ಬದಲಾಗುತ್ತಿರುವ
ಸಾಮಾಜಿಕ ಸನ್ನಿವೇಶದಲ್ಲಿ, ತಂತ್ರಜ್ಞಾನವು ಸಂವಹನದ ಪರಿಭಾಷೆಯನ್ನೇ ಬದಲಿಸಿದೆ. ಸಾಮಾಜಿಕ ಜಾಲತಾಣಗಳ
ವ್ಯಾಪಕ ಬಳಕೆ, ಭಾಷೆಯ ಹರಿವನ್ನು ಹೆಚ್ಚಿಸಿದೆ. ಭಾಷೆಯ ಬೆಳವಣಿಗೆ ಎಂದರೆ ಕೇವಲ ಸಾಹಿತ್ಯ ಕೃತಿಗಳು-ಸಿನಿಮಾ-ಸಂಗೀತ
ಎಂಬ ಮಾಮೂಲು ಚೌಕಟ್ಟನ್ನು ಮೀರಿ, ಜನಸಾಮಾನ್ಯರೂ ಕೂಡ ತಮ್ಮ ಭಾಷೆಗಳ ಬಳಕೆಯನ್ನು ಅಂತರ್ಜಾಲದಲ್ಲಿ
ಮಾಡುವ ಮೂಲಕ, ಭಾಷೆಯ ಬಳಕೆಯ ಪರಿಧಿಯು ಹೆಚ್ಚಾಗಿದೆ. ಅಂತರ್ಜಾಲದಲ್ಲಿನ ಇಂಗ್ಲೀಷ್ ಅಧಿಪತ್ಯವನ್ನು
ಯಾರೂ ಪ್ರಶ್ನೆ ಮಾಡುವ ಹಾಗೆಯೇ ಇಲ್ಲದೇ ಹೋದರೂ ಕೂಡ, ಇತರ
ಪ್ರಾದೇಶಿಕ ಭಾಷೆಗಳು ಕೂಡ ತಮ್ಮ ಬೇರುಗಳನ್ನು ನಿಧಾನಕ್ಕೆ ಜಾಲಪ್ರಪಂಚದೊಳಗೆ ಇಳಿಬಿಡುತ್ತಿವೆ.
ಅಲ್ಲಿನ ಸತ್ವವನ್ನು ಹೀರಿಕೊಂಡು ವಿಶಾಲ ವೃಕ್ಷವಾಗಿ ಬೆಳೆಯುವತ್ತ ಮುನ್ನಡೆಯುತ್ತಿವೆ.
ಕನ್ನಡ ಭಾಷೆಯನ್ನೇ
ಗಮನಿಸುವುದಾದರೆ ಪ್ರಾಯಶಃ ೨೦೦೦ನೇ ಇಸವಿಯ ನಂತರ ನಿಧಾನಕ್ಕೆ ಕನ್ನಡವನ್ನು ಅಂತರ್ಜಾಲದಲ್ಲಿ ಬಳಸುವವರ
ಸಂಖ್ಯೆ ಹೆಚ್ಚುತ್ತ ಹೋಯಿತು. ಅದಕ್ಕೂ ಮೊದಲು ಒಂದೆರಡು ಕನ್ನಡ ಅಂತರ್ಜಾಲ ತಾಣಗಳಿದ್ದು, ಓದುಗರಷ್ಟೇ
ಆಗಿದ್ದ ಹಲವರು ಬ್ಲಾಗ್ ಎಂಬ ಹೊಸ ಸಾಧ್ಯತೆಯ ಬಗ್ಗೆ ತಿಳಿದೊಡನೆಯೇ ಬರಹಗಾರರೂ ಆಗಿ ಬದಲಾದರು. ಯಾರು
ಬೇಕಿದ್ದರೂ, ಏನು ಬೇಕಿದ್ದರೂ ಬರೆದು ಜಾಲಜಗತ್ತಿನಲ್ಲಿ ಹರಿಬಿಡಬಹುದು ಎಂದು ಯೋಚನೆಯೇ ಬಹಳ ರೋಮಾಂಚನಕಾರಿಯಾಗಿತ್ತು!
