ಸೋಮವಾರ, ಮೇ 21, 2012

ಥ್ರೀ ಡಿ ನೋ ಡಿ!ಬೆಂಗಳೂರಿಗೆ ಬಂದವರನ್ನು ಲಾಲ್ ಬಾಗು ಕಬ್ಬನ್ ಪಾರ್ಕು ವಿಧಾನಸೌಧ ನೋಡಲು ಕರೆದುಕೊಂಡು ಹೋಗೋದು ಹಳೆ ಜಮಾನದ ಮಾತಾಯಿತು. ಈಗೇನಿದ್ದರೂ ಮಾಲ್ ಗಳು, ಮೆಟ್ರೋ, ಐಪಿಎಲ್ ಮ್ಯಾಚುಗಳು ಇತ್ಯಾದಿ. ಇದೇ ಸಾಲಲ್ಲಿ ಬರೋದು ಸಿನಿಮಾ ಥೇಟರುಗಳು. ಸಿನಿಮಾ ಯುರೋಪಾ, ಗೋಲ್ಡ್ ಕ್ಲಾಸ್ ನ ಸೋಫಾ ಸೀಟುಗಳು ಪ್ರೇಕ್ಷಣೀಯ ಸ್ಥಳಗಳ ಹಾಗೇ ಆಗಿವೆ. ಈಗೊಂದು ವಾರದ ಕೆಳಗೆ ನೆಂಟರೊಬ್ಬರು ಊರಿಂದ ಬಂದಿದ್ದರು. ನಾನು ಅವರನ್ನ ಕರೆದುಕೊಂಡು, ದಿ ಅವೆಂಜರ್ಸ್ ಸಿನಿಮಾ ನೋಡಲು ಹೋದೆ. ಮಾಲ್, ಥಿಯೇಟರನ್ನು ತೋರಿಸೋದರ ಜೊತೆಗೆ ಥ್ರೀಡಿ ಸಿನಿಮಾದ ಹೊಸ ರೋಮಾಂಚನವೂ ಅವರಿಗೆ ಉಂಟಾಗಲಿ ಅನ್ನೋದು ನನ್ನ ಉದ್ದೇಶವಾಗಿತ್ತು. ಕನ್ನಡಕ ಏರಿಸಿ ಕೂತ ಅವರು, ಇಂಗ್ಲೀಷ್ ಭಾಷೆ ಅಷ್ಟೇನೂ ಅರ್ಥವಾಗದಿದ್ದರೂ, ಸಿನಿಮಾವನ್ನು ಖುಷಿ ಪಟ್ಟು ನೋಡಿದರು. ಎಲ್ಲೆಲ್ಲಿಂದಲೋ ಹಾರಿ ಬರುವ ಬಾಂಬುಗಳು, ನಮ್ಮ ಪಕ್ಕದಲ್ಲೇ ನಡೆದಂತೆ ಅನ್ನಿಸೋ ಹಲ್ಕು, ಐರನ್ ಮ್ಯಾನ್ ರ ಹೊಡೆದಾಟಗಳು ಎಲ್ಲರಂತೆಯೇ ಅವರಿಗೂ ಮಜಾ ಅನ್ನಿಸಿದವು. ಕೊನೆಯಲ್ಲಿ ಮಾತ್ರ, “ಈ ಕನ್ನಡಕ ಹಾಕ್ಕಂಡು ಸಿನಿಮಾ ನೋಡದು ಸ್ವಲ್ಪ್ ರಗಳೆ ಮಾರಾಯ, ಬಿಟ್ರೆ ಉಳ್ದಿದ್ದೆಲ್ಲ ಸೂಪರು” ಅಂದರು. ನಂಗೂ ಹಾಗೇ ಅನ್ನಿಸಿದ್ದೇನೂ ಸುಳ್ಳಲ್ಲ. 

