ಆವತ್ತು ಬೆಳಗ್ಗೆ
ಟಿವಿ ಹಾಕಿದರೆ, ವಕೀಲರು ಮತ್ತು
ಮಾಧ್ಯಮದವರ ನಡುವಿನ ಗಲಭೆಯದೇ ಸುದ್ದಿ. ರಣರಂಗದಂತೆ ಕಾಣುತ್ತಿದ್ದ ಸಿಟಿ ಸಿವಿಲ್ ಕೋರ್ಟ್ ನ
ಆವರಣದಲ್ಲಿ ಗಲಾಟೆಯೋ ಗಲಾಟೆ! ತೂರಿ ಬರುತ್ತಿರುವ ಕಲ್ಲು, ಕುರ್ಚಿ.. ಅಟ್ಟಾಡಿಸಿಕೊಂಡು ಹೊಡೆಯುತ್ತಿರುವ ದೃಶ್ಯಗಳು, ಅಸಹಾಯಕರಂತೆ ಓಡಾಡುತ್ತಿರುವ ಪೊಲೀಸರು..ಏನಾಗುತ್ತಿದೆ
ಎಂದೇ ತಿಳಿಯುತ್ತಿರಲಿಲ್ಲ.ನನ್ನ ಬಹಳಷ್ಟು ಮಿತ್ರರು ಬೇರೆ ಬೇರೆ ಟಿವಿ ಚಾನಲುಗಳಲ್ಲಿ ಕೆಲಸ
ಮಾಡುತ್ತಾರಾದ್ದರಿಂದ ಕೆಲವರಿಗೆಲ್ಲ ಫೋನ್ ಮಾಡಿದೆ. ಯಾರೂ ಫೋನ್ ಎತ್ತಿಕೊಳ್ಳುತ್ತಿಲ್ಲ.
ಎತ್ತಿಕೊಂಡವರು ಸರಿಯಾಗಿ ಮಾತನಾಡುತ್ತಿಲ್ಲ. ಕೋರ್ಟ್ ಬೀಟ್ ನ ವರದಿಗಾರ ಸ್ನೇಹಿತನೊಬ್ಬ
ಫೋನೆತ್ತಿ, “ಲೇ ಇಲ್ಲಿ ಕಲ್
ಬೀಳ್ತಾ ಇದಾವ್ ಲೇ, ಆಮೇಲ್ ಮಾಡ್ತೀನಿ”
ಅಂದವನು ಮತ್ತೆ ಕಂಡಿದ್ದು, ಅವರ ಚಾನಲ್ ನ
ಸ್ಟುಡಿಯೋ ಡಿಸ್ಕಶನ್ ನಲ್ಲಿ. ಆತನಿಗೆ ಸರಿಯಾಗಿ ಏಟುಗಳು ಬಿದ್ದಿದ್ದವು. ಸ್ವಲ್ಪ ಹೆಚ್ಚು
ಕಡಿಮೆಯಾಗಿದ್ದರೂ ಮಾರಣಾಂತಿಕ ಪೆಟ್ಟೇ ಬೀಳುತ್ತಿತ್ತು. ಆಮೇಲೆ ರಾತ್ರಿ ಆತ ಮಾತನಾಡುತ್ತ
ಬೇಜಾರಿನಿಂದ ಹೇಳಿದ, ಜನರಿಗೆ ನನಗೆ ಏಟು
ಬಿದ್ದಿದ್ದು ಇವತ್ತು ಮಾತ್ರ ನೆನಪಿರತ್ತೆ, ಆದರೆ ನನಗೆ ನೋವು ಇನ್ನೂ ಒಂದು ವಾರ ಇರತ್ತಲ್ಲ ಮಾರಾಯಾ”ಅಂತ. ಎಲ್ಲಿ ಮತ್ತೆ ಇಂತಹ ಘಟನೆ
ಸಂಭವಿಸುತ್ತದೆ ಎಂಬ ಹೆದರಿಕೆಯಲ್ಲಿ ದಿನ ಕಳೆಯುವ ಹಾಗಾಗಿದೆ ಇತ್ತೀಚಿಗೆ ಎಂದು ಅಲವತ್ತುಕೊಂಡ ಆ
ಗೆಳೆಯ.
ಹಿಂದೊಮ್ಮೆ ನಾನು
ಕೂಡ ಇಂತಹದೇ ಸನ್ನಿವೇಶವೊಂದನ್ನು ಎದುರಿಸಿದ್ದೆ. ಅಂದು ನನ್ನದು ರಾತ್ರಿ ಪಾಳಿ. ಚಿನ್ನಸ್ವಾಮಿ
ಸ್ಟೇಡಿಯಂ ಬಳಿ ಏನೋ ಗಲಾಟೆ ಎಂದು ಯಾರೋ ಫೋನ್ ಮಾಡಿದರು. ಹೋಗಿ ನೋಡಿದರೆ ಅಲ್ಲೊಬ್ಬ ವಿದೇಶೀ
ಮಹಿಳೆ ಮತ್ತವಳ ಸ್ನೇಹಿತೆ ಕಾರೊಳಗೆ ಕೂತಿದ್ದರು. ಕಾರಿನ ಗಾಜು ಒಡೆಯುವ ಪ್ರಯತ್ನ ಮಾಡಲಾಗಿತ್ತು.
ಅವರುಗಳು ಪಾನಮತ್ತರಾಗಿದ್ದು ಮೊದಲ ನೋಟಕ್ಕೇ ಗೊತ್ತಾಗುತ್ತಿತ್ತು. ವಿಚಾರಿಸಿದಾಗ
ತಿಳಿದಿದ್ದೇನೆಂದರೆ, ಅವರನ್ನು ನಿಲ್ಲಿಸಿ
ಪರೀಕ್ಷೆ ಮಾಡಲು ಹೋದ ಕಾನ್ಸ್ ಸ್ಟೇಬಲ್ ಗೆ ಸರಿಯಾಗಿ ಹಲ್ಲೆ ಮಾಡಿ, ಕಾರಲ್ಲಿ ಕೂತು ಪರಾರಿಯಾಗಲು ಹೊರಟಿದ್ದರು. ಅಲ್ಲಿದ್ದ ಜನರು ಅವರನ್ನ
ಓಡಿ ಹೋಗಲು ಬಿಡದೇ ಕೀ ಕಿತ್ತಿಟ್ಟುಕೊಂಡಿದ್ದರು. ಆ ರಾತ್ರಿಯಲ್ಲೂ ಸುದ್ದಿ ಹಬ್ಬಿ ಸುಮಾರು
ಇನ್ನೂರು ಮುನ್ನೂರು ಜನ ಅಲ್ಲಿ ಜಮಾಯಿಸಿದ್ದರು. ನಂತರ ಬಂದ ಪೊಲೀಸ್ ಪಡೆ ಅವರಿಬ್ಬರನ್ನ
ಬಲವಂತವಾಗಿ ಕರೆದುಕೊಂಡು ಹತ್ತಿರ ಸ್ಟೇಶನ್ ಗೆ ಹೋಯಿತು. ನಾನೂ ಸೇರಿದಂತೆ ಒಂದಿಷ್ಟು ವಾಹಿನಿಗಳ
ತಂಡ ಅವರನ್ನ ಹಿಂಬಾಲಿಸಿತು. ಸೇರಿದ್ದ ಜನ ಅಲ್ಲಿಂದ ಚದುರಿದರು.
ಸ್ಟೇಶನ್ ಗೆ ಹೋದ
ಮೇಲೆ ಶುರುವಾಗಿದ್ದು ಅಸಲೀ ಗಲಾಟೆ. ಅಲ್ಲಿದ್ದ ಬೆರಳೆಣಿಕೆಯ ಪೊಲೀಸರು ಮತ್ತು ನಮ್ಮನ್ನ ನೋಡಿದ
ಅವರಿಗೆ ಏನನ್ನಿಸಿತೋ ಏನೋ! ಅವರಲ್ಲಿ ಒಬ್ಬಾಕೆ ಒಮ್ಮೆಗೇ ಅಲ್ಲಿಂದೆದ್ದು ಓಡಿದ್ದೇ ಸಿಕ್ಕ
ಸಿಕ್ಕವರ ಮೇಲೆ ಹಲ್ಲೆ ಮಾಡಲು ಆರಂಭಿಸಿದಳು. ನಮ್ಮ ಕ್ಯಾಮರಾಗಳನ್ನ ಕಿತ್ತುಕೊಂಡು ನೆಲಕ್ಕೆ
ಅಪ್ಪಳಿಸಿದಳು. ಅವಳ ಒಳಗೆ ಸೇರಿಕೊಂಡಿದ್ದ ಪರಮಾತ್ಮನ ಸಹಾಯದಿಂದಾಗಿ ಆಕೆ ರೌದ್ರಾವತಾರ ತಾಳಿ,
ತಕತಕ ಕುಣಿಯುತ್ತಿದ್ದಳು. ಏನೋ ರಿಪೇರಿ ನಡೆಯುತ್ತಿದ್ದ
ಆ ಸ್ಟೇಶನ್ ನ ಹಿತ್ತಲಿಗೆ ಓಡಿದವಳೇ ಅಲ್ಲಿದ್ದ ಸೈಜುಗಲ್ಲೆತ್ತಿ ಆಕೆಯನ್ನು ಹಿಂಬಾಲಿಸಿಕೊಂಡು
ಬಂದವರ ಮೇಲೆ ಎಸೆದು ಬಿಟ್ಟಳು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಲ್ಲಿದ್ದ ಪೊಲೀಸಪ್ಪ ಅಪ್ಪಚ್ಚಿ
ಆಗಿ ಬಿಡುತ್ತಿದ್ದ. ಅಲ್ಲಿಂದ ಒಮ್ಮೆಗೇ ವಾಪಸ್ಸು ಓಡಿ ಬಂದವಳು, ದಾರಿಯಲ್ಲಿ ಅಡ್ಡ ನಿಂತಿದ್ದ ನಂಗೆ ಯಾವ ರೀತಿ ಜಪ್ಪಿದಳು ಅಂದರೆ,
ನನ್ನ ಮೂಗು ತುಟಿ ಮುಂದೆ ಮೂರು ದಿನ ಬಾತುಕೊಂಡೇ
ಇತ್ತು! ಸ್ನೇಹಿತರೆಲ್ಲ ಯಕಶ್ಚಿತ್ ಹುಡುಗಿಯೊಬ್ಬಳ ಕೈಲಿ ಪೆಟ್ಟು ತಿಂದು ಮುಖ
ಊದಿಸಿಕೊಂಡಿದ್ದೀಯಲ್ಲೋ ಎಂದು ಮುಂದೆ ಹಲ ದಿನಗಳ ಕಾಲ ರೇಗಿಸುತ್ತಲೇ ಇದ್ದರು. ಆ ಕ್ಷಣ ಅವಳ
ಕೈಗೇನಾದರೂ ಚಾಕು ಚೂರಿ ಸಿಕ್ಕಿದ್ದರೆ ನಮ್ಮನ್ನ ಸಿಗಿದೇ ಹಾಕುತ್ತಿದ್ದಳು. ಮತ್ತೆ ಹೇಗೋ ಅವಳನ್ನ
ಹಿಡಿದು ಒಳಗೆ ತಳ್ಳಿದ್ದಾಯಿತು. ಕೇಸು ಜಡಿದು ನಾನೂ ಕೋರ್ಟಿಗೆ ನಾಲ್ಕಾರು ಬಾರಿ ಅಲೆದದ್ದೂ
ಆಯಿತು.
