ಬುಧವಾರ, ನವೆಂಬರ್ 08, 2006

ಎಫ್ ಎಮ್ ರೇಡಿಯೋ ಚಾನಲುಗಳು ಮತ್ತು ಅವುಗಳ ಬಧ್ಧತೆ.

ಇತಿಹಾಸ ಮರುಕಳಿಸುತ್ತಿದೆ. ಜನ ಮತ್ತೆ ರೇಡಿಯೋದ ಕಡೆ ವಾಲುತ್ತಿದ್ದಾರೆ. ೭೦-೮೦ರ ದಶಕದ ನಂತರ ಟಿ ವಿ ಯ ಅಬ್ಬರದಿಂದ ಮೂಲೆಗುಂಪಾಗಿ, ಹಳ್ಳಿಯ ಹಿರಿಯರ ಕೈ ಸೇರಿದ್ದ, ಅಟ್ಟದ ಧೂಳು ತಿನ್ನುತ್ತಿದ್ದ ರೇಡಿಯೋಗೆ ಕಾಯಕಲ್ಪವಾಗಿದೆ. ಸಂತೋಷ. ಜನ ಬಸ್ಸಲ್ಲಿ, ಕ್ಯೂನಲ್ಲಿ ಕಾಯಬೇಕಾದಾಗ ಮೊದಲಿನಂತೆ ಬೋರೆದ್ದು ಹೋಗಬೇಕಾಗಿಲ್ಲ, 10x6 ಕಿಷ್ಕಿಂದೆಯಲ್ಲಿ ಬದುಕೋರು ರಾತ್ರಿಯ ಕತ್ತಲೇಲಿ ನಿರಾಶವದನರಾಗಿ ಕೂರಬೇಕಿಲ್ಲ, ಸಂತೋಷ. ಕೆಲಸ ಮಾಡುತ್ತಲೇ ಮನರಂಜನೆಯನ್ನೂ ಪಡೆಯಬಹುದು. ಅದೂ ಸಂತಸದ ಸಂಗತಿಯೇ!
ಆಕಾಶವಾಣಿ , ಈಗ "fm" ಎಂಬ ಹೊಸ ಬಟ್ಟೆ ತೊಟ್ಟು, ನಳನಳಿಸುತ್ತಿದೆ. ಹಲವಾರು ಖಾಸಗೀ ಸಂಸ್ಥೆಗಳು ದೇಶದಾದ್ಯಂತ fm ರೇಡಿಯೋ channel ಗಳನ್ನ ಆರಂಭಿಸಿವೆ. AIR ಕೂಡ ವಿವಿಧ ಭಾರತಿ ನ fm ಮಾಡಿದೆ. ಮತ್ತೂ ಕೆಲ ಕೇಂದ್ರಗಳನ್ನ ಸ್ಥಾಪಿಸಿವೆ. FM ಚಾನಲುಗಳು ಕೇವಲ ೨೦೦ ಕಿಲೋಮೀಟರು ಮತ್ತು ಅದಕ್ಕೂ ಕಡಿಮೆ ವ್ಯಾಪ್ತಿಗಷ್ಟೆ ಸೀಮಿತ. Short Way ಮತ್ತು medium way ಗಳಂತೆ ದೇಶದಾದ್ಯಂತ ಪ್ರಸಾರ ಆಗುವುದಿಲ್ಲ. ಸೀಮಿತ ಪ್ರದೇಶದ ಜನರ ಅಭಿರುಚಿ- ಸಂಸ್ಕೃತಿ ಇವೇ ಮುಖ್ಯ, ಇಲ್ಲಿ.
ಸಂಗೀತವೇ ಈ ಎಲ್ಲ ಎಫ್ ಎಮ್ ಕೇಂದ್ರಗಳ ಬಂಡವಾಳ. ಚಿತ್ರಗೀತೆಗಳಿಗೆ ಮೊದಲ ಪ್ರಾಶಸ್ತ್ಯ. ( ಉಳಿದ ಸಂಗೀತ ಪ್ರಕಾರಗಳು ಎಲ್ಲಿ ಪ್ರಸಾರ ಆಗತ್ತೆ ಅಂತ ಕೇಳಬೇಡಿ) ಕೇಳುಗರ ಒಳಗೊಳ್ಳುವಿಕೆ, ಸಂವಾದ, ಚರ್ಚೆಗಳು, ಅವರಿಗಿಷ್ಟವಾದ ಹಾಡುಗಳ ಪ್ರಸಾರ ಎಲ್ಲ ಎಫ್ ಎಮ್ ಚಾನಲುಗಳ ಮಾಮೂಲಿ ಮೆನು!