ಸಾಮಾನ್ಯ ಸಿನಿಮಾಗಳಲ್ಲಿ ಕಾಣಸಿಗದ “ಡೆಪ್ತ್” ಅನ್ನೋ ಮೂರನೇ ಆಯಾಮವನ್ನು ನೀಡಿ, ವೀಕ್ಷಕರಿಗೆ ಹೊಸ ಅನುಭೂತಿಯನ್ನು ನೀಡುವುದು ಥ್ರೀಡಿಯ ಹೆಚ್ಚುಗಾರಿಕೆ. ಟು-ಡಿ ಸಿನಿಮಾಗಳಲ್ಲಿ ಅಥವಾ ಸಾಮಾನ್ಯ ಸಿನಿಮಾಗಳನ್ನು ನೋಡುವಾಗ ನಮಗೆ ಅಲ್ಲಿನ ಪರಿಸರದ ಅಥವಾ ಪಾತ್ರಗಳ ಮಧ್ಯೆ ಇರುವ ಅಂತರದ ಅರಿವು ಸ್ಪಷ್ಟವಾಗಿ ಆಗುವುದಿಲ್ಲ. ಹೀರೋ ಒಂದು ಬಿಲ್ಡಿಂಗ್ ನಿಂದ ಮತ್ತೊಂದು ಬಿಲ್ಡಿಂಗ್ ಛಾವಣಿಗೆ ಹಾರೋದು ಸಾಮಾನ್ಯ ಸಿನಿಮಾದಲ್ಲಿ ವಿಶೇಷವಾಗಿ ಕಾಣದು. ಅದೇ ಥ್ರೀಡಿ ಸಿನಿಮಾ, ಆ ಎರಡು ಕಟ್ಟಡಗಳ ಮಧ್ಯೆ ಇರುವ ಅಗಾಧ ಕಂದಕವನ್ನು ನಮ್ಮ ಅನುಭವಕ್ಕೆ “ಕಾಣಿಸಿ” ವೀಕ್ಷಕನನ್ನು ಬೆಚ್ಚಿ ಬೀಳುವಂತೆ ಮಾಡುತ್ತದೆ.  ಈ ಹೊಸ ಆಯಾಮದ ಸೇರ್ಪಡೆಯಿಂದಾಗಿ ನೋಡುಗರಿಗೆ ಚಿತ್ರ ಮತ್ತಷ್ಟು ಆಪ್ತವಾಗುತ್ತದೆ. ಪರದೆಯಲ್ಲಿ ನಡೆಯುತ್ತಿರುವ ಸಿನಿಮಾ, ತಮ್ಮೆದುರಿಗೇ ನಡೆಯುತ್ತಿದೆ ಎನ್ನುವಂತೆ ಕಾಣುತ್ತದೆ. ಅಗಲ ಎತ್ತರಗಳ ಜೊತೆಗೆ ದೃಶ್ಯದ ಡೆಪ್ತ್ ನ ಅರಿವು ಸಮರ್ಪಕವಾಗಿ ಆಗುವುದೇ ಥ್ರೀಡಿಯ ವಿಶೇಷತೆ. 

