ಸೋಮವಾರ, ಆಗಸ್ಟ್ 07, 2017

ಧಾರಾವಾಹಿಗಳಿಗೆ ಬರೆಯೋದು ಹೇಗೆ?

               ಪ್ರಾಯಶಃ ಧಾರಾವಾಹಿಗಳನ್ನು ನೋಡದ ಮಂದಿಯೇ ಇಲ್ಲವೇನೋ. ಬೇಕೋ ಬೇಡವೋ, ಮನೆಯಲ್ಲಿ ಟೀವಿ ಇದೆ ಎಂದ ಮೇಲೆ ಮುಗಿಯಿತು ಬಿಡಿ, ಸೀರಿಯಲ್ಲುಗಳ ಮಾಯಾಜಾಲದಲ್ಲಿ ನೀವು ಕೂಡ ಬಂಧಿಯಾಗೇ ಇರುತ್ತೀರಿ. ಅಥವ ನಿಮ್ಮ ಪ್ರೀತಿಪಾತ್ರರು ಯಾರೋ ಧಾರಾವಾಹಿಗಳಿಗೆ ಅಂಟಿಕೊಂಡಿರುತ್ತಾರೆ ಕೂಡ. ಕನ್ನಡದಲ್ಲೇ ದಿನಕ್ಕೀಗ ಸುಮಾರು ಐವತ್ತಕ್ಕೂ ಹೆಚ್ಚಿನ ಧಾರಾವಾಹಿಗಳು ನಿತ್ಯ ಪ್ರಸಾರ ಕಾಣುತ್ತವೆ. ಪ್ರೈಮ್ ಟೈಮ್ ಮನರಂಜನೆಯ ನಿತ್ಯ ಸರಕು, ಸೀರಿಯಲ್ಲುಗಳದೇ ಆಗಿದೆ. ಸಂಜೆ ಆರು ಗಂಟೆಯಿಂದ ಹನ್ನೊಂದು ಗಂಟೆಯವರೆಗಿನ ಥರಹೇವಾರಿ ಕಥೆಗಳ ಲೋಕ, ಬರವಣಿಗೆಯ ಒಂದು ಪ್ರಮುಖ ಪ್ರಕಾರ ಕೂಡ ಆಗಿದೆ. ನಿತ್ಯವೂ ಇಷ್ಟೆಲ್ಲ ಸೀರಿಯಲ್ ಗಳು ಪ್ರಸಾರ ಕಾಣುತ್ತಿದೆ ಎಂದ ಮೇಲೆ- ಅಲ್ಲಿನ ಪಾತ್ರಗಳ ಬಾಯಲ್ಲಿ ಬರುವ ಸಂಭಾಷಣೆಯನ್ನ ಬರೆಯೋರು- ಚಿತ್ರಕಥೆಯನ್ನು ಬರೆಯೋರು ಕೂಡ ಅತ್ಯಂತ ಮುಖ್ಯವಾಗುತ್ತಾರೆ. ಯಾವ ಸಾಫ್ಟ್ ವೇರ್ ಇಂಜಿನಿಯರ್ ಗೆ ಕಡಿಮೆ ಇಲ್ಲದ ಸಂಬಳ ಕೂಡ ಈ ವಿಭಾಗದಲ್ಲಿದೆ ಎಂದರೆ ಅಚ್ಚರಿಯಾಗುವುದೇನೋ?

ಧಾರಾವಾಹಿ ಪ್ರಪಂಚ:
           ಬರವಣಿಗೆಯನ್ನು ಹವ್ಯಾಸಕ್ಕಷ್ಟೇ ಸೀಮಿತವಾಗಿಡದೇ, ಅದರಲ್ಲೇ ಹೊಟ್ಟೆಪಾಡನ್ನೂ ನೋಡಿಕೊಂಡು ಬೆಳೆಯುತ್ತೇನೆ ಎಂದು ನಿರ್ಧರಿಸಿದವರಿಗೆ ಹೊಸ ಹೊಸ ಅವಕಾಶಗಳು ಖಂಡಿತಕ್ಕೂ ತೆರೆದುಕೊಳ್ಳುತ್ತವೆ. ಸಿನಿಮಾ, ಧಾರಾವಾಹಿಗಳ ಚಿತ್ರಕಥೆ/ಸಂಭಾಷಣೆ ಬರೆಯುವುದು, ಅವುಗಳಲ್ಲೊಂದು.  ಪ್ರತಿದಿನ ಪ್ರಸಾರವಾಗುವ ಧಾರಾವಾಹಿಗಳಿಗೆ ಆಕರ್ಷಕವಾಗಿ ಚಿತ್ರಕಥೆಯನ್ನೂ- ಸಂಭಾಷಣೆಯನ್ನೂ ಹೊಸೆಯುವ ಮಂದಿಗೆ ಬೇಡಿಕೆ ಇದ್ದೇ ಇದೆ. ಸಮಯಕ್ಕೆ ಸರಿಯಾಗಿ, ನೋಡುಗರನ್ನೂ ಗಮನದಲ್ಲಿರಿಸಿಕೊಂಡು ಸೊಗಸಾಗಿ ಬರೆಯುವವರನ್ನು ಈ ಕ್ಷೇತ್ರ ಎಂದಿಗೂ ನಿರಾಕರಿಸದು. ಶ್ರದ್ಧೆಯಿಂದ ಬರೆಯುತ್ತೇನೆ ಎಂಬ ಕೆಚ್ಚಿನ ಜೊತೆಗೆ, ಸರಿಯಾದ ಸಿದ್ಧತೆ ಬೇಕು ಅಷ್ಟೇ.
ಕನ್ನಡ ಕಿರುತೆರೆ, ಈಗ ಹಿಂದೆಂದೂ ಕಂಡು-ಕೇಳದಷ್ಟು ಮಟ್ಟಕ್ಕೆ ಬೆಳೆದಿದೆ, ಸಿನಿಮಾಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಧಾರಾವಾಹಿ ಸಂಚಿಕೆಗಳು ನಿರ್ಮಾಣಗೊಳ್ಳುತ್ತಿವೆ. ಕರ್ನಾಟಕದ ಆಚೆಗೆ- ವಿದೇಶಗಳಲ್ಲೂ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾದಲ್ಲಿ ನಟಿಸಿದ- ನಾಯಕ ನಾಯಕಿಯರು ಸೀರಿಯಲ್ ಕ್ಷೇತ್ರಕ್ಕೆ ಮರಳಿ ಬರುತ್ತಿದ್ದಾರೆ. ನೋಡುಗರ ಸ್ಪಂದನೆಯೂ ಚೆನ್ನಾಗಿದ್ದು ವಾಹಿನಿಗಳು ಕೂಡ ಜನರ ಮನಸ್ಥಿತಿಗೆ ಸ್ಪಂದಿಸುತ್ತ ಹೊಸ ಬಗೆಯ ಸೀರಿಯಲ್ಲುಗಳನ್ನ ನಿರ್ಮಾಣ ಮಾಡುವತ್ತ ಮುಂದಾಗುತ್ತಿವೆ.
             ಹೀಗಾಗಿಯೇ, ಬರವಣಿಗೆಯ ಮೇಲೆ ಹಿಡಿತ ಇರುವ ಬರಹಗಾರರಿಗೆ ನೆಲೆ ಕಂಡುಕೊಳ್ಳಲು ಇದೊಂದು ಉತ್ತಮ ಜಾಗ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಒಂದಾದ ಮೇಲೊಂದು ಧಾರಾವಾಹಿಗಳನ್ನು ನಿರ್ಮಿಸುವ ಮತ್ತು ಪ್ರಸಾರ ಮಾಡುವ ಒತ್ತಡದಲ್ಲಿರುವ ಮನರಂಜನಾ ವಾಹಿನಿಗಳು ಸದಾ ಕಾಲ ಬರಹಗಾರರ ಹುಡುಕಾಟದಲ್ಲಿರುತ್ತವೆ. ಏಕೆಂದರೆ ಎಷ್ಟೇ ಅದ್ಭುತವಾದ ನಿರ್ಮಾಣ- ಝಗಮಗಿಸುವ ಸೆಟ್ಟುಗಳು-ಎಲ್ಲ ಇದ್ದರೂ, ಧಾರಾವಾಹಿಯೊಂದರ ಆತ್ಮ ಇರುವುದು, ಅದರ ಬರವಣಿಗೆಯಲ್ಲೇ. ಅದರಲ್ಲಿ ಸತ್ವ ಇಲ್ಲವಾದರೆ, ಸೀರಿಯಲ್ ಒಂದು ಗೆಲ್ಲಲಾರದು.

