ಬುಧವಾರ, ಡಿಸೆಂಬರ್ 20, 2006

ಬಾ ಕಂದ ಕನ್ನಡದ ಬಳಿಗೆ....

ನಾಳಿನಿಂದ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗೆಯಲ್ಲಿ. ಆ ಸಂದರ್ಭದಲ್ಲೊಂದು ಆಶಯ ಕವನ, ಕನ್ನಡಕ್ಕಾಗಿ.

ಒಂದೆರಡು ಘಳಿಗೆ, ಕನ್ನಡದ ಬಳಿಗೆ
ಬಾರೋ ಕಂದಾ ನಿನ್ನ ತಾಯಿಯಿವಳು.
ಒಮ್ಮೆ ಬಂದರೆ ನೀನು, ಮತ್ತೆ ಹೋಗೆಯೋ ಹಿಂದೆ
ಬಲು ಶಕ್ತಿಯನು ಈ ತಾಯಿ ನೀಡುವಂಥವಳು.

ಕನ್ನಡದ ನವಿರು ನುಡಿ, ಸರಳ ಸುಂದರ ಬಂಧ
ಬೇರೆಲ್ಲಿ ದೊರಕುವುದೊ ಕಂದ ನಿನಗೆ?
ಪರಕೀಯ ಭಾಷೆಯದು ಬಾಡಿಗೆಯ ಒಲುಮೆ, ತಿಳಿ.
ಕನ್ನಡಮ್ಮನೆ ಬೆಳಕು, ಕೊನೆಯವರೆಗೆ.

ನಮ್ಮತನ, ನಮ್ಮ ಜನ, ನಮ್ಮದೀ ಭಾಷೆ
ಎನ್ನೋ ಹೆಮ್ಮೆಯು ಬೇಕು ಕಂದ ಎಲ್ಲರಿಗು.
ಹೊರಗಿಂದ ಬಂದವಗೆ ಗೌರವವ ಕೊಡಿ ಸಾಕು,
ಕಾಲು ನೆಕ್ಕುವ ಚಟವ ಮೊದಲು ಬಿಡಬೇಕು.

ಕನ್ನಡವ ನೀ ಬೆಳೆಸೋ ಕೈಂಕರ್ಯದಲಿ ತೊಡಗು,
ಕನ್ನಡಮ್ಮನು ನಿನ್ನ ಸಲಹುವಳು ಮಗುವೇ.
ಎಲ್ಲೆ ನೀ ಹೋದರೂ ಕನ್ನಡವು ಜೊತೆಗಿರಲಿ,
ಬದುಕ ದಾರಿಯ ತುಂಬ ನಿನಗೆ ಜಯವೇ.

9 ಕಾಮೆಂಟ್‌ಗಳು:

Sushrutha Dodderi ಹೇಳಿದರು...

ಪರಕೀಯ ಭಾಷೆಯದು ಬಾಡಿಗೆಯ ಒಲುಮೆ -ಸಾಲು ಇಷ್ಟವಾಯ್ತು. ನಿನ್ನ ಆಶಯ ನನ್ನ ಆಶಯವೂ ಹೌದು. ಕನ್ನಡಮ್ಮನ ಹೆರಳು ಕನ್ನಡದ ಮಲ್ಲಿಗೆಯಿಂದ ಘಮ್ಮೆನ್ನುತ್ತಿರಲಿ. ಜೈ ಕರ್ನಾಟಕ ಮಾತೆ!

Unknown ಹೇಳಿದರು...

ಚೊಲೊ ಇದ್ದು, ಇದು ಈ ಕನ್ನಡ ಸಮ್ಮೇಳನದಲ್ಲಿ ಪ್ರಸಾರ ಅದ್ರೆ ಇನ್ನೂ ಒಳ್ಳೇದು.

Unknown ಹೇಳಿದರು...

pantaa stick ammaa !!!

Anveshi ಹೇಳಿದರು...

"ಪರಕೀಯ ಭಾಷೆಯದು ಬಾಡಿಗೆಯ ಒಲುಮೆ, ತಿಳಿ.
ಕನ್ನಡಮ್ಮನೆ ಬೆಳಕು, ಕೊನೆಯವರೆಗೆ"


"ಹೊರಗಿಂದ ಬಂದವಗೆ ಗೌರವವ ಕೊಡಿ ಸಾಕು,
ಕಾಲು ನೆಕ್ಕುವ ಚಟವ ಮೊದಲು ಬಿಡಬೇಕು."

ಈ ಸಾಲುಗಳನ್ನು ಬೆಂಗಳೂರಲ್ಲಿ ಅಲ್ಲಲ್ಲಿ ಬೋರ್ಡ್ ಬರೆಸಿ ಹಾಕಬೇಕು.

ಶ್ರೀನಿಧಿ ಅವರೆ, ಕವನ ತುಂಬಾ ಇಷ್ಟವಾಯಿತು.

ಶ್ರೀನಿಧಿ.ಡಿ.ಎಸ್ ಹೇಳಿದರು...

@ಸುಶ್,
ಕನ್ನಡಮ್ಮನ ಹೆರಳು ಕನ್ನಡ ಮಲ್ಲಿಗೆಯಿಂದ ಘಮ್ಮೆನ್ನಲಿ- ಎಂತ ಚಂದ ಆಶಯ! ಧನ್ಯ.
@ಗಿರಿ,
ಕೃತಜ್ಞತೆಗಳು, ಆ ಪುಣ್ಯ ಎಲ್ಲಾ ನಮ್ಗೆ ಸಿಗಕಾತಲಾ!
@ಸುರೇಶ್,
:)!
@ಅಸತ್ಯ ಅನ್ವೇಷಿ,
ತಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯ. ದಿನ ನಿತ್ಯ ಬೆಂಗಳೂರಲ್ಲಿ ಕನ್ನಡದ ಹಣೆಬರಹವನ್ನು ಕಾಣುತ್ತಿರುವವನಿಗೆ ನಿನ್ನೆ ಅಚಾನಕ್ ಆಗಿ ಆ ಕವನ ಹುಟ್ಟಿತು...

Enigma ಹೇಳಿದರು...

bareyutha iri yendu nanna harike

ಮನಸ್ವಿನಿ ಹೇಳಿದರು...

"ಪರಕೀಯ ಭಾಷೆಯದು ಬಾಡಿಗೆಯ ಒಲುಮೆ"....ಸರಿಯಾಗಿ ಹೇಳಿದ್ರಿ

ಗುಹೆ ಹೇಳಿದರು...

ತುಂಬಾ ಚೆನ್ನಾಗಿದೆ.. ಸ್ವಲ್ಪ ಲೇಟಾಗಿ ನೋಡ್ದೆ..
Waiting for Next

ಶ್ರೀನಿಧಿ.ಡಿ.ಎಸ್ ಹೇಳಿದರು...

enigma, ಮನಸ್ವಿನಿ, ಗುರು -
ಧನ್ಯ!