ಸುತ್ತ ಎತ್ತ ತಿರುಗಿದರೂ ಹಿಮಾಚ್ಛಾದಿತ ಬೆಟ್ಟಗಳು. ತುದಿಯಲ್ಲಿ ಬಿಳಿಹಿಮದ ಟೊಪ್ಪಿ, ಹಸಿರ ಇಳಿಜಾರ ತಪ್ಪಲು. ಉದ್ದುದ್ದನೆಯ ದೇವದಾರು ಮರಗಳ ಕಾಡುಗಳು..ತಂಪು ಗಾಳಿಯಲ್ಲಿ ತೇಲಿ ಬರುವ ಕಾಡುಹೂವ ಗಂಧ. ಇದಕ್ಕಿಂತ ಶುದ್ಧವಾದ ಗಾಳಿ ಅದೆಲ್ಲೂ ಬೀಸಲಾರದೇನೋ ಎಂಬ ಅನುಭೂತಿ. ಗಾಢ ಬಣ್ಣದ ಮರದ ಮನೆಗಳು, ಹಿಮಗಾಳಿಗೆ ಛಾವಣಿ ಅಲುಗಬಾರದೆಂಬ ಕಾರಣಕ್ಕೆ ಮನೆಗಳ ನೆತ್ತಿಯ ಮೇಲೆ ಕಪ್ಪು ಕಲ್ಲುಗಳ ಸಾಲು. ಮೈತುಂಬ ಉಣ್ಣೆಯ ಬಟ್ಟೆಗಳನ್ನ ಬೆಚ್ಚಗೆ ಹೊದ್ದುಕೊಂಡ ಚಿಣ್ಣರು. ಸೊಗಸಾದ ಗ್ರಾಮ ದೇಗುಲಗಳು. ನಗು ನಗುತ್ತಲೇ ಮಾತನಾಡಿಸುವ ಮಾನಿನಿಯರು. ಹೇಸರಗತ್ತೆ, ಕುದುರೆಗಳನ್ನ ನಮ್ಮಲ್ಲಿನ ದನಗಳ ಹಾಗೆ ದೊಡ್ಡಿಗೆ ಹೊಡೆದುಕೊಂಡು ಹೋಗುವ ಗಂಡಸರು..ಗ್ರಹಣ ಎಂಬ ಹಳ್ಳಿ ನಮ್ಮನ್ನ ಸ್ವಾಗತಿಸಿದ್ದು ಹೀಗೆ.ಹಿಮಮಯ ಪರ್ವತ ಶ್ರೇಣಿಗಳ ಮಧ್ಯೆ ಅಡಗಿಕೊಂಡಿರುವ ಈ ಊರು ಒಂದು ಪುಟ್ಟ ಸ್ವರ್ಗವೇ ಸರಿ!
ಜಗದ ಎಲ್ಲ ಜಂಜಡಗಳನ್ನ ಮರೆತು ಪ್ರಕೃತಿಯ ಮಧ್ಯೆ ಕಳೆದುಹೋಗಬೇಕು ಎಂಬ ಆಸೆಯಿದ್ದರೆ ಈ ಹಳ್ಳಿಯೇ ನಿಮ್ಮ ಮುಂದಿನ ತಾಣ. ಹಿಮಾಚಲ ಪ್ರದೇಶದ, ಕುಲು ಜಿಲ್ಲೆಯಲ್ಲಿರುವ ಗ್ರಹಣ್ ಹಳ್ಳಿ, ಸಮುದ್ರ ಮಟ್ಟದಿಂದ ಎರಡೂವರೆ ಸಾವಿರ ಮೀಟರ್ ಎತ್ತರದಲ್ಲಿದೆ. ಹಿಮಾಚಲದ ರಾಜಧಾನಿ ಶಿಮ್ಲಾದಿಂದ ೧೩೦ ಕಿಲೋಮೀಟರ್ ದೂರದಲ್ಲಿರುವ ಗ್ರಹಣ್, ಹಿಮಾಲಯದ ಗರ್ಭದೊಳಗೆ ಹುದುಗಿದೆ. ಹತ್ತಿರದ ಊರು ಕಸೋಲ್, ೧೦ ಕಿ. ಮೀ ದೂರ. ಹಾಂ, ಹತ್ತೆಂಬುದು ಕೇವಲ ಅಂಕೆ ಅಷ್ಟೇ. ಯಾಕೆಂದರೆ ಹತ್ತು ಕಿಲೋಮೀಟರ್ ದೂರ ಕ್ರಮಿಸಬೇಕು ಎಂದರೆ ನಾಲ್ಕರಿಂದ ಐದುತಾಸುಗಳ ಏರು ದಾರಿಯ ನಡಿಗೆ ಅನಿವಾರ್ಯ!
