ಭಾನುವಾರ, ಆಗಸ್ಟ್ 26, 2007

ಹೂವು ಮಾರುವ ಹುಡುಗಿ..

ಪಾದಪಥದಂಚಿನಲಿ ಹೂವ ಮಾರುವ ಹುಡುಗಿ,
ನಾದಮಯ ದೇಗುಲವು ಅಲ್ಲೆ ಹಿಂದೆ,
ಮೋದವಿದೆ ಮೊಗದಲ್ಲಿ , ಹೂವ ಬುಟ್ಟಿಯು ಮುಂದೆ
ನಗುವ ಹೂವುಗಳಲ್ಲಿ - ಅವಳ ಥರವೆ.


ಎಳೆ ಬಿಸಿಲ ಕಿರಣಗಳು ತೂರಿ ಬರುತಿರೆ ಮರವ
ಹೊಳೆವ ಪರಿಸರ ಸುತ್ತ, ಜನದ ಸಾಲು.
ಬರುವ ಹೋಗುವ ಮಂದಿ ಹೂವ ಕೊಳ್ಳುವರಲ್ಲಿ
ಮೃದು ಪುಷ್ಪ ಮಂಜರಿಯು ಆಹಾ, ಸೊಗಸು.


ಮಳೆ ಬಂದು ಹೋಗಿಹುದು, ಬೆಳಗು ಜಾವದ ಸಮಯ
ನೀರ ಹನಿ ಸೇಚನವು ಹೂಬುಟ್ಟಿಯಾ ತುಂಬ.
ಹುಡುಗಿ ಮುಖದಲು ಕೂಡ ಮಳೆನಗುವು ಕಾಣುತಿದೆ,
ತೇಪೆ ದಾವಣಿಗಷ್ಟೆ, ಮನಸಿಗಲ್ಲವೆ ಅಲ್ಲ.

ಹೊತ್ತು ದಾಟಲು ಮೆಲ್ಲ ಹೆಗಲನೇರಿತು ಬುಟ್ಟಿ
ತಿರುವಂಚಿನಲಿ ಮಾಯ ಆಕೆ ಜೀವ.
ಕಟ್ಟೆ ಮೇಲಿಂದೆದ್ದು ನಾನೂ ಹೊರಟೆನು ಆಗ
ದೇಗುಲದ ದೇವರನು ನೋಡಲೇ ಇಲ್ಲ!

24 ಕಾಮೆಂಟ್‌ಗಳು:

ಸಿಂಧು sindhu ಹೇಳಿದರು...

ನಿಧಿ,

ಬೆಳಿಗ್ಗೆ ಮುಂಚೆ ಓದಿ ತುಂಬ ಹಾಯೆನಿಸಿತು.
...ತೇಪೆ ದಾವಣಿಗಷ್ಟೆ, ಮನಸಿಗಲ್ಲವೆ ಅಲ್ಲ.

ಪ್ರೀತಿಯಿಂದ
ಸಿಂಧು

nichu ಹೇಳಿದರು...

ಅಲ್ಪ ವಿರಾಮ ಎನ್ನುವುದು ಅಲ್ಪ ದಿನಗಳಿಗೆ ಸೀಮಿತವಾಗಿರುವುದು ಸಂತೋಷವನ್ನುಂಟು ಮಾಡಿತು.
ಬರವಣಿಗೆಯಲ್ಲಿ ಪಕ್ವತೆಯನ್ನು ಪಡೆದ ನಂತರ ಅದರ ಬಗ್ಗೆ ವಿಮರ್ಶೆ ಮಾಡುವಷ್ಟು ದೊಡ್ಡ ವಿಮರ್ಶಕ ನಾನಲ್ಲ.ಹೇಳುವುದಿಷ್ಟೇ ಹೀಗೆ ಬರೀತಾ ಇರಿ ಬಾಸ್. ನಮಗೂ ಟೈಮ್ ಪಾಸ್ ಆಗುತ್ತೆ ಮೈಂಡ್ ಕೂಡಾ ಪ್ರೀ ಆಗುತ್ತೆ.

Ranju ಹೇಳಿದರು...