ಇದನ್ನೆಲ್ಲ ಏಕೆ
ಹೇಳಿದ ಎಂದರೆ, ಸಾಮಾನ್ಯವಾಗಿ ಜನರು
ಪತ್ರಕರ್ತರು ಎಂದರೆ ಮಹಾನುಭಾವರು ಎಂದುಕೊಂಡಿರುತ್ತಾರೆ. ಅವರು ಎಲ್ಲ ತಿಳಿದುಕೊಂಡವರು ,
ಎಲ್ಲರ ಎಣಿಕೆಗೆ ದಕ್ಕದ ಏನೋ ನಿಗೂಢ ವಿಚಾರಗಳು,
ರಹಸ್ಯ ಮಾಹಿತಿಗಳು ನಮ್ಮಲ್ಲಿರುತ್ತವೆ ಎಂದು ಬಹಳ ಮಂದಿ
ನಂಬಿಕೊಂಡಿರುತ್ತಾರೆ. ಆದರೆ ನಾವುಗಳು ಕೂಡ ರಕ್ತ ಮಾಂಸ ತುಂಬಿಕೊಂಡ ಮಾಮೂಲಿ ಮನುಷ್ಯರು,
ನಾವು ಕೂಡ ನಿತ್ಯ ಕಷ್ಟಗಳನ್ನು ಅನುಭವಿಸುತ್ತೇವೆ
ಎನ್ನಲು ಮೇಲಿನ ಉದಾಹರಣೆಗಳನ್ನು ಕೊಡಬೇಕಾಯಿತು. ಹೆಚ್ಚಿನವರು, ನ್ಯೂಸ್ ಚಾನಲ್ಲಿನಲ್ಲಿ ಕೆಲಸ ಮಾಡುವವರು ಸರ್ವಜ್ಞರು ಎಂದೇ
ಅಂದುಕೊಂಡಿರುತ್ತಾರೆ. ಟೀವಿಗಳಲ್ಲಿ ವಾರ್ತೆ ಓದುವವರು ಅಂದರೆ ಆಂಕರ್ ಗಳು, ಸಿನಿಮಾ ಸಂಬಂಧೀ ಕಾರ್ಯಕ್ರಮಗಳನ್ನು ನಿರೂಪಿಸುವವರಂತೂ
ಅತ್ಯಂತ ಪುಣ್ಯವಂತರು. ರಾಜಕೀಯದ ಬಗ್ಗೆ ಆಸಕ್ತಿ ಇದ್ದವರು ರಾಜಕಾರಣಿಗಳೆಲ್ಲ ನಮ್ಮ ಬಗಲಲ್ಲೇ
ಇರುತ್ತಾರೆ, ಅವರ
ಆಗುಹೋಗುಗಳಷ್ಟೂ ನಮಗೆ ಬಾಯಿಪಾಠ ಆಗಿರುತ್ತದೆ ಎಂಬ ಮಟ್ಟಿಗೆ ಪ್ರಶ್ನೆಗಳನ್ನು ಕೇಳುತ್ತಾರೆ.
ಹೀಗೆ ಕೇಳುವವರನ್ನು ನಾನು ತಮಾಷೆ ಮಾಡಲೇನೂ ಮಾಡಲು ಹೊರಟಿಲ್ಲ. ಎಲ್ಲರ ಮನೆಗಳಲ್ಲೂ ಟಿ.ವಿ
ಇದ್ದರೂ, ನಿತ್ಯ ನ್ಯೂಸ್ ಗಳನ್ನು
ನೋಡಿದರೂ ಪರದೆಯ ಹಿಂದೆ ಏನು ನಡೆಯುತ್ತಿದೆ, ಟಿವಿ ಚಾನಲುಗಳು ಹೇಗೆ ಕೆಲಸ ಮಾಡುತ್ತವೆ ಎಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ.
ಜನಸಾಮಾನ್ಯರಿಗೆ
ಮಾತ್ರ ಅಲ್ಲ, ಜರ್ನಲಿಸಂ ನಲ್ಲೇ
ಪದವಿ ಓದುತ್ತಿರುವ ಹುಡುಗರಿಗೂ ಸಹ ತಾವು ಟಿವಿ ಚಾನಲು ಸೇರಿಕೊಂಡರೆ ಏನು ಕೆಲಸ ಮಾಡುತ್ತೇವೆ
ಎನ್ನುವುದು ಸಮರ್ಪಕವಾಗಿ ಗೊತ್ತಿರುವುದಿಲ್ಲ. ಕೆಲ ದಿನಗಳ ಕೆಳಗೆ ನನಗೊಬ್ಬ ಹುಡುಗ ಫೋನ್
ಮಾಡಿದ್ದ. "ಸರ್ ನನಗೆ ಟಿವಿ ಚಾನಲಲ್ಲಿ ಕೆಲಸ ಬೇಕು" ಏನು ಕೆಲಸ ಮಾಡ್ತೀಯಾ?
"ನಂಗೆ ಟಿವಿ ನ್ಯೂಸ್ ರೀಡರ್
ಆಗಬೇಕು ಅಂತಿದೆ" ಹೌದಾ? ಯಾಕೆ?
"ನಂಗೆ ಟಿವಿಲಿ ಕಾಣಿಸಿಕೋ
ಬೇಕು ಅಂದ್ರೆ ಇಷ್ಟ, ಅಲ್ಲದೇ ಕೆಲಸ
ಕಡಿಮೆ ಇರತ್ತಲ್ಲ ಸರ್ ಅದ್ಕೆ" ನಾನು ಎಲಾ ಇವನ ಅಂದುಕೊಂಡು " ನ್ಯೂಸ್ ಓದೋರಿಗೆ
ಕೆಲಸ ಕಡಿಮೆ ಅಂತ ಯಾರಂದ್ರಪಾ" ಅಂದೆ. ಹೌದು ಸರ್ ಗೊತ್ತು.. ಅವರು ಆಫೀಸಿಗೆ ಬಂದು ನ್ಯೂಸ್
ಓದಿ ವಾಪಸ್ ಹೋದರಾಯ್ತಲ್ಲ ಅನ್ನಬೇಕೇ ಆ ಪುಣ್ಯಾತ್ಮ! ಪದವಿ ಓದು ಮುಗಿಸುತ್ತಿದ್ದ ಆ ಹುಡುಗನಿಗೆ
ನ್ಯೂಸ್ ರೀಡರ್ ಕೆಲಸ ಏನೆಂದು ತಿಳಿದೇ ಇರಲಿಲ್ಲ.
ಇತ್ತೀಚಿನ
ದಿನಗಳಲ್ಲಿ ಟಿ.ವಿ ಜರ್ನಲಿಸಂ ಹೆಮ್ಮರವಾಗಿ ಬೆಳೆದು ನಿಂತಿದೆ. ಕನ್ನಡದಲ್ಲೇ ನಾಲ್ಕಾರು ನ್ಯೂಸ್
ಚಾನಲ್ ಗಳಿವೆ. ಭಾರತದ ಮಟ್ಟದಲ್ಲಿ ತೆಗೆದುಕೊಂಡರೆ ನೂರಕ್ಕೂ ಹೆಚ್ಚು ನ್ಯೂಸ್ ಆಧಾರಿತ ಟಿವಿ
ಚಾನಲ್ ಗಳಿವೆ. ಪ್ರತಿ ವರ್ಷ ಹತ್ತಕ್ಕೂ ಹೆಚ್ಚು ವಾಹಿನಿಗಳು ಹೊಸದಾಗಿ ಸೇರ್ಪಡೆಗೊಳ್ಳುತ್ತಿವೆ.
ಒಂದು ಚಾನಲ್ ನಲ್ಲಿ ಏನಿಲ್ಲವೆಂದರೂ ಇನ್ನೂರರದಿಂದ ಮುನ್ನೂರು ಮಂದಿ ಕೆಲಸ ಮಾಡುತ್ತಾರೆ.
ಪತ್ರಿಕೋದ್ಯಮವನ್ನು ಓದುತ್ತಿರುವ ಹುಡುಗ ಹುಡುಗಿಯರಿಗೆ ನಿತ್ಯ ಹೊಸ ಅವಕಾಶಗಳು ಕಾಣುತ್ತವೆ.
ಕೇವಲ ನ್ಯೂಸ್ ಓದುವುದು, ರಿಪೋರ್ಟಿಂಗ್ ಅಲ್ಲದೇ
ಅದಕ್ಕೂ ಮುಖ್ಯವಾದ ಹಲವು ಹುದ್ದೆಗಳು ವಾರ್ತಾ ವಾಹಿನಿಗಳಲ್ಲಿ ಇರುತ್ತವೆ.
ಹೊಸದಾಗಿ ಜರ್ನಲಿಸಂ
ಓದಿಕೊಂಡರಿಗೆ ವಾರ್ತಾ ವಾಹಿನಿಗಳಲ್ಲಿ ಕೆಲಸ ಮಾಡಬೇಕೆಂಬ ಆಸಕ್ತಿ ಇದ್ದರೆ, ಕೆಲವೊಂದು ಸತ್ಯಗಳನ್ನು ಮನದಟ್ಟು ಮಾಡಿಕೊಳ್ಳಲೇಬೇಕು.
ಹೊರಗೆ ಥಳುಕು ಬಳುಕಾಗಿ ಕಾಣುವ, ಝಗಮಗಿಸುವ ಈ
ಜಗತ್ತಿನಲ್ಲಿ ಕೆಲಸ ಮಾಡಬೇಕೆಂದರೆ ಅತ್ಯಂತ ಸೂಕ್ಷ್ಮ ಮನಸ್ಸು ಮತ್ತು ಎಂತಹ ಸಂದರ್ಭದಲ್ಲೂ ಕೂಡ
ತಾಳ್ಮೆ ಕಳೆದುಕೊಳ್ಳದೇ, ಒತ್ತಡವನ್ನು
ನಿಭಾಯಿಸಿಕೊಂಡು ಹೋಗುವ ಶಕ್ತಿ ಇರಬೇಕು. ನ್ಯೂಸ್ ಚಾನಲ್ಲುಗಳಲ್ಲಿ ವಿಪರೀತ ಸ್ಪರ್ಧೆ ಇದ್ದು,
ಕ್ಷಣ ಕ್ಷಣದ ಮಾಹಿತಿಯನ್ನು ಕಲೆ ಹಾಕಲು ಮತ್ತು ಅದನ್ನು
ಮೊದಲು ಪ್ರಸಾರ ಮಾಡಬೇಕು ಎನ್ನುವ ಮನೋಭಾವ ಇರುವುದರಿಂದ, ಅಲ್ಲಿನ ವೇಗಕ್ಕೆ ಹೊಂದಿಕೊಳ್ಳಲು ಆಗದೇ ಹೋದರೆ, ಮೂಲೆಗುಂಪಾಗಬೇಕಾಗುತ್ತದೆ. ಎಲೆಕ್ಷನ್ ಕೌಟಿಂಗ್
ಸಂದರ್ಭಗಳು, ರಾಜಕೀಯ
ಏರುಪೇರುಗಳು,ಪ್ರಾಕೃತಿಕ
ವಿಕೋಪಗಳು, ದಂಗೆ, ಗಲಭೆ ಇತ್ಯಾದಿ ಸಂದರ್ಭಗಳಲ್ಲಿ ತಪ್ಪು ಮಾಡದೇ,
ನಿಖರವಾದ ಮಾಹಿತಿಯನ್ನು ನೀಡುವ ಕೆಲಸ, ತಮಾಷೆಯದಲ್ಲ.
