experience ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
experience ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮಾರ್ಚ್ 27, 2007

ಕುಡುಕರ್ ಸಾವಾಸ ಅಲ್ಲ!

ಏನೇ ಹೇಳಿ, ಈ ಕುಡುಕರಿದಾರಲ್ಲ, ಅವರ ಸಹವಾಸ ಮಾತ್ರ ಅಲ್ಲ ನೋಡಿ. ಅವರಿಗೆ ಬೈಯೋ ಹಾಂಗೂ ಇಲ್ಲ, ಬೈದ್ರೆ ಅರ್ಥ ಆಗೋದೋ ಇಲ್ಲ!

ನಾನು ಮತ್ತು ದಯಾನಂದ ಒಂದಿನ ರಾತ್ರೆ ೧೦ ಗಂಟೆ ಸುಮಾರಿಗೆ ಯಾರದೋ ಮನೆಗೆ ಊಟಕ್ಕೆ ಹೋಗಿ ವಾಪಸ್ ಬರುತ್ತಿದ್ದೆವು. ದಯಾನಂದ ಬೈಕ್ ಹೊಡೀತಾ ಇದ್ದ. ಅದೂ ಇದು ಹರಟೆ ಹೊಡ್ಕೊಂಡು ಅರಾಮಾಗಿ ಬರ್ತಾ ಇದ್ವಿ. ರಸ್ತೆ ಬೇರೆ ಖಾಲಿ ಇತ್ತು. ಶಂಕರ್ನಾಗ್ ಸರ್ಕಲ್ ನ ಅರಳೀ ಮರಕ್ಕೆ ಒಂದು ಸುತ್ತು ಹೊಡೆದು ಮುಂದೆ ಬಂದ್ರೆ, ನಮ್ಮಿಂದ ಒಂದು ೧೦ ಮೀಟರ್ ದೂರದಲ್ಲಿ ಒಬ್ಬ ಕುಡುಕ ಮಹಾಶಯ, ತಾನು ಜೋಲಿ ಹೊಡೆಯುತ್ತ, ತನ್ನ ಜೊತೆ ಇರುವ ಲಡಕಾಸಿ ಸೈಕಲ್ಲನ್ನೂ ಕೂಡ ಹೇಗೋ ಬ್ಯಾಲೆನ್ಸ್ ಮಾಡುತ್ತಾ, ನಡು ರಸ್ತೆಯಲ್ಲಿ ಒದ್ದಾಡುತ್ತಿದ್ದ. ನಾವೇನಾದರೂ ಅದೇ ವೇಗದಲ್ಲಿ ಹೋಗಿದಿದ್ದರೆ ಅವನಿಗೇ ಗುರಿಯಿಟ್ಟು ಢಿಕ್ಕಿ ಹೊಡೆಯೋದು ಖಾತ್ರಿಯಾಗಿತ್ತು. ದಯಾ ಅನಿವಾರ್ಯವಾಗಿ ಬ್ರೇಕ್ ಹಾಕಿದ, ನಾವಿಬ್ಬರೂ ಬಿದ್ದೆವು, ಬೈಕ್ ಸಮೇತ.

ನಾವು ಎದ್ದು, ಬೈಕನ್ನೂ ಎಬ್ಬಿಸಿ, ಧೂಳು ಕೊಡವಿಕೊಂಡು ನಿಲ್ಲುವ ಹೊತ್ತಿಗೆ ಆ ಕುಡುಕ ನಮ್ಮ ಬಳಿಗೇ ಬಂದ, ಅವನ ತಗಡು ಸೈಕಲ್ ಜೊತೆಗೆ, ಮತ್ತು ಬಹಳ ಸವಿನಯದಲ್ಲಿ ಕೇಳಿದ,

"ನಾಯಿ ಅಡ್ಡ ಬಂತಾ ಸಾರ್?, ಭಾಳ ಬೇವರ್ಸಿಗಳು ಈ ನಾಯಿ ಮುಂಡೇವು, ಏನ್ ಮಾಡೋದು ಹೇಳಿ..
ಚೇ, ಎಲ್ಲಾದ್ರು ಪೆಟ್ಟಾಯ್ತಾ?"

ನಮಗೆ ಏನು ಉತ್ತರಿಸಬೇಕೆಂದೇ ತಿಳಿಯಲಿಲ್ಲ!

ಶುಕ್ರವಾರ, ಮಾರ್ಚ್ 02, 2007

ಎತ್ತಣ ಮಾಮರ..

ನನ್ನ ಹಳೆಯ ಕಂಪನಿಯಲ್ಲಿದ್ದಾಗ ನಡೆದ ಘಟನೆ.

ಒಂದು ದಿನ ಮಧ್ಯಾಹ್ನ, ಯಾವ್ದೋ ನಂಬರ್ ಗೆ ಕಾಲ್ ಮಾಡಿದೆ. ಎಂದಿನಂತೆ ಕೆಲಸ ಖಾಲಿ ಇತ್ತು ( ಸಾಫ್ಟ್ ವೇರ್ ಉದ್ಯಮದಲ್ಲಿ ಯಾವಾಗಲು ಕೆಲಸಗಳು ಖಾಲಿ ಇರುತ್ತವೆ, ಬಿಡಿ). ರಿಂಗ್ ಆಯಿತು. ಫೋನ್ ಆ ಕಡೆಯಿದ್ದದ್ದು ನಡುಗುವ ದನಿ.
"ಸರ್, ಕ್ಯಾನ್ ಇ ಸ್ಪೀಕ್ ಟು ......"
"ಯಾರಪ್ಪಾ ಮಾತಡೋದು?" ಅಚ್ಚ ಕನ್ನಡದಲ್ಲಿ ಉತ್ತರ ಬಂತು.

"ನಾನು ಶ್ರೀನಿಧಿ ಅಂತ, ಒಂದು ಕಂಪನಿಯಿಂದ ಕಾಲ್ ಮಾಡ್ತಾ ಇದೀನಿ. ಒಂದು ಕೆಲಸದ ವಿಚಾರವಾಗಿ ಇಂತವರ ಬಳಿ ಮಾತಾಡಬೇಕಿತ್ತು ..".

