ನಿತ್ಯದಂತೆ ಇಂದೂ ಹೊಸಿಲ ಮೇಲಿನ
ದೀಪದ ಜ್ವಲನ ನೋಡುತ್ತ
ಕೂತಿದ್ದಾನೆ ಹಿರಿಯ,ನಿರೀಕ್ಷೆಗಳ ಹೊತ್ತು
ಹೊರಗೆ ಯಾರೂ ದಣಪೆ
ಸರಿಸಿದ ಸದ್ದೂ ಕೇಳುವುದಿಲ್ಲ
ಮೂರುಸಂಜೆಯ ಮೇಲೆ ಬೆಳಕು
ಕಡಿಮೆ, ಕಡಿಮೆ ಮಾತು
ಕಡಿಮೆ ನಿರೀಕ್ಷೆ
ಇನ್ನು ಮೇಲೆ ಈ ಕಡೆಗೆ
ಯಾರೂ ಹಾಯುವುದಿಲ್ಲ ಗಾಳಿಯೊಂದು
ಬಂದೀತು ಆರಿಸಲು ದೀಪ
ಒಳಗೇನೋ ಸದ್ದು ಬಿದ್ದಿದ್ದು
ಪಾತ್ರೆಯೋ, ಅಥವ ಅದನ್ನು ಹಿಡಿದ ಅವಳೊ?
ದಣಪೆಯ ಸದ್ದಿನ ನಿರೀಕ್ಷೆಯಲ್ಲಿ
ಬೇರೆ ಶಬ್ದ ಕೇಳದೆ ಕಿವಿ ಮಂದ
ಅಥವಾ ಅವಳು ಮಾತುಬಿಟ್ಟಿರಲೂ ಬಹುದು
ಟಪಾಲುಗಳಲ್ಲಿ ಬರುವುದೀಗ ಬರಿಯ
ಸಾವಿನ ದಿನ ನೆನಪಿಸುವ ಪಾಲಿಸಿ
ಯ ಕಂತು ತುಂಬುವ ಪತ್ರ, ಬೆಳೆ
ಸಾಲದ ನೋಟೀಸು
ಎಂದೂ ತೆರೆಯದ ಮದುವೆ ಕಾಗದ
ಮೇಲೆಲ್ಲೋ ಮರ ಬಿದ್ದು
ಸತ್ತಿದ್ದು ಫೋನು
ಮಗ ಕೊಡಿಸಿ ಹೋದ
ಮೊಬೈಲಿಗೆ
ಗುಡ್ಡದ ಮೇಲೆ ಮಾತ್ರ ಮಾತು
ಈ ಸಂಜೆ ಯಾರಾದರೂ ಬರಬಹುದಿತ್ತು
ಕೊನೆ ಪಕ್ಷ ಬೀಡಾಡಿ ದನವಾದರೂ ನುಗ್ಗಬಹುದಿತ್ತು
ಒಳಗೆ, ಅದೂ ಬರುವುದಿಲ್ಲ
ದಣಪೆಯನ್ನು ಯಾರೂ
ಸ ರಿ ಸು ವು ದಿ ಲ್ಲ.