ್ತೆ ಎಲ್ಲ ಮಾಮೂಲಾಗಿ, ಅರೇ ಮಳೆ ಬಂದಿದ್ದು ಹೌದಾ ಅನ್ನಿಸಿಬಿಡುತ್ತದೆ. ಅದೇ ಮಲೆನಾಡಿನಲ್ಲಿ ಹತ್ತು ನಿಮಿಷ ಹೊಯ್ದ ಮಳೆ ವಾರಕ್ಕಾಗುವಷ್ಟು ಕೆಸರು, ಥಂಡಿ ಕೊಟ್ಟು ಹೋಗುತ್ತದೆ. ಆದರೆ ಈ ಸಲ ನಮ್ಮಲ್ಲೂ ಅದೇ ಕಥೆಯಾಗಿದೆ. ಗದ್ದೆಗಳಿಗೆ ಏರಿದ ತೋಡಿನ,ಹೊಳೆಯ ನೀರು, ಅಜ್ಜಿಯ ಸೊಂಟವೇರಿ ಕೂತ ಮೊಮ್ಮಗುವಿನಂತೆ ಹಠ ಮಾಡುತ್ತಿದೆ, ಕೆಳಗೆ ಇಳಿಯುತ್ತಲೇ ಇಲ್ಲ. ಮಧ್ಯಾಹ್ನದ ಹನ್ನೆರಡು ಗಂಟೆಗೂ ಸಂಜೆಗಪ್ಪು. ಜಡಿಮಳೆಯ ಪಿರಿಯಡ್ಡು ಮುಗಿದ ಕೂಡಲೇ ಕುಂಭದ್ರೋಣದ ಕ್ಲಾಸು, ಆಮೇಲೆ ಮುಸಲಧಾರೆಯ ತರಗತಿ.
ಹೋದ ವರ್ಷದ ಮಳೆಯನ್ನ ನಂಬಿ, ಅದೇ ಲೆಕ್ಕಾಚಾರದಲ್ಲಿದ್ದವರನ್ನ ಈ ಮಳೆಗಾಲ ಬೇಸ್ತು ಬೀಳಿಸಿದೆ. ಹಪ್ಪಳದ ಹಲಸುಗಳೆಲ್ಲ ಮರದಲ್ಲೇ ಕೊಳೆತಿವೆ. ಕೊಟ್ಟಿಗೆಯ ತರಗಲೆ ಹಾಡಿಯಲ್ಲೇ ಬಾಕಿ. ಕಾಡ ಕಟ್ಟಿಗೆಗಳಲ್ಲಿ ಹಸಿರು ಪಾಚಿ. ಒಣಗಿದ ಮಡಲುಗಳು ತೋಟದಲ್ಲೇ ಇವೆ. ಡಬ್ಬಗಳಲ್ಲಿ ಹೋದ ವರ್ಷದ್ದೇ ಹಪ್ಪಳ ಸಂಡಿಗೆ ಒಣಮೀನುಗಳು ಎಷ್ಟಿವೆಯೋ, ಅಷ್ಟೇ ಲಾಭ. ಅಪ್ಪನಿಗೆ, ತೆಂಗಿನ ಮರ ಹತ್ತುವವರಿಲ್ಲದೇ ಒಣಗಿದ ಕಾಯಿಗಳೆಲ್ಲ ನೀರಲ್ಲಿ ತೇಲಿ ಹೋಗುತ್ತಿರುವ ಚಿಂತೆ. ಶಂಕರ ಭಟ್ಟರ ನೇಜಿಗೆಂದು ನೆನೆಸಿಟ್ಟ ಭತ್ತ, ಗದ್ದೆಯ ನೀರಿಳಿಯುವುದನ್ನೇ ಕಾಯುತ್ತ ಗೋಣುದ್ದ ಎದ್ದು ನಿಂತಿವೆ. ರಾತ್ರಿಗೆ ಒಂಚೂರು ಮಳೆ ಬಂದರೆ, ಗದ್ದೆಗೆ ಸ್ವಲ್ಪವಾದರೂ ನೀರಾಗುತ್ತದೆ ಎಂದು ನಂಬಿದ್ದ ಇಜಿನ್ ಸಾಯ್ಬರು, ತೋಡಿಗೆ ಒಡ್ಡು ಕಟ್ಟಿದ್ದರು, ಬೆಳಗ್ಗೆ ಎದ್ದು ನೋಡಿದರೆ ಒಡ್ಡು ಕಿತ್ತು ಎಲ್ಲೋ ಹೋಗಿದೆ. ಅವರ ಗದ್ದೆ ಬಿಡಿ, ಮುಂದಿನ ಮೂರುಮುಕ್ಕಾಲು ಎಕರೆಯ ಎಲ್ಲ ಹೊಲಗಳೂ ಒಂದಾಗಿ ಸರೋವರವಾಗಿದೆ. ಬೆಟ್ಟು ಗದ್ದೆ, ಬಿತ್ತಿದರೆ ಸಾಕು ಎಂದುಕೊಂಡಿದ್ದ ಫೆರ್ನಾಂಡಿಸರ ಗದ್ದೆಯ ಅಷ್ಟೂ ಭತ್ತ, ಹೇಳ ಹೆಸರಿಲ್ಲದೇ ಕೊಚ್ಚಿಕೊಂಡು ಹೋಗಿದೆ.
