ಮಂಗಳವಾರ, ಏಪ್ರಿಲ್ 24, 2012

ತೂಗುಮಂಚದಲ್ಲಿ ಕೂತು...



ನ್ನ ಪ್ರೀತಿಯ ಕವಿ ಮತ್ತು ಬರಹಗಾರ ಎಚ್ಚೆಸ್ವಿಯವರು, ತೂಗುಮಂಚದಲ್ಲಿ ಕೂತು, ಮೇಘಶ್ಯಾಮ ರಾಧೆಗಾತು ಎಂಬ ಸೊಗಸಾದ ಕವಿತೆ ಬರೆದಿದ್ದಾರೆ. ಅದು ಭಾವಗೀತೆಯಾಗಿಯೂ ಜನಪ್ರಿಯವಾಗಿದೆ. ಹಾಡಿನಲ್ಲಿ ಬರುವಂತದ್ದೇ ಒಂದು ಒಂದು ತೂಗುಮಂಚ ನಮ್ಮ ಮನೆಯಲ್ಲಿ ಕೂಡ ಇದೆ. ಹೊಸದಾಗಿ ಅದನ್ನು ಕಂಡಾಗ ನಮಗೆ ಭಾರೀ ಆನಂದವಾಗಿತ್ತು. ಅಲ್ಲಿಯ ತನಕ ಸಿನಿಮಾದಲ್ಲಿ ಮಾತ್ರ ಕಂಡಿದ್ದ ಅಂತ ದೊಡ್ಡ ತೂಗುಮಂಚ ನಮ್ಮ ಮನೆಯೊಳಗೇ ಇತ್ತು! ಅಂತಿಂಥ ತೂಗುಮಂಚ ಅಲ್ಲ. ಪಾರ್ಕಲ್ಲೆಲ್ಲ ಇರುವ ಪುಟ್ಟ ಚಿಕಣಿ ಉಯ್ಯಾಲೆಗಳನ್ನೆಲ್ಲ ಕಲ್ಪಿಸಿಕೊಳ್ಳಲೇ ಬೇಡಿ. ತೂಗುಯ್ಯಾಲೆಯಲ್ಲಿ ಮೂರು ಜನ ಆರಾಮಾಗಿ ಕೂರಬಹುದಾಗಿತ್ತು, ಕೂರುವುದೇನು ಮಲಗಲೂ ಬಹುದಾಗಿತ್ತು. 

ಬಲವಾದ ಕಬ್ಬಿಣದ ಸರಪಳಿಗಳನ್ನು ಮಂಚದ ನಾಲ್ಕೂ ಮೂಲೆಗೆ ಜೋಡಿಸಲಾಗಿತ್ತು. ಪ್ರಾಯಶಃ ಆ ಮಂಚದ ಮೇಲೆ ಒಳ್ಳೆಯ ಕೆತ್ತನೆ ಕೆಲಸವನ್ನು ಯಾವುದೋ ಕಾಲದಲ್ಲಿ ಮಾಡಿರಬೇಕು. ಆದರೆ, ಅದರ ಹಲಗೆಗೆ ಬಣ್ಣ ಹೊಡೆದೂ ಹೊಡೆದೂ, ಬಣ್ಣದ ಲೇಪದ ಕೆಳಗೆಲ್ಲೋ ಇದ್ದಿರಬಹುದಾದ ಹೂಬಳ್ಳಿಯ ರಚನೆಯ ಅಂದಾಜು ಮಾತ್ರ ನಮಗಾಗುತ್ತಿತ್ತು. ಮೊದಲಿಗೆ ಕೂತ ಕೂಡಲೇ ಕಯ್ ಅಂತ ಸದ್ದು ಮಾಡುತ್ತಿದ್ದ ತೂಗುಯ್ಯಾಲೆ, ಅದರ ಅಗತ್ಯ ಸಂದುಗೊಂದುಗಳಿಗೆ ಎಣ್ಣೆ ಸ್ನಾನ ಮಾಡಿಸಿದ ಮೇಲೆ ಸುಮ್ಮನಾಯಿತು. ಆಮೇಲೆ, ತೂಗುಮಂಚದ ಬಾಬ್ತಿಗೆ ಅಂತಲೇ ಅಮ್ಮ ಕಾದೆಣ್ಣೆ ತೆಗೆದಿಡಲು ಆರಂಭಿಸಿದಳು.

