ಮಂಗಳವಾರ, ಅಕ್ಟೋಬರ್ 13, 2009

ಹಬ್ಬದ ಸಂಜೆ

ಬೆಟ್ಟ ತಪ್ಪಲಿನಾಚೆ ಕರಿಮೋಡ ಕವಿಯುತಿದೆ
ಇಲ್ಲಿ ಹೊಳೆಯುವ ಬೆಳಕು, ಮಾಗು ಬೈಗು
ನೆಟ್ಟನೋಟದ ಕಣ್ಣು ಬಯಲಾಚೆ ನೋಡುತಿದೆ
ಹೊಸ್ತಿಲಿನ ಹುಡುಗಿಗೆ, ಅವನದೇ ಗುಂಗು

ಮನೆಯ ಮಂದಿಯ ಗೌಜು ಹಬ್ಬವಾಗಿದೆಯಿಲ್ಲಿ
ಇವನ ಬರವಿನ ಅರಿವು ಯಾರಿಗಿಲ್ಲ
ಕತ್ತಲಿನ ನಡೆಯವಗೆ ಹೆಚ್ಚು ತಿಳಿಯದು ಬೇರೆ
ಮುಗಿಲೊಡೆಯುವಾ ಮೊದಲೆ ಬರುವನಲ್ಲ?

ಮುಂಜಾವು ಕಟ್ಟಿದ್ದ ಬಾಗಿಲಿನ ಹೂಮಾಲೆ,
ಈಕೆ ವದನದ ಹಾಗೆ ಮೆಲ್ಲ ಬಾಡುತಿದೆ
ಕುರುಡುದೀಪಗಳೆಲ್ಲ ಕಣ್ಣ ಬೆಳಕಿಗೆ ಕಾದು
ಇವಳಂತೆಯೇ ಪಾಪ, ಸುಸ್ತಾಗಿವೆ

ಶಂಖದನಿಗಳ ಮಧ್ಯೆ ಪೂಜೆ ಮಂಗಲ ಕಾರ್ಯ
ದೇವರೆದುರಲೂ ಮನ ಹರಿವ ಝರಿಯು
ಹೊರಗೆ ಏನೋ ಮಾತು, ಸಣ್ಣ ಸರಭರದೋಡು
ನಡೆದಿಹುದು ಮೆಲ್ಲ, ಉಭಯಕುಶಲೋಪರಿಯು

ಆರತಿಯ ತಟ್ಟೆಯನು ಹಿಡಿದು ನಡೆಯುತಲಿರಲು
ತಡೆದ ಕೈಗಳ ಬಿಸುಪು ಲಜ್ಜೆ ತರಿಸಿತ್ತು
ಸಾಲುದೀಪಗಳೆಲ್ಲ ಒಂದೊಂದೇ ನಗುತಿರಲು
ಹೊರಗೆ ಅಂಗಳದಲ್ಲಿ ನೆಲವು ನೆನೆದಿತ್ತು..

13 ಕಾಮೆಂಟ್‌ಗಳು:

Anju ಹೇಳಿದರು...

nande first commnt..:-) Already told.. bt Once agin..Super..

sunaath ಹೇಳಿದರು...

ಕೆ.ಎಸ್.ನರಸಿಂಹಸ್ವಾಮಿ reincarnate! ನೀವು ಹೆಸರು ಹಾಕಿರದಿದ್ದರೆ ಇದು ಅವರದೇ ಕವನವೆಂದು ನಂಬಿಬಿಡಬಹುದು.
ಆದರೆ ಇದರಲ್ಲಿ ನಿಮ್ಮದೇ ಸ್ವಂತಿಕೆ ಇದೆ. ಅದು ಪ್ರಶಂಸನೀಯ.

VENU VINOD ಹೇಳಿದರು...

ಸುನಾಥ್ ಹೇಳಿದ್ದಕ್ಕೆ ನನ್ನದೂ ಸಹಮತ...ಸುಂದರ ಭಾವಗೀತೆಯಿದು..ನನ್ನ ಸಂಜೆಯನ್ನು ಸುಂದರಗೊಳಿಸಿದ್ದಕ್ಕೆ ವಂದನೆ
-venu/13-10-2009/08.35

sughosh s. nigale ಹೇಳಿದರು...

ಸೂಪರ್ಬ್....

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ನಿಜವಾಗ್ಲೂ ರಾಶೀ ಇಷ್ಟಾ ಅತು :-)

ತೇಜಸ್ವಿನಿ ಹೆಗಡೆ ಹೇಳಿದರು...

"ಸಾಲುದೀಪಗಳೆಲ್ಲ ಒಂದೊಂದೇ ನಗುತಿರಲು
ಹೊರಗೆ ಅಂಗಳದಲ್ಲಿ ನೆಲವು ನೆನೆದಿತ್ತು.."

ಅದ್ಭುತ ಕವನ ಶ್ರೀನಿಧಿ. ನಿಜವಾಗಿಯೂ ನಾನೀ ಕವನದ ಮಾಧುರ್ಯಕ್ಕೆ ಸೋತು ಹೋದೆ. ಮೇಲಿನ ಸಾಲಂತೂ ನನ್ನನ್ನು ಅರೆಕ್ಷಣ ಭಾವಪರವಶಳನ್ನಾಗಿಸಿತು. ಇಂತಹ ಸುಂದರ ಕವನವನ್ನು ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದ.

Parisarapremi ಹೇಳಿದರು...

oLLe habba. :-)

ondu raaga haakappa idakke. mOhana raaga.

Greeshma ಹೇಳಿದರು...

ಚಲೋ ಇದ್ದು!

ವಿ.ರಾ.ಹೆ. ಹೇಳಿದರು...

ಸಂಗೀತ ಸೇರಿದರೆ ಅದ್ಭುತ!

Unknown ಹೇಳಿದರು...

yavattina haage iduu raashi chenda banju, bahu dinagaLa nantara nin kavana odalle aatu... nice one

ಸುಪ್ತದೀಪ್ತಿ ಹೇಳಿದರು...

ಅಬ್ಬಾ, ಮಲ್ಲಿಗೆ ಕವಿ ನಿನ್ನೊಳಗೇ ಅವತರಿಸಿರುವ ಹಾಗಿದೆ. ಹೊಟ್ಟೆಕಿಚ್ಚಾಗ್ತಿದೆ.

jomon varghese ಹೇಳಿದರು...

ಚೆನ್ನಾಗಿದೆ....

sapna ಹೇಳಿದರು...

ಏನು ತಂಗಿ ಮದುವೆ ಗುಂಗಲ್ಲೇ ಬರೆದ ಹಾಗಿದೆ? ಚೆನ್ನಾಗಿದೇ ಕಲ್ಪನೆ.