ಹೆಚ್ಚಾಗಿ
ಹೊಸಬರಿಗೆ ಡೆಸ್ಕ್ ಕೆಲಸ ಅಥವಾ ಕಾಪಿ ಎಡಿಟರ್ ಕೆಲಸ ಸಿಗುತ್ತದೆ. ಇಲ್ಲಿ ಅವರುಗಳು, ಯು.ಎನ್.ಐ ಮತ್ತು ಪಿ.ಟಿ.ಐ ಗಳಿಂದ ಬರುವ
ಸುದ್ದಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಬೇಕಾಗುತ್ತದೆ. ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ
ಹೊಂದಿರಬೇಕಾದ್ದು ಅತ್ಯಂತ ಮುಖ್ಯ! ರೆಡ್ ಇಂಡಿಯನ್ನರನ್ನು ಕೆಂಪು ಭಾರತೀಯರೂ ಎಂದೂ ಲೇಟ್ ಪ್ರೈಮ್
ಮಿನಿಸ್ಟರ್ ರಾಜೀವ್ ಗಾಂಧಿ ಎನ್ನುವುದನ್ನು ತಡವಾಗಿ ಆಗಮಿಸಿದ ರಾಜೀವ್ ಗಾಂಧಿ ಎಂದೂ ಬರೆದು
ನಗೆಪಾಟಲಿಗೆ ಈಡಾದವರನ್ನು ನಾನೇ ಕಂಡಿದ್ದೇನೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಸಕ್ತಿ
ಹೊಂದಿರುವುದು ಮತ್ತು ನಿಮ್ಮೆದುರಿಗೆ ಇರುವ ಸಾವಿರಾರು ಸುದ್ದಿಗಳಲ್ಲಿ ಯಾವುದನ್ನು
’ಆಕರ್ಷಕವಾಗಿ’ ಪ್ರಸ್ತುತಪಡಿಸಬಹುದು ಎಂಬುದನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ.
ಏಕೆಂದರೆ ದಿನವಿಡೀ ಸುದ್ದಿಗಳ ಮೇಲೆ ಸುದ್ದಿಗಳನ್ನು ಹುಡುಕಬೇಕಾದ ಅನಿವಾರ್ಯತೆಯನ್ನು ವಾರ್ತಾ
ವಾಹಿನಿಗಳು ಹೊಂದಿವೆ. ಎಷ್ಟೇ ವಿಧದ ಸುದ್ದಿಗಳಿದ್ದರೂ ಸಾಕಾಗಾದ ಸನ್ನಿವೇಶಗಳಿವೆ. ಸುಮ್ಮನೇ
ಸಿಕ್ಕ ಸಿಕ್ಕ ನ್ಯೂಸನ್ನು ಪ್ರಸಾರ ಮಾಡುವಂತೆಯೂ ಇಲ್ಲ. ಏಕೆಂದರೆ ಟಿ.ಆರ್.ಪಿ ಎಂಬ ಭೂತ ಇವರ
ಬೆನ್ನ ಹಿಂದೇ ನಿಂತು ಕಾಡುತ್ತದೆ. ಹೀಗಾಗಿಯೇ ಇರುವ ಸುದ್ದಿಗಳಲ್ಲಿ ಅತ್ಯುತ್ತಮವಾದುದನ್ನು
ಹೆಕ್ಕಿ ಪ್ರಸಾರ ಮಾಡುವ ಒತ್ತಡ ಇರುತ್ತದೆ.
ಹೀಗಾಗಿ ಮಾಮೂಲಿ
ಸುದ್ದಿ ಮೂಲಗಳು ಮಾತ್ರವಲ್ಲದೇ ಅಂತರ್ಜಾಲವನ್ನು ಜಾಲಾಡಿ ಉತ್ತಮ ಸುದ್ದಿಗಳನ್ನು ಹುಡುಕುವ
ಕೆಲಸವನ್ನೂ ಕೂಡ ಕಾಪಿ ಎಡಿಟರ್ ಗಳು ಮಾಡಬೇಕು. ನೆನಪಿರಲಿ. ಇಲ್ಲಿ ಹೇಳಿದ್ದಕ್ಕಿಂತ ಕೊಂಚ
ಹೆಚ್ಚಿಗೆ ಕೆಲಸವನ್ನು ಸಮರ್ಥವಾಗಿ ಮಾಡುವವರಿಗೆ ಬೆಲೆ ಜಾಸ್ತಿ. ದೂರದ ನಾರ್ವೆಯಲ್ಲಿ ಯಾವನೋ
ಭಯೋತ್ಪಾದಕ ಹಾಡು ಹಗಲೇ ದಾಳಿ ಮಾಡಿ ನೂರಾರು ಜನರನ್ನು ಕೊಂದ ಘಟನೆಯ ವಿಡೀಯೋ ನ ಕಾಪಿ ಎಡಿಟರ್
ಒಬ್ಬ ಯೂಟ್ಯೂಬ್ ನಲ್ಲಿ ಹುಡುಕಿ ಕೊಟ್ಟರೆ, ಯಾರೂ ಬೇಡ ಎನ್ನುವುದಿಲ್ಲ. ಇನ್ನು ಕೆಲ ಬಾರಿ ಜಿಲ್ಲೆಗಳಿಂದ ಬರುವ ಸುದ್ದಿಗಳನ್ನು ಎಡಿಟ್ ಮಾಡಿ
ಕೊಡುವ ಕೆಲಸ ಕೂಡ ಕಾಪಿ ಎಡಿಟರ್ ಗಳಿಗೆ ಬರುತ್ತದೆ. ಅವರುಗಳು ಕಳುಹಿಸುವ ವಿಡಿಯೋ ಪ್ರಮಾಣ ನೋಡಿ,
ಅದಕ್ಕೆ ತಕ್ಕಂತೆ ಸ್ಕ್ರಿಪ್ಟ್ ತಿದ್ದುಪಡಿ ಮಾಡಬೇಕು.
ಕೆಲ ಅನನುಭವಿ ರಿಪೋರ್ಟರ್ ಗಳು ನಾಲ್ಕು ಪುಟ ಸುದ್ದಿ ಬರೆದು ಕಳಿಸಿ, ಅದಕ್ಕೆ ಮೂವತ್ತು ಸೆಕೆಂಡಿನ ವೀಡಿಯೋ ಕಳಿಸಿರುತ್ತಾರೆ!
ವಿದ್ಯುನ್ಮಾನ
ಮಾಧ್ಯಮದಲ್ಲಿ ಬಳಸುವ ಭಾಷೆಯ ಬಗ್ಗೆ ಕೂಡ ಎಚ್ಚರ ವಹಿಸಬೇಕಾಗುತ್ತದೆ. ಇಲ್ಲಿ ಸುದ್ದಿಯು ವಿಡಿಯೋ
ಚಿತ್ರಿಕೆಗಳನ್ನು ಆಧರಿಸುವುದರಿಂದ, ಬರೆಯುವ ವಿಚಾರ
ಅದನ್ನು ಮೀರಬಾರದು. ನಾನು ಕೆಲಸಕ್ಕೆ ಸೇರಿಕೊಂಡ ಮೊದಲಿಗೆ ಬಡತನದಲ್ಲಿ ಬಳಲಿ ಏನೋ ತೊಂದರೆ
ಅನುಭವಿಸುತ್ತಿರುವ ಹೆಂಗಸೊಬ್ಬಳ ಬಗ್ಗೆ ಸುದ್ದಿ ಬರೆದುಕೊಡು ಎಂದರು. ನಾನು ಯಥಾಸಾಧ್ಯ
ರೂಪಕಗಳನ್ನೆಲ್ಲ ಬಳಸಿ ಕಾವ್ಯತ್ಮಕವಾದ ಸ್ಕ್ರಿಪ್ಟ್ ಬರೆದೆ. “ಬಾಳು ಸುಂಟರಗಾಳಿ ಸಿಕ್ಕ
ಬಾಳೆಮರದಂತಾಯ್ತು’, ”ಹಾಯಿಯಿಲ್ಲದ
ದೋಣಿಯಂತೆ ಆಕೆ ದಿಕ್ಕುತಪ್ಪಿದ್ದಾಳೆ” ಇತ್ಯಾದಿ. ಹೊಗಳಿಕೆಯ ನಿರೀಕ್ಷೆಯಲ್ಲಿದ್ದ ನನ್ನನ್ನು
ಕರೆದ ನಮ್ಮ ವಾರ್ತಾ ಮುಖ್ಯಸ್ಥರು, ನೀನು
ಬರೆದಿದ್ದಕ್ಕೆಲ್ಲ ವಿಶುವಲ್ ಎಲ್ಲಿಂದ ತರಲಿ ಮಾರಾಯಾ? ಸುಂಟರಗಾಳಿ, ಹಾಯಿ ತಪ್ಪಿದ ದೋಣಿ
ಎಲ್ಲಿದೆ ಎಂದು ಕೇಳಿದರು. ಆವತ್ತು ಅವರು ಹೇಳಿದ್ದು ನನ್ನ ಮನಸ್ಸಲ್ಲಿ ಇನ್ನೂ ಉಳಿದಿದೆ. “
ದೃಶ್ಯ ಮಾಧ್ಯಮದಲ್ಲಿ ಅತಿಯಾದ ರೂಪಕ, ಉಪಮೆಗಳನ್ನು ಬಳಸುವ
ಅಗತ್ಯವಿಲ್ಲ, ಏಕೆಂದರೆ ಏನು
ಹೇಳಬೇಕೋ, ಅದನ್ನು ಜನರಿಗೆ ಅವರ
ಎದುರಿಗೆ ಕಾಣುತ್ತಿರುವ ದೃಶ್ಯ ಹೇಳುತ್ತದೆ. ಕಷ್ಟದಲ್ಲಿರೋ ಹೆಂಗಸಿನ ಮನೆ ನೋಡಿದರೆ, ಅವಳ ಮುಖ ನೋಡಿದರೆ ಏನು ವಿಷಯ ಅಂತ ಗೊತ್ತಾಗುತ್ತದೆ.