ಬೆಂಗಳೂರೊಂದರಲ್ಲೆ ಇವತ್ತಿಗೆ, { ೦೮.೧೧.೨೦೦೬) ೮ ಎಫ್ ಎಮ್ ಚಾನಲುಗಳಿವೆ.ಸರ್ಕಾರಿ ಸ್ವಾಮ್ಯದ ೨ನ್ನು ಸೇರಿ!. ಅದೆಷ್ಟು ಆದಾಯ ಬರಬಹುದು ಆಲೋಚನೆ ಮಾಡಿ!ಯಾವ ಚಾನಲ್ಲು ಕೂಡಾ ವಿಶೇಷವಾಗಿಲ್ಲ.ಎಲ್ಲವೂ ಹಾಡಿದ್ದೇ ಹಾಡೋ ಕಿಸಬಾಯಿ ದಾಸರೇ!ದಿನಾ ಬಸ್ಸಲ್ಲಿ ಆಫೀಸಿಗೆ ಹೋಗಿ- ಬಂದು ಮಾಡುವ ನಾನು ಈ ಎಫ್ ಎಮ್ ಗಳಿಗೆ ಕಿವಿ ಕೊಡೊ ಅಭ್ಯಾಸ ಮಾಡಿಕೊಂಡಿದ್ದೇನೆ, ಹಾಗಾಗಿ ಧೈರ್ಯವಾಗಿ ಈ ಮಾತು ಹೇಳಿದೆ.
ನನ್ನ ಕೆಲವೊಂದಿಷ್ಟು ಆಲೋಚನೆಗಳನ್ನ ನಿಮ್ಮ ಜೊತೆ ಹಂಚಿಕೊಳ್ಳಬೇಕು ಅನ್ನಿಸುತ್ತಿದೆ, ಈ ಎಫ್ಎಮ್ ಗಳ ಪ್ರಲಾಪಗಳನ್ನ ದಿನಾ ಕೇಳುತ್ತೇನಾದ್ದರಿಂದ.
ಈ ಚಾನಲುಗಳಿಗೆ ಸಾಮಾಜಿಕ ಬದ್ದತೆ ಎಂಬುದೇ ಇಲ್ಲವೆ?, ಕೇವಲ ಮನರಂಜನೆ ಮತ್ತು ವ್ಯ್ರರ್ಥ ಕಾಲಹರಣಕಾಗಿ ಮಾತ್ರವೆ ಇವುಗಳ ಇರುವಿಕೆಯೆ? ನೀವು ಯಾವುದೇ ಚಾನಲು ತಿರುಗಿಸಿದರೂ ಒಂದೇ ತೆರನಾದ ಮಾತುಗಳು ಕೇಳಿ ಬರುತ್ತವೆ! ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಇವಕ್ಕೆ ಯಾವ ತಲೆ ಬುಡವೂ ಇರುವುದಿಲ್ಲ.ಮೊನ್ನೆ ಮೊನ್ನೆ ಒಂದು ಎಫ್ ಎಮ್ ನಲ್ಲಿ ಕೇಳಿ ಬಂದ ಒರಲಾಟ - " ನಿಮ್ ಚಪ್ಲಿನ ಯಾರಾದ್ರೂ ದೇವಸ್ಥಾನದಲ್ಲಿ ಕದ್ಕೊಂಡ್ ಹೋದ್ರೆ ನೀವೇನ್ ಮಾಡ್ತೀರಾ ಅಂತ ಹೇಳಿ, ಬಹುಮಾನ ಗೆಲ್ಲಿ!! ಕೂಡ್ಲೇ ಮೆಸೇಜ್ ಮಾಡಿ **** ನಂಬರ್ ಗೆ.. " ಯಾವನೋ ಒಬ್ಬ ಪೆಕರ ಫೋನ್ ಮಾಡಿ ಹೇಳುತ್ತಿದ್ದ, "ನಾನು ಇನ್ನೊಬ್ರ ಚಪ್ಲಿ ಹಾಕ್ಕೊಂಡು ಜಾಗ ಖಾಲಿ ಮಾಡ್ತೀನಿ" ಆಹಾ!
