ಭಾನುವಾರ, ಜನವರಿ 18, 2009

ಯಾವ ಮೋಹನ ಮುರಲಿ ಕರೆಯಿತೋ...

ನಿನ್ನೆ ರಾತ್ರಿ ಪಾಳಿ,ನಮ್ಮ ಎಡಿಟರ್ ರೆಡ್ದಿ ಬೆಳಗಿನ ನ್ಯೂಸ್ ನ ಎಡಿಟಿಂಗ್ ಮಾಡ್ತಾ ಕೂತಿದ್ದರು. ರಾಜು ಅನಂತಸ್ವಾಮಿ ತೀರಿಕೊಂಡು ಸುಮಾರು ಹನ್ನೆರಡು ತಾಸು ಕಳೆದಿತ್ತು.. ಇಂದು ಬೆಳಗಿನ ವಾರ್ತೆಗೆ ಅವರ ಹಾಡುಗಳನ್ನು- ನಮ್ಮ ಸ್ಟುಡಿಯೋಗೆ ಬಂದು ಹಾಡಿದ್ದ ಹೆಂಡದ ಹಾಡು, ರಾಜು ಅನಂತ ಸ್ವಾಮಿಯವರ ವಿಶುವಲ್ ಗಳನ್ನ ಹಾಕಿ ಶ್ರದ್ಧೆಯಿಂದ ಎಡಿಟಿಂಗ್ ಸಾಗುತ್ತಿತ್ತು. ಆ ಸುದ್ದಿಯ ಕೊನೆಯಲ್ಲಿ, ಸ್ಟೋರಿ ಮುಗಿಸಲು - ಅವರೇ ಅಮೆರಿಕ ಅಮೆರಿಕ ಸಿನಿಮಕ್ಕೆ ಭಾವದುಂಬಿ ಹಾಡಿದ "ಯಾವ ಮೋಹನ ಮುರುಲಿ ಕರೆಯಿತೋ" ಆಡಿಯೋ ಸೇರಿಸಿದಾಗ ನನಗಂತೂ ಕಣ್ಣು ತುಂಬಿ ಬಂದು- ಎದ್ದು ಬಂದುಬಿಟ್ಟೆ.

ಗೆಳೆಯನೊಬ್ಬ ಮಧ್ಯಾಹ್ನ ವಿಲ್ ಸ್ಮಿತ್ ನ ಸೆವೆನ್ ಪೌಂಡ್ ನೋಡುತ್ತ ಕೂತಿದ್ದಾಗ ರಾಜು ಅನಂತಸ್ವಾಮಿ ತೀರಿಕೊಂಡ ಸುದ್ದಿ ತಲುಪಿಸಿದ. ಕ್ಷಣ ಹೊತ್ತು ಮನಸ್ಸು ಪರದೆಯ ಮೇಲೆ ಓಡುತ್ತಿದ್ದ ಚಿತ್ರಗಳನ್ನಷ್ಟೇ ನೋಡುತ್ತಿತ್ತು. ಈ ಸಿನಿಮಾದಲ್ಲಿ ಆದಂತೆ ಯಾರಾದರೂ ರಾಜುಗೆ ಕಿಡ್ನಿ ದಾನ ಮಾಡಬಾರದಿತ್ತೇ ಅಂತ ಕ್ಷಣ ಅನ್ನಿಸಿದ್ದು ಸುಳ್ಳಲ್ಲ.

ಒಂದೂವರೆ ವರ್ಷದ ಹಿಂದೆ, ವಿದ್ಯಾರಣ್ಯ ಯುವಕ ಸಂಘದ ಗಣೇಶೋತ್ಸವದಲ್ಲಿ ತೀರಾ ಹೈರಾಣಾಗಿ ಹೋಗಿದ್ದ ರಾಜು, ನಿಂತುಕೊಳ್ಳಲೂ ಆಗದೆ, ಕೂರಲೂ ಆಗದೇ ಒದ್ದಾಡುತ್ತಿದ್ದರು. ಆವತ್ತು ಸುಶ್ರುತನಿಗೆ ಹೇಳಿದ್ದೆ, ಪ್ರಾಯಶ: ಇದು ರಾಜು ಕಡೆ ಕಾರ್ಯಕ್ರಮ ದೋಸ್ತಾ. ಇನ್ನು ಈ ಮನುಷ್ಯ ಹಾಡುವುದು ಡೌಟು.. ಆದರೆ ಆಮೇಲೆ ಸುಮಾರಿಗೆ ರಿಕವರ್ ಆಗಿದ್ದ ರಾಜು ಮತ್ತೆ ಚಿಗಿತುಕೊಂಡು ಹಳೇ ಉಮೇದಿನಿಂದಲೇ ಹಾಡಲು ತೊಡಗಿದ್ದರು. ಆದರೆ ಮೊದಲಿನ ಶಕ್ತಿ ಇಲ್ಲದ್ದು ಗೊತ್ತಾಗುತ್ತಿತ್ತು...

