ಮಂಗಳವಾರ, ಏಪ್ರಿಲ್ 24, 2012

ತೂಗುಮಂಚದಲ್ಲಿ ಕೂತು...



ನನ್ನ ಪ್ರೀತಿಯ ಕವಿ ಮತ್ತು ಬರಹಗಾರ ಎಚ್ಚೆಸ್ವಿಯವರು, ತೂಗುಮಂಚದಲ್ಲಿ ಕೂತು, ಮೇಘಶ್ಯಾಮ ರಾಧೆಗಾತು ಎಂಬ ಸೊಗಸಾದ ಕವಿತೆ ಬರೆದಿದ್ದಾರೆ. ಅದು ಭಾವಗೀತೆಯಾಗಿಯೂ ಜನಪ್ರಿಯವಾಗಿದೆ. ಆ ಹಾಡಿನಲ್ಲಿ ಬರುವಂತದ್ದೇ ಒಂದು ಒಂದು ತೂಗುಮಂಚ ನಮ್ಮ ಮನೆಯಲ್ಲಿ ಕೂಡ ಇದೆ. ಹೊಸದಾಗಿ ಅದನ್ನು ಕಂಡಾಗ ನಮಗೆ ಭಾರೀ ಆನಂದವಾಗಿತ್ತು. ಅಲ್ಲಿಯ ತನಕ ಸಿನಿಮಾದಲ್ಲಿ ಮಾತ್ರ ಕಂಡಿದ್ದ ಅಂತ ದೊಡ್ಡ ತೂಗುಮಂಚ ನಮ್ಮ ಮನೆಯೊಳಗೇ ಇತ್ತು! ಅಂತಿಂಥ ತೂಗುಮಂಚ ಅಲ್ಲ. ಈ ಪಾರ್ಕಲ್ಲೆಲ್ಲ ಇರುವ ಪುಟ್ಟ ಚಿಕಣಿ ಉಯ್ಯಾಲೆಗಳನ್ನೆಲ್ಲ ಕಲ್ಪಿಸಿಕೊಳ್ಳಲೇ ಬೇಡಿ. ಈ ತೂಗುಯ್ಯಾಲೆಯಲ್ಲಿ ಮೂರು ಜನ ಆರಾಮಾಗಿ ಕೂರಬಹುದಾಗಿತ್ತು, ಕೂರುವುದೇನು ಮಲಗಲೂ ಬಹುದಾಗಿತ್ತು. 

ಬಲವಾದ ಕಬ್ಬಿಣದ ಸರಪಳಿಗಳನ್ನು ಮಂಚದ ನಾಲ್ಕೂ ಮೂಲೆಗೆ ಜೋಡಿಸಲಾಗಿತ್ತು. ಪ್ರಾಯಶಃ ಆ ಮಂಚದ ಮೇಲೆ ಒಳ್ಳೆಯ ಕೆತ್ತನೆ ಕೆಲಸವನ್ನು ಯಾವುದೋ ಕಾಲದಲ್ಲಿ ಮಾಡಿರಬೇಕು. ಆದರೆ, ಅದರ ಹಲಗೆಗೆ ಬಣ್ಣ ಹೊಡೆದೂ ಹೊಡೆದೂ, ಬಣ್ಣದ ಲೇಪದ ಕೆಳಗೆಲ್ಲೋ ಇದ್ದಿರಬಹುದಾದ ಹೂಬಳ್ಳಿಯ ರಚನೆಯ ಅಂದಾಜು ಮಾತ್ರ ನಮಗಾಗುತ್ತಿತ್ತು. ಮೊದಲಿಗೆ ಕೂತ ಕೂಡಲೇ ಕಯ್ ಅಂತ ಸದ್ದು ಮಾಡುತ್ತಿದ್ದ ತೂಗುಯ್ಯಾಲೆ, ಅದರ ಅಗತ್ಯ ಸಂದುಗೊಂದುಗಳಿಗೆ ಎಣ್ಣೆ ಸ್ನಾನ ಮಾಡಿಸಿದ ಮೇಲೆ ಸುಮ್ಮನಾಯಿತು. ಆಮೇಲೆ, ತೂಗುಮಂಚದ ಬಾಬ್ತಿಗೆ ಅಂತಲೇ ಅಮ್ಮ ಕಾದೆಣ್ಣೆ ತೆಗೆದಿಡಲು ಆರಂಭಿಸಿದಳು.

ಟಿವಿ, ತೂಗುಮಂಚದ ಮುಂದೆಯೇ ಸ್ಥಾಪಿಸಲ್ಪಟ್ಟಿತು. ಟಿವಿ ನೋಡುವುದಕ್ಕಿಂತ ಮುಖ್ಯವಾಗಿ, ಯಾರಿಗೆ ತೂಗುಯ್ಯಾಲೆಯ ಸೀಟು ಸಿಗುತ್ತದೆ ಎಂಬುದು ಮುಖ್ಯವಾಗಿತ್ತು. ಎಲ್ಲ ಆರಾಮಾಗಿ ಅಲ್ಲಿ ಕೂಡಬಹುದಾಗಿದ್ದರೂ ಸುಮ್ಮನೆ ಅನಗತ್ಯ ಗೌಜಿ ನಡೆಯುತ್ತಿತ್ತು. ಅಪ್ಪ ಕೂಡ ಈ ಸೀಟಿನ ಕಾಂಪಿಟೀಶನ್ನಿಗೆ ಬೀಳುತ್ತಿದ್ದರು. ಅಮ್ಮ ಹಗಲು ಹೊತ್ತಿನಲ್ಲಿ ತೂಗುಮಂಚದಲ್ಲಿ ಕೂತು ನಿಧಾನಕ್ಕೆ ತೂಗಿಕೊಳ್ಳುತ್ತಿದ್ದರೆ ಏನೋ ಭಾರೀ ಗಹನವಾದ್ದನ್ನು ಆಲೋಚನೆ ಮಾಡುತ್ತಿದ್ದಾಳೆ ಮತ್ತು ನಾವು ಅಣ್ಣ ತಂಗಿ ಅವರಿಗೆ ತೊಂದರೆ ಕೊಡಬಾರದು ಎಂಬುದು ನಮಗೆ ಅರ್ಥವಾಗಿತ್ತು. ಕೆಲ ಬಾರಿ ಅವಳು ಒಂದಿಷ್ಟು ಹೂವು ತುಳಸಿ ಎಲ್ಲ ಗುಪ್ಪೆ ಹಾಕಿಕೊಂಡು ಅಲ್ಲಿ ಮಾಲೆ ನೇಯುತ್ತಿದ್ದಳು.  ಅಪ್ಪ ಸಂಜೆಗಳಲ್ಲಿ ಕನ್ನಡಕ ಏರಿಸಿ, ಏನೋ ಪುಸ್ತಕ ಹಿಡಿದು ಅಲ್ಲಿ ಕೂತರೆ, ನಾನು ಸದ್ದಿಲ್ಲದೇ ಕ್ರಿಕೆಟ್ ಆಡಲು ಹೋಗಬಹುದು.

ನನ್ನಮ್ಮನ ಅಪ್ಪ ನಮ್ಮ ಮನೆಗೆ ಬಂದಿದ್ದಾಗ, ಅವರಿಗೆ ಈ ತೂಗುಮಂಚ ಬಹಳ ಇಷ್ಟವಾಗಿ ಹೋಗಿತ್ತು. ಎಲ್ಲೋ ಪೇಟೆಯಲ್ಲಿ ಮನೆ ಮಾಡಿರಬೇಕು ಎಂದುಕೊಂಡು ಬಂದಿದ್ದ ಅವರಿಗೆ ನಮ್ಮ ಈ ಹಳ್ಳಿ ಮನೆ, ಇಲ್ಲಿನ ವಾತಾವರಣ ಖುಷಿ ಕೊಟ್ಟಿತ್ತು. ತೂಗುಮಂಚವನ್ನ ನಿಧಾನವಾಗಿ ತೂಗಿಕೊಳ್ಳುತ್ತಾ, ಕೆಳಗೆ ನನ್ನನ್ನೂ, ನನ್ನ ಪಕ್ಕದ ಮನೆಯ ಗೆಳೆಯ ಶಿವನನ್ನೂ ಕೂರಿಸಿಕೊಂಡು ಭಗವದ್ಗೀತೆಯ ಶ್ಲೋಕಗಳು, ಗಣಪತಿ ಉಪನಿಷತ್ತು ಇತ್ಯಾದಿ ವಿಚಾರಗಳ ಬಗ್ಗೆ ಪ್ರತಿದಿನ ಉಪನ್ಯಾಸ ನೀಡುತ್ತಿದ್ದರು. ನಮಗೆ ಇಷ್ಟವಿದ್ದರೂ, ಇಲ್ಲದೇ ಹೋದರೂ ಅವರು ಹೇಳಿದ್ದನ್ನು ಕಡ್ಡಾಯ ಕೇಳಿಸಿಕೊಳ್ಳಲೇ ಬೇಕಿತ್ತು. ಕೆಲಸಲ ಮಾರನೇ ದಿನ ಸರ್ಪ್ರೈಸ್ ಟೆಸ್ಟುಗಳೂ ನಡೆದು ನಾವು ಕಂಗಾಲಾಗುತ್ತಿದ್ದೆವು. ಅವರು ಹೇಳಿಕೊಟ್ಟ ಶ್ಲೋಕಗಳು ಬಾಯಿಗೆ ಬಾರದೇ ಬೈಸಿಕೊಳ್ಳುತ್ತಿದ್ದೆವು. ಅವರು ತೂಗುಮಂಚದ ಮೇಲೆ ಕೂತಿದ್ದು ಕಂಡರೆ ನಾನು ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದೆ.

ನಮ್ಮ ಮನೆಯಲ್ಲಿ ಖಂಡಿತ ಸಿನಿಮಾ ಶೂಟಿಂಗ್ ಮಾಡಬಹುದು ಎಂದು ನಾನಂತೂ ಕೇವಲ ಈ ತೂಗುಮಂಚದ ಕಾರಣದಿಂದಲೇ ನಿರ್ಧರಿಸಿಬಿಟ್ಟಿದ್ದೆ.  ಕಲಾತ್ಮಕ ಸಿನಿಮಾಗಳಲ್ಲಿ ಕಾಣುವ ಹಾಗಿನ, ತೂಗುಮಂಚದ ಸರಪಳಿಗೆ ಒರಗಿಕೊಂಡ ಹೀರೋಯಿನ್ನು, ಮೆಲ್ಲನೆ ಹಿಂದಿನಿಂದ ಬಂದು ಅಪ್ಪಿಕೊಳ್ಳುವ ಹೀರೋ.. ಇತ್ಯಾದಿ ಸೀನುಗಳು ನಮ್ಮ ಮನೆಯಲ್ಲಿ ಕೂಡ ಶೂಟಿಂಗು ಆಗಬಹುದು ಎಂಬ ಹಗಲುಗನಸುಗಳನ್ನು ಕೂಡ ಕಂಡಿದ್ದೆ. ಸುಮ್ಮನೆ ಯಾವಾಗಲೋ ಒಂದು ದಿನ ಅಪ್ಪನ ಬಳಿ ಯಾಕೆ ಸಿನಿಮಾ ಶೂಟಿಂಗು ಮಾಡಬಾರದು ಎಂದು ಕೇಳಿದ್ದಕ್ಕೆ, ಯಾವಾಗಲೂ ಸಿಟ್ಟಾಗದ ಆತ ಕೆಕ್ಕರಿಸಿಕೊಂಡು ನೋಡಿದ್ದ. ಅದು ಅಮ್ಮನವರೆಗೂ ಹೋಗಿ, ಅವಳಂತೂ ನಾನು ಸಂಪೂರ್ಣ ನೀತಿಗೆಡುತ್ತಿದ್ದೇನೆ ಇತ್ಯಾದಿ ಆರೋಪಗಳನ್ನೆಲ್ಲ ಮಾಡಿ, ರಾದ್ಧಾಂತವೇ ಆಗಿ ಹೋಯಿತು.

ದಿನಗಳೆದಂತೆ, ತೂಗುಮಂಚ ನಮ್ಮ ಮನೆಯಲ್ಲಿನ ಇತರೆಲ್ಲ ಸ್ಥಿರಾಸ್ತಿಗಳ ಗುಂಪಿಗೆ ಸೇರುತ್ತ ಹೋಯಿತು. ದಿನಾ ಅದನ್ನೇ ನೋಡಿ ನೋಡಿ, ಕೂತು ತೂಗಿಕೊಂಡು ಬೇಸರ ಬರಲು ಆರಂಭವಾಯಿತು. ಮೊದಲು ಮನೆಯ ಅತ್ಯಂತ ಪ್ರಮುಖ ಆಕರ್ಷಣೆಯಾಗಿದ್ದ ಅದು ಅನಂತರ ಪ್ರಮುಖ ಅಡಚಣೆಗಳಲ್ಲಿ ಒಂದಾಯಿತು. ಮನೆಗೆ ಬಂದವರು, ನಾವು ಮನೆಮಂದಿ ಎಲ್ಲ ಅದರ ಮೇಲೆ ಕೂತು ಎರ್ರಾಬಿರ್ರಿ ತೂಗಿ ತೂಗಿ ಆ ತೂಗುಮಂಚವನ್ನು ಹಿಡಿದುಕೊಂಡಿದ್ದ ಜಂತಿ ಕುಸಿಯತೊಡಗಿತು. ಸಿಮೆಂಟು ಹಿಸಿದು, ಗೋಡೆಯಲ್ಲಿ ದೊಡ್ಡ ಡೊಗರಾಯಿತು. ಏನೇ ಸಿಮೆಂಟು ತಂದು ಹಚ್ಚಿದರೂ ಮತ್ತೆ ಮತ್ತೆ ಅದು ಕಿತ್ತು ಹೋಗುತ್ತಿತ್ತು.
ಅಲ್ಲದೇ ಈ ತೂಗುಮಂಚ, ಜಗಲಿಯ ಮಧ್ಯದಲ್ಲಿ ಇದ್ದಿದ್ದರಿಂದ, ಓಡಾಟಕ್ಕೆ ಬಹಳ ತೊಂದರೆ ಆಗುತ್ತಿತ್ತು. ಅಪ್ಪ ಅದನ್ನ ಅಲ್ಲಿಂದ ಎತ್ತಂಗಡಿ ಮಾಡಿ, ಸರಪಳಿ ಕಿತ್ತು ತೆಗೆದು ಉಗ್ರಾಣದ ಮೂಲೆಗೆ ಹಾಕಿ ಬಿಟ್ಟರು. ತೂಗುಮಂಚವನ್ನು ಕಳೆದುಕೊಂಡ ಜಗಲಿ ಈಗ ವಿಸ್ತಾರವಾಗಿ ಕಾಣಲು ತೊಡಗಿತು. ಅಮ್ಮನಿಗೆ ಜಗಲಿ ಗುಡಿಸಿ ಒರೆಸಲು ಭಾರೀ ಆರಾಮಾಗಿ, ಈ ಮೊದಲೇ ಯಾಕೆ ಅದನ್ನ ತೆಗೆಯಲಿಲ್ಲ ಎಂದು ಬೈದುಕೊಂಡರು. ಹುಡುಗಾಟಿಕೆಯ ಪ್ರಾಯ ದಾಟಿದ ನನಗೂ, ತೂಗುಮಂಚ ಮೂಲೆಗೆ ಹೋಗಿದ್ದರಿಂದ ಯಾವ ವ್ಯತ್ಯಾಸವೂ ಕಾಣಲಿಲ್ಲ, ಏನೂ ಅನ್ನಿಸಲಿಲ್ಲ. ಹಗಲು ಮನೆಯಲ್ಲಿದ್ದರೆ ತಾನೆ, ತೂಗುಯ್ಯಾಲೆಯ ಉಲ್ಲಾಸ?

ತೂಗುಮಂಚಕ್ಕೆ ಅಜ್ಞಾತವಾಸ ಆರಂಭವಾಗಿ ಎರಡು ಮೂರು ವರ್ಷಗಳೇ ದಾಟಿದ್ದವು. ಅಲ್ಲೆಲ್ಲೋ ಮೂಲೆಯಲ್ಲಿ ಬಿದ್ದುಗೊಂಡಿದ್ದ ಅದನ್ನು ನೋಡುವವರೂ ಇರಲಿಲ್ಲ. ಆದರೆ ಬೇಸಗೆಯ ರಜೆಯಲ್ಲಿ ನಮ್ಮ ಮನೆಗೆ ಬರುವ ನೆಂಟರ ಮಕ್ಕಳಿಗೆ ಮಾತ್ರ ಈ ಮಂಚದ ಅನುಪಸ್ಥಿತಿ ಕಾಡತೊಡಗಿತು. ಪದೇ ಪದೇ ಬಹಳಷ್ಟು ಜನ ತೂಗುಮಂಚದ ಪುನರ್ ಪ್ರತಿಷ್ಠಾಪನೆಗೆ ಒತ್ತಡ ತಂದಿದ್ದರಿಂದ ಅಪ್ಪ ಅದನ್ನ ನಮ್ಮ ಅಡುಗೆ ಮನೆ ಪಕ್ಕದ, ತೆರೆದ ಜಾಗದಲ್ಲಿ ಮತ್ತೆ ತೂಗು ಹಾಕಲಾಯಿತು. ನಮ್ಮ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳ ದಿನ, ಇಲ್ಲವಾದರೆ ಅಕ್ಕ ಪಕ್ಕದ ಮನೆಯ ಮತ್ತೆ ಮಕ್ಕಳು ಅದರ ಮೇಲೆ ಜೀಕಿಕೊಂಡು ಗೌಜಿಗಲಾಟೆ ಮಾಡುವುದು ನಡೆಯಿತು. ಅದೂ ಕೆಲ ದಿನಗಳು,ಅಷ್ಟೆ.

ಈಗ ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೇ ಇದ್ದಾರೆ. ತೂಗುಮಂಚದ ಮೇಲೆ ಅಮ್ಮ ಹಳೆಯ ಕಿತ್ತು ಹೋದ ಬಕೇಟಿನಲ್ಲಿ ಉಪ್ಪು ಹುಣಸೇಹಣ್ಣು ಹಾಕಿಟ್ಟಿದ್ದಾಳೆ. ಒಂದು ನಾಲ್ಕು ಬುಟ್ಟಿಗಳೂ, ಹಳೆಯ ಬಟ್ಟೆಯ ಗಂಟೂ ಅಲ್ಲಿ ಆಶ್ರಯ ಪಡೆದಿದೆ. ಕತ್ತಿ, ಸುತ್ತಿಗೆಯಂತಹ ಹತಾರಗಳನ್ನ ಇಡಲೂ ತೂಗುಯ್ಯಾಲೆಯೇ ಜಾಗ. ಸರಪಳಿಗೆ ಮತ್ತೆ ನಿಧಾನಕ್ಕೆ ತುಕ್ಕು ಹಿಡಿಯುತ್ತಿದೆ. ಮನೆಯಲ್ಲಂತೂ ಮಕ್ಕಳಿಲ್ಲ, ಅಕ್ಕಪಕ್ಕದಲ್ಲೂ ಇಲ್ಲ. ಇದ್ದವರೂ ಬರಿಯ ಓದಿನ ಪ್ರಪಂಚದೊಳಗೆ ಮುಳುಗಿಕೊಂಡು ಇದನ್ನೆಲ್ಲ ಮರೆತಿದ್ದಾರೆ.

ಎಲ್ಲಾದರೂ ಜೋರು ಗಾಳಿ ಬೀಸಿದರೆ, ತೂಗುಮಂಚ ತನ್ನನ್ನು ತಾನೇ ಸಣ್ಣಗೆ ತೂಗಿಕೊಳ್ಳುತ್ತದೆ. ಆಗ ಅದರ ಮೇಲಿಟ್ಟ ಯಾವುದೋ ಖಾಲಿ ಬುಟ್ಟಿಯೋ, ಕೆಲ ಬಾಳೆ ಎಲೆಗಳೋ ಕೆಳಗೆ ಬಿದ್ದು ಉರುಳಾಡುತ್ತವೆ. ಅಮ್ಮ ಬೈದುಕೊಂಡು ಅವನ್ನೆಲ್ಲ ಮತ್ತೆ ಸರಿಪಡಿಸಿಟ್ಟು ನಿಟ್ಟುಸಿರು ಬಿಡುತ್ತಾಳೆ. ತೂಗುಮಂಚ,ಮತ್ತೆ ನಿಶ್ಚಲವಾಗುತ್ತದೆ.



 (ವಿಜಯ ಕರ್ನಾಟಕ ಸಾಪ್ತಾಹಿಕ ಲವ್ ಲವಿಕೆಯಲ್ಲಿ ಪ್ರಕಟವಾದ ಬರಹ)

ಸೋಮವಾರ, ಏಪ್ರಿಲ್ 09, 2012

ಬಿಟ್ಟೆನೆಂದರೂ ಬಿಡದೀ ಮಾಯೆ!

ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡಬೇಕೆಂಬುದು ನನ್ನ ಜೀವಮಾನದ ಆಸೆಯಾಗಿತ್ತು.ಆದರೆ ಆ ಆಸೆಯನ್ನು ಮನೆಯಲ್ಲಿ ಹೇಳಿಕೊಳ್ಳಲು ಧೈರ್ಯವಿಲ್ಲದೇ ಯಾವುದೋ ಒಂದು ಕೋರ್ಸು ಮಾಡಿ ಮುಗಿಸಿದೆ. ಒಂದಿಷ್ಟು ದಿನ ಅದೂ ಇದೂ ಕೆಲಸ ಮಾಡಿದ್ದಾಯಿತು. ಆದರೆ, ಮಾಧ್ಯಮಕ್ಕೆ ಸೇರಿಕೊಳ್ಳಬೇಕು ಎಂಬ ಹಪಹಪಿ ಬಿಡಲಿಲ್ಲ. ಕೊನೆಗೆ ಚಟ ಮತ್ತು ಹಠ ಬಿಡದೇ ಒಂದು ಟಿವಿ ಚಾನಲ್ಲಿನಲ್ಲಿ ಹೇಗೋ ಕೆಲಸಕ್ಕೆ ಸೇರಿಕೊಂಡೆ. ಆರಂಭದಲ್ಲಿ ಡೆಸ್ಕು, ನಂತರ ನಿಧಾನಕ್ಕೆ ರಿಪೋರ್ಟಿಂಗು ಮಾಡಲು ತೊಡಗಿದೆ. ಮೊದಮೊದಲಿಗೆ ಭಾರೀ ಖುಷಿಯಾಯಿತು. ಆದರದು ಕೆಲವೇ ದಿನ. ಯಾವಾಗ ಮದುವೆ, ಮುಂಜಿಗೆ ಹೋದಲ್ಲೆಲ್ಲ ನನ್ನನ್ನ ಸೈಡಿಗೆ ಕರೆದು ದೇಶದ,ರಾಜ್ಯದ ಆಗುಹೋಗುಗಳ ಬಗ್ಗೆ ಘನವಾದ ಚರ್ಚೆ ಶುರು ಮಾಡಿದರೋ, ಆಗ ವರದಿಗಾರನೊಬ್ಬನ ತೊಂದರೆಗಳು ಅರಿವಾಗುತ್ತ ಹೋದವು. ಯಾರದೋ ಸಚಿವ ಸ್ಥಾನ ಹೋಗುವ ಬಗ್ಗೆಯೋ, ಇನ್ನಾರದೋ ಮನೆ ಮೇಲೆ ಐಟಿ ರೈಡ್ ಆಗುತ್ತದಂತೆ ಹೌದಾ ಎಂದೆಲ್ಲ ಕೇಳಿ, ನಾನು ಅದರ ಬಗ್ಗೆ ಗೊತ್ತಿಲ್ಲ ಎಂದು ತಲೆಯಲ್ಲಾಡಿಸಿದರೂ ಬಿಡದೇ, ನಿಮಗೆ ಗೊತ್ತಿಲ್ಲದ್ದು ಏನಿರತ್ತೆ ಹೇಳಿ, ನೀವು ಸುಮ್ಮನೆ ಗುಟ್ಟು ಮಾಡುತ್ತಿದ್ದೀರಿ ಅಲ್ವಾ? ಏನೋ ಭಾರೀ ಡೆವಲಪಮೆಂಟ್ ಇರಬೇಕು ಸದ್ಯದಲ್ಲೇ ಎಂದು ನನ್ನ ಮೌನಕ್ಕೂ ಅರ್ಥ ಕಲ್ಪಿಸುತ್ತಿದ್ದರು.

ಒಂದಿಷ್ಟು ದಿನ ಈ ಕೆಲಸ ಮಾಡಿದ ಮೇಲೆ, ಇದ್ಯಾಕೋ ನನಗೆ ಹೇಳಿಸಿದ್ದಲ್ಲ ಎಂದು ಅನುಮಾನ ಬರಲು ಆರಂಭವಾಯಿತು. ಆದರೆ ಅಷ್ಟು ಸುಲಭಕ್ಕೆ ಹೊರಬರಲು ಸಾಧ್ಯವಿಲ್ಲದ ಸೆಳೆತ ಮಾಧ್ಯಮದಲ್ಲಿದೆ. ಹೀಗಾಗಿ ಆಲೋಚನೆ ಮಾಡಿ, ಟೀವಿ ಚಾನಲ್ಲಿನಲ್ಲೇ ಕೆಲಸವನ್ನು ಮುಂದುವರಿಸಲು ನಿರ್ಧರಿಸಿದೆ. ಆದರೆ, ವರದಿಗಾರನಾಗಿಯಲ್ಲ. ಮತ್ತೊಂದು ಚಾನಲ್ಲಿನಲ್ಲಿ ಧಾರಾವಾಹಿಗಳ ವಿಭಾಗಕ್ಕೆ ಸೇರಿಕೊಂಡೆ. ಯಾರೋ ಹೇಳಿದ್ದರು, ಅಲ್ಲಿ ಸ್ವಂತಿಕೆಗೆ, ಕ್ರಿಯೇಟಿವಿಟಿಗೆಲ್ಲ ಜಾಸ್ತಿ ಅವಕಾಶ ಇದೆ, ಕಥೆ ಗಿಥೆ ಬರಕೊಂಡು ಹಾಯಾಗಿರಬಹುದು ಇತ್ಯಾದಿ. ಆದರೆ, ನಾನು ಬೆಂಕಿಯಿಂದ ಬಾಣಲೆಗೆ ಹೈಜಂಪ್ ಮಾಡಿದ್ದೇನೆ ಅನ್ನೋದು ಗೊತ್ತಾಗುವುದಕ್ಕೆ ಹೆಚ್ಚೇನೂ ಕಾಲ ಬೇಕಾಗಲಿಲ್ಲ.

ಧಾರಾವಾಹಿಗಳ ಬಗ್ಗೆ ನನಗೆ ಪ್ರೀತಿ ಇಲ್ಲ ಅಂತೇನೂ ಅಲ್ಲ. ಮಹಾಭಾರತದಿಂದ ತೊಡಗಿ ಮಾಯಾಮೃಗದವರೆಗೂ ಸುಮಾರು ಧಾರಾವಾಹಿಗಳನ್ನ ಬೆನ್ನುಬಿಡದೇ ನೋಡಿದ್ದು ಹೌದು. ಆಮೇಲೆ ಆ ಬಗೆಗಿನ ಆಸಕ್ತಿಯೇ ಕುಂದಿಹೋಗಿತ್ತು. ಆದರೆ ಈಗ ಮತ್ತೆ ಸೀರಿಯಲ್ಲುಗಳ ಬೆನ್ನು ಬೀಳುವ ಗ್ರಹಚಾರ ಆರಂಭವಾಯಿತು. ನಮ್ಮ ಚಾನಲ್ಲಿನ ಸೀರಿಯಲ್ಲುಗಳು,ಎದುರಾಳೀ ವಾಹಿನಿಗಳ ಸೀರಿಯಲ್ಲು ಅವುಗಳ ಟಿ,ಆರ್,ಪಿ ಎಷ್ಟು,ನಮಗೆ ಹೆಚ್ಚು ಬಂದಿದ್ದರೆ ಏನು ಕಾರಣ,ಕಡಿಮೆಯಾದರೆ ಯಾಕೆ? ಅದರ ಕಥೆ ಏನು? ಅಲ್ಲಿ ಸೊಸೆಯನ್ನು ಅತ್ತೆ ಕೊಂದಳಾ ಇಲ್ಲವಾ?ಕಳೆದು ಹೋಗ ಮಗ ಸಿಕ್ಕನೋ ಇಲ್ಲವೋ? ಆ ಚಾನಲ್ಲಿನ ಸೀರಿಯಲ್ಲಿನಲ್ಲಿ ಮಂತ್ರಶಕ್ತಿಯಿಂದ ಸತ್ತು ಮೂರು ದಿನದ ಮೇಲೆ ಅವಳ್ಯಾವಳೋ ಬದುಕಿದ್ದಕ್ಕೆ ನಮ್ಮ ಸೀರಿಯಲ್ಲಿನ ರೇಟಿಂಗು ಕಡಿಮೆಯಾಯಿತಾ? ನಮ್ಮ ಧಾರಾವಾಹಿಯಲ್ಲಿ ನಾವು ಗಂಡ ಹೆಂಡತಿ ಅನ್ಯೋನ್ಯವಾಗಿದ್ದಾರೆ ಎಂದು ತೋರಿಸಿದ್ದು ತಪ್ಪಾ? ಹೀಗೆ ಪ್ರಾಯಶಃ ತಲೆ ಬುಡ ಇದ್ದಿರಬಹುದಾದ,ಆದರೆ ನಮಗೆ ಅರ್ಥವಾಗಲು ಕಷ್ಟವಾಗುತ್ತಿದ್ದ ವಿಚಾರಗಳನ್ನು ಗುಡ್ಡೆ ಹಾಕಿಕೊಂಡು ಅವುಗಳ ಪೋಸ್ಟ್ ಮಾರ್ಟಂ ಮಾಡಬೇಕಿತ್ತು.

ದಿನವೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬಂದ ಸೀರಿಯಲ್ಲುಗಳ ಟೇಪು ನೋಡಿ, ಅಲ್ಲಿರಬಹುದಾದ ತಪ್ಪುಗಳನ್ನ ಹುಡುಕಿ, ಸರಿಪಡಿಸಲು ಹೆಣಗುವುದು ಒಂದು ತೂಕವಾದರೆ, ಹೊಸ ಸೀರಿಯಲ್ಲು ಮಾಡುತ್ತೇವೆ ಅಂತ ಕಥೆ ಹಿಡಿದುಕೊಂಡು ಬರುವವರನ್ನು ನಿಭಾಯಿಸುವುದು ಮತ್ತೊಂದು ತೂಕ! ಯಾರ ಬಳಿ ಬೇಕಾದರೂ ಅದ್ಭುತ ಕಥೆ ಇರುವ ಸಾಧ್ಯತೆ ಇರುವುದರಿಂದ, ನಿರ್ಲಕ್ಷ್ಯ ಮಾಡುವ ಹಾಗೇ ಇಲ್ಲ.

ತಮಿಳು ಕಥೆಗಾರನೊಬ್ಬ ಒಂದು ದಿನ ಬಂದು ತನ್ನ ಸೀರಿಯಲ್ಲಿನ ಕಥೆ ಹೇಳುತ್ತಿದ್ದ. ಮೊದಲ ವಾರವೇ ಲವ್ ಮ್ಯಾರೇಜು, ಅತ್ತೆ ವಿರೋಧ, ಸೊಸೆಗೆ ಹಿಂಸೆ ಇತ್ಯಾದಿ ಕಥೆಯೆಲ್ಲ ಇದ್ದು ಹೆಂಗಳೆಯರ ಕರುಳನ್ನ ಕಿತ್ತು ಕೈಯಲ್ಲಿ ಕೊಟ್ಟು ಅಳಿಸುವುದಾಗಿ ಶ್ರೀಯುತ ನಿರ್ದೇಶಕರು ನಮಗೆ ಪ್ರಾಮಿಸ್ ಮಾಡುತ್ತಿದ್ದರು. ನಮ್ಮಲ್ಲಿನ ಬರಹಗಾರರ ಬಗ್ಗೆ ಯಾವತ್ತೂ ವಿಶ್ವಾಸ ಇಟ್ಟಿರದ ಆ ಮಹಾನುಭಾವರು ಚೆನ್ನೈನಿಂದ ಕಥೆಗಾರರನ್ನೂ, ಕಥೆಗಳನ್ನೂ ಆಮದು ಮಾಡಿಕೊಳ್ಳುತ್ತಾರಂತೆ.

“ಸರ್.. ಅವ್ಳು ಮೆಲ್ಲ ವರುವಳ್ ಸಾರ್.. ಕೈಲೆ ನೈಪು.. ಮೆಲ್ಲ ಅಂದರೆ ಮೆಲ್ಲ ವರ್ತಾಳೆ.. ನೈಪು ಕ್ಲೋಸಪ್ ಶಾಟ್ ಸಾರ್.. ಅಂಗೇ ಪ್ಯಾನು.. ಮುಕ ರಿವೀಲ್ ಪಣ್ಣಕೂಡಾದ್ ಸಾರ್.. ಅದು ತೋರಿಸಲ್ಲ.. ಗೊತ್ತು ಸರ್ ಎನಕು.. ಅಲ್ಲಿ ಹೀರೋಯಿನ್ ಕೂತು ಬಿಟ್ಟಿದಾಳೆ.. ನೈಫು ಬ್ಯಾಕ್ ಸೈಡಿಂದ ಬರತ್ತೆ ಸರ್.. ಹೀರೋಯಿನ್ ಶಾಟ್, ನೈಫ್ ಶಾಟ್.. ಫ್ರೈಡೇ ಎಪಿಸೋಡ್ ಎಂಡ್ ಸಾರ್!  ವೊಳ್ಳೆ ಟೆನ್ಶನ್ ಅಲ್ಲ ಸಾರ್?” ಎಂದ. ಸೋಮವಾರದ ಎಪಿಸೋಡ್ ಏನು ಎಂದು ತಡೆಯಲಾರದೆ ಕೇಳಿದೆ ನಾನು. ಸಾರ್, ಅದು ಸುಮ್ಮಗೆ ಸಾ.. ಫ್ರೈಡೇ ಕಿಕ್ ಗೆ! ಮಂಡೇ ಓಪನಿಂಗ್ ಲೆ ಅತ್ತೆ ವಂದು ಮೆಲ್ಲ ಆಪಲ್ ಕಟ್ಟ್ ಮಾಡ್ತಾರೆ ಸಾರ್ ನೈಪ್ ಲೆ.. ಅಂದ ಮಹಾಶಯ! ಪುಣ್ಯಕ್ಕೆ ನನ್ನ ಪಕ್ಕದಲ್ಲಿ ಯಾವುದೇ ಚೂರಿ ಇರಲಿಲ್ಲ.

ಇಂತಹ ಕಥೆಗಳನ್ನು ಪ್ರಾಯಶಃ ವಾರಕ್ಕೆ ಹತ್ತಿಪ್ಪತ್ತು ಕೇಳಿ ಕೇಳಿ, ಅಥವಾ ನೋಡೀ ನೋಡೀ ನವರಸಗಳನ್ನು ಗುರುತಿಸುವ ಇಂದ್ರಿಯಗಳು ನನ್ನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿಬಿಟ್ಟಿವೆ. ಮನೆಯಲ್ಲಿ ಹೆಂಡತಿ ಒಂದು ದಿನ ಏನೋ ಬೇಸರ ತೋಡಿಕೊಳ್ಳುತ್ತಿದ್ದಳು. ನಾನೋ, ನನ್ನ ಎದುರಾಳೀ ವಾಹಿನಿಯಲ್ಲಿನ ಸೀರಿಯಲ್ ನ ಗಮನವಿಟ್ಟು ನೋಡುತ್ತಿದ್ದೆ. ಮಾರನೇ ದಿನ ಬಾಸು ಕಥೆ ಕೇಳುವ ಎಲ್ಲ ಸಾಧ್ಯತೆಗಳಿದ್ದವು. ನಿನಗೆ ಪ್ರಾಯಶಃ ನನ್ನ ಕಷ್ಟ ಅರ್ಥ ಆಗೋಕೆ ಅಲ್ಲಿ ಸೀರಿಯಲ್ಲಿನಲ್ಲಿ ತೋರಿಸೋ ಹಾಗೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ಕು ಬೇಕೇನೋ ಅಲ್ಲವಾ ಎಂದು ಬಾಗಿಲು ಧಡಾರನೆ ಹಾಕಿಕೊಂಡಳು. ಅವಳು ಬಾಗಿಲು ಹಾಕಿಕೊಳ್ಳೋದಕ್ಕೋ ಸೀರಿಯಲ್ಲಿನಲ್ಲಿ  ಸೊಸೆ ಬಾಗಿಲು ಹಾಕಿಕೊಳ್ಳೋದಕ್ಕೂ ಸರಿಯಾಗಿ ಹೊಂದಿಕೆಯಾಯಿತು. ನಾನು ಬ್ರೇಕ್ ಬಂದ ಕೂಡಲೇ ಎದ್ದು ಹೋಗಿ ಹೆಂಡತಿಯ ಸಮಾಧಾನ ಮಾಡಿದೆ.

ನನ್ನ ಚಿಕ್ಕಮ್ಮ ಮನೆಗೆ ಬಂದಿದ್ದಳು, ನಮ್ಮ ಚಾನಲ್ಲಿನ ಒಂದು ಸೀರಿಯಲ್ಲು ಆಕೆಗೆ ಬಹಳ ಫೇವರಿಟ್ಟು. ಮುಂದೇನಾಗತ್ತೆ ಅದರ ಕಥೆ ಹೇಳು ಮಾರಾಯ, ಮಗಳಿಗೆ ಪರೀಕ್ಷೆ ಬೇರೆ ಇದೆ, ನೀನು ಕಥೆ ಹೇಳಿದರೆ ನಾನು ಸೀರಿಯಲ್ಲೇ ನೋಡಲ್ಲ ಒಂದು ತಿಂಗಳು ಅಂತ ಅವಳು. ನೀನೇ ಗೆಸ್ ಮಾಡು ಏನಾಗತ್ತೆ ಅನ್ನೋದನ್ನ ಅಂದೆ. ಹಿಂದಿನ ದಿನ ತಾನೇ ನಾವು-ಡೈರೆಕ್ಟರು ಬೆಳಗ್ಗಿಂದ ಸಂಜೆಯವರೆಗೆ ಕೂತು, ಆ ಧಾರಾವಾಹಿಗೆ ಊಹಿಸಲು ಅಸಾಧ್ಯವಾದ ಭಯಾನಕ ತಿರುವುಗಳನೆಲ್ಲ ಆಲೋಚಿಸಿ, ಅದಕ್ಕೊಂದು ಅಂತಿಮ ರೂಪ ಕೊಟ್ಟಿದ್ದೆವು. ಚಿಕ್ಕಮ್ಮ ಇದ್ದೋಳು, “ಏನಿಲ್ಲ ಹೆಚ್ಚಾಗಿ ಆ ಸುನೀತಾ ಇದಾಳಲ್ಲ, ಅವಳ ನಿಜವಾದ ಅಮ್ಮ ಸಿಕ್ಕಿಬಿಡ್ತಾರೆ, ಆದ್ರೆ ಈಗಿರೋ ಅಮ್ಮ ಅವಳನ್ನ ಚೆನ್ನಾಗಿ ನೋಡ್ಕೊಂಡಿರೋದ್ರಿಂದ ನಿಜವಾದ ಅಮ್ಮ ವಾಪಸ್ ಹೋಗ್ತಾರೆ ಅಥವಾ ಏನೋ ಕಾಯಿಲೆ ಕಸಾಲೆ ಬಂದು ಸತ್ತೇ ಹೋಗ್ತಾರೇನೋ” ಅಂದಳು. ನನಗೆ ತಲೆ ಚಚ್ಚಿಕೊಳ್ಳುವಂತಾಯಿತು. ನಾವು ಇಡೀ ದಿನ ಕೂತು ತೌಡು ಕುಟ್ಟಿ ಇದೇ ಕತೆ ಆಲೋಚನೆ ಮಾಡಿದ್ದವು! “ನೀನು ಬಂದು ನಮ್ಮ ಟೀಮು ಸೇರ್ಕೋ ಮಾರಾಯ್ತಿ” ಅಂತಂದು ಸುಮ್ಮನಾದೆ.

