ಸೋಮವಾರ, ಡಿಸೆಂಬರ್ 15, 2008

ಮಾಯಾ ಬಜಾರ್!

ಆವತ್ತೊಂದಿನ ರಾಘವೇಂದ್ರ ಹೆಗ್ಡೆ ರಾತ್ರಿ ಒಂಬತ್ತೂವರೆಗೆ ಫೋನ್ ಮಾಡಿ," ನೋಡೋ ರಂಗಶಂಕರದಲ್ ಈಗ್ ೧೧ ಗಂಟಿಂಗೊಂದ್ ಸ್ಪೆಶಲ್ ಶೋ ಇದ್ದು, ಮಾಯಾಬಜಾರ್ ನಾಟ್ಕ" ಅಂದ. ರಂಗಶಂಕರದಲ್ಲಿ ರಾತ್ರಿ ೧೧ ಗಂಟೆಗೆ ನಾಟ್ಕ ಅಂದ್ ಮೇಲೆ ಚನಾಗೇ ಇರಬೇಕು ಅಂದಕೊಂಡು ಜೈ ಅಂದೆ ಅವನ ಹತ್ರ. ಹತ್ತೂ ಮುಕ್ಕಾಲರ ಹೊತ್ತಿಗೆ ರಂಗಶಂಕರದೆದುರು ಹೋಗಿ ನೋಡಿದರೆ ಜನವೋ ಜನ! ಸುಮಾರು ೨೫೦ ಜನ ಆಗಲೇ ಕ್ಯೂ ಹಚ್ಚಿದ್ದಾರೆ!ತೆಲುಗು ನಾಟಕ ಅಂತೆ, ಚೆನ್ನಾಗಿ ಮಾಡುತ್ತಾರಂತೆ ಅಂತ ಅಲ್ಲಿದ್ದವರೆಲ್ಲ ಮಾತಾಡಿಕೊಳ್ಳುತ್ತಿದ್ದರು. ನಾನೂ, ಹೆಗ್ಡೆಯೂ ಸಂದೀಪನೂ ಹೋಗಿ ಕೂತೆವು. ಮೊದಲ ಸೀನೇ ನಾರದ ಆಕಾಶದಿಂದ ಇಳಿದು ಬಂದ. ಆಮೇಲಾಮೇಲಂತೂ ಬಿಡಿ! ತೀರಾ ನಾವ್ ಸಿನಿಮಾದಲ್ಲಿ ಮಾತ್ರ ನೋಡಲು ಸಾಧ್ಯ ಅಂದುಕೊಂಡ ಸೀನುಗಳೆಲ್ಲ ಕಣ್ಣೆದುರು! ಮಾಯಾ-ಮಂತ್ರ-ಛೂ ಮಂತರ್! ನಮ್ಮ ಕಣ್ಣುಗಳನ್ನೇ ನಮಗೆ ನಂಬಲಾಗದ ಸ್ಥಿತಿ. ನಾಟಕ ಮುಗಿದ ಮೇಲೆ ಅಕ್ಷರಶಃ ೧೫ ನಿಮಿಷ ಚಪ್ಪಾಳೆ ಹೊಡೆದೆವು- ರಾತ್ರೆ ಒಂದೂ ಮುಕ್ಕಾಲಿಗೆ! ಮೈಗೆಲ್ಲ ಬಣ್ಣ ಬಳಿದುಕೊಂಡು,ದಿನದಲ್ಲಿ ಮೂರನೇ ಬಾರಿಗೆ ರಾತ್ರಿ ೧೧ಕ್ಕೂ ಸ್ವಲ್ಪ ಆಯಾಸ ತೋರಿಸಿಕೊಳ್ಳದೇ ನಾಟಕ ಪ್ರದರ್ಶಿಸಿದ ತಂಡಕ್ಕೆ ನಮ್ಮ ಅಭಿನಂದನೆ ಕಡಿಮೆಯೇ ಅನ್ನಿಸಿತು.
ಬೇಕೆಂದೇ ನಾಟಕದ ಇತರ ವಿವರಗಳನ್ನು ಇಲ್ಲಿ ನೀಡುತ್ತಿಲ್ಲ. ಮತ್ತೆ ಮಾಯಾಬಜಾರ್ ರಂಗಶಂಕರಕ್ಕೆ ಬರುತ್ತಿದೆ. ಡಿಸೆಂಬರ್ ೨೫ರಂದು ಮಾಯಾ ಬಜಾರ್ ನ ಮೂರು ಪ್ರದರ್ಶನಗಳಿರುತ್ತವೆ. ಖಂಡಿತಾ ಬನ್ನಿ ಈ ನಾಟಕಕ್ಕೆ. ನಾನಂತೂ ಹೋಗುತ್ತಿದ್ದೇನೆ.

ಇವತ್ತೇ ರಂಗಶಂಕರಕ್ಕೆ ಹೋದರೆ ಟಿಕೆಟ್ ಲಭ್ಯ. ಡಿಸೆಂಬರ್ ೨೪ಕ್ಕೆ ಇದೇ ತಂಡ ಜೈ ಪಾತಳ ಭೈರವಿ ನಾಟಕವನ್ನೂ ಪ್ರದರ್ಶಿಸುತ್ತಿದೆ.


ಒಂದು ಕುಟುಂಬವೇ ನಾಟಕ ತಂಡವಾಗಿರುವ "ಸುರಭಿ" ಬಗ್ಗೆ ಮತ್ತು ನಾಟಕದ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಚಿತ್ರ ಕೃಪೆ:ರಂಗಶಂಕರ

2 ಕಾಮೆಂಟ್‌ಗಳು:

Parisarapremi ಹೇಳಿದರು...

ಅಲ್ಲಾ, ಆವತ್ತು ನನಗೂ ಹೇಳಿದ್ದಿದ್ದ್ರೆ ಬರ್ತಿದ್ದೆ ನಾನೂನು!! ಇರಲಿ ಇರಲಿ.. ಆಮೇಲೆ ಫೋನ್ ಮಾಡಿ ಉರಿಸೋದು ಕೆಟ್ ಬುದ್ಧಿ!!! ಆದ್ರೂ ಪರವಾಗಿಲ್ಲ. ಮುಂದಿನ ವಾರ ನೋಡ್ಕೋತೀನಿ ನಿನ್ನ.

ಚಂದ್ರಕಾಂತ ಎಸ್ ಹೇಳಿದರು...

ನಿಜವಾಗಿಯೂ ಒಳ್ಳೆ ವಿಷಯವನ್ನೇ ಕೊಟ್ಟಿರುವಿರಿ. ಹಿಂದೆ ಮಾಯಾಬಜಾರಿನ ವಿಷೇಶ ಪ್ರದರ್ಶನ ನಡೆಯಿತೆಂದು ಪ್ರದರ್ಶನದ ನಂತರ ತಿಳಿದು ಬೇಸರವಾಗಿತ್ತು. ಈಗ ನೀವು ೨೫ ಡಿಸೆಂಬರ್ ಪ್ರದರ್ಶನದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.

ಅಕಸ್ಮಾತ್ ನಿಮ್ಮ ಬ್ಲಾಗ್ ಒಳಗೆ ಇಣಿಕಿದ್ದಕ್ಕೆ ಒಳ್ಳೆ ಲಾಭವೇ ಆಯಿತು!