ಆದರೆ ಈ ಪಯಣದ ದಾರಿಯ ಸೊಬಗು, ಆಗಬಹುದಾದ ಎಲ್ಲ ಆಯಾಸವನ್ನು ಮರೆಸುವುದರಲ್ಲಿ ಅನುಮಾನವೇ ಇಲ್ಲ. ಹಿಮಾಲಯದ ತಪ್ಪಲಿನ ಕಸೋಲ್ ಊರಿನ ಹೊರಗೆ ಹರಿಯುವ ಪಾರ್ವತೀ ನದಿಯ ಗುಂಟ ಹೊರಡುವ ಹಾದಿಯನ್ನು ಹಿಡಿದು ನಡೆಯಲು ಆರಂಭಿಸಿದರೆ ತಪ್ಪದ ದಾರಿಯಲ್ಲೂ ನೀವು ಕಳೆದುಹೋಗುತ್ತೀರಿ! ಏಕೆಂದರೆ ಅಲ್ಲಿನ ಸೊಬಗು ಹಾಗಿದೆ. ಸಾಲು ಮರಗಳ ಕೆಳಗೆ ಎಳೆ ಬಿಸಿಲಾ ಮಣಿ ಕನಕ.. ಎನ್ನುವ ನರಸಿಂಹ ಸ್ವಾಮಿಯವರ ಕವನದ ಸಾಲಿನ ನಿಜಾರ್ಥ ಇಲ್ಲಿ ಸಾಕಾರಗೊಳ್ಳುತ್ತದೆ. ಹಿಮ ಕರಗಿ ಹರಿಯುವ ಹಳ್ಳಕೊಳ್ಳಗಳು ಉದ್ದಕ್ಕೂ ನಮ್ಮ ಜೊತೆಗೆ ಬರುತ್ತವೆ. ಮಧ್ಯದಲ್ಲೆಲ್ಲೋ ಒಂದಿಷ್ಟು ಕುರಿಗಳನ್ನ ಕೆಳಗಿ ಮೇಯಿಸಲು ಕರೆದುಕೊಂಡು ಬಂದಿರುವ ಹಳ್ಳಿಗರು ಸಿಗುತ್ತಾರೆ. ಭಾಂಗ್ ನ ನಶೆಯಲ್ಲಿ ಮೆತ್ತಗೆ ಓಲಾಡುತ್ತ ನಮ್ಮ ನೋಡಿ ನಕ್ಕು ತಮ್ಮ ಪಾಡಿಗೆ ಕಾಡಿನ ಮಧ್ಯೆ ನಡೆದು ಹೋಗುತ್ತಾರೆ.
ದಟ್ಟ ದೇವದಾರು ಮರಗಳ ಮಧ್ಯೆ ನಡೆದು ಹೋಗುವುದೇ ಇಲ್ಲಿನ ಮಧುರಾನುಭೂತಿಗಳಲ್ಲೊಂದು. ಉದ್ದುದ್ದಕ್ಕೆ ಬೆಳೆದು ನಿಂತಿರುವ ಮರಗಳಲ್ಲಿ ಬಗೆಬಗೆಯ ಹಕ್ಕಿಗಳ ಕೂಜನ.. ಪಕ್ಕದಲ್ಲೇ ಸದ್ದು ಮಾಡುತ್ತ ಹರಿವ ನದಿ, ಎತ್ತರೆತ್ತರಕ್ಕೆ ಏರುತ್ತಿದ್ದಂತೆ ನಮ್ಮನ್ನಾವರಿಸುವ ತೆಳು ಮೋಡದ ಪರದೆ.. ಮಳೆಯೋ ಮಂಜಹನಿಯೋ ಗೊತ್ತಾಗದ ತುಂತುರು.. ಹೀಗೆ ಇವೆಲ್ಲವುಗಳನ್ನ ದಾಟಿಕೊಂಡು ಬಂದರೆ ಗ್ರಹಣ್ ನಮ್ಮೆದುರಿಗೆ ತೆರೆದುಕೊಳ್ಳುತ್ತದೆ.
