ಶನಿವಾರ, ಜುಲೈ 25, 2009

ಮಳೆ ಅಡ್ರೆಸ್ಸು!

ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಗೆ ಸವಾರಿ. ಆಫೀಸು ಕೆಲಸ. ಒಂದಿಷ್ಟು ಶೂಟಿಂಗಿತ್ತು. ಸಾವಯವ ಕೃಷಿ ಬಗ್ಗೆ. ತೀರ್ಥಹಳ್ಳಿ ಹತ್ತಿರದ ಒಂದು ಹಳ್ಳಿ, ಚಕ್ಕೋಡಬೈಲು ಅಂತ. ಅಲ್ಲಿ ಆ ದಿನ ಶೂಟಿಂಗ್ ಮಾಡಿ, ಮಾರನೇ ದಿನ ಹಾಸನಕ್ಕೆ ಬರಬೇಕಿತ್ತು. ಇದ್ದ ಕಡಿಮೆ ಸಮಯದಲ್ಲೇ ಆದಷ್ಟೂ ಹೆಚ್ಚಿನ ಕೆಲ್ಸ ಆಗಬೇಕಿತ್ತು.. ಹೀಗಾಗಿ ಸ್ವಲ್ಪವೂ ಸಮಯ ವ್ಯರ್ಥ ಮಾಡದೇ ಇಂಟರ್ವೂ,ವಿಶುವಲ್ಸು ಅಂತ, ಕ್ಯಾಮರಾಮನ್ ಗೆ ಪುರುಸೊತ್ತೇ ಕೊಡದೇ ಸತಾಯಿಸುತ್ತಿದ್ವಿ.

ಮಳೆಗಾಲದ ಆರಂಭದ ಸಮಯ. ಸಿಕ್ಕಾಪಟ್ಟೆ ಮೋಡಗಳು ಗುಂಪುಗೂಡಿ ನಮ್ಮ ಶೂಟಿಂಗ್ ನೋಡೋಕೆ ಬಂದವು. ನಂಗೆ ಒಳಗೊಳಗೇ ಹೆದರಿಕೆ ಶುರು. ಎರಡು ಕೊಡೆಗಳಿದ್ದರೂ, ಲಕ್ಷಾಂತರ ಬೆಲೆ ಬಾಳುವ ಕ್ಯಾಮರಾ ಬೇರೆ. ವಿಶಾಲ ಗದ್ದೆ ಬಯಲಿನ ಮಧ್ಯ ನಿಂತಿದೀವಿ ಬೇರೆ. ಮಳೆ ಏನಾದರೂ ಹುಚ್ಚುಕೊಡವಲು ಶುರು ಆದ್ರೆ, ಮಿನಿಮಮ್ ಅಂದ್ರೂ ಒಂದು ಕಿಲೋಮೀಟರು ಹೋದ ಮೇಲೇನೇ ಮನೆ ಸಿಗೋದು.

ಹೀಂಗೇ ಶೂಟಿಂಗು ಮುಂದುವರೀತಿತ್ತು. ಗದ್ದೆ ಕೋಣ ಗೊಬ್ಬರ-ಕ್ಲೋಸಪ್ಪು ಮಿಡ್ಡು ಲಾಂಗು ಇತ್ಯಾದಿ. ಹೀಂಗೇ ಒಂದ್ ಸಲ ಎಲ್ಲ ಸುಮ್ಮಗಾದ್ರು. ಏನಂತೀರಿ, ಜೋರು ಮಳೆ ಸದ್ದು ಕೇಳ್ತಿದೆ! ಆ ಗದ್ದೆ ಕೋವಿನ ಕೆಳಗೆ- ಭರ್ರೋ ಅಂತ ಮಳೆ ಸದ್ದು.ನಂಗೆ ಕೈ ಕಾಲೆಲ್ಲ ತಣ್ಣಗಾಗೋಕೆ ಶುರು.