ಈ ಮೊದಲು ಪತ್ರಿಕೆಗಳಿಗೋ, ಮ್ಯಾಗಜೀನುಗಳಿಗೋ ಕತೆ ಕವಿತೆಗಳನ್ನು ಕಳುಹಿಸಿ ತಿಂಗಳಾನುಗಟ್ಟಲೆ ಕಾದು
ಕೂರುವ ಬದಲು, ಬ್ಲಾಗ್ ಜಗತ್ತಿನ ಮೂಲಕ ಈ ಕ್ಷಣದ ಯೋಚನೆ-ಲಹರಿಗಳು ಬರೆದು ಪಬ್ಲಿಷ್ ಮಾಡಬಹುದು, ಅದಕ್ಕೆ
ಕೂಡಲೇ ಜನರ ಪ್ರತಿಕ್ರಿಯೆ ಕೂಡ ಲಭ್ಯವಾಗುತ್ತದೆ ಎನ್ನುವ ಯೋಚನೆಯೇ ಚೇತೋಹಾರಿಯಾಗಿತ್ತು ಕೂಡ. ನಿಧಾನಕ್ಕೆ
ಶುರುವಾದ ಕನ್ನಡ ಬ್ಲಾಗುಗಳ ಸಂಖ್ಯೆ ಸಾವಿರ ಸಾವಿರ ಸಂಖ್ಯೆಯಲ್ಲಿ ಹೆಚ್ಚು ಹೋಯಿತು. ಆ ಸಮಯಕ್ಕೆ ಶುರುವಾದ
ಆರ್ಕುಟ್ ಎನ್ನುವ ಸಾಮಾಜಿಕ ಜಾಲತಾಣ, ಬ್ಲಾಗ್ ನ ಜನಪ್ರಿಯತೆ ಹೆಚ್ಚುವಲ್ಲಿ ಬಹಳ ಸಹಕಾರಿಯಾಯಿತು.
ಯುನಿಕೋಡ್ ತಂತ್ರಜ್ಞಾನವನ್ನು ಬಳಸಿ ಅಂತರ್ಜಾಲದಲ್ಲಿ ಕನ್ನಡ ಬರೆಯುವ ಸೌಲಭ್ಯವನ್ನು ಬಹುಮಂದಿ ಬಳಸಿಕೊಂಡರು.
ಕನ್ನಡ ಭಾಷೆಯನ್ನು
ಅಂತರ್ಜಾಲದಲ್ಲಿ ಬಳಸಲು ಆರಂಭಿಸಿದವರಲ್ಲಿ ಎಲ್ಲ ಬಗೆಯ ವೃತ್ತಿಗಳಲ್ಲಿ ಇದ್ದವರೂ ಇದ್ದರು. ಕಂಪ್ಯೂಟರಿನ
ಬಳಕೆಯ ಬಗ್ಗೆ ಅರಿವಿದ್ದ, ನಿತ್ಯ ತಮ್ಮ ವೃತ್ತಿಗಾಗಿ ಗಣಕ ಬಳಸುತ್ತಿದ್ದವರು ಪ್ರವೃತ್ತಿಗಾಗಿ ಬ್ಲಾಗು-ಜಾಲತಾಣಗಳನ್ನು
ನೆಚ್ಚಿಕೊಂಡರು. ಕನ್ನಡ ಕವನ-ಕಥೆ-ಕಾದಂಬರಿಗಳನ್ನು ಬರೆದರು. ದಟ್ಸ್ ಕನ್ನಡ, ಸಂಪದದಂತಹ ವೆಬ್ ಸೈಟುಗಳು
ಹೊಸ ಬರಹಗಾರರಿಗೆ ಮಣೆ ಹಾಕಿದವು. ಬ್ಲಾಗುಗಳ ಸಮೃದ್ಧಿಯ ಮಳೆ ಸುರಿವ ಕಾಲದಲ್ಲಿಯೇ ಕನ್ನಡ ಸಾಹಿತ್ಯ
ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುವ ಹಲವು ವೆಬ್
ಸೈಟುಗಳು ಕೂಡ ಹುಟ್ಟಿಕೊಂಡವು. ಅವುಗಳನ್ನ
ಹಿಂಬಾಲಿಸಲು, ಹಂಚಿಕೊಳ್ಳಲು ಗೂಗಲ್ ರೀಡರ್, ಆರ್ಕುಟ್ ನಂತಹ ತಾಣಗಳು ಸಹಕರಿಸಿದವು. ಕನ್ನಡ
ವಿಕಿಪೀಡಿಯಾ ಪುಟಗಳು ಕೂಡ ಇದೇ ಸುಮಾರಿಗೆ ಆರಂಭಗೊಂಡವು.