ಶ್ರೀ,

ಬೆಳಗ್ಗೆ ಬೆಳಗ್ಗೆ ಇಂಥ ಒಂದು ಕವಿತೆ ದಿನಾ ಸಿಕ್ಕಿದ್ರೆ ಆಹಾ ಆ ದಿನವೆಲ್ಲಾ ಎಷ್ಟು ಚನ್ನಾಗಿ ಇರುತ್ತೆ ಅಂಥಾ ಅನ್ನಿಸ್ತಾ ಇದೆ.
ತುಂಬಾ ದಿನಗಳ ನಂತರ ನಿನ್ನ ಕವಿತೆ ಓದಿ ಮನಸ್ಸು ಖುಷಿ ಪಡ್ತಾ ಇದೆ. ತುಂಬಾ ಚನ್ನಾಗಿ ಬರೆದಿದ್ದಿಯಾ.
"ಮೋದವಿದೆ ಮೊಗದಲ್ಲಿ , ಹೂವ ಬುಟ್ಟಿಯು ಮುಂದೆ
ನಗುವ ಹೂವುಗಳಲ್ಲಿ - ಅವಳ ಥರವೆ" ತುಂಬಾ ಇಷ್ಟ ಆಯಿತು.
ಕೀಪ್ ಬ್ಲಾಗಿಂಗ್ ಗುರು.

Sushrutha Dodderi ಹೇಳಿದರು...

ಇಪ್ಪತ್ಮೂರು ದಿನಗಳ ಅತ್ಯಲ್ಪವಿರಾಮದ ನಂತರ ಹೂ ಮಾರುವ ಹುಡುಗಿಯೊಂದಿಗೆ ಬಂದತುಂತುರು ಹನಿಗಳ 'ಸಿಂಚಕ'ನಿಗೆ ಅದೇ ಹುಡುಗಿಯ ಬುಟ್ಟಿಯ ಹೂಗಳನ್ನೆರಚಿ ಸ್ವಾಗತಿಸುತ್ತಿದ್ದೇನೆ: Welcome!

Mahesh K Hegde ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Mahesh K Hegde ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Mahesh K Hegde ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಮನಸ್ವಿನಿ ಹೇಳಿದರು...

ಹುಡುಗಿ ಮುಖದಲು ಕೂಡ ಮಳೆನಗುವು ಕಾಣುತಿದೆ,
ತೇಪೆ ದಾವಣಿಗಷ್ಟೆ, ಮನಸಿಗಲ್ಲವೆ ಅಲ್ಲ.- ಆಹಾಹ

ಚಂದದ ಹಾಡು. ಖುಶಿ ಆಯ್ತು ಓದಿ

ಅನಾಮಧೇಯ ಹೇಳಿದರು...

odi tumba khusi aatu dosta

--
Ravee

ಅನಾಮಧೇಯ ಹೇಳಿದರು...

alpa virama purna virama agade iddu "ಹೂವು ಮಾರುವ ಹುಡುಗಿ" jote maraLi bandaddu tumba santosha... ತುಂತುರು ಹನಿಗಳ ಸಿಂಚನ agta irli...

ಮೃಗನಯನೀ ಹೇಳಿದರು...

ಕಟ್ಟೆ ಮೇಲಿಂದೆದ್ದು ನಾನೂ ಹೊರಟೆನು ಆಗ
ದೇಗುಲದ ದೇವರನು ನೋಡಲೇ ಇಲ್ಲ!

lovely! Degulada devaranu nodale illa-Indicating something....
welcome back to juniour Wordsworth

Srikanth - ಶ್ರೀಕಾಂತ ಹೇಳಿದರು...

ಸಖತ್! ವಿರಾಮದ ನಂತರ ಬಂದ ತಕ್ಷಣ ಬ್ಯಾಟ್ಸ್ ಮನ್ ಒಬ್ಬ ದ್ವಿಶತಕ ಹೊಡೆದಂತಿದೆ!

Susheel Sandeep ಹೇಳಿದರು...

ಪಾದಪಥದಂಚಿನಲ್ಲಿ!!! ಸೂಪರ್ ಪದ
ದೇವರನ್ನು ನೋಡಲೇ ಇಲ್ಲ - ಸೂಪರ್ ಎಂಡಿಂಗು...ಸಕತ್ತಾಗಿ ಮೂಡಿಬಂದಿದೆ ಮನದಾಳದ ಇಂಗಿತ

VENU VINOD ಹೇಳಿದರು...