ಕೇವಲ ಅರವತ್ತೆಪ್ಪತ್ತು ಮನೆಗಳಿರುವ ಗ್ರಹಣ್, ಪಾರ್ವತಿ ಕಣಿವೆಯ ನೆತ್ತಿಯಲ್ಲಿರುವ ಕೊನೆಯ ಹಳ್ಳಿ. ಸರ್ ಪಾಸ್ ಎಂಬ ಹಿಮಾಲಯ ಪರ್ವತ ಶ್ರೇಣಿಯ ಚಾರಣಿಗರು, ಹೆಚ್ಚಾಗಿ ಗ್ರಹಣ್ ದಾಟಿಕೊಂಡೇ ಮುನ್ನಡೆಯುವುದರಿಂದ ಈ ಹಳ್ಳಿಯ ಸೌಂದರ್ಯ ಜಗತ್ತಿಗೆ ಅರಿವಾಯಿತು. ಬೆಟ್ಟವೊಂದರ ಮಧ್ಯೆ ನಿರ್ಮಿತಗೊಂಡಿರುವ ಈ ಹಳ್ಳಿಯ ಮಂದಿ ಜೀವನೋಪಾಯಕ್ಕೆ ಹತ್ತಿರದ ಕಸೋಲ್ ಪಟ್ಟಣವನ್ನೇ ನೆಚ್ಚಿಕೊಂಡಿದ್ದಾರೆ. ಹೆಚ್ಚಿನ ಯುವಕರು ಅಲ್ಲಿ ಟೂರಿಸ್ಟ್ ಗೈಡ್ ಆಗೋ ಅಂಗಡಿಗಳಲ್ಲೋ ಕೆಲಸ ನೋಡಿಕೊಂಡಿದ್ದರೆ, ಭತ್ತ ಬಾರ್ಲಿಗಳನ್ನ ಗುಡ್ಡದ ತಪ್ಪಲಲ್ಲಿ ಬೆಳೆಯುವ ಊರ ಹಿರಿಯರು ಬೇಸಾಯವನ್ನೇ ಆಧರಿಸಿಕೊಂಡಿದ್ದಾರೆ.
ಗ್ರಹಣ್ ಗೆ ವರುಷವಿಡೀ ಮಳೆ ಮೋಡಗಳಿಂದಲೋ, ಮಂಜಿನಿಂದಲೋ ಮುಕ್ತಿಯಿಲ್ಲ.ಸದಾಕಾಲ ಸೂರ್ಯನ ಕಿರಣಗಳಿಂದ ವಂಚಿತವಾಗಿಯೇ ಇರುವುದಕ್ಕೆ ಗ್ರಹಣ ಎನ್ನುವ ಹೆಸರಂತೆ ಈ ಊರಿಗೆ! ಆದರೆ ನಾವೊಂದಿಷ್ಟು ಸ್ನೇಹಿತರು ಅಲ್ಲಿಗೆ ತೆರಳಿದ್ದಾಗ ಅದು ಸೂರ್ಯದೇವನು ಪ್ರಸನ್ನನಾಗಿದ್ದ ಕಾಲ.ಮಳೆ-ಮಂಜಿನ ಮಧ್ಯೆಯೂ ಆಗಾಗ ಆತ ಕಾಣಿಸಿಕೊಂಡು ನಗು ಬೀರಿದ.ಹೀಗಾಗಿ ಅಲ್ಲಿನ ನಿಜದ ತೊಂದರೆ ಅರಿವಾಗಲಿಲ್ಲ. ಆದರೆ ಅಲ್ಲಿನ ನಿವಾಸಿಗಳ ಜೀವನ ನಿಜಕ್ಕೂ ಕಷ್ಟಕರ.ದಟ್ಟ ಕಾಡಿನ ಮಧ್ಯೆ ಸಾಗಿ ಬಂದಿರುವ ವಿದ್ಯುತ್ ಲೈನು ಎರಡು ದಿನ ಕರೆಂಟು ನೀಡಿದರೆ ಮತ್ತೆ ಹದಿನೈದು ದಿನ ನಾಪತ್ತೆ. ಊರಿಗೊಂದೇ ಫೋನು! ಅದೂ ಕೆಟ್ಟರೆ ಅಷ್ಟೇ ಕತೆ. ಎಲ್ಲೋ ಕಣಿವೆಯಲ್ಲಿ ಬಿದ್ದ ಮರದ ಗೆಲ್ಲು ಹೊರ ಜಗತ್ತಿನಿಂದ ಸಂಪೂರ್ಣವಾಗಿ ಗ್ರಹಣ್ ನ ಸಂಪರ್ಕ ಕಡಿದು