ಅತ್ಯಂತ ಬಾಲಿಶ RJ ( ರೇಡಿಯೊ ಜಾಕಿ) ಗಳೇ ಹೆಚ್ಚಿನ ಕಡೆ ಕಾಣಸಿಗುತ್ತಾರೆ( ಎಲ್ಲರೂ ಅಲ್ಲ ಮತ್ತೆ..) "ನಿಮ್ಮ ಗಂಡ ಬೇರೆ ಹುಡ್ಗೀನ ಪ್ರೀತ್ಸಿದ್ರೆ ಏನ್ ಮಾಡ್ತೀರ" , "ಹುಡ್ಗೀರ್ನ ಪಟಾಯ್ಸೋದು ಹೇಗೆ?" "ಬಾಸ್ ಗೆ ಹೇಗೆ ಮಸ್ಕಾ ಹೊಡೀಬೇಕು", ಇಂತಹ ಶೈಲಿಯ ಮಾತುಗಳೇ ಅವರ ಬಾಯಲ್ಲಿ ಚರ್ವಿತ ಚರ್ವಣಗೊಳ್ಳುತ್ತವೆ! ಇನ್ನು ಕೇಳುಗರಿಗೆ ಕೇಳೋ ಪ್ರಶ್ನೆಗಳೋ, ಭಗವಂತಾ!-" ಕನ್ನಡ ಚಿತ್ರರಂಗದ "ಕ್ರೇಜಿ ಸ್ಟಾರ್‍" ಯಾರು ಅಂತ ತಿಳಿಸಿ , ನಿಮ್ಮ options, a) ರವಿಚಂದ್ರನ್ b)ಅಶು ಚಂದ್ರನ್ c) ವಿಶು ಚಂದ್ರನ್ " - ಏನು ಹೇಳಬೇಕು ಇದಕ್ಕೆ?
ಈ ಎಫ್ ಎಮ್ ಗಳಿಗೆ ಕಳಿಸೋ ಮೆಸೇಜೊಂದಕ್ಕೆ, ೨-೩ ರೂಪಾಯಿಗಳು ಉದುರುತ್ತವೆ, ಮತ್ತು ಹೆಚ್ಚು ಹೆಚ್ಚು ಮೆಸೇಜುಗಳು ಬಂದಷ್ಟು, ಲಾಭ ಅವಕ್ಕೆ!
ಯಾವುದೋ ಒಂದು ಚಾನಲ್ಲು "ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ನಿಷೇಧ ಮಾಡೋದಕ್ಕೆ ನಿಮ್ಮ ಸಹಮತ ತಿಳಿಸಿ, ನಮಗೆ ಮೆಸೇಜು ಕಳ್ಸಿ ಅಂತ ಬೆಳಗ್ಗಿಂದ ಸಂಜೆ ವರೆಗೆ ಅರಚಿಕೊಂಡಿತು, ಮತ್ತು ಅದಕ್ಕೆ ೩೦-೪೦ ಸಾವಿರ ಮೆಸೇಜುಗಳೂ ಬಂದವು.(ಆ ಚಾನಲ್ಲೇ ಹೇಳಿಕೊಂಡದ್ದು) ಯಾವುದೋ ರೇಡಿಯೋ ಸ್ಟೇಷನ್ ಗೆ ಮೆಸೇಜು ಕಳ್ಸೋದಕ್ಕು, ಧೂಮಪಾನ ನಿಷೇಧಕ್ಕೂ ಏನು ಸಂಬಂಧ? ಅದರ ಬದಲಾಗಿ ಅದಕ್ಕೆ ಸಂಬಂಧಿತ ಅದಿಕಾರಿಗಳನ್ನೋ , ಸಚಿವರನ್ನೋ ಕರೆಸಿ ಮಾತನಾಡಿಸಿದ್ದರೆ?!
