random thoughts ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
random thoughts ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜುಲೈ 28, 2009

ಜಂಗಮ ಬಿಂಬಗಳು -5

ಕಾಫಿ ಹುಡುಗ ತಪ್ಪಿ ಕಪ್ ಕೆಳಗೆ ಬೀಳಿಸಿದ. ಯಾರೂ ನೋಡಿಲ್ಲವೆಂದುಕೊಂಡು ಅದೇ ಲೋಟಕ್ಕೆ ಕಾಫಿ ಬಗ್ಗಿಸಿದ. ಯಾಕಯ್ಯ ಹೀಗೆ ಮಾಡುತ್ತೀ,ತಪ್ಪಲ್ಲವ ಅಂದೆ. ಏನಾಗತ್ತೆ ಸರ್, ಜಸ್ಟ್ ಕೆಳಗೆ ಬಿತ್ತು.. , ನೀವೇ ಮಾಡ್ಕಂಡ್ರೆ ತಪ್ಪಿಲ್ಲ, ನಾವಾದ್ರೆ.. ಮಾತು ತುಂಡರಿಸಿ, ಬೇರೆ ಕಪ್ ತೆಗಿ ಅಂದೆ. ಬೇರೆ ಕಾಫಿ ಕೊಟ್ಟ. ರಾತ್ರಿ ಮನೆಯಲ್ಲಿ ಕುಕ್ಕರಿಂದ ಅನ್ನ ಎತ್ತಿ ಕೆಳಗಿಡಬೇಕಾದಾಗ, ಇಕ್ಕಳ ಜಾರಿ ಅನ್ನದ ಪಾತ್ರೆ ಕವುಚಿ ಬಿತ್ತು. ಪಾತ್ರೆ ಎತ್ತಿಟ್ಟು, ನೆಲಕ್ಕೆ ತಾಕದೇ ಉಳಿದಿದ್ದ ಅನ್ನ ಮತ್ತೆ ಪಾತ್ರೆ ಹಾಕಿದೆ. ಊಟ ಮಾಡಿದೆ. ಹುಡುಗ ನೆನಪಾದ.

***

ಎದುರಿನ ಬೈಕಿನ ಸೈಡ್ ಸ್ಟ್ಯಾಂಡು ಹೊರ ಚಾಚಿದ್ದನ್ನೇ ಗಮನಿಸುತ್ತ ಅದನ್ನು ಅವನಿಗೆ ಹೇಳಬೇಕೆಂದುಕೊಂಡ.ಆದರೆ ತನ್ನೆದರು ಸಡನ್ನಾಗಿ ನುಗ್ಗಿ ಬರುತ್ತಿದ್ದ ಆಟೋ ಗಮನಿಸಲೇ ಇಲ್ಲ.

***
ಒಂದಿಷ್ಟು ಹುಡುಗರು ಕ್ರಿಕೆಟ್ ಆಡುತ್ತಿದ್ದರು.೪-೫ರ ವಯಸ್ಸಿನವರು. ಪಾಪುವೊಂದು ಹೇಗೆ ಬೌಲಿಂಗು ಮಾಡಿದರೂ ಒಬ್ಬ ಪೋರ ಔಟೇ ಆಗುತ್ತಿರಲಿಲ್ಲ. ಈ ಪಾಪಚ್ಚಿ, ಮಧ್ಯರಸ್ತೆಯಲ್ಲೇ ಶರಟಿನ ಬಟನ್ನನ್ನು ಪುಟ್ಟ ಬೆರಳುಗಳಿಂದ ಬಿಚ್ಚಿ, ಬರಿ ಮೈಲಿ ನಿಂತು, ಆಕಾಶ ನೋಡುತ್ತ, ದೇವಲೇ ಇವುನ್ನ ಔಟ್ ಮಾದೂ ಅಂತ ಕೂಗಿತು. ನಂಗೇ ನಾನೇ ದೇವರಾಗಿರಬಾರದಿತ್ತೇ ಅಂತ ಮೊದಲ ಸಲ ಅನ್ನಿಸಿತು.

***

ಮಂಗಳವಾರ, ಜೂನ್ 10, 2008

ಜಂಗಮ ಬಿಂಬಗಳು -೪.