ಅಧ್ಯಯನ ಅಗತ್ಯ
         ಹೀಗೆಂದ ಮಾತ್ರ ನಾಳೆ ಬೆಳಗಾಗೆದ್ದು ಸೀರಿಯಲ್ ಬರೆದುಬಿಡುತ್ತೇನೆ ಎಂದು ಎದ್ದು ಹೊರಟರೆ ಸಾಧ್ಯವಿಲ್ಲ. ಸರಿಯಾದ ಅಧ್ಯಯನ ಇದ್ದರೆ ಮಾತ್ರ ಇಲ್ಲಿ ಯಶಸ್ಸು ಸಾಧ್ಯ. ಇಲ್ಲವಾದರೆ ಬಂದ ದಾರಿಗೆ ಸುಂಕವಿಲ್ಲ- ಎಂಬ ಹಾಗೆ ಮನೆಯ ಹಾದಿ ಹಿಡಿಯಬೇಕಾಗುತ್ತದೆ. ಪ್ರತಿ ದಿನ ಕೂಡ ಸುಮಾರು ಹದಿನೈದರಿಂದ ಇಪ್ಪತ್ತು ಪುಟಗಳ ಸಂಭಾಷಣೆಯನ್ನು ಬಿಟ್ಟೂ ಬಿಡದಂತೆ ಬರೆಯುವ ತಾಳ್ಮೆ ನಿಮಗಿದೆಯೇ ಎಂಬ ಪ್ರಶ್ನೆಯನ್ನು ಮೊದಲು ಕೇಳಿಕೊಳ್ಳಿ, ಇಲ್ಲ ಎಂಬ ಉತ್ತರ ಬಂದರೆ, ಈ ಕ್ಷೇತ್ರ ನಿಮಗೆ ಹೇಳಿ ಮಾಡಿಸಿದ್ದಲ್ಲ, ಬಿಟ್ಟುಬಿಡಿ. ದಿನಂಪ್ರತಿ ಸುಮಾರು ಎಂಟರಿಂದ ಹತ್ತು ದೃಶ್ಯಗಳ ಚಿತ್ರೀಕರಣ ನಡೆದೇ ನಡೆಯುತ್ತದೆ ಮತ್ತು ಅದಕ್ಕಾಗಿ ಮೇಲೆ ಹೇಳಿದಷ್ಟು ಪುಟಗಳನ್ನ ಬರೆದೇ ತೀರಬೇಕಿರುತ್ತದೆ. ಇದು, ಇಲ್ಲಿರಬೇಕಾದ ಅತ್ಯಂತ ಮುಖ್ಯ ಅರ್ಹತೆಗಳಲ್ಲೊಂದು.
 ಕವಿತೆಯೊಂದನ್ನು ಸೂಕ್ಷ್ಮವಾಗಿ ಕೆತ್ತಿದಂತಹ ನಿಧಾನ, ಇಲ್ಲಿಗೆ ಸಲ್ಲುವುದಿಲ್ಲ. ಜನಮನವನ್ನು ಮುಟ್ಟುವ ಸಮರ್ಥ ಸಂಭಾಷಣೆಯನ್ನು ಬರೆಯುವ ಜೊತೆಗೆ- ಅದನ್ನ ಹೆಚ್ಚಿನ ಪ್ರಮಾಣದಲ್ಲಿ ಬರೆಯಬೇಕಾದ ಅನಿವಾರ್ಯತೆ ಇರುವುದು ಇಲ್ಲಿನ ವಾಸ್ತವ. ಅದನ್ನ ಧಿಕ್ಕರಿಸಿ ಹೋಗಲು ಸಾಧ್ಯವೇ ಇಲ್ಲ. ಹೀಗಾಗಿಯೇ ಬಹಳ ಮಂದಿ ಇಲ್ಲಿ ಸೋಲುವ ಅಪಾಯ ಇದೆ. ಹೆಚ್ಚು ಹೆಚ್ಚು ಓದಿಕೊಂಡಷ್ಟೂ- ಸಿನಿಮಾಗಳನ್ನ/ಧಾರಾವಾಹಿಗಳನ್ನ ನೋಡಿದಷ್ಟೂ ಬರಹಗಾರನ ಜ್ಞಾನ ಹೆಚ್ಚುತ್ತದೆ. ಆಗ ಹೆಚ್ಚಿನ ಪುಟಗಳ ಸಂಭಾಷಣೆಯನ್ನೂ ಸಲೀಸಾಗಿ ಬರೆಯುವುದು ಸಾಧ್ಯ. ಏನನ್ನೇ ಓದಿಕೊಂಡರೂ, ನೋಡಿದ್ದರೂ- ಅದನ್ನೆಲ್ಲ ಬಹಳ ಸರಳವಾಗಿ ತಲುಪಿಸಬೇಕಾದ್ದು ಮುಖ್ಯ. ಗ್ರಾಂಥಿಕವಾದ,ಸಟ್ಟನೆ ಅರ್ಥವಾಗದ- ಬಹಳ ಗಂಭೀರವಾದ ಸಂಭಾಷಣೆಗಳು ನೋಡುಗರಿಗೆ ಅಷ್ಟೊಂದಾಗಿ ರುಚಿಸದು. ಇನ್ನುಕೆಲ ಬಾರಿ ಅಭಿನಯಿಸುವ ಪಾತ್ರಧಾರಿ- ಆತನ/ಆಕೆಯ ಸಂಭಾಷಣೆ ಹೇಳುವ ಪರಿಯನ್ನೂ ಗಮನಿಸಿಕೊಂಡು ಬರೆಯುವುದು ಮುಖ್ಯವಾಗುತ್ತದೆ.