"ಹಮ್, ನಾನು ಅವನ ತಂದೆ ಕಣಪ್ಪಾ" ಅಂದ್ರು.

ಸರ್ ಹಾಗಾದರೆ ನಿಮ್ಮ ಮಗ ಬಂದ ಮೇಲೆ ಒಂದು ಫೋನ್ ಮಾಡೋಕೆ ಹೇಳಿ ಅಂತಂದು, ಮಾತು ಮುಗಿಸುವವನಿದ್ದೆ. ಅವರು,
"ಒಂದು ನಿಮಿಷ ..."ಅಂದ್ರು.

"ನಿಮಗೆ ಈ ನಂಬರ್ರು ಹೇಗೆ ಸಿಕ್ಕಿತು?"- ಅವರ ಬಯೋ ಡಾಟದಲ್ಲಿ ಇತ್ತು. ಅದರಿಂದ ತಗೊಂಡೆ"
"ಅದರಲ್ಲಿ ಬೇರೆ ವಿಳಾಸ ಇದೆಯಾ ನೋಡ್ತೀರಾ?"- ನನಗೆ ಅರ್ಥವಾಗಲಿಲ್ಲ. ಹಾ, ಏನು ಅಂದೆ. ಸಂಬಂಧ ಪಡದವರಲ್ಲಿ ಮಾತು ಲಂಬಿಸಲು ಕಿರಿಕಿರಿ ಅನ್ನಿಸುತ್ತದೆ. ದಿನಕ್ಕೆ ಇಂತಹ ಹಲವು ಫೋನ್ ಮಾಡಬೇಕು.

"ನೀನು ನಂಗೆ ಮಗ ಇದ್ದ ಹಾಗೆ ಕಣಪ್ಪ, ವಿಷಯ ಹೇಳ್ತೀನಿ ಕೇಳು, ನನ್ನ ಮಗ, ಅವರ ಅಮ್ಮನ ಹತ್ತಿರ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾನೆ, ಹ್ಯಾಗಾದರೂ ಹುಡುಕಿ ಕೊಡೋಕೆ ಆಗತ್ತಾ?, ಮಗ ಬೆಳೆದು ದೊಡ್ಡವನಾದ ಮೇಲೆ ಏನೆಲ್ಲ ಕಷ್ಟ ಪಡಬೇಕು ನೋಡು.."

ನನಗೆ ಏನು ಹೇಳಲೂ ತೋಚಲಿಲ್ಲ. "ಆಯಿತು ಸಾರ್ ನೋಡ್ತೀನಿ, ಪ್ರಯತ್ನ ಪಡ್ತೀನಿ" ಅಂದೆ , ನನ್ನ ಫೋನ್ ನಂಬರನ್ನ ಆ ಹಿರಿಯರಿಗೆ ಕೊಟ್ಟೆ.

"ನಿನಗೆ ಹೇಗಾದರೂ ಅವನನ್ನ ಕಾಂಟಾಕ್ಟ್ ಮಾಡೋಕೆ ಆಗಬಹುದು, ಈ ನಂಬರು ಸಿಕ್ಕಿದೆ ನಿಮಗೆ, ಬೇರೆ ನಂಬರು ಕಂಡು ಹಿಡಿಯೋದು ಕಷ್ಟವಲ್ಲ ಅಲ್ವೇನೋ " ಅಂದರು. ಏನು ಹೇಳೋಣ ಅವರಿಗೆ?

"ನನ್ನಿಂದ ಆದಷ್ಟು ಪ್ರಯತ್ನ ಮಾಡ್ತೀನಿ ಸಾರ್ ..", ಅಂತೆಲ್ಲ ಏನೇನೋ ಸಮಾಧಾನ ಮಾಡಿ ಫೋನ್ ಇಟ್ಟೆ. ಹೇಗಪ್ಪಾ ಇವರ ಮಗನನ್ನ ಹುಡುಕುವುದು?, ಅಂತ ಅಲೋಚನೆ ಶುರು ಮಾಡಿದೆ, ಏನೋ ಒಂದು ಸಾಹಸ ಕಾರ್ಯ ಮಾಡುತ್ತೇನೆ ಅನ್ನುವ ಖುಷಿ ಹುಟ್ಟಿಕೊಂಡಿತು.

ಒಳ್ಳೆಯ ಉಪಾಯವೂ ಹೊಳೆಯಿತು. ನಾನೂ, ಪ್ರವೀಣ ಎಲ್ಲ ಮಾತಾಡಿ ಒಂದು ಪ್ಲಾನು ರೆಡಿ ಮಾಡಿ, ಆ ಪುಣ್ಯಾತ್ಮನಿಗೆ, ಭಯಂಕರ ಆಮಿಷ ಹುಟ್ಟುವ ಹಾಗೆ, ಒಂದು ಮೇಲ್ ಮಾಡಿದೆವು. ಒಳ್ಳೆಯ ಕಂಪನಿ, ಒಳ್ಳೆಯ ಸಂಬಳ ಹಾಗೇ ಹೀಗೆ ಅಂತ . ಒಟ್ಟಿನಲ್ಲಿ ಆ ಈ- ಮೇಲ್ ನೋಡಿಯೇ ಆತ ನಮ್ಮನ್ನ ಸಂಪರ್ಕಿಸಬೇಕು , ಆ ತರ.

