ಮಂಗಳವಾರ, ಮಾರ್ಚ್ 31, 2009

ಹೀಂಗೇ ಸುಮ್ನೆ, ರಿಲಾಕ್ಸ್ ಆಗೋಣ ಅಂತ:)

ಯೇ ಮಹೇಶಾ, ನಾ ಹೇಳ್ಕೊಡ್ತೀನಿ ನೋಡೋ ಹೆಂಗೆ ಅಂತ" ಎಂದು ಯಾವನೋ ಹುಡುಗ ಕೀರಲು ದನಿಯಲ್ಲಿ ಕಿರುಚುವಾಗ ಎಚ್ಚರಾಯಿತು. ದಿನ ಬೆಳಗೂ ಈಗೀಗ ಇದೇ ಆಗಿದೆ. ನಾನೇನೋ ಸ್ವಲ್ಪ ಹೊತ್ತು ಮಲಗೋಣ ಅಂತ ವಿಚಾರ ಮಾಡಿಕೊಂಡು, ಹೊದ್ದು ಮಲಗಿದ್ದರೆ, ಫ್ಯಾನಿನ ಜೋರು ತಿರುಗುವಿಕೆಯನ್ನೂ ಭೇದಿಸಿಕೊಂಡು ಕೆಳಗೆ ಆಟವಾಡುವ ಹುಡುಗರ ದನಿ ಬಂದು ನನ್ನ ಕಿವಿ ಸೀಳುತ್ತದೆ, ಬೆಳಗ್ಗೆ ಎಂಟು ಗಂಟೆಗೇ. ಬೇಸಿಗೆ ರಜೆ ಈಗಾಗಲೇ ಶುರು ಅವರಿಗೆ. ಹಾಗಾಗಿ ಹಬ್ಬ!

ಈಗೊಂದು ತಿಂಗಳಿಂದ ಖಾಲಿ ಹೊಡೆಯುತ್ತಿದ್ದ ರಸ್ತೆ, ಈಗ ಮತ್ತೆ ತುಂಬಿಕೊಂಡು ಬಿಟ್ಟಿದೆ. ನಮ್ಮ ರೋಡಲ್ಲಿ ಸುಮಾರು ಒಂದೇ ವಾರಿಗೆಯ, ಅಂದರೆ ಆರರಿಂದ ಎಂಟೊಂಬತ್ತನೇ ಕ್ಲಾಸಿಗೆ ಹೋಗುವ ಮಕ್ಕಳ ಪುಟ್ಟ ದಂಡೇ ಇದೆ. ಪ್ರಾಯಶ: ಎಲ್ಲರಿಗೂ ಪರೀಕ್ಷೆಗಳು ಮುಗಿದಿರಬೇಕು ಅನ್ನಿಸುತ್ತದೆ, ಹಾಗಾಗಿ ನಮ್ಮ ರಸ್ತೆಯ ಮೇಲಿಂದ ಹೋಗುವ ವಾಹನಗಳೂ ದಾರಿ ಬದಲಿಸಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆಚೆ ಮನೆಯ ಅಂಕಲ್ಲು ತಮ್ಮ ಸ್ವಿಫ್ಟನ್ನ ಮಕ್ಕಳಿಗೆ ಅನುಕೂಲವಾಗಲಿ ಎಂದೋ, ಅಥವ ಗಾಜು ಒಡೆಯದಿರಲಿ ಎಂದೋ, ಪಕ್ಕದ ರಸ್ತೆಯ ಮರದ ಕೆಳಗೆ ನಿಲ್ಲಿಸಿ ಬರುವುದನ್ನು ರೂಢಿಸಿಕೊಂಡಿದ್ದಾರೆ.

ಬೆಳಗ್ಗಿನಿಂದ ಸಂಜೆಯವರೆಗೆ, ಪುರುಸೊತ್ತೇ ಇಲ್ಲದ ಹಾಗೆ, ಒಂದಾದ ಮೇಲೊಂದರಂತೆ ಆಟಗಳೇ ಆಟಗಳು! ಮಧ್ಯಾಹ್ನ ಊಟಕ್ಕೆ ಅವರವರ ಅಮ್ಮಂದಿರು ಕರೆದು, ಆದರೂ ಬರದಿದ್ದಾಗ, ಖುದ್ದು ಸೌಟಿನ ಸಮೇತ ಅವರುಗಳು ರೋಡಿಗೇ ಇಳಿದು ಎಳೆದುಕೊಂಡು ಹೋದಾಗಿನ ಅರ್ಧ ಗಂಟೆ ಮಾತ್ರ ರಸ್ತೆ ಖಾಲಿ ಇರುತ್ತದೆ. ಮತ್ತೆ ಯಥಾ ಪ್ರಕಾರ- ಬಿಸಿಲು,ಮಳೇ ಏನೂ ಲೆಕ್ಕಿಸಿದೇ ಆಟವೋ ಆಟ.