ಶಾಪಿಂಗ್ ಕಾಂಪ್ಲೆಕ್ಸ್ ಗೆ ಹೋಗೋದಕ್ಕೆ ಕೂಪನ್ನುಗಳು, ಸಿನಿಮಾ ಟಿಕೇಟುಗಳು," couple passes" ಇವುಗಳೇ ಈ ಎಫ್ ಎಮ್ ಗಳ ಕೊಡುಗೆ! ಜನರನ್ನ ಮತ್ತೊಂದಿಷ್ಟು ಕೊಳ್ಳುಬಾಕರನ್ನಾಗಿ ಮಾಡುವ ಹುನ್ನಾರವಿದೆಯೇ ಹೊರತು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಸುವ ಆಶಯವೇ ಇವುಗಳಿಗಿದ್ದಂತಿಲ್ಲ! ಎಲ್ಲೋ ರಾಜ್ಯೋತ್ಸವಕ್ಕೋ ಇನ್ನಾವಾಗಲೋ ಸುಮ್ಮನೆ ಒಂದು ತಾಸಿನ ಮಟ್ಟಿಗೆ ಯಾರಾದರೂ ಸಾಹಿತೀನ ಕರಕೊಂಡು ಮಾತನಾಡಿಸೋದು ಬಿಟ್ಟರೆ, ವರ್ಷಪೂರ್ತಿ ಇವರಿಗೆ ಸಿನಿಮಾ ತಾರೆಯರೇ ಆರಾಧ್ಯ ದೈವಗಳು!
ಇನ್ನು ಇವುಗಳು ಮಾಡುವ ಕನ್ನಡ ಕೊಲೆಯ ಬಗ್ಗೆ ಮಾತಾಡೋಕೆ ಹೊರಟರೆ , ಈ ಜಾಗ ಸಾಕಾಗದು. ಅದರ ಬಗ್ಗೆ ಬೇರೆಯದಾಗೇ ಬರೆಯಬೇಕು!
ಬೆಂಗಳೂರಿನಾದ್ಯಂತ ಈಗ ಹೆಚ್ಚಿನ ಜನ ಈ ಎಫ್ ಎಮ್ ಗಳನ್ನ ಕೇಳುತ್ತಾರೆ. BMTC ಬಸ್ಸಿನ ಡ್ರೈವರಿಂದ ಹಿಡಿದು, ಜ್ಯೂಸಿನಂಗಡಿ ಹುಡುಗನ ವರೆಗೆ! ಸಾಫ್ಟ್ ವೇರ್ ಹುಡುಗರಿಂದ ತೊಡಗಿ ಮನೆಗೆಲಸದ ಹುಡುಗಿಯವರೆಗೆ! ಈ ಚಾನಲ್ಲುಗಳು ನಮ್ಮ ತನದ ಬಗ್ಗೆ, ನಾಡು ನುಡಿಯ ಬಗ್ಗೆ, ಸಾಹಿತ್ಯ - ಸಂಸ್ಕೃತಿಯ ಬಗ್ಗೆ ಕಾರ್ಯಕ್ರಮ ಮಾಡಿದ್ದಿದ್ದರೆ ಎಷ್ಟು ಸುಂದರವಾದ ಒಂದು ಜಾಲ ಹಬ್ಬಿದಂತಾಗುತ್ತಿತ್ತು, ಅಲ್ಲವೆ?! ಬಾಲಿಶತನದ ಕೆಲಸಕ್ಕೆ ಬಾರದ ಹಲುಬುವಿಕೆಗಳನ್ನ ಕಡಿಮೆ ಮಾಡಿ ಸ್ವಲ್ಪವಾದರೂ ಸಮಯವನ್ನ ದಿನದೆ ಬೇರೆ ಬೇರೆ ಹೊತ್ತು ಒಳ್ಳೆಯ , ಸದಭಿರುಚಿಯ ಕಾರ್ಯಕ್ರಮಗಳಿಗೆ ಮೀಸಲಿಟ್ಟಿದ್ದರೆ.. ( ಈಗ ಎಲ್ಲೊ ಒಂದೆರಡು ಕಾರ್ಯಕ್ರಮಗಳಿವೆ, ಅಂತಾದ್ದು) ಎಷ್ಟು ಚೆನ್ನಿತ್ತು!.

ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?!.

10 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

This article is very True.... it reflects the mindset of today's generation..... & also "HISTORY REPEATS" will be the best word to describe the intrest of people towards radio.......

Avani ಹೇಳಿದರು...

Nice article with reality review !

Sushrutha Dodderi ಹೇಳಿದರು...

ನೀನು ಗಮನಿಸಿದ ಅಂಶಗಳು ನೂರಕ್ಕೆ ನೂರು ಸತ್ಯ ನಿಧಿ. ನಮ್ಮ ಮನೆಗೆ (ಊರಿನಲ್ಲಿ) ಟಿವಿ ಬರುವ ಮುಂಚೆ ನಾವೆಲ್ಲಾ ರೇಡಿಯೋಗೇ ದಾಸರಾಗಿದ್ದೆವು. ಆಗ ಅದರಲ್ಲಿ ಬರುತ್ತಿದ್ದ ನಾಟಕಗಳು, ಚಲನಚಿತ್ರ ಧ್ವನಿವಾಹಿನಿಗಳು ನಮ್ಮ ನೆಚ್ಚಿನ ಕಾರ್ಯಕ್ರಮಗಳಾಗಿದ್ದವು. ಟಿವಿ ಬಂದು ರೇಡಿಯೋ ಮಾಧ್ಯಮವಂದು ತಿಂದು ಹಾಕಿತು ಅಂದುಕೊಳ್ಳುತ್ತಿರುವ ಹಾಗೇ, ಈಗ ಈ ಎಫ್ಫೆಮ್‍ಗಳು ದಾಳಿಯಿಟ್ಟು ಟಿವಿ ಹುಚ್ಚನ್ನು ಸಹ ಕಡಿಮೆ ಮಾಡುವಂತಿವೆ. ಮೂರೋ ನಾಲ್ಕೋ ಚಾನಲ್ಲುಗಳು ಇದ್ದಾಗ ಚೆನ್ನಾಗಿತ್ತು; ಈಗ ಯಾವ್ದನ್ನ ಕೇಳ್ಬೇಕು ಯಾವ್ದನ್ನ ಬಿಡ್ಬೇಕು ಅಂತಾನೇ ಗೊತ್ತಾಗಲ್ಲ. ಎಲ್ಲಾದ್ರಲ್ಲೂ ಅವೇ 'ಹಿಟ್'(?) ಹಾಡುಗಳು. ಅವನ್ನು tune ಮಾಡೋದಕ್ಕಿಂತ ಕಿವಿಗೆ rest ಕೊಡೋದೇ ಒಳ್ಳೇದು ಅನ್ಸುತ್ತೆ. ಒಂದರಲ್ಲೂ different ಆದ, ವಿಶೇಷವಾದ ಕಾರ್ಯಕ್ರಮ ಅಂತ ಇಲ್ಲ. ಕೆಲ government channelಗಳು ಇದ್ದಿದ್ದರಲ್ಲೇ ಒಂದಷ್ಟು ಸಾಹಿತ್ಯ, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ.

ಒಳ್ಳೆಯ ಲೇಖನಕ್ಕೆ ಅಭಿನಂದನೆಗಳು.

ಶ್ರೀನಿಧಿ.ಡಿ.ಎಸ್ ಹೇಳಿದರು...

ಸುಶ್,
"ಅವನ್ನು tune ಮಾಡೋದಕ್ಕಿಂತ ಕಿವಿಗೆ rest ಕೊಡೋದೇ ಒಳ್ಳೇದು ಅನ್ಸುತ್ತೆ"- ಅನ್ನೋ ಮಾತು ಸತ್ಯ ನೋಡು! ಈ ಎಫ್ ಎಮ್ ಗಳ ಹುಚ್ಚಾಟ ದ ಬರಿಯೋಕೆ ಹೊರಟರೆ ಥಾನುಗಟ್ಟಲೆ ಬರೀ ಬಹುದು ನೋಡು! ಇವತ್ ಬೆಳಗ್ಗೆ ಒಂದು ಚಾನಲಿನ RJ ಅನು ಪ್ರಭಾಕರ್ ಗೆ phone ಮಾಡಿ "ಬರ್ತ್ ಡೇ ಬಕ್ರಾ" ಮಾಡ್ತಾ ಇದ್ದ, ಪಾಪ ಅವಳು ಜ್ವರ ಅಂತ ಮನೇಲಿ ಮಲಗಿದ್ಲಂತೆ! ಅದ್ರೂ ಆಸಾಮಿ ಅವಳನ್ನ ಬಿಡೋಕೇ ತಯಾರಿಲ್ಲ!
ನಮ್ಮ ಬೆಂಗಳೂರಿಗರ ಕತೆ ಏನಾಗಿದೆ ಅಂದ್ರೆ, ಒಳ್ಳೆ ಕಾರ್ಯಕ್ರಮ ಬೇಕಾ ಅಂತ ಆಲೋಚ್ನೆ ಮಾಡೋಕೂ ಯಾರಿಗೂ ಸಮಯ ಇಲ್ಲ! ತೀರಾ ಬಾಲಿಶ, ಹಾಸ್ಯಾಸ್ಪದ ಕಾರ್ಯಕ್ರಮಗಳಿಂದಲೇ ತೃಪಭಾವ ಹೊಂದಿ , ಆರಾಮಾಗಿದ್ದಾರೆ.ಏನು ಮಾಡೋಣ!