ದಿನಾ ನನಗೆ ಅವನ ಮೇಲ್ ಬಂತಾ ಅಂತ ನೋಡುವುದೇ ಕೆಲಸ. ಒಂದು ವಾರದ ಮೇಲೆ ರಿಪ್ಲೈ ಬಂತು!ಅದರಲ್ಲಿ ಇನ್ಯಾವುದೋ ನಂಬರನ್ನ ಕೊಟ್ಟಿದ್ದ ಅವನು. ಅದಕ್ಕೆ ಫೋನ್ ಹೊಡೆದು ಮಾತಾಡಿಸಿದೆ. ಎಲ್ಲಿದ್ದೀಯಾ ಅಂದಿದ್ದಕ್ಕೆ, "ಬೆಂಗಳೂರು"ಅನ್ನುವ ಉತ್ತರವೇ ಬಂತು. ಅವನ ಹತ್ತಿರ ಮಾತಾಡಿ ಮುಗಿಸಿದ್ದೇ, ಅವರ ತಂದೆಗೆ ಫೋನಿಸಿ, ಈ ಹೊಸ ನಂಬರು ಕೊಟ್ಟೆ. ನಾಲ್ಕು ದಿನ ಬಿಟ್ಟು ಅವರು ನನಗೆ ಫೋನ್ ಮಾಡಿ "ಮಗ ಮನೆಗೆ ಬಂದ ಕಣಪ್ಪ", ಅಂತ ತುಂಬಿದ ಕಂಠದಿಂದ ಹೇಳಿದರು. ಅವರು ಅವನ ಬಳಿ ಏನು ಮಾತಾಡಿದರೋ ನನಗೆ ಹೇಳಲಿಲ್ಲ, ನಾನು ಕೇಳಲೂ ಇಲ್ಲ.

ನಾನು ಒಬ್ಬ ಕ್ಯಾಂಡಿಡೇಟು ಕಳೆದುಕೊಂಡಿರಬಹುದು... ಇರ್ಲಿ ಬಿಡಿ ಪರ್ವಾಗಿಲ್ಲ! ಅಲ್ವಾ?

ಶುಕ್ರವಾರ, ಫೆಬ್ರವರಿ 23, 2007

ನೋಟೀಸು ಪಿರಿಯಡ್ಡು ಮತ್ತು ಉರ್ಲು !

ನಾನು ಸಾಫ್ಟ್ ವೇರ್ ಕಂಪನಿಯ hr ವಿಭಾಗದಲ್ಲಿರುವವನು. ದಿನಾ ಒಬ್ಬರಲ್ಲ ಒಬ್ಬರ ಜೊತೆ ಫೋನಿನಲ್ಲಿ ಮಾತಾಡೋದು, ಸಂದರ್ಶನಗಳನ್ನ schedule ಮಾಡೋದು ಇದ್ದಿದ್ದೇ. ದಿನಾ ಒಂದೇ ತೆರನಾದ ಕೆಲ್ಸ ಆದರೂ, ಏನಾದರೂ ವಿಶೇಷ ಘಟಿಸಿಯೇ ಘಟಿಸುತ್ತದೆ.

ಇಂಟರ್ವ್ಯೂ ಗೆ ಬಾರದ ಕ್ಯಾಂಡಿಡೇಟುಗಳು, ನಾವು ಫೋನಿಸಿದ ಕೂಡಲೇ, ತಮಗೆ accident ಆಗಿ ಬಿಟ್ಟಿದೆಯೆಂದೂ, ಸಿಕ್ಕಾಪಟ್ಟೇ ಪೆಟ್ಟಾಗಿದೆಯೆಂದೂ ಮರುಕ ಹುಟ್ಟಿಸುವ ಭಾಷೆಯಲ್ಲಿ ಮಾತನಾಡಲು ಶುರು ಮಾಡಿಕೊಳ್ಳುತ್ತಾರೆ. ಎಂತವನ ಹೃದಯವೇ ಆದರೂ ಕರಗಲೇ ಬೇಕು! "ಸಾರ್, ಸೀವಿಯರ್ ವೂಂಡ್ ಸಾರ್ , ಸಾರಿ ಸಾರ್ " , "ಸರ್ ಐ ಆಮ್ ನಾಟ್ ಏಬಲ್ ಟು ವಾಕ್ ಸರ್, ಐ ವಿಲ್ ಡೆಫೆನೆಟ್ಲ್ಲಿ ಮೇಕ್ ಇಟ್ ಟುಮಾರೋ" ಅಂತೆಲ್ಲ ವದರುತ್ತಾರೆ. ಅವನಿಗೆ ಅದು ಮೊದಲ ಆಕ್ಸಿಡೆಂಟು! ಪಾಪ.. ನಮ್ಮ ಕಿಸೆಯೊಳಗೆ ಇಂತಹ ೫೦- ೬೦ ಆಕ್ಸಿಡೆಂಟುಗಳು ಈಗಾಗಲೇ ಇರುತ್ತವೆ. ಇಂಟರ್ವ್ಯೂ ಗೆ ಬರಲಾಗದ ಶೇಕಡಾ ೭೫% ಜನಕ್ಕೆ ಆಕ್ಸಿಡೆಂಟೇ ಆಗಿರುವುದು ವಿಶೇಷ. ಮತ್ತೆ ಕೆಲ ಜನರ ಸಂಬಂಧಿಕರಿಗೆ ಕಾಯಿಲೆಯಾಗಿರುತ್ತದೆ.... ನಮ್ಮ ಪ್ರವೀಣನೋ, ಸಂತೃಪ್ತಿಯೋ ಫೋನಿಟ್ಟು "ಆಕ್ಸಿಡೆಂಟು" ಅಂದರೆ ಸಾಕು, ಮುಂದೇನೂ ಯಾರೂ ಹೇಳಬೇಕಾಗಿಯೇ ಇಲ್ಲ! ಬಿದ್ದು ಬಿದ್ದು ನಗುವುದೇ ಕೆಲಸ. ನಾನು, ಪ್ರವೀಣ ಇಬ್ಬರೂ ೧೦೦ ಆಕ್ಸಿಡೆಂಟಾದ ಮೇಲೆ ಒಂದು ಸಮಾರಂಭ ಮಾಡಬೇಕು ಅಂತ ತೀರ್ಮಾನಿಸಿದ್ದೇವೆ!