ಭಾರತದಲ್ಲಿ ಅಂತರ್ಜಾಲ
ಬಳಕೆಯು ಹೆಚ್ಚುಗೊಂಡ ಮೊದ ಮೊದಲ ದಿನಗಳಲ್ಲಿಯೇ ಕನ್ನಡ ಕೂಡ ಇಂಟರ್ ನೆಟ್ ನಲ್ಲಿ ಅಂಬೆಗಾಲಿಟ್ಟು ನಡೆಯಲು
ಆರಂಭಿಸಿ ಬೇಗನೇ ವೇಗ ವೃದ್ಧಿಸಿಕೊಂಡಿತು. ಕನ್ನಡ ಬ್ಲಾಗರುಗಳು ಗುಂಪುಗಳನ್ನ ರಚಿಸಿಕೊಂಡು ಅಂತರ್ಜಾಲದಲ್ಲಿ
ಕನ್ನಡ ಬಳಕೆಯನ್ನು ಹೆಚ್ಚಿಸುವ ಬಗ್ಗೆ ಚರ್ಚೆಗಳನ್ನೂ ನಡೆಸಿದ್ದರು! ಇಷ್ಟಾಗಿಯೂ ಬಹುಮಂದಿ ಕನ್ನಡವನ್ನು
ಬರೆಯುವ, ಬಳಸುವ ಕುರಿತು ಮೌನವನ್ನು ಹೊಂದಿದ್ದಂತೂ ಸುಳ್ಳಲ್ಲ. ಕನ್ನಡ ಬರೆಯುವ ತಂತ್ರಾಶಗಳ ಕುರಿತ
ಗೊಂದಲ, ಸುಮ್ಮನೆ ರಗಳೆ ಯಾಕೆ ಎಂಬ ಮನೋಧರ್ಮವೇ ಇದಕ್ಕೆ ಕಾರಣ ಎನ್ನುವುದು ಸುಳ್ಳಂತೂ ಅಲ್ಲ.
ಆದರೆ ಯಾವಾಗ
ಫೇಸ್ ಬುಕ್ ಎಂಬ ವೆಬ್ ಸೈಟು ಉಳಿದೆಲ್ಲ ಜಾಲತಾಣಗಳನ್ನು ನುಂಗಿ ನೊಣೆಯುವ ಮಟ್ಟಕ್ಕೆ ಬೆಳೆಯಿತೋ, ಎಲ್ಲವೂ
ಅತ್ಯಂತ ವೇಗವಾಗಿ ಬದಲಾಗಿ ಹೋಯಿತು. ಅದರ ಜೊತೆ ಜೊತೆಗೇ ಆದ ಇನ್ನೊಂದು ಬದಲಾವಣೆ, ಹೊಸ ಮೊಬೈಲ್ ತಂತ್ರಜ್ಞಾನದ
ಆವಿಷ್ಕಾರ! ಆಂಡ್ರಾಯ್ಡ್ ತಂತ್ರಾಶ ಬಂದು ನೂತನ ರಂಗಸಜ್ಜಿಕೆಯೇ ಸಿದ್ಧವಾಗಿ ಹೋಯಿತು. ಕನ್ನಡ ಭಾಷೆಯನ್ನ
ಮೊಬೈಲ್ ಮೂಲಕ ಜಾಲತಾಣಗಳಲ್ಲಿ ಬಳಸುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿತು. ಇಂದು ೬೬ ವರ್ಷದ ನನ್ನ
ಅಪ್ಪ ಕೂಡ ಲೀಲಾಜಾಲವಾಗಿ ಕನ್ನಡವನ್ನು ಮೊಬೈಲ್ ನಲ್ಲಿ ಬಳಸುತ್ತಿದ್ದಾರೆ ಮತ್ತು ಫೇಸ್ ಬುಕ್ ಸ್ಟೇಟಸ್
ಗಳನ್ನು ಅಪ್ ಡೇಟ್ ಮಾಡುತ್ತಿದ್ದಾರೆ ಎಂದರೆ, ಅದಕ್ಕೆ ಈ ಹೊಸ ಆವಿಷ್ಕಾರಗಳೇ ಕಾರಣ!
ಕನ್ನಡ ಭಾಷೆ
ಈ ಎಲ್ಲ ಕಾರಣಗಳಿಂದ ಇಂದು ಅಂತರ್ಜಾಲದಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಕಂಡುಕೊಂಡಿದೆ. ಕನ್ನಡವನ್ನು
ಬರೆಯುವ ಸರಳ ಆಪ್ ಗಳಿಂದಾಗಿ ಬಹುಮಂದಿ ಟ್ವಿಟರ್, ಫೇಸ್ ಬುಕ್ ಗಳಲ್ಲಿ ಕನ್ನಡದಲ್ಲೇ ಬರೆಯುತ್ತಿದ್ದಾರೆ.
ಕನ್ನಡವನ್ನು ಉಳಿಸಿ ಬೆಳೆಸುವ ಉದ್ದೇಶವನ್ನು ಹೊಂದಿರುವ ಬಹುಮಂದಿ ಈ ಜಾಲತಾಣಗಳಲ್ಲೇ ಒಂದಾಗಿದ್ದಾರೆ.