ಥ್ರೀಡಿ ಸಿನಿಮಾ ಮಾಡುವ ಮೊದಲ ಪ್ರಯತ್ನ ನಡೆದಿದ್ದು ೧೯೧೫ರಷ್ಟು ಹಿಂದೆ.ಅದಕ್ಕೂ ಹಿಂದೆ ೧೮೯೩ರಲ್ಲೇ ಇಂಗ್ಲೆಂಡ್ ನ ಚಲನಚಿತ್ರ ಜಗತ್ತಿನ ದೊಡ್ಡ ಹೆಸರು ಎನಿಸಿಕೊಂಡಿದ್ದ ವಿಲಿಯಮ್ ಫ಼್ರೈಸ್ ಗ್ರೀನ್ ಥ್ರೀಡಿಗಾಗಿ ಪೇಟೆಂಟ್ ಸಲ್ಲಿಸಿದ್ದ. ದುರದೃಷ್ಟವಶಾತ್ ಆತನ ತಂತಜ್ಞಾನ ವಿಫಲವಾಯಿತು. ಮುಂದೆ ೧೯೧೫ರಲ್ಲಿ ಎಡ್ವಿನ್ ಎಸ್ ಪೋರ್ಟರ್  ಥ್ರೀಡಿ ದೃಶ್ಯಾವಳಿಯನ್ನು ವೀಕ್ಷಕರಿಗೆ ಸಮರ್ಪಕವಾಗಿ ತೋರಿಸಿ ಯಶಸ್ಸು ಗಳಿಸಿದ. ಆದರೆ ನಿಜವಾಗಲೂ ಥ್ರೀಡಿ ಯುಗ ಅಂತ ಆರಂಭವಾಗಿದ್ದು ೧೯೫೦ರ ದಶಕದಿಂದ. 

ಅಲ್ಲಿಯತನಕ ಅಲ್ಲೊಂದು ಇಲ್ಲೊಂದು ಥ್ರೀಡಿ ಚಿತ್ರ ನಿರ್ಮಾಣಗೊಂಡಿದ್ದರೂ, ಆನಂತರ ಸಾಲು ಸಾಲಾಗಿ ಥ್ರೀಡಿ ಚಿತ್ರಗಳು ಪಾಶ್ಚಾತ್ಯ ದೇಶಗಳಲ್ಲಿ ಬಿಡುಗಡೆಗೊಂಡವು. ಬ್ವಾನಾ ಡೆವಿಲ್, ಮ್ಯಾನ್ ಇನ್ ದ ಡಾರ್ಕ್, ಹೌಸ್ ಆಫ್ ವ್ಯಾಕ್ಸ್ ಮುಂತಾದ ಚಿತ್ರಗಳು ಥ್ರೀಡಿ ಮೋಡಿ ಮಾಡಿದವು. ವಾರ್ನರ್ ಬ್ರದರ್ಸ್, ಕೊಲಂಬಿಯಾದಂತಹ ಚಿತ್ರನಿರ್ಮಾಣ ಸಂಸ್ಥೆಗಳು ಥ್ರೀಡಿ ಚಿತ್ರಗಳ ನಿರ್ಮಾಣದಲ್ಲಿ ತಮ್ಮನ್ನ ತೊಡಗಿಸಿಕೊಂಡವು. ಆದರೆ ಥ್ರೀಡಿ ಚಿತ್ರ ನಿರ್ಮಾಣ ಆಗ ನಿಜಕ್ಕೂ ಕಷ್ಟದ್ದಾಗಿತ್ತು. ಎರಡೆರಡು ರೀಲುಗಳನ್ನ ಒಟ್ಟೊಟ್ಟಿಗೆ ಪ್ರದರ್ಶಿಸಿ, ಥ್ರೀಡಿ ಅನುಭೂತಿ ನೀಡಬೇಕಿತ್ತು. ಒಂದು ರೀಲು ಕೊಂಚ ಮುಂದೋಡಿದರೂ, ಚಿತ್ರ ವೀಕ್ಷಣೆ ಅಸಾಧ್ಯವಾಗುತ್ತಿತ್ತು. ಈ ಕಾರಣಗಳಿಂದ ನಂತರದ ದಿನಗಳಲ್ಲಿ ಥ್ರೀಡಿ ಸಿನಿಮಾ ನಿರ್ಮಾಣ ಕಡಿಮೆಯಾಯಿತು. ಮುಂದೆ ಒಂದೇ ರೋಲ್ ನ ಮೇಲೆ ಎರಡು ಚಿತ್ರಗಳನ್ನ ಅಚ್ಚು ಹಾಕಿಸುವ ಸ್ಪೇಸ್ ವಿಶನ್ ಥ್ರೀಡಿ ಎನ್ನುವ ತಂತ್ರಜ್ಞಾನ ಬಂದು, ಥ್ರೀಡಿ ಮೇಕಿಂಗ್ ಕೊಂಚ ಸುಲಭವಾಯಿತು. ಅಲ್ಲಿಂದ ಮುಂದೆ ಥ್ರೀಡಿಯ ನಿರ್ಮಾಣ ಮತ್ತಷ್ಟು ಸರಳಗೊಂಡಿತು. ಐಮಾಕ್ಸ್ ಪ್ರೊಡಕ್ಷನ್ಸ್ ಎನ್ನುವ ಸಂಸ್ಥೆ, ಥ್ರೀಡಿಯನ್ನು ಮತ್ತಷ್ಟು ಸುಲಭ ಮಾಡಿದ್ದಲ್ಲದೇ, ಹಲ ಥ್ರೀಡಿ ಸಿನಿಮಾಗಳನ್ನ ನಿರ್ಮಿಸಿತು. ಇಂದು ಐಮಾಕ್ಸ್, ಥ್ರೀಡಿ ಜಗತ್ತಿನ ದಿಗ್ಗಜ ಸಂಸ್ಥೆಗಳಲ್ಲಿ ಒಂದು. ಜಗತ್ತಿನಾದ್ಯಂತ ಹಲವು ಥ್ರೀಡಿ ಥಿಯೇಟರ್ ಗಳನ್ನ ಐಮಾಕ್ಸ್ ಹೊಂದಿದೆ. 