ನನ್ನ ತಳಮಳ ಅರ್ಥ ಆಯ್ತು ಅನ್ನಿಸತ್ತೆ, ಅಲ್ಲೇ ಇದ್ದ ರೈತ ನಾಗರಾಜ ಮೇಲೆ ಆಕಾಶ ನೋಡುತ್ತ ತಣ್ಣಗೆ ಹೇಳಿದ.

"ನೀವೆಂತ ಹೆದ್ರ್ ಕ ಬೇಡಿ. ಈ ಮಳೆ, ಹಾಂಗೇ ಬ್ಯಾಣ ಹತ್ತಿ, ಶೀನಾಚಾರ್ರ ಮನೆ ಮೇಲಾಗಿ ಅವ್ರ ಕಣ ದಾಟಿ, ರಾಮ್ ಜೋಯ್ಸರ ತೋಟದ್ ಆಚಿಗಿಂದ ,ದೇವಸ್ತಾನದ್ ಬದಿಂಗಿಂದಾಗಿ ಗುಡ್ದಕ್ ಹೋಗತ್ತಂಗೆ ಕಾಣತ್ತಪ" .

ಶೀನಾಚಾರ್ ಮನಿಯಲ್ದ, ನಮ್ ವೆಂಕಪ್ಪನ್ ಮನಿ-ಮತ್ತೊಬ್ಬರ್ಯಾರೋ ತಿದ್ದಿದರು. ನಾನು ಬಿಟ್ಟ ಬಾಯಿ ಬಿಟ್ಟ ಹಾಗೇ.

ಮಳೆ ನಮ್ಮ ದಿಕ್ಕಿಗೆ ಬರಲೇ ಇಲ್ಲ .
ತೀರಾ ಬೆಂಗಳೂರಿನ ಬಸ್ಸಿನ ದಾರಿ ಹೇಳಿದ ಹಾಗೆ! ಅರೆ!.

3 ಕಾಮೆಂಟ್‌ಗಳು:

VENU VINOD ಹೇಳಿದರು...

:) :) :)
ನಗರದಿಂದ ಬಂದ ನಿಮ್ಮ ಕಡೆ ಮಳೆ ಬರ‍್ಲೇ ಇಲ್ಲ ನೋಡಿ.... ಪಾಪಿ ಹೋದಲ್ಲಿ.....hahaaha

sunaath ಹೇಳಿದರು...

ವೇಣಿ ವಿನೋದರು ಎಷ್ಟು perfect ಆಗಿ guess ಮಾಡಿದ್ದಾರೆ!

Annapoorna Daithota ಹೇಳಿದರು...

ವಿಷಯ ಚೆನ್ನಾಗಿದ್ದರೂ, ಪತ್ರಕರ್ತರ ವರದಿಯಂತಿದೆ, ವಿಷಯ ಹೇಳಬೇಕೆಂಬ ಅವಸರದಲ್ಲಿ ಬರೆದಂತಿದೆ.

ಬರೆಯೋ ಅಭ್ಯಾಸ ತಪ್ಪಿಹೋದಂತಿದೆ ಶ್ರೀನಿಧಿಗೆ, ಇನ್ನೊಂದು ರೀತಿಲಿ ಹೇಳ್ಬೇಕಂದ್ರೆ, ಶ್ರೀನಿಧಿಯ ಬರಹದಂತಿಲ್ಲ, ಶ್ರೀನಿಧಿಯ ‘ಟಚ್‘ ಇಲ್ಲ :-)

ನೇರ ಮಾತಿಗೆ ಕ್ಷಮೆ ಇರಲಿ,

ಯಾಕೇಂದ್ರೆ, ನಂಗೆ ಶ್ರೀನಿಧಿಯ ಬರಹ ಓದೋಕೆ ಇಷ್ಟ, ಅದು ಯಾವತ್ತಿನಂತಿಲ್ಲದಿದ್ರೆ ಮನಸಿಗೆ ಕಷ್ಟ.

ಲೆಕ್ಕ ಮಾಡ್ದೆ, ಇದೂ ಸೇರಿ, ಐದೇ ಸಲ ‘ಶ್ರೀನಿಧಿ’ ಅಂತ ಬರ್ದಿರೋದು :D