ಬೆಳಗ್ಗೆ ಎಂಟು ಗಂಟೆಗೆ ಮಾಮೂಲಾಗಿ ಕ್ರಿಕೆಟ್ ನಿಂದ ಆಟಗಳ ಸರಣಿ ಆರಂಭವಾಗುತ್ತದೆ. ಏಳೋ, ಒಂಬತ್ತೋ ಹುಡುಗರಿದ್ದಾಗ, ಒಬ್ಬನಿಗೆ ಜೋಕರಾಗುವ ಭಾಗ್ಯ. ಅಂದರೆ ಎರಡೂ ಟೀಮಿಗೆ ಆಡುತ್ತಾನೆ ಅವನು! ಮೊದಮೊದಲು ಜೋಕರಾಗುವುದು ಅಂದರೆ ಬೇಜಾರಾಗುತ್ತಿತ್ತು ಹುಡುಗರಿಗೆ. ಆದರೆ ಈಗ ಜೋಕರು ತಾನಾಗುತ್ತೇನೆ ಅಂತಲೇ ಗಲಾಟೆ ಆರಂಭ. ಏಕೆಂದರೆ ಎರಡೂ ಟೀಮುಗಳಲ್ಲಿ ಬ್ಯಾಟಿಂಗು, ಬೌಲಿಂಗು ಎಲ್ಲ ಸಿಗುತ್ತದೆ, ಯಾರಿಗುಂಟು ಯಾರಿಗಿಲ್ಲ. ಅದಕ್ಕೇ ಈಗ ಜೋಕರಾದವನಿಗೆ ಒಂದು ಟೀಮಲ್ಲಿ ಬೌಲಿಂಗು-ಇನ್ನೊಂದರಲ್ಲಿ ಬ್ಯಾಟಿಂಗು ಅಂತ ಮಾಡಿಕೊಂಡಿದ್ದಾರೆ- ಎಷ್ಟು ದಿನಕ್ಕೆ ಈ ನಿಯಮವೋ, ಗೊತ್ತಿಲ್ಲ.

ಹುಡುಗರು ಕ್ರಿಕೆಟ್ ಆಡುತ್ತಿದ್ದಾರೆ ಅಂದುಕೊಂಡು ಒಳ ಹೋದರೆ, ಹೊರಬರುವಷ್ಟರಲ್ಲಿ ತಟಕ್ಕನೆ ಹೊರಗಿನ ಮಾಹೋಲು ಬದಲಾಗಿ ಬಿಟ್ಟಿರುತ್ತದೆ. ಹತ್ತು ಗಂಟೆಯ ಏರು ಬಿಸಿಲಿಗೆ, ಬ್ಯಾಟು ಬಾಲುಗಳೆಲ್ಲ ಕೇರ್ಲೆಸ್ಸಾಗಿ ಅಲ್ಲೇ ರಸ್ತೇ ಮೇಲೆ ಅನಾಥವಾಗಿ ಬಿದ್ದಿರುತ್ತವೆ. ಏನಾಗುತ್ತಿದೆ ಅಂತ ನೋಡಿದರೆ, ಕಣ್ಣಾಮುಚ್ಚಾಲೆ! ನಾನು ಎರಡನೇ ಮಹಡಿಯಲ್ಲಿರುವುದರಿಂದ, ಯಾರ್ಯಾರು ಎಲ್ಲೆಲ್ಲಿ ಅಡಗಿ ಕೂತಿದ್ದಾರೆ ಅನ್ನುವುದೂ ನಿಚ್ಚಳವಾಗಿ ಕಾಣುತ್ತಿರುತ್ತದೆ.