Annapoorna Daithota ಹೇಳಿದರು...

ಲೇಖನ ಚೆನ್ನಾಗಿದೆ.... ಸತ್ಯ ಇದೆ...

ಜನಸಾಮಾನ್ಯರಿಗೆ, ಅದರಲ್ಲೂ ಬಸ್‍ನಲ್ಲಿ ಕೇಳೋರಿಗೆ, ಕೆಲಸ ಮಾಡೋರಿಗೆ ಎಲ್ಲ, ಗಂಭೀರ ವಿಷಯಗಳನ್ನು ಕೇಳಲು, ಚಿಂತಿಸಲು ಕಷ್ಟವಾದ್ದರಿಂದ, ಜನ ಇಂಥದ್ದನ್ನ, ಅಂದ್ರೆ ಜಾಸ್ತಿ ತಲೆ ಉಪಯೋಗಿಸುವ ಅಗತ್ಯವಿಲ್ಲದುದನ್ನು ಇಷ್ಟಪಡುತ್ತಾರೆ, ಮತ್ತು ಎಂದಿನಂತೆ (ಇದು ಶೋಚನೀಯವಾದರೂ) `ಇನ್ನೊಬ್ಬರ ವೈಯುಕ್ತಿಕ' ವಿಚಾರಗಳೇ ಯಾವತ್ತೂ ಜನಕ್ಕೆ ಮುದ ಕೊಡುತ್ತೆ.... .

ಹಾಗಾಗಿ ಲೈಟ್ ಮ್ಯೊಸಿಕ್ಸ್ ಪ್ರಸಾರ, ಬರ್ತ್‍ಡೇ ಬಕ್ರಾ ಮುಂತಾದುವು ಇದ್ದರೂ, ನೀವು ಹೇಳಿದಂತೆ ಕೆಲವೊಂದು ಮೌಲ್ಯವಿರುವ ವಿಷಯಗಳ ಪ್ರಸಾರ ಮಾಡಿದರೆ ಎಲ್ಲರಿಗೂ ಸಂತೋಷವಾಗುತ್ತದೆ. (ಬರೀ `ತೂಕ' ವಿರುವ ವಿಷಯಗಳಾದರೆ ಎಲ್ಲರೂ ಕೇಳಲಿಷ್ಟಪಡುವುದಿಲ್ಲ....)
ಇದು ನನ್ನ ಅನಿಸಿಕೆ.....

ಅನಾಮಧೇಯ ಹೇಳಿದರು...

your blog page is very difficult to read because of the contrast & heavy background image

Unknown ಹೇಳಿದರು...

ನೀನು ಹೆಳಿದ್ದು ಸತ್ಯ. ಆದ್ರೆ ನೀನು ಅರ್ಮತವರ್ಷಿಣಿ ಮತ್ತೆ ಜ್ಞಾನಭಾರತಿ ಬಗ್ಗೆ ಹೇಳಲ್ಲೆ. ಆವು ೨ ಚಾನಲ್ಲುಗಳು ನಿಯಮಿತ ಸಮಯಾವಕಾಶದಲ್ಲಿ ಒಳ್ಳೇ ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆ.

ಶ್ರೀನಿಧಿ.ಡಿ.ಎಸ್ ಹೇಳಿದರು...