ಸೀರಿಯಲ್ಲುಗಳ ಜಗತ್ತಿಗೂ ಮಹಿಳೆಯರಿಗೂ ಅವಿನಾಭಾವ ಸಂಬಂಧ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಅದರ ನಿಜವಾದ ಅರ್ಥ ಆಗಿದ್ದ ಮಾತ್ರ ನನಗೆ ಈ ಕೆಲಸ ಮಾಡಲು ಆರಂಭಿಸಿದ ಮೇಲೆಯೇ. ನಮ್ಮ ಸೀರಿಯಲ್ಲುಗಳ ಬಗ್ಗೆ ಜನಾಭಿಪ್ರಾಯ ಕೇಳಲು ಆಗೀಗ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆವು. ಒಮ್ಮೆ ಹಾಸನದಲ್ಲಿ, ಒಬ್ಬ ಹೆಂಗಸು ಬಂದು ಆಗತಾನೇ ನಿಲ್ಲಿಸಿದ್ದ ನಮ್ಮ ಸೀರಿಯಲ್ ಒಂದರ ಹೆಸರು ಹೇಳಿ,”ಸಾರ್, ಅದ್ಯಾಕ್ ಆ ಧಾರ್ವಾಹಿ ನಿಲ್ಸಿದ್ರಿ” ಅಂದಳು.. ನಾನು ಅವಳಿಗೆ “ಟಿ.ಆರ್.ಪಿ ಇರಲಿಲ್ಲ..ಹಾಗಾಗಿ ನಿಲ್ಲಿಸಬೇಕಾಯ್ತು” ಅಂದೆ. ಏನ್ ಟೀಆರ್ಪಿ ಗೀಆರ್ಪಿ ಎಲ್ಲ ನಂಗೊತ್ತಿಲ್ಲ..ಅಂತಾ ಒಳ್ಳೇ ಸೀರಿಯಲ್ಲು ಅಣ್ಣ.. ನನ್ ಸಂಸಾರಾ ಉದ್ದಾರ ಮಾಡಿದ್ ಧಾರವಾಹೀನ ಅಂಗೆಲ್ಲ ನಿಲ್ಲುಸ್ ಬುಟ್ರಲ್ಲಣ್ಣ ಅಂತ ಭಾವುಕಳಾಗಿ ಹೇಳುತ್ತ ಕಣ್ಣಲ್ಲೆಲ್ಲ ನೀರು ತಂದುಕೊಂಡಳು. ವಿಷ್ಯ ಏನು ಅಂದ್ರೆ ಅವಳ ಗಂಡ ಕುಡೀತಿದ್ದನಂತೆ.ಸಿಕ್ಕಾಪಟ್ಟೆ. ಒಂದು ದಿನ ನಮ್ಮ ಸೀರಿಯಲ್ಲಿನ ಹೀರೋಯಿನ್ನು ಕುಡಿದು ಬಂದ ತನ್ನ ಗಂಡನಿಗೆ ಪೊರಕೆಯಲ್ಲಿ ಹೊಡೆದದ್ದನ್ನು ನೋಡಿ ಈಕೆ ಧೈರ್ಯ ತಂದುಕೊಂಡು ತನ್ನ ಗಂಡನಿಗೂ ಅದೇ ಗತಿ ಕಾಣಿಸಿದ್ದಾಳೆ. ವಠಾರದ ಅಕ್ಕಪಕ್ಕದ ಜನಗಳೆದುರು ಅವನ ಮರ್ಯಾದೆ ಹೋಗಿದೆ. ಮಾರನೇ ದಿನದಿಂದ ಕುಡಿತ ಹದಕ್ಕೆ ಬಂದಿದೆ! “ಏನಾರ ಮಾಡಿ ಮತ್ತೆ ಆ ಧಾರ್ವಾಹಿ ಶುರು ಮಾಡಿ” ಅಂತ ಗೋಗರೆದಳು ಆಕೆ. ನಾನು ಈ ಕಥೆಯನ್ನ ನಮ್ಮ ಮಾರ್ಕೆಟಿಂಗ್ ವಿಭಾಗದೋರಿಗೆ ಹೇಳಿದರೆ, ಅವರು ನನಗೆ ಪೊರಕೆ ಸೇವೆ ಮಾಡುವ ಸಾಧ್ಯತೆ ಇದ್ದದ್ದರಿಂದ, ಅವಳನ್ನ ಏನೋ ಸಮಾಧಾನ ಮಾಡಿ ಸಾಗಹಾಕಿದೆ.

ಪ್ರಾಯಶಃ ಎಲ್ಲ ವರ್ಗದ ಹೆಂಗಸರೂ ಕೂಡ ಈ ಸೀರಿಯಲ್ಲುಗಳನ್ನು ತಮ್ಮದೇ ಭಾವ ವಲಯದೊಳಗೆ ತಂದುಕೊಂಡು ನೋಡುತ್ತಾರೆ. ಅಲ್ಲಿನ ಪಾತ್ರಗಳು ಅವರನ್ನೇ ಪ್ರತಿನಿಧಿಸುತ್ತವೆ. ತಾವು ಕಂಡ ಕನಸುಗಳನ್ನು, ತಮ್ಮಿಂದ ಎಂದಿಗೂ ಮಾಡಲಾಗದ ಕೆಲಸವನ್ನು ಧಾರಾವಾಹಿಯ ಪಾತ್ರವೊಂದು ನನಸಾಗಿಸುತ್ತಿದೆ ಎಂಬುದೇ ಹೆಚ್ಚಿನವರಿಗೆ ಅತ್ಯಂತ ಖುಷಿ ಕೊಡುವ ವಿಚಾರ. ಎಂದೆಂದಿಗೂ ಅತ್ತೆಗೆ ಎದುರಾಡದ ಸೊಸೆಯೊಬ್ಬಳಿಗೆ, ಸೀರಿಯಲ್ಲಿನ ಸೊಸೆ ಅತ್ತೆಗೇ ಎದುರುನಿಂತರೆ ಆ ಪಾತ್ರದೊಳಗೆ ತಾನೇ ಆವಾಹನೆಯಾದಂತೆ ಅನ್ನಿಸುತ್ತದೆ. ಅಷ್ಟರಮಟ್ಟಿಗಾದರೂ ನೆಮ್ಮದಿ ಆಕೆಗೆ. ಅಪ್ಪನ ನೆರಳು ಕಂಡರೆ ಹೆದರುವ ಹುಡುಗಿಗೆ, ಮನೆಯವರನ್ನು ವಿರೋಧಿಸಿ ಮದುವೆಯಾದ ಧಾರಾವಾಹಿಯ ಹುಡುಗಿ ಆದರ್ಶಪ್ರಾಯಳು! ಒಬ್ಬಬ್ಬೊರಿಗೂ ಒಂದೊಂದು ಕಾರಣಗಳಿವೆ, ಧಾರಾವಾಹಿ ನೋಡಲು. ಹೀಗಾಗಿ ಕೊನೆಗೆ ಬೈದುಕೊಂಡಾದರೂ ಮಂದಿ ಸೀರಿಯಲ್ ನೋಡೇ ನೋಡುತ್ತಾರೆ!

ನನ್ನ ತಂಗಿಯ ಬಾಣಂತನಕ್ಕೆ, ಊರಿಂದ ಒಬ್ಬಾಕೆ ಬಂದಿದ್ದರು. ಆಕೆಗೆ ಅದೇನೋ ತೊಂದರೆಯಾಗಿ ಕಳೆದ ನಾಲ್ಕೆಂಟು ವರ್ಷದಿಂದ ಕಿವಿ ಕೇಳಿಸುವುದಿಲ್ಲ. ಅದೇ ಕಾರಣಕ್ಕೆ ಕುಟುಂಬಸ್ಥರೂ ಅವರನ್ನ ದೂರ ಮಾಡಿದ್ದಾರೆ.  ಇನ್ನೂ ನಲವತ್ತು-ನಲ್ವತ್ತೈದರ ಪ್ರಾಯದ ಆಕೆ ಅವರಿವರಿಗೆ ಹೆರಿಗೆ ಬಾಣಂತನಕ್ಕೆ ಸಹಾಯ ಮಾಡುತ್ತ, ಅಡುಗೆ ಮಾಡಿಕೊಡುತ್ತ ಜೀವನ ಸಾಗಿಸುತ್ತಾರೆ.

ಅವರು ದಿನಾ ಸಂಜೆ ತಮ್ಮ ಒಂದು ಹಂತದ ಕೆಲಸ ಮುಗಿದ ಮೇಲೆ ಕಡ್ಡಾಯವಾಗಿ ಕೂತು ಮನೆ ಮಂದಿಯ ಜೊತೆಗೆ ಯಾವುದೋ ಒಂದು ಸೀರಿಯಲ್ ನೋಡುತ್ತಿದ್ದರು. ಕಿವಿ ಕೇಳದವರು ಸೀರಿಯಲ್ ಯಾಕೆ ನೋಡುತ್ತಾರೆ ಅನ್ನುವುದು ನಮ್ಮೆಲ್ಲರ ಪ್ರಶ್ನೆ.  ತೀರಾ ಕಿವಿ ಹತ್ತಿರ ಹೋಗಿ ಕೂಗಿದರೆ ಮಾತ್ರ ನಾವು ಹೇಳುವುದು ಕೇಳುತ್ತಿತ್ತು. ಒಂದು ದಿನ ಆಕೆಗೆ ಯಾವುದೋ ಕಾರಣಕ್ಕೆ ಸಂಚಿಕೆಯೊಂದನ್ನು ನೋಡಲಾಗಿಲ್ಲ. ಮಾರನೇ ದಿನ ತಂಗಿಯ ಬಳಿ, “ರಾಘವೇಂದ್ರನಿಗೆ ಏನಾಯ್ತು ನಿನ್ನೆ? ಅಶ್ವಿನಿನ ಮದುವೆಯಾಗ್ತಾನಂತ ಅವನು? ಅಂತ ಕೇಳಿದರು. ಇವಳಿಗೆ ತಲೆಬುಡ ಅರ್ಥವಾಗಲಿಲ್ಲ! ಆ ಹೆಸರಿನ ಯಾವ ಪಾತ್ರಗಳೂ ಅವರು ನೋಡುವ ಸೀರಿಯಲ್ಲಿನಲ್ಲಿ ಇಲ್ಲ.

ಆಮೇಲೆ ನಿಧಾನಕ್ಕೆ ನಮಗೆ ಹೊಳೆದದ್ದೇನೆಂದರೆ, ಸೀರಿಯಲ್ ನೋಡುತ್ತ ನೋಡುತ್ತ ಆಕೆ ತನ್ನದೇ ಕಥೆಯೊಂದನ್ನು ಮನಸ್ಸಿನಲ್ಲಿ ಹೆಣೆದುಕೊಂಡಿದ್ದರು. ಅಲ್ಲಿನ ಚಲಿಸುವ ಚಿತ್ರಗಳಿಗೆ ಇವರದೇ ಚಿತ್ರಕಥೆ. ಪಾತ್ರಗಳಿಗೊಂದೊಂದು ಹೆಸರು. ಕಣ್ಣಿಗೆ ಕಾಣುವ ಪಾತ್ರಗಳಿಗೆ ತಮ್ಮದೇ ಕಥೆಯನ್ನು ಆರೋಪಿಸಿಕೊಳ್ಳುತ್ತ ಆಕೆ ಧಾರಾವಾಹಿ ನೋಡುತ್ತಿದ್ದರು. ಪ್ರಪಂಚದ ಯಾವ ಶಬ್ದಗಳೂ ಅವರನ್ನು ತಲುಪುವುದಿಲ್ಲವಾದರೂ, ಅವರ ಒಳಗಿನ ಮಾತುಗಳಿಗೆ-ಕಲ್ಪನೆಗಳಿಗೆ ಈ ಧಾರಾವಾಹಿ ಸೇತುವೆಯಂತೆ ಕೆಲಸ ಮಾಡುತ್ತಿತ್ತು!

ಪ್ರಾಯಶಃ ಅವರ ಮನಸ್ಸಿನಲ್ಲಿ ನಮ್ಮ ಬಳಿ ಇದ್ದಿರಬಹುದಾದ ಕಥೆಗಳನ್ನು ಮೀರಿಸುವ ಕಥೆ ಇತ್ತೋ ಏನೋ? ಆದರೆ ನನಗೆ ಕೇಳುವ ಧೈರ್ಯ ಬರಲಿಲ್ಲ. ಹೊರ ಜಗತ್ತಿಗೆ ಬಂದು ಆ ಕಥೆ ಹಾಳಾಗುವುದಕ್ಕಿಂತ, ಅವರೊಳಗೇ ಅದು ಧಾರೆಯಾಗಿ ಪ್ರವಹಿಸಲಿ ಅಂದುಕೊಂಡು ಸುಮ್ಮನಾದೆ.

ಈಗ ನಾನು ಕೆಲವು ಸಲ ಟಿವಿಯ ಧ್ವನಿಯನ್ನು ಮ್ಯೂಟ್ ಮಾಡಿಕೊಂಡು ಧಾರಾವಾಹಿ ನೋಡಲು ಯತ್ನಿಸುತ್ತೇನೆ. ಏನೂ ಅರ್ಥವಾಗುವುದಿಲ್ಲ.


(ಕನ್ನಡ ಪ್ರಭ ಯುಗಾದಿ ಲಲಿತಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಬರಹ)






ಸೋಮವಾರ, ಮಾರ್ಚ್ 26, 2012

ಪಡಸಾಲೆಯ ಚಿತ್ರಗಳು


ತಮ್ಮ ವೃತ್ತಿಜೀವನದ ಸುಮಾರು ೨೦ಕ್ಕೂ ಹೆಚ್ಚು ವರ್ಷಗಳನ್ನ ಬಾಡಿಗೆ ಮನೆಯಲ್ಲಿ ಸವೆಸಿದ ಮೇಲೆ ನಮ್ಮಪ್ಪನಿಗೆ ಸ್ವಂತಕ್ಕೊಂದು ಮನೆ ಮಾಡಿಕೊಳ್ಳುವ ಶಕ್ತಿ ಬಂತು. ಅಲ್ಲಿಯವರಿಗೆ ನಮಗೆ ವರ್ಷ-ಎರಡು ವರ್ಷಕ್ಕೊಮ್ಮೆ ಪಾತ್ರೆ ಪಗಡೆ ಮಂಚ ಕುರ್ಚಿ ಹೊತ್ತು ಮತ್ತೊಂದು ಮನೆಗೆ ಸಾಗುವ ಸಂಭ್ರಮ ತಪ್ಪಿರಲಿಲ್ಲ. ಯಮ ಸೆಖೆಯ ಕರಾವಳಿಯಲ್ಲಿ ಮಲೆನಾಡಿನ ತರಹದ್ದೇ ಮನೆ ಹುಡುಕಿ, ಸ್ವಂತ ಮನೆ ಮಾಡಿಕೊಂಡಿದ್ದಾಯಿತು. ಪುಟ್ಟ, ಒಂದೆರಡು ರೂಮುಗಳ ಮನೆಯಲ್ಲಿದ್ದ ನಮಗೆ, ಚಾವಡಿ ಪಡಸಾಲೆ ದೇವರಕೋಣೆ, ಉಪ್ಪರಿಗೆ ಅಡಿಗೆಮನೆ ಎಂದೆಲ್ಲ ವಿಸ್ತಾರವಾಗಿದ್ದ ಮನೆಯನ್ನ ನೋಡಿ ಖುಷಿಯೋ ಖುಷಿ. ಅಲ್ಲಿಯವರೆಗೆ ಮನೆ ಎಂದರೆ ಹೊರಗೊಂದು ಬಾಗಿಲು, ಅಲ್ಲಿಂದ ಒಳ ಪ್ರವೇಶ ಎಂದುಕೊಂಡಿದ್ದ ನಮಗೆ, ಇಲ್ಲಿ ಅಂಗಳದಿಂದಲೇ ನೇರ ಮೇಲೆ ಬಂದು ಕೂರಬಹುದಾದ ಚಾವಡಿ ನೋಡಿ ಅಚ್ಚರಿ. ಅದಕ್ಕೆ ಬಾಗಿಲೇ ಇಲ್ಲ! ಎರಡು ದಪ್ಪನೆಯ ಮಿರಮಿರ ಮಿಂಚುವ ಕಂಬಗಳು, ಸುತ್ತ ಗೋಡೆಗಳ ಮೇಲೆ ವಿರಾಜಮಾನವಾದ ರಾಜಾ ರವಿವರ್ಮನ, ಮತ್ತಿತರರ ವರ್ಣ ಚಿತ್ರಗಳನ್ನ ನೋಡಿ ನಾನಂತೂ ಬೆರಗಾಗಿ ಹೋದೆ. 

ಆದರೆ ಅಲ್ಲೊಂದು ಸಮಸ್ಯೆಯಿತ್ತು. ದೇವರ ಚಿತ್ರಗಳ ಜೊತೆಗೆ, ಅಲ್ಲಲ್ಲಿ ಮಧ್ಯಮಧ್ಯ ಒಂದಿಷ್ಟು ಹಳೆಯ ಫ್ಯಾಮಿಲಿ ಫೋಟೋಗಳೂ ಫ್ರೇಮಿನೊಳಗೆ ರಾರಾಜಿಸುತ್ತಿದ್ದವು. ನಮಗೆ ಮನೆ ಮಾರಿ ಹೋದವರು ಅವುಗಳನ್ನು ಇಲ್ಲೇ ಬಿಟ್ಟು ಹೋಗಿದ್ದರು. ಹುಟ್ಟಿ ಬೆಳೆದ ಮನೆಯನ್ನೇ ಬಿಟ್ಟು ಹೋಗುತ್ತಿದ್ದೇವೆ, ಹಳೆಯ ನೆನಪುಗಳನ್ನ ಕಟ್ಟಿಕೊಂಡು ಹೋಗುವುದೇಕೆ ಎಂದಿರಬೇಕು.   ನಾವು ಕೊಂಡ ಮನೆಯನ್ನ ಕಟ್ಟಿಸಿದ ವ್ಯಕ್ತಿ , ಸ್ವಾತಂತ್ರ್ಯ ಪೂರ್ವದಲ್ಲಿ ಆನೆ ದಂತಗಳ ವ್ಯಾಪಾರಿಯಾಗಿದ್ದವರಂತೆ! ಅಲ್ಲಿನ ಹಲವಾರು ಕಪ್ಪು ಬಿಳುಪು ಚಿತ್ರಗಳಲ್ಲಿ ನಿಂತವರೆಲ್ಲ ದಪ್ಪ ಮೀಸೆ ಬಿಟ್ಟುಕೊಂಡು ಕೈಯಲ್ಲಿ  ಉದ್ದುದ್ದುದ ಆನೆದಂತಗಳನ್ನು ಹಿಡಿದವರೇ ಆಗಿದ್ದರು. 

ಮನೆ ಪ್ರವೇಶವಾಗಿ  ವಾರದ ನಂತರ ಬಂದ ಅಪ್ಪನ ಗೆಳೆಯರೊಬ್ಬರು ಅನುಮಾನಾಸ್ಪದವಾಗಿ ನಿಮ್ಮ ಫ್ಯಾಮಿಲಿಯದ್ದು ಈ ಬ್ಯುಸಿನೆಸ್ಸು ಅಂತ ಗೊತ್ತಿರಲಿಲ್ಲ ಮಾರಾಯರೇ ಎಂದು ನಮ್ಮ ವಂಶವೃಕ್ಷದ ಹಿರಿಯ ತಲೆಗಳನ್ನು ಶಂಕಿಸಿದರು, ಮೇಲಿಂದ ’ಹಾಗಿದ್ದರೆ ಈ ಮನೆ ಕೊಳ್ಳುವುದಕ್ಕೆ ನಿಮಗೇನು ಕಷ್ಟವಾಗಿರಲಿಕ್ಕಿಲ್ಲ ಬಿಡಿ’ ಎಂದು ವ್ಯಂಗ್ಯವಾಡಿದ ಮೇಲೆ ಆ ಫೋಟೋಗಳನ್ನ ಅಲ್ಲಿಂದ ಎತ್ತುವುದು ಅನಿವಾರ್ಯವಾಯಿತು.  ದಂತಗಳನ್ನು ಹಿಡಿದ ಮನುಷ್ಯರು ಉಪ್ಪರಿಗೆಯ ಮೂಲೆಗೆ ಸೇರಿದರು.

ಅಲ್ಲಿನ ಖಾಲಿಯಾದ ಜಾಗಕ್ಕೆ ಎಂತಹ ಚಿತ್ರಗಳನ್ನು ತಂದು ಹಾಕಬೇಕು ಎನ್ನುವ ಬಗ್ಗೆ ಅಪ್ಪನಿಗೂ ಅಮ್ಮನಿಗೂ ಹಾಗೂ ನಾವಿಬ್ಬರು ಅಣ್ಣತಂಗಿಗೂ ವಾಗ್ಯುದ್ಧ ಜರುಗಿತು. ಅಪ್ಪನು ಅಲ್ಲಿ ಸೀನರಿಗಳು ಇದ್ದರೆ ಚೆಂದ ಅಂದರೆ ಅಮ್ಮನು ದೇವರ ಚಿತ್ರಗಳು ಬೇಕೆಂದರು. ನಾವು ನಮ್ಮದೇ ಚಿತ್ರಗಳನ್ನು ಹಾಕಬೇಕು ಎಂದೆವು. ಮನೆಗೆ ಬಂದ ನೆಂಟರೆದುರು ನಮ್ಮದೇ ಕೆಲವು ಸೊಗಸಾದ ಫೋಟೋಗಳು ಇದ್ದರೆ ಚೆನ್ನ ಎಂಬುದು ನನ್ನ ಎಣಿಕೆ. ನನ್ನ ತಂಗಿಯದೂ ಇದಕ್ಕೆ ಸಹಮತ. ಆದರೆ, ನಮ್ಮದೇ ಫೋಟೋ ನೇತುಹಾಕಬೇಕೆಂಬ ಸ್ವಾರ್ಥಪೂರಿತ ಬೇಡಿಕೆಗಳನ್ನು ಅಪ್ಪ-ಅಮ್ಮ ಇಬ್ಬರೂ ಒಂದಾಗಿ ಹೊಸಕಿ ಹಾಕಿಬಿಟ್ಟರು. ಕೊಂಚ ಹೊತ್ತಿಗೆ ಮೊದಲು ತಮ್ಮದೇ ಹಠ ಸಾಧನೆ ಮಾಡುತ್ತಿದ್ದ ಇಬ್ಬರೂ ನಮ್ಮನ್ನ ಮೂಲೆಗುಂಪು ಮಾಡಿ, ಅವರ ಮಾತುಕತೆಗಳನ್ನ ಮುಂದುವರೆಸಿದರು.