ಮೊನ್ನೆ ಒಬ್ಬ ಪುಣ್ಯಾತ್ಮನಿಗೆ ಫೋನ್ ಮಾಡಿದ್ದೆ "ನಿನ್ನ ಈಗಿನ ಸಂಬಳ ಎಷ್ಟು?, ಎಷ್ಟು ಬೇಕು ಎಲ್ಲ ಕೇಳಿಯಾದ ಮೇಲೆ", "What is your notice period" ಅಂದೆ. ( ಬೇರೆ ಕೆಲಸಕ್ಕೆ ಸೇರಲು ಎಷ್ಟು ದಿನ ಬೇಕು ಅಂತ) ಇದು ಎಲ್ಲ ಕಡೆಯೂ, ಎಲ್ಲರೂ ಕೇಳುವ ಅತ್ಯಂತ ಮಾಮೂಲಿ ಪ್ರಶ್ನೆ. ಅದಕ್ಕಾತ," from morning 9 to evening 6pm sir" ಅಂದು ಬಿಡಬೇಕೆ! ನಗು ತಡೆದುಕೊಂಡು , "ನೋ ನೋ, i am asking about your notice period" ಅಂತ ಮತ್ತೊಮ್ಮೆ ಬಿಡಿಸಿ ಹೇಳಿದೆ.. "sometime it varries sir, from 9am till 8-9pm sir", "i am ready to work for overtime".. ಆಹ್! ನಂಗೆ ಬರುವ ನಗು ತಡೆದುಕೊಳ್ಳಲಾಗದೆ, "i will call you later" ಅಂತಂದು ಫೋನ್ ಇಟ್ಟೆ.

ಒಂದಿನ ಬೆಳಗ್ಗೆ ಯಾರೋ ಒಬ್ಬಾತ ,ಫೋನ್ ಮಾಡಿ " ನಿಮ್ಮ ಕಂಪನಿಯ ಉರ್ಲ್ ಕೊಡಿ"ಅಂದ! ಅರೇ, ನಮ್ಮ ಕಂಪನಿ ಸಾಫ್ಟ್ ವೇರ್ ಬಿಟ್ಟು ನೇಣಿನ ಹಗ್ಗ ತಯಾರ್ ಮಾಡೋದು ಯಾವಾಗ ಶುರು ಮಾಡಿತಪ್ಪ ಅಂತ ಅಂದುಕೊಂಡು "ಸಾರಿ, i did'nt get u" ಅಂದೆ. ಅವನೋ ಮತ್ತೆ ಮತ್ತೆ " please give your ಉರ್ಲ್" ಅಂತಿದಾನೆ. ಸ್ವಲ್ಪ ಹೊತ್ತಿನ ಮೇಲೆ ಗೊತ್ತಾಯ್ತು, ಅವನು ಕೇಳಿದ್ದು "url" ಅಂತ. ಯು ಆರ್ ಎಲ್ ನ ಅವನು "ಉರ್ಲ್" ಮಾಡಿ ಬಿಟ್ಟಿದ್ದ!

ಮತ್ತೆ ಯಾರದೋ ಫೋನ್ ಬರ್ತಿದೆ, ಯಾರಿಗೆ ಏನು ಬೇಕೋ, ಎಲ್ಲಿ ಯಾರಿಗೆ ಆಕ್ಸಿಡೆಂಟಾಯ್ತೋ...

ಗುರುವಾರ, ಫೆಬ್ರವರಿ 08, 2007

ಹೀಗೊಂದು ಪ್ರವಾಸದ ಕಥೆ.

ಬಿದಿರ ಮಟ್ಟಿಗಳನ್ನ ದಾಟಿ ಅಲ್ಲಿಗೆ ಬಂದು ನಿಂತಾಗ , ನಡು ಮಧ್ಯಾಹ್ನ ೨ ಗಂಟೆ. ಹೊಳೆ ದಾಟಿ ಆ ಹಳ್ಳಿಗೆ ಹೋಗಬೇಕೆಂದರೆ ಗಂಟಲು ಹರಿದು ಹೋಗುವ ಥರಾ ಕಿರುಚಬೇಕು ಬೇರೆ. ಹೊಟ್ಟೆ ತುಂಬಾ ಊಟ ಆಗಿದ್ದರಿಂದ ಏನೂ ತೊಂದರೆ ಆಗಲಿಲ್ಲ! ಅರ್ಧ ತಾಸಿನ ಪ್ರಯತ್ನ, ನಾನೂ, ಅನಾ, ಡೀನು ಎಲ್ಲಾ ಬೇರೆ ಬೇರೆ ವಿಧಾನದಲ್ಲಿ ಕಿರುಚಿದೆವು! ಗೋವಿಂದ ರಾಜ್ ಅಂತೂ "ಮಾದಾ, ಕೆಂಚಾ" ಅಂತೆಲ್ಲ ಕರೆದರು, ಆ ಹೆಸರಿನವರು ಖಂಡಿತಾ ಅಲ್ಲಿರುತ್ತಾರೆ ಎಂಬ ಭರವಸೆಯಲ್ಲಿ. ಅಂತೂ ಮೊದಲಿಗೆ ದೂರದಲ್ಲೊಂದು ನಾಯಿ ಕಂಡಿತು, ನಾಯಿಯ ಬೆನ್ನ ಹಿಂದೇ ಮನುಷ್ಯಾಕೃತಿಯೂ ಬಂತು. ಆ ಆಕೃತಿಯ ಹೆಸರು ಕೃಷ್ಣ ಅಂತ ಆಮೇಲೆ ಗೊತ್ತಾಯ್ತು. ಆ ಜೀವ, ಆ ದಂಡೆಯಲ್ಲಿ ಕಟ್ಟಿದ್ದ ದೋಣಿಯೊಂದನ್ನು ಬಿಚ್ಚಿ, ಮೆಲ್ಲನೆ ನಮ್ಮ ತೀರದತ್ತ ಹುಟ್ಟು ಹಾಕತೊಡಗಿತು.


