ಬುಧವಾರ, ಫೆಬ್ರವರಿ 04, 2009

ಚಾರಣ ಚರಣಗಳು..

ದಿನಕ್ಕೆಷ್ಟು ಸಂಬಳ ನಿನಗೆ?" ಸುಮ್ಮನೆ ಕೇಳಿದೆ ಆತನ ಬಳಿ, ಹೋಗುವ ದಾರಿ ಸಾಗಲು ಏನಾದರೂ ಮಾತನಾಡಬೇಕಿತ್ತು.
"125 ರೂಪಾಯಿ" ಥಟ್ಟಂತ ಉತ್ತರ ಕೊಟ್ಟ. ಕಾಡು ದಾರಿ. ತರಗಲೆ ಸರಪರ ಸದ್ದು, ಬಿಟ್ಟರೆ ಹಿಂದೆಲ್ಲೋ ಬರುತ್ತಿರುವ ಸಂಗಡಿಗರ ದನಿ.
"ಸಾಕಾಗತ್ತನೋ ಸಂಬಳ" ಸುಮ್ಮನೆ ಕೇಳಿದೆ- ಅವನ ಕೈಲಿದ್ದ ಕಳ್ಳಭಟ್ಟಿಯ ಬಾಟಲು ನೋಡುತ್ತ. ಹುಂ, ಸಾಕಾಗುತ್ತದೆ, ಆದರೆ 100 ರೂಪಾಯಿ ಕುಡೀಯೋಕೆ ಬೇಕು".
"ಅರೇ, ನೂರು ರೂಪಾಯಿ ಕುಡಿಯೋಕೆ ಬೇಕು ಅಂತೀಯಲ್ಲೋ, ಮತ್ತೆ ಸಾಕಾಗೋದು ಹೇಗೆ ಮಾರಾಯ?"

ಅವನು ಸ್ವಲ್ಪ ಹೊತ್ತು ಮಾತಾಡದೇ ಹಾಗೇ ಮುಂದುವರಿಯುತ್ತಿದ್ದ. ನಾನು ಅವನ ಯಮವೇಗಕ್ಕೆ ನನ್ನನ್ನು ಹೊಂದಿಸಿಕೊಳ್ಳಲು ಪ್ರಯತ್ನ ಮಾಡುತ್ತ ಜೋರಾಗಿ ಹೆಜ್ಜೆ ಹಾಕಿದೆ.

ನಮಗೊಂದಿಷ್ಟು ಜನಕ್ಕೆ ಚಾರಣದ ಹುಚ್ಚು. ತಿಂಗಳಿಗೆ ಎರಡು ತಿಂಗಳಿಗೆ ಒಂದು ಬಾರಿಯಾದರೂ ಬೆಟ್ಟ-ಗುಡ್ಡ, ನದಿಕೊಳ್ಳ ಅಂತ ಓಡಾಡದಿದ್ದರೆ, ಉಂಡ ಅನ್ನ ಕರಗುವುದಿಲ್ಲ, ಸರಿ ನಿದ್ರೆ ಬರುವುದಿಲ್ಲ. ಹೀಗಾಗಿ, ಎಲ್ಲ ಮಾತಾಡಿಕೊಂಡು, ಎಂದಿನಂತೆ ಯಾವುದೋ ದೂರದೂರಿಗೆ, ಯಾವುದೋ ಬೆಟ್ಟ ಹತ್ತಲು ಹೋಗಿದ್ದೆವು. ಬೆಟ್ಟದ ಕೆಳಗಿನೂರಿನ ಇಬ್ಬರು ಯುವಕರು ನಮ್ಮ ಜೊತೆಗೆ ಬಂದಿದ್ದರು, ಗೈಡುಗಳಾಗಿ. ಐದಾರು ತಾಸು ನೆತ್ತಿಸುಡುವ ಬಿಸಿಲು ಮತ್ತು ಸುಸ್ತು. ಅವರಿಬ್ಬರು ಉತ್ಸಾಹ ತುಂಬದಿದ್ದರೆ, ನಾವ್ಯಾರು ಮೇಲೆ ಹತ್ತಲು ಸಾಧ್ಯವೇ ಇರಲಿಲ್ಲ.