ಆರಾಮಾಗಿರೋ ಸೀನೇ ಇಲ್ಲ!
              ನಿಮಗೆ ಜ್ವರ ಬಂದಿದ್ದರೂ, ಮದುವೆ ಸೀನಿನ ಡೈಲಾಗು ನಾಳೆಗೆ ಬೇಕು ಎಂದ ಮೇಲೆ- ಮುಗಿದೇ ಹೋಯಿತು. ಶತಾಯಗತಾಯ ಅದನ್ನ ಬರೆದು ಕಳಿಸಲೇಬೇಕು. ಏಕೆಂದರೆ ನಟರೂ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ಜನ, ಸಂಭಾಷಣಕಾರ ಬರೆದು ಕಳಿಸುವ ಸೀನಿಗಾಗಿ ಸೆಟ್ ನಲ್ಲಿ ಕಾಯುತ್ತಿರುತ್ತಾರೆ. ಇದನ್ನ ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕಾಗಿರುವ ಆ ಹೊತ್ತಿನ ಅಗತ್ಯ. ಬಹಳ ಮಂದಿಗೆ, ಫ್ರೀಲ್ಯಾನ್ಸ್ ಬರಹಗಾರರು ಎಂದ ಮೇಲೆ- ಅಯ್ಯೋ ಬಿಡಯ್ಯ ಮಜಾ ಮಾಡ್ಕೊಂಡ್ ಇರ್ತಾರೆ, ಯಾವಾಗಲೂ ಫ್ರೀ ಟೈಮು ಎಂಬ ತಪ್ಪು ಕಲ್ಪನೆಯೊಂದಿದೆ. ಆರಾಮಾಗಿರಬಹುದು ಎಂದೇನಾದರೂ ಈ ಫೀಲ್ಡನ್ನ ಆರಿಸಿಕೊಳ್ಳುವ ಆಸೆಯಿದ್ದರೆ ಅದರಿಂದ ಹೊರಗೆ ಬನ್ನಿ! ಇದು ರಜೆಯೇ ಇಲ್ಲದ, ಮುನ್ನೂರ ಅರವತ್ತೈದು ದಿನ ಕೂಡ ಕೆಲಸವನ್ನು ಬೇಡುವ ಜಾಗ. ಹೊತ್ತಲ್ಲದ ಹೊತ್ತಿನಲ್ಲಿ ಹೊಸದೊಂದು ದೃಶ್ಯ ಬರೆದುಕೊಡುವ ಕರೆ ಬರುತ್ತದೆ. ಭಟ್ಕಳದ ಬಸ್ ಸ್ಟ್ಯಾಂಡಿನಿಂದ ತೊಡಗಿ, ಹಿಮಾಲಯದ ನದೀ ದಡದಲ್ಲಿ ಕೂತು ಕೂಡ ಸಂಭಾಷಣೆ ಬರೆದು ಕಳಿಸುವ ಅನಿವಾರ್ಯತೆಗೆ ನಾನೇ ಸಿಲುಕಿದ್ದೇನೆ. ನಿಮ್ಮ ಯಾವುದೇ ಜಂಜಡಗಳಲ್ಲಿ ನೀವು ಸಿಲುಕಿಕೊಂಡಿದ್ದರೂ- ಆ ಸಮಸ್ಯೆ ಸೀನ್ ಪೇಪರ್ ನಲ್ಲಿ ಕಾಣಿಸಬಾರದು! ್ಹಗಲು ರಾತ್ರಿಗಳ ಪರಿವೆ ಇಲ್ಲದೆಯೇ ಲ್ಯಾಪ್ ಟಾಪ್ ಮುಂದೆ ಕೂತು ಸೀನು ಕಟ್ಟುವ ಕೆಲಸ ಮಾಡುವ ಉಮೇದು ಇಲ್ಲಿ ಇರಲೇಬೇಕಾದ್ದು ಅವಶ್ಯಕ. ಹಾಗೆಂದು ನಿತ್ಯವೂ ಹೀಗೇ ಕೆಲಸವೇ ಎಂದುಕೊಳ್ಳಬೇಡಿ-ಖಂಡಿತ ಅಲ್ಲ. ಆದರೆ- ಈ ಅಂಚನ್ನೂ ತಿಳಿದುಕೊಂಡಿರಬೇಕಾದ್ದು ಅಗತ್ಯ.

ಬರೆಯುವ ಮುನ್ನ:
             ಧಾರಾವಾಹಿಯ ಸಂಭಾಷಣೆಕಾರನಾದವನು, ಚಿತ್ರಕಥೆಯನ್ನು ಬರೆಯುವವರ ಜೊತೆಗೆ ಹಾಗೂ ನಿರ್ದೇಶಕನ ಜೊತೆಗೆ ಉತ್ತಮ ಸಂವಹನ ಹೊಂದಿರಬೇಕು. ಕತೆಯ ಬಗ್ಗೆ ಸ್ಪಷ್ಟವಾದ ಕಲ್ಪನೆ ಇದ್ದು, ಧಾರಾವಾಹಿಯು ಎತ್ತ ಸಾಗುತ್ತಿದೆ ಎನ್ನುವ ಅರಿವನ್ನ ಇಟ್ಟುಕೊಂಡಿರಬೇಕು. ಪಾತ್ರಗಳು-ಅವುಗಳ ಮಿತಿಯನ್ನ ಅರಿತುಕೊಂಡಿರಬೇಕು. ಯಾವ ಸನ್ನಿವೇಶ ಮುಖ್ಯವಾದದ್ದು- ಯಾವುದು ಅನಗತ್ಯ ಎನ್ನುವ ಜಾಣ್ಮೆ ಹೊಂದಿರಬೇಕಾದ್ದೂ ಅಗತ್ಯವೇ. ಪ್ರತೀ ದೃಶ್ಯದಲ್ಲೂ ಚುರುಕಾದ, ನೋಡುಗ- ಅರೇ ಎನ್ನುವಂತಹ ಸಂಭಾಷಣೆಯನ್ನು ಕಟ್ಟಿಕೊಡುವ ಪ್ರಯತ್ನವೂ ಇರಬೇಕು. ಹೀಗಿದ್ದಾಗ ಒಬ್ಬ ಉತ್ತಮ ಸಂಭಾಷಣೆಕಾರನಾಗಲು ಸಾಧ್ಯವಿದೆ.