ಕನ್ನಡದ ಕಾಳಜಿ ಇರುವ ಬೇರೆ ಬೇರೆ ಸ್ಥರಗಳಲ್ಲಿರುವ ಜನರನ್ನ ಈ ಜಾಲತಾಣಗಳು ಒಗ್ಗೂಡಿಸಿವೆ. ಎಲ್ಲಕ್ಕಿಂತ
ಮುಖ್ಯವಾಗಿ ದೈನಿಕ ಜಗತ್ತಿನ, ಅತಿ ಸಾಮಾನ್ಯ ವಿಷಯಗಳ ಕುರಿತು ಕನ್ನಡದಲ್ಲಿಯೇ ಪ್ರತಿಕ್ರಿಯೆಯನ್ನು
ವ್ಯಕ್ತಪಡಿಸುತ್ತಿದ್ದಾರೆ. ಕಥೆಕವನಗಳಿಂದಾಚೆಗೆ ಕನ್ನಡವನ್ನು ಅಂತರ್ಜಾಲದಲ್ಲಿ ಬಳಸುವ ಕ್ರಿಯೆ ಆರಂಭವಾಗಿದೆ!
ಈ ಮೂಲಕ ಮುಂದಿನ ತಲೆಮಾರಿನಿಂದಾಚೆಗೆ ಕನ್ನಡವು ಕಾಣೆಯಾಗಬಹುದೇನೋ ಎನ್ನುವ ಭಯವು ಸಣ್ಣಗೆ ದೂರಾಗುತ್ತಿದೆ.
ಫೇಸ್ ಬುಕ್ ನಲ್ಲೇ
ನೋಡಿದಾಗ, ಕನ್ನಡದ ಏಳಿಗೆಗಾಗಿ ಶ್ರಮಿಸುತ್ತಿರುವ ಹಲವು ಮಂದಿ ಕಾಣಿಸುತ್ತಾರೆ. ಗಾಂಚಾಲಿ ಬಿಡಿ ಕನ್ನಡ
ಮಾತಾಡಿ, ಪದಾರ್ಥ ಚಿಂತಾಮಣಿ ಮೊದಲಾದ ಪುಟಗಳು ಕನ್ನಡದ ಬೆಳವಣಿಗೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ
ನೀಡುತ್ತಿವೆ. ಕನ್ನಡ ಸಾಹಿತ್ಯ-ಕಥೆ ಕವನಗಳ-ಕಾದಂಬರಿಗಳ, ಕನ್ನಡದ ಹಳೆಯ ಅಮೂಲ್ಯ ಕೃತಿಗಳ ಬಗ್ಗೆ ಚರ್ಚೆ
ಮಾಡುವ ಹಲವು ಪುಟಗಳು ಇಲ್ಲಿವೆ.
ಜತೆಗೆ, ಇನ್ನೊಂದು
ಮುಖ್ಯ ಬೆಳವಣಿಗೆಯಲ್ಲಿ ಹಲವಾರು ಹೊಸ ಕನ್ನಡ ಜಾಲತಾಣಗಳು ಕೂಡ ಹುಟ್ಟಿಕೊಳ್ಳುತ್ತಿವೆ. ಹೊಸ ಹುಡುಗರು,
ಹೊಸ ಉತ್ಸಾಹದೊಡನೆ ಉತ್ತಮ ದರ್ಜೆಯ ವೆಬ್ ಸೈಟ್ ಗಳನ್ನು ಆರಂಭಿಸುತ್ತಿದ್ದಾರೆ. ರಾಜಕೀಯ-ಕ್ರೀಡೆ-ವಿಜ್ಞಾನ-ಕೃಷಿ
ಹೀಗೆ ವಿವಿಧ ವಿಚಾರಗಳನ್ನು ಹೊತ್ತ ತಾಣಗಳನ್ನ ನಾವೀಗ ಕಾಣಬಹುದು. ಹೀಗಾಗಿ, ಬಗೆಬಗೆಯ ಸುದ್ದಿಗಳು
ಕನ್ನಡದಲ್ಲಿಯೇ ದೊರಕುವಂತಾಗಿದೆ. ನಮ್ಮ ನಡುವಿನ ಸಾಧಕರನ್ನು, ವಿಶೇಷ ಪ್ರತಿಭೆ ಹೊಂದಿರುವ ಮಂದಿಯನ್ನು
ಈ ತಾಣಗಳು ಜನರಿಗೆ ಪರಿಚಯಿಸುತ್ತಿವೆ. ದಿನಪತ್ರಿಕೆಗಳು, ಟೀವಿ ಮಾಧ್ಯಮಗಳಂತೆಯೇ ವೆಬ್ ಪೋರ್ಟಲ್ ಗಳೂ
ಕೂಡ ಬೆಳೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಸಿದ್ಧಿಯನ್ನು ಹೊಂದುವುದರಲ್ಲಿ
ಯಾವ ಅನುಮಾನವೂ ಇಲ್ಲ.