ಬಿಡುತ್ತದೆ! ಹಳ್ಳಿಯಲ್ಲೊಂದು ಶಾಲೆಯಿದೆ. ಅದೂ ಪ್ರೈಮರಿ ಸ್ಕೂಲು. ಆಮೇಲಿನ ಶಿಕ್ಷಣಕ್ಕೆ ನಿತ್ಯ ೨೦ ಕಿಲೋಮೀಟರು ಹತ್ತಿಳಿಯುವುದು ಅಸಾಧ್ಯದ ಮಾತು. ಮೊದಲೇ ಬಡಮಂದಿ. ಎಲ್ಲೋ ಉಳ್ಳ ಒಂದಿಷ್ಟು ಮಂದಿ ಮಾತ್ರ ದೂರದ ಊರಗಳಲ್ಲಿ ಮಕ್ಕಳನ್ನ ಉಳಿಸಿ ಶಿಕ್ಷಣ ಕೊಡಿಸುತ್ತಾರಂತೆ. ಮೂಲಭೂತ ಸೌಕರ್ಯಗಳು ಸಮರ್ಪಕವಾಗಿಲ್ಲ. ಜನಪ್ರತಿನಿಧಿಗಳು ಬೆಟ್ಟ ಹತ್ತಿ ಬಂದು ಮಾತನಾಡಿಸಿದ ದಾಖಲೆಯೇ ಇಲ್ಲ. ತೀವ್ರ ಮಂಜು ಸುರಿಯುವ ಕಾಲದಲ್ಲಿ ಈ ಹಳ್ಳಿಯಲ್ಲಿ ಮೂರು ನಾಲಕ್ಕು ಅಡಿಗಳಷ್ಟು ಹಿಮ ಬಿದ್ದಿರುತ್ತದೆಯಂತೆ! ಆಗಿನ ನಮ್ಮ ಕತೆ ದೇವರಿಗೇ ಪ್ರೀತಿ ಎಂದು ಹಳ್ಳಿಗರು ನಿಟ್ಟುಸಿರು ಬಿಡುತ್ತಾರೆ.
ಹಾಗೆಂದು ಹಳ್ಳಿಗರ ಜೀವನಪ್ರೀತಿಗೆ ಯಾವುದೇ ಕೊರತೆಯಿಲ್ಲ. ಬಂದ ಪ್ರವಾಸಿಗರನ್ನ ನಗುನಗುತ್ತಲೇ ಮಾತನಾಡಿಸುತ್ತಾರೆ. ಅಂಥ ದುರ್ಗಮ ಊರಿನಲ್ಲೂ ಒಂದು ಪುಟ್ಟ ಕೆಫೆ ಇದೆ. ಹೋಂ ಸ್ಟೇ ಇದೆ. ಅದರ ಮಾಲಿಕ ತೀರಾ ಸಾಮಾನ್ಯ ಬೆಲೆಗೆ ಟೀ ಕಾಫಿ ನೀಡುವುದನ್ನ ನೋಡಿ ನಾವು ದಂಗುಬಡಿದು ಹೋದೆವು. ಸ್ಯಾಂಡ್ ವಿಚ್ಚಿನಿಂದ ತೊಡಗಿ ಪಿಜ್ಜಾದವರೆಗೆ ಎಲ್ಲವೂ ಲಭ್ಯ! ಹಿಮದ ಟೋಪಿಗಳನ್ನ ಹೊದ್ದ ಪರ್ವತ ಶ್ರೇಣಿಗಳನ್ನ ದಿಟ್ಟಿಸುತ್ತ ತಂಪು ಸಂಜೆಯಲ್ಲಿ ಬಿಸಿ ಚಹಾ ಹೀರುವ ಸಂತೋಷವನ್ನು ಬರಹದಲ್ಲಿ ಹೇಳಲು ಸಾಧ್ಯವೇ ಇಲ್ಲ. ನಾವು ಚಹಾ ಹೀರುತ್ತ ಕೂತಿದ್ದಾಗ ಅಲ್ಲೇ ಪಕ್ಕದ ಪುಟ್ಟ ಮೈದಾನದಲ್ಲಿ ಒಂದಿಷ್ಟು ಮಕ್ಕಳು ಕ್ರಿಕೆಟ್ ಆಟದಲ್ಲಿ ಮುಳುಗಿದ್ದರು. ಕರೆಂಟೇ ಸರಿಯಾಗಿ ಇಲ್ಲದ ಊರನ್ನೂ ಈ ಕ್ರಿಕೆಟ್ ಆವರಿಸಿದೆಯಲ್ಲಪ್ಪ ಎಂದು ಅಚ್ಚರಿಯಾಯಿತು!