ಮಾರನೇ ದಿನವೇ ಅಪ್ಪ ಒಂದೆರಡು ಜಲಪಾತ, ಬೆಟ್ಟಗುಡ್ಡಗಳ ರಮಣೀಯ ಚಿತ್ರಹೊಂದಿರುವ ಫೋಟೋ ಫ್ರೇಮುಗಳನ್ನೂ, ಈಶ್ವರ ಪಾರ್ವತಿ, ಗಣಪತಿಯೇ ಮೊದಲಾದ ಖಾಯಂ ಗೋಡೆ ನಿವಾಸಿಗಳಾದ ದೇವರುಗಳನ್ನು ತಗೊಂಡು ಬಂದು ರವಿವರ್ಮನ ಚಿತ್ರಗಳ ಮಧ್ಯ ಕೂರಿಸಿದರು. ನಾನು ಪ್ರತಿಭಟನೆ ಎಂಬಂತೆ, ಅಪ್ಪ ಆ ಫೋಟೋ-ಪೇಂಟಿಂಗುಗಳನ್ನು ನೇತು ಹಾಕುತ್ತಿದ್ದಾಗ ಆ ಕಡೆಗೆ ತಲೆ ಹಾಕದೇ ಇದ್ದೆ. ಅಮ್ಮ ಅಲ್ಲೇ ಆ ದೇವರುಗಳಿಗೆಲ್ಲ ಕುಂಕುಮ ಹಚ್ಚಿ ಕೈ ಮುಗಿದರು ಮತ್ತು ಅದ್ಯಾವುದೋ ವಿದೇಶೀ ಗುಡ್ಡಬೆಟ್ಟಗಳ ಫೋಟೋ ನೋಡಿ, ಕಂಪ್ಯೂಟರಲ್ಲಿ ಮಾಡಿದ್ದೆಲ್ಲ ಬೇಕಿತ್ತಾ? ಎಂದು ಮುಖ ಸಿಂಡರಿಸಿಕೊಂಡರು. ಆದರೂ, ದಿನಗಳೆದಂತೆ ಆ ಎಲ್ಲ ಚಿತ್ರಗಳೂ ಪರಸ್ಪರ ಹೊಂದಿಕೊಂಡು ಬಿಟ್ಟವು. ಜೇಡರ ಬಲೆಯನ್ನು ಅಕ್ಕಪಕ್ಕದ ಚಿತ್ರಗಳು ಜೊತೆಯಾಗೇ ಹಂಚಿಕೊಂಡವು, ಈಶ್ವರ ಪಾರ್ವತಿ ಚಿತ್ರಕ್ಕೂ ಪಕ್ಕದ ಹಿಮಹೊತ್ತ ಬೆಟ್ಟ ಸಾಲುಗಳ ಫೋಟೋಗೂ ಏನೋ ಸಂಬಂಧವಿದ್ದಂತೆ ಕಾಣುತ್ತಿತ್ತು. 

ಒಂದು ಸಲ ಎಂದಿನ ಸಂಪ್ರದಾಯದಂತೆ ಬೇಸಿಗೆಯ ರಜೆಯಲ್ಲಿ ನಮ್ಮ ಊರು ಧರೇಮನೆಗೆ ಹೋಗಿದ್ದೆವು. ಮಧ್ಯಾಹ್ನ ಕಂಠ ಮಟ್ಟ ತಿಂದು ಮಲಗಿದ್ದಾಗ, ಅಲ್ಲಿನ ಜಗಲಿ ಗೋಡೆಯತ್ತ ಗಮನ ಹೋಯಿತು. ಅಲ್ಲೂ ಕೂಡ ನಮ್ಮ ಮನೆಯಲ್ಲಿದ್ದ ಹಾಗೇ ದೇವರ ಚಿತ್ರಗಳು, ಕ್ಯಾಲೆಂಡರುಗಳು ಗೋಡೆಯನ್ನು ಅಲಂಕರಿಸಿದ್ದವು. ಅಲ್ಲಿ, ನಮ್ಮ ಮನೆಯಲ್ಲಿ ಇದ್ದ ಹಾಗಿನದೇ ರವಿವರ್ಮ ಬಿಡಿಸಿದ್ದ ಶಾರದೆಯ ಚಿತ್ರದ ಪ್ರತಿ ಇತ್ತು. ನಾನೋ, ಅದು ಕೇವಲ ನಮ್ಮ ಮನೆಯಲ್ಲಿ ಮಾತ್ರ ಇರುವ ಆತನ ವಿಶೇಷ  ಪೇಂಟಿಂಗು ಅಂದುಕೊಂಡಿದ್ದೆ! ಆದರೆ ಅದನ್ನ ನೋಡಲೆಂದು ಎದ್ದ ನನ್ನ ಗಮನ ಸೆಳೆದದ್ದು, ನಮ್ಮದೇ ಕುಟುಂಬದ ಮಂದಿಯ ಹಳೆಯ ಚಿತ್ರಗಳು. ನನ್ನಪ್ಪ ಹೈಸ್ಕೂಲಿಗೆ ಹೋಗುತ್ತಿದ್ದ ಕಾಲದಿಂದ ಹಿಡಿದು ಮದುವೆ ಆಗಿದ್ದರ ವರೆಗಿನ ತರಹೇವಾರೀ ಫೋಟೋ ಫ್ರೇಮುಗಳು ಅಲ್ಲಿ! ಅತ್ತೆಯಂದಿರ, ಚಿಕ್ಕಪ್ಪ, ದೊಡ್ಡಪ್ಪರ ಓಬೀರಾಯನ ಕಾಲದ ಫೋಟೋಗಳೇ ಫೋಟೋಗಳು! ಹಿಂದೆಲ್ಲ ಹಲ ಬಾರಿ ಬಂದು ಹೋಗಿದ್ದರೂ ಕೂಡ ನಾನು ಇದನ್ನೆಲ್ಲ ಸರಿಯಾಗಿ ಗಮನಿಸಿಯೇ ಇರಲಿಲ್ಲ.

ಅಲ್ಲಿನ ಚಿತ್ರ ಸಾಲುಗಳಲ್ಲಿ ಅಸಡಾ ಬಸಡಾ ಕಾಲು ಬೀಸಿಕೊಂಡು ಕೆಂಪು ಚಡ್ಡಿ ಹಾಕಿಕೊಂಡು ನಿಂತಿದ್ದ, ಎರಡೋ ಮೂರೋ ವರ್ಷ ಪ್ರಾಯದ ನನ್ನದೊಂದು ಕಲರ್ ಫೋಟೋ ಕೂಡ ಇತ್ತು. ಉದ್ದುದ್ದ ಕೂದಲು ಬಿಟ್ಟುಕೊಂಡು ನಿಂತಿದ್ದ ಆ ಚಿತ್ರ ನನಗೇ ಮುದ್ದು ಬರುವಂತಿತ್ತು. ಅದನ್ನ ನೋಡಿ ನಾನು ನಗುತ್ತಿರಬೇಕಿದ್ದರೆ ಅಲ್ಲಿಗೆ ಬಂದ ಚಿಕ್ಕಪ್ಪ ನನ್ನ ಅದೇ ಫೋಟೋಕ್ಕೆ ಸಂಬಂಧಿಸಿದ ಘಟನೆಯೊಂದನ್ನು ತಿಳಿಸಿದರು. ನಮ್ಮ ಸಂಬಂಧಿ ಅಜ್ಜಿಯೊಬ್ಬರು, ಆಗಾಗ ಧರೇಮನೆಗೆ ಬರುತ್ತಾರೆ, ಆಕೆ ನನ್ನ ತಂದೆಯನ್ನು, ಚಿಕ್ಕಪ್ಪನನ್ನು ಬೆಳೆಸಿದ ಹಿರಿಯಜ್ಜಿ.  ಅವರು ಅಲ್ಲಿಗೆ ಬರುವುದೇ ವರುಷಕ್ಕೋ, ಎರಡು ವರುಷಕ್ಕೋ ಒಮ್ಮೆ. ಆಕೆ ಬಂದ ಸಮಯದಲ್ಲಿ ನಾನಂತೂ ಒಮ್ಮೆಯೂ ಅಲ್ಲಿರಲಿಲ್ಲ. ಬಂದಾಗೆಲ್ಲ ನನ್ನ ಆ ಫೋಟೋವನ್ನೇ ನೋಡುವ ಅಜ್ಜಿಗೆ ಶ್ರೀಧರನ ಮಗ ಎಂದರೆ ಆ ಚಿತ್ರದಲ್ಲಿನ ಹುಡುಗ, ಅಷ್ಟೆ. ಅಲ್ಲಿಂದ ನಂತರ ನಾನವರ ಮನದಲ್ಲಿ ಬೆಳೆದೇ ಇರಲಿಲ್ಲ. ಮುಂದೆಂದೋ ಯಾರದೋ ಮದುವೆಯಲ್ಲಿ ಆ ಅಜ್ಜಿ ಸಿಕ್ಕಾಗ ನನ್ನ ಮೈ ಕೈ ಎಲ್ಲ ತಡವಿ ಎಷ್ಟು ದೊಡ್ಡವನಾಗಿದ್ದೀಯೋ ಎಂದು ಖುಷಿ ಪಟ್ಟಿದ್ದರು ಆಕೆ.

ಅಲ್ಲಿದ್ದ ಚಿತ್ರಗಳಲ್ಲಿ ನನಗೆ ತಿಳಿಯದ ಅದೆಷ್ಟೋ ವಿಚಾರಗಳಿದ್ದವು. ಅಪ್ಪ ತನ್ನ ಯೌವನ ಕಾಲದಲ್ಲಿ ಹಳೇ ಹಿಂದಿ ನಟರುಗಳ ಹಾಗೆಯೇ ಕ್ರಾಪು ಬಿಟ್ಟಿದ್ದ, ಮೀಸೆ ಕತ್ತರಿಸಿಕೊಂಡಿದ್ದ. ವಸಂತ್ ಸ್ಟುಡಿಯೋ, ೧೯೭೨ ಎಂಬ ಸ್ಟಿಕ್ಕರು ಹಚ್ಚಿಕೊಂಡಿದ್ದ ಫೋಟೋದಲ್ಲಿ ಅಪ್ಪನದು ಬೆಲ್ ಬಾಟಮ್ ಪ್ಯಾಂಟು, ಹೂ ಚಿತ್ತಾರದ ಶರ್ಟು. ಅವರನ್ನು ಫಾರ್ಮಲ್ ಪ್ಯಾಂಟು ಶರಟುಗಳಲ್ಲಿ ಮತ್ತು ಪಂಚೆ ಅಂಗಿಗಳಲ್ಲಿ ಮಾತ್ರ ನೋಡಿದ್ದೆ ನಾನು! ಇಂದು ಮಡಿ ಮಡಿ ಎನ್ನುವ ನಮ್ಮತ್ತೆ ತುರುಬನ್ನೆಲ್ಲ ಮೇಲೆತ್ತಿ ಕಟ್ಟಿಕೊಂಡು ಆರತಿಯೋ ಕಲ್ಪನಳದೋ ಶೈಲಿಯಲ್ಲಿ ನಿಂತಿರುವ ಚಿತ್ರ, ಈಗ ತೋಟದ ಕೆಲಸದಲ್ಲಿ ಹಣ್ಣಾಗಿ ಹೋಗಿರುವ ಚಿಕ್ಕಪ್ಪ ಹಿಂದೆಲ್ಲೋ ಬೊಂಬಾಯಿಯ ಮಿಲ್ ನೌಕರರ ಪಡೆಯ ಮಧ್ಯ ನಾಯಕನಂತೆ ನಿಂತು ಪೋಸ್ ಕೊಟ್ಟಿರುವುದು, ವೈಕುಂಠವಾಸಿ ಅಜ್ಜನ ಯಕ್ಷಗಾನ ವೇಷ –ಹೀಗೆ ನಮ್ಮ ಕುಟುಂಬದ ಇತಿಹಾಸ ಅಲ್ಲಿನ ಗೋಡೆಯಲ್ಲಿ ನಿಶ್ಚಲ ಚಿತ್ರಗಳೊಳಗೆ ಸೇರಿಕೊಂಡು ವರ್ತಮಾನದುದ್ದಕ್ಕೂ ಸಾಗಿಬಂದಿತ್ತು.

ನಮ್ಮ ಊರಿನಲ್ಲಿ ಹಿಂದೆಂದೋ ರಾಜಮನೆತನಕ್ಕೆ ಸೇರಿದವರ ಮನೆಯೊಂದಿದೆ. ಆ ಮನೆ ಯಜಮಾನರ ಪೂರ್ವಜರಿಗೆ ನೂರಾರು ಎಕರೆ ತೋಟ ಗದ್ದೆಗಳಿದ್ದು, ಚಿನ್ನವನ್ನು ಬಳ್ಳದಲ್ಲಿ ಅಳೆಯುತ್ತಿದ್ದರಂತೆ. ಅವರ ಮುತ್ತಾತನೋ ಯಾರೋ ಮೈಸೂರು ಅರಸರಿಗೋ, ಮರಾಠರಿಗೋ ಸಾಮಂತರಾಗಿದ್ದರಂತೆ. ಆದರೆ ಈಗಿನ ಮನೆಯನ್ನೂ, ಅವರುಗಳ ಸ್ಥಿತಿಯನ್ನೂ ನೋಡಿದರೆ ಅದು ಸತ್ಯ ಎಂದು ದೇವರಾಣೆಯಾಗಿಯೂ ಅನ್ನಿಸುವುದಿಲ್ಲ. ಆದರೆ ಅದೆಲ್ಲ ನಿಜ ಎಂದು ಸಾಕ್ಷಿ ಹೇಳುವಂತೆ, ಆ ಮನೆಯ ಪಡಸಾಲೆಯಲ್ಲಿ ಹಳೆಯ ವೈಭವದ ದಿನಗಳ ಕುರುಹಾಗಿ ಯಾರೋ ರಾಜಪೋಷಾಕು ಧರಿಸಿ ಕತ್ತಿ ಹಿಡಿದು ನಿಂತ ದೊಡ್ಡದಾದ ಚಿತ್ರವೊಂದಿದೆ. ಅದನ್ನೇ ಮುಂದಿರಿಸಿಕೊಂಡು ಅಲ್ಲಿನ ಮಂದಿ ಯಾವ ಇತಿಹಾಸದಲ್ಲೂ ಕಾಣ ಸಿಗದ, ಮತ್ತಾರೂ ಇಲ್ಲಿಯವರೀ ಕೇಳದ ಚರಿತ್ರೆಯ ತುಣುಕನ್ನು ರಸವತ್ತಾಗಿ ನಮ್ಮ ಮುಂದಿಡುತ್ತಾರೆ.

ಅವರ ಮುತ್ತಾತ ಆ ವರ್ಣಚಿತ್ರವನ್ನು ಲಂಡನ್ ನಲ್ಲಿ ತೆಗೆಸಿದ್ದರಂತೆ. ಭಾರತ ಇನ್ನೂ ಕ್ಯಾಮರಾವನ್ನೇ ಕಾಣದ ಆ ದಿನಗಳಲ್ಲಿ ಹೇಗೆ ಆ ಫೋಟೋವನ್ನು ಫ್ರೇಮು ಹಾಕಿಸಿ, ಜೋಪಾನವಾಗಿ ಲಂಡನ್ ನಿಂದ ಭಾರತಕ್ಕೆ ಹಡಗಿನಲ್ಲಿ ತರಲಾಯಿತು ಮತ್ತು ಮಂಗಳೂರಿನಿಂದ ಫೋಟೋ ಸಮೇತವಾಗಿ ಮುತ್ತಜ್ಜನನ್ನು ಮೆರವಣಿಗೆ ಮಾಡಲಾಯಿತು ಎಂದೆಲ್ಲ ಮನೆಯ ಜನ ವರ್ಣನೆಗಳನ್ನು ಮಾಡುತ್ತಾರೆ. ಮೊದಲ ಬಾರಿಗೆ ಇದನ್ನು ಕೇಳಿದಾಗ ಕೆಲ ಪ್ರಶ್ನೆಗಳನ್ನು ಹಾಕಿ, ಆ ಫೋಟೋದ ಹಿಂದಿನ ಸತ್ಯಾಸತ್ಯತೆಯನ್ನು ವಿಮರ್ಶಿಸಿಬೇಕು ಅಂದುಕೊಂಡರೂ, ಇಡೀ ಕುಟುಂಬವೊಂದರ ಅದಮ್ಯ ಉತ್ಸಾಹಕ್ಕೆ ಕಲ್ಲು ಹಾಕುವುದಕ್ಕೆ ಮನಸ್ಸಾಗಲಿಲ್ಲ. ಜಗಲಿಯ ಮೇಲೆ ಸುಮ್ಮಗೆ ಜೋತುಬಿದ್ದಿರುವ ಹಳೆಯ ಕಪ್ಪುಬಿಳುಪಿನ ಚಿತ್ರವೊಂದು ಅವರುಗಳಿಗೆ ನೀಡುತ್ತಿರುವ ಬಣ್ಣಬಣ್ಣದ ಪುಳಕಗಳನ್ನು ತಡೆಯಲು ನನಗೇನು ಹಕ್ಕಿದೆ? ಆಮೇಲಾಮೇಲಂತೂ ಆ ಕಥೆಯನ್ನು ಅದೆಷ್ಟು ಸಲ ಕೇಳಿದ್ದೇನೆಂದರೆ, ಕೆಲ ಬಾರಿ ಅವರ ಮನೆಗೆ ಬಂದ ಅತಿಥಿಗಳಿಗೆ ನಾನೇ ಆ ಕಥೆಯನ್ನು ಇನ್ನೂ ಮಸಾಲೆ ಸೇರಿಸಿ ಹೇಳಿದ್ದೇನೆ. ಆಗಲೂ ಅವರೆಲ್ಲ ಅಷ್ಟೇ ಖುಷಿಯಿಂದ ಹೌದು ಹೌದು ಎಂದು ತಲೆದೂಗುತ್ತಿರುತ್ತಾರೆ.

ಅವರ ಮನೆಯಲ್ಲಿನ ಮತ್ತೊಂದು ಚಿತ್ರದಲ್ಲಿ ಸುಮಾರು ಐವತ್ತರವತ್ತು ಮಂದಿ ಜೊತೆಯಲ್ಲಿ ನಿಂತುಕೊಂಡ ಗ್ರೂಪ್ ಫೋಟೋ ಇದೆ. ಅಲ್ಲಿ ಮಧ್ಯ ಕೂತ ವ್ಯಕ್ತಿ ವಲ್ಲಭಭಾಯಿ ಪಟೇಲ್ ಅಂತಲೂ, ಅವರು ಇವರ ಅಜ್ಜನ ಕಾಲದಲ್ಲಿ ಭಾರೀ ದೊಡ್ಡದಾಗಿದ್ದ ಕುಟುಂಬವನ್ನು ಭೇಟಿ ಮಾಡಲು ಸ್ವಾತಂತ್ರ ಸಿಕ್ಕ ಸ್ವಲ್ಪ ಸಮಯಕ್ಕೇ ಬಂದಿದ್ದರೂ ಎಂಬ ಕಥೆಯನ್ನೂ ಹೇಳುತ್ತಾರೆ. ಫೋಟೋ ಹತ್ತಿರದಿಂದ ನೋಡಿದರೆ, ಸರಿಯಾಗಿ ಮಧ್ಯ ಕೂತ ವ್ಯಕ್ತಿಯ ತಲೆಯೇ ಮಸುಕಾಗಿ ಹೋಗಿದೆ! ಹಾಗೆ ಮಸುಕಾದ್ದರಿಂದಲೇ ಬಂದ ಜನರಿಗೆ ಈ ಕಥೆಯನ್ನು ಕೇಳುವ ಸೌಭಾಗ್ಯ ಹೆಚ್ಚಾಗಿ ದೊರಕುವುದಿಲ್ಲ. ಆ ಫೋಟೋ ತನ್ನ ಫ್ರೇಮಿನ ಹಿಂದೆ ಹಳೆ ಬಾಚಣಿಗೆ, ಪಂಚಾಂಗ, ಮದುವೆ ಆಮಂತ್ರಣ ಪತ್ರಿಕೆಗಳನ್ನು ಸಿಕ್ಕಿಸಿಕೊಂಡು ಅನಾಥವಾಗಿ ನಿಂತಿದೆ.

