ಕಳೆದ ಒಂದು-ಒಂದೂವರೆ ವರ್ಷಗಳಿಂದ ಲೂಸಿಯೂ ಸಿನಿಮಾದ ತಯಾರಿಯ ಬಗ್ಗೆ ಗಮನಿಸುತ್ತ ಬಂದಿದ್ದ ನನಗೆ ಆ ಸಿನಿಮಾ ಹೇಗಿರುತ್ತದೆ ಎಂಬ ಕುತೂಹಲ ಇದ್ದೇ ಇತ್ತು. ಆ ಸಿನಿಮಾ ರೂಪು ತಳೆಯುವ ಕಾಲದಿಂದಲೂ ಅದಕ್ಕೆ ಸಂಬಂಧಿಸಿದ ವರದಿಗಳನ್ನ, ಡೈರೆಕ್ಟರ್ ಪವನ್ ರ ವೆಬ್ ಸೈಟ್ ನೋಡುತ್ತಿದ್ದೆ. ಕೆಲ
ಬಾರಿ ತುಂಬ ಕುತೂಹಲ ಇಟ್ಟುಕೊಂಡಿರುವ ಸಿನಿಮಾ, ಕಾದಂಬರಿಗಳು ಆ ಭಾರಕ್ಕೇ ಕುಸಿದು ಹೋಗಿ, “ಛೇ,
ಇಷ್ಟೇನಾ” ಎಂದನಿಸುವಂತೆ ಮಾಡಿಬಿಡುತ್ತವೆ. ಲೂಸಿಯಾ ಬಗ್ಗೂ ಅಂಥದ್ದೇ ಒಂದು ಭಯ ಇತ್ತು ನನಗೆ.
ಆದರೆ ಸಿನಿಮಾ ಶುರುವಾಗಿ ಹತ್ತೇ ನಿಮಿಷಕ್ಕೇ ನನ್ನ ಎಲ್ಲ ಭಯ ದೂರವಾಯಿತು.
ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರ, ಕನ್ನಡ
ಚಿತ್ರರಂಗದ ಮಟ್ಟಿಗೆ ಹೊಸ ಪ್ರಯತ್ನ. ವಾಸ್ತವ ಮತ್ತು ಕನಸುಗಳ ನಡುವಿನ ಎರಡು ಕಥೆಗಳನ್ನ
ಹೆಣೆದಿರುವ ರೀತಿಯೇ ಅದ್ಭುತ. ಚಿತ್ರಕಥೆಗಾಗಿ ಪವನ್ ಬಹಳ ಶ್ರಮ ಪಟ್ಟಿದ್ದಾರೆ ಎಂಬುದು ಸ್ಪಷ್ಟ.
ಕನ್ನಡದ ವೀಕ್ಷಕರ ಮಟ್ಟಿಗೆ ಈ ಬಗೆಯ ಪ್ರಯೋಗ ಸ್ವಲ್ಪ ಕ್ಲಿಷ್ಟವೂ ಹೌದೇನೋ. ಆದರೂ ಇಂತಹದೊಂದು
ಕಥೆಯನ್ನ ತೆರೆಯ ಮೇಲೆ ತಂದಿದ್ದಕ್ಕೆ ಪವನ್ ಅಭಿನಂದನಾರ್ಹರು.
ನಿಕ್ಕಿ ಅನ್ನುವ ಥಿಯೇಟರ್ ನಲ್ಲಿ ಟಾರ್ಚ್ ಬಿಡೋ ಹುಡುಗ,
ನಿದ್ರೆ ಮಾಡೋಕೆ ಆಗದೇ ಇದ್ದಿದ್ದಕ್ಕೆ ಏನೆಲ್ಲ ಅವಸ್ಥೆ ಪಡಬೇಕಾಗುತ್ತದೆ ಎನ್ನುವುದು ಒನ್ ಲೈನರ್
ಕಥೆ ಅಂದುಕೊಂಡರೂ-ಇದರ ಹಿಂದಿರೋ ವಿಭಿನ್ನ ಆಯಾಮದ ಕಥೆ-ಚಿತ್ರಕಥೆ ವೀಕ್ಷಕರನ್ನ ಪದೇ ಪದೇ
ಅಚ್ಚರಿಗೊಳಿಸುತ್ತ ಸಾಗುತ್ತದೆ. ಅದರ ಮಧ್ಯೆ ನಡೆಯೋ ಪ್ರೀತಿ, ನಿಜಜೀವನದಲ್ಲಿ
ಸಾಧ್ಯವಿಲ್ಲದ್ದನ್ನ ಕನಸಿನಲ್ಲಿ ಸಾಕ್ಷಾತ್ಕಾರಗೊಳಿಸಿಕೊಳ್ಳುವ ಭ್ರಮೆ ಇವೆಲ್ಲವನ್ನ ಬಹಳ
ಸುಂದರವಾಗಿ ಪವನ್ ಕಟ್ಟಿಕೊಟ್ಟಿದ್ದಾರೆ. ಅಚ್ಯುತ ರಾವ್ ಅಭಿನಯ ಸೂಪರ್. ಶೃತಿ ಹರಿಹರನ್ ಕೂಡ
ಅಚ್ಚುಕಟ್ಟಾಗೇ ನಟಿಸಿದ್ದಾರೆ.ಪೋಷಕ ಪಾತ್ರಗಳಲ್ಲಿ ನಟಿಸಿದ ಇತರ ಕಲಾವಿದರ ನಟನೆ ಕೂಡ
ಸೊಗಸಾಗಿರುವುದು ಚಿತ್ರಕ್ಕೆ ಸಹಕಾರಿಯಾಗಿದೆ. ಪೂರ್ಣಚಂದ್ರ ತೇಜಸ್ವಿಯವರ ಸಂಗೀತ , ಸಿದ್ಧಾರ್ಥ್ ನುನಿ
ಛಾಯಾಗ್ರಹಣ ಚೆನ್ನಾಗಿದೆ. ಫೈವ್-ಡಿ ಕ್ಯಾಮರಾ ಬಳಸಿ ಈ
ಚಿತ್ರವನ್ನ ಚಿತ್ರೀಕರಿಸಲಾಗಿದ್ದು ಇಡೀ ಚಿತ್ರ ಬಣ್ಣಗಳಲ್ಲಿ ಅದ್ದಿ ತೆಗೆದಂತಿದೆ. ಎಡಿಟಿಂಗ್ ಈ ಚಿತ್ರದ
ಇನ್ನೊಂದು ಪ್ಲಸ್ ಪಾಯಿಂಟ್! ಇಂತಹ ಪ್ಯಾರಲಲ್ ಕಥೆ ಇರೋ ಸಿನಿಮಾಗಳಲ್ಲಿ ಎಡಿಟಿಂಗ್ ಬಹಳ ಮುಖ್ಯವಾಗುತ್ತದೆ.