ಅನಾ,
ತಮ್ಮ ಮಾತುಗಳು ನಿಜ,ಹಗುರಾದ ವಿಷಯಗಳ ಬಗ್ಗೆ ಕೇಂದ್ರೀಕರಿಸ ಹೋಗಿ "ಗುಣಮಟ್ಟ" ಪಾತಾಳಕ್ಕೆ ಸಾಗುತ್ತಿದೆ!


ಗಿರಿ,
ಹೌದು,ಆ ಚಾನಲುಗಳ ಬಗ್ಗೆ ಸರಿಯಾಗಿ ನಾನು ಪ್ರಸ್ತಾಪಿಸಿಲ್ಲ, ಉದ್ದ ಲೇಖನವಾಗಬಹುದೆಂಬ ಭಯವಿತ್ತು!

Manjunatha Kollegala ಹೇಳಿದರು...

ನಿಮ್ಮ ಲೇಖನ ನೂರಕ್ಕೆ ನೂರು ಸತ್ಯ. ಹಿಂದೆ ಆಕಾಶವಾಣಿ ಇತ್ತು, ಸರ್ಕಾರದ ಮುಖವಾಣಿಯೆಂದು ದೂರುಗಳಿದ್ದರು, ನಮ್ಮ ಸಂಸ್ಕೃತಿ heritageನ ಕಾಯ್ದಿಟ್ಟುಕೊಳ್ಳುವಲ್ಲಿ, ಬೆಳೆಸುವಲ್ಲಿ ಅದರ ಕೊಡುಗೆ ಅಪಾರ. ಅನಂತರ ಬಂದ ದೂರದರ್ಶನದ ಹಾವಳಿಗೆ ಆಕಾಶವಾಣಿ ನಿಧಾನವಾಗಿ ತೆರೆಮರೆ ಸರಿಯಿತು ಎಂದು ನಾವು ಹಲುಬುತ್ತಿರುವಾಗಲೇ TV ವಿವಿಧ channelಗಳ ಹಾವಳಿ, ಇದ್ದ ರಾಷ್ಟ್ರೀಯ ದೂರದರ್ಶನವೇ ಎಷ್ಟೋ ವಾಸಿ ಎನ್ನಿಸಿಬಿಟ್ಟಿತು. ಇನ್ನೀಗ FM Channelಗಳ ಹಾವಳಿ.

ಮುಂಚೆ ಇದ್ದ ರೇಡಿಯೋ ಟಿವಿ ಸಂಸ್ಥೆಗಳಿಗೂ ಇವಕ್ಕೂ ನನಗೆ ಕಾಣುವ ದೊಡ್ಡ ವ್ಯತ್ಯಾಸವೆಂದರೆ, ವ್ಯಾಪಾರಿ ದೃಷ್ಟಿ. ಇವುಗಳ ಆದಾಯದ ಮೂಲ ಜಾಹೀರಾತು/ಪ್ರಾಯೋಜಕರು. ಅವರ ಬೇಳೆ ಬೇಯಬೇಕಾದರೆ ಜನಕ್ಕೆ ಹೊಸತು HOT ಕಾರ್ಯಕ್ರಮಗಳನ್ನು ಕೊಡಬೇಕು. ದಿನಾ ಅದೇ ಅಳುಮುಂಜಿ ಸಾ ಪಾ ಸಾ ಸಂಗೀತ/ಸಾಹಿತ್ಯಗಳನ್ನು ಬಿತ್ತರಿಸಿದರೆ ಯಾರು ಕೇಳಬೇಕು, ಇದು ಈ ಕಂಪನಿಗಳ ಧೋರಣೆ. ಒಳ್ಳೆಯದರ ಅನುಪಸ್ಥಿತಿಯಲ್ಲಿ ಕಳಪೆಯೇ ಸರ್ವಶ್ರೇಷ್ಟ, ಅಲ್ಲವೇ? ಹೀಗಾಗಿ ಇದನ್ನೇ ಕೇಳಿ ಕೇಳಿ ನಮ್ಮ ಕಿವಿಗಳೂ ಇದಕ್ಕೆ ಒಗ್ಗಿ ಹೋಗುವುವು

Suma Udupa ಹೇಳಿದರು...

Nanagu comapny bus alli baruvaga radio keelidaaga hege annisuttade ... Namma FM channelgalu dinada swalpa gante galaadaru buddi belasuva karyakrama needabeeku