ಹಳೇ ಮರದ ದೋಣಿ ಅದು. ನಾವಾರೂ ಜನರೂ ಕಷ್ಟ ಪಟ್ಟು ಕೂತಾಯ್ತು. ಆತ ಹೇಳುತ್ತಿದ್ದ, "ನಮ್ಮರೇ ಆದ್ರೆ ೧೫ ಜನ ಹಾಕತ್ ನಾವ್" ಅಂತ! ಆ ಇರುಕಲು ದೋಣಿ ಅತ್ತಿತ್ತ ಸ್ವಲ್ಪ ಅಲುಗಾಡಿದರೂ ಇನ್ನೇನು ಮುಳುಗೇ ಹೋಗುತ್ತೇನೋ ಅನ್ನುವಷ್ಟು ವಾಲಾಡುತ್ತಿತ್ತು ಬೇರೆ. ಅಂತೂ ಇಂತೂ ಆ ದಡಕ್ಕೆ ಹೋಗಿ ಉಸಿರು ಬಿಟ್ಟಾಯ್ತು.

ಆಹ್! ಎಂತ ಸುಂದರ ತಾಣ ಇದು! ಸುತ್ತುವರಿದ ಗುಡ್ಡಗಳ ಮಧ್ಯೆ, ಒಂದು ಪುಟ್ಟ, ಶಾಂತ ಊರು. ಮೂವತ್ತು ಮನೆಗಳಿವೆ, ಹೆಚ್ಚೆಂದರೆ. ದೋಣಿ ಕೃಷ್ಣ ನಮಗೆ ದಾರಿ ತೋರಿಸಿದ, ಊರೊಳಗೆ ಹೋಗಲು. ಮುಳುಗಡೆ ಊರಲ್ಲಿ ಬದುಕುವ ಕಷ್ಟಗಳ ಬಗ್ಗೂ ಹೇಳಿದ. 'ಒಂದ್ ಕಟ್ ಬೀಡಿಗೆ ೧೦ ಕಿಲೋಮೀಟರ್ ನಡೀಬೇಕು" ಅನ್ನೋದು ಅವನ ಬೇಜಾರು.



ಮೂರು ಸುತ್ತಲೂ ನೀರು, ಇನ್ನೊಂದು ಕಡೆ ನಿರ್ಭಂದಿತ ಪ್ರದೇಶ. ೨ ದಿನಗಳ ಪ್ರವಾಸಕ್ಕೆ ಹೋಗುವ ನಮಗೆ ಬಹಳ ಸಂತಸ ತರುವ ತಾಣ ಇದು.. ಎಲ್ಲೇ ಕಣ್ಣು ಹಾಯಿಸಿದರೂ ಹಸಿರು, ಹರಿಯೋ ನೀರು, ದನ ಕರು, ಗದ್ದೆ.. ಒಳ್ಳೇ ಕಥೆಗಳಲ್ಲಿ ಬರುವ ಊರಿನಂತೇ ಇದೆ . ಆದರೆ ಪಾಪ, ಅಲ್ಲಿರುವವರ ಪಾಡು ಹೇಳ ತೀರದು. ಏನೇ ಬೇಕಾದರೂ ಕಿಲೋಮೀಟರುಗಟ್ಟಲೇ ನಡೀಬೇಕು. ಇನ್ನು ಹೆಚ್ಚು ದಿನ ಇಲ್ಲ ಅವರ ಕಷ್ಟ, ಅದು ಬೇರೆ ವಿಚಾರ.

ನಮ್ಮನ್ನ ಆ ಊರಿನ ವ್ಯಕಿಯೊಬ್ಬರು ಅಲ್ಲೇ ಇರುವ ಜಲಪಾತದ ಕಡೆಗೆ ಹೋಗಲು ಸಹಕರಿಸಿದರು. ಅವರ ಸಂಬಂಧಿಕರ ಮನೆಯಲ್ಲೇ ನಮ್ಮ ಬ್ಯಾಗುಗಳನ್ನ ಇಟ್ಟು ಜಲಪಾತದ ಕಡೆ ಹೊರಟದ್ದಾಯಿತು ನೀರು ಕುಡಿದು, ದಣಿವಾರಿಸಿಕೊಂಡು. ಪ್ರಕೃತಿ ಇಲ್ಲೇ ಮನೆ ಮಾಡಿದ್ದಾಳೆ, ತನ್ನ ಸಂಸಾರ ಸಮೇತ. ಯಾಕೋ ಒಂದು ನಿಗೂಢತೆ ಇದೆ ಈ ಜಾಗದಲ್ಲಿ ಅಂತ ನನಗನ್ನಿಸಿತು. ದಟ್ಟ ಕಾಡು, ಆದರೂ ಜಲಪಾತಕ್ಕೆ ಸಾಗುವ ದಾರಿ ಸುಗಮವಾಗೇ ಇದೆ.



ಅರುಣ, ಸುಬ್ಬಿ ಮತ್ತೆ ಗೋವಿಂದ ರಾಜು ಹಿಂದೇ ಉಳಿದರು. ಗೋವಿಂದ ರಾಜು ವಾರ್ನಿಂಗು ಬೇರೆ, "come back, ಲೇಟ್ ಆದ್ರೆ ಕಷ್ಟ" ಅಂತ. ಅವರ ಬಳಿ ಆಯ್ತು ಸಾರ್ ಅಂತಲೇ ಹೇಳಿ ಮುನ್ನಡೆದದ್ದಾಯ್ತು, ನಾನು, ಡೀನು, ಅನಾ. ಜಲಪಾತದ ಪಾತ್ರದಲ್ಲೇ ಸಾಗಬೇಕು, ಪೂರ್ಣ ಪ್ರಮಾಣದ ಜಲಪಾತವನ್ನ ನೋಡಲು. ನಡು ನಡುವೆ ಪುಟ್ಟ ಪುಟ್ಟ ಮಡುಗಳು, ಝರಿಗಳು ಬೇರೆ.