ಇನ್ನು ಕಳೆದ ಎರಡು ದಶಕಗಳಲ್ಲಂತೂ ಯದ್ವಾ ತದ್ವಾ ಥ್ರೀಡಿ ಸಿನಿಮಾಗಳು ಬಿಡುಗಡೆಗೊಂಡಿವೆ. ಅದರಲ್ಲೂ ಕಳೆದ ಎರಡು ವರ್ಷಗಳಲ್ಲೇ ಜಗತ್ತಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ಥ್ರೀಡಿ ಸಿನಿಮಾಗಳು ತೆರೆ ಕಂಡಿವೆ ಎಂದರೆ, ಮೂರನೇ ಆಯಾಮದ ಪ್ರಭಾವ ಯಾವ ರೀತಿ ಆಗುತ್ತಿದೆ ಅನ್ನುವುದನ್ನ ಯೋಚಿಸಬಹುದು. ಪ್ರಾಯಶ: ಬರಬರುತ್ತ ಎಲ್ಲ ಸಿನಿಮಾಗಳನ್ನೂ ಥ್ರೀಡಿ ಮಾಡಿಬಿಡುತ್ತಾರೋ ಎಂಬ ಅನುಮಾನವೂ ಬರ್ತಿದೆ. ಈ ವರ್ಷ ಕೆಲ ಬಹು ನಿರೀಕ್ಷಿತ ಥ್ರೀಡಿ ಚಿತ್ರಗಳು ಬಿಡುಗಡೆಗೆ ಕಾದಿವೆ. ಕ್ರಿಶ್ 2, ಜೋಕರ್, ದಿ ಅಮೇಝಿಂಗ್ ಸ್ಪೈಡರ್ ಮ್ಯಾನ್,  ಮೆನ್ ಇನ್ ಬ್ಲಾಕ್ 3, ಸ್ಟೆಪ್ ಅಪ್ 4  ಈ ಎಲ್ಲ ಚಿತ್ರಗಳು ಸದ್ಯಕ್ಕೆ ಮೇಕಿಂಗ್ ಹಂತದಲ್ಲಿವೆ. ಹೃತಿಕ್ ಅಭಿನಯದ ಕ್ರಿಶ್, ಅಕ್ಷಯ್ ಕುಮಾರ್ ನ ಜೋಕರ್ ಬಾಲಿವುಡ್ ಚಿತ್ರಗಳಾದರೆ ಉಳಿದವು ಹಾಲಿವುಡ್ ಚಿತ್ರಗಳು. ಪ್ರಾಯಶ: ಹೆಚ್ಚಿನ ಎಲ್ಲ ಹಾಲಿವುಡ್ ಚಿತ್ರಗಳ ಸೀಕ್ವೆಲ್ ಗಳು, ಅಂದರೆ ಮುಂದಿನ ಭಾಗಗಳು ಥ್ರೀಡಿಯಲ್ಲೇ ಬರುತ್ತಿವೆ. ಅನಿಮೇಷನ್ ಚಿತ್ರಗಳಂತೂ ಈಗ ಥ್ರೀಡಿಯನ್ನೇ ನೆಚ್ಚಿಕೊಂಡುಬಿಟ್ಟಿವೆ, ಐಸ್ ಏಜ್, ಕಾರ್ಸ್, ಮಡಗಾಸ್ಕರ್ ಮುಂತಾದ ಪ್ರಸಿದ್ಧ ಅನಿಮೇಷನ್ ಸಿನಿಮಾ ಸರಣಿಗಳ ಮುಂದಿನ ಭಾಗಗಳೆಲ್ಲ ಥ್ರೀಡಿ ರೂಪ ಪಡೆದುಕೊಳ್ಳುತ್ತಿವೆ. ಹಿಂದಿಯಲ್ಲಿ ಡೇಂಜರಸ್ ಇಷ್ಕ್, ರಾಝ್ 3, ಸಲ್ಮಾನ್ ಖಾನ್ ನ ಶೇರ್ ಖಾನ್ ಸಿನಿಮಾಗಳು ಥ್ರೀಡಿ ಬರುತ್ತಿದೆ. ಕನ್ನಡದಲ್ಲಿ ಕಠಾರಿವೀರ ಅದಾಗಲೇ ಥ್ರೀಡಿಯಲ್ಲಿ ಬಂದಾಗಿದೆ.ಇನ್ನಾವ ಹೊಸ ಸಿನಿಮಾ ಬರುವುದೋ ತಿಳಿಯದಾಗಿದೆ! 

