ಸೋಮವಾರ, ಫೆಬ್ರವರಿ 06, 2012

ಹಾಗಾದರೆ ..

ಅಕಾಲದಲ್ಲಿ ಎದ್ದ ಹಾಗೆ ಅಣಬೆ
ನಮ್ಮ ಮನೆಯ ಪಕ್ಕದಲ್ಲೇ ಎದ್ದು
ನಿಂತಿತ್ತು ಶಾಮಿಯಾನ, ಜೊತೆಗೆ ಕೆಂಪು ಕುರ್ಚಿ ಸಾಲು
ಬೆಂಗಳೂರಿನ ರೋಡುಗಳಲ್ಲಿ ಇದು ಖಾಯಂ
ಆಗಿ ಸಿಗುವ ತಾತ್ಕಾಲಿಕ ವ್ಯವಸ್ಥೆ

ಆಫೀಸಿಗೆ ಹೊರಟವನಿಗೆ ಜಾಗೃತವಾಗಿ
ಸಾಮಾಜಿಕ ಪ್ರಜ್ಞೆ
ಯಾಕೆ ಉಗಿಯಬಾರದು ಅವರುಗಳ ಬೇ
ಜವಾಬ್ದಾರಿಗೆ ಅಂದುಕೊಂಡರೆ ಕಂಡಿದ್ದು
ಗೇಟಿನ ಬಳಿ ಹೊಗೆ ಕಾರುವ ಮಡಕೆ

ವೈಕುಂಠ ಯಾತ್ರೆಯ ವ್ಯಾನು ರಸ್ತೆಯಂಚಲ್ಲಿ
ದುಸುದುಸು ಒಳಗೆ, ಹೊರಗೆ ಗಂಡಸರು,
ಗಹನ ಗಂಭೀರ
ಪಿಚ್ಚೆನಿಸಿದರೂ, ಸಾವು ಕಂಡರೆ
ಶುಭಶಕುನ ಅಂತ ಯಾರೋ ಅಂದ
ನೆನಪಾಗಿ ಹಾಯೆನಿಸಿ

ಹೊರಟಮೇಲೆ ಮನಸಿಗೆ ಬಂದಿದ್ದು ಸತ್ತಿದ್ದು ಯಾರು?
ನಿತ್ಯ ಗೇಟಂಚಿಗೆ ನಿಂತು ಸಿಗರೇಟು
ಸೇದುತ್ತಿದ್ದ ಮುದುಕ? ಎಂದೂ ಕಾಣದ ಅವನ ಹೆಂಡತಿ?
ಪಿಯೂಸಿಯ ಮಗನೇ?
ದಾರಿತುಂಬ ಸತ್ತವರು ಯಾರೆಂಬ ಪತ್ತೇದಾರಿ

ಕೃಶಕಾಯದ ಮುದುಕನೇ ಇರಬೇಕು ಖಂಡಿತ
ಸೇದಬಾರದಿತ್ತು ಆ ಪರಿ ಹೊಗೆಯ
ತಡವಾಗಿ ಹುಟ್ಟಿದ ಮಗ, ಓದೇ ಮುಗಿದಿರಲಿಲ್ಲ
ಹೆಂಡತಿಗೆ ಯಾರು ದಿಕ್ಕು? ಸುಮ್ಮನೇ ಗೊತ್ತಿದ್ದರೂ
ಸೇದಿ ತಂಬಾಕು, ಸಾಯುವ ಸೊಕ್ಕು

ನಿನ್ನೆ ಆಫೀಸಿಂದ ಬರುವ ವೇಳೆ
ಅಚಾನಕ್ಕಾಗಿ ಸಾವಿನ ಮನೆಯೆದುರು
ತಿರುಗಿತು ಕುತ್ತಿಗೆ
ಮುದುಕ ಇರಬೇಕೆ ಅಲ್ಲಿ,ಆ ಹೊತ್ತಿಗೆ! ಜತೆಗೆ
ಅದೇ ಸಿಗರೇಟಿನ ರಿಂಗುಹೊಗೆ.

ಹಾಗಾದರೆ ..

4 ಕಾಮೆಂಟ್‌ಗಳು:

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಚೆನ್ನಾಗಿದೆ..ಬರೀತಾ ಇರಿ..

sunaath ಹೇಳಿದರು...

`ಅಕಾಲದಲ್ಲಿ ಎದ್ದ ಅಣಬೆ’! ತುಂಬ ಸುಂದರವಾದ ಉಪಮೆ. ಒಂದು ಭಾವವನ್ನು ಚೆನ್ನಾಗಿ ಕವನೀಕರಿಸುತ್ತೀರಿ. ಅಭಿನಂದನೆಗಳು.

ಶ್ರೀನಿಧಿ.ಡಿ.ಎಸ್ ಹೇಳಿದರು...

@Venkatakrishna.K.K.
thank you!
@sunaath kaka,
ಪ್ರೋತ್ಸಾಹಕ್ಕೆ ಧನ್ಯವಾದ..

ಸಿಂಧು sindhu ಹೇಳಿದರು...

ನಿಧಿ,
ತುಂಬಾ ಇಂಟರೆಸ್ಟಿಂಗ್ ಆಗಿದ್ದು.
ಇಷ್ಟ ಆತು.
ಪ್ರೀತಿಯಿಂದ,ಸಿಂಧು