ಎದುರಿನ ಮನೆಯ ಸಿಡುಕಿ ಮೂತಿ ಅಜ್ಜಿ ದಿನಾ ನೀರು ಹಾಕಿ, ಪೊದೆಯಂತಾಗಿರುವ ದಾಸವಾಳ ಗಿಡದ ಮರೆ, ಖಾಲಿ ಸೈಟಲ್ಲಿ ಪೇರಿಸಿಟ್ಟ ಕಟ್ಟಿಗೆ ರಾಶಿ- ಹೀಗೆ ಈ ಕೀರ್ತನ್ನು, ಮಹೇಶ, ಅನಿತ ಎಲ್ಲರೂ ತಮ್ಮದೇ ಆದ ಸ್ಪೆಷಲ್ಲು ಜಾಗಗಳನ್ನ ಹೊಂದಿದ್ದು, ಅಲ್ಲಲ್ಲಿ ಅವರವರೇ ಅಡಗಿಕೊಂಡಿರುತ್ತಾರೆ. ಅಪ್ಪಿತಪ್ಪಿ ಯಾರಾದರೂ ಇನ್ನೊಬ್ಬರ ಜಾಗಕ್ಕೆ ಹೋಗಿಬಿಟ್ಟರೆ, ಅಲ್ಲೇ ತಿಕ್ಕಾಟ ಆರಂಭವಾಗಿ, ಮೌನವಾಗೇ ಹೊಡೆದಾಡಿಕೊಳ್ಳುತ್ತಾರೆ. ಅದರಲ್ಲೂ ಗುಂಪು ರಾಜಕೀಯ ಬೇರೆ- ತಮ್ಮ ಆಪ್ತರು ಅಡಗಿಕೊಂಡಿದ್ದು ಕಂಡಿದ್ದರೂ, ತಮಗಾಗದವರನ್ನೇ ಹುಡುಕಿ ಔಟ್ ಮಾಡುವ ಕುತಂತ್ರ.

ಕಣ್ಣಾ ಮುಚ್ಚಾಲೆ ಬೇಜಾರು ಬರುವಷ್ಟು ಹೊತ್ತಿಗೆ, ನಾಲ್ಕೆಂಟು ಶಟಲ್ ರ‌್ಯಾಕೆಟ್ಟುಗಳು ಹೊರಬಂದು, ಇಡೀ ರಸ್ತೆಯ ತುಂಬ ಟಕಾಟಕ್ ಸದ್ದಿನ ಅನುರಣನ. ನಮ್ಮ ಕೋರ್ಟ್ಗೆ ನಿಮ್ಮ ಶಟ್ಲು ಬೀಳುವ ಹಾಗಿಲ್ಲ, ನೀನ್ಯಾಕೆ ನನ್ನ ಕೋರ್ಟೊಳಗೆ ಬಂದೆ-ಜಗಳವೋ ಜಗಳ. ಅಷ್ಟು ಹೊತ್ತಿಗೆ ಯಾರಿಗಾದರೂ ಸಂಬಂಧಿಸಿದ ಅಮ್ಮನೊಬ್ಬಳು ಹೊರಬಂದು, ತಮ್ಮ ಮಗನದೋ ಮಗಳದೋ ಹೆಸರಿಡಿದು ಕರೆದು, ಕಣ್ಣು ಬಿಟ್ಟಳು ಅಂದರೆ, ಎಲ್ಲರೂ ಗಪ್ ಚುಪ್.

ಅಷ್ಟೊತ್ತಿಗೆ ಮಧ್ಯಾಹ್ನ ಊಟದ ಸಮಯ. ಈ ಹುಡುಗರು ಊಟ ಮಾಡಿಕೊಂಡು ಬರುವಷ್ಟರಲ್ಲಿ ಒಂದಿಬ್ಬರು ಹುಡುಗಿಯರು ಬಂದು, ರೋಡಲ್ಲೇ ಮನೆಗಳನ್ನು ಹಾಕಿಕೊಂಡು, ಕುಂಟಾಬಿಲ್ಲೆ ಆಡುತ್ತಿರುತ್ತಾರೆ, ಅವರ ಪಾಡಿಗೆ. ಹುಡುಗ ಪಾಳಯ ಬಂದಿದ್ದೇ, ಹೋಗ್ರೇಲೇ, ಹೆಣ್ ಮಕ್ಳಾಟ ಇದು, ಬೇರೆ ಕಡೆ ಹೋಗಿ ಆಡ್ಕಳಿ, ಈ ಜಾಗ ನಮಗೆ ಬೇಕು ಅಂತ ಕಿರಿಕ್ ಶುರು ಹಚ್ಚಿದ್ದೇ, ಹೋಗ್ರೋಲೋ, ಧಮ್ ಇದ್ರೆ ನಮ್ ಹಾಂಗೆ ಆಡಿ ತೋರ್ಸಿ, ಅಂತೆಲ್ಲ ಕಿಚಾಯಿಸಿ, ಅವರೂ ಕುಂಟಾಕಿ ಆಡಲೆಲ್ಲ ಹೋಗಿ, ಆಗದೇ ಒದ್ದಾಡಿ- ಹುಡುಗೀರೆಲ್ಲ ನಕ್ಕು , ಹುಡುಗರ ಗುಂಪಿನ ಯಾರಿಗಾದರೂ ಜೋರು ಸಿಟ್ಟು ಬಂದು, ಹೊಡೆದು, ಈ ಪುಟ್ಟ ಹುಡುಗಿ ಬಾಯಿಗೆ ಕೈ ಇಟ್ಟುಕೊಂಡು ಅತ್ತು- ಎಲ್ಲ ಸೇರಿ ಸಮಾಧಾನ ಮಾಡಿ.. ಅಬ್ಬಬ್ಬ.