ಚಿತ್ರಕಥೆ:
               ಸಂಭಾಷಣೆ ವಿಭಾಗ ನನಗೆ ಹೇಳಿ ಮಾಡಿಸಿದ್ದಲ್ಲ, ಆದರೆ ನಾನೊಬ್ಬ ಒಳ್ಳೆಯ ಕತೆಗಾರ ಅನ್ನುವ ಯೋಚನೆ ಇರುವವರು ಚಿತ್ರಕಥೆ ಬರೆಯುವುದರ ಬಗ್ಗೆ ಗಮನಹರಿಸಬಹುದು. ವಾಹಿನಿಗಳು ಒದಗಿಸುವ, ಅಥವ ನಿರ್ದೇಶಕನ ಮನದಲ್ಲಿರುವ ಕಥೆಯನ್ನ ವಿಸ್ತರಿಸಿ ಬರೆಯುವ ಶಕ್ತಿಯಿದ್ದಲ್ಲಿ, ಚಿತ್ರಕಥೆ ಬರೆಯುವುದು ಒಳಿತು. ಪ್ರತೀ ಸಂಚಿಕೆಗಳಿಗೆ ರೋಚಕವಾಗಿ ಸ್ಕ್ರೀನ್ ಪ್ಲೇ ಬರೆಯುವುದು ಕೂಡ ಬಹಳ ಆಸಕ್ತಿದಾಯಕ ವಿಷಯ. ನಿತ್ಯವೂ ಕೂತು ಬರೆಯುವ ಅಗತ್ಯ ಇಲ್ಲದೇ ಹೋದರೂ ಕೂಡ ಚಿತ್ರಕಥೆಯನ್ನ ಕಟ್ಟುವುದು ತುಂಬ  ಒತ್ತಡದ ಕೆಲಸ. ಧಾರಾವಾಹಿಯ ಮುಂದಿನ ಹರಿವನ್ನು ನಿರ್ಧರಿಸಬೇಕಾದ ಅನಿವಾರ್ಯತೆ ಚಿತ್ರಕಥೆಗಾರನಿಗಿರುತ್ತದೆ. ಪಾತ್ರಗಳು ಹುಟ್ಟುವುದೂ-ಸಾಯುವುದೂ ಈತನ ಕೈಯಲ್ಲೇ! ಬಹಳಷ್ಟು ಧಾರಾವಾಹಿಗಳು ಪ್ರಸಾರವಾಗುತ್ತಿರುವುದರಿಂದ, ಹೊಸತನವನ್ನು ಕಾಯ್ದುಕೊಳ್ಳುವುದೂ ಮುಖ್ಯವಾಗುತ್ತದೆ. ಚಿತ್ರಕಥೆಯನ್ನ ಬರೆಯುವವನು ಸುತ್ತ ನಾಲ್ಕು ವಾಹಿನಿಗಳ ಧಾರಾವಾಹಿಗಳನ್ನೂ ಗಮನಿಸುತ್ತ- ಅವುಗಳಿಗಿಂತ ಭಿನ್ನವಾದ ಕಥಾಹಂದರವನ್ನು ಹುಟ್ಟುಹಾಕಬೇಕಾಗುತ್ತದೆ.
ನೋಡುಗರ ಅಭಿಪ್ರಾಯಕ್ಕೆ ತಕ್ಕ ಹಾಗೆ ಕಥೆಯನ್ನು ಬದಲಾಯಿಸುವ ಅನಿವಾರ್ಯತೆ ಕೆಲ ಬಾರಿ ಬಂದೊದಗುತ್ತದೆ. ಅಂದುಕೊಂಡ ಮಟ್ಟಕ್ಕೆ ಧಾರಾವಾಹಿ ನೋಡುಗನ ಮನಮುಟ್ಟದೇ ಹೋದರೆ, ಕಥೆಗೊಂದು ಹೊಸ ತಿರುವನ್ನ ಕೊಡುವುದು ಚಿತ್ರಕಥೆ ಬರೆವಾತನ ಕೆಲಸ. ಅದೂ ಅಲ್ಲದೇ, ತಕ್ಕನಾದ ರೇಟಿಂಗ್ ಬರದೇ ಹೋದರೆ ಆಗ ಕೂಡ ಕಥೆಯ ದಿಕ್ಕನ್ನ ಬದಲಾಯಿಸಬೇಕಾದ್ದು ಈತನದೇ ಜವಾಬ್ದಾರಿ.
ಇನ್ನೂ ಇದೆ!
             ಕೇವಲ ಧಾರಾವಾಹಿಗಳು ಮಾತ್ರವಲ್ಲದೇ ಮನರಂಜನಾ ವಾಹಿನಿಗಳಲ್ಲಿ ಇನ್ನೂ ಹಲ ಬಗೆಯ ಬರಹಗಾರರಿಗೆ ಅವಕಾಶವಿದೆ. ನಾನ್ ಫಿಕ್ಷನ್ ಶೋಗಳು- ರಿಯಾಲಿಟಿ ಶೋ ಗಳು ಕೂಡ ಬರಹಗಾರರನ್ನ ಪೋಷಿಸುತ್ತವೆ. ಡ್ಯಾನ್ಸ್ ಶೋ ಇರಲಿ, ಕಾಮಿಡಿ ಅಥವಾ ಟಾಕ್ ಶೋ ಇರಲಿ- ಅಥವಾ ಯಾವುದೇ ಬಗೆಯ ವಾರಾಂತ್ಯದ ವಿಶೇಷ ಕಾರ್ಯಕ್ರಮಗಳಿರಲಿ- ಎಲ್ಲದಕ್ಕೂ ಬರಹವೇ ಬೆನ್ನೆಲುಬು! ಯಾವನೇ ಸೆಲೆಬ್ರಿಟಿಯೊಬ್ಬ ವೇದಿಕೆ ಮೇಲೆ ನಿಂತು ಮಾತನಾಡುತ್ತಿದ್ದಾನೆ ಎಂದರೆ- ಆತನ ಹಿಂದೊಬ್ಬ ರೈಟರು ಕೂತಿದ್ದಾನೆ ಎಂತಲೇ ಲೆಕ್ಕ!
             ಇದರ ಜೊತೆಗೀಗ ಬೆಳೆಯುತ್ತಿರುವ ಯೂಟ್ಯೂಬ್-ವೀಡಿಯೋ ಅಪ್ಲಿಕೇಶನ್ ಗಳಿಂದಾಗಿ ಶಾರ್ಟ್ ಫಿಲಂ ಗಳು- ವೆಬ್ ಸೀರೀಸ್ ಗಳನ್ನ ಮಾಡುವ ಹೊಸ ಆಸಕ್ತಿ ಕೂಡ ಬೆಳೆಯುತ್ತಿದೆ. ಬರವಣಿಗೆಯನ್ನೇ ವೃತ್ತಿಯಾಗಿಸಿಕೊಳ್ಳುವ ಆಸಕ್ತಿ ಇರುವವರಿಗೆ ಇವುಗಳು ಕೂಡ ಉತ್ತಮ ಮಾರ್ಗವೇ. ಡಾಕ್ಯುಮೆಂಟರಿಗಳಿಗೆ ಸ್ಕ್ರಿಪ್ಟ್ ಬರೆಯುವುದು-ಸ್ವತಂತ್ರವಾಗಿ ಕಾರ್ಯಕ್ರಮಗಳನ್ನ ನಿರ್ಮಿಸಿ ವಾಹಿನಿಗಳಿಗೆ ಒದಗಿಸುವುದು- ಇವೇ ಮೊದಲಾದ ಸಾಧ್ಯತೆಗಳು ಕೂಡ ಬರಹಗಾರನಾದವನಿಗಿದೆ.

