ಗುರುವಾರ, ಮೇ 01, 2008

ಏನನ್ನುತ್ತೀರಿ ಇದಕ್ಕೆ?

ಯಡಿಯೂರಪ್ಪ ಸಾರಥ್ಯದ ಬಿಜೆಪಿ ಗವರ್ಮೆಂಟು ಬಿದ್ದು ಹೋಗಿ ಸ್ವಲ್ಪ ದಿನಕ್ಕೇ ಆ ಪಕ್ಷ ಬೆಂಗಳೂರಿನಲ್ಲಿ ರಾಜಭವನ ಚಲೋ ಕಾರ್ಯಕ್ರಮ ಮಾಡಿತು. ಎಲ್ಲೆಂಲ್ಲಿಂದಲೋ ಬಂದ ಬಾಡಿಗೆ ಭಂಟರು ಕಾರ್ಪೋರೇಷನ್ನು, ಕಬ್ಬನ್ ಪಾರ್ಕು ತುಂಬಿಕೊಂಡು ಗಲಭೆ ಎಬ್ಬಿಸಿದರು. ಟ್ರಾಫಿಕ್ಕು ಮೂರ್ನಾಲ್ಕು ತಾಸು ಗಬ್ಬೆದ್ದು ಹೋಯಿತು. ಎಲ್ಲ ಟಿ.ವಿ.ಚಾನಲ್ಲುಗಳು, ಪತ್ರಿಕೆಗಳೂ ಈ ಟ್ರಾಫಿಕ್ ಜಾಮ್ ಸುದ್ದಿಗೆ ಒಂದಿಷ್ಟು ಜಾಗ ಮೀಸಲಿಟ್ಟವು. ಜನರೂ ಉಗಿದರು. ಸಂತೋಷ. ಒಂದು ರಾಜಕೀಯ ಪಕ್ಷಕ್ಕೆ ಸ್ವಲ್ಪವಾದರೂ ಸಾಮಾಜಿಕ ಜವಾಬ್ದಾರಿ ಅನ್ನುವುದು ಬೇಕಿತ್ತು.

ಹೋದವಾರದ ಒಂದು ದಿನ, ಬೆಳಗ್ಗೆ ಹತ್ತು ಗಂಟೆಗೆ ಮನೆಯಿಂದ ಆಫೀಸಿಗೆ ಹೊರಟೆ. ಸಜ್ಜನ ರಾವ್ ಸರ್ಕಲ್ಲಿನ ಬಳಿಯೇ ಟ್ರಾಫಿಕ್ ನಿಧಾನಗತಿಯಲ್ಲಿತ್ತು. ತೆವಳಿಕೊಂಡು ಜೇಸೀ ರೋಡು ಸೇರಿದೆ. ಮಾಮೂಲಿ ಸ್ಲೋ ಟ್ರಾಫಿಕ್ ಅಂತಂದುಕೊಂಡೆ. ಆದರೆ ಜೆ.ಸಿ ರೋಡಿಗೆ ಬಂದ ಮೇಲೆ ವಾಹನಗಳು ಒಂದಿಂಚೂ ಕದಲಲಿಲ್ಲ. ನೆತ್ತಿಯ ಮೇಲೆ ಸುಡು ಸುಡು ಬಿಸಿಲು. ಯಾಕೆ ಟ್ರಾಫಿಕ್ ಜಾಮಾಗಿದೆ ಅಂತ ಅಲ್ಲಿದ್ದ ಯಾರಿಗೂ ಗೊತ್ತಿಲ್ಲ. ಪಕ್ಕದ ಡಬ್ಬಲ್ ರೋಡ್ ಕೂಡ ಜಾಮ್ ಆಗಿದೆ ಅನ್ನುವ ಸುದ್ದಿ ಬಂತು.

ನನ್ನೆದುರಿಗೆ ವೃದ್ಧ ದಂಪತಿ ಸ್ಕೂಟರಲ್ಲಿದ್ದರು. ಹಿಂದುಗಡೆ ಕೂತಿದ್ದಾಕೆ, ಬಿಸಿಲಿಗೆ ತಲೆಸುತ್ತಿ ಹಿಂದಕ್ಕೆ ಬಿದ್ದೇಬಿಟ್ಟರು. ಸ್ಕೂಟರನ್ನ ಸಂಭಾಳಿಸಲಾಗದೇ ಆ ವೃಧ್ಧರೂ ಬಿದ್ದರು, ಸ್ಕೂಟರೂ ಬಿತ್ತು. ಆಕೆಗೆ ಪಾಪ ಹಣೆಗೆ ಪೆಟ್ಟಾಗಿ ರಕ್ತ ಸುರಿಯತೊಡಗಿತು. ಅಲ್ಲೆಲ್ಲೂ ಸುತ್ತ ಮೆಡಿಕಲ್ಲೂ ಇಲ್ಲ. ಕರ್ಚೀಫು ಕಟ್ಟಿ, ಬದಿಗೆ ಕೂರಿಸಿದ್ದಾಯಿತು. ಸುಮಾರು ಒಂದು ಒಂದೂವರೆ ಗಂಟೆಗಳ ಕಾಲ - ಕಾಲ ಸ್ತಬ್ಧ.ಅಷ್ಟು ಹೊತ್ತಿಗೆ ವಿಷಯವೂ ತಿಳಿಯಿತು, ಕನ್ನಡಕ್ಕಾಗಿ ಓರಾಡುವ ಸಂಘಟನೆಯ ಜಾಥಾವೇನೋ ನಡೆಯುತ್ತಿದೆ ಮುಂದೆ ಅಂತ.