ಟಿವಿ, ತೂಗುಮಂಚದ ಮುಂದೆಯೇ ಸ್ಥಾಪಿಸಲ್ಪಟ್ಟಿತು. ಟಿವಿ ನೋಡುವುದಕ್ಕಿಂತ ಮುಖ್ಯವಾಗಿ, ಯಾರಿಗೆ ತೂಗುಯ್ಯಾಲೆಯ ಸೀಟು ಸಿಗುತ್ತದೆ ಎಂಬುದು ಮುಖ್ಯವಾಗಿತ್ತು. ಎಲ್ಲ ಆರಾಮಾಗಿ ಅಲ್ಲಿ ಕೂಡಬಹುದಾಗಿದ್ದರೂ ಸುಮ್ಮನೆ ಅನಗತ್ಯ ಗೌಜಿ ನಡೆಯುತ್ತಿತ್ತು. ಅಪ್ಪ ಕೂಡ ಈ ಸೀಟಿನ ಕಾಂಪಿಟೀಶನ್ನಿಗೆ ಬೀಳುತ್ತಿದ್ದರು. ಅಮ್ಮ ಹಗಲು ಹೊತ್ತಿನಲ್ಲಿ ತೂಗುಮಂಚದಲ್ಲಿ ಕೂತು ನಿಧಾನಕ್ಕೆ ತೂಗಿಕೊಳ್ಳುತ್ತಿದ್ದರೆ ಏನೋ ಭಾರೀ ಗಹನವಾದ್ದನ್ನು ಆಲೋಚನೆ ಮಾಡುತ್ತಿದ್ದಾಳೆ ಮತ್ತು ನಾವು ಅಣ್ಣ ತಂಗಿ ಅವರಿಗೆ ತೊಂದರೆ ಕೊಡಬಾರದು ಎಂಬುದು ನಮಗೆ ಅರ್ಥವಾಗಿತ್ತು. ಕೆಲ ಬಾರಿ ಅವಳು ಒಂದಿಷ್ಟು ಹೂವು ತುಳಸಿ ಎಲ್ಲ ಗುಪ್ಪೆ ಹಾಕಿಕೊಂಡು ಅಲ್ಲಿ ಮಾಲೆ ನೇಯುತ್ತಿದ್ದಳು.  ಅಪ್ಪ ಸಂಜೆಗಳಲ್ಲಿ ಕನ್ನಡಕ ಏರಿಸಿ, ಏನೋ ಪುಸ್ತಕ ಹಿಡಿದು ಅಲ್ಲಿ ಕೂತರೆ, ನಾನು ಸದ್ದಿಲ್ಲದೇ ಕ್ರಿಕೆಟ್ ಆಡಲು ಹೋಗಬಹುದು.