ನಮ್ಮ ಮನೆಯಲ್ಲೂ ಕೂಡ ಹಳೆಯ ಚಿತ್ರಗಳಿಗೆ ಮರುಜೀವ ದೊರಕುವ ಸಂದರ್ಭ ಬಂತು. ನನ್ನ ಅಮ್ಮನ ತಮ್ಮ, ಅಂದರೆ ನನ್ನ ಮಾವ, ಛಾಯಾಚಿತ್ರಗ್ರಾಹಕ. ವರುಷದ ಕೆಳಗೆ ಅವನೊಮ್ಮೆ ನಮ್ಮ ಮನೆಗೆ ಬಂದಾಗ ಅಪ್ಪ ಅಮ್ಮನ ಮದುವೆ ಜಮಾನದಲ್ಲಿ ಅವರು ಜತೆಗೆ ತೆಗೆಸಿಕೊಂಡಿದ್ದ ಚಿತ್ರವನ್ನು ಫ್ರೇಮ್ ಹಾಕಿಸಿ ತಂದುಕೊಟ್ಟ. ಅವನ ಹತ್ತಿರ ಅದರ ಪ್ರತಿ ಎಲ್ಲಿತ್ತೋ ಏನೋ. ಅಮ್ಮನಿಗಂತೂ ಆ ಚಿತ್ರ ಕಂಡು ಸಂತಸವೇ ಸಂತಸ. ಅಚ್ಚರಿ. ಏಕೆಂದರೆ ಅಮ್ಮನ ಬಳಿ ಇದ್ದ ಆ ಫೋಟೋ ಕಪ್ಪು ಬಿಳುಪಿದ್ದಾಗಿತ್ತು. ಆ ಕಾಲದಲ್ಲಿ ಯಾವುದೋ ಸ್ಟುಡಿಯೋಗೆ ಹೋಗಿ ತೆಗೆಸಿಕೊಂಡು ಬಂದಿದ್ದು. ಈಗ ಮಾವ ತಂದುಕೊಟ್ಟ ಫ್ರೇಮಿನಲ್ಲಿದ್ದ ಆ ಚಿತ್ರಕ್ಕೆ ಬಣ್ಣ ಬಂದುಬಿಟ್ಟಿತ್ತು. ಬ್ಲಾಕ್ ಅಂಡ್ ವೈಟ್ ನಲ್ಲಿ ಅಮ್ಮನ ಸೀರೆ ಪ್ಲೇನ್ ಆಗಿದ್ದರೆ, ಈಗಿನ ಹೊಸ ಫೋಟೋದಲ್ಲಿ ಸೀರೆಗೆ ಗುಲಾಬಿ ಬಣ್ಣ ಮೇಲೆ ನೀಲಿ ಹೂಗಳ ಡಿಸೈನು.  ಅದಕ್ಕೂ ಮಜಾ ಅಂದರೆ, ಅಪ್ಪನಿಗೆ ಕೋಟು ಟೈ ಹಾಕಿಸಿ ಆಫೀಸರ್ ಗೆಟಪ್ ನೀಡಲಾಗಿತ್ತು. ಸ್ವಂತಕ್ಕೆ ಇಲ್ಲಿಯತನಕ ಅಪ್ಪ ಟೈ-ಕೋಟು ಕೊಂಡದ್ದಿರಲಿ, ಮುಟ್ಟಿದ್ದು ಕೂಡ ಅನುಮಾನವೇ.

ಫೋಟೋಶಾಪಿನಂತಹ ಸಾಫ್ಟ್ ವೇರ್ ಅರಿಯದ ಅಮ್ಮನಿಗೆ ಇದೆಲ್ಲ ಪರಮಸೋಜಿಗ. ತಂತ್ರಜ್ಞಾನದ ಬಗೆಗಿನ ಅಜ್ಞಾನ ಕೂಡ ಈ ರೀತಿಯಲ್ಲಿ ಖುಷಿ ಕೊಡುತ್ತದೆ. ಅದೆಂಗೆ ಇದನ್ನ ಕಲರ್ ಫೋಟೋ ಮಾಡಿದೆ ಮಾರಾಯ ಅಂತ ದಿನವಿಡೀ ಅವುಗಳನ್ನ ತಿರುಗಿಸಿ ಮರುಗಿಸಿ ನೋಡಿದ್ದೇ ನೋಡಿದ್ದು. ಮಾವ ಅದೇನು ವಿವರಣೆ ನೀಡಿದರೂ ಅವಳಿಗೆ ಅರ್ಥವಾಗಲಿಲ್ಲ, ಅಥವಾ ಅರ್ಥವಾಗುವುದು ಬೇಕಿರಲಿಲ್ಲ. ಈ ಫೋಟೋ ಬಂದಿದ್ದೇ ಬಂದಿದ್ದು ಹಳೆಯ ಒಡಬಂಡಿಕೆಯನ್ನು ಮರೆತು, ಕೂಡಲೇ ಪಡಸಾಲೆಯಲ್ಲಿದ್ದ ಒಂದೆರಡು ಚಿತ್ರಪಟಗಳಿಗೆ ಒತ್ತಾಯಪೂರ್ವಕ ವಿ ಆರ್ ಎಸ್ ನೀಡಿ, ಈ ಹೊಸ ಫೋಟೋಗೆ ಪ್ರಮುಖ ಸ್ಥಾನ ನೀಡಲಾಯಿತು. ಆದರೆ ಈ ಒಂದು ಫೋಟೋದ ಚೆಂದವನ್ನು ಧೂಳು ಹೊದ್ದ ಇತರ ಫೋಟೋಗಳು ಕುಂದಿಸುತ್ತಿದ್ದವಾದ್ದರಿಂದ ಎಲ್ಲ ಚಿತ್ರಗಳನ್ನು ಕೆಳಗಿಳಿಸಿ ಅವಕ್ಕೆ ಯಥೋಚಿತ ಸಂಸ್ಕಾರಗಳು ದೊರಕಿದವು. ಫ್ರೇಮುಗಳು ವಾರ್ನಿಷ್ ಹೊಡೆಯಲಾಯಿತು. ಕೆಲ ಚೌಕಟ್ಟುಗಳು ನೂತನ ಚಿತ್ರಗಳನ್ನು ಕಂಡರೆ, ಕೆಲ ಫೋಟೋಗಳಿಗೆ ಹೊಸ ಚೌಕಟ್ಟುಗಳು ಬಂದವು. 

ಇದೆಲ್ಲ ಆಗಿ ಆರೆಂಟು ತಿಂಗಳು ಕಳೆದಿರಬೇಕು. ಮನೆಗೆ ಹೋಗಿದ್ದೆವು. ನನ್ನ ಹೆಂಡತಿಯನ್ನ ಕರೆದ ಅಮ್ಮ ಅದೇನೋ ಗುಸಪಿಸ ನಡೆಸಿದ್ದರು. ಕೊಂಚ ಹೊತ್ತಿಗೆ ಆ ದ್ವಿಸದಸ್ಯ ನಿಯೋಗ ನನ್ನ ಬಳಿಗೆ ಬಂತು. ವಿಷಯ ಏನೆಂದರೆ ಅಮ್ಮನ ಕಡತ ವಿಲೇವಾರಿಯ ಸಂದರ್ಭದಲ್ಲಿ ಅವರಿಗೆ ಹಳೇ ಭಜನೆ ಪುಸ್ತಕದಲ್ಲಿ ಸೇರಿಕೊಂಡಿದ್ದ ,ಮುಟ್ಟಿದರೆ ಚೂರಾಗಬಹುದಾದಂತಹ ಅವರ ತಾಯಿಯ ಫೋಟೋ ಸಿಕ್ಕಿದೆ. ಸುಮಾರು ಹರಪ್ಪ ಮೊಹೆಂಜೋದಾರೋ ಕಾಲದ್ದಾಗಿರಬಹುದಾದ ಆ ಫೋಟೋ ಅಮ್ಮನ ಪಾಲಿಗೆ ಅಮೂಲ್ಯ ನಿಧಿಯೇ ಆಗಿತ್ತು. ಏಕೆಂದರೆ ಇಡೀ ಕುಟುಂಬದಲ್ಲೇ ಯಾರಲ್ಲೂ ಇಲ್ಲದ ನನ್ನಜ್ಜಿಯ ಏಕೈಕ ಫೋಟೋ ಅದು. ಈಗಾಗಲೇ ನಶಿಸಿ ಹೋಗಿತ್ತೆನ್ನಲಾದ ಆದರೆ ಇನ್ನೂ ಜೀವಂತ ಇದೆ ಅಂತ ಗೊತ್ತಾದ ಹಕ್ಕಿಯೋ, ಪ್ರಾಣಿಯೋ ಕಂಡರೆ ಹೇಗಾಗಬಹುದೋ ಹಾಗೆ. ಅವರದೇ ಫೋಟೋಕ್ಕೆ ಆದ ಬಣ್ಣ ಬದಲಾವಣೆಯ ಅಮೋಘ ಕಾರ್ಯವನ್ನು ಕಂಡಿದ್ದರಿಂದ ಈ ಚಿತ್ರವನ್ನೂ ಹಾಗೇನಾದರೂ ಮಾಡಬಹುದಾ ಅಂತ ಅವರು ಸೊಸೆಯನ್ನು ವಿಚಾರಿಸಿದ್ದು, ಅವಳದಕ್ಕೆ ಹೂಂ ಅಂದಿದ್ದಾಳೆ. ಅವಳೂ ಸಾಫ್ಟ್ ವೇರು ಇಂಜಿನಿಯರ್ ಹಾಗಾಗಿ ಅದೆಲ್ಲ ತಿಳಿಯುತ್ತದೆ ಅಂತ ಅವರೆಣಿಕೆ. ಅಜ್ಜಿಯ ಚಿತ್ರವನ್ನೂ ಹಾಗೇ ಮಾಡಿಕೊಡುವ ಆಶ್ವಾಸನೆಯನ್ನು ಅಮ್ಮನಿಗೆ ನೀಡಲಾಯಿತು. ಝಡ್ ಪ್ಲಸ್ ಎಚ್ಚರಿಕೆಯೊಂದಿಗೆ ಬೆಂಗಳೂರಿಗೆ ಭಾವಚಿತ್ರವನ್ನು ತಂದು ಸ್ಕ್ಯಾನ್ ಮಾಡಲಾಯಿತು.

ಆದರೆ ಅಷ್ಟಾದ ಮೇಲೆ ಅಜ್ಜನನ್ನ ಬಿಟ್ಟರೆ ಹೇಗೆ? ಆದರೆ ಅಜ್ಜನೂ ಅಜ್ಜಿಯೂ ಜೊತೆಗಿರುವ ಫೋಟೋವಾಗಲೀ, ಅಥವಾ ಸ್ವಯಂ ಅವರುಗಳೇ ಆಗಲಿ ಭೂಮಿಯ ಮೇಲೆ ಇಲ್ಲ. ಅವರಿಬ್ಬರನ್ನೂ ಜೊತೆಯಾಗಿಸದೇ ಬಿಡುವ ಹಾಗೂ ಇಲ್ಲ. ಅಜ್ಜನ ಬೇರೆ ಬೇರೆ ಭಂಗಿಯ ಚಿತ್ರಗಳು ದೊರಕಿದವಾದರೂ ಅದರಲ್ಲಿ ಒಂದೂ ಕೂಡ ಅಜ್ಜಿಯ ಚಿತ್ರದ ಜೊತೆಗೆ ಹೋಲಿಕೆಯಾಗುವಂತದ್ದು ಇಲ್ಲ. ಮಾವನಿಗೆ ಮತ್ತೆ ಶರಣು ಎನ್ನಲಾಯಿತು. ಆತ ಅಜ್ಜನ ನಾಲ್ಕಾರು ಫೋಟೋ ಸ್ಕ್ಯಾನ್ ಮಾಡಿ ಮೇಲ್ ಮಾಡಿದ. ಅಲ್ಲಿ ಅಜ್ಜ ಬೀಡಿ ಸೇದುತ್ತ ಯಾರ ಪಕ್ಕಕ್ಕೋ ಕೂತಿದ್ದ ಫೋಟೋ ಮಾತ್ರವೇ ಅಜ್ಜಿಯ ಚಿತ್ರಕ್ಕೆ ಹೊಂದಿಕೊಳ್ಳುತ್ತಿತ್ತು! 

ಶ್ರೀಮಾನ್ ಫೋಟೋಶಾಪು ಸಾಹೇಬರು ಎಂದಿನಂತೆ ನಮ್ಮ ಸಹಾಯಕ್ಕೆ ಬಂದರು. ಅಜ್ಜನ ಬಾಯಿಯ ಬೀಡಿ ತೆಗಿಸಿ ಅಜ್ಜಿಯ ಪಕ್ಕಕ್ಕೆ ಕೂರಿಸಲಾಯಿತು. ನಾನೂ ನನ್ನ ಹೆಂಡತಿಯೂ ಕೂತು ಸರ್ಕಸ್ ಮಾಡಿ ಚಿತ್ರಕ್ಕೆ ಬಣ್ಣ ಬಳಿದೆವು. ಮುಂದಿನ ಬಾರಿ ಮನೆಗೆ ಹೊರಟಾಗ ಅವರಿಬ್ಬರೊ ಜೊತೆಯಾಗಿ ಚೌಕಟ್ಟಿನಲ್ಲಿ ಸೇರಿದ್ದ ಚಿತ್ರ ನಮ್ಮ ಜೊತೆಗೆ ಬಂದಿತ್ತು. ಮನೆಗೆ ಬಂದವರೇ ಅಮ್ಮನ ಮುಂದೆ ಈ ಚಿತ್ರವನ್ನು ಹಿಡಿದೆವು. ಮೆಲ್ಲಗೆ ಕವರು ಬಿಡಿಸಿ ನೋಡಿದ್ದೇ ತಡ ಅಮ್ಮನಿಗೆ ಅಳುವೋ ಅಳು. ಖುಷಿಯಾಗಿ ಅಳುತ್ತಿದ್ದಾಳೋ ಅಥವಾ ನಾವೇನಾದರೊ ತಪ್ಪು ಮಾಡಿದೆವೋ ತಿಳಿಯದ ಸ್ಥಿತಿ.

ಕೊಂಚ ಹೊತ್ತಾದ ಮೇಲೆ ಅವಳು ಬಿಕ್ಕುತ್ತಲೇ ಹೇಳಿದಳು. “ಅಮ್ಮಂಗೆ ರೇಷ್ಮೆ ಸೀರೆ ಅಂದರೆ ಸಿಕ್ಕಾಪಟ್ಟೆ ಪ್ರೀತಿ. ಆದರೆ ಆವಾಗಿನ್ ಬಡತನದಲ್ಲಿ ನಾಲ್ಕಾರು ಮಕ್ಕಳನ್ನ ಸಾಕದೇ ಕಷ್ಟ. ಹೊಟ್ಟೆಗೇ ಸರಿಯಾಗಿಲ್ಲದ ಮೇಲೆ ರೇಷ್ಮೆ ಸೀರೆ ಎಲ್ಲಿಂದ ಬಂತು. ಇಲ್ಲಿ ನೀವು ನೋಡಿದ್ರೆ ಅಮ್ಮನಿಗೆ ಒಳ್ಳೆ ಕೆಂಪು ಜರತಾರಿ ಸೀರೆ ತೊಡಿಸಿದ್ದೀರಿ. ಎಷ್ಟ್ ಚಂದ ಕಾಣ್ತಿದ್ದ ಅಮ್ಮ.. ಅವ್ಳು ಇರಕಿತ್ತು ಇದನ್ನ ನೋಡಕೆ”

ಈಗ ಫಳಫಳ ಮಿನುಗುವ ಜರತಾರಿ ಸೀರೆ ಹೊದ್ದ ಅಜ್ಜಿ ಮತ್ತು ಬಾಯಿಂದ ಬೀಡಿ ಬಿಸಾಕಿರುವ ಅಜ್ಜ ಶಿವಪಾರ್ವತಿಯರ ಚೌಕಟ್ಟಿನ ಪಕ್ಕದಲ್ಲಿ ಬಂದು ಕೂತಿದ್ದಾರೆ. ಪೇಟಿಂಗಿನಲ್ಲಿರುವ ಪಾರ್ವತಿ ನಮ್ಮಜ್ಜಿಯ ಸೀರೆಯ ಹೊಳಪು ನೋಡಿ ಕೊಂಚ ಮುನಿಸಿಕೊಂಡಂತೆ ಕಾಣುತ್ತಿದೆ. ಆಕೆಯ ಮುಖದಲ್ಲಿನ ನಗು ಮಾಸಿದೆಯೋ, ಅಥವಾ ಹೊಸ ಸೀರೆ ಉಟ್ಟ ಅಜ್ಜಿಯ ನಗು ಪಾರ್ವತಿಯನ್ನು ಮೀರಿಸಿದೆಯೋ ತಿಳಿಯುತ್ತಿಲ್ಲ. ಅಜ್ಜ ಮಾತ್ರ ದೇವರ ಪಕ್ಕ ಬಂದಿದಕ್ಕೆ ಬೀಡಿ ಇಲ್ಲದ್ದು ಚೆನ್ನಾಯ್ತು ಎಂದು ನಿರಾಳವಾಗಿ ಕೂತಿದ್ದಾನೆ.

 (ವಿಜಯ ಕರ್ನಾಟಕ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಬರಹ )

ಭಾನುವಾರ, ಫೆಬ್ರವರಿ 12, 2012

ಮಾತು




ನಿತ್ಯ ಇಷ್ಟು ಹೊತ್ತಿಗೆ ಕೆಟ್ಟದಾಗಿ
ಕೂಗುತ್ತಿದ್ದ ತರಕಾರಿ ಗಾಡಿಯವನೂ
ಬಂದಂತಿಲ್ಲ ಇಂದು.

ಹೋದ ಕರೆಂಟಿನದೂ
ಪತ್ತೆಯಿಲ್ಲ
ಫ್ಯಾನಾದರೂ ಸದ್ದು ಮಾಡುತ್ತಿತ್ತು
ಪಕ್ಕದ ಫ್ಲಾಟಿನ ಮಗು ಇನ್ನೂ
ಸ್ಕೂಲಿಂದ ಬಂದಿಲ್ಲ.

ಪೇಪರ್ ವೇಯ್ಟಾದರೂ
ಬೀಳಬಹುದಿತ್ತು ನೆಲಕ್ಕೆ
ಅಥವ ಕೇಬಲಿನ ಹುಡುಗ
ಬರಬಹುದಿತ್ತು


ಅಗೋ,
ಅಲ್ಲಿ ಮೆಟ್ಟಿಲ ಸದ್ದು
ಕೇಳುತ್ತಿದೆ
ಬಡಿಯುತ್ತಾರೆ ಈಗ ಯಾರೋ
ಬಾಗಿಲು
ಅನ್ನುವಾಗಲೇ ಶಬ್ದ ನಿಂತು
ಹೋ ಗಿ ದೆ.

ಹೋಗಲಿ,
ನಾನೇ ಆರಂಭಿಸುತ್ತೇನೆ
ಮಾತು.
ಸುಮ್ಮನಿರುವುದಕ್ಕಿಂತ
ಸೋಲುವುದು ವಾಸಿ.

ಶುಕ್ರವಾರ, ಫೆಬ್ರವರಿ 10, 2012

ಅತಿಥಿ ಸತ್ಕಾರ

ಸುಮಾರು ೨೦-೨೫ ವರ್ಷಗಳ ಹಿಂದೆ ನಡೆದ ಘಟನೆ. ನನ್ನ ಅಪ್ಪ ಹೇಳಿದ್ದ ಈ ಕಥೆ, ನಿನ್ನೆ ಯಾಕೋ ನೆನಪಾಯಿತು.

ಗೋಪಾಲ ಶೆಟ್ಟರಿಗೆ, ಕಿನ್ನಿಗೋಳಿ ಸಮೀಪದ ಉಳೆಪಾಡಿಯ ಶಾಲೆಯಲ್ಲಿ ಮಾಸ್ತರಿಕೆ ಕೆಲಸ. ಅವರ ಪ್ರೈಮರಿ ಸ್ಕೂಲಿನ ಮ್ಯಾನೇಜುಮೆಂಟು ಚರ್ಚೊಂದರದು. ಅಲ್ಲಿನ ಮುಖ್ಯೋಪಾಧ್ಯಾಯಿನಿ ಚರ್ಚಿನ ಕಾನ್ವೆಂಟಿನಲ್ಲಿ ವಾಸ. ಒಂದು ದಿನ ಹೆಡ್ ಸಿಸ್ಟರ್ ಶಾಲೆಗೆ ಕಾರಣಾಂತರಗಳಿಂದ ಬರಲಿಲ್ಲ. ಏನೋ ಅಗತ್ಯ ದಾಖಲೆ ಪತ್ರಕ್ಕೆ ಮುಖ್ಯೋಪಾಧ್ಯಾಯಿನಿಯ ಸಹಿ ಬೇಕೇ ಬೇಕಾಗಿತ್ತು. ಹೀಗಾಗಿ ಗೋಪಾಲ ಶೆಟ್ಟರು ಶಾಲೆಗೆ ತುಸು ಸಮೀಪದಲ್ಲೇ ಇದ್ದ ಕಾನ್ವೆಂಟಿಗೆ ಹೋಗಿ ಬರೋಣ ಎಂದು ಹೊರಟರು.

ಕಾನ್ವೆಂಟಿಗೆ ಹೋದರೆ, ಹೆಡ್ ಸಿಸ್ಟರ್ ಒಳಗೆಲ್ಲೋ ವ್ಯಸ್ತರಾಗಿದ್ದರು. ಅಲ್ಲಿನ ಸಹಾಯಕಿಯೊಬ್ಬರು ಬಂದು, ಸ್ವಲ್ಪ ಕೂತಿರಿ ಬರುತ್ತಾರೆ ಎಂದು ಒಳನಡೆದರು. ಇನ್ನಾರೋ ಬಂದು ದೊಡ್ಡ ಗ್ಲಾಸೊಂದರಲ್ಲಿ ಶರಬತ್ತನ್ನೂ, ಪ್ಲೇಟು ತುಂಬಾ ಕೇಕು, ರಸ್ಕು, ಬಿಸ್ಕೀಟುಗಳನ್ನೂ ಇಟ್ಟು ತಿನ್ನಿ ಎಂದು ಹೇಳಿ ಹೋದರು. ಪಾಪ! ಗೋಪಾಲು ಮಾಸ್ಟ್ರು ಕಂಗಾಲು. ಬೆಳಿಗ್ಗೆಯಷ್ಟೇ ಮನೆಯಲ್ಲಿ ಹೊಟ್ಟೆ ತುಂಬ ಗಂಜಿ ಉಂಡು ಬಂದಿದ್ದ ಮಾಸ್ಟ್ರಿಗೆ ಇದನ್ನೆಲ್ಲ ಹೇಗೆ ತಿನ್ನುವುದು ಎಂಬ ಚಿಂತೆ ಆರಂಭವಾಯಿತು.