ನಾನು ಬಹುವಾಗಿ ಮೆಚ್ಚಿದ ಭಾವಗೀತೆಗಳ ಗಾಯಕ ರಾಜು ಅನಂತಸ್ವಾಮಿ. ನಾನು ಹೆಚ್ಚು "ಲೈವ್" ಕೇಳಿದ್ದು ಕೂಡ ರಾಜು ಅನಂತಸ್ವಾಮಿಯವರನ್ನೇ. ಬೆಂಗಳೂರಿಗೆ ಬಂದ ಮೇಲೆ ಏನಿಲ್ಲವೆಂದರೂ ಇಪ್ಪತ್ತಕ್ಕೂ ಹೆಚ್ಚು ಬಾರಿ ಇವರ ಕಾರ್ಯಕ್ರಮಗಳಿಗೆ ಹಾಜರಿ ಹಾಕಿದ್ದೆ. ರತ್ನನ ಪದಗಳು, ತಂದೆ ಸ್ವರ ಸಂಯೋಜಿಸಿದ ಎದೆ ತುಂಬಿ ಹಾಡುವೆನು.. ಬೇಂದ್ರೆಯವರ ಆವು ಈವಿನ.. ಇದನ್ನೆಲ್ಲ ಹೇಗೆ ಹಾಡುತ್ತಿದ್ದರು ರಾಜು! ವಿಚಿತ್ರ ಹಾಡುವ ಶೈಲಿ- ಥಟ್ ಅಂತ್ ಹಾಡು ನಿಲ್ಲಿಸಿಯೇ ಬಿಟ್ಟು ಅದನ್ನ ಮತ್ತೆ ಶುರು ಮಾಡಿ ನಗುವುದು.. ಇದನ್ನೆಲ್ಲ ಕೇವಲ ರಾಜು ಮಾತ್ರವೇ ಮಾಡಬಲ್ಲಂತದ್ದು.

ಹನುಮಂತ ನಗರ ಬಿಂಬದ ಅನಂತ ನಮನ ಕಾರ್ಯಕ್ರಮದಲ್ಲಿ ಸತತ ಒಂದು ವರ್ಷ ಪ್ರತಿ ತಿಂಗಳ ಒಂದು ಭಾನುವಾರ, ಹೊಸ ಗಾಯಕನೊಬ್ಬನ ಪರಿಚಯದ ವೇದಿಕೆಯಲ್ಲಿ, ರಾಜು ಪಕ್ಕ ಕೂತು ಹಾರ್ಮೋನಿಯಂ ಬಾರಿಸುತ್ತಿದ್ದರು. ಸಿಕ್ಕಾಪಟ್ಟೆ ಮೂಡು ಬಂದ ದಿನ ಕೋಳಿಕೇ ರಂಗನೋ, ನನ್ ಪುಟ್ನಂಜೀ ನೋ ಹಾಡುತ್ತಿದ್ದರು. ಯಾರಾದರೂ ಸಿಕ್ಕಾಪಟ್ಟೆ ಇಂತಾದ್ದೇ ಹಾಡು ಹಾಡಿ ಅಂತ ಕೋರಿದರೆ, ಖಂಡಿತವಾಗಲೂ ಆ ಹಾಡು ಹಾಡುವುದಿಲ್ಲ ಅಂತಲೇ ಲೆಕ್ಕ.

ಬಿಂಬದ ಕಾರ್ಯಕ್ರಮದಲ್ಲೇ ಒಂದು ದಿನ ಎ.ಎಸ್.ಮೂರ್ತಿ ಹೇಳಿದ್ದರು, "ದಿನಾ ಅಭಿಷೇಕ ಮಾಡಿಸುವಷ್ಟು ಬಾದಾಮಿ ಹಾಲು ಕೊಡಿಸ್ತೀನಿ ಮಾರಾಯ, ಪಾನಕ ಸೇವೆ ಬಿಡು"ಅಂತ. ಸುಮ್ನೆ ನಕ್ಕಿದ್ದರು ರಾಜು.