ಥ್ರೀಡಿ ಸಿನಿಮಾಗಳನ್ನ ನಿರ್ಮಿಸೋದು ಒಂದು ಕಡೆಗಾದರೆ, ಥ್ರೀಡಿ ಸಿನಿಮಾಗಳ ಯಶಸ್ಸು, ಹಿಂದಿನ ಪ್ರಸಿದ್ಧ ಚಿತ್ರಗಳನ್ನು ಮತ್ತೆ ಹೊಸದಾಗಿ ಥ್ರೀಡಿ ಯಲ್ಲಿ ಬಿಡುಗಡೆ ಮಾಡುವ ಚಾಳಿಯನ್ನು ಹಾಲಿವುಡ್ ನಲ್ಲಿ ಹುಟ್ಟು ಹಾಕಿದೆ. ಜೇಮ್ಸ್ ಕ್ಯಾಮರೂನ್ ಟೈಟಾನಿಕ್ ಚಿತ್ರವನ್ನು ಆ ಹಡಗು ಮುಳುಗಿ ನೂರು ವರ್ಷವಾದ ನೆಪ ಇಟ್ಟುಕೊಂಡು ಥ್ರೀಡಿ ತೇಪೆ ಹಾಕಿ ಮತ್ತೆ ಬಿಡುಗಡೆ ಮಾಡಿದ, ಆದರೆ ಜಾಗತಿಕ ಸಿನಿಮಾದ ಆಲ್ ಟೈಮ್ ಬೆಸ್ಟ್ ಸಿನಿಮಾಗಳಲ್ಲಿ ಒಂದಾದ ಟೈಟಾನಿಕ್ ನ ಥ್ರೀಡಿ ಅವತರಣಿಕೆ ದಯನೀಯ ವೈಫಲ್ಯ ಕಂಡು, ಒಂದೆರಡು ವಾರಗಳಲ್ಲೇ ಥಿಯೇಟ್ರಲ್ಲಿ ಮುಳುಗಿತು, ಇಷ್ಟಾದರೂ ಜನಕ್ಕೆ ಹಳೇ ಸಿನಿಮಾಗಳನ್ನ ಮತ್ತೆ ಥ್ರೀಡಿಯಲ್ಲಿ ತರೋ ಚಟ ಬಿಟ್ಟಿಲ್ಲ. ಇನ್ನೇನು ಮುಂಬರುವ ದಿನಗಳಲ್ಲಿ ಜುರಾಸಿಕ್ ಪಾರ್ಕ್, ಫೈಂಡಿಗ್ ನಿಮೋ, ಲಯನ್ ಕಿಂಗ್ , ದಂತಹ ಪ್ರಸಿದ್ಧ ಸಿನಿಮಾಗಳು ಮತ್ತೆ ಥಿಯೇಟರ್ ನಲ್ಲಿ ಥ್ರೀಡಿ ರೂಪದಲ್ಲಿ ಕಾಣಿಸಿಕೊಳ್ಳಲಿವೆ. ಆದರೆ ಅದೇ ಜೇಮ್ಸ್ ಕ್ಯಾಮರೂನ್ ಸಿಕ್ಕ ಸಿಕ್ಕ ಚಿತ್ರಗಳನ್ನ ಥ್ರೀಡಿ ಮಾಡೋದನ್ನ ವಿರೋಧಿಸುತ್ತಾನೆ. ಆತನ ಪ್ರಕಾರ, ಬಹಳಷ್ಟು ಚಿತ್ರಗಳು ಇದೀಗ ಥ್ರೀಡಿ ಮಾಧ್ಯಮದಲ್ಲಿ ಮೂಡಿ ಬರುತ್ತಿವೆ, ಟಾಯ್ ಸ್ಟೋರಿ ಚಿತ್ರದ ಥ್ರೀಡಿ ಬದಲಾವಣೆಯ ನಂತರ ಹಿಂದೆ ಯಶಸ್ಸು ಕಂಡ ಹಳೆಯ ಚಿತ್ರಗಳನ್ನೆಲ್ಲ ಸಿನಿಮಾ ಜನ ಜನ ಥ್ರೀಡಿಗೆ  ಬದಲಾಯಿಸುತ್ತಿದ್ದಾರೆ. ಆದರೆ ಆ ರೀತಿ ಮೂಲ ಚಿತ್ರಗಳನ್ನು ಥ್ರೀಡಿ ಮಾಡುವವರು, ಒಂದು ಮುಖ್ಯ ಅಂಶ ಮರೆತುಬಿಟ್ಟಿದ್ದಾರೆ, ಅದೇನೆಂದರೆ ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದ ಪಾತ್ರಗಳು ಮತ್ತು ಕಥೆ ಹೃದಯಸ್ಪರ್ಶಿಯಾಗಿದ್ದರೆ ಮಾತ್ರ ಯಶಸ್ಸು ಸಾಧ್ಯ. ಇಲ್ಲವಾದರೆ, ಸುಮ್ಮನೇ ಥ್ರೀಡಿಗೆ ಕೆಟ್ಟ ಹೆಸರು ಅಷ್ಟೆ ಅನ್ನೋದು ಕ್ಯಾಮರೂನ್ ಅಭಿಪ್ರಾಯ. ಕ್ಯಾಮರೂನ್ ತಮ್ಮ ಸಿನಿಮಾ ಅವತಾರ್ ಅನ್ನು ಮೊದಲ ಹಂತದಿಂದಲೂ ಕೂಡ ಥ್ರೀ ಡಿ ತಂತ್ರಜ್ಞಾನದಲ್ಲೇ ಚಿತ್ರೀಕರಿಸಿದ್ದರು. ಕಳೆದೆರಡು ವರ್ಷದಲ್ಲಿ ಥ್ರೀಡಿ ಹವಾ ಹೆಚ್ಚೋಕೆ ಅವತಾರ್ ಸಿನಿಮಾ ನೇ ಕಾರಣ ಅಂದರೂ ತಪ್ಪಿಲ್ಲ! ಬಿಲಿಯನ್ ಗಟ್ಟಲೆ ಡಾಲರ್ ದುಡ್ಡು ಮಾಡಿದ ಈ ಸಿನಿಮಾ ಹಾಲಿವುಡ್ ನ ಹುಚ್ಚೆಬ್ಬಿಸಿತ್ತು.