ಜಲಪಾತ ಸಂಪೂರ್ಣ ಕಾಣುವವರೆಗೂ ತೆರಳಿ , ಚಿತ್ರಗಳನ್ನ ತೆಗೆದು, ಒಲ್ಲದ ಮನಸ್ಸಿನಿಂದ ಹಿಂದೆ ಬಂದು, ಸ್ನಾನದ ಶಾಸ್ತ್ರ ಮಾಡಿ ಮರಳಿ ಊರಿಗೆ ಬಂದದ್ದಾಯ್ತು. ಸಂಜೆಗತ್ತಲಲ್ಲಿ ಸಹೃದಯರೊಬ್ಬರ ಮನೆ ಅಂಗಳದಲ್ಲಿ ಕೂತು ಹರಟಿದ್ದಾಯ್ತು. ಸಂಪೂರ್ಣ ಶಾಂತ, ಈ ಪರಿಸರ. ಪ್ರಾಯಶ: ನಮ್ಮ ಗಲಾಟೆ ಇತರರಿಗೆ ಭಂಗ ತರುತ್ತಿತ್ತೋ ಏನೋ!. ನಾನೂ, ಡೀನು ಮನೆಯಿಂದ ಹೊರಟು ಹೊರಗಿನ ಗದ್ದೆ ಬಯಲಲ್ಲಿ ತಿರುಗಾಡುತ್ತಿದ್ದೆವು.. ಹೀಗೇ ಮಾತಾಡುತ್ತಾ ಮೇಲೆ ನೋಡಿದರೆ, ಬೆಟ್ಟವೊಂದರ ಮರೆಯಿಂದ ಮೂಡುತ್ತಿರುವ ಬೆಳ್ಳಿ ಚಂದ್ರ!. ನನ್ನ ಜೀವನ ಅತ್ಯಂತ ಸುಂದರ ಚಂದ್ರೋದಯ ಅದು. ಡೀನ್ ಖುಷಿಯಲ್ಲಿ ಹೇಳುತ್ತಿದ್ದರು " ಹೋದ ವರ್ಷ ನನ್ನ ಹುಟ್ಟಿದ ಹಬ್ಬಕ್ಕೂ ಇಂತಹುದೇ ಚಂದ್ರೋದಯ ನೋಡಿದೆ" ಅಂತ.

ಚಂದಿರನ ಬೆಳಕಲ್ಲಿ ಎಲ್ಲ ಕೂತು ಹರಟಿ, ಸೊಗಸಾದ ಊಟವನ್ನೂ ಮುಗಿಸಿ ಮಲಗಿದೆವು, ಗೋವಿಂದರಾಜರ ಗೊರಕೆಯ ಹಿಮ್ಮೇಳದ ಜೊತೆ! ಅವರ ಗೊರಕೆ ನಿಲ್ಲಿಸಲು ನಾನು ಏನೆನೆಲ್ಲ ಪ್ರಯತ್ನ ಮಾಡಿದೆ, ಆದರೆ ಯಶಸ್ವಿಯಾಗಲಿಲ್ಲ.

ಬೆಳಗ್ಗೆದ್ದು ನೋಡಿದರೆ ಅನಾ, ಗದ್ದೆ ಬದುವಿನ ಕೂತು, ಯಾವುದೋ ಒಂದು ಬೆಟ್ಟವನ್ನೇ ದಿಟ್ಟಿಸುತ್ತಿದಳು. ( ಯಾವುದೋ ಒಂದು ಅಂತ ಯಾಕೆ ಅಂದೆ ಅಂದ್ರೆ, ಇಲ್ಲಿ ಸುತ್ತಲೂ ಬೆಟ್ಟಗಳೇ ಇರೋದು)ಏನು ನೋಡುತ್ತಿದ್ದೀಯಾ ಅಂದಿದ್ದಕ್ಕೆ, "ಹಂತ ಹಂತವಾಗಿ ಬೆಳಗಾಗುವದನ್ನ ನೋಡ್ತಾ ಇದೀನಿ, ನಿಧಾನವಾಗಿ ಬೆಳಗಾಗ್ತಾ ಇದೆ".. ಅಂತೆಲ್ಲ ಏನೋ ಅಂದಳು. ನಾನೂ ಸ್ವಲ ಹೊತ್ತು ಕೂತು ಅದನ್ನ ನೋಡಿ, ಮತ್ತೆ ಬಂದು ಮಲಗಿದೆ. ಸ್ವಲ್ಪ ಹೊತ್ತಿಗೇ ಸ್ಲೀಪಿಂಗ್ ಬ್ಯಾಗುಗಳಿಂದ ಎಲ್ಲ ಜೀವಿಗಳೂ ಹೊರ ಬಂದವು.




ಉಪಹಾರಕ್ಕೆ ಭರ್ಜರಿ ನೀರುದೋಸೆ. ಎಂದೂ ಹಾಲು ಹಾಕಿ ಮಾಡಿದ ದ್ರವ ಪದಾರ್ಥ ಕುಡಿಯದ ಡೀನ್, ಇಲ್ಲಿ ಕಷಾಯ ಕುಡಿದುಬಿಟ್ಟರು.ಆ ಹಿರಿಯರು ನಮಗೆ ಆ ಊರಿನ ದೇವಸ್ಥಾನ ತೋರಿಸುತ್ತೇನೆ ಅಂತ ಅಂದಿದ್ದರು. ಮನೆಯೊಡತಿಗೆ ವಂದನೆ ಸಲ್ಲಿಸಿ, ಅಲ್ಲಿಂದ ಗಂಟು ಮೂಟೆ ಕಟ್ಟಿ ಹೊರಟಿದ್ದಾಯ್ತು.
ಜಲಪಾತದಿಂದಲೇ ಬರುವ ಹಳ್ಳ ದಾಟಿ, ದೇವಸ್ಥಾನಕ್ಕೆ ಬಂದೆವು.