ನನಗೊಂದು ಆಸೆಯಿತ್ತು. ನಾನು ಬರೆದ ಕವನವೊಂದನ್ನು ರಾಜು ಅನಂತಸ್ವಾಮಿಯವರಿಗೆ ಕೊಟ್ಟು ಅವರ ರಾಗ ಸಂಯೋಜನೆ-ಧ್ವನಿಯಲ್ಲಿ ಆ ಹಾಡು ಕೇಳಬೇಕು.. ಆಸೆ... ಹಾಗೇ ಹೂತು ಹೋಯಿತು....ಬೃಂದಾವನ ಸೇರಿದ ಮಣ್ಣ ಕಣ್ಣಿನ ಜೊತೆಗೆ.

10 ಕಾಮೆಂಟ್‌ಗಳು:

Lakshmi Shashidhar Chaitanya ಹೇಳಿದರು...

:( :( :(

Ittigecement ಹೇಳಿದರು...

ಶ್ರೀನಿಧಿ...

ಇನ್ನೂ ಬಾಳಿ ಬದುಕುವ ವಯಸ್ಸಿತ್ತು.....

ಕಲಾಸೇವೆಯಾಗುತ್ತಿತ್ತು...

ಬಹಳ ಬೇಸರದ ಸಂಗತಿ...

ನಿಮ್ಮೊಂದಿಗೆ ನನ್ನದೂ ಭಾವಪೂರ್ಣ ಶ್ರದ್ಧಾಂಜಲಿ...

.................

ಮನಸ್ವಿ ಹೇಳಿದರು...

ರಾಜು ಅನಂತ ಸ್ವಾಮಿಯ ನಿಧನ ವಾರ್ತೆಯನ್ನು ನಂಬಲಾಗಲಿಲ್ಲ...ರಾಜು ಹಾಡುವಾಗ ನಗುವ ತುಂಟ ನಗೆಯನ್ನು ಮರೆಯಲು ಸಾಧ್ಯವಾಗುವುದಿಲ್ಲ... ರಾಜು ಅನಂತ ಸ್ವಾಮಿ ತನ್ನ ಕಛೇರಿಯ ಆರಂಭಕ್ಕೆ ಮುನ್ನ ತನ್ನ ತಂದೆಯವರಾದ ಮೈಸೂರು ಅನಂತ ಸ್ವಾಮಿ ಮೇಲೆ ರಚಿಸಿದ ಹಾಡು ಹಾಡುತ್ತಿದ್ದರು.. ಅದು ನನಗಿಂದು ನೆನಪಿಗೆ ಬರುತ್ತಿಲ್ಲ :( ರಾಜು ಅನಂತ ಸ್ವಾಮಿಯವರಿಗೆ ನನ್ನದು ಭಾವ ಪೂರ್ಣ ಶ್ರಧ್ಧಾಂಜಲಿ.. ಅವರ ಆತ್ಮಕ್ಕೆ ಶಾಂತಿ ಸಿಗಲಿ.

Vijaya ಹೇಳಿದರು...

sattavara bagge kettaddu maathadbaardu anthaare ... aadre, adyavdo talent hunt program nalli Raju bandid spardhigalanna heeyaalisid nodi, adakkintha munche idda impression hogbidtu :-(.

ತೇಜಸ್ವಿನಿ ಹೆಗಡೆ ಹೇಳಿದರು...

ಶ್ರೀನಿಧಿ,

ನನಗೆ ಮೊದಲು ಈ ವಿಷಯ ತಿಳಿದದ್ದು ಸುಶ್ರುತನ gmail ನ Satus bar messageನಿಂದ! ಆಗ ನನಗೆ ಅವರಾರೆಂದು ತಿಳಿದಿರಲಿಲ್ಲ. ಅದೇ ಕಾರಣಕ್ಕೆ ನನಗೂ ಸುಶ್ರುತನಿಗೂ ಸ್ವಲ್ಪ ಜಟಾಪಟಿಯೂ ಆಯಿತು :) ಆಮೇಲೆ ಎಲ್ಲಾ ವಿಚಾರಿಸಿದಾಗ್ ಹಾಗೂ ಮರುದಿನ ಪೇಪರ್ ನೋಡಿದಾಗ ತಿಳಿದದ್ದು ನಾನು ಹಲವಾರು ಧಾರಾವಾಹಿಗಳಲ್ಲಿ ನೊಡಿದ ಸುಪರಿಚಿತ ಮುಖವೇ ರಾಜು ಅವರದ್ದು ಎಂದು. ಅದಕ್ಕಿಂತಲೂ ಹೆಚ್ಚಾಗಿ ನನ್ನಚ್ಚುಮೆಚ್ಚಿನ "ಯಾವ ಮೋಹನ ಮುರಳಿ.." ಹಾಡಿಗೆ ರಾಗ ಸಂಯೋಜನೆ ಮಾಡಿ ಹಾಡಿದವರೂ ಅವರೇ ಎಂದು ತಿಳಿದು ಮತ್ತೂ ನೋವಾಯಿತು. ಹೆಸರು ಎಲ್ಲೋ ಮರೆತು ಬಿಟ್ಟಿದ್ದೆ. ಆದರೆ ಆ ರಾಗದ ಮೋಡಿಗೆ ನಾನೂ ಒಳಗಾಗಿದ್ದೆ. ಬಾಳಿ ಬದುಕಿ ಮತ್ತಷ್ಟು ಗಾನ ಸುಧೆಯನ್ನು ಹರಿಸಬೇಕಿದ್ದ ಕಂಠ ಈ ರೀತಿ ಕೊನೆಗೊಂಡಿದ್ದು ನಿಜಕ್ಕೂ ವಿಷಾದನೀಯ. :(