ಒಂದು ಕೆಲಸದ ದಿನ, ಸಾವಿರಾರು ಜನರ ಅಮೂಲ್ಯ ಸಮಯ ಹಾಳಾಗಿ ಹೋಗಿತ್ತು. ಜೊತೆಗೆ ಉರಿ ಬಿಸಿಲಲ್ಲಿ ಒಣಗಿದ್ದು ಬೇರೆ.ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಕಾಳಜಿ ಹೊಂದಿರುವ ಸಂಘಟನೆಗಳ ಬಗ್ಗೆ ನನಗೂ ಗೌರವವಿದೆ. ಆದರೆ ಮೊನ್ನೆಯ ಘಟನೆ ನಿಜಕ್ಕೂ ಬೇಸರ , ಸಿಟ್ಟು ತರಿಸಿತು. ಅವರ ಈ ಕಾರ್ಯದಿಂದಾಗಿ ತೊಂದರೆಗೊಳಗಾಗಿದ್ದು ಕನ್ನಡದ ಜನತೆಯೇ ಅಲ್ಲವೇ? ಕನ್ನಡದ ಕೆಲಸ ಮಾಡೋಕೆ ಉದ್ದುದ್ದ ಜಾಥಾ, ಒಂದು ಕೆಲಸದ ಬೆಳಗೇ ಆಗಬೇಕಿತ್ತೇ?

ಕನ್ನಡ ಪರ ಸಂಘಟನೆಯಿಂದಾದ ಈ ತೊಂದರೆಯ ಬಗ್ಗೆ , ಯಾವುದೇ ಮಾಧ್ಯಮಗಳು ತುಟಿ ಪಿಟಕ್ ಅನ್ನಲಿಲ್ಲ. ಯಾಕೆ ಸುಮ್ಮನಿದ್ದರು ಅಂದರೆ, ಹೆದರಿಕೆ. ಈಗೀಗ ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಕೆಲ್ಸ ಮಾಡುವ ಯಾರ ಬಗ್ಗೆಯಾದರೂ ನೀವೇನಾದರೂ ಸ್ವಲ್ಪ ವಿಮರ್ಶೆ ಮಾಡುವ , ಅಥವಾ ಪ್ರಶ್ನೆ ಮಾಡುವ ಧಾಟಿಯಲ್ಲಿ ಬರೆದಿರಿ, ಹೇಳಿದಿರಿ ಅಂದರೆ ನಿಮಗೆ ಕನ್ನಡ ವಿರೋಧಿ ಹಣೆಪಟ್ಟಿ ಹಚ್ಚಲಾಗುತ್ತದೆ.

ಇಂತಹ ಆಷಾಢಭೂತಿತನಕ್ಕೆ ನನ್ನ ಧಿಕ್ಕಾರವಿದೆ.

13 ಕಾಮೆಂಟ್‌ಗಳು:

Parisarapremi ಹೇಳಿದರು...

ಅವರು ಕನ್ನಡಪರ ಸಂಘಟನಕಾರರೆಂಬುದರಲ್ಲೇ ಶಂಕೆಯಿದೆ ನನಗೆ. ಕನ್ನಡವನ್ನು ನೆಟ್ಟಗೆ ಮಾತನಾಡಲೂ ಬರೋದಿಲ್ಲ ಅವರುಗಳಲ್ಲನೇಕರಿಗೆ.

ಚಳುವಳಿ ಹೆಸರಿನಲ್ಲಿ ನಮ್ಮವರಿಗೇ ಯಾಕೆ ತೊಂದರೆ ಮಾಡ್ತಾರೋ ಈ ಮೂರ್ಖರು ಕನ್ನಡಮಾತೆಯೇ ಬಲ್ಲಳು. ಬೇಸರದ ಸಂಗತಿ.

ನನ್ನದೂ ಒಂದು ಧಿಕ್ಕಾರ!!

ಧಿಕ್ ಬಲಂ ಅವ್ಯವಸ್ಥಿತ ಚಳುವಳಿ ಬಲಂ, ಶಾಂತಿ ಸಹನಾ ಬಲಂ ಬಲಂ!!

Annapoorna Daithota ಹೇಳಿದರು...

Khanditha, idannu naanoo anumodisutthene.

ಮೃಗನಯನೀ ಹೇಳಿದರು...

ohw nooo tats really bad...!!!

Shree ಹೇಳಿದರು...

ಈ ಕೆಲ್ಸ ಬೇಕಾಗಿರ್ಲಿಲ್ಲ ನಿಧಿ. ನಾಳೆ ಕರವೇಯವರು ತಮ್ಮ ಹಿಂದೆ ಬಿದ್ರೆ ಏನ್ಮಾಡೋದು? :(

ಅನಾಮಧೇಯ ಹೇಳಿದರು...