ಲೂಸಿಯಾ ಅನ್ನೋದೆ ಯಾಕೆ ಚಿತ್ರದ ಹೆಸರು ಎನ್ನೋ ಡೌಟ್
ಇದ್ದೋರಿಗೆ ಚಿತ್ರ ಶುರುವಾಗಿ ಕಾಲು ಗಂಟೆಲಿ ಸಮಸ್ಯೆ ಬಗೆಹರಿಯುತ್ತದೆ. ಚಿತ್ರದ ಉತ್ತರಾರ್ಧ ಕೊಂಚ
ಸ್ಲೋ ಅನ್ನಿಸಿದರೂ, ವೀಕ್ಷಕರಲ್ಲಿ ಸಿನಿಮಾ ಮಂದಿರದಿಂದ ಹೊರ ಹೋದ ಮೇಲೆ ಅವರಲ್ಲಿ ಯಾವುದೇ
ಅನುಮಾನಗಳು ಉಳಿಯಬಾರದು ಎಂಬ ಕಾರಣಕ್ಕೆ, ಎಚ್ಚರಿಕೆಯಿಂದ ಎಲ್ಲ ಸಿಕ್ಕುಗಳನ್ನ ಬಿಡಿಸಲು, ಪವನ್
ಬೇಕೆಂದೇ ಸಮಯ ತೆಗೆದುಕೊಂಡಿದ್ದಾರೆ ಅನ್ನಿಸಿತು. ಕನ್ನಡದ ಮಟ್ಟಿಗೆ ಈ ರೀತಿಯ ಸೈಕಲಾಜಿಕಲ್
ಥ್ರಿಲ್ಲರ್ ಕಥೆ ಹೊಚ್ಚ ಹೊಸದು. ಹೀಗಾಗಿ ಇಂಟರವಲ್ ನಂತರ ಕೊಂಚ ನಿಧಾನಗತಿಯ ಪಯಣ.
ಈ ೨೦೧೩ ರ ಸಾಲಿನಲ್ಲಿ ಕನ್ನಡ ಚಿತ್ರರಂಗಕ್ಕೆ ಒಂದಿಷ್ಟು
ಹೊಸ ಜಾಡಿನ ಚಿತ್ರಗಳು ಬರುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಯಶಸ್ಸು ಕಾಣುತ್ತಿರುವ
ಚಿತ್ರಗಳ ಸಂಖ್ಯೆಯೂ ಹೆಚ್ಚೇ ಇದೆ. ಜನರೇ ದುಡ್ಡು
ಹಾಕಿ ನಿರ್ಮಿಸಿರುವ ಈ ಚಿತ್ರ ಯಶಸ್ಸು ಕಂಡರೆ, ಮುಂಬರುವ ದಿನಗಳಲ್ಲಿ ಈ ಮಾದರಿಯನ್ನ
ಅನುಸರಿಸುವವರ ಸಂಖ್ಯೆಯೂ ಹೆಚ್ಚಬಹುದೋ ಏನೋ! ಮೆದುಳನ್ನ ಮನೇಲಿಟ್ಟು ಬಂದು ಸಿನಿಮಾ ನೋಡಿ ಎಂದು
ಘಂಟಾಘೋಷವಾಗಿ ಹೇಳೋರು ಹುಟ್ಟಿಕೊಂಡಿರೋ ಈ ಕಾಲದಲ್ಲಿ ಮೆದುಳಿಗೆ ಕೆಲಸ ಕೊಡೋ ಸಿನಿಮಾ
ಮಾಡಿದ್ದಾರೆ ಪವನ್. ಹೋಗಿ ನೋಡ್ಕೊಂಡು ಬನ್ನಿ. ನಿರಾಸೆ ಆಗಲ್ಲ.
ರೇಟಿಂಗ್: 4 Stars
4 ಕಾಮೆಂಟ್ಗಳು:
nice review :-)
oLLE starsu..
naanu nODbEku. aadre yaavaaga aaguttO gottilla..
ಧನ್ಯವಾದ. :)
ಕಾಮೆಂಟ್ ಪೋಸ್ಟ್ ಮಾಡಿ