ನಾನು ಮತ್ತು ನನ್ನ ಸ್ನೇಹಿತ ಟಾಕೀಸಲ್ಲಿ ಸಿನಿಮಾ ನೋಡುತ್ತ ಕುಳಿತಿದ್ದೆವು. ಪಕ್ಕದಲ್ಲಿ ಒಬ್ಬ ತೀರಾ ಸಾಧಾರಣ ಹುಡುಗ, ಮತ್ತು ಅತ್ಯದ್ಭುತ ಚೆಲುವಿನ ಹುಡುಗಿ- ಹರಟುತ್ತ ಕುಳಿತಿದ್ದರು. ಅಯ್ಯೋ ಅವನ ನಸೀಬೇ ಏನ್ ಒಳ್ಳೆ ಹುಡ್ಗಿ ಸಿಕ್ಕಿದಾಳಪ್ಪ, ಕೆಲ ಹುಡುಗರ ಪುಣ್ಯವೇ ಹೀಗೆ- ಅವರು ನೋಡೋಕೆ ಕೆಟ್ಟದಾಗಿದ್ದರೂ ಒಳ್ಳೇ ಹುಡುಗೀರು ಸಿಕ್ಕಿ ಬಿಡ್ತಾರೆ, ಅಂತೆಲ್ಲ ಹಲುಬಿದ್ದಾಯ್ತು. ಇಂಟರ್ವಲ್ ಬಂತು. ಆ ಹುಡುಗ ಎದ್ದು, ತನ್ನ ಪಕ್ಕದಲ್ಲಿದ ಆಕೆಯನ್ನು ಮೆಲ್ಲನೆಬ್ಬಿಸಿಕೊಂಡು, ತನ್ನ ತೋಳನ್ನೇ ಅವಳಿಗಾಸರೆಯಾಗಿಸಿ ನಡೆಸಿಕೊಂಡು ಹೊರಟ. ಅವಳಿಗೆ ಪೋಲಿಯೋ ಆಗಿತ್ತು.

ಶನಿವಾರ, ಫೆಬ್ರವರಿ 16, 2008

ಜಂಗಮ ಬಿಂಬಗಳು -೩

ಅವನು ಬೈಕಿನ ಹಿಂದೆ ಬರೆದುಕೊಂಡಿದ್ದ - "ಐ ಡೋಂಟ್ ಕೇರ್"ಅಂತ. ಒಂದು ದಿನ ಬ್ಯಾಂಕಿನವರು ಬಂದು ಬೈಕು ಎತ್ತಿಕೊಂಡು ಹೋದರು. ಮೂರು ನಾಲ್ಕು ತಿಂಗಳಿಂದ ಸಾಲದ ಕಂತು ಕಟ್ಟಿರಲಿಲ್ಲವಂತೆ.

****

ಆತನಿಗೆ ಕೆಲದಿನಗಳ ಕಾಲ ಮುಖವಾಡ ಧರಿಸಿ ಬದುಕಬೇಕು ಅನ್ನುವ ಆಸೆಯಾಯಿತು. ಧರಿಸಿದ. ಎಷ್ಟೋ ದಿನಗಳ ನಂತರ ಮುಖವಾಡ ತೆಗೆಯಬೇಕನಿಸಿತು. ತೆಗೆದ. ಮುಖವಾಡದ ಜೊತೆಗೆ ಮುಖವೂ ಕಿತ್ತು ಬಂತು.

