ಮೊದಲ ಬಾರಿಗೆ ಮುಂಬೈ
ನಗರಕ್ಕೆ ಹೋಗಿದ್ದಾಗ
ಅಲ್ಲಿನ ರೈಲು
ಜಾಲವನ್ನು ನೋಡಿ
ಹೊಟ್ಟೆ ಉರಿದುಕೊಂಡಿದ್ದೆ. ಎಲ್ಲಿಂದ
ಎಲ್ಲಿಗೆ ಬೇಕಾದರೂ
ಲೀಲಾಜಾಲವಾಗಿ ಹೋಗಬಹುದಾದ
ರೈಲ್ವೇ ವ್ಯವಸ್ಥೆ
ಅಲ್ಲಿಯದು. ಬೆಳಗ್ಗೆ
ಸಂಜೆಯ ನೂಕುನುಗ್ಗಲುಗಳನ್ನು ಹೊರತುಪಡಿಸಿದರೆ, ಟ್ರಾಫಿಕ್
ಜಾಮಿನ ಕಿರಿಕಿರಿ
ಇಲ್ಲದೇ ಆರಾಮಾಗಿ
ಪ್ರಯಾಣಿಸುವ ಸೌಭಾಗ್ಯ
ಅಲ್ಲಿನ ಮಂದಿಗೆ
ಎಂದು ನನಗೆ
ಹೊಟ್ಟೆಕಿಚ್ಚೇ ಆಗಿತ್ತು.ಯಾಕೆಂದರೆ ನಾನು
ಬೆಂಗಳೂರು ಮಹಾನಗರಿಯಲ್ಲಿ
ಓಡಾಡಿಕೊಂಡಿರುವವನು. ಇಲ್ಲಿನ
ರಸ್ತೆಕ್ರೋಧದ ಬಗ್ಗೆ
ಹೇಳಿ ಪ್ರಯೋಜನವಿಲ್ಲ.
ಅನುಭವಿಸಿದವರಿಗೆ ವಿವರಣೆಯ
ಅಗತ್ಯವಿಲ್ಲ, ಅನುಭವಿಸದೇ
ಇರುವವರಿಗೆ ಅರ್ಥವಾಗುವುದಿಲ್ಲ. ಇಲ್ಲಿನ
ಟ್ರಾಫಿಕ್ಕಿನ ಹೊಡೆತಕ್ಕೆ
ಹೈರಾಣಾಗಿದ್ದ ನನಗೆ,
ಅಪರೂಪಕ್ಕೆ ನೋಡಿದ
ಬೊಂಬಾಯಿ ರೈಲುಗಳು
ಚಂದ ಕಂಡಿದ್ದವು.
ಮುಂಬೈ ರೈಲ್ವೇ
ವ್ಯವಸ್ಥೆಯನ್ನೇ ನೋಡಿಯೇ
ನನ್ನ ಹಣೇಬರ
ಹಳಿದುಕೊಂಡಿದ್ದ ನಾನು
ದೆಹಲಿಯ ಮೆಟ್ರೋ
ನೋಡಿದ ಮೇಲಂತೂ
ಜನುಮವೇ ವ್ಯರ್ಥ
ಎಂಬ ತೀರ್ಮಾನಕ್ಕೆ
ಬಂದಿದ್ದೆ. ಹವಾನಿಯಂತ್ರಿತ
ಬೋಗಿಗಳೂ, ಸ್ವಚ್ಛ
ರೈಲು ನಿಲ್ದಾಣಗಳು,
ಶಿಸ್ತಿನ ವ್ಯವಸ್ಥೆ,
ಸದ್ದೇ ಇಲ್ಲದೇ
ಸಾಗಿ ಹೋಗುವ
ರೈಲುಗಳನ್ನೂ ನೋಡಿ
ಬೆಂಗಳೂರಿನ ನಸೀಬನ್ನೂ
ನನ್ನ ಗ್ರಹಚಾರವನ್ನೂ
ಆಡಿಕೊಂಡು ಸುಮ್ಮನಾಗಿದ್ದಾಗಿತ್ತು. ಇಲ್ಲಿಯೂ
ಅದೇನೋ ಮೆಟ್ರೋ
ಇವತ್ತು ಶುರು
ನಾಳೆ ಶುರು
ಎಂಬ ಮಾತು
ವರುಷಗಟ್ಟಲೆಯಿಂದ ಕೇಳಿಕೊಂಡು
ಬಂದಿದ್ದು ಹೌದಾದರೂ,
ಅದರ ಲಕ್ಷಣವೇನೂ
ಇರಲಿಲ್ಲ ಕೂಡ.
ಸಿಟಿಯ ತುಂಬ
ಅಗೆದಿಟ್ಟ ಹೊಂಡಗಳೂ,
ಅರೆಬರೆ ನಿಂತ
ಕಂಬಗಳೂ ನಮ್ಮ
ದೈನಿಕದ ಭಾಗವಾಗಿದ್ದವು.
ಮುಂದೆ ಅದ್ಯಾವ
ಕಾಲದಲ್ಲೋ ಆಗತ್ತೆ
ಬಿಡು ಎಂಬ
ಉಡಾಫೆಯಲ್ಲಿಯೇ ನಾನೂ
ಇದ್ದೆ.
ಆದರೆ ಕೊನೆಗೊಂದು ದಿನ,ಬೆಂಗಳೂರಿನಲ್ಲೂ ಮೆಟ್ರೋ
ಆರಂಭ ಎನ್ನುವ
ಗೌಜು ಕೇಳಿಬಂತು.ಆದರೆ ಅಲ್ಲೂ,
ತುಂಬ ವಿಶೇಷ
ಬದಲಾವಣೆ ಏನೂ
ಆಗಲಿಲ್ಲ. ಪ್ರಯೋಗಾರ್ಥವಾಗಿ ಇದ್ದ
ಹಾಗೆ, ಕೇವಲ
ಒಂದು ಪುಟ್ಟ
ದೂರವನ್ನು ಮಾತ್ರ
ಕ್ರಮಿಸುವ ಆ
ತುಂಡು ಪಯಣ
ನನಗಂತೂ ಯಾವ
ಲಾಭವನ್ನೂ ಮಾಡಿರಲಿಲ್ಲ.ಅದೂ ಅಲ್ಲದೇ
ಅದೊಂದು ಚಲಿಸುವ
ಝೂನಂತೆ ಕಾಣಿಸುತ್ತಿತ್ತು ಬೇರೆ.ಕೆಲಸ ಕಾರ್ಯಗಳಿಗೆಗಾಗಿ ಪ್ರಯಾಣ
ಮಾಡುವವರಿಗಿಂತ,ಮೆಟ್ರೋದ
ಅಂದ ಚಂದ
ನೋಡಲು ಬರುವವರೇ
ಜಾಸ್ತಿ!ಮದುವೆ
ಮನೆಯಲ್ಲಿ ಆಕಡೆ
ಈಕಡೆ ಲಕಲಕ
ಓಡಾಡುವವರ ಹಾಗೆ
ರೈಲು ತುಂಬ
ಅದರ ಕಂಬ
ಬಾಗಿಲು ಮುಟ್ಟಿ
ನೋಡುತ್ತ ಸೆಲ್ಫೀ
ತೆಗೆದುಕೊಳ್ಳುತ್ತ ಓಡಾಡುವವರ
ಸಂಖ್ಯೆಯೇ ಹೆಚ್ಚು.