ಥ್ರೀಡಿಯ ನಂತರ ಇದೀಗ,  ಫೋರ್ ಡಿ ಗಳೂ ಬರಲಾರಂಭಿಸಿವೆ. ಬೆಂಗಳೂರಿನ ಹಲವು ಮಲ್ಟಿ ಪ್ಲೆಕ್ಸ್ ಗಳಲ್ಲಿ ಈಗಾಗಲೇ ಹತ್ತಿಪ್ಪತ್ತು ನಿಮಿಷಗಳ ಪುಟಾನಿ ಫೋರ್ ಡಿ- ಫೈವ್ ಡಿ ಚಿತ್ರಗಳು ಪ್ರದರ್ಶನ ಕಾಣುತ್ತಿವೆ. ಚಿತ್ರದ ಸನ್ನಿವೇಶಕ್ಕೆ ತಕ್ಕ ಹಾಗೆ ಮೈಮೇಲೆ ತುಂತುರಾಗಿ ಬೀಳುವ ನೀರು, ಕಾಲ ಕೆಳಗೆ ಇಲಿ ಓಡಿದಂತಾಗೋದು, ಕುರ್ಚಿಗಳು ಅಲುಗುವ ಅನುಭವ ಫೋರ್ ಡಿ ಗಳಲ್ಲಿ ಆಗುತ್ತದೆ. ಇನ್ನೂ ಮುಂದುವರಿದು ಬರೋ ಸಿಕ್ಸ್ ಡಿ ಗಳಲ್ಲಿ ವಾಸನೆ ಕೂಡ ಬರತ್ತಂತೆ!
ಇನ್ನೀಗ ಮನೆಗಳಲ್ಲೇ ಕೂತು ಮೂರನೇ ಆಯಾಮದ ಮಜಾ ಅನುಭವಿಸೋಕೆ ಥ್ರೀಡಿ ಟೀವಿಗಳು ಕೂಡ ಮಾರುಕಟ್ಟೆಗೆ ಬಂದಿವೆ. ಅಲ್ಲದೇ ಜಾಗತಿಕ ಮಟ್ಟದಲ್ಲಿ ಹತ್ತಾರು ಟಿವಿ ಚಾನಲ್ ಗಳು ಕೂಡ ಥ್ರೀಡಿಯಲ್ಲಿ ಆರಂಭವಾಗಿದೆ. ಸಿನಿಮಾ ವಾಹಿನಿಗಳು, ಕ್ರೀಡಾ ವಾಹಿನಿಗಳು ಥ್ರೀಡಿ ಪ್ರಸಾರ ಆರಂಭಿಸಿವೆ. 