ದಯವಿಟ್ಟು ಗಮನಿಸಿ:
             ಇಷ್ಟೆಲ್ಲ ಓದಿದ ಮೇಲೆ ಬರವಣಿಗೆಯನ್ನ ಪ್ರವೃತ್ತಿಯಿಂದ ವೃತ್ತಿಗೆ ಬದಲಾಯಿಸಿಕೊಳ್ಳುವ ಆಸಕ್ತಿ ಕೆಲವರಿಗಾದರೂ ಬಂದಿರಬಹುದು. ಆದರೆ ಮೇಲೆ ಹೇಳಿದ ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಸಂಬಂಧಪಟ್ಟ ನಿರ್ಮಾಪಕರ ಬಳಿ ಸಂಬಳದ ಬಗ್ಗೆ ಸರಿಯಾಗಿ ಮಾತನಾಡಿ! ಈ ಕ್ಷೇತ್ರಕ್ಕೆ ಬರುವ ಬಹಳ ಮಂದಿಯನ್ನ ಅನುಭವ ಸಿಗುತ್ತದೆ, ಕೆಲಸ ಮಾಡಿ. ನಾವು ಕೊಡೋದೇ ಇಷ್ಟು ಕಣ್ರೀ ಮಾಡೋದಾದರೆ ಮಾಡಿ ಎಂದು ಜೀತಕ್ಕೆ ಹಚ್ಚುವ ಮಂದಿಯೂ ಇದ್ದಾರೆ. ಹೀಗಾಗಿ ಫ್ರೀಲ್ಯಾನ್ಸರಾಗಿ ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ಗಳಿಕೆಯ ಬಗ್ಗೆ ಸ್ಪಷ್ಟವಾದ ನಿಲುವನ್ನು ಹೊಂದಿ. ಇಲ್ಲದೇ ಹೋದರೆ ನಿಮ್ಮ ಕೆಲಸಕ್ಕೆ ತಕ್ಕ ಸಂಬಳ ಸಿಗದೇ ನಿರಾಶೆ ಹೊಂದುವ ಸಾಧ್ಯತೆಯೂ ಇದೆ.

              ಕೊನೆಯದಾಗಿ- ನಿಮ್ಮ ಬರವಣಿಗೆಯ ಮೇಲೆ ನಿಮಗೆ ನಂಬಿಕೆ ಇದೆ ಎಂದಾದರೆ ಖಂಡಿತವಾಗಿಯೂ ಇದನ್ನ ವೃತ್ತಿಯಾಗಿ ಸ್ವೀಕರಿಸಬಹುದು. ಏಕೆಂದರೆ ನಿಮ್ಮ ಜ್ಞಾನ ನಿಮ್ಮ ಕೈಬಿಡದು! ಎಂದಿಗೂ. 

ಮಂಗಳವಾರ, ಆಗಸ್ಟ್ 01, 2017

ಛಾಯಾಗ್ರಹಣವೆಂಬ ಕ್ಷಣ ಕ್ಷಣದ ಧ್ಯಾನ

“It is an illusion that photos are made with the camera… they are made with the eye, heart and head.” – Henri Cartier-Bresson

ತಾನು ಸ್ಥಿರವಾಗಿದ್ದೂ, ನೋಡುಗನ ಬದುಕನ್ನ ಅಲುಗಾಡಿಸಬಲ್ಲ ವಿಶಿಷ್ಠ ಶಕ್ತಿ ಛಾಯಾಗ್ರಹಣಕ್ಕಿದೆ. ಕಾಲಪ್ರವಾಹದಲ್ಲಿ ಮಿಂಚಿ ಮರೆಯಾಗಬಹುದಾಗಿದ್ದ ಕ್ಷಣವೊಂದನ್ನು ಅನಂತವಾಗಿ ಸೆರೆಹಿಡಿದಿಡಬಲ್ಲ ಈ ಅನ್ಯೂಹ್ಯ ಕ್ರಿಯೆಯೇ ಒಂದು ಅಚ್ಚರಿ. ಭೂತಕಾಲದ ಕಿಟಕಿ, ವರ್ತಮಾನದ ಕನ್ನಡಿ ಮತ್ತು ಭವಿಷ್ಯತ್ತಿಗೆ ಬಾಗಿಲು ಛಾಯಾಗ್ರಹಣ.ಸೂಕ್ಷ್ಮ ಗಮನಿಸುವಿಕೆಗಳ ಮೂಲಕ  ಏಕಾಗ್ರತೆಯನ್ನ ಹೆಚ್ಚಿಸುವ, ಪ್ರಕೃತಿಯೊಡನೆ ನಾವೂ ಪ್ರಕೃತಿಯೇ ಆಗಿಬಿಡುವ ಸಾಧ್ಯತೆ ಇರುವ, ನಿರಂತರ ಪ್ರಯೋಗಗಳ ಮೂಲಕ ನಮ್ಮನ್ನ ನಾವು ಅರಿತುಕೊಳ್ಳುವಂತೆ ಮಾಡುವ ಶಕ್ತಿ ಫೋಟೋಗ್ರಫಿಗಿದೆ.  ನೆರಳು ಬೆಳಕುಗಳ ಬೆರಗಿನಾಟವು ಅಂತರಂಗವನ್ನು ಮುಟ್ಟುವ, ತಟ್ಟುವ ಮತ್ತು ಆ ಮೂಲಕ ಮನಸ್ಸಿನ ಕವಾಟವನ್ನು ತಣ್ಣಗೆ ತೆರೆಯುವ ಛಾಯಾಗ್ರಹಣವು ಧ್ಯಾನವೇ ಹೌದು.
            ಫೋಟೋಗ್ರಫಿಯನ್ನ ನಾನೆಂದೂ ಹವ್ಯಾಸವಾಗಿಯೇ ಪರಿಗಣಿಸಿದವನಾಗಿರಲಿಲ್ಲ. ನನ್ನ ಮೊದಲ ಆಸಕ್ತಿ ಕೂಡ ಅದಾಗಿರಲಿಲ್ಲ. ಆದರೆ ಮೆತ್ತಗೆ ಅದಾಗಿಯೇ ನನ್ನನ್ನ ಆವರಿಸಿಕೊಂಡಿತು. ಬದುಕನ್ನ ನೋಡುವ ಹೊಸದೊಂದು ಸಾಧ್ಯತೆಯನ್ನು ಕ್ಯಾಮರಾದ ಕಣ್ಣು ಕಲಿಸಿಕೊಟ್ಟಿತು. ಯಾವುದೋ ಬೆಟ್ಟದಲ್ಲಿ ಮರವೊಂದರಲ್ಲಿ ತನಗೆ ತಾನೇ ತೊನೆದುಕೊಳ್ಳುತ್ತಿರುವ ಪಾಚಿಕಟ್ಟಿಕೊಂಡಿರುವ ಗಂಟೆ, ನೀಲಿಹೂವೊಂದರ ಮೇಲೆ ಕೂತಿರುವ ದುಂಬಿ, ಸೂರ್ಯನೆದುರಾಗಿ ಕುಳಿತು ಬೆಳಕನ್ನೇ ಆಪೋಶನ ತೆಗೆದುಕೊಳ್ಳುವಂತೆ ಕೂತಿರುವ ಸನ್ಯಾಸಿ, ಹುಲ್ಲುಗರಿಕೆ ಹಾರುಹಕ್ಕಿ ನಭದ ಚುಕ್ಕಿ ಒಂದೇ ಎರಡೇ! ಎಂದು ನಾನು ಹಾರುವ ಚಿಟ್ಟೆಗಳ ಹಿಂದೆ ಹೋಗುತ್ತ ಹೋಗುತ್ತ ಧ್ಯಾನಸ್ಥ ಸ್ಥಿತಿಯನ್ನ ಅನುಭವಿಸಿದ್ದೆನೋ, ಅಂದೇ ಅಂದುಕೊಂಡೆ, ಇದು ನನ್ನೊಡನೆ ಇರಲೆಂದೇ ಬಂದಿದೆ!