ಊರಿಂದ ಬಂದ
ಅಜ್ಜ,ಅಜ್ಜಿ
ಅಪ್ಪ ಅಮ್ಮಂದಿರನ್ನ
ಪ್ರಾಯಶಃ ಅರ್ಧಕ್ಕರ್ಧ
ಬೆಂಗಳೂರಿನ ಮಂದಿ
ಕರೆದುಕೊಂಡು ಬಂದು
ತೋರಿಸುವ ಪ್ರೇಕ್ಷಣೀಯ
ಸ್ಥಳವಾಗಿ ಹೋಗಿತ್ತು
ಎಂಜೀರೋಡಿನ ಮೆಟ್ರೋ
ನಿಲ್ದಾಣ, ಪಾಪ!
ಇನ್ನೇನು ಅದನ್ನು
ಯುನೆಸ್ಕೋ ವಿಶ್ವ
ಪರಂಪರೆಯ ಪ್ರವಾಸ
ತಾಣಗಳ ಪಟ್ಟಿಗೆ
ಸೇರಿಸುತ್ತದೆಯೇನೋ ಎನ್ನುವ
ಹೊತ್ತಿಗೆ ಪೂರ್ಣ
ಪ್ರಮಾಣದ ಸಂಚಾರ
ಆರಂಭವಾಯಿತು, ಪುಣ್ಯ!
ಬಹಿರಂಗ ಪ್ರದರ್ಶನ
ಮುಗಿದು, ಅಂತರಂಗ
ದರ್ಶನ ಶುರುವಾಗಿದ್ದು
ಹೀಗೆ.
ನಾನು ಮೆಟ್ರೋದಲ್ಲೀಗ ನಿತ್ಯ
ಪಯಣಿಗ. ನನ್ನ
ಮನೆಯೂ, ಆಫೀಸೂ
ಮೆಟ್ರೋ ಸ್ಟೇಷನ್ನುಗಳ
ಸಮೀಪವೇ ಇರುವುದರಿಂದ
ಅದೀಗ ನನ್ನ
ದಿನಚರಿಯ ಜೊತೆಗೆ
ಸೇರಿಕೊಂಡಿವೆ. ಬೆಂಗಳೂರು
ನಗರದ ಬೇರೆ
ಬೇರೆ ತುದಿಗಳನ್ನು
ಸೇರಿಸುವ ಈ
ಸಂಚಾರಜಾಲದ ಭಾಗವೇ
ನಾನೂ ಆಗಿದ್ದೇನೆ.
ಹೊಸ ಕೆಲಸವೊಂದಕ್ಕೆ
ಸೇರಿಕೊಂಡು ನಿತ್ಯವೂ
ಇಪ್ಪತ್ತಿಪ್ಪತ್ತು ಕಿಲೋಮೀಟರು
ಕಾರಲ್ಲಿ ಹೋಗಿಬರಬೇಕಾದ
ಪರಿಸ್ಥಿತಿ ನನ್ನದಾಗಿತ್ತು.ಅದೇ ತಿಂಗಳೊಪ್ಪತ್ತಲ್ಲೇ ಶುರುವಾದ
ಮೆಟ್ರೋ, ಬೀಪಿಶುಗರುಗಳೂ
ಅವುಗಳ ಜೊತೆಗೆ
ಉಚಿತವಾಗಿ ಬರುವ
ಇನ್ನಿತರ ಕಾಯಿಲೆಗಳಿಂದ
ನನ್ನನ್ನು ದೂರವಿಟ್ಟಿದೆ
ಅನ್ನುವುದರ ಬಗ್ಗೆ
ಯಾವ ಅನುಮಾನವೂ
ಇಲ್ಲ.ಇಲ್ಲವಾದರೆ
ಅಲ್ಲಿಯ ತನಕ
ನಿತ್ಯ ರಾತ್ರಿ
ಮನೆಗೆ ಬರುವ
ಹೊತ್ತಿಗೆ ಯಾರನ್ನಾದರೂ
ಬೈದುಕೊಂಡು ಬರುವುದೋ,
ಕಾರಿನ ಹಿಂದೆಯೋ-ಪಕ್ಕದಲ್ಲೋ ಆಗಿರುವ
ತರಚು ಗಾಯಗಳನ್ನು
ನೋಡುತ್ತ ಮನಸೋ
ಇಚ್ಛೆ ಶಾಪ
ಹಾಕುವುದೋ ಮಾಮೂಲಾಗಿ
ಹೋಗಿತ್ತು. ಮೆಟ್ರೋ
ಶುರುವಾದ ಮೇಲೆ
ಆಫೀಸಿಗೆ ಕಾರು
ತಗೊಂಡು ಹೋಗಿದ್ದರೆ
ಕೇಳಿ! ಎರಡು
ತಾಸು ಬೇಕಾಗುವ
ಪ್ರಯಾಣಕ್ಕೆ, ಇಪ್ಪತ್ತೈದು
ನಿಮಿಷಗಳು ಸಾಕಾದರೆ
ಯಾರಾದರೂ ಇನ್ನೇನು
ಮಾಡುತ್ತಾರೆ?
ನನಗೆ ಮೊದಲೇ ರೈಲು
ಪ್ರಯಾಣವೆಂದರೆ ಇಷ್ಟ.
ಬದುಕಿಗೆ ಸಮೀಪದ
ರೂಪಕ ರೈಲು.