ನನ್ನಮ್ಮನ ಅಪ್ಪ ನಮ್ಮ ಮನೆಗೆ ಬಂದಿದ್ದಾಗ, ಅವರಿಗೆ ಈ ತೂಗುಮಂಚ ಬಹಳ ಇಷ್ಟವಾಗಿ ಹೋಗಿತ್ತು. ಎಲ್ಲೋ ಪೇಟೆಯಲ್ಲಿ ಮನೆ ಮಾಡಿರಬೇಕು ಎಂದುಕೊಂಡು ಬಂದಿದ್ದ ಅವರಿಗೆ ನಮ್ಮ ಈ ಹಳ್ಳಿ ಮನೆ, ಇಲ್ಲಿನ ವಾತಾವರಣ ಖುಷಿ ಕೊಟ್ಟಿತ್ತು. ತೂಗುಮಂಚವನ್ನ ನಿಧಾನವಾಗಿ ತೂಗಿಕೊಳ್ಳುತ್ತಾ, ಕೆಳಗೆ ನನ್ನನ್ನೂ, ನನ್ನ ಪಕ್ಕದ ಮನೆಯ ಗೆಳೆಯ ಶಿವನನ್ನೂ ಕೂರಿಸಿಕೊಂಡು ಭಗವದ್ಗೀತೆಯ ಶ್ಲೋಕಗಳು, ಗಣಪತಿ ಉಪನಿಷತ್ತು ಇತ್ಯಾದಿ ವಿಚಾರಗಳ ಬಗ್ಗೆ ಪ್ರತಿದಿನ ಉಪನ್ಯಾಸ ನೀಡುತ್ತಿದ್ದರು. ನಮಗೆ ಇಷ್ಟವಿದ್ದರೂ, ಇಲ್ಲದೇ ಹೋದರೂ ಅವರು ಹೇಳಿದ್ದನ್ನು ಕಡ್ಡಾಯ ಕೇಳಿಸಿಕೊಳ್ಳಲೇ ಬೇಕಿತ್ತು. ಕೆಲಸಲ ಮಾರನೇ ದಿನ ಸರ್ಪ್ರೈಸ್ ಟೆಸ್ಟುಗಳೂ ನಡೆದು ನಾವು ಕಂಗಾಲಾಗುತ್ತಿದ್ದೆವು. ಅವರು ಹೇಳಿಕೊಟ್ಟ ಶ್ಲೋಕಗಳು ಬಾಯಿಗೆ ಬಾರದೇ ಬೈಸಿಕೊಳ್ಳುತ್ತಿದ್ದೆವು. ಅವರು ತೂಗುಮಂಚದ ಮೇಲೆ ಕೂತಿದ್ದು ಕಂಡರೆ ನಾನು ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದೆ.

ನಮ್ಮ ಮನೆಯಲ್ಲಿ ಖಂಡಿತ ಸಿನಿಮಾ ಶೂಟಿಂಗ್ ಮಾಡಬಹುದು ಎಂದು ನಾನಂತೂ ಕೇವಲ ತೂಗುಮಂಚದ ಕಾರಣದಿಂದಲೇ ನಿರ್ಧರಿಸಿಬಿಟ್ಟಿದ್ದೆಕಲಾತ್ಮಕ ಸಿನಿಮಾಗಳಲ್ಲಿ ಕಾಣುವ ಹಾಗಿನ, ತೂಗುಮಂಚದ ಸರಪಳಿಗೆ ಒರಗಿಕೊಂಡ ಹೀರೋಯಿನ್ನು, ಮೆಲ್ಲನೆ ಹಿಂದಿನಿಂದ ಬಂದು ಅಪ್ಪಿಕೊಳ್ಳುವ ಹೀರೋ.. ಇತ್ಯಾದಿ ಸೀನುಗಳು ನಮ್ಮ ಮನೆಯಲ್ಲಿ ಕೂಡ ಶೂಟಿಂಗು ಆಗಬಹುದು ಎಂಬ ಹಗಲುಗನಸುಗಳನ್ನು ಕೂಡ ಕಂಡಿದ್ದೆ. ಸುಮ್ಮನೆ ಯಾವಾಗಲೋ ಒಂದು ದಿನ ಅಪ್ಪನ ಬಳಿ ಯಾಕೆ ಸಿನಿಮಾ ಶೂಟಿಂಗು ಮಾಡಬಾರದು ಎಂದು ಕೇಳಿದ್ದಕ್ಕೆ, ಯಾವಾಗಲೂ ಸಿಟ್ಟಾಗದ ಆತ ಕೆಕ್ಕರಿಸಿಕೊಂಡು ನೋಡಿದ್ದ. ಅದು ಅಮ್ಮನವರೆಗೂ ಹೋಗಿ, ಅವಳಂತೂ ನಾನು ಸಂಪೂರ್ಣ ನೀತಿಗೆಡುತ್ತಿದ್ದೇನೆ ಇತ್ಯಾದಿ ಆರೋಪಗಳನ್ನೆಲ್ಲ ಮಾಡಿ, ರಾದ್ಧಾಂತವೇ ಆಗಿ ಹೋಯಿತು.