ಮೂರು ಗಂಟೆ ಹೊತ್ತಿಗೆ ಲಗೋರಿ ಶುರು! ಈ ಪುಟಾಣಿ ಏಜೆಂಟ್ ಪಾಳಯ ಅತ್ಯಂತ ಉತ್ಸಾಹದಿಂದ ಆಡುವ ಆಟ ಇದು. ಅಲ್ಲೆಲ್ಲೋ ಕಟ್ಟುತ್ತಿರುವ ಮನೆ ಹತ್ತಿರದಿಂದ, ಹನ್ನೊಂದು ನುಣುಪಾದ ಟೈಲ್ಸ್ ತುಂಡುಗಳನ್ನ ತಂದಿಟ್ಟುಕೊಂಡಿದ್ದಾರೆ. ಮಧ್ಯ ರಸ್ತೆಯಲ್ಲಿ ಚಾಕ್ಪೀಸ್‌ನಿಂದ ವೃತ್ತ ಬರೆದು, ಟೀಮು ಮಾಡಿಕೊಂಡು ಲಗೋರಿ ಶುರು ಹಚ್ಚಿಕೊಂಡರು ಅಂದರೆ, ಇನ್ನು ಮೂರು ತಾಸಿಗೆ ತೊಂದರೆ ಇಲ್ಲ. ಮೊದಲೇ ನಮ್ಮ ರಸ್ತೆ ಕಿಷ್ಕಿಂದೆ, ಅದರಲ್ಲಿ ಈ ಲಗೋರಿ ಶುರುವಾದರೆ, ಕೆಲಬಾರಿ ರಸ್ತೆ ಮೇಲೆ ಸುಮ್ಮನೇ ನಡೆದುಕೊಂಡು ಹೋಗುತ್ತಿರುವ ಬಡಪಾಯಿಗಳೂ ಚೆಂಡಿನೇಟು ತಿಂದುಬಿಡುತ್ತಾರೆ. ಪೆಟ್ಟು ತಿಂದಾತ ಕಣ್ಣು ಕೆಂಪು ಮಾಡಿಕೊಂಡು ಅವರನ್ನ ನೋಡಿದರೆ, ಅತ್ಯಂತ ದೈನ್ಯ ಮುಖ ಹೊತ್ತು, ಸಾರೀ ಅಂಕಲ್ ಅನ್ನುವ ಹುಡುಗನನ್ನು ಕಂಡಾಗ- ಹೊಡೆಸಿಕೊಂಡವನೇ ಅಯ್ಯೋ ಪಾಪ ಅಂದುಕೊಂಡು ಹೋಗಿಬಿಡುತ್ತಾನೆ. ಆತ ರಸ್ತೆ ತಿರುವು ದಾಟಿದ್ದಾನೋ ಇಲ್ಲವೋ- ಇಲ್ಲಿ ಜೋರು ನಗೆಯ ಊಟೆ!