ಬೇರೆಲ್ಲ ಸಾರ್ವಜನಿಕ
ಸಾರಿಗೆಗಳಿಗಿಂತ ಈ
ಹಳಿಗಳ ಮೇಲೆ
ಚಲಿಸುವ ಪುಟ್ಟ
ಜಗತ್ತು ಮನಸ್ಸಿಗೆ
ಹತ್ತಿರವಾಗುತ್ತದೆ. ಮೆಟ್ರೋ
ಇಷ್ಟವಾಗಿರುವುದು ಕೂಡ
ಇದೇ ಕಾರಣಕ್ಕೆ.
ಬೆಂಗಳೂರೆಂಬ ಮಾಯನಗರಿಯ
ಬಗೆಬಗೆಯ ಮಂದಿಗೆ
ಮೆಟ್ರೋ ನಿತ್ಯಸೇತು.
ಇಲ್ಲಿವರೆಗೆ ಅವರವರ
ಕಾರುಗಳಲ್ಲೋ, ಬೈಕುಗಳಲ್ಲೋ,
ಆಫೀಸು ಕ್ಯಾಬುಗಳಲ್ಲೋ
ಸಾಗುತ್ತಿದ್ದ ಮಂದಿಯೆಲ್ಲ
ಈಗ ಒಂದೇ
ಬಂಡಿಯ ಸಹಚರರು.
ಇಷ್ಟುಕಾಲ ತಮ್ಮ
ತಮ್ಮ ಖಾಸಗೀ
ಜಗತ್ತುಗಳಲ್ಲಿ ಬಂಧಿಯಾಗಿದ್ದವರಿಗೆ ಈಗ
ನೂತನಬಂಧವೊಂದಕ್ಕೆ ತೆರೆದುಕೊಳ್ಳುವ ಸಾಧ್ಯತೆ.
ಅಂದೆಂದೋ ಸುಮ್ಮನೆ
ಪಕ್ಕಕ್ಕೆ ಜರುಗಿ
ಬನ್ನಿ ಬನ್ನಿ
ಅಂತ ಕರೆದು
ಸೀಟು ಕೊಟ್ಟವನೀಗ
ಹೊಸ ಸ್ನೇಹಿತನಾಗಿದ್ದಾನೆ. ರಷ್ಶಿನಲ್ಲಿ
ನಿಂತಿದ್ದಾಗ ’ನಿಮ್ಮ ಬ್ಯಾಗು
ನಾನಿಟ್ಟುಕೊಳ್ಳುತ್ತೇನೆ ಕೊಡಿ’ ಎಂದ
ಆಂಟಿ ತಿಂಗಳ
ಮೇಲೆ ಕಂಡರೂ,
ಮುಖದ ಮೇಲೆ
ಹಿತದ ಮುಗುಳುನಗೆ.
ಮೆಟ್ರೋದಲ್ಲಿ
ಕಾಣಸಿಗುವ ಹೆಚ್ಚಿನವರು
ನಿತ್ಯದ ಕೆಲಸಕ್ಕಾಗಿ
ಓಡಾಡುವ ಮಂದಿ.
ಅದದೇ ದಿನಚರಿಗೆ
ತಮ್ಮನ್ನ ತಾವು
ಒಗ್ಗಿಸಿಕೊಂಡವರು. ಇಲ್ಲಿ
ಗೆ ಬರುವ
ಎಲ್ಲರೂ ಕೂಡ
ಒಂದು ಚುಟುಕು
ಪ್ರಯಾಣಕ್ಕಷ್ಟೇ ತಮ್ಮನ್ನ
ಸಜ್ಜುಗೊಳಿಸಿಕೊಂಡು ಬಂದವರು.
ನಿಜವಾದ ಕೆಲಸ
ಬೇರೆಲ್ಲೋ ಇದೆ,
ಈ ಜರ್ನಿ
ಇನ್ನೇನು ಮುಗಿದೇ
ಹೋಗುವ ವಿಷಯ
ಎನ್ನುವ ಹಾಗೆ
ನಿಂತಿರುವವರು. ಆದರೆ
ಹಾಗೆ ಬಂದು
ನಿಂತ ಅವರಿಗೂ
ಕೂಡ ಮುಂದಿನ
ಇಪ್ಪತ್ತೋ ಇಪ್ಪತ್ತೈದೋ
ನಿಮಿಷಗಳಷ್ಟು ಕಾಲ
ಏನು ಮಾಡಬೇಕು
ಎನ್ನುವ ಸಿದ್ಧತೆ
ಇದೆ. ಕೆಲಸಲ
ಈ ಮೆಟ್ರೋ
ಅನ್ನುವುದು ಬೆಳಗಿಂದ
ಸಂಜೆಯವರೆಗೆ ಆಫೀಸಿನಲ್ಲಿ
ನಡೆಯುವ ಪ್ರಹಸನಕ್ಕೆಬಣ್ಣಹಚ್ಚಿಕೊಳ್ಳಲು ಸಿದ್ಧಪಡಿಸಿರುವ ಗ್ರೀನ್
ರೂಮಿನಂತೆ ಭಾಸವಾಗುತ್ತದೆ.
ತಮ್ಮ ಬಾಸಿಗೆ
ಫೋನುಹಚ್ಚಿ ’ಸರ್, ಲಿಟಲ್
ಲೇಟ್ ಸರ್,
ವಿಲ್ ಬಿ
ದೇರ್ ಇನ್
ಹಾಫೆನವರ್ ಸರ್’ ಎಂದು
ವಾಕ್ಯಕ್ಕೆ ಮೂರು
ಸರ್ ಹಚ್ಚಿ
ಕೃತಕ ವಿಧೇಯತೆ
ತೋರಿಸುವವರೂ, ನಿಂತೋ-ಕೂತೋ ಲ್ಯಾಪ್ಟಾಪು
ತೆರೆದಿಟ್ಟುಕೊಂಡು ಗಹನವಾದ
ಚಿಂತನೆಯಲ್ಲಿ ತೊಡಗಿದವರು,
ಕಚೇರಿಯ ವಾಟ್ಸಾಪು
ಗ್ರೂಪುಗಳ ಜಾಲಾಡುತ್ತ
ಗಂಭೀರ ಇಮೋಜಿಗಳ
ಕಳಿಸುತ್ತ ಕೂತಿರುವ
ಮಂದಿ, ಹೀಗೆ.
ಇನ್ನು ಅರ್ಧಕ್ಕರ್ಧ
ಜನ ಗಾಳಿಗೆ
ಮಂದಗತಿಯಲ್ಲಿ ತೊನೆಯುತ್ತ
ನಿಂತಿರುವ ತೆಂಗಿನ
ಮರದ ಹಾಗಿನವರು.