ವಿಷಯ ಏನೆಂದರೆ ಹಳ್ಳಿ ಕಡೆಗಳಲ್ಲಿ ಆಗಿನ್ನೂ ಈ ಬಿಸ್ಕೀಟು ಕೇಕು ಸಂಪ್ರದಾಯ ಬಂದಿರಲಿಲ್ಲ. ಮನೆಗೆ ಯಾರೇ ಬಂದರೂ ಎಳನೀರು, ಬಾಳೆಹಣ್ಣು, ಅವಲಕ್ಕಿ ಇಂತದ್ದು ನೀಡುವ ಕಾಲ. ಬಾಳೆ ಎಲೆಗೋ, ಪ್ಲೇಟಿಗೋ ಹಾಕಿ ಮುಂದಿಟ್ಟರೆ ಬಂದವರೂ ಅದನ್ನೆಲ್ಲ ತಿಂದೇ ಏಳುವುದು ವಾಡಿಕೆ. ಅಂತಹ ಕ್ರಮದಲ್ಲೇ ಬದುಕಿದ್ದ ಶೆಟ್ಟರಿಗೆ ಒಮ್ಮೆಗೇ ಹೀಗೆ ಪ್ಲೇಟು ತುಂಬ ಬಿಸ್ಕೀಟು ರಸ್ಕು ತಂದಿಟ್ಟರೆ ಹೇಗಾಗಬೇಡ? ತಂದಿಟ್ಟು ಹೋದದನ್ನು ತಿರಸ್ಕರಿಸಿದರೆ, ಬೇಜಾರು ಮಾಡಿಕೊಳ್ಳುತ್ತಾರೆ. ತಪ್ಪಾಗುತ್ತದೆ. ತಿಂದರೆ, ಹೊಟ್ಟೆ ಪರಿಸ್ಥಿತಿ ಹಾಳಾಗುತ್ತದೆ ಎಂದು ಗೋಪಾಲ ಶೆಟ್ರು ತಲೆಬಿಸಿ ಮಾಡಿಕೊಂಡರು.

ಒಂದು,ಎರಡು,ಮೂರು,ನಾಲ್ಕು ಅಂತ ಕೆಲವೊಂದಿಷ್ಟು ಹೊಟ್ಟೆಗೆ ಹೋಯಿತು. ಶರಬತ್ತು ಸೇವನೆಯೂ ಮುಗಿಯಿತು. ಇನ್ನೂ ಹೆಡ್ ಸಿಸ್ಟರ್ ಸುಳಿವಿಲ್ಲ ಬೇರೆ. ತಟ್ಟೆ ಖಾಲಿ ಮಾಡುವ ಬಗೆ ಮಾಸ್ಟ್ರಿಗೆ ಹೊಳೆಯಲಿಲ್ಲ. ಅಷ್ಟು ಹೊತ್ತಿಗೆ ಅವರ ಕಣ್ಣಿಗೆ ಬಿದ್ದದ್ದು, ಅಲ್ಲೇ ಹಾಲ್ ನ ಮೂಲೆಯಲ್ಲಿ ಮಲಗಿದ್ದ ನಾಯಿ! ಮೆಲ್ಲನೆ ಅದರತ್ತ ಒಂದು ರಸ್ಕು ಎಸೆದರು. ಅದನ್ನ ಆ ನಾಯಿ ಗಬಕ್ಕನೆ ಸ್ವಾಹಾ ಮಾಡಿತು. ಯಾರಾದರೂ ಬಂದರೋ ಅಂತ ನೋಡಿದರೆ, ಇಲ್ಲ.

ಒಂದನ್ನ ಇವರು ತಿನ್ನುವುದು, ಮತ್ತೊಂದನ್ನ ನಾಯಿಗೆ ಹಾಕುವುದು. ಹೀಗೇ ಕೆಲ ಹೊತ್ತು ಆಟ ನಡೆಯಿತು. ಇವರಿಗೆ ಗೊತ್ತಾಗದ್ದು ಏನೆಂದರೆ, ಕೊಂಚ ಹೊತ್ತಿಗೆ ಮೊದಲೇ ಅಲ್ಲಿಗೆ ಬಂದಿದ್ದ ಮುಖ್ಯೋಪಾಧ್ಯಾಯಿನಿ ಪರದೆ ಮರೆಯಲ್ಲಿ ನಿಂತು ಇವರ ಹರಕತ್ತು ಗಮನಿಸುತ್ತಿದ್ದರು. ನಂತರ ಮೆಲ್ಲ ಬಂದ ಅವರು ಪೆಚ್ಚುಪೆಚ್ಚಾಗಿ ನಕ್ಕ ಶೆಟ್ಟರನ್ನು ನೋಡಿ, ಮಾಸ್ಟ್ರೇ, ಕೊಟ್ಟದ್ದನ್ನೆಲ್ಲ ತಿನ್ನಬೇಕೂಂತ ಇಲ್ಲ. ನೀವು ತಲೆಬಿಸಿ ಮಾಡಿಕೊಳ್ಳಬೇಡಿ ಅಂದರಂತೆ.

ಆದರೆ ಅಷ್ಟು ಹೊತ್ತಿಗಾಗಲೇ ಪ್ಲೇಟು ಖಾಲಿಯಾಗಿತ್ತು!

ಸೋಮವಾರ, ಫೆಬ್ರವರಿ 06, 2012

ಹಾಗಾದರೆ ..

ಅಕಾಲದಲ್ಲಿ ಎದ್ದ ಹಾಗೆ ಅಣಬೆ
ನಮ್ಮ ಮನೆಯ ಪಕ್ಕದಲ್ಲೇ ಎದ್ದು
ನಿಂತಿತ್ತು ಶಾಮಿಯಾನ, ಜೊತೆಗೆ ಕೆಂಪು ಕುರ್ಚಿ ಸಾಲು
ಬೆಂಗಳೂರಿನ ರೋಡುಗಳಲ್ಲಿ ಇದು ಖಾಯಂ
ಆಗಿ ಸಿಗುವ ತಾತ್ಕಾಲಿಕ ವ್ಯವಸ್ಥೆ

ಆಫೀಸಿಗೆ ಹೊರಟವನಿಗೆ ಜಾಗೃತವಾಗಿ
ಸಾಮಾಜಿಕ ಪ್ರಜ್ಞೆ
ಯಾಕೆ ಉಗಿಯಬಾರದು ಅವರುಗಳ ಬೇ
ಜವಾಬ್ದಾರಿಗೆ ಅಂದುಕೊಂಡರೆ ಕಂಡಿದ್ದು
ಗೇಟಿನ ಬಳಿ ಹೊಗೆ ಕಾರುವ ಮಡಕೆ

ವೈಕುಂಠ ಯಾತ್ರೆಯ ವ್ಯಾನು ರಸ್ತೆಯಂಚಲ್ಲಿ
ದುಸುದುಸು ಒಳಗೆ, ಹೊರಗೆ ಗಂಡಸರು,
ಗಹನ ಗಂಭೀರ
ಪಿಚ್ಚೆನಿಸಿದರೂ, ಸಾವು ಕಂಡರೆ
ಶುಭಶಕುನ ಅಂತ ಯಾರೋ ಅಂದ
ನೆನಪಾಗಿ ಹಾಯೆನಿಸಿ

ಹೊರಟಮೇಲೆ ಮನಸಿಗೆ ಬಂದಿದ್ದು ಸತ್ತಿದ್ದು ಯಾರು?
ನಿತ್ಯ ಗೇಟಂಚಿಗೆ ನಿಂತು ಸಿಗರೇಟು
ಸೇದುತ್ತಿದ್ದ ಮುದುಕ? ಎಂದೂ ಕಾಣದ ಅವನ ಹೆಂಡತಿ?
ಪಿಯೂಸಿಯ ಮಗನೇ?
ದಾರಿತುಂಬ ಸತ್ತವರು ಯಾರೆಂಬ ಪತ್ತೇದಾರಿ

ಕೃಶಕಾಯದ ಮುದುಕನೇ ಇರಬೇಕು ಖಂಡಿತ
ಸೇದಬಾರದಿತ್ತು ಆ ಪರಿ ಹೊಗೆಯ
ತಡವಾಗಿ ಹುಟ್ಟಿದ ಮಗ, ಓದೇ ಮುಗಿದಿರಲಿಲ್ಲ
ಹೆಂಡತಿಗೆ ಯಾರು ದಿಕ್ಕು? ಸುಮ್ಮನೇ ಗೊತ್ತಿದ್ದರೂ
ಸೇದಿ ತಂಬಾಕು, ಸಾಯುವ ಸೊಕ್ಕು

ನಿನ್ನೆ ಆಫೀಸಿಂದ ಬರುವ ವೇಳೆ
ಅಚಾನಕ್ಕಾಗಿ ಸಾವಿನ ಮನೆಯೆದುರು
ತಿರುಗಿತು ಕುತ್ತಿಗೆ
ಮುದುಕ ಇರಬೇಕೆ ಅಲ್ಲಿ,ಆ ಹೊತ್ತಿಗೆ! ಜತೆಗೆ
ಅದೇ ಸಿಗರೇಟಿನ ರಿಂಗುಹೊಗೆ.

ಹಾಗಾದರೆ ..

ಸೋಮವಾರ, ಜನವರಿ 30, 2012

ದಣಪೆ ಸರಿಯುವುದಿಲ್ಲ..


ನಿತ್ಯದಂತೆ ಇಂದೂ ಹೊಸಿಲ ಮೇಲಿನ
ದೀಪದ ಜ್ವಲನ ನೋಡುತ್ತ
ಕೂತಿದ್ದಾನೆ ಹಿರಿಯ,ನಿರೀಕ್ಷೆಗಳ ಹೊತ್ತು
ಹೊರಗೆ ಯಾರೂ ದಣಪೆ
ಸರಿಸಿದ ಸದ್ದೂ ಕೇಳುವುದಿಲ್ಲ

ಮೂರುಸಂಜೆಯ ಮೇಲೆ ಬೆಳಕು
ಕಡಿಮೆ, ಕಡಿಮೆ ಮಾತು
ಕಡಿಮೆ ನಿರೀಕ್ಷೆ
ಇನ್ನು ಮೇಲೆ ಈ ಕಡೆಗೆ
ಯಾರೂ ಹಾಯುವುದಿಲ್ಲ ಗಾಳಿಯೊಂದು
ಬಂದೀತು ಆರಿಸಲು ದೀಪ

ಒಳಗೇನೋ ಸದ್ದು ಬಿದ್ದಿದ್ದು
ಪಾತ್ರೆಯೋ, ಅಥವ ಅದನ್ನು ಹಿಡಿದ ಅವಳೊ?
ದಣಪೆಯ ಸದ್ದಿನ ನಿರೀಕ್ಷೆಯಲ್ಲಿ
ಬೇರೆ ಶಬ್ದ ಕೇಳದೆ ಕಿವಿ ಮಂದ
ಅಥವಾ ಅವಳು ಮಾತುಬಿಟ್ಟಿರಲೂ ಬಹುದು

ಟಪಾಲುಗಳಲ್ಲಿ ಬರುವುದೀಗ ಬರಿಯ
ಸಾವಿನ ದಿನ ನೆನಪಿಸುವ ಪಾಲಿಸಿ
ಯ ಕಂತು ತುಂಬುವ ಪತ್ರ, ಬೆಳೆ
ಸಾಲದ ನೋಟೀಸು
ಎಂದೂ ತೆರೆಯದ ಮದುವೆ ಕಾಗದ

ಮೇಲೆಲ್ಲೋ ಮರ ಬಿದ್ದು
ಸತ್ತಿದ್ದು ಫೋನು
ಮಗ ಕೊಡಿಸಿ ಹೋದ
ಮೊಬೈಲಿಗೆ
ಗುಡ್ಡದ ಮೇಲೆ ಮಾತ್ರ ಮಾತು

ಈ ಸಂಜೆ ಯಾರಾದರೂ ಬರಬಹುದಿತ್ತು
ಕೊನೆ ಪಕ್ಷ ಬೀಡಾಡಿ ದನವಾದರೂ ನುಗ್ಗಬಹುದಿತ್ತು
ಒಳಗೆ, ಅದೂ ಬರುವುದಿಲ್ಲ
ದಣಪೆಯನ್ನು ಯಾರೂ
ಸ ರಿ ಸು ವು ದಿ ಲ್ಲ.

ಭಾನುವಾರ, ಡಿಸೆಂಬರ್ 18, 2011

ಸುಕ್ರಣ್ಣನ ಜಕ್ಕಣಿ!

- ಶ್ರೀಧರ.ಡಿ.ಎಸ್


"ಶಿವಮೊಗ್ಗ ಜಿಲ್ಲೆಯ ಹೊಸ್ನಗ್ರು ತಾಲೂಕಿನ ನಿಟ್ಟೂರ ಪೋಶ್ಟಿಗೆ ಸೇರಿದ ಹಬ್ಬಿಗಿ ಗ್ರಾಮದ ದರೀಮನಿ ಅನತ ಭಟರಲಿ ಕೆಲಸು ಮಾಡುವ ಗುರುವ ಸೇರೂಗಾರ್ರು ಕಂಡು ಸುಕ್ರ ಸೇರೂಗಾರ್ರಿಗೆ ಕೊಡತಕ್ಕದ್ದು!" ಈ ವಿಳಾಸವನ್ನು ಹೊತ್ತ ಅಂತರ್ದೇಶಿಯನ್ನು ಅಂಚೆಯ ಅಣ್ಣ ನಾನು ಕಲಿಯುತ್ತಿದ್ದ ಶಾಲೆಗೆ ತಂದು ನನ್ನ ಕೈಗೆ ಕೊಟ್ಟುಬಿಡುತ್ತಿದ್ದ. ನನ್ನ ಊರಾದ ಮಲೆನಾಡಿನ ದರೇಮನೆಗೆ ಒಂದು ಪತ್ರಕ್ಕಾಗಿ ಇನ್ನೂ ಮೂರು ಕಿ.ಮೀ. ನಡೆಯುವುದನ್ನು ತಪ್ಪಿಸಲು ಈ ಉಪಾಯ. ಈ ವಿಳಾಸವನ್ನು ಕೆಲವು ಬಾರಿ  ’ಸ್ಟಾಂಪ್’ ಮೇಲೂ ಬರೆಯುತ್ತಿದ್ದುದರಿಂದ ಬೀಳುತ್ತಿದ್ದ ’ಡ್ಯೂ’ವನ್ನೂ ಅವನೇ ತುಂಬಿಬಿಡುತ್ತಿದ್ದ. ಈ ವಿಳಾಸದ ಸುಕ್ರ ಸೇರೂಗಾರ್ರು ಯಾನೆ ಸುಕ್ರಣ್ಣನ ಕತೆಯೇ ನಾನೀಗ ಹೇಳ ಹೊರಟಿದ್ದು.

ಸುಕ್ರಣ್ಣ ನಮ್ಮೂರಿಗೆ ವರ್ಷಂಪ್ರತಿ ಒಂದು ತಂಡದೊಂದಿಗೆ ಬಂದು ತೋಟದ ಕೆಲಸ ಮಾಡಿ ಮಳೆಗಾಲಕ್ಕೆ ಕುಂದಾಪುರದ ಕಡೆಯ ತನ್ನೂರಿಗೆ ವಾಪಾಸುಗುತ್ತಿದ್ದ ಸೇರೂಗಾರ ಅಥವಾ ಮೇಸ್ತ್ರಿ. ಹೊಸ ಪರಿಭಾಷೆಯಲ್ಲಿ ಕಂತ್ರಾಟುದಾರ! ಕುಳ್ಳಗಿನ ಸಣಕಲು ಶರೀರದ ಈತ ವಾಚಾಳಿ. ಅಕ್ಷರಾಭ್ಯಾಸ ಅಷ್ಟಕಷ್ಟೆ. ನಾಲಗೆಯ ಬಲದಿಂದ ಅದು ಹೇಗೋ ಎಂಟು-ಹತ್ತು ಜನರನ್ನು ಕರೆತರುತ್ತಿದ್ದ. ಮೊದಮೊದಲು ಸರಿಯಾಗಿಯೇ ಇದು ಸಾಗಿತ್ತು. ಮತ್ತೆ ಮತ್ತೆ ಈ ವರ್ಷ ಬಂದವರು ಮರುವರ್ಷ ಬರುತ್ತಿರಲಿಲ್ಲ. ಕಾರಣ ಸಂಬಳ ಸರಿಯಾಗಿ ಕೊಡುತ್ತಿರಲಿಲ್ಲ. ಈ ವರ್ಷದ ಕೆಲಸವನ್ನು ಮುಂದಿನ ವರ್ಷ ಮುಗಿಸಿಕೊಡುತ್ತಿದ್ದ. ಆದರೆ ಮುಂದಿನ ವರ್ಷದ್ದನ್ನು ಈ ವರ್ಷವೇ ಮುಂಗಡ ಪಡೆಯುತ್ತಿದ್ದ. ಕಾರಣ ಆತನಿಗೆ ಸುತ್ತಿಕೊಂಡ ಕುಡಿತದ ಚಟ. ಈ ಕುಡಿತದ ದಾಸನಾಗಿ ಸುಕ್ರು ಸೇರೂಗಾರ್ರು... ಬರೀ ’ಸುಕ್ರ’ನಾದ ಕತೆಗೂ ಒಂದು ಹಿನ್ನೆಲೆ ಇದೆ.

ಮಲೆನಾಡಿಗೆ ತೋಟದ ಕೆಲಸಕ್ಕೆ ತಂಡದಲ್ಲಿ ಬರುವ ಕೆಲಸಗಾರರು ಹೆಚ್ಚು ಪಾಲು ಗಂಡಾಳುಗಳೇ. ಹೆಣ್ಣಾಳುಗಳೇ ಮಾಡಬೇಕಾದ ಕಡಿಮೆ ಸಂಬಳದ ಕೆಲಸವೂ  ಇರುವುದರಿಂದ ಈ ಗಂಡಾಳುಗಳ ಹೆಂಡತಿಯರು ಅಕ್ಕ-ತಂಗಿಯರು ಬರುವ ಕ್ರಮ ಇತ್ತು. ಆಗ ಸುಕ್ರಣ್ಣನ ಪ್ರಾಯದ ಕಾಲ. ಮದುವೆಯಾಗಿದ್ದರೂ ಸಂಸಾರ ಊರಲ್ಲೇ ಬಿಟ್ಟಿದ್ದ. ಸೇರೂಗಾರಿಕೆಯ ಗತ್ತು - ಶೋಕಿ ಎಲ್ಲಾ ಇತ್ತು. ಕೈಗೆ ಉಂಗುರ, ಕಾಲಿಗೆ ಬೂಟು, ಕಿಸೆಯಲ್ಲೊಂದು ಪೆನ್ನು- ಪುಸ್ತಕ (ಅದರಲ್ಲಿ ಬರೆದದ್ದು ಕಾಣೆ!) ಇವುಗಳಿಂದ ಸದಾ ಅಲಂಕೃತನಾಗಿರುತ್ತಿದ್ದ! ಅದು ಹೇಗೋ ಆ ವರ್ಷ ತನ್ನ ನಾಲಿಗೆಯ ಚಮತ್ಕಾರದಿಂದ ’ರುಕ್ಕು’ ಎಂಬ ನೋಡಲು ತಕ್ಕ ಮಟ್ಟಿಗೆ ಚೆನ್ನಾಗಿರುವ ಹೆಂಗುಸೊಬ್ಬಳನ್ನು ಕರೆತಂದಿದ್ದ. ಸಂಸಾರ ಊರಲ್ಲೇ ಬಿಡಲಿಕ್ಕೆ ಕಾರಣವೇ ಈ ರುಕ್ಕು ಯಾನೆ ರುಕ್ಮಿಣಿ. ಆಕೆ ಕೆಲಸಗಾರ್ತಿಯಾಗಿ ಬಂದರೂ ಯಜಮಾನಿಯಂತೆಯೇ ಇರುತ್ತಿದ್ದಳು. ಸ್ವಲ್ಪ ದಿನ ಸುಕ್ರಣ್ಣನೊಂದಿಗೆ ಚೆನ್ನಾಗಿಯೇ ಇದ್ದಳು. ಈ ವರ್ಷದ ತಂಡದಲ್ಲಿ ’ಗಣಪ’ ಎಂಬ ದೃಢಕಾಯದ ಯುವಕ ಕೆಲಸಗಾರನಾಗಿದ್ದ. ಈತ ಸುಕ್ರನಿಗಿಂತಲೂ ಹೆಚ್ಚು ವಾಚಾಳಿ. ಆದ್ದರಿಂದಲೇ ಆತನಿಗೆ ’ಪಟಾಕಿ ಗಣಪ’ ಎಂಬ ಹೆಸರೂ ಇತ್ತು. ಈತನ ಪಟಾಕಿ ರುಕ್ಕುವಿಗೆ ಅಪ್ಯಾಯಮಾನವಾಗತೊಡಗಿತು. ಗಣಪನ ಪಟಾಕಿಯೂ ರುಕ್ಕುವನ್ನೇ ಸುತ್ತತೊಡಗಿತು. ಗಣಪನ ಕೆಲಸ ಎಲ್ಲೋ ಅಲ್ಲೇ ಈಕೆಯೂ ಕೆಲಸಕ್ಕೆ ಹೋಗತೊಡಗಿದಳು. ಒಂದು ದಿನ ಬೆಳಿಗ್ಗೆ ಎದ್ದು ನೋಡಿದರೆ ಗಣಪ ರುಕ್ಕು ಇಬ್ಬರೂ ನಾಪತ್ತೆ! ಆಗ ನೋಡಬೇಕಿತ್ತು. ಸುಕ್ರಣ್ಣನ ಅವತಾರ! ಕೈಯ ಉಂಗುರ, ಪೆಟ್ಟಿಗೆಯ ಹಣ ಎಲ್ಲಾ ಹೋಯಿತು ಎಂದು ಅಬ್ಬರಿಸುತ್ತಿದ್ದ. ಗಣಪ-ರುಕ್ಕು ಇನ್ನೊಂದು ಊರಿಗೆ ಹೋಗಿ ಅಲ್ಲಿ ಇನ್ನೊಂದು ಬಿಡಾರ ಹೂಡಿ ಕೆಲಸಗಾರರಾಗಿ ಮುಂದುವರಿದಿದ್ದು ಸುಕ್ರಣ್ಣನಿಗೆ ಇನ್ನೂ ಉರಿದುಹೋಯಿತು. ಅಲ್ಲಿಗೂ ಹೋಗಿ ಗಲಾಟೆ ಮಾಡಿದರೆ... ರುಕ್ಕು ನೀನೇನು ಕಟ್ಟಿಕೊಂಡ ಗಂಡನಾ? ಎಂದು ತಿವಿದು ಬಿಟ್ಟಳಂತೆ. ಬರುವಾಗಲೇ ಗಡಂಗಿಗೆ ಹೋಗಿ ಸ್ವಲ್ಪ ಹಾಕಿ ಬಂದ. ಊರಿನಿಂದ ಸಂಸಾರ ಕರೆಸಿಕೊಂಡು ವಿರಹತಾಪ ಮರೆಯಲು ಪ್ರಯತ್ನಿಸಿದ. ವಿರಹ ಮರೆಯಬೇಕೆಂದು ಮತ್ತೆ ಮತ್ತೆ ಕುಡಿಯತೊಡಗಿದ. ಕುಡಿದಾಗ ಗಣಪನ ಮೇಲೆ ಎಲ್ಲಿಲ್ಲದ ದ್ವೇಷ ಉರಿ ಉರಿ ಹಾಯತೊಡಗಿತು.