ದಿನಗಳೆದಂತೆ, ತೂಗುಮಂಚ ನಮ್ಮ ಮನೆಯಲ್ಲಿನ ಇತರೆಲ್ಲ ಸ್ಥಿರಾಸ್ತಿಗಳ ಗುಂಪಿಗೆ ಸೇರುತ್ತ ಹೋಯಿತು. ದಿನಾ ಅದನ್ನೇ ನೋಡಿ ನೋಡಿ, ಕೂತು ತೂಗಿಕೊಂಡು ಬೇಸರ ಬರಲು ಆರಂಭವಾಯಿತು. ಮೊದಲು ಮನೆಯ ಅತ್ಯಂತ ಪ್ರಮುಖ ಆಕರ್ಷಣೆಯಾಗಿದ್ದ ಅದು ಅನಂತರ ಪ್ರಮುಖ ಅಡಚಣೆಗಳಲ್ಲಿ ಒಂದಾಯಿತು. ಮನೆಗೆ ಬಂದವರು, ನಾವು ಮನೆಮಂದಿ ಎಲ್ಲ ಅದರ ಮೇಲೆ ಕೂತು ಎರ್ರಾಬಿರ್ರಿ ತೂಗಿ ತೂಗಿ ತೂಗುಮಂಚವನ್ನು ಹಿಡಿದುಕೊಂಡಿದ್ದ ಜಂತಿ ಕುಸಿಯತೊಡಗಿತು. ಸಿಮೆಂಟು ಹಿಸಿದು, ಗೋಡೆಯಲ್ಲಿ ದೊಡ್ಡ ಡೊಗರಾಯಿತು. ಏನೇ ಸಿಮೆಂಟು ತಂದು ಹಚ್ಚಿದರೂ ಮತ್ತೆ ಮತ್ತೆ ಅದು ಕಿತ್ತು ಹೋಗುತ್ತಿತ್ತು.
ಅಲ್ಲದೇ ಈ ತೂಗುಮಂಚ, ಜಗಲಿಯ ಮಧ್ಯದಲ್ಲಿ ಇದ್ದಿದ್ದರಿಂದ, ಓಡಾಟಕ್ಕೆ ಬಹಳ ತೊಂದರೆ ಆಗುತ್ತಿತ್ತು. ಅಪ್ಪ ಅದನ್ನ ಅಲ್ಲಿಂದ ಎತ್ತಂಗಡಿ ಮಾಡಿ, ಸರಪಳಿ ಕಿತ್ತು ತೆಗೆದು ಉಗ್ರಾಣದ ಮೂಲೆಗೆ ಹಾಕಿ ಬಿಟ್ಟರು. ತೂಗುಮಂಚವನ್ನು ಕಳೆದುಕೊಂಡ ಜಗಲಿ ಈಗ ವಿಸ್ತಾರವಾಗಿ ಕಾಣಲು ತೊಡಗಿತು. ಅಮ್ಮನಿಗೆ ಜಗಲಿ ಗುಡಿಸಿ ಒರೆಸಲು ಭಾರೀ ಆರಾಮಾಗಿ, ಮೊದಲೇ ಯಾಕೆ ಅದನ್ನ ತೆಗೆಯಲಿಲ್ಲ ಎಂದು ಬೈದುಕೊಂಡರು. ಹುಡುಗಾಟಿಕೆಯ ಪ್ರಾಯ ದಾಟಿದ ನನಗೂ, ತೂಗುಮಂಚ ಮೂಲೆಗೆ ಹೋಗಿದ್ದರಿಂದ ಯಾವ ವ್ಯತ್ಯಾಸವೂ ಕಾಣಲಿಲ್ಲ, ಏನೂ ಅನ್ನಿಸಲಿಲ್ಲ. ಹಗಲು ಮನೆಯಲ್ಲಿದ್ದರೆ ತಾನೆ, ತೂಗುಯ್ಯಾಲೆಯ ಉಲ್ಲಾಸ?