           ಒಂದಂತೂ ಹೌದು. ಛಾಯಾಗ್ರಹಣವೆಂದರೆ ಕೇವಲ ಸಾಧನವೊಂದನ್ನು ಬಳಸಿ- ಚಿತ್ರವೊಂದನ್ನು ತೆಗೆಯುವ ಬರಿದೆ ತಾಂತ್ರಿಕ ಕಾರ್ಯವಂತೂ ಅಲ್ಲ. ನಮ್ಮನ್ನ ಮತ್ತೊಂದೇ ವಿಶ್ವಕ್ಕೆ ಕರೆದೊಯ್ಯುವ, ಇಂದ್ರಿಯಗಳ ಹಂಗನ್ನ ಮೀರಿದ ಅನುಭೂತಿ. ಚಿತ್ರವೊಂದನ್ನ ತೆಗೆಯುತ್ತಿರುವ ಆ ಕ್ಷಣದಲ್ಲಿ- ಆ- ಆ ಫಕ್ಕನೆ ಮಿಂಚಿ ಮರೆಯಾಗುವ ಸೆಕೆಂಡಿನಷ್ಟು ಕಾಲದಲ್ಲಿ ನಾವು, ನಾವಾಗಿರುವುದಿಲ್ಲ. ನಮ್ಮ ಗುರಿ, ಕನಸುಗಳು, ಶತ್ರುಗಳು ಮಿತ್ರರು ಬ್ಯಾಂಕ್ ಬ್ಯಾಲೆನ್ಸು ನಾಳಿನ ಚಿಂತೆ – ಯಾವುದೂ ಕೂಡ ಆ ಒಂದು ದಿವ್ಯ ಘಳಿಗೆ ನಮ್ಮ ಮನದೊಳಗೆ ಇರುವುದಿಲ್ಲ. ಆ ಕ್ಷಣಕ್ಕೆ ಅದೊಂದು ಖಾಲಿ ಕ್ಯಾನ್ ವಾಸ್. ಈಗಷ್ಟೇ ತೆಗೆದ ಚಿತ್ರವನ್ನು ತನ್ನೊಳಗೆ ಇಳಿಸಿಕೊಳ್ಳಲು ಸಿದ್ಧವಾಗಿರುವ ಹಾಳೆ. ನಿಮ್ಮ ಸುತ್ತಲಿನ ಸಂತೆಯ ಮಧ್ಯದಲ್ಲೂ ನೀವು ನೀವಾಗಷ್ಟೇ ಉಳಿದಿರುವ ಆನಂದದ ಚಣ ಅದು. ಹೊರ ಜಗತ್ತಿನ ಜೊತೆಗೆ ಆತ್ಮಸಂಪರ್ಕ ಕಡಿದು ಹೋಗಿ ಪುಟ್ಟ ನಿರ್ವಾತ ಉಂಟಾಗುವ ಹೊತ್ತು. ಅಲ್ಲಿ  ನಾನು ಮಾತ್ರವೇ ಇದ್ದೇನೆ ಮತ್ತು ನನಗೆ ಮಾತ್ರ ಅಲ್ಲೇನಾಗುತ್ತಿದೆ ಎನ್ನುವುದು ಗೊತ್ತು. ಕ್ಯಾಮರಾದ ವ್ಯೂ ಫೈಂಡರೊಳಗೆ ನನ್ನನ್ನು ನಾನು ಕಂಡುಕೊಳ್ಳುವ ಈ ಮಾಯೆಯೇ ಧ್ಯಾನವಲ್ಲವೇ?