ಸಣ್ಣ ಅಂದ್ರೆ ಸಣ್ಣ ದೇವಸ್ಥಾನ ಇದು. ಗರ್ಭಗುಡಿಯಲ್ಲಿರುವ ಲಿಂಗ ರಾಮಲಿಂಗೇಶ್ವರನದು. ರಾಮ- ಸೀತೆ ಇಲ್ಲಿ ಲಿಂಗ ಸ್ಥಾಪನೆ ಮಾಡಿದರೆಂದೂ, ನಂತರ ಪಾಂಡವರು ಈ ದೇವಸ್ಥಾನ ಕಟ್ಟಿದರೆಂದೂ ಊರವರು ಐತಿಹ್ಯ ಹೇಳುತ್ತಾರೆ.ಹೊರಗಡೆ ಒರಟು ಕಲ್ಲಿನಂತೆ ಕಂಡರೂ ಗರ್ಭಗುಡಿಯ ಒಳಮೈ ನುಣುಪಾಗಿದೆ. ಈ ಕುಗ್ರಾಮದಲ್ಲಿರುವ ದೇವಳವೂ, ಪರಕೀಯರ ಆಕ್ರಮಣಕ್ಕೆ ತುತ್ತಾಗಿದ್ದು ಸ್ಪಷ್ಟವಿದೆ. ಅಂಗಳದಲ್ಲಿನ ನಂದಿ, ಗರ್ಭಗುಡಿಯ ಹೊರಗಿರುವ ಪಾರ್ವತಿ(?) ಯ ವಿಗ್ರಹಗಳು ದುರುಳರ ಹೊಡೆತಕ್ಕೆ ಸಿಕ್ಕಿವೆ.









ಇಲ್ಲಿನ ದೇವಳದ ಆವರಣದಲ್ಲಿ ವೀರಗಲ್ಲುಗಳೂ ಇವೆ. ಆ ವೀರಗಲ್ಲುಗಳ ಬಗ್ಗೆ ಸರಿಯಾದ ಮಾಹಿತಿ ನಮಗೆ ಸಿಗಲಿಲ್ಲ.




ಇನ್ನು ವಾರ ಬಿಟ್ಟರೆ, ಅಲ್ಲಿನ ದೇವರಿಗೆ ಜಾತ್ರೆಯ ಸಂಭ್ರಮ. ನಾಲ್ಕಾರು ಜನ ಸೇರಿ ದೇವಸ್ಥಾನದ ಆವರಣವನ್ನು ಸಗಣಿ ಸಾರಿಸಿ ಶುಚಿ ಮಾಡುತ್ತಿದ್ದರು. ಒಬ್ಬ ಸಣ್ಣ ಹುಡುಗ,ನಾನು ಫೋಟೋ ತೆಗೆಯುದನ್ನೇ ಕುತೂಹಲದಿಂದ ನೋಡುತ್ತಿದ್ದ. ಅವನ ತಂಗಿಯನ್ನೂ ಕರೆತಂದು ತೋರಿಸಿದ. ಅವನ ಫೋಟೋ ತೆಗೆದು ತೋರಿಸಿದೆ. ಇಷ್ಟಗಲ ಬಾಯಿ ಬಿಟ್ಟು ನಕ್ಕ.


ನಮ್ಮ ಜೊತೆ ಬಂದವರು ಅಲ್ಲಿಂದ ನಾವು ಹೇಗೆ ಮುಂದುವರಿಯಬೇಕು ಅಂತ ದಾರಿ ತೋರಿಸಿದರು. ಅವರಿಗೆ ಮನ:ಪೂರ್ವಕ ಕೃತಜ್ಞತೆಗಳನ್ನ ತಿಳಿಸಿ, ಭಾರ ಬ್ಯಾಗುಗಳ ಜೊತೆ, ಅಲ್ಲೇ ಕೂತಿದ್ದ ನಮ್ಮ ಭಾರ ಮನಸ್ಸುಗಳನ್ನು ಹಠ ಮಾಡಿ ಎಬ್ಬಿಸಿ ಕರೆದುಕೊಂಡು ಹೊರಟೆವು, ಕಳೆದ ದಿನವನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಾ..

ಗುರುವಾರ, ಜನವರಿ 25, 2007

ರಜೆಯನೆದುರಿಟ್ಟುಕೊಂಡು...

ನಾಳೆ ಬೆಳಗ್ಗೆ ಅಂದ್ರೆ ಮನೆ. ಭರ್ಜರಿ ರೆಸ್ಟಿಂಗು , ಎಲ್ಲೂ trekking ಹೋಗದೆ, ತಿರುಗದೇ, ೩ ದಿನಗಳ ರಜೆಯನ್ನ ಈ ತರಹ ಉಪಯೋಗಿಸುತ್ತಿರುವುದು ಇದೇ ಮೊದಲು ಅಂತ ಕಾಣಿಸುತ್ತದೆ!ಮನೇಲೆ ಅದೂ ಇದೂ ಮಾಡ್ಕಂಡು ಆರಾಮಾಗಿರೋ ಯೋಚ್ನೆ. ಹಾಲು ಕರಿಯೋದು, ತೋಟಕ್ಕೆ ನೀರು ಬಿಡೋದು, ಗುಡ್ದ ಬೆಟ್ಟ ಸುತ್ತೋದು..

