ತೇರು ಎಳೆದಾಗಿದೆ
ಅರ್ಚಕರು ಹೊತ್ತಿದ್ದ ಉತ್ಸವ ಮೂರ್ತಿ
ಇಳಿದು ಮರಳಿದೆ ಗರ್ಭಗುಡಿಯ ಕತ್ತಲಿಗೆ
ಮುಗಿದಿದೆ ದೇವರ ಹೆಸರಿನ ಜಾತ್ರೆ
ಕಳಚುತ್ತಿದ್ದಾರೆ ಕಂಬದ ಮೇಲಿನ ಮೈಕು
ಬಾಡಿಗೆ ಬೆಳಕಿನ ಬಣ್ಣದ ಸರ
ಕೊನೆಯ ಐಸ್ಕ್ರೀಮು ಗಾಡಿಯೂ ಹೊರಟು
ಉಂಡೆಲೆಗಳನೂ ಎಸೆದ ಮೇಲೆ ಸಿಕ್ಕಿದೆ
ತೇರ ಬೀದಿಯ ಅಂಚಲ್ಲಿ ಕಾದ ಮಂದಿಯ ಬುಟ್ಟಿಗೆ ಒಂದಿಷ್ಟು ಅನ್ನ
ಜೊತೆಗೊಂದಿಷ್ಟು ಸಾರು ಸಾಂಬಾರು
ಇನ್ನೇನು ಹಳಸುವ ಪಲ್ಯ
ತಲೆಯ ಮೇಲೆ ಅನ್ನಬ್ರಹ್ಮನ ಹೊತ್ತು
ಹೊರಟಿದೆ ಹಸಿದ ಕಾಲುಗಳ
ಖಾಸಗಿ ಮೆರವಣಿಗೆ ಮನೆಯ ಕಡೆಗೆ
ಮೃಷ್ಟಾನ್ನದ ಕೊನೆಯ ಅಧಿಪತಿಗಳ
ಹೊಟ್ಟೆ ತುಂಬಿ ಉಳಿದ ಕೂಳು
ಈಚಲ ಚಾಪೆಗಂಟಿಕೊಂಡು ಒಣಗುತ್ತಿರುವ
ಇಳಿ ಮಧ್ಯಾಹ್ನ ಸೂರ್ಯನ ಪ್ರಭೆಗೂ
ಮೀರಿದ ಕಾಂತಿ ಸಂತೃಪ್ತ ಮುಖಗಳಲಿ ಪ್ರತಿಫಲನ
ಯಜಮಾನನಿಗೆ ಸಂಜೆ ಮತ್ತಿದೆ ಕೆಲಸ
ದೇವಳದ ಸಂಭ್ರಮ ಮುಗಿದಿಲ್ಲ ಇನ್ನೂ
ರಾತ್ರಿ ಪೂಜೆಗು ಮುನ್ನ
ಸುತ್ತ ನಾಲ್ಕೂರಿಗೆ ಕೇಳುವ ಸಿಡಿಮದ್ದು
ಆ ಕ್ಷಣ ಮಾಡುವ ಸದ್ದಿಗೆ ಅವನೆ ಮಾಲಿಕ
ನೆಮ್ಮದಿಯ ನಿದ್ದೆಗೆ ಸದ್ದು ಬೇಕಿದೆ.
ಬೆಳಗಾದರೆ ಬಿಗಿಗೊಳಿಸಬೇಕು ಡೋಲು
ಮಹಲ ಮನೆಯ ಮೋಜಿನ
ಮೇಜವಾನಿಗೂ ಮುನ್ನ ಕಡ್ಡಾಯವಾಗಿ
ಕೇಳಬೇಕಿದೆ ಇವರ ಕಡ್ಡಾಯಿ ದನಿ
ಮತ್ತೆ ಸಂಸಾರಕ್ಕಿಡೀ ಬಾಳೆತುಂಬ ಊಟ
ಸಂಪ್ರದಾಯದ ಹೆಸರಲಿ ಸೇರಿಸಿರುವ
ಕೂದಲು ಉಗುರುಗಳ ಹೆಕ್ಕಿ ಪಕ್ಕಕ್ಕಿಟ್ಟರೆ
ಇಳಿಯಬಹುದು ಗಂಟಲ ತುತ್ತು.