             ಹಿಂದು ಮುಂದುಗಳ ಚಿಂತೆಯಿಲ್ಲದೇ ಈ ಕ್ಷಣದಲ್ಲಿ ಬದುಕಬೇಕೆನ್ನುವ ಯೋಗಿಗಳು ಕಂಡುಕೊಂಡ ಸತ್ಯವನ್ನೇ ಛಾಯಾಗ್ರಹಣ ಹೇಳಿಕೊಡುತ್ತದೆ! ಕಣ್ಣೆದುರಿಗಿನ ಘಟನೆಯೊಂದನ್ನು ಸಾಕ್ಷಿಪ್ರಜ್ಞೆಯಂತೆ ಗಮನಿಸುತ್ತ ಅದನ್ನು ದಾಖಲಿಸಿಕೊಳ್ಳುವ ಪುಣ್ಯವೂ ದೊರಕುವ ಈ ಹವ್ಯಾಸಕ್ಕೆ ಎಣೆಯೇ ಇಲ್ಲ! ಕ್ಯಾಮರಾದ ಹಿಂದಿನ ಧ್ಯಾನದಲ್ಲಿ ನಾನು ಬದುಕನ್ನ ಬದಲಿಸಬಲ್ಲ ಕ್ಷಣಗಳನ್ನ ಕಂಡುಕೊಂಡಿದ್ದೇನೆ. ಈಗ ತಾನೇ ಅರಳಿದ ಹೂವು, ಇನ್ನೇನು ಕರಗಿ ಹೋಗಲಿರುವ , ಆದರೂ ಮಿನುಗುತ್ತಿರುವ ಇಬ್ಬನಿಯ ಬಿಂದು, ಕಣ್ಣೆದುರೇ ಬಣ್ಣ ಬದಲಿಸುತ್ತಿರುವ ಆ ಮಾಯಾವಿ ಗೋಸುಂಬೆ, ಯಾವ ಚಿಂತೆಯೂ ಇಲ್ಲದೇ ಮಧು ಹೀರುತ್ತಿದ್ದ ಮಿಡತೆಯೊಂದನ್ನ ಸಟಕ್ಕನೆ ಹಿಡಿದು ನುಂಗಿದ ಹಸಿರು ಹಾವು- ಇವೆಲ್ಲವೂ ನಮ್ಮದೇ ಜೀವನದ ಬೇರೆ ಬೇರೆ ಅಧ್ಯಾಯಗಳನ್ನ ನಮ್ಮೆದುರಿಗೆ ತೆರೆದು ತೋರಿಸುತ್ತ ಕ್ಯಾಮರಾದೊಳಗೆ ಬಂಧಿಯಾಗುತ್ತ- ಬದುಕಿನ ಆತ್ಯಂತಿಕ ಸತ್ಯಗಳನ್ನ ಹೇಳುತ್ತವೆ. ಕೈಯೊಳಗೆ ಕ್ಯಾಮರಾ ಇಲ್ಲದೇ ಹೋಗಿದ್ದರೆ ಖಂಡಿತಕ್ಕೂ ಇವನ್ನೆಲ್ಲ ನಾನು ಗಮನಿಸುತ್ತಲೇ ಇರಲಿಲ್ಲ! ಪ್ರಾಯಶಃ ಕ್ಯಾಮರಾ ಎಂಬೀ ಸಲಕರಣೆ ಆಧುನಿಕ ಯೋಗಿಯೇ ಸರಿ! ಆ ಹೊತ್ತಿನಲ್ಲಿ- ಅಲ್ಲಿ- ಇದ್ದುಕೊಂಡು ಸುಮ್ಮಗೆ ನಡೆಯುತ್ತಿರುವ ಒಂದು ಪುಟ್ಟ ಸುಂದರ ನೈಸರ್ಗಿಕ ಕ್ರಿಯೆಗೆ ಸಾಕ್ಷಿಯಾಗುವುದರಲ್ಲಿರುವ ಭಾವವನ್ನ ಅಕ್ಷರದಲ್ಲಿ ಹಿಡಿದಿಡಲಾರದು. ಸಾಧ್ಯವಿಲ್ಲದ ಮಾತದು.

               ಸಾಗರದ ಅಲೆಗಳ ಮುಂದೆ ನಿಂತು, ಅವುಗಳ ಆಗಮನ ನಿರ್ಗಮನಕ್ಕೆ ತಕ್ಕ ಹಾಗೆ ನಮ್ಮ ಉಸಿರೂ ಕೂಡ ಬದಲಾಗುವ ಸತ್ಯವನ್ನು ನಾನು ಕಂಡುಕೊಂಡಿದ್ದೇನೆ. ಮಳೆ ಹನಿಗಳ ತೊಟ್ಟಿಕ್ಕುವಿಕೆಯಲ್ಲಿನ ಸಂಗೀತ, ಹುಲ್ಲ ಎಲೆಯೊಂದರ ಮೃದುತ್ವ, ಮರಕ್ಕಂಟಿಕೊಂಡ ಪಾಚಿಯ ಹರಡುವಿಕೆಯಲ್ಲೂ ಅಡಗಿರುವ ಚಿತ್ರ, ಹಿನ್ನೀರ ಮರದ ತುಂಬ ತಾವೇ ಎಲೆಯಂತೆ ಕುಳಿತ ಹಕ್ಕಿಗಳ ಹಿಂಡು-ಒಂದೇ ಎರಡೇ? ಕ್ಯಾಮರಾ ಇಲ್ಲದೆಯೂ ಇವೆಲ್ಲವೂ ಕಾಣುತ್ತವೆ, ಅನುಭವಿಸಬಹುದು ಎಂದು ಹೇಳುವವರಿಗೆ ನನ್ನದೊಂದೇ ಉತ್ತರ. ಹೆಗಲ ಮೇಲೆ ಕ್ಯಾಮರಾ ಇದ್ದ ಕಾರಣಕ್ಕೆಯೇ ಇವೆಲ್ಲವನ್ನು ಹುಡುಕಿ ಹೊರಟಿದ್ದು ನಾನು! ಇಲ್ಲವಾದರೆ ಅವೆಲ್ಲ ಅವರ ಪಾಡಿಗೆ ಇದ್ದಲ್ಲೇ ಇರುತ್ತಿದ್ದವು, ನೋಡಲು- ಮತ್ತು ಆ ಕ್ಷಣ ಸೆರೆ ಹಿಡಿಯಲು ಅಲ್ಲಿ ನಾನು ಇರುತ್ತಿರಲಿಲ್ಲ, ಅಷ್ಟೇ.
ಜಂಗಮ ಜೀವನಕ್ಕೆ ಕ್ಯಾಮರಾಕ್ಕಿಂತ ಒಡನಾಡಿ ಬೇರೆ ಇಲ್ಲ. ಕಳೆದ ಹತ್ತು ವರುಷಗಳಲ್ಲಿ ಫೋಟೋಗಳನ್ನ ತೆಗೆಯುವ ಆಸೆಗೆ ಹಿಮಾಲಯದ ವರೆಗೂ ಹೋಗಿ ಬಂದ ನನಗೆ ಆದ ಅನುಭವಗಳೆಷ್ಟೋ, ದೊರಕಿದ ಸ್ನೇಹಿತರೆಷ್ಟೊ. ನನ್ನ ಕುಬ್ಜತನ ಏನು, ಎಂಥ ಹುಲುಮಾನವ ನಾನು ಎಂಬುದು ಅರ್ಥವಾಗಿದ್ದರೆ, ಅದಕ್ಕೆ ನನ್ನ ಈ ಛಾಯಾಗ್ರಹಣದ ಹವ್ಯಾಸವೇ ಮುಖ್ಯ ಕಾರಣ. ಉದ್ದುದ್ದ ಚಾಚಿಕೊಂಡಿರುವ ಹಿಮಪರ್ವತದೆದುರು ನಿಂತು ನೋಡಿದಾಗ, ಈ ನನ್ನ ಪುಟ್ಟ ಪೆಟ್ಟಿಗೆಯೊಳಗೆ ದಕ್ಕುವ ಹಿಮಾಲಯವಷ್ಟೇ ನನ್ನ ಹಿಮಾಲಯ- ದಕ್ಕದ್ದು ಅಗಾಧ ಎಂಬರ್ಥವಾಗಿ ನೆಲಕ್ಕೆ ಮತ್ತೂ ಹತ್ತಿರವಾಗುವ ಬಯಕೆ ತಾನಾಗೇ ಮೂಡುತ್ತದೆ.