ಇದು ನಮ್ಮ ರಸ್ತೆಯ ಮಕ್ಕಳ ನಿತ್ಯದ ದಿನಚರಿ. ಹಾಗೆಂದು ಈ ದಿನಚರಿಗೆ ಅಡಚಣೆಗಳು ನಿತ್ಯವೂ ಬರುತ್ತದೆ. ಕೀರ್ತನ್ ಅಣ್ಣನ ಹೊಸ ಮೊಬೈಲಿನ ಗೇಮು, ಅರ್ಚನಾಗೆ ಅವಳಪ್ಪ ತೆಗಿಸಿಕೊಟ್ಟಿರೋ ಹೊಸ ಸೈಕಲ್ಲು, ಕೆಲ ಬಾರಿ ರೊಟೀನ್ ಆಚರಣೆಗಳನ್ನ ತಪ್ಪಿಸುತ್ತವೆ. ಆದರೂ- ಸ್ವಲ್ಪೊತ್ತು ಬಿಟ್ಟು ಮತ್ತೆ ಎಲ್ಲರೂ ಅದೇ ರಸ್ತೆಗೆ ವಾಪಸ್ಸು! ಹೊಸ ಸೈಕಲ್ಲು ಕೊಡಿಸಿದರಾದರೂ ಮಗಳು ಬಿಸಿಲಿಗೆ ಅಲೆಯುವುದು ತಪ್ಪುತ್ತದೆ ಅಂದುಕೊಂಡಿದ್ದ ಅರ್ಚನಾಳ ಅಪ್ಪನ ಮುಖ ನೋಡಬೇಕು ನೀವು ಆವಾಗ!

ಇವತ್ತು ಎದ್ದಾಗ, ಏನಪ್ಪಾ ಇದು ಈತರ ಕಿರುಚಾಟ ಅಂತ ನೋಡಿದರೆ, ಯಾವನೋ ಮಹಾನುಭಾವ ಬುಗರಿಗಳನ್ನು ತಂದುಬಿಟ್ಟಿದ್ದ! ಪೆಕರು ಪೆಕರಾಗಿ ಬುಗರಿಗೆ ಹಗ್ಗ ಸುತ್ತುತ್ತಿದ್ದ ಮಹೇಶಂಗೆ, ಇನ್ನೊಬ್ಬ ಪೋರ, ಯೇ ಮಹೇಶಾ, ನಾ ಹೇಳ್ಕೊಡ್ತೀನಿ ನೋಡೋ ಹೆಂಗೆ ಅಂತ ಬುಗರಿ ತಿರುಗಿಸೋ ಬೇಸಿಕ್ಸು ಹೇಳಿ ಕೊಡುತ್ತಿದ್ದ. ಅಲ್ಲೇ ಪಕ್ಕದಲ್ಲಿ ಕೀರ್ತನ್ನು, ಗಾಳಿಪಟ ಮಾಡುತ್ತ ಕೂತಿದ್ದ.

ಮತ್ತೊಂದಿಷ್ಟು ಹೊಸ ಆಟಗಳು ಸೇರಿಕೊಂಡವಲ್ಲಪ್ಪ ಅಂದಕೊಂಡು, ನಾನೂ ಖುಷಿಯಿಂದ ಒಳಬಂದೆ.



ದಟ್ಸ್ ಕನ್ನಡಕ್ಕಾಗಿ ಬರೆದ ಲೇಖನ.

ಶುಕ್ರವಾರ, ಮಾರ್ಚ್ 13, 2009

ಅವಳ ನಗು

ಬಯಲ ಗಾಳಿಗೆ ಎಲೆಯು
ಸುಮ್ಮನಲುಗಿದ ಹಾಗೆ
ಮಲೆಯ ಕಣಿವೆಯ ಝರಿಯು
ಚಿಮ್ಮಿ ಸಾಗುವ ಸೊಬಗೆ
ಎಂಥ ನಗು ಅವಳದು!

ಗಿರಿಯ ಮೇಲಿನ ಮಂಜು
ಮೆಲ್ಲ ಕರಗುವ ತೆರನ,
ನದಿಯ ನೀರನು ತಡೆವ
ಕಲ್ಲು ಹಾಡುವ ತ ರ ನ
ಅಂಥ ನಗು ಅವಳದು!

ತೀರಗುಂಟದ ಅಲೆಯು
ಪಾದಕೆ ಮಾಡುವ ಮುದ್ದು
ಮಳೆನೀರು ಬೀಳುತಿಹ
ಪದ್ಮಪತ್ರದ ಸದ್ದು
ಇಂಥ ನಗು ಅವಳದು!

ಬುಧವಾರ, ಮಾರ್ಚ್ 04, 2009

ಅಂದೇ ಕೊನೆ ಮತ್ತೆ ಶ್ಯಾಮ..

ಅಂದೇ ಕೊನೆ ಮತ್ತೆ ಶ್ಯಾಮ ಕೊಳನನೂದಲಿಲ್ಲ
ಗೋಕುಲ ದಾಟಿದ ಹೆಜ್ಜೆಯು, ಮರಳಿ ಬರಲೆ ಇಲ್ಲ

ರಾಧೆಯ ಗೆಜ್ಜೆಯ ದನಿ ಮರೆತಿತ್ತು,ನಗಾರಿ ಧ್ವನಿಗಳಲಿ
ಗೋಗಂಟೆಗಳ ಸ್ವರ ಅಡಗಿತ್ತು, ಖುರಪುಟ ಸದ್ದಿನಲಿ.