ಕಿವಿಯೊಳಗೆ ತುರುಕಿರುವ
ಹ್ಯಾಂಡ್ಸ್ ಫ್ರೀಗಳು
ಮೊಬೈಲಿನಿಂದೆತ್ತಿ ಕೇಳಿಸುತ್ತಿರುವ ಹಾಡುಗಳಿಗೆ
ತಿಳಿಯದೆಯೇ ಕಣ್ಣುಮುಚ್ಚಿ
ತಲೆದೂಗಿಸುತ್ತ ನಿಂತ
ಈ ಮಂದಿ
ಅದು ಯಾವ
ಮಾಯಕದಲ್ಲೋ, ತಮ್ಮ
ನಿಲ್ದಾಣ ಬಂದಕೂಡಲೇ
ಸಮಾಧಿ ಸ್ಥಿತಿಯಿಂದ
ತಿಳಿದೆದ್ದು ಬಡಬಡನೆ
ಇಳಿದು ಹೋಗಿಬಿಡುತ್ತಾರೆ! ಪ್ರಾಯಶಃ
ಹಾಡಿನ ಜೊತೆ
ಜೊತೆಗೆಯೇ ಮುಂಬರುವ
ಸ್ಟೇಷನ್ನಿನ ಘೋಷಣೆಯೂ
ಅವರ ಮೆದುಳನ್ನು
ಸೇರಿ, ರಪ್ಪನೆ
ಎಚ್ಚರಿಸುತ್ತದೆ.
ಅದಾವ ಪರಿಯ ನೂಕುನುಗ್ಗಲು
ಇದ್ದರೂ ಕಾದಂಬರಿಯನ್ನು
ಕೈಯಲ್ಲಿ ಹಿಡಿದುಕೊಂಡು
ಪುಟ ತಿರುಗಿಸಿಕೊಂಡು ಓದುವ
ಅಮೋಘ ಸಾಹಸಿಗಳೂ
ಇಲ್ಲಿದ್ದಾರೆ. ಮುಲಾಜೇ
ಇಲ್ಲದೇ ಜೋರು
ಸ್ಪೀಕರಿನಲ್ಲಿ ಹಾಡು
ಕೇಳುವ,ಸಿನಿಮಾ
ನೋಡುವ ಮಂದಿಗೂ
ಏನೂ ಬರವಿಲ್ಲ.
ಆದರೆ ಹೀಗೆ
ಯಾವುದರೊಳಗಾದರೂ ಕಳೆದು
ಹೋಗದೇ ಕಣ್ಣು
ತೆರೆದುಕೊಂಡಿದ್ದರೆ ಕಾಣುವ
ವಿಶ್ವ, ಬೇರೆಯದೇ
ತೆರನಾದದ್ದು. ತನ್ನ
ಹುಡುಗಿಯನ್ನು ಬೇರೆ
ಯಾರಾದರೂ ತಳ್ಳಿಗಿಳ್ಳಿದರೆ ಕಷ್ಟ
ಎಂದುಅವಳನ್ನ ಅವಚಿ
ಹಿಡಿದುಕೊಂಡಿರುವ ಯುವಕ,
ದಾರಿತಪ್ಪಿ ಬಂದು
ನಿಂತ ಹಾಗೆ
ಬೆರಗುಗಣ್ಣುಗಳಿಂದ ಮೆಟ್ರೋದ
ಸೊಬಗು ನೋಡುವ
ಪುಟ್ಟ ಮಕ್ಕಳು,
ಅತ್ತಿತ್ತ ನೋಡುತ್ತ
ಮೆಜೆಸ್ಟಿಕ್ ಯಾವಾಗ
ಬರತ್ತೆ ಎಂದು
ದಿಗಿಲಲ್ಲಿ ಪದೇ
ಪದೇ ಕೇಳುವ
ಪಾನಿಪೂರಿ ಮಾರುವ
ಬಿಹಾರಿ ಹುಡುಗ,
ಪಕ್ಕಾ ಲೋಕಲ್
ಟ್ರೇನಿನಲ್ಲಿ ಶೌಚಾಲಯದ
ಪಕ್ಕ ದೊಡ್ಡ
ಚೀಲ ಇಟ್ಟುಕೊಂಡು
ಕೂರುತ್ತಾರಲ್ಲ ಹೂಬೇಹೂಬು
ಹಾಗೆಯೇಒಂದು ಚೀಲ
ಹೊತ್ತುಕೊಂಡು ಬಂದು,
ಅಲ್ಲೇ ಮೂಲೆಯಲ್ಲಿ
ಕೂರುವುದಕ್ಕೆ ಹೊರಟು
ಬೈಸಿಕೊಳ್ಳುತ್ತಿರುವ ಯಾವುದೋ
ಹಳ್ಳಿ ಕಡೆಯ
ದಂಪತಿ,ಇನ್ನೇನು
ತಮ್ಮ ಗತಿ
ಎಂದು ಆ
ಗಂಡಹೆಂಡತಿ ಕಂಗಾಲಾಗುವ
ಹೊತ್ತಲ್ಲಿ’ಅಯ್ಯೋ ಬಿಡ್ರೀ
ಪಾಪ ಗೊತ್ತಾಗಲ್ಲ
ಯಾಕೆ ಸುಮ್ನೆ
ರೇಗುತ್ತೀರಿ’
ಎಂದು ಅವರನ್ನ
ವಹಿಸಿಕೊಂಡು ಬಂದು,
ಛಕ್ಕಂತ ಅವರುಗಳಿಗೆ
ಆಶಾಕಿರಣವಾಗುವ ಇನ್ಯಾರೋ
ಸೂಟುಬೂಟಿನ ಸಾಹೇಬರು
- ಹೀಗೆ ಥರಹೇವಾರಿ
ಚಲಿಸುವ ಚಿತ್ರಗಳು
ಮೆಟ್ರೋದಲ್ಲಿ ಸದಾ
ಲಭ್ಯ.
ಒಂದು ದಿನ, ನನ್ನ
ಪಕ್ಕದಲ್ಲೇ ಒಬ್ಬಾತ
ಬಂದು ನಿಂತ.