ಶ್ರೀಕಾಂತ್ ಹೇಳಿದ ಹಾಗೆ ಗಂಗೂಲಿ ಭರ್ಜರಿ ಬ್ಯಾಟಿಂಗ್ ಜತೆ ಮರಳಿದ ಹಾಗಿದೆ, ಕವನದ ವಸ್ತು, ಸರಳ ಭಾಷೆಯ ಸೊಗಸು ಮನಮುಟ್ಟಿತು ಶ್ರೀ.

ಶ್ರೀನಿಧಿ.ಡಿ.ಎಸ್ ಹೇಳಿದರು...

ನಮಸ್ತೇ,

ಕವನಗಳನ್ನ ಮೆಚ್ಚಿಕೊಂಡ ಎಲ್ಲರಿಗೂ ನಾನು ಕೃತಜ್ಞ..
ಆವಾಗಾವಾಗ ಸಮಯವಾದಾಗ ಏನಾದರೂ ಬರೆಯುತ್ತಿರುತ್ತೇನೆ,:)

Shree ಹೇಳಿದರು...

ಅಂತರ್ಜಲ... ಮಳೆನೀರು... ಮಳೆಕೊಯ್ಲು.. ಮತ್ತೆ ಮಳೆಹುಡುಗಿ... ಮಳೆ ಹೊಯ್ಯುವ ರಭಸಕ್ಕೆ ಮಳೆಹುಡುಗಿ ತುಂಬಾ ಜನಕ್ಕೆ ಕಾಣಿಸುವುದಿಲ್ಲ... ನಿಂಗೆ ಕಾಣಿಸಿದ್ದು ಖುಶಿಯಾಯ್ತು... :) :) :) :) :) :) :) :)
keep it up !!!!!

Unknown ಹೇಳಿದರು...

namskara......Thumba dhina aadmele kavana baredidira....good one.... office nalli nodake aagola...so am accessing frm home....aavag aavag bare...

ಶ್ರೀನಿಧಿ.ಡಿ.ಎಸ್ ಹೇಳಿದರು...

ಶ್ರೀ,

ಹುಟ್ಟು ಗುಣ, ಘಟ್ಟ ಹತ್ತಿದ್ರೂ ಬಿಡಲ್ಲ:):)

ಸಂತೃಪ್ತಿ,

ಧನ್ಯವಾದ! ಬರೀತಿರ್ತೀನಿ:)

ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್ ಹೇಳಿದರು...

ಚೆನ್ನಾಗಿದೆ.

ನನ್ನ ಬ್ಲಾಗ್ ಡಿಯರ್ ಫ್ರೆಂಡ್,

http://kavimanasu.blogspot.com/

apara ಹೇಳಿದರು...

ಎಷ್ಟೊಂದ್ ಚೆನ್ನಾಗಿದೆ!

chetana ಹೇಳಿದರು...

ಹೂ ಮಾರುವ ಹುಡುಗಿ...
ಆಹಾ! ಎಂಥ ಸೊಗಸು!!

ಚೆಂದ ಇದೆ. ತುಂಬಾ ಚೆಂದವಿದೆ.

- ಚೇತನಾ ತೀರ್ಥಹಳ್ಳಿ

dinesh ಹೇಳಿದರು...

nice poem.....

ದಡ್ಡಜೀವಿ ಹೇಳಿದರು...

ಆಹ ...
ಇದು ಎಂತಾ ಕಾವ್ಯವಯ್ಯ
ಹೂವು ಮಾರುವಳ ಸೊಗತೋರುವ
ಎಲೆ ಕಿರಣಾಗಳ ಮುದತೋರುವ
ರಸಿಕತೆಯ ಜ್ಞಾನವಯ್ಯ....
ಇದು ರಮ್ಯ ಕಾವ್ಯವಯ್ಯ.
ನಿಮ್ಮ ಪದ್ಯ ತುಂತುರು ಹನಿಗಳಷ್ಟೇ ಸುಂದರವಾಗಿದೆ.

ಅನಾಮಧೇಯ ಹೇಳಿದರು...

ಹಲೋ..
ಕಸ್ತೂರಿಲಿ ಸಕತ್ ಬ್ಯುಸಿಯಾ?ಏನೋ ಬ್ಲಾಗಿಂದ ಆಗಾಗ ವಿರಮಿಸಿದಂತಿದೆ..