ದೇವರ ಬಗ್ಗೆ ಅಪಾರ ನಂಬುಗೆ ಹೊಂದಿರುವ ಹಳ್ಳಿಯ ಮಂದಿ ತಮ್ಮ ಗ್ರಾಮದೇವರಿಗೆ ಸುಂದರವಾದ ಮಂದಿರ ನಿರ್ಮಿಸಿದ್ದಾರೆ. ಪ್ರಕೃತಿ ಆರಾಧನೆಯ ಬಗ್ಗೆ ಹೆಚ್ಚಿನ ಆಸ್ಥೆ ಇರುವ ಇಲ್ಲಿನ ಜನ, ದೂರ ಬೆಟ್ಟದ ಮೇಲಿನ ತಮ್ಮ ಗ್ರಾಮ ದೇವತೆಗೆ ವರುಷದಲ್ಲೊಮ್ಮೆ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ.ನಾವಲ್ಲಿಗೆ ತೆರಳಿದಂದೇ ಆ ಪೂಜೆಯೂ ಇದ್ದಿದ್ದು ನಮ್ಮ ಭಾಗ್ಯ! ನಮ್ಮಲ್ಲಿಂತೆಯೇ ಪಲ್ಲಕ್ಕಿಯ ಮೇಲೆ ದೇವರನ್ನ ಕೂರಿಸಿಕೊಂಡು, ಬ್ಯಾಂಡು ವಾದ್ಯಗಳ ಜೊತೆಗೆ ಕಡಿದಾದ ಹಿಮ ಪರ್ವತವನ್ನ ಹತ್ತಿ ಹೋಗಿದ್ದನ್ನು ನಾವೆಲ್ಲ ಕಣ್ಣಾರೆ ಕಂಡೆವು. ಬರಿಯ ಚಪ್ಪಲಿ, ಟೀ ಶರ್ಟುಗಳಲ್ಲಿ ಮುಂದೆ ನಡೆಯುತ್ತದ ಒಬ್ಬಾತನನ್ನು ಅರೇ ಭಾಯ್ ಇದೇನಿದು.. ನೀವು ಏನೂ ವ್ಯವಸ್ಥೆ ಇಲ್ಲದೇ ಹಿಮಪರ್ವತ ಹತ್ತೋಕೆ ಹೊರಟಿದ್ದೀರಲ್ಲ ಎಂದು ಕೇಳಿದರೆ.. ಮಾ ಹಮೇ ಬಚಾತೀ ಹೈ ಎಂದ! ಏನೂ ಸಮಸ್ಯೆ ಆಗಲ್ಲ ನಮಗೆ. ಇದೆಲ್ಲ ಅಭ್ಯಾಸ ಆಗಿ ಹೋಗಿದೆ. ನೀವು ಅಲ್ಲೆಲ್ಲಿಂದಲೋ ಬರೋರಿಗೆ ದೊಡ್ಡ ಶೂ, ಜಾಕೇಟು ಟೊಪ್ಪಿ ಎಂದು ಹಿರಿಯರೊಬ್ಬರು ನಕ್ಕರು.
ಪ್ರಕೃತಿ ಮಾತೆಯ ಮಧ್ಯೆ ಬದುಕುವ ಅವರ ಮಾತು ಸತ್ಯವೇ ಆಗಿತ್ತು. ನಮಗೆ ಗ್ರಹಣ್, ಚಾರಣದ ತಾಣ. ಅವರಿಗೆ ಅದು ಬದುಕು! ಅಂಥ ಬದುಕನ್ನ ಕಂಡ ನಮ್ಮ ಜೀವನೋತ್ಸಾಹವೂ ಹೆಚ್ಚಿದ್ದು ಖಂಡಿತ ಸುಳ್ಳಲ್ಲ. ಒಮ್ಮೆ ಗ್ರಹಣ್ ಗೆ ಹೋಗಿಬನ್ನಿ, ಕತ್ತಲು ಕಳೆಯುತ್ತದೆ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