ನನ್ನ ಜೊತೆಗೆ ಮಾತಾಡುತ್ತಿದ್ದವನ ಹೆಸರನ್ನು ರಾಜೀವ ಅಂತಿಟ್ಟುಕೊಳ್ಳಿ. ಮೂವತ್ತು ವರ್ಷವಿರಬಹುದು. ಚುರುಕು ನಡಿಗೆ, ತೇಜಸ್ವಿ ಕಾದಂಬರಿಯಿಂದ ಸಟಕ್ಕನೆ ಹೊರಗೆದ್ದು ಬಂದ ಹಾಗಿನವನು. ರಾತ್ರಿ ಕುಡಿಯದಿದ್ದರೆ ಆಗದು ಅಂತ, ಬೆಟ್ಟದ ಮತ್ತೊಂದು ತುದಿ ಇಳಿದು, 2-2 ತಾಸು ನಡೆದು ಕಳ್ಳಭಟ್ಟಿ ತಂದುಕೊಂಡವನು.

ರಾತ್ರಿಯಿಡೀ ಬೆಟ್ಟದ ಶಿಖರದಲ್ಲಿ ಕಳೆದು ಮಾರನೇ ದಿನ ಬೆಳಗ್ಗೆ ಅವರೋಹಣದಲ್ಲಿ ತೊಡಗಿದ್ದಾಗ ಈ ರಾಜೀವನ ಬಳಿ ಮಾತಿಗೆ ತೊಡಗಿದ್ದೆ. ಮೈ ಕೈ ನೋವು ನಮಗೆಲ್ಲ. ಈ ಯುವಕರಿಬ್ಬರು ಮಾತ್ರ ಗಟ್ಟಿಯಾಳುಗಳು. ಲವಲವಿಕೆಯಿಂದ ಕುಣಿಯುತ್ತ, ಆರಾಮಾಗಿ ಬರುತ್ತಿದ್ದರು ನಮ್ಮ ಜೊತೆ, ಕಳ್ಳಭಟ್ಟಿ ಕಾರಣವಿದ್ದರೂ ಇರಬಹುದು, ಬೇರೆ ವಿಚಾರ.

ರಾಜೀವನ ಬಳಿ ಮತ್ತೆ ಕೇಳಿದೆ, ನೂರು ರೂಪಾಯಿಯ ಖರ್ಚು ಕುಡೀಯೋಕೆ ಆದರೆ, ಹೊಟ್ಟೆ-ಬಟ್ಟೆಗೇನೋ ಅಂತ. ಅಯ್ಯ, ಅದೇನು ದೊಡ್ಡ ವಿಚಾರ ಅನ್ನುವ ಹಾಗೆ ಒಮ್ಮೆ ಹಿಂತಿರುಗಿ ನೋಡಿದವನೇ ತಾನು ಮತ್ತು ತನ್ನಂತವರು ಹೇಗೆ ಬದುಕುತ್ತಿದ್ದೇವೆ ಅನ್ನುವುದನ್ನು ವಿಸ್ತಾರವಾಗಿ ಹೇಳಿದ.

ಅದೇನೋ ಮರದ ಎಣ್ಣೆಯಂತೆ, ಕಿಲೋಗೆ 500 ರೂಪಾಯಿ, ವಾರದಲ್ಲಿ ಒಂದು ದಿನ ನಾಲಾರು ಜನ ಸೇರಿ ಕಾಡಲೆದು, ಎಣ್ಣೆಮರ ಹುಡುಕಿ, 3-4 ಕೇಜಿ ಎಣ್ಣೆ ಸಂಪಾದಿಸುತ್ತಾರಂತೆ,(ಕೊನೆಗೂ ಆ ಮರದ ಹೆಸರು ಹೇಳಲಿಲ್ಲ ಆಸಾಮಿ) ಇನ್ನು ಉಳಿದದಿನ ಧೂಪ, ಸೀಗೇಕಾಯಿ, ದಾಲ್ಚಿನ್ನಿ, ಜೇನು, ರಾಮಪತ್ರೆ- ಹೀಗೆ ಒಂದಲ್ಲ ಎರಡಲ್ಲ- ಕೇಜಿ 10ರಿಂದ ಹಿಡಿದು 300ರವರೆಗೆನ ಉತ್ಪನ್ನಗಳು ಕಾಡಲ್ಲೇ ಲಭ್ಯ. ಇವುಗಳನ್ನೆಲ್ಲ ಕಷ್ಟ ಪಟ್ಟು ಒಟ್ಟು ಮಾಡಿ ಮಾರಿದರೆ, ಆರಾಮಾಗಿ ಜೀವನ ಸಾಗಿಸಲು ಸಾಧ್ಯವಾದಷ್ಟು ದುಡ್ಡು ಗ್ಯಾರೆಂಟಿ. ಇವ್ಯಾವುದೂ ಇಲ್ಲದೇ ಹೋದರೆ, ದಿನಗೂಲಿ ಕೆಲಸ-125ರೂಪಾಯಿಗಳು.