ಆದರೆ ಈ ಮಳೆಯಿಂದಾಗಿ ಏಡಿ ಹಿಡಿಯುವವರಿಗೆ, ತೋಡಲ್ಲಿ ಗಾಳ ಹಾಕಿ ಮೀನು ಹುಡುಕೋರಿಗೆ, ಗದ್ದೆಗಳಿಗೆ ಏರಿ ಬಂದ ನೀರಲ್ಲಿನ ಮೀನು ಕಡಿಯುವವರಿಗೆ ಕೈ ತುಂಬಾ ಕೆಲಸ. ತೋಟದಲ್ಲಿ ಮಳೆ ಹೊಡೆತಕ್ಕೆ ಕಂಗಾಲಾಗಿ ನಿಂತ ಕೆಸುವಿನೆಲೆಗಳು, ಅಕ್ಕಿ ಮೆಣಸು ಹುಳಿ ಇತ್ಯಾದಿಗಳ ಹದ ಮಿಶ್ರಣದಲ್ಲಿ ಹಬೆಯಲ್ಲಿ ಬೆಂದು ಪತ್ರೊಡೆಯಾಗುತ್ತಿವೆ. ಉಪ್ಪಲ್ಲಿ ನೆನೆಸಿಟ್ಟ ಹಲಸು, ಬೇಳೆಗಳ “ಉಪ್ಪಡಚ್ಚೀರ್” ನಿಂದ ತಯಾರಾಗುವ ಖಾದ್ಯಗಳ ರುಚಿಯನ್ನ, ಬಲ್ಲವನೇ ಬಲ್ಲ. ಇಲ್ಲಿಯವರೆಗೆ ಸದ್ದು ಗದ್ದಲವಿಲ್ಲದೇ ಸುಮ್ಮನೇ ಇದ್ದ ಹಿತ್ತಲ ಸೊಪ್ಪುಗಳೆಲ್ಲ ಅಡುಗೆ ಮನೆಯೊಳಗೆ ಬಂದು ಸಾಂಬಾರಿನಿಂದ ತೊಡಗಿ ಬೋಂಡಾಗಳವರೆಗೆ ತಮ್ಮ ಸಾಮ್ರಾಜ್ಯವನ್ನ ವಿಸ್ತರಿಸುತ್ತಿವೆ.
ಈಬಾರಿಯ ಅಚಾನಕ್ ಮಳೆ, ಒಂದು ರೀತಿಯ ಸಂತಸವನ್ನು ಎಲ್ಲೆಡೆ ತಂದಿರುವುದಂತೂ ಹೌದು. ಬಿಡದೇ ಅಬ್ಬರಿಸುತ್ತಿರುವುದಕ್ಕೆ, “ಎಂತಾ ಚ್ವರೆ ಮಾರಾಯ” ಎಂದು ಬೈದುಕೊಂಡರೂ, ಖುಷಿ ಇದ್ದೇ ಇದೆ. ದಕ್ಷಿಣೋತ್ತರ ಕನ್ನಡಗಳ ಎಲ್ಲ ನದಿಗಳೂ ತುಂಬಿ ಹರಿಯುತ್ತಿವೆ. ಮೀನುಗಾರರ ದೋಣಿಗಳು ಮಾತ್ರ ಸಮುದ್ರದ ದಡದಲ್ಲಿ ವಿಶ್ರಾಂತಿ ಪಡೆಯುತ್ತ ಯಾವಾಗ ಮತ್ತೆ ಅಲೆಗಳಿಗೆ ಇಳಿದೇವು ಎಂದು ಕಾಯುತ್ತಿವೆ. ಆದರೆ ಸಂತಸದ ಜೊತೆಗೆ, ಬೇಸರವೂ ಇದ್ದೇ ಇದೆ. ಹುಚ್ಚು ಮಳೆಗೆ ಸೂರು ಕಳೆದುಕೊಂಡವರು,  ಕಡಲ ಕೊರೆತಕ್ಕೆ ಆಹುತಿಯಾದ ಮನೆಗಳವರು, ಜೀವದ ಸ್ನೇಹಿತನೇ ನೀರೊಳಗೆ ಕೊಚ್ಚಿ ಹೋಗುತ್ತಿದ್ದುದನ್ನು ನೋಡಿಯೂ ಅಸಹಾಯಕರಾಗಿ ನಿಂತವರು..ಇವರಿಗೆಲ್ಲ ಈ ಮಳೆಗಾಲ ಸುರಿಸುತ್ತಿರುವುದು ಸೂತಕದ ನೀರು. ಮುಂದಿನ ಮಳೆಗಾಲದ ಹೊತ್ತಿಗಾದರೂ ಇವರೆಲ್ಲರ ಬದುಕಿಗೆ ಹೇಗಾದರೂ ಖುಷಿಯ “ವರ್ಷ” ಮರಳಿ ಬರಲಿ .

(ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಿತ)