ಕನ್ನಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕನ್ನಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮಾರ್ಚ್ 12, 2019

ದೃಶ್ಯ ಮಾಧ್ಯಮ-ಏನಿದೆ ಒಳಗಡೆ?



ಆವತ್ತು ಬೆಳಗ್ಗೆ ಟಿವಿ ಹಾಕಿದರೆ, ವಕೀಲರು ಮತ್ತು ಮಾಧ್ಯಮದವರ ನಡುವಿನ ಗಲಭೆಯದೇ ಸುದ್ದಿ. ರಣರಂಗದಂತೆ ಕಾಣುತ್ತಿದ್ದ ಸಿಟಿ ಸಿವಿಲ್ ಕೋರ್ಟ್ ನ ಆವರಣದಲ್ಲಿ ಗಲಾಟೆಯೋ ಗಲಾಟೆ! ತೂರಿ ಬರುತ್ತಿರುವ ಕಲ್ಲು, ಕುರ್ಚಿ.. ಅಟ್ಟಾಡಿಸಿಕೊಂಡು ಹೊಡೆಯುತ್ತಿರುವ ದೃಶ್ಯಗಳು, ಅಸಹಾಯಕರಂತೆ ಓಡಾಡುತ್ತಿರುವ ಪೊಲೀಸರು..ಏನಾಗುತ್ತಿದೆ ಎಂದೇ ತಿಳಿಯುತ್ತಿರಲಿಲ್ಲ.ನನ್ನ ಬಹಳಷ್ಟು ಮಿತ್ರರು ಬೇರೆ ಬೇರೆ ಟಿವಿ ಚಾನಲುಗಳಲ್ಲಿ ಕೆಲಸ ಮಾಡುತ್ತಾರಾದ್ದರಿಂದ ಕೆಲವರಿಗೆಲ್ಲ ಫೋನ್ ಮಾಡಿದೆ. ಯಾರೂ ಫೋನ್ ಎತ್ತಿಕೊಳ್ಳುತ್ತಿಲ್ಲ. ಎತ್ತಿಕೊಂಡವರು ಸರಿಯಾಗಿ ಮಾತನಾಡುತ್ತಿಲ್ಲ. ಕೋರ್ಟ್ ಬೀಟ್ ನ ವರದಿಗಾರ ಸ್ನೇಹಿತನೊಬ್ಬ ಫೋನೆತ್ತಿ, “ಲೇ ಇಲ್ಲಿ ಕಲ್ ಬೀಳ್ತಾ ಇದಾವ್ ಲೇ, ಆಮೇಲ್ ಮಾಡ್ತೀನಿ” ಅಂದವನು ಮತ್ತೆ ಕಂಡಿದ್ದು, ಅವರ ಚಾನಲ್ ನ ಸ್ಟುಡಿಯೋ ಡಿಸ್ಕಶನ್ ನಲ್ಲಿ. ಆತನಿಗೆ ಸರಿಯಾಗಿ ಏಟುಗಳು ಬಿದ್ದಿದ್ದವು. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಮಾರಣಾಂತಿಕ ಪೆಟ್ಟೇ ಬೀಳುತ್ತಿತ್ತು. ಆಮೇಲೆ ರಾತ್ರಿ ಆತ ಮಾತನಾಡುತ್ತ ಬೇಜಾರಿನಿಂದ ಹೇಳಿದ, ಜನರಿಗೆ ನನಗೆ ಏಟು ಬಿದ್ದಿದ್ದು ಇವತ್ತು ಮಾತ್ರ ನೆನಪಿರತ್ತೆ, ಆದರೆ ನನಗೆ ನೋವು ಇನ್ನೂ ಒಂದು ವಾರ ಇರತ್ತಲ್ಲ ಮಾರಾಯಾ”ಅಂತ. ಎಲ್ಲಿ ಮತ್ತೆ ಇಂತಹ ಘಟನೆ ಸಂಭವಿಸುತ್ತದೆ ಎಂಬ ಹೆದರಿಕೆಯಲ್ಲಿ ದಿನ ಕಳೆಯುವ ಹಾಗಾಗಿದೆ ಇತ್ತೀಚಿಗೆ ಎಂದು ಅಲವತ್ತುಕೊಂಡ ಆ ಗೆಳೆಯ.

ಹಿಂದೊಮ್ಮೆ ನಾನು ಕೂಡ ಇಂತಹದೇ ಸನ್ನಿವೇಶವೊಂದನ್ನು ಎದುರಿಸಿದ್ದೆ. ಅಂದು ನನ್ನದು ರಾತ್ರಿ ಪಾಳಿ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಏನೋ ಗಲಾಟೆ ಎಂದು ಯಾರೋ ಫೋನ್ ಮಾಡಿದರು. ಹೋಗಿ ನೋಡಿದರೆ ಅಲ್ಲೊಬ್ಬ ವಿದೇಶೀ ಮಹಿಳೆ ಮತ್ತವಳ ಸ್ನೇಹಿತೆ ಕಾರೊಳಗೆ ಕೂತಿದ್ದರು. ಕಾರಿನ ಗಾಜು ಒಡೆಯುವ ಪ್ರಯತ್ನ ಮಾಡಲಾಗಿತ್ತು. ಅವರುಗಳು ಪಾನಮತ್ತರಾಗಿದ್ದು ಮೊದಲ ನೋಟಕ್ಕೇ ಗೊತ್ತಾಗುತ್ತಿತ್ತು. ವಿಚಾರಿಸಿದಾಗ ತಿಳಿದಿದ್ದೇನೆಂದರೆ, ಅವರನ್ನು ನಿಲ್ಲಿಸಿ ಪರೀಕ್ಷೆ ಮಾಡಲು ಹೋದ ಕಾನ್ಸ್ ಸ್ಟೇಬಲ್ ಗೆ ಸರಿಯಾಗಿ ಹಲ್ಲೆ ಮಾಡಿ, ಕಾರಲ್ಲಿ ಕೂತು ಪರಾರಿಯಾಗಲು ಹೊರಟಿದ್ದರು. ಅಲ್ಲಿದ್ದ ಜನರು ಅವರನ್ನ ಓಡಿ ಹೋಗಲು ಬಿಡದೇ ಕೀ ಕಿತ್ತಿಟ್ಟುಕೊಂಡಿದ್ದರು. ಆ ರಾತ್ರಿಯಲ್ಲೂ ಸುದ್ದಿ ಹಬ್ಬಿ ಸುಮಾರು ಇನ್ನೂರು ಮುನ್ನೂರು ಜನ ಅಲ್ಲಿ ಜಮಾಯಿಸಿದ್ದರು. ನಂತರ ಬಂದ ಪೊಲೀಸ್ ಪಡೆ ಅವರಿಬ್ಬರನ್ನ ಬಲವಂತವಾಗಿ ಕರೆದುಕೊಂಡು ಹತ್ತಿರ ಸ್ಟೇಶನ್ ಗೆ ಹೋಯಿತು. ನಾನೂ ಸೇರಿದಂತೆ ಒಂದಿಷ್ಟು ವಾಹಿನಿಗಳ ತಂಡ ಅವರನ್ನ ಹಿಂಬಾಲಿಸಿತು. ಸೇರಿದ್ದ ಜನ ಅಲ್ಲಿಂದ ಚದುರಿದರು.

ಸ್ಟೇಶನ್ ಗೆ ಹೋದ ಮೇಲೆ ಶುರುವಾಗಿದ್ದು ಅಸಲೀ ಗಲಾಟೆ. ಅಲ್ಲಿದ್ದ ಬೆರಳೆಣಿಕೆಯ ಪೊಲೀಸರು ಮತ್ತು ನಮ್ಮನ್ನ ನೋಡಿದ ಅವರಿಗೆ ಏನನ್ನಿಸಿತೋ ಏನೋ! ಅವರಲ್ಲಿ ಒಬ್ಬಾಕೆ ಒಮ್ಮೆಗೇ ಅಲ್ಲಿಂದೆದ್ದು ಓಡಿದ್ದೇ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಲು ಆರಂಭಿಸಿದಳು. ನಮ್ಮ ಕ್ಯಾಮರಾಗಳನ್ನ ಕಿತ್ತುಕೊಂಡು ನೆಲಕ್ಕೆ ಅಪ್ಪಳಿಸಿದಳು. ಅವಳ ಒಳಗೆ ಸೇರಿಕೊಂಡಿದ್ದ ಪರಮಾತ್ಮನ ಸಹಾಯದಿಂದಾಗಿ ಆಕೆ ರೌದ್ರಾವತಾರ ತಾಳಿ, ತಕತಕ ಕುಣಿಯುತ್ತಿದ್ದಳು. ಏನೋ ರಿಪೇರಿ ನಡೆಯುತ್ತಿದ್ದ ಆ ಸ್ಟೇಶನ್ ನ ಹಿತ್ತಲಿಗೆ ಓಡಿದವಳೇ ಅಲ್ಲಿದ್ದ ಸೈಜುಗಲ್ಲೆತ್ತಿ ಆಕೆಯನ್ನು ಹಿಂಬಾಲಿಸಿಕೊಂಡು ಬಂದವರ ಮೇಲೆ ಎಸೆದು ಬಿಟ್ಟಳು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಲ್ಲಿದ್ದ ಪೊಲೀಸಪ್ಪ ಅಪ್ಪಚ್ಚಿ ಆಗಿ ಬಿಡುತ್ತಿದ್ದ. ಅಲ್ಲಿಂದ ಒಮ್ಮೆಗೇ ವಾಪಸ್ಸು ಓಡಿ ಬಂದವಳು, ದಾರಿಯಲ್ಲಿ ಅಡ್ಡ ನಿಂತಿದ್ದ ನಂಗೆ ಯಾವ ರೀತಿ ಜಪ್ಪಿದಳು ಅಂದರೆ, ನನ್ನ ಮೂಗು ತುಟಿ ಮುಂದೆ ಮೂರು ದಿನ ಬಾತುಕೊಂಡೇ ಇತ್ತು! ಸ್ನೇಹಿತರೆಲ್ಲ ಯಕಶ್ಚಿತ್ ಹುಡುಗಿಯೊಬ್ಬಳ ಕೈಲಿ ಪೆಟ್ಟು ತಿಂದು ಮುಖ ಊದಿಸಿಕೊಂಡಿದ್ದೀಯಲ್ಲೋ ಎಂದು ಮುಂದೆ ಹಲ ದಿನಗಳ ಕಾಲ ರೇಗಿಸುತ್ತಲೇ ಇದ್ದರು. ಆ ಕ್ಷಣ ಅವಳ ಕೈಗೇನಾದರೂ ಚಾಕು ಚೂರಿ ಸಿಕ್ಕಿದ್ದರೆ ನಮ್ಮನ್ನ ಸಿಗಿದೇ ಹಾಕುತ್ತಿದ್ದಳು. ಮತ್ತೆ ಹೇಗೋ ಅವಳನ್ನ ಹಿಡಿದು ಒಳಗೆ ತಳ್ಳಿದ್ದಾಯಿತು. ಕೇಸು ಜಡಿದು ನಾನೂ ಕೋರ್ಟಿಗೆ ನಾಲ್ಕಾರು ಬಾರಿ ಅಲೆದದ್ದೂ ಆಯಿತು.

ಇದನ್ನೆಲ್ಲ ಏಕೆ ಹೇಳಿದ ಎಂದರೆ, ಸಾಮಾನ್ಯವಾಗಿ ಜನರು ಪತ್ರಕರ್ತರು ಎಂದರೆ ಮಹಾನುಭಾವರು ಎಂದುಕೊಂಡಿರುತ್ತಾರೆ. ಅವರು ಎಲ್ಲ ತಿಳಿದುಕೊಂಡವರು , ಎಲ್ಲರ ಎಣಿಕೆಗೆ ದಕ್ಕದ ಏನೋ ನಿಗೂಢ ವಿಚಾರಗಳು, ರಹಸ್ಯ ಮಾಹಿತಿಗಳು ನಮ್ಮಲ್ಲಿರುತ್ತವೆ ಎಂದು ಬಹಳ ಮಂದಿ ನಂಬಿಕೊಂಡಿರುತ್ತಾರೆ. ಆದರೆ ನಾವುಗಳು ಕೂಡ ರಕ್ತ ಮಾಂಸ ತುಂಬಿಕೊಂಡ ಮಾಮೂಲಿ ಮನುಷ್ಯರು, ನಾವು ಕೂಡ ನಿತ್ಯ ಕಷ್ಟಗಳನ್ನು ಅನುಭವಿಸುತ್ತೇವೆ ಎನ್ನಲು ಮೇಲಿನ ಉದಾಹರಣೆಗಳನ್ನು ಕೊಡಬೇಕಾಯಿತು. ಹೆಚ್ಚಿನವರು, ನ್ಯೂಸ್ ಚಾನಲ್ಲಿನಲ್ಲಿ ಕೆಲಸ ಮಾಡುವವರು ಸರ್ವಜ್ಞರು ಎಂದೇ ಅಂದುಕೊಂಡಿರುತ್ತಾರೆ. ಟೀವಿಗಳಲ್ಲಿ ವಾರ್ತೆ ಓದುವವರು ಅಂದರೆ ಆಂಕರ್ ಗಳು, ಸಿನಿಮಾ ಸಂಬಂಧೀ ಕಾರ್ಯಕ್ರಮಗಳನ್ನು ನಿರೂಪಿಸುವವರಂತೂ ಅತ್ಯಂತ ಪುಣ್ಯವಂತರು. ರಾಜಕೀಯದ ಬಗ್ಗೆ ಆಸಕ್ತಿ ಇದ್ದವರು ರಾಜಕಾರಣಿಗಳೆಲ್ಲ ನಮ್ಮ ಬಗಲಲ್ಲೇ ಇರುತ್ತಾರೆ, ಅವರ ಆಗುಹೋಗುಗಳಷ್ಟೂ ನಮಗೆ ಬಾಯಿಪಾಠ ಆಗಿರುತ್ತದೆ ಎಂಬ ಮಟ್ಟಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಹೀಗೆ ಕೇಳುವವರನ್ನು ನಾನು ತಮಾಷೆ ಮಾಡಲೇನೂ ಮಾಡಲು ಹೊರಟಿಲ್ಲ. ಎಲ್ಲರ ಮನೆಗಳಲ್ಲೂ ಟಿ.ವಿ ಇದ್ದರೂ, ನಿತ್ಯ ನ್ಯೂಸ್ ಗಳನ್ನು ನೋಡಿದರೂ ಪರದೆಯ ಹಿಂದೆ ಏನು ನಡೆಯುತ್ತಿದೆ, ಟಿವಿ ಚಾನಲುಗಳು ಹೇಗೆ ಕೆಲಸ ಮಾಡುತ್ತವೆ ಎಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ.

ಜನಸಾಮಾನ್ಯರಿಗೆ ಮಾತ್ರ ಅಲ್ಲ, ಜರ್ನಲಿಸಂ ನಲ್ಲೇ ಪದವಿ ಓದುತ್ತಿರುವ ಹುಡುಗರಿಗೂ ಸಹ ತಾವು ಟಿವಿ ಚಾನಲು ಸೇರಿಕೊಂಡರೆ ಏನು ಕೆಲಸ ಮಾಡುತ್ತೇವೆ ಎನ್ನುವುದು ಸಮರ್ಪಕವಾಗಿ ಗೊತ್ತಿರುವುದಿಲ್ಲ. ಕೆಲ ದಿನಗಳ ಕೆಳಗೆ ನನಗೊಬ್ಬ ಹುಡುಗ ಫೋನ್ ಮಾಡಿದ್ದ. "ಸರ್ ನನಗೆ ಟಿವಿ ಚಾನಲಲ್ಲಿ ಕೆಲಸ ಬೇಕು" ಏನು ಕೆಲಸ ಮಾಡ್ತೀಯಾ? "ನಂಗೆ ಟಿವಿ ನ್ಯೂಸ್ ರೀಡರ್ ಆಗಬೇಕು ಅಂತಿದೆ" ಹೌದಾ? ಯಾಕೆ? "ನಂಗೆ ಟಿವಿಲಿ ಕಾಣಿಸಿಕೋ ಬೇಕು ಅಂದ್ರೆ ಇಷ್ಟ, ಅಲ್ಲದೇ ಕೆಲಸ ಕಡಿಮೆ ಇರತ್ತಲ್ಲ ಸರ್ ಅದ್ಕೆ" ನಾನು ಎಲಾ ಇವನ ಅಂದುಕೊಂಡು " ನ್ಯೂಸ್ ಓದೋರಿಗೆ ಕೆಲಸ ಕಡಿಮೆ ಅಂತ ಯಾರಂದ್ರಪಾ" ಅಂದೆ. ಹೌದು ಸರ್ ಗೊತ್ತು.. ಅವರು ಆಫೀಸಿಗೆ ಬಂದು ನ್ಯೂಸ್ ಓದಿ ವಾಪಸ್ ಹೋದರಾಯ್ತಲ್ಲ ಅನ್ನಬೇಕೇ ಆ ಪುಣ್ಯಾತ್ಮ! ಪದವಿ ಓದು ಮುಗಿಸುತ್ತಿದ್ದ ಆ ಹುಡುಗನಿಗೆ ನ್ಯೂಸ್ ರೀಡರ್ ಕೆಲಸ ಏನೆಂದು ತಿಳಿದೇ ಇರಲಿಲ್ಲ.

ಇತ್ತೀಚಿನ ದಿನಗಳಲ್ಲಿ ಟಿ.ವಿ ಜರ್ನಲಿಸಂ ಹೆಮ್ಮರವಾಗಿ ಬೆಳೆದು ನಿಂತಿದೆ. ಕನ್ನಡದಲ್ಲೇ ನಾಲ್ಕಾರು ನ್ಯೂಸ್ ಚಾನಲ್ ಗಳಿವೆ. ಭಾರತದ ಮಟ್ಟದಲ್ಲಿ ತೆಗೆದುಕೊಂಡರೆ ನೂರಕ್ಕೂ ಹೆಚ್ಚು ನ್ಯೂಸ್ ಆಧಾರಿತ ಟಿವಿ ಚಾನಲ್ ಗಳಿವೆ. ಪ್ರತಿ ವರ್ಷ ಹತ್ತಕ್ಕೂ ಹೆಚ್ಚು ವಾಹಿನಿಗಳು ಹೊಸದಾಗಿ ಸೇರ್ಪಡೆಗೊಳ್ಳುತ್ತಿವೆ. ಒಂದು ಚಾನಲ್ ನಲ್ಲಿ ಏನಿಲ್ಲವೆಂದರೂ ಇನ್ನೂರರದಿಂದ ಮುನ್ನೂರು ಮಂದಿ ಕೆಲಸ ಮಾಡುತ್ತಾರೆ. ಪತ್ರಿಕೋದ್ಯಮವನ್ನು ಓದುತ್ತಿರುವ ಹುಡುಗ ಹುಡುಗಿಯರಿಗೆ ನಿತ್ಯ ಹೊಸ ಅವಕಾಶಗಳು ಕಾಣುತ್ತವೆ. ಕೇವಲ ನ್ಯೂಸ್ ಓದುವುದು, ರಿಪೋರ್ಟಿಂಗ್ ಅಲ್ಲದೇ ಅದಕ್ಕೂ ಮುಖ್ಯವಾದ ಹಲವು ಹುದ್ದೆಗಳು ವಾರ್ತಾ ವಾಹಿನಿಗಳಲ್ಲಿ ಇರುತ್ತವೆ.

ಹೊಸದಾಗಿ ಜರ್ನಲಿಸಂ ಓದಿಕೊಂಡರಿಗೆ ವಾರ್ತಾ ವಾಹಿನಿಗಳಲ್ಲಿ ಕೆಲಸ ಮಾಡಬೇಕೆಂಬ ಆಸಕ್ತಿ ಇದ್ದರೆ, ಕೆಲವೊಂದು ಸತ್ಯಗಳನ್ನು ಮನದಟ್ಟು ಮಾಡಿಕೊಳ್ಳಲೇಬೇಕು. ಹೊರಗೆ ಥಳುಕು ಬಳುಕಾಗಿ ಕಾಣುವ, ಝಗಮಗಿಸುವ ಈ ಜಗತ್ತಿನಲ್ಲಿ ಕೆಲಸ ಮಾಡಬೇಕೆಂದರೆ ಅತ್ಯಂತ ಸೂಕ್ಷ್ಮ ಮನಸ್ಸು ಮತ್ತು ಎಂತಹ ಸಂದರ್ಭದಲ್ಲೂ ಕೂಡ ತಾಳ್ಮೆ ಕಳೆದುಕೊಳ್ಳದೇ, ಒತ್ತಡವನ್ನು ನಿಭಾಯಿಸಿಕೊಂಡು ಹೋಗುವ ಶಕ್ತಿ ಇರಬೇಕು. ನ್ಯೂಸ್ ಚಾನಲ್ಲುಗಳಲ್ಲಿ ವಿಪರೀತ ಸ್ಪರ್ಧೆ ಇದ್ದು, ಕ್ಷಣ ಕ್ಷಣದ ಮಾಹಿತಿಯನ್ನು ಕಲೆ ಹಾಕಲು ಮತ್ತು ಅದನ್ನು ಮೊದಲು ಪ್ರಸಾರ ಮಾಡಬೇಕು ಎನ್ನುವ ಮನೋಭಾವ ಇರುವುದರಿಂದ, ಅಲ್ಲಿನ ವೇಗಕ್ಕೆ ಹೊಂದಿಕೊಳ್ಳಲು ಆಗದೇ ಹೋದರೆ, ಮೂಲೆಗುಂಪಾಗಬೇಕಾಗುತ್ತದೆ. ಎಲೆಕ್ಷನ್ ಕೌಟಿಂಗ್ ಸಂದರ್ಭಗಳು, ರಾಜಕೀಯ ಏರುಪೇರುಗಳು,ಪ್ರಾಕೃತಿಕ ವಿಕೋಪಗಳು, ದಂಗೆ, ಗಲಭೆ ಇತ್ಯಾದಿ ಸಂದರ್ಭಗಳಲ್ಲಿ ತಪ್ಪು ಮಾಡದೇ, ನಿಖರವಾದ ಮಾಹಿತಿಯನ್ನು ನೀಡುವ ಕೆಲಸ, ತಮಾಷೆಯದಲ್ಲ.

ಹೆಚ್ಚಾಗಿ ಹೊಸಬರಿಗೆ ಡೆಸ್ಕ್ ಕೆಲಸ ಅಥವಾ ಕಾಪಿ ಎಡಿಟರ್ ಕೆಲಸ ಸಿಗುತ್ತದೆ. ಇಲ್ಲಿ ಅವರುಗಳು, ಯು.ಎನ್.ಐ ಮತ್ತು ಪಿ.ಟಿ.ಐ ಗಳಿಂದ ಬರುವ ಸುದ್ದಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಬೇಕಾಗುತ್ತದೆ. ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಹೊಂದಿರಬೇಕಾದ್ದು ಅತ್ಯಂತ ಮುಖ್ಯ! ರೆಡ್ ಇಂಡಿಯನ್ನರನ್ನು ಕೆಂಪು ಭಾರತೀಯರೂ ಎಂದೂ ಲೇಟ್ ಪ್ರೈಮ್ ಮಿನಿಸ್ಟರ್ ರಾಜೀವ್ ಗಾಂಧಿ ಎನ್ನುವುದನ್ನು ತಡವಾಗಿ ಆಗಮಿಸಿದ ರಾಜೀವ್ ಗಾಂಧಿ ಎಂದೂ ಬರೆದು ನಗೆಪಾಟಲಿಗೆ ಈಡಾದವರನ್ನು ನಾನೇ ಕಂಡಿದ್ದೇನೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಸಕ್ತಿ ಹೊಂದಿರುವುದು ಮತ್ತು ನಿಮ್ಮೆದುರಿಗೆ ಇರುವ ಸಾವಿರಾರು ಸುದ್ದಿಗಳಲ್ಲಿ ಯಾವುದನ್ನು ’ಆಕರ್ಷಕವಾಗಿ’ ಪ್ರಸ್ತುತಪಡಿಸಬಹುದು ಎಂಬುದನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಏಕೆಂದರೆ ದಿನವಿಡೀ ಸುದ್ದಿಗಳ ಮೇಲೆ ಸುದ್ದಿಗಳನ್ನು ಹುಡುಕಬೇಕಾದ ಅನಿವಾರ್ಯತೆಯನ್ನು ವಾರ್ತಾ ವಾಹಿನಿಗಳು ಹೊಂದಿವೆ. ಎಷ್ಟೇ ವಿಧದ ಸುದ್ದಿಗಳಿದ್ದರೂ ಸಾಕಾಗಾದ ಸನ್ನಿವೇಶಗಳಿವೆ. ಸುಮ್ಮನೇ ಸಿಕ್ಕ ಸಿಕ್ಕ ನ್ಯೂಸನ್ನು ಪ್ರಸಾರ ಮಾಡುವಂತೆಯೂ ಇಲ್ಲ. ಏಕೆಂದರೆ ಟಿ.ಆರ್.ಪಿ ಎಂಬ ಭೂತ ಇವರ ಬೆನ್ನ ಹಿಂದೇ ನಿಂತು ಕಾಡುತ್ತದೆ. ಹೀಗಾಗಿಯೇ ಇರುವ ಸುದ್ದಿಗಳಲ್ಲಿ ಅತ್ಯುತ್ತಮವಾದುದನ್ನು ಹೆಕ್ಕಿ ಪ್ರಸಾರ ಮಾಡುವ ಒತ್ತಡ ಇರುತ್ತದೆ.

ಹೀಗಾಗಿ ಮಾಮೂಲಿ ಸುದ್ದಿ ಮೂಲಗಳು ಮಾತ್ರವಲ್ಲದೇ ಅಂತರ್ಜಾಲವನ್ನು ಜಾಲಾಡಿ ಉತ್ತಮ ಸುದ್ದಿಗಳನ್ನು ಹುಡುಕುವ ಕೆಲಸವನ್ನೂ ಕೂಡ ಕಾಪಿ ಎಡಿಟರ್ ಗಳು ಮಾಡಬೇಕು. ನೆನಪಿರಲಿ. ಇಲ್ಲಿ ಹೇಳಿದ್ದಕ್ಕಿಂತ ಕೊಂಚ ಹೆಚ್ಚಿಗೆ ಕೆಲಸವನ್ನು ಸಮರ್ಥವಾಗಿ ಮಾಡುವವರಿಗೆ ಬೆಲೆ ಜಾಸ್ತಿ. ದೂರದ ನಾರ್ವೆಯಲ್ಲಿ ಯಾವನೋ ಭಯೋತ್ಪಾದಕ ಹಾಡು ಹಗಲೇ ದಾಳಿ ಮಾಡಿ ನೂರಾರು ಜನರನ್ನು ಕೊಂದ ಘಟನೆಯ ವಿಡೀಯೋ ನ ಕಾಪಿ ಎಡಿಟರ್ ಒಬ್ಬ ಯೂಟ್ಯೂಬ್ ನಲ್ಲಿ ಹುಡುಕಿ ಕೊಟ್ಟರೆ, ಯಾರೂ ಬೇಡ ಎನ್ನುವುದಿಲ್ಲ. ಇನ್ನು ಕೆಲ ಬಾರಿ ಜಿಲ್ಲೆಗಳಿಂದ ಬರುವ ಸುದ್ದಿಗಳನ್ನು ಎಡಿಟ್ ಮಾಡಿ ಕೊಡುವ ಕೆಲಸ ಕೂಡ ಕಾಪಿ ಎಡಿಟರ್ ಗಳಿಗೆ ಬರುತ್ತದೆ. ಅವರುಗಳು ಕಳುಹಿಸುವ ವಿಡಿಯೋ ಪ್ರಮಾಣ ನೋಡಿ, ಅದಕ್ಕೆ ತಕ್ಕಂತೆ ಸ್ಕ್ರಿಪ್ಟ್ ತಿದ್ದುಪಡಿ ಮಾಡಬೇಕು. ಕೆಲ ಅನನುಭವಿ ರಿಪೋರ್ಟರ್ ಗಳು ನಾಲ್ಕು ಪುಟ ಸುದ್ದಿ ಬರೆದು ಕಳಿಸಿ, ಅದಕ್ಕೆ ಮೂವತ್ತು ಸೆಕೆಂಡಿನ ವೀಡಿಯೋ ಕಳಿಸಿರುತ್ತಾರೆ!

ವಿದ್ಯುನ್ಮಾನ ಮಾಧ್ಯಮದಲ್ಲಿ ಬಳಸುವ ಭಾಷೆಯ ಬಗ್ಗೆ ಕೂಡ ಎಚ್ಚರ ವಹಿಸಬೇಕಾಗುತ್ತದೆ. ಇಲ್ಲಿ ಸುದ್ದಿಯು ವಿಡಿಯೋ ಚಿತ್ರಿಕೆಗಳನ್ನು ಆಧರಿಸುವುದರಿಂದ, ಬರೆಯುವ ವಿಚಾರ ಅದನ್ನು ಮೀರಬಾರದು. ನಾನು ಕೆಲಸಕ್ಕೆ ಸೇರಿಕೊಂಡ ಮೊದಲಿಗೆ ಬಡತನದಲ್ಲಿ ಬಳಲಿ ಏನೋ ತೊಂದರೆ ಅನುಭವಿಸುತ್ತಿರುವ ಹೆಂಗಸೊಬ್ಬಳ ಬಗ್ಗೆ ಸುದ್ದಿ ಬರೆದುಕೊಡು ಎಂದರು. ನಾನು ಯಥಾಸಾಧ್ಯ ರೂಪಕಗಳನ್ನೆಲ್ಲ ಬಳಸಿ ಕಾವ್ಯತ್ಮಕವಾದ ಸ್ಕ್ರಿಪ್ಟ್ ಬರೆದೆ. “ಬಾಳು ಸುಂಟರಗಾಳಿ ಸಿಕ್ಕ ಬಾಳೆಮರದಂತಾಯ್ತು’, ”ಹಾಯಿಯಿಲ್ಲದ ದೋಣಿಯಂತೆ ಆಕೆ ದಿಕ್ಕುತಪ್ಪಿದ್ದಾಳೆ” ಇತ್ಯಾದಿ. ಹೊಗಳಿಕೆಯ ನಿರೀಕ್ಷೆಯಲ್ಲಿದ್ದ ನನ್ನನ್ನು ಕರೆದ ನಮ್ಮ ವಾರ್ತಾ ಮುಖ್ಯಸ್ಥರು, ನೀನು ಬರೆದಿದ್ದಕ್ಕೆಲ್ಲ ವಿಶುವಲ್ ಎಲ್ಲಿಂದ ತರಲಿ ಮಾರಾಯಾ? ಸುಂಟರಗಾಳಿ, ಹಾಯಿ ತಪ್ಪಿದ ದೋಣಿ ಎಲ್ಲಿದೆ ಎಂದು ಕೇಳಿದರು. ಆವತ್ತು ಅವರು ಹೇಳಿದ್ದು ನನ್ನ ಮನಸ್ಸಲ್ಲಿ ಇನ್ನೂ ಉಳಿದಿದೆ. “ ದೃಶ್ಯ ಮಾಧ್ಯಮದಲ್ಲಿ ಅತಿಯಾದ ರೂಪಕ, ಉಪಮೆಗಳನ್ನು ಬಳಸುವ ಅಗತ್ಯವಿಲ್ಲ, ಏಕೆಂದರೆ ಏನು ಹೇಳಬೇಕೋ, ಅದನ್ನು ಜನರಿಗೆ ಅವರ ಎದುರಿಗೆ ಕಾಣುತ್ತಿರುವ ದೃಶ್ಯ ಹೇಳುತ್ತದೆ. ಕಷ್ಟದಲ್ಲಿರೋ ಹೆಂಗಸಿನ ಮನೆ ನೋಡಿದರೆ, ಅವಳ ಮುಖ ನೋಡಿದರೆ ಏನು ವಿಷಯ ಅಂತ ಗೊತ್ತಾಗುತ್ತದೆ. ಅದನ್ನ ಮತ್ತೆ ಕರುಳು ಕಿವಿಚುವ ಸ್ಕ್ರಿಪ್ಟ್ ಮುಖಾಂತರ ಹೇಳುವ ಅವಶ್ಯಕತೆ ಇಲ್ಲ. ಸರಳವಾಗಿ ಹೇಳಿದರೆ ಸಾಕು”. ನೇರವಾಗಿ, ಸುತ್ತು ಬಳಸಿ ಹೇಳದೇ, ’ಟು ದಿ ಪಾಯಿಂಟ್’ ಹೇಳುವ ಚಾಕಚಕ್ಯತೆ ಇಲ್ಲಿ ಮುಖ್ಯ.

ನ್ಯೂಸ್ ಚಾನಲ್ ಗಳಲ್ಲಿ ಪ್ರಸಾರವಾಗುವ ನ್ಯೂಸ್ ಅನ್ನು ಕಟ್ಟುವ ಕೆಲಸ ಮಾಡಲು ಹಲವು ಸ್ತರಗಳಿವೆ. ದೇಶ ವಿದೇಶಗಳ ಸುದ್ದಿಯನ್ನು ಕಲೆ ಹಾಕಿ ಕೊಡುವ ಕಾಪಿ ಎಡಿಟರ್ ಗಳು, ಅದಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಅಂತರ್ಜಾಲದಿಂದಲೋ, ಇತರ ಸುದ್ದಿ ವಾಹಿನಿಗಳಿಂದಲೋ ಆಯ್ದು ಕೊಡಬೇಕಾಗುತ್ತದೆ. ಇವರು ನೀಡಿದ ಸುದ್ದಿಗೆ ಧ್ವನಿ ನೀಡಿ, ನಂತರ ಅದನ್ನು ಸಂಬಂಧಿಸಿದ ವಿಡಿಯೋ ಗೆ ಜೋಡಿಸುವ ಕೆಲಸವನ್ನು ವೀಡಿಯೋ ಎಡಿಟರ್ ಗಳು ಮಾಡುತ್ತಾರೆ. ಪ್ರಾಯಶ: ಸುದ್ದಿಮನೆಯೊಳಗೆ ಅತ್ಯಂತ ಒತ್ತಡದಿಂದ ಕಾರ್ಯ ನಿರ್ವಹಿಸುವ ಪಡೆ ಈ ವೀಡಿಯೋ ಎಡಿಟರ್ ಗಳದು. ಅವರುಗಳಿಗೆ ತಾವು ಸರಿಯಾದ ಸಮಯದಲ್ಲಿ ದೃಶ್ಯವನ್ನು ಅಲಂಕರಿಸಿ, ಪ್ರಸಾರಕ್ಕೆ ಕಳಿಸೋ ಒತ್ತಡದ ಜೊತೆಗೆ ಅದು ಸರಿಯಾಗಿದೆಯೇ ಇಲ್ಲವೇ ಎಂಬುದನ್ನೂ ಗಮನಿಸಬೇಕಾಗುತ್ತದೆ. ಒಂದು ಬಾರಿ ನಮ್ಮಲ್ಲಿ ಒಬ್ಬ ಹೊಸ ವೀಡಿಯೋ ಎಡಿಟರ್, ಕರೀಷ್ಮಾ ಕಪೂರ್ ಡೈವರ್ಸ್ ತಗೋತಿದಾಳೆ ಅಂತೇನೋ ಬಂದ ಸುದ್ದಿಯಲ್ಲಿ ಅವಳ ಬದಲಾಗಿ ಕರೀನಾ ಕಪೂರ್ ವಿಶುವಲ್ ಹಾಕಿ ಕಳಿಸಿದ್ದ. ಇನ್ನು ರಾಜಕಾರಣಿಗಳ ಮುಖ ಪರಿಚಯ ಸರಿಯಾಗಿ ಆಗದೇ, ಗೋಪಿನಾಥ್ ಮುಂಡೆ ಬದಲಿಗೆ ವಿಲಾಸ್ ರಾವ್ ದೇಶ್ ಮುಖ್ ಮುಖ ಪ್ರಸಾರವಾಗೋದು, ಎ.ರಾಜಾ ಬದಲಿಗೆ ಮುರಸೋಳಿ ಮಾರನ್ ದೃಶ್ಯ ಕಾಣುವುದೂ ಆಗುತ್ತಿರುತ್ತದೆ.

ಆದರೆ ಯಾರ ಬದಲಿಗೆ ಯಾರದೋ ಫೋಟೋ ಪ್ರಸಾರವಾಗಿ ಇಂಗ್ಲೀಷ್ ನ್ಯೂಸ್ ಚಾನಲೊಂದರ ಗ್ರಹಚಾರ ಕೆಟ್ಟ ಘಟನೆಯೂ ನಡೆದಿದೆ. ೨೦೦೮ರಲ್ಲಿ,  ಗಝಿಯಾಬಾದ್  ಪ್ರಾವಿಡೆಂಡ್ ಫಂಡ್ ಹಗರಣದ ಬಗ್ಗೆ ವರದಿ ಮಾಡುತ್ತಾ, ಟೈಮ್ಸ್ ನೌ ವಾಹಿನಿ ನ್ಯಾಯಮೂರ್ತಿ ಸಮಂತಾ ಅವರ ಚಿತ್ರವನ್ನು ತೋರಿಸುವ ಬದಲಿಗೆ, ಜಸ್ಟಿಸ್ ಪಿ.ಬಿ. ಸಾವಂತ್ ಅವರ ಚಿತ್ರವನ್ನು ಪ್ರಸಾರ ಮಾಡಿಬಿಟ್ಟಿತು. ಅದು ಕೂಡ ಕೇವಲ ೧೫ ಸೆಕೆಂಡ್ ಗಳ ಮಟ್ಟಿಗಷ್ಟೇ.ಕೂಡಲೇ ಎಚ್ಚೆತ್ತುಕೊಂಡ ಚಾನಲ್, ನಂತರ ತಾನು ಮಾಡಿದ ತಪ್ಪಿಗೆ ಕ್ಷಮೆ ಕೂಡ ಕೇಳಿತು. ತಾಂತ್ರಿಕ ದೋಷದಿಂದ ಈ ಸಮಸ್ಯೆ ಆಯಿತು ಎಂದ ಚಾನಲ್, ಐದು ದಿನ ನಿರಂತರವಾಗಿ ಸ್ಕ್ರೋಲ್ ನಲ್ಲಿ ಕ್ಷಮಾಪಣೆ ಪ್ರಸಾರ ಮಾಡಿತು. ಆದರೆ ಯಾವುದಕ್ಕೂ ಜಗ್ಗದ ಸಾವಂತ್, ಪುಣೆ ಜಿಲ್ಲಾ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದರು. ಅಲ್ಲಿ ಟೈಮ್ಸ್ ನೌ ಗೆ ನೂರು ಕೋಟಿ ರೂಪಾಯಿ ದಂಡ ಹೇರಲಾಯಿತು. ಮುಂದೆ ಬಾಂಬೆ ಹೈಕೋರ್ಟ್ , ಕೊನೆಗೆ ಸುಪ್ರೀಂ ಕೋರ್ಟ್ ಕೂಡ ನೂರು ಕೋಟಿ ದಂಡವನ್ನೇ ಖಾಯಂ ಮಾಡಿತು! ಒಬ್ಬ ವಿಡಿಯೋ ಎಡಿಟರ್, ಕೆಲಸದ ಒತ್ತಡದಲ್ಲಿ ಮಾಡಿರಬಹುದಾದ, ಮೇಲ್ನೋಟಕ್ಕೆ  ಕ್ಷುಲ್ಲಕವಾಗಿ  ಕಾಣುವ ಈ ತಪ್ಪಿಗೆ ವಾಹಿನಿ ತೆರಬೇಕಾಗಿ ಬಂದ ಮೊತ್ತ ನೋಡಿ!! . ಹೀಗಾಗಿ, ತಾಂತ್ರಿಕ ಕೆಲಸ ಮಾಡುವವನೂ ಕೂಡ ಸಾಮಾನ್ಯ ಜ್ಞಾನ ಹೊಂದಿರಲೇಬೇಕಾದ್ದು ಈ ಮಾಧ್ಯಮದ ಅನಿವಾರ್ಯತೆ.

ರಾಜ್ಯ ಮಟ್ಟದ ಸುದ್ದಿಗಳು ಜಿಲ್ಲಾ ವರದಿಗಾರರಿಂದ ಬರುತ್ತವೆ. ಅವರು ಅಂತರ್ಜಾಲದ ಮೂಲಕ ವೀಡಿಯೋ ಕ್ಲಿಪ್ಲಿಂಗ್ ಗಳನ್ನು ಮತ್ತು ವರದಿಗಳನ್ನು ಕಳುಹಿಸುತ್ತಾರೆ. ಅಲ್ಲಿಂದ ಬಂದ ವರದಿಗಳಲ್ಲಿ ಪ್ರಮುಖ ಸುದ್ದಿಗಳನ್ನು ಆಯ್ದುಕೊಂದು ಪ್ರಸಾರ ಮಾಡಲಾಗುತ್ತದೆ. ಇನ್ನುಳಿದಂತೆ ರಾಜಕೀಯ, ಸಿನಿಮಾ, ಸಾಹಿತ್ಯ, ಕ್ರೈಂ, ಆರೋಗ್ಯ,ಕ್ರೀಡೆ ಹೀಗೆ ಒಂದೊಂದು ವಿಭಾಗಕ್ಕೆ ಅವಶ್ಯಕತೆಗೆ ಬೇಕಾದಷ್ಟು ವರದಿಗಾರರನ್ನು ವಾಹಿನಿಗಳು ಹೊಂದಿರುತ್ತವೆ. ರಿಪೋರ್ಟಿಂಗ್ ಭಾಷೆಯಲ್ಲಿ ಇದಕ್ಕೆ ಬೀಟ್ ಎನ್ನುತ್ತಾರೆ. ಆಯಾಯಾ ಬೀಟ್ ನ ವರದಿಗಾರ, ಪ್ರತಿನಿತ್ಯ ತನ್ನ ಪಾಲಿನ ಸುದ್ದಿಗಳನ್ನು ತಂದುಕೊಡುತ್ತಾನೆ. ದೈನಂದಿನ ಮಾಮೂಲಿ ಸುದ್ದಿಗಳ ಜೊತೆಗೆ ಹೆಚ್ಚಿನ ವರದಿಗಾರರು ತಮ್ಮದೇ ಆದ ಜಾಲವನ್ನು ಬೆಳೆಸಿಕೊಂಡು, ಸುದ್ದಿಸಂಗ್ರಹ ಮಾಡುತ್ತಾರೆ. ಪತ್ರಿಕೆಗಳಲ್ಲಿನ ವರದಿಗಾರರ ಕೆಲಸವನ್ನೇ ಸುದ್ದಿವಾಹಿನಿಗಳಲ್ಲಿನ ರಿಪೋರ್ಟರ್ ಗಳು ಮಾಡಿದರೂ, ಇಲ್ಲಿ ವರದಿಗಾರ ಮತ್ತು ಕ್ಯಾಮರಾಮನ್ ರ ಮಧ್ಯದ ಸಂಬಂಧ ಅತ್ಯಂತ ಮುಖ್ಯ.

ಕ್ಯಾಮರಾಮನ್ ಆದವನಿಗೆ ತನ್ನ ಜೊತೆಗಿರುವ ರಿಪೋರ್ಟರ್ ಯಾವ ರೀತಿಯ ದೃಶ್ಯಗಳನ್ನು ಬಯಸುತ್ತಿದ್ದಾನೆ ಎನ್ನುವುದು ತಿಳಿದಿರಬೇಕು. ಸಾಮಾನ್ಯ ಸುದ್ದಿಗೋಷ್ಠಿಗಳಲ್ಲಿ ಹೆಚ್ಚಿನ ಸಮಸ್ಯೆಗಳೇನೂ ಇರುವುದಿಲ್ಲವಾದರೂ, ವಿಶೇಷ ಸುದ್ದಿಗಳನ್ನು ಮಾಡುವಾಗ, ಸಂದರ್ಶನಗಳ ಸಂದರ್ಭದಲ್ಲಿ ವರದಿಗಾರದ ಕಣ್ಸನ್ನೆ ಅರಿತುಕೊಂಡು ಕ್ಯಾಮರಾ ಕೆಲಸ ಮಾಡಬೇಕಾಗುತ್ತದೆ. ನಾನೊಬ್ಬ ಮಾದಕ ದೃವ್ಯ ವ್ಯಸನಿಯ ಬಳಿ ಮಾಹಿತಿ ಕಲೆ ಹಾಕಬೇಕಿದ್ದರೆ, ಕ್ಯಾಮರಾಮನ್ ಆತನಿಗೆ ಗೊತ್ತೇ ಇಲ್ಲದ ಹಾಗೆ ಚಿತ್ರೀಕರಣ ಮಾಡಿಕೊಂಡು ಬಿಟ್ಟಿದ್ದರು. ನಮ್ಮ ಬಳಿ ಏನೇ ಅಧಿಕೃತ ಮಾಹಿತಿ ಇದ್ದರೂ ಕೂಡ, ಅದನ್ನು ಸಮರ್ಥಿಸಿಕೊಳ್ಳುವ ದೃಶ್ಯಾವಳಿಗಳಿದ್ದರೆ ಮಾತ್ರ ಆ ಸುದ್ದಿಗೆ ಬೆಲೆ. ಸುಖಾ ಸುಮ್ಮನೆ ಗಾಳಿಯಲ್ಲಿ ಸುದ್ದಿ ತೇಲಿ ಬಿಡುವುದು ಅಪರಾಧವಾಗುತ್ತದೆ.

ಕ್ಯಾಮರಾಮನ್ ಗಳ ಪ್ರಾಮುಖ್ಯತೆ ಇತ್ತೀಚಿನ ದಿನಗಳಲ್ಲಿ ಸರಿಯಾಗಿ ತಿಳಿದಿದ್ದು ಲಕ್ಷ್ಮಣ ಸವದಿ ಪ್ರಕರಣದಲ್ಲಿ. ಅವರ ಅವಲಕ್ಷಣದ ಕಥೆ ಎಲ್ಲರಿಗೂ ಗೊತ್ತೇ ಇದೆ. ನೋಡಬಾರದ್ದನ್ನ ನೋಡಬಾರದ ಜಾಗದಲ್ಲಿ ನೋಡಿ ಅವರಿಗೆ ಆಗಬಾರದ್ದು ಆಗಿದ್ದಕ್ಕೆ ಕಾರಣ ಕ್ಯಾಮರಾಮನ್ ಗಳೇ. ರಾಜ್ಯ ಬಿಡಿ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಈ ಪ್ರಕರಣ ಸುದ್ದಿಯಾಯಿತು. ಬಿಬಿಸಿ, ರಾಯ್ಟರ್ಸ್ ಕೂಡ ಈ ಸುದ್ದಿಯನ್ನು ಪ್ರಕಟಿಸಿದವು. ಕನ್ನಡದ ಎರಡು ಮೂರು ವಾರ್ತಾ ವಾಹಿನಿಗಳು ನಾಮುಂದು ತಾಮುಂದು ಎಂದು ಈ ಕರ್ಮಕಾಂಡವನ್ನು ’ಎಕ್ಸ್ ಕ್ಲೂಸಿವ್’ ಎಂದು ಪ್ರಸಾರ ಮಾಡಿದವು. ಎಲ್ಲರ ಪ್ರಕಾರ ತಾವುಗಳೇ ಆ ದೃಶ್ಯವನ್ನು ಮೊದಲು ಕಂಡಿದ್ದು-ಪ್ರಸಾರ ಮಾಡಿದ್ದು. ಕೊನೆ ಕೊನೆಗೆ ಪ್ರತಿ ವಾಹಿನಿಗಳಲ್ಲೂ ಸವದಿ ಸಾಹೇಬರು ಮೊಬೈಲ್ ಹಿಡಿದುಕೊಂಡು ಕೂತ ಸೀನು ನೋಡಿ ನೋಡಿ ವೀಕ್ಷಕರಿಗೆ ಯಾರು ಮೊದಲು ಯಾರು ಕೊನೆ ಎಂಬುದೇ ಮರೆತು ಹೋಗಿರಬೇಕು. ಆದರೆ ಆವತ್ತು ನಿಜಕ್ಕೂ ಆಗಿದ್ದೇನು? ಸಾಮಾನ್ಯವಾಗಿ ವಿಧಾನಸಭೆಯ ಅಧಿವೇಶನದ ಚಿತ್ರೀಕರಣಕ್ಕೆ ಎಲ್ಲ ವಾರ್ತಾ ವಾಹಿನಿಗಳ ಕ್ಯಾಮರಾಮನ್ ಗಳೂ ಹೋಗಿರುತ್ತಾರೆ.  ಆವತ್ತೂ ಕೂಡ ಹಾಗೆ ಹೋಗಿದ್ದ ಸಂದರ್ಭದಲ್ಲಿ ಯಾವುದೋ ಒಂದು ವಾಹಿನಿಯ ಕ್ಯಾಮರಾಮನ್ ಗೆ ಈ ದೃಶ್ಯ ಕಂಡಿದೆ, “ಕಾಗೆಯೊಂದಗುಳ ಕಂಡರೆ ಕೂಗಿ ಕರೆಯದೇ ಕುಲಬಾಂಧವರ” ಎನ್ನುವ ಹಾಗೆ ಆತ, ತನ್ನ ಸ್ನೇಹಿತರನ್ನೂ ಕರೆದು ಈ ಸನ್ನಿವೇಶ ತೋರಿಸಿದ್ದಾನೆ. ಆ ಕ್ಷಣಕ್ಕೆ ಅಲ್ಲಿದ್ದವರಿಗೆ ಯಾರಿಗೂ ಕೂಡ ಈ ಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡುತ್ತದೆ- ಸುದ್ದಿಯಾಗುತ್ತದೆ ಎನ್ನುವ ಅರಿವು ಇದ್ದಿರಲಾರದು. ಯಾವುದೋ ಒಂದು ಚಾನಲ್ ಕೂಡಲೇ ಆ ದೃಶ್ಯಗಳನ್ನು ಪ್ರಸಾರ ಮಾಡಿದೆ. ಕೂಡಲೇ ಎಚ್ಚೆತ್ತುಕೊಂಡ ಇತರ ವಾಹಿನಿಗಳೊ ತಮ್ಮ ಬಳಿಯೂ ಈ ಚಿತ್ರಿಕೆ ಇದೆ ಎಂದು ಅವುಗಳನ್ನು ಪ್ರಸಾರ ಮಾಡಲು ಆರಂಭಿಸಿವೆ. ಹೀಗಾಗಿ ಎಲ್ಲರೂ ಎಕ್ಸ್ ಕ್ಲೂಸಿವ್ ಹಾಕುವವರೇ!  ಏನೇ ಆಗಲಿ ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಈ ಪ್ರಕರಣ ಮೂಡಿಸಿದ ಸಂಚಲನ ಮರೆಯುವಂತಿಲ್ಲ. 

ಆದರೆ ಇಂತಹ ಸುದ್ದಿಗಳು, ಎಲ್ಲೋ ಸಾವಿರಕ್ಕೆ ಒಂದು ಎಂಬಂತೆ ಅಚಾನಕ್ಕಾಗಿ ದೊರಕುತ್ತವೆ ಅಷ್ಟೇ. ಉಳಿದೆಲ್ಲ ಸಂದರ್ಭಗಳಲ್ಲಿ ವರದಿಗಾರರು ಕಷ್ಟಪಟ್ಟೇ ಸುದ್ದಿ ಹೊಂದಿಸಿಕೊಳ್ಳಬೇಕು.  ತಮ್ಮ ಸುದ್ದಿಗೆ ಪೂರಕವಾದ ಸಂಶೋಧನೆಯನ್ನು ಮಾಡುವ ಅಗತ್ಯ ವರದಿಗಾರರಿಗೆ ಇದೆ. ಅಂತರ್ಜಾಲವನ್ನು ಜಾಲಾಡುವ, ಬರೀ ಸುದ್ದಿ ಕಿವಿಗೆ ಬಿದ್ದ ಕೂಡಲೇ ಅದನ್ನು ಹೌದೆಂದು ಒಪ್ಪಿಕೊಳ್ಳದೇ ಸುದ್ದಿಗಳ ನಿಖರತೆಯನ್ನು ಅರಿತುಕೊಳ್ಳುವ ಉತ್ಸಾಹ ಅತ್ಯಂತ ಅಗತ್ಯ. ಬೆಂಗಳೂರಿನ ಕಾರ್ಲಟನ್ ಟವರ್ ಗೆ ಬೆಂಕಿ ಬಿದ್ದ ಸುದ್ದಿ ಬಂದಾಗ ನನ್ನ ಸಹೋದ್ಯೋಗಿಯೊಬ್ಬ ಕೂಡಲೇ ತಲೆ ಉಪಯೋಗಿಸಿ, ಟ್ವಿಟರ್ ಜಾಲಾಡಿ ಅಲ್ಲಿ ಒಳಗೆ ಸಿಲುಕಿದ್ದ ಮಂದಿ ಮಾಡಿದ ಟ್ವೀಟನ್ನು, ಚಿತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಅದನ್ನು ಪ್ರಸಾರ ಮಾಡುವಂತೆ ಮಾಡಿದ್ದ. ಬೇರೆ ಚಾನಲ್ ಗಳು ಇನ್ನೂ ಅಲ್ಲಿ ತಲುಪುವ ಮುನ್ನವೇ, ನಾನಿದ್ದ ಚಾನಲಿನಲ್ಲಿ ಸುದ್ದಿ ಚಿತ್ರಗಳ ಸಮೇತವಾಗಿ ಟೆಲಿಕಾಸ್ಟ್ ಆಗಿತ್ತು. ನಿಂತಲ್ಲೇ ಈಶ್ವರನ್ನು ಸುತ್ತಿದ ಗಣಪತಿಯ ತರಹದ ಚಾಣಾಕ್ಷತನ ಇಲ್ಲಿ ಬೇಕು.

ಕ್ರೀಡಾ ವರದಿಗಾರನಾದ ನನ್ನ ಗೆಳೆಯನೊಬ್ಬನಿಗೆ ಆದ ಅನುಭವ ಮಜವಾಗಿದೆ. ಕನ್ನಡದ ವಾರ್ತಾ ವಾಹಿನಿಗಳ ಅಲಿಖಿತ ನಿಯಮದ ಪ್ರಕಾರ ಬೆಳಗಿನ ಪಾಳಿಯಲ್ಲಿ ಹೊಸ ಹುಡುಗರು ಹೆಚ್ಚಾಗಿರುತ್ತಾರೆ. ಸೀನಿಯರ್ ವರದಿಗಾರರು ಬರುವುದು ಸುಮಾರು ಹತ್ತು-ಹನ್ನೊಂದು ಗಂಟೆಗೆ. ಆವತ್ತು ಬೆಳಗ್ಗೆ ಒಂಬತ್ತು ಗಂಟೆಗೆ ಬಂದ ಬ್ರೇಕಿಂಗ್ ನ್ಯೂಸ್, “ಒಸಾಮಾ ಬಿನ್ ಲಾಡೆನ್ ಹತ್ಯೆ”. ಈತನಿರುವ ಚಾನಲ್ ನಲ್ಲಿ ಆ ಹೊತ್ತಿಗೆ ಯಾರೆಂದರೆ ಯಾರೂ ಸೀನಿಯರ್ ರಿಪೋರ್ಟರ್ ಗಳಿಲ್ಲ. ರಾಜಕೀಯ ವಿಶ್ಲೇಷಣೆ ಮಾಡಬಲ್ಲವರಿಲ್ಲ. ಅವರಿಗೆಲ್ಲ ಫೋನಾಯಿಸಿ ದಡಬಡಗುಟ್ಟಿ ಬರುವುದಕ್ಕೆ ಅರ್ಧ ಗಂಟೆಯಾದರೂ ಬೇಕು. ಇವನು ತನ್ನ ನೈಟ್ ಶಿಫ್ಟ್ ಕೆಲಸ ಮುಗಿಸಿ,ಮನೆಗೆ ಹೊರಡಲು ಅನುವಾಗುತ್ತಿದ್ದನಂತೆ. ಅಲ್ಲಿದ್ದ ಬುಲೆಟಿನ್ ಪ್ರೊಡ್ಯೂಸರ್ ಕರೆದವರೇ, ಒಸಾಮಾ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಿ ಕೊಡಲು ಹೇಳಿದರಂತೆ. ಗೂಗಲಲ್ಲಿ ಒಂದಿಷ್ಟು ವಿಚಾರ, ಅಂಕಿ ಅಂಶಗಳನ್ನು ಕೆದಕಿ ಅದನ್ನ ಅವರ ಕೈಗಿತ್ತು ಹೊರಡಲು ಅನುವಾದಾಗ ಆ ಪ್ರೊಡ್ಯೂಸರ್, “ಒಂದು ಕೆಲ್ಸ ಮಾಡು, ಹೇಗೂ ಇಷ್ಟು ಮಾಹಿತಿ ಒಟ್ಟು ಮಾಡಿದ್ದೀಯಾ, ಇದನ್ನೇ ಹಿಡಿದುಕೊಂಡು ಸ್ಟುಡಿಯೋ ಗೆ ಹೋಗು, ಆಂಕರ್ ಜೊತೆಗೆ ಸ್ವಲ್ಪ ಹೊತ್ತು ಡಿಸ್ಕಶನ್ ಮಾಡು, ಅಷ್ಟು ಹೊತ್ತಿಗೆ ಹೇಗೂ ಯಾರಾದರೂ ಬಂದೇ ಬರುತ್ತಾರೆ” ಅಂತಂದು ಒಳಗೆ ದಬ್ಬಿದರಂತೆ. ಕ್ರೀಡಾ ವರದಿಗಾರನೊಬ್ಬ, ಒಸಮಾ ಹತ್ಯೆ ಬಗ್ಗೆ ಹತ್ತಿಪ್ಪತ್ತು ನಿಮಿಷ ಮಾತನಾಡಬೇಕಿತ್ತು!!

ಇವನಿಗೋ,ಕೈಯಲ್ಲಿರುವ ಎರಡು ಮೂರು ಹಾಳೆ ಪ್ರಿಂಟ್ ಔಟ್ ಬಿಟ್ಟರೆ ಬೇರೆ ಮಾಹಿತಿ ದೇವರಾಣೆಯಾಗೂ ಗೊತ್ತಿಲ್ಲ. ಎದುರಿಗೆ ಕೂತ ಹೊಸಬ ಆಂಕರ್ ಗೆ ಒಸಾಮ ಎನ್ನುವ ಭಯೋತ್ಪಾದಕನ ಬಗ್ಗೆ ಮೂರು ಸಾಲಿಗಿಂತ ಹೆಚ್ಚು ಮಾಹಿತಿ ಇಲ್ಲ. ಆದರೂ, ಹೇಗೋ ಮುಂದಿನ ಇಪ್ಪತ್ತು ನಿಮಿಷಗಳ ಕಾಲ ಸ್ವಲ್ಪವೂ ಅನುಮಾನ ಬಾರದ ಹಾಗೆ ಸನ್ನಿವೇಶವನ್ನು ನಿಭಾಯಿಸಿ ಹೊರ ಬಂದ ಈತ, ತನ್ನ ಚುರುಕು ಬುದ್ಧಿಯಿಂದ ಸುದ್ದಿವಾಹಿನಿಯ ಮರ್ಯಾದೆಯನ್ನೂ ಉಳಿಸಿದ್ದ, ಜೊತೆಗೆ ತನ್ನ ಸೀನಿಯರ್ ಗಳ ವಿಶ್ವಾಸವನ್ನೂ ಸಂಪಾದಿಸಿದ್ದ.

ಇನ್ನು ಕೆಲ ಬಾರಿ ಎಷ್ಟೋ ಕಷ್ಟಪಟ್ಟು ಹುಡುಕಿ ತೆಗೆದ ಮಾಹಿತಿಗೆ ಯಾವುದೇ ಬೆಲೆ ಇಲ್ಲವಾಗಿ ಬಿಡುತ್ತದೆ. ಅದಕ್ಕೂ ಸಿದ್ಧವಾಗಿರಬೇಕು. ನನ್ನ ಸ್ನೇಹಿತನೊಬ್ಬ ಖಾಸಗಿ ನ್ಯೂಸ್ ಚಾನಲೊಂದಕ್ಕೆ ಕೆಲಸ ಮಾಡುತ್ತಾನೆ. ಆತನಿಗಾದ ಅನುಭವ ಇದು. ಕರ್ನಾಟಕದ ಪ್ರಖ್ಯಾತ ರಾಜಕಾರಣಿಯೊಬ್ಬರು ಸದಾಕಾಲ ಯಾರ ವಿರುದ್ಧ ವಾಗ್ದಾಳಿ ನಡೆಸುತ್ತ ಬಂದಿದ್ದರೋ, ಆ ಮತ್ತೊಬ್ಬ ರಾಜಕಾರಣಿಯ ಮನೆಗೆ ಮಧ್ಯರಾತ್ರಿ ಭೇಟಿ ನೀಡಿದ್ದರು. ಈತ ಎದ್ದೆನೋ ಬಿದ್ದೆನೋ ಎಂದು ಕ್ಯಾಮರಾಮನ್ ಜೊತೆಗೆ ಅಲ್ಲಿಗೆ ಓಡಿದ. ಮನೆಯ ಹೊರಗೆ ನಿಂತು ಮೆಲ್ಲನೆ ಶೂಟಿಂಗ್ ಮಾಡಿದ್ದೂ ಆಯಿತು. ಆದರೆ ವಿಷಯ ತಿಳಿದ ರಾಜಕಾರಣಿ ತನ್ನ ಚೇಲಾಗಳನ್ನ ಇವರಿದ್ದಲ್ಲಿಗೆ ಅಟ್ಟಿದರು. ದಿಕ್ಕಾಪಾಲಾಗಿ ಓಡಿದ ಇವರು ಯಾವುದೋ ಗಲ್ಲಿಯಲ್ಲಿ ಓಡಿ ಪ್ರಾಣ ಉಳಿಸಿಕೊಳ್ಳಬೇಕಾಯಿತು. ಬೆಳಗಿನ ಜಾವ ಚಾನಲ್ಲಿಗೆ ಹೋಗಿ ಟೇಪು ಕೊಟ್ಟರೆ ಆ ಸುದ್ದಿ ಪ್ರಸಾರವೇ ಆಗಲಿಲ್ಲ! ಕಾರಣವನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪ್ರತಿ ಬಾರಿಯೂ ಹೀಗೇ ಆಗಬೇಕು ಎಂದೇನೂ ಇಲ್ಲ. ಆದರೆ ಜೀವದ ಹಂಗು ತೊರೆದು ’ಬ್ರೇಕಿಂಗ್ ನ್ಯೂಸ್’ ಕೊಡಲು ಹೋಗುವ ಮುನ್ನ ಕೊಂಚ ಎಚ್ಚರಿಂದ ಇರುವುದು ಒಳಿತು.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿರುವ ಸ್ಟಿಂಗ್ ಆಪರೇಷನ್ ಕೂಡ ಇಂತಹದೇ ಅಪಾಯಕಾರಿ ಕೆಲಸ. ಅಂಗಿಯ ಗುಂಡಿಯಂತಿರುವ ಕ್ಯಾಮರಾ,ಪೆನ್ ಕ್ಯಾಮರಾಗಳನ್ನು ಹಿಡಿದು ಕಾನೂನು ಬಾಹಿರ ಕೃತ್ಯಗಳನ್ನು ವರದಿ ಮಾಡಲು ಬೆನ್ನು ಬೀಳುವ ವರದಿಗಾರರು ಹೆಚ್ಚಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿರುತ್ತಾರೆ. ಎಷ್ಟೇ ಆದರೂ ಕೂಡ ಇಂತಹ ಕುಟುಕು ಕಾರ್ಯಾಚರಣೆಗಳು ಅಪಾಯಕಾರಿ ಸಾಹಸವೇ ಸರಿ. ಆದರೆ ಇವುಗಳು ತಂದುಕೊಡುವ ತಾತ್ಕಾಲಿಕ ಪ್ರಸಿದ್ದಿಗಳು ಮತ್ತು ಟಿ.ಆರ್.ಪಿಗಳು ವರದಿಗಾರರನ್ನು ಇಂತಹ ಸಾಹಸಕ್ಕೆ ಪ್ರೇರೇಪಿಸುತ್ತವೆ. ಅಲ್ಲದೇ ಇಂತಹ ಕಾರ್ಯಾಚರಣೆಗಳಿಂದಾಗಿ ಅದೆಷ್ಟೋ ರಾಜಕಾರಣಿಗಳು, ಅಧಿಕಾರಿಗಳ ಮರ್ಯಾದೆ ಬೀದಿಗೆ ಬಂದಿದ್ದನ್ನು ಮರೆಯುವ ಹಾಗಿಲ್ಲ. ಆದರೆ ಕನ್ನಡ ವಾಹಿನಿಗಳಲ್ಲಿನ ಕುಟುಕು ಕಾರ್ಯಾಚರಣೆಗಳು ಬೋಗಸ್ ಜ್ಯೋತಿಷಿಗಳು ಮತ್ತು ಸಣ್ಣಪುಟ್ಟ ಅಧಿಕಾರಿಗಳ ಭೃಷ್ಟಾಚಾರ ಹತ್ತಿಕ್ಕುವಲ್ಲಿಗೆ ಸೀಮಿತವಾಗಿವೆ.

ಟಿ.ಆರ್.ಪಿ ಎಂದರೆ, ಟೆಲಿವಿಷನ್ ರೇಟಿಂಗ್ ಪಾಯಿಂಟ್. ಎಲ್ಲ ವಾಹಿನಿಗಳ ಯಶಸ್ಸು ಮತ್ತು ಸೋಲನ್ನು ನಿರ್ಧರಿಸುವುದೇ ಈ ಟಿ.ಆರ್.ಪಿ. ಟೆಲಿವಿಷನ್ ಆಡಿಯನ್ಸ್ ಮೆಶರ್ಮೆಂಟ್- ಟ್ಯಾಮ್ ಅನ್ನುವ ಸಂಸ್ಥೆ ಈ ರೇಟಿಂಗ್ ಗಳನ್ನು ನೋಡಿಕೊಳ್ಳುತ್ತದೆ. ಮನೆ ಮನೆಗಳಲ್ಲಿ ಇಟ್ಟಿರುವ ಪೀಪಲ್ಸ್ ಮೀಟರ್ ಮುಖಾಂತರ ಯಾರು ಯಾವ ಚಾನಲನ್ನು ಎಷ್ಟು ಹೊತ್ತು ವೀಕ್ಷಿಸುತ್ತಾರೆ ಎಂಬುದು ತಿಳಿಯುತ್ತದೆ. ಆದರೆ ಈ ವ್ಯವಸ್ಥೆಯ ಬಗ್ಗೆ ಸಾಕಷ್ಟು ಟೀಕೆಗಳಿವೆ. ಇದೊಂದು ಪರಿಪೂರ್ಣ ಮಾಪನವಲ್ಲ. ಏಕೆಂದರೆ ಒಂದು ಪ್ರದೇಶದ ಕೆಲವೇ ಕೆಲವು ಮನೆಗಳಲ್ಲಿನ ಮೀಟರ್ ಮೂಲಕ ಒಟ್ಟು ವೀಕ್ಷಕರನ್ನು ಲೆಕ್ಕ ಹಾಕಲಾಗುತ್ತದೆ. ಈ ರೀತಿಯ ’ಸ್ಯಾಂಪ್ಲಿಂಗ್’ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಏನೇ ಆದರೂ ಕೂಡ ಭಾರತದಲ್ಲಿ ಸದ್ಯಕ್ಕೆ ಇದೇ ಮಾನದಂಡವಾಗಿದ್ದು ಎಲ್ಲ ವಾಹಿನಿಗಳೂ ಕೂಡ ಇದರ ಪ್ರಕಾರವೇ ಕಾರ್ಯ ನಿರ್ವಹಿಸುತ್ತವೆ. ಕರ್ನಾಟಕದಲ್ಲಿ ಒಟ್ಟು ಹನ್ನೆರಡು ಟ್ಯಾಮ್ ಕೇಂದ್ರಗಳಿದ್ದು ಅಲ್ಲಿ ಈ ಪೀಪಲ್ಸ್ ಮೀಟರ್ ಇಡಲಾಗಿದೆ. ಬೆಂಗಳೂರು, ಮೈಸೂರು, ಮಂಗಳೂರು, ಹಾಸನ, ಹೊಸಪೇಟೆ, ಗದಗ, ಹುಬ್ಬಳ್ಳಿ-ಧಾರವಾಡ ಇವುಗಳಲ್ಲಿ ಕೆಲವು.

ಉದಾಹರಣೆಗೆ, ಮಂಗಳೂರು ನಗರದಲ್ಲಿನ ಒಂದಿಷ್ಟು ಟಿ.ಆರ್.ಪಿ ಮೀಟರ್ ಗಳು ಅಲ್ಲಿನ ಇಡೀ ನಗರದ ವೀಕ್ಷಕ ವರ್ಗವನ್ನು ಪ್ರತಿನಿಧಿಸುತ್ತವೆ. ಪಕ್ಕದ ಉಡುಪಿಯಲ್ಲಿ ಮೀಟರ್ ಇಲ್ಲದಿರುವುದರಿಂದ, ಅಲ್ಲಿನ ಜನ ನೋಡಿದ ಕಾರ್ಯಕ್ರಮಗಳು ಲೆಕ್ಕಕ್ಕೇ ಇಲ್ಲ! ಈ ಇರುವ ಮೀಟರ್ ಗಳಲ್ಲಿ ಸಂಗ್ರಹವಾಗುವ ಮಾಹಿತಿಯನ್ನು ಡಿ-ಕೋಡ್ ಮಾಡಿ ಯಾವ ಯಾವ ವಾಹಿನಿಯ ಯಾವ ಕಾರ್ಯಕ್ರಮಗಳಿಗೆ ಎಷ್ಟು ರೇಟಿಂಗ್ ಬಂದಿದೆ ಎಂದು ಕಂಡುಹಿಡಿಯಲಾಗುತ್ತದೆ. ಈ ಸಂಬಂಧಿತ ಅಧ್ಯಯನಕ್ಕೇ ಪ್ರತಿ ವಾಹಿನಿಯಲ್ಲೂ ಪ್ರತ್ಯೇಕ ವಿಭಾಗವಿದೆ. ಯಾವ ಕಾರ್ಯಕ್ರಮವನ್ನು ಯಾವ ವಯಸ್ಸಿನ ಮಂದಿ ನೋಡಿದರು ಎನ್ನುವ ಆಧಾರದ ಮೇಲೆ, ಅದರಲ್ಲಿ ಪ್ರಸಾರವಾಗುವ ಜಾಹೀರಾತುಗಳು ನಿರ್ಧರಿಸಲ್ಪಡುತ್ತವೆ. ಹೆಂಗಸರು ಹೆಚ್ಚು ವೀಕ್ಷಿಸುವ ಕಾರ್ಯಕ್ರಮಗಳಲ್ಲಿ ಸೋಪು, ಸ್ಯಾನಿಟರಿ ಪ್ಯಾಡು, ಆಹಾರ ಪದಾರ್ಥಗಳ ಜಾಹೀರಾತು ಬಂದರೆ, ಪುರುಷರು ಹೆಚ್ಚು ನೋಡುತ್ತಾರೆ ಅನ್ನೋ ಶೋ ಗಳಲ್ಲಿ ಮ್ಯೂಚುವಲ್ ಫಂಡ್, ಬ್ಯಾಂಕ್, ಕಾರು, ಬೈಕುಗಳು ಜಾಹೀರಾತು ಬರುತ್ತದೆ! ಮಕ್ಕಳು ನೋಡೋ ಕಾರ್ಯಕ್ರಮದಲ್ಲಿ ಜಂಕ್ ಪುಡ್, ತಂಪು ಪಾನೀಯಗಳ ಜಾಹೀರಾತು ಖಾಯಂ. Iಟಿಜiಚಿಟಿಖಿeevisioಟಿ.ಛಿom ವೆಬ್ ಸೈಟ್ ನಲ್ಲಿ ಭಾರತದಾದ್ಯಂತದ ಪ್ರಮುಖ ಚಾನಲ್ ಗಳ ಟಿ.ಆರ್.ಪಿ ಲಭ್ಯವಿದೆ.

ಇನ್ನು ಎಲ್ಲ ಚಾನಲ್ ಗಳೂ ಕೂಡ ತಮ್ಮದೇ ಆದ ಲೈಬ್ರೆರಿಯನ್ನು ಹೊಂದಿರುತ್ತವೆ. ಅವುಗಳನ್ನು ನೋಡಿಕೊಳ್ಳಲೇ ಲೈಬ್ರೆರಿಯನ್ ಇರುತ್ತಾನೆ.ಮುಖ್ಯ ಸುದ್ದಿಗಳನ್ನು ಟೇಪುಗಳಿಗೆ ಬಸಿದಿಟ್ಟು ಕಾಪಾಡಲಾಗುತ್ತದೆ. ಮುಂದೆಂದೋ ಅದಕ್ಕೆ ಸಂಬಂಧಿಸಿದ ಘಟನೆಗಳು ಜರುಗಿದಾಗ ನಿಮಿಷಾರ್ಧದೊಳಗೆ ಅದನ್ನು ಹುಡುಕಿ ಕೊಡುವ ಜವಾಬ್ದಾರಿ ಇವರದು. ಲೈಬ್ರರಿಯಲ್ಲಿ ಸಾವಿರಾರು ಟೇಪುಗಳನ್ನು, ಡಿವಿಡಿಗಳನ್ನು ಜೋಡಿಸಿಡಲಾಗುತ್ತದೆ. ಯಾವುದೋ ಹಾಲಿವುಡ್ ಸಿನಿಮಾಕ್ಕೆ ಆಸ್ಕರ್ ಬಂದರೆ, ಅಲ್ಲೆಲ್ಲೋ ಇಂಡೋನೇಷ್ಯಾದಲ್ಲಿ ಭೂಕಂಪ ಆದರೆ, ಉಗ್ರಗಾಮಿಗಳಿಂದ ಹೊಸ ದಾಳಿ ಆದರೆ ಎಲ್ಲದಕ್ಕೂ ಮೊದಲು ಓಡಬೇಕಾದ್ದು ಲೈಬ್ರೆರಿಗೇ. ಅಲ್ಲಿನ ಕಂಪ್ಯೂಟರಿನ ಎಕ್ಸೆಲ್ ಶೀಟುಗಳಲ್ಲಿ ಹುಡುಕಿ, ತಮಗೆ ಬೇಕಾದ ಟೇಪುಗಳನ್ನ ಕ್ಷಣಾರ್ಧದಲ್ಲಿ ಕೊಂಡೊಯ್ದು ಎಡಿಟಿಂಗ್ ಕಂಪ್ಯೂಟರಿನ ಮೂತಿಗೆ ತುರುಕಿ ಬ್ರೇಕಿಂಗ್ ನ್ಯೂಸ್ ಅಂತ ಬರಿದೇ ಅಕ್ಷರ ತೋರಿಸುತ್ತಿದ್ದ ಸ್ಕ್ರೀನಿನ ಮೇಲೆ ಚಿತ್ರ ಮೂಡುವಂತೆ ಮಾಡಬೇಕು. ಲೈಬ್ರೆರಿಯನ್ ಆದವನಿಗೆ, ತನ್ನ ಸುತ್ತಲಿರುವ ಅಸಂಖ್ಯ ಟೇಪುಗಳ ರಾಶಿಯಲ್ಲಿ ಎಲ್ಲೆಲ್ಲಿ ಏನೇನಿದೆ ಎಂದು ಖಚಿತವಾಗಿ ಗೊತ್ತಿರಬೇಕು. ಇಲ್ಲದೇ ಹೋದರೆ ಯಾವುದೋ ಸಂದರ್ಭಕ್ಕೆ ಇನ್ನಾವುದೋ ಟೇಪು ತೋರಿಸಿ ಚಾನಲ್ ನ ಮರ್ಯಾದೆ ಮಣ್ಣುಪಾಲಾಗಬಹುದು. ಅಥವಾ ಸಿಕ್ಕಿದ ಹತ್ತೆಂಟು ಸೆಕೆಂಡುಗಳ ವಿಶುವಲ್ ಅನ್ನೇ ಮತ್ತೆ ಮತ್ತೆ ತೋರಿಸಿ ನಗೆಪಾಟಲಿಗೆ ಈಡಾಗಬೇಕಾಗುತ್ತದೆ. ಏಕೆಂದರೆ ಕೊನೆಯ ಕ್ಷಣದಲ್ಲಿ ಅಗತ್ಯ ವೀಡಿಯೋಗಳನ್ನ ಹೊಂದಿಸಿಕೊಳ್ಳಲು ಸಾಧ್ಯವೇ ಇಲ್ಲ.

ಇನ್ನು ನೇರವಾಗಿ ಮಾಧ್ಯಮಕ್ಕೆ ಸಂಬಂಧಿಸಿದ್ದಲ್ಲದೇ ತಂತ್ರಜ್ಞಾನಕ್ಕೆ ಸಂಬಧಿಸಿದ ಕೆಲಸ ಮಾಡುವವರೂ ಕೂಡ ಎಲೆಕ್ಟ್ರಾನಿಕ್ ಮೀಡಿಯಾಕ್ಕೆ ಅವಶ್ಯಕ. ಗ್ರಾಫಿಕ್ ಡಿಸೈನರ್ ಗಳು, ಸಾಫ್ಟ್ ವೇರ್ ಪರಿಣತರು, ಸ್ಯಾಟಲೈಟ್ ಅಪ್ ಲಿಂಕ್ ಮಾಡುವವರು, ಅಕೌಂಟ್ಸ್, ಸೇಲ್ಸ್, ಮಾರ್ಕೆಟಿಂಗ್, ಡ್ರೈವರುಗಳು ಹೀಗೆ ವಿವಿಧ ಬಗೆಯ ಉದ್ಯೋಗಗಳನ್ನು ಮಾಡುವವದು ಇಲ್ಲಿರುತ್ತಾರೆ. ಒಟ್ಟಿನಲ್ಲಿ ಈ ಎಲ್ಲ ವಿಭಾಗಗಳು ಸೇರಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ, ಒಂದು ದೂರದರ್ಶನ ವಾಹಿನಿ ಯಶಸ್ವಿಯಾಗಲು ಸಾಧ್ಯ.

ಇವೆಲ್ಲ ನ್ಯೂಸ್ ಚಾನಲ್ ಗೆ ಸಂಬಂಧಿಸಿದ್ದಾದರೆ, ಜಿ.ಇ.ಸಿಗಳು ಅಥವಾ ಜನರಲ್ ಎಂಟರ್ಟೇನ್ಮೆಂಟ್ ಚಾನಲ್ ಗಳು ಕೂಡ ಹೆಚ್ಚು ಕಡಿಮೆ ಇದೇ ರೀತಿ ಕಾರ್ಯನಿರ್ವಹಿಸುತ್ತವೆ. ಅವು ಕೇವಲ ಮನರಂಜನಾ ಪ್ರಧಾನ ವಾಹಿನಿಗಳಾಗಿರುವುದರಿಂದ ಅಲ್ಲಿ ವಾರ್ತೆಗಳ ಬಗೆಗಿನ ಒತ್ತಡ ಇರುವುದಿಲ್ಲ. ಬದಲಿಗೆ ಗೇಮ್ ಶೋ ಗಳು, ರಿಯಾಲಿಟಿ ಶೋ ಗಳು ಮತ್ತು ಧಾರಾವಾಹಿಗಳು ಮುಖ್ಯವಾಗುತ್ತವೆ. ಅಲ್ಲಿನ ಹೆಚ್ಚಿನ ಕಾರ್ಯಕ್ರಮಗಳು ಮೊದಲೇ ರೆಕಾರ್ಡ್ ಆಗಿದ್ದು ನಂತರ ಪ್ರಸಾರವಾಗುತ್ತವೆ. ಮತ್ತು ಇಲ್ಲಿನ ಕಾರ್ಯಕ್ರಮಗಳು ಮತ್ತಷ್ಟು ವೈಭವೋಪೇತವಾಗಿರುತ್ತವೆ. ಬರಹಗಾರರಿಗೆ ಮತ್ತು ತಂತ್ರಜ್ಞರಿಗೆ ಇಲ್ಲಿ ಬೇಡಿಕೆ ಹೆಚ್ಚು.

ಇತ್ತೀಚಿನ ದಿನಗಳಲ್ಲಂತೂ ಟಿವಿ ವಾಹಿನಿಗಳ ಕಾರ್ಯ ವೈಖರಿ ಮತ್ತು ಕೆಲಸದ ವೇಗ ಗಣನೀಯವಾಗಿ ಬದಲಾಗುತ್ತಿದೆ. ಹೊಸ ತಂತ್ರಜ್ಞಾನಗಳ ಬಳಕೆ, ಹೆಚ್ಚುತ್ತಿರುವ ಚಾನಲುಗಳು, ಬದಲಾಗುತ್ತಿರುವ ಜನರ ಆಸಕ್ತಿ ಇವುಗಳೆಲ್ಲದರಿಂದ ನ್ಯೂಸ್ ಅನ್ನು ನೋಡುವ ವಿಧಾನವೇ ಬದಲಾಗುತ್ತಿದೆ. ವೀಕ್ಷಕರನ್ನು ಸೆಳೆಯಲು ಏನೇನೋ ದ್ರಾವಿಡ ಪ್ರಾಣಾಯಾಮಗಳನ್ನು ವಾಹಿನಿಗಳು ಮಾಡುತ್ತಿವೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಗುರುತಿಸಲಾಗದ ವೇಗದಲ್ಲಿ ಇವುಗಳು ಮುನ್ನಡೆಯುತ್ತಿವೆ.

ಸುದ್ದಿಗಳನ್ನು ಪಡೆಯುವ ಹಪಹಪಿಯಲ್ಲಿ ಇತ್ತೀಚಿಗೆ ವರದಿಗಾರರು ಟೆರರಿಸ್ಟ್ ಗಳಂತೆ ವರ್ತಿಸುತ್ತಾರೆ ಎಂಬ ಆಪಾದನೆಯೂ ಇದೆ. ಇದು ಕೊಂಚ ಮಟ್ಟಿಗೆ ನಿಜ. ಇತರ ವಾಹಿನಿಗಳಿಗಿಂತ ಮೊದಲೇ ನಾವು ಸುದ್ದಿ ನೀಡಬೇಕು ಎಂಬ ಅತ್ಯಾಸೆ, ವರದಿಗಾರರನ್ನು ಈ ರೀತಿ ಮಾಡಲು ಪ್ರೇರೇಪಿಸುತ್ತದೆ. ಗಣ್ಯರ ವೈಯಕ್ತಿಕ ವಲಯದೊಳಗೆ ನುಗ್ಗುವುದು, ಗಾಳಿ ಸುದ್ದಿಗೇ ಹೆಚ್ಚಿನ ಮಹತ್ವ ನೀಡುವುದು, ವಿಷಯಕ್ಕಿಂತ ವ್ಯಕ್ತಿಗೆ ಪ್ರಾಧಾನ್ಯತೆ ನೀಡುವುದು, ಸರಿಯಾದ ಆಧಾರಗಳಿಲ್ಲದ, ಸಂಶೋಧನೆ ಮಾಡದ ಸುದ್ದಿಗಳನ್ನು ಪ್ರಸಾರ ಮಾಡುವುದು ಇತ್ಯಾದಿ ಘಟನೆಗಳು ಇತ್ತೀಚಿನ ದಿನಗಳಲ್ಲಿ ಪದೇ ಪದೇ ಕಂಡುಬರುತ್ತಿವೆ. ಹೀಗಾಗಿ ಇಂತಹ ಸಂದರ್ಭದಲ್ಲಿ, ವಿವೇಚನೆಯನ್ನು ಕಳೆದುಕೊಳ್ಳದೇ ತಾವು ಸರಿಯಾದ ಮಾರ್ಗದಲ್ಲಿ ಮುನ್ನಡೆಯುತ್ತಿದ್ದೇವೆಯೋ, ಇಲ್ಲವೋ ಎಂಬುದನ್ನು ಗಮನಿಸುವ ಮನಸ್ಥಿತಿಯನ್ನು ಇಲ್ಲಿ ಕೆಲಸ ಮಾಡಲು ಬಯಸುವ ಮಂದಿ ಹೊಂದಿರಬೇಕು. ಇಲ್ಲಿ ಒಮ್ಮೆ ಹೆಜ್ಜೆ ತಪ್ಪಿದರೆ, ದಿಕ್ಕೇ ತಪ್ಪಿದಂತೆ. ಮರಳಿ ಬರಲು ಹರಸಾಹಸ ಮಾಡಬೇಕಾಗುತ್ತದೆ. ಏಕೆಂದರೆ ಯಶಸ್ಸಿಗೆ ಸಾವಿರ ಅಪ್ಪಂದಿರು, ಆದರೆ ಸೋಲು ಅನಾಥ!

ಸೋಮವಾರ, ನವೆಂಬರ್ 21, 2016

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಕಂಪು


ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶದಲ್ಲಿ, ತಂತ್ರಜ್ಞಾನವು ಸಂವಹನದ ಪರಿಭಾಷೆಯನ್ನೇ ಬದಲಿಸಿದೆ. ಸಾಮಾಜಿಕ ಜಾಲತಾಣಗಳ ವ್ಯಾಪಕ ಬಳಕೆ, ಭಾಷೆಯ ಹರಿವನ್ನು ಹೆಚ್ಚಿಸಿದೆ. ಭಾಷೆಯ ಬೆಳವಣಿಗೆ ಎಂದರೆ ಕೇವಲ ಸಾಹಿತ್ಯ ಕೃತಿಗಳು-ಸಿನಿಮಾ-ಸಂಗೀತ ಎಂಬ ಮಾಮೂಲು ಚೌಕಟ್ಟನ್ನು ಮೀರಿ, ಜನಸಾಮಾನ್ಯರೂ ಕೂಡ ತಮ್ಮ ಭಾಷೆಗಳ ಬಳಕೆಯನ್ನು ಅಂತರ್ಜಾಲದಲ್ಲಿ ಮಾಡುವ ಮೂಲಕ, ಭಾಷೆಯ ಬಳಕೆಯ ಪರಿಧಿಯು ಹೆಚ್ಚಾಗಿದೆ. ಅಂತರ್ಜಾಲದಲ್ಲಿನ ಇಂಗ್ಲೀಷ್ ಅಧಿಪತ್ಯವನ್ನು ಯಾರೂ ಪ್ರಶ್ನೆ ಮಾಡುವ ಹಾಗೆಯೇ ಇಲ್ಲದೇ ಹೋದರೂ ಕೂಡ, ಇತರ  ಪ್ರಾದೇಶಿಕ ಭಾಷೆಗಳು ಕೂಡ ತಮ್ಮ ಬೇರುಗಳನ್ನು ನಿಧಾನಕ್ಕೆ ಜಾಲಪ್ರಪಂಚದೊಳಗೆ ಇಳಿಬಿಡುತ್ತಿವೆ. ಅಲ್ಲಿನ ಸತ್ವವನ್ನು ಹೀರಿಕೊಂಡು ವಿಶಾಲ ವೃಕ್ಷವಾಗಿ ಬೆಳೆಯುವತ್ತ ಮುನ್ನಡೆಯುತ್ತಿವೆ.

ಕನ್ನಡ ಭಾಷೆಯನ್ನೇ ಗಮನಿಸುವುದಾದರೆ ಪ್ರಾಯಶಃ ೨೦೦೦ನೇ ಇಸವಿಯ ನಂತರ ನಿಧಾನಕ್ಕೆ ಕನ್ನಡವನ್ನು ಅಂತರ್ಜಾಲದಲ್ಲಿ ಬಳಸುವವರ ಸಂಖ್ಯೆ ಹೆಚ್ಚುತ್ತ ಹೋಯಿತು. ಅದಕ್ಕೂ ಮೊದಲು ಒಂದೆರಡು ಕನ್ನಡ ಅಂತರ್ಜಾಲ ತಾಣಗಳಿದ್ದು, ಓದುಗರಷ್ಟೇ ಆಗಿದ್ದ ಹಲವರು ಬ್ಲಾಗ್ ಎಂಬ ಹೊಸ ಸಾಧ್ಯತೆಯ ಬಗ್ಗೆ ತಿಳಿದೊಡನೆಯೇ ಬರಹಗಾರರೂ ಆಗಿ ಬದಲಾದರು. ಯಾರು ಬೇಕಿದ್ದರೂ, ಏನು ಬೇಕಿದ್ದರೂ ಬರೆದು ಜಾಲಜಗತ್ತಿನಲ್ಲಿ ಹರಿಬಿಡಬಹುದು ಎಂದು ಯೋಚನೆಯೇ ಬಹಳ ರೋಮಾಂಚನಕಾರಿಯಾಗಿತ್ತು! ಈ ಮೊದಲು ಪತ್ರಿಕೆಗಳಿಗೋ, ಮ್ಯಾಗಜೀನುಗಳಿಗೋ ಕತೆ ಕವಿತೆಗಳನ್ನು ಕಳುಹಿಸಿ ತಿಂಗಳಾನುಗಟ್ಟಲೆ ಕಾದು ಕೂರುವ ಬದಲು, ಬ್ಲಾಗ್ ಜಗತ್ತಿನ ಮೂಲಕ ಈ ಕ್ಷಣದ ಯೋಚನೆ-ಲಹರಿಗಳು ಬರೆದು ಪಬ್ಲಿಷ್ ಮಾಡಬಹುದು, ಅದಕ್ಕೆ ಕೂಡಲೇ ಜನರ ಪ್ರತಿಕ್ರಿಯೆ ಕೂಡ ಲಭ್ಯವಾಗುತ್ತದೆ ಎನ್ನುವ ಯೋಚನೆಯೇ ಚೇತೋಹಾರಿಯಾಗಿತ್ತು ಕೂಡ. ನಿಧಾನಕ್ಕೆ ಶುರುವಾದ ಕನ್ನಡ ಬ್ಲಾಗುಗಳ ಸಂಖ್ಯೆ ಸಾವಿರ ಸಾವಿರ ಸಂಖ್ಯೆಯಲ್ಲಿ ಹೆಚ್ಚು ಹೋಯಿತು. ಆ ಸಮಯಕ್ಕೆ ಶುರುವಾದ ಆರ್ಕುಟ್ ಎನ್ನುವ ಸಾಮಾಜಿಕ ಜಾಲತಾಣ, ಬ್ಲಾಗ್ ನ ಜನಪ್ರಿಯತೆ ಹೆಚ್ಚುವಲ್ಲಿ ಬಹಳ ಸಹಕಾರಿಯಾಯಿತು. ಯುನಿಕೋಡ್ ತಂತ್ರಜ್ಞಾನವನ್ನು ಬಳಸಿ ಅಂತರ್ಜಾಲದಲ್ಲಿ ಕನ್ನಡ ಬರೆಯುವ ಸೌಲಭ್ಯವನ್ನು ಬಹುಮಂದಿ ಬಳಸಿಕೊಂಡರು.

ಕನ್ನಡ ಭಾಷೆಯನ್ನು ಅಂತರ್ಜಾಲದಲ್ಲಿ ಬಳಸಲು ಆರಂಭಿಸಿದವರಲ್ಲಿ ಎಲ್ಲ ಬಗೆಯ ವೃತ್ತಿಗಳಲ್ಲಿ ಇದ್ದವರೂ ಇದ್ದರು. ಕಂಪ್ಯೂಟರಿನ ಬಳಕೆಯ ಬಗ್ಗೆ ಅರಿವಿದ್ದ, ನಿತ್ಯ ತಮ್ಮ ವೃತ್ತಿಗಾಗಿ ಗಣಕ ಬಳಸುತ್ತಿದ್ದವರು ಪ್ರವೃತ್ತಿಗಾಗಿ ಬ್ಲಾಗು-ಜಾಲತಾಣಗಳನ್ನು ನೆಚ್ಚಿಕೊಂಡರು. ಕನ್ನಡ ಕವನ-ಕಥೆ-ಕಾದಂಬರಿಗಳನ್ನು ಬರೆದರು. ದಟ್ಸ್ ಕನ್ನಡ, ಸಂಪದದಂತಹ ವೆಬ್ ಸೈಟುಗಳು ಹೊಸ ಬರಹಗಾರರಿಗೆ ಮಣೆ ಹಾಕಿದವು. ಬ್ಲಾಗುಗಳ ಸಮೃದ್ಧಿಯ ಮಳೆ ಸುರಿವ ಕಾಲದಲ್ಲಿಯೇ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುವ ಹಲವು ವೆಬ್  ಸೈಟುಗಳು ಕೂಡ ಹುಟ್ಟಿಕೊಂಡವು. ಅವುಗಳನ್ನ  ಹಿಂಬಾಲಿಸಲು, ಹಂಚಿಕೊಳ್ಳಲು ಗೂಗಲ್ ರೀಡರ್, ಆರ್ಕುಟ್ ನಂತಹ ತಾಣಗಳು ಸಹಕರಿಸಿದವು. ಕನ್ನಡ ವಿಕಿಪೀಡಿಯಾ ಪುಟಗಳು ಕೂಡ ಇದೇ ಸುಮಾರಿಗೆ ಆರಂಭಗೊಂಡವು.
ಭಾರತದಲ್ಲಿ ಅಂತರ್ಜಾಲ ಬಳಕೆಯು ಹೆಚ್ಚುಗೊಂಡ ಮೊದ ಮೊದಲ ದಿನಗಳಲ್ಲಿಯೇ ಕನ್ನಡ ಕೂಡ ಇಂಟರ್ ನೆಟ್ ನಲ್ಲಿ ಅಂಬೆಗಾಲಿಟ್ಟು ನಡೆಯಲು ಆರಂಭಿಸಿ ಬೇಗನೇ ವೇಗ ವೃದ್ಧಿಸಿಕೊಂಡಿತು. ಕನ್ನಡ ಬ್ಲಾಗರುಗಳು ಗುಂಪುಗಳನ್ನ ರಚಿಸಿಕೊಂಡು ಅಂತರ್ಜಾಲದಲ್ಲಿ ಕನ್ನಡ ಬಳಕೆಯನ್ನು ಹೆಚ್ಚಿಸುವ ಬಗ್ಗೆ ಚರ್ಚೆಗಳನ್ನೂ ನಡೆಸಿದ್ದರು! ಇಷ್ಟಾಗಿಯೂ ಬಹುಮಂದಿ ಕನ್ನಡವನ್ನು ಬರೆಯುವ, ಬಳಸುವ ಕುರಿತು ಮೌನವನ್ನು ಹೊಂದಿದ್ದಂತೂ ಸುಳ್ಳಲ್ಲ. ಕನ್ನಡ ಬರೆಯುವ ತಂತ್ರಾಶಗಳ ಕುರಿತ ಗೊಂದಲ, ಸುಮ್ಮನೆ ರಗಳೆ ಯಾಕೆ ಎಂಬ ಮನೋಧರ್ಮವೇ ಇದಕ್ಕೆ ಕಾರಣ ಎನ್ನುವುದು ಸುಳ್ಳಂತೂ ಅಲ್ಲ.

ಆದರೆ ಯಾವಾಗ ಫೇಸ್ ಬುಕ್ ಎಂಬ ವೆಬ್ ಸೈಟು ಉಳಿದೆಲ್ಲ ಜಾಲತಾಣಗಳನ್ನು ನುಂಗಿ ನೊಣೆಯುವ ಮಟ್ಟಕ್ಕೆ ಬೆಳೆಯಿತೋ, ಎಲ್ಲವೂ ಅತ್ಯಂತ ವೇಗವಾಗಿ ಬದಲಾಗಿ ಹೋಯಿತು. ಅದರ ಜೊತೆ ಜೊತೆಗೇ ಆದ ಇನ್ನೊಂದು ಬದಲಾವಣೆ, ಹೊಸ ಮೊಬೈಲ್ ತಂತ್ರಜ್ಞಾನದ ಆವಿಷ್ಕಾರ! ಆಂಡ್ರಾಯ್ಡ್ ತಂತ್ರಾಶ ಬಂದು ನೂತನ ರಂಗಸಜ್ಜಿಕೆಯೇ ಸಿದ್ಧವಾಗಿ ಹೋಯಿತು. ಕನ್ನಡ ಭಾಷೆಯನ್ನ ಮೊಬೈಲ್ ಮೂಲಕ ಜಾಲತಾಣಗಳಲ್ಲಿ ಬಳಸುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿತು. ಇಂದು ೬೬ ವರ್ಷದ ನನ್ನ ಅಪ್ಪ ಕೂಡ ಲೀಲಾಜಾಲವಾಗಿ ಕನ್ನಡವನ್ನು ಮೊಬೈಲ್ ನಲ್ಲಿ ಬಳಸುತ್ತಿದ್ದಾರೆ ಮತ್ತು ಫೇಸ್ ಬುಕ್ ಸ್ಟೇಟಸ್ ಗಳನ್ನು ಅಪ್ ಡೇಟ್ ಮಾಡುತ್ತಿದ್ದಾರೆ ಎಂದರೆ, ಅದಕ್ಕೆ ಈ ಹೊಸ ಆವಿಷ್ಕಾರಗಳೇ ಕಾರಣ!

ಕನ್ನಡ ಭಾಷೆ ಈ ಎಲ್ಲ ಕಾರಣಗಳಿಂದ ಇಂದು ಅಂತರ್ಜಾಲದಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಕಂಡುಕೊಂಡಿದೆ. ಕನ್ನಡವನ್ನು ಬರೆಯುವ ಸರಳ ಆಪ್ ಗಳಿಂದಾಗಿ ಬಹುಮಂದಿ ಟ್ವಿಟರ್, ಫೇಸ್ ಬುಕ್ ಗಳಲ್ಲಿ ಕನ್ನಡದಲ್ಲೇ ಬರೆಯುತ್ತಿದ್ದಾರೆ. ಕನ್ನಡವನ್ನು ಉಳಿಸಿ ಬೆಳೆಸುವ ಉದ್ದೇಶವನ್ನು ಹೊಂದಿರುವ ಬಹುಮಂದಿ ಈ ಜಾಲತಾಣಗಳಲ್ಲೇ ಒಂದಾಗಿದ್ದಾರೆ. ಕನ್ನಡದ ಕಾಳಜಿ ಇರುವ ಬೇರೆ ಬೇರೆ ಸ್ಥರಗಳಲ್ಲಿರುವ ಜನರನ್ನ ಈ ಜಾಲತಾಣಗಳು ಒಗ್ಗೂಡಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ ದೈನಿಕ ಜಗತ್ತಿನ, ಅತಿ ಸಾಮಾನ್ಯ ವಿಷಯಗಳ ಕುರಿತು ಕನ್ನಡದಲ್ಲಿಯೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕಥೆಕವನಗಳಿಂದಾಚೆಗೆ ಕನ್ನಡವನ್ನು ಅಂತರ್ಜಾಲದಲ್ಲಿ ಬಳಸುವ ಕ್ರಿಯೆ ಆರಂಭವಾಗಿದೆ! ಈ ಮೂಲಕ ಮುಂದಿನ ತಲೆಮಾರಿನಿಂದಾಚೆಗೆ ಕನ್ನಡವು ಕಾಣೆಯಾಗಬಹುದೇನೋ ಎನ್ನುವ ಭಯವು ಸಣ್ಣಗೆ ದೂರಾಗುತ್ತಿದೆ.

ಫೇಸ್ ಬುಕ್ ನಲ್ಲೇ ನೋಡಿದಾಗ, ಕನ್ನಡದ ಏಳಿಗೆಗಾಗಿ ಶ್ರಮಿಸುತ್ತಿರುವ ಹಲವು ಮಂದಿ ಕಾಣಿಸುತ್ತಾರೆ. ಗಾಂಚಾಲಿ ಬಿಡಿ ಕನ್ನಡ ಮಾತಾಡಿ, ಪದಾರ್ಥ ಚಿಂತಾಮಣಿ ಮೊದಲಾದ ಪುಟಗಳು ಕನ್ನಡದ ಬೆಳವಣಿಗೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿವೆ. ಕನ್ನಡ ಸಾಹಿತ್ಯ-ಕಥೆ ಕವನಗಳ-ಕಾದಂಬರಿಗಳ, ಕನ್ನಡದ ಹಳೆಯ ಅಮೂಲ್ಯ ಕೃತಿಗಳ ಬಗ್ಗೆ ಚರ್ಚೆ ಮಾಡುವ ಹಲವು ಪುಟಗಳು ಇಲ್ಲಿವೆ.

ಜತೆಗೆ, ಇನ್ನೊಂದು ಮುಖ್ಯ ಬೆಳವಣಿಗೆಯಲ್ಲಿ ಹಲವಾರು ಹೊಸ ಕನ್ನಡ ಜಾಲತಾಣಗಳು ಕೂಡ ಹುಟ್ಟಿಕೊಳ್ಳುತ್ತಿವೆ. ಹೊಸ ಹುಡುಗರು, ಹೊಸ ಉತ್ಸಾಹದೊಡನೆ ಉತ್ತಮ ದರ್ಜೆಯ ವೆಬ್ ಸೈಟ್ ಗಳನ್ನು ಆರಂಭಿಸುತ್ತಿದ್ದಾರೆ. ರಾಜಕೀಯ-ಕ್ರೀಡೆ-ವಿಜ್ಞಾನ-ಕೃಷಿ ಹೀಗೆ ವಿವಿಧ ವಿಚಾರಗಳನ್ನು ಹೊತ್ತ ತಾಣಗಳನ್ನ ನಾವೀಗ ಕಾಣಬಹುದು. ಹೀಗಾಗಿ, ಬಗೆಬಗೆಯ ಸುದ್ದಿಗಳು ಕನ್ನಡದಲ್ಲಿಯೇ ದೊರಕುವಂತಾಗಿದೆ. ನಮ್ಮ ನಡುವಿನ ಸಾಧಕರನ್ನು, ವಿಶೇಷ ಪ್ರತಿಭೆ ಹೊಂದಿರುವ ಮಂದಿಯನ್ನು ಈ ತಾಣಗಳು ಜನರಿಗೆ ಪರಿಚಯಿಸುತ್ತಿವೆ. ದಿನಪತ್ರಿಕೆಗಳು, ಟೀವಿ ಮಾಧ್ಯಮಗಳಂತೆಯೇ ವೆಬ್ ಪೋರ್ಟಲ್ ಗಳೂ ಕೂಡ ಬೆಳೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಸಿದ್ಧಿಯನ್ನು ಹೊಂದುವುದರಲ್ಲಿ ಯಾವ ಅನುಮಾನವೂ ಇಲ್ಲ.

ಕೇವಲ ಬರವಣಿಗೆಯಲ್ಲಿ ಮಾತ್ರವಲ್ಲ- ಯೂಟ್ಯೂಬ್ ನಂತಹ ಜಾಲತಾಣಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡದ ಕಿರುಚಿತ್ರಗಳು-ಹಾಡುಗಳು- ಸಿನಿಮಾಗಳು ಎಲ್ಲೆಡೆಗೆ ಹಬ್ಬುತ್ತಿದೆ. ಜಾಗತಿಕ ಮಟ್ಟದಲ್ಲಿ ಕನ್ನಡ ಪ್ರತಿಭೆಗಳನ್ನ ಎಲ್ಲರೂ ಗುರುತಿಸುವ ಕೆಲಸ ಆರಂಭವಾಗಿದೆ. ಹೊಸ ವಿಧದ ಮನರಂಜನೆಗಳೂ ನಮ್ಮವರಿಗೆ ದಕ್ಕುತ್ತಿವೆ. ಕನ್ನಡ ಸ್ಟಾಂಡ್ ಅಪ್ ಕಾಮಿಡಿ, ಚಲನಚಿತ್ರ ವಿಮರ್ಶೆಗಳ ವೀಡಿಯೋಗಳು, ಕನ್ನಡ ರ್ಯಾಪ್ ಹಾಡುಗಳು- ಹೀಗೆ ನವಪ್ರಪಂಚವೊಂದು ಕನ್ನಡದ ನೋಡುಗರಿಗೆ ದಕ್ಕುತ್ತಿದೆ. ಹೊಸ ಅಲೆಯ ಚಿತ್ರಗಳನ್ನು- ಡಾಕ್ಯುಮೆಂಟರಿಗಳನ್ನು ಮಾಡುವ ಮಂದಿಯ ಮಧ್ಯೆ ಕನ್ನಡದ ಹುಡುಗರನ್ನೂ ಕೂಡ ಗುರುತಿಸಲಾಗುತ್ತಿದೆ. ದಿನವೂ ಒಂದಲ್ಲ ಒಂದು ಹೊಸ ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಗೊಳ್ಳುತ್ತಲೇ ಇರುತ್ತದೆ.  ಕರ್ನಾಟಕದ ಯಾವುದೋ ಮೂಲೆಯಲ್ಲಿ ಕೂತಿರುವ ಉತ್ತಮ ಹಾಡುಗಾರ್ತಿಯೊಬ್ಬಳು ದಿನ ಬೆಳಗಾಗುವುದರೊಳಗಾಗಿ ವಿಖ್ಯಾತಳಾಗುತ್ತಾಳೆ. ಹೀಗೆ ಕನ್ನಡ ದಿನೇ ದಿನೇ ತನ್ನನ್ನು ತಾನು ಉತ್ತಮಗೊಳಿಸಿಕೊಳ್ಳುತ್ತಿದೆ.

ಆದರೆ ಬೀಸಿಬರುವ ಗಾಳಿಯು ಪರಿಮಳದ ಜೊತೆಗೆ ಕೆಲಬಾರಿ ಅಸಹನೀಯ ಗಂಧವನ್ನೂ ತಂದೀತು. ಸಾಮಾಜಿಕ ಜಾಲತಾಣದಲ್ಲಿನ ಕನ್ನಡ ಬಳಕೆಯ ವಿಚಾರದಲ್ಲೂ ಇದು ಹೊರತಲ್ಲ. ಕನ್ನಡ ಭಾಷೆಯ ಸಾವಿರಾರು ವರುಷಗಳ ಇತಿಹಾಸವನ್ನು, ಅದಕ್ಕಿರುವ ಶಾಸ್ತ್ರೀಯ ಅಡಿಪಾಯವನ್ನು ಕಡೆಗಣಿಸಿ, ಹೊಸದೇನೋ ತಿರುಚುವಿಕೆಗಳನ್ನ ಇದೇ ಜಾಲತಾಣಗಳ ಸಹಕಾರದಿಂದ ಮಾಡುವ ಪ್ರಯತ್ನ ನಡೆಯುತ್ತಿದೆ. ಮಹಾಪ್ರಾಣಗಳ ಕತ್ತುಹಿಸುಕಿ, ಸಂಸ್ಕೃತ ಮೂಲದ ಶಬ್ದಗಳನ್ನು ಕೊಂದು ಹೊಸ ಅರ್ಥಹೀನ ಪದಗಳನ್ನು ಹುಟ್ಟುಹಾಕುವ ಕೆಲಸಕ್ಕೆ ಇಲ್ಲೇ ಪ್ರಚಾರವು ದೊರಕುತ್ತಿದೆ. ಫೇಸ್ ಬುಕ್ ನಂತಹ ವೆಬ್ ಸೈಟ್ ಗಳ ಕನ್ನಡ ಪುಟಗಳಲ್ಲಿ ಈಗಾಗಲೇ ಇಂತಹ ಹಲ ಶಬ್ದಗಳು ತೂರಿಕೊಂಡಿರುವುದನ್ನು ಕೂಡ ಗಮನಿಸಬಹುದಾಗಿದೆ. ಇದರ ಜೊತೆಗೆ ಹಲವು ಟ್ರೋಲ್ ಪೇಜುಗಳಲ್ಲಿ, ಮೀಮ್ ಗಳಲ್ಲಿ ಕನ್ನಡವನ್ನು ಹೀಗಳೆಯುವ ಪ್ರಯತ್ನವನ್ನೂ ಕಾಣಬಹುದು. ಆದರೆ, ಕನ್ನಡದ ಹಿತಾಸಕ್ತಿಯನ್ನು ಕಾಪಾಡುವ ಮಂದಿಯೇ ಸಂಖ್ಯೆಯೇ ಜಾಸ್ತಿ ಇರುವುದರಿಂದ, ಅಂತಹ ತೊಂದರೆಯೇನೂ ಇಲ್ಲ! 

ಆಡುಮಾತಿನ ಕನ್ನಡವೇ ಶ್ರೇಷ್ಠ, ಗ್ರಾಂಥಿಕ ಕನ್ನಡ ಅರ್ಥಹೀನ,ಅ-ಹ ಕಾರಗಳ ತಪ್ಪು ಬಳಕೆಯು ಸರಿ ಎನ್ನುವ ಹಾಹಾಕಾರಕ್ಕೂ ಈ ಸೋಶಿಯಲ್ ಮೀಡಿಯಾ ವೇದಿಕೆಯಾಗುತ್ತಿದೆ. ಭಾಷೆಯ ಅಪಭ್ರಂಶ ಬಳಕೆಯನ್ನು ಸಮರ್ಥಿಸಿಕೊಳ್ಳುವ, ’ಏನೀಗ-ನಾನ್ ಕನ್ನಡನೇ ಬರೀತಾ ಇದೀನಿ, ಅದೇ ಬಹಳ ದೊಡ್ಡ ವಿಷಯ,ತಪ್ಪು ಬರೆದರೆ ಏನಂತೆ’ ಎನ್ನುವ ಮೊಂಡುವಾದವೂ ಇಲ್ಲಿ ಕಾಣುತ್ತಿದೆ. ಕನ್ನಡ ವ್ಯಾಕರಣವನ್ನೇ ಮೂಲೆಗೊತ್ತಿರುವ ನೂರಾರು ಕನ್ನಡ ಜಾಹೀರಾತುಗಳಂತೂ ಸಾಮಾನ್ಯ ಎನ್ನುವಷ್ಟವರ ಮಟ್ಟಿಗಾಗಿದೆ. ಇಂತಹ ವಿಷಯಗಳಿಂದ ಕನ್ನಡ ಭಾಷೆಯ ಗುಣಮಟ್ಟಕ್ಕೆ ಧಕ್ಕೆಯಾಗುವುದಂತೂ ಖಂಡಿತ. ಸುಳ್ಳನ್ನ ನೂರು ಬಾರಿ ಹೇಳಿದರೆ ಅದು ಸತ್ಯವೇ ಆಗಿ ಹೋಗುವಂತೆ, ಭಾಷೆಯ ತಪ್ಪು ಬಳಕೆಯೇ  ಖಾಯಂ ಆಗಿ ಹೋಗುವ ಅಪಾಯ ಇದೆ.

ಯಾವುದೇ ಭಾಷೆಯು ಬದಲಾವಣೆಗೆ ಒಗ್ಗಿಕೊಂಡು, ತನ್ನತನವನ್ನೂ ಉಳಿಸಿಕೊಂಡು ನಡೆದಾಗಲೇ ಅದರ ಏಳಿಗೆ ಸಾಧ್ಯ. ಕನ್ನಡ ಭಾಷೆಯು ಈ ಹೊಸಯುಗದಲ್ಲಿ ಅಂತರ್ಜಾಲಕ್ಕೆ ತನ್ನನ್ನ ಒಗ್ಗಿಸಿಕೊಂಡು ಮುನ್ನಡೆಯುತ್ತಿದೆ. ಆದರೂ, ಭಾರತದ ಇತರ ಪ್ರಾದೇಶಿಕ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಬೆಳವಣಿಗೆ ಕೊಂಚ ನಿಧಾನವೇ ಇರುವುದು ಸುಳ್ಳಲ್ಲ. ತಮಿಳು ತೆಲುಗು ಮಲಯಾಳಂ ಭಾಷೆಗಳ ಜಾಲತಾಣಗಳಿಗೆ, ಮೊಬೈಲ್ ಆಪ್ ಗಳಿಗೆ ಹೋಲಿಸಿದರೆ, ಕನ್ನಡ ಇನ್ನೂ ಕಲಿಯುವುದು ಬಹಳ ಇದೆ. ಅವರುಗಳ ಪಕ್ಕದಲ್ಲಿ ನಿಂತು ನೋಡಿದಾಗ, ಭಾಷೆಯನ್ನು ಸಮರ್ಥವಾಗಿ ದುಡಿಸಿಕೊಳ್ಳುತ್ತಿಲ್ಲ ಎನ್ನುವುದು ಅರಿವಾಗುತ್ತದೆ. ಕಿಂಡಲ್ ನಂತಹ ಪುಸ್ತಕಗಳನ್ನೋದುವ ಗ್ಯಾಡೆಜ್ಟ್ ಇನ್ನೂ ಪೂರ್ಣವಾಗಿ ಕನ್ನಡಕ್ಕೆ ಬೆಂಬಲ ನೀಡುತ್ತಿಲ್ಲ. ಬ್ಯಾಕಿಂಗ್ ಅಪ್ಲಿಕೇಶನ್ ಗಳಿಂದ ಹಿಡಿದು ಶಿಕ್ಷಣ, ವೈದ್ಯಕೀಯ, ಸಿನಿಮಾ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಜಾಲತಾಣ/ಆಪ್ ಗಳನ್ನ ಭಾರತದ ಇತರ ಹಲವು ಭಾಷೆಗಳು ಹೊಂದಿವೆ ಮತ್ತು ಅವುಗಳನ್ನು ಅಲ್ಲಿನ ಮಂದಿ ವ್ಯಾಪಕವಾಗಿ ಬಳಸುತ್ತಿದ್ದಾರೆ. ಹೀಗಾಗಿ, ಭಾಷಾಪ್ರೇಮದ ವಿಚಾರ ಬಂದಾಗ, ಕನ್ನಡಿಗರು ಸ್ವಲ್ಪ ಹಿಂದಿದ್ದಾರೇನೋ ಎನ್ನುವ ಅನುಮಾನ ಕಾಡುತ್ತದೆ.

ಏನೇ ಇದ್ದರೂ, ಕನ್ನಡಕ್ಕೆ ಸಾಮಾಜಿಕ ಜಾಲತಾಣಗಳಿಂದಾಗಿ ಹೊಸ ಆಯಾಮ ದೊರಕಿರುವುದಂತೂ ಸುಳ್ಳಲ್ಲ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಾವೆಲ್ಲ ಕನ್ನಡವನ್ನು ಸಮರ್ಪಕವಾಗಿ ಮತ್ತು ಸಮರ್ಥವಾಗಿ ಬಳಸಿದಲ್ಲಿ ಭಾಷೆಯ ಜೊತೆಗೆ ನಮ್ಮ ಬೆಳವಣಿಗೆಯೂ ಸಾಧ್ಯವಿದೆ!


ಬಾಕ್ಸ್ 1
ಕನ್ನಡ ಗೊತ್ತಿಲ್ಲ
ಕನ್ನಡ ಗೊತ್ತಿಲ್ಲ  ಎನ್ನುವ ವೆಬ್ ಸೈಟ್ ಮಾಡಿಕೊಂಡಿರುವ ಗುಂಪೊಂದು ವಾಟ್ಸಾಪ್ ಗ್ರೂಪ್ ಮೂಲಕ ಕನ್ನಡ ಬಾರದ ಪರದೇಶದ-ರಾಜ್ಯದ ಮಂದಿಗೆ ಕನ್ನಡ ಕಲಿಸುವ ಕೆಲಸ ಮಾಡುತ್ತಿದೆ. ಈಗಾಗಾಲೇ ಸಾವಿವಾರು ಮಂದಿ ಕನ್ನಡವನ್ನು ನಿತ್ಯದ ವ್ಯವಹಾರಕ್ಕಾಗಿ ಈ ಗ್ರೂಪ್ ಮೂಲಕ ಕಲಿತುಕೊಳ್ಳುತ್ತಿದ್ದಾರೆ.  ಕನ್ನಡದ ಸರಳ ವ್ಯಾಕರಣ, ಸುಲಭದ ಸಾಲುಗಳನ್ನು ಯಾರು ಬೇಕಿದ್ದರೂ ಅಗತ್ಯವಿರುವ ಮಂದಿಗೆ ಹೇಳಿಕೊಡಬಹುದು. ಸಂಪೂರ್ಣ ಸ್ವಯಂಸೇವೆಯ ಮಾದರಿಯಲ್ಲಿರುವ ಈ ತಂಡವನ್ನು ಕನ್ನಡವನ್ನು ಬೆಳೆಸುವ ಆಸಕ್ತಿ ಇರುವ ಯಾರು ಬೇಕಿದ್ದರೂ ಸೇರಿಕೊಳ್ಳಬಹುದು! ಅನೂಪ್ ಮಯ್ಯ ಎಂಬ ಉತ್ಸಾಹಿ ತರುಣ ಆರಂಭಿಸಿರುವ ಈ ಪ್ರಯತ್ನಕ್ಕೆ ಇದೀಗ ಎರಡು ವರುಷಗಳಾಗಿವೆ. ಹೆಚ್ಚಿನ ಮಾಹಿತಿಗೆ
Kannadagottilla.com ನೋಡಿ.

ಬಾಕ್ಸ್ 2
ಗಾಂಚಾಲಿ ಬಿಡಿ ಕನ್ನಡ ಮಾತಾಡಿ
ಪ್ರಾಯಶಃ ಫೇಸ್ ಬುಕ್ ನಲ್ಲಿ ಬಹಳ ಸದ್ದು ಮಾಡಿದ ಮೊದಲ ಕನ್ನಡ ಪುಟ ಗಾಂಚಾಲಿ ಬಿಡಿ ಕನ್ನಡ ಮಾತಾಡಿ. ಕನ್ನಡವನ್ನು ಹೀಗಳೆಯುವ ಮಂದಿಗೆ ಸೂಜಿಚುಚ್ಚುವ ಕೆಲಸವನ್ನು ನಾಜೂಕಾಗಿಯೇ ಮಾಡಿದೆ, ಈ ಪುಟ. ಕನ್ನಡ ಭಾಷೆಯ ಮಹತ್ವವನ್ನು, ಕನ್ನಡವನ್ನು ಮಾತನಾಡುವುದು ಖಂಡಿತ ಅವಮಾನವಲ್ಲ ಎಂಬ ಸಂದೇಶವನ್ನು ಕಿರುಚಿತ್ರಗಳ ಮೂಲಕ ಸಮರ್ಥವಾಗಿ ನೀಡಿರುವುದು ಇವರ ಹೆಗ್ಗಳಿಕೆ.
ಪುಟ: https://www.facebook.com/GBKMofficial                 

ಬಾಕ್ಸ್ 3:
ಕನ್ನಡ ಟೀಶರ್ಟ್ ಗಳು
ಕನ್ನಡಿಗರಿಗೆ ಕನ್ನಡದ್ದೇ ಕೋಟ್ಸ್ ಇರುವ ಟೀ ಶರ್ಟ್ ಗಳನ್ನು ಹೊರತರುವ ಕೆಲಸವನ್ನು ಕೆಲಮಂದಿ ಮಾಡುತ್ತಿದ್ದಾರೆ. ಕನ್ನಡ ಭಾಷೆಯ, ಸಂಸ್ಕೃತಿಯ ಕುರಿತ ಕವನದ ಸಾಲುಗಳಿಂದ ಮೊದಲುಗೊಂಡು ಮೋಜಿನ, ಕಾಲೆಳೆಯೋ ತಮಾಷೆಯ ತಲೆಬರಹಗಳವರೆಗೆ, ಎಲ್ಲವೂ ಇಲ್ಲಿ ಲಭ್ಯ. Iruve.in, aziteez.com – ನ ಹೊಕ್ಕು ನೋಡಿದರೆ ಇಂತಹ ಹಲ ಟಿ-ಶರ್ಟ್ ಗಳು ಕಾಣಿಸುತ್ತವೆ.


ವಿಜಯವಾಣಿಯ ವಿಜಯ ವಿಹಾರದಲ್ಲಿ ಪ್ರಕಟಿತ. (೨೦-೧೧-೨೦೧೬) 


ಶುಕ್ರವಾರ, ಜನವರಿ 04, 2013

ಅವಸ್ಥಾಂತರ



ದುರ್ಗಾ ಬಸ್ಸು ಬೆಳಿಗ್ಗೆ ಏಳೂವರೆಗೆ ಗೋಳಿಬೈಲಿನ ಏರನ್ನು ಹತ್ತಿ ಊರೊಳಗೆ ಬರುವುದಕ್ಕೂ ನಾರಾಯಣ ಶೆಟ್ಟರು ತನ್ನ ಅಂಗಡಿಯ ಮರದ ಬಾಗಿಲುಗಳನ್ನ ತೆಗೆದು ಹೊರಗೆ ಉಪ್ಪಿನ ಮರಿಗೆಯ ಪಕ್ಕದಲ್ಲಿ ಜೋಡಿಸಿಡುವುದಕ್ಕೂ ಸರಿಯಾಗುತ್ತದೆ. ಬಸ್ ಡ್ರೈವರ್ ಅಬ್ದುಲ್ಲ ಒಂದು ಕೈಯಲ್ಲಿ ಸ್ಟೇರಿಂಗ್ ತಿರುಗಿಸುತ್ತಲೇ ಮತ್ತೊಂದು ಕೈಯಲ್ಲಿ ಪೇಟೆಯಿಂದ ತಂದ ದಿನಪತ್ರಿಕೆಯನ್ನ ಸೊಯ್ಯಂದು ಶೆಟ್ಟರ ಅಂಗಡಿಯೊಳಕ್ಕೆ ಎಸೆಯುತ್ತಾನೆ. ಒಂದು ದಿನಕ್ಕಾದರೂ ಪೇಪರನ್ನು ತಾವಾಗೇ ಓದದ ಶೆಟ್ಟರು, ಅದನ್ನ ಹೊರಗೆ ಬೆಂಚಿನ ಮೇಲಿಟ್ಟು ಇಪ್ಪತ್ತು ವರ್ಷಗಳಿಂದ ಪೂಜಿಸುತ್ತ ಬಂದಿರುವ ಲಕ್ಷ್ಮಿಯ ಫೋಟೋಗೆ ದೀಪ ಹಚ್ಚಲು ಹೋಗುತ್ತಾರೆ. ಆ ಲಕ್ಷ್ಮಿಯ ಮುಖದ ಭಾಗ ಬಿಟ್ಟು ಉಳಿದಷ್ಟೂ ಗಾಜು ದೀಪ ಮತ್ತು ಊದುಬತ್ತಿಯ ಹೊಗೆಯಿಂದ ಜಡ್ಡು ಹಿಡಿದು ಕಪ್ಪಾಗಿ ಹೋಗಿದೆ. ಅಂಗಡಿಯ ಹೊರಗಿನ ತುಂಡು ಮಣ್ಣಿನ ಜಾಗಕ್ಕೆ ನೀರೆರಚಿ, ಒಂದು ರೌಂಡು ಗುಡಿಸಿ, ಒಳಗೆಲ್ಲೋ ಇರಿಸಿದ ಎಂದೂ ಒಂದೂ ಇಲಿ ಬೀಳದ ಬೋನನ್ನು ಅದರೊಳಗಿನ ಕಮಟು ಕಾಯಿ ಚೂರು ಸಮೇತ ಎತ್ತಿ  ಬದಿಗಿಡುತ್ತಾರೆ. ಕಳೆದ ಇಪ್ಪತ್ತೆರಡು ವರ್ಷಗಳಿಂದ ಶೆಟ್ಟರು ಯಾಂತ್ರಿಕವಾಗಿ ಇವಿಷ್ಟು ಕೆಲಸವನ್ನು ಯಾವುದೇ ಬದಲಾವಣೆಯಿಲ್ಲದೇ ಮಾಡುತ್ತಲೇ ಬಂದಿದ್ದಾರೆ. ಆದರೆ ಈ ಇಪ್ಪತ್ತು ವರುಷಗಳಲ್ಲಿ ಅವರ ಜೀವನದಲ್ಲಿ ಹಲವಾರು ಬದಲಾವಣೆಗಳಾಗಿವೆ. ಹೆಂಡತಿ ಅಚಾನಕ್ಕಾಗಿ ಸತ್ತು, ಮಗ ಸಂಜೀವ ಬೆಳೆದು ದೊಡ್ಡವನಾಗಿ, ಮದುವೆಯನ್ನೂ ಮಾಡಿಕೊಂಡು ಮಂಗಳೂರಿನ ಇನ್ಪೋಸಿಸ್ ನಲ್ಲೇ ಕೆಲಸಕ್ಕೂ ಸೇರಿಕೊಂಡು ಈಗ ಒಂದಾರು ತಿಂಗಳ ಮಟ್ಟಿಗೆ ಅಮೆರಿಕಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೆಂಡತಿ ಸಮೇತ ಹೋದವನು ವಾಪಸ್ಸು ಬರದೇ ಎರಡು ವರ್ಷ ಕಳೆದಿದೆ. ಒಂದು ಕಾಲದಲ್ಲಿ ಸಂಸಾರಸ್ಥರಾಗಿದ್ದ ಶೆಟ್ಟರು ಈಗ ಒಂಟಿಯಾಗಿ ಬದುಕು ಸಾಗಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಹೆಂಡತಿ ಹೋದ ಮೇಲೆ ಶೆಟ್ರು ಜಾಸ್ತಿ ಮಾತಾಡುದಕ್ಕೆ ಶುರು ಮಾಡಿದ್ದಾರೆ ಅಂದುಕೊಂಡ ಊರ ಜನ, ಮಗ ಅಮೆರಿಕಕ್ಕೆ ಹೋದ ಮೇಲೆ ಅವರು ಮೊದಲಿಗಿಂತ ಹೆಚ್ಚು ವಟವಟ ಅನ್ನುವುದಕ್ಕೆ ಆರಂಭಿಸಿದ್ದನ್ನು ಸಹಿಸಿಕೊಂಡಿದ್ದಾರೆ. ಹಾಗೆ ಸಹಿಸಿಕೊಂಡಿದ್ದಕ್ಕೆ ಶೆಟ್ಟರು ತಮ್ಮ ದಿನಸಿ ಅಂಗಡಿಯಲ್ಲಿ ಸಾಲ ಕೊಡುವುದೂ ಒಂದು ಕಾರಣ. ಯಾಕೆಂದರೆ ಬಸ್ಟ್ಯಾಂಡ್ ಪಕ್ಕ ಅಂಗಡಿಯ ಕಿಣಿ ಮಾಮ್, ಜಪ್ಪಯ್ಯ ಅಂದರೂ ಸಾಲ ಕೊಡುವ ಜನ ಅಲ್ಲ.
ಕಿಣಿ ಮಾಮ್, ಯಾನೆ ನರಸಿಂಹ ಕಿಣಿ ಗೋಳಿಬೈಲಿಗೆ ನಾರಾಯಣ ಶೆಟ್ರಿಗಿಂತ ಹಳೆಯ ತಲೆ. ಶೆಟ್ಟರು ದಿನಸಿ ಅಂಗಡಿ ಹಾಕುವ ಹತ್ತು ವರ್ಷಕ್ಕೆ ಮೊದಲೇ, ಎಮರ್ಜೆನ್ಸಿ ಕಾಲ ಮುಗಿದಾವಾಗ ಕಿಣಿ ತಮ್ಮ ವೆಂಕಟರಮಣ ಸ್ಟೋರ್ಸ್ ಅನ್ನು ಶುರು ಮಾಡಿದ್ದರು. ಮೊದಲಿಗೆ ಅಂಗಡಿಯ ಮುಂದೊಂದು ಕಡಿಮಾಡು ಇಳಿಸಿ ಚಾ ತಿಂಡಿ ಕೂಡ ಕೊಡುತ್ತಿದ್ದರಾದರೂ ಕೊನೆಗೆ ಕೈಲಾಗದೇ ಅದನ್ನ ಕೈದು ಮಾಡಿದ್ದರು. ಅಷ್ಟೊತ್ತಿಗೇ ಬಸ್ಟ್ಯಾಂಡಿನ ಮುಂದೆಯೇ ಸುಬ್ಬಣ್ಣ ಭಟ್ಟರು ಅಧಿಕೃತವಾಗಿಯೇ ಶ್ರೀ ದೇವಿ ಊಟದ ಹೋಟೇಲನ್ನು ಆರಂಭಿದ್ದರು. ಹಾಗಾಗಿ ಊರಿನ ಜನಕ್ಕೆ ಬೆಚ್ಚ ಗೋಳಿಬಜೆ ಸಿಗಲಿಕ್ಕೆ ಸಮಸ್ಯೆ ಏನೂ ಆಗಲಿಲ್ಲ. ಕಿಣಿ ಮಾಮ್ ಭಾರಿ ಲೆಕ್ಕದ ಮನುಷ್ಯ. ಇವತ್ತಿಗೂ ಅವರು ಪೇಪರು ತರಿಸುವುದಿಲ್ಲ. ಮನೆಯಲ್ಲಿ ಟಿವಿ ಕೂಡ ಇಲ್ಲ. ಹಳೆ ರೇಡಿಯೋ ಮಾತ್ರ ಸೇವೆಯಲ್ಲಿದೆ. ಇನ್ನು ಅರ್ಧ ಪೈಸೆ ಕೂಡ ಅವರ ಗಲ್ಲೆಯಿಂದ ಹೆಚ್ಚು ಕಡಿಮೆ ಆಗುವ ಚಾನ್ಸೇ ಇರಲಿಲ್ಲ. ಅಷ್ಟು ಹುಶಾರ್.ನೋಡಲಿಕ್ಕೆ ಕಡ್ಡಿಯಂತಿದ್ದರೂ ಧ್ವನಿ ಮಾತ್ರ ಕಿಲೋಮೀಟರು ದೂರಕ್ಕೂ ಕೇಳೀತು. ಕುಶಾಲಿಗೆ ಅಂತ ಕೂಡ ಅವರು ಯಾರಿಗಾದರೂ ಎರಡು ಗ್ರಾಂ ಹೆಚ್ಚಿಗೆ ತೂಕ ಮಾಡಿ ಕೊಟ್ಟವರಲ್ಲ. ಹಾಗಂತ ಮೋಸ ಮಾಡುವ ಜನವೋ, ಅದೂ ಅಲ್ಲ. ಅವರ ಕಡಕ್ ವ್ಯಾಪಾರದ ಬುದ್ಧಿಯಿಂದಲೇ ಮೇಲೆ ಬಂದಿದ್ದು ಅಂತ ಊರಲ್ಲಿ ಅವರಿಗೊಂದು ಗೌರವ ಉಂಟು. ಮಗಳನ್ನ ಮಂಗಳೂರಿನ ಪ್ರಸಿದ್ಧ ಲಾಯರೊಬ್ಬರ ಮಗನಿಗೆ ಮದುವೆ ಮಾಡಿ ಕೊಟ್ಟು, ಮಗ ಮಣಿಪಾಲದ ಬ್ಯಾಂಕೊಂದರಲ್ಲಿ ಕೆಲಸ ಹಿಡಿದು ಕೈ ತುಂಬ ದುಡಿಯಲು ತೊಡಗಿ ಅವನಿಗೂ ಮದುವೆಯಾಗಿ ಮೊಮ್ಮಕ್ಕಳು ಬಂದರೂ, ಕಿಣಿ ಮಾಮ್ ಅಂಗಡಿ ನಡೆಸುವುದು ಬಿಟ್ಟಿಲ್ಲ. ಹಾಗಂತ ಅಂಗಡಿ ನಡೆಸಲಿಕ್ಕೆ ಮನಸ್ಸಿದೆ ಅಂತಲ್ಲ. ಅವರ ಹೆಂಡತಿ ಕಳೆದ ಆರೆಂಟು ವರ್ಷಗಳಿಂದಲೇ ಅಂಗಡಿ ಯಾರಿಗಾದರೂ ಕೊಡಿ ಎಂದ ದಿನವೂ ಕೊರೆದರೂ ಇವತ್ತು ನಾಳೆ ಎಂದು ಅದನ್ನ ಮುಂದೆ ಹಾಕುತ್ತಲೇ ಬಂದಿದ್ದಾರೆ.
ಕಿಣಿ ಮಾಮ್ ಗೆ ಈಗ ವರ್ಷ ಸುಮಾರು ಅರವತ್ತೈದು ಕಳೆದಿದ್ದರೂ ಹಳೆಯ ಜಾಪು ಬಿಟ್ಟಿಲ್ಲ. ಇವತ್ತಿಗೂ ಅದೇ ಗತ್ತು. ಅಂಗಡಿಗೆ ಬಂದ ಮನುಷ್ಯ ಏನು ಐಟಮ್ ಬೇಕು ಅಂತ ಹೇಳಬೇಕು, ಇವರು ಅದನ್ನ ಪಟಪಟ ಅಂತ ಕಟ್ಟಿ ಕೊಡಬೇಕು. ದುಡ್ಡು ಕೊಟ್ಟ ಮೇಲೆ ಅವ ಹೆಚ್ಚಿಗೆ ಏನೂ ಮಾತಾಡದೇ ಹೊರಟು ನಡಿಯಬೇಕು. ಸುಮ್ಮನೆ ಮತ್ತೆ ಕಿಣಿಯವರೇ ಭಾರಿ ಸೆಕೆ ಅಲ್ವಾ, ನಾಳೆ ಮಳೆ ಬರ್ತಾದಾ ಹೇಗೆ, ಎಂಚಿನ ಅವಸ್ಥೆ ಮಾರಾಯಾರೇ ಅಂತೆಲ್ಲ ಹಲುಬಿದರೋ, “ಎಪ್ರಿಲಲ್ಲಿ ಸೆಕೆ ಇಲ್ಲದೆ ಮತ್ತೆಂತ ಚಳಿ ಆಗ್ತದನ? ಮಳೆ ನನ್ನ ಕಂಕುಳಲ್ಲಿ ಉಂಟಾ, ಬಂದ್ರೆ ಬಂದೀತು ಸುಮ್ನೆ ಹೋಗಿ ಮಾರಾಯರೇ ಅಂತ ಬೈದು ಕಳಿಸಿಯಾರು. ಆದರೆ ಎಲ್ಲರ ಹತ್ತಿರವೂ ಹಾಗೆ ಮಾಡ್ತಾರೆ ಅಂತಲ್ಲ, ಒಂದಿಷ್ಟು ಲೆಕ್ಕದ ಜನ. ಶಾಲೆಯ ಹೆಡ್ ಮಾಸ್ಟ್ರು ರಾಂಭಟ್ರು, ಹೋಟೆಲಿನ ಸುಬ್ಬಣ್ಣ, ಪೋಸ್ಟ್ ಮಾಸ್ಟರ್ ದೂಜ ಪೊರ್ಬುಲು ಹೀಗೊಂದಿಷ್ಟು ಜನ ಕಿಣಿ ಮಾಮ್ ಹತ್ರ ಕೂತು ಉಭಯ ಕುಶಲೋಪರಿ ವಿಚಾರಿಸುವುದುಂಟು. “ಕಾಂಜಿ ಪೀಂಜಿಗಳಿಗೆಲ್ಲ ನನ್ನ ಅಂಗಡಿ ಮುಂದೆ ಕೂತು ಮರ್ಲು ಕಟ್ಲಿಕ್ಕೆ ಜಾಗ ಇಲ್ಲ. ಅಂತ ಮನಸ್ಸಿದ್ದವ್ರು ಅಲ್ಲಿ ಹೋಗಿ ಆ ಶೆಟ್ಟಿಯ ಸ್ಟೋರಿನ ಮುಂದೆ ಲೇಲೆ ಹಾಕಿ, ಗಮ್ಮತ್ತು ಮಾಡಿ” ಅಂತ ಕಿಣಿ ಮಾಮ್ ಯಾವಾಗಲೋ ಹೇಳಿದ್ದರಂತೆ ಎಂಬ ಮಾತು ಬಲ್ಲ ಮೂಲಗಳಿಂದ ನಾರಾಯಣ ಶೆಟ್ಟರಿಗೆ ತಲುಪಿದ್ದು ಸುಮಾರು ಐದಾರು ವರ್ಷದ ಹಿಂದೆ. ಅಲ್ಲಿಯ ತನಕ ಮುಖ ಕಂಡಾಗ “ಮತ್ತೆ ಸೌಖ್ಯವ, ಹೆಂಡತಿ ಮಕ್ಕಳು ಹೇಗಿದ್ದಾರೆ” ಎಂದು ವಿಚಾರಿಸುವ ಮಟ್ಟಿಗೆ ಇಬ್ಬರ ಮಧ್ಯೆ ಇದ್ದ ಮಾತುಕತೆ ಕೂಡ ನಿಂತು ಹೋಗಿತ್ತು. ಕಿಣಿ ಮಾಮ್ ತಮ್ಮ ಆಪ್ತ ವಲಯದಲ್ಲಿ ತಾನು ನಾರಾಯಣ ಶೆಟ್ಟಿಗೆ ಹಾಗೆಲ್ಲ ಹೇಳಿಲ್ಲ ಮಾರ್ರೆ, ಯಾರೋ ಆಗದವ್ರು ಹೋಗಿ ಚಾಡಿ ಹೇಳಿದ್ದಾರೆ ಎಂದು ಮೆಲ್ಲಗೆ ಬೇಜಾರು ಪಟ್ಟುಕೊಂಡ ಸುದ್ದಿ ಶೆಟ್ಟರಿಗೇನೂ ಹೋಗಿ ಮುಟ್ಟಿರಲಿಲ್ಲ.
 ಆದರೆ ಆವಾಗಿನಿಂದ ಶೆಟ್ಟರಂಗಡಿ ಮತ್ತು ಕಿಣಿ ಸ್ಟೋರ್ಸ್ ಮಧ್ಯೆ ಒಂದು ಅಂತರ ಬೆಳೆದು ಬಂದಿತ್ತು. ಪಡ್ಡೆ ಹೈಕಳು ಮತ್ತು ಸುಮ್ಮನೆ ಕೆಲಸವಿಲ್ಲದೇ ತಿರುಗುವ ಹುಡುಗರು ಶೆಟ್ಟರಂಗಡಿಗೆ ಹೋಗುವವರು ಎಂತಲೂ, ಗೌರವಾನ್ವಿತರೂ, ಒಳ್ಳೆ ಕೆಲಸದಲ್ಲಿರುವ ಮಂದಿ ಕಿಣಿ ಸ್ಟೋರ್ಸಿಗೆ ಹೋಗುವುದು ಎಂದೂ ಭಾಗವಾಗಿ ಹೋಗಿತ್ತು. ಸತ್ಯಕ್ಕಾದರೆ ಶೆಟ್ಟರಂಗಡಿಯ ಹೊರಗೆ ಹಾಕಿರುವ ಎರಡು ಬೆಂಚುಗಳೇ ಇವಕ್ಕೆಲ್ಲ ಕಾರಣ. ಊರಿಗೆ ಒಂದು ಕಾಲದಲ್ಲಿ ಪೇಪರು ಬರುತ್ತಿದ್ದದ್ದು ಶೆಟ್ಟರ ಅಂಗಡಿಗೆ ಮಾತ್ರವಾದ್ದರಿಂದ ಓದುಗ ಮಹಾಶಯರೆಲ್ಲ ಅಲ್ಲೇ ಸೇರುತ್ತಿದ್ದರು. ಯಥಾ ಸಾಧ್ಯ ರಾಜಕೀಯ ವಿಮರ್ಶೆಗಳೂ, ಸರಕಾರ ಕೆಡವುವ, ಕಟ್ಟುವ ಪ್ರಮುಖ ಮಾತುಕತೆಗಳೆಲ್ಲ ಹೇಗೆ ಎಲ್ಲ ಊರುಗಳಲ್ಲಿ ಅಶ್ವತ್ಥ ಕಟ್ಟೆಯೋ ದೇವಳದ ಜಗಲಿಯಲ್ಲೋ ನಡೆದು ಗಾಳಿಯಲ್ಲಿ ತೇಲಿ ಹೋಗಿ ಮಾಯವಾಗುತ್ತದೆಯೋ ಅದೇ ಪ್ರಕಾರ ಗೋಳಿಬೈಲಿನಲ್ಲಿ ಶೆಟ್ಟರಂಗಡಿಯ ಬೆಂಚುಗಳಲ್ಲಿ ನಡೆಯುತ್ತದೆ. ಪೇಪರುಗಳಲ್ಲಿ ಜನ ಏನನ್ನಾದರೂ ಓದಿ, “ತೂಯರಾ ಶೆಟ್ರೇ, ನಾಳೆ ಗರ್ವಮೆಂಟು ಕಬ್ಬೆ ಬೀಳ್ತದಂತೆ” ಎಂದರೆ “ಅಂದಾ? ಒಳ್ಳೆದಾಯ್ತು ಬಿಡಿ ಆಗಲೇ ಬೇಕಿತ್ತು ಹಾಗೇ”  ಎನ್ನುತ್ತ, “ಶೆಟ್ರೇ ನಾಳೆಯಿಂದ ಪೆಟ್ರೋಲಿಗೆ ಬೆಂಕಿ ಬಿತ್ತು ಮಾರ್ರೆ ಮತ್ತೆ ನಾಕು ರುಪಾಯಿ ಜಾಸ್ತಿ” ಎಂದಾಗ ಅವರ ಕರ್ಮ ನಮ್ಮನ್ನು ಲಗಾಡಿ ತೆಗಿಲಿಕ್ಕೆ ಹುಟ್ಟಿದ್ದು ಇವುಗಳೆಲ್ಲ” ಎಂದು ಬೈದ ಹಾಗೆ ಮಾಡಿ ’ಮುದರ, ನಿಂಗೆ ಚಾಪುಡಿ ಸಾ ಬೇಕಂತ ಕಾಣ್ತದೆ ಅಲ್ಲ,ತಗೊಂಡು ಹೋಗಿ ಬಾರಿ ಸಮಯ ಆಯ್ತು” ಅಂತಂದು ಎರಡು ಐಟಂ ಹೆಚ್ಚು ವ್ಯಾಪಾರ ಆಗುವ ಹಾಗೆ ಮಾಡುವ ಉಪಾಯ ಶೆಟ್ಟರದು. ಅವರಿಗೆ ರಾಜಕೀಯ, ಕ್ರೀಡೆ, ಸಿನಿಮಾ ಯಾವುದರ ಬಗ್ಗೆಯೂ ಆಸಕ್ತಿ ಇರಲಿಲ್ಲ. ಗಿರಾಕಿಗಳ ಇಷ್ಟವೇ ಅವರ ಇಷ್ಟ. ಯಾವ ವಿಷಯದ ಬಗ್ಗೆ ಬೇಕಿದ್ದರೂ ಎಷ್ಟು ಹೊತ್ತು ಬೇಕಾದರೂ ಹರಟುವ ಶೆಟ್ಟರಿಗೆ ಕೊನೆ ಕೊನೆಗೆ ತಾನು ಯಾವ ವಿಷ್ಯದ ಬಗ್ಗೆ ಮಾತಾಡುತ್ತಿದ್ದೇನೆ ಎಂಬುದು ಕೂಡ ಮರೆತು ಹೋಗುತ್ತಿತ್ತು. ಸಂಜೆ ಹೊತ್ತಿಗೆ ಶೆಟ್ಟರಂಗಡಿಗೆ ಹೋದರೆ ಯಾವುದೋ ಕೋಳಿ ಅಂಕ ಮುಗಿಸಿ ಬಂದು, ಬೆಂಚಿನ ಕಾಲಿಗೆ ಕಟ್ಟಿದ ಕೋಳಿಗಿಂತ ಜೋರಾಗಿ ಕಿರುಚುವ ಒಂದಿಷ್ಟು ಮಂದಿಯೋ, ಕ್ರಿಕೆಟ್ ಮ್ಯಾಚು ಮುಗಿಸಿ ಬಂದು ಜಾಫಾ ಕುಡಿಯುವ ಹುಡುಗರೋ, ಮನೆ ಕಟ್ಟಲೆಂದು ಬಾಗಲಕೋಟೆಯಿಂದ ಬಂದ ಕೆಲಸಗಾರರ ಠೋಳಿಯೋ ಕಂಡೇ ಕಾಣುತ್ತದೆ. ಹೀಗಾಗಿ ಸಂಪ್ರದಾಯಸ್ಥ ಮನಸ್ಥಿತಿಯ ಜನಕ್ಕೆ ಶೆಟ್ಟರಂಗಡಿ ಎಂದರೆ ಒಂಥರ ಗಡಂಗಿನ ಹಾಗೆ ಎಂಬಂತಾಗಿತ್ತು. ಶೆಟ್ಟರು ಗುಟ್ಟಾಗಿ ಶೇಂದಿ ಕೂಡ ಮಾರುತ್ತಾರಂತೆ ಎಂಬ ಸುದ್ದಿ ಕೂಡ ಗೋಳಿಬೈಲಿನಲ್ಲಿ ಸ್ವಲ್ಪ ಕಾಲ ಹರಡಿದ್ದೂ ಹೌದು. ಆಮೇಲೆ ಶೆಟ್ಟರು ಎಕ್ಸೈಸ್ ದಾಳಿಗೆ ಹೆದರಿ ಶೇಂದಿ ಮಾರಾಟ ಬಂದು ಮಾಡಿದರಂತೆ ಎಂಬ ಉಲ್ಟಾ ಸುದ್ದಿ ಕೂಡ ಬಂತು.
ಏನೇ ಆದರೂ ಶೆಟ್ಟರಿಗಾಗಲೀ, ಕಿಣಿ ಮಾಮ್ ಗೇ ಆಗಲಿ ಅಂತಹ ಹೇಳಿಕೊಳ್ಳುವ ವ್ಯಾಪಾರವೇನೂ ಗೋಳಿಬೈಲಿನಲ್ಲಿ ಇಲ್ಲ. ಇತ್ತೀಚಿನ ದಿನಗಳಲ್ಲಂತೂ ಊರಿಗೆ ಯಾವುದೋ ಹೊಸ ಯೋಜನೆಯಡಿ ಕಾಂಕ್ರೀಟು ರಸ್ತೆ ಬಂದ ಮೇಲೆ ಜನ ಐದೇ ಕಿಲೋಮೀಟರು ಹತ್ತಿರದ ಕೂಳೂರು ಪೇಟೆಗೇ ಹೋಗಿ ಬರುವುದನ್ನ ಅಭ್ಯಾಸ ಮಾಡಿಕೊಂಡಿದ್ದಾರೆ. ಅಭಿವೃದ್ಧಿಯ ಹೆಸರಲ್ಲಿ ರೋಡು ಮಾಡಿ ಊರು ಹಾಳು ಮಾಡ್ತಾರೆ ಎಂದು ದೇವಿ ಹೋಟೆಲ್ಲಿನ ಭಟ್ರು ಬೈಯುವುದಕ್ಕೆ ಕೂಳೂರು ಪೇಟೆಯ ಮಸಾಲೆ ದೋಸೆ ಪಾರ್ಸಲ್ಲು ಬರುವ ಹೊಟ್ಟೆಕಿಚ್ಚೇ ಕಾರಣ ಎಂದುಕೊಂಡರೂ, ಅವರು ಹೇಳುವ ಮಾತಲ್ಲಿ ತಪ್ಪೇನೂ ಇಲ್ಲ. ಮೊದ ಮೊದಲು ಕಿಣಿ ಮಾಮ್ ಮತ್ತು ಶೆಟ್ಟರಂಗಡಿಗೆ ಮಾಲು ಹಾಕಲು ಎರಡು ಮೂರು ದಿನಕ್ಕೊಮ್ಮೆ ಬರುತ್ತಿದ್ದ ತಿಂಡಿ ತಿನಿಸಿನವನು ಎರಡು ವಾರಕ್ಕೊಮ್ಮೆ ಬರುತ್ತಾನೆ. ಆ ಪುಣ್ಯಾತ್ಮ ಟೀವಿಯೆಸ್ಸಿಂದ ಮೆಟಡೋರಿಗೆ ಬದಲಾಗಿದ್ದರೂ  ಕಿಣಿ ಮಾಮ್ ನ ಗಾಜಿನ ಬಾಟಲಿ ಸಾಲು ಬದಲಾಗಿಲ್ಲ. ನಾರಾಯಣ ಶೆಟ್ಟರ ಹಳೆಯ ಕೆಂಪು ಫೋನು ಕೂಡ ಇನ್ನೂ ಹಾಗೇ ಇದೆ. ಆದರೆ ಈಗ ಅದಕ್ಕೆ ಅಮೆರಿಕದಿಂದ ಮಗನ ಫೋನು ಬರುತ್ತದೆ ಎಂಬುದೇ ಪ್ರಮುಖ ಸೇರ್ಪಡೆ.
ನಾರಾಯಣ ಶೆಟ್ಟರ ಮಗ ಕಳೆದ ಕೆಲ ತಿಂಗಳಿಂದ ಅಪ್ಪನನ್ನ ಅಮೆರಿಕಕ್ಕೆ ಬಾ ಎಂದು ಒತ್ತಾಯ ಮಾಡುತ್ತಿದ್ದ. ಸಂಜೀವ ಅಮೆರಿಕಕ್ಕೆ ಕರೆಯುವುದನ್ನು ಮೊದಲು ತೋರಿಕೆಗೆ ಅಂದುಕೊಂಡಿದ್ದ ಶೆಟ್ಟರಿಗೆ ಕಳೆದ ಒಂದೆರಡು ವಾರದಿಂದ ಪದೇ ಪದೇ ಕೇಳುವುದು ನೋಡಿ ತಲೆಬಿಸಿಯಾಗಿತ್ತು. ತಾನು ಇನ್ನೇನು ಒಂದೆರಡು ವಾರದಲ್ಲಿ ಊರಿಗೆ ಬರುತ್ತೇನೆಂದೂ, ಬಂದವನು ಪಾಸ್ಪೋರ್ಟು ವೀಸಾ ಮಾಡಿಸಿ ಎರಡು ಮೂರು ತಿಂಗಳೊಳಗೆ ನಿಮ್ಮನ್ನ ಅಮೆರಿಕಕ್ಕೆ ಕರೆದುಕೊಂಡು ಹೋಗುತ್ತೇನೆಂದೂ ಸಂಜೀವ ಭಾರಿ ಪ್ಲಾನು ಮಾಡಿದ್ದವನಂತೆ ಹೇಳಿ ಹೆದರಿಸಿಬಿಟ್ಟಿದ್ದ. ನೀನು ವಾಪಸ್ಸು ಬರುದಿಲ್ವಾ ಮಾರಾಯ ಅಂತ ಕೇಳಿದ್ದಕ್ಕೆ ’ಇಲ್ಲಪ್ಪ ನಂಗೆ ಇಲ್ಲಿ ಗ್ರೀನ್ ಕಾರ್ಡು ಸಿಗುವ ಅಂದಾಜು ಉಂಟು ಭಾರತಕ್ಕೆ ಸದ್ಯ ಬರುದಿಲ್ಲ” ಅಂದಿದ್ದ. ಶೆಟ್ಟರು ಮಗನಿಗೆ ಹಸಿರು ಕಾರ್ಡು ಸಿಗ್ತದಂತೆ, ಅವ ಅಲ್ಲೇ ಇರುವ ಹಾಗೆ ಕಾಣ್ತದೆ ಎಂದು ತಮ್ಮ ದೋಸ್ತಿ ಬೀಡಿ ಬ್ರಾಂಚಿನ ಸೈಯದಿಗೆ ಹೇಳಿದ್ದಕ್ಕೆ ಅವ, “ಹಾ ಹಾ ಎಂತ ಶೆಟ್ರೆ ಸಂಜೀವನಿಗೆ ಹಸಿರು ರೇಷನ್ ಕಾರ್ಡ್ ಸಿಕ್ಕಿತ? ಸಂಪಾದನೆ ಕಡಿಮೆಯ ಅವನಿಗೆ? ನಮ್ಮಲ್ಲಿ ಪಾಪದವ್ರಿಗೆ ಕೊಡುದಲ್ವಾ ಅದು?”  ಅಂತ ಹೇಳಿ ತಲೆ ಕೆಡಿಸಿಟ್ಟಿದ್ದ. ಮಗ ಅಮೆರಿಕಕ್ಕೆ ಹೋಗಿ ಬಡವನಾಗಿದ್ದಾನ ಹಾಗಾದರೆ? ಅವನಿಗೇ ಗತಿ ಇಲ್ಲದಿದ್ದ ಮೇಲೆ ನಾನು ಹೋಗುವುದು ಯಾಕೆ? ಎಂಬ ವಿಚಾರಗಳಲ್ಲಿ ಬೆಳಗ್ಗಿಂದ ಶೆಟ್ಟರು ತಲೆ ಕೆಡಿಸಿಕೊಂಡಿದ್ದರು. ಪ್ರತಿದಿನವೂ ತಮ್ಮ ಅಂಗಡಿಗೆ ಬಂದು ಪೇಪರಿನ ಸುದ್ದಿಗಳನ್ನ ಪೋಸ್ಟ್ ಮಾರ್ಟಂ ಮಾಡುವ ಯಾರಲ್ಲಿಯಾದರೂ ವಿಚಾರ ಕೇಳುವ ಎಂದರೆ “ ಅಷ್ಟು ಸಾ ಗೊತ್ತಿಲ್ವ ಶೆಟ್ರೆ, ಎಂಚಿನಯೇ” ಎಂದು ಮಾರ್ಯದೆ ತೆಗೆದರೆ ಎಂದು ಸುಮ್ಮನಿದ್ದರು, ಕಳೆದ ಎರಡು ದಶಕಗಳಲ್ಲಿ ಕೇಳಿದ ಅಸಂಖ್ಯಾತ ಸುದ್ದಿ ತುಣುಕಗಳನ್ನ ಒಂದು ಕಿವಿಯ ಮೇಲೆ ಬೀಳಿಸಿಕೊಂಡು ಮತ್ತೊಂದು ಕಿವಿಯಿಂದ ಆಚೆಗೆ ಕಳಿಸಿದ್ದರ ಪರಿಣಾಮವಾಗಿ ಗ್ರೀನ್ ಕಾರ್ಡು ಎಂದರೇನೆಂಬುದು ತಕ್ಷಣಕ್ಕೆ ತನಗೆ ಗೊತ್ತಾಗಲಿಲ್ಲ ಎಂದು ಶೆಟ್ಟರಿಗೆ ಅರಿವಾಗಿತ್ತು. ಅಷ್ಟಕ್ಕೂ ಮಗ ಮತ್ತೆ ಇವತ್ತೋ ನಾಳೆಯೋ ಫೋನು ಮಾಡುತ್ತಾನೆಂಬುದು ತಿಳಿದಿದ್ದರಿಂದ ಸುಮ್ಮನಾಗಿದ್ದರು. ಅಲ್ಲಿ ಬೆಳಗ್ಗೆದ್ದ ಮಗ ಇಲ್ಲಿಯ ಸಂಜೆಗೆ ಫೋನು ಮಾಡಿದ ಕೂಡ. ಶೆಟ್ಟರ ಸಮಸ್ಯೆ ಕೇಳಿ ಜೋರು ಅಕ್ಕು, “ ಅಂಚ ಅತ್ ಅಪ್ಪ... ಹಾಗಲ್ಲ ಅದು ನಾನು ಅಮೆರಿಕದಲ್ಲೇ ಇರಬಹುದು ಅಂತ ಇಲ್ಲಿನ ಸರ್ಕಾರ ಕೊಡುವ ಕಾರ್ಡು ಅದು, ಅದ್ರ ಚಿಂತೆ ಬಿಡು, ನೀನು ಹೊರಡುವ ತಯಾರಿ ಮಾಡು.. ಇನ್ನೂ ಯಾಕೆ ನಿಂಗೆ ಅಂಗಡಿ ಸಾವಾಸ” ಎಂದು ಅದೇ ಹಳೇ ರಾಗ ತೆಗೆದ. ಶೆಟ್ಟರಿಗೆ ಎಂತ ಹೇಳ್ಬೇಕು ಅಂತ ಗೊತ್ತಾಗದೇ “ಮಗ ನಂಗೆ ಟೈಮು ಕೊಡು ನೋಡುವ ಯೋಚನೆ ಮಾಡಿ ಹೇಳ್ತೇನೆ, ಹೆಂಡತಿಗೆ ಕೇಳಿದೆ ಅಂತ ಹೇಳು” ಎಂದು ಫೋನಿಟ್ಟರು. ಮಗವಾ ಪೋನು ಮಾಡಿದ್ದು ಸಂಜೀವ ಸೌಕ್ಯ ಅಂತೆಯಾ ಪುಳ್ಳಿ ಬರ್ಲಿಕ್ಕುಂಟಾ ಎಂದು ಪುಗ್ಗೆರೆ ತಗೊಂಡು ಹೋಗಲು ಬಂದ ಸೇಸಿ ಪಿಸಿಪಿಸಿ ನಗಾಡಿದ್ದಕ್ಕೆ ರೇಗಿದ ಶೆಟ್ಟರು ಎಂತ ಇಲ್ಲ ಮಾರಾಯ್ತಿ ಸುಮ್ಮನೆ ಹೋದು ಎಂದು ಗದರಿದರು.
ಮಾರನೇ ದಿನ ಬೆಳಗ್ಗೆದ್ದು ಲೆಕ್ಕದ ಪಟ್ಟಿ ತೆಗೆದು ನೋಡಿದ ಶೆಟ್ಟರಿಗೆ ತಲೆ ಕೆಟ್ಟು ಹೋಯಿತು. ಐದು ಸಾವಿರಕ್ಕಿಂತ ಹೆಚ್ಚಿನ ದುಡ್ಡು ಬರುವುದು ಬಾಕಿ ಇತ್ತು. ಅಂದೇ ಬೇರೆ ಲೈನಿನವನು ಬರುವವನಿದ್ದ. ಎಂತ ತಟಪಟ ಮಾಡಿದರೂ ಅವನಿಗೆ ಕೊಡ್ಲಿಕ್ಕಿದ್ದ ದುಡ್ಡು ಹುಟ್ಟುವ ಹಾಗೆ ಕಾಣುವುದಿಲ್ಲ ಏನು ಮಾಡುದು ಎಂದು ಶೆಟ್ಟರು ಲೆಕ್ಕಾಚಾರ ಹಾಕುತ್ತಿರುವಾಗಲೇ ಪಂಚಾಯ್ತು ಮೆಂಬರು ದಾಮು ಬಂದ. ಶೆಟ್ಟರೆ ಒಂದು ಕೋಲ್ಡು ಕೊಡಿ ಎಂದವನೇ ಪೇಪರು ಓದಲು ಆರಂಭಿಸಿದ. “ನೋಡಿದ್ರ ಶೆಟ್ರೆ, ಭಾರತಕ್ಕೆ ವಾಲ್ ಮಾರ್ಟು ಬರ್ತದಂತೆ ನಿಮ್ಮ ಅಂಗಡಿ ಎಲ್ಲ ಲಗಾಡಿ ಹೋಗ್ಲಿಕ್ಕುಂಟು, ಒಟ್ಟಾರೆ ಪಾಪದವರಿಗೆ ಸುಕ ಇಲ್ಲ, ಸರ್ಕಾರಕ್ಕೆ ತಲೆಸಮ ಇಲ್ಲ “ ಎಂದು ಒಂದೇ ಸಮನೆ ವದರ ತೊಡಗಿದ. ಬೇರೆ ದಿನ ಆಗಿದ್ದರೆ ಶೆಟ್ರು ಅವನ ಮಾತಿಗೆ ಏನಾದ್ರೂ ಒಗ್ಗರಣೆ ಹಾಕಿ ಮಾತಿಗೆ ಮಾತು ಸೇರಿಸಿ ಹಾರ ಮಾಡಿ ಅವನಿಗೇ ತೊಡಿಸುತ್ತಿದ್ದರು. ಮೂಡು ಸರಿ ಇಲ್ಲದೇ ಹೋಗಿದ್ದಕ್ಕೆ “ಎಂತ ವಾಲ್ ಮಾರ್ಟು ಮಾರಾಯ” ಎಂದವರೇ ಬಕೆಟಿನಲ್ಲಿಟ್ಟಿದ್ದ ಜಾಫಾ ತೆಗೆದು ಅವನಿಗೆ ಕೊಟ್ಟು ಒಳಗೆ ತೂಗಾಗಿದ್ದ ಅಕ್ಕಿ ಗೋಣಿ ಸರಿ ಮಾಡಲು ಕೂತರು. ದಾಮು ಅಮೋಘವಾಗಿ ಕೊರೆದ ಮುಂದಿನ ಐದು ನಿಮಿಷಗಳ ಉಪನ್ಯಾಸದಲ್ಲಿ ಶೆಟ್ಟರಿಗೆ ಅರ್ಥವಾಗಿದ್ದು, ಅದೆಂತದೋ ನೆಹರೂ ಮೈದಾನದಷ್ಟು ದೊಡ್ಡ ಜಾಗದಷ್ಟಿರುವ ಅಂಗಡಿ ಬರುತ್ತದೆ. ಅದು ರೈತರಿಂದಲೇ ಎಲ್ಲ ಬೆಳೆ ಖರೀದಿಸಿ, ಮಾರುತ್ತದೆ. ಅಲ್ಲಿ ಬೇರೆ ಕಡೆಗಿಂತ ಕಡಿಮೆಗೆ ಎಲ್ಲ ಸಿಗ್ತದೆ, ಜನ ಒಂದೇ  ಕಡೆ ಅಷ್ಟು ಕಡಿಮೆಗೆ ಸಿಗುದಕ್ಕೆ ಅಲ್ಲಿಗೇ ಹೋಗುತ್ತಾರೆ. ಸಣ್ಣ ಪುಟ್ಟ ಅಂಗಡಿಗಳ ಕತೆ ಬರ್ಬಾದ್ ಆಗುತ್ತದೆ” ಎನ್ನುವುದಷ್ಟೆ. ಕೊನೆಗೆ “ಹೌದಾ ದಾಮು ನಿಂಗೆ ಮಂಡೆ ಸಮ ಉಂಟನ? ಒಂದು ಜಾಪಾ ಕುಡಿಲಿಕ್ಕೆ ನೀನು ಅದೆಂತೆ ವಾಲ್ ಮಾರ್ಟಿಗೆ ಹೋಗ್ತೀಯಾ? ನಿನ್ನ ಅಪ್ಪನಿಗೆ ವೀಳ್ಯದೆಲೆ ಸುಣ್ಣ ಅವರು ಕೊಡ್ತರಾ? ತುಕ್ರನ ಮಗನಿಗೆ ಬನ್ ಅಲ್ಲಿ ಸಿಗ್ತದಾ?  ಕೋಳಿಗೆ ಹಾಕುವ ಗೋದಿ ಕಡಿ ಅಲ್ಲಿ ಉಂಟಾ? ಯಾರು ಬಂದ್ರೂ ಕೂಡ ನನ್ನ ಅಂಗಡಿಯ ಸ್ಪೆಷಲ್ ನಶ್ಯದ ಪುಡಿ ಅವ್ರು ಕೊಟ್ಟಾರ” ಎಂದು ದಾಮುವಿಗೆ ಜಾಡಿಸಿದ ಶೆಟ್ಟರು ಅಮೋಘ ಶರಗಳನ್ನು ಪ್ರಯೋಗಿಸಿದ ಯೋಧನ ಹುರುಪಿನಲ್ಲಿ ಅವನ ಎದುರಿನ ಬೆಂಚಿನಲ್ಲಿ ಕೂತರು. ಜಾಫಾ ಒಂದೇ ಏಟಿಗೆ ಕುಡಿದು ಮುಗಿಸಿದ ದಾಮು, “ಅಯ್ಯ ಶೆಟ್ರೆ, ಮಂಡೆ ಸಮ ಇಲ್ಲದೇ ಇರುವುದು ನಂಗಲ್ಲ ನಿಮಗೆ. ಒಟ್ಟಾರೆ ನೀವು ಇದೇ ಗೋಳಿಬೈಲಿನಲ್ಲಿ ಕೂತು ಕೂತು ಜಡ್ಡು ಹಿಡಿಸಿಕೊಂಡಿದೀರಿ ಅಂತ ಕಾಣ್ತದೆ. ಬಾವಿ ಒಳಗಿನ ಕಪ್ಪೆ ಅಂದ್ರೆ ನೀವೆ ಮಾರ್ರೆ. ಈ ವಾಲ್ ಮಾರ್ಟ್ ಉಂಟಲ್ಲ ಅದ್ರ ಸುಮಾರು ಮರಿಗಳು ಸುಮಾರು ಆಗ್ಲೇ ಮಂಗಳೂರು ಪೇಟೆಗೆ ಬಂದಾಗಿದೆ. ಅಲ್ಲಿ ನಿಮ್ಮ ಗೋಧಿ ಕಡಿಯಿಂದ ಹಿಡಿದು ಅಕ್ಕಿ ಬೇಳೆ ಟಿವಿ ಕಪಾಟಿನವರೆಗೆ ಒಂದೇ ಕಡೆಗೆ ಸಿಗ್ತದೆ. ನಿಮ್ಮ ಅಂಗಡಿಗೆ ಜನ ಬರುದು ಕಡಿಮೆ ಆಗಿದ್ದು ಸಾ ನಿಮಗೆ ಹೊಳಿಲಿಲ್ವ ಮಾರ್ರೆ? ಎಂತ ಹೇಳ್ತೀರಿ, ಸೂಪರ್ ಫ್ರೆಶ್ ಅಂಜೆಲ್ ಮೀನು ಸಾ ಅಲ್ಲೇ ಸಿಗ್ತದೆ,ಜೀಗುಜ್ಜೆ ಬಾಳೆಕಾಯಿ ಸಾ ಅಲ್ಲೇ. ಮಲ್ಲಿಗೆ ಹೂವಿಂದ ಹಿಡಿದು ಮಲ್ಲಿಕ ಶೆರಾವತ್ ಪಿಚ್ಚರ್ ವರೆಗೆ ಎಲ್ಲದಕ್ಕೂ ಒಂದೇ ಜಾಗ. ನೀವು ಇಲ್ಲೇ ಕೂತೀರಿ ಆಯ್ತಾ? ಬಲ್ಲಿರೇನಯ್ಯ ಗೋಳಿಬೈಲಿಗೆ ಯಾರೆಂದು ಕೇಳಿದ್ದೀರಿ ಹೇಳಿಕೊಂಡು ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳಿ.” ಅಂತ ಬಾಂಬೊಂದನ್ನು ಹಾಕಿ ಎದ್ದು ಹೋದ. ಸುಮಾರು ಹೊತ್ತು ಅಲ್ಲೇ ಕೂತಿದ್ದ ಶೆಟ್ಟರಿಗೆ ತಲೆ ಹನ್ನೆರಡಾಣೆ ಆಗಿತ್ತು. ಮಂಗಳೂರು, ಅಲ್ಲಿನ ಹೊಸ ಮಾಲುಗಳು ಶೆಟ್ಟರಿಗೆ ಗೊತ್ತಿಲ್ಲದ ವಿಷಯ ಏನಲ್ಲ. ಊರಿನ ಪಡ್ಡೆಗಳಲ್ಲ ರಸವತ್ತಾಗಿ ಅಲ್ಲಿನ ಕಥೆಗಳನ್ನ ವರ್ಣಿಸಿದ್ದನ್ನ ಶೆಟ್ಟರೂ ಕೇಳಿದವರೇ. ಹತ್ತಿರದ ಕೂಳೂರು ಪೇಟೆಯ ಥಳಕು ಬಳಕು ಅಂಗಡಿಗಳಿಂದಾಗಿ ತಮ್ಮ ವ್ಯಾಪಾರ ಕಡಿಮೆಯಾಗಿದ್ದೂ ಶೆಟ್ಟರ ಅನುಭವಕ್ಕೆ ಬಂದು ಬಹಳ ಕಾಲವಾಗಿದೆ. ಎಲ್ಲ ಹೇಳಿದ್ದು ಕೇಳಿದ್ದರೇ ಬಿಟ್ಟರೆ ಶೆಟ್ಟರು ಒಮ್ಮೆಯಾದರೂ ಮಂಗಳೂರಿನ ಒಂದೇ ಒಂದು ಸೂಪರ್ ಬಜಾರಿಗೋ ಮಾಲ್ ಗೋ ಹೋದವರಲ್ಲ. ಮಗನ ಮದುವೆ ಕಾಲದಲ್ಲೂ ಅವರು ಪರ್ಕಳದ ಪಾಟೀಲರಲ್ಲಿಗೇ ಹೋಗಿದ್ದು.
ಮರುದಿನವೇ ಭಾನುವಾರ. ಅಂಗಡಿಗೆ ರಜೆ. ಯಾವಾಗಲೂ ದೇವಿ ಹೋಟೇಲು ಮಾಲಿಂಗೇಶ್ವರ ದೇವಸ್ಥಾನ ಅಂತ ಕಾಲ ಕಳೆಯುವ ಶೆಟ್ಟರು ಸೀದಾ ಇಪ್ಪತ್ತು ಕಿಲೋಮೀಟರು ದೂರದ ಮಂಗಳೂರಿಗೇ ಹೊರಟರು. ಬಸ್ಸಲ್ಲಿ ಸಿಕ್ಕ ಯಾರ ಬಳಿಯೋ ಮಾಲ್ ಒಂದರ ವಿಳಾಸ ವಿಚಾರಿಸಿ, ಬಸ್ಸಿಳಿದು ಆಟೋ ಹತ್ತಿ ಹೋಗಿದ್ದೇ. ಅಲ್ಲಿ ಹೋಗಿ ನೋಡಿದರೆ ಕಂಡದ್ದೇನು. ದಾಮು ಹೇಳಿದ ಹಾಗೆ ಎಲ್ಲ ಅಲ್ಲಿಯೇ. ತಾವು ಮೂವತ್ತಕ್ಕೆ ಮಾರುವ ಅಕ್ಕಿಗೆ ಅಲ್ಲಿ ಇಪ್ಪತ್ತಾರೇ ರೂಪಾಯಿ ಅನ್ನುವ ಬೋರ್ಡು ಬೇರೆ. ಮೂರು ಫ್ಲೋರು ಮೇಲೆ ಕೆಳಗೆ ಕಂಡ ಶೆಟ್ಟರಿಗೆ ಎಂತ ಮಾಡುದು ಅಂತಲೇ ಗೊತ್ತಾಗಲಿಲ್ಲ. ಬಟ್ಟೆ ಪಾತ್ರೆ ತರಕಾರಿ ಬೇಳೆ ಕಾಳು ಐಸ್ಕ್ರೀಮು ಎಲ್ಲ ಗೌಜಿ ಸಂತೆ. ಮೈಕಲ್ಲಿ ಎಂತದೋ ಆಫರ್ ಆಫತ್ ಅಂತ ಕೂಗುವುದು ಬೇರೆ. ಊರಿನ ಜಾತ್ರೆಗೆ ಸಮೇತ ಇಷ್ಟು ಜನ ಆಗುದಿಲ್ಲ ಅಂದುಕೊಂಡ ಶೆಟ್ಟರು ಕಣ್ಣು ಕತ್ತಲೆ ಬಂದ ಹಾಗಾಗಿ ಮೆಲ್ಲ ಬಿಡಿಸಿಟ್ಟ ಹಾಸಿಗೆಯ ಮೇಲೆ ಕೂತರು. ಒಂದೇ ನಿಮಿಷದೊಳಗೆ ಬಂದ ಯುನಿಫಾರಂ ಹೆಂಗಸು. ಇದ್ರ ಮೇಲೆ ಕೂತ್ಕೊಳ್ಳಬೇಡಿ ಪ್ಲೀಸ್ ಎಂದು ನೆಗಾಡಿದ ಹಾಗೆ ಮಾಡಿ ಕಣ್ಣು ಬಿಟ್ಟು ಹೆದರಿಸಿ ಹೋಯಿತು. ಎರಡನೇ ಫ್ಲೋರಿಂದ ಮೆಲ್ಲಗೆ ಕೆಳಗಿಳಿದು ಸಂದಿಯಲ್ಲಿ ಜಾಗ ಮಾಡಿಕೊಂಡು ಹೊರಗೆ ಬಂದು ಏನು ಮಾಡುವುದು ಅಂತ ಯೋಚನೆ ಮಾಡುತ್ತಿದ್ದಾಗ ಅವರನ್ನ ಬಂದು ಮಾತಾಡಿಸಿದ್ದು ಜನಾರ್ಧನ. ಗೋಳಿಬೈಲಿನ ದೇವಸ್ಥಾನದ ಮೊಕ್ತೇಸರ ಸದಾಶಿವ ಐತಾಳರ ಮಗ. “ಹ್ವಾ ಶೆಟ್ರೆ ನಮಸ್ಕಾರ, ನೀವೆಂತ ಇಲ್ಲಿ ಮಾರ್ರೆ? ಹೋಲ್ ಸೇಲ್ ಮಾಲು ತಗೊಂಡು ಹೋಗ್ಲಿಕ್ಕೆ ಬಂದದ್ದ ಹೇಗೆ? ನಿಮ್ಮ ಕೆಲಸ ಮುಗಿತಾ? ಬೇಕಾದ್ರೆ ನಾನು ಜೀಪು ತಂದಿದ್ದೇನೆ ಅದ್ರಲ್ಲೆ ಹೋಗುವ, ಎರಡೇ ನಿಮಿಷ, ಸ್ವಲ್ಪ ಐಟಂ ತುಂಬಿಸ್ಲಿಕ್ಕುಂಟು ಎಂದವನೇ, ಉತ್ತರಕ್ಕೆ ಕಾಯದೇ ಅವನ ದೊಡ್ಡ ಕಾರಿನ ಹಿಂದಿನ ಸೀಟು, ಡಿಕ್ಕಿಗಳಲ್ಲಿ ಅಕ್ಕಿ ಮೂಟೆ ಸಕ್ಕರೆ ಚೀಲ ತರಕಾರಿ ಗೋಣಿಯನ್ನ ತುಂಬಿಸತೊಡಗಿದ. ಶೆಟ್ರು ಅವನ ಗಾಡಿಯ ಪಕ್ಕವೇ ನಿಂತವರು, ಹೊರಡುವಾ ಅಂತ ಕೇಳಿದ್ದಕ್ಕೆ ಹಾ ಹಾ ಹೋಗುವ ಎಂದು ಪೆಚ್ಚು ನಗೆ ನಕ್ಕು ಕಾರೊಳಗೆ ಅವನ ಪಕ್ಕ ಕೂತರು. “ನಾಳೆ ದೇವಸ್ಥಾನದಲ್ಲಿ ಮದುವೆ, ಹಾಗೆ ಬಂದದ್ದು” ಎಂದ ಜನಾರ್ಧನ. ಹಿಂದೆಲ್ಲ ದೇವಸ್ಥಾನದಿಂದ ಇದೇ ಐತಾಳರು ಲಿಸ್ಟು ಕಳಿಸುತ್ತಿದ್ದದ್ದು ನೆನಪಾಗಿ ಜೊತೆಗೆ ಆತ ಮಾತಿಗಾದರೂ ಅದನ್ನು ನೆನಪು ಮಾಡಿಕೊಳ್ಳದಿದ್ದದ್ದು ನೋಡಿ ಶೆಟ್ಟರ ಮಂಡೆಬಿಸಿ ಮತ್ತೂ ಜೋರಾಯಿತು. ಅದೇ ತಲೆಬಿಸಿಯಲ್ಲಿ ಸಂಜೆ ಬಂದು ಮಲಗಿದ ಶೆಟ್ಟರಿಗೆ ಎಚ್ಚರಾದದ್ದು ಮಾರನೇ ದಿನ ಬೆಳಗ್ಗೆಯೇ.
ಆ ದಿನ ಬೆಳಗ್ಗೆ ಕಿಣಿಮಾಮ್ ಗೆ ಮಂಡೆಬಿಸಿ ಜೋರಾಗಲಿಕ್ಕೆ ಕಾರಣ ಅಂಗಡಿಯ ಎದುರಲ್ಲಿ ಶೆಟ್ಟರು ಬಂದು ಕೂತಿದ್ದು. ನಾರಾಯಣ ಶೆಟ್ಟರು. ಬಂದವರೇ ಸೀದಾ ನಿಮ್ಮ ಹತ್ರ ಸ್ವಲ್ಪ ಮಾತಾಡ್ಲಿಕ್ಕೆ ಉಂಟು ಎಂದವರು ಸುಮ್ಮನೆ ಕೂತಿದ್ದಾರೆ. ಸೋಮವಾರ ಬೆಳ್ಳಂ ಬೆಳಗ್ಗೆ ಎಂಟು ಗಂಟೆಗೆ, ತಮ್ಮ ಅಂಗಡಿಯನ್ನ ಓಪನ್ ಕೂಡ ಮಾಡದೇ ಕೀ ಗೊಂಚಲ ಸಮೇತ ಬಂದಿದ್ದಾರೆ ಎಂದರೆ ಏನೋ ವಿಷಯ ಇರಲೇಬೇಕು. ಅದೂ ಕೂಡ ಕಳೆದ ನಾಲ್ಕಾರು ವರ್ಷದಲ್ಲಿ ತನ್ನ ಮುಖ ಕೂಡ ನೋಡಿಲ್ಲದ ಮನುಷ್ಯ. ಕಿಣಿ ಮಾಮ್ ಗೆ ಏನು ಹೇಳಬೇಕು ಎಂದು ತೋಚಲಿಲ್ಲ. ತನ್ನದೇ ವೃತ್ತಿಯಲ್ಲಿರುವ ತನಗಿಂತ ಕಿರಿಯ. ತಾನೇನೂ ಎಂದೂ ವೈರಿ ಎಂದು ಪರಿಗಣಿಸದೇ ಇದ್ದರೂ ಕೂಡ ಪೈಪೋಟಿ, ತಾನು ಅವನಿಗಿಂತ ನಾಕಾಣೆ ಎಂಟಾಣೆ ಕಡಿಮೆಗೆ ಮಾಲು ಕೊಟ್ಟದ್ದು ಇದೆ. ಅದು ವೃತ್ತಿ ಧರ್ಮ. ಆದದ್ದಾಗಲಿ ಅಂತ ಎದ್ದವರೇ ಬನ್ನಿ ಶೆಟ್ಟರೇ ಎಂದು ಕರೆದು, ಅಂಗಡಿಯ ಒಳಗಿನ ಅಕ್ಕಿ ಮೂಟೆಯ ಮೇಲೆ ಜಾಗ ಮಾಡಿ ಕೊಟ್ಟರು. “ಕಿಣಿ ಮಾಮ್, ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ. ಅದನ್ನ ಹೇಳಲು ನಿಮಗಿಂತ ಸರಿಯಾದ ಜನ ನಂಗೆ ಕಾಣ್ಲಿಲ್ಲ. ಹಾಗಾಗಿ ಸೀದಾ ಎದ್ದು ನಿಮ್ಮ ಹತ್ರ ಬಂದಿದ್ದು ನಾನು” ಎಂದವರೇ ಕಿಣಿಯವರ ಮುಖ ನೋಡಿದರು, ನಾರಾಯಣ ಶೆಟ್ಟರು. ಕಿಣಿ ಮಾಮ್ ಗೆ ತಲೆ ಗುಂಯ್ ಗುಡುತ್ತಿತ್ತು. ಹುಂ, ಹೇಳಿ ಎನ್ನುವಂತೆ ತಲೆ ಹಂದಾಡಿಸಿದ ಕಿಣಿ ಮಾಮ್, ಏನಿರಬಹುದು ಈ ಮನುಷ್ಯನ ಮನಸ್ಸಲ್ಲಿ ಎನ್ನುವಂತೆ ಶೆಟ್ಟರ ಮುಖವನ್ನೇ ನೋಡಿದರು. “ನನ್ನ ಮಗ ಅಮೆರಿಕದಲ್ಲಿದ್ದಾನೆ. ನನ್ನ ಹತ್ರ ಬಾ ಅಂತ ಕರಿತಾ ಇದ್ದಾನೆ. ನಂಗೆ ಹೋಗ್ಲಿಕ್ಕೆ ಮನಸ್ಸಿಲ್ಲ. ಆದರೂ ಕೂಡ ಹೋಗ್ದೇ ಇರ್ಲಿಕ್ಕೂ ಆಗ್ತಾ ಇಲ್ಲ. ಅವ ಕರಿವಾಗ ಅಲ್ಲ ಹೇಳ್ಲಿಕ್ಕೂ ಇಲ್ಲ. ಅಲ್ಲದೇ ವೈವಾಟ್ ಕೂಡ ಅಂತದ್ದೇನೂ ಇಲ್ಲ. ನಿಮಗೆ ಗೊತ್ತಿಲ್ಲದ್ದು ಕೂಡ ಅಲ್ಲ. ವ್ಯಾಪಾರ ಮೊದಲಿಗಿಂತ ಡಲ್ ಉಂಟು. ಈಚೆದ್ದು ತೆಗೆದು ಆಚೆ ಹಾಕುದು ಅಷ್ಟೆ. ಮಗ ಒತ್ತಾಯ ಮಾಡಿ ಕರಿತಾ ಇದ್ದಾನೆ. ನಾನು ಬೇಡ ಅಂತ ಈಗ ಸುಮ್ಮನಿದ್ದು ನಾಳೆ ಹೋಗಬೇಕಿತ್ತು ಅಂತ ಆಸೆ ಆಗಿ, ಆವಾಗ ಅವ ಮನಸ್ಸು ಮಾಡದಿದ್ರೆ ಎಂತ ಮಾಡುದು ಅನ್ನುವ ಚಿಂತೆ ಬೇರೆ. ಹೀಗಾಗಿ ನನ್ನ ಅಂಗಡಿಯನ್ನು ಬಂದು ಮಾಡಿ, ಮಗನೊಟ್ಟಿಗೆ ಅಮೆರಿಕಕ್ಕೆ ಹೋಗಿ ಇರ್ತೇನೆ. ಅಲ್ಲಿ ಎಷ್ಟು ಕಾಲ ಇರುದು, ಹೇಗೆ ಏನು ಅಂತೆಲ್ಲ ಗೊತ್ತಿಲ್ಲ. ವಾಪಸ್ಸು ಬಂದರೆ ಮನೆ ಅಂತೂ ಉಂಟು. ಮಗ ಕೈ ಬಿಡ್ಲಿಕ್ಕಿಲ್ಲ. ಖರ್ಚಿಗೆ ಕೊಟ್ಟಾನು. ನಾನು ಸುಮ್ಮನೆ ಬಂದ್ ಮಾಡಿ ಹೋದ್ರೆ ಅಂಗಡಿಯ ಅಕ್ಕಿ ಬೇಳೆ ಎಲ್ಲ ಇಲಿ ತಿಂದು ಹಾಳು ಮಾಡೀತು. ಹಾಗಾಗಿ ನೀವು ನಿಮ್ಮ ಅಂಗಡಿಗೆ ಬೇಕಾದ್ದು ತಕೊಂಡ್ರೆ ನಿಮಗೆ ಹೇಗೂ ವ್ಯಾಪಾರ ಆಗಿ ಹೋಗ್ತದೆ, ವೇಸ್ಟ್ ಸಾ ಆಗುದಿಲ್ಲ. ಇದ್ಕೆ ನೀವೆಂತ ಹೇಳ್ತೀರಿ ಕಿಣಿ ಮಾಮ್ ಎಂದು ಒಂದೇ ಉಸಿರಿಗೆ ಶೆಟ್ಟರು ತಮ್ಮ ಯೋಜನೆಯನ್ನ ಹೇಳಿ ಮುಗಿಸಿದರು.  
ಕಿಣಿ ಮಾಮ್ ಗಾಜಿನ ಬಾಟಲಿನ ಮೇಲೆ ಇಲ್ಲದ ಧೂಳನ್ನು ಹುಡುಕುತ್ತ, ಬಟ್ಟೆಯಿಂದ ಕೊಡವುತ್ತ “ನೋಡಿ ಶೆಟ್ರೇ, ನೀವು ಹೀಗೆ ಸೀದ ಬಂದು ಮಾತಾಡಿದ್ದು ಭಾರಿ ಖುಷಿ ಆಯ್ತು ನಂಗೆ. ಆದ್ರೆ ನಿಮ್ಮ ಪ್ರಪೊಸಲ್ ಎಂತ ಮಾಡುದು ಅಂತ ರಪಕ್ಕೆ ಹೇಳ್ಳಿಕ್ಕೆ ಆಗುದಿಲ್ಲ. ನೀವು ಹೇಳುದು ಒಂದು ಲೆಕ್ಕದಲ್ಲಿ ಕರೆಕ್ಟ್ ಉಂಟು. ಆದ್ರೆ ಹುಟ್ಟಿ ಬೆಳೆದ ಊರು ಬಿಟ್ಟು ಹೋಗ್ಲಿಕ್ಕೆ ಆಗ್ತದಾ? ಅಲ್ಲಿ ಮಾಲಿಂಗೇಶ್ವರನ ರಥೋತ್ಸವ ಸಿಗುದಿಲ್ಲ ಗೊತ್ತುಂಟಲ್ಲ” ಎಂದು ಸುಮ್ಮನೇ ಬಾರದ ನಗುವನ್ನ ಜೋರು ನಕ್ಕು ವಾತಾವರಣ ಹಗುರ ಮಾಡಲು ನೋಡಿದರು. ಆದ್ರೆ ಶೆಟ್ರು “ ನೋಡಿ ಕಿಣಿ ಮಾಮ್, ಅದನ್ನೆಲ್ಲ ಯೋಚನೆ ಮಾಡಿದ್ದೇನೆ. ಅಷ್ಟಕ್ಕೂ ನಾನೇನು ಅಲ್ಲಿಯೇ ಇರ್ಲಿಕ್ಕೆ ಹೋಗುದಿಲ್ಲ, ಬರುವ ಅಂದಾಜುಂಟು. ನೀವು ಹೇಳಿ ಈಗ, ನನ್ನ ಅಂಗಡಿ ಮಾಲು ತಕೊಳ್ತೀರಾ? ಸ್ವಲ್ಪ ಹೆಚ್ಚು ಕಡಿಮೆ ಮಾಡುವ. ನಂಗಂತೂ ಇನ್ನು ಅದ್ರಲ್ಲಿ ಉಮೇದಿಲ್ಲ. ನೀವು ಬ್ಯಾಡ ಅಂದ್ರೆ ಮುಂದಿನ ದಾರಿ ನೋಡಬೇಕು ಎಂದು ಹೊರಟು ನಿಂತರು. ಕಿಣಿಯವರ ಅಂಗಡಿಯಿಂದ ಶೆಟ್ಟರು ಹೊರಗೆ ಬರುವುದನ್ನು ನೋಡಿದ ಬಸ್ಸು ಕಾಯುತ್ತಿದ್ದ ಮಂದಿಗೆ ಆಶ್ಚರ್ಯ ಆಘಾತಗಳು ಒಟ್ಟಿಗೇ ಆದವು. ಕಿಣಿಯವರು ಶೆಟ್ಟರನ್ನು ಉದ್ದೇಶಿಸಿ ಹೇಳಿದ “ನಿಮಗೆ ನಾನು ನಾಳೆ ಹೇಳ್ತೇನೆ” ಎಂಬ ಮಾತು ಮಾತ್ರ ಹೊರಗೆ ರಸ್ತೆಯಲ್ಲಿ ಸುಳಿದು ಎಲ್ಲರ ಕಿವಿಗಳ ಒಳ ಸೇರಿಕೊಂಡಿತು. ಈ ಅಮೋಘ ವಾಕ್ಯದ ಹಿಂದಿನ ಕಾರ್ಯ ಕಾರಣಗಳು ಏನಿರಬಹುದು ಎಂಬುದರ ಬಗ್ಗೆ ಇಡೀ ಗೋಳಿಬೈಲಿನ ವಿವಿಧ ಗುಂಪುಗಳು ದಿನವಿಡೀ ಚರ್ಚೆ ನಡೆಸಿದವು. ಶೆಟ್ಟರಾಗಲಿ, ಕಿಣಿ ಮಾಮ್ ಆಗಲಿ ಇಬ್ಬರೂ ಗುಟ್ಟನ್ನು ಬಿಟ್ಟುಕೊಡದೇ ಆ ರಾತ್ರಿಯ ಮಟ್ಟಿಗೆ ಗೋಳಿಬೈಲನ್ನ ರೋಚಕ ಊಹಾಪೋಹಗಳ ಮುಗಿಲು ಮುಸುಕಲು ಬಿಟ್ಟರು.  
ಶೆಟ್ಟರ ಮಗ ಸಂಜೀವ ಅಮೆರಿಕದಿಂದ ಬಂದು ಒಂದು ತಿಂಗಳ ಹೊತ್ತಿಗೆ, ಕಿಣಿ ಮಾಮ್, ಹೆಂಡತಿ ಮಕ್ಕಳಿಗೂ ಹೇಳದೇ ಶೆಟ್ಟರಂಗಡಿಯ ಸಾಮಾನುಗಳನ್ನ ತನ್ನ ಅಂಗಡಿಗೆ ತರಿಸಿಕೊಂಡರು. ನ ಭೂತೋ ನ ಭವಿಷ್ಯತಿ ಎಂಬ ಈ ವರ್ತಮಾನವನ್ನು ಇಡಿಯ ಗೋಳಿಬೈಲು ಕಂಗಾಲಾಗಿ ನೋಡಿತು. ಶೆಟ್ಟರು ಅದಾಗಿ ಹದಿನೈದು ದಿನಕ್ಕೇ ಮಗನ ಸಮೇತ ಊರು ಬಿಟ್ಟರು. ಹೋಗುವ ಮುನ್ನ ಕಿಣಿ ಮಾಮ್ ಬಳಿ ಬಂದು ಊರಿಗೆ ಊರೇ ನೋಡುತ್ತಿರುವ ಹಾಗೆ ಕಿವಿಯಲ್ಲೇನೋ ಅಂದು ಹೋದರು. ಕಿಣಿ ಮಾಮ್ ಗೆ ಶೆಟ್ಟರು ಬಿಟ್ಟಿಯಾಗಿ ಎಲ್ಲ ಮಾಲು ಕೊಟ್ಟಿದ್ದಾರಂತೆ ಎಂದು ಒಂದಿಷ್ಟು ಜನರಂದರೆ ಇಲ್ಲ ಕಿಣಿ ಮಾಮ್ ಕಡಕ್ ಜನ, ಅವರು ದುಡ್ಡು ಕೊಟ್ಟೇ ಕೊಟ್ಟಿರುತ್ತಾರೆ, ಪೈಸೆ ಕೂಡ ಕಡಿಮೆ ಮಾಡಿರುವುದಿಲ್ಲ ಎಂದು ಇನ್ನೊಂದು ಪಂಗಡ ಹೇಳಿತು. ಶಾಲೆ ಹೆಡ್ ಮಾಸ್ಟ್ರು ರಾಂಭಟ್ರು ’ಕಿಣಿ ಮಾಮ್, ಶೆಟ್ರು ನಿಮ್ಮ ಕಿವಿಯಲ್ಲಿ ಎಂತ ಹೇಳಿದ್ದು ಮಾರ್ರೆ?’ ಎಂದಿದ್ದಕ್ಕೆ, “ಎಂತ ಎಲ್ಲ ಅಲ್ಲಿಗೆ ಹೋಗಿ ಪತ್ರ ಬರಿತೇನೆ ಅಂದ್ರು” ಎಂದಿದ್ದನ್ನು ನಿಜವಾಗಿಯೂ ಶೆಟ್ಟರ ಪತ್ರ ಬರುವವರಿಗೆ ಅವರು ನಂಬಿರಲಿಲ್ಲ. ಕುಶಲ ಸಮಾಚಾರದ ವಿವರಗಳಿದ್ದ ಪತ್ರದ ಜೊತೆಗೆ ಒಂದು ಫೋಟೋ ಕೂಡ ಇತ್ತು. ಆ ಫೋಟೋದಲ್ಲಿ ಶೆಟ್ಟರು ತಮ್ಮ ಮಗ ಮತ್ತು ಹೊಟ್ಟೆ ದೊಡ್ಡದಾಗಿದ್ದ ಸೊಸೆಯ ಜೊತೆ ನಿಂತುಕೊಂಡಿದ್ದರು. ಅವರ ಹಿನ್ನೆಲೆಯಲ್ಲಿ ವಾಲ್ ಮಾರ್ಟ್ ಎಂಬ ಅಗಾಧ ಬೋರ್ಡೊಂದು ಕಣ್ಣಿಗೆ ರಾಚುವಂತೆ ಕಾಣುತ್ತಿತ್ತು.



(ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಗಳಿಸಿದ ಕಥೆ)