ಅರಸನ ಅನ್ನವನುಂಡು ನಡೆದರೆ ಮತ್ತೆ ನಾಳಿನ ಚಿಂತೆ
ಸತ್ತರಾದರೆ ಸುತ್ತಮುತ್ತ ಯಾರಾದರೂ
ತಮಟೆಗೆ ಕೆಲಸ ರಟ್ಟೆಗೆ ದುಡಿತ
ಬಲ್ಲವರು ಅನ್ನುವರು ಕಾನೂನು
ಹೀಗಿಲ್ಲ, ಇದಕ್ಕೆ ಅನುಮತಿಯಿಲ್ಲ ಹೀಗೆ ಬದುಕ
ಬೇಕಿಲ್ಲ , ನಿಷೇಧ ಜೈಲು ಅರ್ಥವಾಗದ ಮಾತು
ಯೋಜನೆಗಳೆಂಬ ತೂತುಕೊಡದ ನೀರು ಮನೆವರೆಗಿಲ್ಲ
ಬೆಳಕ ದಾರಿಯ ತೋರಿಸಲು
ಬಂದವಗೆ ತೆರಬೇಕಿದೆ ಸುಂಕ
ನಾಳಿನನ್ನಕೆ ದಿಕ್ಕು ತೋರದೆ ನಿನ್ನೆಯದೆ ಹಾದಿ
ಹಿಡಿಯುವಂತಾಗಿದೆ
ಇಷ್ಟೆಲ್ಲ ಆದರೂ ಕೊರಗಲಾದವರು ಅವರು
ಮಿಣುಕು ಕಂದೀಲಿನ ದೀಪದಲೂ
ನಕ್ಷತ್ರಗಳ ಹೊಳಪ ಹುಡುಕುವವರು.
ಕೊರಗುತ್ತಲೇ ಕೂತರೆ ಉಣಿಸಲು ಬರುವವರು ಯಾರು?
ಕಡ್ಡಾಯಿ: ಕೊರಗ ಸಮುದಾಯದವರು ಬಾರಿಸುವ ವಾದ್ಯದ ಹೆಸರು.
ಕವನಕ್ಕೊಂದು ಟಿಪ್ಪಣಿ:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ ಕೊರಗ ಸಮುದಾಯದ ಜೀವನ ಶೈಲಿಯ ಕುರಿತ ಕವನ ಇದು. ಇಂದಿಗೂ ಕೂಡ ಉಭಯ ಜಿಲ್ಲೆಗಳ ಬಹಳಷ್ಟು ಕಡೆಗಳಲ್ಲಿ ಕೊರಗ ಜನಾಂಗವನ್ನು ಬಹು ನಿಕೃಷ್ಟವಾದ ಜೀವನಪದ್ದತಿಗೆ ದೂಡಲಾಗಿದೆ. ಕಾನೂನಿನ ಅಭಯಹಸ್ತ ಇನ್ನೂ ಅವರನ್ನು ತಲುಪಿಲ್ಲ. ಸತ್ತವರ ಮನೆ ಮುಂದೆ ತಮಟೆ ಬಾರಿಸುವ ಕೆಲಸ ಕೊರಗರದು. ಶ್ರೀಮಂತರ ಮನೆಗಳ ಸೀಮಂತ ಇತ್ಯಾದಿ ಸಮಾರಂಭಗಳಲ್ಲಿ ಉಗುರು, ಕೂದಲು ತುಂಬಿದ ಅನ್ನವನ್ನ ಕೊರಗರಿಗೆ ನೀಡಲಾಗುತ್ತದೆ. ಉಂಡು ಹೆಚ್ಚಾಗಿ ಉಳಿದ ಅನ್ನವನ್ನ ಒಣಗಿಸಿ ಸಂಗ್ರಹಿಸಿಟ್ಟುಕೊಳ್ಳುವ ಅನಿವಾರ್ಯತೆ ಅವರದು. ದೇವಸ್ಥಾನಗಳ ಜಾತ್ರೆಗಳಲ್ಲಿ ಅಪಾಯಕಾರಿ "ಕದೊನಿ" ಎಂಬ ಸಿಡಿಮದ್ದು ಸಿಡಿಸುವ, ಕಂಬಳಗಳಲ್ಲಿ ಡೋಲು ಬಾರಿಸುವ ಕೆಲಸಗಳನ್ನ ಕೊರಗರು ಮಾಡುತ್ತಲೇ ಬಂದಿದ್ದಾರೆ. ಆದರೆ ಅವರಿಗೂ ಅದನ್ನೆಲ್ಲ ಮಾಡದೇ ವಿಧಿಯಿಲ್ಲ. ಬೇರೆ ಸಂಪಾದನೆಯಿಲ್ಲ. ಅವರನ್ನು ರಕ್ಷಿಸುವ ಕಾನೂನಿನ ಬಗ್ಗೆ ಮಾಹಿತಿ ಅವರಿಗಿನ್ನೂ ಸಮರ್ಪಕವಾಗಿ ತಲುಪಿಲ್ಲ. ಹೀಗಾಗಿ ಇನ್ನೂ ಈ ಮುಗ್ಧ ಜನರ ಶೋಷಣೆ ಮುಂದುವರಿದಿದೆ.
2 ಕಾಮೆಂಟ್‌ಗಳು:
ಅನೇಕ ದಿನಗಳ ಬಳಿಕ ಈ ಕಡೆ ಬಂದೆ, ಒಳ್ಳೆಯ ಕವನ. ಆದರೆ ಮೋರೆಗೆ ರಾಚುವ ಸತ್ಯ ಕಹಿಯಾಗಿದೆ.
chanda ide
ಕಾಮೆಂಟ್ ಪೋಸ್ಟ್ ಮಾಡಿ