ಅದನ್ನ ಮತ್ತೆ ಕರುಳು ಕಿವಿಚುವ ಸ್ಕ್ರಿಪ್ಟ್ ಮುಖಾಂತರ ಹೇಳುವ ಅವಶ್ಯಕತೆ ಇಲ್ಲ. ಸರಳವಾಗಿ
ಹೇಳಿದರೆ ಸಾಕು”. ನೇರವಾಗಿ, ಸುತ್ತು ಬಳಸಿ
ಹೇಳದೇ, ’ಟು ದಿ ಪಾಯಿಂಟ್’ ಹೇಳುವ
ಚಾಕಚಕ್ಯತೆ ಇಲ್ಲಿ ಮುಖ್ಯ.
ನ್ಯೂಸ್ ಚಾನಲ್
ಗಳಲ್ಲಿ ಪ್ರಸಾರವಾಗುವ ನ್ಯೂಸ್ ಅನ್ನು ಕಟ್ಟುವ ಕೆಲಸ ಮಾಡಲು ಹಲವು ಸ್ತರಗಳಿವೆ. ದೇಶ ವಿದೇಶಗಳ
ಸುದ್ದಿಯನ್ನು ಕಲೆ ಹಾಕಿ ಕೊಡುವ ಕಾಪಿ ಎಡಿಟರ್ ಗಳು, ಅದಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಅಂತರ್ಜಾಲದಿಂದಲೋ, ಇತರ ಸುದ್ದಿ ವಾಹಿನಿಗಳಿಂದಲೋ ಆಯ್ದು
ಕೊಡಬೇಕಾಗುತ್ತದೆ. ಇವರು ನೀಡಿದ ಸುದ್ದಿಗೆ ಧ್ವನಿ ನೀಡಿ, ನಂತರ ಅದನ್ನು ಸಂಬಂಧಿಸಿದ ವಿಡಿಯೋ ಗೆ ಜೋಡಿಸುವ ಕೆಲಸವನ್ನು ವೀಡಿಯೋ
ಎಡಿಟರ್ ಗಳು ಮಾಡುತ್ತಾರೆ. ಪ್ರಾಯಶ: ಸುದ್ದಿಮನೆಯೊಳಗೆ ಅತ್ಯಂತ ಒತ್ತಡದಿಂದ ಕಾರ್ಯ ನಿರ್ವಹಿಸುವ
ಪಡೆ ಈ ವೀಡಿಯೋ ಎಡಿಟರ್ ಗಳದು. ಅವರುಗಳಿಗೆ ತಾವು ಸರಿಯಾದ ಸಮಯದಲ್ಲಿ ದೃಶ್ಯವನ್ನು ಅಲಂಕರಿಸಿ,
ಪ್ರಸಾರಕ್ಕೆ ಕಳಿಸೋ ಒತ್ತಡದ ಜೊತೆಗೆ ಅದು
ಸರಿಯಾಗಿದೆಯೇ ಇಲ್ಲವೇ ಎಂಬುದನ್ನೂ ಗಮನಿಸಬೇಕಾಗುತ್ತದೆ. ಒಂದು ಬಾರಿ ನಮ್ಮಲ್ಲಿ ಒಬ್ಬ ಹೊಸ
ವೀಡಿಯೋ ಎಡಿಟರ್, ಕರೀಷ್ಮಾ ಕಪೂರ್
ಡೈವರ್ಸ್ ತಗೋತಿದಾಳೆ ಅಂತೇನೋ ಬಂದ ಸುದ್ದಿಯಲ್ಲಿ ಅವಳ ಬದಲಾಗಿ ಕರೀನಾ ಕಪೂರ್ ವಿಶುವಲ್ ಹಾಕಿ
ಕಳಿಸಿದ್ದ. ಇನ್ನು ರಾಜಕಾರಣಿಗಳ ಮುಖ ಪರಿಚಯ ಸರಿಯಾಗಿ ಆಗದೇ, ಗೋಪಿನಾಥ್ ಮುಂಡೆ ಬದಲಿಗೆ ವಿಲಾಸ್ ರಾವ್ ದೇಶ್ ಮುಖ್ ಮುಖ
ಪ್ರಸಾರವಾಗೋದು, ಎ.ರಾಜಾ ಬದಲಿಗೆ
ಮುರಸೋಳಿ ಮಾರನ್ ದೃಶ್ಯ ಕಾಣುವುದೂ ಆಗುತ್ತಿರುತ್ತದೆ.
ಆದರೆ ಯಾರ ಬದಲಿಗೆ
ಯಾರದೋ ಫೋಟೋ ಪ್ರಸಾರವಾಗಿ ಇಂಗ್ಲೀಷ್ ನ್ಯೂಸ್ ಚಾನಲೊಂದರ ಗ್ರಹಚಾರ ಕೆಟ್ಟ ಘಟನೆಯೂ ನಡೆದಿದೆ.
೨೦೦೮ರಲ್ಲಿ, ಗಝಿಯಾಬಾದ್
ಪ್ರಾವಿಡೆಂಡ್ ಫಂಡ್ ಹಗರಣದ ಬಗ್ಗೆ ವರದಿ ಮಾಡುತ್ತಾ, ಟೈಮ್ಸ್ ನೌ ವಾಹಿನಿ ನ್ಯಾಯಮೂರ್ತಿ ಸಮಂತಾ ಅವರ ಚಿತ್ರವನ್ನು ತೋರಿಸುವ
ಬದಲಿಗೆ, ಜಸ್ಟಿಸ್ ಪಿ.ಬಿ. ಸಾವಂತ್
ಅವರ ಚಿತ್ರವನ್ನು ಪ್ರಸಾರ ಮಾಡಿಬಿಟ್ಟಿತು. ಅದು ಕೂಡ ಕೇವಲ ೧೫ ಸೆಕೆಂಡ್ ಗಳ ಮಟ್ಟಿಗಷ್ಟೇ.ಕೂಡಲೇ
ಎಚ್ಚೆತ್ತುಕೊಂಡ ಚಾನಲ್, ನಂತರ ತಾನು ಮಾಡಿದ
ತಪ್ಪಿಗೆ ಕ್ಷಮೆ ಕೂಡ ಕೇಳಿತು. ತಾಂತ್ರಿಕ ದೋಷದಿಂದ ಈ ಸಮಸ್ಯೆ ಆಯಿತು ಎಂದ ಚಾನಲ್, ಐದು ದಿನ ನಿರಂತರವಾಗಿ ಸ್ಕ್ರೋಲ್ ನಲ್ಲಿ ಕ್ಷಮಾಪಣೆ
ಪ್ರಸಾರ ಮಾಡಿತು. ಆದರೆ ಯಾವುದಕ್ಕೂ ಜಗ್ಗದ ಸಾವಂತ್, ಪುಣೆ ಜಿಲ್ಲಾ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದರು. ಅಲ್ಲಿ ಟೈಮ್ಸ್
ನೌ ಗೆ ನೂರು ಕೋಟಿ ರೂಪಾಯಿ ದಂಡ ಹೇರಲಾಯಿತು. ಮುಂದೆ ಬಾಂಬೆ ಹೈಕೋರ್ಟ್ , ಕೊನೆಗೆ ಸುಪ್ರೀಂ ಕೋರ್ಟ್ ಕೂಡ ನೂರು ಕೋಟಿ ದಂಡವನ್ನೇ
ಖಾಯಂ ಮಾಡಿತು! ಒಬ್ಬ ವಿಡಿಯೋ ಎಡಿಟರ್, ಕೆಲಸದ ಒತ್ತಡದಲ್ಲಿ
ಮಾಡಿರಬಹುದಾದ, ಮೇಲ್ನೋಟಕ್ಕೆ ಕ್ಷುಲ್ಲಕವಾಗಿ
ಕಾಣುವ ಈ ತಪ್ಪಿಗೆ ವಾಹಿನಿ ತೆರಬೇಕಾಗಿ ಬಂದ ಮೊತ್ತ ನೋಡಿ!! . ಹೀಗಾಗಿ, ತಾಂತ್ರಿಕ ಕೆಲಸ ಮಾಡುವವನೂ ಕೂಡ ಸಾಮಾನ್ಯ ಜ್ಞಾನ
ಹೊಂದಿರಲೇಬೇಕಾದ್ದು ಈ ಮಾಧ್ಯಮದ ಅನಿವಾರ್ಯತೆ.
ರಾಜ್ಯ ಮಟ್ಟದ
ಸುದ್ದಿಗಳು ಜಿಲ್ಲಾ ವರದಿಗಾರರಿಂದ ಬರುತ್ತವೆ. ಅವರು ಅಂತರ್ಜಾಲದ ಮೂಲಕ ವೀಡಿಯೋ ಕ್ಲಿಪ್ಲಿಂಗ್
ಗಳನ್ನು ಮತ್ತು ವರದಿಗಳನ್ನು ಕಳುಹಿಸುತ್ತಾರೆ. ಅಲ್ಲಿಂದ ಬಂದ ವರದಿಗಳಲ್ಲಿ ಪ್ರಮುಖ
ಸುದ್ದಿಗಳನ್ನು ಆಯ್ದುಕೊಂದು ಪ್ರಸಾರ ಮಾಡಲಾಗುತ್ತದೆ. ಇನ್ನುಳಿದಂತೆ ರಾಜಕೀಯ, ಸಿನಿಮಾ, ಸಾಹಿತ್ಯ, ಕ್ರೈಂ, ಆರೋಗ್ಯ,ಕ್ರೀಡೆ ಹೀಗೆ ಒಂದೊಂದು ವಿಭಾಗಕ್ಕೆ ಅವಶ್ಯಕತೆಗೆ ಬೇಕಾದಷ್ಟು ವರದಿಗಾರರನ್ನು ವಾಹಿನಿಗಳು
ಹೊಂದಿರುತ್ತವೆ. ರಿಪೋರ್ಟಿಂಗ್ ಭಾಷೆಯಲ್ಲಿ ಇದಕ್ಕೆ ಬೀಟ್ ಎನ್ನುತ್ತಾರೆ. ಆಯಾಯಾ ಬೀಟ್ ನ
ವರದಿಗಾರ, ಪ್ರತಿನಿತ್ಯ ತನ್ನ ಪಾಲಿನ
ಸುದ್ದಿಗಳನ್ನು ತಂದುಕೊಡುತ್ತಾನೆ. ದೈನಂದಿನ ಮಾಮೂಲಿ ಸುದ್ದಿಗಳ ಜೊತೆಗೆ ಹೆಚ್ಚಿನ ವರದಿಗಾರರು
ತಮ್ಮದೇ ಆದ ಜಾಲವನ್ನು ಬೆಳೆಸಿಕೊಂಡು, ಸುದ್ದಿಸಂಗ್ರಹ ಮಾಡುತ್ತಾರೆ.