ಥ್ರೀಡಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳಿಂದಾಗಿ, ಅವುಗಳನ್ನ ನೋಡೋಕೆ ಕನ್ನಡಕ ಬೇಕಾಗುವುದಿಲ್ಲ. “ಆಟೋ ಸ್ಟ್ರೀರಿಯೋಸ್ಕೋಪಿಕ್” ತಂತ್ರಜ್ಞಾನದ ಮೂಲಕ ಕನ್ನಡಕದ ಕಿರಿಕಿರಿ ಇಲ್ಲದೇ ಟಿವಿ ನೋಡಬಹುದಂತೆ.. ಆದರೆ ಸದ್ಯಕ್ಕೆ ಭಾರತದಲ್ಲಿ ಯಾವುದೇ ಥ್ರೀಡಿ ಚಾನಲ್ಲು ಶುರುವಾಗುವ ಸುದ್ದಿಯಂತೂ ಇಲ್ಲ. ಇದ್ದಿದ್ದರೆ ಭಾರೀ ಮಜಾ ಆಗಿರೋದೇನೋ! ನಮ್ಮ ವಾಹಿನಿಗಳಲ್ಲಿ ಪ್ರಸಾರವಾಗುವ ಭಯಾನಕ ಮಾಟ ಮಂತ್ರಗಳ ಶೋ ಗಳು, ಬಿಲ್ಡಿಂಗ್ ತುದಿಯಿಂದ ಕುರ್ಚಿ ಎತ್ತೆಸೆಯೋ ಗಲಾಟೆಗಳು, ಸ್ಟುಡಿಯೋದಲ್ಲೇ ಕಿತ್ತಾಟ ಮಾಡಿಕೊಳ್ಳೋ ಅತ್ತೆ ಸೊಸೆಯರು ಇವನೆಲ್ಲ ಥ್ರೀಡಿ ಅನುಭೂತಿಯಲ್ಲಿ ನೋಡೋಕೆ ಆಗಿದ್ದಿದ್ದರೆ, ಥಿಯೇಟರ್ ಗೆ ಹೋಗಿ ಸಿನಿಮಾ ನೋಡೋ ಕಷ್ಟ ತಪ್ಪುತ್ತಿತ್ತು, ಅಲ್ವಾ?!
4 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಬಹಳ ಒಳ್ಳೆಯ ಮಾಹಿತಿಪೂರ್ಣ ಬರಹ. ಬರ್ತಾ ಬರ್ತಾ ತ್ರೀಡಿನೇ ಬೇಸಿಕ್ ಆಗೋಗತ್ತೇನೋ ಅಂತ ಭಯ ಆಗ್ತಿದೆ. ಹಾಗಾದ್ರೆ ಟಾಕೀಸಿನಲ್ಲಿ ಸಿನೆಮಾ ನೋಡೋದು ಬಿಡ್ಬೇಕಾಗತ್ತಷ್ಟೆ :)