ಯಾರೋ ಹೇಳಿದ್ದು ಎಷ್ಟೊಂದು ನಿಜ...."ಮೊದ ಮೊದಲು ನೀ ಕುಡಿಯುವೆ.. ಆ ನಂತರ ಕುಡಿತವೇ ನಿನ್ನ ಕುಡಿಯುತ್ತದೆ!!" :(

Sree ಹೇಳಿದರು...

Eno bejaaru... neeve parvaagilla, naanu begnLUrallE iddu raju'du ondu live show ge kooda hoglilla!:(

ವಿನುತ ಹೇಳಿದರು...

ಈ ಒಂದು ದುರಂತದಿಂದ ಕೆಲವರಾದರೂ ಆ ಚಟದಿಂದ ಹೊರ ಬಂದರೆ, ಸಾವಲ್ಲೂ ಒಂದು ಸಂದೇಶ ನೀಡಿದ ಚೇತನವಾಗುತ್ತಾರೆ ರಾಜುರವರು....ಅದಾವ ನೋವು ಅವರನ್ನು ಇಂತದೊಂದು ದುಶ್ಚಟದ ದಾಸರನ್ನಾಗಿ ಮಾಡಿತ್ತೋ, ಅಂತದೊಂದು ನೋವಿನಿಂದ ಮುಕ್ತಿ ಹೊಂದಿದರು ಎಂಬ ಸಮಾಧಾನದಲ್ಲಿ ಅವರಾತ್ಮಕ್ಕೆ ಶಾಂತಿ ಕೋರಬೇಕಾಗಿದೆಯಷ್ಟೆ...

ಅನಾಮಧೇಯ ಹೇಳಿದರು...

ಹಾಯ್,

ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.

ಧನ್ಯವಾದಗಳು,

ಶಮ, ನಂದಿಬೆಟ್ಟ
http://minchulli.wordpress.com

ಅಂದ ಹಾಗೆ, ಆಹ್ವಾನ ಕಳುಹಿಸುವೆ ... ತಪ್ಪದೆ ಬನ್ನಿ

ಪೂರ್ಣ ವಿ-ರಾಮ ಹೇಳಿದರು...

ಶ್ರೀನಿಧಿಯವರೇ... ನಮಸ್ತೆ... ನಾನು ವಿನಾಯಕರಾಮ್... ವಿಜಯಕರ್ನಾಟಕ ಸಿನಿಮಾ ಭಾಗದಲ್ಲಿದ್ದೇನೆ. ರಾಜು ಬಗ್ಗೆ ನಿಮ್ಮ ಭಾವನೆಗಳು ಇಲ್ಲಿ ಅಕ್ಷರ ರೂಪ ಪಡೆದಿವೆ. ಎದೆ ಭಾರ. ಉಸಿರು ಹಸಿ ಹಸಿ... ನಾನು ಎರಡು ವಾರದಿಂದ ರಾಜು ಬಗ್ಗೆ ಸಿನಿ ವಿಜಯದಲ್ಲಿ ರಾಜು ಕಾಲಂ ಬರೆಯುತ್ತಿದ್ದೇನೆ. ದಯವಿಟ್ಟು ಬಿಡುವು, ಅವಕಾಶ ಇದ್ದರೆ ನೋಡಿ, ಪ್ರತಿಕ್ರಿಯೆ ಕೊಡಿ...
ವಿನಾಯಕರಾಮ್ ಕಲಗಾರು

Chandrika ಹೇಳಿದರು...

Aha! Avara "YAva mOhana muraLi"ya gAnakke miDiyada hRudayavilla!

YAva mOhana muraLi kareyitO avarannu gottilla, aadare, aa muraLiya-gAnaninAdadalli jagavE iMdu muLugihOgide.