ರಾಜಕುವರರಾ ಸಖ್ಯದ ಮಧ್ಯೆ, ಮಕರಂದ ಮರೆತು ಹೋದ
ಮಹಲಿನ ಸೊಬಗಲಿ ನೆನಪಾಗುವುದೇ, ಗೋಕುಲದಾ ಮೋದ

ಕಳ್ಳ ಗೋಪನನು ಕರೆಯದು ಈಗ ಬಿಂದಿಗೆ ನವನೀತ
ಖಡ್ಗಗಳನುರಣನ ಸುತ್ತ, ಮುರಾರಿಗೆ ಯುದ್ಧವೆ ಉಪವೀತ

ಅರ್ಜುನ ರಥದಲಿ ಸಾರಥಿಯಾತನು, ಹಿಡಿದಿಹ ಚಾವಟಿಗೆ
ಕಣ್ಣೆದುರೆಂತು ಬಂದೀತವಗೆ, ಯಮುನೆಯ ಪಾವಟಿಗೆ ?

ಪಿಳ್ಳಂಗೋವಿಯ ಜಾಗವ ಪಡೆದಿದೆ ಶಂಖ ಪಾಂಚಜನ್ಯ
ಗೋಗಳ ಮಂದೆಯ ಬದಲಿಗೆ ಎದುರಿದೆ, ಚಿತ್ತ ಮರೆತ ಸೈನ್ಯ.

ಭಾನುವಾರ, ಮಾರ್ಚ್ 01, 2009

ಗೋರಿ ತೇರೆ ಆಂಖೇ ಕಹೇ..

ನಮ್ಮ ಮನೆಗೆ ಡಿಶ್ ಆಂಟೇನಾ ಬಂದ ಹೊಸತು. ಎಂಟೀವಿ ಆಗಿನ್ನೂ ಪೇ ಚಾನಲ್ ಆಗಿರಲಿಲ್ಲ. ಕಾಲೇಜಿಗೆ ಹೋಗುತ್ತಿದ್ದ ದಿನಗಳು.. ಸೊಗಸಾದ ಇಂಡಿ ಪಾಪ್ ಹಾಡುಗಳ ಝಮಾನಾ ಆರಂಭವಾಗಿತ್ತು. ಅಂದು ಕೇಳಿದ ಕೆಲ ಹಾಡುಗಳು, ಇಂದಿಗೂ ಕಾಡುತ್ತವೆ. ಅಂಥ ಕೆಲ ಹಾಡುಗಳು, ಇಲ್ಲಿವೆ...

ಗೋರಿ ತೇರೆ ಆಂಖೇ ಕಹೇ - ಲಕ್ಕಿ ಅಲಿ



ಭೂಲ್ ಜಾ - ಶಾನ್


ಓ ಸನಮ್- ಲಕ್ಕಿ ಅಲಿ.



ತನ್ಹಾ ದಿಲ್- ಶಾನ್



ಮೈನೇ ಪಾಯಲ್ ಹೀ- ಫಾಲ್ಗುಣಿ ಪಾಠಕ್




ಡೂಬಾ ಡೂಬಾ - ಮೋಹಿತ್ ಚೌಹಾನ್




ಪ್ಯಾರ್ ಕೇ ಗೀತ್ ಸುನಾ ಜಾರೇ- ಶುಭಾ ಮುದ್ಗಲ್




ಮತ್ತು ಖಂಡಿತಾ ಮರೆಯಲಾಗದ,
ಮೇರೀ ಚೂನರ್ ಉಡ್ ಉಡ್ ಜಾಯೇ- ಫಾಲ್ಗುಣಿ ಪಾಠಕ್.



ನೆನಪಿಸಿಕೊಳ್ಳಬಹುದಾದ ಇನ್ನೂ ಹಲವೆಂದರೆ, ಪಿಯಾ ಬಸಂತೀ ರೇ, ಯಾರೋ ದೋಸ್ತೀ, ದೇಖಾ ಹೇ ಐಸೇ ಭೀ, ಇತ್ಯಾದಿ ಇತ್ಯಾದಿ.

ಸುಮ್ಮನೇ, ಯಾಕೋ ಇವೆಲ್ಲ ನೆನಪಾಯಿತು.