ಕೇವಲ ಬರವಣಿಗೆಯಲ್ಲಿ
ಮಾತ್ರವಲ್ಲ- ಯೂಟ್ಯೂಬ್ ನಂತಹ ಜಾಲತಾಣಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡದ ಕಿರುಚಿತ್ರಗಳು-ಹಾಡುಗಳು-
ಸಿನಿಮಾಗಳು ಎಲ್ಲೆಡೆಗೆ ಹಬ್ಬುತ್ತಿದೆ. ಜಾಗತಿಕ ಮಟ್ಟದಲ್ಲಿ ಕನ್ನಡ ಪ್ರತಿಭೆಗಳನ್ನ ಎಲ್ಲರೂ ಗುರುತಿಸುವ
ಕೆಲಸ ಆರಂಭವಾಗಿದೆ. ಹೊಸ ವಿಧದ ಮನರಂಜನೆಗಳೂ ನಮ್ಮವರಿಗೆ ದಕ್ಕುತ್ತಿವೆ. ಕನ್ನಡ ಸ್ಟಾಂಡ್ ಅಪ್ ಕಾಮಿಡಿ,
ಚಲನಚಿತ್ರ ವಿಮರ್ಶೆಗಳ ವೀಡಿಯೋಗಳು, ಕನ್ನಡ ರ್ಯಾಪ್ ಹಾಡುಗಳು- ಹೀಗೆ ನವಪ್ರಪಂಚವೊಂದು ಕನ್ನಡದ ನೋಡುಗರಿಗೆ
ದಕ್ಕುತ್ತಿದೆ. ಹೊಸ ಅಲೆಯ ಚಿತ್ರಗಳನ್ನು- ಡಾಕ್ಯುಮೆಂಟರಿಗಳನ್ನು ಮಾಡುವ ಮಂದಿಯ ಮಧ್ಯೆ ಕನ್ನಡದ ಹುಡುಗರನ್ನೂ
ಕೂಡ ಗುರುತಿಸಲಾಗುತ್ತಿದೆ. ದಿನವೂ ಒಂದಲ್ಲ ಒಂದು ಹೊಸ ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಗೊಳ್ಳುತ್ತಲೇ
ಇರುತ್ತದೆ. ಕರ್ನಾಟಕದ ಯಾವುದೋ ಮೂಲೆಯಲ್ಲಿ ಕೂತಿರುವ
ಉತ್ತಮ ಹಾಡುಗಾರ್ತಿಯೊಬ್ಬಳು ದಿನ ಬೆಳಗಾಗುವುದರೊಳಗಾಗಿ ವಿಖ್ಯಾತಳಾಗುತ್ತಾಳೆ. ಹೀಗೆ ಕನ್ನಡ ದಿನೇ
ದಿನೇ ತನ್ನನ್ನು ತಾನು ಉತ್ತಮಗೊಳಿಸಿಕೊಳ್ಳುತ್ತಿದೆ.
ಆದರೆ ಬೀಸಿಬರುವ
ಗಾಳಿಯು ಪರಿಮಳದ ಜೊತೆಗೆ ಕೆಲಬಾರಿ ಅಸಹನೀಯ ಗಂಧವನ್ನೂ ತಂದೀತು. ಸಾಮಾಜಿಕ ಜಾಲತಾಣದಲ್ಲಿನ ಕನ್ನಡ
ಬಳಕೆಯ ವಿಚಾರದಲ್ಲೂ ಇದು ಹೊರತಲ್ಲ. ಕನ್ನಡ ಭಾಷೆಯ ಸಾವಿರಾರು ವರುಷಗಳ ಇತಿಹಾಸವನ್ನು, ಅದಕ್ಕಿರುವ
ಶಾಸ್ತ್ರೀಯ ಅಡಿಪಾಯವನ್ನು ಕಡೆಗಣಿಸಿ, ಹೊಸದೇನೋ ತಿರುಚುವಿಕೆಗಳನ್ನ ಇದೇ ಜಾಲತಾಣಗಳ ಸಹಕಾರದಿಂದ ಮಾಡುವ
ಪ್ರಯತ್ನ ನಡೆಯುತ್ತಿದೆ. ಮಹಾಪ್ರಾಣಗಳ ಕತ್ತುಹಿಸುಕಿ, ಸಂಸ್ಕೃತ ಮೂಲದ ಶಬ್ದಗಳನ್ನು ಕೊಂದು ಹೊಸ ಅರ್ಥಹೀನ
ಪದಗಳನ್ನು ಹುಟ್ಟುಹಾಕುವ ಕೆಲಸಕ್ಕೆ ಇಲ್ಲೇ ಪ್ರಚಾರವು ದೊರಕುತ್ತಿದೆ. ಫೇಸ್ ಬುಕ್ ನಂತಹ ವೆಬ್ ಸೈಟ್
ಗಳ ಕನ್ನಡ ಪುಟಗಳಲ್ಲಿ ಈಗಾಗಲೇ ಇಂತಹ ಹಲ ಶಬ್ದಗಳು ತೂರಿಕೊಂಡಿರುವುದನ್ನು ಕೂಡ ಗಮನಿಸಬಹುದಾಗಿದೆ.