ಇವನನ್ನ ಎಲ್ಲೋ
ನೋಡಿದ ಹಾಗಿದೆಯಲ್ಲ
ಎನ್ನುವ ಯೋಚನೆ
ನನ್ನದು. ಮುಖಚಹರೆಗಳನ್ನು ಬಲುಬೇಗ
ಮರೆಯುವುದು ನನ್ನ
ತೊಂದರೆಗಳಲ್ಲೊಂದು. ಶಿಸ್ತಾದ
ಫಾರ್ಮಲ್ ಪ್ಯಾಂಟು,
ಖಡಕ್ ಇಸ್ತ್ರಿಯ
ಶರಟೂ, ಟೈಯೂ
ಹಾಕಿಕೊಂಡು ಮುಗುಮ್ಮಾಗಿ
ನಿಂತಿದ್ದ ಅವನು
ಯಾರು ಎಂದು
ಎಷ್ಟು ಹೊತ್ತಾದರೂ
ನೆನಪಾಗಲಿಲ್ಲ. ನಾನು
ಯಾವುದಕ್ಕೂ ಇರಲಿ
ಅಂತ ಒಂದು
ಪೆಚ್ಚು ನಗೆ
ನಕ್ಕೆ. ಆ
ಕಡೆಯಿಂದಲೂ ಅದೇ
ರಿಪ್ಲೈ ಬಂತು.
ಮತ್ತೆ.. ಹೇಗಿದ್ದೀರಿ
ಎಂದು ಕೇಳಿದೆ.
ಅಷ್ಟಾದರೂ ಒಳಗೆ
ಮೆದುಳಿಂದ ಯಾವ
ಸಂದೇಶವೂ ಬರಲಿಲ್ಲ.
ಐ ಆಮ್
ಗುಡ್ ಎಂದು
ಗಂಭೀರವಾಗಿಯೇ ಹೇಳಿದ
ಅವನಿಂದ ಮರುಪ್ರಶ್ನೆಯೇನೂ ಬರಲಿಲ್ಲ.
ಮಾತಾಡೋಕೆ ಇಷ್ಟ
ಇಲ್ಲ ಅನ್ನಿಸಿ
ನನಗೂಯಾರೂಂತ ನೆನಪಾಗುತ್ತಲೂ
ಇಲ್ಲದ ಕಾರಣಕ್ಕೆ
ಸುಮ್ಮನಾದೆ. ಮುಂದಿನ
ಸ್ಟೇಷನ್ನು ಬಂದಕೂಡಲೇ
ಆಸಾಮಿ ಬಾಗಿಲಾಚೆಗೆ
ನಡೆದು ಹೋದ.
ಹಾಗೆ ಹೋಗುತ್ತಿರುವ
ಘಳಿಗೆಯಲ್ಲಿ ಕಾಲು
ಸ್ವಲ್ಪ ಎತ್ತಿ
ಹಾಕುವ ಆತನ
ಆ ನಡಿಗೆ
ನೋಡಿ ಫಕ್ಕನೆ
ಹೊಳೆಯಿತು. ರೌಡಿ
ಸಂತು. ಕಾಲೇಜಿನಲ್ಲಿ
ನನ್ನ ಸೀನಿಯರ್
ಆಗಿದ್ದ ಈ
ಪುಣ್ಯಾತ್ಮ ತನ್ನ
ಅಬ್ಬರದ ರೌಡಿಸಂಗೇ
ಪ್ರಸಿದ್ಧಿ. ಒಂದಾದರೂ
ಕ್ಲಾಸಿನಲ್ಲಿ ಪಾಠ
ಕೇಳುತ್ತ ಆತ
ಕೂತಿದ್ದು ಗೊತ್ತಿಲ್ಲ.
ಸದಾಕಾಲ ಬಾಯಿತುಂಬ
ಗುಟ್ಕಾ ಅಗಿಯುತ್ತ,
ಹುಡುಗೀರನ್ನ ರೇಗಿಸುತ್ತ,
ಪುಡಿ ಚಿಲ್ಲರೆ
ಪುಂಡಾಟಿಕೆ ಮಾಡಿಕೊಂಡು
’ರೌಡಿ ಸಂತು’ ಅಂತಲೇ
ಫೇಮಸ್ಸಾದ ಮನುಷ್ಯ.
ಅವನೇ ಇವನಾ
ಎಂದು ಯೋಚಿಸಿ
ಅಬ್ಬಬ್ಬ ರೂಪಾಂತರವೇ
ಎಂದು ಅಚ್ಚರಿಗೊಂಡೆ!
ಪ್ರಾಯಶಃ ತನ್ನ
ಬದಲಾದ ಸ್ವರೂಪವನ್ನು
ಪೂರ್ವಾಶ್ರಮದ ಯಾವನೋ
ಒಬ್ಬ ಕಂಡದ್ದು
ಅವನಿಗೆ ಇಷ್ಟವಾಗಲಿಲ್ಲವೋ ಅಥವ
ನಾನು ಯಾರೂಂತ
ಗೊತ್ತೇ ಆಗಲಿಲ್ಲವೋ,
ಏನೋ!
ಮೊದಲ ಬಾರಿಗೆ ಮೆಟ್ರೋ
ಪಯಣ ಮಾಡುವ
ಬರುವ ಹಲವು
ಮಂದಿ ಮಯ
ನಿರ್ಮಿತ ಧರ್ಮರಾಜನ
ಮಂಟಪಕ್ಕೆ ಬಂದ
ಹಾಗೆ ಅಯೋಮಯರಾಗುತ್ತಾರೆ. ಯಾವುದೋ
ಕೆಲಸದ ನಿಮಿತ್ತ
ಬಂದವರು ಒಂಚೂರು
ಮೆಟ್ರೋ ಓಡಾಡಿಕೊಂಡು
ಬರೋಣ ಎಂದು
ಸ್ಟೇಷನ್ನಿಗೆ ಬರುತ್ತಾರೆ.