ಹೇಗೆ ದುಡ್ಡು ಮಾಡಬೇಕೆಂಬುದನ್ನು ಚೆನ್ನಾಗಿ ಅರಿತಿರುವ ಆತನಿಗೆ, ಇಷ್ಟೆಲ್ಲ ಆದರೂ ಕಾಲದೇಶಗಳ ಬಗೆಗಿನ ಪರಿವೆಯೇ ಇರಲಿಲ್ಲ ಎಂಬುದು ನಮಗೆ ನಮ್ಮ ಪ್ರಯಾಣದ ಆರಂಭದಲ್ಲೇ ಗೊತ್ತಾಗಿತ್ತು. ಕಿಲೋಮೀಟರು ಎಂಬ ಮಾಪನದ ಅರಿವೇ ರಾಜೀವನಿಗೆ ಇರಲಿಲ್ಲ. ಹತ್ತಿರದ ದೊಡ್ಡ ಊರಿಗೆ 8 ರೂಪಾಯಿಯ ದೂರ, ಮತ್ತೂ ದೊಡ್ಡ ಪಟ್ಟಣಕ್ಕೆ 50 ರೂಪಾಯಿ ದೂರ!

ಜಗತ್ತಿನ ಇತರ ಯಾವುದೇ ಆಗುಹೋಗುಗಳ ಬಗೆಗಿನ ಚಿಂತೆ ರಾಜೀವನಿಗಾಗಲೀ, ಮತ್ತೊಬ್ಬನಿಗಾಗಲೀ ಅಗತ್ಯವೇ ಇರಲಿಲ್ಲ. ರಾಜೀವನ ಅಂದಾಜಲ್ಲಿ ಪ್ರಧಾನಮಂತ್ರಿ ಇನ್ನುಕೂಡ ವಾಜಪೇಯಿಯೇ. ನಾನು ಅವನನ್ನು ತಿದ್ದ ಹೊರಟರೂ, ಇರ್ಲಿ ಬಿಡಿ- ಯಾರಾದರೇನು ಅನ್ನುವ ಧಾಟಿಯ ಉತ್ತರ ಬಂತು.ಸುಮ್ಮನಾದೆ.

ಆ ಪುಟ್ಟ ಊರಿನಲ್ಲಿ ಬದುಕುವ ಅವರುಗಳಿಗೆ, ವಾರದಕೊನೆಯಲ್ಲಿ ಬೆಂಗಳೂರಿನಂತಹ ನಗರಗಳಿಂದ ಬರುವ ಬೆಟ್ಟ ಹತ್ತುವವರು, ಮನರಂಜನೆ ಮತ್ತು ಆದಾಯದ ಇನ್ನೊಂದು ಮೂಲವೂ ಹೌದು. ನಮಗೆ ಅವರ ಊರೆದುರಿನ ಬೆಟ್ಟ ಒಂದು ಚಾರಣಯೋಗ್ಯ ಸ್ಥಳ. ಅವರಿಗೋ, ಅದೊಂದಕ್ಕೆ ಬಿಟ್ಟು ಮತ್ತೆ ಉಳಿದೆಲ್ಲಕ್ಕೂ ಯೋಗ್ಯ. ಬ್ಯಾಗು ಹೊತ್ತು ಏದುಸಿರು ಬಿಡುತ್ತ ಸಾಗುವ ನಾವುಗಳು ಅವರ ಕಣ್ಣಿಗೆ ಪೆಕರಗಳು. ಏನೇ ಆದರೂ, ನಮ್ಮ ಜೊತೆ ನಗುನಗುತ್ತ, ಅದೂ ಇದೂ ಹರಟುತ್ತ, ನಾವು ಹೇಳುವ ನಗರದ ಕಥೆಗಳನ್ನು ಬೆರಗಿನಿಂದ ಕೇಳುತ್ತ ನಿಷ್ಕಲ್ಮಶ ನಗು ನಗುವ ಅವರುಗಳನ್ನ ನೋಡಿ ಹೊಟ್ಟೆಕಿಚ್ಚಾಯಿತು ನನಗೆ.

