ಮಂಗಳವಾರ, ಅಕ್ಟೋಬರ್ 19, 2010

ಬದುಕೆಂಬ ರಂಗೋಲಿ

ಉಷೆಯೆದ್ದು ನಸುಕಿನಲಿ,
ಮಂಜಿನಲಿ ಮುಖ ತೊಳೆದು
ಭ್ರೂ ಮಧ್ಯದಲಿ ರವಿಯ ಸಿಂಧೂರವಿಟ್ಟು
ಬಣ್ಣದಾ ಬಟ್ಟಲನು ಕೈಗಳಲಿ ಹಿಡಿದು
ನಗುಮೊಗದಿ ಬಂದಿಹಳು ಜಗದ ಹೆಬ್ಬಾಗಿಲಿಗೆ
ಚಿತ್ತ ಭಿತ್ತಿಯ ಮೇಲೆ ಚಿತ್ತಾರವಿಡಲು

ಎಳೆದಂತೆ ಆಕೃತಿಯು
ಜೀವಿಗಳೆ ಚುಕ್ಕಿಗಳು, ಅನುರಾಗದೆಳೆ ಎಳೆಯು
ನೂರಾರು ಚುಕ್ಕೆಗಳ ಮಧ್ಯೆ ಹೊಳಪಿನ ಚುಕ್ಕಿ
ಸೊಗಸಾಗಿ ರಚಿಸುವಳು ಚುಕ್ಕೆಗಳ ಬಳ ಬಳನೆ
ಎಳೆಯಾಯ್ತು ಚಿತ್ತಾರ ಬಂಧಾನುಬಂಧ

ಚಿತ್ರ ಮುಗಿದರೂ ಮತ್ತೆ,
ಹೊರಗೆ ಕೆಲ ಚುಕ್ಕಿಗಳು
ಸುತ್ತಿ ಎಳೆಯುತ ಬಂಧ ಬರೆವ ಸಡಗರದಲ್ಲಿ
ಇಟ್ಟ ಚುಕ್ಕೆಯ ಇವಳು ಮರೆತಿಹಳೋ ಎಂತೋ ?
ಇಟ್ಟು ಚುಕ್ಕಿಯ, ಮತ್ತೆ ಬಿಟ್ಟಿದ್ದು ಏಕೋ ?
ಚಿತ್ರವಾಗದ ಚುಕ್ಕಿ ಇಟ್ಟಿದ್ದು ಹೇಗೋ ?

ಹೊರಗುಳಿದರೇನಾಯ್ತು
ಕಣ್ಣೆದುರು ಮಿಂಚುತಿದೆ
ಚಿತ್ತಾರಕೇಂದ್ರದೊಳು ನಿಂತ ಹೊಳೆ ಚುಕ್ಕೆ
ಎಳೆಗಳಾ ಬಂಧದಲಿ ನಗುವ ಬಿಂದು
ಹೆಬ್ಬಾಗಿಲಲಿ ನಿಂತು ಶುಭವ ಹಾರೈಸಿದರೆ
ತುಂಬು ಮನಸಿನ ಹರಕೆ ಕೇಳೀತು ಒಳಗೆ !


-ಭಾರತಿ ಹೆಗಡೆ, ಸಿದ್ದಾಪುರ
(ನಿಮ್ಮ ಅನಿಸಿಕೆಗಳನ್ನು ನನ್ನ ಅತ್ತೆಗೆ ತಲುಪಿಸಲಾಗುವುದು)