ಪತ್ರಿಕೆಗಳಲ್ಲಿನ ವರದಿಗಾರರ ಕೆಲಸವನ್ನೇ ಸುದ್ದಿವಾಹಿನಿಗಳಲ್ಲಿನ ರಿಪೋರ್ಟರ್ ಗಳು ಮಾಡಿದರೂ,
ಇಲ್ಲಿ ವರದಿಗಾರ ಮತ್ತು ಕ್ಯಾಮರಾಮನ್ ರ ಮಧ್ಯದ ಸಂಬಂಧ
ಅತ್ಯಂತ ಮುಖ್ಯ.
ಕ್ಯಾಮರಾಮನ್
ಆದವನಿಗೆ ತನ್ನ ಜೊತೆಗಿರುವ ರಿಪೋರ್ಟರ್ ಯಾವ ರೀತಿಯ ದೃಶ್ಯಗಳನ್ನು ಬಯಸುತ್ತಿದ್ದಾನೆ ಎನ್ನುವುದು
ತಿಳಿದಿರಬೇಕು. ಸಾಮಾನ್ಯ ಸುದ್ದಿಗೋಷ್ಠಿಗಳಲ್ಲಿ ಹೆಚ್ಚಿನ ಸಮಸ್ಯೆಗಳೇನೂ ಇರುವುದಿಲ್ಲವಾದರೂ,
ವಿಶೇಷ ಸುದ್ದಿಗಳನ್ನು ಮಾಡುವಾಗ, ಸಂದರ್ಶನಗಳ ಸಂದರ್ಭದಲ್ಲಿ ವರದಿಗಾರದ ಕಣ್ಸನ್ನೆ
ಅರಿತುಕೊಂಡು ಕ್ಯಾಮರಾ ಕೆಲಸ ಮಾಡಬೇಕಾಗುತ್ತದೆ. ನಾನೊಬ್ಬ ಮಾದಕ ದೃವ್ಯ ವ್ಯಸನಿಯ ಬಳಿ ಮಾಹಿತಿ
ಕಲೆ ಹಾಕಬೇಕಿದ್ದರೆ, ಕ್ಯಾಮರಾಮನ್
ಆತನಿಗೆ ಗೊತ್ತೇ ಇಲ್ಲದ ಹಾಗೆ ಚಿತ್ರೀಕರಣ ಮಾಡಿಕೊಂಡು ಬಿಟ್ಟಿದ್ದರು. ನಮ್ಮ ಬಳಿ ಏನೇ ಅಧಿಕೃತ
ಮಾಹಿತಿ ಇದ್ದರೂ ಕೂಡ, ಅದನ್ನು
ಸಮರ್ಥಿಸಿಕೊಳ್ಳುವ ದೃಶ್ಯಾವಳಿಗಳಿದ್ದರೆ ಮಾತ್ರ ಆ ಸುದ್ದಿಗೆ ಬೆಲೆ. ಸುಖಾ ಸುಮ್ಮನೆ ಗಾಳಿಯಲ್ಲಿ
ಸುದ್ದಿ ತೇಲಿ ಬಿಡುವುದು ಅಪರಾಧವಾಗುತ್ತದೆ.
ಕ್ಯಾಮರಾಮನ್ ಗಳ
ಪ್ರಾಮುಖ್ಯತೆ ಇತ್ತೀಚಿನ ದಿನಗಳಲ್ಲಿ ಸರಿಯಾಗಿ ತಿಳಿದಿದ್ದು ಲಕ್ಷ್ಮಣ ಸವದಿ ಪ್ರಕರಣದಲ್ಲಿ. ಅವರ
ಅವಲಕ್ಷಣದ ಕಥೆ ಎಲ್ಲರಿಗೂ ಗೊತ್ತೇ ಇದೆ. ನೋಡಬಾರದ್ದನ್ನ ನೋಡಬಾರದ ಜಾಗದಲ್ಲಿ ನೋಡಿ ಅವರಿಗೆ
ಆಗಬಾರದ್ದು ಆಗಿದ್ದಕ್ಕೆ ಕಾರಣ ಕ್ಯಾಮರಾಮನ್ ಗಳೇ. ರಾಜ್ಯ ಬಿಡಿ, ರಾಷ್ಟ್ರ, ಅಂತರಾಷ್ಟ್ರೀಯ
ಮಟ್ಟದಲ್ಲಿ ಕೂಡ ಈ ಪ್ರಕರಣ ಸುದ್ದಿಯಾಯಿತು. ಬಿಬಿಸಿ, ರಾಯ್ಟರ್ಸ್ ಕೂಡ ಈ ಸುದ್ದಿಯನ್ನು ಪ್ರಕಟಿಸಿದವು. ಕನ್ನಡದ ಎರಡು ಮೂರು
ವಾರ್ತಾ ವಾಹಿನಿಗಳು ನಾಮುಂದು ತಾಮುಂದು ಎಂದು ಈ ಕರ್ಮಕಾಂಡವನ್ನು ’ಎಕ್ಸ್ ಕ್ಲೂಸಿವ್’ ಎಂದು
ಪ್ರಸಾರ ಮಾಡಿದವು. ಎಲ್ಲರ ಪ್ರಕಾರ ತಾವುಗಳೇ ಆ ದೃಶ್ಯವನ್ನು ಮೊದಲು ಕಂಡಿದ್ದು-ಪ್ರಸಾರ
ಮಾಡಿದ್ದು. ಕೊನೆ ಕೊನೆಗೆ ಪ್ರತಿ ವಾಹಿನಿಗಳಲ್ಲೂ ಸವದಿ ಸಾಹೇಬರು ಮೊಬೈಲ್ ಹಿಡಿದುಕೊಂಡು ಕೂತ
ಸೀನು ನೋಡಿ ನೋಡಿ ವೀಕ್ಷಕರಿಗೆ ಯಾರು ಮೊದಲು ಯಾರು ಕೊನೆ ಎಂಬುದೇ ಮರೆತು ಹೋಗಿರಬೇಕು. ಆದರೆ
ಆವತ್ತು ನಿಜಕ್ಕೂ ಆಗಿದ್ದೇನು? ಸಾಮಾನ್ಯವಾಗಿ
ವಿಧಾನಸಭೆಯ ಅಧಿವೇಶನದ ಚಿತ್ರೀಕರಣಕ್ಕೆ ಎಲ್ಲ ವಾರ್ತಾ ವಾಹಿನಿಗಳ ಕ್ಯಾಮರಾಮನ್ ಗಳೂ
ಹೋಗಿರುತ್ತಾರೆ. ಆವತ್ತೂ ಕೂಡ ಹಾಗೆ ಹೋಗಿದ್ದ
ಸಂದರ್ಭದಲ್ಲಿ ಯಾವುದೋ ಒಂದು ವಾಹಿನಿಯ ಕ್ಯಾಮರಾಮನ್ ಗೆ ಈ ದೃಶ್ಯ ಕಂಡಿದೆ, “ಕಾಗೆಯೊಂದಗುಳ ಕಂಡರೆ ಕೂಗಿ ಕರೆಯದೇ ಕುಲಬಾಂಧವರ”
ಎನ್ನುವ ಹಾಗೆ ಆತ, ತನ್ನ
ಸ್ನೇಹಿತರನ್ನೂ ಕರೆದು ಈ ಸನ್ನಿವೇಶ ತೋರಿಸಿದ್ದಾನೆ. ಆ ಕ್ಷಣಕ್ಕೆ ಅಲ್ಲಿದ್ದವರಿಗೆ ಯಾರಿಗೂ ಕೂಡ
ಈ ಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡುತ್ತದೆ- ಸುದ್ದಿಯಾಗುತ್ತದೆ ಎನ್ನುವ ಅರಿವು ಇದ್ದಿರಲಾರದು.
ಯಾವುದೋ ಒಂದು ಚಾನಲ್ ಕೂಡಲೇ ಆ ದೃಶ್ಯಗಳನ್ನು ಪ್ರಸಾರ ಮಾಡಿದೆ. ಕೂಡಲೇ ಎಚ್ಚೆತ್ತುಕೊಂಡ ಇತರ
ವಾಹಿನಿಗಳೊ ತಮ್ಮ ಬಳಿಯೂ ಈ ಚಿತ್ರಿಕೆ ಇದೆ ಎಂದು ಅವುಗಳನ್ನು ಪ್ರಸಾರ ಮಾಡಲು ಆರಂಭಿಸಿವೆ.
ಹೀಗಾಗಿ ಎಲ್ಲರೂ ಎಕ್ಸ್ ಕ್ಲೂಸಿವ್ ಹಾಕುವವರೇ!
ಏನೇ ಆಗಲಿ ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಈ ಪ್ರಕರಣ ಮೂಡಿಸಿದ
ಸಂಚಲನ ಮರೆಯುವಂತಿಲ್ಲ.
ಆದರೆ ಇಂತಹ
ಸುದ್ದಿಗಳು, ಎಲ್ಲೋ ಸಾವಿರಕ್ಕೆ
ಒಂದು ಎಂಬಂತೆ ಅಚಾನಕ್ಕಾಗಿ ದೊರಕುತ್ತವೆ ಅಷ್ಟೇ. ಉಳಿದೆಲ್ಲ ಸಂದರ್ಭಗಳಲ್ಲಿ ವರದಿಗಾರರು ಕಷ್ಟಪಟ್ಟೇ
ಸುದ್ದಿ ಹೊಂದಿಸಿಕೊಳ್ಳಬೇಕು. ತಮ್ಮ ಸುದ್ದಿಗೆ
ಪೂರಕವಾದ ಸಂಶೋಧನೆಯನ್ನು ಮಾಡುವ ಅಗತ್ಯ ವರದಿಗಾರರಿಗೆ ಇದೆ. ಅಂತರ್ಜಾಲವನ್ನು ಜಾಲಾಡುವ,
ಬರೀ ಸುದ್ದಿ ಕಿವಿಗೆ ಬಿದ್ದ ಕೂಡಲೇ ಅದನ್ನು ಹೌದೆಂದು
ಒಪ್ಪಿಕೊಳ್ಳದೇ ಸುದ್ದಿಗಳ ನಿಖರತೆಯನ್ನು ಅರಿತುಕೊಳ್ಳುವ ಉತ್ಸಾಹ ಅತ್ಯಂತ ಅಗತ್ಯ. ಬೆಂಗಳೂರಿನ
ಕಾರ್ಲಟನ್ ಟವರ್ ಗೆ ಬೆಂಕಿ ಬಿದ್ದ ಸುದ್ದಿ ಬಂದಾಗ ನನ್ನ ಸಹೋದ್ಯೋಗಿಯೊಬ್ಬ ಕೂಡಲೇ ತಲೆ
ಉಪಯೋಗಿಸಿ, ಟ್ವಿಟರ್ ಜಾಲಾಡಿ
ಅಲ್ಲಿ ಒಳಗೆ ಸಿಲುಕಿದ್ದ ಮಂದಿ ಮಾಡಿದ ಟ್ವೀಟನ್ನು, ಚಿತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಅದನ್ನು ಪ್ರಸಾರ ಮಾಡುವಂತೆ
ಮಾಡಿದ್ದ. ಬೇರೆ ಚಾನಲ್ ಗಳು ಇನ್ನೂ ಅಲ್ಲಿ ತಲುಪುವ ಮುನ್ನವೇ, ನಾನಿದ್ದ ಚಾನಲಿನಲ್ಲಿ ಸುದ್ದಿ ಚಿತ್ರಗಳ ಸಮೇತವಾಗಿ ಟೆಲಿಕಾಸ್ಟ್
ಆಗಿತ್ತು. ನಿಂತಲ್ಲೇ ಈಶ್ವರನ್ನು ಸುತ್ತಿದ ಗಣಪತಿಯ ತರಹದ ಚಾಣಾಕ್ಷತನ ಇಲ್ಲಿ ಬೇಕು.