ಇದರ ಜೊತೆಗೆ ಹಲವು ಟ್ರೋಲ್ ಪೇಜುಗಳಲ್ಲಿ, ಮೀಮ್ ಗಳಲ್ಲಿ ಕನ್ನಡವನ್ನು ಹೀಗಳೆಯುವ ಪ್ರಯತ್ನವನ್ನೂ
ಕಾಣಬಹುದು. ಆದರೆ, ಕನ್ನಡದ ಹಿತಾಸಕ್ತಿಯನ್ನು ಕಾಪಾಡುವ ಮಂದಿಯೇ ಸಂಖ್ಯೆಯೇ ಜಾಸ್ತಿ ಇರುವುದರಿಂದ,
ಅಂತಹ ತೊಂದರೆಯೇನೂ ಇಲ್ಲ!
ಆಡುಮಾತಿನ ಕನ್ನಡವೇ
ಶ್ರೇಷ್ಠ, ಗ್ರಾಂಥಿಕ ಕನ್ನಡ ಅರ್ಥಹೀನ,ಅ-ಹ ಕಾರಗಳ ತಪ್ಪು ಬಳಕೆಯು ಸರಿ ಎನ್ನುವ ಹಾಹಾಕಾರಕ್ಕೂ ಈ
ಸೋಶಿಯಲ್ ಮೀಡಿಯಾ ವೇದಿಕೆಯಾಗುತ್ತಿದೆ. ಭಾಷೆಯ ಅಪಭ್ರಂಶ ಬಳಕೆಯನ್ನು ಸಮರ್ಥಿಸಿಕೊಳ್ಳುವ, ’ಏನೀಗ-ನಾನ್
ಕನ್ನಡನೇ ಬರೀತಾ ಇದೀನಿ, ಅದೇ ಬಹಳ ದೊಡ್ಡ ವಿಷಯ,ತಪ್ಪು ಬರೆದರೆ ಏನಂತೆ’ ಎನ್ನುವ ಮೊಂಡುವಾದವೂ ಇಲ್ಲಿ
ಕಾಣುತ್ತಿದೆ. ಕನ್ನಡ ವ್ಯಾಕರಣವನ್ನೇ ಮೂಲೆಗೊತ್ತಿರುವ ನೂರಾರು ಕನ್ನಡ ಜಾಹೀರಾತುಗಳಂತೂ ಸಾಮಾನ್ಯ
ಎನ್ನುವಷ್ಟವರ ಮಟ್ಟಿಗಾಗಿದೆ. ಇಂತಹ ವಿಷಯಗಳಿಂದ ಕನ್ನಡ ಭಾಷೆಯ ಗುಣಮಟ್ಟಕ್ಕೆ ಧಕ್ಕೆಯಾಗುವುದಂತೂ
ಖಂಡಿತ. ಸುಳ್ಳನ್ನ ನೂರು ಬಾರಿ ಹೇಳಿದರೆ ಅದು ಸತ್ಯವೇ ಆಗಿ ಹೋಗುವಂತೆ, ಭಾಷೆಯ ತಪ್ಪು ಬಳಕೆಯೇ ಖಾಯಂ ಆಗಿ ಹೋಗುವ ಅಪಾಯ ಇದೆ.