 ಕುಡಿತವನ್ನು ಹಾಗೆ ಕರೆಯುವುದಕ್ಕಿಂತ ’ಸ್ನಾನ’ ಎನ್ನುವುದೇ ಸೂಕ್ತ. ಕುಡಿದು ತೊನೆದಾಡುತ್ತಾ, ದೋಣಿಯನ್ನು ದಾಟಿ ಅದು ಹೇಗೆ ಬಿಡಾರ ಸೇರುತ್ತಾನೋ ದೇವರಿಗೇ ಗೊತ್ತು. ರುಕ್ಕುವಿನ ಮೇಲಿನ ಮೋಹ ಕುಡಿದಾಗ ಹೆಂಡತಿಯ ಮೇಲಿನ ದ್ವೇಷವೂ ಆಗಿ ಬದಲಾಗತೊಡಗಿತು. ಈತ ಆಕೆಯನ್ನು ಬಡಿಯುವುದು, ಅದನ್ನು ಅನುಭವಿಸುವುದು ಆಕೆಯ ಕರ್ಮವಾಗತೊಡಗಿತು. ಉಪದ್ರ ತೀರಾ ಹೆಚ್ಚಾದಾಗ ಆಕೆ ನಾನು ಊರಿಗೆ ಹೋತೆ’ ಎಂದು ಹೊರಟು ನಿಲ್ಲುತ್ತಿದ್ದಳು. ಅಮಲು ಇಳಿದಾಗ ಈ ಹುಂಬ ಹೆಂಡತಿಯ ಕಾಲು ಹಿಡಿದು ಗೋಳೋ ಎಂದು ಅತ್ತು ಬಿಡುತ್ತಿದ್ದ! ಮತ್ತೆ ಅದೇ ಭಯೋತ್ಪಾದಕ ಕೃತ್ಯ. ಗಣಪನ ಮೇಲಿನ ಕ್ರೋಧ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿತು. "ಆ ನಾಯಿ ನನ್ನ ಅನ್ನ ತಿಂದು ನಂಗೇ ದ್ರೋಹ ಮಾಡುದಾ?" ಎಂದು ಹಲುಬುತ್ತಿದ್ದ. ಗಡಂಗಿನಲ್ಲಿ ಸರೀಕರೊಂದಿಗೆ ಸೇರಿದಾಗ ’ಅವ ಸಿಕ್ಲಿ ಕೊಂದ್ ಬಿಡ್ತೆ’ ಎಂದು ಅಬ್ಬರಿಸುತ್ತಿದ್ದ. ಇವನಂತೆಯೇ ಇತರರೂ ತಮ್ಮ ತಮ್ಮ ಪೂರ್ವ ದ್ವೇಷದ ಕತೆಗಳನ್ನು ಸಾಭಿನಯವಾಗಿ ನಿರೂಪಿಸುತ್ತಿದ್ದರು. "ಆ ಮೇಷ್ಟ್ರು... ಪಾಟ....ಪಾಟ..... ಮಾಡ್ತ ನಮ್ಮನಿ ಗಂಡಿಗೆ ದನ ಬಡ್ಡಾಂಗ್ ಬಡಿದ..." ಇದು ಕುಪ್ಪಣ್ಣನ ಕೊರಿಯಗ್ರಫಿ!ಎಂತ ಹೇಳ್ತೆ ಮಾರಾಯ... ನಮ್ಮ ಒಡೇರ್ ಮಗ್ಳು... ಪ್ಯಾಟೀಲಿ ಓದ್ತಿತ್ತಲೆ... ಅಲ್ಲೇ ಯಾರ್ನೋ ಮದೀ ಮಾಡ್ಕಂಡಿತ್ತಂಬ್ರು... ಇದು ತಿಪ್ಪಣ್ಣ ತಂದ ತಾಜಾ ಸುದ್ದಿ. ಹೀಗೆ ತಾಳ ತಂತಿ ಇಲ್ಲದ ಅನೇಕ ಅಮೂಲ್ಯ ವಿಚಾರಗಳ ಮೇಲೆ ತತ್ವ ಜಿಜ್ಞಾಸೆ ನಡೆಯುತ್ತಿತ್ತು!

   ಈ ಕೋಲಾಹಲದ ನಡುವೆ ಚಿಕ್ಕಯ್ಯ ಸೇರೂಗಾರ್ರು. ಸುಕ್ರ ಸೇರೂಗಾರ್ರಿಗೆ ಅಮೂಲ್ಯವಾದ ವಿಚಾರವನ್ನು ಅರುಹುವಂಥವರಾದರು. ಇಬ್ಬರೂ ಯಕ್ಷಗಾನ ಬಯಲಾಟವನ್ನು ತಪ್ಪದೇ ನೋಡುವವರು. ಚಿಕ್ಕಯ್ಯ ಸಣ್ಣ ಪುಟ್ಟ ಅರ್ಥವನ್ನು ಹೇಳಿದವ. ಕುಡಿದಾಗ ಯಾರೂ ಇಲ್ಲದಿದ್ದರೂ ಒಡ್ಡೋಲಗ ಕೊಡುವವ...!"ಎಲವೋ ಸುಕ್ರ ಸೇರೂಗಾರನೆ..... ನಿನ್ನ ಆಜನ್ಮ ಶತ್ರುವಾದ ಗಣಪನೆಂಬುವವನು... ನಿನ್ನ ರುಕ್ಮಿಣಿಯನ್ನು ಅಪಹರಿಸಿದ ಶಿಶುಪಾಲನು. ನಿನ್ನೆ ಆ ಮೈಲಿಕಲ್ಲಿಗೆ ಒರಗಿ ಕುಳಿತು ಬೀಡಿ ಎಳೆಯುವಂಥನಾದನು. ’ನೀನು ಹೀಗೆ ಮಾಡಿದ್ದು ಸರಿಯಾ? ಎಂದರೆ ನಿನ್ನ ಸುಕ್ರ-ನರಪೇತಲ ಅವನು ಏನು ಕಡಿಯುತ್ತಾನೆ...! ಎಂದು ಸಸಾರವಾಗಿ ಮಾತಾಡಿದ ಮಾರಾಯ" ಎಂದು ಊದಿದ. ಸುಕ್ರನಿಗೆ ಏರದೆ ಇದ್ದೀತೆ? "ಎಲವೆಲವೋ ಗಣಪ.. ನನ್ನ ರುಕ್ಕುವಿನ ಮಂಡೆ ಹಾಳು ಮಾಡಿದ ಠೊಣಪ! ನಾನು ಸತ್ತರೂ ನಿನ್ನನ್ನು ಬಿಡ್ತಿಲ್ಲೆ" ಎಂದು ಗಹಿಗಹಿಸುತ್ತಾ ಗಡಂಗಿನಿಂದ ರಭಸವಾಗಿ ಹೊರಟ! ಆ ರಭಸಕ್ಕೆ ಅಲ್ಲೇ ಬೀಳಬೇಕಿತ್ತು ಸಾವರಿಸಿಕೊಂಡು ಮುಂದೆ ನಡೆದ. ತೂರಾಡುತ್ತಾ ಬಿಡಾರಕ್ಕೆ ಹೊರಟವನಿಗೆ ಮೈಲಿಕಲ್ಲು ನೆನಪಾಯಿತು. ’ನಿನ್ನೆ ಅದೇ ಮೈಲಿಕಲ್ಲಿನ ಹತ್ತಿರವಲ್ಲವಾ ಬೀಡಿ ಸೇದುತ್ತಿದ್ದುದು. ಅವ ಬೀಡಿ ಸೇದಿದರೆ ನಾನು ಸಿಗರೇಟ್ ಸೇದ್ತೆ" ಎಂದು ಜಿದ್ದಿಗೆ ಬಿದ್ದು - ಕುಡಿದುಳಿದ ಹಣದಲ್ಲಿ ಸಿಗರೇಟುಕೊಂಡು ಬೆಂಕಿ ಹಚ್ಚಿ ಎಡಗೈಯ್ಯ ಎರಡು ಬೆರಳುಗಳ ನಡುವೆ ತೂರಿಸಿಹಿಡಿದು ರಾಜಠೀವಿಯಿಂದ ಮುನ್ನಡೆದ. ’ನಿನ್ನೆ ಅಲ್ಲಿದ್ದ ಗಣಪ ಇಂದೂ ಇರಬಹುದು. ಇವತ್ತು ಶಿಶುಪಾಲ ವಧೆ ಆಗಲೇಬೇಕು. ನನ್ನ ರುಕ್ಮಿಣಿ ಸಿಗಲೇಬೇಕು’ ಎಂಬ ಉಮೇದಿ ತಡೆದುಕೊಳ್ಳಲು ಅಸಾಧ್ಯವಾದಷ್ಟೂ ಏರಿ ’ಏ ಶಿಶುಪಾಲ ಎತ್ ಹೋತೆ ಕಾಂತೆ’ ಎನ್ನುತ್ತಾ ದಾರಿಯ ಬದಿಯಲ್ಲಿ ಬಿದ್ದಿದ್ದ ಕೊತ್ತಳಿಗೆಯ ತುಂಡನ್ನು ಕೈಗೆತ್ತಿಕೊಂಡ!

 "ಕರದ ಗದೆಯಂ ಪೆಗಲೊಳಾಂತಾ ಸುಯೋಧನಂ...." ಎಂದು ಹಾಡಿಕೊಳ್ಳುತ್ತಾ, ಹೆಣದ ಪರ್ವತಗಳನ್ನು ಏರಿಳಿಯುವುದನ್ನು ಅಭಿನಯಿಸುತ್ತಾ, ಹೆಗಲ ಮೇಲೆ ಕೊತ್ತಳಿಗೆಯ ಗದೆಯನ್ನು ಏರಿಸಿ ಮೈಲಿಕಲ್ಲೆಂಬ ವೈಶಂಪಾಯನ ಸರೋವರದತ್ತ ಮುನ್ನಡೆದ. ಬೆಳದಿಂಗಳ ರಾತ್ರಿಯಲ್ಲಿ ಬಿಳಿ ವಸ್ತ್ರವನ್ನುಟ್ಟು ಗಣಪ ಕಂಗೊಳಿಸುತ್ತಿದ್ದಾನೆ! "ನನ್ನ ರುಕ್ಕುವನ್ನು ಅಪಹರಿಸಿ ಈಗ ಶೃಂಗಾರ ರಾವಣನಾಗಿದ್ದಾನೆ. ಕಳ್ಳ! ಇವತ್ತೊಂದು ಸಂಪೂರ್ಣ ಕುರುಕ್ಷೇತ್ರ ನಡೆದು ಬಿಡಲಿ ಎಂದು ಕಾಳಗಕ್ಕೆ ಸಿದ್ಧನಾದವನಂತೆ ಎದೆಯನ್ನು ಮುಂದುಮಾಡಿ, ಕಾಲನ್ನು ಅಗಲಿಸಿ ಅಸಡಾ ಬಸಡಾ ನಡೆಯುತ್ತಾ "ಏ ಗಣಪಾsss" ಎಂದು ಅಬ್ಬರಿಸಿದ! ಮೈಲಿಕಲ್ಲಿನ ಬಳಿಯಲ್ಲಿದ್ದು ಏನೋ ಕೆಲಸದಲ್ಲಿ ನಿರತವಾಗಿದ್ದ ಕಂತ್ರಿನಾಯಿ ಓಡಿಹೋಯಿತು. ಗಣಪನೂ ಯುದ್ಧಕ್ಕೆ ಸಿದ್ಧನಾದನೆಂದು ಬಗೆದು ತಾನೇ ಮೊದಲು ಧಾಳಿ ಮಾಡಬೇಕೆಂದು ಕ್ಷಣಾರ್ಧದಲ್ಲಿ ತೀರ್ಮಾನಿಸಿ ಧಾಪ್ ಧಾಪ್ ಎಂದು ಬಾರಿಸತೊಡಗಿದ. ಗಣಪನ ಮೇಲಿನ ದ್ವೇಷ, ರುಕ್ಕುವಿನ ಮೇಲಿನ ಮೋಹ, ಭಗ್ನ ಪ್ರಣಯಿಯ ಸಂತಾಪ ಎಲ್ಲಾ ಸೇರಿ ಭೀಕರ ಉಗ್ರವಾದಿಯಾಗಿ ಬಿಟ್ಟ. ಕೊತ್ತಳಿಗೆ ಪುಡಿ ಪುಡಿಯಾದರೂ ಕೋಪ ಇಳಿಯಲಿಲ್ಲ. ಇಷ್ಟು ಹೊಡೆದರೂ ಗಣಪನ ಪ್ರತಿರೋಧವಿಲ್ಲ! ಸತ್ತು ಬೀಳುವುದೂ ಇಲ್ಲ. ಇವನ್ಯಾವನೋ ಮಾಯಾವಿ ರಾಕ್ಷಸನಿರಬಹುದೋ ಎಂಬ ಸಂದೇಹ ಬಂದುಹೋಯಿತು. ಕೈಯಲ್ಲುಳಿದ ಕೊತ್ತಳಿಗೆಯ ಕೊನೆಯ ತುಂಡನ್ನೆತ್ತಿ ಸಂಪೂರ್ಣ ಶಕ್ತಿ ಹಾಕಿ! ಸಾಯಿ....ನಾಯಿ ಎಂದು ಬಡಿದ ರಭಸಕ್ಕೆ ಆಯತಪ್ಪಿ ಪಕ್ಕದ ಚರಂಡಿಗೆ ಬಿದ್ದ. ಬಿದ್ದಲ್ಲಿಯೇ ಕೈಕಾಲು ಬಡಿಯುತ್ತಾ "ಶಿವ ಶಿವಾಸುರಸಮರದೊಳು ಕೈಸೋತೆನಲ್ಲೋ " ಎಂದು ಪದವನ್ನೂ ಒರಲುತ್ತಿದ್ದ. ಇವನ ಹಾಗೆ ರಾತ್ರಿ ಪಾಳಿ ಮುಗಿಸಿ ಬಂದವರು ಎಬ್ಬಿಸಿ ಬಿಡಾರ ತಲುಪಿಸಿದರು. ಮೈಲಿಕಲ್ಲಿನ ಗಣಪ ನಗುತ್ತಿದ್ದ!

ಮತ್ತೊಂದು ದಿನ ಸುಕ್ರಣ್ಣನ ದನಿ ನಮ್ಮ ಅನಂತಣ್ಣಯ್ಯ ಇಪ್ಪತ್ತು ಕೆ.ಜಿ. ಅಕ್ಕಿಯನ್ನು ಮಿಲ್ಲಿನಲ್ಲಿ ಹಿಟ್ಟು ಮಾಡಿಸಿ ತಾ ಎಂದು ಸ್ವಲ್ಪ ಜಾಸ್ತಿಯಾಗಿಯೇ ದುಡ್ಡು ಕೊಟ್ಟು ಪೇಟೆಗೆ ಕಳಿಸಿದ್ದರು. ಪೇಟೆಗೇನೋ ಸರಿಯಾಗಿಯೇ ಹೋದ (ಬೆಳಿಗ್ಗೆ) ಹಿಟ್ಟನ್ನೂ ಮಾಡಿಸಿದ. ದನಿಗಳು ದುಡ್ಡು ಸ್ವಲ್ಪ ಹೆಚ್ಚು ಕೊಟ್ಟಿದ್ದರಲ್ಲ, ಸ್ವಲ್ಪ ಕುಡಿದುಬರುವ ಎಂದು ಗಡಂಗಿಗೂ  ಹೋದ. ಬರುವಾಗ ಇಡೀ ಕಿಸೆ ಖಾಲಿ! ಲೋಡಾದ ಸುಕ್ರ ’ಅನಂತ್ ಭಟ್ರು ಕೊಡ್ತ್ರ್’ ಎಂದು ಹಿಟ್ಟಿನ ಚೀಲದೊಂದಿಗೆ ವಾಪಾಸು ಹೊರಟ. ಮರುದಿನ ದನಿಗಳ ಮನೆಯಲ್ಲಿ ಏನೋ ವಿಶೇಷ. ಮಿಲ್ಲಿನಿಂದ ಹಿಟ್ಟು ಬರುತ್ತದೆ ಎಂದು ಯಜಮಾನಮ್ಮ ಕಾಯುತ್ತಿದ್ದಾರೆ. ಸಂಜೆಯಾದರೂ ಸುಕ್ರನ ಪತ್ತೆ ಇಲ್ಲ. ಅನುಮಾನ ಬಂದ ಅಮ್ಮ ಸುಕ್ರನ ಬಿಡಾರಕ್ಕೆ ಹೋಗಿ ಅವನ ಹೆಂಡತಿಯಲ್ಲಿ ವಿಚಾರಿಸಿದರೆ, ಆಕೆಗೆ ಏನೂ ತಿಳಿಯದು. ಅವರು ಆಗಲೇ ಬಂದು ಮಲಗಿದ್ದಾರೆ ಎಂದಳು. ಮತ್ತೆ ಹಿಟ್ಟೆಲ್ಲಿ? ಎಂದರೆ ಅದೂ ಗೊತ್ತಿಲ್ಲ. ಕೂಡಲೇ ಅವನನ್ನು ಎಬ್ಬಿಸಿ ಕಳಿಸು ಎಂದು ಆಜ್ಞೆ ಮಾಡಿ ಮನೆಗೆ ಬಂದರು. ಈಗ  ಕುಡಿದದ್ದು ತಕ್ಕಮಟ್ಟಿಗೆ ಇಳಿದಿತ್ತು. ಹಿಟ್ಟು ತಂದಿಲ್ಲ. ಅಮ್ಮ ಯಜಮಾನರಿಗಿಂತ ಬಾರೀ ಜೋರು. ಅವರ ಬಾಯಿಯ ಮುಂದೆ ಏನೂ ಮಾಡಲಾಗುದು. ಅಕ್ಕಿ ಹಿಟ್ಟು ಇಲ್ಲ.. ತಪ್ಪಿಸಿಕೊಳ್ಳುವಂತಿಲ್ಲ. ಕೂಡಲೇ ಹೊಸ ಉಪಾಯ ಹೊಳೆಯಿತು. ಮಲಗಿದವನು ಜಿಗಿದು ಕುಳಿತು "ಹೂಂ....ಹೂಂ..." ಎಂದು ಹೂಂಕರಿಸತೊಡಗಿದ. "ಹಡಬೆ, ಏನು ಬೊಗಳೊದು... ನಿನ್ನ ಕೊಂದ್ ಬಿಡ್ತೆ... ಹೂಂ..." ಎಂದು ಅಬ್ಬರಿಸಿ ಪಕ್ಕದಲ್ಲೇ ಇದ್ದ. ಅಡಿಕೆ ದಬ್ಬೆ ಕೈಗೆತ್ತಿಕೊಂಡ.