ಕ್ರೀಡಾ
ವರದಿಗಾರನಾದ ನನ್ನ ಗೆಳೆಯನೊಬ್ಬನಿಗೆ ಆದ ಅನುಭವ ಮಜವಾಗಿದೆ. ಕನ್ನಡದ ವಾರ್ತಾ ವಾಹಿನಿಗಳ ಅಲಿಖಿತ
ನಿಯಮದ ಪ್ರಕಾರ ಬೆಳಗಿನ ಪಾಳಿಯಲ್ಲಿ ಹೊಸ ಹುಡುಗರು ಹೆಚ್ಚಾಗಿರುತ್ತಾರೆ. ಸೀನಿಯರ್ ವರದಿಗಾರರು
ಬರುವುದು ಸುಮಾರು ಹತ್ತು-ಹನ್ನೊಂದು ಗಂಟೆಗೆ. ಆವತ್ತು ಬೆಳಗ್ಗೆ ಒಂಬತ್ತು ಗಂಟೆಗೆ ಬಂದ
ಬ್ರೇಕಿಂಗ್ ನ್ಯೂಸ್, “ಒಸಾಮಾ ಬಿನ್
ಲಾಡೆನ್ ಹತ್ಯೆ”. ಈತನಿರುವ ಚಾನಲ್ ನಲ್ಲಿ ಆ ಹೊತ್ತಿಗೆ ಯಾರೆಂದರೆ ಯಾರೂ ಸೀನಿಯರ್ ರಿಪೋರ್ಟರ್
ಗಳಿಲ್ಲ. ರಾಜಕೀಯ ವಿಶ್ಲೇಷಣೆ ಮಾಡಬಲ್ಲವರಿಲ್ಲ. ಅವರಿಗೆಲ್ಲ ಫೋನಾಯಿಸಿ ದಡಬಡಗುಟ್ಟಿ
ಬರುವುದಕ್ಕೆ ಅರ್ಧ ಗಂಟೆಯಾದರೂ ಬೇಕು. ಇವನು ತನ್ನ ನೈಟ್ ಶಿಫ್ಟ್ ಕೆಲಸ ಮುಗಿಸಿ,ಮನೆಗೆ ಹೊರಡಲು ಅನುವಾಗುತ್ತಿದ್ದನಂತೆ. ಅಲ್ಲಿದ್ದ
ಬುಲೆಟಿನ್ ಪ್ರೊಡ್ಯೂಸರ್ ಕರೆದವರೇ, ಒಸಾಮಾ ಬಗ್ಗೆ
ಒಂದಿಷ್ಟು ಮಾಹಿತಿ ಕಲೆ ಹಾಕಿ ಕೊಡಲು ಹೇಳಿದರಂತೆ. ಗೂಗಲಲ್ಲಿ ಒಂದಿಷ್ಟು ವಿಚಾರ, ಅಂಕಿ ಅಂಶಗಳನ್ನು ಕೆದಕಿ ಅದನ್ನ ಅವರ ಕೈಗಿತ್ತು
ಹೊರಡಲು ಅನುವಾದಾಗ ಆ ಪ್ರೊಡ್ಯೂಸರ್, “ಒಂದು ಕೆಲ್ಸ ಮಾಡು,
ಹೇಗೂ ಇಷ್ಟು ಮಾಹಿತಿ ಒಟ್ಟು ಮಾಡಿದ್ದೀಯಾ, ಇದನ್ನೇ ಹಿಡಿದುಕೊಂಡು ಸ್ಟುಡಿಯೋ ಗೆ ಹೋಗು, ಆಂಕರ್ ಜೊತೆಗೆ ಸ್ವಲ್ಪ ಹೊತ್ತು ಡಿಸ್ಕಶನ್ ಮಾಡು,
ಅಷ್ಟು ಹೊತ್ತಿಗೆ ಹೇಗೂ ಯಾರಾದರೂ ಬಂದೇ ಬರುತ್ತಾರೆ”
ಅಂತಂದು ಒಳಗೆ ದಬ್ಬಿದರಂತೆ. ಕ್ರೀಡಾ ವರದಿಗಾರನೊಬ್ಬ, ಒಸಮಾ ಹತ್ಯೆ ಬಗ್ಗೆ ಹತ್ತಿಪ್ಪತ್ತು ನಿಮಿಷ ಮಾತನಾಡಬೇಕಿತ್ತು!!
ಇವನಿಗೋ,ಕೈಯಲ್ಲಿರುವ ಎರಡು ಮೂರು ಹಾಳೆ ಪ್ರಿಂಟ್ ಔಟ್ ಬಿಟ್ಟರೆ
ಬೇರೆ ಮಾಹಿತಿ ದೇವರಾಣೆಯಾಗೂ ಗೊತ್ತಿಲ್ಲ. ಎದುರಿಗೆ ಕೂತ ಹೊಸಬ ಆಂಕರ್ ಗೆ ಒಸಾಮ ಎನ್ನುವ
ಭಯೋತ್ಪಾದಕನ ಬಗ್ಗೆ ಮೂರು ಸಾಲಿಗಿಂತ ಹೆಚ್ಚು ಮಾಹಿತಿ ಇಲ್ಲ. ಆದರೂ, ಹೇಗೋ ಮುಂದಿನ ಇಪ್ಪತ್ತು ನಿಮಿಷಗಳ ಕಾಲ ಸ್ವಲ್ಪವೂ ಅನುಮಾನ ಬಾರದ
ಹಾಗೆ ಸನ್ನಿವೇಶವನ್ನು ನಿಭಾಯಿಸಿ ಹೊರ ಬಂದ ಈತ, ತನ್ನ ಚುರುಕು ಬುದ್ಧಿಯಿಂದ ಸುದ್ದಿವಾಹಿನಿಯ ಮರ್ಯಾದೆಯನ್ನೂ ಉಳಿಸಿದ್ದ, ಜೊತೆಗೆ ತನ್ನ ಸೀನಿಯರ್ ಗಳ ವಿಶ್ವಾಸವನ್ನೂ
ಸಂಪಾದಿಸಿದ್ದ.
ಇನ್ನು ಕೆಲ ಬಾರಿ
ಎಷ್ಟೋ ಕಷ್ಟಪಟ್ಟು ಹುಡುಕಿ ತೆಗೆದ ಮಾಹಿತಿಗೆ ಯಾವುದೇ ಬೆಲೆ ಇಲ್ಲವಾಗಿ ಬಿಡುತ್ತದೆ. ಅದಕ್ಕೂ
ಸಿದ್ಧವಾಗಿರಬೇಕು. ನನ್ನ ಸ್ನೇಹಿತನೊಬ್ಬ ಖಾಸಗಿ ನ್ಯೂಸ್ ಚಾನಲೊಂದಕ್ಕೆ ಕೆಲಸ ಮಾಡುತ್ತಾನೆ.
ಆತನಿಗಾದ ಅನುಭವ ಇದು. ಕರ್ನಾಟಕದ ಪ್ರಖ್ಯಾತ ರಾಜಕಾರಣಿಯೊಬ್ಬರು ಸದಾಕಾಲ ಯಾರ ವಿರುದ್ಧ
ವಾಗ್ದಾಳಿ ನಡೆಸುತ್ತ ಬಂದಿದ್ದರೋ, ಆ ಮತ್ತೊಬ್ಬ
ರಾಜಕಾರಣಿಯ ಮನೆಗೆ ಮಧ್ಯರಾತ್ರಿ ಭೇಟಿ ನೀಡಿದ್ದರು. ಈತ ಎದ್ದೆನೋ ಬಿದ್ದೆನೋ ಎಂದು ಕ್ಯಾಮರಾಮನ್
ಜೊತೆಗೆ ಅಲ್ಲಿಗೆ ಓಡಿದ. ಮನೆಯ ಹೊರಗೆ ನಿಂತು ಮೆಲ್ಲನೆ ಶೂಟಿಂಗ್ ಮಾಡಿದ್ದೂ ಆಯಿತು. ಆದರೆ ವಿಷಯ
ತಿಳಿದ ರಾಜಕಾರಣಿ ತನ್ನ ಚೇಲಾಗಳನ್ನ ಇವರಿದ್ದಲ್ಲಿಗೆ ಅಟ್ಟಿದರು. ದಿಕ್ಕಾಪಾಲಾಗಿ ಓಡಿದ ಇವರು
ಯಾವುದೋ ಗಲ್ಲಿಯಲ್ಲಿ ಓಡಿ ಪ್ರಾಣ ಉಳಿಸಿಕೊಳ್ಳಬೇಕಾಯಿತು. ಬೆಳಗಿನ ಜಾವ ಚಾನಲ್ಲಿಗೆ ಹೋಗಿ ಟೇಪು
ಕೊಟ್ಟರೆ ಆ ಸುದ್ದಿ ಪ್ರಸಾರವೇ ಆಗಲಿಲ್ಲ! ಕಾರಣವನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪ್ರತಿ
ಬಾರಿಯೂ ಹೀಗೇ ಆಗಬೇಕು ಎಂದೇನೂ ಇಲ್ಲ. ಆದರೆ ಜೀವದ ಹಂಗು ತೊರೆದು ’ಬ್ರೇಕಿಂಗ್ ನ್ಯೂಸ್’ ಕೊಡಲು
ಹೋಗುವ ಮುನ್ನ ಕೊಂಚ ಎಚ್ಚರಿಂದ ಇರುವುದು ಒಳಿತು.