ಯಾವುದೇ ಭಾಷೆಯು
ಬದಲಾವಣೆಗೆ ಒಗ್ಗಿಕೊಂಡು, ತನ್ನತನವನ್ನೂ ಉಳಿಸಿಕೊಂಡು ನಡೆದಾಗಲೇ ಅದರ ಏಳಿಗೆ ಸಾಧ್ಯ. ಕನ್ನಡ ಭಾಷೆಯು
ಈ ಹೊಸಯುಗದಲ್ಲಿ ಅಂತರ್ಜಾಲಕ್ಕೆ ತನ್ನನ್ನ ಒಗ್ಗಿಸಿಕೊಂಡು ಮುನ್ನಡೆಯುತ್ತಿದೆ. ಆದರೂ, ಭಾರತದ ಇತರ
ಪ್ರಾದೇಶಿಕ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಬೆಳವಣಿಗೆ ಕೊಂಚ ನಿಧಾನವೇ ಇರುವುದು ಸುಳ್ಳಲ್ಲ. ತಮಿಳು
ತೆಲುಗು ಮಲಯಾಳಂ ಭಾಷೆಗಳ ಜಾಲತಾಣಗಳಿಗೆ, ಮೊಬೈಲ್ ಆಪ್ ಗಳಿಗೆ ಹೋಲಿಸಿದರೆ, ಕನ್ನಡ ಇನ್ನೂ ಕಲಿಯುವುದು
ಬಹಳ ಇದೆ. ಅವರುಗಳ ಪಕ್ಕದಲ್ಲಿ ನಿಂತು ನೋಡಿದಾಗ, ಭಾಷೆಯನ್ನು ಸಮರ್ಥವಾಗಿ ದುಡಿಸಿಕೊಳ್ಳುತ್ತಿಲ್ಲ
ಎನ್ನುವುದು ಅರಿವಾಗುತ್ತದೆ. ಕಿಂಡಲ್ ನಂತಹ ಪುಸ್ತಕಗಳನ್ನೋದುವ ಗ್ಯಾಡೆಜ್ಟ್ ಇನ್ನೂ ಪೂರ್ಣವಾಗಿ ಕನ್ನಡಕ್ಕೆ
ಬೆಂಬಲ ನೀಡುತ್ತಿಲ್ಲ. ಬ್ಯಾಕಿಂಗ್ ಅಪ್ಲಿಕೇಶನ್ ಗಳಿಂದ ಹಿಡಿದು ಶಿಕ್ಷಣ, ವೈದ್ಯಕೀಯ, ಸಿನಿಮಾ ಹೀಗೆ
ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಜಾಲತಾಣ/ಆಪ್ ಗಳನ್ನ ಭಾರತದ ಇತರ ಹಲವು ಭಾಷೆಗಳು ಹೊಂದಿವೆ ಮತ್ತು
ಅವುಗಳನ್ನು ಅಲ್ಲಿನ ಮಂದಿ ವ್ಯಾಪಕವಾಗಿ ಬಳಸುತ್ತಿದ್ದಾರೆ. ಹೀಗಾಗಿ, ಭಾಷಾಪ್ರೇಮದ ವಿಚಾರ ಬಂದಾಗ,
ಕನ್ನಡಿಗರು ಸ್ವಲ್ಪ ಹಿಂದಿದ್ದಾರೇನೋ ಎನ್ನುವ ಅನುಮಾನ ಕಾಡುತ್ತದೆ.
ಏನೇ ಇದ್ದರೂ,
ಕನ್ನಡಕ್ಕೆ ಸಾಮಾಜಿಕ ಜಾಲತಾಣಗಳಿಂದಾಗಿ ಹೊಸ ಆಯಾಮ ದೊರಕಿರುವುದಂತೂ ಸುಳ್ಳಲ್ಲ. ಮುಂಬರುವ ದಿನಗಳಲ್ಲಿ
ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಾವೆಲ್ಲ ಕನ್ನಡವನ್ನು ಸಮರ್ಪಕವಾಗಿ ಮತ್ತು ಸಮರ್ಥವಾಗಿ ಬಳಸಿದಲ್ಲಿ
ಭಾಷೆಯ ಜೊತೆಗೆ ನಮ್ಮ ಬೆಳವಣಿಗೆಯೂ ಸಾಧ್ಯವಿದೆ!
ಬಾಕ್ಸ್ 1
ಕನ್ನಡ ಗೊತ್ತಿಲ್ಲ
ಕನ್ನಡ ಗೊತ್ತಿಲ್ಲ ಎನ್ನುವ ವೆಬ್ ಸೈಟ್ ಮಾಡಿಕೊಂಡಿರುವ ಗುಂಪೊಂದು ವಾಟ್ಸಾಪ್
ಗ್ರೂಪ್ ಮೂಲಕ ಕನ್ನಡ ಬಾರದ ಪರದೇಶದ-ರಾಜ್ಯದ ಮಂದಿಗೆ ಕನ್ನಡ ಕಲಿಸುವ ಕೆಲಸ ಮಾಡುತ್ತಿದೆ. ಈಗಾಗಾಲೇ
ಸಾವಿವಾರು ಮಂದಿ ಕನ್ನಡವನ್ನು ನಿತ್ಯದ ವ್ಯವಹಾರಕ್ಕಾಗಿ ಈ ಗ್ರೂಪ್ ಮೂಲಕ ಕಲಿತುಕೊಳ್ಳುತ್ತಿದ್ದಾರೆ. ಕನ್ನಡದ ಸರಳ ವ್ಯಾಕರಣ, ಸುಲಭದ ಸಾಲುಗಳನ್ನು ಯಾರು ಬೇಕಿದ್ದರೂ
ಅಗತ್ಯವಿರುವ ಮಂದಿಗೆ ಹೇಳಿಕೊಡಬಹುದು. ಸಂಪೂರ್ಣ ಸ್ವಯಂಸೇವೆಯ ಮಾದರಿಯಲ್ಲಿರುವ ಈ ತಂಡವನ್ನು ಕನ್ನಡವನ್ನು
ಬೆಳೆಸುವ ಆಸಕ್ತಿ ಇರುವ ಯಾರು ಬೇಕಿದ್ದರೂ ಸೇರಿಕೊಳ್ಳಬಹುದು! ಅನೂಪ್ ಮಯ್ಯ ಎಂಬ ಉತ್ಸಾಹಿ ತರುಣ ಆರಂಭಿಸಿರುವ
ಈ ಪ್ರಯತ್ನಕ್ಕೆ ಇದೀಗ ಎರಡು ವರುಷಗಳಾಗಿವೆ. ಹೆಚ್ಚಿನ ಮಾಹಿತಿಗೆ
Kannadagottilla.com
ನೋಡಿ.