ಈ ರಾಕ್ಷಸ ಕೊಂದೇ ಬಿಡುತ್ತಾನೆಂದು ಭಾವಿಸಿದ ಆಕೆ ಒಂದೇ ಓಟಕ್ಕೆ ದನಿಗಳ ಮನೆಯ ಜಗಲಿಗೇ ಬಂದಳು! ಏನು ಎಂತ ಕೇಳುವುದರೊಳಗೆ ಅಡಿಕೆ ಚೀಲದ ಹಿಂದೆ ಅಡಗಿದಳು. ಈ ರಾಕ್ಷಸ ಬಂದವನೇ ಅಡಗುತ್ತೀಯಾ ನಿನ್ನನ್ನು ಕೊಂದುಬಿಡುತ್ತೇನೆ ಎನ್ನುತ್ತಾ ಅಡಿಕೆ ಚೀಲಕ್ಕೆ ಬಡಿಯತೊಡಗಿದ. ಅಡಿಕೆ ಚೀಲ ಪುಡಿಯಾಗಿ ಅಡಿಕೆಯೆಲ್ಲಾ ಚೆಲ್ಲಾಪಿಲ್ಲಿ! ಅದರ ಮೇಲೆ ಇವನ ಭರತನಾಟ್ಯ ನಿಲ್ಲಲಾರದೆ ಕೆಳಕ್ಕೆ ಬಿದ್ದು ಮತ್ತೆ ಎದ್ದ.  ಮೊದಲೇ ಹಿಟ್ಟು ತಾರದ್ದಕ್ಕೆ ಕೆಂಡಾಮಂಡಲವಾಗಿದ್ದ ಯಜಮಾನಿ ಕೋಪದಿಂದ ಕುದಿದು ಹೊರಬಂದರೆ ಯಜಮಾನರು ಕಂಗಾಲಾಗಿದ್ದಾರೆ. ಸುಕ್ರನ ಭರತನಾಟ್ಯ, ಬ್ರೇಕ್ ಡ್ಯಾನ್ಸ್ ಯಕ್ಷಗಾನ ಎಲ್ಲ ಪ್ರಾರಂಭವಾಗಿದೆ. ’ಏ ಸುಕ್ರಾ’ ಎಂದು ಅಬ್ಬರಿಸಿದರು. ’ಹೂಂ... ನಾನು ಸುಕ್ರ ಅಲ್ಲ... ಅವನಣ್ಣ ಶಂಕ್ರಾss... ಎಂದು ಮತ್ತೆ ಅಬ್ಬರಿಸತೊಡಗಿದ. ಶಂಕ್ರನಾಗಲಿ ಅವರಪ್ಪನಾಗಲಿ ನಮ್ಮ ಜಗಲಿಯಲ್ಲೇನು ಕೆಲಸ ? ಎಂದವರೇ ಸೀದಾಹೋಗಿ ಕೈಯ್ಯ ದಬ್ಬೆಯನ್ನು ಕಿತ್ತುಕೊಂಡು, ದರದರ ಅಂಗಳಕ್ಕೆ ಎಳೆದು ತಂದು ಅಲ್ಲಿಯೇ ಇದ್ದ ಒಂದು ಕೊಡ ನೀರನ್ನು ತಲೆಗೆ ಸುರಿದುಬಿಟ್ಟರು! ಅಡಿಕೆ ದಬ್ಬೆಯನ್ನು ಕೈಗೆತ್ತಿಕೊಂಡು ಯಾರು? ಶಂಕ್ರನಾ? ಇನ್ನೊಂದು ಸಾರಿ ಬೊಗಳು’ ಎಂದು ಅಬ್ಬರಿಸಿದ್ದೇ ’ಶಂಕ್ರ’ ಮತ್ತೆ ಶುಕ್ರನೇ ಆಗಿಬಿಟ್ಟ! ’ಅಯ್ಯಯ್ಯೋss ಅಮ್ಮ ತಪ್ಪಾಯಿತಮ್ಮ.... ಅದು... ನನ್ನ ಅಣ್ಣನ್ ಜಕ್ಣಿ ಅದೇ ನಂಗ್ ವದ್ಬಿಡ್ತು, ಹಿಟ್ಟೀನ್ ಚೀಲ ತಂದೀದೆ. ಎಲ್ಲೋಹ್ತು ಗೊತ್ತಿಲ್ಲೆ’ ಎಂದು ಹಲುಬತೊಡಗಿದ. ಎಂದೋ ಸತ್ತು ಹೋದ ಇವನಣ್ಣನ ಪ್ರೇತಕ್ಕೆ ನಮ್ಮ ಅಕ್ಕಿ ಚೀಲ ಯಾಕೆ ಬೇಕು ಎಂಬುದು ಆ ಸಾವಿತ್ರಮ್ಮನಿಗೆ ತಿಳಿಯದಾಯಿತು! ಇವನದ್ದೇನು ನಾಟಕವೋ? ಸತ್ಯವೋ? ಎಂದು ಭೂತಪ್ರೇತಗಳ ಮೇಲೆ ನಂಬುಗೆ ಇದ್ದ ಅವರು ಅಯೋಮಯರಾದರು! ಹಾಗಿದ್ದರೆ ಆ ಜಕ್ಣಿ ಈಗೆಲ್ಲಿ ಹೋಯಿತು ಸುಕ್ರಣ್ಣನ ದುರಾದೃಷ್ಟವೇ ಬಂದಂತೆ ಅನಂತಭಟ್ಟರ ಭಾವ ಹರಿಭಟ್ಟರು ಅಂದೇ ಬಂದರು. ಸುಕ್ರಣ್ಣನ ಅವಾಂತರವನ್ನು ದಾರಿಯಲ್ಲೇ ಕೇಳಿ ಬಂದಿದ್ದ ಅವರು ಅಣ್ಣನ ಜಕ್ಣಿಯ ಕತೆಯನ್ನು ನಂಬಿಸ ಹೊರಟ ಸುಕ್ರಣ್ಣನ ಉಪಾಯಕ್ಕೆ  ಕಲ್ಲು ಹಾಕಿದರು.

ಬಂದವರೇ ಕಾಲೂ ತೊಳೆಯದೆ ’ಏ ಸುಕ್ರಾ’ ಎಂದು ಕರೆದರು. ಹಿಟ್ಟಿನ ಚೀಲದ ಕತೆ ಏನಾಯಿತು? ಎಂದರು. ಸುಕ್ರ ಅಪರಾಧಿಯ ಭಂಗಿಯಲ್ಲಿ ಮತ್ತೆ ಜಕ್ಣಿ ಕತೆ ಶುರು ಮಾಡಿದ. ’ಮುಚ್ಚು ಬಾಯಿ ಮಳ್ಳ’ ಎಂದು ಅವರು ಜೋರು ಮಾಡಿದಾಗ ಸುಕ್ರ ಮೂಲೆಯಲ್ಲಿ ಕುಳಿತುಬಿಟ್ಟ. ಈ ಸುಕ್ರ ಏನು ಮಾಡಿದ್ದಾನೆ ಗೊತ್ತೇ? ಎಂದು ಉರಿಯುತ್ತಲೇ ಕತೆ ಹೇಳಿದರು.

ಪೇಟೆಯಿಂದ ಬರುವಾಗ ಹೊಳೆಯ ಕಡುವನ್ನು ದಾಟಲಿಕ್ಕಿದೆ. ಹೊಳೆ ಬಾಗಿಲಿಗೆ ಬರುವುದಕ್ಕೆ ಮೊದಲು ಒಂದು ಫರ್ಲಾಂಗು ಇಳಿಜಾರು ರಸ್ತೆ, ಪೇಟೆಯಿಂದ ಒಂದು ಮೈಲು ರಸ್ತೆಯಲ್ಲಿ ಇಪ್ಪತ್ತು ಕೆ.ಜಿ. ಹಿಟ್ಟನ್ನು ತೂರಾಡುತ್ತಲೇ ಹೇಗೋ ಹೊತ್ತು ತಂದ. ಮುಂದೆ ಏನೂ ಮಾಡಲಾರೆ ಅನ್ನುವಾಗಲೇ ಆಯತಪ್ಪಿ ಬಿದ್ದುಬಿಟ್ಟ. ಹೀಗೆ ಬೀಳಲು ತಲೆಯ ಮೇಲಿನ ಹಿಟ್ಟಿನ ಚೀಲವೇ ಕಾರಣವಷ್ಟೇ? ಚೀಲದ ಮೇಲೆ ಎಲ್ಲಿಲ್ಲದ ಕೋಪ ಬಂತು. ಇವನನ್ನು ಕಂಡರಾಗದ ಇವನಣ್ಣ ಶಂಕ್ರ ಸತ್ತು ಈ ಜಕ್ಣಿಯಾಗಿದ್ದಾನೆ! ಅವನು ಈ ಚೀಲವನ್ನು ಹೊಕ್ಕಿರಬೇಕು. ಇಲ್ಲವಾದರೆ ಐವತ್ತು ಕೆ.ಜಿ. ಹೊರುವ ತನಗೆ ಇಪ್ಪತ್ತು ಕೆ.ಜಿ. ಹೊರಲಿಕ್ಕೆ ಆಗದು ಎಂದರೇನು? ಆದ್ದರಿಂದ ಅಣ್ಣನ ಜಕ್ಣಿಯೇ ಇದರೊಳಗೆ ಅವೇಶವಾಗಿದೆ. ’ಅಮಲುದಾರ’ ಸುಕ್ರನಿಗೆ ತಕ್ಷಣ ಹೊಳೆದ ಈ ವಿಚಾರದಿಂದ ಹಿಟ್ಟನ್ನು ಸಾಗಿಸುವುದೆಂತು ಎಂಬುದು ಪ್ರಶ್ನೆಯಾಯಿತು. ಹಿಟ್ಟುಕೊಂಡು ಹೋಗದಿದ್ದರೆ ದನಿಗಳು ಬೈಯ್ಯುತ್ತಾರೆ. ಕೊಂಡುಹೋಗಲು ಅಣ್ಣನ ಜಕ್ಣಿ ಬಿಡಲಾರದು. ಸರಿ ಎಂದು ಉಪಾಯ ಮಾಡಿದ. ಪಕ್ಕದ ಪೊದೆಯಲ್ಲಿದ್ದ ಬಳ್ಳಿ ತಂದು ಹಿಟ್ಟಿನ ಚೀಲದ ಜುಟ್ಟಿಗೆ ಕಟ್ಟಿದ. ನಾಯಿ ಮರಿಯನ್ನು ಎಳೆದ ಹಾಗೆ ಎಳೆಯುತ್ತಾ ’ಬತ್ತ್ಯ’.... ’ಇಲ್ಯ’ ಎಂದು ಬಯ್ಯುತ್ತಾ ಮುಂದೆ ಸಾಗಿದ. ಬಟ್ಟೆಯ ಚೀಲ, ಕಲ್ಲುದಾರಿ ಎಳೆದ ಹಾಗೆ ಬಂತು. ಚೀಲ ಹರಿದು ಹಿಟ್ಟು ಸುರಿಯತೊಡಗಿತು. ಹಿಂದೆ ನೋಡದೆ ಮುಂದೆ ಮುಂದೆ ಸುಕ್ರಣ್ಣನ ಜಕ್ಣಿಯ ಚೀಲ ಹಿಂದೆ! ಹಿಟ್ಟು ಕಡಿಮೆಯಾಗುತ್ತಾ ಬಂದ ಹಾಗೆ ಜಕ್ಣಿಯ ತೂಕ ಕಡಿಮೆಯಾಗುತ್ತಾ ಬಂತು! ಒಂದು ಫರ್ಲಾಂಗ್ ಗುಡ್ಡೆ ರಸ್ತೆಗೂ ರಂಗೋಲಿಯ  ವೈಭವ! ದೋಣಿ ಈಚೆ ದಡಕ್ಕೆ ಬಂದು ವಾಪಾಸಾಗುತ್ತಿದೆ. ಹಿಟ್ಟಿನ ಬಗ್ಗೆ ಯೋಚಿಸಲು ಪುರುಸೋತ್ತಿಲ್ಲ. ’ಹೋಯ್...... ಸೀನಾ... ನಾ ಬತ್ತೆ’ ಎಂದು ಸುಕ್ರ ಬೊಬ್ಬಿಟ್ಟ. ದೋಣಿ ಶೀನ ಕುಡುಕನನ್ನು ಹತ್ತಿಸಿಕೊಳ್ಳಲು ಹಿಂಜರಿದು. ’ಇನ್ನೊಂದು ಸಾರಿ ಬಂದಾಗ ಬಾ ಎಂದು ಹೊರಟೇಬಿಟ್ಟ. ’ಹೋಯ್ ನೀನ್ ಕರ್ಕೊಂಡ್ ಹೋಗ್ದಿದ್ರೆ ಹೊಳೆ ಹಾರಿ ಈಜ್ಕಂಬತ್ತೆ ಕಾಂತ್ಯ’ ಎಂದು ಹೊಳೆಗೆ ಇಳಿಯಲಿಕ್ಕೇ ಸಿದ್ಧನಾಗಿಬಿಟ್ಟ! ಐವತ್ತು-ಅರವತ್ತು ಅಡಿ ಆಳದ, ಅರ್ಧ ಫರ್ಲಾಂಗ್ ಅಗಲದ ಲಿಂಗನಮಕ್ಕಿಹಿನ್ನೀರಿನ ಹೊಳೆ ಅದು. ಈ  ಈಜುಬಾರದ ಕುಡುಕ ಹಾರಿದರೆ ಹೆಣವಾಗುತ್ತಾನೆ! ಶೀನಣ್ಣ ಉಪಾಯ ಕಾಣದೆ, ಈಜುವುದು ಬೇಡ ಮಾರಾಯ ಬಾ ಎಂದು ಹೇಗೋ ದೋಣಿ ಹತ್ತಿಸಿಕೊಂಡು ಈಚೆ ದಡಕ್ಕೆ ತಂದುಬಿಟ್ಟ. ದೋಣಿ ದಾಟಿದ್ದಕ್ಕೆ ದುಡ್ಡು ಕೊಡದೆ ’ಅಣ್ಣ ಸುಯೋಧನ ಲಾಲಿಸು ನಿನ್ನ ಪುಣ್ಯಫಲೋದಯ...’ ಎಂದು ಹಾಡಿಕೊಳ್ಳುತ್ತಾ ಹಿಟ್ಟಿನ ಚೀಲವನ್ನು ಬೀಸಾಡಿ ನಡೆದೇ ಬಿಟ್ಟ. ಇದು ಹರಿಭಟ್ಟರು ಸಂಗ್ರಹಿಸಿದ ಕಥೆ. ಅಮಲೇನೋ ಇಳಿದಿತ್ತು. ಅಮ್ಮನನ್ನು ನಂಬಿಸಲಿಕ್ಕಾಗಿ  ಮತ್ತೆ ಅಣ್ಣನ ಜಕ್ಣಿಯ ಆವೇಶಭರಿಸಿ ಅಡಿಕೆಚೀಲ ಪುಡಿಮಾಡಿದ್ದ.

    ಅಂತೂ ಭಟ್ಟರ ಮನೆಯ ಕಾರ್ಯಕ್ರಮಕ್ಕೆ ಅಕ್ಕಿ ಹಿಟ್ಟು ಇಲ್ಲವಾಯಿತು. ’ನಿನ್ನ ಅಣ್ಣನ ಜಕ್ಣಿ ಸುದ್ದಿ ತೆಗೆದರೆ ನಿನ್ನನ್ನೇ ಜಕ್ಣಿ ಮಾಡುತ್ತೇನೆ’ ಎಂದು ಹರಿಭಟ್ಟರು ಅಬ್ಬರಿಸಿದಾಗ ಹೆದರಿ ಕಂಗಾಲಾದ ಸುಕ್ರ ಬಿಡಾರಕ್ಕೆ ಓಡಿದ. ಯಜಮಾನರಿಗೆ ಹಿಡಿದದ್ದು ಜಕ್ಣಿಯಲ್ಲ ಎಂಬುದು ಗಟ್ಟಿಯಾದ ಮೇಲೆ ಸುಕ್ರನ ಹೆಂಡತಿಯೂ ಧೈರ್ಯವಾಗಿ ಬಿಡಾರ ಸೇರಿದಳು. ಆ ಊರಿಗೆ ಸುಕ್ರನ ಕೆಲಸದ ವರ್ಷ ಅದೇ ಕೊನೆ. ಮತ್ತೆ ಆತನಾಗಲೀ, ಅವನ ಜಕ್ಣಿಯದ್ದಾಗಲೀ ಸುದ್ದಿ ಕೇಳಿಬರಲಿಲ್ಲ.

(ಅರ್ಥ : ಜಕ್ಣಿ= ಸತ್ತ ನಂತರದ ಸ್ಥಿತಿ, ಪ್ರೇತತ್ವಕ್ಕೆ ಕುಂದ ಕನ್ನಡದ ಶಬ್ದ)


ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಬಸ್ಸು ಜಟಕಾ ಬಂಡಿ ನಗೆಬರಹಗಳ ಸಂಕಲನದ ಆಯ್ದ ಬರಹ

ಬುಧವಾರ, ನವೆಂಬರ್ 30, 2011

ಚಲನ-ಚಿತ್ರ

ಇಪ್ಪತ್ತಡಿಗೂ ಮೀರಿ ನಿಂತ
ನಾಯಕನ ಕಟೌಟಿನಲ್ಲಿ
ಮೂಗು ಕೊಂಚ ಊನ
ಸಾಲಿನ ಕೊನೆಯಲ್ಲಿ ನಿಂತವಗೆ
ಟಿಕೇಟು ಸಿಗುವುದು ಅನುಮಾನ
ವಾಗಿ ಪದಪದ ಚಡಪಡಿಕೆ

ಕಣ್ಣ ಕನಸುಗಳಿಗೆ ದಾರಿ ತೋರುವ
ಕೌಂಟರಿನ ಹಿಂದೆ ಕೂತ
ಮುಖಕ್ಕೆ ಸುಮ್ಮನೆ ಬಿಗುಮಾನ
ಒಳಬಿಡುವ ಗೇಟ್ ಕೀಪರನಿಗೂ
ಬಾಡಿಗೆಯ ದರ್ಪ
ಮಾಡಿದಂತೆ ಏನೋ ಉಪಕಾರ
“ಹೋಗಿ ಹೋಗಿ”..

ಸಾಗಿದೆ ಸಿನಿಮಾ, ಮರೆಸಿ ಎಲ್ಲರ
ಎಲ್ಲವನೂ
ಅಲ್ಲಲ್ಲಿ ಒಳಗಿಳಿಸಿ ಖುಷಿಯ ಬಿಂಬ
ಜತೆಗೆ ಕೊಂಚ ನೋವನ್ನೂ

ಇಂಟರ್ವಲ್ ನಲ್ಲಿ ಎದ್ದು ಬಂದ ಹೋಟೇಲು
ಮಾಣಿಯ ನಡಿಗೆಯಲ್ಲಿ
ನಾಯಕನ ಚೈತನ್ಯ
ಶೌಚಾಲಯದ ಮೂಲೆಯ ಹೊಗೆಸುರುಳಿಗಳಲ್ಲಿ
ಕನಸು ರಿಂಗಣ

ಶುಭಂ ಕಾಣುವ ಮೊದಲೇ ಹೊರಟಿದ್ದಾರೆ
ಮಂದಿ, ಕೊನೆಯ ಸೀನಿಗಿಂತ ಮುಖ್ಯ
ಟ್ರಾಫಿಕ್ಕು ಇರದ ರಸ್ತೆ,ಸಾಗಿದರೆ
ಆರಾಮಾಗಿ ದಾರಿ ತುಂಬ
ಚಿತ್ರದ ಮೆಲುಕು

ಇಲ್ಲೀಗ ಚಿತ್ರಮಂದಿರ ಖಾಲಿ
ಮೇಲೆಲ್ಲೋ ಉರುಳಿಬಿದ್ದ ಕೋಕ್
ಬಾಟಲಿ ಸದ್ದು ಗಾಂಧಿಕ್ಲಾಸಲ್ಲಿ
ಅನುರಣನ

ಜಾಡಮಾಲಿ ಹೆಂಗಸಿಗೆ ಕಂಡಿದೆ
ಯಾರೋ ಬಿಟ್ಟು ಹೋದ ಪಾಪ್ ಕಾರ್ನು
ಕಟ್ಟಿಕೊಳ್ಳಬೇಕಿದೆ ಅದನ್ನ ಸೆರಗೊಳಗೆ
ಮಂದಿ ಬರುವ ಮುನ್ನ
ಗುಡಿಸಲು ಬಾಕಿ ಇದೆ ಇನ್ನೂ ಎರಡು ಸಾಲು

ಇನ್ನೇನು ಕೆಲವೇ ಕ್ಷಣಗಳಲ್ಲಿ ಮುಂದಿನ ದೇಖಾವೆ..