ಎಂಥಾ ವಿಪರ್ಯಾಸ ಅಲ್ವಾ?, ಮೊದ್ಲು ನಾನು ದಿನಾ ಮಾಡೊ ಕೆಲ್ಸ, duty ಆಗಿತ್ತು ಇದೆಲ್ಲ! ಆವಾಗ ಹಾಳಾದ್ದು ಈ ಕೆಲ್ಸ ಯಾಕೆ ನಾನು ಮಾಡಬೇಕು ಅಂತ ಆಲೋಚಿಸ್ತಾ ಇದ್ದೆ, ಒಮ್ಮೆ ಈ ರಗಳೆ ಮುಗಿದರೆ ಸಾಕು ಅನ್ನಿಸುತ್ತಿತ್ತು. ಅಪ್ಪ ಎಲ್ಲ ಬಿಟ್ಟು ಈ ಹಳ್ಳಿಯ ಮೂಲೆಯಲ್ಲಿ ಯಾಕಾದರೂ ಮನೆ ಮಾಡಿದರೂ ಅಂತಲೂ ಅನ್ನಿಸಿದ್ದಿದ್ದೆ. ಆದರೆ ಈಗ ಅವುಗಳೇ ನನ್ನ ಸಂತಸ ಹುಡುಕುವ ಮಾಧ್ಯಮಗಳಾಗಿವೆ. ಅಪ್ಪ ದಿನಾ ಬೆಳಗ್ಗೆದ್ದು "ಶ್ರೀನಿಧೀ, ಶ್ರೀನಿಧೀ, ಹಾಲು ಕರ್ಯಕು ಏಳಾ" ಅಂದಾಗ ಶಪಿಸುತ್ತಲೇ ಎದ್ದು ಆ ಕೆಲ್ಸ ಮಾಡಲು ಹೊರಡುತ್ತಿದ್ದೆ.

ಸಂಜೆ ನಾನು ಕ್ರಿಕೆಟ್ ಆಡುವ ಸಮಯಕ್ಕೇ, ಅಪ್ಪ ನೀರ ಪೈಪು ತಗೊಂಡು ಹೊರಡುತ್ತಿದ್ದ, ತೆಂಗಿನ ಮರಗಳಿಗೆ ನೀರಾಯಿಸಲು .ನಾನು ಬರುವುದಿಲ್ಲ ಎಂದರೆ ತಾನೇ ಎಲ್ಲ ಮರಗಳಿಗೆ ನೀರು ಹಾಕಿ ಸುಸ್ಥು ಮಾಡಿಕೊಳ್ಳುತ್ತಾನೆ ಎಂಬ ಕಾರಣಕ್ಕೆ , ನಾನೇ ಹೋಗಿ ಎಲ್ಲ ತೆಂಗಿನ ಮರಗಳ ಸುತ್ತ, ನೀರು ಹಾರಿಸಿ, ಬುಡವನ್ನು ಒದ್ದೆ ಮಾಡಿ, ಆಡಲು ಓಡುತ್ತಿದ್ದೆ! ಬಹಳ ಕಾಲದ ಹಿಂದೇನೂ ಅಲ್ಲ, ಮೊನ್ನೆ ಮೊನ್ನೆ, ೨-೩ ವರ್ಷಗಳ ಹಿಂದಿನ ವರೆಗೂ!

ಇವತ್ತು ನಾನು ಮತ್ತೆ ಹಾಲು ಕರೀಬೇಕು, ನೀರು ಬಿಡಬೇಕು ಅಂತ ಅಲೋಚನೆ ಮಾಡುತ್ತೇನೆ, ಅಪ್ಪನಿಗೆ ಈಗಲೂ ಅದು ಕೆಲಸವೇ. ನಾನು ಮೂರು ದಿನ ಇದ್ದು, ಆ ಕೆಲಸದಲ್ಲಿ ಸಂತಸ ಅನುಭವಿಸಿ ವಾಪಾಸಾಗುತ್ತೇನೆ! ಅಪ್ಪನಿಗೂ ಅದು ಸಂತಸವೇ, ಆದರದು ಬೇರೆಯದೇ ತೆರನಾದ್ದು.

ತಂಗಿ, ನಾನೇನೋ ಅಲ್ಪ ಸ್ವಲ್ಪ ಬರೆಯುತ್ತೇನಾದ್ದರಿಂದ ಅವಳ ಸಂಶಯಗಳ ಬುಟ್ಟಿ ರೆಡಿ ಇಟ್ಟುಕೊಂಡು ಕಾಯುತ್ತಿರುತಾಳೆ. ಅಣ್ಣಾ, ಅದ್ಯಾಂಗೆ, ಇದ್ಯಾಂಗೆ ಅನ್ನುತ್ತಾ.. ಅವಳ ಜರ್ನಲಿಸಂ ನ ಕೊರೆತಗಳನ್ನು ಸಹಿಸಿಕೊಳ್ಳಲು ನಾನು ಈಗಿಂದಲೇ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದೇನೆ!

ಅಮ್ಮನ ಬಳಿ ಒಂದಿಷ್ಟು ಹೊಸ ಅಡುಗೆ ತಯಾರಿ ಬಗ್ಗೆ ಕಲೀಬೇಕು! ಮಾಡಿದ್ದೇ ಮಾಡಿಕೊಂಡು ಉಂಡು ಬೇಜಾರಾಗಿದೆ.
ಇಷ್ಟಾಗಿ ನಾಳೆ ಗಣರಾಜ್ಯೋತ್ಸವ, ಯಾವುದಾದರೂ ಹತ್ತಿರದ ಶಾಲೆಯಲ್ಲಿ ಏನಾದರೂ ಕಾರ್ಯಕ್ರಮ ಇದ್ದರೂ ಇತ್ತೇ, ಅದಕ್ಕೂ ಹಾಜರಿ ಹಾಕಬೇಕಾದ ಜವಾಬ್ದಾರಿ ಇದೆ!

ಇದೆಲ್ಲ ಮೂರು ದಿನಗಳ ಕಥೆಯಾಯಿತು. ಮುಂದೇನಾಗುತ್ತದೆ?

ಸಣ್ಣ ಸಣ್ಣ ರಜೆಗಳ ಖುಶಿ ಅನುಭವಿಸೋಕೆ ಮನೆಗೆ ಹೋಗುವ ನಾನು/ನಾವುಗಳು ನಮ್ಮ ಬೇರುಗಳಿಗೆ ಶಾಶ್ವತವಾಗಿ ಎಂದಾದರೂ ಹಿಂದಿರುಗುತ್ತೇವಾ?