ಬಾಕ್ಸ್ 2
ಗಾಂಚಾಲಿ ಬಿಡಿ ಕನ್ನಡ ಮಾತಾಡಿ
ಪ್ರಾಯಶಃ ಫೇಸ್
ಬುಕ್ ನಲ್ಲಿ ಬಹಳ ಸದ್ದು ಮಾಡಿದ ಮೊದಲ ಕನ್ನಡ ಪುಟ ಗಾಂಚಾಲಿ ಬಿಡಿ ಕನ್ನಡ ಮಾತಾಡಿ. ಕನ್ನಡವನ್ನು
ಹೀಗಳೆಯುವ ಮಂದಿಗೆ ಸೂಜಿಚುಚ್ಚುವ ಕೆಲಸವನ್ನು ನಾಜೂಕಾಗಿಯೇ ಮಾಡಿದೆ, ಈ ಪುಟ. ಕನ್ನಡ ಭಾಷೆಯ ಮಹತ್ವವನ್ನು,
ಕನ್ನಡವನ್ನು ಮಾತನಾಡುವುದು ಖಂಡಿತ ಅವಮಾನವಲ್ಲ ಎಂಬ ಸಂದೇಶವನ್ನು ಕಿರುಚಿತ್ರಗಳ ಮೂಲಕ ಸಮರ್ಥವಾಗಿ
ನೀಡಿರುವುದು ಇವರ ಹೆಗ್ಗಳಿಕೆ.
ಬಾಕ್ಸ್ 3:
ಕನ್ನಡ ಟೀಶರ್ಟ್ ಗಳು
ಕನ್ನಡಿಗರಿಗೆ
ಕನ್ನಡದ್ದೇ ಕೋಟ್ಸ್ ಇರುವ ಟೀ ಶರ್ಟ್ ಗಳನ್ನು ಹೊರತರುವ ಕೆಲಸವನ್ನು ಕೆಲಮಂದಿ ಮಾಡುತ್ತಿದ್ದಾರೆ.
ಕನ್ನಡ ಭಾಷೆಯ, ಸಂಸ್ಕೃತಿಯ ಕುರಿತ ಕವನದ ಸಾಲುಗಳಿಂದ ಮೊದಲುಗೊಂಡು ಮೋಜಿನ, ಕಾಲೆಳೆಯೋ ತಮಾಷೆಯ ತಲೆಬರಹಗಳವರೆಗೆ,
ಎಲ್ಲವೂ ಇಲ್ಲಿ ಲಭ್ಯ. Iruve.in, aziteez.com – ನ ಹೊಕ್ಕು ನೋಡಿದರೆ ಇಂತಹ ಹಲ ಟಿ-ಶರ್ಟ್ ಗಳು
ಕಾಣಿಸುತ್ತವೆ.
ವಿಜಯವಾಣಿಯ ವಿಜಯ ವಿಹಾರದಲ್ಲಿ ಪ್ರಕಟಿತ. (೨೦-೧೧-೨೦೧೬)
2 ಕಾಮೆಂಟ್ಗಳು:
ಚೆನ್ನಾಗಿದೆ. :D :D :D
ಉತ್ತಮ ಲೇಖನ. ನಿಮ್ಮ ವಿಚಾರಗಳು ವ್ಯವಹಾರದಲ್ಲಿ ಬರಲಿ ಹಾಗು ಕನ್ನಡದ ಉಜ್ಜೀವನವಾಗಲಿ ಎಂದು ಹಾರೈಸುತ್ತೇನೆ.
ಕಾಮೆಂಟ್ ಪೋಸ್ಟ್ ಮಾಡಿ