ಇತ್ತೀಚಿಗೆ ಪ್ರಾಮಾಣಿಕವಾಗಿ ನಗುವುದೂ ಮರೆತು ಹೋಗಿದೆಯಲ್ಲ!

12 ಕಾಮೆಂಟ್‌ಗಳು:

VENU VINOD ಹೇಳಿದರು...

ಒಳ್ಳೆ ಬರಹ ಶ್ರೀನಿಧಿ...ಚಾರಣದ ಹೊರ ಕವಚದೊಳಗೆ ಇಬ್ಬರು ಯುವಕರ ಬದುಕಿನ ಚಿತ್ರಣ ಖುಷಿಕೊಟ್ಟಿತು...ಹೊರ ಜಗತ್ತಿನ ಆಗುಹೋಗುಗಳು ಅವರ ಅರಿವಿಗೆ ಬರದೇ ಇರಲಿ...ಇಲ್ಲವಾದರೆ ಅವರೂ ನಗರಕ್ಕೆ ಬಂದು ನಮ್ಮಂತೆ ಅಲ್ಲೂ ಸಲ್ಲದೆ ಇಲ್ಲೂ ಸಲ್ಲದೆ ತ್ರಿಶಂಕುಗಳಾಗಿ ಬಿಟ್ಟಾರು! ಅಲ್ಲೇ ಇದ್ದು ಬದುಕನ್ನು ಚೆನ್ನಾಗಿ ಬದುಕಲಿ

ತೇಜಸ್ವಿನಿ ಹೆಗಡೆ ಹೇಳಿದರು...

ಮಂದಣ್ಣನ ನೆನಪನ್ನು ತರುವಂತಿದೆ ನಿನ್ನ ರಾಜೀವನ ಪಾತ್ರ. ಎಣ್ಣೆ ಕೊಡುವ ಮರದ ಸುಳಿವು ಅಪ್ಪಿ ತಪ್ಪಿ ಅವನು ನಿನ್ನ ಹತ್ರ ಹೇಳಿದರೂ(ಮುಂದೆಂದಾದರೂ) ನೀನು ಮಾತ್ರ ಎಲ್ಲಿಯೂ ಹೇಳದಿರು. ಆ ಮೇಲೆ ಎಣ್ಣೆಹಾಕಿ ಹುಡುಕಿದರೂ ಆ ಮರ ಎಲ್ಲೆಲ್ಲೂ ಸಿಗಂದಂತೆ ಮಾಡುತ್ತಾರೆ ಬುದ್ಧಿವಂತ ಮನುಷ್ಯರು.. ಹುಶಾರು..!! :)

Ittigecement ಹೇಳಿದರು...

ಮುಗ್ಧ ಜನರ ಚಿತ್ರಣ..ಚೆನ್ನಾಗಿದೆ...

ನೀವೆನ್ನುವದು ನಿಜ ನಾವು ..

ಮನಸ್ಪೂರ್ತಿಯಾಗಿ ನಗುವದನ್ನೇ ಮರೆತಿದ್ದೇವೆ...

ಪ್ರಾಮಾಣಿಕತೆ, ಮುಗ್ಧತನ ಒಳಗಿದ್ದರೆ..

ನಗುವಾಗಿ ಹೊರಗೆ ಬರ ಬಲ್ಲದು...

ಚಂದವಾದ ಬರಹಕ್ಕೆ..

ಅಭಿನಂದನೆಗಳು...

Parisarapremi ಹೇಳಿದರು...

ಚಾರಣಕ್ಕೆ ಹೋದಾಗ ಸಂಬಳದ ಬಗ್ಗೆ ಎಲ್ಲಾ ಹಾಗೆ ಮಾತಾಡ್ಬಾರ್ದು.

ಸುಪ್ತದೀಪ್ತಿ suptadeepti ಹೇಳಿದರು...

"ರಾಜೀವನ ಅಂದಾಜಲ್ಲಿ ಪ್ರಧಾನಮಂತ್ರಿ ಇನ್ನುಕೂಡ ವಾಜಪೇಯಿಯೇ."-- ಈ ರಾಜೀವನೇ ವಾಸಿ. ನಮ್ಮೂರಿನ ಹೊರವಲಯದಲ್ಲಿ 'ರಾಜೀವ'ನ ಅಮ್ಮನನ್ನೇ ಇನ್ನೂ "ಅಪ್ಪೆ" ಎಂದು ಆರಾಧಿಸಿ ಅವಳೇ ತಮ್ಮನ್ನೆಲ್ಲ ಸಲಹುತ್ತಿರುವ ಪ್ರಧಾನಿಯೆಂದೇ ತಿಳಿದಿರುವವರು ಇದ್ದಾರೆ.