ಟಿಕೇಟು ಎಂದು
ಕೊಟ್ಟ ಬಿಲ್ಲೆ,
ಅದನ್ನು ಇಟ್ಟಕೂಡಲೇ
ರಪ್ಪಂತ ತೆಗೆದು,
ಒಂದೆರಡು ಸೆಕೆಂಡುಗಳ
ಒಳಗೆ ಮುಚ್ಚಿಕೊಳ್ಳುವ ಪುಟ್ಟ
ಗೇಟು ಇದನ್ನೆಲ್ಲ
ನೋಡಿ, ಕ್ಷಣಕಾಲ
ಕಂಗಾಲಾದರೂ, ಅಕ್ಕಪಕ್ಕದೋರ
ಥರಹವೇ ತಾವೂ
ಮಾಡಲು ಹೋಗಿ
ಕೆಕರುಮಕರಾಗಿ ತಗಲುಹಾಕಿಕೊಳ್ಳುತ್ತಾರೆ. ತಮಗೆಲ್ಲ
ಗೊತ್ತಿದೆ ಬಿಡಿ
ಎನ್ನುವ ಹಾಗೆ
ನಕ್ಕು ಬಿಲ್ಲೆ
ಇಡಲು ಹೋದರೆ
ಅದೇನೋ ಕೆಂಪುಕೆಂಪನೆ
ಬೆಳಕು ಬೀರಿ
ಪೀಪೀ ಎಂದುದೊಡ್ಡ
ಸದ್ದು ಮಾಡಿ,
ಮುಂದೆ ಆಗಷ್ಟೇ
ತೆರೆದಿದ್ದ ಹಸಿರು
ಬಾಗಿಲುಮುಲಾಜೇ ಇಲ್ಲದೇ
ಮುಚ್ಚಿಕೊಂಡು ಸ್ವರ್ಗಪ್ರವೇಶವೇ ರದ್ದಾಗಿ
ಹೋಯಿತೇನೋ ಎಂಬ
ಸೀನು ಕ್ರಿಯೇಟ್
ಆಗಿಬಿಡುತ್ತದೆ. ಹಾಗಾದಕೂಡಲೇ
ಇವರು ಶಸ್ತ್ರಸಂನ್ಯಾಸ ಮಾಡಿ
ಯಾರಾದರೂ ಏನಾದರೂ
ಸಹಾಯ ಮಾಡಿ
ಎಂಬಂತೆ ದಯನೀಯ
ದೃಷ್ಟಿ ಬೀರುತ್ತಾರೆ.
ಆಗ ಯಾರಾದೊಬ್ಬರು
ಮೆಟ್ರೋ ಪರಿಣಿತರು
ಮುಂದೆ ಬಂದು
ಸ್ವಲ್ಪ ಹಿಂದೆ
ಬನ್ನಿ.. ಹಾಂ..
ನೋಡಿ ಇದು
ಹೀಗೆ ಎಂಬಂತೆ
ಸಹಕರಿಸಿ ಹೋಗುವುದು
ಅನೂಚಾನವಾಗಿ ನಿತ್ಯವೂ
ಕಂಡುಬರುವ ದೃಶ್ಯ.
ಅವರುಗಳು ಒಳಗೆ
ಬರುತ್ತ ಅಬ್ಬ,
ಯುದ್ಧ ಗೆದ್ದೆವಪ್ಪ
ಎಂಬಂತೆ ನಕ್ಕು
ಸಾಗುವುದೂ ಕೂಡ
ತಪ್ಪಿಲ್ಲದೇ ನಡೆವ
ಆಚರಣೆ.
ಅಂದೊಂದು
ದಿನ ನಾನು
ಹತ್ತುವ ಸ್ಟೇಷನ್ನಿಗೂ
ಹೀಗೆಯೇ ಒಂದು
ಕುಟುಂಬ ಮೆಟ್ರೋ
ಸವಾರಿಯ ಅನುಭವಕ್ಕಾಗಿ
ಬಂದಿತ್ತು. ಅರವತ್ತರ
ಅಮ್ಮ, ಮೂವತ್ತರೆಡಬಲದ
ಮಗ, ಆತನ
ಹೆಂಡತಿ ಮತ್ತು
ಆರೆಂಟು ವರ್ಷಗಳ
ಇಬ್ಬರು ಮಕ್ಕಳು.
ಮಗನೋ, ಮೆಟ್ರೋ
ಪಾರಂಗತ. ಅಮ್ಮನಿಗೋ
ಈ ಕರಿಬಿಲ್ಲೆ,
ಕೆಂಪು ದೀಪದ
ಸದ್ದು ಎಲ್ಲವೂ
ಹೊಸತು. ಗಾಬರಿಯಲ್ಲಿ
ಆ ಬಿಲ್ಲೆ
ಎಲ್ಲೋ ಬಿದ್ದು
ಉರುಳಿ ಹೋಗಿ,
ಅದನ್ನು ಯಾರೋ
ಹೆಕ್ಕಿ ತಂದುಕೊಟ್ಟು-
ಒಟ್ಟಿನಲ್ಲಿ ಮಗನಿಗೆ
ಎಲ್ಲರೆದುರು ಅಮ್ಮ
ತಡಬಡಾಯಿಸುತ್ತಿರುವ ಮುಜುಗರ
ಬೇರೆ. ಹೇಗೋ
ಗೇಟು ದಾಟಿ
ಆಕೆ ಒಳಬಂದರು.
ಆಮೇಲೆ ಟ್ರೇನು
ಹತ್ತಿಯೂ ಆಯಿತು.ನಾಲ್ಕೈದು ಸ್ಟೇಷನ್ನೂ
ದಾಟಿತು. ಮೆಟ್ರೋ,
ಈಗೀಗ ಈ
ಮೆಜೆಸ್ಟಿಕ್ಕು ಬರುವ
ಹೊತ್ತಿಗೆ ಹಣ್ಣಾಗಲು
ಒತ್ತಿತುಂಬಿಸಿಟ್ಟ ಬಾಳೇಹಣ್ಣಿನ
ಉಗ್ರಾಣದ ಹಾಗೆ
ಆಗಲು ಶುರುವಾಗಿದೆ.
ಅಷ್ಟೊಂದು ಜನ-ತಳ್ಳಾಟ. ಆ
ಗೊಂದಲದಲ್ಲಿ ಅಮ್ಮನು
ಒಂದು ಕಡೆಗೂ,
ಉಳಿದೋರೆಲ್ಲ ಒಂದು
ದಿಕ್ಕೂ ಆಗಿ
ಹೋಗಿದ್ದಾರೆ. ಅಮ್ಮಾ
ನೀನು ಟ್ರಿನಿಟೀ
ಸರ್ಕಲ್ ಅಂತ
ಮೈಕಲ್ಲಿ ಹೇಳಿದ
ಕೂಡಲೇ ಇಳೀಬೇಕು
ಅಂತ ಈ
ಮಗರಾಯ ಇತ್ತಕಡೆಯಿಂದಲೇ ಕೂಗಿ
ಹೇಳಿದ್ದೂ ಆಯಿತು.