ಇತ್ತೀಚಿನ
ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿರುವ ಸ್ಟಿಂಗ್ ಆಪರೇಷನ್ ಕೂಡ ಇಂತಹದೇ ಅಪಾಯಕಾರಿ ಕೆಲಸ. ಅಂಗಿಯ
ಗುಂಡಿಯಂತಿರುವ ಕ್ಯಾಮರಾ,ಪೆನ್
ಕ್ಯಾಮರಾಗಳನ್ನು ಹಿಡಿದು ಕಾನೂನು ಬಾಹಿರ ಕೃತ್ಯಗಳನ್ನು ವರದಿ ಮಾಡಲು ಬೆನ್ನು ಬೀಳುವ ವರದಿಗಾರರು
ಹೆಚ್ಚಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿರುತ್ತಾರೆ. ಎಷ್ಟೇ ಆದರೂ ಕೂಡ ಇಂತಹ ಕುಟುಕು
ಕಾರ್ಯಾಚರಣೆಗಳು ಅಪಾಯಕಾರಿ ಸಾಹಸವೇ ಸರಿ. ಆದರೆ ಇವುಗಳು ತಂದುಕೊಡುವ ತಾತ್ಕಾಲಿಕ ಪ್ರಸಿದ್ದಿಗಳು
ಮತ್ತು ಟಿ.ಆರ್.ಪಿಗಳು ವರದಿಗಾರರನ್ನು ಇಂತಹ ಸಾಹಸಕ್ಕೆ ಪ್ರೇರೇಪಿಸುತ್ತವೆ. ಅಲ್ಲದೇ ಇಂತಹ
ಕಾರ್ಯಾಚರಣೆಗಳಿಂದಾಗಿ ಅದೆಷ್ಟೋ ರಾಜಕಾರಣಿಗಳು, ಅಧಿಕಾರಿಗಳ ಮರ್ಯಾದೆ ಬೀದಿಗೆ ಬಂದಿದ್ದನ್ನು ಮರೆಯುವ ಹಾಗಿಲ್ಲ. ಆದರೆ ಕನ್ನಡ
ವಾಹಿನಿಗಳಲ್ಲಿನ ಕುಟುಕು ಕಾರ್ಯಾಚರಣೆಗಳು ಬೋಗಸ್ ಜ್ಯೋತಿಷಿಗಳು ಮತ್ತು ಸಣ್ಣಪುಟ್ಟ ಅಧಿಕಾರಿಗಳ
ಭೃಷ್ಟಾಚಾರ ಹತ್ತಿಕ್ಕುವಲ್ಲಿಗೆ ಸೀಮಿತವಾಗಿವೆ.
ಟಿ.ಆರ್.ಪಿ ಎಂದರೆ,
ಟೆಲಿವಿಷನ್ ರೇಟಿಂಗ್ ಪಾಯಿಂಟ್. ಎಲ್ಲ ವಾಹಿನಿಗಳ
ಯಶಸ್ಸು ಮತ್ತು ಸೋಲನ್ನು ನಿರ್ಧರಿಸುವುದೇ ಈ ಟಿ.ಆರ್.ಪಿ. ಟೆಲಿವಿಷನ್ ಆಡಿಯನ್ಸ್ ಮೆಶರ್ಮೆಂಟ್-
ಟ್ಯಾಮ್ ಅನ್ನುವ ಸಂಸ್ಥೆ ಈ ರೇಟಿಂಗ್ ಗಳನ್ನು ನೋಡಿಕೊಳ್ಳುತ್ತದೆ. ಮನೆ ಮನೆಗಳಲ್ಲಿ ಇಟ್ಟಿರುವ
ಪೀಪಲ್ಸ್ ಮೀಟರ್ ಮುಖಾಂತರ ಯಾರು ಯಾವ ಚಾನಲನ್ನು ಎಷ್ಟು ಹೊತ್ತು ವೀಕ್ಷಿಸುತ್ತಾರೆ ಎಂಬುದು
ತಿಳಿಯುತ್ತದೆ. ಆದರೆ ಈ ವ್ಯವಸ್ಥೆಯ ಬಗ್ಗೆ ಸಾಕಷ್ಟು ಟೀಕೆಗಳಿವೆ. ಇದೊಂದು ಪರಿಪೂರ್ಣ
ಮಾಪನವಲ್ಲ. ಏಕೆಂದರೆ ಒಂದು ಪ್ರದೇಶದ ಕೆಲವೇ ಕೆಲವು ಮನೆಗಳಲ್ಲಿನ ಮೀಟರ್ ಮೂಲಕ ಒಟ್ಟು
ವೀಕ್ಷಕರನ್ನು ಲೆಕ್ಕ ಹಾಕಲಾಗುತ್ತದೆ. ಈ ರೀತಿಯ ’ಸ್ಯಾಂಪ್ಲಿಂಗ್’ ಬಗ್ಗೆ
ಭಿನ್ನಾಭಿಪ್ರಾಯಗಳಿವೆ. ಏನೇ ಆದರೂ ಕೂಡ ಭಾರತದಲ್ಲಿ ಸದ್ಯಕ್ಕೆ ಇದೇ ಮಾನದಂಡವಾಗಿದ್ದು ಎಲ್ಲ
ವಾಹಿನಿಗಳೂ ಕೂಡ ಇದರ ಪ್ರಕಾರವೇ ಕಾರ್ಯ ನಿರ್ವಹಿಸುತ್ತವೆ. ಕರ್ನಾಟಕದಲ್ಲಿ ಒಟ್ಟು ಹನ್ನೆರಡು
ಟ್ಯಾಮ್ ಕೇಂದ್ರಗಳಿದ್ದು ಅಲ್ಲಿ ಈ ಪೀಪಲ್ಸ್ ಮೀಟರ್ ಇಡಲಾಗಿದೆ. ಬೆಂಗಳೂರು, ಮೈಸೂರು, ಮಂಗಳೂರು, ಹಾಸನ, ಹೊಸಪೇಟೆ, ಗದಗ, ಹುಬ್ಬಳ್ಳಿ-ಧಾರವಾಡ
ಇವುಗಳಲ್ಲಿ ಕೆಲವು.
ಉದಾಹರಣೆಗೆ,
ಮಂಗಳೂರು ನಗರದಲ್ಲಿನ ಒಂದಿಷ್ಟು ಟಿ.ಆರ್.ಪಿ ಮೀಟರ್
ಗಳು ಅಲ್ಲಿನ ಇಡೀ ನಗರದ ವೀಕ್ಷಕ ವರ್ಗವನ್ನು ಪ್ರತಿನಿಧಿಸುತ್ತವೆ. ಪಕ್ಕದ ಉಡುಪಿಯಲ್ಲಿ ಮೀಟರ್
ಇಲ್ಲದಿರುವುದರಿಂದ, ಅಲ್ಲಿನ ಜನ ನೋಡಿದ
ಕಾರ್ಯಕ್ರಮಗಳು ಲೆಕ್ಕಕ್ಕೇ ಇಲ್ಲ! ಈ ಇರುವ ಮೀಟರ್ ಗಳಲ್ಲಿ ಸಂಗ್ರಹವಾಗುವ ಮಾಹಿತಿಯನ್ನು
ಡಿ-ಕೋಡ್ ಮಾಡಿ ಯಾವ ಯಾವ ವಾಹಿನಿಯ ಯಾವ ಕಾರ್ಯಕ್ರಮಗಳಿಗೆ ಎಷ್ಟು ರೇಟಿಂಗ್ ಬಂದಿದೆ ಎಂದು
ಕಂಡುಹಿಡಿಯಲಾಗುತ್ತದೆ. ಈ ಸಂಬಂಧಿತ ಅಧ್ಯಯನಕ್ಕೇ ಪ್ರತಿ ವಾಹಿನಿಯಲ್ಲೂ ಪ್ರತ್ಯೇಕ ವಿಭಾಗವಿದೆ.
ಯಾವ ಕಾರ್ಯಕ್ರಮವನ್ನು ಯಾವ ವಯಸ್ಸಿನ ಮಂದಿ ನೋಡಿದರು ಎನ್ನುವ ಆಧಾರದ ಮೇಲೆ, ಅದರಲ್ಲಿ ಪ್ರಸಾರವಾಗುವ ಜಾಹೀರಾತುಗಳು
ನಿರ್ಧರಿಸಲ್ಪಡುತ್ತವೆ. ಹೆಂಗಸರು ಹೆಚ್ಚು ವೀಕ್ಷಿಸುವ ಕಾರ್ಯಕ್ರಮಗಳಲ್ಲಿ ಸೋಪು, ಸ್ಯಾನಿಟರಿ ಪ್ಯಾಡು, ಆಹಾರ ಪದಾರ್ಥಗಳ ಜಾಹೀರಾತು ಬಂದರೆ, ಪುರುಷರು ಹೆಚ್ಚು ನೋಡುತ್ತಾರೆ ಅನ್ನೋ ಶೋ ಗಳಲ್ಲಿ ಮ್ಯೂಚುವಲ್ ಫಂಡ್,
ಬ್ಯಾಂಕ್, ಕಾರು, ಬೈಕುಗಳು ಜಾಹೀರಾತು
ಬರುತ್ತದೆ! ಮಕ್ಕಳು ನೋಡೋ ಕಾರ್ಯಕ್ರಮದಲ್ಲಿ ಜಂಕ್ ಪುಡ್, ತಂಪು ಪಾನೀಯಗಳ ಜಾಹೀರಾತು ಖಾಯಂ. Iಟಿಜiಚಿಟಿಖಿeಟevisioಟಿ.ಛಿom ವೆಬ್ ಸೈಟ್ ನಲ್ಲಿ
ಭಾರತದಾದ್ಯಂತದ ಪ್ರಮುಖ ಚಾನಲ್ ಗಳ ಟಿ.ಆರ್.ಪಿ ಲಭ್ಯವಿದೆ.
ಇನ್ನು ಎಲ್ಲ ಚಾನಲ್
ಗಳೂ ಕೂಡ ತಮ್ಮದೇ ಆದ ಲೈಬ್ರೆರಿಯನ್ನು ಹೊಂದಿರುತ್ತವೆ. ಅವುಗಳನ್ನು ನೋಡಿಕೊಳ್ಳಲೇ ಲೈಬ್ರೆರಿಯನ್
ಇರುತ್ತಾನೆ.ಮುಖ್ಯ ಸುದ್ದಿಗಳನ್ನು ಟೇಪುಗಳಿಗೆ ಬಸಿದಿಟ್ಟು ಕಾಪಾಡಲಾಗುತ್ತದೆ. ಮುಂದೆಂದೋ
ಅದಕ್ಕೆ ಸಂಬಂಧಿಸಿದ ಘಟನೆಗಳು ಜರುಗಿದಾಗ ನಿಮಿಷಾರ್ಧದೊಳಗೆ ಅದನ್ನು ಹುಡುಕಿ ಕೊಡುವ ಜವಾಬ್ದಾರಿ
ಇವರದು. ಲೈಬ್ರರಿಯಲ್ಲಿ ಸಾವಿರಾರು ಟೇಪುಗಳನ್ನು, ಡಿವಿಡಿಗಳನ್ನು ಜೋಡಿಸಿಡಲಾಗುತ್ತದೆ. ಯಾವುದೋ ಹಾಲಿವುಡ್ ಸಿನಿಮಾಕ್ಕೆ ಆಸ್ಕರ್ ಬಂದರೆ,
ಅಲ್ಲೆಲ್ಲೋ ಇಂಡೋನೇಷ್ಯಾದಲ್ಲಿ ಭೂಕಂಪ ಆದರೆ, ಉಗ್ರಗಾಮಿಗಳಿಂದ ಹೊಸ ದಾಳಿ ಆದರೆ ಎಲ್ಲದಕ್ಕೂ ಮೊದಲು
ಓಡಬೇಕಾದ್ದು ಲೈಬ್ರೆರಿಗೇ. ಅಲ್ಲಿನ ಕಂಪ್ಯೂಟರಿನ ಎಕ್ಸೆಲ್ ಶೀಟುಗಳಲ್ಲಿ ಹುಡುಕಿ, ತಮಗೆ ಬೇಕಾದ
ಟೇಪುಗಳನ್ನ ಕ್ಷಣಾರ್ಧದಲ್ಲಿ ಕೊಂಡೊಯ್ದು ಎಡಿಟಿಂಗ್ ಕಂಪ್ಯೂಟರಿನ ಮೂತಿಗೆ ತುರುಕಿ ಬ್ರೇಕಿಂಗ್
ನ್ಯೂಸ್ ಅಂತ ಬರಿದೇ ಅಕ್ಷರ ತೋರಿಸುತ್ತಿದ್ದ ಸ್ಕ್ರೀನಿನ ಮೇಲೆ ಚಿತ್ರ ಮೂಡುವಂತೆ ಮಾಡಬೇಕು.