ವಿನುತ ಹೇಳಿದರು...

ಹೀಗೊಮ್ಮೆ ’ಜಲಪಾತ’ ಅಂತ ಎನನ್ನೋ ಹುಡುಕ್ಕೊಂಡು, ಆ ಹಳ್ಳಿಯ ಜನರಿಂದ ನಗರದ ಬುದ್ದಿವಂತ ನಾಗರೀಕರಿಗೆ ದೊರೆತ ಪ್ರಶಂಸೆಯ ಪ್ರವಾಹದಲ್ಲಿ ಕೊಚ್ಚಿಹೋಗದೆ, ಕಂಡ ಒಂದು ಸಣ್ಣ ತೊರೆಗೇ ಸಮಾಧಾನ ಪಟ್ಟುಕೊಂಡು ಹಿಂತಿರುಗಿ ಬಂದ ಯಶೋಗಾಥೆಯ ನೆನಪಾಯಿತು!! ಮುಗ್ಧ ಜನರ ಸ್ನಿಗ್ಧ ಜೀವನದ ಕಿರು ಪರಿಚಯಕ್ಕೆ ಧನ್ಯವಾದಗಳು...

PARAANJAPE K.N. ಹೇಳಿದರು...

ಚೆನ್ನಾಗಿದೆ. ಹಳ್ಳಿಯ ಜನರ ಮುಗ್ಧತೆ ಮತ್ತು ನಿಶ್ಚಿ೦ತತೆ ನಿಮ್ಮ ಬರಹದಲ್ಲಿ ವ್ಯಕ್ತವಾಗಿದೆ.ಆದರೆ ನಗರವಾಸಿಗಳಿಗೆ ಇ೦ತಹ ನಾಳೆಯ ಬಗ್ಗೆ ಯಾವುದೇ ಚಿ೦ತೆಯಿಲ್ಲದ ಜೀವನಕ್ರಮ ಮತ್ತು ಮನೋಸ್ಥಿತಿ ಸಾಧ್ಯವಿಲ್ಲವೆ೦ದೇ ಹೇಳಬಹುದಲ್ಲವೇ ??
ನನದು ಒ೦ದು ಬ್ಲಾಗಿದೆ. ದಯವಿಟ್ಟು ಭೇಟಿ ಕೊಟ್ಟು ಅಭಿಪ್ರಾಯಿಸಿದಲ್ಲಿ ಸ೦ತೋಷ. http://www.nirpars.blogspot.com/

sapna ಹೇಳಿದರು...

hmmmm nim trekking kathe nodi hotte uritide nam plangalu ondad melond cancel agtane ide, bejaragutte. Adyaavag naavu hinge kaadu betta sutto adrushta sigutto gottilla.....

swapna
saviganasu.....

sapna ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Shiv ಹೇಳಿದರು...

ಶ್ರೀನಿಧಿ,
ಚಾರಣದ ನೆವದಲ್ಲಿ ಅಲ್ಲಿನ ಯುವಕರ ಜೀವನದ ಬಗ್ಗೆ ಒಳನೋಟ ನೀಡಿದಕ್ಕೆ ವಂದನೆಗಳು.

Pramod P T ಹೇಳಿದರು...

ಹಾಯ್ ಶ್ರೀನಿಧಿ,

ತುಂಬಾ ದಿನಗಳ ನಂತರ ನಿಮ್ಮ ಬ್ಲಾಗ್ ಗೆ ಭೇಟಿ. ಅಂದ ಹಾಗೆ ಯಾವ ಬೆಟ್ಟಕ್ಕೆ ಹೋಗಿದ್ದು?

ಚಿತ್ರಾ ಸಂತೋಷ್ ಹೇಳಿದರು...

ಕಳ್ಳಭಟ್ಟಿ ಮಾರಿಯೇ ಬದುಕು ಜೀವನ ಸಾಗಿಸೋರು ನಮ್ ಕಡೆ ಇದ್ದಾರೆ ಶ್ರೀನಿಧಿ. ಚಾರಣದ ಜೊತೆಗೆ ಅಲ್ಲಿನ ಯುವಕರ ಬದುಕನ್ನೂ ಕಟ್ಟಿಕೊಟ್ಟಿದ್ದೀರಾ?ಒಳ್ಳೆಯ ಬರಹ
-ಚಿತ್ರಾ