ಬುಧವಾರ, ಜುಲೈ 23, 2008

ಒಂದು ಮಳೆ ನಿಂತ ಮಧ್ಯಾಹ್ನ..

ಒಂದು ಮಳೆ ನಿಂತ ಮಧ್ಯಾಹ್ನ
ಅವಳು ಸಿಕ್ಕಳು, ಅನಿರೀಕ್ಷಿತವಾಗಿ
ಆಗ ತಾನೆ ಬಂದ ಮಳೆಯಂತೆ.

ಮಾತಾಡಲಿಲ್ಲ ಇಬ್ಬರೂ, ಘಳಿಗೆ
ಅವಳ ಕಣ್ಣಲ್ಲಿ ನೀರು ಕಂಡಂತಾಯಿತು
ಘಟಿಸಿದ ಭೂತಕ್ಕೆ ಶ್ರದ್ಧಾಂಜಲಿಯೆಂಬಂತೆ

ಹೊರಟೆವು ಮುಂದೆ, ಮಾತೇನೂ ಆಡದೆ
ಹೊರಡುವ ಮುನ್ನ ಅವಳ ಕೈ ಸೋಕಿತು
ಕಳೆದ ದಿವ್ಯಗಳ ಕೊನೆ ಝಲಕಂತೆ

ನಾಲ್ಕೆಂಟು ಹೆಜ್ಜೆಗಳಾದ ಮೇಲೆ ತಿರುಗಬೇಕೆನಿಸಿತು
ತಿರುಗಲಿಲ್ಲ, ಏನೂ ಘಟಿಸದು, ಗೊತ್ತು..ಆದರೂ,
ಅವಳ ಬೆನ್ನು ನೋಡುವ ಧೈರ್ಯವಿಲ್ಲ.

ಗುರುವಾರ, ಜುಲೈ 10, 2008

ತುಂಡು ಸಾಲುಗಳು

ಸ್ತ್ರೀ ಸ್ವಾತಂತ್ರ್ಯದ ಬಗ್ಗೆ
ಬರೆವ ಹುಡುಗಿ,
ಬೇರಾರದೋ
ಮನೆಯಲಿದ್ದೇನೆ, ಅವರೆದುರು ಮಾತಾಡಲು
ಒಂಥರಾ ಅನ್ನುವ
ಕಾರಣಕ್ಕೆ ಫೋನು
ರಿಸೀವ್ ಮಾಡಲಿಲ್ಲ.

ಗೆಜ್ಜೆಗಳೆಂದರೆ ರೋಮಾಂಚನ, ಮಧುರ
ಪ್ರೇಮ ಸಂಕೇತ
ಅಂತ ಕವಿತೆ ಬರೆಯುವ
ಹುಡುಗ
ಕದ್ದು ಸೇರುವಾಗ
ಅವಳ ಬಳಿ
"ಗೆಜ್ಜೆ ತೆಗೆದಿಡು
ಸದ್ದಾಗುತ್ತದೆ" ಅಂದ.

ತೂತಿನಾಚಿಗೆ ಏನು
ನಡೆಯುತ್ತಿದೆ
ಅಂತ
ಕಣ್ಣು ಕಿರಿದಾಗಿಸಿ
ಆ ಕಡೆ ನೋಡಿದರೆ,
ಇನ್ನೊಂದು ಕಣ್ಣು ಕಂಡಿತು!

ಗುರುವಾರ, ಜುಲೈ 03, 2008

ತಿರುವಿನ ಮನೆ ಹುಡುಗಿ

ನಿತ್ಯ ಸಾಗುವ ದಾರಿ,ತಿರುವಿನಲಿ ಅವಳ ಮನೆ
ಕತ್ತುಹೊರಳುವುದತ್ತ ಅಭ್ಯಾಸ ಬಲವು
ಅವಳಿಲ್ಲ ಈಗಲ್ಲಿ, ತಿಳಿದಿಹುದು ನನಗು ಅದು
ನೆನಪಾಗುವುದು ನಿತ್ಯ ಒಲವ ಚೆಲುವು

ಅಂದೊಂದು ಕಾಲದಲಿ ಆ ಮನೆಯು ನಂದನವು
ನವಿಲ ನರ್ತನದಂತೆ ಅವಳ ನಡಿಗೆ
ಆ ತಿರುವ ದಾರಿಯಲಿ ಜನರ ಸಂದಣಿ ನಿತ್ಯ
ನಡೆವ ಕಾಲುಗಳೆಲ್ಲ ಆ ಮನೆಯ ಕಡೆಗೇ

ಅಂಥ ಸುಂದರಿ ಆಕೆ,ದೇವಲೋಕದ ಹುಡುಗಿ
ಹುಚ್ಚಾಗಲೇಬೇಕು ಎಂಥವರು ಕೂಡ
ಅವಳ ನಲ್ನುಡಿಗಾಗಿ ಕಾಯುತಿದ್ದರು ಎಲ್ಲ
ಮಾತಾಡಿದಳೋ!,ಖುಷಿಯ ಕೇಳುವುದೆ ಬೇಡ

ಆಕೆಗೂ ತಿಳಿಯಿತು ತನ್ನ ಚೆಲುವಿನ ಬಗೆಯು
ಚೆಲುವಿಗೂ ಅಹಮಿಗೂ ಬೇಗ ಸ್ನೇಹ
ಸೌಂದರ್ಯವಿದ್ದೀತು ನಾಲ್ಕೆಂಟು ವರುಷಗಳು
ಕಾಲಸಾಗಿದ ಹಾಗೆ ಕಾಯುವುದೆ ದೇಹ?

ಹಾಗಂದುಕೊಂಡೊಡನೆ, ಮತ್ತೆ ಅಲ್ಲಿರಲಿಲ್ಲ
ಹಕ್ಕಿ ಹಾರಿತು ದೂರ, ಪ್ರಚಾರವರಸಿ
ಹಾಗೆ ಹೋದವಳಿಂದಿಗೂ ಬಂದಿಲ್ಲ
ವರುಷ ಸಾಗಿದೆ ನೆನಪ ಪರದೆ ಸರಿಸಿ

ಅವಳ ಮನೆ ಮುಂದೀಗ ಹೂ ಗಿಡವು ನಗದು
ನಗುವು ಕಾಣದು ಮನೆಮಂದಿಯಲ್ಲಿ
ಅಂಗಳದ ತುಂಬೆಲ್ಲ ಚೆಲ್ಲಿಹುದು ತರಗೆಲೆಯು
ಕಳೆದುಹೋಗಿದೆಯಲ್ಲಿ ರಂಗವಲ್ಲಿ

ಅಂದುಕೊಳ್ಳುತ್ತೇನೆ ಬರಬಾರದೇ ಅವಳು
ಮತ್ತೆ ಹುಟ್ಟಿತೀಲ್ಲಿ ನಂದನವನ
ನಗುವ ರಂಗೋಲಿಗಳು ಮರಳಿ ಬಂದೀತಿಲ್ಲಿ
ಪಾಳು ತುಳಸಿಯ ಕಟ್ಟೆ ವೃಂದಾವನ!

ಪ್ರತಿದಿನವು ಅದೆ ಆಸೆ, ತಿರುಗುವುದು ಕೊರಳು
ಬದಲಿರದ ನೋಟ, ಯಾಕೋ ಬೇಸರವು
ಮನದ ಯೋಚನೆಯಲ್ಲ ಸತ್ಯವಾಗಬೇಕಿಲ್ಲ
ದೂರದಲಿ ಮುಳುಗುತಿಹ ಸಂಜೆ ನೇಸರನು.