ಲೈಬ್ರೆರಿಯನ್ ಆದವನಿಗೆ, ತನ್ನ ಸುತ್ತಲಿರುವ
ಅಸಂಖ್ಯ ಟೇಪುಗಳ ರಾಶಿಯಲ್ಲಿ ಎಲ್ಲೆಲ್ಲಿ ಏನೇನಿದೆ ಎಂದು ಖಚಿತವಾಗಿ ಗೊತ್ತಿರಬೇಕು. ಇಲ್ಲದೇ
ಹೋದರೆ ಯಾವುದೋ ಸಂದರ್ಭಕ್ಕೆ ಇನ್ನಾವುದೋ ಟೇಪು ತೋರಿಸಿ ಚಾನಲ್ ನ ಮರ್ಯಾದೆ ಮಣ್ಣುಪಾಲಾಗಬಹುದು.
ಅಥವಾ ಸಿಕ್ಕಿದ ಹತ್ತೆಂಟು ಸೆಕೆಂಡುಗಳ ವಿಶುವಲ್ ಅನ್ನೇ ಮತ್ತೆ ಮತ್ತೆ ತೋರಿಸಿ ನಗೆಪಾಟಲಿಗೆ
ಈಡಾಗಬೇಕಾಗುತ್ತದೆ. ಏಕೆಂದರೆ ಕೊನೆಯ ಕ್ಷಣದಲ್ಲಿ ಅಗತ್ಯ ವೀಡಿಯೋಗಳನ್ನ ಹೊಂದಿಸಿಕೊಳ್ಳಲು
ಸಾಧ್ಯವೇ ಇಲ್ಲ.
ಇನ್ನು ನೇರವಾಗಿ
ಮಾಧ್ಯಮಕ್ಕೆ ಸಂಬಂಧಿಸಿದ್ದಲ್ಲದೇ ತಂತ್ರಜ್ಞಾನಕ್ಕೆ ಸಂಬಧಿಸಿದ ಕೆಲಸ ಮಾಡುವವರೂ ಕೂಡ
ಎಲೆಕ್ಟ್ರಾನಿಕ್ ಮೀಡಿಯಾಕ್ಕೆ ಅವಶ್ಯಕ. ಗ್ರಾಫಿಕ್ ಡಿಸೈನರ್ ಗಳು, ಸಾಫ್ಟ್ ವೇರ್ ಪರಿಣತರು, ಸ್ಯಾಟಲೈಟ್ ಅಪ್ ಲಿಂಕ್ ಮಾಡುವವರು, ಅಕೌಂಟ್ಸ್, ಸೇಲ್ಸ್, ಮಾರ್ಕೆಟಿಂಗ್, ಡ್ರೈವರುಗಳು ಹೀಗೆ ವಿವಿಧ ಬಗೆಯ ಉದ್ಯೋಗಗಳನ್ನು ಮಾಡುವವದು
ಇಲ್ಲಿರುತ್ತಾರೆ. ಒಟ್ಟಿನಲ್ಲಿ ಈ ಎಲ್ಲ ವಿಭಾಗಗಳು ಸೇರಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ
ಮಾತ್ರ, ಒಂದು ದೂರದರ್ಶನ ವಾಹಿನಿ
ಯಶಸ್ವಿಯಾಗಲು ಸಾಧ್ಯ.
ಇವೆಲ್ಲ ನ್ಯೂಸ್
ಚಾನಲ್ ಗೆ ಸಂಬಂಧಿಸಿದ್ದಾದರೆ, ಜಿ.ಇ.ಸಿಗಳು ಅಥವಾ
ಜನರಲ್ ಎಂಟರ್ಟೇನ್ಮೆಂಟ್ ಚಾನಲ್ ಗಳು ಕೂಡ ಹೆಚ್ಚು ಕಡಿಮೆ ಇದೇ ರೀತಿ ಕಾರ್ಯನಿರ್ವಹಿಸುತ್ತವೆ.
ಅವು ಕೇವಲ ಮನರಂಜನಾ ಪ್ರಧಾನ ವಾಹಿನಿಗಳಾಗಿರುವುದರಿಂದ ಅಲ್ಲಿ ವಾರ್ತೆಗಳ ಬಗೆಗಿನ ಒತ್ತಡ
ಇರುವುದಿಲ್ಲ. ಬದಲಿಗೆ ಗೇಮ್ ಶೋ ಗಳು, ರಿಯಾಲಿಟಿ ಶೋ ಗಳು
ಮತ್ತು ಧಾರಾವಾಹಿಗಳು ಮುಖ್ಯವಾಗುತ್ತವೆ. ಅಲ್ಲಿನ ಹೆಚ್ಚಿನ ಕಾರ್ಯಕ್ರಮಗಳು ಮೊದಲೇ ರೆಕಾರ್ಡ್
ಆಗಿದ್ದು ನಂತರ ಪ್ರಸಾರವಾಗುತ್ತವೆ. ಮತ್ತು ಇಲ್ಲಿನ ಕಾರ್ಯಕ್ರಮಗಳು ಮತ್ತಷ್ಟು
ವೈಭವೋಪೇತವಾಗಿರುತ್ತವೆ. ಬರಹಗಾರರಿಗೆ ಮತ್ತು ತಂತ್ರಜ್ಞರಿಗೆ ಇಲ್ಲಿ ಬೇಡಿಕೆ ಹೆಚ್ಚು.
ಇತ್ತೀಚಿನ
ದಿನಗಳಲ್ಲಂತೂ ಟಿವಿ ವಾಹಿನಿಗಳ ಕಾರ್ಯ ವೈಖರಿ ಮತ್ತು ಕೆಲಸದ ವೇಗ ಗಣನೀಯವಾಗಿ ಬದಲಾಗುತ್ತಿದೆ.
ಹೊಸ ತಂತ್ರಜ್ಞಾನಗಳ ಬಳಕೆ, ಹೆಚ್ಚುತ್ತಿರುವ
ಚಾನಲುಗಳು, ಬದಲಾಗುತ್ತಿರುವ
ಜನರ ಆಸಕ್ತಿ ಇವುಗಳೆಲ್ಲದರಿಂದ ನ್ಯೂಸ್ ಅನ್ನು ನೋಡುವ ವಿಧಾನವೇ ಬದಲಾಗುತ್ತಿದೆ. ವೀಕ್ಷಕರನ್ನು
ಸೆಳೆಯಲು ಏನೇನೋ ದ್ರಾವಿಡ ಪ್ರಾಣಾಯಾಮಗಳನ್ನು ವಾಹಿನಿಗಳು ಮಾಡುತ್ತಿವೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಗುರುತಿಸಲಾಗದ ವೇಗದಲ್ಲಿ
ಇವುಗಳು ಮುನ್ನಡೆಯುತ್ತಿವೆ.
ಸುದ್ದಿಗಳನ್ನು
ಪಡೆಯುವ ಹಪಹಪಿಯಲ್ಲಿ ಇತ್ತೀಚಿಗೆ ವರದಿಗಾರರು ಟೆರರಿಸ್ಟ್ ಗಳಂತೆ ವರ್ತಿಸುತ್ತಾರೆ ಎಂಬ ಆಪಾದನೆಯೂ
ಇದೆ. ಇದು ಕೊಂಚ ಮಟ್ಟಿಗೆ ನಿಜ. ಇತರ ವಾಹಿನಿಗಳಿಗಿಂತ ಮೊದಲೇ ನಾವು ಸುದ್ದಿ ನೀಡಬೇಕು ಎಂಬ
ಅತ್ಯಾಸೆ, ವರದಿಗಾರರನ್ನು ಈ ರೀತಿ
ಮಾಡಲು ಪ್ರೇರೇಪಿಸುತ್ತದೆ. ಗಣ್ಯರ ವೈಯಕ್ತಿಕ ವಲಯದೊಳಗೆ ನುಗ್ಗುವುದು, ಗಾಳಿ ಸುದ್ದಿಗೇ
ಹೆಚ್ಚಿನ ಮಹತ್ವ ನೀಡುವುದು, ವಿಷಯಕ್ಕಿಂತ
ವ್ಯಕ್ತಿಗೆ ಪ್ರಾಧಾನ್ಯತೆ ನೀಡುವುದು, ಸರಿಯಾದ ಆಧಾರಗಳಿಲ್ಲದ,
ಸಂಶೋಧನೆ ಮಾಡದ ಸುದ್ದಿಗಳನ್ನು ಪ್ರಸಾರ ಮಾಡುವುದು
ಇತ್ಯಾದಿ ಘಟನೆಗಳು ಇತ್ತೀಚಿನ ದಿನಗಳಲ್ಲಿ ಪದೇ ಪದೇ ಕಂಡುಬರುತ್ತಿವೆ. ಹೀಗಾಗಿ ಇಂತಹ
ಸಂದರ್ಭದಲ್ಲಿ, ವಿವೇಚನೆಯನ್ನು
ಕಳೆದುಕೊಳ್ಳದೇ ತಾವು ಸರಿಯಾದ ಮಾರ್ಗದಲ್ಲಿ ಮುನ್ನಡೆಯುತ್ತಿದ್ದೇವೆಯೋ, ಇಲ್ಲವೋ ಎಂಬುದನ್ನು ಗಮನಿಸುವ ಮನಸ್ಥಿತಿಯನ್ನು ಇಲ್ಲಿ
ಕೆಲಸ ಮಾಡಲು ಬಯಸುವ ಮಂದಿ ಹೊಂದಿರಬೇಕು. ಇಲ್ಲಿ ಒಮ್ಮೆ ಹೆಜ್ಜೆ ತಪ್ಪಿದರೆ, ದಿಕ್ಕೇ ತಪ್ಪಿದಂತೆ. ಮರಳಿ ಬರಲು ಹರಸಾಹಸ
ಮಾಡಬೇಕಾಗುತ್ತದೆ. ಏಕೆಂದರೆ ಯಶಸ್ಸಿಗೆ ಸಾವಿರ ಅಪ್ಪಂದಿರು, ಆದರೆ ಸೋಲು ಅನಾಥ!