****

ಮಂಗಳವಾರ, ಫೆಬ್ರವರಿ 05, 2008

ಜಂಗಮ ಬಿಂಬಗಳು - ೨

ಟ್ರಾಫಿಕ್ ಜಾಮ್ ಆಗಿತ್ತು. ನನ್ನ ಬೈಕಿನ ಪಕ್ಕದ ಐಷಾರಾಮಿ ಕಾರಿನ ಹಿಂದಿನ ಸೀಟಿನಲ್ಲಿ ಹುಡುಗನೊಬ್ಬ ಕೂತಿದ್ದ, ಸುಮ್ಮನೆ. ಐದು ಹತ್ತು ನಿಮಿಷ ಕಳೆಯಿತು ಹಾಗೇ. ನಾನು ನೋಡುತ್ತಿದ್ದ ಹಾಗೆಯೇ ಆ ಹುಡುಗ ಬ್ಯಾಗಿಂದ ಮೆಲ್ಲನೆ ನೋಟ್ ಬುಕ್ ತೆಗೆದ. ಅರೇ, ಇಲ್ಲೇ ಹೋಮ್ ವರ್ಕ್ ಮಾಡುತ್ತಾನಾ? ಅಂತ ಅಂದುಕೊಂಡೆ. ಆದರೆ ಅವನು ನೋಟ್ ಬುಕ್ಕಿಂದ ಹಾಳೆ ಹರಿದ. ಅಡ್ಡ ಉದ್ದ ಮಡಚಿ ರಾಕೆಟ್ ಮಾಡಿದ. ಕಿಟಕಿ ಮೆಲ್ಲನೆ ಇಳಿಸಿ, ಬೀಸಿ ಒಗೆದ. ಅದು ಎಷ್ಟು ದೂರ ಹಾರಿತು ಅನ್ನುವುದು ನನಗೆ ಮುಖ್ಯವಾಗಲಿಲ್ಲ.
**********
ನಾನು ಆಕೆಯನ್ನು ಮೊದಲು ನೋಡಿದ್ದು ಆ ಜಾಗದಲ್ಲಿ. ತುಂಬ ಬೇಸರದಲ್ಲಿದ್ದೆ ಮೊನ್ನೆ. ಬೈಕು ಅವಳನ್ನು ನೋಡಿದಲ್ಲೇ ಹಾದು ಹೋಗುತ್ತಿತ್ತು. ಅತ್ತ ತಿರುಗಿದರೆ, ಅವಳು ಕಂಡಳು.
**********
ಹೊಸದರಲ್ಲಿ ಟ್ರಾಫಿಕ್ ಸಿಗ್ನಲ್ ಹಸಿರಾದರೆ ಸಾಕು, ನುಗ್ಗಬೇಕು ಅನ್ನಿಸುತ್ತಿತ್ತು. ಈಗೀಗ ಅದು ಕೆಂಪಾಗಿಯೇ ಇರಲಿ ಅನ್ನಿಸುತ್ತದೆ.

ಬುಧವಾರ, ಜನವರಿ 23, 2008

ಜಂಗಮ ಬಿಂಬಗಳು - ೧

ಅದು ಅವರಿಬ್ಬರ ಕೊನೆಯ ಭೇಟಿ. ಇಬ್ಬರೂ ಕೂತು ಮಾತಾಡಿದರು. ಕಣ್ಣು ತುಂಬಿಕೊಂಡರು. ಪರಸ್ಪರ ಬೇರೆಯಾಗಿ ಹೊರಟರು. ಮರುದಿನ ಬೆಳಿಗ್ಗೆ , ಆಕೆ ಅವನಿಗೆ ಮತ್ತೆ ಸಿಕ್ಕಳು.
******
ಅವನಿಗೆ ಕನಸುಗಳು ಬೀಳುತ್ತಿಲ್ಲ ಅಂತ ಚಿಂತೆ. ನಿತ್ಯವೂ ಅದನ್ನೇ ಯೋಚಿಸುತ್ತ ಕೂರುತ್ತಿದ್ದ. ಕಣ್ಣೆದುರಿದ್ದ ನನಸೂ ಕಮರಿ ಹೋಯಿತು.
******
ಹೋಟಿಲಿನ ಹೊರಗೆ ಭಿಕ್ಷುಕಿಯಂತೆ ಕಾಣುವಾಕೆ ನಿಂತಿದ್ದಳು. ಮನದಲ್ಲೇ ಅಂದುಕೊಂಡೆ, "ಇವರ ಗೋಳು ತಪ್ಪಿದ್ದಲ್ಲ ನಿತ್ಯ". ಅಷ್ಟು ಹೊತ್ತಿಗೆ ಹೋಟೇಲಿನ ಹುಡುಗ, ಏನೋ ಪಾರ್ಸೆಲ್ ತಂದು ಆಕೆಯ ಕೈಗಿತ್ತ. ಆಕೆ ಮೆಲ್ಲನೆ ಅಲ್ಲಿಂದ ಹೊರಟಳು. ಛೇ, ತಪ್ಪು ತಿಳಿದೆನಲ್ಲಾ ಅಂತ ಬೇಸರವಾಯಿತು. ಬೈಕು ಹತ್ತ ಹೊರಟಾಗ ಎದುರಿಗೆ ಅವಳು ನಿಂತಿದ್ದಳು - ಕೈ ನನ್ನೆದುರು ಚಾಚಿ.
******
- ಇದೊಂದು ಹೊಸ ಯತ್ನ. ಮನಸ್ಸಿಗೆ, ಕಣ್ಣಿಗೆ ಕಂಡ ಒಂದಿಷ್ಟು ಜಂಗಮ ಬಿಂಬಗಳು.. ಆವಾಗಾವಾಗ, ನಿಮ್ಮ ಮುಂದೆ.
( ಇದು ನನ್ನ ನೂರನೇ ಪೋಸ್ಟು!)