ಮಂಗಳವಾರ, ಜುಲೈ 21, 2009

ನವಿಲಗರಿಗೆ ಪ್ರಶ್ನೆಗಳು

ಯಾವುದೋ ಮರದಡಿ ಉದುರಿದ ನೀನು,ಕೃಷ್ಣ ಮುಕುಟವಾಸಿ
ಆತನ ಪಯಣದಿ ನೀನೂ ಸಖನೇ,ಭೂಮಂಡಲ ಸಂಚರಿಸಿ

ಬಾಲಕೃಷ್ಣನ ನವನೀತದ ಕೈ,ನಿನ್ನನೂ ಸವರಿರಬೇಕಲ್ಲ
ಮುರಾರಿ ಸಂಗಡ ಕುಣಿದಿರಬೇಕು ನೀನೂ ಗೋಕುಲ ತುಂಬೆಲ್ಲ

ಚೆಲ್ವ ಮೋಹನನ ವೇಣುವಿನೋದಕೆ ನೀನೂ ತೊನೆದೂಗಿರಬೇಕು
ಗೋಪಿಕೆಯರನವ ಸರಸಕೆ ಎಳೆವೊಡೆ ನಿನದೂ ಪಾಲಿದ್ದಿರಬೇಕು

ಅನುಭವಿಸಿಹೆಯೇ ಮುರುಲೀಧರ ಸಖಿ ರಾಧೆವಿದಾಯದ ಕಣ್ಣೀರು
ಚಿಮ್ಮಿರಬೇಕು ಕಂಸರಕ್ತಹನಿ,ಮತ್ತೆ ಹೂಮಳೆ ತುಂತುರು ಪನ್ನೀರು

ಮೆತ್ತಿದೆ ನಿನಗೂ ದ್ವಾರಕೆ ಧೂಳು,ಹಸ್ತಿನೆ ಚಿನ್ನದ ರೇಕು
ಸಮರಾಂಗಣದಲಿ ಪಾಂಚಜನ್ಯದಾ ಘೋಷವ ಕೇಳಿರಬೇಕು

ಭಗವದ್ ಗೀತೆಗೆ ಗಾಂಡೀವಿಯ ಜೊತೆ ನೀನೂ ಸಹಪಾಠಿ
ವಿಶ್ವರೂಪನಾ ನೆತ್ತಿಯ ಮೇಲಿಂ,ಕಂಡಿತೆ ಕುರುಕ್ಷೇತ್ರ ಕೋಟಿ?

ಕರ್ಣ ಕುತಂತ್ರವ ಶ್ರೀಹರಿ ಹೆಣೆದುದು ನಿನಗಂತೂ ಗೊತ್ತು
ಕೃಷ್ಣ ಪ್ರತಿಜ್ಞೆಯ ಮುರಿದ ಭೀಷ್ಮ ಶರ,ಸ್ವಲ್ಪದಿ ನಿನ್ನನೆ ತಾಕಿತ್ತು!

ಹೇಗದು ನೋಡಿದೆ ಯುದ್ಧವಿನಾಶವ,ರುಧಿರ ರಾಡಿ ಬಯಲ
ಮುಳುಗಿದ ದ್ವಾರಕೆ, ಯಾದವ ಕಲಹವ ಮತ್ತೆ ಕಲಿಯ ಕಾಲ?

ಆಲದ ಮರದಡಿ ಮಲಗಿರೆ ಶ್ಯಾಮನು ಬಂತೆ ಜರನ ಬಾಣ ಪಾಶ
ನಕ್ಕನೆ ನೀಲನು ಆ ನೋವಿನಲೂ,ಕಂಡೆಯ ಕೊನೆಯ ಮಂದಹಾಸ?


13 ಕಾಮೆಂಟ್‌ಗಳು:

Dileep Hegde ಹೇಳಿದರು...

ಶ್ರೀನಿಧಿ ಯವರೇ...

ಒಂದು ನವಿಲುಗರಿಯ ಮೂಲಕ ಶ್ರೀ ಕೃಷ್ಣನ ಸಂಪೂರ್ಣ ಜೀವನ ವೃತ್ತಾಂತ ನಮ್ಮೆದುರು ತೆರೆದಿಟ್ಟಿದೆ ನಿಮ್ಮ ಕವಿತೆ... ತುಂಬಾ ಇಷ್ಟವಾಯ್ತು...

ದಿಲೀಪ್ ಹೆಗಡೆ

ಸುಪ್ತದೀಪ್ತಿ ಹೇಳಿದರು...