This is very much worth contemplating. Thanks for this article. I too feel that Narayanagowda and company are making a big drama out of some situations. avara mUrkhathanakke nannadondu divya dhikkaaravide!.

Dr.D.M.Sagar

Sree ಹೇಳಿದರು...

ಸರೀಗೆ ಹೇಳೀದೀರ! ನಿಜ್ವಾಗಿ ಕನ್ನಡದ ಬಗ್ಗೆ ಕಾಳಜಿ ಇರೋವ್ರು ಕೆಲ್ಸ ಮಾಡ್ತಾರೆ, ಜಾಥಾ ಮಾಡಿ ಬೇರೆಯವ್ರ್ ಕೆಲ್ಸ ಹಾಳುಮಾಡಲ್ಲ ಅಂತ ನನಗನ್ನಿಸೋದು!

Lakshmi Shashidhar Chaitanya ಹೇಳಿದರು...

ಉದ್ದೇಶ ಚೆನ್ನಗಿದ್ದರೂ ಆ ಉದ್ದೇಶವನ್ನು ಸಾರ್ಥಕವಾಗಿಸುವ ಸಾಧನ ಮತ್ತು ಮಾಧ್ಯಮಗಳು ಸರಿಯಿಲ್ಲವಾದ್ದರಿಂದ ಇಂತಹ ಆಚರಣೆಗಳಿಗೆ ನನ್ನದೂ ಒಂದು ಧಿಕ್ಕಾರವಿದೆ.

Vijaya ಹೇಳಿದರು...

ನಿಜ, ಒಂದು ತಪ್ಪಿನಿಂದ ಇನ್ನೊಂದು ತಪ್ಪು ತಿದ್ದೋಕೆ ಆಗೊಲ್ಲ. ಗಾಂಧಿ strike ಮಾಡೋದು ಹೇಳ್ಕೊಟ್ರು ಅಂತ ಬೇಕ್ಬೇಕಾದ್ ಹಾಗೆ ಮಾಡೋದು ಸರಿ ಅಲ್ಲ. ಧಿಕ್ಕಾರ ಧಿಕ್ಕಾರ!

ಅಮರ ಹೇಳಿದರು...

ಜನರ ನಾಡು-ನುಡಿಯೆಡೆಗಿನ ಅಭಿಮಾನವೆ ಇವರಿಗೆ ಆಹಾರ, ತಮ್ಮ ಕಾರ್ಯ ಸಾಧಿಸಿಕೊಳ್ಳಲು. ಅವರು ಮಾಡೊ ಆಂದೋಲನ ಧರಣಿಗಳಿಂದ ಜನಕ್ಕೆ ತೊಂದರೆಯಾದರು ಪರವಾಗಿಲ್ಲ, ವಯಕ್ತಿಕ ವಿಜೃಂಭಣೆಯೆ ಅವರಿಗೆ ಮುಖ್ಯ.

ಅನಾಮಧೇಯ ಹೇಳಿದರು...

ಸರಿಯಾಗಿ ಬರೆದಿದ್ದೀರಿ. ನನ್ನದೂ ಒಂದು ಧಿಕ್ಕಾರ ಸೇರಿಸ್ಕೊಳ್ಳಿ.

Unknown ಹೇಳಿದರು...

ಏನೂ ಹೇಳೋದಿಲ್ಲ!!

jomon varghese ಹೇಳಿದರು...

ಇಂತಹ ಸಂಘಟನೆಗಳ ಅಷಾಡಭೂತಿತನಕ್ಕೆ ನನ್ನದೂ ಒಂದು ಧಿಕ್ಕಾರ ಸೇರಿಸಿಕೊಳ್ಳಿ.ನಮ್ಮನ್ನು ಕನ್ನಡ ವಿರೋಧಿ ಎಂದರೂ ಪರವಾಗಿಲ್ಲ,ಇತ್ತೀಚೆಗಂತೂ ಇವರುಗಳ ಅಭಿಮಾನ ತೀರಾ ಅತಿರೇಖಕ್ಕೆ ಹೋಗುತ್ತಿದೆ.. ಒಳ್ಳೆಯ ಬರಹ.

ಧನ್ಯವಾದಗಳು.

ಜೋಮನ್.

ಸಿಂಧು sindhu ಹೇಳಿದರು...

ನಿಧಿ,
ನೀನು ಬರೆದಿದ್ದು ನಿಜ.

ತಡವಾಗಿ ಆದರೆ ಒಂದು ಧೃಡವಾದ ಧಿಕ್ಕಾರ ನನ್ನದೂ ಕೂಡ.
ಇದು ಒಂದು ಜನಪರ ಹೋರಾಟವಾಗಿ ಬೆಳೆದು ದೇಶದ ಸ್ವಾತಂತ್ರ್ಯಕ್ಕೆ ಕಾರಣವಾದ ಹೋರಾಟಗಳನ್ನ ಹಾಡಹಗಲೇ ನೇಣು ಹಾಕಿದಂತಹ ಕಾರ್ಯ.

ಸಿಂಧು