ಅವರೂ ಅದೇನೋ
ತಲೆ ಆಡಿಸಿದರು
ಕೂಡ. ಮತ್ತೆ
ಅವರ ತಲೆ
ಕೂಡ ಕಾಣದ
ಹಾಗೆ ಜನ
ತುಂಬಿಕೊಂಡರು. ಇವರು
ತಮ್ಮತಮ್ಮಲ್ಲೇ , ಅಜ್ಜಿ
ಇಳೀತಾರೆ ಬಿಡಿ
ಅಮ್ಮ ಹಂಗೆಲ್ಲ
ಗಡಿಬಿಡಿ ಮಾಡ್ಕೊಳದಿಲ್ಲ
ಎಂದು ಸಮಾಧಾನ
ಹೇಳಿಕೊಂಡರು.
ಟ್ರಿನಿಟಿ
ಸರ್ಕಲು ನಾನಿಳಿಯುವ
ನಿಲ್ದಾಣವೂ ಹೌದು.
ಇವರ ಜೊತೆಗೆ
ನನಗೂ ಪಾಪ
ಆ ಯಮ್ಮ
ಇಳಿಯತ್ತೋ ಇಲ್ಲವೋ
ಎನ್ನುವ ಸಣ್ಣ
ದಿಗಿಲು. ಟ್ರೇನು
ನಿಂತಿತು. ಗುಂಪು
ಗುಂಪು ಜನ
ಇಳಿದರು. ಈ
ಕುಟುಂಬವೂ ಬಡಬಡನೆ
ದಾಟಿಕೊಂಡು ಸುತ್ತ
ನೋಡಿದರೆ, ಊಹೂಂ,
ಅಮ್ಮ ಕಾಣಿಸುತ್ತಿಲ್ಲ! ಎಲ್ಲರೂ
ಮೆಟ್ಟಿಲಿಳಿದು ಹೋಗಿ,ಕ್ಷಣಾರ್ಧದಲ್ಲಿ ಪ್ಲಾಟ್
ಫಾರಂ ಖಾಲಿಯೂ
ಆಯ್ತು. ಛೇ
ಅಂದುಕೊಂಡೆ ನಾನೂ.
ಪಾಪ ಆ
ಗೊಂದಲದಲ್ಲಿ ಅವರಿಗೆ
ಇಳಿದುಕೊಳ್ಳೋಕೆ ಗೊತ್ತಾಗದೇ
ಮುಂದೆ ಹೋಗಿಬಿಟ್ಟಿದ್ದಾರೆ. ಮಗನಿಗೋ
ಅಮ್ಮನಿಗೆ ಬೆಂಗಳೂರು
ಹೊಸದು, ಮೆಟ್ರೋ
ಮತ್ತೂ ಹೊಸದು,
ಕೈಯಲ್ಲಿ ಮೊಬೈಲು
ಇಲ್ಲ, ಏನಾಗತ್ತೋ
ಏನೋ ಎನ್ನುವ
ಚಿಂತೆ. ಅಲ್ಲಿದ್ದ
ಸೆಕ್ಯೂರಿಟಿ, ಇನ್ನೊಂದಿಷ್ಟು
ಮಂದಿ ಇವರ
ಗೊಂದಲ ನೋಡಿ
ಥರ ಥರ
ಸಲಹೆಗಳನ್ನು ಕೊಡೋಕೆ
ಶುರು ಮಾಡಿದರು.
ಮುಂದಿನ ಸ್ಟೇಶನ್ನು
ಅಲಸೂರು, ಅಲ್ಲಿ
ಹೋಗಿ ನೋಡಿ..
ಮೆಟ್ರೋ ಕಂಟ್ರೋಲು
ರೂಮಿಗೆ ಫೋನ್
ಮಾಡಿ..ಹೀಗೆ.
ಬಡಬಡನೆ ಮೆಟ್ಟಿಲಿಳಿದು ಎಲ್ಲ
ಕೆಳಗೆ ಬಂದರೆ,
ಅರೇ! ಅಮ್ಮ
ಅಲ್ಲಿ ನಿಂತಿದ್ದಾರೆ.
ಗೇಟಿನಾಚೆಗೆ. ಅತ್ತಿತ್ತ
ನೋಡುತ್ತ. ಎಲ್ಲರಿಗೂ
ಹೋದ ಉಸಿರು
ಬಂದಹಾಗಾಯ್ತು. ಮಗ
ಓಡಿ ಹೋದ
ಅವರ ಬಳಿಗೆ.
’ಏ ಎಲ್ಲಮ್ಮ
ನೀನು ಗಾಬ್ರಿ
ಆಗೋಗಿತ್ತು ಇಳ್ಕೊಂಡ್ಯೋ
ಇಲ್ವೋ ಗೊತ್ತೇ
ಆಗಲಿಲ್ಲ. ನೋಡಿದರೆ
ಇಲ್ಲಿ ಬಂದು
ನಿಂತಿದೀಯಲ್ಲ’
ಎಂದು ಉದ್ದಕ್ಕೆ
ಬಡಬಡಿಸುತ್ತಿದರೆ, ಆ
ಅಮ್ಮ ನಿಷ್ಕಲ್ಮಶ
ನಗು ನಕ್ಕು,
’ಏ,ಜೀವನದಲ್ಲಿ
ಎಂತೆಂಥ ಊರುಕೇರಿ
ನೋಡಿದೋಳು ನಾನು,
ಅಪ್ಪ ಸತ್ತ
ಮೇಲೆ ನಿನ್ನ
ಬೆನ್ನಿಗೆ ಹಾಕ್ಕಂಡು
ಎಲ್ಲೆಲ್ಲ ಅಲ್ದಿದೀನಿ
ಗೊತ್ತಿಲ್ಲವೇನೋ? ಎಷ್ಟೆಲ್ಲ
ಕಷ್ಟ ಕಂಡ
ನಂಗೆ , ಅದೊಂದು
ಯಕಶ್ಚಿತ್ ಬಾಗಿಲು
ದಾಟಿಕೊಂಡು ಬರೋದಿಕ್ಕೆ
ಆಗಲ್ವೇನೋ, ಥತ್
ನಿನ್ನ, ಬಾ
ಬಾ ಸಾಕು,
ಅದೇನದು ಕಣ್ಣೀರು,ಇಲ್ಲಿ ಇಷ್ಟೆಲ್ಲ
ಜನರೆದುರಿಗೆ ಏನೋ
ನಿಂದು’
ಎಂದು ಮುಂದಕ್ಕೆ
ಹೊರಟರು. ಅಷ್ಟರಲ್ಲಿ
ಅಲ್ಲೇ ಹಿಂದೆ
ಮತ್ತೆ ಯಾರೋ
ಬಿಲ್ಲೇನ ಸರಿಯಾಗಿ
ಇಡದೇ ಕೆಂಪು
ದೀಪ ಮತ್ತೆ
ಪೀಪೀ ಸದ್ದು
ಮಾಡಿತು. ಎಲ್ಲರೂ
ಪ್ರಕರಣ ಸುಖಾಂತ್ಯವಾದ
ಖುಷಿಯಲ್ಲಿ ಅಲ್ಲಿಂದ
ಹೊರಟರು.