              ನಮ್ಮ ಕಲ್ಪನೆಗಳಿಗೆ ರೆಕ್ಕೆ ಮೂಡಿಸುವ ಈ ಹವ್ಯಾಸದ ಇನ್ನೊಂದು ಬಹುಮುಖ್ಯ ಅಂಶವೆಂದರೆ, ಹತ್ತಿರವಾಗುವ ಕ್ರಿಯೆ. ನಿಸರ್ಗದ ಜೊತೆಗೋ, ಜೊತೆಗಿರುವ ಒಡನಾಡಿಗಳ ಜೊತೆಗಿನ ಸಂಸರ್ಗವನ್ನು- ಫೋಟೋಗ್ರಫಿ ಇನ್ನಷ್ಟು ಹತ್ತಿರವಾಗಿಸುತ್ತವೆ. ಒಂದು ಮುಗ್ಧ ಕಿರುನಗೆ, ಕಣ್ಣ ಮಿಂಚು- ನಿಮ್ಮನ್ನ ಸೆಳೆಯುವ ಬಗೆಯೇ ಬದಲಾಗುತ್ತದೆ! ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಕಗ್ಗದ ಮಾತು ಸಗ್ಗ ಎನ್ನುವುದು ಅರ್ಥವಾಗುತ್ತದೆ. ಜನಜಂಗುಳಿಯ ಮಧ್ಯೆ ನಿಂತು ಕ್ಯಾಮರಾ ಕ್ಲಿಕ್ಕಿಸುವುದು ನನಗೆ ಅತ್ಯಂತ ಇಷ್ಟ ಕೊಡುವ ಕೆಲಸ. ಚಹದಂಗಡಿಯ ಹುಡುಗ, ಕಸ ಗುಡಿಸುತ್ತಿರೋ ಆ ಹೆಂಗಸು, ಚಪ್ಪಲಿ ಹೊಲಿಯುತ್ತಿರುವ ವೃದ್ಧ, ಹಸ್ತಸಾಮುದ್ರಿಕೆ ಹೇಳುತ್ತಿರುವ ಜ್ಯೋತಿಷಿ- ಅರೆರೆ! ನಮ್ಮ ಮಧ್ಯೆಯೇ ಎಷ್ಟೊಂದು ಜಗತ್ತುಗಳಿವೆ! ಸುಮ್ಮಗೆ ಹಾದು ಹೋಗುವಾಗ ಎಂದೂ ಕಾಣದ ಇವರುಗಳು ಯಾರೂ- ಕ್ಯಾಮರಾ ಕೈಗೆ ಬಂದ ಕೂಡಲೇ ಜೀವಂತವಾದಂತೆ ಕಾಣುತ್ತಾರೆ. ಮತ್ತು ಹೀಗೆ ಕಂಡು ಹಾಗೆ ಮರೆಯಾಗುವುದರ ಒಳಗೆ ಅವರ ಕಥೆಗಳನ್ನೂ ನಮ್ಮೊಳಗೆ ಇಳಿಸಿ ಹೋಗಿಬಿಡುತ್ತಾರೆ.
ಈ ಎಲ್ಲ ಕಾರಣಗಳಿಗಾಗಿ ನನ್ನ ಪಾಲಿಗೆ ಕ್ಯಾಮರಾ ಒಂದು ಧ್ಯಾನದ ಸಲಕರಣೆಯೇ.              ಅದಿಲ್ಲವಾಗಿದ್ದರೆ ನಾನು ಎಷ್ಟೆಲ್ಲ ಕಲಿಕೆಯನ್ನು ಕಳೆದುಕೊಂಡು ಬಿಡುತ್ತಿದ್ದೆನೋ ಏನೋ. ಬದುಕಿನ ಒಪ್ಪಓರಣಗಳನ್ನ ಮಾತ್ರವಲ್ಲದೇ ಓರೆಕೋರೆಗಳನ್ನೂ ಈ ಪುಟ್ಟ ಯಂತ್ರ ಎತ್ತಿ ಹಿಡಿದು ಸರಿದಾರಿಯನ್ನ ತೋರಿಸುತ್ತದೆ. ಸುಖದಂತೆಯೇ ದುಃಖವನ್ನೂ ಸೆರೆ ಹಿಡಿಯುತ್ತದೆ. This too Shall Pass- ಎಂಬ ಮಾತನ್ನ ವಿರೋಧಿಸಲೋ ಎಂಬಂತೆ- ಮರೆಯಾಗುವ ಮಾಂತ್ರಿಕ ಕ್ಷಣವನ್ನು ಹಿಡಿದಿಟ್ಟು ಬೀಗುತ್ತದೆ! 
            ಮುಗಿಸುವ ಮುನ್ನ, ಒಂದು ಘಟನೆಯನ್ನ ಹಂಚಿಕೊಳ್ಳಲೇ ಬೇಕು. ಹೀಗೇ ಎಲ್ಲೋ ಹೋಗಿದ್ದಾಗ- ದಾರಿಯಲ್ಲೊಬ್ಬರು ವೃದ್ಧೆ ಯಾರದೋ ಬಳಿ ಏನನ್ನೋ ಮಾತನಾಡುತ್ತಿದ್ದರು. ಅವರ ಮಾತಿನಲ್ಲಿ ದೈನ್ಯವಿತ್ತು- ವಿನಂತಿಯಿತ್ತು. ಪಾಪ ಎದುರಿಗಿದ್ದವರ ಬಳಿ ಏನೋ ಕಷ್ಟ ಹಂಚಿಕೊಳ್ಳುತ್ತಿದ್ದರು. ಸುಮ್ಮನೆ ಕೊಂಚ ದೂರ ನಿಂತೇ ಅವರ ಚಿತ್ರವನ್ನ ಕ್ಲಿಕ್ಕಿಸುತ್ತಿದ್ದೆ. ನಾನು ಫೋಟೋ ತೆಗೆಯುವುದನ್ನ ನೋಡಿದ ಆಕೆಯ ಮುಖಚರ್ಯೆ ಬದಲಾಯಿತು. ನಾನು ಏನೂ ಕೇಳದೆಯೇ ಇದ್ದರೂ- ಅವರಾಗೇ  “ ನಮ್ಮ ಕಷ್ಟ ಪಟದಲ್ಲಿ ಯಾಕೆ ಗೊತ್ತಾಗ್ಬೇಕು ಹೇಳಿ” ಎಂದು ಅಮಾಯಕವಾಗಿ ನಕ್ಕು ಬಿಟ್ಟರು. ಈಗ ಫೋಟೋ ತೆಗೆ-ಎಂಬ ಹಾಗೆ. ಆ ನಕ್ಕ ಕ್ಷಣದಲ್ಲಿತ್ತು ಬದುಕಿನ ಸಾರ್ಥಕತೆ. ಧ್ಯಾನವನ್ನೂ ಮೀರಿದ ಭಾವ. ಮತ್ತು ಅಂತಹ ಭಾವಗಳೇ ಮತ್ತೆ ಹೊಸ ನಡಿಗೆಗೆ ಪ್ರೇರೇಪಿಸುವ ಉದ್ದೀಪನದ ಮದ್ದು!


 ವಿಶ್ವವಾಣಿಯ ಗುರು ಪುರವಣಿಯಲ್ಲಿ ಪ್ರಕಟಿತ