ವಾವ್ ಶ್ರೀನಿಧಿ. ಲಾಲಿತ್ಯ, ಪಾಂಡಿತ್ಯ, ಕಥನ, ಮಂಥನ, ಎಲ್ಲವನ್ನೂ ಒಳಗೊಂಡ ಗೇಯ ಗೀತ ಇಷ್ಟವಾಯ್ತು.

ಸಿಂಧು sindhu ಹೇಳಿದರು...

ನಿಧಿ,

ಎರಡೂ ಕವಿತೆಗಳೂ ಸಿಕ್ಕಾಪಟ್ಟೆ ಇಷ್ಟ ಆತು. ಮಳೆಕವಿತೆ ಮತ್ತೆ ಮಳೆಗೆಜ್ಜೆ ಹುಡುಗಿಯ ಸುನಾದ ಕೇಳಿಸಿತು. ನವಿಲುಗರಿಗೆ ಪ್ರಶ್ನೆ ಹಾಕುವಾಗ ಪು.ತಿ.ನ ಏನಾದ್ರೂ ಆಲಂಗಿಸಿಕೊಂಡಿದ್ರಾ ಅನ್ನಿಸುತ್ತಿದೆ. ಆಪ್ತ ಭಾವಗಳ ನವಿರು ಸಂಯೋಜನೆ.

ಪ್ರೀತಿಯಿಂದ
ಸಿಂಧು

Sushrutha Dodderi ಹೇಳಿದರು...

ಶ್ರೀನಿಧಿಯೆಂಬ ಕವಿ ಮಾತ್ರ ಕೇಳಬಲ್ಲ ಇಂತಹ ಪ್ರಶ್ನೆಗಳನ್ನು ಹೀಗೆ ನವಿಲಗರಿಗೆ..

Shree ಹೇಳಿದರು...

ಕೃಷ್ಣಗುಚ್ಛಕ್ಕೆ ಮತ್ತೊಂದು ಚೆಂದದ ಗರಿ... ಕೆಲ ಸಾಲುಗಳಲ್ಲಿ ಮಾತ್ರೆ ವ್ಯತ್ಯಾಸ ಸರಿ ಮಾಡ್ಕೊಂಡ್ರೆ ಚಂದವಾಗಿ ಹಾಡಬಹುದಾದಂತಹ ಪದ್ಯ...

Lakshmi Shashidhar Chaitanya ಹೇಳಿದರು...

:) ಶ್ರೀನಿಧಿ, ಸಿಕ್ಕ್ ಸಿಕ್ಕಾಪಟ್ಟೆ ’ಇದಾಗಿದೆ’ ಕವನ.

Manjula ಹೇಳಿದರು...

ತುಂಬಾ ಚೆನ್ನಾಗಿ ಮೂಡಿ ಬಂದಿದೆ :)

Unknown ಹೇಳಿದರು...

ಶ್ರೀನಿಧಿ ಅವರೇ,

ತುಂಬಾ ಸುಂದರವಾದ ಕವನ. ಕೃಷ್ಣನ ಜೀವನ ಸಂಕ್ಷಿಪ್ತವಾಗಿ ಕಣ್ಣ ಮುಂದೆ ಹಾದುಹೋಯ್ತು. ಮನ ಮುಟ್ಟಿ ಕಣ್ಣೀರು ತಂದಿದ್ದಕ್ಕೆ ಧನ್ಯವಾದಗಳು.

ಮೀನಾ ಜೋಇಸ್

sunaath ಹೇಳಿದರು...

ಪುತಿನ ಅವರ ಗೀತೆಗಳ ನೆನಪಾಯ್ತು.

Parisarapremi ಹೇಳಿದರು...

Life History of a great man-u.... :-)

What a great man he was!!!

Ittigecement ಹೇಳಿದರು...

ಶ್ರೀನಿಧಿ....

ನಿಮ್ಮೊಳಗೆ ಒಬ್ಬ ಸೊಗಸಾದ "ಕವಿ" ಇದ್ದಾನೆ....

ಬಲು ಸುಂದರ ಕವಿತೆ....

ಶ್ರೀನಿಧಿ.ಡಿ.ಎಸ್ ಹೇಳಿದರು...

ಪ್ರತಿಕ್ರಿಯಿಸಿದ ಎಲ್ಲರಿಗೂ ಕೃತಜ್ಞ. ನಿಮ್ಮಗಳ ಇಂತಹ ಪ್ರೋತ್ಸಾಹ ಮತ್ತೊಂದು ಕವನ ಬರೆಸುತ್ತದೆ. ನಮಸ್ತೇ.

Rashmi ಹೇಳಿದರು...

:) ಕಣ್ಣಲ್ಲಿ ಕೃಷ್ಣ ಹಾದು ಹೋದ, ತುಟಿ ಮೇಲೆ ಮಂದಹಾಸ.....