ವಿಹಂಗಮ ನೋಟದಲ್ಲಿ ನೋಡಿದಾಗ,
ನಗರವನ್ನು ಸೀಳಿಕೊಂಡು
ಸಾಗಿದಂತೆ ಕಾಣಿಸುವ
ಮೆಟ್ರೋ ಆಂತರ್ಯದಲ್ಲಿ
ಅದೆಷ್ಟೋ ಜೀವಗಳನ್ನು
ಒಂದು ಮಾಡುತ್ತ
ಸದ್ದಿಲ್ಲದೇ ಓಡುತ್ತಿದೆ.
ನಾಳೆ ಮತ್ತೇನೋ
ಹೊಸದನ್ನು ಕಲಿಯುವ,
ಕಾಣುವ ಆಸೆಯಲ್ಲಿ
ನಾನೂ ಮೆಟ್ರೋ
ಹತ್ತುತ್ತೇನೆ.
3 ಕಾಮೆಂಟ್‌ಗಳು:
ಅಬ್ಬಾ, ಮೆಟ್ರೋ ದರ್ಶನದಿಂದ ಪುಳಕಿತನಾದೆ. ಧನ್ಯವಾದಗಳು, ಶ್ರೀನಿಧಿ!
💓 ಮೆಟ್ರೋದಲ್ಲಿ ಓಡಾಡದ ನಾನು ನಿನ್ನ ಜೊತೆಜೊತೆಗೆ ಓಡಾಡಿಬಿಟ್ಟೆ. Reading you after a long time. It is so refreshing.
"ರತ್ನಾಕರವರ್ಣಿ ಭರತೇಶವೈಭವ",ಈ ಪೂರ್ವನಾಮವನ್ನು ಹೊಂದಿರುವ ಎಲ್ಲಾ ಪುಟಗಳು.ದಾಖಲೆಗಳು............?????????????? .....ಗಮನವಾದ ವಿಚಾರಗಳನ್ನೂ ನಿರಾಯಾಸವಾಗಿ ಸಂವಹನಿಸುತ್ತಾನೆ...... ಶಬ್ಧದಾರಿದ್ರ್ಯವಿಲ್ಲ.!ಭರತೇಶವೈಭವ 80 ಸಂಧಿಗಳು ಹಾಗೂ 10,000 ಪದ್ಯರಾಶಿಯನ್ನುಳ್ಳ ಸಾಂಗತ್ಯ ಕಾವ್ಯ. ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ, ಮೋಕ್ಷವಿಜಯ ಎಂಬ ಪಂಚಮಿವಿಜಯಗಳಾಗಿ ಕಾವ್ಯ ವಿಭಾಗಗೊಂಡಿದೆ.
ಕಲಾಪೂರ್ಣವಾದ ಭೋಗವಿಜಯದಲ್ಲಿ ಭರತನ ಮೂರು ದಿನಗಳ ರಾಗರಸಿಕತೆ ಸಂಜೆಗತ್ತಲಿನಲ್ಲಿ ಚಂದ್ರನಕಾಂತಿಯಲ್ಲಿ ರಂಜಿಸುವ ನಕ್ಷತ್ರಮಂಡಲದಂತಿವೆ. ಕವಿ ಗಮಕಿ ಗಾಯಕ ನರ್ತಕ ಸಮುದಾಯ ಭರತನ ಕಾಮನಬಿಲ್ಲಾಗಿ ನಿಲ್ಲುತ್ತಾರೆ. ಆತನದು ಅಪಾರ ಸಂಸಾರ, ಸಾವಿರಾರು ಮಡದಿಯರ ಶೃಂಗಾರ ಸಾಗರ, ಆತ ತನ್ನ ಹೆಂಡತಿಯರು ಅವರ ತವರೂರನ್ನು ಮರೆಯುವಂತೆ ನೋಡಿಕೊಂಡ ಪ್ರಿಯಕರ ಯಾವುದೇ ಸಾಹಿತ್ಯದಲ್ಲಿ ಇಂಥ ದಾಂಪತ್ಯ ಚಿತ್ರಣ ಅಪರೂಪ. ಇದು ವಿಶ್ವ ಸಾಹಿತ್ಯಕ್ಕೆ ಕನ್ನಡದ ಕೊಡುಗೆ. ರತ್ನಾಕರನ ಯಶಸ್ಸು ಸಂಸಾರ ಚಿತ್ರಗಳಲ್ಲಿದೆ. ಇಷ್ಟಿದ್ದೂ ಇಲ್ಲಿನ ಶೃಂಗಾರ ಉನ್ನತವಾದುದು. ಇದು ಒಲಿದವರಿಗೆ ಕೂಟವನ್ನು ಅಕುಟಿಲವಾಗಿ ಬಿಡಿಸಿದೆ. ಕುಸುಮಾಜಿಯೊಡನೆ ಭರತ ಪ್ರೇಮದಿಂದ ಪುಳಿಕಿತವಾಗಿ ಕಳೆಯುವ ಇರುಳಿನ ಅನುಭವ ಶುದ್ಧಕಾವ್ಯವಾಗಿ ಹರಳುಗೊಂಡಿದೆ. ಲೈಗಿಂಕಾನುಭವ ಹೇಯವೆಂದು ಮರೆಮಾಡುವ ಮರ್ಯಾದೆಗಳಿಂದ ಪಾರಾದ ಇಲ್ಲಿನ ಮುಕ್ತವಾತಾವರಣ ಸ್ವಚ್ಛವಾಗಿ ಅನಶ್ಲೀಲವಾಗಿ ಅಪೂರ್ವ ಶುಚಿತ್ವ ಪಡೆದಿದೆ. ಅಲ್ಲದೆ ಅಂತಃಪುರದ ಚಿತ್ರಕ್ಕೆ ತಿಳಿಹಾಸ್ಯದ ಗೆರೆಯೊಂದು ಅಂಚು ಹೆಣೆದು ಮಿಂಚುತ್ತದೆ
ಕಾಮೆಂಟ್ ಪೋಸ್ಟ್ ಮಾಡಿ