ತೂಗುಮಂಚಕ್ಕೆ ಅಜ್ಞಾತವಾಸ ಆರಂಭವಾಗಿ ಎರಡು ಮೂರು ವರ್ಷಗಳೇ ದಾಟಿದ್ದವು. ಅಲ್ಲೆಲ್ಲೋ ಮೂಲೆಯಲ್ಲಿ ಬಿದ್ದುಗೊಂಡಿದ್ದ ಅದನ್ನು ನೋಡುವವರೂ ಇರಲಿಲ್ಲ. ಆದರೆ ಬೇಸಗೆಯ ರಜೆಯಲ್ಲಿ ನಮ್ಮ ಮನೆಗೆ ಬರುವ ನೆಂಟರ ಮಕ್ಕಳಿಗೆ ಮಾತ್ರ ಈ ಮಂಚದ ಅನುಪಸ್ಥಿತಿ ಕಾಡತೊಡಗಿತು. ಪದೇ ಪದೇ ಬಹಳಷ್ಟು ಜನ ತೂಗುಮಂಚದ ಪುನರ್ ಪ್ರತಿಷ್ಠಾಪನೆಗೆ ಒತ್ತಡ ತಂದಿದ್ದರಿಂದ ಅಪ್ಪ ಅದನ್ನ ನಮ್ಮ ಅಡುಗೆ ಮನೆ ಪಕ್ಕದ, ತೆರೆದ ಜಾಗದಲ್ಲಿ ಮತ್ತೆ ತೂಗು ಹಾಕಲಾಯಿತು. ನಮ್ಮ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳ ದಿನ, ಇಲ್ಲವಾದರೆ ಅಕ್ಕ ಪಕ್ಕದ ಮನೆಯ ಮತ್ತೆ ಮಕ್ಕಳು ಅದರ ಮೇಲೆ ಜೀಕಿಕೊಂಡು ಗೌಜಿಗಲಾಟೆ ಮಾಡುವುದು ನಡೆಯಿತು. ಅದೂ ಕೆಲ ದಿನಗಳು,ಅಷ್ಟೆ.

ಈಗ ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೇ ಇದ್ದಾರೆ. ತೂಗುಮಂಚದ ಮೇಲೆ ಅಮ್ಮ ಹಳೆಯ ಕಿತ್ತು ಹೋದ ಬಕೇಟಿನಲ್ಲಿ ಉಪ್ಪು ಹುಣಸೇಹಣ್ಣು ಹಾಕಿಟ್ಟಿದ್ದಾಳೆ. ಒಂದು ನಾಲ್ಕು ಬುಟ್ಟಿಗಳೂ, ಹಳೆಯ ಬಟ್ಟೆಯ ಗಂಟೂ ಅಲ್ಲಿ ಆಶ್ರಯ ಪಡೆದಿದೆ. ಕತ್ತಿ, ಸುತ್ತಿಗೆಯಂತಹ ಹತಾರಗಳನ್ನ ಇಡಲೂ ತೂಗುಯ್ಯಾಲೆಯೇ ಜಾಗ. ಸರಪಳಿಗೆ ಮತ್ತೆ ನಿಧಾನಕ್ಕೆ ತುಕ್ಕು ಹಿಡಿಯುತ್ತಿದೆ. ಮನೆಯಲ್ಲಂತೂ ಮಕ್ಕಳಿಲ್ಲ, ಅಕ್ಕಪಕ್ಕದಲ್ಲೂ ಇಲ್ಲ. ಇದ್ದವರೂ ಬರಿಯ ಓದಿನ ಪ್ರಪಂಚದೊಳಗೆ ಮುಳುಗಿಕೊಂಡು ಇದನ್ನೆಲ್ಲ ಮರೆತಿದ್ದಾರೆ.