Subrahmanya ಹೇಳಿದರು...

ಸಕತ್ತಾಗಿ ಬರ್ದೀದೀರಿ. ಇನ್ನು ಸಿಕ್ಸ್ ಡಿ ನಲ್ಲಿ ವಾಸನೆ ಕೂಡಾ ಬರುತ್ತಂತೆ ಅನ್ನೋದನ್ನು ಕೇಳಿ ಮುಜುಗರ ಆಗ್ತಿದೆ. ಏನೇನು ವಾಸನೆ ಬರಬಹುದೋ ಅಂತಾ !.

Parisarapremi ಹೇಳಿದರು...

nange chitrahimse 3D filmgaLu. yaake annu.

nanna kannaDakada mele 3d kannaDaka haakoLOdO, 3D kannaDakada mele nanna kannaDaka haakkoLOdO annOde doDDa samasye aagutte. erD cases allu uncomfortable feelingu!

neevellaa puNyavantru eraDu kaNNirOru. naalak kaNNirOrge heege!

prashasti ಹೇಳಿದರು...

ಸೂಪರಾಗಿತ್ತು ಕಣ್ರಿ. ಒಳ್ಳೇ ಮಾಹಿತಿಪೂರ್ಣ ಬರಹ.. ೩ಡಿ,೪ಡಿ, ೬ಡಿ ಬಗ್ಗೆ ಹೇಳಿದ್ರೆ. ೫ಡಿ ಅಂದ್ರೆ ಏನಂತ ಯಾಕೆ ಹೇಳ್ಲೆ ಇಲ್ಲ ? :-) :-)