ಎಲ್ಲಾದರೂ ಜೋರು ಗಾಳಿ ಬೀಸಿದರೆ, ತೂಗುಮಂಚ ತನ್ನನ್ನು ತಾನೇ ಸಣ್ಣಗೆ ತೂಗಿಕೊಳ್ಳುತ್ತದೆ. ಆಗ ಅದರ ಮೇಲಿಟ್ಟ ಯಾವುದೋ ಖಾಲಿ ಬುಟ್ಟಿಯೋ, ಕೆಲ ಬಾಳೆ ಎಲೆಗಳೋ ಕೆಳಗೆ ಬಿದ್ದು ಉರುಳಾಡುತ್ತವೆ. ಅಮ್ಮ ಬೈದುಕೊಂಡು ಅವನ್ನೆಲ್ಲ ಮತ್ತೆ ಸರಿಪಡಿಸಿಟ್ಟು ನಿಟ್ಟುಸಿರು ಬಿಡುತ್ತಾಳೆ. ತೂಗುಮಂಚ,ಮತ್ತೆ ನಿಶ್ಚಲವಾಗುತ್ತದೆ.



 (ವಿಜಯ ಕರ್ನಾಟಕ ಸಾಪ್ತಾಹಿಕ ಲವ್ ಲವಿಕೆಯಲ್ಲಿ ಪ್ರಕಟವಾದ ಬರಹ)

2 ಕಾಮೆಂಟ್‌ಗಳು:

ಸಂಧ್ಯಾ ಶ್ರೀಧರ್ ಭಟ್ ಹೇಳಿದರು...

ತುಂಬಾ ಚೆನ್ನಾಗಿದೆ... ತೂಗು ಮಂಚದಲ್ಲಿ ಕೂತು.. ಮೇಘಶ್ಯಾಮ ರಾಧೆಗಾತು.. ನನ್ನ ಮೆಚ್ಚಿನ ಭಾವಗೀತೆ.. ಅದು ಎಚ್ಚೆಸ್ವಿಯವರ ರಚನೆ ಎಂದು ತಿಳಿಸಿದ್ದಕ್ಕೆ ಧನ್ಯವಾದ..

mruganayanee ಹೇಳಿದರು...

as usual cennagide :-) ತಾತನ ತೋಟದ ಮನೆಯಲ್ಲಿ ನೀನು ವಿವರಿಸಿದಂತಹ ತೂಗುಯ್ಯಾಲೆ ಇತ್ತು. ರಜದಲ್ಲಿ ನಾವು ಮೊಮ್ಮೊಕ್ಕಳೆಲ್ಲಾ ಕಾಂಪಿಟೀಶನ್ ಮೇಲೆ ಕೂತು ಆಟವಾಡುತ್ತಿದ್ದೆವು. ಆಜ್ಜಿ ಪ್ರತೀ ಸಂಕ್ರಾಂತಿಗೂ ತಪ್ಪದೆ ರೇಶ್ಮೆ ಲಂಗ ಹಾಕಿ ಕೊಂಡು ನಲಿದಾಡುತ್ತಿದ್ದ ನಮ್ಮನ್ನೆಲ್ಲಾ ಅದರ ಮೇಲೆ ಕೂರಿಸಿ ತೆಲೆ ಮೇಲೆ ಎಳ್ಳು ಸುರಿದು ಆರತ್ತಿ ಎತ್ತುತ್ತಿದ್ದರು. ಹೋದ ವರ್ಷ ಅಜ್ಜಿ ತೀರಿಕೊಂಡರು. ಮೊನ್ನೆ ತಾತ ತೋಟ ಮಾರಿದರು ಎನ್ನು ಸುದ್ದಿ ಹೇಳಿದಳು ಅಮ್ಮ. ಅಜ್ಜಿಯೂ ಇಲ್ಲ ತೂಗುಮಂಚವೂ ಇಲ್ಲ...